ಸವಿ(ಯಾಗಿ)ದೆ?
ಅಡಿಗಡಿಗೆ ಕಡೆಯುತ್ತ ಮಜ್ಜಿಗೆ
-ಪ್ರೀತಿ ಕಡೆಗೋಲೇ ಅವನಾಗಿ,
ತುಟಿಯಾಚೆಗೀಚೆ
ಆದೀತದು ಬೆಣ್ಣೆ,
ಹೋಗದಿರಲಿ ಮಾತುಗಾವಿಗೆ
ಹರಿದೆಂದು,
ಎದೆಕಾವಲಿಯೂ ತಾನಾಗಿದ್ದಾನೆ
ತುಪ್ಪವಾಗಿಸಲು.
ಹಾಲ್ಕೆನೆಗೆ ಹನಿ ಹೆಪ್ಪು,
ಹದಮೊಸರು ನೀಡಿದವರ
ವಿಳಾಸ ಹೇಳೆಂದರೆ,
'ಅರಳ ಬೆಣ್ಣೆ
ತುಣುಕುಗಳವು ತೇಲುತಿವೆ
ನೋಡೇ ಅಲ್ಲಿ
ಮರೆತು ಮುಳುಗ...?'
ಮೆತ್ತುತ್ತಿದ್ದಾನೆ ತುಣುಕೊಂದ
ಕರಗಲೆಂದು ಮಾತು ಒಳಗೇ.
ಯಾವ ಊರಿನ ಕುಂಬಾರಂವ?
ಎಷ್ಟು ಈ ಮಾಟುಗಡಿಗೆಗೆ?
ತಂದು ಕೊಡುವಾ ಗೆಳತಿಗೊಂದು?
'ಅಲ್ಲ ಕಣೆ ಇದು ಸಮಯ
ಹೇಳಿ, ಕೇಳಿ, ಕೊಳ್ಳಲು.
ಹಿಡಿಯೊಮ್ಮೆ ಬೊಗಸೆ,
ಇಕೋ ಈ ಬೆಣ್ಣೆಚೆಂಡು'!
ಇಟ್ಟು ಕರಗುಚೆಂಡು
ಬೆಸೆಯುತ್ತಿದ್ದಾನೆ ಬಿಚ್ಚದಂತೆ ಕೈ.
ಎಂಥ ಚೆಂದದ ಕಂಬವಿದು
ಬೆಣ್ಣೆ ಪಕಳೆಯುಂಡ
ಮೈಮಿನುಗ ನೋಡು ಅದರ!
ನಿನ್ನಮ್ಮ, ನನ್ನಮ್ಮನ
ಕೈಹಿಸುಕುಗಳೆಲ್ಲ
ಸವೆಸಿದಂತಿಲ್ಲ ಇದನ?
'ತಗೊ.. ಕಡೆಗೋಲಿಗಂಟಿದ
ಚುಕ್ಕೆಬೆಣ್ಣೆಗಳೂ ನಿನ್ನವೇ..
ಸವಿಯೇ ರಾಣಿ
ಮೆಲ್ಲಗೆ...’
'ಬೆಣ್ಣೆಯದು ಮೆದುವು
ನಿನಗಿಂತ, ನನಗಿಂತ;
ಕರಗುವ ಮೊದಲೇ ಸವಿಯೆ
ನನ್ನ ಜಾಣೇ..'
ಗಡಿಗೆಯೆಂಬ ಬ್ರಹ್ಮಾಂಡದಲಿ
ಆಡಿಸಿದಂತೆ ಆಡುವ
ಕಡೆಗೋಲು ಕಣೋ ಇದು.
ಕಡೆದಾಗೆಲ್ಲ
ಉಕ್ಕಿದೆ ನೊರೆ
ತೇಲಿದೆ ಬೆಣ್ಣೆ
ಅಮೃತಭಾಂಡವಲ್ಲವೆ?
ಸದ್ಯ
ನನ್ನಪ್ಪ-ನಿನ್ನಪ್ಪನಿಗೆ
ಸಿಗದಿದ್ದರೆ ಸಾಕಷ್ಟೆ!
-ಶ್ರೀದೇವಿ ಕಳಸದ
6 comments:
ಒಂದು ಚಂದದ ಕವನ....
super madam...
ನೀಳ್ಗವಿತೆ ಬೆಣ್ಣೆಯಷ್ಟೆ ಸವಿಯಾಗಿದೆ.
ಬೆಣ್ಣೆ ಸವಿಯಾಗಿದೆ !!!
ಪ್ರೀತಿಯ ಸವಿಯನ್ನು ಸವಿಯುತ್ತ, ಗಡಿಗೆಯೆಂಬ ಬ್ರಹ್ಮಾಂಡದಲಿ
ಆಡಿಸಿದಂತೆ ಆಡುವ ಕಡೆಗೋಲು, ಕಡೆದಾಗೆಲ್ಲ ಉಕ್ಕಿದೆ ನೊರೆ,
ತೇಲಿದೆ ಬೆಣ್ಣೆ, ಅಮೃತಭಾಂಡವೆ೦ಬ ಅಧ್ಯಾತ್ಮದ ರುಚಿಯ ಸೊಗಸನ್ನು ಮೇಳೈಸಿ ರಚಿಸಿದ ಅದ್ಭುತ ಕವನ. ಅಭಿನ೦ದನೆಗಳು.
ಅನ೦ತ್
ಸುಪರ್!
Post a Comment