Saturday, July 23, 2011

ಪ್ರತಿಧ್ವ-ನೀ

ಇಲ್ಲ ಕಣೋ, ಮಳೆಯಾಗುವುದಿಲ್ಲ
ಈ ರಾತ್ರಿ.
ಅದೊಂದು ಗರ್ಭಕಟ್ಟಿದ ಹುಸಿಮೋಡ.
ಒಂದೊಮ್ಮೆ ಹನಿದರೂ
ಹಸೆಯ ಪಸೆಯಷ್ಟೇ.

ನೆಲ, ಗೋಡೆ,
ಕಿಟಕಿ-ಬಾಗಿಲು, ರೈಲು ಕಂಬಿಗಳು
ತೇಲುವ, ಹಾರುವ ಮರದ-
ದಿಮ್ಮಿಗಳಿಗೆ, ತಟ್ಟೆಗಳಿಗೆ
ಕಿವಿಯಿಡು ಒಮ್ಮೆ?
ಗದ್ದ ತಾಕುವುದಿಲ್ಲ, ನಿಲ್ಲುವುದಿಲ್ಲ-
ಗದ್ದಲವೂ.

ಆ ಗದ್ದಲೊಳಗೆ ಕುದ್ದ ಕಾವನ್ನೆಲ್ಲ
ಕದ್ದ ಅವ ಬಿತ್ತಿದ್ದಾನೆ,
ಬಟ್ಟಲೊಳಗೆ ಕಾಳ-
’ಕಾಳ’ಬೆಳಕ.
ಕಳೆದುಕೊಂಡವರೇ ಮರೆತಾಗ ಲೆಕ್ಕ,
ಕದ್ದವನಿಗೇಕೆ ಖಾತೆಪುಸ್ತಕ ಚಿಂತೆ.
ಅಂಚು ಮೀರಿದ ಅವನ
ಎಲ್ಲ ಬೆಳಕಿಗೆ ಕುಕ್ಕಿಸಿಕೊಂಡ
ರೆಪ್ಪೆಗುಂಟ ನೀರ್‌ಮಣಿ
ಮಾಲೆ...

ಅರೆ, ಅದು ದಾರವಿಲ್ಲದ ಮಾಲೆ!
ಬೆರಳಂಚಿಗಿಟ್ಟು ಹೋದವ,
ಹೊರಟೇ ಹೋದ-
ಮತ್ತೆ ಬರಲು.
ಹೋಗುವಾಗ ಹೇಳಿದ್ದು ಅವ-
ನೀ ಒಮ್ಮೆ ಕೇಳಿಬಿಡು;
’ಕಾವಿಗೆ ಬಸಿದ ಎಸರಷ್ಟೇ ಕಣೆ ಅದು-
ಬೆಸೆದದ್ದಲ್ಲ ಉಸಿರ ಲಯಕ್ಕೆ..’

ಅಬ್ಬಾ! ಎಂಥ ಧ್ವನಿಯೋ ಅವನದು..

ಹಾಂ... ಧ್ವನಿ.
ಪ್ರತಿಧ್ವನಿ, ತಿಧ್ವನಿ, ಧ್ವನಿ, ನೀ.

-ಶ್ರೀದೇವಿ ಕಳಸದ

Friday, July 15, 2011

ರಾಗಬಂಧಿಹೆಜ್ಜೆ ವಜ್ಜೆಯಾದಾಗ
ಒಲವ ಗೀತೆ ಉಸುರಿದವ
ಹೂದಾರಿ ತುಂಬ ಸ್ವರ ಹರಡಿ
ಕೇಳುತ್ತಿದ್ದಾನ
ಬಂಧಿಸುವೆ ಯಾವ ರಾಗಕ್ಕ?

ಅರೆರೆಪ್ಪೆ ಹೊರಳು, ತುಸು ಅರಳ
ತುಟಿ ಸಾಕ. ಜೊತಿಗೆ-
ಜಿನುಗ ಆಲಾಪ.
ತಂತಿಯಾದೇನು ಶ್ರುತಿ,
ಹೇಳ ಯಾವ ರಾಗ.

ಎಳೆದೊಮ್ಮೆ ಉಸಿರು
ಮುರಿದ ಮೈಯ,
ಗಲ್ಲಕ್ಕ ಗಲ್ಲ ಜಾರಿ
ಕುತ್ತಿಗೀ ಕೊಂಕಿಗೆ
ಎದಿಗಾತು ಕೂಸಿನ್ಹಾಂಗ.

ಬಳಸಿ ಬೆಟ್ಟಕಾ ’ಪಹಾಡಿ’
’ಸಾರಂಗ’ ಶೃಂಗಾರ.
ಎದೆಗಾವು ’ತೋಡಿ’
ತೊಡೆಯ ಮೇಲೆರಡು
ಹನಿ ಇಳಿದು ಸಣ್ಣ ಜಂಪ.

ಗಿಳಿವಿಂಡು ಹಾರಿ
ಕೇಳಿ ಕೋಗಿಲದ ಪಂಚಮ
ನಡೆದೆದ್ದು ಹೊರಟ
ಕಾವಿಮಕದಾಂವ.
ಈಗಾರ ಹೇಳ ರಾಗದಾ ಹೆಸರ.

-ಶ್ರೀದೇವಿ ಕಳಸದ

Monday, July 4, 2011

ಸಂಬಂಧ ಪಾಠಹೇಳಿಕೊಡುತ್ತಿದ್ದಾನೆ
ಸಂಬಂಧಗಳ ಹೆಣೆಯುವುದ.

ತೆಳುವರ್ಣದ ಬಟ್ಟೆಗೆ
ಅದರದೇ ಆಸು-ಪಾಸು
ಬಣ್ಣದಾರ ಚೆಂದವಲ್ಲವೇನೋ,
ಅದರೊಳಗೆ ದಾರವೋ-
ದಾರದೊಳಗೆ ಬಟ್ಟೆಯೋ.
ಒಂದರೊಳಗೊಂದು ಬೆರೆತ
ತೆಳು ಛಾಯೆ, ಆಳ ಹಿತ.

'ಕಾಣುವಂತಿರಬೇಕೆ ಕಣೆ ಹೆಣಿಗೆ.
ತೆಳುವರ್ಣದ ಬಟ್ಟೆಗೆ ಢಾಳ-
ಢಾಳಕ್ಕೆ ತೆಳುವರ್ಣ ದಾರ.
ದೂರಿಂದಲೇ ಚಕ್ಕನೆ
ಗುರುತಿಸುವಂತೆ ವಿನ್ಯಾಸ, ಬಣ್ಣ
ತಪ್ಪಿದ ಹೆಣಿಗೆಗೆ, ಕೆಟ್ಟ ಬಣ್ಣಕ್ಕೆ
ಇದ್ದೇ ಇದೆ ಕತ್ತರಿ? ಥರ ಥರ ದಾರ.
ತರಾವರಿ ಬಟ್ಟೆ.

ಅವನ ಎಂಜಲು ಸೋಕಿದ ದಾರ,
ನನ್ನ ಕಣ್ಣಿಗೆ ಸೂಜಿ ಕಣ್ಣು,
ನಡುವೆ ಪಾರಾದ ದಾರ.

ಮರೆತೆಯಾ...?
ಗಂಟು...
-ಮೆತ್ತಗೆ ಎಂದೆ.
ಮತ್ತೆ ಅಂದೆ ತುಸು ಗಟ್ಟಿಸಿ
ತಿವಿಯಲಿಲ್ಲವಷ್ಟೆ;
ಕಣ್ಣು ಮರೆಯದು ಕರ್ತವ್ಯ.

’ಅರಳೋ-ಮರಳೋ?
ಏನು ನಂತರ- ಯಾವುದು ಅನಂತರ
ಬಲ್ಲೆ ಜಾಣೆ ನಿರಂತರ...
ಹೆಣಿಗೆಯಿದು ಅಲ್ಲ ಮೊದಲ ಸಲ
ನೆನಪಿಸಿಕೊ ಒಮ್ಮೆ,
ಪೋಣಿಸಿಲ್ಲ ಅದೆಷ್ಟು ಸಲ
ದಾರವದು ನೀನೇ?
ಇವೇ ದಟ್ಟವರ್ಣ,
ಬೆರಳುದ್ದ ಸೂಜಿ, ಮೊಳ ದಾಟದ ದಾರ'.

ಇದೊಂದು ಕುದುರೆಯೋಟ-
ತಿರುವಿರದ ನೇರ ಹೆಣಿಗೆ,
ಏಕಾಗ್ರ ಗಮ್ಯ ಚಿತ್ತ.
ಅದರಷ್ಟಕ್ಕೇ ಮೂಡಲಿ ಚಿತ್ತಾರ
ಶಾಂತಿ ಶಾಂತಿ ಶಾಂತಿ..’

ಅಂದೂ ಹೆಣೆದ. ಇಂದೂ,
ನಾಳೆಯೂ.
ಹಾಕದೆ ದಾರಕ್ಕೆ
ಮರೆತು ಗಂಟು.

-ಶ್ರೀದೇವಿ ಕಳಸದ