Tuesday, August 16, 2011
ಅಜ್ಜಿ, ಮೊಮ್ಮಗಳು ಮತ್ತು ವಾಷಿಂಗ್ ಮಶೀನು
ಹೀಗೆ ತಿಕ್ಕಿ, ಹಿಂಡಿ,
ಝಾಡಿಸಿ, ಹರಡಬೇಕು
ಹಗ್ಗದ ಮೇಲೆ;
ಬಟ್ಟೆ ಒಗೆಯುವ ಪಾಠ
ಅಜ್ಜಿಯಿಂದ ಮೊಮ್ಮಗಳಿಗೆ.
ಮರೆಯಬಾರದು
ಒಣ ಹಾಕುವ ಮೊದಲು,
ಹಗ್ಗ ಗಟ್ಟಿಯಾಗಿದೆಯೆ?
ಹಾಗೆ ಕ್ಲಿಪ್ಪು ಸಿಕ್ಕಿಸುವುದನ್ನೂ;
ಪ್ರತಿಪಾಠ ಮೊಮ್ಮಗಳಿಂದ.
ಇಷ್ಟಿಷ್ಟೇ ನೀರು ಚಿಮುಕಿಸಿ
ಅಲ್ಲಲ್ಲಿ ಹಚ್ಚಿ ಸೋಪು
ಉಜ್ಜಬೇಕು, ಕುಕ್ಕಲೂಬೇಕು
ಚೂರ್ಚೂರೇ ನೀರು ಹನಿಸಿ
ಕೊನೆಗೆ ಒಗೆಯಬೇಕು ಬೀಸುಬಿಡದೆ.
ಅರ್ಥವಾಯಿತೆ ಮೊಮ್ಮಗಳೇ?
ಉಜ್ಜುವುದೂ ಸರಿ. ಕುಕ್ಕುವುದೂ.
ಯಾವ ತರಹದ ಬಟ್ಟೆಯದು?
ಕೊಳೆಯೆಷ್ಟು, ಕಲೆಯೆಲ್ಲಿ
ಹುಡುಕುತ್ತ, ತಿರುವುತ್ತ
ಬೀಸುಬಿಡದೆ ಒಗೆಯೋಣವಾಗಲಿ
ಆದರೆ ಬಟ್ಟೆ ಕಲ್ಲು ದಾಟದಿರಲಷ್ಟೆ.
ಅಲ್ಲವೆ ಅಜ್ಜಿ?
ಸಂಜೆಯಾಗುತ್ತಿದ್ದಂತೆ
ಹೆಗಲಿಗೆ, ಕೈಗಾಸರೆಗೆ
ಅವೆಲ್ಲವನ್ನಿಳಿಸಿ ಹಗ್ಗದಿಂದ,
ಕೋಣೆಯೊಳಗೆ ಹರಿವಿಡದೆ
ಮಡಿಚಿ ಕಪಾಟಿನೊಳಗಿಡಬೇಕು
ಕುಡಿಯೇ...
ಬಟ್ಟೆ ತೆಗೆಯುವ
ಮಡಿಚಿಡುವ ಮೊದಲೊಮ್ಮೆ
ನೋಡಬೇಕಲ್ಲವೆ ಪೂರ್ತಿ
ಒಣಗಿವೆಯೇ ಎಂದು
ತೆಗೆಯಬೇಕೆ ಸಂಜೆಗೇ ಬಟ್ಟೆ?
ತುಸು ಒದ್ದೆಯಿದ್ದು, ಮಡಿಚಿಟ್ಟರೆ ಹಾಗೇ
ಕಾಡುವುವು ಕಪ್ಪಾನುಕಪ್ಪು
ಚುಕ್ಕೆಗಳವು
ಅಲ್ಲವೆನೇ ಮುದ್ದು ಅಜ್ಜಿ?
ತೆರೆಯಿತು ಹಿತ್ತಲ ಬಾಗಿಲು..
’ನಾಳೆ ದೀಪಾವಳಿ..
ಏನು ಹೇಳಿ ಈ ಸಲದ ಕೊಡುಗೆ?’
ಅಜ್ಜಿಯ ಮಗಳ,
ಅಲಿಯಾಸ್
ಮೊಮ್ಮಗಳ ಅಮ್ಮನ
ಸಂಭ್ರಮ ಇಣುಕಿತು...
ಅಲ್ಲಿಗೆ ಮುಗಿಯಿತು ಒಗೆಯೋಣ ಪಾಠ
- ಶ್ರೀದೇವಿ ಕಳಸದ
Subscribe to:
Post Comments (Atom)
3 comments:
nice,,,,,
ಸ್ವಾರಸ್ಯಪೂರ್ಣ ಕವನ.Enjoyed a lot.
tumba chennagide...
Post a Comment