ಗುಡಿಸಿ, ನೀರೆರಚಿ
ರಂಗೋಲಿ ಹುಡಿಯ
ಗೆರೆಯಾಗಿಸುವಾಗ
ಚಿತ್ರ ಅರಳುತ್ತದೆ
ಎದೆಯೊಳಗೆ.
ಕಣ್ರೆಪ್ಪೆಯಾಚೆ ಈಚೆ
ತಿಳಿ ಕನಸೊಂದರ
ಎಳೆ ರಂಗೋಲಿ
ಅರಳುತ್ತ, ಹೊರಳುತ್ತ
ಜೀವಂತಿಕೆಯ ಮಿಸುಕು
ಒಳಗೊಳಗೆ.
ಮಿಂಚೊಂದು ಮೈ ಹೊಕ್ಕಂತೆ
ತನು ಝಲ್ ಎಂದರಳಿದ್ದು
ಸುಳ್ಳೆ?
ಹಣಿಗೆಯಾಡಿಸುವಾಗ
ಕನ್ನಡಿ ದಿಟ್ಟಿಸುವಾಗ
ಅರಳಿದ ಮೊಗದಲ್ಲರಳಿದ್ದು
ಯಾವ ಕಾಡು ಹೂ ಪಕಳೆ?
ಬಿಡು ಮರುಳೆ
ಎಂದು ಗುಂಗು ಕೊಡವಿ
ಗಾಡಿಯೇರಿ, ಬೀಗ ತಿರುವಿ
ಪಥಿಕರಲ್ಲೊಂದಾಗಿ ಹೊರಟು
ಕರ್ಕಶ, ಕಿರುಚುವಿಕೆಯ
ಹೆದ್ದಾರಿಯಬ್ಬರದಲೂ
ಸ್ಫುಟವಾಗಿ ಕೇಳಿದ ಮೆಲುನಗೆ
ಯಾವ ಮರುಳು?
ತಿರುವಿನಲಿ, ಏರಿನಲಿ, ಇಳಿವಿನಲಿ,
ತಂಗುದಾಣದಲಿ, ಲಿಫ್ಟಿನಲಿ
ಏರಿಳಿಯುವ ಪ್ರತಿಯೊಂದು ಕ್ಷಣದಲಿ
ಅರಳುತ್ತಳಿಯುತ್ತ ಅರಳಿ ನಿಂತಿದ್ದು
ಹೊರಳುತ್ತರಳುತ್ತ ಎದ್ದು ನಿಂತಿದ್ದು
ಯಾವ ಮರುಳು?
ಅಂಗಳದಿ ಬಿಡಿಸಿದ ರಂಗೋಲಿ
ಹುಡಿಯಾಗಿ ಹರಡುತ್ತ
ಇಡಿಯಾಗಿ ಅರಳಿದ್ದು
ಮನ ಮಾಮರದ ಘಮವಾಗಿ
ಹಕ್ಕಿಯುಲಿಯ ಇಂಪಾಗಿ,
ಹೂವಿನ ಕೆಂಪಾಗಿ, ಕಂಪಾಗಿ
ಊದುಬತ್ತಿಯ ಹೊಗೆಯಂತೆ
ಕದಲುತ್ತಲೇ ಬದಲಾಗಿದ್ದು
ಹರಡುತ್ತಲೇ ಸ್ಥಿರವಾಗಿದ್ದು
ಬರೀ ಮರುಳೆ?
ಎದೆಯೊಳಗೆ ಅಡಗಿ ಅರಳಿದ
ರಾಗಗಳಂತೆ,
ಒಳಗೆ ಮಿಡಿದರೂ ಹೊರದೋರದ
ನಾಡಿಗಳಂತೆ,
ಹಾಡಾಗದ ಸಾಲುಗಳು
ಮಾತಾಗದ ಭಾವಗಳು
ಅಕ್ಷರವಾಗಿ ಅರಳಿ,
ಭಾವನೆಯಾಗಿ ಕೆರಳಿ
ಎದೆಗೂಸು ನಿದ್ದೆಯಲಿ ನಸು ಬಿರಿದಂತೆ
ತುಳುಕಿದೆ ಚಿತ್ರ
ಎಂಥಾ ವಿಚಿತ್ರ!
4 comments:
ಅಂತಹ ಭಾವ ರಂಗೋಲಿ ಸದಾ ಮನಸ್ಸಿನಲ್ಲಿ ಚಿತ್ತಾರ ಬಿಡಿಸುತ್ತಲೆ ಇದ್ದಾಗ ಮಾತ್ರ ಮನಸ್ಸು ಉಲ್ಲಾಸಿತವಾಗಿ ತುಡಿತದಿಂದ ಕೂಡಿರುತ್ತದೆ.
ಒಳ್ಳೆ ಕವನ ಮೇಡಂ. ಭೇಷ್...
ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com
Face book Profile : Badarinath Palavalli
ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.
Ee kavanada saalugaLaMtU adbhutavaada haaDaagive!
chendada saalugalu
haaduvantive
chennagide nimma saalugaLu istavayitu..
Post a Comment