Wednesday, December 28, 2011

’ಸುಲಿ’ಗೆ

ಮಾರಾಯಾ ಈ ಚೀಲದ ನೆತ್ತಿಗೆ ಎಂಥಾ ಗಂಟು ಹಾಕಿ ತಂದಿದ್ದಾನಲ್ಲಾ. ಪಾಪ ಅವಕ್ಕೆ ಉಸಿರುಗಟ್ಟಲ್ವಾ....? ಅಂದುಕೊಳ್ಳುತ್ತಲೇ ಚೀಲದ ಬಾಯಿ ಬಿಚ್ಚಿಟ್ಟೆ. ಬೆಚ್ಚಗೆ ಒತ್ತಾಗಿ ಕುಳಿತಿದ್ದ ಅವುಗಳು ಕೊಂಚ ಮೈ ಅರಳಿಸಿಕೊಂಡಂತೆ ಮಾಡಿದವು...

ಅತ್ತೆ ಮಾಡುತ್ತಿದ್ದ ಅವರೆಕಾಳು ಸಾರು, ಅದು ಹರಡುವ ಘಮ, ಹುಳಿ ಕಡಿಮೆ ಎಂದು ಮಾವ ನಿಂಬೆ ಹಿಂಡಿಕೊಳ್ಳುತ್ತಿದ್ದದ್ದು, ಓಹ್‌ ಅವರೆಕಾಳು ಸಾರೋ ನಾಳೆಗೆ? ಎಂದು ಹಸಿಹಸಿಕಾಳನ್ನೇ ಬಾಯಿಗೆ ಎಸೆದುಕೊಳ್ಳುತ್ತಿದ್ದ ಇವ... ಎಲ್ಲ ಎಲ್ಲವೂ ಕಣ್ಮುಂದೆ ಬಂತು.

***

ರಾತ್ರಿಯೂಟ ಮುಗಿಸಿದ ಇವ ಮಣಿಯವರೆ ಸುಲಿಯತೊಡಗಿದ. ಅರ್ಧಕ್ಕೆ ಸಾಕೂಮಾಡಿದ. ನಾ ಪೂರ್ತಿಗೊಳಿಸಿ ನೆನೆಸಿಟ್ಟೆ. ಬೆಳಗ್ಗೆ ಹಿಚುಕಲು ನೋಡಿದೆ. ಕೆಲವು ಒಲ್ಲೆ ಎಂದವು. ಇನ್ನೂ ಕೆಲವು ಕೈ ಜಾರಿ ಅಖಾಡದಿಂದಲೇ ಮಾಯ. ಆ ಹೊತ್ತಿಗೆ ಪಾತ್ರೆ ತೊಳೆದು ಮುಗಿಸಿದ ಕೆಲಸದಮ್ಮ ’ಕೊಡಿ ಅವ್ವಾ... ಚಿಗಟಿಕೊಡ್ತೀನಿ’ ಮುಗುಳ್ನಗುತ್ತಾ ಮುಟ್ಟಿಗೆಯೊಳಗೆ ಅವನ್ನೆಲ್ಲ ತುಂಬಿಸಿಕೊಂಡಳು. ತುದಿಬೆರಳುಗಳ ನಡುವೆ ಒಂದೊಂದೇ ಕಾಳು ಹಿಡಿದು ಬಟ್ಟಲು ತುಂಬಿಸತೊಡಗಿದಳು. ಇತ್ತ ಅವಳ ಬಾಲ್ಯವೂ ಸಿಪ್ಪೆ ಬಿಡಿಸಿಕೊಳ್ಳತೊಡಗಿತು.

ಆಕೆ ಪುಟ್ಟ ಬಿಂದಿಗೆಯಂತೆ ಪುಟುಪುಟು ಓಡಾಡಿಕೊಂಡಿದ್ದವಳು. ಹಗಲನ್ನೇ ಪೂರ್ತಿ ಕಾಣದ ಕೂಸು, ಇರುಳೆಂದರೆ? ಎಂದು ಚೂರ್‌ಚೂರೇ ಕಣ್ಣುಬಿಟ್ಟು ಬೆಚ್ಚುವಂಥಾ ವಯಸ್ಸು. ಅಂತೂ ಒಂದು ಹಗಲಿನಲ್ಲಿ ಮದುವೆ ಅನ್ನೋ ಬಾವಿಗೆ ಬಿದ್ದಾಗಿತ್ತು. ಮುಂದಿನದೆಲ್ಲವೂ ಬಾವಿಯೊಳಗಿನ ಸುಳಿ. ಅರೆ, ಇದಿನ್ನು ನಮ್ಮದೇ ಬಿಂದಿಗೆಯೆಂದು ಹಗ್ಗ ಜಗ್ಗಾಡತೊಡಗಿದರಂತೆ ಅತ್ತೆ, ಮಾವ, ನಾದಿನಿ, ಗಂಡ... ನೀರು ಸೇದಲು ಬಾರದವರಂತೆ; ಅಸಹಾಯಕತೆಯಿಂದಲೋ, ಇನ್ಯಾವುದೋ ಹಳೆಯ ಸಿಟ್ಟಿಗೋ, ಆತುರಾತುರವಾಗಿಯೋ... ಅಡ್ಡಾದಿಡ್ಡಿಯಾಗಿ ಬಿಂದಿಗೆ ಎಳೆಯುತ್ತಾರಲ್ಲಾ... ಹಾಗೆ. ಹಾಗೆ ಎಳೆಯುವಾಗ ಕಲ್ಲುಗೋಡೆಗೆ ಬಡಿಸಿ, ಬಿಂದಿಗೆ ಮಾಡದ ತಪ್ಪಿಗೆ ನುಜ್ಜುಗುಜ್ಜಾಗಿಸುತ್ತಾರಲ್ಲಾ ಅದನ್ನ... ಆದರೂ ಅದು ಒಡಲು ತುಂಬಿಕೊಂಡು ಕುಲುಕುಲು ನಗುತ್ತ ಮೇಲೆ ಬರುತ್ತಲ್ಲ. ಹಾಗೆ..... ಪಕ್ಕಾ ಹಾಗೇ ಇತ್ತು ಅವಳು ನೆನಪಿಸಿಕೊಂಡಿದ್ದು.

ಆಗಾಗ ಪುಟಿದೋಡುತ್ತಿದ್ದ ಕಾಳುಗಳನ್ನು ಆಯ್ದು ಬಟ್ಟಲೊಳಗೆ ಹಾಕುತ್ತ ಮಾತು ಮುಂದುವರಿಸುತ್ತಲೇ ಇದ್ದಳು. ಮಮ್ಮು ಬೇಡವೆಂದು ಕೈಕೊಸರಿಕೊಂಡು ಓಡುತ್ತಿದ್ದ ಪುಟ್ಟ ಮಗುವನ್ನು ಬೆನ್ನಟ್ಟಿ, ಅದರ ಕೈಗಳೆರಡನ್ನೂ ಹಿಡಿದು ಆರಾಮು ಕುರ್ಚಿಯೊಳಗೆ ಕೂರಿಸುವ ಅಮ್ಮನಂತೆ ಅವಳು ಕಾಣುತ್ತಿದ್ದಳು.

***

ಆಹ್‌......, ಈ ಒಗೆದ ಬಟ್ಟೆಗಳನ್ನು ಮಡಿಚಿಡುವ ಕಾಯಕಕ್ಕೆ ಕೊನೆಯೇ ಇಲ್ಲವೇ? ಎಂದುಕೊಳ್ಳುತ್ತ ಬಟ್ಟೆ ಮಡಚತೊಡಗಿದೆ. ಈ ಲಂಗವನ್ನು ಹೀಗೆ ನಾಲ್ಕು ಪದರಗಳಲ್ಲಿ ಮಡಿಚಿಡಬೇಕು ಎಂದು ಮಡಿಚಿಟ್ಟ ಬಟ್ಟೆ ಬಿಚ್ಚಿ, ಮತ್ತೆ ಮಡಿಚಿ ತೋರಿಸುತ್ತಿದ್ದ ಅತ್ತೆ ನೆನಪಾದರು.

***

ತವರಿನವರು ತನ್ನೊಂದಿಗೆ ಕಳಿಸಿಕೊಟ್ಟ ಹಸುವೊಂದು ಬಟ್ಟೆ ತಿನ್ನುವ ಚಟ ಅಂಟಿಸಿಕೊಂಡಿದ್ದನ್ನು ಕೆಲಸದಮ್ಮ ಹೇಳುತ್ತಿರುವಂತೆಯೇ ’ಅಯ್ಯೋ ಅದ್ಯಾಕೆ ಹಂಗೆ? ಎನ್ನುತ್ತಾ ತಿರುಗಿ ಕುಳಿತೆ. ಅಲ್ಲಿಗೆ ಬಟ್ಟೆಗಳೂ ಸದ್ಯ ಇವಳ ಅಡ್ಡಾದಿಡ್ಡಿ ಮಡಚುವಿಕೆಯಿಂದ ಪಾರಾದೆವಲ್ಲಾ... ಎಂದು ಮತ್ತಷ್ಟೂ ಮೈ ಅಗಲಿಸಿಕೊಂಡು ಸೋಫಾದ ಮೇಲೆ ಮಕಾಡೆ ಮಲಗಿದವು. ಇನ್ನೂ ಕೆಲವು ಚಳಿಯಲ್ಲಿ ಮಗುವೊಂದು ಎದೆಗೆ ಮೊಣಕಾಲುಕೊಟ್ಟು ಮಲಗಿದಂತೆ ಕಂಡವು. ’ ಅದೇ ಅವ್ವಾ ಹಸು ಕರಾ ಹಾಕತ್ತಲ್ಲವ್ವಾ... ಆಗ ಗಿಣ್ಣು ಬರತ್ತಲ್ಲವ್ವಾ... ಆಗ ಬಟ್ಟೆ... ’ ಹೀಗೇ ಏನೇನೋ ಹೇಳಿ ಕರು ಬಟ್ಟೆ ತಿನ್ನೋದಕ್ಕೆ ಸಮಜಾಯಿಷಿ ಕೊಟ್ಟಳಾದರೂ ತಲೆಗೆ ಹೋಗಲಿಲ್ಲ. ಪುನಾ ಹೇಳು ಅಂತ ಕೇಳಿದ್ದರೆ ಅರ್ಥವಾಗುತ್ತಿತ್ತೇನೋ. ಆದರೆ ಯಾಕೋ ವ್ಯವಧಾನವಿರಲಿಲ್ಲ.

ಅತ್ತೆ ಎನ್ನಿಸಿಕೊಂಡವಳು, ಕರು ಬಟ್ಟೆ ತಿನ್ನುವುದನ್ನೇ ಅಸ್ತ್ರವಾಗಿಸಿಕೊಂಡು ಅಟ್ಟಾಡಿಸಿಕೊಂಡು ಹೊಡೆದಿದ್ದನ್ನು ಹೇಳುವಾಗ ನಾ ಅವಳ ಮುಖಕ್ಕೆ ಮುಖ ಕೊಡಲಾಗಲಿಲ್ಲ. ಅವಳು ಹೇಳುತ್ತಲೇ ಇದ್ದಳು... ಅತ್ತೆ ಸುಮ್‌ಸುಮ್ಮನೆ ಕರುವಿಗೆ ಇವಳ ರವಿಕೆಗಳನ್ನು ತಿನ್ನಿಸಿಬಿಡುವುದು, ಮಗ ಮನೆಗೆ ಬರುತ್ತಿದ್ದಂತೆಯೇ ’ನೋಡೋ ನಿನ್ನ ಹೆಂಡತಿನ್ನಾ, ನೀ ಹೊಸ ರವಿಕೆ ಕೊಡಿಸ್ಲಿ ಅಂತ ಹ್ಯಾಗೆ ರವಿಕೆಗಳನ್ನ ಹಸುವಿನ ಬಾಯಿಗೆ ಹಾಕಿದ್ದಾಳೆ’ ಅಂತ ರಂಪ ಮಾಡುವುದು... ಇತ್ಯಾದಿ ಇತ್ಯಾದಿ.

ಅಲ್ಲಿಗೆ ಅಮ್ಮನೊಂದಿಗೆ ಮಗನೂ ತಯಾರು ನೀರು ಸೇದಲು, ಆ ಬಿಂದಿಗೆಯಂಥ ಹುಡುಗಿಯ ಕತ್ತಿಗೆ ಹಗ್ಗ ಬಿಗಿದು.

ಬಿಡಿಯವ್ವಾ ಏನ್ ಮಾಡೋದು ಇದೆಲ್ಲಾ ಅಂತ ನಿಟ್ಟುಸಿರು ಬಿಟ್ಟಳು ಕೆಲಸದಮ್ಮ. ಬೆನ್ನು ಬೆನ್ನಿಗೆ, ಮಗ್ಗಲು ಮಗ್ಗಲಿಗೆ, ಹೊಟ್ಟೆ ಹೊಟ್ಟೆಗೆ, ತಲೆಗೆ ತಲೆ ಕೊಟ್ಟು ಅಂಗಿ ಬಿಚ್ಚಿ ಕುಳಿತ ಪುಟ್ಟಮಕ್ಕಳಂತೆ ಕಾಣುತ್ತಿದ್ದ ಕಾಳುಗಳನ್ನೊಮ್ಮೆ ಕೆಳಗುಮೇಲಾಗಿಸಿದಳು. ಆಟವಾಡಿಬಂದ ಮಗುವೊಂದು ಇದು ಸಾಕು, ಅದು ಬೇಕು, ಅಯ್ಯೋ ಇದು ಕೊಳೆಯಾಯ್ತು, ಛೀ ವದ್ದೆಯಾಯ್ತು, ಈ ಕಲ್ಲರ್‌ ಬೇಡ, ಅಪ್ಪ ತಂದ ಅಂಗಿನೇ ಬೇಕು... ಅಂತ ಒಂದೇ ದಿನಕ್ಕೆ ಹತ್ತಾರು ಅಂಗಿ ಬದಲಾಯಿಸುತ್ತ ಗುಡ್ಡೆ ಹಾಕಿಟ್ಟಿರುತ್ತವಲ್ಲ ಹಾಗೆ ಕಂಡಿತು ಸಿಪ್ಪೆ ಗುಡ್ಡೆ. ಯಾಕೋ ಮತ್ತೆ ಕಣ್ಣು ಆಕಡೆಯೇ ...

ಸಿಪ್ಪೆಗುಡ್ಡೆಯ ಬುಡಕ್ಕಿದ್ದ ಪೇಪರ್‌ ಒದ್ದೆಯಾಗಿತ್ತು. ಬಸಿರಿಳಿಸಿಕೊಂಡ ಬಾಣಂತಿಯಂತೆ ಸಿಪ್ಪೆಗಳು ಹಗುರವಾಗಿದ್ದವು. ಪೇಪರುಸಮೇತ ಅವೆಲ್ಲವನ್ನೂ ಮುದ್ದೆಮಾಡಿ ’ಬರ‍್ತೀನವ್ವೋವ್ರೇ...’ ಎಂದಿನಂತೆ ನಕ್ಕು ಹೊರಟಳು.

***

ಮಧ್ಯಾಹ್ನ ಮಾಡಿಟ್ಟ ಕಾಳುಸಾರಿನ ಘಮಕ್ಕೆ ಇವ ಮೂಗರಳಿಸಿಕೊಂಡೇ ಒಳಬಂದ. ’ಹೇಗಿದೆಯೋ? ತಿನ್ನೇಬಲ್ಲಾ? ಅಂದೆ’ ಕುಡಿಯೇಬಲ್‌’ ಎಂದು ಗಂಟಲು ಸರಿ ಮಾಡಿಕೊಂಡ ಜೋರಾಗಿ. ಊಟ ಮುಗಿಸೆದ್ದು ಹೋದ.

ಈಗಷ್ಟೇ ಬೆಕ್ಕು ಬಂದು ಕಸದ ಡಬ್ಬಿ ಉರುಳಿಸಿ ಹೋಯಿತು. ಗಾಳಿಯಲ್ಲದ ಗಾಳಿಗೆ ತೆವಳಿಕೊಂಡು ಬಂದ ಸಿಪ್ಪೆಗಳು ಹೊಸ್ತಿಲಿನ ಬಳಿ ಕುಳಿತಿವೆ. ಮತ್ತೆ ಮತ್ತೆ ನೋಡುತ್ತಲೇ ಇದ್ದೇನೆ... ಚಿಗುಟಿಸಿಕೊಂಡ ಅವುಗಳನ್ನು, ಸಾರಿನೊಳಗಿನ ಕಾಳುಗಳನ್ನು... ಕೆಲಸದಮ್ಮನ ಬೆರಳ ಗುರುತುಗಳು ಕಾಣುತ್ತಿಲ್ಲ.

ಅತ್ತೆ ಸಾರಿಗೆ ರುಬ್ಬುತ್ತಿದ್ದ ಮಸಾಲೆಗೆ ಏನೇನು ಹಾಕುತ್ತಿದ್ದರೋ ಅದೆಂಥ ಘಮವಿರುತ್ತಿತ್ತು. ಅಮ್ಮನಿಗೆ ಕೇಳೋಣವೆಂದರೆ ಅವಳಿಗೆ ಬೆಂಗಳೂರಿನ ಸಾರಿನ ಹದ ಗೊತ್ತಿಲ್ಲ. ನಾಲ್ಕಾಗಿತ್ತು ಗಂಟೆ. ಅಂತೂ ಅನ್ನಕ್ಕೆ ಕಲಿಸಿಕೊಂಡ ಕಾಳುಸಾರು ಹೊಟ್ಟೆಗಿಳಿಯಿತು. ಸ್ವಲ್ಪ ಹೊತ್ತು ಸುಮ್ಮನೆ ಕುಳಿತೆ. ಅರೆ ಈ ಚಳಿ... ಈ ಮೂಗು...ಗುಳುಗುಳು... ಮೂಗು ಕೈ ಬಳಿ ಹೋಯಿತು. ಅರೆ ಎಂಥದೋ ಚೆಂದ ಘಮ... ಮತ್ತೆ ಮತ್ತೆ ನೋಡಿಕೊಂಡೆ, ಘಮ ಘಮ... ಆ ಹೊತ್ತಿಗೆ ಮೊಬೈಲ್‌............; ಆಹ್‌ ಅವನೇ. ’ಏನೇ.. ಏನ್‌ ಮಾಡ್ತಿದ್ದೀಯೇ? ಕೇಳೇ ಇಲ್ಲಿ ಈ ಹಾಡು... ಘಮಘಮಾಘಮಾಡಸ್ತಾವ ಮಲ್ಲಿಗೀ...’

Monday, December 26, 2011

ಮತ್ತೆ ಅವ ಕಾಲಬಳಿಯೇ...

ಕುಕ್ಕರ್‌ ಬಿಸಿ ಆರಿರಲಿಲ್ಲ....

ಓಣಿಯಲ್ಲಿ ಆಟವಾಡಿ ದಣಿದ ಮಕ್ಕಳು.... ಗೇಟ್‌ ಆಚೆಯಿಂದಾನೇ ಅಮ್ಮಾ... ಅಂತ ಕೂಗಿಕೊಂಡು ಬರ‍್ತಾವಲ್ಲಾ.. ಹಾಗೆನೇ ಈ ಪರಮನೂ. ತಾಸಿನ ಹಿಂದೆಯೂ ಹಾಗೇ ಬಂದ. ಅವನ ಕೂಗಿಗೆ, ಹಸಿವಿಗೆ ನಾ ದಡಬಡಿಸಿ ಊಟಕ್ಕೊಡೋದು ರೂಢಿ. ಕುಕ್ಕರ್‌ ಬಿಸಿ ಆರಿದ ನಂತರ ಊಟಕ್ಕೆ ಕೊಟ್ಟರಾಯಿತು ಅಂತ ಹಾಲಷ್ಟೇ ಹಾಕಿದೆ. ನಾಳೆಯ ಹಾಲಿಗೆಂದು ಹಾಲಿನ ಚೀಲಕ್ಕೆ ಕೂಪನ್‌ ಇಡಲೆಂದು ಕೆಳಗಿಳಿದೆ.

***
ಮೇಲೆ ಬರುವಷ್ಟರ ಹೊತ್ತಿಗೆ ರೂಮಿನಿಂದ ಹೊರಬಂದ ಅವನ ಬಾಯಲ್ಲಿ ಹತ್ತಿಯಂಥದ್ದೇನೊ. ಇದೇನಿದು ಅಂತ ನೋಡುವ ಹೊತ್ತಿಗೆ ಅವನ ಬಾಯಲ್ಲಿ ನಮ್ಮ ವೈಟಿ! ಶ್‌............. ಎಂದು ಪರಮನನ್ನು ಓಡಿಸುವ ಹೊತ್ತಿಗೆ ಒಮ್ಮೆ ವೈಟಿ ತಪ್ಪಿಸಿಕೊಂಡಳು. ಆದರೂ ಪರಮ ಬಿಡಲೇ ಇಲ್ಲ. ಮತ್ತೆ ಹಿಡಿದು ಹೊರಗೋಡಿದ.

***
ಬೆಳಗ್ಗೆ ಪಕ್ಷಿಗಳಿಗೆ ನವಣೆ ಹಾಕಿ, ಗೂಡಿನ ಬಾಗಿಲಿನ ಪುಟ್ಟ ಚಿಲಕಕ್ಕೆ ತಂತಿ ತುಂಡು ಸಿಕ್ಕಿಸುವುದನ್ನು ಮರೆತಿದ್ದೆ. ಅದೇ ಇಷ್ಟೆಲ್ಲ ಅನಾಹುತಕ್ಕೆ ಕಾರಣ. ನನ್ನವ ಬೈದು ಬೈದು ಈಗಷ್ಟೇ ನಿಲ್ಲಿಸಿದ್ದಾನೆ. ಉಳಿದ ಮೂರು ಪಕ್ಷಿಗಳು ಕಂಗಾಲಾಗಿ ಕುಳಿತಿವೆ.

***

ಆದರೆ ಪರಮ ಮತ್ತೆ ಬಂದೇಬಿಟ್ಟ! ನಾವಿಬ್ಬರೂ ಅವನ ನಡೆಯನ್ನೇ ಗಮನಿಸುತ್ತಿದ್ದೆವು. ಹೊರಹೋದ ಅವ ಮತ್ತೆ ವಾಪಸ್‌ ಬಂದಾಗ ಕೋಪ ನೆತ್ತಿಗೇರಿದ್ದರೂ ಸುಮ್ಮನೇ ಇದ್ದೆವು. ಅದು ಹಾಗೇ ಅಲ್ವಾ ಕೋಪ ಮತ್ತು ಬೇಜಾರು ಒಟ್ಟಿಗೂಡಿದಾಗ ಸುಮ್ಮನಾಗಿಬಿಡುತ್ತೇವೆ. ಎಗ್ಗುಸಿಗ್ಗಿಲ್ಲದೇ ನೇರ ರೂಮಿಗೆ ಹೋದ ಪರಮ ಪಕ್ಷಿಯ ಗೂಡಿಗೆ ಮತ್ತೆ ದಾಳಿಯಿಟ್ಟೇಬಿಟ್ಟ. ಹೊಡೆದೋಡಿಸು ಎಂದೆ ಇವನಿಗೆ. ಇಲ್ಲ ಈಗ ಗೂಡಿನ ಚಿಲಕಕ್ಕೆ ತಂತಿ ಸಿಕ್ಕಿಸಿದೆಯಲ್ಲ ಏನಾಗಲ್ಲ ಬಿಡು ಅಂದ. ಪರಮನ ಪ್ರಯತ್ನ ಈ ಸಲ ವಿಫಲವಾಯಿತು. ಆದರೂ ಎರಡೇಟು ತಿಂದ ಅವ ಹೊರಗೋಡಿದ.

***
ಪರಮ ತಾನಾಗೇ ಬಂದು ಮನೆಯ ಬೆಕ್ಕಾಯಿತು; ಹಾಗೇ ವೈಟಿ, ಝಿಬಿ, ಫಿಂಚಿ, ಗೋಲ್ಡಿ ಸಾಕಿದ ಪಕ್ಷಿಗಳೇ. ಪರಮನಿಗೆ ಇನ್ನು ನಮ್ಮ ಮನೆಯಲ್ಲಿರಬೇಡ ಎಂದು ಹೇಳಲಾದೀತೆ? ಜೊತೆಯಲಿದ್ದವಳು ಎಲ್ಲಿ ಹೋದಳು? ಎಂದು ಕಂಗಾಲಾಗಿ ಮೂಲೆಹಿಡಿದು ಕುಳಿತಿರುವ ಮೂರು ಪಕ್ಷಿಗಳಿಗೆ ಏನು ಹೇಳಲಿ?

***
ಬಿಟ್ಟುಬಿಡೋಣ ಪಕ್ಷಿ... ಹಾರಿಕೊಂಡಿರಲಿ ಇನ್ನು ಸಾಕುವುದು ಬೇಡ ಎಂದು ಇವನಿಗಾತುಕೊಂಡು ಅತ್ತೆ. ಇವನು ಉತ್ತರಿಸಲಿಲ್ಲ. ಪ್ರಾಣಿ-ಪಕ್ಷಿಗಳು ಜೊತೆಗಿಲ್ಲದೇ ಬೆಳೆದ ಜೀವವೇ ಅಲ್ಲ ನಮ್ಮದು. ಆದರೆ ಹಾರುವ ಹಕ್ಕಿಯ ಬಂಧಿಸಬೇಡಿ ಎಂದು ಆಗಾಗ ಆಪ್ತರೊಬ್ಬರು ಹೇಳುತ್ತಿದ್ದ ಮಾತು ಈಗ ತುಂಬಾ ಕಾಡುತ್ತಿದೆ.

‘ನಾನು ಪಂಜರ ಪಕ್ಷಿ, ಇನ್ನು ನನಗಾರು ಗತಿ
ಕೇಳಬಲ್ಲೆಯೇನು ನನ್ನ ಕಥೆಯ
ಅಲ್ಲಿ ಬನ-ಬನದಲ್ಲಿ, ಕಾಡ-ಗಿಡಗಿಡದಲ್ಲಿ
ಕೊಂಬೆ ಕೊಂಬೆಗೆ ಹೂ ಸಾವಿರಾರು.
ಬನದ ಹಣ್ಣಿನ ರುಚಿನ ಬರಿ ನೆನೆದರೇನುಂಟು
ಮರಳಿ ದೊರೆಯಬಹುದೇ ತವರಿನವರು..’

ಬಾಲ್ಯದಲ್ಲಿ ಕಾಡಿದ ಈ ಸಾಲುಗಳನ್ನು ಹಿಂದೊಮ್ಮೆ ಕುಂವೀ ಕಳೆದ ವರ್ಷ ಫೋನಿನಲ್ಲಿ ನೆನಪಿಸಿಕೊಂಡಿದ್ದು ಈಗ ನೆನಪಾಗಿ ಕಣ್ಣು ಒದ್ದೆಯಾಗುತ್ತಿವೆ.

***
ಆದರೆ ಈಗ ಹೊರಗೋಡಿದ ಪರಮ ಹೇಳಿಕೇಳಿ ಬೆಕ್ಕು, ನಾಳೆಗೆ ಮತ್ತೆ ಅವ ಕಾಲಬಳಿಯೇ.


Wednesday, December 7, 2011

ಬಿಡುವುದಿಲ್ಲ ಬುದ್ಧ

ಎದ್ದುಹೋಗಬೇಕೆಂದುಕೊಂಡಾಗೆಲ್ಲ
ಬುದ್ಧನದೇ ಅಡ್ಡಿ
ಮರೆಯಬೇಕೆಂದರೂ ಕದಲುವುದಿಲ್ಲ ಮರೆವು

ಸ್ನಾನದ ಮನೆಯಲ್ಲಿ ಬಿಚ್ಚಿಟ್ಟ ಓಲೆ
ಕ್ಯಾಲೆಂಡರ್‌ಗೆ ಚುಚ್ಚಿದ ಸೂಜಿ-ದಾರ
ಇಸ್ತ್ರಿ ಬಟ್ಟೆಗಳ ನಡುವೆ ಡಾಂಬರು ಗುಳಿಗೆ
ಹೊರಡುವ ಮುಂಚೆ ಕನ್ನಡಿಗೊಂದು ಇಣುಕು
ಮರೆಯುವಂಥವಲ್ಲ

ಗಾಡಿ ಏರುವ ಮುಂಚೆ ಹೆಲ್ಮೆಟ್
ಗಾಡಿ ಏರಿದ ನಂತರ ಪರ್ಸ್
ಅರ್ಧ ದಾರಿಗೆ ಮನೆಯ ಬೀಗ
ಕಚೇರಿ ತಲುಪಿದಾಗ ಒಣಹಾಕಿದ್ದ ಬಟ್ಟೆ
ಸರಿಯುವುದಿಲ್ಲ ನೆನಪಿನಿಂದ

ಕಚೇರಿ ಕೆಲಸ ಮನೆಯೊಳಗೆ
ಬಾಕಿಯುಳಿದ ಮನೆಗೆಲಸ ಕಚೇರಿಯಲ್ಲಿ
ಅಪರೂಪಕ್ಕೆ ಬೇಗ ಹೊರಟಾಗಲೂ
ಎಂದೋ ಕೇಳಿದ್ದ ರಾಗದ ಗುಂಗು
ಬೆನ್ನ ಹಿಂದೆಯೇ...

ಸಂಜೆ ಸಂದಣಿಯಲ್ಲೂ
ರಸ್ತೆಯ ಹೊಂಡ
ವಾರವಾಗಿದ್ದರೂ ಕಿರಾಣಿ ಚಿಲ್ಲರೆ
ಆಚೆ ಮನೆಯವರು ಪಡೆದ ಕೈಗಡದ ಸಕ್ಕರೆ
ಅಪರಿಚಿತರು ತೋರಿದ ಅಕ್ಕರೆ
ಮಾಸೀತೇ?

ಯಾರೂ ಇಲ್ಲದ ಮನೆಗೆ ಭಾರಿ ಬೀಗ
ಓಡದ ಬದುಕಿನಲ್ಲಿ ಗಡಿಯಾರದ್ದೇ ವೇಗ
ಉಕ್ಕುವ ಭಾವಗಳಿಗೆ ಸಭ್ಯತೆಯ ಚೌಕಟ್ಟು
ಕುದಿವ ಸಾರೊಳಗೆ ಪುಟ್ಟ ಸೌಟು
ಮನಸಿನಿಂದ ಹಾರವು.

ರಾತ್ರಿಯೂಟ ಬರೀ ಶಾಸ್ತ್ರ
ಪವಡಿಸಿದಾಗ ಟಿವಿ ನಿತ್ಯದ ಚಟ
ಕೊಂಡಿದ್ದಕ್ಕಾಗಿ ಓದಿದ ಪತ್ರಿಕೆಯ ಸುದ್ದಿ
ತಿಂಗಳ ಕೊನೆಗೆ ರದ್ದಿ

ಮಲಗುವ ಮುಂಚೆ ಅಲಾರಾಂ
ಮಲಗಿದ ನಂತರ ಒಲೆ ಮೇಲಿಟ್ಟ ಹಾಲು
ನಾಳಿನ ಬಟ್ಟೆಗೆ ಇಸ್ತ್ರಿ
ಮುಂಗಡ ಪಡೆದ ಮೇಸ್ತ್ರಿ
ಮರೆಯಲು ಬಿಡುವುದೇ ಇಲ್ಲ.

ಮೊಳೆ ಹೊಡೆದ ಗೋಡೆಯ ಕಲೆ
ಮೊಡವೆ ಮಾಯ್ದ ಗುರುತು
ಮೊಳಕೆ ಮುರುಟಿದ ದಿನದ ನೋವು
ದಿನದ ಕೊನೆಗೆ ಉಳಿವ ವಿಷಾದ
ಕಳಚಿ ಹಾಕಲಾಗುವುದಿಲ್ಲ

ನಾನು ನಾನಾಗಬೇಕು
ಮನಸು ಮುಗಿಲಾಗಬೇಕು
ಅಡ್ಡ ಬಂದಿದ್ದನ್ನೆಲ್ಲ ಒದ್ದು
ಎದ್ದು ಹೋಗಬೇಕೆಂದು-
ಅಂದುಕೊಂಡಾಗೆಲ್ಲ

ಬುದ್ಧ ಅಡ್ಡ ಬರುತ್ತಾನೆ

ಮತ್ತದೇ ಗಿರಕಿ
ಮತ್ತದೇ ಲೊಳಲೊಟ್ಟೆ

-ಶ್ರೀದೇವಿ ಕಳಸದ

Monday, December 5, 2011

.......................................


ಕಣ್ಣುಕ್ಕಿದಾಗೆಲ್ಲ ಕವಿತೆ ಉಕ್ಕುತ್ತದೆ
ಕತ್ತಲಾದಾಗ ಚುಕ್ಕಿ ಕಣ್ತೆರೆವಂತೆ

ಅವತ್ತೂ ಹೀಗೇ, ಕತ್ತಲಿತ್ತು ದಟ್ಟ
ಕವಿತೆ ಕಾಣದಷ್ಟು
ಉಕ್ಕುತ್ತಿದ್ದ ಕಂಗಳಿಗೆ
ಕತ್ತಲೆ ಕಂಡರೆಷ್ಟು!

ಮಂದ ಬೆಳಕೊಂದಿರಲೆಂದು
ಹಚ್ಚಿದ ದೀಪ ನೋಡಲು
ಕಿಟಕಿ, ಬಾಗಿಲುಗಳಿಂದ ಗಾಳಿ
ಬೀದಿದೀಪದ ಕೋಲು,
ತೂರಿ ಬಂದಿರಬಹುದು ಕೆಟ್ಟದೃಷ್ಟಿಗಳೂ

ಮುಚ್ಚಿದರೆ ಬಾಗಿಲು
ನಕ್ಕಿತ್ತು ನಂದಾದೀಪ
ಕತ್ತಲೆಯ ಸೊಗಸ ಊಹಿಸಿತ್ತೇನೋ, ಪಾಪ!

ತೊಳೆದಿಟ್ಟಿದ್ದ ಪಾತ್ರೆಗಳ ತುಂಬ ಮಿಂಚು
ಗೋಡೆಗಳಿಗೆ ಹೊಸ ರಂಗು
ಕುಕ್ಕರ್ ಒಡಲಲ್ಲಿ ರಾತ್ರಿಯಡುಗೆ
ಕುದ್ದು ಸುಮ್ಮನಾಗಿದ್ದ ಸಾರು ಪಾತ್ರೆಯೊಳಗೆ

ಚಾರ್ಜಿಲ್ಲದ ಮೊಬೈಲ್ ನಿದ್ದೆ ಹೋದ ಮಗು
ಅರಳಿಕೊಂಡಂತಿದ್ದ ಹಾಸಿಗೆ ದೇದೀಪ್ಯಮಾನ
ಮೊಬ್ಬು ಬೆಳಕಿಗಿತ್ತು ಮಧುಚಂದ್ರದ ಸೊಗಸು
ಪುಟ್ಟ ಕೋಣೆಯೊಳಗೆ ಪ್ರಸ್ತ ಸಡಗರ

ಇನ್ನೇನು ಬಂದಾನು, ಬಾಗಿಲು ತೆರೆದೇನು
ಹಸಿದವನಿಗೆ ಮೊದಲು ಬಿಸಿ ತುತ್ತು,
ಆಮೇಲಿದೆ ಆಲಿಂಗನ, ಮುತ್ತು, ಮತ್ತು
ಮತ್ತು, ಆಮೋದದ ಹಿತವಾದ ಸುಸ್ತು

ಕಾಯುವ ಜೀವಕ್ಕೆ ಕಾಯ್ದೀತೆ ಗಡಿಯಾರ
ದೀಪದೆಣ್ಣೆ ಕುಸಿದು, ಬೆಳಕು ಮಂಕಾಗಿ
ಉಡುಗುವ ಉತ್ಸಾಹಕ್ಕೆ
ಎಣ್ಣೆ ಸುರಿದು, ಬತ್ತಿ ನೀವಿ
ಸದ್ದಾಯಿತೇನೋ ಎಂದು ಬಾಗಿಲತ್ತ ಕಿವಿ ನೀಡಿ
ಅವನಲ್ಲ ಎಂಬ ನಿರಾಶೆ ಹತ್ತಿಕ್ಕಿ
ಕೂತಲ್ಲೇ ನಿದ್ದೆ ಹೋದಾಗ ಬಿದ್ದ ಕನಸಲ್ಲೂ-

ಕಾಯುತ್ತ ಕೂತಿವೆ
ಅಲ್ಲೊಂದು ದೀಪ, ಇಲ್ಲೆರಡು ಕಣ್ಬೆಳಕು!


-ಶ್ರೀದೇವಿ ಕಳಸದ

Sunday, December 4, 2011

ಅವರವರ ಪಾತ್ರೆಯಲ್ಲಿ ಅವರವರು ಪರಿಭಾವಿಸಿದ್ದು....

ಹರಿಯುವ ಸಣ್ಣ ತೊರೆಯನ್ನು ಗಮನಿಸುತ್ತಾ ನಿಂತ ಮಗುವೊಂದು ಅದರೊಳಗೆ ಆಗಾಗ ಕಾಲಿಟ್ಟು ಕಾಲಿಟ್ಟು ತೆಗೆದಂತೆ ಕುಮಾರ ಗಂಧರ್ವರ ಗಾಯನ. ಸ್ವರ ತೂರಿದಂತೆ ಮಾಡಿ... ಮತ್ತದೇ ಸ್ವರ ಹಿಡಿಯುವಾಗ ಉಂಟಾಗುವ pause ಇದೆಯಲ್ಲ ಕಾಯಿಸುತ್ತ ಕಾಡುವಂಥದ್ದು. ಕುಮಾರ ಗಂಧರ್ವರಿಗೆ ಕಿವಿಯಾದಾಗೆಲ್ಲ ಹೀಗೊಂದು ಅನುಭವ ಉಂಟಾಗುತ್ತಿತ್ತು.ಮೊನ್ನೆ ಕುಮಾರ ಗಂಧರ್ವರು ಹಾಡಿದ ಬಿಲಾಸ್‌ಖಾನಿ ತೋಡಿಯ ’ನಯನಮೇ ಜಲ ಭರ ಆಯೇ...’ ಚೀಝ್‌ ಅನ್ನು http://youtu.be/8ggfzBbODb0 ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದಾಗ ಸಣ್ಣ ಚರ್ಚೆಯೊಂದನ್ನು ಹುಟ್ಟು ಹಾಕಿದರು ನಟ, ನಿರ್ದೇಶಕ, ಲೇಖಕ ಬಿ. ಸುರೇಶ್‌.

--------------
ಬಿ.ಸುರೇಶ್‌ ಪ್ರಶ್ನೆ: ದೇವರುಗಳೊಂದಿಗೆ ಭಕ್ತರು ಸಂವಾದ ನಡೆಸುವಂತಹ ಹಾಡುಗಳಲ್ಲಿ ಪಾಕಿಸ್ತಾನಿ ಹಾಡುಗಾರರು ಹಾಡಿದಾಗ (ಕೆಲವು ಭಾರತೀಯ ಮುಸಲ್ಮಾನ್ ಹಾಡುಗಾರರು) ಸಿಗುವ ಆನಂದ ನಮ್ಮವರು ಹಾಡಿದಾಗ ಸಿಗುವುದಿಲ್ಲ. ಯಾಕೆ?... ಅದೇ ಚೀಸ್ ಎರಡು ವಿಭಿನ್ನ ಧರ್ಮದವರ ಹಾಡುಗಾರಿಕೆಯಲ್ಲಿ ವಿಭಿನ್ನ ಆಗುವುದು ಹೇಗೆ?

ನನಗನಿಸಿದ್ದು: ಪಾಕಿಸ್ತಾನಿ ಗಾಯಕರ ಆ ಉಠಾವನ್‌, ರಾಗದೊಳಗೆ ಇಳಿದೇರುವ ಶೈಲಿಯೇ ವಿಶಿಷ್ಟ. ಅದು ನನಗೂ ಸಾಕಷ್ಟು ಸಲ ಅನುಭವಕ್ಕೆ ಬಂದಿದೆ. ಎಂಥವರನ್ನೂ ತಕ್ಷಣವೇ ಹಿಡಿದಿಟ್ಟುಕೊಳ್ಳುವಂಥ ಸೆಳೆತವಿದೆ. ಕಲೆ ಸೀಮಾತೀತವಾದರೂ ಆಯಾ ಪ್ರಾಂತ್ಯ, ಧರ್ಮಕ್ಕೂ ಕಲೆಗೂ, ಸಾಹಿತ್ಯ, ಸಂಸ್ಕೃತಿಗೂ ತನ್ನದೇ ಆದ ಛಾಪು ಇದ್ದೇ ಇರುತ್ತದೆ. ಎಲ್ಲೋ ಒಂದುಕಡೆ ಕಲಾವಿದ ತನಗೆ ಸಿಗುವ ಪರಿಸರದ ಹಿನ್ನೆಲೆಯಲ್ಲಿ ಆಯಾ ಧರ್ಮದ ಪ್ರಭಾವಕ್ಕೆ ಅರಿವಿಲ್ಲದೆಯೇ ಒಳಗಾಗಿರುತ್ತಾನೆ. (ಮುಸ್ಲಿಮರ ಪ್ರಾರ್ಥನಾ ಶೈಲಿ, ಹಿಂದೂಗಳ ಮಂತ್ರೋಚ್ಛಾರಣೆ, ಸಿಖ್‌ರ ಗ್ರಂಥಪಠಣ ಇತ್ಯಾದಿ... ಒಂದಕ್ಕಿಂತ ಒಂದು ವಿಭಿನ್ನ). ಅವನು ಪಾಕಿಸ್ತಾನದಲ್ಲೇ ಇರಲಿ ಭಾರತಕ್ಕೇ ಬಂದು ನೆಲೆಸಲಿ, ಭಾರತೀಯನೇ ಆಗಿರಲಿ ಅದು ಅವನಲ್ಲಿ ಮನೋಗತವಾಗಿರುತ್ತದೆ. ಪರ್ಶಿಯನ್‌ ಮೂಲದ ಹಿಂದೂಸ್ತಾನಿ ಸಂಗೀತ ಕಾಲಕ್ರಮೇಣ ಭಾರತೀಯ ಸಂಗೀತವಾಗಿದ್ದು, ಘರಾಣೆಗಳ ವೈಶಿಷ್ಟ್ಯ, ವಿಚಾರ, ಪರಂಪರೆಗೆ ಬದ್ಧರಾದ ಕೆಲವರು; ಕಂಠ ಸಾಮರ್ಥ್ಯಕ್ಕೆ, ಧ್ವನಿ ಸಂಸ್ಕಾರಕ್ಕೆ, ಸಭಾರಂಜನೆಗೆ ತಕ್ಕಂತೆ ಮಿಶ್ರಘರಾಣೆಯೊಂದಿಗೆ ತಮ್ಮದೇ ಆದ ಶೈಲಿ ರೂಪಿಸಿಕೊಂಡ ಹಲವರು. ಹೀಗೆ.... ಇಂಥ ಇನ್ನೂ ಹಲವಾರು ಹಿನ್ನೆಲೆಗಳು ಇರುವುದರಿಂದ ಒಂದೇ ರಾಗದ ಅದೇ ಚೀಝ್‌ ಅನ್ನು ಇಬ್ಬರು ಗಾಯಕರು ಹಾಡಿದಾಗ (ನೀವೇ ಹೇಳಿದಂತೆ ಭಿನ್ನ ಧರ್ಮೀಯ) ರುಚಿ ಬೇರೆ ಬೇರೆಯೇ ಇರುತ್ತದೆ. ಹಾಗೆಯೇ ಶ್ರೋತೃ ಕೂಡ ತನ್ನ ರಸಗ್ರಹಣ ಸಂಸ್ಕಾರಕ್ಕೆ ತಕ್ಕಂತೆ ಸಂಗೀತವನ್ನು, ಕಲಾವಿದರನ್ನು, ಶೈಲಿಯನ್ನು ಆಯ್ಕೆ ಮಾಡಿಕೊಳ್ಳುತ್ತಾ ಆನಂದ, ಅನುಭವವನ್ನು ದಕ್ಕಿಸಿಕೊಳ್ಳುತ್ತಾ, ವಿಸ್ತರಿಸಿಕೊಳ್ಳುತ್ತಾ ಸಾಗುತ್ತಾನೆ...

ಬಿ. ಸುರೇಶ್‌: ನನಗೆ ಹೀಗನ್ನಿಸುತ್ತದೆ. ಈ ಅಭಿಪ್ರಾಯ ಸರಿಯೋ ಅಲ್ಲವೋ ನೀವೇ ತಿಳಿಸಿ. ಹಿಂದೂ ಧರ್ಮಿಯರಲ್ಲಿ ಕಾಮವನ್ನು ಕೂಡ ಪ್ರೇಮದ ವಿಸ್ತರಣೆ ಎಂಬ ಮಾತಿನ ಬಗ್ಗೆ ಹಿಂಜರಿಕೆಯಿದೆ. ಆದರೆ ಸೂಫಿ ಮತ್ತು ದರ್‌ವೀಶ್ ಪಂಥಗಳಲ್ಲಿ ಪ್ರಿಯಕರನಿಗೆ/ಪ್ರಿಯತಮನಿಗೆ ಒಪ್ಪಿಸಿಕೊಳ್ಳುವುದು ಎಂದರೆ ಅಲ್ಲಿ ಕಾಮವೂ ಸೇರಿದಂತೆ ತನ್ನನ್ನು ಇಡಿಯಾಗಿ ಒಪ್ಪಿಸಿಕೊಳ್ಳುವ ಸ್ವಾತಂತ್ರ‍್ಯ ಇದೆ. ಹೀಗಾಗಿಯೇ ಅಕ್ಕ ಮಹಾದೇವಿ ಮತ್ತು ಮೀರಾ ಅವರ ಕೃತಿಗಳನ್ನು ಅಥವಾ ಜಯದೇವನ ಗೀತಗೋವಿಂದವನ್ನು ನಮ್ಮವರು ಹೇಳಿದಾಗ ಅದು ಕೇವಲ ಭಕ್ತಿ ಗೀತೆ ಅನಿಸುತ್ತದೆ. ಮುಸಲ್ಮಾನರು ಅದೇ ಹಾಡನ್ನು ಹೇಳಿದಾಗ ಉನ್ಮತ್ತ ಪ್ರೇಮಗೀತೆ ಎನಿಸುತ್ತದೆ. ಹೀಗಾಗಿ ಕೇಳುಗನಿಗೆ ಪರ್‌ವೀನ್ ಸುಲ್ತಾನ, ಜುಬೇದಾ ಬೇಗಂ, ಅಬೀದಾ ಅಥವಾ ಫತೇಅಲೀಖಾನ್‌ ಅವರ ಹಾಡುಗಾರಿಕೆ ತನ್ಮಯಗೊಳಿಸುವಂತೆ ಅದೇ ಹಾಡುಗಳನ್ನು ನಮ್ಮವರು ಹೇಳಿದಾಗ ತನ್ಮಯತೆ ಅಥವಾ ಪರವಶತೆ ಉಂಟಾಗುವುದಿಲ್ಲ ಎಂದು ನನ್ನ ಭಾವನೆ. ನಿಮ್ಮ ಅಭಿಪ್ರಾಯ ತಿಳಿಸಿ. ನನ್ನ ಅರ್ಥಗ್ರಹಿಕೆಯನ್ನು ವಿಸ್ತರಿಸಿ.


ಸುರೇಶ್ ಅವರ ಪ್ರಶ್ನೆಗೆ ಯೋಚಿಸುತ್ತಿದ್ದಾಗ ಎಂದಿನಂತೆ ಪರ್ವೀನ್‌ ಸುಲ್ತಾನಾ, ಕಿಶೋರಿ ಅಮ್ಹೋಣ್ಕರ್‌, ಜಸರಾಜ್‌, ಭೀಮಸೇನ್‌ ಜೋಶಿ ಮುಂತಾದವರ ಜೊತೆಗೆ ಅಶ್ಚಿನಿ ಭಿಡೆ ದೇಶಪಾಂಡೆ http://youtu.be/0p78q2LnlG0 ಮತ್ತು ಕೌಶಿಕಿ ಚಕ್ರವರ್ತಿ http://youtu.be/vjqGlxdnHJI ಸಿಕ್ಕರು. ಆಗ ಅನ್ನಿಸುತ್ತಾ ಹೋದದ್ದು ಇಲ್ಲಿದೆ....


ಕಾಮ ಆಂತರಿಕ, ಪ್ರೇಮ ಬಹಿರಂಗ. ಪ್ರೇಮ ತಂಬೂರಿ ಶೃತಿಯಿದ್ದಂತೆ; ನಿರಂತರ. ತಾನ್‌, ಸರಗಮ್‌, ಹರಖತ್‌ಗಳಿದ್ದಂತೆ.... ಕಾಮ ಕ್ಷಣಿಕ. ಹಾಗೆಂದೂ ಎರಡನ್ನೂ ಬಿಡಿಸಿ ನೋಡಲಿಕ್ಕಾಗದು. ಒಂದನ್ನು ಬಿಟ್ಟು ಇನ್ನೊಂದು ಇರಲಾರದು. ಆದರೆ ಕಾಮವೇ ಪ್ರಧಾನವೆಂದು ಹೇಳಲಿಕ್ಕಾಗದು. ಇದನ್ನು ವಿಂಗಡನೆ ಮಾಡುತ್ತಾ ಹೋದರೆ ಅದು ವ್ಯಾಕರಣವೆನ್ನಿಸಿಕೊಳ್ಳುತ್ತದೆಯೇ ಹೊರತು ಅದು ಕಲೆ ಎನ್ನಿಸಿಕೊಳ್ಳುವುದಿಲ್ಲ. ಹಾಗೆಯೇ ಅಕ್ಕ ಇರಬಹುದು ಮೀರಾ ಇರಬಹುದು ಅವರು ಹೊಸೆದ ಪ್ರೇಮ, ಕಾಮ, ಶೃಂಗಾರ, ಭಕ್ತಿ, ವೈರಾಗ್ಯವನ್ನು ಒಬ್ಬ ಗಾಯಕ/ಗಾಯಕಿಯು ತಮ್ಮ ತಮ್ಮ ಮನೋಭೂಮಿಕೆ ಆಧಾರದ ಮೇಲೆ ವ್ಯಕ್ತಪಡಿಸುತ್ತಾ ಹೋಗುತ್ತಾರೆ.

ಗಾಯಕರು ಆಯಾ ಸಾಹಿತ್ಯ ಅಥವಾ ಭಾವವನ್ನು ಹೇಗೆ ಗ್ರಹಿಸಿದ್ದಾರೆ ಎನ್ನುವುದಕ್ಕೆ ಅವರ ಗಾಯನವೇ (ವಾದನವೇ) ಬಿಂಬ. ಹಾಗೆಯೇ ಸೂಕ್ಷ್ಮಮನಸಿನ ಆಸ್ವಾದಕನಿಗೆ ಆ ಗಾಯಕನ ಗ್ರಹಿಕೆ ಮತ್ತದರಿಂದ ಸೃಷ್ಟಿಸಿದ ಸೃಜನಶೀಲತೆ, ಕಲ್ಪನಾ ಸಾಮರ್ಥ್ಯ, ಅದರಿಂದ ಹೊಮ್ಮಿದ ಭಾವತೀವ್ರತೆ ತಟ್ಟುತ್ತಾ ಹೋಗುತ್ತದೆ. ಆಗ
ಶ್ರೋತೃವಿನ ರಸಗ್ರಹಣ ಸಂಸ್ಕಾರಕ್ಕೆ ತಕ್ಕಂತೆ ಅದು ಶೃಂಗಾರವಾಗಿ, ಕಾಮವಾಗಿ, ಪ್ರೇಮವಾಗಿ ಮತ್ತು ಆಧ್ಯತ್ಮವಾಗಿ ಒಳಗಿಳಿಯು ಸಾಧ್ಯತೆ ಇರುತ್ತದೆ. ಇಲ್ಲಿ ಮುಸ್ಲಿಂ, ಹಿಂದೂ ಎನ್ನುವುದಕ್ಕಿಂತ ಕಲಾವಿದರ ಮನೋಧರ್ಮ, ಮನೋಗತಿ, ಮನೋಭೂಮಿಕೆ ಮತ್ತು ಅವರು ಬೆಳೆದ ಪರಿಸರ, ಪ್ರಭಾವ ಮಹತ್ವ ಎನ್ನಿಸಿಕೊಳ್ಳುತ್ತದೆ.

ಗ್ರಹಿಕೆ ಎನ್ನುವುದು ವ್ಯಕ್ತಿಗತವೇ ಹೊರತು ವಿಷಯಗತವಲ್ಲ. ಒಂದೇ ವಿಷಯವನ್ನು ಪ್ರತಿಯೊಬ್ಬರೂ ತಮ್ಮ ಗ್ರಹಿಕೆಗೆ ತಕ್ಕಂತೆ ಅರ್ಥೈಸಿಕೊಳ್ಳುತ್ತಾರೆ. ನಮಗೆ ಮಗಳಾದವಳು ಅಳಿಯನಿಗೆ ಹೆಂಡತಿ. ನಾವು ಮಗ-ಮಗಳು, ಅಣ್ಣ-ಅಕ್ಕ, ತಮ್ಮ-ತಂಗಿ, ಗೆಳೆಯ-ಗೆಳತಿ, ಗಂಡ-ಹೆಂಡತಿ, ಪ್ರೇಯಸಿ-ಪ್ರಿಯಕರ, ಅಧಿಕಾರಿ-ನೌಕರ- ಹೀಗೆ ಏನೆಲ್ಲ ಆಗುವುದು ಈ ಕಾರಣಕ್ಕೆ. ಒಬ್ಬನೇ ವ್ಯಕ್ತಿ ಹಲವಾರು ರೀತಿ ವ್ಯಕ್ತಗೊಳ್ಳುತ್ತಾನೆ. ಪ್ರತಿಯೊಬ್ಬರಿಗೂ ಅವನೊಂದಿಗಿನ ನಂಟು ಬೇರೆ ಬೇರೆ ತೆರನಾಗಿದ್ದು. ಅದು ಅವರವರ ಗ್ರಹಿಕೆಗೆ, ಸಂಬಂಧಕ್ಕೆ ತಕ್ಕ ರೀತಿ.

ಶಿಶುನಾಳ ಷರೀಫರ ಒಂದು ಅನುಭಾವ ರಚನೆಯನ್ನು ಇಲ್ಲಿ ಉದಾಹರಣೆಯಾಗಿ ನೀಡಬಹುದು. ‘ಸ್ನೇಹ ಮಾಡಬೇಕಿಂಥವಳ...’

ಸ್ನೇಹ ಮಾಡಬೇಕಿಂಥವಳ
ಒಳ್ಳೆ ಮೋಹದಿಂದಲಿ ಬಂದು ಕೂಡುವಂಥವಳ
ಸ್ನೇಹ ಮಾಡಬೇಕಿಂಥವಳ

ಚಂದ್ರಗಾವಿ ಶೀರಿನುಟ್ಟು
ದಿವ್ಯಕೊಮ್ಮೆಪಾರಿಜಮಗ್ಗಿ ಕುಪ್ಪಸ ತೊಟ್ಟು
ಬಂದಾಳು ಮಂದಿರ ಬಿಟ್ಟು
ನಾಲ್ಕು ಮಂದಿಯೊಳು ಬಂದು ನಾಚುವಳೆಷ್ಟು
ಸ್ನೇಹ ಮಾಡಬೇಕಿಂಥವಳ

ಅರಗಿಳಿ ಸಮ ಇವಳ ನುಡಿಯು
ಚೆಲ್ವ ಸುಳಿ ನಾಭಿ ಕುಚಕುಂಭಗಳ ಹಂಸ ನಡೆಯು
ಥಳ ಥಳಿಸುವ ತೋಳ್-ತೊಡೆಯು
ಬಳುಬಳುಕುವ ನಡುವಿನ ತಳಿರಡಿಯು
ಸ್ನೇಹ ಮಾಡಬೇಕಿಂಥವಳ

ಮುಕ್ತಿ ವನಿತೆ ಇವಳ ನೋಡಿ
ವಿರಕ್ತಿ ಸುರತ ಸುಖ ದಯದಿಂದ ಬೇಡಿ
ವಿನಯ ವಚನದಿ ಮಾತಾಡಿ
ದೇವ ಶಿಶುನಾಳಧೀಶನ ದಯದಿಂದ ಕೂಡಿ
ಸ್ನೇಹ ಮಾಡಬೇಕಿಂಥವಳ


ಇಡೀ ಕವಿತೆ ಓದಿದಾಗ, ಚೆಲುವೆಯೊಬ್ಬಳ ವರ್ಣನೆಯನ್ನು ಷರೀಫರು ಮಾಡಿದ್ದಾರೆ ಎಂದು ಅನಿಸುತ್ತದೆಯೆ? ಹಾಗೆ ಅನಿಸದಿದ್ದರೂ, ಆ ಭಾವದಿಂದ ಓದಿದಾಗ, ಹೌದು ಇದು ಚೆಲುವೆಯ ವರ್ಣನೆಯೇ ಎಂದೂ ಅನ್ನಿಸಬಹುದು. ಅಧ್ಯಾತ್ಮಿಕ ದೃಷ್ಟಿಯಿಂದ ನೋಡಿದಾಗ ಗೂಢಾರ್ಥಗಳು ಕಾಣಬಹುದು. ನಮಗೆ ಪೂರ್ವವಾಗಿದ್ದುದು, ಪೂರ್ವದಲ್ಲಿರುವವರಿಗೆ ಪಶ್ಚಿಮ ಎಂಬಂತೆ, ಒಂದೇ ವಿಷಯ, ವಸ್ತು, ಅಭಿವ್ಯಕ್ತಿ ಪ್ರತಿಯೊಬ್ಬರಿಗೂ ಭಿನ್ನವೆನಿಸಬಹುದು.

ಇಲ್ಲಿ ನನಗೆ ಝೆನ್‌ ಕತೆಯೊಂದು ನೆನಪಾಗುತ್ತದೆ. ಒಂದೇ ನದಿಯಲ್ಲಿ ನೀನು ಎರಡು ಸಾರಿ ಇಳಿಯಲಾರೆ ಎಂದು ಝೆನ್‌ ಸಿದ್ಧಾಂತ ಪ್ರತಿಪಾದಿಸುತ್ತದೆ. ಎಂದರೆ, ನದಿ ಇಲ್ಲಿ ನಿತ್ಯ ನೂತನ. ಪ್ರತಿ ಕ್ಷಣಕ್ಕೂ ಅದು ಹರಿಯುತ್ತದಾದ್ದರಿಂದ, ಅದು ಬದಲಾಗುತ್ತಲೇ ಇರುತ್ತದೆ. ನದಿ ಹೇಗೋ ವ್ಯಕ್ತಿ, ಅಭಿವ್ಯಕ್ತಿಯೂ ಹಾಗೇ.

ಹೀಗಾಗಿ, ಹಾಡೊಂದು, ಭಾವವೊಂದು ವ್ಯಕ್ತಿಯಿಂದ ವ್ಯಕ್ತಿಗೆ ತಾಕುವ ಪರಿಯೇ ಅದ್ಭುತ ಮತ್ತು ವಿಚಿತ್ರ. ಸಿನಿಮಾ ಗೀತೆಗಳಲ್ಲೂ ಇಂಥ ಉದಾಹರಣೆಗಳನ್ನು ಕಾಣಬಹುದು. ಸಂತಸದಲ್ಲಿ ಹಾಡಿದ ಹಾಡಿನ ರಾಗದಲ್ಲೇ ವಿಷಾದ ಗೀತೆಯೂ ಇರುತ್ತದೆ. ರಾಗ ಒಂದೇ ಆಗಿದ್ದರೂ, ಭಾವ ಬದಲಾಗಿರುತ್ತದೆ.

ವ್ಯಕ್ತಿಯೊಬ್ಬನ ಅಭಿವ್ಯಕ್ತಿಯ ಹಿಂದೆ ಅವನ ಸಂಸ್ಕಾರ ಅಡಗಿರುತ್ತದೆ. ಅವನು ಬೆಳೆದು ಬಂದ ಭೌಗೋಳಿಕ ಪ್ರದೇಶ, ಆಚರಣೆಗಳು, ರೀತಿ-ರಿವಾಜುಗಳು, ಸಂಪ್ರದಾಯ, ನಂಬಿಕೆ, ಭಾವನೆ- ಹೀಗೆ ಎಲ್ಲವೂ ಸೇರಿ ಅವನ ಗ್ರಹಿಕೆಯನ್ನು ರೂಪಿಸಿರುತ್ತವೆ. ಅಲ್ಲದೇ ಸಂದರ್ಭ ಹಾಗೂ ಮಾನಸಿಕ ಸ್ಥಿತಿಯೂ ಅಭಿವ್ಯಕ್ತಿಯ ಮೇಲೆ ಸಾಕಷ್ಟು ಪ್ರಭಾವ ಬೀರಿರುತ್ತವೆ.

ಒಂದು ಸರಳ ಶಬ್ದವನ್ನೇ ನೋಡಿ: ’ಹೌದಾ’ ಎಂಬ ಶಬ್ದವನ್ನು ನೀವು ಬೇರೆ ಬೇರೆ ಅರ್ಥದಲ್ಲಿ ಬಳಸಬಹುದು. ನಾವು ಉಚ್ಛರಿಸುವ ರೀತಿಯ ಮೇಲೆ ಅದರ ಅರ್ಥ ಬದಲಾಗುತ್ತದೆ. ಕುತೂಹಲ, ವ್ಯಂಗ್ಯ, ನಿರಾಸಕ್ತಿಗಳನ್ನು ಅದರಲ್ಲಿ ಸುಲಭವಾಗಿ ಬಳಸಬಹುದು. ಯಾವ ಅರ್ಥದಲ್ಲಿ ನಾವು ಬಳಸುತ್ತೇವೆ ಎಂಬುದರ ಮೇಲೆ ಆ ಶಬ್ದದ ಅರ್ಥ ಆ ಸಂದರ್ಭಕ್ಕೆ ರೂಪಿತವಾಗುತ್ತದೆಯೇ ಹೊರತು, ಅದಕ್ಕೊಂದು ಶಾಶ್ವತ ಅರ್ಥವನ್ನು ರೂಪಿಸಲಾಗದು.

ಕನಕದಾಸರು ಮೋಹನ ತರಂಗಿಣಿ ಕೃತಿ ರಚಿಸಿದರು. ವಾತ್ಸಾಯನ ಕಾಮಸೂತ್ರ, ಪು.ತಿ. ನರಸಿಂಹಚಾರ್‌ ಇಂಥದೇ ರಚನೆಯೊಂದನ್ನು ಮಾಡಿದ್ದಾರೆ. ಪಾ.ವೆಂ. ಆಚಾರ್ಯ ಅವರು ಸುರತಿ ಎಂಬ ಲೈಂಗಿಕ ಪತ್ರಿಕೆಯ ಸಂಪಾದಕರಾಗಿದ್ದರು. ಆದರೆ, ಇವರ‍್ಯಾರನ್ನೂ ನಾವು ಶೃಂಗಾರತಜ್ಞರೆಂದು ಏಕಾರ್ಥದಲ್ಲಿ ಗುರುತಿಸಿಲ್ಲ. ಕನಕದಾಸ ಸಂತ, ವಾತ್ಸಾಯನ ಋಷಿ, ಪು.ತಿ.ನ. ಸಾಹಿತಿ ಹಾಗೂ ಪಾವೆಂ ಪತ್ರಕರ್ತ-ಲೇಖಕ. ಹಾಗಾದರೆ, ಇವರ ಕೃತಿಗೂ ಇವರ ಬಾಹ್ಯ ಗುರುತಿಸುವಿಕೆಗೂ ಏನೂ ಸಂಬಂಧ ಉಂಟಾಗಲಿಲ್ಲ ಎಂದಾಯ್ತಲ್ಲ. ಕೇವಲ ಆ ಕೃತಿಯೊಂದರ ಆಧಾರದ ಮೇಲೆ ಹೇಗೆ ಅವರ ವೃತ್ತಿ-ಪ್ರವೃತ್ತಿಗಳನ್ನು ನಿರ್ದಿಷ್ಟವಾಗಿ ಹೇಳುವುದು ಹೇಗೆ ತಪ್ಪಾಗುತ್ತದೆಯೋ, ಹಾಗೆಯೇ ಗಾಯಕನೊಬ್ಬನ ಆ ಸಂದರ್ಭದ ಅಭಿವ್ಯಕ್ತಿಯ ಮೇಲೆ ಅವರ ಒಟ್ಟು ವ್ಯಕ್ತಿತ್ವವನ್ನು ಗುರುತಿಸುವುದೂ ತಪ್ಪಾಗುತ್ತದೆ. ಅದು ಆ ಕ್ಷಣದ ವಾಸ್ತವ ಮಾತ್ರ.

ಪುರಂದರದಾಸರ ‘ಭಾಗ್ಯದಾ ಲಕ್ಷ್ಮೀ ಬಾರಮ್ಮಾ...’ ಕೃತಿಯಲ್ಲಿಯೂ ಲಕ್ಷ್ಮಿಯ ಸೌಂದರ್ಯ ವರ್ಣನೆ ಇದೆ. ಆದರೆ, ಇಡೀ ಸಾಹಿತ್ಯ ಆರಾಧನೆಯ ಭಾವ ಹೊಂದಿದೆ.

ಅಂಕೆಯಿಲ್ಲದ ಭಾಗ್ಯವ ಕೊಟ್ಟು
ಕಂಕಣ ಕೈಯ ತಿರುವುತ ಬಾರೆ
ಕುಂಕುಮಾಂಕಿತೆ ಪಂಕಜಲೋಚನೆ
ವೆಂಕಟರಮಣನ ಬಿಂಕದ ರಾಣಿ...


ಇಲ್ಲಿ ಲಕ್ಷ್ಮಿಯ ಸೌಂದರ್ಯದ ವರ್ಣನೆ ಇದ್ದರೂ, ಅದರ ಹಿಂದಿರುವ ಭಾವ ಭಕ್ತಿಪ್ರೇರಿತವಾದುದು. ಭಕ್ತಿಯ ಪರಾಕಾಷ್ಠೆಯ ನಡುವೆಯೂ ಲಕ್ಷ್ಮಿಯ ದೇಹಸೌಂದರ್ಯವನ್ನು ಪುರಂದರದಾಸರು ಗುರುತಿಸಿದ್ದಾರೆ. ಗಾಯಕ ಇದರ ಪೈಕಿ ಯಾವ ಭಾವಕ್ಕೆ ಒತ್ತು ಕೊಡುತ್ತಾನೋ, ಅದು ಆ ಕ್ಷಣದ ಅಭಿವ್ಯಕ್ತಿಯ ಭಾವವಾಗುತ್ತದೆಯೇ ಹೊರತು ಪುರಂದರದಾಸರ ಈ ಕೃತಿಯ ಶಾಶ್ವತ ಅನಿಸಿಕೆಯಾಗಿ ಅಲ್ಲ.

ಶ್ರೀವೆಂಕಟೇಶ ಸುಪ್ರಭಾತ ಶುರುವಾಗುವುದೇ

ಕಮಲಾಕುಚಚೂಚುಕಕುಂಕುಮತೋ
ನಿಯತಾರುಣಿತಾತುಲನೀಲತನೋ
ಕಮಲಾಯತಲೋಚನ ನೋಕಪತೇ
ವಿಜಯೀ ಭವ ವೆಂಕಟ ಶೈಲಪತೇ

ಎಂದೇ. ಇಲ್ಲಿ ಮೊದಲ ಸಾಲಿನ ಅರ್ಥ ಬಿಡಿಸಿ ಹೇಳಬೇಕಿಲ್ಲ ಅಲ್ವೇ? ಹಾಗಾದರೆ, ಸುಪ್ರಭಾತ ಧ್ವನಿಸುವುದು ಯಾವುದನ್ನು? ಭಕ್ತಿಯನ್ನಲ್ಲವೆ? ಹಾಗಾದರೆ, ಅಂಗಾಂಗ ವರ್ಣನೆ ಏಕೆ ಬೇಕಿತ್ತು ಎಂದರೆ ಏನು ಹೇಳುವುದು?

ಇನ್ನು ಕೃಷ್ಣನ ಕತೆ ತೆಗೆದುಕೊಂಡರೆ ಅವರವರ ಭಾವಕ್ಕೆ ತಕ್ಕ ಉಪಮೆಗಳೇ ದೊರೆಯುತ್ತವೆ. ಬಹುಶಃ ಜಗತ್ತಿನ ಬೇರಾವ ವ್ಯಕ್ತಿಗೂ ಈ ಪರಿಯ ವೈವಿಧ್ಯ ವ್ಯಕ್ತಿತ್ವವಿಲ್ಲ.

ಇಡೀ ವಾದದ ಸಾರ ಇಷ್ಟೇ. ಭಾವಕ್ಕೆ ತಕ್ಕ ಅರ್ಥ, ಅಭಿವ್ಯಕ್ತಿ ಹೊಮ್ಮುತ್ತದೆ. ಹೀಗಾಗಿ, ವ್ಯಕ್ತಿ, ವಿಷಯಗಳು ಇದಕ್ಕೆ ತಕ್ಕಂತೆ ಬದಲಾಗುತ್ತ ಹೋಗುತ್ತವೆ.

ಎಲ್ಲದಕ್ಕಿಂತ ಮಿಗಿಲಾಗಿ ಕಲೆಯ ರಸಾಸ್ವಾದನೆ ಮುಖ್ಯ. ಅದನ್ನು ಚರ್ಚಿಸುತ್ತಾ ಹೋದಂತೆ ಅದು ವಿಜ್ಞಾನವೆನ್ನಿಸಿಕೊಳ್ಳುವ ಅಪಾಯವಿರುತ್ತದೆ. ಪರದೆ ಮೇಲೆ ಒಂದು ಸಿನಿಮಾ ನೋಡುತ್ತಿದ್ದೇವೆ ಎಂದುಕೊಳ್ಳಿ. ನಟ-ನಟಿಯ ಚುಂಬನ ದೃಶ್ಯ. ಅವರು ನಿಜವಾಗಲೂ ಚುಂಬಿಸಿದರೆ ಅಥವಾ ನಟಿಸಿದರೆ ಎಂದು ಯೋಚಿಸುತ್ತ ಕುಳಿತುಕೊಳ್ಳಲಾಗುತ್ತದೆಯೇ? so, ಅವರವರ ಪಾತ್ರೆಯಲ್ಲಿ ಅವರು ಪರಿಭಾವಿಸಿದ್ದು, ದಕ್ಕಿದ್ದು, ಉಕ್ಕಿದ್ದು..

-ಶ್ರೀದೇವಿ ಕಳಸದ