Sunday, December 4, 2011

ಅವರವರ ಪಾತ್ರೆಯಲ್ಲಿ ಅವರವರು ಪರಿಭಾವಿಸಿದ್ದು....

ಹರಿಯುವ ಸಣ್ಣ ತೊರೆಯನ್ನು ಗಮನಿಸುತ್ತಾ ನಿಂತ ಮಗುವೊಂದು ಅದರೊಳಗೆ ಆಗಾಗ ಕಾಲಿಟ್ಟು ಕಾಲಿಟ್ಟು ತೆಗೆದಂತೆ ಕುಮಾರ ಗಂಧರ್ವರ ಗಾಯನ. ಸ್ವರ ತೂರಿದಂತೆ ಮಾಡಿ... ಮತ್ತದೇ ಸ್ವರ ಹಿಡಿಯುವಾಗ ಉಂಟಾಗುವ pause ಇದೆಯಲ್ಲ ಕಾಯಿಸುತ್ತ ಕಾಡುವಂಥದ್ದು. ಕುಮಾರ ಗಂಧರ್ವರಿಗೆ ಕಿವಿಯಾದಾಗೆಲ್ಲ ಹೀಗೊಂದು ಅನುಭವ ಉಂಟಾಗುತ್ತಿತ್ತು.ಮೊನ್ನೆ ಕುಮಾರ ಗಂಧರ್ವರು ಹಾಡಿದ ಬಿಲಾಸ್‌ಖಾನಿ ತೋಡಿಯ ’ನಯನಮೇ ಜಲ ಭರ ಆಯೇ...’ ಚೀಝ್‌ ಅನ್ನು http://youtu.be/8ggfzBbODb0 ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದಾಗ ಸಣ್ಣ ಚರ್ಚೆಯೊಂದನ್ನು ಹುಟ್ಟು ಹಾಕಿದರು ನಟ, ನಿರ್ದೇಶಕ, ಲೇಖಕ ಬಿ. ಸುರೇಶ್‌.

--------------
ಬಿ.ಸುರೇಶ್‌ ಪ್ರಶ್ನೆ: ದೇವರುಗಳೊಂದಿಗೆ ಭಕ್ತರು ಸಂವಾದ ನಡೆಸುವಂತಹ ಹಾಡುಗಳಲ್ಲಿ ಪಾಕಿಸ್ತಾನಿ ಹಾಡುಗಾರರು ಹಾಡಿದಾಗ (ಕೆಲವು ಭಾರತೀಯ ಮುಸಲ್ಮಾನ್ ಹಾಡುಗಾರರು) ಸಿಗುವ ಆನಂದ ನಮ್ಮವರು ಹಾಡಿದಾಗ ಸಿಗುವುದಿಲ್ಲ. ಯಾಕೆ?... ಅದೇ ಚೀಸ್ ಎರಡು ವಿಭಿನ್ನ ಧರ್ಮದವರ ಹಾಡುಗಾರಿಕೆಯಲ್ಲಿ ವಿಭಿನ್ನ ಆಗುವುದು ಹೇಗೆ?

ನನಗನಿಸಿದ್ದು: ಪಾಕಿಸ್ತಾನಿ ಗಾಯಕರ ಆ ಉಠಾವನ್‌, ರಾಗದೊಳಗೆ ಇಳಿದೇರುವ ಶೈಲಿಯೇ ವಿಶಿಷ್ಟ. ಅದು ನನಗೂ ಸಾಕಷ್ಟು ಸಲ ಅನುಭವಕ್ಕೆ ಬಂದಿದೆ. ಎಂಥವರನ್ನೂ ತಕ್ಷಣವೇ ಹಿಡಿದಿಟ್ಟುಕೊಳ್ಳುವಂಥ ಸೆಳೆತವಿದೆ. ಕಲೆ ಸೀಮಾತೀತವಾದರೂ ಆಯಾ ಪ್ರಾಂತ್ಯ, ಧರ್ಮಕ್ಕೂ ಕಲೆಗೂ, ಸಾಹಿತ್ಯ, ಸಂಸ್ಕೃತಿಗೂ ತನ್ನದೇ ಆದ ಛಾಪು ಇದ್ದೇ ಇರುತ್ತದೆ. ಎಲ್ಲೋ ಒಂದುಕಡೆ ಕಲಾವಿದ ತನಗೆ ಸಿಗುವ ಪರಿಸರದ ಹಿನ್ನೆಲೆಯಲ್ಲಿ ಆಯಾ ಧರ್ಮದ ಪ್ರಭಾವಕ್ಕೆ ಅರಿವಿಲ್ಲದೆಯೇ ಒಳಗಾಗಿರುತ್ತಾನೆ. (ಮುಸ್ಲಿಮರ ಪ್ರಾರ್ಥನಾ ಶೈಲಿ, ಹಿಂದೂಗಳ ಮಂತ್ರೋಚ್ಛಾರಣೆ, ಸಿಖ್‌ರ ಗ್ರಂಥಪಠಣ ಇತ್ಯಾದಿ... ಒಂದಕ್ಕಿಂತ ಒಂದು ವಿಭಿನ್ನ). ಅವನು ಪಾಕಿಸ್ತಾನದಲ್ಲೇ ಇರಲಿ ಭಾರತಕ್ಕೇ ಬಂದು ನೆಲೆಸಲಿ, ಭಾರತೀಯನೇ ಆಗಿರಲಿ ಅದು ಅವನಲ್ಲಿ ಮನೋಗತವಾಗಿರುತ್ತದೆ. ಪರ್ಶಿಯನ್‌ ಮೂಲದ ಹಿಂದೂಸ್ತಾನಿ ಸಂಗೀತ ಕಾಲಕ್ರಮೇಣ ಭಾರತೀಯ ಸಂಗೀತವಾಗಿದ್ದು, ಘರಾಣೆಗಳ ವೈಶಿಷ್ಟ್ಯ, ವಿಚಾರ, ಪರಂಪರೆಗೆ ಬದ್ಧರಾದ ಕೆಲವರು; ಕಂಠ ಸಾಮರ್ಥ್ಯಕ್ಕೆ, ಧ್ವನಿ ಸಂಸ್ಕಾರಕ್ಕೆ, ಸಭಾರಂಜನೆಗೆ ತಕ್ಕಂತೆ ಮಿಶ್ರಘರಾಣೆಯೊಂದಿಗೆ ತಮ್ಮದೇ ಆದ ಶೈಲಿ ರೂಪಿಸಿಕೊಂಡ ಹಲವರು. ಹೀಗೆ.... ಇಂಥ ಇನ್ನೂ ಹಲವಾರು ಹಿನ್ನೆಲೆಗಳು ಇರುವುದರಿಂದ ಒಂದೇ ರಾಗದ ಅದೇ ಚೀಝ್‌ ಅನ್ನು ಇಬ್ಬರು ಗಾಯಕರು ಹಾಡಿದಾಗ (ನೀವೇ ಹೇಳಿದಂತೆ ಭಿನ್ನ ಧರ್ಮೀಯ) ರುಚಿ ಬೇರೆ ಬೇರೆಯೇ ಇರುತ್ತದೆ. ಹಾಗೆಯೇ ಶ್ರೋತೃ ಕೂಡ ತನ್ನ ರಸಗ್ರಹಣ ಸಂಸ್ಕಾರಕ್ಕೆ ತಕ್ಕಂತೆ ಸಂಗೀತವನ್ನು, ಕಲಾವಿದರನ್ನು, ಶೈಲಿಯನ್ನು ಆಯ್ಕೆ ಮಾಡಿಕೊಳ್ಳುತ್ತಾ ಆನಂದ, ಅನುಭವವನ್ನು ದಕ್ಕಿಸಿಕೊಳ್ಳುತ್ತಾ, ವಿಸ್ತರಿಸಿಕೊಳ್ಳುತ್ತಾ ಸಾಗುತ್ತಾನೆ...

ಬಿ. ಸುರೇಶ್‌: ನನಗೆ ಹೀಗನ್ನಿಸುತ್ತದೆ. ಈ ಅಭಿಪ್ರಾಯ ಸರಿಯೋ ಅಲ್ಲವೋ ನೀವೇ ತಿಳಿಸಿ. ಹಿಂದೂ ಧರ್ಮಿಯರಲ್ಲಿ ಕಾಮವನ್ನು ಕೂಡ ಪ್ರೇಮದ ವಿಸ್ತರಣೆ ಎಂಬ ಮಾತಿನ ಬಗ್ಗೆ ಹಿಂಜರಿಕೆಯಿದೆ. ಆದರೆ ಸೂಫಿ ಮತ್ತು ದರ್‌ವೀಶ್ ಪಂಥಗಳಲ್ಲಿ ಪ್ರಿಯಕರನಿಗೆ/ಪ್ರಿಯತಮನಿಗೆ ಒಪ್ಪಿಸಿಕೊಳ್ಳುವುದು ಎಂದರೆ ಅಲ್ಲಿ ಕಾಮವೂ ಸೇರಿದಂತೆ ತನ್ನನ್ನು ಇಡಿಯಾಗಿ ಒಪ್ಪಿಸಿಕೊಳ್ಳುವ ಸ್ವಾತಂತ್ರ‍್ಯ ಇದೆ. ಹೀಗಾಗಿಯೇ ಅಕ್ಕ ಮಹಾದೇವಿ ಮತ್ತು ಮೀರಾ ಅವರ ಕೃತಿಗಳನ್ನು ಅಥವಾ ಜಯದೇವನ ಗೀತಗೋವಿಂದವನ್ನು ನಮ್ಮವರು ಹೇಳಿದಾಗ ಅದು ಕೇವಲ ಭಕ್ತಿ ಗೀತೆ ಅನಿಸುತ್ತದೆ. ಮುಸಲ್ಮಾನರು ಅದೇ ಹಾಡನ್ನು ಹೇಳಿದಾಗ ಉನ್ಮತ್ತ ಪ್ರೇಮಗೀತೆ ಎನಿಸುತ್ತದೆ. ಹೀಗಾಗಿ ಕೇಳುಗನಿಗೆ ಪರ್‌ವೀನ್ ಸುಲ್ತಾನ, ಜುಬೇದಾ ಬೇಗಂ, ಅಬೀದಾ ಅಥವಾ ಫತೇಅಲೀಖಾನ್‌ ಅವರ ಹಾಡುಗಾರಿಕೆ ತನ್ಮಯಗೊಳಿಸುವಂತೆ ಅದೇ ಹಾಡುಗಳನ್ನು ನಮ್ಮವರು ಹೇಳಿದಾಗ ತನ್ಮಯತೆ ಅಥವಾ ಪರವಶತೆ ಉಂಟಾಗುವುದಿಲ್ಲ ಎಂದು ನನ್ನ ಭಾವನೆ. ನಿಮ್ಮ ಅಭಿಪ್ರಾಯ ತಿಳಿಸಿ. ನನ್ನ ಅರ್ಥಗ್ರಹಿಕೆಯನ್ನು ವಿಸ್ತರಿಸಿ.


ಸುರೇಶ್ ಅವರ ಪ್ರಶ್ನೆಗೆ ಯೋಚಿಸುತ್ತಿದ್ದಾಗ ಎಂದಿನಂತೆ ಪರ್ವೀನ್‌ ಸುಲ್ತಾನಾ, ಕಿಶೋರಿ ಅಮ್ಹೋಣ್ಕರ್‌, ಜಸರಾಜ್‌, ಭೀಮಸೇನ್‌ ಜೋಶಿ ಮುಂತಾದವರ ಜೊತೆಗೆ ಅಶ್ಚಿನಿ ಭಿಡೆ ದೇಶಪಾಂಡೆ http://youtu.be/0p78q2LnlG0 ಮತ್ತು ಕೌಶಿಕಿ ಚಕ್ರವರ್ತಿ http://youtu.be/vjqGlxdnHJI ಸಿಕ್ಕರು. ಆಗ ಅನ್ನಿಸುತ್ತಾ ಹೋದದ್ದು ಇಲ್ಲಿದೆ....


ಕಾಮ ಆಂತರಿಕ, ಪ್ರೇಮ ಬಹಿರಂಗ. ಪ್ರೇಮ ತಂಬೂರಿ ಶೃತಿಯಿದ್ದಂತೆ; ನಿರಂತರ. ತಾನ್‌, ಸರಗಮ್‌, ಹರಖತ್‌ಗಳಿದ್ದಂತೆ.... ಕಾಮ ಕ್ಷಣಿಕ. ಹಾಗೆಂದೂ ಎರಡನ್ನೂ ಬಿಡಿಸಿ ನೋಡಲಿಕ್ಕಾಗದು. ಒಂದನ್ನು ಬಿಟ್ಟು ಇನ್ನೊಂದು ಇರಲಾರದು. ಆದರೆ ಕಾಮವೇ ಪ್ರಧಾನವೆಂದು ಹೇಳಲಿಕ್ಕಾಗದು. ಇದನ್ನು ವಿಂಗಡನೆ ಮಾಡುತ್ತಾ ಹೋದರೆ ಅದು ವ್ಯಾಕರಣವೆನ್ನಿಸಿಕೊಳ್ಳುತ್ತದೆಯೇ ಹೊರತು ಅದು ಕಲೆ ಎನ್ನಿಸಿಕೊಳ್ಳುವುದಿಲ್ಲ. ಹಾಗೆಯೇ ಅಕ್ಕ ಇರಬಹುದು ಮೀರಾ ಇರಬಹುದು ಅವರು ಹೊಸೆದ ಪ್ರೇಮ, ಕಾಮ, ಶೃಂಗಾರ, ಭಕ್ತಿ, ವೈರಾಗ್ಯವನ್ನು ಒಬ್ಬ ಗಾಯಕ/ಗಾಯಕಿಯು ತಮ್ಮ ತಮ್ಮ ಮನೋಭೂಮಿಕೆ ಆಧಾರದ ಮೇಲೆ ವ್ಯಕ್ತಪಡಿಸುತ್ತಾ ಹೋಗುತ್ತಾರೆ.

ಗಾಯಕರು ಆಯಾ ಸಾಹಿತ್ಯ ಅಥವಾ ಭಾವವನ್ನು ಹೇಗೆ ಗ್ರಹಿಸಿದ್ದಾರೆ ಎನ್ನುವುದಕ್ಕೆ ಅವರ ಗಾಯನವೇ (ವಾದನವೇ) ಬಿಂಬ. ಹಾಗೆಯೇ ಸೂಕ್ಷ್ಮಮನಸಿನ ಆಸ್ವಾದಕನಿಗೆ ಆ ಗಾಯಕನ ಗ್ರಹಿಕೆ ಮತ್ತದರಿಂದ ಸೃಷ್ಟಿಸಿದ ಸೃಜನಶೀಲತೆ, ಕಲ್ಪನಾ ಸಾಮರ್ಥ್ಯ, ಅದರಿಂದ ಹೊಮ್ಮಿದ ಭಾವತೀವ್ರತೆ ತಟ್ಟುತ್ತಾ ಹೋಗುತ್ತದೆ. ಆಗ
ಶ್ರೋತೃವಿನ ರಸಗ್ರಹಣ ಸಂಸ್ಕಾರಕ್ಕೆ ತಕ್ಕಂತೆ ಅದು ಶೃಂಗಾರವಾಗಿ, ಕಾಮವಾಗಿ, ಪ್ರೇಮವಾಗಿ ಮತ್ತು ಆಧ್ಯತ್ಮವಾಗಿ ಒಳಗಿಳಿಯು ಸಾಧ್ಯತೆ ಇರುತ್ತದೆ. ಇಲ್ಲಿ ಮುಸ್ಲಿಂ, ಹಿಂದೂ ಎನ್ನುವುದಕ್ಕಿಂತ ಕಲಾವಿದರ ಮನೋಧರ್ಮ, ಮನೋಗತಿ, ಮನೋಭೂಮಿಕೆ ಮತ್ತು ಅವರು ಬೆಳೆದ ಪರಿಸರ, ಪ್ರಭಾವ ಮಹತ್ವ ಎನ್ನಿಸಿಕೊಳ್ಳುತ್ತದೆ.

ಗ್ರಹಿಕೆ ಎನ್ನುವುದು ವ್ಯಕ್ತಿಗತವೇ ಹೊರತು ವಿಷಯಗತವಲ್ಲ. ಒಂದೇ ವಿಷಯವನ್ನು ಪ್ರತಿಯೊಬ್ಬರೂ ತಮ್ಮ ಗ್ರಹಿಕೆಗೆ ತಕ್ಕಂತೆ ಅರ್ಥೈಸಿಕೊಳ್ಳುತ್ತಾರೆ. ನಮಗೆ ಮಗಳಾದವಳು ಅಳಿಯನಿಗೆ ಹೆಂಡತಿ. ನಾವು ಮಗ-ಮಗಳು, ಅಣ್ಣ-ಅಕ್ಕ, ತಮ್ಮ-ತಂಗಿ, ಗೆಳೆಯ-ಗೆಳತಿ, ಗಂಡ-ಹೆಂಡತಿ, ಪ್ರೇಯಸಿ-ಪ್ರಿಯಕರ, ಅಧಿಕಾರಿ-ನೌಕರ- ಹೀಗೆ ಏನೆಲ್ಲ ಆಗುವುದು ಈ ಕಾರಣಕ್ಕೆ. ಒಬ್ಬನೇ ವ್ಯಕ್ತಿ ಹಲವಾರು ರೀತಿ ವ್ಯಕ್ತಗೊಳ್ಳುತ್ತಾನೆ. ಪ್ರತಿಯೊಬ್ಬರಿಗೂ ಅವನೊಂದಿಗಿನ ನಂಟು ಬೇರೆ ಬೇರೆ ತೆರನಾಗಿದ್ದು. ಅದು ಅವರವರ ಗ್ರಹಿಕೆಗೆ, ಸಂಬಂಧಕ್ಕೆ ತಕ್ಕ ರೀತಿ.

ಶಿಶುನಾಳ ಷರೀಫರ ಒಂದು ಅನುಭಾವ ರಚನೆಯನ್ನು ಇಲ್ಲಿ ಉದಾಹರಣೆಯಾಗಿ ನೀಡಬಹುದು. ‘ಸ್ನೇಹ ಮಾಡಬೇಕಿಂಥವಳ...’

ಸ್ನೇಹ ಮಾಡಬೇಕಿಂಥವಳ
ಒಳ್ಳೆ ಮೋಹದಿಂದಲಿ ಬಂದು ಕೂಡುವಂಥವಳ
ಸ್ನೇಹ ಮಾಡಬೇಕಿಂಥವಳ

ಚಂದ್ರಗಾವಿ ಶೀರಿನುಟ್ಟು
ದಿವ್ಯಕೊಮ್ಮೆಪಾರಿಜಮಗ್ಗಿ ಕುಪ್ಪಸ ತೊಟ್ಟು
ಬಂದಾಳು ಮಂದಿರ ಬಿಟ್ಟು
ನಾಲ್ಕು ಮಂದಿಯೊಳು ಬಂದು ನಾಚುವಳೆಷ್ಟು
ಸ್ನೇಹ ಮಾಡಬೇಕಿಂಥವಳ

ಅರಗಿಳಿ ಸಮ ಇವಳ ನುಡಿಯು
ಚೆಲ್ವ ಸುಳಿ ನಾಭಿ ಕುಚಕುಂಭಗಳ ಹಂಸ ನಡೆಯು
ಥಳ ಥಳಿಸುವ ತೋಳ್-ತೊಡೆಯು
ಬಳುಬಳುಕುವ ನಡುವಿನ ತಳಿರಡಿಯು
ಸ್ನೇಹ ಮಾಡಬೇಕಿಂಥವಳ

ಮುಕ್ತಿ ವನಿತೆ ಇವಳ ನೋಡಿ
ವಿರಕ್ತಿ ಸುರತ ಸುಖ ದಯದಿಂದ ಬೇಡಿ
ವಿನಯ ವಚನದಿ ಮಾತಾಡಿ
ದೇವ ಶಿಶುನಾಳಧೀಶನ ದಯದಿಂದ ಕೂಡಿ
ಸ್ನೇಹ ಮಾಡಬೇಕಿಂಥವಳ


ಇಡೀ ಕವಿತೆ ಓದಿದಾಗ, ಚೆಲುವೆಯೊಬ್ಬಳ ವರ್ಣನೆಯನ್ನು ಷರೀಫರು ಮಾಡಿದ್ದಾರೆ ಎಂದು ಅನಿಸುತ್ತದೆಯೆ? ಹಾಗೆ ಅನಿಸದಿದ್ದರೂ, ಆ ಭಾವದಿಂದ ಓದಿದಾಗ, ಹೌದು ಇದು ಚೆಲುವೆಯ ವರ್ಣನೆಯೇ ಎಂದೂ ಅನ್ನಿಸಬಹುದು. ಅಧ್ಯಾತ್ಮಿಕ ದೃಷ್ಟಿಯಿಂದ ನೋಡಿದಾಗ ಗೂಢಾರ್ಥಗಳು ಕಾಣಬಹುದು. ನಮಗೆ ಪೂರ್ವವಾಗಿದ್ದುದು, ಪೂರ್ವದಲ್ಲಿರುವವರಿಗೆ ಪಶ್ಚಿಮ ಎಂಬಂತೆ, ಒಂದೇ ವಿಷಯ, ವಸ್ತು, ಅಭಿವ್ಯಕ್ತಿ ಪ್ರತಿಯೊಬ್ಬರಿಗೂ ಭಿನ್ನವೆನಿಸಬಹುದು.

ಇಲ್ಲಿ ನನಗೆ ಝೆನ್‌ ಕತೆಯೊಂದು ನೆನಪಾಗುತ್ತದೆ. ಒಂದೇ ನದಿಯಲ್ಲಿ ನೀನು ಎರಡು ಸಾರಿ ಇಳಿಯಲಾರೆ ಎಂದು ಝೆನ್‌ ಸಿದ್ಧಾಂತ ಪ್ರತಿಪಾದಿಸುತ್ತದೆ. ಎಂದರೆ, ನದಿ ಇಲ್ಲಿ ನಿತ್ಯ ನೂತನ. ಪ್ರತಿ ಕ್ಷಣಕ್ಕೂ ಅದು ಹರಿಯುತ್ತದಾದ್ದರಿಂದ, ಅದು ಬದಲಾಗುತ್ತಲೇ ಇರುತ್ತದೆ. ನದಿ ಹೇಗೋ ವ್ಯಕ್ತಿ, ಅಭಿವ್ಯಕ್ತಿಯೂ ಹಾಗೇ.

ಹೀಗಾಗಿ, ಹಾಡೊಂದು, ಭಾವವೊಂದು ವ್ಯಕ್ತಿಯಿಂದ ವ್ಯಕ್ತಿಗೆ ತಾಕುವ ಪರಿಯೇ ಅದ್ಭುತ ಮತ್ತು ವಿಚಿತ್ರ. ಸಿನಿಮಾ ಗೀತೆಗಳಲ್ಲೂ ಇಂಥ ಉದಾಹರಣೆಗಳನ್ನು ಕಾಣಬಹುದು. ಸಂತಸದಲ್ಲಿ ಹಾಡಿದ ಹಾಡಿನ ರಾಗದಲ್ಲೇ ವಿಷಾದ ಗೀತೆಯೂ ಇರುತ್ತದೆ. ರಾಗ ಒಂದೇ ಆಗಿದ್ದರೂ, ಭಾವ ಬದಲಾಗಿರುತ್ತದೆ.

ವ್ಯಕ್ತಿಯೊಬ್ಬನ ಅಭಿವ್ಯಕ್ತಿಯ ಹಿಂದೆ ಅವನ ಸಂಸ್ಕಾರ ಅಡಗಿರುತ್ತದೆ. ಅವನು ಬೆಳೆದು ಬಂದ ಭೌಗೋಳಿಕ ಪ್ರದೇಶ, ಆಚರಣೆಗಳು, ರೀತಿ-ರಿವಾಜುಗಳು, ಸಂಪ್ರದಾಯ, ನಂಬಿಕೆ, ಭಾವನೆ- ಹೀಗೆ ಎಲ್ಲವೂ ಸೇರಿ ಅವನ ಗ್ರಹಿಕೆಯನ್ನು ರೂಪಿಸಿರುತ್ತವೆ. ಅಲ್ಲದೇ ಸಂದರ್ಭ ಹಾಗೂ ಮಾನಸಿಕ ಸ್ಥಿತಿಯೂ ಅಭಿವ್ಯಕ್ತಿಯ ಮೇಲೆ ಸಾಕಷ್ಟು ಪ್ರಭಾವ ಬೀರಿರುತ್ತವೆ.

ಒಂದು ಸರಳ ಶಬ್ದವನ್ನೇ ನೋಡಿ: ’ಹೌದಾ’ ಎಂಬ ಶಬ್ದವನ್ನು ನೀವು ಬೇರೆ ಬೇರೆ ಅರ್ಥದಲ್ಲಿ ಬಳಸಬಹುದು. ನಾವು ಉಚ್ಛರಿಸುವ ರೀತಿಯ ಮೇಲೆ ಅದರ ಅರ್ಥ ಬದಲಾಗುತ್ತದೆ. ಕುತೂಹಲ, ವ್ಯಂಗ್ಯ, ನಿರಾಸಕ್ತಿಗಳನ್ನು ಅದರಲ್ಲಿ ಸುಲಭವಾಗಿ ಬಳಸಬಹುದು. ಯಾವ ಅರ್ಥದಲ್ಲಿ ನಾವು ಬಳಸುತ್ತೇವೆ ಎಂಬುದರ ಮೇಲೆ ಆ ಶಬ್ದದ ಅರ್ಥ ಆ ಸಂದರ್ಭಕ್ಕೆ ರೂಪಿತವಾಗುತ್ತದೆಯೇ ಹೊರತು, ಅದಕ್ಕೊಂದು ಶಾಶ್ವತ ಅರ್ಥವನ್ನು ರೂಪಿಸಲಾಗದು.

ಕನಕದಾಸರು ಮೋಹನ ತರಂಗಿಣಿ ಕೃತಿ ರಚಿಸಿದರು. ವಾತ್ಸಾಯನ ಕಾಮಸೂತ್ರ, ಪು.ತಿ. ನರಸಿಂಹಚಾರ್‌ ಇಂಥದೇ ರಚನೆಯೊಂದನ್ನು ಮಾಡಿದ್ದಾರೆ. ಪಾ.ವೆಂ. ಆಚಾರ್ಯ ಅವರು ಸುರತಿ ಎಂಬ ಲೈಂಗಿಕ ಪತ್ರಿಕೆಯ ಸಂಪಾದಕರಾಗಿದ್ದರು. ಆದರೆ, ಇವರ‍್ಯಾರನ್ನೂ ನಾವು ಶೃಂಗಾರತಜ್ಞರೆಂದು ಏಕಾರ್ಥದಲ್ಲಿ ಗುರುತಿಸಿಲ್ಲ. ಕನಕದಾಸ ಸಂತ, ವಾತ್ಸಾಯನ ಋಷಿ, ಪು.ತಿ.ನ. ಸಾಹಿತಿ ಹಾಗೂ ಪಾವೆಂ ಪತ್ರಕರ್ತ-ಲೇಖಕ. ಹಾಗಾದರೆ, ಇವರ ಕೃತಿಗೂ ಇವರ ಬಾಹ್ಯ ಗುರುತಿಸುವಿಕೆಗೂ ಏನೂ ಸಂಬಂಧ ಉಂಟಾಗಲಿಲ್ಲ ಎಂದಾಯ್ತಲ್ಲ. ಕೇವಲ ಆ ಕೃತಿಯೊಂದರ ಆಧಾರದ ಮೇಲೆ ಹೇಗೆ ಅವರ ವೃತ್ತಿ-ಪ್ರವೃತ್ತಿಗಳನ್ನು ನಿರ್ದಿಷ್ಟವಾಗಿ ಹೇಳುವುದು ಹೇಗೆ ತಪ್ಪಾಗುತ್ತದೆಯೋ, ಹಾಗೆಯೇ ಗಾಯಕನೊಬ್ಬನ ಆ ಸಂದರ್ಭದ ಅಭಿವ್ಯಕ್ತಿಯ ಮೇಲೆ ಅವರ ಒಟ್ಟು ವ್ಯಕ್ತಿತ್ವವನ್ನು ಗುರುತಿಸುವುದೂ ತಪ್ಪಾಗುತ್ತದೆ. ಅದು ಆ ಕ್ಷಣದ ವಾಸ್ತವ ಮಾತ್ರ.

ಪುರಂದರದಾಸರ ‘ಭಾಗ್ಯದಾ ಲಕ್ಷ್ಮೀ ಬಾರಮ್ಮಾ...’ ಕೃತಿಯಲ್ಲಿಯೂ ಲಕ್ಷ್ಮಿಯ ಸೌಂದರ್ಯ ವರ್ಣನೆ ಇದೆ. ಆದರೆ, ಇಡೀ ಸಾಹಿತ್ಯ ಆರಾಧನೆಯ ಭಾವ ಹೊಂದಿದೆ.

ಅಂಕೆಯಿಲ್ಲದ ಭಾಗ್ಯವ ಕೊಟ್ಟು
ಕಂಕಣ ಕೈಯ ತಿರುವುತ ಬಾರೆ
ಕುಂಕುಮಾಂಕಿತೆ ಪಂಕಜಲೋಚನೆ
ವೆಂಕಟರಮಣನ ಬಿಂಕದ ರಾಣಿ...


ಇಲ್ಲಿ ಲಕ್ಷ್ಮಿಯ ಸೌಂದರ್ಯದ ವರ್ಣನೆ ಇದ್ದರೂ, ಅದರ ಹಿಂದಿರುವ ಭಾವ ಭಕ್ತಿಪ್ರೇರಿತವಾದುದು. ಭಕ್ತಿಯ ಪರಾಕಾಷ್ಠೆಯ ನಡುವೆಯೂ ಲಕ್ಷ್ಮಿಯ ದೇಹಸೌಂದರ್ಯವನ್ನು ಪುರಂದರದಾಸರು ಗುರುತಿಸಿದ್ದಾರೆ. ಗಾಯಕ ಇದರ ಪೈಕಿ ಯಾವ ಭಾವಕ್ಕೆ ಒತ್ತು ಕೊಡುತ್ತಾನೋ, ಅದು ಆ ಕ್ಷಣದ ಅಭಿವ್ಯಕ್ತಿಯ ಭಾವವಾಗುತ್ತದೆಯೇ ಹೊರತು ಪುರಂದರದಾಸರ ಈ ಕೃತಿಯ ಶಾಶ್ವತ ಅನಿಸಿಕೆಯಾಗಿ ಅಲ್ಲ.

ಶ್ರೀವೆಂಕಟೇಶ ಸುಪ್ರಭಾತ ಶುರುವಾಗುವುದೇ

ಕಮಲಾಕುಚಚೂಚುಕಕುಂಕುಮತೋ
ನಿಯತಾರುಣಿತಾತುಲನೀಲತನೋ
ಕಮಲಾಯತಲೋಚನ ನೋಕಪತೇ
ವಿಜಯೀ ಭವ ವೆಂಕಟ ಶೈಲಪತೇ

ಎಂದೇ. ಇಲ್ಲಿ ಮೊದಲ ಸಾಲಿನ ಅರ್ಥ ಬಿಡಿಸಿ ಹೇಳಬೇಕಿಲ್ಲ ಅಲ್ವೇ? ಹಾಗಾದರೆ, ಸುಪ್ರಭಾತ ಧ್ವನಿಸುವುದು ಯಾವುದನ್ನು? ಭಕ್ತಿಯನ್ನಲ್ಲವೆ? ಹಾಗಾದರೆ, ಅಂಗಾಂಗ ವರ್ಣನೆ ಏಕೆ ಬೇಕಿತ್ತು ಎಂದರೆ ಏನು ಹೇಳುವುದು?

ಇನ್ನು ಕೃಷ್ಣನ ಕತೆ ತೆಗೆದುಕೊಂಡರೆ ಅವರವರ ಭಾವಕ್ಕೆ ತಕ್ಕ ಉಪಮೆಗಳೇ ದೊರೆಯುತ್ತವೆ. ಬಹುಶಃ ಜಗತ್ತಿನ ಬೇರಾವ ವ್ಯಕ್ತಿಗೂ ಈ ಪರಿಯ ವೈವಿಧ್ಯ ವ್ಯಕ್ತಿತ್ವವಿಲ್ಲ.

ಇಡೀ ವಾದದ ಸಾರ ಇಷ್ಟೇ. ಭಾವಕ್ಕೆ ತಕ್ಕ ಅರ್ಥ, ಅಭಿವ್ಯಕ್ತಿ ಹೊಮ್ಮುತ್ತದೆ. ಹೀಗಾಗಿ, ವ್ಯಕ್ತಿ, ವಿಷಯಗಳು ಇದಕ್ಕೆ ತಕ್ಕಂತೆ ಬದಲಾಗುತ್ತ ಹೋಗುತ್ತವೆ.

ಎಲ್ಲದಕ್ಕಿಂತ ಮಿಗಿಲಾಗಿ ಕಲೆಯ ರಸಾಸ್ವಾದನೆ ಮುಖ್ಯ. ಅದನ್ನು ಚರ್ಚಿಸುತ್ತಾ ಹೋದಂತೆ ಅದು ವಿಜ್ಞಾನವೆನ್ನಿಸಿಕೊಳ್ಳುವ ಅಪಾಯವಿರುತ್ತದೆ. ಪರದೆ ಮೇಲೆ ಒಂದು ಸಿನಿಮಾ ನೋಡುತ್ತಿದ್ದೇವೆ ಎಂದುಕೊಳ್ಳಿ. ನಟ-ನಟಿಯ ಚುಂಬನ ದೃಶ್ಯ. ಅವರು ನಿಜವಾಗಲೂ ಚುಂಬಿಸಿದರೆ ಅಥವಾ ನಟಿಸಿದರೆ ಎಂದು ಯೋಚಿಸುತ್ತ ಕುಳಿತುಕೊಳ್ಳಲಾಗುತ್ತದೆಯೇ? so, ಅವರವರ ಪಾತ್ರೆಯಲ್ಲಿ ಅವರು ಪರಿಭಾವಿಸಿದ್ದು, ದಕ್ಕಿದ್ದು, ಉಕ್ಕಿದ್ದು..

-ಶ್ರೀದೇವಿ ಕಳಸದ

6 comments:

ಗಿರೀಶ್.ಎಸ್ said...

Thumba chennagide lekhana...

sunaath said...

ಸಂಗೀತಕ್ಕೆ ಸಂಬಂಧಿಸಿದ ಈ ವಿಷಯ ನನ್ನ ಅರಿವಿನ ಹೊರಗಿನದು. ಆದರೆ ಈ ಲೇಖನ ಓದುತ್ತಿದ್ದಂತೆ ನನ್ನಲ್ಲಿ ಎದ್ದಂತಹ ಸಂದೇಹ ಹೀಗಿದೆ: ಕರ್ನಾಟಕ ಹಾಗು ಹಿಂದುಸ್ತಾನಿ ಸಂಗೀತಗಳ ರೂಪವಷ್ಟೇ ಭಿನ್ನ; ಆತ್ಮ ಒಂದೇ. ಹಾಗಿರುವಾಗ ಹಿಂದುಸ್ತಾನಿ ಸಂಗೀತವು ಪರ್ಶಿಯನ್ ಮೂಲದ ಸಂಗೀತ ಹೇಗಾಗುತ್ತದೆ? ಬಹಳವಾದರೆ ಪರ್ಸಿಯನ್ ಪ್ರಭಾವಿತ ಇರಬಹುದಷ್ಟೇ?
ಇನ್ನು ಕಾಮವು ಪ್ರೇಮದ ಒಂದು ಮುಖ ಎಂದು ನಾನು ಭಾವಿಸಲಾರೆ. ಕಾಮವೇ ಬೇರೆ, ಪ್ರೇಮವೇ ಬೇರೆ. ಕಾಮವಿಲ್ಲದ ಪ್ರೇಮವನ್ನು ಹಾಗು ಪ್ರೇಮವಿಲ್ಲದ ಕಾಮವನ್ನು ನಾವು ನೋಡುತ್ತಲೇ ಇದ್ದೇವೆ. ಕಾಮವು ಸೃಷ್ಟಿಗೆ ಅವಶ್ಯವಾದ ಸಾಧನ. ಪ್ರೇಮವು ಸೃಷ್ಟಿಯ ನಿರ್ವಹಣೆಗೆ ಅವಶ್ಯವಾದ ಸಾಧನ.

Badarinath Palavalli said...

ಒಳ್ಳೆಯ ಸಂಗೀತಮಯ ಲೇಖನ ಕೊಟ್ಟಿದ್ದಿರಿ. ಈ ಲೇಖನವನ್ನು ನಾನು ಪ್ರಿಂಟ್ ಔಟ್ ತೆಗೆದುಕೊಂಡು, ಸಂಗ್ರಹಿಸಿ ಇಡುತ್ತೇನೆ. ಆಗಾಗ ಓದಿಕೊಳ್ಳಲು ನನಗೂ ಸಹಕಾರಿಯಾಗುತ್ತದೆ.

ಒಳ್ಳೆಯ ಲೇಖನ.

ನನ್ನ ಬ್ಲಾಗಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com

ಆಲಾಪಿನಿ said...

@ girish n palavalli thank u
@ ಸುನಾಥ್‌ ಅಂಕಲ್ ನಿಮ್ಮ ಅಭಿಪ್ರಾಯವೂ ಒಪ್ಪುವಂಥದ್ದೇ. ಹಾಗೇ ಸಂಗೀತಕ್ಕೆ ಸಂಬಂಧಿಸಿ ನಿಮ್ಮ ಮೇಲ್‌ ಚೆಕ್‌ ಮಾಡಿ

SANTA said...

ಒಳ್ಳೆಯ ಅಭಿವ್ಯಕ್ತಿ!

ಕಲೆ ವಿಜ್ಞಾನವೂ ಹೌದು ಆದರೆ ಅದನ್ನು ಒಳಹೊಕ್ಕು ಕಿವಿಯಾಗಿಸಿ, ಕಣ್ಣಾಗಿಸಿ ನೊಡುವ ವರ್ಗವೇ ಬೇರೆ! ಶಾಙದೇವನಂತ ಸಂಗೀತಶಾಸ್ತ್ರ ರತ್ನಾಕರರು ಅದನ್ನು ಸಾಧ್ಯವಾಗಿಸಿ ತೋರಿಸಿದ್ದಾರೆ!
'ಬಿಂಬಕ್ಕೆ ತಕ್ಕಂತೆ ಪ್ರತಿಬಿಂಬ' ಭಾವಕ್ಕೆ ತಕ್ಕಂತೆ ಅಭಿವ್ಯಕ್ತಿ ಹೌದು. ಒಪ್ಪತಕ್ಕ ಮಾತು. ಆದರೆ ಜೀವನಾನುಭವ ಎನ್ನೋದು ಭಾವಸಮೃದ್ಧಿಯನ್ನು ನೀಡಿ, ಅಭಿವ್ಯಕ್ತಿಯ ನೆಲೆಯಲ್ಲಿ ಪ್ರಕಟಗೊಳ್ಳಲು, ಸೂಕ್ಷ್ಮ ಮನೋಧರ್ಮ ಕೆಲಸಮಾಡಿದಾಗ ಮಾತ್ರ ಸಾಧ್ಯ!

ನನಗೆನಿಸಿದಂತೆ ಶೃಂಗಾರ ಮತ್ತು ವಿರಹ ಭಕ್ತಿಯ ಎರಡು ಮುಖಗಳು. ಇವೆರಡೂ ಮಾಗಿದಂತೆ ಭಕ್ತಿಯ ಔನ್ನತ್ಯದ ದರ್ಶನಕ್ಕೆ ಎಡೆಮಾಡಿಕೊಡುತ್ತವೆ. ಅಂತೆಯೆ ಕಾಮ ಪ್ರೇಮ ಕೂಡ ಒಂದೇ ಪರಿಕ್ರಮದ ವಿಭಿನ್ನ ಹಂತಗಳು ಎಂದು ನಾನು ಭಾವಿಸುವೆ. ಕಾಮ ಎಳಸುತ್ತದೆ.... ಪ್ರೇಮ ಬೆಳೆಸುತ್ತದೆ... ಎಳಸಿನ ಅಭಿವ್ಯಕ್ತಿ ಕಾಮಪ್ರೇರಿತವಾದರೆ.... ಮಾಗಿದ ಅಭಿವ್ಯಕ್ತಿ ಪ್ರೇಮಪೂರಿತವಾಗಿರುತ್ತದೆ. ಎಂಬ ಅಂಬೋಣ ನನ್ನದು!

Gangadhar Divatar said...

ಸಂಗೀತ ಗಾಯಕನ ಗ್ರಹಿಕೆ, ಭಾವಸ್ಪುರಣ, ಭಾವಾಭಿವ್ಯಕ್ತಿ ಮುಂತಾದವುಗಳ ಮೂಲಕ ಕೇಳುಗನ ಮನ ತಟ್ಟುತ್ತದೆ. ಅದೇ ರೀತಿ ಶ್ರೋತ್ರಿವಿನ ಮಾನಸಿಕ ಸ್ಥಿತಿಯೂ ಗ್ರಹಿಕೆಯ ದಿಸೆಯನ್ನು ನಿರ್ಧರಿಸುತ್ತದೆ. ಹಸಿದವನ ಮುಂದೆ ಸುಶ್ರಾವ್ಯ ಸಂಗೀತ ಯಾವುದೇ ಪರಿಣಾಮ ಬೀರಲಾರದು.
ಕವಿತೆ ಬರೆಯುವಾಗಿನ ಸಾಹಿತಿಯ ಮನೋಧರ್ಮವೂ ಸಂಗೀತದ ಮೂಲಕ ಕವಿತೆಯನ್ನು ಗ್ರಹಿಸುವ ಅರ್ಥೈಸಿಕೊಳ್ಳುವ ಮನಸುಗಳಿಗೂ ಗಾಯಕನ ಪ್ರಸ್ತುತಿಯೂ ಅಷ್ಟೇ ಮಹತ್ತರವಾದುದು....

ತುಂಬಾ ವಿಚಾರಪೂರ್ಣ ಲೇಖನ (Y)