Wednesday, December 7, 2011

ಬಿಡುವುದಿಲ್ಲ ಬುದ್ಧ

ಎದ್ದುಹೋಗಬೇಕೆಂದುಕೊಂಡಾಗೆಲ್ಲ
ಬುದ್ಧನದೇ ಅಡ್ಡಿ
ಮರೆಯಬೇಕೆಂದರೂ ಕದಲುವುದಿಲ್ಲ ಮರೆವು

ಸ್ನಾನದ ಮನೆಯಲ್ಲಿ ಬಿಚ್ಚಿಟ್ಟ ಓಲೆ
ಕ್ಯಾಲೆಂಡರ್‌ಗೆ ಚುಚ್ಚಿದ ಸೂಜಿ-ದಾರ
ಇಸ್ತ್ರಿ ಬಟ್ಟೆಗಳ ನಡುವೆ ಡಾಂಬರು ಗುಳಿಗೆ
ಹೊರಡುವ ಮುಂಚೆ ಕನ್ನಡಿಗೊಂದು ಇಣುಕು
ಮರೆಯುವಂಥವಲ್ಲ

ಗಾಡಿ ಏರುವ ಮುಂಚೆ ಹೆಲ್ಮೆಟ್
ಗಾಡಿ ಏರಿದ ನಂತರ ಪರ್ಸ್
ಅರ್ಧ ದಾರಿಗೆ ಮನೆಯ ಬೀಗ
ಕಚೇರಿ ತಲುಪಿದಾಗ ಒಣಹಾಕಿದ್ದ ಬಟ್ಟೆ
ಸರಿಯುವುದಿಲ್ಲ ನೆನಪಿನಿಂದ

ಕಚೇರಿ ಕೆಲಸ ಮನೆಯೊಳಗೆ
ಬಾಕಿಯುಳಿದ ಮನೆಗೆಲಸ ಕಚೇರಿಯಲ್ಲಿ
ಅಪರೂಪಕ್ಕೆ ಬೇಗ ಹೊರಟಾಗಲೂ
ಎಂದೋ ಕೇಳಿದ್ದ ರಾಗದ ಗುಂಗು
ಬೆನ್ನ ಹಿಂದೆಯೇ...

ಸಂಜೆ ಸಂದಣಿಯಲ್ಲೂ
ರಸ್ತೆಯ ಹೊಂಡ
ವಾರವಾಗಿದ್ದರೂ ಕಿರಾಣಿ ಚಿಲ್ಲರೆ
ಆಚೆ ಮನೆಯವರು ಪಡೆದ ಕೈಗಡದ ಸಕ್ಕರೆ
ಅಪರಿಚಿತರು ತೋರಿದ ಅಕ್ಕರೆ
ಮಾಸೀತೇ?

ಯಾರೂ ಇಲ್ಲದ ಮನೆಗೆ ಭಾರಿ ಬೀಗ
ಓಡದ ಬದುಕಿನಲ್ಲಿ ಗಡಿಯಾರದ್ದೇ ವೇಗ
ಉಕ್ಕುವ ಭಾವಗಳಿಗೆ ಸಭ್ಯತೆಯ ಚೌಕಟ್ಟು
ಕುದಿವ ಸಾರೊಳಗೆ ಪುಟ್ಟ ಸೌಟು
ಮನಸಿನಿಂದ ಹಾರವು.

ರಾತ್ರಿಯೂಟ ಬರೀ ಶಾಸ್ತ್ರ
ಪವಡಿಸಿದಾಗ ಟಿವಿ ನಿತ್ಯದ ಚಟ
ಕೊಂಡಿದ್ದಕ್ಕಾಗಿ ಓದಿದ ಪತ್ರಿಕೆಯ ಸುದ್ದಿ
ತಿಂಗಳ ಕೊನೆಗೆ ರದ್ದಿ

ಮಲಗುವ ಮುಂಚೆ ಅಲಾರಾಂ
ಮಲಗಿದ ನಂತರ ಒಲೆ ಮೇಲಿಟ್ಟ ಹಾಲು
ನಾಳಿನ ಬಟ್ಟೆಗೆ ಇಸ್ತ್ರಿ
ಮುಂಗಡ ಪಡೆದ ಮೇಸ್ತ್ರಿ
ಮರೆಯಲು ಬಿಡುವುದೇ ಇಲ್ಲ.

ಮೊಳೆ ಹೊಡೆದ ಗೋಡೆಯ ಕಲೆ
ಮೊಡವೆ ಮಾಯ್ದ ಗುರುತು
ಮೊಳಕೆ ಮುರುಟಿದ ದಿನದ ನೋವು
ದಿನದ ಕೊನೆಗೆ ಉಳಿವ ವಿಷಾದ
ಕಳಚಿ ಹಾಕಲಾಗುವುದಿಲ್ಲ

ನಾನು ನಾನಾಗಬೇಕು
ಮನಸು ಮುಗಿಲಾಗಬೇಕು
ಅಡ್ಡ ಬಂದಿದ್ದನ್ನೆಲ್ಲ ಒದ್ದು
ಎದ್ದು ಹೋಗಬೇಕೆಂದು-
ಅಂದುಕೊಂಡಾಗೆಲ್ಲ

ಬುದ್ಧ ಅಡ್ಡ ಬರುತ್ತಾನೆ

ಮತ್ತದೇ ಗಿರಕಿ
ಮತ್ತದೇ ಲೊಳಲೊಟ್ಟೆ

-ಶ್ರೀದೇವಿ ಕಳಸದ

11 comments:

minchulli said...

beautifu shree.... i just copied it to my mail box & sent to some of my favorites.. NOC pls...

Badarinath Palavalli said...

ಆತನಷ್ಟು ಸಲೀಸಾಗಿ ಜಂಜಡಗಳನೆಲ್ಲ ಒಗೆದು ಎದ್ದು ಹೋಗಲು ನಮ್ಮಿಂದ ಎಲ್ಲಿ ಸಾಧ್ಯ ಮೇಡಂ!

ದಿನ ವಹಿಯ ಪರದಾಟ, ತುಡಿತ ಮತ್ತು ವಿಷಾದದ ನಿಟ್ಟುಸಿರು ಸಮರ್ಥವಾಗಿ ಮೂಡಿಬಂದಿದೆ.

ನನ್ನ ಬ್ಲಾಗಿಗೂ ಸ್ವಾಗತ:
www.badari-poems.blogspot.com
www.badari-notes.blogspot.com

Gold13 said...

ಉಕ್ಕುವ ಭಾವಗಳಿಗೆ ಸಭ್ಯತೆಯ ಚೌಕಟ್ಟು
ಕುದಿವ ಸಾರೊಳಗೆ ಪುಟ್ಟ ಸೌಟು
beautiful.
Swarna

MAHESH PUTHANIKAR said...

BHAAL CHALO ADA NODRI NIM AALAAPA. NANAGU BHAAL ESHTA AAT NODRI..

DHANYWAD,
MAHESH

sunaath said...

ನಾಗರಿಕ ಮಾನವನ ಹೊಯ್ದಾಟ ಹಾಗು ಸೋಲನ್ನು ಚೆನ್ನಾಗಿ ಚಿತ್ರಿಸಿದ್ದೀರಿ. ಅಡಿಗರ ‘ಹಿಮಗಿರಿಯ ಕಂದರ’ದ ನಾಯಕನೂ ಸಹ ಇಂತಹದೇ ತುಯ್ಯಲಾಟಕ್ಕೆ ಒಳಗಾದವನು. ಅದಕ್ಕೇ ಅಲ್ಲವೆ, ‘ಜಗವೆಲ್ಲ ಮಲಗಿರಲು ಇವನೊಬ್ಬ ಎದ್ದ’ ಎಂದು ಬೇಂದ್ರೆ ಅಂದಿದ್ದು!

Uma Bhat said...

ಮತ್ತದೇ ಗಿರಕಿ............
ಚಂದದ ಕವನ

Sushrutha Dodderi said...

ಗುಡ್ ವನ್ನೂ...

ನರೇಂದ್ರ ಪೈ said...

ಇದೆಲ್ಲ ಸರಿ, ದೈನಂದಿನ ಕ್ಷುಲ್ಲಕಗಳು ಬದುಕನ್ನು ಆವರಿಸುವುದು, ಅವು ಕ್ಷುಲ್ಲಕಗಳಾಗಿರದೇ ನಮ್ಮ ‘ಮೀರುವ’ ಮಹತ್ವಾಕಾಂಕ್ಷೆಗೆ ಹಾಗನಿಸುತ್ತಿರಬಹುದೇನೋ ಎಂಬ ಗೊಂದಲವಾಗುವುದು ಮತ್ತು ದಿನದ ಕೊನೆಗೆ ಉಳಿವ ಕಳಚಿ ಹಾಕಲಾರದ ಅದೇ ವಿಷಾದ - ವನ್ನೆಲ್ಲ ಮೀರಿ ನೀವು ಕಾಣಬಹುದು, ಕಾಣಿಸಬಹುದು, ಮನಸ್ಸು ಮಾಡಿದರೆ. ನಿಮ್ಮಿಂದ ಅಂಥದ್ದನ್ನು ನಿರೀಕ್ಷಿಸುತ್ತಿದ್ದೇವೆ. ಕವನ ಚೆನ್ನಾಗಿದೆ, ಮತ್ತೆ ಚೆನ್ನಾಗಿ ಬರೆಯುವವರಿಂದ ನಾವು ಯಾವಾಗಲೂ ಕೊಟ್ಟಿದ್ದಕ್ಕಿಂತ ಸ್ವಲ್ಪ ಹೆಚ್ಚನ್ನು ನಿರೀಕ್ಷಿಸುತ್ತಲೇ ಇರುತ್ತೇವೆ...

Keshav Kulkarni said...

Nice one. I would request you to read, himagiriya kandara by Adiga

ಆಲಾಪಿನಿ said...

ಎಲ್ಲರಿಗೂ ಧನ್ಯವಾದ :)

Bhaskar Narasimhaiah said...

ಭವಾವರಣವೇ ಬುದ್ಧ
ಎಂಬ ನಿಮ್ಮ ಕವನದ ಆಶಯ
ನನಗೆ ಆಯೋಮಯ !
ತಿಳಿಯಲಿಲ್ಲ, ನಿಜಕ್ಕೂ!!;
ಭವಾವರಣವೇ ಬುದ್ಧನೇ?