Saturday, January 14, 2012

ಇದ ನೋಡ್ರಿ ಪಾಕೀಟೀನ್ಯಾಗಿನ್ (ಸಂ)ಕ್ರಾಂತಿ...

ಸೂರ್ಯಪ್ಪನ ಜೊತಿ ಹೊಂಟ, ಚಂದಪ್ಪನ ಕೈ ಹಿಡಕೊಂಡ ಮನೀಗ್ ಬರೋ ಮಂದೀ ಸಂಕರ್‌ಮಣಾ ಹೆಂಗ ಮಾಡ್ತಾರಂತ ಗೊತ್ತೇನು?
-----------------------------------------------------------------------

ಅಲ್ಲೇ ಹಿಂಗಾ...

ಇನ್ನೊಂದ ನಾಲ್ಕ ದಿನಕ್ಕ ಸಂಕ್ರಾಂತಿ ಅಂದ್ರ, ಈ ದಾವಣಗೇರಿಂದ ’ಧಾ ಧಿನ್ ಧಿನ್ ಧಾ..., ಧಾಧಿನ್ನಾ, ಧಾತೋನ್ನಾ...’ ರೊಟ್ಟಿ ತಾಳ ಗುಲ್ಬರ್ಗದ ತನಕಾನೂ ಒಂದ ಅಳತೀ ಸುರು.. ಕರಿಯೆಳ್ಳೋ, ಬಿಳಿಯೆಳ್ಳೋ ಹಚ್ಚಿ ಬುಟ್ಟಿಗಟ್ಟಲೇ ಬಡದಿದ್ದ ಬಡದಿದ್ದು, ಆರಿ ಹಾಕಿದ್ದ ಹಾಕಿದ್ದು...

ನಾಳಿರ್ತ ಇಂದ ’ಮಾದಲಿ’ಗೆ ತಯಾರಿ ಮಾಡ್ಕೊಳ್ಳೋ ಸಡಗರಾ ನೋಡ್ಬೇಕ್ರಿ... ಗೋಧಿಗೆ, ತುಸು ಕಡ್ಲಿಬ್ಯಾಳಿ-ಅಕ್ಕಿ ಸೇರಿಸಿ ಹಿಟ್ಟು ಮಾಡ್ಕೊಂಡು ಪರಾತ ತುಂಬ ನಾದೂವಾಗ, ರಟ್ಟಿ ನೂಯ್ಸಿದ್ರೂ ಬಿಡಾಂಗಿಲ್ಲ ಗಟ್ಟಿಗಿತ್ಯಾರು. ಗಟ್ಯಾಗೇ ನಾದಕೊಂಡ ಹಿಟ್ಟನ್ನ ಉಳ್ಳಿ ಮಾಡಿ ದಪ್ಪ ದಪ್ಪ, ದೊಡ್ಡ ದೊಡ್ಡ ಚಪಾತಿ ಮಾಡಿ, ಬೇಯ್ಸಿ, ಅವು ಆರೋಕಿಂತ ಮೊದಲ ಅದನ್ನ ಪುಡಿ ಮಾಡಿ ರವಾದ ಅಳತೀಗೆ ಕುಟ್ಟಾಣಿಕೆ ಮಾಡೂದ್ರಾಗ ಸೂರ್ಯಾ ಹೋಗಿ ನಾರ್ಯಾ ಬಂದ್ರೂ ಬಿಡಬೇಕಲ್ಲ ಹಬ್ಬದ ಉಬ್ಬ?

ಆಮ್ಯಾಲ ಅದಕ್ಕ ತುರದ ಬೆಲ್ಲ ಕೂಡ್ಸಿ ,ಗ್ವಾಡಂಬಿ, ದ್ರಾಕ್ಷಿ, ಶೇಂಗಾ, ಪುಟಾಣಿ, ಕಸಕಸಿ, ಏಲಕ್ಕಿ, ಒಣಕೊಬ್ರಿ ಉದರಿಸಿ ಡಬ್ಬಿಯೊಳಗ ಉಸರಾಡಾಕ ಬರದ್ಹಂಗ ತುಂಬಿ ಇಟ್ರ ಮರದಿನ ನೈವೇದ್ಯ ವ್ಯಾಳ್ಯಾಕ ಮುಚ್ಚಳ ತೆಗಿಯೂದು.
ಇದು ಹಳ್ಳಿಯೊಳಗ ಇರೂ ಮಂದಿ ಕಥಿಯಾತು...

ಆದ್ರ ಇಲ್ಲೇ? ಸೂರ್ಯಾನ ಜೋಡಿ ಆಫೀಸಿಗ ಹೋಗಿ ಚಂದಪ್ಪನ ಜೋಡಿ ಮನೀಗ್ ಬರೂ ಸಿಟ್ಯಾಗಿನ ಮಂದೀಗೆ ತಿನಿಸಿನ ಅಂಗಡಿಗೋಳ ಗತಿ. ಸೂಟಿ ಸಿಕ್ರ ಸಾಕು ಅಂತ ಉಸರ ಬಿಡೂ ಮಂದಿಗೆ ಇಷ್ಟೆಲ್ಲಾ ಹರಿದಿನಸಾ ಮಾಡ್ಕೊಳ್ಳಾಗ ತ್ರಾಣರ ಎಲ್ಲಿ ಉಳದಿರ‍್ತೇತ್ರಿ? ಬಡಾಬಡಾ ಅಂಗಡಿಗೋಳಿಗೆ ಹೋಗೂದ ಮತ್ತ.

ಇಲ್ ಹಿಂಗ ನೋಡ್ರಿ...

ಬ್ಯಾಗಡಿಯೊಳಗ ಒಂದರ ಮ್ಯಾಲೊಂದು ಏರಿ ಕುಂತ ಎಳ್ಳಹಚ್ಚಿದ ಸಜ್ಜಿ, ಜ್ವಾಳದ ಕಟಕ್ ರೊಟ್ಟಿ , ಹಾಲು, ತುಪ್ಪಾ ಬಾಜೂಕ ಇಟ್ಕೊಳ್ಳೂದ ಮರತು ಗಂಟಲದಾಗ ಸಿಕ್ಕೊಂಡ್ರ ನನ್ನ ಬೈಯ್ಬ್ಯಾಡ ನೋಡ್ರಿ ಮತ್ತ... ಅಂತ ಗೋಡಂಬಿ, ದ್ರಾಕ್ಷಿ ಹೊಟ್ಟಿಯೊಳಗಿಟ್ಟುಕೊಂಡು ಮುದ್ದಿಯಾಗಿ ಕುಂತ ಮಾದಲಿ ಪುಡಿ ಪಾಕೀಟು, ಎಲ್ಲಾ ಕಾಯಿಪಲ್ಯೇಕ ಯಣ್ಣ ಅನ್ಸಕೊಳ್ಳೂ ಯಣಗಾಯಿ ಬದನಿಕಾಯಿ, ಚೌಕಚೌಕ ಕೊರಿಸಿಕೊಂಡು ಕೊಬ್ಬರಿ, ಕಸಕಸಿ ಉದುರಿಸಿಕೊಂಡ ಜುಣಕದ ವಡಿ, ಕಾಳ ತಿನ್ರಪ್ಪೋ ಯಾರನ್ನೂ ಗಾಳಕ್ಕ ಬೀಳ್ಸೂ ತಾಕತ್ ನಿಮ್ಮದಾಕ್ಕೇತಿ ನೋಡ್ರೀ ಅಂತ ಮೊಳಕಿಕಣ್ಣಿಂದಾನ ಹೇಳೋ ಹೆಸರಕಾಳ, ಮಡಕಿಕಾಳ, ಕಡ್ಲಿಕಾಳ ಉಸುಳಿ,

ಅಲ್ಲೋ ಮಕ್ಕಳ್ರ್ಯಾ ಗುರುಗೋಳ್‌ ಚಟ್ನಿ ಅಂದ್ರ ಎಂಥಾದ್ದೋ? ದೊಡ್ಡಾವ್ರಾಗೀರಿ ಇನ್ನರ ನನ್ನನ್ನ ಛಂದಂಗೆ ಕರೀರೋ ಅಂತ ರಾಗಾ ಎಳಿಯೋ ಗುರೆಳ್ಳು ಚಟ್ನಿ, ಸಣ್ಣಮಂದಿ ಗ್ವಾಡಂಬ್ಯಾಗಿ, ಭೀಮನ ಕಾಯಿ ಅಂತ ಕಿರೀಟಾ ತೊಟಗೊಂಡ ಶೇಂಗಾದ ಚಟ್ನಿ, ನಾನಿಲ್ಲಂದ್ರ ನಿಮ್ಮ ಗಂಟಲದಾಗಿಂದು ಇಳಿಯೂದರ ಹ್ಯಾಂಗ್ರೋ ಅಂತ ಬೆಳ್ಳಗ ನಗೂ ಮೊಸರು ಒಂದ ಎರಡ....? ಎಲ್ಲಾ ಕಟ್ಟಿಸಿಕೊಂಡ ಎಳ್ಳು,ಬೆಲ್ಲದ ಪಾಕೀಟ ಹಿಡಕೊಂಡ ಮನೀಗ್ ಬಂದ ಉಣ್ತಾ ಉಂಡ ಮಲ್ಕೊಂಡ್ರ ಮುಗೀತ್ ನೋಡ್ರಿ ಅರ್ಧ ಹಬ್ಬ.

ಸಂಜೀಕ ನೆಂಟ್ರು, ಗೆಳ್ಯಾರ ಮನೀಗ ಹೋಗಿ ಹೊಸಾ ಸೀರಿನೋ, ಜೀನ್ಸ್ ಪ್ಯಾಂಟೋ, ಜುಬ್ಬಾನೋ ಹಾಕ್ಕೊಂಡ ಮಕ್ಕಳೂ ಮರೀನ್ನ ಗಾಡಿಯೊಳಗ ತುಂಬಿಸ್ಕೊಂಡೋ, ಬಸ್ಸಿನ್ಯಾಗ ಜೋತಬೀಳಿಸ್ಕೊಂಡೋ ಎಳ್ಳೂ-ಬೆಲ್ಲಾ ಕೊಟ್ಟಬಂದ್ರ ಮುಗದ ಹೋತ್ ನೋಡ್ರಿ ವರ್ಷದ ಹಬ್ಬ ಒಂದ ದಿನಕ್ಕ.

ಬ್ಯಾಕ್‌ಗ್ರೌಂಡ್‌ನೊಳಗಿಂದ ಇರೂದರಿ...

’ಅಯ್ಯ.. ಏನ್ ಹಬ್ಬಾ ಮಾಡ್ತಾವೋ ಏನೋ ಇವ... ಅಡಗೀ ಮಾಡಾಕ್ ಟೈಮ್ ಸಿಗೂದಿಲ್ಲಾ ಅಂತಾವು ಸೈ. ಯಾರ‍್ಯಾರ ಕೈ ಹತ್ತಿರ‍್ತೇತೋ ಏನೋ ಆ ಅಂಗಡ್ಯಾಗಿನ ಅಡಗೀಗೇ. ಅದನ್ನ ತಂದ ದೇವರ ಮುಂದಿಡ್ತಾವಲ್ಲ... ಗ್ವಾಡೀಗ್ ಹಾಯ್ಲ? ಕಟ್ಟೀಗ್ ಹಾಯ್ಲ?’ ವಯಸ್ಸಾದ ಅತ್ತಿ-ಮಾವನದು ಬದಲಾಗದ ಅದೇ ರಾಗ.

’ಮಮ್ಮಾ... ಇಟ್ಸ್ ಸೋ ನೈಸ್... ನಾಳೆ ಬಾಕ್ಸ್‌ಗೆ ಸಜ್ಜಿರೊಟ್ಟೀನೇ ಹಾಕಿಕೊಡು. ನನ್ನ ಫ್ರೆಂಡ್‌ಗೆ ಕೊಡ್ಬೇಕು. ಮಾದ್ಲಿನೂ ಸ್ಮಾಲ್ ಬಾಕ್ಸ್‌ನಲ್ಲಿ ರ‍್ಲಿ’ ಅಮ್ಮನ ಸೊಂಟಕ್ಕೋ, ಭುಜಕ್ಕೋ ಜೋತು ಬೀಳುವ ಕಂದಮ್ಮಗಳು.

’ನೀವೆಲ್ಲಾ ಇಲ್ಲಿರೂತನಕ ಹಬ್ಬಾ. ಈಗೆಂಥಾದ್ದು? ನಾವಿರೂದ ಇಬ್ಬರ. ಏನಂತ ಮಾಡೂದು, ಏನಂತ ತಿನ್ನೂದು? ದೇವರಪೂರ್ತೇಕ ಮಾಡಿಮುಗ್ಸಿದೆ’ ಫೋನೊಳಗಿನ ಅವ್ವನ ನಿಟ್ಟುಸಿರು ಪೂರ್ತಿ ಕೇಳೂ ಮೊದ್ಲ ಫೋನ್ ಇಸ್ಕೊಂಡ ಅಪ್ಪ ’ಅಂಗಡೀಂದ್ ತಂದ ಉಂಡ್ರಿ? ಅಲ್ಲಬೇ ಇಕೀಕಡೀಂದ ಮಾಡ್ಸಿ ಕೊರಿಯರ್ ಕಳಸ್ತಿದ್ನಲ್ಲ ರೊಟ್ಟಿ, ಮಾದ್ಲೀನ?’ ಅಂತ ಹುರುಪ್ನಿಂದ ಹೇಳ್ದಾ ಗ... ’ಹೌದಲ್ಲ ತಂಗೀ... ಹಂಗ ಮಾಡಬೋದಿತ್ತಲ್ಲ...’ ಅಪ್ಪನ ಬೆನ್ನಲ್ಲೇ ಅವ್ವನ ದನಿಯೆಳೆ. ಆ ಹೊತ್ತಿಗೆ ಅರೆ... ಹೌದಲ್ಲ ಅನ್ನಸಿದ್ದೂ ಖರೇ.

’ಇನ್ನೂ ನಿನ್ನ ಕಡೆ ಮಾಡಿಸ್ಕೊಬೇಕಾ’ ಅಂತ ಕೇಳಿದ್ದಕ್ಕ ಬೆಲ್ಲದಂಥಾ ಅಕಿ ಮನಸ್ಸು ’ಅಯ್ಯ ಹುಚ್ಚಿ.... ಹಂಗ್ಯಾಕ ಅಂತೀಯ...’ ಅಂದಿದ್ದು ಉಡಿಪದರದೊಳಗಿನ ಮೂರ‍್ನಾಲ್ಕು ಎಳ್ಳುಗಳಿಗೆ ಕೇಳಿಸಿ...’ ಏಳ್ ಏಳಿನ್ನ ಶಾಣ್ಯಾಕ್ಯದೀ; ಹಿಂಗ... ಕುಂಡ್ರಾಕಿ ಏನ ಮುಂದಿನ ಸಂಕ್ರಮಣದ ತನಕ?’ ಅಂತ ಹೇಳ್ಕೋತ ಜರ್ರಂತ ಜಾರಿ ಹೋಗ್ಬಿಟ್ವು.

-ಶ್ರೀದೇವಿ ಕಳಸದ
(ವಿಜಯ ಕರ್ನಾಟಕ, ಲವಲವಿಕೆಯಲ್ಲಿ ಪ್ರಕಟ) http://www.vijaykarnatakaepaper.com/pdf/2012/01/14/20120114l_011101004.jpg

1 comment:

sunaath said...

ಹೌದs ತಂಗೆವ್ವಾ,
ಈಗೆಲ್ಲಾ ಪಾಕೀಟಿನ್ಯಾಗಿನ ಸಂಕ್ರಮಣ ನೋಡು! ಆ ಮಾದಲಿ,ಸಜ್ಜಿ ರೊಟ್ಟಿ ಎಲ್ಲಾ ಎಲ್ಲಿ ಹ್ವಾದವೋ!