ಅಂದು ನೀವೆಲ್ಲ ತನ್ಮಯರಾಗಿ ಕೇಳುತ್ತಿದ್ದಿರಿ...
ಅಲ್ಲಲ್ಲಿ ತೂಗುವ ತಲೆಗಳು
ತೊಡೆಯ ಮೇಲೆ ಬೆರಳ ಲಯ
ಪ್ರೀತಿಗೆ ಬಿದ್ದಿದ್ದ ತಬಲಾ-ಪೇಟಿ
ಸಣ್ಣ ಹುಡುಗನಂತೆ ಕೈಕಟ್ಟಿ ನಿಂತ ಮೈಕ್
ಒಂದು ಮಾತು ಹೇಳಲಾ?
ನೀವ್ಯಾರೂ ನಿಜವಾದ ಶ್ರೋತೃಗಳಲ್ಲ
ನನ್ನೊಳಗೆ ಹಾಡು ಕಣ್ಬಿಡುವ ಮುನ್ನವೇ
ನನ್ನ ಮುಚ್ಚಿದೆವೆಗಳ ಬಿಗಿತ ನೋಡಿ
ತಲೆದೂಗಿದ್ದನಲ್ಲ?
ನೀವ್ಯಾರೂ ನಿಜವಾದ ಶ್ರೋತೃಗಳಲ್ಲ
ನನ್ನೊಳಗೆ ಹಾಡು ಕಣ್ಬಿಡುವ ಮುನ್ನವೇ
ನನ್ನ ಮುಚ್ಚಿದೆವೆಗಳ ಬಿಗಿತ ನೋಡಿ
ತಲೆದೂಗಿದ್ದನಲ್ಲ?
ಹಾಡಿದೆ ಅವನ ನೆನಪಿಸಿಕೊಂಡು
ಆಹಾ... ಎಂದಿರಿ ನೀವೆಲ್ಲ.
***
ಇಲ್ಲ. ಇನ್ನು ನಾ ಹಾಡುವುದಿಲ್ಲ. ನಿಲ್ಲಿಸಿ ರಿಯಾಝ್;
ಒರಗಿದೆ ಪೇಟಿಯೆದೆಗೆ.
ಮಂದ್ರ, ಮಧ್ಯ, ತಾರಕ ಸ್ವರಗಳ ನರಳಾಟ ಏಕಕಾಲಕ್ಕೆ;
ಕೆಟ್ಟ ಕನಸಿಗೆ ಚಿಟ್ಟನೆ ಚೀರಿದ ಮಗುವಿನಂತೆ-
ಮೊಲೆ ಬಾಯಿಗಿಟ್ಟು ಚುಕ್ಕು ಕೊಟ್ಟಿದ್ದೇ ಸಾಕು
ಮಗುವಿನ ಆವಾಝ್, ಕರಗಿತು ಪೇಟಿಯ ಆಸ್...
***
ನನ್ನೆದುರಿಗೆ ನೀನಿರಲಿಲ್ಲ ಆ ದಿನ
ದೂರಿದೆ ಕತ್ತಿನ ಪಟ್ಟಿ ಹಿಡಿದು.
ತುಟಿಬಿಚ್ಚದ ನಗೆ, ಅವನೊಳಗೇ ಕೇಳಿಸುವ ಉಸಿರ ಲಯ.
ನೀನೇನು ಬುದ್ಧನೋ? ಕೇಳಿಬಿಡಬೇಕೆನ್ನಿಸಿತು.
ಸುಮ್ಮನೇ ನೋಡಿದ. ನೋಡುತ್ತಲೇ ಇದ್ದ.
ಅವನ ಕಣ್ಣುಗಳಲ್ಲೇ ಇತ್ತು ಬಂದಿಷ್.
***
ಪೇಟಿ ಸರಿಯಿಲ್ಲ ಎಂದೆ
ನಿನ್ನುಸಿರ ಗಮನಿಸು ಎಂದ
ಆಹಾ ಅಲ್ಲಮನೋ ನೀ? ಸದ್ಯ ಹಾಗೆ ಕೇಳಲಿಲ್ಲ.
ತಬಲಾ... ಎಂದು ರಾಗವೆಳೆದೆ
ಅವ ನನ್ನ ಬೆರಳುಗಳ ಸವರಿದ
ತಬಲಾ... ಎಂದು ರಾಗವೆಳೆದೆ
ಅವ ನನ್ನ ಬೆರಳುಗಳ ಸವರಿದ
ಶ್ರೋತೃಗಳಿಲ್ಲ ಎಂದು ಗೊಣಗಿದೆ
ಅವ ನನ್ನೆವೆಗಳನ್ನು ಮುಚ್ಚಿದ
ನಾನು ರಾಗಧಾರಿಯಾದೆ
ಅವ ಸಾಲಾಗಿಸಿದ ಹಾಡುಗಳ
ಹರಿದ ಗಾನಸುಧೆ ಸಂಗೀತವಂತೆ...ಗೊತ್ತಿಲ್ಲ,
ಅದು ಎನ್ನ ಜೀವದುಸಿರು.
-ಶ್ರೀದೇವಿ ಕಳಸದ
4 comments:
ಅದ್ಭುತ ಸಾಲುಗಳು ಮತ್ತು ಅದರ ಹಿಂದಿನ ಭಾವ.
ಗ್ರಹಿಸಿದ್ದೆಷ್ಟೋ ಗೊತ್ತಿಲ್ಲ, ಆದರೆ ದಕ್ಕಿದ್ದು ಸುಂದರವಾಗಿದೆ.
ಸ್ವರ್ಣಾ
Nice!
ಇಲ್ಲಿ ಹಾಡುಗಾರಿಕೆ ಸಾಂಕೇತಿಕ ಪ್ರಯೋಗ. ಒಳ ತೋಟಿಯ ಆಲಾಪನೆಯೇ ಮುಖ್ಯ ತಂತು ಅಲ್ಲವೇ ಮೇಡಂ?
ಲಾಲಿಯ ಪೂರ್ಣ ಕವನ ಪ್ರಯೋಗ.
ನನ್ನ ಬ್ಲಾಗಿಗೂ ಸ್ವಾಗತ...
ede tumbi haaduvene haadu nenapige bantu nimma haadu odi
sundara saalugalu
Post a Comment