Saturday, January 14, 2012

ನಾ ನಿಲ್ಲುವವಳಲ್ಲ...

ಟೆನ್‌ಪಿನ್ ಬೌಲಿಂಗ್ ಆಟದಲ್ಲಿ ಗುರಿಯಿಟ್ಟು ಚೆಂಡನ್ನು ಉರುಳಿಸುತ್ತಾರಲ್ಲ... ಹಾಗಿತ್ತು; ಅವ ಇಂದು ನೀರ್‌ತುಂಬಿದ ಬಾಟಲಿ ನೆಲದ ಮೇಲೆ ಉರುಳಿಸಿದ್ದು. ಅದು ಉರುಳುತ್ತ ಆ ಬದಿಯ ಗೋಡೆಗೆ ಡಿಕ್ಕಿ ಹೊಡೆದು, ಅತ್ತೂ ಹೋಗದೆ, ಇತ್ತೂ ಹೋಗದೆ, ನಟ್ಟನಡುವೆ ಬಂದು ನಿಲ್ಲುವಷ್ಟರಲ್ಲಿ ಎಲ್ಲಿತ್ತೋ ದುಃಖ ಒತ್ತರಿಸಿಬಂತು... ’ಎರಡು ತಿಂಗಳಾಯ್ತು ಈ ಬಾಟಲಿಯೊಳಗಿನ ನೀರು ಹೀಗೇ ಇದೆ. ಖಾಲಿ ಮಾಡಿಡಬೇಕು ಅನ್ನೋ ಪರಿಜ್ಞಾನ ಬೇಡ್ವೇನೆ?’ ಬಾಟಲಿ ಉರುಳಿಸಿದ ರಭಸವೇ ಅವನ ದನಿಯಲ್ಲೂ ಇತ್ತು.

ಕಣ್ಣಬಟ್ಟಲು ತುಂಬಿದವು: ಲ್ಯಾಪ್‌ಟಾಪ್ ಮತ್ತು ಕಣ್ಣ ಮಧ್ಯೆ ಯಾರೋ ಟ್ರೇಸಿಂಗ್ ಪೇಪರ್ ಹಿಡಿದಂತಾಯ್ತು. ’ಅಯ್ಯೋ ಏನಾಯ್ತೋ...’ ಅಂದ ಹತ್ರ ಬಂದು. ಏನಿಲ್ಲ ಬಿಡು ಅಂತ ಕೊಸರಿಕೊಳ್ಳಬೇಕೆನ್ನಿಸಿತು. ಹಾಗೆ ಮಾಡಲಿಲ್ಲ. ಇಲ್ಲ ಹೇಳು ಅಂದ. ’ಏನಿಲ್ವೋ, ಅವತ್ತು ಊರಿಂದ ಬರೋವಾಗ ಅವ್ವ ತುಂಬಿಸಿಕೊಟ್ಟ ನೀರು...’ ಈಗ ಬಟ್ಟಲು ತುಂಬಿ ಹರಿಯತೊಡಗಿತು. ’ಓಹ್ ಸಾರಿ... ಹಾಗಾ... ಇಲ್ನೋಡು ಈ ಪುಸ್ತಕ, ಈ ಬಟ್ಟೆ... ಹೀಗೆ ಎಷ್ಟೋ ದಿನಗಳಿಂದ ಇದ್ದಲ್ಲೇ ಇಲ್ಲಿದ್ದಾವಲ್ಲ. ಅದೂ ಹಾಗೇ ಇಟ್ಟಿದ್ದೀ ಅಂತ ಅನ್ಕೊಂಬಿಟ್ಟಿದ್ದೆ’ ಅಂದ. ಗಲ್ಲ ವರೆಸಿದಷ್ಟೂ ಹರಿವು ನಿಲ್ಲಲೇ ಇಲ್ಲ.

’ಸೋಮಾರಿತನದಿಂದ ಆ ಬಾಟಲಿ ಖಾಲಿ ಮಾಡಲಾರದೆ ಹಂಗೇ ಇಟ್ಟಿರಲಿಲ್ಲ....’ ಹೇಳಬೇಕೆನ್ನಿಸಿತು. ಆದರೆ ಹೇಳಲಿಲ್ಲವಷ್ಟೆ; ಕುಡಿಯಬೇಕಿತ್ತು ಇಲ್ಲ ಗಿಡಕ್ಕೆ ಸುರಿಯಬೇಕಿತ್ತು ಎನ್ನುವುದು ಅವನ ಉತ್ತರವಾಗಿರುತ್ತದೆ ಎನ್ನುವುದು ಗೊತ್ತಿರುವುದರಿಂದ. ದಿನಾ ಬೆಳಗ್ಗೆ ಬಾಚಣಿಕೆ ಎತ್ತಿಕೊಳ್ಳುವ ಜಾಗದಲ್ಲಿ ಪುಟ್ಟಗೌರಿಯಂತೆ ಪಕ್ಕದಲ್ಲೇ ಆ ಬಾಟಲಿಪುಟ್ಟಿ ಕಾಣುತ್ತಿತ್ತು. ತುಂಬಿಕೊಂಡಿದ್ದರೂ ಬರಿದಾಗೇ ಕಾಣುವ ಅದರ ಒಡಲು ಖಾಲಿ ಮಾಡಲು ಕೇವಲ ಹತ್ತು ಸೆಕೆಂಡು ಸಾಕಿತ್ತು. ಆದರೆ...

***

ಅದೊಂದು ಸಂಕ್ರಮಣದ ಬೆಳಗು. ನವಿಲುತೀರ್ಥಕ್ಕೆ ಹೋಗುವ ತಯಾರಿ ನಡೆದಿತ್ತು. ಏನು ಹಾಗೆಂದರೆ? ಯಾಕೆ ಹೋಗಬೇಕು? ನವಿಲುಗಳಿರುತ್ತವಾ ಅಲ್ಲಿ? ಹಿಂಗೆಲ್ಲ ಕೇಳಬೇಕು ಅನ್ನೋಹೊತ್ತಿಗೆ... ’ಲಗೂ ತಯಾರಾಗ್ರಿನ್ನ.. ಅಲ್ನೋಡ್ರಿ. ಆ ಬಟ್ಟಲೊಳಗಿಂದು ಮೈಗೆಲ್ಲ ಹಚ್ಕೊಂಡು ಸ್ನಾನಾ ಮಾಡ್ರಿ.. ಬಿಸಲೇರೂದ್ರಾಗ ಹೋಗಿಮುಟ್ಟಬೇಕು’ ಅಂತ ಅವ್ವ ಕರಿದ ಸಂಡಿಗೆಯನ್ನು ಡಬ್ಬಿಗೆ ತುಂಬಿಸುತ್ತಿದ್ದಳು. ಒಂದೇ ಒಂದು ತಿನ್ನೋಣ ಅನ್ಸಿತ್ತಾದರೂ ’ಮದ್ಲ... ಜಳಕಾ....’ ಅಂತ ಕಣ್ಣು ದೊಡ್ಡದು ಮಾಡುವಾಕೀನ ಇಕಿ ಅನ್ನೋದು ಖಾತ್ರಿ. ಆಸೆಗಣ್ಣಿನಿಂದಲೇ ಬಚ್ಚಲುಮನೆ ಕಡೆ ಹೊರಟೆ...

ಪಿಚ್ಚರ್‌ಗಳಲ್ಲಿ ತೋರಿಸುವ ದೇವಲೋಕದಂತಾಗಿತ್ತು ಅದು. ಓಹ್ ಇದು ಹಂಡೆ ಪವಾಡ. ಬಹುಶಃ ಪಿಚ್ಚರ್‌ಗಳಲ್ಲೂ ಸೈಡಿಗೆ ಇಂಥ ಹಂಡೆಗಳನ್ನಿಟ್ಟು ಹೊಗೆ ಹರಡಿಸಿರುತ್ತಾರೇನೋ ಎಂದುಕೊಂಡೆ. ಅಷ್ಟೊತ್ತಿಗೆ ಅಲ್ಲಿ ಕಂಡದ್ದು ಅಗಲ ಬಟ್ಟಲದೊಳಗಿನ ಅರಿಷಿಣ ಮಡು. ಅವ್ವನಿಂದ ಅರ್ಧಂಬರ್ಧ ಜಜ್ಜಿಸಿಕೊಂಡು ಹೊಟ್ಟೆಬಿರಿದುಕೊಂಡ ಬಿಳಿಎಳ್ಳುಗಳು ಅದರೊಳಗೆ.

ಕೆನ್ನೆಗಾ? ಹೊಟ್ಟೆಗಾ? ಕೈಗಾ? ಕಾಲಿಗಾ? ಎಲ್ಲಿ ಮೊದಲು... ಅಂತೂ ಎರಡು ಬೆರಳಲ್ಲಿ ಅರಿಷಿಣ ಹಿಡಿದು ನಿಧಾನ ಮೈಗೆ ಸವರಿಕೊಂಡೆ. ಅಯ್ಯೋ ಚಳಿಗುಳ್ಳೆಗಳು! ಬಕೆಟ್ಟಿನಲ್ಲಿದ್ದ ಹದಬೆಚ್ಚಗಿನ ನೀರು ಸುರಿದುಕೊಂಡು ಶೀತವನ್ನು ಸಮ ಉಷ್ಣಕ್ಕೆ ತಿರುಗಿಸಿಕೊಂಡೆ. ಆಹ್ ಈಗೇನಿದ್ದರೂ ಆಟ. ಅರಿಷಿಣವನ್ನು ಮೈತುಂಬ ಬೊಟ್ಟುಬೊಟ್ಟಾಗಿಸಿಕೊಳ್ಳುತ್ತ, ಜಾರಿಹೋಗುತ್ತಿದ್ದ ಎಳ್ಳುಗಳನ್ನು ಅರಿಷಿಣದ ಮೆತ್ತೆಯಲ್ಲಿ ಕೂರಿಸುವ ಖುಷಿ ಚಾಲೂ.

’ಆತು ಜಳಕ?’ ಅವ್ವನ ದನಿ ಕೇಳುತ್ತಿದ್ದಂತೆ ಮೊಹರಂ ಹುಲಿವೇಷಕ್ಕೆ ತೆರೆ ಎಳೆದು. ನೀರು ಸುರಿದುಕೊಳ್ಳುವ ಹೊತ್ತಿಗೆ. ಬಚ್ಚಲಿಗೆ ಕಾಲಿಟ್ಟೇ ಬಿಟ್ಟಳು. ’ಇನ್ನೂ ಆಡ್ಕೋತ ಕೂತಿ’ ಕೈಗಳೆರಡನ್ನೂ ಹಿಡಿದು ಉಳಿದ ಅರಿಷಿಣದಿಂದ ಮೈಪೂರ್ತಿ ಗಸಗಸನೇ ತಿಕ್ಕಿ ಜಳಜಳವೆನ್ನಿಸಿಬಿಟ್ಟಳು.

ಬಿಳಿವಸ್ತ್ರದೊಳಗೆ ಸುತ್ತಿ ಎದೆಗವಚಿಕೊಂಡು, ’ನಡಿಯಿನ್ನ... ಲಗೂನ ಆ ಹೊಸಾ ಅಂಗಿ ಹಾಕ್ಕೋ’ ಅಂತ ಇಳಿಸಿ ಈ ಕಡೆಯಿಂದ ಓಡಿಸಿದರೆ ಆ ಕಡೆಯಿಂದ ಅಪ್ಪಾಜಿ ಮೊಣಕಾಲುಗಳೊಳಗೆ ಹಿಡಿದೇ ಬಿಟ್ಟರು. ತಲೆ ಒರೆಸಿ ಬಾಚಣಿಕೆ ಆಡಿಸಿ, ಪೌಡರ್ ಹಚ್ಚಿ, ಹುಬ್ಬುಗಳ ನಡುವೆ ಪುಟ್ಟ ಚುಕ್ಕೆಯನ್ನೂ ಇಟ್ಟು ಪೇಪರ್ ಓದುತ್ತ ಕುಳಿತರು. ಅರೆ ’ಇವತ್ತು ಸ್ನಾನ ಆದಮೇಲೆ ಹೇ ಪ್ರಭೋ ಪ್ರಸೀದ ಓಂ...’ ಹೇಳಬೇಕು ಅಂತ ಅಪ್ಪಾಜಿ ಯಾಕೋ ಹೇಳಲೇ ಇಲ್ಲ. ಹಾಗಿದ್ರ ದಿನ್ನಾ ನವಿಲುತೀರ್ಥಕ್ಕೆ ಹೋಗುವಂತೆ ಆಗಲಪ್ಪಾ ಅಂತ ದೇವರ ಗೂಡಿನ ಹತ್ತಿರ ಹೋಗದೆ ಕೇಳಿಕೊಂಡೆ.

***


ನವಿಲುತೀರ್ಥ ಒಂದು ಕಿ.ಮೀ. ಮೈಮೇಲೆ ಬರಿದುಕೊಂಡ ಬಿಳಿಕಲ್ಲೊಂದು ಕಂಡಿತು. ಹಾ.. ನವಿಲುಗಳು ಸಿಗ್ತಾವಿನ್ನು... ಇದು ನವಿಲುಗಳದ್ದೇ ಊರಲ್ವಾ? ಊರು ಹತ್ರ ಬಂತು ಖರೇ. ಎಲ್ಲಿ ಅವು? ವಾಕಿಂಗ್ ಅಂತೆಲ್ಲಾ ಬಂದಿರಬೇಕಲ್ಲ ಊರಹೊರಗ... ಅಕ್ಕಪಕ್ಕದ ಪೊದೆಗಳಲ್ಲಿ ಕಣ್ಹಾಕಿದೆ. ಊಂಹೂ ಯಾವ ನವಿಲೂ ಕಾಣಲಿಲ್ಲ. ಬಾಯಿಬಿಟ್ಟು ನವಿಲು ಹುಡುಕುತ್ತಿದ್ದ ನನಗೆ ಕಂಡಿದ್ದು ಅಪ್ಪನ ಗಾಡಿಯ ಕನ್ನಡಿಯಲ್ಲಿ ನನ್ನದೇ ಮುಖ! ತಕ್ಷಣವೇ ತುಟಿ ಕಚ್ಚಿಕೊಂಡು ಬಾಯಿ ಮುಚ್ಚಿಕೊಂಡೆ. ಎರಡು ದಿನದ ಹಿಂದೆಯಷ್ಟೇ ಹಲ್ಲುಬಿದ್ದು ಆ ಜಾಗ ಖಾಲಿಯಾಗಿತ್ತು. ಶಾಲೆಯಲ್ಲಿ ಮಾಸ್ತರುಗಳು ನವಿಲುತೀರ್ಥ ಅಣೆಕಟ್ಟೋ, ತುಂಗಭದ್ರಾ ಅಣೆಕಟ್ಟೋ? ಎಂದು ಚಾಷ್ಟಿ ಮಾಡಿದ್ದು ನೆನಪಾಗಿ ಗಲ್ಲ ಉಬ್ಬಿಸಿಕೊಂಡೆ. ಯಾರೊಬ್ಬರೂ ಅಣೆಕಟ್ಟು ಅಂದರೆ ಏನು ಅಂತ ಕೇಳಿದರೆ ನಗ್ತಿದ್ದರೆ ಹೊರತು ಉತ್ತರ ಕೊಟ್ಟಿರಲಿಲ್ಲ.

ಅಲ್ಲೊಂದು ಕಮಾನು. ಸ್ವಾಗತ ನವಿಲುತೀರ್ಥ ಅಣೆಕಟ್ಟಿಗೆ. ಓಹ್ ಇದೇನಾ ಅಣೆಕಟ್ಟು ಎಂದರೆ? ಆದ್ರೆ ನನ್ನ ಹಲ್ಲು ಬಿದ್ದಿದ್ದಕ್ಕೂ ಅಣೆಕಟ್ಟಿಗೂ ಏನು ಸಂಬಂಧ? ಮತ್ತೆ ತಲೆಯಲ್ಲಿ ಹುಳ... ಆದ್ರೆ ಆ ಹುಳವನ್ನು ಓಡಿಸಿದ್ದು ಕಮಾನಿನ ಅಕ್ಕಪಕ್ಕದಲ್ಲಿದ್ದ ನವಿಲುಗಳ ಚಿತ್ರ. ಓಹ್ ಇವು ಬಹುಶಃ ಯಾವುದೋ ನವಿಲುಗಳ ಅಜ್ಜ, ಅಮ್ಮ ಇರಬೇಕು. ಸತ್ತು ಹೋಗಿದ್ದಕ್ಕೆ ಅವುಗಳ ಚಿತ್ರ ಬರೆದಿದ್ದಾರಿಲ್ಲಿ ... ಹೀಗೆ ಆಗ ಊಹಿಸಿಕೊಳ್ಳಲು ಕಾರಣ ಅಪ್ಪ ಬರೆಯುತ್ತಿದ್ದ ಚಿತ್ರಗಳು ಮತ್ತು ನಮ್ಮೂರಿನ ಜನರು; ’ಸರ... ಈ ಫೋಟೋ ದೊಡ್ಡದ ಮಾಡಿ ಬಣ್ಣಾ ಮಾಡಿ ಕೊಡ್ರಿ. ಮುಂದಿನ ಐತಾರಕ್ಕ ತಿಥಿ ಐತ್ರಿಯಪ್ಪಾ ನಮ್ಮಪ್ಪಂದು’ ಎಂದು ತೀರಿಹೋದವರ ಮಾಸಿದ ಬ್ಲ್ಯಾಕ್ ಅಂಡ್ ವೈಟ್ ಫೋಟೋವೊಂದನ್ನು ಕೈಗಿಟ್ಟು , ಕೈಮುಗಿದು ಹೋಗುತ್ತಿದ್ದರು.

***

ಅವ್ವನ ಕೈಯಲ್ಲಿ ಹಬ್ಬದೂಟದ ಗಂಟು. ತಂಗಿ ಅಪ್ಪನ ಹೆಗಲೇರಿದ್ದರೆ, ನನ್ನ ಹೆಗಲಿಗೊಂದು ವಾಟರ್‌ಬ್ಯಾಗು... ಉಡಾಳ ತಮ್ಮ ಕೈ ಸಿಗುವನೆ? ಹೆಜ್ಜೆ ಇಟ್ಟಷ್ಟೂ ಶಬ್ದವೊಂದು ಎದೆಯೊಳಗೆ ಇಳಿದಿಳಿದು ಹೆದರಿಸುತ್ತಿತ್ತು. ಅಬ್ಬಾ...! ಏನದು? ನೀರು... ಅಷ್ಟೊಂದು ಎಲ್ಲಿಂದ? ಆ ಕಡೆ ಗೋಡೆಹಿಂದೆ ಅಡಗಿಕೊಂಡ ಸಾವಿರಾರು ಜನ ಬಕೀಟಿನಿಂದ ನೀರು ಸುರಿಯುತ್ತಿದ್ದಾರಾ? ಅಂತ ನೋಡಿದೆ... ನೋಡಿದೆ. ಊಂಹೂ... ಬಕೆಟ್ಟಿಗರ ನೀರಿನ ಸುರಿತ ನಿಲ್ಲುತ್ತಲೇ ಇಲ್ಲ. ಬಕೆಟ್ಟಿಗರೂ ಕಾಣಲಿಲ್ಲ. ಮೇಲಿನಿಂದ ಧಬಿಧಬಿಸೋದು ಮಾತ್ರ ನಿಲ್ಲಲೇ ಇಲ್ಲ. ಅಪ್ಪಾಜಿ ತಮ್ಮನ್ನನು ನೀರಿಗಿಳಿಸಿಕೊಂಡು ಸ್ನಾನ ಮಾಡಿಸುತ್ತಿದ್ದಾರೆ. ಬಾ ಎಂಬ ಅವರ ಕರೆಗೆ ’ನಾ ಒಲ್ಯಾ...’ ಎಂದು ಕಿರುಚುತ್ತಿದ್ದುದನ್ನು ಮಲಪ್ರಭೆ ನುಂಗಿಹಾಕುತ್ತಿದ್ದಾಳೆ. ಅಂತೂ ಇಂತೂ ಯಾವುದೋ ಮಾಯೆಯಲ್ಲಿ ಆ ಹೊಳೆಯಲ್ಲಿ ಒಮ್ಮೆ ಮುಳುಗೇಳಿಸಿ ದಂಡೆಗೆ ತಂದು ನಿಲ್ಲಿಸೇಬಿಟ್ಟರು.

ಬೇಡ ಬೇಡ ಎಂದು ಕೂಗಿಕೊಂಡರೂ ನನ್ನ ಸಣ್ಣ ಧ್ವನಿ ನುಂಗಿ ಅಬ್ಬರಿಸುತ್ತಿದ್ದ ಮಲಪ್ರಭೆಗೆ ಕೇಳಲೇಬೇಕು; ಯಾಕಿಷ್ಟು ಅಬ್ಬರ? ಈ ದನಿ ನಿನ್ನದೇನಾ? ಅಥವಾ ಯಾರಾದರೂ ಮೈಕ್ ಇಟ್ಟಿದ್ದಾರೋ ನಿನ್ನ ಬಾಯಿಗೆ ಅಂತ. ಗಡಗಡ ನಡುಗುತ್ತಲೇ ಎದೆಗೆ ಮೊಣಕೈ ಕಟ್ಟಿಕೊಂಡು ನಿಂತೆ. ಮಲಪ್ರಭೆಯ ಬಾಯಿ ಎಲ್ಲಿ? ಮೈಕ್ ಎಲ್ಲಿ ಅಂತ ಹುಡುಕುವಾಗ ಕಂಡಿದ್ದು ಸ್ಪೀಕರ್ರು. ’ಹೊಳೆಯ ಅಬ್ಬರ ಹೆಚ್ಚುತ್ತಿದೆ. ದಂಡೆಯಲ್ಲಿ ಸ್ನ್ನಾನ ಮಾಡಿ. ಮಕ್ಕಳನ್ನು ನೀರಿಗಿಳಿಸಬೇಡಿ’ ಇಷ್ಟು ಹೇಳಿದ ಸ್ಪೀಕರ್ ಸ್ಥಬ್ದವಾಯಿತು. ಅಯ್ಯೋ ಆಗ್ಲಿಂದ ಒದರ‍್ಕೊಂಡೆ. ಅಪ್ಪಾಜಿಗೆ ಕೇಳಿಸಲಿಲ್ಲ. ನನ್ನ ಮುಳಿಗೇಳಿಸೇಬಿಟ್ಟರು. ನನ್ನ ಭಯ ಈ ಸ್ಪೀಕರ್‌ಗೆ ಕೇಳಿಸಿ ಅದು ಈಗ ಹೀಗೆ ಕೂಗಿಕೊಂಡೆತೇ? ಯಾರು ಅದರೊಳಗೆ ಕೂತು ಕೂಗಿದವರು? ಎಂದುಕೊಳ್ಳುತ್ತಿದ್ದಾಗ ಅವ್ವ ಬಾಳೆಎಲೆಯಲ್ಲಿ ಮಾದಲಿ ಹಾಕಿ, ಅದಕ್ಕೊಂದು ಕಟ್ಟೆ ಕಟ್ಟಿ ಅದರೊಳಗೆ ತುಪ್ಪ-ಹಾಲು ಸುರಿದು, ’ಉಣ್ಣ ತಂಗೀ...’ ಎನ್ನುತ್ತಿದ್ದಳು. ಹಾಲು ಜಾಸ್ತಿಯಾಗಿ ಮಾದಲಿಯ ಕಟ್ಟೆ ಒಡೆದು ತುಪ್ಪದೊಂದಿಗೆ ಅದು ಹರಿದುಹೋಗುತ್ತಿತ್ತು.... ನಿಲ್ಲಿಸಲಾಗಲಿಲ್ಲ. ಬಾಳೆಎಲೆಯ ಗೀರಿನೊಳಗೊಂದು ಸಣ್ಣತೊರೆ ಮಾಡಿಕೊಂಡು ಅದು ಹರಿದೇ ಹೋಯಿತು...

*****

ಕಳೆದ ಸಂಕ್ರಮಣದ ದಿನ ’ಮೈಕೆರೆತ, ಬಾವು, ಉರಿ...ತಂಗಿ...’ ಫೋನ್‌ನೊಳಗೆ ಅವ್ವನ ಸಣ್ಣ ದನಿ. ಯಾಕವ್ವಾ... ಏನಾಯ್ತು? ಡಾಕ್ಟರ್ ಕಡೆ ಹೋಗಿದ್ದೇನು? ಅಂದೆ. ’ಹೂಂ. ಅದ ಥೈರಾಯ್ಡ್... ಅಲರ್ಜಿ. ಅರಿಷಿಣ ಹಚಕೋಬ್ಯಾಡ ಅಂದ್ರು’ ಅಂದ್ಲು. ಮೊನ್ನೆ ತಂಗಿಯ ಮದುವೆ ದಿನ, ಅರಿಷಿಣ ಕಾರ್ಯದಲ್ಲಿ ದೂರು ಸರಿದು ನಿಂತ ಅವ್ವನ ಬಗ್ಗೆ, ಕೇಳಿದ ಮಂದಿಗೆ ಅರಿಷಿಣ ಅಲರ್ಜಿ ಆಕೀಗೆ.. ಅಂತ ಹೇಳುವಾಗ ಗಂಟಲು ಉಬ್ಬಿ ಬರುತ್ತಿತ್ತು. ಮುಂದಿನ ಸಂಕ್ರಾಂತಿಗಳ ಅಭ್ಯಂಗವಿನ್ನು ಒಣ ಒಣ ಜಳಕವಷ್ಟೇ ಆಕೆಗೆ ಎನ್ನುವುದು ಈ ಸಂಕ್ರಾಂತಿ ಬರುವ ಮೊದಲೇ ಹನಿಗಣ್ಣಾಗಿಸುತ್ತಿದೆ.

ಮನದೊಳಗೆ ಉರುಳಿಬಿದ್ದ ಬಾಟಲಿ, ಮಲಪ್ರಭೆಯ ಭೋರ್ಗರೆತ.

-ಶ್ರೀದೇವಿ ಕಳಸದ.1 comment:

susheela said...

ತುಂಬಾ ಚೆನ್ನಾಗಿದೆ ಮಾರಾಯ್ತಿ... ಓದಿ ಕಣ್ಣು ತೇವ ಆಯ್ತು ನೋಡಿಲ್ಲಿ....