Sunday, February 26, 2012

ಇವತ್ತು ಭಾನುವಾರ; ಓಹ್ ಪೇರೆಂಟ್ಸ್ ಮೀಟ್!


ಗಡಿಯಾರ ಹನ್ನೊಂದಾಯಿತು ಎನ್ನುತ್ತಿದೆ. ಮೆತ್ತನೆಯ ಹಾಸಿಗೆ ನಿದ್ದೆ ತರಿಸುತ್ತಿಲ್ಲ. ಒಣಗಿದ ಗೂನುಬೆನ್ನು. ವಿಪರೀತ ಕೆರೆತ. ಕೈಗೆ ಬೆನ್ನು ನಿಲುಕುತ್ತಿಲ್ಲ. ಪೇಪರ್ ಸುರುಳಿಯಿಂದ ಕೆರೆದುಕೊಂಡರೂ ಸಮಾಧಾನವೆನ್ನಿಸುತ್ತಿಲ್ಲ. ವೃದ್ಧ ಪತಿ ಈಗಷ್ಟೇ ನಿದ್ದೆಗೆ ಜಾರಿದ್ದಾರೆ. ಕರೆಗಂಟೆ ಒತ್ತಿದರೆ ಸಹಾಯಕರು ಬಂದಾರು. ಬೆನ್ನಿನ ಕೆರೆತ ಶಮನ ಮಾಡಿಯಾರು. ಆದರೆ...?

ಅವತ್ತೊಂದಿನ ಬೆನ್ನು ಕೆರೆಯುತ್ತಿದೆ ಎಂದಾಗ ನಾಲ್ಕು ವರ್ಷದ ಮೊಮ್ಮಗ ಓಡಿ ಬಂದು ಬೆನ್ನು ಗೀರತೊಡಗಿದ್ದು ನೆನಪಾಗತೊಡಗಿತು... ‘ಪುಟ್ಟಾ ಎಷ್ಟು ಹಿತ ಅನ್ನಸ್ತಿದೆ ನೋಡು ನೀ ಹೀಗೆ ಕೈಯ್ಯಾಡಿಸ್ತಿದ್ರೆ... ಹಂಗೆ ಕುತ್ತಿಗೆ ಕೆಳಗೆ ಚೂರು ಕೆರಿಯೋ ಅಂತ ಅಜ್ಜಿ ಹೇಳ್ತಿರಬೇಕಾದ್ರೆ, ನಾಲ್ಕು ವರ್ಷದ ಮೊಮ್ಮಗ ಅಜ್ಜಿಯ ಒಣಬೆನ್ನು ಅನ್ನೋ ಕ್ಯಾನ್ವಾಸ್ ಮೇಲೆ ಎಳೆಉಗುರುಗಳಿಂದ ಬಿಳಿಬಿಳಿಯಾಗಿ ಗೀರ್‍ತಾ... ‘ಇರಜ್ಜಿ... ನಾನಿನ್ನೂ ಈಗ ಮನೆ ಬರದೆ. ಬಾತುಕೋಳಿನೂ ಆಯ್ತು. ತೆಂಗಿನ ಮರ ಬರೆಯೋವಾಗ ಕುತ್ತಿಗೆ ಹತ್ರ ಬರ್‍ತೀನಿ ಆಯ್ತಾ?’ ಎಂದು ತೋಳು ಅಲ್ಲಾಡಿಸಿದಾಗ ಅಜ್ಜಿಯ ಕೆರೆತ ಹಾರ್‌ಹೋಗಿ ಕುಲುಕುಲು ನಗು ಆವರಿಸಿಕೊಂಡಿತ್ತು.

ವೃದ್ಧದಂಪತಿ ಮಗ ಸೊಸೆ ಆಫೀಸಿನಿಂದ ಬರೋದನ್ನೇ ಕಾಯ್ತಾ, ಮೊಮ್ಮಗನ ‘ಚಿತ್ರಕಥೆ’ ಹೇಳಬೇಕು ಅನ್ನೋ ಉತ್ಸಾಹದಲ್ಲಿದ್ದರು. ರಾತ್ರಿ ಹತ್ತುಗಂಟೆಯಾಗಿದ್ದರೂ ಅಪ್ಪ-ಅಮ್ಮನನ್ನೇ ಕಾಯ್ದುಕೊಂಡಿದ್ದ ಮಗು, ಅವರು ಬಂದೊಡನೇ, ‘ಮಮ್ಮಾ ಅಜ್ಜಿಗೆ ಇವತ್ತು ತುಂಬಾ ಬೆನ್ನು ಕೆರೀತಾ ಇತ್ತಾ, ಆಗ ನಾನು...’ ಮಗನ ಮಾತನ್ನು ಅರ್ಧಕ್ಕೆ ತಡೆದು ‘ಹೌದಾ ಆಮೇಲೆ?‘ ಎಂದು ಪ್ರಶ್ನಿಸಿದಳು ಅಮ್ಮ. ‘ಆಮೇಲೆ ನಾನು ಬೆನ್ನ ಮೇಲೆ ಉಗುರಿನಿಂದ...’ ಮತ್ತೆ ಮಗುವಿನ ಮಾತಿಗೆ ಕತ್ತರಿ ಹಾಕಿದ ಆಕೆ ‘ಅಯ್ಯೋ ಹಾಗೆಲ್ಲಾ ಮಾಡಬಾರದು. ಬೆನ್ನಿನ ಕೊಳೆ ಉಗುರಲ್ಲಿ ಸೇರ್‍ಕೊಳತ್ತೆ. ಮೊದ್ಲು ಕೈತೊಳಿ ಸೋಪ್ ಹಾಕ್ಕೊಂಡು’ ಎಂದು ಬಚ್ಚಲು ಮನೆಗೆ ಎಳೆದೊಯ್ದಳು.

ಮುಖ ಸಪ್ಪೆ ಮಾಡಿಕೊಂಡ ವೃದ್ಧ ದಂಪತಿ ರೂಮಿನತ್ತ ನಡೆದರು. ಇದೆಲ್ಲವನ್ನೂ ಗಮನಿಸಿದ ಮಗ ಹೆಂಡತಿಯನ್ನುದ್ದೇಶಿಸಿ, ‘ಬೆನ್ನು ಕೆರೆಯೋದಕ್ಕೆ ಅದೊಂದು ಸ್ಟಿಕ್ ಬಂದಿದೆಯಲ್ಲ ತಂದುಕೊಟ್ಬಿಡು ನಾಳೆ’ ಅಂದ. ಅಲ್ಲಿಗೆ ಆ ದಿನ ಮುಗಿಯಿತು. ನಾಳೆಗೆ ಕೆರೆಯುವ ಸ್ಟಿಕ್ ಬರುತ್ತದೆ.


ಸ್ಪರ್ಶವಿಲ್ಲದ ಸುಖ

ಈಗ ವೃದ್ಧದಂಪತಿ ಕಳೆದ ಮೂರು ತಿಂಗಳಿನಿಂದ ವಾಸವಾಗಿರೋದು ವೃದ್ಧರಿಗಾಗೇ ಇರುವ ಹಾಸ್ಟೇಲ್ ಒಂದರಲ್ಲಿ. ಸುಮಾರು ಇಪ್ಪತ್ತು ಲಕ್ಷ ಕೊಟ್ಟು ಇಲ್ಲಿ ಅಪ್ಪ-ಅಮ್ಮನನ್ನು ಮಗ ಖಾಯಮ್ಮಾಗಿ ತಂದಿರಿಸಿದ್ದಾನೆ. ಮಕ್ಕಳು, ಮೊಮ್ಮಕ್ಕಳು ಇರುವುದಿಲ್ಲ ಜೊತೆಗೆ ಎನ್ನುವುದನ್ನು ಬಿಟ್ಟರೆ ಉಳಿದೆಲ್ಲ ಐಷಾರಾಮಿ ಸವಲತ್ತುಗಳು, ಸೇವೆಗಳು, ಮನರಂಜನೆ ೨೪ ಗಂಟೆಗಳ ಕಾಲ ಲಭ್ಯ. ಹದಿನೈದು ದಿನಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ಮಕ್ಕಳ ಸಂಸಾರ ಪೇರೆಂಟ್ಸ್ ಮೀಟ್‌ಗೆ ಬಂದು ಹೋಗುತ್ತದೆ. ಇದನ್ನು ವೃದ್ಧಾಶ್ರಮ ಎನ್ನಲಾಗದ್ದರಿಂದ ವೃದ್ಧರ ಹೈಟೆಕ್ ಹಾಸ್ಟೆಲ್ ಎನ್ನಬಹುದು.

ಇದು ಪುರುಸೊತ್ತಿಲ್ಲದ ಊರು ಬೆಂಗಳೂರಿನಲ್ಲಿರುವ ಮೇಲ್ಮಧ್ಯಮ ವರ್ಗದ ಸಂಸಾರವೊಂದರ ಚಿತ್ರಣ. ಓದು ಮುಗಿಯುತ್ತದೆ. ಕೆಲಸವೂ ಸಿಗುತ್ತದೆ. ಬೇಕೆಂದರೆ ಮದುವೆಯೂ ಸೈ. ಸಮಯವಿದ್ದರೆ ಸಲಹುವವರಿದ್ದರೆ ಮಕ್ಕಳು, ಇಲ್ಲದಿದ್ದರೆ ಅದೂ ಇಲ್ಲ. ಬಯಸಿದ್ದಕ್ಕಿಂತ ಹೆಚ್ಚೇ ಉಡಿ ತುಂಬುತ್ತ ಹೋದಂತೆ ಆಸೆಗಳ ಹಿಗ್ಗಾಟ. ಅವಕ್ಕೆ ತಕ್ಕಂತೆ ಗಾಣದೆತ್ತಾಗುವುದು. ದುಡಿಮೆ ಸಮಯ ನುಂಗಿ ಖಾಸಗಿ ಮತ್ತು ಕೌಟುಂಬಿಕ ಬದುಕಿನ ದಾರಿಯನ್ನು ಕಿರಿದುಗೊಳಿಸುತ್ತದೆ. ಆಗ ತಾನು ತನ್ನದಷ್ಟೇ ಎಂದು ಹೊರಟ ಪ್ರಯಾಣಿಕನಿಗೆ ಜೊತೆಗಿರುವವರು, ಹೊತ್ತು-ಹೆತ್ತ ಜೀವಗಳು ಲಗೇಜಿನಂತೆ ವಜ್ಜೆ ಎನ್ನಿಸಿ ಕೀಸರು ಹಿಡಿಸಿಬಿಡುತ್ತವೆ.

ಇಂಥ ಹಿರಿಥೈಲಿಯ ಕೀಸರನ್ನೇ ಕಾಯುತ್ತಿರುತ್ತವೆ ಮಹಾನಗರಿಯ ಕೆಲ ವಾಣಿಜ್ಯತಲೆಗಳು. ಆಗ ಹುಟ್ಟಿಕೊಳ್ಳುವುದೇ ಇಂಥ ಹೈಟೆಕ್ ವೃದ್ಧಾಶ್ರಮ ಅಥವಾ ಹಾಸ್ಟೆಲ್‌ಗಳು. ಇಂತಿಷ್ಟು ಲಕ್ಷ ಎಂದು ಈ ಹಾಸ್ಟೆಲ್‌ಗಳ ಕೊಕ್ಕೆಗೆ ರೊಕ್ಕ ಸಿಕ್ಕಿಸಿದರೆ ಕೊನೆಯವರೆಗೂ ಅಪ್ಪ-ಅಮ್ಮನನ್ನು ಜೋಪಾನವಾಗಿ ನೋಡಿಕೊಳ್ಳುತ್ತವೆ. ಇದಿಷ್ಟು ಇಂದಿನ ಜೀವನಶೈಲಿಯ ಮೇಲ್ಪದರ.

ಬಿತ್ತಿದಂತೆ ಬೆಳೆ

ಆದರೆ ಹೀಗೆ ಗೂಟ ಕಿತ್ತುಕೊಂಡು ಓಡುವ ಕುದುರೆಯನ್ನು ನಿಲ್ಲಿಸಿ ಆಗೊಮ್ಮೆ ಈಗೊಮ್ಮೆಯಾದರೂ ಯೋಚಿಸಲೇಬೇಕಲ್ಲ. ವೃದ್ಧಾಪ್ಯದಲ್ಲಿ ‘ಹೈಟೆಕ್‌ವಾಸ’ಕ್ಕೆ ತಳ್ಳಿದ್ದು ಪೂರ್ತಿ ಮಕ್ಕಳದ್ದೇ ತಪ್ಪಲ್ಲ. ಇದು ಪೋಷಕರ ಮೂಲ ಕೊಡುಗೆಯೂ ಆಗಿರಬಹುದು. ವೃದ್ಧಾಪ್ಯ; ಬೆಚ್ಚಗಿನ, ಭರವಸೆಯ ಸ್ಪರ್ಶ, ಆಲಿಸುವ ಕಿವಿ, ಹಿಡಿ ಪ್ರೀತಿಯನ್ನು ಮಕ್ಕಳಿಂದ ಬಯಸುತ್ತದೆಯೋ ಹಾಗೆ ಪೋಷಕರಿಂದ ಮಕ್ಕಳ ಬಾಲ್ಯವೂ ಬಯಸಿರುತ್ತದೆಯಲ್ಲವೆ? ಕೇವಲ ಸವಲತ್ತು, ಸೌಕರ್ಯಗಳನ್ನು ಪೂರೈಸಿದರೆ ಪೋಷಕತ್ವದ ಜವಾಬ್ದಾರಿ ಮುಗಿಯಿತು ಅಂತಲ್ಲ. ಕೌಟುಂಬಿಕ ಬಂಧವನ್ನು (ಬಾಂಡಿಂಗ್) ಅದು ಬೇಡುತ್ತದೆ. ಆ ಬಂಧ ಭವಿಷ್ಯದ ಪೀಳಿಗೆಗೂ ಬುನಾದಿ ಎನ್ನುವ ಪ್ರಜ್ಞೆಯಿಂದಾದರೂ ಪುರುಸೊತ್ತು ಮಾಡಿಕೊಂಡು ಯೋಚಿಸಲೇಬೇಕು.

ಸಣ್ಣಮಗುವೊಂದು ಕಾರುಗಳೊಂದಿಗೆ ಆಟವಾಡುವಾಗ ತಮಾಷೆಗೂ ಕೇಳದಿದ್ದರೆ ಸಾಕು; ನಮ್ಮನ್ನು ಯಾವಾಗ ಇಂಥ ಕಾರಿನಲ್ಲಿ ಕರೆದೊಯ್ಯುತ್ತೀಯಾ? ಅಥವಾ ಎದೆಯುದ್ದ ಬೆಳೆದ ಮಕ್ಕಳನ್ನು ಇಷ್ಟು ಮಾರ್ಕ್ಸ್ ತೆಗೆದುಕೊಂಡರೆ ನಿನಗೆಲ್ಲಿ ಕೆಲಸ ಸಿಗುತ್ತದೆ? ಅವರ ಮಗ ಅಮೆರಿಕದಲ್ಲಿ. ನೀನಿನ್ನೂ ಇಲ್ಲೇ. ಹೀಗೆ ತಲೆಯಲ್ಲಿ ಒಂದಿಲ್ಲಾ ಒಂದು ಆಸೆ, ನಿರೀಕ್ಷೆಗಳ ಕೋಸಂಬರಿಯನ್ನು ಸದಾ ಕಲಸುತ್ತಾ ಇದ್ದರೆ ಬಂಧ ಹೇಗೆ ಬೆಳೆದೀತು? ಬದುಕು ಹೇಗೆ ರುಚಿ ಕಟ್ಟೀತು?

ಸರಳ ಬದುಕು ಮತ್ತು ಅದಕ್ಕೆ ಬೇಕಿರುವ ಅವಶ್ಯಕ ಸಂಗತಿ-ಸರಕುಗಳು ಸಾಕಲ್ಲವೇ. ಅದರಾಚೆಗಿನ ಆಡಂಬರ, ಪ್ರದರ್ಶನ ಬೇಕಿಲ್ಲವಲ್ಲ? ಜೀವನದ ಸಾರ್ಥಕತೆಗೆ ಬೇಕಿರುವುದು ಅರ್ಥಪೂರ್ಣ ಕನಸು ಮತ್ತು ಅವುಗಳ ಈಡೆರಿಕೆಯ ಕ್ರಮ. ಪೋಷಕರು ಈ ಬುನಾದಿ ಹಾಕಿಕೊಡದಿದ್ದರೆ ಖಂಡಿತ ಕನಸು ಮತ್ತು ಆಸೆಯ ನಡುವಿನ ತೆಳುಗೆರೆ ಅಳಿಸಿ ಆವಿಯಂಥ ಧೂಳು ಎದ್ದೀತು. ಹಾಗೆ ಎದ್ದಿದ್ದು ಕ್ರಮೇಣ ಕಣ್ಣುಗಳನ್ನಾವರಿಸಿಬಿಟ್ಟರೆ ಬದುಕಿನ ಗಡಿಯಾರ ನಿಂತಂತೆ.

ನಾವೆಂಬಲ್ಲಿ ಬೆಳಕು

ಅಪ್ಪ ನೆಟ್ಟ ಆಲದ ಮರಕ್ಕೇ ನೇತು ಹಾಕಿಕೊಳ್ಳುವಂಥ ಮನಸ್ಥಿತಿಯಲ್ಲೇನೂ ಇಂದಿನ ಮಕ್ಕಳಿಲ್ಲ. ಸೂಕ್ಷ್ಮ , ವಿಚಾರವಂತ, ವಿಶೇಷ ಕನಸು, ಗುರಿಗಳನ್ನಿಟ್ಟುಕೊಂಡವರು ಇಂದಿನ ಮಕ್ಕಳು. ತಾನು ತನ್ನದಷ್ಟೇ ಎನ್ನದೆ ಕುಟುಂಬದೊಳಗೆ ನಾನು ಎಂದುಕೊಂಡಲ್ಲಿ ಪರಸ್ಪರ ನೊಂದುಕೊಳ್ಳುವ ಪ್ರಮೇಯವಿರುವುದಿಲ್ಲ. ಬದಲಾದ ಜೀವನಶೈಲಿ ಆದ್ಯತೆಗಳಿಗೆ ಅನುಸಾರವಾಗಿ ಪೋಷಕರು ಮತ್ತು ಮಕ್ಕಳು ಪರಸ್ಪರ ಚರ್ಚಿಸಿ ನಿರ್ಧರಿಸಿದಲ್ಲಿ , ಮಾಡಿಕೊಳ್ಳಬೇಕಾದ ಬದಲಾವಣೆಗಳಿಗೆ ಮುಕ್ತವಾಗಿ ತೆರೆದುಕೊಂಡಲ್ಲಿ ಸಧ್ಯದ ಮತ್ತು ನಾಳೆಯ ದಿನಗಳಲ್ಲಿ ಬೆಳಕ ಕಾಣಬಹುದಲ್ಲವೆ?

-------------------------
ಒಪ್ಪಿಕೊಳ್ಳಲೇಬೇಕು ವಾಸ್ತವ

ವೈಭೋಗ ಜೀವನ ಶೈಲಿಯ ಹೆಚ್ಚುತ್ತಿರುವುದರಿಂದ ಮಕ್ಕಳೇ ಮನೆಗೆ ಅತಿಥಿಗಳಂತಾಗುತ್ತಿದ್ದಾರೆ ಎನ್ನುವ ಸತ್ಯಸಂಗತಿಯನ್ನು ಒಪ್ಪಿಕೊಳ್ಳಲೇಬೇಕಿದೆ. ‘ನಿಮ್ಮ ಕೂದಲು ಬೆಳ್ಳಿಗೆ ತಿರುಗುತ್ತಿವೆ ಎನ್ನುವಾಗ ನಿಮ್ಮ ಜೇಬಿನಲ್ಲಿ ಬಂಗಾರವಿರಲಿ’ ಅನ್ನೋ ಹಾಗೆ ನಿಮ್ಮ ವೃದ್ಧಾಪ್ಯ ಮತ್ತು ಜೀವನ ಕ್ರಮಕ್ಕೆ ನೀವುನೀವೇ ಜವಾಬ್ದಾರರು. ಆರ್ಥಿಕ ಭದ್ರತೆ ನಿಮ್ಮ ಉಳಿತಾಯದಿಂದಲೋ ಅಥವಾ ಮಕ್ಕಳಿಂದಲೋ ದೊರೆಯಬಹುದು. ಆದರೆ ಐವತ್ತು ದಾಟಿದವರಿಗೆ ಕಾಡೋದು ಭಾವನಾತ್ಮಕ ಅಭದ್ರತೆ. ಅದರಲ್ಲೂ ಪುರುಷರಲ್ಲಿ ಇದು ಹೆಚ್ಚು. ಮೊದಲೇ ಬಾಂಡಿಂಗ್ ಸೃಷ್ಟಿಯಾಗಿದ್ದರೆ ಖಂಡಿತ ಮಕ್ಕಳು ಕೈಹಿಡಿಯುತ್ತಾರೆ. ಇಲ್ಲದಿದ್ದರೆ ಇಲ್ಲ. ಹಾಗೆಂದು ಕೊರಗಬೇಕಿಲ್ಲ. ವಾಸ್ತವ ಒಪ್ಪಿಕೊಂಡು ಮನಸ್ಸು, ದೇಹವನ್ನು ಆರೋಗ್ಯದಿಂದಿಟ್ಟುಕೊಳ್ಳಲೇಬೇಕು.

ಊರು, ಕಟ್ಟಿಸಿದ ಮನೆ ಬಿಟ್ಟು ಮಕ್ಕಳಿದ್ದಲ್ಲಿಗೆ ಹೋಗಬೇಕು ಎಂದು ಸಂಕುಚಿತರಾಗಿ ಯೋಚಿಸಬೇಕಿಲ್ಲ. ಹಾಗೇ ಮಕ್ಕಳೆನಿಸಿಕೊಂಡವರು ತಮ್ಮ ಮಕ್ಕಳ ಲಾಲನೆ ಪೋಷಣೆ ಹೊತ್ತಿಗೆ ತಂದೆ-ತಾಯಿ, ಅತ್ತೆ-ಮಾವನ ಬಳಿ ಓಡಿಹೋಗುವುದೂ ಸೂಕ್ತವಲ್ಲ. ಕಾಲಕಾಲಕ್ಕೆ ಕುಟುಂಬದಲ್ಲಿ ಬಾಂಡಿಂಗ್ ಅನ್ನೋದು ಅಪ್‌ಡೇಟ್ ಆಗ್ತಾ ಗಟ್ಟಿಗೊಳ್ತಾ ಇದ್ರೆ ಯಾರೊಬ್ಬರೂ ಪರಸ್ಪರ ಕೊರಗಬೇಕಾಗುವುದಿಲ್ಲ. ನೊಂದುಕೊಳ್ಳಬೇಕಾಗಿಲ್ಲ
-ಶ್ರೀ ನಾಗೇಶ್, ಆಪ್ತಸಲಹೆಗಾರ.

-----------------------------

-ಶ್ರೀದೇವಿ ಕಳಸದ
(ವಿಜಯ ಕರ್ನಾಟಕ ೨೬/೨/೨೦೧೨ ’ಸುಖಿ ವಿಜಯ’)

Friday, February 17, 2012

ದಾಟಬೇಕು ಹಳಹಳಿಕೆಯ ಹಳಿ

’ಹೌದಪ್ಪ ಹೌದೋ ನೀನೇ ದೇವರಾ. ನಿನ್ನ ನೀ ತಿಳಿದರ ನಿನಗಿಲ್ಲೋ ದೂರ...’ ಶಿಶುನಾಳ ಶರೀಫರ ಈ ಸಾಲಿನೊಳಗೊಮ್ಮೆ ಒಳಹೊಕ್ಕು ನೋಡಿ. ಕಾಲಕ್ಕೆ ತಕ್ಕಂತೆ ನಮ್ಮನ್ನು ನಾವೇ ನೋಡಿಕೊಳ್ಳಲು ’ವಾಸ್ತವ’ ಅನ್ನೋ ಕನ್ನಡಿ ಜೇಬಲ್ಲಿಟ್ಟುಕೊಳ್ಳಲೇಬೇಕು.ಮನೆಯ ತುಂಬೆಲ್ಲ ಗಂಧ ಪರಿಮಳ. ದೇವರ ಮುಂದೆ ದೀಪಗಳ ಸೊಬಗು... ಸೌಂದರ್ಯ ಪ್ರಜ್ಞೆಯಿಂದಲೋ, ಭಕ್ತಿಯಿಂದಲೋ ಆ ದೇವರ ಅಲಂಕಾರ ಮತ್ತೂ ನೋಡಬೇಕೆನ್ನಿಸುವಷ್ಟು ಚೆಂದ. ಐವತ್ತರ ಆಕೆಗೆ ಪೂಜೆಗೆ ಮಾರು ಹೂವು ಬೇಕೇಬೇಕು. ಮಳಕ್ಕೆ ಐದು ರೂಪಾಯಿಯಿಂದ ಇಪ್ಪತ್ತು ರೂಪಾಯಿಯಾದರೂ ಸರಿ. ಬೆಳ್ಳಿಮೂರ್ತಿಗಳನ್ನು ಶುಚಿಗೊಳಿಸುವುದೇನು, ತಾಮ್ರದ ಮೂರ್ತಿಗಳನ್ನು ಫಳಫಳ ಎನ್ನಿಸುವುದೇನು, ಎಲ್ಲಿಯೂ ಚುಕ್ಕೆಕೊಳೆ ಕಾಣದಂತೆ ಮಾಡುವಲ್ಲಿ ಆಕೆಯ ದೇಹ ಯಂತ್ರವೇ.

ಆದರೆ ಆಕೆಯ ಮನಸ್ಸು, ಮಾತು ಮಾತ್ರ....; ಹಿಂದೆ ಯಾವತ್ತೋ ಯಾರೋ ಏನೋ ಅಂದಿದ್ದನ್ನೋ, ಅಕಸ್ಮಾತ್ ಘಟಿಸಿದ್ದನ್ನೋ, ಚಿನ್ನದಂಗಡಿಯವ ಮೋಸ ಮಾಡಿದ್ದನ್ನೋ, ಸಂಬಂಧಿಕರ ವರ್ತನೆಯನ್ನೋ, ತಡವಾಗಿ ಏಳುವ ಸೊಸೆ ಅವಸರದಲ್ಲಿ ಚೊಕ್ಕಟವಾಗಿ ಅಂಗಳ ಗುಡಿಸಿಲ್ಲ , ಪಲ್ಯಕ್ಕೆ ಹುಳಿ ಜಾಸ್ತಿ ಹಾಕಿದ್ದನ್ನೋ... ಹೀಗೆ ಆಗಿಹೋಗಿದ್ದನ್ನು ಮರೆಯದೇ, ಆಗಬೇಕಿರುವುದನ್ನು ವಿಪರೀತ ಊಹಿಸಿಕೊಳ್ಳುತ್ತ ತಕರಾರಿನ ನಾಮಾವಳಿ ಹರಿಬಿಡುವ ಅವಳ ಧ್ವನಿ ತಾರಕದಿಂದ ಇಳಿಯುವುದೇ ಇಲ್ಲ; ಇದು ಅವಳ ಪೂಜಾಸಮಯ!

ಹೂವು ತುಟ್ಟಿಯಾದ ಕಾಲದಲ್ಲೂ ದೇವರಿಗೆ ಮಾರು ಮಲ್ಲಿಗೆಯೇ ಬೇಕೆ? ದೇವರಿಗೆ ಹೀಗೆ ಬಾಹ್ಯ ಅಲಂಕಾರ ಮಾಡುವುದರಿಂದ ನಿಮ್ಮ ಮನ ಸಂತುಷ್ಟಗೊಳ್ಳುತ್ತದೆ ಎಂದರೆ ಅದು ಒಳ್ಳೆಯದೇ. ಆದರೆ ಪೂಜಿಸುವಾಗ ಇಷ್ಟೊಂದು ಕೋಪ-ತಾಪ-ಮಾತುಗಳೆಲ್ಲ ಬೇಕೆ? ಮನಶಾಂತಿಗಾಗಿ ಅಲ್ಲವೆ ಪೂಜೆ? ಹೀಗೆಲ್ಲ ಅವಳಿಗೆ ಕೇಳಿದರೆ, ’ದೇವರಿಗೆ ನಾವೆಷ್ಟು ಖರ್ಚು ಮಾಡುತ್ತೇವೋ ಅದರ ದುಪ್ಪಟ್ಟು ಫಲ ಅವ ಕೊಡುತ್ತಾನೆ’ ಎಂದು ಕರಾರುವಕ್ಕಾಗಿ ಹೇಳುವಾಗ ಆಕೆಯ ಅಸಹನೆ ಮರೆಯಾಗದು.

ಸರಿ, ಮೌನವಾಗಿಯೋ, ದೇವಸ್ತುತಿಯ ಮೂಲಕವೋ ಪೂಜೆ ಮಾಡಬಹುದಲ್ಲವೆ? ಎಂದರೆ ಆಕೆ ನಿರುತ್ತರಳಾಗುತ್ತಾಳೆ. ಈ ಪಿಳ್ಳೆಯಿಂದ ನನಗೆ ಬುದ್ಧಿಮಾತಾ? ಇಷ್ಟು ವರ್ಷ ಮನೆ ನಿಭಾಯಿಸಿದ ನಾನು ಇವಳಿಗೆ ತಲೆ ಅಲ್ಲಾಡಿಸಬೇಕಾ? ಎಂದು ಮತ್ತಷ್ಟು ಕುದಿಯತೊಡಗುತ್ತಾಳೆ. ಆಗ ಮತ್ತದೇ ಹಳಹಳಿಕೆ. ಚುಚ್ಚು ಮಾತು, ದೂರು...

ಒಟ್ಟಿನಲ್ಲಿ ತಾನೂ ಸುಮ್ಮನಿರದೇ ಇತರರನ್ನೂ ಸುಮ್ಮನಿರಲು ಬಿಡದೆ ನಕಾರಾತ್ಮಕ ವಲಯವನ್ನು ಆಕೆ ಸೃಷ್ಟಿಸಿಬಿಟ್ಟಿದ್ದಾರೆ. ಇವರ ಈ ದಿನಚರಿ ಮನೆಮಂದಿಯವರೆಲ್ಲ ರ ಮನಸ್ಸನ್ನು ಈಗಾಗಲೇ ಮುದುಡಿಸಿದ್ದಿದೆ. ಕ್ರಮೇಣ ಅವರೆಲ್ಲರಿಂದ ನಿರ್ಲಕ್ಷ್ಯಕ್ಕೂ ಒಳಗಾಗಿದ್ದಾರೆ. ಇದೆಲ್ಲ ಆಕೆಯ ಅರಿವಿಗೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಆಕೆ ನೆಮ್ಮದಿಯಿಂದ ಇಲ್ಲ ಎನ್ನಬಹುದು.

***

ಮೇಲೆ ಉಲ್ಲೇಖಿಸಿರುವ ಈ ’ದಿನಚರಿ’ಯ ಸಾಲುಗಳಲ್ಲಿ ನಿಮ್ಮ ಅಮ್ಮ, ಅತ್ತೆ, ಅಕ್ಕ, ಅಜ್ಜಿ ಅಷ್ಟೇ ಯಾಕೆ ಅಪ್ಪ, ಮಾವ, ಅಜ್ಜ ಹೀಗೇ ಯಾರಾದರೂ ಕಾಣಸಿಗಬಹುದು. ಇಲ್ಲಿ ಪೂಜೆ ಎನ್ನುವುದು ಸಾಂಕೇತಿಕ. ಪೂಜೆಯ ಬದಲಾಗಿ ಅದು ದಿನಿತ್ಯದ ಬೇರಾವುದೇ ಚಟುವಟಿಕೆಯಲ್ಲಿ ಅದು ವ್ಯಕ್ತವಾಗುತ್ತಿರಬಹುದು. ಇಲ್ಲಿ ಗಮನಿಸಬೇಕಾದದ್ದು ಅವರ ವಯೋಸಹಜ ದೈಹಿಕ ಮತ್ತು ಮನೋಸಮಸ್ಯೆ ಮತ್ತು ಹಲವು ವರ್ಷಗಳಿಂದ ಪೋಷಿಸಿಕೊಂಡುಬಂದ ನಂಬಿಕೆ ಹಾಗೂ ಚಲಾವಣೆಯಲ್ಲಿಲ್ಲದ ಸಮರ್ಥನೆಗಳನ್ನು. ಎಲ್ಲಕ್ಕಿಂತ ಮುಖ್ಯವಾಗಿ ಬದಲಾವಣೆಗೆ ತೆರೆದುಕೊಳ್ಳದ ಸಂಕುಚಿತ ಮನಸ್ಸನ್ನು.

ಅವರು ಹೀಗೇಕೆ?
ಮದುವೆಯಾದಾಗಿನಿಂದಲೂ ಆಕೆ ಗಂಡ,ಮಕ್ಕಳು, ಮನೆಗೆಲಸದ ಹೊರತಾಗಿ ಕಣ್ಣಾಡಿಸಿದ್ದೇ ಇಲ್ಲ. ಹೊರಜಗತ್ತಿಗೆ ತೆರೆದುಕೊಳ್ಳದ ಆಕೆಗೆ ವರ್ತಮಾನದ ಕಾವು ಬಡಿದಿಲ್ಲ. ತನ್ನ ಮನೆಗೆ ತಾನೇ ಸಾಮ್ರಾಜ್ಞಿ. ಎಲ್ಲರನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳುತ್ತ ಅಸ್ತಿತ್ವ ಕಾಯ್ದುಕೊಂಡಿದ್ದಾಳೆ. ಆದರೆ ಮಕ್ಕಳ ಸಂಸಾರ ಬೆಳೆಯುತ್ತಿದ್ದಂತೆ ಅವರವರ ಜೀವನಕ್ರಮ, ಆದ್ಯತೆ, ಧೋರಣೆ ಕಾಲಮಾನಕ್ಕೆ ತಕ್ಕಂತೆ ಬದಲಾದಾಗ ಆಕೆಯ ಅಸ್ತಿತ್ವದ ಬೇರು ಅಲ್ಲಾಡತೊಡಗಿದೆ. ತಲೆಮಾರಿನ ನಂಬಿಕೆಗಳಿಗೆ ಜೋತುಬಿದ್ದು, ಮನಸ್ಸು ಕಿರಿದು ಮಾಡಿಕೊಳ್ಳುತ್ತ ಅಸಹನೆ, ಅಶಾಂತಿಯನ್ನು ವಿನಾಕಾರಣ ಒಳಗು ಮಾಡಿಕೊಂಡಿದ್ದಾರೆ. ಇದಿಷ್ಟು ಮೇಲ್ಪದರು.

ಮನೋಚಿಕಿತ್ಸಕ ಡಾ. ವಿನೋದ ಛೆಬ್ಬಿ ಈ ಸಮಸ್ಯೆಗೆ ವಿವರಣೆ ನೀಡುವುದು ಹೀಗೆ, ’ಇದೊಂದು ಮನೋರೋಗ. ಔಷಧಿ ಕೊಡಬೇಕಾಗಿಲ್ಲ. ಮನಸ್ಸಿಗೆ ಚಿಕಿತ್ಸೆ ಬೇಕು. ಇವರು ಆರೋಗ್ಯವಂತರೇ. ಸಮಸ್ಯೆಗಳಿಂದ ಪೀಡಿತರಾಗಿ ತಮ್ಮದೇ ಆದ ಅನುಭವದಿಂದ ಕಂಡುಕೊಂಡ ಮಾರ್ಗವನ್ನು ಅನುಸರಿಸುತ್ತ ಹೋಗುತ್ತಿದ್ದಾರೆ. ಈ ಮಾರ್ಗ ನಿಷ್ಪ್ರಯೋಜಕ ಎಂದು ಗೊತ್ತಿದ್ದರೂ ಬೇರೆ ಮಾರ್ಗ ಕಂಡುಕೊಳ್ಳಲು ವ್ಯವಧಾನ, ತಾಳ್ಮೆ ಇವರಲ್ಲಿಲ್ಲ. ಆದ್ದರಿಂದ ಈ ಮಾರ್ಗದಲ್ಲೇ ಮುಂದುವರಿಯುತ್ತಿದ್ದಾರೆ. ಹಲವಾರು ವರ್ಷಗಳಿಂದ ಪೋಷಿಸಿಕೊಂಡು ಬಂದ ನಂಬಿಕೆ ಮುರಿದರೆ ಏನಾದರೂ ಅವಘಡವಾದೀತು ಎನ್ನುವ ಭಯ ಇವರಲ್ಲಿ ಬೇರೂರಿದೆ’.

’ಎಡಕ್ಕೆಷ್ಟು, ಬಲಕ್ಕೆಷ್ಟು ಹೂ ಏರಿಸಬೇಕು? ಅದು ತಪ್ಪಿದರೆ ಏನಾಗುತ್ತದೋ ಎಂಬ ಆತಂಕ. ಅದನ್ನು ಹೋಗಲಾಡಿಸಿಕೊಳ್ಳಲು ದೇವರಿಗೆ ಜಾಸ್ತಿ ಹೂ ಏರಿಸುವ ನೆಪ. ವಾಸ್ತವಿಕ ನೆಲೆಯಲ್ಲಿ ಯೋಚಿಸಲಾರದ ಇವರಿಗೆ ನೀವು ರೂಢಿಸಿಕೊಂಡಿರುವುದು ಮೂಢನಂಬಿಕೆ ಎಂದರೆ ಉರಿದೇಳುತ್ತಾರೆ. ಸೂಕ್ತ ಕಾಲಕ್ಕೆ ಚಿಕಿತ್ಸೆ ನೀಡದ ಕಾರಣ ಭಯ, ಆತಂಕ ಗೀಳುರೋಗವಾಗಿ ಮಾರ್ಪಾಡಾಗಿದೆ. ಪೂಜೆ ಬಹಿರ್ಮುಖ ಚಟುವಟಿಕೆ. ಪೂಜೆಯಿಂದ ತೃಪ್ತಿ ಇಲ್ಲ. ಆದರೂ ಇದರಿಂದ ಹೊರಬರಬೇಕು ಎನ್ನುವುದನ್ನು ಅವರು ಯೋಚಿಸುತ್ತಿಲ್ಲ. ಮಾರುಮಾರು ಹೂವು ಏರಿಸಿ ಪೂಜಿಸುವುದನ್ನು ಬಿಟ್ಟು ಅವರು ಆತ್ಮವಿಶ್ಲೇಷಣೆ ಮಾಡಿಕೊಳ್ಳಬೇಕಿದೆ.’

ಇದಕ್ಕೆ ಕಾರಣ

’ಈ ಸಮಸ್ಯೆಗೆ ಶೈಶವಾವಸ್ಥೆಯಲ್ಲಿ ದೊರೆತ ಪರಿಸರ, ಸಂಸ್ಕಾರವೂ ಕಾರಣ. ಕುತೂಹಲದ ಅನ್ವೇಷಣೆ, ಅದರದೇ ಆದ ಸಾಮರ್ಥ್ಯ ಮಗುವಿಗಿರುತ್ತದೆ. ಆದರೆ ಅದನ್ನು ಅರಿಯದ ಬಹುಪಾಲು ಪೋಷಕರು ಅವರ ಸಾಮರ್ಥ್ಯಗಳನ್ನು ಮೂಲೆಗೆ ಸರಿಸುತ್ತಾರೆ. ಪೋಷಕರ ಸಂದೇಶಗಳನ್ನು ಭಾವನಾತ್ಮಕವಾಗಿಯಷ್ಟೇ ಸ್ವೀಕರಿಸುವ ಮಗು ನಕಾರಾತ್ಮಕ ಅಂಶಗಳೊಳಗೆ ಬಂಯಾಗುತ್ತಾ ಹೋಗುತ್ತದೆ. ಆದರೆ ಕ್ರಮೇಣ ಮಗು ಬೆಳೆದಂತೆ ವೈಚಾರಿಕ, ತರ್ಕಬದ್ಧ ಆಲೋಚನೆಗಳನ್ನು ವ್ಯಕ್ತಪಡಿಸಿದಾಗಲೂ ಪೋಷಕರು ಮಗುವಿಗೆ ಪೂರಕವಾಗಿ ಸ್ಪಂದಿಸದೇ ಇದ್ದಾಗ ಹಿರಿಯರ ನಕಾರಾತ್ಮಕ ಸಂದೇಶಗಳನ್ನೇ ಅದು ಹೊದ್ದುಕೊಳ್ಳುತ್ತಾ ಹೋಗುತ್ತದೆ. ವಯಸ್ಸಿಗೆ ಅನುಗುಣವಾಗಿ ತನ್ನೊಳಗಿನ ಆತಂಕ, ಭಯಕ್ಕೆ ಆಧಾರ ಹುಡುಕಿಕೊಳ್ಳುತ್ತದೆ. ಮುಂದೆ ಬೆಳೆದಂತೆ ಆ ವ್ಯಕ್ತಿ ತನ್ನ ವಿಚಾರವೇ ಸರಿ ಎಂಬ ವಾದ ಮತ್ತು ಅದಕ್ಕೆ ಆಧಾರಗಳನ್ನು ನೀಡುತ್ತ ’ಪ್ರಬಲ ’ವ್ಯಕ್ತಿತ್ವ ರೂಢಿಸಿಕೊಳ್ಳುತ್ತಾನೆ.

ಅವರನ್ನು ಮಗುವಿನಂತೆ ನೋಡಿ

*ಇಂಥ ಮನಸ್ಥಿತಿಯವರಿಗೆ ಬೇಕಿರುವುದು ಮನೆಮಂದಿಯ, ಸ್ನೇಹಿತರ ಸಾಂತ್ವನ, ಸಮಾಧಾನ. ತಮ್ಮ ಭಯ, ಆತಂಕ ಮುಚ್ಚಿಡಲು ಅವರು ಯಾವುದೇ ಮಾರ್ಗವನ್ನು ಅನುಸರಿಸುತ್ತಿದ್ದರೂ ಅದು ತಪ್ಪಲ್ಲ ಎಂದು ನೇರವಾಗಿ ಹೇಳಕೂಡದು.

*ನೀನು ಮಾಡುತ್ತಿರುವುದು ಸರಿಯಾಗಿಯೇ ಇದೆ ಎನ್ನುತ್ತ ನಿಧಾನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ತರಕಾರಿ ತಿನ್ನದ ಮಕ್ಕಳಿಗೆ, ಅವು ಇಷ್ಟಪಡುವ ಪದಾರ್ಥದಲ್ಲಿ ಅದನ್ನು ಹುದುಗಿಸಿ, ಕಣ್ಣುತಪ್ಪಿಸಿ ತಿನ್ನಿಸುತ್ತೇವಲ್ಲ ಹಾಗೆ. ಪರೋಕ್ಷವಾಗಿ ತಾವೇ ತಾವಾಗೇ ಸಮಸ್ಯೆಗಳಿಂದ ಹೊರಬರುವಂತೆ ಮಾಡಬೇಕು.

*ಮನಶಾಂತಿ ಕಂಡುಕೊಳ್ಳುವುದು ಧ್ಯಾನದಲ್ಲಿ, ಕಾಯಕದಲ್ಲಿ, ಸೇವೆಯಲ್ಲಿ, ಸಾಮರಸ್ಯದಲ್ಲಿ, ಹವ್ಯಾಸದಲ್ಲಿ, ಸಾಧನೆಯಲ್ಲಿ ದೆ ಎನ್ನುವುದನ್ನು ಚಿಕ್ಕಪುಟ್ಟ ನಿದರ್ಶನ, ಉದಾಹರಣೆ ಮೂಲಕ ವಿವರಿಸಬಹುದು. ನಿಮಗಿರುವ ಸಮಸ್ಯೆ ಏನೂ ಅಲ್ಲ. ಇದು ಮನಸ್ಸಿಗೆ ಸಂಬಂಧಿಸಿದ್ದು. ಆದರೆ ವಾಸ್ತವ ಜಗತ್ತಿನಲ್ಲಿ ಪರಿಹಾರಗಳಿಲ್ಲದ ಎಷ್ಟೋ ಸಮಸ್ಯೆಗಳಿವೆ. ಅವುಗಳೊಂದಿಗೆ ಆತ್ಮವಿಶ್ವಾಸದಿಂದ ಬದುಕುತ್ತಿರುವವರು ಎಷ್ಟೋ ಜನರಿದ್ದಾರೆ ಎನ್ನುವುದನ್ನು ಸಾಕ್ಷ್ಯಗಳೊಂದಿಗೆ ಮನದಟ್ಟು ಮಾಡಿಕೊಡಬೇಕು. ಸಾಧ್ಯವಾದಲ್ಲಿ ಅನಾಥಾಶ್ರಮ, ಅಬಲಾಶ್ರಮಗಳಿಗೂ ಕರೆದೊಯ್ಯಿರಿ.

*ಅವರಲ್ಲಿರುವ ಪ್ರತಿಭೆ, ಹವ್ಯಾಸ, ಸಕಾರಾತ್ಮಕ ಗುಣವನ್ನು ಗುರುತಿಸಿ ಅದನ್ನು ಬೆಳೆಸುವತ್ತ ಪ್ರೇರೇಪಿಸಬೇಕು. ಸಮಾನ ಆಸಕ್ತರೊಂದಿಗೆ ಸಂಪರ್ಕ ಸಾಧಿಸುವಿಕೆ ಮತ್ತು ಕಲಿಕೆಗೂ ವಯಸ್ಸಿಗೂ ಸಂಬಂಧವಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡಿ.

*ಪ್ರತಿಯೊಬ್ಬರದೂ ಒಂದಿಲ್ಲಾ ಒಂದು ಆತಂಕ, ಭಯದ ಬದುಕು. ಆದರೆ ಅವು ನಮ್ಮನ್ನೇ ನುಂಗಿಹಾಕದಂತೆ ಎಚ್ಚರ ವಹಿಸಬೇಕು. ಭಯಕ್ಕೆ, ಆತಂಕಕ್ಕೆ ತಳ್ಳಿದ ಸಂದರ್ಭ ಮತ್ತು ಕಾರಣರಾದವರನ್ನು, ಪರಿಸರವನ್ನು ಹಳಿಯುವುದಕ್ಕಿಂತ ಅದರಿಂದ ಹೊರಬಂದು ನನ್ನ ಜೀವನದ ಸಾರಥಿ ನಾನೇ ಎಂಬುದನ್ನು ನಿರ್ಧರಿಸಿ. ಕಾಲಕಾಲಕ್ಕೆ ನಂಬಿಕೆಗಳನ್ನು ಬದಲಾಯಿಸಿಕೊಳ್ಳಬೇಕು. ವಾಸ್ತವದ ಕನ್ನಡಿಯೊಳಗೆ ಇಣುಕಬೇಕು. ಆಗಷ್ಟೇ ಹಳಹಳಿಕೆಯ ಹಳಿದಾಟಿ ಮತ್ತೆ ಮತ್ತೆ ಮಗುವಾಗುತ್ತೀರಿ. ಅಸ್ತಿತ್ವ ಕಾಯ್ದುಕೊಂಡಷ್ಟೂ
ಸದಾಕಾಲವೂ ಚಿರಯೌವನ ನಿಮ್ಮ ಉಡಿಯೊಳಗೇ.

-ಶ್ರೀದೇವಿ ಕಳಸದ
(ವಿಜಯ ಕರ್ನಾಟಕದ ’ಸುಖಿ ವಿಜಯ’ದಲ್ಲಿ ಪ್ರಕಟ ೧೫-೦೧-೨೦೧೨)

Friday, February 10, 2012

ಅವರ್‍ದೂ ಕೇಳೋಣ ಇವರ್‍ದೂ ಕೇಳೋಣ...

ಅಟ್ಟದ ಮೇಲೆ ಅದ್ಯಾರದೋ ಆಲಾಪ. ಮೂಲೆ ಮನೇಲಿ ರಾಕ್‌ಮ್ಯೂಸಿಕ್‌, ಅವತ್ತೊಂದು ದಿನ ಹಳ್ಳಿಗೆ ಹೋದ್ರೆ ಏನ್‌ ಛಂದ ನಾಟಕದ ಹಾಡು... ಇವನ್ನೆಲ್ಲಾ ಬೆಂಗಳೂರಲ್ಲಿ ಕೇಳಬೇಕಾ ಹುಡುಗ್ರೇ; ಹಾಗಿದ್ರೆ ನೀವೂ ಬಂದ್ಬಿಡಿ ಹುಡುಗೀರೇ. ಕನ್‌ಫ್ಯೂಸ್‌ ಬೇಡ ಇದು ಫ್ಯೂಶನ್‌ ಅಲ್ಲ. ಹಾಗಿದ್ರೆ...?ನಾದ ಎಲ್ಲಿಲ್ಲ; ಮಿಕ್ಸಿ, ವಾಶಿಂಗ್ ಮಶೀನ್, ಫ್ರಿಡ್ಜ್? ಫ್ಯಾನ್, ಓಣಿಯಲ್ಲಿರೋ ಗಿರಣಿ, ದೂರದಲ್ಲಿ ಕೇಳೋ ಜನರೇಟರ್ ಹೀಗೆ... ಇದೆಲ್ಲಾ ಕರ್ಕಶವೇ, ಶುದ್ಧ ಗದ್ದಲ. ಆದರೆ ಕೇಳುವ ಕಿವಿಗೆ, ಹುಡುಕುವ ಮನಸುಗಳಿಗೆ ಇವುಗಳ ಗದ್ದಲದಲ್ಲೂ ನಾದ ಕೇಳುತ್ತದಲ್ಲ.... ಕಂಪ್ಯೂಟರ್‌ನ ಪ್ರೊಸೆಸರ್ ಫ್ಯಾನ್‌ ನದಿಯ ನಾದದಂತೆ ಅನ್ನಿಸಬಹುದು. ಬಸ್‌, ಲಾರಿ ಶಬ್ದ ಆಲಿಸುತ್ತಾ ಹೋದರೆ ಅಲ್ಲೊಂದು ಶ್ರುತಿಯೂ ಖಂಡಿತ ಸಿಕ್ಕೀತು.

ಬೋಲೂ ಇರಲಿ ಬೀಟೂ ಇರಲಿ

ನಿಜ. ನಾವೆಲ್ಲ ಗದ್ದಲಪುರದಲ್ಲಿದ್ದುಕೊಂಡೇ ಒಂದಿಲ್ಲಾ ಒಂದು ನಾದದ ಗುಂಗು ಹಿಡಿಸಿಕೊಂಡವರು. ಯಾವುದೇ ಪ್ರಕಾರದ ಸಂಗೀತ ಕೇಳ್ಮೆ, ಕಲಿಕೆ, ಪ್ರಸ್ತುತಿಗೆ ತೊಟ್ಟಿಲಂತೆ ಬೆಂಗಳೂರು. ಆಯಾ ಪ್ರಕಾರಕ್ಕೆ ತಕ್ಕಂತೆ ಹೊಸ ಪೀಳಿಗೆಯ ಶ್ರೋತೃಸೃಷ್ಟಿ ಅದರೊಳಗೆ. ಆ ಸಂಗೀತ ಬೇಕು. ಈ ಸಂಗೀತ ಬೇಡ ಅನ್ನೋದು ಮಾತ್ರ ಖಾಯಂ ಜೋಗುಳ.

ಆದರೆ ಪ್ರತಿಯೊಂದೂ ಸಂಗೀತಕ್ಕೂ ಅದರದೇ ಆದ ಸೊಗಸು ಶೈಲಿಯಿದೆ. ವಿಭಿನ್ನ ಸಿಹಿಗಳನ್ನು ಒಂದೇ ತಟ್ಟೆಯಲ್ಲಿಟ್ಟರೂ ಸಿಹಿ ಪಲ್ಲಟವಾಗದೇ ಸವಿಯೋದ್ರಲ್ಲೇ ಸ್ವಾರಸ್ಯ ಇರೋದಲ್ವೇ? ಪಕ್ಕವಾದ್ಯವಾಗಿಬಿಟ್ಟಿರುವ ರೀಡ್ಸ್ ವಾದ್ಯಗಳನ್ನು ‘ಪಕ್ಕಾ’ ವಾದ್ಯದಂತೆ ಮುನ್ನೆಲೆಗೆ ತರುವ ಪ್ರಯೋಗದಲ್ಲಿ ಸದಾ ನಿರತ ‘ಬಿಜಾಪುರೆ ಹಾರ್ಮೋನಿಯಂ ಫೌಂಡೇಶನ್’.

ಏನಿರತ್ತೆ ಅವತ್ತು?

’ಸಮರಸ ಸಂವಾದಿನಿ’ ಶ್ರವಣಾನುಭವದ ಕಾರ್ಯಕ್ರಮಕ್ಕೆ ಈಗಾಗಲೇ ತಯಾರಿ ಶುರು. ಅಕಾಸ್ಟಿಕ್ ಕೀಬೋರ್ಡ್ ವಾದ್ಯಗಳಾದ ಗ್ರಾಂಡ್ ಪಿಯಾನೋ, ಎಕಾರ್ಡಿಯನ್, ಹಾರ್ಮೋನಿಯಮ್ ಮತ್ತು ಲೆಗ್ ಹಾರ್ಮೋನಿಯಂಗಳ ಮೂಲಕ ವಿಶ್ವದ ಐದು ಸಂಗೀತ ಪ್ರಕಾರಗಳನ್ನು ಅಂತಾರಾಷ್ಟ್ರೀಯ ಮನ್ಣಣೆ ಪಡೆದ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. ಹೀಗೆ ಬೇರೆ ಬೇರೆ ಪ್ರಕಾರದ ಕಲಾವಿದರು ಒಂದೇ ವೇದಿಕೆಯಲ್ಲಿ ಸೇರಿದಾಗ ಒಂದು ವಿಶೇಷ ಶಕ್ತಿ ಸೃಷ್ಟಿಯಾಗುತ್ತದೆ ಎನ್ನುವುದು ಕೇಳುಗರಿಗೂ ಕಲಾವಿದರಿಗೂ ಅನುಭವವೇದ್ಯ. ಕಲಾವಿದರಾದ ಫಯಾಝ್ ಖಾನ್, ಸಂಗೀತಾ ಕಟ್ಟಿ, ಮಾನಸಿ ಪ್ರಸಾದ್ ಕನ್ನಡ ಮತ್ತು ಮರಾಠಿ ರಂಗ/ನಾಟ್ಯ ಗೀತೆಗಳನ್ನು ಹಾಡಿದರೆ ಇವರಿಗೆ ಲೆಗ್ ಹಾರ್ಮೋನಿಯಂ (ಕಾಲ್ಪೆಟ್ಟಿಗೆ) ಸಾಥಿ ಪರಮಶಿವನ್ ಅವರದು.

ಗ್ರಾಂಡ್ ಪಿಯಾನೊ ಕಲಾವಿದೆ ನೀಸಿಯಾ ಮೆಜೋಲಿ ಆ ದಿನ ರಷ್ಯನ್ ಪಿಯಾನಿಸ್ಟ್ ನತಾಲಿಯಾ ಕ್ಯಾಪಿಲೋವರ್ ಬಿಟೋವನ್ ಮತ್ತು ಶಾಪೈನ್ ಸಂಗೀತದಲ್ಲಿ ಮುಳುಗೆಳಿಸಲಿದ್ದರೆ ಹಿಂದೂಸ್ತಾನಿ ಮತ್ತು ಕರ್ನಾಟಕ ಶೈಲಿಯ ಹಾರ್ಮೋನಿಯಂ ಧ್ಯಾನದಲ್ಲಿ ಡಾ. ರವೀಂದ್ರ ರವೀಂದ್ರ ಕಾಟೋಟಿ, ಕರ್ನಾಟಕ ಶೈಲಿಯಲ್ಲಿ ಸಿ. ರಾಮದಾಸ್. ಎಕಾರ್ಡಿಯನ್ ಕಲಾವಿದ ಎಂ.ಬಿ. ಪ್ರಕಾಶ್, ಪಿ. ರವೀಂದ್ರ, ಬದ್ರಿ ವಿಠಲ್ ಅವರೊಂದಿಗೆ ಅಂದು ಯುರೋಪಿಯನ್ ಡ್ಯಾನ್ಸ್ ಮ್ಯೂಸಿಕ್, ’ಪೋಲ್ಕಾ’ ’ಮಾರ್ಚ್’ ಮತ್ತು ’ವೇವ್ಸ್ ಆಫ್ ದಿ ಡ್ಯಾನ್‌ಯೂಬ್’ ನುಡಿಸಿ ‘ಜೀನಾ ಯಂಹಾ ಮರನಾ ಯಂಹಾ’ದೊಂದಿಗೆ ಆವರಿಸಿಕೊಳ್ಳಲಿದ್ದಾರೆ.

’ಇಂಥ ಕಾರ್ಯಕ್ರಮಗಳಿಗೆ ಹಿರಿ-ಕಿರಿಯ ಕಲಾವಿದರು ಸ್ವಯಂಪ್ರೇರಣೆಯಿಂದ ಬರಬೇಕು. ಆಗಷ್ಟೇ ಕಲೆ ಬೆಳೆಯುವುದು’ ಮತ್ತು ‘ಅರಮನೆ ಮೈದಾನಕ್ಕೆ ವಿದೇಶಿ ಕಲಾವಿದನೊಬ್ಬ ಬಂದರೆ ಸಾವಿರಗಟ್ಟಲೆ ಸುರಿದು ಸಾವಿರಾರು ಮಂದಿ ಸೇರ್‍ತಾರೆ. ಆದರೆ ನಮ್ಮ ಸಂಪ್ರದಾಯ ಬೆಳೆಸಿ ಉಳಿಸಬೇಕೆಂದರೆ ಇತರ ಸಂಪ್ರದಾಯಗಳನ್ನೂ ಗೌರವಿಸಬೇಕು’ ಸಂಗೀತಾ ಕಟ್ಟಿ ಮತ್ತು ಅಂದು ತಾಳವಾದ್ಯವೃಂದದ ಸಾರಥ್ಯ ವಹಿಸಲಿರುವ ಅನೂರು ಅನಂತ ಶರ್ಮ ಅವರ ಖುಲ್ಲಾ ಆವಾಝ್‌ ಮತ್ತು ಖುಲ್ಲಾ ಬಾಝ್‌.
ಹಾಗಾದ್ರೆ ಅವತ್ತು ನಿಮಗೂ ಹೋಗಬೇಕು ಅನ್ನಸ್ತಿದೆಯಾ?

--------------

ಸಮರಸದಲ್ಲಿ ಏಕತೆ
ಅವತ್ತು ಬೆಂಗಳೂರಿನ ಇಪ್ಪತ್ತು ಕಲಾವಿದರು ಪೂರ್ವ-ಪಶ್ಚಿಮದ ನಾದದ ಹೊಳೆಯಲ್ಲಿ ನಿಮ್ಮನ್ನು ತೇಲಿಬಿಡಲಿದ್ದಾರೆ. ಕರ್ನಾಟಕ, ಹಿಂದೂಸ್ತಾನಿ, ಪಾಶ್ಚಾತ್ಯ, ಯೂರೋಪಿಯನ್ ಮತ್ತು ಭಾರತೀಯ ರಂಗಸಂಗೀತಗಳನ್ನು ಒಳಗೊಂಡ ‘ಸಮರಸ ಸಂವಾದಿನಿ’ ಫ್ಯೂಶನ್‌ ಅಲ್ಲ.
’ಈ ಕಾರ್ಯಕ್ರಮದಲ್ಲಿ ಇಪ್ಪತ್ತೂ ಜನ ಕಲಾವಿದರು ಒಂದೇ ವೇದಿಕೆಯಲ್ಲಿರುತ್ತಾರೆ. ಅನುಕ್ರಮವಾಗಿ ತಮ್ಮ ತಮ್ಮ ಸಂಗೀತ ಪ್ರಕಾರಗಳನ್ನು ಮೂಲ, ಶುದ್ಧ ಸ್ವರೂಪದಲ್ಲೇ ಪ್ರಸ್ತುತಪಡಿಸುತ್ತಾರೆ. ಒಂದು ಪ್ರಸ್ತುತಿಯಿಂದ ಇನ್ನೊಂದು ಪ್ರಸ್ತುತಿಗೆ ಹೋಗುವಾಗ ಆವರ್ತನ ಸಂಗೀತ ಕೊಂಡಿಯಾಗುವುದು. ಈ ಕಾರ್ಯಕ್ರಮಕ್ಕೆಂದೇ ಮಿಯಾಮಲ್ಹಾರ್ ರಾಗದಲ್ಲಿ ಒಂದು ಶೀರ್ಷಿಕೆ ಗೀತೆಯನ್ನು ರಚಿಸಿ ಸಂಯೋಜಿಸಿದ್ದೇನೆ. ಸಂಗೀತ ಪ್ರಿಯರಿಗೆ ಇದೊಂದು ಯೂನಿಕ್ ಅಪಾರ್ಚುನಿಟಿ. ಸಮರಸದಲ್ಲಿ ಏಕತೆ ಬಿಂಬಿಸುವುದು ’ ಅಂತಾರೆ ಸಂಸ್ಥಾಪಕ ಡಾ. ರವೀಂದ್ರ ಕಾಥೋಟಿ.
ಫೆ. ೨೦. ಬೆಂಗಳೂರಿನ ಚೌಡಯ್ಯ ಸ್ಮರಕ ಭವನಕ್ಕೆ ಸಂಜೆ ಐದೂವರೆಗೆ ಬಂದರೆ ’ಸಮರಸ ಸಂವಾದಿನಿ’ಯೂ. ಶಿವರಾತ್ರಿಗೆ ’ಉಚಿತ’ ಶಿವಧ್ಯಾನವೂ.

-ಶ್ರೀದೇವಿ ಕಳಸದ
(ಫೆ. ೧೧ ೨೦೧೨. ವಿಜಯ ಕರ್ನಾಟಕ ಲವಲವಿಕೆಯಲ್ಲಿ ಪ್ರಕಟ)


Friday, February 3, 2012

ಈ ಕಾಲದಲ್ಲಿ ಬರಿಗಾಲಿನಲ್ಲಿ...


ಮನೆಯೊಳಗೊಂದು, ಆಫೀಸಿಗೊಂದು, ಜೀನ್ಸ್‌ಗೊಂದು,

ಸೆಲ್ವಾರ್‌ಗೊಂದು, ಸೀರೆಗೊಂದು, ಪ್ರವಾಸಕ್ಕೊಂದು,

ವಾಕಿಂಗ್‌ಗೊಂದು... ಹೀಗೆ ಒಂದೊಂದೇ ಜತೆಯೆಂದು

ಪೇರಿಸಿಟ್ಟ ಚಪ್ಪಲಿಗಳು ಆಗಾಗ ಕೆಲಗಂಟೆಗಳಾದರೂ

ಗೂಡಿನಲ್ಲೇ ಇರಲಿ ಬಿಡಿ.


ಮಂಜು ಸರಿಯೋ ಹೊತ್ತಿಗೆ ಕ್ಯಾಬ್‌ ಬಂದಾಗಿತ್ತು. ಅಂದು ಹೋಗಬೇಕೆಂದುಕೊಂಡಿದ್ದು ಸಾಗರದ ಬಳಿ ಇರುವ ವರದಪುರ ಬೆಟ್ಟಕ್ಕೆ. ಮುನ್ನೂರು ಮೆಟ್ಟಿಲು ಏರಿದ ನಂತರ ಸುಮಾರು ಒಂದು ಕಿ.ಮೀ. ನಷ್ಟು ಬೆಟ್ಟ ಹತ್ತಬೇಕಿತ್ತು. ಅಂಥಾ ಏನು ಮಹಾಸಾಹಸ ಎಂದು ಹುರುಪಿನಲ್ಲಿದ್ದವಳ ಮುಖ ಸಣ್ಣಗೆ ಮಾಡಿದ್ದು ’ಪಾದರಕ್ಷೆ ಇಲ್ಲೇ ಬಿಡಬೇಕು’ ಅನ್ನೊ ಬೋರ್ಡು. ಅದ್ರಲ್ಲೂ ನಾವು ಹೋಗಿದ್ದು ಮಳೆಗಾಲ
ವಲ್ಲದ ಮಳೆಗಾಲದ ದಿನಗಳಲ್ಲಿ. ಮೆಟ್ಟಿಲು ಏರಿದ್ದೇನೋ ಆಯಿತು. ಸವಾಲಿನ ದಾರಿ ಈಗ ಶುರು...

ಕೆಂಪುಮಣ್ಣೊಳಗೆ ಅರ್ಧಂಬರ್ಧ ಹೂತ ಚೂಪುಚೂಪು ಸಣ್ಣಕಲ್ಲುಗಳ ಹಾಸಿಗೆ?! ಮೇಲೆ ನಡೆಯೋದಂದ್ರೆ... ಏನ್‌ ಕೇಳ್ತೀರಿ. ಪಕ್ಕದಲ್ಲಿರೋವ್ನೇ ಕಾಪಾಡ್ತಿಲ್ಲ ಅಂದ್ಮೇಲೆ ಗುಡ್ಡದ ಮೇಲೆ ಸಮಾಧಿಸ್ಥಿತಿಯಲ್ಲಿರೋ ಶ್ರೀಧರ ಸ್ವಾಮಿಗಳು ಎದ್ದುಬಂದಾರೇ? ಹಾಗೊಂದು ವೇಳೆ ಅವರು ಎದ್ದು ಬಂದರೆ ನಾನಲ್ಲಿ ಇರ‍್ತಿದ್ನಾ?

ನನಗಾಗಲ್ವೋ... ಅಂತ ಕಿರುಚಿದಾಗೆಲ್ಲ ’ಆಕ್ಯುಪ್ರೆಶರ್‌ ಕಣೆ... ಹೀಗೆ ತಿಂಗಳಿಗೊಮ್ಮೆ ಇಂಥ ಬೆಟ್ಟ ಹತ್ತಿದ್ರೆ ಯಾವ ಕಾಯಿಲೆಗಳೂ ಬರಲ್ಲ. ಹತ್ತು ಹತ್ತು... ಅಂತ ಹೇಳ್ತಾ ಕೇಕೆ ಹೊಡೆಯುತ್ತ ಓಡುತ್ತಲೇ ಇದ್ದ. ಹೋಗ್ತಾ ಹೋಗ್ತಾ ಅವನ ಧ್ವನಿ ಮಾತ್ರ ಕೇಳ್ತಿತ್ತು, ಅವನ ದಾಪುನಡಿಗೆಯನ್ನು ಆಕಾರವನ್ನು ಪೊದೆಗಳು ಮರೆಮಾಡಿಬಿಡುತ್ತಿದ್ದವು. ಇನ್ನು ಅವನನ್ನು ಹಿಂಬಾಲಿಸಕ್ಕಾಗಲ್ಲ ಅನ್ನೋದು ಖಾತ್ರಿಯಾಗ್ಹೋಯ್ತು. ದಟ್ಟ ಹಸಿರಿನ ಮಧ್ಯೆ ನೆಲ ಕಂಡ ದಾರಿಯಲ್ಲೇ ಹೊರಟೆ. ಕೈಯಲ್ಲಿ ಎರಡು ಲೀಟರ್‌ ನೀರಿನ ಬಾಟಲಿ ಭಾರ.. ಬೀಸಿ ಎಸೆದುಬಿಡೋಣ ಅನ್ನಿಸಿತ್ತು.

ಆ ಹೊತ್ತಿಗೆ ಐದಾರು ಕಾಲೇಜು ಹುಡುಗಿಯರು ಎದುರಾದರು. ನೀರು ಕೊಡ್ತೀರಾ ಅಂತ ಸಂಕೋಚದಿಂದನೇ ಕೇಳಿದ್ರು. ಓಹ್‌ ದಯವಿಟ್ಟು... ಬಾಟಲಿ ಕೊಟ್ಟು ಹೊರಟರೆ... ನಿಮ್ಮ ಬಾಟಲಿ ಎಂದು ಕೂಗಿದರು. ಅದು ನಿಮಗೇ ಎಂದೆ. ನಿಜಾ? ಎಂದರು. ಹೌದು ಎಂದು ಕೂಗಿದೆ. ಹೇ.... ಎಂದು ಖುಷಿಯಿಂದ ಕುಣಿದು... ಅವಳಾದ ಮೇಲೆ ಇವಳು, ಇವಳಾದ ಮೇಲೆ ಅವಳು ಹೀಗೆ ನೀರು ಕುಡಿಯೋ ಅವರ ಸಂಭ್ರಮವೇ ಹೇಳುತ್ತಿತ್ತು ಅವರು ದಣಿವರಿದಿದ್ದನ್ನು.

ಅಲ್ಲೇ ಇದ್ದ ಮರದ ಬೊಡ್ಡೆ ಮೇಲೆ ಉಶ್ಯಪ್ಪಾ ಅನ್ನೋ ಹೊತ್ತಿಗೆ ಇರುವೆ ಹುತ್ತದ ನೆತ್ತಿ ಮೇಲೆ ಕಾಲಿಟ್ಟುಬಿಟ್ಟಿದ್ದೆ! ಅವನಿದ್ದಿದ್ದರೆ ಇದನ್ನು ’ಆಕ್ಯುಪಂಕ್ಚರ್‌’ ಎನ್ನುತ್ತಿದ್ದನೋ ಏನೋ ಸದ್ಯ. ಅಂತೂ ಬೆಟ್ಟದ ತುದಿ ಬಂತು ಅಂತ ನಿಟ್ಟುಸಿರು ಬಿಡಬಹುದು; ಖುಷಿಯಿಂದ ಕುಣಿದಾಡೋ ಹಾಗಿರಲಿಲ್ಲ. ಕಾರಣ ಆ ಚೂಪುಕಲ್ಲುಗಳು. ಒಂದ್ರೀತಿ ಗಂಟಲಿನಲ್ಲಿ ಬಿಸಿತುಪ್ಪ; ಮತ್ತೆ ಇಳಿಯೋ ಸೆಷನ್‌ ನೆನಪಿಸಿಕೊಂಡು.

ಅಬ್ಬಾ... ಅವಧೂತರು ಇಲ್ಲೇ ಯಾಕೆ ಬಂದು ತಪಸ್ಸು ಮಾಡುತ್ತಿದ್ದರೋ... ಅಂತ ಅನ್ನಿಸಿದ್ದು ಆ ಚೂಪುಕಲ್ಲುಗಳ ಆಣೆಗೂ ಸತ್ಯ. ಅವರ ಸಮಾಧಿಸ್ಥಳದ ದರ್ಶನ ಪಡೆಯಲು ಹೊರಡುತ್ತಿದ್ದಾಗ ಕಂಡಿದ್ದು ’ಜೀನ್ಸ್‌ಧಾರಿ ಮಹಿಳೆಯರಿಗೆ ಪ್ರವೇಶವಿಲ್ಲ’ ಅನ್ನೋ ಬೋರ್ಡು.. ವ್ಹಾರೆವ್ಹಾ.. ಕರ್ಮವೇ.. ಅಷ್ಟು ಕಷ್ಟಪಟ್ಟು ಬಂದಿದ್ದಕ್ಕೂ ಸಾರ್ಥಕ ಆಯ್ತು ಅಂತ ಅನ್ಕೊಂಡು ಸುಮ್ಮನೇ ನಿಂತೆ. ಇವನು ಬಾರೇ... ಎಂದ. ಅಲ್ಲಿದ್ದ ಪುರೋಹಿತರೂ ಆ ಬೋರ್ಡಿಗೂ ತಮಗೂ ಸಂಬಂಧವಿಲ್ಲ ಎಂಬಂತಿದ್ದರು. ಯಾವ ಮಹಾಶಯರು ಈ ಬೋರ್ಡ್‌ ಹಾಕಿಸಿದ್ದು.. ಖಂಡಿತ ಶ್ರೀಧರ ಸ್ವಾಮಿಗಳಂತೂ ಅಲ್ಲ ಮತ್ಯಾಕೆ ಯೋಚನೆ ಮಾಡೋದು ಅಂತ ಒಳಹೋದೆ. ಪಕ್ಕದಲ್ಲೇ ಸಮಾಧಿ. ಸ್ವಾಮಿಗಳು ಧ್ಯಾನಸ್ಥ ಸ್ಥಿತಿಯಲ್ಲಿರುವುದರಿಂದ ಶಾಂತತೆ ಕಾಪಾಡಿಕೊಳ್ಳಿ ಎಂಬ ಬೋರ್ಡ್‌ ಅಲ್ಲಿತ್ತು. ಚಿಕ್ಕಕಿಂಡಿಯಿಂದ ಕಣ್ಣಾಡಿಸಿದೆ. ಮಂದಬೆಳಕಷ್ಟೇ ಮನಸಲ್ಲುಳಿಯಿತು.


ಮತ್ತದೇ ದಾರಿಯಲ್ಲಿ ವಾಪಸ್‌... ಚೂಪುಕಲ್ಲುದಾರಿ! ಮರಳುವಾಗ ಹೇಳುತ್ತಿದ್ದಾನೆ ’ಆ ಸಣ್ಣದಾರಿಯ ಪಕ್ಕ ಇದೆಯಲ್ಲ ಹುಲ್ಲುದಾರಿ. ಅದರ ಮೇಲೆ ಕಾಲಿಟ್ಟು ಬರಬೇಕು ಕಣೆ...’ ಈಗ ಹೇಳ್ತಾನೆ ಮಾರಾಯಾ ಎಂದು ಸಿಟ್ಟುಬಂದರೂ...

ಕಣ್ಣವದ್ದೆ ಮಾಡಿದ್ದು; ಅಂದಿಗೂ ಇಂದಿಗೂ ಚಪ್ಪಲಿ ಇಲ್ಲದೇ ನಡೆದ, ನಡೆಯುತ್ತಿರುವ ಅದೆಷ್ಟೋ ಕಾಲುಗಳು... ನ್ಯಾಗೊಂದಿ ಮೇಲಿಟ್ಟ ಒಂದೇ ಜತೆ ಚಪ್ಪಲಿಯನ್ನು ಮನೆಮಂದಿಯೆಲ್ಲ ಒಬ್ಬೊಬ್ಬರಾಗಿ ಸರದಿಯಂತೆ ಊರಿಗೆ ಹೋಗುವಾಗ ಮಾತ್ರ ಬಳಸುತ್ತಿದ್ದರೆಂದು ಅಮ್ಮ, ಅಜ್ಜಿ ಹೇಳುತ್ತಿದ್ದದ್ದು. ಕಳೆದ ವರ್ಷ ದಾರಿಯಲ್ಲಿ ಕಿತ್ತ ಚಪ್ಪಲಿಯನ್ನು ಅಲ್ಲೇ ಬಿಟ್ರಾಯ್ತು ಎಂದುಕೊಳ್ಳೋ ಹೊತ್ತಿಗೆ ಅಪ್ಪ ತಡೆದದ್ದು. ನಡುರಸ್ತೆಯಲ್ಲಿ ತುದಿಗಾಲಲ್ಲಿ ಕುಳಿತು ಗುಂಡುಸೂಜಿ ತೂರಿಸಿ ರಿಪೇರಿ ಮಾಡಿಕೊಟ್ಟ ಅರವತ್ನಾಲ್ಕರ ಅಪ್ಪ ಈಗ ಹಾಕಿಕೋ ಎಂದು ನಕ್ಕಿದ್ದು... ಅವರು ರಿಪೇರಿ ಮಾಡಿಕೊಡುವ ತನಕ ನಿಂತಲ್ಲೇ ನಿಂತು, ನಕ್ಕಂತೆ ನಟಿಸಿ ಚಪ್ಪಲಿ ಮೆಟ್ಟಿ ದಾರಿ ಸವೆಸಿದ್ದು...

-ಶ್ರೀದೇವಿ ಕಳಸದ (ಫೆ.೪. ೨೦೧೨ ವಿಜಯ ಕರ್ನಾಟಕ ’ಲವಲವಿಕೆ’)