Friday, February 3, 2012

ಈ ಕಾಲದಲ್ಲಿ ಬರಿಗಾಲಿನಲ್ಲಿ...


ಮನೆಯೊಳಗೊಂದು, ಆಫೀಸಿಗೊಂದು, ಜೀನ್ಸ್‌ಗೊಂದು,

ಸೆಲ್ವಾರ್‌ಗೊಂದು, ಸೀರೆಗೊಂದು, ಪ್ರವಾಸಕ್ಕೊಂದು,

ವಾಕಿಂಗ್‌ಗೊಂದು... ಹೀಗೆ ಒಂದೊಂದೇ ಜತೆಯೆಂದು

ಪೇರಿಸಿಟ್ಟ ಚಪ್ಪಲಿಗಳು ಆಗಾಗ ಕೆಲಗಂಟೆಗಳಾದರೂ

ಗೂಡಿನಲ್ಲೇ ಇರಲಿ ಬಿಡಿ.


ಮಂಜು ಸರಿಯೋ ಹೊತ್ತಿಗೆ ಕ್ಯಾಬ್‌ ಬಂದಾಗಿತ್ತು. ಅಂದು ಹೋಗಬೇಕೆಂದುಕೊಂಡಿದ್ದು ಸಾಗರದ ಬಳಿ ಇರುವ ವರದಪುರ ಬೆಟ್ಟಕ್ಕೆ. ಮುನ್ನೂರು ಮೆಟ್ಟಿಲು ಏರಿದ ನಂತರ ಸುಮಾರು ಒಂದು ಕಿ.ಮೀ. ನಷ್ಟು ಬೆಟ್ಟ ಹತ್ತಬೇಕಿತ್ತು. ಅಂಥಾ ಏನು ಮಹಾಸಾಹಸ ಎಂದು ಹುರುಪಿನಲ್ಲಿದ್ದವಳ ಮುಖ ಸಣ್ಣಗೆ ಮಾಡಿದ್ದು ’ಪಾದರಕ್ಷೆ ಇಲ್ಲೇ ಬಿಡಬೇಕು’ ಅನ್ನೊ ಬೋರ್ಡು. ಅದ್ರಲ್ಲೂ ನಾವು ಹೋಗಿದ್ದು ಮಳೆಗಾಲ
ವಲ್ಲದ ಮಳೆಗಾಲದ ದಿನಗಳಲ್ಲಿ. ಮೆಟ್ಟಿಲು ಏರಿದ್ದೇನೋ ಆಯಿತು. ಸವಾಲಿನ ದಾರಿ ಈಗ ಶುರು...

ಕೆಂಪುಮಣ್ಣೊಳಗೆ ಅರ್ಧಂಬರ್ಧ ಹೂತ ಚೂಪುಚೂಪು ಸಣ್ಣಕಲ್ಲುಗಳ ಹಾಸಿಗೆ?! ಮೇಲೆ ನಡೆಯೋದಂದ್ರೆ... ಏನ್‌ ಕೇಳ್ತೀರಿ. ಪಕ್ಕದಲ್ಲಿರೋವ್ನೇ ಕಾಪಾಡ್ತಿಲ್ಲ ಅಂದ್ಮೇಲೆ ಗುಡ್ಡದ ಮೇಲೆ ಸಮಾಧಿಸ್ಥಿತಿಯಲ್ಲಿರೋ ಶ್ರೀಧರ ಸ್ವಾಮಿಗಳು ಎದ್ದುಬಂದಾರೇ? ಹಾಗೊಂದು ವೇಳೆ ಅವರು ಎದ್ದು ಬಂದರೆ ನಾನಲ್ಲಿ ಇರ‍್ತಿದ್ನಾ?

ನನಗಾಗಲ್ವೋ... ಅಂತ ಕಿರುಚಿದಾಗೆಲ್ಲ ’ಆಕ್ಯುಪ್ರೆಶರ್‌ ಕಣೆ... ಹೀಗೆ ತಿಂಗಳಿಗೊಮ್ಮೆ ಇಂಥ ಬೆಟ್ಟ ಹತ್ತಿದ್ರೆ ಯಾವ ಕಾಯಿಲೆಗಳೂ ಬರಲ್ಲ. ಹತ್ತು ಹತ್ತು... ಅಂತ ಹೇಳ್ತಾ ಕೇಕೆ ಹೊಡೆಯುತ್ತ ಓಡುತ್ತಲೇ ಇದ್ದ. ಹೋಗ್ತಾ ಹೋಗ್ತಾ ಅವನ ಧ್ವನಿ ಮಾತ್ರ ಕೇಳ್ತಿತ್ತು, ಅವನ ದಾಪುನಡಿಗೆಯನ್ನು ಆಕಾರವನ್ನು ಪೊದೆಗಳು ಮರೆಮಾಡಿಬಿಡುತ್ತಿದ್ದವು. ಇನ್ನು ಅವನನ್ನು ಹಿಂಬಾಲಿಸಕ್ಕಾಗಲ್ಲ ಅನ್ನೋದು ಖಾತ್ರಿಯಾಗ್ಹೋಯ್ತು. ದಟ್ಟ ಹಸಿರಿನ ಮಧ್ಯೆ ನೆಲ ಕಂಡ ದಾರಿಯಲ್ಲೇ ಹೊರಟೆ. ಕೈಯಲ್ಲಿ ಎರಡು ಲೀಟರ್‌ ನೀರಿನ ಬಾಟಲಿ ಭಾರ.. ಬೀಸಿ ಎಸೆದುಬಿಡೋಣ ಅನ್ನಿಸಿತ್ತು.

ಆ ಹೊತ್ತಿಗೆ ಐದಾರು ಕಾಲೇಜು ಹುಡುಗಿಯರು ಎದುರಾದರು. ನೀರು ಕೊಡ್ತೀರಾ ಅಂತ ಸಂಕೋಚದಿಂದನೇ ಕೇಳಿದ್ರು. ಓಹ್‌ ದಯವಿಟ್ಟು... ಬಾಟಲಿ ಕೊಟ್ಟು ಹೊರಟರೆ... ನಿಮ್ಮ ಬಾಟಲಿ ಎಂದು ಕೂಗಿದರು. ಅದು ನಿಮಗೇ ಎಂದೆ. ನಿಜಾ? ಎಂದರು. ಹೌದು ಎಂದು ಕೂಗಿದೆ. ಹೇ.... ಎಂದು ಖುಷಿಯಿಂದ ಕುಣಿದು... ಅವಳಾದ ಮೇಲೆ ಇವಳು, ಇವಳಾದ ಮೇಲೆ ಅವಳು ಹೀಗೆ ನೀರು ಕುಡಿಯೋ ಅವರ ಸಂಭ್ರಮವೇ ಹೇಳುತ್ತಿತ್ತು ಅವರು ದಣಿವರಿದಿದ್ದನ್ನು.

ಅಲ್ಲೇ ಇದ್ದ ಮರದ ಬೊಡ್ಡೆ ಮೇಲೆ ಉಶ್ಯಪ್ಪಾ ಅನ್ನೋ ಹೊತ್ತಿಗೆ ಇರುವೆ ಹುತ್ತದ ನೆತ್ತಿ ಮೇಲೆ ಕಾಲಿಟ್ಟುಬಿಟ್ಟಿದ್ದೆ! ಅವನಿದ್ದಿದ್ದರೆ ಇದನ್ನು ’ಆಕ್ಯುಪಂಕ್ಚರ್‌’ ಎನ್ನುತ್ತಿದ್ದನೋ ಏನೋ ಸದ್ಯ. ಅಂತೂ ಬೆಟ್ಟದ ತುದಿ ಬಂತು ಅಂತ ನಿಟ್ಟುಸಿರು ಬಿಡಬಹುದು; ಖುಷಿಯಿಂದ ಕುಣಿದಾಡೋ ಹಾಗಿರಲಿಲ್ಲ. ಕಾರಣ ಆ ಚೂಪುಕಲ್ಲುಗಳು. ಒಂದ್ರೀತಿ ಗಂಟಲಿನಲ್ಲಿ ಬಿಸಿತುಪ್ಪ; ಮತ್ತೆ ಇಳಿಯೋ ಸೆಷನ್‌ ನೆನಪಿಸಿಕೊಂಡು.

ಅಬ್ಬಾ... ಅವಧೂತರು ಇಲ್ಲೇ ಯಾಕೆ ಬಂದು ತಪಸ್ಸು ಮಾಡುತ್ತಿದ್ದರೋ... ಅಂತ ಅನ್ನಿಸಿದ್ದು ಆ ಚೂಪುಕಲ್ಲುಗಳ ಆಣೆಗೂ ಸತ್ಯ. ಅವರ ಸಮಾಧಿಸ್ಥಳದ ದರ್ಶನ ಪಡೆಯಲು ಹೊರಡುತ್ತಿದ್ದಾಗ ಕಂಡಿದ್ದು ’ಜೀನ್ಸ್‌ಧಾರಿ ಮಹಿಳೆಯರಿಗೆ ಪ್ರವೇಶವಿಲ್ಲ’ ಅನ್ನೋ ಬೋರ್ಡು.. ವ್ಹಾರೆವ್ಹಾ.. ಕರ್ಮವೇ.. ಅಷ್ಟು ಕಷ್ಟಪಟ್ಟು ಬಂದಿದ್ದಕ್ಕೂ ಸಾರ್ಥಕ ಆಯ್ತು ಅಂತ ಅನ್ಕೊಂಡು ಸುಮ್ಮನೇ ನಿಂತೆ. ಇವನು ಬಾರೇ... ಎಂದ. ಅಲ್ಲಿದ್ದ ಪುರೋಹಿತರೂ ಆ ಬೋರ್ಡಿಗೂ ತಮಗೂ ಸಂಬಂಧವಿಲ್ಲ ಎಂಬಂತಿದ್ದರು. ಯಾವ ಮಹಾಶಯರು ಈ ಬೋರ್ಡ್‌ ಹಾಕಿಸಿದ್ದು.. ಖಂಡಿತ ಶ್ರೀಧರ ಸ್ವಾಮಿಗಳಂತೂ ಅಲ್ಲ ಮತ್ಯಾಕೆ ಯೋಚನೆ ಮಾಡೋದು ಅಂತ ಒಳಹೋದೆ. ಪಕ್ಕದಲ್ಲೇ ಸಮಾಧಿ. ಸ್ವಾಮಿಗಳು ಧ್ಯಾನಸ್ಥ ಸ್ಥಿತಿಯಲ್ಲಿರುವುದರಿಂದ ಶಾಂತತೆ ಕಾಪಾಡಿಕೊಳ್ಳಿ ಎಂಬ ಬೋರ್ಡ್‌ ಅಲ್ಲಿತ್ತು. ಚಿಕ್ಕಕಿಂಡಿಯಿಂದ ಕಣ್ಣಾಡಿಸಿದೆ. ಮಂದಬೆಳಕಷ್ಟೇ ಮನಸಲ್ಲುಳಿಯಿತು.


ಮತ್ತದೇ ದಾರಿಯಲ್ಲಿ ವಾಪಸ್‌... ಚೂಪುಕಲ್ಲುದಾರಿ! ಮರಳುವಾಗ ಹೇಳುತ್ತಿದ್ದಾನೆ ’ಆ ಸಣ್ಣದಾರಿಯ ಪಕ್ಕ ಇದೆಯಲ್ಲ ಹುಲ್ಲುದಾರಿ. ಅದರ ಮೇಲೆ ಕಾಲಿಟ್ಟು ಬರಬೇಕು ಕಣೆ...’ ಈಗ ಹೇಳ್ತಾನೆ ಮಾರಾಯಾ ಎಂದು ಸಿಟ್ಟುಬಂದರೂ...

ಕಣ್ಣವದ್ದೆ ಮಾಡಿದ್ದು; ಅಂದಿಗೂ ಇಂದಿಗೂ ಚಪ್ಪಲಿ ಇಲ್ಲದೇ ನಡೆದ, ನಡೆಯುತ್ತಿರುವ ಅದೆಷ್ಟೋ ಕಾಲುಗಳು... ನ್ಯಾಗೊಂದಿ ಮೇಲಿಟ್ಟ ಒಂದೇ ಜತೆ ಚಪ್ಪಲಿಯನ್ನು ಮನೆಮಂದಿಯೆಲ್ಲ ಒಬ್ಬೊಬ್ಬರಾಗಿ ಸರದಿಯಂತೆ ಊರಿಗೆ ಹೋಗುವಾಗ ಮಾತ್ರ ಬಳಸುತ್ತಿದ್ದರೆಂದು ಅಮ್ಮ, ಅಜ್ಜಿ ಹೇಳುತ್ತಿದ್ದದ್ದು. ಕಳೆದ ವರ್ಷ ದಾರಿಯಲ್ಲಿ ಕಿತ್ತ ಚಪ್ಪಲಿಯನ್ನು ಅಲ್ಲೇ ಬಿಟ್ರಾಯ್ತು ಎಂದುಕೊಳ್ಳೋ ಹೊತ್ತಿಗೆ ಅಪ್ಪ ತಡೆದದ್ದು. ನಡುರಸ್ತೆಯಲ್ಲಿ ತುದಿಗಾಲಲ್ಲಿ ಕುಳಿತು ಗುಂಡುಸೂಜಿ ತೂರಿಸಿ ರಿಪೇರಿ ಮಾಡಿಕೊಟ್ಟ ಅರವತ್ನಾಲ್ಕರ ಅಪ್ಪ ಈಗ ಹಾಕಿಕೋ ಎಂದು ನಕ್ಕಿದ್ದು... ಅವರು ರಿಪೇರಿ ಮಾಡಿಕೊಡುವ ತನಕ ನಿಂತಲ್ಲೇ ನಿಂತು, ನಕ್ಕಂತೆ ನಟಿಸಿ ಚಪ್ಪಲಿ ಮೆಟ್ಟಿ ದಾರಿ ಸವೆಸಿದ್ದು...

-ಶ್ರೀದೇವಿ ಕಳಸದ (ಫೆ.೪. ೨೦೧೨ ವಿಜಯ ಕರ್ನಾಟಕ ’ಲವಲವಿಕೆ’)

7 comments:

ISHWARA BHAT K said...

ಹೌದು,,ಊರಲ್ಲಿ ಚರಳು ಕಲ್ಲುಗಳ ಮೇಲೆ ಚಪ್ಪಲಿಯಿಲ್ಲದ ನಡೆಯೇ ಸೊಗಸಿನದ್ದು. ವಿಕದಲ್ಲೂ ಓದಿದ್ದೇನೆ. ಚೆನ್ನಾಗಿದೆ

Badarinath Palavalli said...

ವರದಪುರ ಬೆಟ್ಟದ ಯಾನ ಸೊಗಸಾಗಿತ್ತು ಮೇಡಂ.

ಇದನ್ನೇ ನಿಸರ್ಗಧಾಮಗಳಲ್ಲಿ ಕಾಸು ಕೊಟ್ಟು ನಾವು ತಣ್ಣೀರಿನಲ್ಲಿ ಚೂಪು ಕಲ್ಲುಗಳ ಮೇಲೆ ಆಕ್ಯುಪಂಚರ್ ಅಂತ ನಡಿಯೋದು...!

ವಿಕ್ರಮ ಹತ್ವಾರ said...

ardhakke nimta haagide? athava full story upload maadilva?

sunaath said...

ಸಾಹಸಕ್ಕೆ ಶಹಭಾಸ್! ನಿಮ್ಮ ತಂದೆಗೆ ನನ್ನ ಸಲಾಮ್.

ಶ್ರೀಪಾದು said...

ರಾಜ್ಯಮಟ್ಟದ ಪೇಪರ್ ಒಂದರಲ್ಲಿ ಬರಬೇಕಾದ ಲೇಖನದ ಪ್ರಬುದ್ಧತೆ ಇದಲ್ಲ.ಆಗಷ್ಟೇ ಬೆಂಗಳೂರಿಗೆ ಬಂದ ಹುಡುಗ , ತಾನು ಸರ್ವತಂತ್ರ ಸ್ವತಂತ್ರ ಹೇಳಿ ತೋರಿಸಿಕೊಳ್ಳುವ ಹುರುಪಿಗೆ ಬಿದ್ದು ಸಿಗರೇಟಿನ ಹೊಗೆ ಬಿಟ್ಟಂತೆಯೇ ಸರಿ ಈ ಲೇಖನದ ಮನಸ್ಥಿತಿ ಕೂಡ. ತಾನು ನಾಸ್ತಿಕ ಮನಸ್ತಿತಿಯ , ಎಡಪಂತೀಯ ಚಿಂತನೆಗಳಿರುವ ಲೇಖಕಿ ಅಂತ ತೋರಿಸಿಕೊಳ್ಳುವ ಹುರುಪಿಗೆ ಬಿದ್ದೋ., ಅಥವಾ ಪ್ರಗತಿಪರ ಅನ್ನಿಸಿಕೊಳ್ಳುವ ಆಸೆಗೆ ಬಿದ್ದೋ , ಬರೆದ ಹಾಗಿದೆ ಲೇಖನ

Venkatakrishna.K.K. said...

ಸುಂದರವಾದ ಲೇಖನ ಚೆನ್ನಾಗಿದೆ..
ಇದನ್ನು ವಿವಾದ ಯಾಕೆ ಮಾಡಬೇಕೋ ಅರ್ಥ ಆಗ್ತಿಲ್ಲ..!

helabekenisiddu said...

ಮೇಡಂ, ನೀವು ನಿಮ್ಮ ಕಾಲಿಗೆ ಕಲ್ಲು ಚುಚ್ಚಿದ್ದರ ಬಗ್ಗೆ ಬರೆಯುವ ಭರದಲ್ಲಿ ಶ್ರೀಧರಸ್ವಾಮಿಗಳ ಬಗ್ಗೆ ಹರಿಸಬೇಕಾದ ಗಮನ ಹರಿಸಿದಂತಿಲ್ಲ. ಬಹುಷಃ ನೀವು ಹೇಳುತ್ತಿರುವುದು ಸಮಾಧಿ ಮಂದಿರದಿಂದ ಧರ್ಮಧ್ವಜಕ್ಕೆ ಹೋಗುವ ದಾರಿಯಾಗಿರಬಹುದು ಎಂದುಕೊಳ್ಳತ್ತೇನೆ. ಆ ದಾರಿಯಲ್ಲಿ ನಾನು ಹಲವಾರು ಬಾರಿ ಸಾಗಿದ್ದೇನೆ. ಕಲ್ಲು ಚಚ್ಚುವುದು ಹೌದಾದರೂ ಹಳ್ಳಿಯ ಜನತೆಗೆ ಅದ್ಯಾವುದೂ ಹೊಸತಲ್ಲ, ಕಷ್ಟವೂ ಅಲ್ಲ. ಪೇಟೆಯವರಾದರೆ ಕಷ್ಟವಾಗಬಹುದೇನೋ. ಆ ವರದಪುರದ ಜಾಗಕ್ಕೆ ಈಗ್ಗೆ ಸುಮಾರು ಅರವತ್ತು ವರ್ಷಗಳ ಹಿಂದೆ ಶ್ರೀಧರರು ಮಹಾರಾಷ್ಟ್ರದಿಂದ ಬರಿಗಾಲಲ್ಲಿ ನಡೆದುಕೊಂಡು ಬಂದರು. ಈ ವಿಷಯ ನಿಮ್ಮ ಗಮನಕ್ಕೆ ಬಂದಂತಿಲ್ಲ.

ಇನ್ನು ಆಶ್ರಮದ ಕಟ್ಟುಪಾಡುಗಳು ಯಾಕೆಂದರೆ ಆಶ್ರಮ ಆಶ್ರಮವಾಗಿಯೇ ಇರಲಿ ಮೋಜುಮಸ್ತಿಯ ತಾಣವಾಗುವುದು ಬೇಡ ಎಂದು. ಅದನ್ನು ಶ್ರೀಗಳೇ ಆಜ್ಞಾಪಿಸಿದ್ದು. ಶ್ರೀಗಳು ಆಶ್ರಮ ಸ್ಥಾಪನೆ ಮಾಡಿದ್ದು ಧರ್ಮ ಬೋಧನೆ, ಅದ್ಯಾತ್ಮ ಸಾಧನೆಯ ಕೇಂದ್ರವಾಗಿ. ಕಟ್ಟುಪಾಡುಗಳಿಲ್ಲದ ಆಶ್ರಮ ನನಗೆ ತಿಳಿದಂತೆ ಪುಣೆಯ ಓಶೋ ಆಶ್ರಮವೊಂದೆ. ಈ ಹಿಂದಮ್ಮೆ ವದ್ದಳ್ಳಿಗೆ ಬಂದಿದ್ದಾತ ಇಲ್ಲಿ ಯಾವ ದೇವರಿದೆ ಅಂತ ನನ್ನಲ್ಲಿಪ್ರಶ್ನಿಸಿದ್ದ. ಕಣ್ಣು ಬಿಟ್ಟರೆ ಎಲ್ಲೆಡೆ ಕಾಣುವ ಶ್ರೀಗಳ ಫೋಟೋ ನೋಡಿದರೂ ಆ ಸ್ಥಳದ ದೇವರು ಯಾರೆಂದು ಆತನಿಗೆ ತಿಳಿಯಲಿಲ್ಲ! ಹೀಗಿರುತ್ತದೆ ಬರುವ ಯಾತ್ರಿಕರ ಸ್ಥಿತಿ.

ವರದಪುರಕ್ಕೆ ಹೋಗಿಯೂ ನೀವು ಶ್ರೀಧರರ ಜೀವನ, ಸಾಧನೆಯ ಬಗ್ಗೆ ತಿಳಿದುಕೊಳ್ಳುವ ಮನಸ್ಸು ತೋರಲಿಲ್ಲ. ಅವಕಾಶವೊಂದನ್ನು ಕಳೆದುಕೊಂಡಿರಿ......