Friday, February 17, 2012

ದಾಟಬೇಕು ಹಳಹಳಿಕೆಯ ಹಳಿ

’ಹೌದಪ್ಪ ಹೌದೋ ನೀನೇ ದೇವರಾ. ನಿನ್ನ ನೀ ತಿಳಿದರ ನಿನಗಿಲ್ಲೋ ದೂರ...’ ಶಿಶುನಾಳ ಶರೀಫರ ಈ ಸಾಲಿನೊಳಗೊಮ್ಮೆ ಒಳಹೊಕ್ಕು ನೋಡಿ. ಕಾಲಕ್ಕೆ ತಕ್ಕಂತೆ ನಮ್ಮನ್ನು ನಾವೇ ನೋಡಿಕೊಳ್ಳಲು ’ವಾಸ್ತವ’ ಅನ್ನೋ ಕನ್ನಡಿ ಜೇಬಲ್ಲಿಟ್ಟುಕೊಳ್ಳಲೇಬೇಕು.ಮನೆಯ ತುಂಬೆಲ್ಲ ಗಂಧ ಪರಿಮಳ. ದೇವರ ಮುಂದೆ ದೀಪಗಳ ಸೊಬಗು... ಸೌಂದರ್ಯ ಪ್ರಜ್ಞೆಯಿಂದಲೋ, ಭಕ್ತಿಯಿಂದಲೋ ಆ ದೇವರ ಅಲಂಕಾರ ಮತ್ತೂ ನೋಡಬೇಕೆನ್ನಿಸುವಷ್ಟು ಚೆಂದ. ಐವತ್ತರ ಆಕೆಗೆ ಪೂಜೆಗೆ ಮಾರು ಹೂವು ಬೇಕೇಬೇಕು. ಮಳಕ್ಕೆ ಐದು ರೂಪಾಯಿಯಿಂದ ಇಪ್ಪತ್ತು ರೂಪಾಯಿಯಾದರೂ ಸರಿ. ಬೆಳ್ಳಿಮೂರ್ತಿಗಳನ್ನು ಶುಚಿಗೊಳಿಸುವುದೇನು, ತಾಮ್ರದ ಮೂರ್ತಿಗಳನ್ನು ಫಳಫಳ ಎನ್ನಿಸುವುದೇನು, ಎಲ್ಲಿಯೂ ಚುಕ್ಕೆಕೊಳೆ ಕಾಣದಂತೆ ಮಾಡುವಲ್ಲಿ ಆಕೆಯ ದೇಹ ಯಂತ್ರವೇ.

ಆದರೆ ಆಕೆಯ ಮನಸ್ಸು, ಮಾತು ಮಾತ್ರ....; ಹಿಂದೆ ಯಾವತ್ತೋ ಯಾರೋ ಏನೋ ಅಂದಿದ್ದನ್ನೋ, ಅಕಸ್ಮಾತ್ ಘಟಿಸಿದ್ದನ್ನೋ, ಚಿನ್ನದಂಗಡಿಯವ ಮೋಸ ಮಾಡಿದ್ದನ್ನೋ, ಸಂಬಂಧಿಕರ ವರ್ತನೆಯನ್ನೋ, ತಡವಾಗಿ ಏಳುವ ಸೊಸೆ ಅವಸರದಲ್ಲಿ ಚೊಕ್ಕಟವಾಗಿ ಅಂಗಳ ಗುಡಿಸಿಲ್ಲ , ಪಲ್ಯಕ್ಕೆ ಹುಳಿ ಜಾಸ್ತಿ ಹಾಕಿದ್ದನ್ನೋ... ಹೀಗೆ ಆಗಿಹೋಗಿದ್ದನ್ನು ಮರೆಯದೇ, ಆಗಬೇಕಿರುವುದನ್ನು ವಿಪರೀತ ಊಹಿಸಿಕೊಳ್ಳುತ್ತ ತಕರಾರಿನ ನಾಮಾವಳಿ ಹರಿಬಿಡುವ ಅವಳ ಧ್ವನಿ ತಾರಕದಿಂದ ಇಳಿಯುವುದೇ ಇಲ್ಲ; ಇದು ಅವಳ ಪೂಜಾಸಮಯ!

ಹೂವು ತುಟ್ಟಿಯಾದ ಕಾಲದಲ್ಲೂ ದೇವರಿಗೆ ಮಾರು ಮಲ್ಲಿಗೆಯೇ ಬೇಕೆ? ದೇವರಿಗೆ ಹೀಗೆ ಬಾಹ್ಯ ಅಲಂಕಾರ ಮಾಡುವುದರಿಂದ ನಿಮ್ಮ ಮನ ಸಂತುಷ್ಟಗೊಳ್ಳುತ್ತದೆ ಎಂದರೆ ಅದು ಒಳ್ಳೆಯದೇ. ಆದರೆ ಪೂಜಿಸುವಾಗ ಇಷ್ಟೊಂದು ಕೋಪ-ತಾಪ-ಮಾತುಗಳೆಲ್ಲ ಬೇಕೆ? ಮನಶಾಂತಿಗಾಗಿ ಅಲ್ಲವೆ ಪೂಜೆ? ಹೀಗೆಲ್ಲ ಅವಳಿಗೆ ಕೇಳಿದರೆ, ’ದೇವರಿಗೆ ನಾವೆಷ್ಟು ಖರ್ಚು ಮಾಡುತ್ತೇವೋ ಅದರ ದುಪ್ಪಟ್ಟು ಫಲ ಅವ ಕೊಡುತ್ತಾನೆ’ ಎಂದು ಕರಾರುವಕ್ಕಾಗಿ ಹೇಳುವಾಗ ಆಕೆಯ ಅಸಹನೆ ಮರೆಯಾಗದು.

ಸರಿ, ಮೌನವಾಗಿಯೋ, ದೇವಸ್ತುತಿಯ ಮೂಲಕವೋ ಪೂಜೆ ಮಾಡಬಹುದಲ್ಲವೆ? ಎಂದರೆ ಆಕೆ ನಿರುತ್ತರಳಾಗುತ್ತಾಳೆ. ಈ ಪಿಳ್ಳೆಯಿಂದ ನನಗೆ ಬುದ್ಧಿಮಾತಾ? ಇಷ್ಟು ವರ್ಷ ಮನೆ ನಿಭಾಯಿಸಿದ ನಾನು ಇವಳಿಗೆ ತಲೆ ಅಲ್ಲಾಡಿಸಬೇಕಾ? ಎಂದು ಮತ್ತಷ್ಟು ಕುದಿಯತೊಡಗುತ್ತಾಳೆ. ಆಗ ಮತ್ತದೇ ಹಳಹಳಿಕೆ. ಚುಚ್ಚು ಮಾತು, ದೂರು...

ಒಟ್ಟಿನಲ್ಲಿ ತಾನೂ ಸುಮ್ಮನಿರದೇ ಇತರರನ್ನೂ ಸುಮ್ಮನಿರಲು ಬಿಡದೆ ನಕಾರಾತ್ಮಕ ವಲಯವನ್ನು ಆಕೆ ಸೃಷ್ಟಿಸಿಬಿಟ್ಟಿದ್ದಾರೆ. ಇವರ ಈ ದಿನಚರಿ ಮನೆಮಂದಿಯವರೆಲ್ಲ ರ ಮನಸ್ಸನ್ನು ಈಗಾಗಲೇ ಮುದುಡಿಸಿದ್ದಿದೆ. ಕ್ರಮೇಣ ಅವರೆಲ್ಲರಿಂದ ನಿರ್ಲಕ್ಷ್ಯಕ್ಕೂ ಒಳಗಾಗಿದ್ದಾರೆ. ಇದೆಲ್ಲ ಆಕೆಯ ಅರಿವಿಗೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಆಕೆ ನೆಮ್ಮದಿಯಿಂದ ಇಲ್ಲ ಎನ್ನಬಹುದು.

***

ಮೇಲೆ ಉಲ್ಲೇಖಿಸಿರುವ ಈ ’ದಿನಚರಿ’ಯ ಸಾಲುಗಳಲ್ಲಿ ನಿಮ್ಮ ಅಮ್ಮ, ಅತ್ತೆ, ಅಕ್ಕ, ಅಜ್ಜಿ ಅಷ್ಟೇ ಯಾಕೆ ಅಪ್ಪ, ಮಾವ, ಅಜ್ಜ ಹೀಗೇ ಯಾರಾದರೂ ಕಾಣಸಿಗಬಹುದು. ಇಲ್ಲಿ ಪೂಜೆ ಎನ್ನುವುದು ಸಾಂಕೇತಿಕ. ಪೂಜೆಯ ಬದಲಾಗಿ ಅದು ದಿನಿತ್ಯದ ಬೇರಾವುದೇ ಚಟುವಟಿಕೆಯಲ್ಲಿ ಅದು ವ್ಯಕ್ತವಾಗುತ್ತಿರಬಹುದು. ಇಲ್ಲಿ ಗಮನಿಸಬೇಕಾದದ್ದು ಅವರ ವಯೋಸಹಜ ದೈಹಿಕ ಮತ್ತು ಮನೋಸಮಸ್ಯೆ ಮತ್ತು ಹಲವು ವರ್ಷಗಳಿಂದ ಪೋಷಿಸಿಕೊಂಡುಬಂದ ನಂಬಿಕೆ ಹಾಗೂ ಚಲಾವಣೆಯಲ್ಲಿಲ್ಲದ ಸಮರ್ಥನೆಗಳನ್ನು. ಎಲ್ಲಕ್ಕಿಂತ ಮುಖ್ಯವಾಗಿ ಬದಲಾವಣೆಗೆ ತೆರೆದುಕೊಳ್ಳದ ಸಂಕುಚಿತ ಮನಸ್ಸನ್ನು.

ಅವರು ಹೀಗೇಕೆ?
ಮದುವೆಯಾದಾಗಿನಿಂದಲೂ ಆಕೆ ಗಂಡ,ಮಕ್ಕಳು, ಮನೆಗೆಲಸದ ಹೊರತಾಗಿ ಕಣ್ಣಾಡಿಸಿದ್ದೇ ಇಲ್ಲ. ಹೊರಜಗತ್ತಿಗೆ ತೆರೆದುಕೊಳ್ಳದ ಆಕೆಗೆ ವರ್ತಮಾನದ ಕಾವು ಬಡಿದಿಲ್ಲ. ತನ್ನ ಮನೆಗೆ ತಾನೇ ಸಾಮ್ರಾಜ್ಞಿ. ಎಲ್ಲರನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳುತ್ತ ಅಸ್ತಿತ್ವ ಕಾಯ್ದುಕೊಂಡಿದ್ದಾಳೆ. ಆದರೆ ಮಕ್ಕಳ ಸಂಸಾರ ಬೆಳೆಯುತ್ತಿದ್ದಂತೆ ಅವರವರ ಜೀವನಕ್ರಮ, ಆದ್ಯತೆ, ಧೋರಣೆ ಕಾಲಮಾನಕ್ಕೆ ತಕ್ಕಂತೆ ಬದಲಾದಾಗ ಆಕೆಯ ಅಸ್ತಿತ್ವದ ಬೇರು ಅಲ್ಲಾಡತೊಡಗಿದೆ. ತಲೆಮಾರಿನ ನಂಬಿಕೆಗಳಿಗೆ ಜೋತುಬಿದ್ದು, ಮನಸ್ಸು ಕಿರಿದು ಮಾಡಿಕೊಳ್ಳುತ್ತ ಅಸಹನೆ, ಅಶಾಂತಿಯನ್ನು ವಿನಾಕಾರಣ ಒಳಗು ಮಾಡಿಕೊಂಡಿದ್ದಾರೆ. ಇದಿಷ್ಟು ಮೇಲ್ಪದರು.

ಮನೋಚಿಕಿತ್ಸಕ ಡಾ. ವಿನೋದ ಛೆಬ್ಬಿ ಈ ಸಮಸ್ಯೆಗೆ ವಿವರಣೆ ನೀಡುವುದು ಹೀಗೆ, ’ಇದೊಂದು ಮನೋರೋಗ. ಔಷಧಿ ಕೊಡಬೇಕಾಗಿಲ್ಲ. ಮನಸ್ಸಿಗೆ ಚಿಕಿತ್ಸೆ ಬೇಕು. ಇವರು ಆರೋಗ್ಯವಂತರೇ. ಸಮಸ್ಯೆಗಳಿಂದ ಪೀಡಿತರಾಗಿ ತಮ್ಮದೇ ಆದ ಅನುಭವದಿಂದ ಕಂಡುಕೊಂಡ ಮಾರ್ಗವನ್ನು ಅನುಸರಿಸುತ್ತ ಹೋಗುತ್ತಿದ್ದಾರೆ. ಈ ಮಾರ್ಗ ನಿಷ್ಪ್ರಯೋಜಕ ಎಂದು ಗೊತ್ತಿದ್ದರೂ ಬೇರೆ ಮಾರ್ಗ ಕಂಡುಕೊಳ್ಳಲು ವ್ಯವಧಾನ, ತಾಳ್ಮೆ ಇವರಲ್ಲಿಲ್ಲ. ಆದ್ದರಿಂದ ಈ ಮಾರ್ಗದಲ್ಲೇ ಮುಂದುವರಿಯುತ್ತಿದ್ದಾರೆ. ಹಲವಾರು ವರ್ಷಗಳಿಂದ ಪೋಷಿಸಿಕೊಂಡು ಬಂದ ನಂಬಿಕೆ ಮುರಿದರೆ ಏನಾದರೂ ಅವಘಡವಾದೀತು ಎನ್ನುವ ಭಯ ಇವರಲ್ಲಿ ಬೇರೂರಿದೆ’.

’ಎಡಕ್ಕೆಷ್ಟು, ಬಲಕ್ಕೆಷ್ಟು ಹೂ ಏರಿಸಬೇಕು? ಅದು ತಪ್ಪಿದರೆ ಏನಾಗುತ್ತದೋ ಎಂಬ ಆತಂಕ. ಅದನ್ನು ಹೋಗಲಾಡಿಸಿಕೊಳ್ಳಲು ದೇವರಿಗೆ ಜಾಸ್ತಿ ಹೂ ಏರಿಸುವ ನೆಪ. ವಾಸ್ತವಿಕ ನೆಲೆಯಲ್ಲಿ ಯೋಚಿಸಲಾರದ ಇವರಿಗೆ ನೀವು ರೂಢಿಸಿಕೊಂಡಿರುವುದು ಮೂಢನಂಬಿಕೆ ಎಂದರೆ ಉರಿದೇಳುತ್ತಾರೆ. ಸೂಕ್ತ ಕಾಲಕ್ಕೆ ಚಿಕಿತ್ಸೆ ನೀಡದ ಕಾರಣ ಭಯ, ಆತಂಕ ಗೀಳುರೋಗವಾಗಿ ಮಾರ್ಪಾಡಾಗಿದೆ. ಪೂಜೆ ಬಹಿರ್ಮುಖ ಚಟುವಟಿಕೆ. ಪೂಜೆಯಿಂದ ತೃಪ್ತಿ ಇಲ್ಲ. ಆದರೂ ಇದರಿಂದ ಹೊರಬರಬೇಕು ಎನ್ನುವುದನ್ನು ಅವರು ಯೋಚಿಸುತ್ತಿಲ್ಲ. ಮಾರುಮಾರು ಹೂವು ಏರಿಸಿ ಪೂಜಿಸುವುದನ್ನು ಬಿಟ್ಟು ಅವರು ಆತ್ಮವಿಶ್ಲೇಷಣೆ ಮಾಡಿಕೊಳ್ಳಬೇಕಿದೆ.’

ಇದಕ್ಕೆ ಕಾರಣ

’ಈ ಸಮಸ್ಯೆಗೆ ಶೈಶವಾವಸ್ಥೆಯಲ್ಲಿ ದೊರೆತ ಪರಿಸರ, ಸಂಸ್ಕಾರವೂ ಕಾರಣ. ಕುತೂಹಲದ ಅನ್ವೇಷಣೆ, ಅದರದೇ ಆದ ಸಾಮರ್ಥ್ಯ ಮಗುವಿಗಿರುತ್ತದೆ. ಆದರೆ ಅದನ್ನು ಅರಿಯದ ಬಹುಪಾಲು ಪೋಷಕರು ಅವರ ಸಾಮರ್ಥ್ಯಗಳನ್ನು ಮೂಲೆಗೆ ಸರಿಸುತ್ತಾರೆ. ಪೋಷಕರ ಸಂದೇಶಗಳನ್ನು ಭಾವನಾತ್ಮಕವಾಗಿಯಷ್ಟೇ ಸ್ವೀಕರಿಸುವ ಮಗು ನಕಾರಾತ್ಮಕ ಅಂಶಗಳೊಳಗೆ ಬಂಯಾಗುತ್ತಾ ಹೋಗುತ್ತದೆ. ಆದರೆ ಕ್ರಮೇಣ ಮಗು ಬೆಳೆದಂತೆ ವೈಚಾರಿಕ, ತರ್ಕಬದ್ಧ ಆಲೋಚನೆಗಳನ್ನು ವ್ಯಕ್ತಪಡಿಸಿದಾಗಲೂ ಪೋಷಕರು ಮಗುವಿಗೆ ಪೂರಕವಾಗಿ ಸ್ಪಂದಿಸದೇ ಇದ್ದಾಗ ಹಿರಿಯರ ನಕಾರಾತ್ಮಕ ಸಂದೇಶಗಳನ್ನೇ ಅದು ಹೊದ್ದುಕೊಳ್ಳುತ್ತಾ ಹೋಗುತ್ತದೆ. ವಯಸ್ಸಿಗೆ ಅನುಗುಣವಾಗಿ ತನ್ನೊಳಗಿನ ಆತಂಕ, ಭಯಕ್ಕೆ ಆಧಾರ ಹುಡುಕಿಕೊಳ್ಳುತ್ತದೆ. ಮುಂದೆ ಬೆಳೆದಂತೆ ಆ ವ್ಯಕ್ತಿ ತನ್ನ ವಿಚಾರವೇ ಸರಿ ಎಂಬ ವಾದ ಮತ್ತು ಅದಕ್ಕೆ ಆಧಾರಗಳನ್ನು ನೀಡುತ್ತ ’ಪ್ರಬಲ ’ವ್ಯಕ್ತಿತ್ವ ರೂಢಿಸಿಕೊಳ್ಳುತ್ತಾನೆ.

ಅವರನ್ನು ಮಗುವಿನಂತೆ ನೋಡಿ

*ಇಂಥ ಮನಸ್ಥಿತಿಯವರಿಗೆ ಬೇಕಿರುವುದು ಮನೆಮಂದಿಯ, ಸ್ನೇಹಿತರ ಸಾಂತ್ವನ, ಸಮಾಧಾನ. ತಮ್ಮ ಭಯ, ಆತಂಕ ಮುಚ್ಚಿಡಲು ಅವರು ಯಾವುದೇ ಮಾರ್ಗವನ್ನು ಅನುಸರಿಸುತ್ತಿದ್ದರೂ ಅದು ತಪ್ಪಲ್ಲ ಎಂದು ನೇರವಾಗಿ ಹೇಳಕೂಡದು.

*ನೀನು ಮಾಡುತ್ತಿರುವುದು ಸರಿಯಾಗಿಯೇ ಇದೆ ಎನ್ನುತ್ತ ನಿಧಾನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ತರಕಾರಿ ತಿನ್ನದ ಮಕ್ಕಳಿಗೆ, ಅವು ಇಷ್ಟಪಡುವ ಪದಾರ್ಥದಲ್ಲಿ ಅದನ್ನು ಹುದುಗಿಸಿ, ಕಣ್ಣುತಪ್ಪಿಸಿ ತಿನ್ನಿಸುತ್ತೇವಲ್ಲ ಹಾಗೆ. ಪರೋಕ್ಷವಾಗಿ ತಾವೇ ತಾವಾಗೇ ಸಮಸ್ಯೆಗಳಿಂದ ಹೊರಬರುವಂತೆ ಮಾಡಬೇಕು.

*ಮನಶಾಂತಿ ಕಂಡುಕೊಳ್ಳುವುದು ಧ್ಯಾನದಲ್ಲಿ, ಕಾಯಕದಲ್ಲಿ, ಸೇವೆಯಲ್ಲಿ, ಸಾಮರಸ್ಯದಲ್ಲಿ, ಹವ್ಯಾಸದಲ್ಲಿ, ಸಾಧನೆಯಲ್ಲಿ ದೆ ಎನ್ನುವುದನ್ನು ಚಿಕ್ಕಪುಟ್ಟ ನಿದರ್ಶನ, ಉದಾಹರಣೆ ಮೂಲಕ ವಿವರಿಸಬಹುದು. ನಿಮಗಿರುವ ಸಮಸ್ಯೆ ಏನೂ ಅಲ್ಲ. ಇದು ಮನಸ್ಸಿಗೆ ಸಂಬಂಧಿಸಿದ್ದು. ಆದರೆ ವಾಸ್ತವ ಜಗತ್ತಿನಲ್ಲಿ ಪರಿಹಾರಗಳಿಲ್ಲದ ಎಷ್ಟೋ ಸಮಸ್ಯೆಗಳಿವೆ. ಅವುಗಳೊಂದಿಗೆ ಆತ್ಮವಿಶ್ವಾಸದಿಂದ ಬದುಕುತ್ತಿರುವವರು ಎಷ್ಟೋ ಜನರಿದ್ದಾರೆ ಎನ್ನುವುದನ್ನು ಸಾಕ್ಷ್ಯಗಳೊಂದಿಗೆ ಮನದಟ್ಟು ಮಾಡಿಕೊಡಬೇಕು. ಸಾಧ್ಯವಾದಲ್ಲಿ ಅನಾಥಾಶ್ರಮ, ಅಬಲಾಶ್ರಮಗಳಿಗೂ ಕರೆದೊಯ್ಯಿರಿ.

*ಅವರಲ್ಲಿರುವ ಪ್ರತಿಭೆ, ಹವ್ಯಾಸ, ಸಕಾರಾತ್ಮಕ ಗುಣವನ್ನು ಗುರುತಿಸಿ ಅದನ್ನು ಬೆಳೆಸುವತ್ತ ಪ್ರೇರೇಪಿಸಬೇಕು. ಸಮಾನ ಆಸಕ್ತರೊಂದಿಗೆ ಸಂಪರ್ಕ ಸಾಧಿಸುವಿಕೆ ಮತ್ತು ಕಲಿಕೆಗೂ ವಯಸ್ಸಿಗೂ ಸಂಬಂಧವಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡಿ.

*ಪ್ರತಿಯೊಬ್ಬರದೂ ಒಂದಿಲ್ಲಾ ಒಂದು ಆತಂಕ, ಭಯದ ಬದುಕು. ಆದರೆ ಅವು ನಮ್ಮನ್ನೇ ನುಂಗಿಹಾಕದಂತೆ ಎಚ್ಚರ ವಹಿಸಬೇಕು. ಭಯಕ್ಕೆ, ಆತಂಕಕ್ಕೆ ತಳ್ಳಿದ ಸಂದರ್ಭ ಮತ್ತು ಕಾರಣರಾದವರನ್ನು, ಪರಿಸರವನ್ನು ಹಳಿಯುವುದಕ್ಕಿಂತ ಅದರಿಂದ ಹೊರಬಂದು ನನ್ನ ಜೀವನದ ಸಾರಥಿ ನಾನೇ ಎಂಬುದನ್ನು ನಿರ್ಧರಿಸಿ. ಕಾಲಕಾಲಕ್ಕೆ ನಂಬಿಕೆಗಳನ್ನು ಬದಲಾಯಿಸಿಕೊಳ್ಳಬೇಕು. ವಾಸ್ತವದ ಕನ್ನಡಿಯೊಳಗೆ ಇಣುಕಬೇಕು. ಆಗಷ್ಟೇ ಹಳಹಳಿಕೆಯ ಹಳಿದಾಟಿ ಮತ್ತೆ ಮತ್ತೆ ಮಗುವಾಗುತ್ತೀರಿ. ಅಸ್ತಿತ್ವ ಕಾಯ್ದುಕೊಂಡಷ್ಟೂ
ಸದಾಕಾಲವೂ ಚಿರಯೌವನ ನಿಮ್ಮ ಉಡಿಯೊಳಗೇ.

-ಶ್ರೀದೇವಿ ಕಳಸದ
(ವಿಜಯ ಕರ್ನಾಟಕದ ’ಸುಖಿ ವಿಜಯ’ದಲ್ಲಿ ಪ್ರಕಟ ೧೫-೦೧-೨೦೧೨)

3 comments:

ಚುಕ್ಕಿಚಿತ್ತಾರ said...

ಶ್ರೀದೇವಿಯವರೆ,
ಉತ್ತಮವಾಗಿ ಬರೆದಿದ್ದೀರಿ. ಅತಿಯಾಗಿ ದೇವರನ್ನು ನ೦ಬುವುದು ಈ ದಿನಚರಿ... ಗೀಳು ರೋಗದ ಒ೦ದು ರೂಪ. ದೇವರಿಗೆ ದೀಪ ಹಚ್ಚುವುದು ಸ್ವಲ್ಪ ತಡವಾಯಿತು ಎ೦ದರೆ, ಹಚ್ಚಿದ ದೀಪ ಕಾರಣಾ೦ತರದಿ೦ದ ಎಣ್ಣೆ ಖಾಲಿಯಾಗುವ ಮೊದಲೇ ನ೦ದಿಹೋದರೆ, ಹೀಗೆ ಆತ೦ಕಪಡಲು ಕಾರಣಗಳು ಯಾವುದಾದರೂ ಸರಿ.. ಆತ೦ಕಪಡುವುದು ತಮ್ಮ ಸ೦ಸ್ಕಾರದ ಭಾಗವನ್ನಾಗಿ ಮಾಡಿಕೊ೦ಡುಬಿಡುತ್ತಾರೆ.
ಉತ್ತಮವಾಗಿ ವಿಶ್ಲೇಷಿಸಿದ್ದೀರಿ.ಕೆಲ ದಿನಗಳ ಮೊದಲು ನಾನೂ ಗೀಳು ಪ್ರವ್ರುತ್ತಿಯ ಬಗೆಗೆ ಒ೦ದು ಲೇಖನ ಬರೆದಿದ್ದೆ.ಅದರ ಲಿ೦ಕ್ ಇಲ್ಲಿದೆ ಪುರಸೊತ್ತಾದಾಗ ನೋಡಿ.http://chukkichittaara.blogspot.in/2009/12/blog-post_06.html

Dr.D.T.Krishna Murthy. said...

ಶ್ರೀದೇವಿಯವರೇ;ಉತ್ತಮ ಬರಹ.ಇಷ್ಟವಾಯಿತು.ನನ್ನ ಬ್ಲಾಗಿಗೊಮ್ಮೆ ಭೇಟಿಕೊಡಿ.ನಮಸ್ಕಾರ.

sunaath said...

ಶ್ರೀದೇವಿ,
ವಿಚಾರಪೂರ್ಣ ಲೇಖನ. ಅಭಿನಂದನೆಗಳು.