Sunday, February 26, 2012

ಇವತ್ತು ಭಾನುವಾರ; ಓಹ್ ಪೇರೆಂಟ್ಸ್ ಮೀಟ್!


ಗಡಿಯಾರ ಹನ್ನೊಂದಾಯಿತು ಎನ್ನುತ್ತಿದೆ. ಮೆತ್ತನೆಯ ಹಾಸಿಗೆ ನಿದ್ದೆ ತರಿಸುತ್ತಿಲ್ಲ. ಒಣಗಿದ ಗೂನುಬೆನ್ನು. ವಿಪರೀತ ಕೆರೆತ. ಕೈಗೆ ಬೆನ್ನು ನಿಲುಕುತ್ತಿಲ್ಲ. ಪೇಪರ್ ಸುರುಳಿಯಿಂದ ಕೆರೆದುಕೊಂಡರೂ ಸಮಾಧಾನವೆನ್ನಿಸುತ್ತಿಲ್ಲ. ವೃದ್ಧ ಪತಿ ಈಗಷ್ಟೇ ನಿದ್ದೆಗೆ ಜಾರಿದ್ದಾರೆ. ಕರೆಗಂಟೆ ಒತ್ತಿದರೆ ಸಹಾಯಕರು ಬಂದಾರು. ಬೆನ್ನಿನ ಕೆರೆತ ಶಮನ ಮಾಡಿಯಾರು. ಆದರೆ...?

ಅವತ್ತೊಂದಿನ ಬೆನ್ನು ಕೆರೆಯುತ್ತಿದೆ ಎಂದಾಗ ನಾಲ್ಕು ವರ್ಷದ ಮೊಮ್ಮಗ ಓಡಿ ಬಂದು ಬೆನ್ನು ಗೀರತೊಡಗಿದ್ದು ನೆನಪಾಗತೊಡಗಿತು... ‘ಪುಟ್ಟಾ ಎಷ್ಟು ಹಿತ ಅನ್ನಸ್ತಿದೆ ನೋಡು ನೀ ಹೀಗೆ ಕೈಯ್ಯಾಡಿಸ್ತಿದ್ರೆ... ಹಂಗೆ ಕುತ್ತಿಗೆ ಕೆಳಗೆ ಚೂರು ಕೆರಿಯೋ ಅಂತ ಅಜ್ಜಿ ಹೇಳ್ತಿರಬೇಕಾದ್ರೆ, ನಾಲ್ಕು ವರ್ಷದ ಮೊಮ್ಮಗ ಅಜ್ಜಿಯ ಒಣಬೆನ್ನು ಅನ್ನೋ ಕ್ಯಾನ್ವಾಸ್ ಮೇಲೆ ಎಳೆಉಗುರುಗಳಿಂದ ಬಿಳಿಬಿಳಿಯಾಗಿ ಗೀರ್‍ತಾ... ‘ಇರಜ್ಜಿ... ನಾನಿನ್ನೂ ಈಗ ಮನೆ ಬರದೆ. ಬಾತುಕೋಳಿನೂ ಆಯ್ತು. ತೆಂಗಿನ ಮರ ಬರೆಯೋವಾಗ ಕುತ್ತಿಗೆ ಹತ್ರ ಬರ್‍ತೀನಿ ಆಯ್ತಾ?’ ಎಂದು ತೋಳು ಅಲ್ಲಾಡಿಸಿದಾಗ ಅಜ್ಜಿಯ ಕೆರೆತ ಹಾರ್‌ಹೋಗಿ ಕುಲುಕುಲು ನಗು ಆವರಿಸಿಕೊಂಡಿತ್ತು.

ವೃದ್ಧದಂಪತಿ ಮಗ ಸೊಸೆ ಆಫೀಸಿನಿಂದ ಬರೋದನ್ನೇ ಕಾಯ್ತಾ, ಮೊಮ್ಮಗನ ‘ಚಿತ್ರಕಥೆ’ ಹೇಳಬೇಕು ಅನ್ನೋ ಉತ್ಸಾಹದಲ್ಲಿದ್ದರು. ರಾತ್ರಿ ಹತ್ತುಗಂಟೆಯಾಗಿದ್ದರೂ ಅಪ್ಪ-ಅಮ್ಮನನ್ನೇ ಕಾಯ್ದುಕೊಂಡಿದ್ದ ಮಗು, ಅವರು ಬಂದೊಡನೇ, ‘ಮಮ್ಮಾ ಅಜ್ಜಿಗೆ ಇವತ್ತು ತುಂಬಾ ಬೆನ್ನು ಕೆರೀತಾ ಇತ್ತಾ, ಆಗ ನಾನು...’ ಮಗನ ಮಾತನ್ನು ಅರ್ಧಕ್ಕೆ ತಡೆದು ‘ಹೌದಾ ಆಮೇಲೆ?‘ ಎಂದು ಪ್ರಶ್ನಿಸಿದಳು ಅಮ್ಮ. ‘ಆಮೇಲೆ ನಾನು ಬೆನ್ನ ಮೇಲೆ ಉಗುರಿನಿಂದ...’ ಮತ್ತೆ ಮಗುವಿನ ಮಾತಿಗೆ ಕತ್ತರಿ ಹಾಕಿದ ಆಕೆ ‘ಅಯ್ಯೋ ಹಾಗೆಲ್ಲಾ ಮಾಡಬಾರದು. ಬೆನ್ನಿನ ಕೊಳೆ ಉಗುರಲ್ಲಿ ಸೇರ್‍ಕೊಳತ್ತೆ. ಮೊದ್ಲು ಕೈತೊಳಿ ಸೋಪ್ ಹಾಕ್ಕೊಂಡು’ ಎಂದು ಬಚ್ಚಲು ಮನೆಗೆ ಎಳೆದೊಯ್ದಳು.

ಮುಖ ಸಪ್ಪೆ ಮಾಡಿಕೊಂಡ ವೃದ್ಧ ದಂಪತಿ ರೂಮಿನತ್ತ ನಡೆದರು. ಇದೆಲ್ಲವನ್ನೂ ಗಮನಿಸಿದ ಮಗ ಹೆಂಡತಿಯನ್ನುದ್ದೇಶಿಸಿ, ‘ಬೆನ್ನು ಕೆರೆಯೋದಕ್ಕೆ ಅದೊಂದು ಸ್ಟಿಕ್ ಬಂದಿದೆಯಲ್ಲ ತಂದುಕೊಟ್ಬಿಡು ನಾಳೆ’ ಅಂದ. ಅಲ್ಲಿಗೆ ಆ ದಿನ ಮುಗಿಯಿತು. ನಾಳೆಗೆ ಕೆರೆಯುವ ಸ್ಟಿಕ್ ಬರುತ್ತದೆ.


ಸ್ಪರ್ಶವಿಲ್ಲದ ಸುಖ

ಈಗ ವೃದ್ಧದಂಪತಿ ಕಳೆದ ಮೂರು ತಿಂಗಳಿನಿಂದ ವಾಸವಾಗಿರೋದು ವೃದ್ಧರಿಗಾಗೇ ಇರುವ ಹಾಸ್ಟೇಲ್ ಒಂದರಲ್ಲಿ. ಸುಮಾರು ಇಪ್ಪತ್ತು ಲಕ್ಷ ಕೊಟ್ಟು ಇಲ್ಲಿ ಅಪ್ಪ-ಅಮ್ಮನನ್ನು ಮಗ ಖಾಯಮ್ಮಾಗಿ ತಂದಿರಿಸಿದ್ದಾನೆ. ಮಕ್ಕಳು, ಮೊಮ್ಮಕ್ಕಳು ಇರುವುದಿಲ್ಲ ಜೊತೆಗೆ ಎನ್ನುವುದನ್ನು ಬಿಟ್ಟರೆ ಉಳಿದೆಲ್ಲ ಐಷಾರಾಮಿ ಸವಲತ್ತುಗಳು, ಸೇವೆಗಳು, ಮನರಂಜನೆ ೨೪ ಗಂಟೆಗಳ ಕಾಲ ಲಭ್ಯ. ಹದಿನೈದು ದಿನಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ಮಕ್ಕಳ ಸಂಸಾರ ಪೇರೆಂಟ್ಸ್ ಮೀಟ್‌ಗೆ ಬಂದು ಹೋಗುತ್ತದೆ. ಇದನ್ನು ವೃದ್ಧಾಶ್ರಮ ಎನ್ನಲಾಗದ್ದರಿಂದ ವೃದ್ಧರ ಹೈಟೆಕ್ ಹಾಸ್ಟೆಲ್ ಎನ್ನಬಹುದು.

ಇದು ಪುರುಸೊತ್ತಿಲ್ಲದ ಊರು ಬೆಂಗಳೂರಿನಲ್ಲಿರುವ ಮೇಲ್ಮಧ್ಯಮ ವರ್ಗದ ಸಂಸಾರವೊಂದರ ಚಿತ್ರಣ. ಓದು ಮುಗಿಯುತ್ತದೆ. ಕೆಲಸವೂ ಸಿಗುತ್ತದೆ. ಬೇಕೆಂದರೆ ಮದುವೆಯೂ ಸೈ. ಸಮಯವಿದ್ದರೆ ಸಲಹುವವರಿದ್ದರೆ ಮಕ್ಕಳು, ಇಲ್ಲದಿದ್ದರೆ ಅದೂ ಇಲ್ಲ. ಬಯಸಿದ್ದಕ್ಕಿಂತ ಹೆಚ್ಚೇ ಉಡಿ ತುಂಬುತ್ತ ಹೋದಂತೆ ಆಸೆಗಳ ಹಿಗ್ಗಾಟ. ಅವಕ್ಕೆ ತಕ್ಕಂತೆ ಗಾಣದೆತ್ತಾಗುವುದು. ದುಡಿಮೆ ಸಮಯ ನುಂಗಿ ಖಾಸಗಿ ಮತ್ತು ಕೌಟುಂಬಿಕ ಬದುಕಿನ ದಾರಿಯನ್ನು ಕಿರಿದುಗೊಳಿಸುತ್ತದೆ. ಆಗ ತಾನು ತನ್ನದಷ್ಟೇ ಎಂದು ಹೊರಟ ಪ್ರಯಾಣಿಕನಿಗೆ ಜೊತೆಗಿರುವವರು, ಹೊತ್ತು-ಹೆತ್ತ ಜೀವಗಳು ಲಗೇಜಿನಂತೆ ವಜ್ಜೆ ಎನ್ನಿಸಿ ಕೀಸರು ಹಿಡಿಸಿಬಿಡುತ್ತವೆ.

ಇಂಥ ಹಿರಿಥೈಲಿಯ ಕೀಸರನ್ನೇ ಕಾಯುತ್ತಿರುತ್ತವೆ ಮಹಾನಗರಿಯ ಕೆಲ ವಾಣಿಜ್ಯತಲೆಗಳು. ಆಗ ಹುಟ್ಟಿಕೊಳ್ಳುವುದೇ ಇಂಥ ಹೈಟೆಕ್ ವೃದ್ಧಾಶ್ರಮ ಅಥವಾ ಹಾಸ್ಟೆಲ್‌ಗಳು. ಇಂತಿಷ್ಟು ಲಕ್ಷ ಎಂದು ಈ ಹಾಸ್ಟೆಲ್‌ಗಳ ಕೊಕ್ಕೆಗೆ ರೊಕ್ಕ ಸಿಕ್ಕಿಸಿದರೆ ಕೊನೆಯವರೆಗೂ ಅಪ್ಪ-ಅಮ್ಮನನ್ನು ಜೋಪಾನವಾಗಿ ನೋಡಿಕೊಳ್ಳುತ್ತವೆ. ಇದಿಷ್ಟು ಇಂದಿನ ಜೀವನಶೈಲಿಯ ಮೇಲ್ಪದರ.

ಬಿತ್ತಿದಂತೆ ಬೆಳೆ

ಆದರೆ ಹೀಗೆ ಗೂಟ ಕಿತ್ತುಕೊಂಡು ಓಡುವ ಕುದುರೆಯನ್ನು ನಿಲ್ಲಿಸಿ ಆಗೊಮ್ಮೆ ಈಗೊಮ್ಮೆಯಾದರೂ ಯೋಚಿಸಲೇಬೇಕಲ್ಲ. ವೃದ್ಧಾಪ್ಯದಲ್ಲಿ ‘ಹೈಟೆಕ್‌ವಾಸ’ಕ್ಕೆ ತಳ್ಳಿದ್ದು ಪೂರ್ತಿ ಮಕ್ಕಳದ್ದೇ ತಪ್ಪಲ್ಲ. ಇದು ಪೋಷಕರ ಮೂಲ ಕೊಡುಗೆಯೂ ಆಗಿರಬಹುದು. ವೃದ್ಧಾಪ್ಯ; ಬೆಚ್ಚಗಿನ, ಭರವಸೆಯ ಸ್ಪರ್ಶ, ಆಲಿಸುವ ಕಿವಿ, ಹಿಡಿ ಪ್ರೀತಿಯನ್ನು ಮಕ್ಕಳಿಂದ ಬಯಸುತ್ತದೆಯೋ ಹಾಗೆ ಪೋಷಕರಿಂದ ಮಕ್ಕಳ ಬಾಲ್ಯವೂ ಬಯಸಿರುತ್ತದೆಯಲ್ಲವೆ? ಕೇವಲ ಸವಲತ್ತು, ಸೌಕರ್ಯಗಳನ್ನು ಪೂರೈಸಿದರೆ ಪೋಷಕತ್ವದ ಜವಾಬ್ದಾರಿ ಮುಗಿಯಿತು ಅಂತಲ್ಲ. ಕೌಟುಂಬಿಕ ಬಂಧವನ್ನು (ಬಾಂಡಿಂಗ್) ಅದು ಬೇಡುತ್ತದೆ. ಆ ಬಂಧ ಭವಿಷ್ಯದ ಪೀಳಿಗೆಗೂ ಬುನಾದಿ ಎನ್ನುವ ಪ್ರಜ್ಞೆಯಿಂದಾದರೂ ಪುರುಸೊತ್ತು ಮಾಡಿಕೊಂಡು ಯೋಚಿಸಲೇಬೇಕು.

ಸಣ್ಣಮಗುವೊಂದು ಕಾರುಗಳೊಂದಿಗೆ ಆಟವಾಡುವಾಗ ತಮಾಷೆಗೂ ಕೇಳದಿದ್ದರೆ ಸಾಕು; ನಮ್ಮನ್ನು ಯಾವಾಗ ಇಂಥ ಕಾರಿನಲ್ಲಿ ಕರೆದೊಯ್ಯುತ್ತೀಯಾ? ಅಥವಾ ಎದೆಯುದ್ದ ಬೆಳೆದ ಮಕ್ಕಳನ್ನು ಇಷ್ಟು ಮಾರ್ಕ್ಸ್ ತೆಗೆದುಕೊಂಡರೆ ನಿನಗೆಲ್ಲಿ ಕೆಲಸ ಸಿಗುತ್ತದೆ? ಅವರ ಮಗ ಅಮೆರಿಕದಲ್ಲಿ. ನೀನಿನ್ನೂ ಇಲ್ಲೇ. ಹೀಗೆ ತಲೆಯಲ್ಲಿ ಒಂದಿಲ್ಲಾ ಒಂದು ಆಸೆ, ನಿರೀಕ್ಷೆಗಳ ಕೋಸಂಬರಿಯನ್ನು ಸದಾ ಕಲಸುತ್ತಾ ಇದ್ದರೆ ಬಂಧ ಹೇಗೆ ಬೆಳೆದೀತು? ಬದುಕು ಹೇಗೆ ರುಚಿ ಕಟ್ಟೀತು?

ಸರಳ ಬದುಕು ಮತ್ತು ಅದಕ್ಕೆ ಬೇಕಿರುವ ಅವಶ್ಯಕ ಸಂಗತಿ-ಸರಕುಗಳು ಸಾಕಲ್ಲವೇ. ಅದರಾಚೆಗಿನ ಆಡಂಬರ, ಪ್ರದರ್ಶನ ಬೇಕಿಲ್ಲವಲ್ಲ? ಜೀವನದ ಸಾರ್ಥಕತೆಗೆ ಬೇಕಿರುವುದು ಅರ್ಥಪೂರ್ಣ ಕನಸು ಮತ್ತು ಅವುಗಳ ಈಡೆರಿಕೆಯ ಕ್ರಮ. ಪೋಷಕರು ಈ ಬುನಾದಿ ಹಾಕಿಕೊಡದಿದ್ದರೆ ಖಂಡಿತ ಕನಸು ಮತ್ತು ಆಸೆಯ ನಡುವಿನ ತೆಳುಗೆರೆ ಅಳಿಸಿ ಆವಿಯಂಥ ಧೂಳು ಎದ್ದೀತು. ಹಾಗೆ ಎದ್ದಿದ್ದು ಕ್ರಮೇಣ ಕಣ್ಣುಗಳನ್ನಾವರಿಸಿಬಿಟ್ಟರೆ ಬದುಕಿನ ಗಡಿಯಾರ ನಿಂತಂತೆ.

ನಾವೆಂಬಲ್ಲಿ ಬೆಳಕು

ಅಪ್ಪ ನೆಟ್ಟ ಆಲದ ಮರಕ್ಕೇ ನೇತು ಹಾಕಿಕೊಳ್ಳುವಂಥ ಮನಸ್ಥಿತಿಯಲ್ಲೇನೂ ಇಂದಿನ ಮಕ್ಕಳಿಲ್ಲ. ಸೂಕ್ಷ್ಮ , ವಿಚಾರವಂತ, ವಿಶೇಷ ಕನಸು, ಗುರಿಗಳನ್ನಿಟ್ಟುಕೊಂಡವರು ಇಂದಿನ ಮಕ್ಕಳು. ತಾನು ತನ್ನದಷ್ಟೇ ಎನ್ನದೆ ಕುಟುಂಬದೊಳಗೆ ನಾನು ಎಂದುಕೊಂಡಲ್ಲಿ ಪರಸ್ಪರ ನೊಂದುಕೊಳ್ಳುವ ಪ್ರಮೇಯವಿರುವುದಿಲ್ಲ. ಬದಲಾದ ಜೀವನಶೈಲಿ ಆದ್ಯತೆಗಳಿಗೆ ಅನುಸಾರವಾಗಿ ಪೋಷಕರು ಮತ್ತು ಮಕ್ಕಳು ಪರಸ್ಪರ ಚರ್ಚಿಸಿ ನಿರ್ಧರಿಸಿದಲ್ಲಿ , ಮಾಡಿಕೊಳ್ಳಬೇಕಾದ ಬದಲಾವಣೆಗಳಿಗೆ ಮುಕ್ತವಾಗಿ ತೆರೆದುಕೊಂಡಲ್ಲಿ ಸಧ್ಯದ ಮತ್ತು ನಾಳೆಯ ದಿನಗಳಲ್ಲಿ ಬೆಳಕ ಕಾಣಬಹುದಲ್ಲವೆ?

-------------------------
ಒಪ್ಪಿಕೊಳ್ಳಲೇಬೇಕು ವಾಸ್ತವ

ವೈಭೋಗ ಜೀವನ ಶೈಲಿಯ ಹೆಚ್ಚುತ್ತಿರುವುದರಿಂದ ಮಕ್ಕಳೇ ಮನೆಗೆ ಅತಿಥಿಗಳಂತಾಗುತ್ತಿದ್ದಾರೆ ಎನ್ನುವ ಸತ್ಯಸಂಗತಿಯನ್ನು ಒಪ್ಪಿಕೊಳ್ಳಲೇಬೇಕಿದೆ. ‘ನಿಮ್ಮ ಕೂದಲು ಬೆಳ್ಳಿಗೆ ತಿರುಗುತ್ತಿವೆ ಎನ್ನುವಾಗ ನಿಮ್ಮ ಜೇಬಿನಲ್ಲಿ ಬಂಗಾರವಿರಲಿ’ ಅನ್ನೋ ಹಾಗೆ ನಿಮ್ಮ ವೃದ್ಧಾಪ್ಯ ಮತ್ತು ಜೀವನ ಕ್ರಮಕ್ಕೆ ನೀವುನೀವೇ ಜವಾಬ್ದಾರರು. ಆರ್ಥಿಕ ಭದ್ರತೆ ನಿಮ್ಮ ಉಳಿತಾಯದಿಂದಲೋ ಅಥವಾ ಮಕ್ಕಳಿಂದಲೋ ದೊರೆಯಬಹುದು. ಆದರೆ ಐವತ್ತು ದಾಟಿದವರಿಗೆ ಕಾಡೋದು ಭಾವನಾತ್ಮಕ ಅಭದ್ರತೆ. ಅದರಲ್ಲೂ ಪುರುಷರಲ್ಲಿ ಇದು ಹೆಚ್ಚು. ಮೊದಲೇ ಬಾಂಡಿಂಗ್ ಸೃಷ್ಟಿಯಾಗಿದ್ದರೆ ಖಂಡಿತ ಮಕ್ಕಳು ಕೈಹಿಡಿಯುತ್ತಾರೆ. ಇಲ್ಲದಿದ್ದರೆ ಇಲ್ಲ. ಹಾಗೆಂದು ಕೊರಗಬೇಕಿಲ್ಲ. ವಾಸ್ತವ ಒಪ್ಪಿಕೊಂಡು ಮನಸ್ಸು, ದೇಹವನ್ನು ಆರೋಗ್ಯದಿಂದಿಟ್ಟುಕೊಳ್ಳಲೇಬೇಕು.

ಊರು, ಕಟ್ಟಿಸಿದ ಮನೆ ಬಿಟ್ಟು ಮಕ್ಕಳಿದ್ದಲ್ಲಿಗೆ ಹೋಗಬೇಕು ಎಂದು ಸಂಕುಚಿತರಾಗಿ ಯೋಚಿಸಬೇಕಿಲ್ಲ. ಹಾಗೇ ಮಕ್ಕಳೆನಿಸಿಕೊಂಡವರು ತಮ್ಮ ಮಕ್ಕಳ ಲಾಲನೆ ಪೋಷಣೆ ಹೊತ್ತಿಗೆ ತಂದೆ-ತಾಯಿ, ಅತ್ತೆ-ಮಾವನ ಬಳಿ ಓಡಿಹೋಗುವುದೂ ಸೂಕ್ತವಲ್ಲ. ಕಾಲಕಾಲಕ್ಕೆ ಕುಟುಂಬದಲ್ಲಿ ಬಾಂಡಿಂಗ್ ಅನ್ನೋದು ಅಪ್‌ಡೇಟ್ ಆಗ್ತಾ ಗಟ್ಟಿಗೊಳ್ತಾ ಇದ್ರೆ ಯಾರೊಬ್ಬರೂ ಪರಸ್ಪರ ಕೊರಗಬೇಕಾಗುವುದಿಲ್ಲ. ನೊಂದುಕೊಳ್ಳಬೇಕಾಗಿಲ್ಲ
-ಶ್ರೀ ನಾಗೇಶ್, ಆಪ್ತಸಲಹೆಗಾರ.

-----------------------------

-ಶ್ರೀದೇವಿ ಕಳಸದ
(ವಿಜಯ ಕರ್ನಾಟಕ ೨೬/೨/೨೦೧೨ ’ಸುಖಿ ವಿಜಯ’)

2 comments:

Anuradha said...

ಪೇರೆಂಟ್ಸ್ ಮೀಟ್ ..ಅಂತ ಓದಿ ನನಗೆ ಮೊದಲು ಮಕ್ಕಳ ಶಾಲೆಯಲ್ಲಿ ಪೇರೆಂಟ್ಸ್ ಮೀಟ್ ಇರತ್ತೆ ..ಉಪಾಧ್ಯಾಯರು ಮಕ್ಕಳ ಬಗ್ಗೆ ತಂದೆ ತಾಯಿಯರಿಗೆ ,ತಿಳಿಸುವ ಮೀಟ್ ..ಅದು .ಇಲ್ಲಿ ಬೆಳೆದ ಮ್ಕಳು ಅಪ್ಪ ,ಅಮ್ಮನನ್ನು ವೃಧ್ಧಾಶ್ರಮದಲ್ಲಿ ಭೇಟಿಯಾಗುವುದು .ಬದರಿನಾಥ್ ಅವರ ಕವನ " ಅವರಿಬ್ಬರೇ " ಇದೇ ಪರಿಸ್ಥಿತಿಯ ಬಗ್ಗೆ ವಿವರಿಸಿದೆ .ಹೇಗಿರಬೇಕು ,ಮುಂಜಾಗ್ರತೆ ಹೇಗೆ ತೆಗೆದುಕೊಂಡರೆ ಬದುಕು ಸಹನೀಯ ಅಂತ ತುಂಬಾ ಚೆನ್ನಾಗಿ ಹೇಳಿದ್ದೀರಿ .ಖಂಡಿತಾ ವಾಸ್ತವವನ್ನು ಒಪ್ಪಿಕೊಳ್ಳಲೇ ಬೇಕು .ಹುಟ್ಟು ಆಕಸ್ಮಿಕ ,ಸಾವು ಅನಿವಾರ್ಯ ಅಂತ ಓದಿದ ನೆನಪು .ಇದು ನಮಗೂ :) ಅಭಿನಂದನೆಗಳು .

Badarinath Palavalli said...

ಬರಹ ಸಕಾಲಿಕವಾಗಿದೆ. ಧನ್ಯವಾದಗಳು.