Sunday, March 25, 2012

ಜೊತೆಯಲಿ ಜೊತೆ ಜೊತೆಯಲಿ ಓದು....

ಯಾರದೋ ಮನೆಯಲ್ಲಿ ಹಾಲು ಉಕ್ಕಿ, ಸೀದ್ಹೋಯ್ತು ಅಂತ ನಮ್ಮನೆ ಪಾತ್ರೆ ವಾಸನೆ ನೋಡ್ಕೊಳ್ಳೋ ಕಾರ್ಯಕ್ರಮ ಯಾಕೆ....ಅಂತ ಕೇಳ್ತಿದಾರೆ ನಿಮ್ ಮಕ್ಕಳು. ಏನ್ ಹೇಳ್ತೀರಿ?
-----------------------------------------


ಇಂಥ ಪ್ರಸಂಗಗಳನ್ನು ಬಹುಶಃ ನೀವೂ ನೋಡಿರ್ತೀರಿ;

ಕಾಲೇಜಿಗೆ ಹೋಗುವಾಗಷ್ಟೇ ಅಲ್ಲ, ನಂತರ ಕೂಡ ಜೊತೆಯಾಗಿ ಓದ್ತಿರೋ ಸಾಕಷ್ಟು ಜನ ನಮ್ಮ ಸುತ್ತಮುತ್ತಲೇ ಇರ್ತಾರೆ. ಕಂಬೈಂಡ್ ಸ್ಟಡಿ ಅಂತ ಒಬ್ಬರಿಗೊಬ್ಬರ ಮನೆಗಳಿಗೆ ಹೋಗಿ ಓದ್ಕೊತಿರ್ತಾರೆ. ಫೋನ್ ಮಾಡಿದಾಗಲೂ ಅರ್ಧ ಸಮಯ ಓದಿದ ವಿಷಯಗಳ ಕುರಿತೇ ಮಾತು. ಪರೀಕ್ಷೆ ಹತ್ತಿರ ಬಂದಾಗಂತೂ ಇದು ಇನ್ನೂ ಹೆಚ್ಚು.

ಅವರು ಹುಡುಗರೇ ಆಗಿರಬಹುದು, ಹುಡುಗಿಯರೇ ಆಗಿರಬಹುದು ಅಥವಾ ಹುಡುಗ-ಹುಡುಗಿಯೇ ಇರಬಹುದು. ಅಷ್ಟೊಂದು ಅನ್ಯೋನ್ಯವಾಗಿರೋ ಅವರ ನಡುವೆ ಇದ್ದಕ್ಕಿದ್ದಂತೆ ಮಾತು ಮುರಿದುಬೀಳತ್ತೆ. ಫೋನ್ ಬಂದ್. ಲವಲವಿಕೆಯಿಂದ ಓಡಾಡ್ಕೊಂಡಿರೋರು ಮೂಲೆ ಹಿಡಿದು ಕೂತ್‌ಬಿಡ್ತಾರೆ. ಈ ರೀತಿ ಇದ್ದಕ್ಕಿದ್ದಂತೆ ಮೌನಿಯಂತಾದ ಹುಡುಗ ಅಶ್ವಿನ್ ಹೇಳಿದ್ದು ಹೀಗೆ:

‘ಒಂದನೇ ಕ್ಲಾಸಿಂದಾನೂ ನಾನು ಅನು ಬೆಸ್ಟ್ ಫ್ರೆಂಡ್ಸು. ಹದಿನೈದು ದಿನದಿಂದ ನಾನು ಅನು ಮನೆಗೆ ಹೋಗ್ತಿಲ್ಲ. ಯಾಕೇಂದ್ರೆ ಇತ್ತೀಚೆಗೆ ಅವಳ ಅಪ್ಪ ಅಮ್ಮ ನನ್ನ ಜೊತೆ ಬೇಕು ಬೇಕು-ಬೇಡಾ ಬೇಡಾ ಅನ್ನೋ ಹಾಗೆ ಮಾತಾಡ್ತಿದಾರೆ. ಸಂಜೆ ಮನೆಗೆ ಹೋದಾಗ ಅನು ಕೂಡ ನಾನೊಬ್ಳೇ ಓದ್ಕೊಳ್ತೀನಿ ಕಣೋ. ಯಾಕೋ ಕಾನ್ಸ್ಂಟ್ರೇಷನ್ ಮಾಡಕ್ಕಾಗ್ತಿಲ್ಲ ಅಂತಾನೋ... ಎಲ್ರೂ ಎಲ್ಲೋ ಹೊರಗಡೆ ಹೋಗ್ತಿದ್ದೀವಿ ಅಂತಾನೋ ಹೇಳಿ ವಾಪಸ್ ಕಳಿಸಿಬಿಡ್ತಾಳೆ. ಯಾಕ್ ಹಿಂಗ್ ಮಾಡ್ತಿದಾರೆ ಇವರೆಲ್ಲಾ ಅಂತಾ ಗೊತ್ತೇ ಆಗ್ತಿಲ್ಲ.’

‘ನಾನೀಗ ಅನು ಮನೆಗ್ ಹೋಗೋದನ್ನೂ ನಿಲ್ಸಿದೀನಿ. ಮೊದ್ಲಾದ್ರೆ ಎಲ್ವನ್ನೂ ಒಬ್ರಿಗೊಬ್ರು ಹಂಚ್ಕೊಳ್ತಾ ಇದ್ವಿ. ಈಗ್ ನೋಡಿದ್ರೆ ಆಕೆ ಕಾಲೇಜಲ್ಲೂ ಜಾಸ್ತಿ ಮಾತಾಡಲ್ಲ. ಕ್ಯಾಂಟೀನ್‌ಗೂ ಕರಿಯಲ್ಲ. ಯಾಕೆ ಸಪ್ಪಗಿದ್ದೀಯಾ ಅಂತ ನಾ ಕೇಳಿದ್ರೆ.... ಇಲ್ವಲ್ಲ ಚೆನ್ನಾಗೇ ಇದ್ದೀನಲ್ಲ ಅಂತ ನಕ್‌ಬಿಡ್ತಾಳೆ.’

ಎಲ್ಲಾ ಕಾರಣಗಳೂ ಹೀಗೇ ಇರಬೇಕಂತೇನಿಲ್ಲ. ಆದ್ರೆ ಇದ್ದಕ್ಕಿದ್ದಂತೆ ನಂಟು ಕಡಿದುಕೊಂಡುಬಿಡುತ್ತದೆ. ಕಾರಣಗಳು ಸ್ಪಷ್ಟವಾಗಲ್ಲ. ಏಕೋ ಹುಡುಗಿಯ ಮನೆಯಲ್ಲಿ ಅನುಮಾನಿಸ್ತಿದ್ದಾರೆ ಎಂಬ ಭಾವನೆ ಬೆಳೆದು, ಹುಡುಗನ ಮನಸ್ಸಿನಲ್ಲಿ ಅಪರಾ ಭಾವನೆ.

ಅದಕ್ಕೆ ಅನು ಹೇಳುವ ಕಾರಣಗಳು...

‘ನನ್ನ ಸಂಬಂಕರ ಹುಡುಗಿಯೊಬ್ಳು ಸ್ನೇಹಿತನ ಜೊತೆ ನಾಲ್ಕು ದಿನ ನಾಪತ್ತೆ ಆಗಿದ್ಲು. ಈ ವಿಷಯ ತಿಳಿದಾಗ್ನಿಂದ ನಮ್ ಅಪ್ಪ ಅಮ್ಮ ರಿಸ್ಟ್ರಿಕ್ಟ್ ಮಾಡೋದಕ್ಕೆ ಶುರು ಮಾಡಿದಾರೆ. ಇನ್ಮೇಲೆ ಅಶ್ವಿನ್ ಜೊತೆ ಓದ್ಕೊಳ್ಳೋ ಹಾಗಿಲ್ಲ. ಓಡಾಡೋ ಹಾಗಿಲ್ಲ ಹಾಗಿರಬೇಕು. ಹೀಗಿರಬೇಕು ಅಂತೆಲ್ಲಾ... ಇದ್ರಿಂದ ಒಂದ್ರೀತಿ ಪ್ರೆಷರ್ ಕ್ರಿಯೇಟ್ ಆಗ್ತಿದೆ. ಓದಿನಲ್ಲಿ ಕಾನ್ಸ್ಂಟ್ರೇಟ್ ಮಾಡ್ತಿಲ್ಲ. ಹಿಂಗಿಂಗಿದೆ ವಿಷಯ ಅಂತಾ ಅಶ್ವಿನ್‌ಗೆ ಹೇಳಿಬಿಡಬೇಕು ಅಂತಾ ಅನ್ಕೊಳ್ತೀನಾದ್ರೂ... ಎಲ್ಲಿ ನನ್ನ ಅಪ್ಪ ಅಮ್ಮನ ಬಗ್ಗೆ ಅವ ತಪ್ಪು ತಿಳ್ಕೊಂಬಿಡ್ತಾನೆ ಅನ್ನೋ ಭಯ. ಅದಕ್ಕೇ ಅವನನ್ನ ನಾ ಅವಾಯ್ಡ್ ಮಾಡ್ತಿದ್ದೀನಿ.’

***
ಚೂರು ಯೋಚ್ನೆ ಮಾಡಿ...

*ವಾದದ ಎರಡೂ ಮುಖಗಳು ನಿಮ್ಮ ಮುಂದಿವೆ. ಇಲ್ಲಿ ಕಣ್ಬಿಟ್ಟಿದ್ದು ಸಣ್ಣೇ ಸಣ್ಣದೊಂದು ಅನುಮಾನ. ವಿಪರೀತ ಮುಂದಾಲೋಚನೆ ಹಾಗೂ ಪ್ರತಿಯೊಂದು ಸಂಬಂಧವೂ ಅಂತಿಮವಾಗಿ ಲೈಂಗಿಕ ಆಕರ್ಷಣೆಯತ್ತ ತಿರುಗುತ್ತೆ ಅನ್ನೋ ತಪ್ಪು ಕಲ್ಪನೆ. ಆದ್ರೆ ಪ್ರತಿಯೊಂದು ನಂಟೂ ಹೀಗೇ ಆಗಬೇಕಂತೇನಿಲ್ಲ.

*ಕಂಬೈಂಡ್ ಸ್ಟಡಿ ಮಾಡ್ತಿರೋರು ಹುಡುಗ-ಹುಡುಗಿ ಆಗಿದ್ದರೆ, ಈ ರೀತಿಯ ಪ್ರಸಂಗ ಉಂಟಾಗೋದು ಸಾಮಾನ್ಯ. ಆದರೆ, ಕೊಂಚ ವಿವೇಚನೆಯಿಂದ ನೋಡಿದ್ರೆ ಈ ಸಮಸ್ಯೆಗೆ ಬುಡವೇ ಇರೋದಿಲ್ಲ. ಹುಡುಗ-ಹುಡುಗಿ ಪರಸ್ಪರ ಆಕರ್ಷಿತರಾಗೋದಕ್ಕೆ ಕಂಬೈಂಡ್ ಸ್ಟಡಿಯ ಕಾರಣವೇ ಬೇಕಿಲ್ಲ. ಅದರ ಹೊರತಾಗಿಯೂ ಅವರು ಪರಸ್ಪರ ಭೇಟಿಯಾಗೋ ಅವಕಾಶಗಳು, ಕಾರಣಗಳು ಹಾಗೂ ತಾಣಗಳು ಸಾಕಷ್ಟಿರ್‍ತವೆ.

*ಕಂಬೈಂಡ್ ಸ್ಟಡೀನಲ್ಲಿ ಅವರು ಕನಿಷ್ಟ ಮನೆಯೋವ್ರ ಕಣ್ಮುಂದಾದರೂ ಇರ್ತಾರೆ. ಉಳಿದ ಪ್ರಸಂಗಗಳಾದರೆ ಹಿರಿಯರ ನಿಯಂತ್ರಣ ಎಲ್ಲಿರುತ್ತೆ?

*ಕಿರಿಯರನ್ನ ಪ್ರತಿಯೊಂದಕ್ಕೂ ಅನುಮಾನ್ಸೋದು, ವಿಪರೀತ ಕಲ್ಪನೆ ಮಾಡ್ಕೊಂಡು ತಪ್ಪು ತಿಳ್ಕೊಳ್ಳೋದು ಆ ಯುವ ಮನಸ್ಸುಗಳ ಉತ್ಸಾಹವನ್ನ ಕುಂದಿಸತ್ತೆ. ಪ್ರತಿಭಟನಾ ಧೋರಣೆ ಹುಟ್ಟಿಸತ್ತೆ. ದಿಢೀರ್ ನಿರ್ಧಾರಕ್ಕೆ ಬರೋ ಮುನ್ನ ಕೊಂಚ ಯೋಚಿಸಿದರೆ ಉತ್ತಮ ಅಲ್ವೇ?

***

ಇವರು ಹೇಳ್ತಾರೆ...

ಸ್ನೇಹ ಮತ್ತು ಪ್ರೀತಿ ನಿಮ್ಮ ಓದಿಗೆ ಸಪೋರ್ಟ್ ಕೊಡೋ ಹಾಗಿರಬೇಕು. ಕಂಬೈಂಡ್ ಸ್ಟಡಿ ಮಾಡೋದು ತಪ್ಪಲ್ಲ. ಆದರೆ ಯಾರಾದ್ರೂ ದೊಡ್ಡವರು ಮನೇಲಿದ್ರೆ ಒಳ್ಳೇದು. ಯಾಕಂದ್ರೆ ನಿಮಗೆ ಗೊತ್ತಿಲ್ಲದೆಯೇ ನೀವು ಒಬ್ಬರಿಗೊಬ್ಬರು ಆಕರ್ಷಣೆಗೆ ಒಳಗಾಗೋ ಚಾನ್ಸ್ ಇರತ್ತೆ. ಹೀಗಂತ ನೀವೆಲ್ರೂ ಹೀಗೇ ಇದ್ದೀರಿ ಅಂತಲ್ಲ. ಕೆಲವರ ಬಗ್ಗೆ ಮಾತ್ರ ನಾ ಹೇಳ್ತಿದ್ದೀನಿ. ಹಾಲ್‌ನಲ್ಲಿ ಟಿವಿ ಡಿಸ್ಟರ್ಬ್ ಮಾಡ್ತಿದೆ ಅಂತ ರೂಮ್ ಬಾಗಿಲು ಹಾಕ್ಕೊಂಡು ಓದೋದೆಲ್ಲಾ ಬೇಡ ಅನ್ಸತ್ತೆ. ಆಗ ನೀವೇ ಪೇರೆಂಟ್ಸ್ ಹತ್ರ ರಿಕ್ವೆಸ್ಟ್ ಮಾಡ್ಕೊಳ್ಳಿ; ನಾವು ಓದೋ ತನಕ ನೀವು ಟಿ.ವಿ ವಾಲ್ಯೂಮ್ ಕಡಿಮೆ ಮಾಡ್ಕೊಳ್ಳಿ ಅಂತಾನೋ ಅಥವಾ ಆಫ್ ಮಾಡಿ ಅಂತಾನೋ. ನೀವು ಓದ್ತಿರೋದು ಇತರರಿಗೆ ಕಾಣ್ತಿರಲಿ. ಆಗ ಅನುಮಾನಗಳಿಗೆ ಅವಕಾಶ ಕಡಿಮೆ.
-ಶ್ರೀನಾಗೇಶ್, ಆಪ್ತಸಲಹೆಗಾರರು
----------------

-ಶ್ರೀದೇವಿ ಕಳಸದ
(ವಿಜಯ ಕರ್ನಾಟಕ, ಲವಲವಿಕೆ, ೨೬/೩/೨೦೧೨, )


Friday, March 16, 2012

ರವಿಯ ಸಿಲ್ವರ್‌ ಕಿರಣ

ಕಿರುತೆರೆಯ ದೈತ್ಯ ಪ್ರತಿಭೆ ರವಿಕಿರಣ್‌ ನಿರ್ದೇಶನ, ನಟನೆ, ನಿರ್ಮಾಣ, ಸಂಕಲನ ಹೀಗೆ ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಏಕೈಕ ನಟ. ಕಿರುತೆರೆಯ ಉದ್ಯಮಕ್ಕಾಗಿ ಸಾಕಷ್ಟು ಶ್ರಮಿಸಿರುವ ರವಿಕಿರಣ್‌, ಸದ್ಯ ಟೆಲಿವಿಷನ್‌ ಅಸೋಸಿಯೇಷನ್‌ ಅಧ್ಯಕ್ಷ. ಕಿರುತೆರೆ ಸಾಧನೆಗಾಗಿ ರಾಜ್ಯ ಪ್ರಶಸ್ತಿ ಪಡೆದ ಕಲಾವಿದ. ಇವರ ವೃತ್ತಿ ಬದುಕು ಈಗ ಬೆಳ್ಳಿ ಬಾಗಿನದಲ್ಲಿ.
-----------------------------

ಮುಂದಿನ ಸೀರಿಯಲ್ ಹೆಸರು ‘ಬೆಳ್ಳಿ ಬಟ್ಟಲು’?
ಇಲ್ವಲ್ಲ... ಯಾರು ಹಾಗೆ ಹೇಳಿದ್ದು? (ಒಂದು ಸ್ಪೂನ್ ಗಾಬರಿ, ಅರ್ಧ ಚಮಚ ಆಶ್ಚರ್ಯದಿಂದ) ಕೇಳಿದರು ನಿರ್ಮಾಪಕ, ನಿರ್ದೇಶಕ ನಟ ರವಿಕಿರಣ್. ಇಪ್ಪತ್ತೈದು ವರ್ಷಗಳಿಂದ ಧಾರಾವಾಹಿಯಲ್ಲೇ ಮುಳುಗೇಳುತ್ತಿದ್ದೀರಲ್ಲ ಅದಕ್ಕೆ ಅಂದಾಗ ಜೋರಾಗಿ ನಕ್ಕರು. ಹೌದ್ರಿ ಇಪ್ಪತ್ತೈದು ವರ್ಷಗಳು ಹ್ಯಾಗೆ ಕಳದ್ವು ಅಂತಾನೇ ಗೊತ್ತಾಗ್ತಿಲ್ಲ ಎಂದು ಭಾವುಕರಾದರು .

‘ನನ್ನ ಜೀವ ನೀನು’ ಅಂತ ಯಾರಿಗೆ ಹೇಳೋದಕ್ಕೆ ಶುರು ಮಾಡಿದ್ದೀರಿ?
ವೀಕ್ಷಕರಿಗ್ರೀ... ಅವರೇ ನಮಗೆಲ್ಲಾ. ಎಲ್ಲಾ ವರ್ಗದವರನ್ನೂ ಹಿಡಿದಿಡುವಂಥ ವಸ್ತು, ಕಥೆ, ನಿರೂಪಣೆಯ ನವಿರು ಅದಕ್ಕಿದೆ. ಭಾವನೆ ಎಲ್ಲ ಕಾಲಕ್ಕೂ ಒಂದೇ. ಆದರೆ ಅದನ್ನು ಕಾಲದೊಂದಿಗೆ ಹಿಡಿದಿಟ್ಟು ತೋರಿಸುವ ಕಸರತ್ತು ಕುಸುರಿಯಲ್ಲೇ ನಮ್ಮ ತಾಕತ್ತು ಅಡಗಿರೋದು. ಈಗಿನದು ಮೊಬೈಲ್ ಇಂಟರ್‌ನೆಟ್ ಯುಗ. ಯುಗಕ್ಕೆ ತಕ್ಕಂತೆ ಹೋದ್ರೆ ಯೋಗಾಯೋಗದ ಬದುಕು.

ಹಾಂ... ‘ಬದುಕು‘ ಅದಕ್ಕೀಗ ಏನ್ ಪ್ರಾಯ?
ಬರೋಬ್ಬರಿ ಹತ್ತು ವರ್ಷ. ಬಹುಶಃ ದೇಶದಲ್ಲೇ ಪ್ರಥಮ ಅನ್ಸತ್ತೆ ಹತ್ತುವರ್ಷಗಳ ಕಾಲ ಓಡ್ತಿರೋ ಧಾರಾವಾಹಿ.

ಯಾರು ಅದನ್ನು ಬೆಳೆಸಿದವರು? ಗೃಹಿಣಿಯರಾ? ನಿಮ್ಮ ಧಾರಾವಾಹಿಗಳ ಕಾಯಂ ವೀಕ್ಷಕರು ಅವರೇನಾ?
ಎಲ್ಲಾ ನಮ್ಮ ವೀಕ್ಷಕರೇ. ಇಲ್ಲ ಇಲ್ಲ ಹಾಗೇನಿಲ್ಲ. ಈಗ ‘ನನ್ನ ಜೀವ ನೀನು‘ ಎಲ್ಲಾ ವರ್ಗದವರಿಂದ ನೋಡಿಸಿಕೊಳ್ಳೋ ಹಾಗಿದೆ. ಆಮೇಲೆ ಯಾವ ಸಮಯಕ್ಕೆ ಯಾವ ಧಾರಾವಾಹಿ ಪ್ರಸಾರ ಆಗಬೇಕು ಅನ್ನೋದು ಕಥೆಯನ್ನ ಆಧರಿಸಿರತ್ತೆ. ಆಮೇಲೆ ಆಯಾ ವರ್ಗದ ವೀಕ್ಷಕರು ಮತ್ತು ಸಮಯವನ್ನು ಕೇಂದ್ರೀಕರಿಸಿ ಚಾನೆಲ್‌ನವರೇ ಸಮಯ ನಿಗದಿ ಮಾಡ್ತಾರೆ.

ಟಿಆರ್‌ಪಿ ಟೆನ್ಷನ್?
ನೋ ಟೆನ್ಷನ್. ಕೆಲಸ ಮಾಡ್ತಾ ಹೋಗೋದಷ್ಟೇ. ನನಗೆ ಈ ಟಿಆರ್‌ಪಿ ಮತ್ತು ಅದರ ಮಾನದಂಡದ ಮೇಲೆ ನಂಬಿಕೆ ಇಲ್ಲ. ಆದರೆ ಜಾಹೀರಾತಿಗೂ ಅದಕ್ಕೂ ಸಂಬಂಧ ಇದೆ ನಿಜ. ಒಟ್ಟಾರೆ ನಾನು ಜನರ ಮೇಲೆ ನಂಬಿಕೆ ಇಟ್ಟು ‘ಬದುಕು’ ಮಾಡ್ತೀದೀನಿ ಮಾಡ್ತೀನಿ.

ಬ್ಯೂಟಿಫುಲ್ ಆಂಟಿ ಕಥೆ ಹೇಳಿ
ಓಹ್ ಅದಾ... ಇಪ್ಪತ್ತು ವರ್ಷದ ಹಿಂದೆ ಇರಬೇಕು. ದೂರದರ್ಶನದಲ್ಲಿ ‘ಅಸಾಧ್ಯ ಅಳಿಯ’ ಧಾರಾವಾಹಿಯಲ್ಲಿ ಚೆಂದದ ಆಂಟಿ ಪಾತ್ರ ಮಾಡಿದ್ದೆ. ಕಷ್ಟವೋ ಕಷ್ಟ. ಕಾಸ್ಟ್ಯೂಮ್‌ನಲ್ಲಿ, ಮೇಕಪ್‌ನಲ್ಲಿ ಹೆಣ್ಣತನ ತೋರಿಸಬಹುದು. ಆದರೆ ಭಾವದಲ್ಲಿ, ಪ್ರತಿಮೆಯಲ್ಲಿ ಖಂಡಿತ ಅಸಾಧ್ಯ. ಆದರೂ ಆಂಟಿಯರ ಚಲನವಲನಗಳನ್ನು ಗಮನಿಸ್ತಾ ಅಭಿನಯಿಸಿದೆ. ಸಖತ್ ಮಜಾ ಇರೋದು ಔಟ್‌ಡೋರ್ ಶೂಟಿಂಗ್ ಇದ್ದಾಗೆಲ್ಲ.

ನಿಮ್ ಧಾರಾವಾಹಿಯಲ್ಲಿ ಏನಿರತ್ತೆ?
ಜೀವನವನ್ನ ತೋರಸ್ತೀವಿ. ಯಾವ ರೀತಿ ಜೀವನ ಮಾಡಬಾರದು ಅಂತ ಹೇಳ್ತೀವೇ ಹೊರತು ಹೀಗಿರಬೇಕು ಅಂತ ಹೇಳೋದಿಲ್ಲ. ಹೇಗಿರಬೇಕು ಅನ್ನೋದು ವೀಕ್ಷಕರಿಗೆ ಬಿಟ್ಟಿದ್ದು. ಮತ್ತೆ.... ಜೀವನದಲ್ಲಿ ಕನಸುಗಳನ್ನ ನಂಬಬೇಕು. ಅವುಗಳ ಬಗ್ಗೆ ಯೋಚನೆ ಮಾಡ್ತಿದ್ರೆ ನನಸಾಗೋದು ಖಂಡಿತ.

ಸಿನಿಮಾ ಮಂದಿ ಕಿರುತೆರೆಯಲ್ಲಿ ನಟಿಸೋದು ಅಂದ್ರೆ ಡಿಮೋಷನಾ?
ಇಲ್ಲ ಇಲ್ಲ ಅದು ಆರಂಭದ ಕಾಲದಲ್ಲಿತ್ತು. ಸಿನಿಮಾದವರನ್ನೇ ನಟನೆಗೆ ಕರೆತರಬೇಕಾಗುತ್ತಿತ್ತು. ಆಗ ಹಾಗೆ ತಿಳ್ಕೊಳ್ತಿದ್ರು. ಆದರೆ ಈಗ ಹಾಗಿಲ್ಲ. ಕಿರುತೆರೆ ಒಂದ ಉದ್ಯಮವಾಗಿ ಬೆಳೆದಿದೆ.

ನಂಗೊಂದು ಅವಕಾಶ ಕೊಡಿ ಅಂತ ಕೇಳಿ ಬಂದವರಿಗೆ?
ಖಂಡಿತ ನನ್ನನ್ನು ಭೇಟಿ ಮಾಡಬಹುದು. ಇದು ಪಕ್ಕಾ ಸೃಜನಶೀಲ ಕ್ಷೇತ್ರ. ಪ್ರತಿಭೆ ಮಾತ್ರ ಇಲ್ಲಿ ನಿಲ್ಲೋದು.

---------
-ಶ್ರೀದೇವಿ ಕಳಸದ (ವಿಜಯ ಕರ್ನಾಟಕ, ಲವಲವಿಕೆ, ೧೬-೦೩-೨೦೧೨)

Monday, March 5, 2012

ಅವನಲ್ಲಿ ಇವಳಿಲ್ಲಿ; ಮಾತಿದೆ ಕಥೆಯೂ ಇದೆ

ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ; ದೂರವಿದ್ದು ನೋಡಿ ಒಮ್ಮೆ ಮತ್ತೆ ಮತ್ತೆ ಬಂಧಿಯಾಗುವಿರಿ ಪ್ರೇಮದೇಗುಲದೊಳಗೆ


ಬೆಳಗ್ಗೆಯಿಂದ ಗಿಲಗಿಂಚಿಯಂತಿದ್ದಳು. ಅವನೇನೋ ಅಂದ ಅಂತ ಅವಳು ರಾತ್ರಿಯಿಡೀ ದಿಂಬು ನೆನಸಿದ್ದಳು. ಬೆಳ್ಳಂಬೆಳಗ್ಗೆ ಅವಳೇನೋ ಕೇಳಿದ್ದಕ್ಕೆ ಅವನಿಗೆ ದಿನವಿಡೀ ಮೂಡ್ ಆಫ್. ಹೀಗೆ ಒಂದಿಲ್ಲಾ ಒಂದು ಸಣ್ಣಪುಟ್ಟ ಮಾತುಗಳಿಗೆ ಇಬ್ಬರೂ ಮುನಿಸಿಕೊಳ್ಳುವುದರಲ್ಲೇ ಎಂಟು ವರ್ಷ ಕಳೆದರು.

ಮಧ್ಯೆ ಎರಡು ಪುಟಾಣಿಗಳೂ ಮಡಿಲು ತುಂಬಿದವು. ಅಪ್ಪ-ಅಮ್ಮನ ಮುನಿಸು, ಮಾತು ಅವಕ್ಕೂ ಅರ್ಥವಾಗತೊಡಗಿವೆ ಅನ್ನೋ ಹೊತ್ತಿಗೆ ಇವನಿಗೆ ಸಂಸಾರ ಸಾಕೆನ್ನಿಸಿಬಿಟ್ಟಿತು. ವರ್ಷದ ಮಟ್ಟಿಗೆ ಬೇರೊಂದು ಊರಿಗೆ ಟ್ರಾನ್ಸಫರ್ ಮಾಡಿಸಿಕೊಂಡು ಹೊರಟ.

ಹೊಸ ಆಫೀಸಿಗೆ, ಊರಿಗೆ, ನೀರಿಗೆ ಹೊಂದಿಕೊಳ್ಳುವ ಒದ್ದಾಟ ಅವನಿಗಾದರೆ, ಅವನಿಲ್ಲದೇ ಆಫೀಸ್, ಮನೆ, ಮಕ್ಕಳನ್ನು ನಿಭಾಯಿಸುವುದು ಇವಳಿಗೆ ಕಷ್ಟೋಕಷ್ಟ. ಆಗ ಹತ್ತಿರವಿದ್ದರೂ ದೂರವಿರುತ್ತಿದ್ದ ಅವರನ್ನು ದೂರವಿದ್ದು ಹತ್ತಿರ ತಂದಿದ್ದು ಮೊಬೈಲ್.

ಕ್ರಮೇಣ ಮೊಬೈಲ್ ಮಾತು, ಸಂದೇಶಗಳ ರವಾನೆಯಿಂದ ಇಷ್ಟು ವರ್ಷಗಳ ಕಾಲ ಅವರೊಳಗಿದ್ದ ಕುಕ್ಕರ್, ಪ್ರೆಶರ್ ಕಳೆದುಕೊಂಡಿತ್ತು. ಅನ್ನ ಅರಳಿತು; ತಿಂಗಳ ಕೊನೆಗೊಮ್ಮೆ ಊರಿಗೆ ಬರುವ ಅವನು, ಕಾಯುವ ಅವಳು; ಥೇಟ್ ಹೊಸ ಪ್ರೇಮಿಗಳಂತಾದರು.

ಅಪ್ಪಅಮ್ಮನ ಕುಲುಕುಲು ನಗುವನ್ನು ಬಾಗಿಲ ಮರೆಯಲ್ಲೇ ನೋಡಿ ಓಡಿಬಂದಪ್ಪುವ ಕೂಸುಗಳು. ಸೋನೆ ತಂದ ಶನಿವಾರ, ಧಾರೆಹರಿಸುವ ಸೋಮವಾರ; ಮತ್ತೊಂದು ಭೇಟಿಯ ತನಕ ಮತ್ತದೇ ಮೇಘಸಂದೇಶ ತಂತು, ತುಂತುರು...

ದಾಂಪತ್ಯದಲ್ಲಿ, ಸ್ನೇಹದಲ್ಲಿ ಅಥವಾ ಯಾವುದೋ ಆಪ್ತ ಸಂಬಂಧಗಳಲ್ಲಿ ಆಗಾಗ ಎಳೆಗಳು ಹೆಚ್ಚುಕಮ್ಮಿ ಸಹಜ; ಒಮ್ಮೊಮ್ಮೆ ವಿನಾಕಾರಣ ಕೆಲವೊಮ್ಮೆ ಸಕಾರಣ. ತತ್‌ಕ್ಷಣವೇ ಜಗ್ಗಿ ಎಳೆದಾಡಿದಲ್ಲಿ ಎಳೆಗಳು ಕಗ್ಗಂಟು. ಮಾತಿಗೆ ಅವಕಾಶ ಕೊಟ್ಟರಂತೂ ತುಂಡೇತುಂಡು. ಆಗ ಆ ಎಳೆಬಿಡಿಸಲು ಮೌನ ಸುತ್ತಿದ ಬೆರಳುಗಳು ಬೇಕು. ತನ್ನ ತಾ ಅರಿಯಲು ಕೆಲ ಕಾಲ ಅಂತರವೂ ಬೇಕು.

ಪುಸ್ತಕ ಇರುವುದೇ ಓದುವುದಕ್ಕೆ ಎಂದು ಕಣ್ಣಮೇಲಿಟ್ಟುಕೊಂಡರೆ ಅಕ್ಷರ ಕಾಣುವುದಿಲ್ಲವಲ್ಲ? ಹಾಗೆ ಸಂಬಂಧಗಳು, ಅದರೊಳಗೆ ಬಂಧಿಯಾದ ಮನಸುಗಳು ಅರ್ಥ ಮಾಡಿಕೊಳ್ಳಲು, ಹತ್ತಿರವಾಗಲು ಒಂದಿಷ್ಟು ಅಂತರ ಬೇಕೇಬೇಕು. ಆದರೆ ಗಿರಕಿಜೀವನದೊಳಗೆ ಅವನಿಗೆ ಇವಳು ತಪ್ಪು. ಅವಳಿಗೆ ಇವನು ತಪ್ಪು.

ನಿಧಾನಿಸಿ ಯೋಚಿಸಿದರೆ ಅವರವರ ತಪ್ಪುಗಳು ಕಣ್ಣೊಳಗೇ ಕಂಡಾವು. ಒಂದೊಮ್ಮೆ ಕಂಡರೂ ಒಪ್ಪಿಕೊಳ್ಳಲು ಅಹಮಿಕೆಯ ಕೋಟೆ ಪರವಾನಿಗೆ ನೀಡದು. ಆಗ ಅಚಾನಕ್ ಅಥವಾ ಸೃಷ್ಟಿಸಿಕೊಂಡ ಸಣ್ಣದೊಂದು ತಾತ್ಕಾಲಿಕ ಅಂತರ (ದೂರ) ಸಾಕು. ದೂರದೂರವಿದ್ದಾಗ ಜೊತೆಯಿದ್ದಾಗಿನ ಆತುಕೊಂಡ ಕ್ಷಣಗಳು ನೆನಪಾಗಿ ’ಕೋಟೆ’ಭೇದಿಸಬಲ್ಲವು.

ಹೀಗೆ ಯಾವುದೇ ಸಂಬಂಧದ ಹದ ತಪ್ಪಿದಾಗ ಹಟಕ್ಕೆ ಬಿದ್ದೋ, ಮಾತಿಗೆಳೆದೋ ಅದನ್ನು ಸರಿಪಡಿಸಿಕೊಳ್ಳುತ್ತೇವೆನ್ನುವ ಭ್ರಮೆ ಖಂಡಿತ ಬೇಡ. ಪರಸ್ಪರ ವಿಶ್ವಾಸದಿಂದ ದೂರವಿದ್ದು ನೋಡಿದಲ್ಲಿ ಮತ್ತೆ ಪ್ರೀತಿ ಚಿಗುರು.

-ಶ್ರೀದೇವಿ ಕಳಸದ
(ವಿಜಯ ಕರ್ನಾಟಕ ಸುಖಿ ವಿಜಯ, ೪/೩/೨೦೧೨)