Monday, March 5, 2012

ಅವನಲ್ಲಿ ಇವಳಿಲ್ಲಿ; ಮಾತಿದೆ ಕಥೆಯೂ ಇದೆ

ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ; ದೂರವಿದ್ದು ನೋಡಿ ಒಮ್ಮೆ ಮತ್ತೆ ಮತ್ತೆ ಬಂಧಿಯಾಗುವಿರಿ ಪ್ರೇಮದೇಗುಲದೊಳಗೆ


ಬೆಳಗ್ಗೆಯಿಂದ ಗಿಲಗಿಂಚಿಯಂತಿದ್ದಳು. ಅವನೇನೋ ಅಂದ ಅಂತ ಅವಳು ರಾತ್ರಿಯಿಡೀ ದಿಂಬು ನೆನಸಿದ್ದಳು. ಬೆಳ್ಳಂಬೆಳಗ್ಗೆ ಅವಳೇನೋ ಕೇಳಿದ್ದಕ್ಕೆ ಅವನಿಗೆ ದಿನವಿಡೀ ಮೂಡ್ ಆಫ್. ಹೀಗೆ ಒಂದಿಲ್ಲಾ ಒಂದು ಸಣ್ಣಪುಟ್ಟ ಮಾತುಗಳಿಗೆ ಇಬ್ಬರೂ ಮುನಿಸಿಕೊಳ್ಳುವುದರಲ್ಲೇ ಎಂಟು ವರ್ಷ ಕಳೆದರು.

ಮಧ್ಯೆ ಎರಡು ಪುಟಾಣಿಗಳೂ ಮಡಿಲು ತುಂಬಿದವು. ಅಪ್ಪ-ಅಮ್ಮನ ಮುನಿಸು, ಮಾತು ಅವಕ್ಕೂ ಅರ್ಥವಾಗತೊಡಗಿವೆ ಅನ್ನೋ ಹೊತ್ತಿಗೆ ಇವನಿಗೆ ಸಂಸಾರ ಸಾಕೆನ್ನಿಸಿಬಿಟ್ಟಿತು. ವರ್ಷದ ಮಟ್ಟಿಗೆ ಬೇರೊಂದು ಊರಿಗೆ ಟ್ರಾನ್ಸಫರ್ ಮಾಡಿಸಿಕೊಂಡು ಹೊರಟ.

ಹೊಸ ಆಫೀಸಿಗೆ, ಊರಿಗೆ, ನೀರಿಗೆ ಹೊಂದಿಕೊಳ್ಳುವ ಒದ್ದಾಟ ಅವನಿಗಾದರೆ, ಅವನಿಲ್ಲದೇ ಆಫೀಸ್, ಮನೆ, ಮಕ್ಕಳನ್ನು ನಿಭಾಯಿಸುವುದು ಇವಳಿಗೆ ಕಷ್ಟೋಕಷ್ಟ. ಆಗ ಹತ್ತಿರವಿದ್ದರೂ ದೂರವಿರುತ್ತಿದ್ದ ಅವರನ್ನು ದೂರವಿದ್ದು ಹತ್ತಿರ ತಂದಿದ್ದು ಮೊಬೈಲ್.

ಕ್ರಮೇಣ ಮೊಬೈಲ್ ಮಾತು, ಸಂದೇಶಗಳ ರವಾನೆಯಿಂದ ಇಷ್ಟು ವರ್ಷಗಳ ಕಾಲ ಅವರೊಳಗಿದ್ದ ಕುಕ್ಕರ್, ಪ್ರೆಶರ್ ಕಳೆದುಕೊಂಡಿತ್ತು. ಅನ್ನ ಅರಳಿತು; ತಿಂಗಳ ಕೊನೆಗೊಮ್ಮೆ ಊರಿಗೆ ಬರುವ ಅವನು, ಕಾಯುವ ಅವಳು; ಥೇಟ್ ಹೊಸ ಪ್ರೇಮಿಗಳಂತಾದರು.

ಅಪ್ಪಅಮ್ಮನ ಕುಲುಕುಲು ನಗುವನ್ನು ಬಾಗಿಲ ಮರೆಯಲ್ಲೇ ನೋಡಿ ಓಡಿಬಂದಪ್ಪುವ ಕೂಸುಗಳು. ಸೋನೆ ತಂದ ಶನಿವಾರ, ಧಾರೆಹರಿಸುವ ಸೋಮವಾರ; ಮತ್ತೊಂದು ಭೇಟಿಯ ತನಕ ಮತ್ತದೇ ಮೇಘಸಂದೇಶ ತಂತು, ತುಂತುರು...

ದಾಂಪತ್ಯದಲ್ಲಿ, ಸ್ನೇಹದಲ್ಲಿ ಅಥವಾ ಯಾವುದೋ ಆಪ್ತ ಸಂಬಂಧಗಳಲ್ಲಿ ಆಗಾಗ ಎಳೆಗಳು ಹೆಚ್ಚುಕಮ್ಮಿ ಸಹಜ; ಒಮ್ಮೊಮ್ಮೆ ವಿನಾಕಾರಣ ಕೆಲವೊಮ್ಮೆ ಸಕಾರಣ. ತತ್‌ಕ್ಷಣವೇ ಜಗ್ಗಿ ಎಳೆದಾಡಿದಲ್ಲಿ ಎಳೆಗಳು ಕಗ್ಗಂಟು. ಮಾತಿಗೆ ಅವಕಾಶ ಕೊಟ್ಟರಂತೂ ತುಂಡೇತುಂಡು. ಆಗ ಆ ಎಳೆಬಿಡಿಸಲು ಮೌನ ಸುತ್ತಿದ ಬೆರಳುಗಳು ಬೇಕು. ತನ್ನ ತಾ ಅರಿಯಲು ಕೆಲ ಕಾಲ ಅಂತರವೂ ಬೇಕು.

ಪುಸ್ತಕ ಇರುವುದೇ ಓದುವುದಕ್ಕೆ ಎಂದು ಕಣ್ಣಮೇಲಿಟ್ಟುಕೊಂಡರೆ ಅಕ್ಷರ ಕಾಣುವುದಿಲ್ಲವಲ್ಲ? ಹಾಗೆ ಸಂಬಂಧಗಳು, ಅದರೊಳಗೆ ಬಂಧಿಯಾದ ಮನಸುಗಳು ಅರ್ಥ ಮಾಡಿಕೊಳ್ಳಲು, ಹತ್ತಿರವಾಗಲು ಒಂದಿಷ್ಟು ಅಂತರ ಬೇಕೇಬೇಕು. ಆದರೆ ಗಿರಕಿಜೀವನದೊಳಗೆ ಅವನಿಗೆ ಇವಳು ತಪ್ಪು. ಅವಳಿಗೆ ಇವನು ತಪ್ಪು.

ನಿಧಾನಿಸಿ ಯೋಚಿಸಿದರೆ ಅವರವರ ತಪ್ಪುಗಳು ಕಣ್ಣೊಳಗೇ ಕಂಡಾವು. ಒಂದೊಮ್ಮೆ ಕಂಡರೂ ಒಪ್ಪಿಕೊಳ್ಳಲು ಅಹಮಿಕೆಯ ಕೋಟೆ ಪರವಾನಿಗೆ ನೀಡದು. ಆಗ ಅಚಾನಕ್ ಅಥವಾ ಸೃಷ್ಟಿಸಿಕೊಂಡ ಸಣ್ಣದೊಂದು ತಾತ್ಕಾಲಿಕ ಅಂತರ (ದೂರ) ಸಾಕು. ದೂರದೂರವಿದ್ದಾಗ ಜೊತೆಯಿದ್ದಾಗಿನ ಆತುಕೊಂಡ ಕ್ಷಣಗಳು ನೆನಪಾಗಿ ’ಕೋಟೆ’ಭೇದಿಸಬಲ್ಲವು.

ಹೀಗೆ ಯಾವುದೇ ಸಂಬಂಧದ ಹದ ತಪ್ಪಿದಾಗ ಹಟಕ್ಕೆ ಬಿದ್ದೋ, ಮಾತಿಗೆಳೆದೋ ಅದನ್ನು ಸರಿಪಡಿಸಿಕೊಳ್ಳುತ್ತೇವೆನ್ನುವ ಭ್ರಮೆ ಖಂಡಿತ ಬೇಡ. ಪರಸ್ಪರ ವಿಶ್ವಾಸದಿಂದ ದೂರವಿದ್ದು ನೋಡಿದಲ್ಲಿ ಮತ್ತೆ ಪ್ರೀತಿ ಚಿಗುರು.

-ಶ್ರೀದೇವಿ ಕಳಸದ
(ವಿಜಯ ಕರ್ನಾಟಕ ಸುಖಿ ವಿಜಯ, ೪/೩/೨೦೧೨)4 comments:

ಮನಸು said...

nice article

ಮೌನರಾಗ said...

ಅರ್ಥಪೂರ್ಣ ಬರಹ...... ಚೆನ್ನಾಗಿದೆ..

ಸುಮ said...

ಒಳ್ಳೆಯ ಲೇಖನ ಶ್ರೀದೇವಿ. ಪ್ರತಿಯೊಂದು ಸಂಭಂದದಲ್ಲೂ "ಸ್ಪೇಸ್" ಅನ್ನೋದು ತುಂಬ ಮುಖ್ಯ.

sunaath said...

ಗಿಲಗಂಚಿ, ಗಿರಕೀಜೀವನ ತರಹದ ಉಪಮೆಗಳು ಅರ್ಥಪೂರ್ಣವಾಗಿ ಲೇಖನದಲ್ಲಿ ಬಂದಿವೆ. ನಿಮ್ಮ ಲೇಖನ ನನಗೆ ಉಪಯುಕ್ತವಾಗುವದು ಎಂದು ಎನಿಸುತ್ತದೆ.