Tuesday, May 29, 2012

ಸಂವಹನ ಸಮಸ್ಯೆ, ನಿಮ್ಮಲ್ಲೇ ಇದೆ ಪರಿಹಾರ

ಒಂದು ಹಳೇ ಮಾತಿದೆ: ಪ್ರತಿಯೊಬ್ಬರೂ ವಿಷಯವನ್ನು ತಮಗೆ ಬೇಕಾದಂತೆ ಅರ್ಥೈಸಿಕೊಳ್ಳುತ್ತಾರೆ. ಕಚೇರಿ ವಿಷಯಕ್ಕೆ ಬಂದರೆ ಈ ಮಾತು ಇನ್ನಷ್ಟು ನಿಜ. ಮತ್ತಷ್ಟು ಸ್ಪಷ್ಟ. ಯಾವುದೋ ವಿಭಾಗಕ್ಕೆ ಸೇರಿದ ಕೆಲಸವೊಂದಿರುತ್ತದೆ. ಅದರ ಜವಾಬ್ದಾರಿ ಎಲ್ಲರಿಗೂ ಸೇರಿದ್ದು. ಮೀಟಿಂಗ್‌ನಲ್ಲಿ ಈ ವಿಷಯವನ್ನು ಬಾಸ್ ಸ್ಪಷ್ಟವಾಗಿಯೇ ಹೇಳಿರುತ್ತಾರೆ. ಇವರೂ ತಲೆಯಾಡಿಸಿರುತ್ತಾರೆ. ಹೊರ ಬಂದ ನಂತರ, ಅವರವರ ಪಾಡಿಗೆ ಅವರು. ಹಾಗಾದ್ರೆ, ವಿಭಾಗಕ್ಕೆ ಸೇರಿದ ಕೆಲಸ ಮಾಡುವ ಜವಾಬ್ದಾರಿ ಯಾರದು?

Everyone’s responsibility is no one’s responsibility 
ಎಂಬ ಮಾತಿದೆ. ಎಲ್ಲರಿಗೂ ಸೇರಿದ ಜವಾಬ್ದಾರಿ ಎಂದರೆ ಅದು ಯಾರೊಬ್ಬರ ಜವಾಬ್ದಾರಿಯೂ ಅಲ್ಲ ಎಂಬುದು ಇದರರ್ಥ. ಇನ್ನೊಬ್ಬರು ಮಾಡುತ್ತಾರೆ ಅಂತ ಪ್ರತಿಯೊಬ್ಬರೂ ಅಂದುಕೊಳ್ಳೋದು. ಆಗ ಕೆಲಸ ಮಾತ್ರ ಹಾಗೇ ಉಳಿಯುತ್ತದೆ. ಮಾಡಬೇಕಾದ ಜವಾಬ್ದಾರಿ ಮಾತ್ರ ಒಬ್ಬರ ಹೆಗಲಿನಿಂದ ಇನ್ನೊಬ್ಬರ ಹೆಗಲಿಗೆ ಸ್ಥಳಾಂತರವಾಗುತ್ತಿರುತ್ತದೆ.

ಸಂವಹನ ಸಮಸ್ಯೆ


ಕಮ್ಯುನಿಕೇಶನ್ ಗ್ಯಾಪ್-ಸಂವಹನ ಕೊರತೆ ಈ ಸಮಸ್ಯೆಗೆ ಮುಖ್ಯ ಕಾರಣ. ಇದು ಏಕಾಗುತ್ತದೆ ಎಂಬುದಕ್ಕೆ ಸ್ಪಷ್ಟ ಕಾರಣಗಳನ್ನು ಕೊಡೋದು ಕಷ್ಟ. ಆದರೆ, ಉದಾಹರಣೆಯ ಮೂಲಕ ಪರಿಸ್ಥಿತಿಯನ್ನು ವಿವರಿಸಬಹುದು:

ಕತ್ತಲಲ್ಲಿ ರಸ್ತೆಯ ಮೇಲೆ ನಾಯಿಯೊಂದು ಮಲಗಿರುತ್ತದೆ. ನಿಮಗೆ ಅದು ಕಾಣಲ್ಲ. ಆದರೆ, ಅದಕ್ಕೆ ನೀವು ಕಾಣುತ್ತಿರುತ್ತೀರಿ. ಏಕೆಂದರೆ, ನಾಯಿಗಳಿಗೆ ಕತ್ತಲಲ್ಲೂ ಕಣ್ಣು ಕಾಣಿಸುತ್ತದೆ.

ನಿಮ್ಮ ಪಾಡಿಗೆ ನೀವು ಹೋಗುತ್ತಿರುತ್ತೀರಿ. ನಾಯಿ ಪ್ರತಿಕ್ರಿಯಿಸುವುದೇ ಸುಮ್ಮನೇ ನಿಮ್ಮ ಚಲನವಲನಗಳನ್ನು ಗಮನಿಸುತ್ತಿರುತ್ತದೆ. ನೀವು ತೀರಾ ಹತ್ತಿರ ಹೋದಾಗ ಗುರುಗುಟ್ಟಿ ಎಚ್ಚರಿಸಬಹುದು ಅಥವಾ ನೀವು ಬಾಲ ತುಳಿದಾಗ ಗರ್ರ್‌ರ್ರ್‌ರ್ರ್ ಎಂದು ಕಚ್ಚಬಹುದು.

ಇಲ್ಲಿ ತಪ್ಪು ಯಾರದು?

ನಿಮ್ಮ ಪ್ರಕಾರ, ನೀವು ನಾಯಿ ಇರೋದನ್ನು ಗಮನಿಸಿಲ್ಲ. ಕತ್ತಲಲ್ಲಿ ಏನೊಂದು ಸುಳಿವು ನೀಡದೇ ಅದು ಸುಮ್ಮನಿದ್ದರೆ ಗೊತ್ತಾಗೋದಾದ್ರೂ ಹೇಗೆ? ನಾನು ಉದ್ದೇಶಪೂರ್ವಕವಾಗಿ ತುಳಿದಿಲ್ಲ. ಅದು ನನ್ನನ್ನು ಕಚ್ಚಿದ್ದು ತಪ್ಪು.

ಇನ್ನು ನಾಯಿಯ ಪ್ರಕಾರ, ನೀವದಕ್ಕೆ ಕಾಣುತ್ತಿದ್ದಿರಿ. ಕಂಡೂ ಕಂಡೂ ಅದರ ಹತ್ತಿರ ಹೋಗಿ ತುಳಿದಿರಿ. ನಿಮ್ಮನ್ನು ಕೆಣಕದಿದ್ದರೂ ವಿನಾ ಕಾರಣ ತುಳಿದಿರಿ. ಹಾಗಾಗಿ ಕಚ್ಚಬೇಕಾಯ್ತು.
ಇದು ಸಂವಹನ ಕೊರತೆಗೊಂದು ಉತ್ತಮ ಉದಾಹರಣೆ.

ಸಂವಹನವೇ ಸಮಸ್ಯೆಪ್ರತಿಯೊಂದು ಮನೆಯಲ್ಲೇ ಸಂವನಹದ ಕೊರತೆ ಇರುತ್ತೆ. ಅದಕ್ಕಾಗಿ ಸಾಕಷ್ಟು ಕಚಿಪಿಚಿಗಳಾಗುತ್ತವೆ. ಇನ್ನು ಕಚೇರಿ ಎಂದರೆ ಮುಗೀತು. ಎಲ್ಲೆಲ್ಲಿಂದಲೋ ಬಂದ, ನಾನಾ ರೀತಿಯ ವಾತಾವರಣದಲ್ಲಿ ಬೆಳೆದ, ಚಿತ್ರ-ವಿಚಿತ್ರ ಮನಃಸ್ಥಿತಿಯ ಜನರೆಲ್ಲ ಒಂದೇ ಸೂರಿನಡಿ ಕೂತು, ಒಂದೇ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುತ್ತಾರೆ. ಸಂಸ್ಥೆ, ಸೂರು ಮತ್ತು ಕೆಲಸ ಒಂದೇ ಎನ್ನುವುದನ್ನು ಬಿಟ್ಟರೆ ಉಳಿದಿದ್ದೆಲ್ಲ ಭಿನ್ನ-ವಿಭಿನ್ನ. ಇಂಥ ಕಡೆ ಸಂವನಹದ ಕೊರತೆ ಸ್ವಲ್ಪವೇ ಇದ್ದರೂ ಕೆಲಸ ಚಿತ್ರಾನ್ನ.

ಕೊನೆಗೆ ಬಾಸ್ ಖುದ್ದಾಗಿ ಇವನ್ನೆಲ್ಲ ಬಗೆಹರಿಸಬೇಕಾಗುತ್ತದೆ. ಏಕೆಂದರೆ, ಅಂತಿಮ ಜವಾಬ್ದಾರಿ ಅವರದ್ದೇ ತಾನೆ? ಆದರೆ, ಬಾಸ್‌ಗೆ ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳ ಕಡೆ ಹೆಚ್ಚೆಚ್ಚು ಗಮನ ಕೊಡೋಕೆ ಆಗಲ್ಲ. ಹೀಗಾಗಿ ಅವರು ತಮ್ಮ ತಕ್ಷಣದ ಕಿರಿಯ ಸಿಬ್ಬಂದಿ ಜೊತೆ ಚರ್ಚಿಸುತ್ತಾರೆ. ಹೈರಾರ್ಕಿ-ಶ್ರೇಣಿ ವ್ಯವಸ್ಥೆಯ ಅನಿವಾರ್ಯತೆ ಅದು.

ಆ ಕಿರಿಯ ಬಾಸ್‌ಗಳು ತಮಗಿಂತ ಕಿರಿಯ ಸಿಬ್ಬಂದಿಗೆ, ಬಾಸ್ ಹೀಗಂದ್ರು ಅಂತ ರವಾನಿಸ್ತಾರೆ. ಮಾಡಬೇಕಾದ ಕೆಲಸ ತುಂಡುತುಂಡಾಗಿ, ಕಿರಿಯ ಸಿಬ್ಬಂದಿಯ ಹೆಗಲೇರುತ್ತದೆ. ಅಲ್ಲಿ ಕೆಲಸ ಮುಗಿದು, ತುಂಡುಗಳೆಲ್ಲಾ ಒಂದಾಗಿ, ಅದು ಮತ್ತೆ ಬಾಸ್ ತಲುಪುವ ಹೊತ್ತಿಗೆ ಏನಾದರೂ ಏರುಪೇರಾಗಿರುತ್ತದೆ.

ಆಗ ಗರಂ ಆಗುವ ಬಾಸ್ ರವಾನಿಸುವ ಸಿಡಿಗುಂಡುಗಳು ಮತ್ತದೇ ಶ್ರೇಣೀಕೃತ ವ್ಯವಸ್ಥೆಯಡಿ ಹಂತಹಂತವಾಗಿ ಕೆಳಗಿನವರೆಗೆ ತಲುಪುತ್ತ ಹೋಗುತ್ತವೆ. ಸಂವಹನ ಸರಿಯಾಗಿದ್ದರೆ ಈ ಸಮಸ್ಯೆ ಇರುತ್ತಿತ್ತಾ?

ಪರಿಹಾರ ಸುಲಭಸಂವನಹ ಸಮಸ್ಯೆಗೆ ಸುಲಭ ಪರಿಹಾರ ಇದೆ. ಇದರಲ್ಲಿ ಎಲ್ಲಕ್ಕಿಂತ ಮುಖ್ಯ, ಕೆಲಸ ಏನೆಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು. ಅದಕ್ಕಿಂತ ಮುಖ್ಯ ಕೆಲಸವೆಂದರೆ, ಈ ಕೆಲಸವನ್ನು ಸಮರ್ಥವಾಗಿ ಮಾಡಬಲ್ಲ ವ್ಯಕ್ತಿ ಯಾರೆಂಬುದನ್ನು ಗುರುತು ಮಾಡಿಕೊಳ್ಳುವುದು.

ಶ್ರೇಣೀಕೃತ ವ್ಯವಸ್ಥೆ (ಹೈರಾರ್ಕಿ) ಏನೇ ಇರಲಿ, ಯಾರಿಗೆ ಚೆನ್ನಾಗಿ ಕೆಲಸ ಮಾಡಲು ಬರುತ್ತದೋ, ಅವರಿಗೇ ಹೆಚ್ಚಿನ ಜವಾಬ್ದಾರಿ ನೀಡುವುದು ಉತ್ತಮ. ಆಗ, ‘ಕೆಲಸ ಕೆಡುತ್ತೆ, ಡೆಡ್‌ಲೈನ್ ಮೀರುತ್ತೆ’ ಎಂಬ ಗೊಣಗಾಟಗಳಿರಲ್ಲ. ಹೈರಾರ್ಕಿ ಏನಿದ್ದರೂ ಕಚೇರಿ ಒಳಗೆ. ಆದರೆ, ಉತ್ಪನ್ನಗಳು ದಿಕ್ಕುದಿಕ್ಕಿಗೂ ಹೋಗುತ್ತವೆ. ಹೈರಾರ್ಕಿ ಹೆಸರಲ್ಲಿ ಅಸಮರ್ಥರಿಗೆ ಕೆಲಸದ ಜವಾಬ್ದಾರಿ ನೀಡಿದರೆ, ಅದರ ಪರಿಣಾಮವನ್ನು ದೊಡ್ಡ ಪ್ರಮಾಣದಲ್ಲಿ ಅನುಭವಿಸಬೇಕಾಗುತ್ತದೆ.

ಎರಡನೆಯದಾಗಿ, ಕೆಲಸದ ಉದ್ದೇಶ, ವಿಧಾನ, ಡೆಡ್‌ಲೈನ್, ಗುಣಮಟ್ಟ ಇತ್ಯಾದಿಗಳನ್ನು ಬಾಸ್ ಅತ್ಯಂತ ಸ್ಪಷ್ಟವಾಗಿ ಹೇಳಿಬಿಡಬೇಕು. ಸಾಧ್ಯವಾದಷ್ಟೂ ಇವನ್ನೆಲ್ಲ ಲಿಖಿತವಾಗಿ ನೀಡುವುದು ಇನ್ನೂ ಉತ್ತಮ. ಆಗ, ಏನೇ ಸಂದೇಹಗಳಿದ್ದರೂ ಓದಿ ಪರಿಹರಿಸಿಕೊಳ್ಳಬಹುದು.

ಮೂರನೆಯದು, ಕೆಲಸ ನಡೆಯುತ್ತಿರುವಾಗಲೇ, ಅದು ಸರಿಯಾದ ರೀತಿಯಲ್ಲಿ ನಡೆಯುತ್ತಿದೆಯಾ ಎಂಬುದನ್ನು ಪರೀಕ್ಷಿಸುತ್ತಿರುವುದು. ಆಗ ಏನೇ ವ್ಯತ್ಯಾಸಗಳಿದ್ದರೂ ಅವನ್ನು ಆ ಹಂತದಲ್ಲೇ ಸರಿಪಡಿಸಲು ಸಾಧ್ಯವಾಗುತ್ತದೆ.

ಪಟ್ಟಿ ಹೀಗೆ ವಿಸ್ತರಿಸುತ್ತಲೇ ಹೋಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕೆಲಸ ವಹಿಸುವವರಿಗಷ್ಟೇ ಅಲ್ಲ, ಕೆಲಸ ನಿರ್ವಹಿಸುವವರಿಗೂ ವಿಷಯ ಸ್ಪಷ್ಟವಾಗಿರಬೇಕು. ಜವಾಬ್ದಾರಿ ಯಾರದೆಂಬುದೂ ಸ್ಪಷ್ಟವಾಗಿರಬೇಕು. ಆಗ ಯಾವುದೇ ರಗಳೆಗಳಿರುವುದಿಲ್ಲ.

ಇಲ್ಲದಿದ್ದರೆ, ತುಳಿಯದಿದ್ದರೂ ನಾಯಿ ಕಚ್ಚಿತು ಎಂದು ಗೋಳಾಡಬೇಕಾಗುತ್ತದೆ.


-ಶ್ರೀದೇವಿ ಕಳಸದ, 

(ವಿಜಯ ಕರ್ನಾಟಕ, ಲವಲವಿಕೆ, ೩೦/೫/೨೦೧೨)