Saturday, June 30, 2012

ಮಾಗುವ ಮುನ್ನವೇ ತ್ಯಾಗ


ಉಡುಪು ಬದಲಾದ ಮಾತ್ರಕ್ಕೆ ವೈರಾಗ್ಯ ಮೈಗೂಡುವುದಿಲ್ಲ; ಆಚರಣೆಗಳು ಬದಲಾದ ಮಾತ್ರಕ್ಕೆ ವಿಚಾರ ಬದಲಾಗುವುದಿಲ್ಲ. ಹಾಗಂತ, ಅಕಾಲಿಕ ವೈರಾಗ್ಯಕ್ಕೆ ಹೊರಳಿದವರು ಆಷಾಡಭೂತಿಗಳಂತ ಅರ್ಥವಲ್ಲ. ಅವರಲ್ಲಿ ನಿಜಕ್ಕೂ ವೈರಾಗ್ಯದ ಬೀಜಾಂಕುರವಾಗಿದೆ. ಆದರೆ, ಅದು ಬಲಿಯಲು ಕಾಲ ಬೇಕು. ಪೋಷಣೆ ಪಡೆಯಲು ಅನುಭವದ ಗೊಬ್ಬರ, ನೀರು ಬೇಕು. ತಿಳಿವಳಿಕೆಯ ಬೆಳಕು ಬೇಕು. ಸಣ್ಣ ಮೊಳಕೆಯೊಂದನ್ನೇ ನೆಚ್ಚಿ; ಮುಂದೆ ಅದು ದೊಡ್ಡ ಮರವಾಗಲಿದೆ ಎಂದುಕೊಂಡು; ಕೃತಕವಾಗಿ ಗೊಬ್ಬರ, ನೀರು, ಬೆಳಕು ಒದಗಿಸುವುದರಿಂದ ವೈರಾಗ್ಯ ಒಲಿಯುವುದಿಲ್ಲ, ಬಲಿಯುವುದಿಲ್ಲ.
-----------------------------------------------


ಇತ್ತೀಚಿನ ವರ್ಷಗಳಲ್ಲಿ ಬಹಳ ಖ್ಯಾತಿ ಪಡೆದ ಪುಸ್ತಕವೊಂದು ಈಗಲೂ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಅದರ ಹೆಸರು ’ದಿ ಮಾಂಕ್ ಹು ಸೋಲ್ಡ್ ಹಿಸ್ಜ್‌ ಫೆರಾರಿ’ (ಫೆರಾರಿ ಮಾರಿದ ಸನ್ಯಾಸಿ). ಅದರ ಲೇಖಕ ರಾಬಿನ್ ಶರ್ಮಾ. ಭಾರತೀಯ ಮೂಲದ ಅಮೆರಿಕನ್ ಲೇಖಕ. 
ಹಣ ಮತ್ತು ಹೆಸರನ್ನು ಅತಿ ದೊಡ್ಡ ಪ್ರಮಾಣದಲ್ಲಿ ಸಂಪಾದಿಸಿದ್ದ ಅಮೆರಿಕದ ಯುವ ಕ್ರಿಮಿನಲ್ ಲಾಯರ್ ಈ ಪುಸ್ತಕದ ನಾಯಕ. ಅದೊಂದಿನ ಆತನಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗುತ್ತದೆ. ಚೇತರಿಸಿಕೊಂಡ ನಂತರ, ಆತ ತನ್ನದೆನ್ನುವ ಎಲ್ಲವನ್ನೂ ಸಿಕ್ಕ ಬೆಲೆಗೆ ಮಾರುತ್ತಾನೆ. ಅದರಲ್ಲಿ, ಆತನಿಗೆ ಅತ್ಯಂತ ಪ್ರಿಯವಾದ ಹಾಗೂ ಅತಿ ದುಬಾರಿ ಬೆಲೆಯ ಫೆರಾರಿ ಕಾರೂ ಇರುತ್ತದೆ. 

ಎಲ್ಲವನ್ನೂ ಮಾರಿದ ವಕೀಲ, ಯಾರಿಗೂ ಹೇಳದೇ ಭಾರತಕ್ಕೆ ಹೋಗುತ್ತಾನೆ. ಬದುಕಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಾನೆ. ಇಡೀ ಪುಸ್ತಕದಲ್ಲಿ, ಫೆರಾರಿ ಮಾರಿದ ಈ ಸನ್ಯಾಸಿ ಕಂಡುಕೊಂಡ ಬದುಕಿನ ಸರಳ ಸಿದ್ಧಾಂತಗಳಿವೆ.ಈ ಪುಸ್ತಕ ಗೌತಮ ಬುದ್ಧನ ಕತೆಯನ್ನು ಮತ್ತೆ ಮತ್ತೆ ನೆನಪಿಸುತ್ತದೆ.
ಇವನ್ನು ನೋಡಿದಾಗ ಕಾಡುವುದು ಒಂದೇ ಪ್ರಶ್ನೆ: ಮನುಷ್ಯನಿಗೆ ವೈರಾಗ್ಯ ಇದ್ದಕ್ಕಿದ್ದಂತೆ ಏಕೆ ಉದ್ಭವವಾಗುತ್ತದೆ?

ವೈರಾಗ್ಯಕ್ಕೂ ಒಂದು ಕಾಲವಿದೆ ಅಂತ ನಿರ್ಧರಿಸಿರೋದು ಭಾರತೀಯ ಸನಾತನ ಧರ್ಮ. ಮಾನವನ ಆಯಸ್ಸನ್ನು ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಅಂತ ನಾಲ್ಕು ಭಾಗಗಳಾಗಿ ವಿಂಗಡಿಸಿದೆ ಹಿಂದು ಧರ್ಮ. ಬ್ರಹ್ಮಚರ್ಯದಲ್ಲಿ ಅಧ್ಯಯನ, ಗೃಹಸ್ಥದಲ್ಲಿ ವೈವಾಹಿಕ ಜೀವನ, ವಾನಪ್ರಸ್ಥದಲ್ಲಿ ವೈವಾಹಿಕ ಜೀವನಕ್ಕೆ ನಿಧಾನವಾಗಿ ವಿಮುಖವಾಗುವುದು ಮತ್ತು ಸನ್ಯಾಸದಲ್ಲಿ ಸಾಮಾಜಿಕ ಬದುಕನ್ನು ತೊರೆದು ಒಂಟಿಯಾಗಿ ವೈರಾಗ್ಯ ಜೀವನ ನಡೆಸೋದು ಅಂತ ಹೇಳಲಾಗಿದೆ. 

ಆದರೆ, ಈ ಸಿದ್ಧಾಂತ ಸಾಮಾನ್ಯ ಜನರಿಗಾಯಿತು. ಬ್ರಹ್ಮಚರ್ಯವನ್ನೇ ಕೊನೆಯ ಮೂರೂ ಹಂತಗಳಿಗೆ ವಿಸ್ತರಿಸಿದ ಸಾಕಷ್ಟು ಉದಾಹರಣೆಗಳಿವೆ. ಶಂಕರಾಚಾರ್ಯರಿಂದ ಹಿಡಿದು ಸ್ವಾಮಿ ವಿವೇಕಾನಂದರವರೆಗೆ ಸಾಕಷ್ಟು ಮಹನೀಯರು ಬ್ರಹ್ಮಚರ್ಯವೊಂದನ್ನೇ ಬಾಳಿದ್ದುಂಟು, ಬದುಕಿದ್ದುಂಟು. ಇನ್ನು ಕೆಲವರು ಒಂದೆರಡು ಹಂತಗಳ ನಂತರ ನೇರವಾಗಿ ಸನ್ಯಾಸ ಜೀವನಕ್ಕೆ ಹೊರಳಿದ್ದುಂಟು. 

ಅಕಾಲಿಕ ವೈರಾಗ್ಯ

ಇವನ್ನೆಲ್ಲ ನೋಡುತ್ತಿದ್ದರೆ, ವೈರಾಗ್ಯವೆಂದರೇನು? ಅದೇಕೆ ಅಕಾಲಿಕವಾಗಿ ಬರುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬದುಕು ನಶ್ವರ ಎಂಬ ಭಾವನೆಯಿಂದ ಶುರುವಾಗುವ ವೈರಾಗ್ಯ, ಅದಕ್ಕೆ ಸಾರ್ಥಕ ಅರ್ಥ ಕಂಡುಕೊಳ್ಳುವುದರೊಂದಿಗೆ ಮುಕ್ತಾಯವಾಗುತ್ತದೆ. ನಮ್ಮ ಇಂದ್ರಿಯಗಳಿಂದ ಗೋಚರವಾಗುವ ಪ್ರತಿಯೊಂದೂ ನಾಶವಾಗುತ್ತದೆ ಎನ್ನುತ್ತಾನೆ ಗೀತಾಚಾರ್ಯ ಕೃಷ್ಣ. ಅಂದರೆ, ನಾವು ನೋಡುವ, ಕೇಳುವ, ಸ್ಪರ್ಶಿಸುವ, ಆಘ್ರಾಣಿಸುವ, ರುಚಿ ನೋಡುವ ಹಾಗೂ ಮನಸ್ಸಿನೊಳಗೆ ಅಂದುಕೊಳ್ಳುವ ಪ್ರತಿಯೊಂದೂ ಕಾಲನ ಹೊಡೆತಕ್ಕೆ ನಿರ್ನಾಮವಾಗುತ್ತದೆ. ಹೀಗಿರುವಾಗ, ಬದುಕಿಗೆ ಅರ್ಥವೇನು?

ಕುರುಕ್ಷೇತ್ರದ ಕದನಭೂಮಿಯ ಮಧ್ಯೆ ವಿಷಾದಭರಿತ ಅರ್ಜುನ ತನ್ನ ಸಾರಥಿ ಹಾಗೂ ಮಿತ್ರ ಶ್ರೀಕೃಷ್ಣನನ್ನು ಕೇಳಿದ್ದು ಇದೇ ಪ್ರಶ್ನೆಯನ್ನು. ಮಹಾಭಾರತದ ಕೆನೆ ಎಂಬಂತಿರುವ ಭಗವದ್ಗೀತೆ ಶುರುವಾಗುವುದೇ ಅರ್ಜುನ ವಿಷಾದಯೋಗದಿಂದ. ಇದು ಆಕಸ್ಮಿಕವಲ್ಲ. ಏಕೆಂದರೆ, ಪ್ರತಿಯೊಬ್ಬ ಮನುಷ್ಯ, ಅದರಲ್ಲೂ ಯೌವನದ ಉತ್ತುಂಗದಲ್ಲಿರುವ ವ್ಯಕ್ತಿ, ಇದ್ದಕ್ಕಿದ್ದಂತೆ ನಿರಾಸಕ್ತನಾಗುತ್ತಾನೆ. ಅವನಿಗೆ ಪ್ರತಿಯೊಂದೂ ವ್ಯರ್ಥ ಅನಿಸತೊಡಗುತ್ತದೆ. ಜಗತ್ತಿನ ಈ ನೀತಿ ನಿಯಮಗಳಿಗೆ, ಬದುಕಿನ ರೀತಿಗೆ ಏನೂ ಅರ್ಥವಿಲ್ಲ. ಎಲ್ಲವೂ ನಾಶವಾಗುವಂಥದು. ಮನಸ್ಸಿಗೆ ಶಾಶ್ವತ ನೆಮ್ಮದಿ ಕೊಡುವಂಥದಲ್ಲ. ಈ ವ್ಯವಸ್ಥೆಯಲ್ಲಿ ಬದುಕುವುದಕ್ಕೆ ಏನೂ ಅರ್ಥವಿಲ್ಲ ಅಂತ ಅನಿಸತೊಡಗುತ್ತದೆ. 

ಹೀಗೆ ನಿಧಾನವಾಗಿ ಶುರುವಾಗುವ ವೈರಾಗ್ಯ ಅವನನ್ನು ಬದುಕಿಗೆ ಬೆನ್ನು ಮಾಡಿಸುತ್ತದೆ. ಎಷ್ಟೋ ಜನ ಉದ್ಯೋಗ ಬಿಡುತ್ತಾರೆ. ಮನೆ ತೊರೆಯುತ್ತಾರೆ. ತಮ್ಮ ಹೆಂಡತಿ, ಗಂಡ, ಮನೆ, ಮಕ್ಕಳು, ಆಸ್ತಿ ತೊರೆದು ಬಿಡುತ್ತಾರೆ. ಮನಸ್ಸನ್ನು ಕಾಡುವ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ದೇಶಾಂತರ ಹೋಗುತ್ತಾರೆ. ಬಹುತೇಕ ಧಾರ್ಮಿಕ ಕ್ಷೇತ್ರಗಳಲ್ಲಿ ಅಲೆದಾಡುತ್ತಾರೆ. ವರ್ಷಗಟ್ಟಲೇ ಇಂಥದೊಂದು ಹುಡುಕಾಟದಲ್ಲಿ ಕಳೆದುಹೋಗುತ್ತದೆ.
ಅವರು ಹುಡುಕುತ್ತಿರುವುದು ದೇವರಾಗಿರಬಹುದು ಅಥವಾ ಮನಶ್ಯಾಂತಿಯಾಗಿರಬಹುದು.

ಅಗೋಚರದ ಕುತೂಹಲ

ಗಮನಿಸಿ ನೋಡಿ: ಈ ರೀತಿ, ಅಕಾಲಿಕವಾಗಿ ವೈರಾಗ್ಯಭಾವಕ್ಕೆ ಒಳಗಾಗುವವರಲ್ಲಿ ಬಹುಪಾಲು ಜನ ಯುವಕ-ಯುವತಿಯರು. ಇವರಲ್ಲಿ ಬಹುತೇಕ ಜನರಿಗೆ ಜೀವನ ಇನ್ನೂ ತೆರೆದುಕೊಳ್ಳುವುದರಲ್ಲಿರುತ್ತದೆ. ಜಗತ್ತಿನ ಏಟುಗಳಿನ್ನೂ ಬಿದ್ದಿರುವುದಿಲ್ಲ. ಅಥವಾ ಅವರನ್ನು ವೈರಾಗ್ಯದತ್ತ ಸೆಳೆದ ಅಂಶಗಳು ನಗಣ್ಯವಾಗಿರುತ್ತವೆ. ಬಲ್ಲವರು ಹೇಳುವಂಥ ಪ್ರಸೂತಿ ವೈರಾಗ್ಯ, ಸ್ಮಶಾನ ವೈರಾಗ್ಯ ಮತ್ತು ಅಭಾವ ವೈರಾಗ್ಯಗಳೂ ಅವರನ್ನು ತಾಕಿರುವುದಿಲ್ಲ. ಆದರೂ, ಅವರ ಮನಸ್ಸು ಕಾಣದರತ್ತ ಆಕರ್ಷಿತವಾಗಿರುತ್ತದೆ. 
ಏಕೆ ಹೀಗೆ?

ಜೈನ ಧರ್ಮೀಯರಲ್ಲಿ ಈ ರೀತಿ ಯುವ ವಯಸ್ಸಿನಲ್ಲಿಯೇ ಸನ್ಯಾಸದತ್ತ ವಾಲುವುದು ಹೆಚ್ಚು. ಇಸ್ಕಾನ್ ಸಂಸ್ಥೆಗಳಲ್ಲಿ ಇಂಥ ಅಕಾಲಿಕ ವೈರಾಗ್ಯಕ್ಕೆ ಈಡಾದ ಯುವಕ-ಯುವತಿಯರು ದೊಡ್ಡ ಸಂಖ್ಯೆಯಲ್ಲಿ ಸಿಗುತ್ತಾರೆ. ಈಶ್ವರೀಯ ವಿಶ್ವವಿದ್ಯಾಲಯ, ರಾಮಕೃಷ್ಣಾಶ್ರಮಗಳಲ್ಲೂ ಇಂಥ ಗುಂಪನ್ನು ಕಾಣಬಹುದು. ಇವರೆಲ್ಲ ಬದುಕು ಕಟ್ಟಿಕೊಳ್ಳಬೇಕಾದ, ಬದುಕನ್ನು ಅನುಭವಿಸಬೇಕಾದ ವಯಸ್ಸಿನಲ್ಲಿ ಬ್ರಹ್ಮಚರ್ಯದಿಂದ ಸೀದಾ ಸನ್ಯಾಸಕ್ಕೆ ಏಕೆ ನೆಗೆದರು? ಯಾವ ಮೋಹನ ಮುರಳಿ ಅವರನ್ನು ದೂರ ತೀರದತ್ತ ಸೆಳೆಯಿತು?

ಬುದ್ಧನಿಗೋ ಬಾಲ್ಯದಿಂದಲೇ ವೈರಾಗ್ಯದ ಸೆಳೆತವಿತ್ತು. ಅದು ಹೊರಗೆ ಉಕ್ಕಲು ಒಬ್ಬ ರೋಗಿ ಮತ್ತು ಒಂದು ಶವದ ದರ್ಶನ ಸಾಕಿತ್ತು. ಸ್ವಾಮಿ ವಿವೇಕಾನಂದರಿಗೂ ಬಾಲ್ಯಾರಭ್ಯ ವೈರಾಗ್ಯದ ಭಾವವಿತ್ತು. ಬದುಕಿನ ಕುರಿತ ಗಂಭೀರ ಪ್ರಶ್ನೆಗಳು, ಸವಾಲುಗಳು ಇದ್ದವು. ರಾಮಕೃಷ್ಣ ಪರಮಹಂಸರಂಥ ಗುರು ಸಿಕ್ಕು ಅವರಿಗೊಂದು ಸ್ಪಷ್ಟ ದಾರಿ ದಕ್ಕಿತು. ಆದರೆ, ನಮ್ಮ ಸುತ್ತಮುತ್ತ ಇರುವವರು; ನಮ್ಮಂತೇ ವರ್ಷಗಟ್ಟಲೇ ಬದುಕಿದವರು; ಬಣ್ಣ, ಪರಿಮಳ, ಸ್ಪರ್ಶ, ರುಚಿಗೆ ಮರುಳಾದವರು ಅದ್ಹೇಗೆ ದಿಢೀರನೇ ಎಲ್ಲ ಬಿಟ್ಟು ಎದ್ದು ಹೋದರು? ಬದುಕಿನ ಯಾವ ಅಶಾಶ್ವತೆ ಅವರನ್ನು ಬದುಕಿಗೇ ವಿಮುಖವಾಗಿಸಿತು? ಇವರದು ನಿಜವಾದ ವೈರಾಗ್ಯವೆ?

ಈ ಪ್ರಶ್ನೆ ಏಕೆ ಉದ್ಭವವಾಗುತ್ತದೆಂದರೆ, ಬದುಕಿನ ಹೊಡೆತ ಕಾಣದ ವ್ಯಕ್ತಿಗೆ ಹುಟ್ಟುವ ವೈರಾಗ್ಯಕ್ಕೆ ಗಟ್ಟಿ ಬೇರುಗಳಿರುವುದಿಲ್ಲ. ಅದಕ್ಕೆಂದೇ ‘ಆದರ್ಶ ಸನ್ಯಾಸಿಗಿಂತ ಆದರ್ಶ ಗೃಹಸ್ಥನಾಗುವುದು ಬಹಳ ಕಷ್ಟ’ ಎಂದರು ಸ್ವಾಮಿ ವಿವೇಕಾನಂದ. ನಿತ್ಯದ ಬದುಕಿನ ಏರಿಳಿತಗಳು ತಂದುಕೊಡುವ ಸಮಚಿತ್ತ, ಜೀವನ ಸಿದ್ಧಾಂತ, ಅಂತಿಮ ಹಂತದ ಹದವಾದ ವೈರಾಗ್ಯದ ಸೊಗಸು ದಿಢೀರ್ ಅಥವಾ ಅಕಾಲಿಕ ವೈರಾಗ್ಯದಲ್ಲಿ ಕಂಡು ಬರುವುದಿಲ್ಲ. ಅಲ್ಲಿ ಹೆಚ್ಚಾಗಿ ಕಾಣುವುದು ವೈರಾಗ್ಯದ ಅನುಕರಣೆ. ವೈರಾಗ್ಯದ ಶಾಸ್ತ್ರೀಯ ರೂಪದ ಬದುಕು. ಅದಕ್ಕೆ ಗಟ್ಟಿ ಬೇರುಗಳಿರುವುದು ಕಡಿಮೆ.

ತ್ಯಜಿಸುವುದಲ್ಲ ವೈರಾಗ್ಯ

ಅಷ್ಟಕ್ಕೂ ವೈರಾಗ್ಯವೆನ್ನುವುದು ಎಲ್ಲವನ್ನೂ ತ್ಯಜಿಸಿ ಎಲ್ಲಿಗೋ ಹೋಗುವುದಲ್ಲ; ಎಲ್ಲದರ ಮಧ್ಯೆ ಇದ್ದೂ ಯಾವುದರಿಂದಲೂ ಪ್ರಭಾವಿತರಾಗದಿರುವುದು. ಮಹಾತ್ಮಾ ಗಾಂಧೀಜಿಯವರದು ಅಂಥ ವೈರಾಗ್ಯ. ಕೃಷ್ಣನದೂ ಅಂಥದೇ ವೈರಾಗ್ಯ. ಇವರೆಲ್ಲ ಉಂಡೂ ಉಪವಾಸಿಗಳು, ಬಳಸಿಯೂ ಬ್ರಹ್ಮಚಾರಿಯಾದವರು.  

ಏಕೆಂದರೆ, ನಿಜವಾದ ವೈರಾಗ್ಯ ವ್ಯಕ್ತಿಯ ಒಟ್ಟಾರೆ ನಿಲುವನ್ನೇ ಬದಲಿಸಿಬಿಡುತ್ತದೆ. ಅದು ಹೊಸ ಚೈತನ್ಯ ತಂದುಕೊಡುತ್ತದೆ. ಬದುಕುವ ದಾರಿಯನ್ನು ತಿಳಿಗೊಳಿಸುತ್ತದೆ. ಯಾವುದಕ್ಕೂ ಅಂಟಿಕೊಳ್ಳದೇ ಎಲ್ಲವನ್ನೂ ಉತ್ಕಟವಾಗಿ ಆಸ್ವಾದಿಸುವ ಕಲೆ ಕಲಿಸುತ್ತದೆ. ಅಕಾಲಿಕ, ಅಪ್ರಾಪ್ತ ವೈರಾಗ್ಯದಲ್ಲಿ ಈ ಆಳ, ಈ ನೆಮ್ಮದಿ, ಈ ಶಾಂತಿ ಕಾಣುವುದಿಲ್ಲ. 

ಅದಕ್ಕೆಂದೇ ಬಹುತೇಕ ಅಕಾಲಿಕ ವೈರಾಗಿಗಳು ಕೆಲ ಕಾಲದ ನಂತರ ಮೂಲಬದುಕಿಗೆ ಹಿಂದಿರುಗುತ್ತಾರೆ. ಅರಣ್ಯ ಹೊಕ್ಕ, ಅಲೆಮಾರಿಯಾದ ಸಿದ್ಧಾರ್ಥ ಜ್ಞಾನದರ್ಶನ ಪಡೆದ ನಂತರ ಮತ್ತೆ ಬದುಕಿಗೆ ಹಿಂದಿರುಗಿದ. ಕೃಷ್ಣ ಬದುಕಿನ ಎಲ್ಲ ಸೊಗಸನ್ನು ಆಸ್ವಾದಿಸುತ್ತಲೇ ವಿರಕ್ತನಾಗಿದ್ದ. ಗಾಂಧೀಜಿ ಸ್ವಾತಂತ್ರ್ಯ ಚಳವಳಿ, ಸಾಮಾಜಿಕ ಪರಿವರ್ತನೆಯಲ್ಲಿ ತೊಡಗಿಕೊಂಡರು. ಇವರ‍್ಯಾರೂ ಬದುಕನ್ನು ತಿರಸ್ಕರಿಸಲಿಲ್ಲ. 
ವೈರಾಗ್ಯವೆಂದರೆ, ಬದುಕನ್ನು ತಿರಸ್ಕರಿಸುವುದಲ್ಲ; ಬದುಕನ್ನು ಅತ್ಯಂತ ಉತ್ಕಟವಾಗಿ ಬದುಕುವುದು. ಅದಕ್ಕೆ ಅಂಟಿಕೊಳ್ಳದೇ ಆಸ್ವಾದಿಸುವುದು. 

ತಾತ್ಕಾಲಿಕ ಭ್ರಾಂತಿ

ಉಡುಪು ಬದಲಾದ ಮಾತ್ರಕ್ಕೆ ವೈರಾಗ್ಯ ಮೈಗೂಡುವುದಿಲ್ಲ; ಆಚರಣೆಗಳು ಬದಲಾದ ಮಾತ್ರಕ್ಕೆ ವಿಚಾರ ಬದಲಾಗುವುದಿಲ್ಲ. ಹಾಗಂತ, ಅಕಾಲಿಕ ವೈರಾಗ್ಯಕ್ಕೆ ಹೊರಳಿದವರು ಆಷಾಡಭೂತಿಗಳಂತ ಅರ್ಥವಲ್ಲ. ಅವರಲ್ಲಿ ನಿಜಕ್ಕೂ ವೈರಾಗ್ಯದ ಬೀಜಾಂಕುರವಾಗಿದೆ. ಆದರೆ, ಅದು ಬಲಿಯಲು ಕಾಲ ಬೇಕು. ಪೋಷಣೆ ಪಡೆಯಲು ಅನುಭವದ ಗೊಬ್ಬರ, ನೀರು ಬೇಕು. ತಿಳಿವಳಿಕೆಯ ಬೆಳಕು ಬೇಕು. ಸಣ್ಣ ಮೊಳಕೆಯೊಂದನ್ನೇ ನೆಚ್ಚಿ; ಮುಂದೆ ಅದು ದೊಡ್ಡ ಮರವಾಗಲಿದೆ ಎಂದುಕೊಂಡು; ಕೃತಕವಾಗಿ ಗೊಬ್ಬರ, ನೀರು, ಬೆಳಕು ಒದಗಿಸುವುದರಿಂದ ವೈರಾಗ್ಯ ಒಲಿಯುವುದಿಲ್ಲ, ಬಲಿಯುವುದಿಲ್ಲ.

ವೈರಾಗ್ಯ ಎಂದರೆ ಒಳದೃಷ್ಟಿ ಬಲಿಯುವುದು, ಜೀವನದೃಷ್ಟಿ ಬೆಳೆಯುವುದು. ಶಿವನ ಮೂರನೇ ಕಣ್ಣಿನಂತೆ, ಜ್ಞಾನಚಕ್ಷುವೊಂದನ್ನು ಹೊಂದುವುದು. ಅದಕ್ಕಾಗಿ ಮನೆ, ಮಠ ತ್ಯಜಿಸಬೇಕಿಲ್ಲವಾದರೂ ಮನೆ, ಮಠದ ರಗಳೆ ಮನದೊಳಗೆ ಬರಬಾರದು. ಕೆಲ ಕಾಲ ಪೂರಕ ವಾತಾವರಣದಲ್ಲಿದ್ದುಕೊಂಡು, ಅಂತಃಶಕ್ತಿ ವೃದ್ಧಿಸಿಕೊಳ್ಳುವುದು ಖಂಡಿತವಾಗಿಯೂ ಉತ್ತಮ. ಆದರೆ, ಅದೇ ಬದುಕಲ್ಲ. ಔಷಧಿ ದೇಹಕ್ಕೆ ಉತ್ತಮ ನಿಜ. ಆದರೆ, ಅದೇ ಊಟವಾಗಬಾರದು. ನಿತ್ಯದೂಟದಲ್ಲೇ ಔಷಧೀಯ ಗುಣವಿರುವಂತೆ ನೋಡಿಕೊಳ್ಳುವುದೇ ಬದುಕಿನ ಮಾರ್ಗ.
ಕೃಷ್ಣ ಬೋಧಿಸಿದ್ದು ಅದನ್ನೇ. ಅಂದರೆ, ತ್ಯಜಿಸಿ ಭೋಗಿಸುವುದು. ಅಂಟಿಕೊಳ್ಳದೇ ಬದುಕುವುದು. ಫಲಾಪೇಕ್ಷೆಯಿಲ್ಲದೇ ಬದುಕುವುದು. 

ಬದುಕೇ ಕಲೆ

ಹೀಗಾಗಿ, ವೈರಾಗ್ಯ ಎಂಬುದು ಸಾಧಿಸಬೇಕಾದ ಸಂಗತಿಯಲ್ಲ. ಅದು ಮಾಡಬೇಕಾದ ಕೆಲಸವೂ ಅಲ್ಲ. ಅದು ತಾನಾಗಿ ಸಂಭವಿಸುವಂಥದು. ಅದು ದಿಢೀರನೇ ಉದ್ಭವಿಸದು. ತಿಳಿವಳಿಕೆಯ ಕೊಳದೊಳಗಿಂದ ಸಹಜವಾಗಿ ನಳನಳಿಸುವಂಥದು. ಅದನ್ನು ಒತ್ತಾಯದಿಂದ ಪಡೆಯಲಾಗದು. 
ನಮ್ಮ ಸುತ್ತಮುತ್ತಲಿನ ಹಲವಾರು ಸಂಘ-ಸಂಸ್ಥೆಗಳಲ್ಲಿ, ಕೇಂದ್ರಗಳಲ್ಲಿ ಕಾಣಸಿಗುವ ಯುವ ವಿರಾಗಿಗಳಲ್ಲಿ ವಯಸ್ಸಾದವರ ಸಂಖ್ಯೆ ತೀರಾ ಕಡಿಮೆ ಇರೋದಕ್ಕೆ ಈ ಅಕಾಲಿಕ ವೈರಾಗ್ಯವೇ ಮುಖ್ಯ ಕಾರಣ. ಆ ತೀವ್ರತೆ ಇಳಿದ ನಂತರ, ಮನಸ್ಸು ಮತ್ತೆ ಪೂರ್ವಾಶ್ರಮದತ್ತ ಹೊರಳುತ್ತದೆ. ಸಹಜವಾಗಿ ಮಾಗುವ ಪ್ರಕ್ರಿಯೆಯೇ ನಿಜವಾದ ವೈರಾಗ್ಯ ತಂದುಕೊಡುವುದು ಎಂಬ ತಿಳಿವಳಿಕೆಯನ್ನು ಮೂಡಿಸುತ್ತದೆ. ಆ ಭಾವನೆ ಬಲಿತವರ ಮತ್ತೆ ಮೂಲ ಬದುಕಿಗೆ ಹಿಂದಿರುಗುತ್ತಾನೆ. ತನ್ನಲ್ಲಿ ಮೂಡಿದ ತಿಳಿವಳಿಕೆಯ ಬೆಳಕಲ್ಲಿ ಹೊಸ ಬದುಕನ್ನು ಬದುಕತೊಡಗುತ್ತಾನೆ.
ಅಂಥ ತಿಳಿವಳಿಕೆಯಿಂದ ಬದುಕುವವನೇ ನಿಜವಾದ ವಿರಾಗಿ. ಅದೇ ಸಹಜ ವೈರಾಗ್ಯ. 

-ಶ್ರೀದೇವಿ ಕಳಸದ
(ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆ. ೦೧/೦೭/೨೦೧೨)

Sunday, June 24, 2012

ಹೂಗಳನ್ನು ಹೊಸಕುವ ವಿಕೃತಿ

ದೌರ್ಜನ್ಯಕ್ಕೆ ಒಳಗಾಗುವ ನೋವು ಒಂದೆಡೆಯಾದರೆ, ದೌರ್ಜನ್ಯಕ್ಕೀಡು ಮಾಡಿದವರು ರಾಜಾರೋಷವಾಗಿ ಓಡಾಡಿಕೊಂಡಿರುವ ನೋವು ಇನ್ನೊಂದೆಡೆ. ಬಹಳಷ್ಟು ಸಂದರ್ಭಗಳಲ್ಲಿ ದೌರ್ಜನ್ಯ ಎಸಗುವವರು ಮನೆಯವರೇ ಆಗಿರುತ್ತಾರೆ. ಅತಿ ಹತ್ತಿರದ ಸಂಬಂಧಿಗಳೇ ಆಗಿರುತ್ತಾರೆ. ಇಂಥ ಘಟನೆಗಳು ಮಕ್ಕಳ ಮುಗ್ಧತೆಯನ್ನು ಹೊಸಕಿಹಾಕುವುದರ ಜೊತೆಗೆ, ಸಂಬಂಧಗಳ ಬಗ್ಗೆ ಅವರಲ್ಲಿ ತಿರಸ್ಕಾರ, ಸಾಮಾಜಿಕ ನೀತಿನಿಯಮಗಳ ಬಗ್ಗೆ ಧಿಕ್ಕಾರದ ಧೋರಣೆ ಮೂಡಿಸುತ್ತವೆ. 
-------------------------------------

ಗಮನಿಸುವ ಕಣ್ಣುಗಳಿದ್ದರೆ, ಒಂಚೂರು ಕಾಳಜಿ ಇದ್ದರೆ, ಎಲ್ಲೆಲ್ಲಿ ಮಕ್ಕಳಿವೆಯೋ, ಅಲ್ಲೆಲ್ಲ ಅವರ ಮೇಲೆ ದೌರ್ಜನ್ಯ ನಡೆಯುತ್ತಿರುವುದನ್ನು ಗಮನಿಸಬಹುದು. ಮಕ್ಕಳು ನಮ್ಮವೇ ಆಗಿರಬಹುದು, ಬೇರೆಯವರಾಗಿರಬಹುದು, ದೌರ್ಜನ್ಯ ನಮ್ಮ ಮನೆಯಲ್ಲೇ ನಡೆಯುತ್ತಿರಬಹುದು, ಇತರರ ಮನೆಗಳಲ್ಲಿರಬಹುದು, ಕೆಲಸದ ಸ್ಥಳವಾಗಿರಬಹುದು, ಶಾಲೆಯಾಗಿರಬಹುದು- ಒಟ್ಟಿನಲ್ಲಿ ಮಕ್ಕಳಿರುವ ಸ್ಥಳಗಳಲ್ಲಿ ನಿರಂತರ ದೌರ್ಜನ್ಯ ನಡೆಯುತ್ತಲೇ ಇವೆ. ಆದರೆ, ಆಗೊಮ್ಮೆ, ಈಗೊಮ್ಮೆ ಮಾತ್ರ ಅವು ಬೆಳಕಿಗೆ ಬರುತ್ತವೆ. ಬಂದಷ್ಟೇ ವೇಗವಾಗಿ ಮತ್ತೆ ಕತ್ತಲೆಗೆ ಸರಿದುಹೋಗುತ್ತವೆ.


ಎಲ್ಲೆಡೆ ನಡೆದಿದೆ ದೌರ್ಜನ್ಯ


ಮಕ್ಕಳ ಮೇಲಿನ ದೌರ್ಜನ್ಯ ಎಲ್ಲೋ ಆಗಬೇಕೆಂದಿಲ್ಲ. ಅದು ನಮ್ಮ ಮನೆಯೇ ಆಗಿರಬಹುದು. ಪಕ್ಕದವರ ಮನೆಯಾಗಿರಬಹುದು. ನಿತ್ಯ ಚಹ ಕುಡಿಯುವ ಹೋಟೆಲ್, ದಿನಸಿ ಖರೀದಿಸುವ ಅಂಗಡಿ, ಶಾಲೆ, ಪಾರ್ಕ್, ರಸ್ತೆ, ಹಾಸ್ಟೆಲ್ ಆಗಿರಬಹುದು. ಒಂಚೂರು ಎಚ್ಚರಿಕೆಯಿಂದ ಗಮನಿಸಿದರೆ ಅಲ್ಲೆಲ್ಲ ಕಾಣಸಿಗುವ ಮಕ್ಕಳ ಒಡಲೊಳಗೆ ದೌರ್ಜನ್ಯದ ಕತೆಗಳು ಕಾಣಿಸುತ್ತವೆ.

ಕೂಡು (ಅವಿಭಕ್ತ) ಕುಟುಂಬಗಳಿರುವ ಮನೆಗಳಷ್ಟೇ ಅಲ್ಲ, ನಾಲ್ಕೈದು ಜನರಿರುವ ಮನೆಗಳಲ್ಲಿರುವ ಮಕ್ಕಳ ಮೇಲೂ ದೌರ್ಜನ್ಯ ನಡೆಯುತ್ತಿರುತ್ತದೆ. ಹೆಚ್ಚುತ್ತಿರುವ ಜೀವನ ಮಟ್ಟ, ದೌರ್ಜನ್ಯದ ಮಟ್ಟವನ್ನೂ ಹೆಚ್ಚಿಸಿದೆ. ಹಿಂಸೆ ಮತ್ತು ಲೈಂಗಿಕತೆಯ ವಿವರಗಳು ಈಗ ಕಂಪ್ಯೂಟರ್, ಟಿವಿ, ಪತ್ರಿಕೆಗಳಷ್ಟೇ ಅಲ್ಲ, ನಮ್ಮ ಅಂಗೈನಲ್ಲಿರುವ ಮೊಬೈಲ್‌ಗೂ ಬಂದು ತಲುಪಿವೆ. ಬದಲಾದ ಜೀವನ ಶೈಲಿ ಮೊದಲಿಗಿಂತ ಹೆಚ್ಚು ಏಕಾಂತವನ್ನು ಕೊಡಮಾಡಿದೆ. ಮನಸ್ಸಿನ ವಿಕೃತಿ ವಿಜೃಂಭಿಸಲು ಬೇಕಾದ ಎಲ್ಲಾ ಪರಿಸ್ಥಿತಿಯೂ ಕೈಗೆಟಕಿರುವಾಗ, ಅಮಾಯಕ ಮಕ್ಕಳು ದೌರ್ಜನ್ಯಕ್ಕೆ ಸುಲಭವಾಗಿ ಒಳಗಾಗತೊಡಗಿವೆ. ಬೇರೆಯವರ ಮಕ್ಕಳು ಸಿಗದಿದ್ದರೆ, ಸ್ವಂತ ಮಕ್ಕಳ ಮೇಲೆಯೇ ದೌರ್ಜನ್ಯ ನಡೆಸಲು ಮನುಷ್ಯ ಹೇಸುವುದಿಲ್ಲ.


ಇದೂ ದೌರ್ಜನ್ಯವೇ


ದೌರ್ಜನ್ಯ ಎಂದರೆ ಕೇವಲ ಲೈಂಗಿಕ ದೌರ್ಜನ್ಯವೇ ಆಗಬೇಕೆಂದೇನಿಲ್ಲ. ಮಕ್ಕಳನ್ನು ಕಟುವಾಗಿ ನಿಂದಿಸುವುದು, ಹೊಡೆಯುವುದು, ಅವರ ಮೂಲಭೂತ ಅವಶ್ಯಕತೆಗಳನ್ನು ತಡೆಹಿಡಿಯುವುದು, ಮಾನಸಿಕ ಮತ್ತು ದೈಹಿಕ ಒತ್ತಡ ಹೇರುವುದು, ಭಯಕ್ಕೆ ಈಡು ಮಾಡುವಂಥ ಕೃತ್ಯಗಳೂ ದೌರ್ಜನ್ಯವೇ. ಮಕ್ಕಳ ಸಹಜ ವಿಕಾಸಕ್ಕೆ ತಡೆಯೊಡ್ಡುವ, ಅವರಲ್ಲಿ ಭಯ, ನೋವು, ಹತಾಶೆ ಉಂಟು ಮಾಡುವ ಎಲ್ಲಾ ಕೆಲಸಗಳೂ ದೌರ್ಜನ್ಯದ ವ್ಯಾಪ್ತಿಗೇ ಬರುತ್ತವೆ. 

ಕಡಿಮೆ ಮಾರ್ಕ್ಸ್ ಪಡೆದ, ಸರಿಯಾಗಿ ಓದುತ್ತಿಲ್ಲ ಎಂದು ತಂದೆತಾಯಿ ಹೇರುವ ಅತಿಯಾದ ಒತ್ತಡ ಕೂಡ ದೌರ್ಜನ್ಯವೇ. ಇದು ಭಾವನಾತ್ಮಕ ದೌರ್ಜನ್ಯ. ಅಲ್ಲಿ ಹೋಗಬೇಡ, ಇಲ್ಲಿ ಹೋಗಬೇಡ, ನೀನು ಕಪ್ಪಗಿದ್ದೀ, ತೆಳ್ಳಗಿದ್ದೀ, ಚೆನ್ನಾಗಿಲ್ಲ, ಸರಿಯಾಗಿ ಮಾತನಾಡಲು ಬರಲ್ಲ, ನೀನು ಫೇಲಾದರೆ ನಾನು ತಲೆ ಎತ್ತಿ ಓಡಾಡುವುದು ಹೇಗೆ? ಎಂಬಂಥ ಮಾತುಗಳು ಮಕ್ಕಳ ಮೇಲೆ ವಿಪರೀತ ಭಾವನಾತ್ಮಕ ಒತ್ತಡ ಹೇರುತ್ತವೆ. ಅದು ಅಂತಿಮವಾಗಿ ಆತ್ಮಹತ್ಯೆಯಂಥ ಅಥವಾ ಮನೆ ಬಿಟ್ಟು ಓಡಿಹೋಗುವಂಥ ಕೃತ್ಯಗಳಲ್ಲಿ ಕೊನೆಯಾಗುತ್ತದೆ.

ಅದೇ ರೀತಿ ಹೆಣ್ಣುಮಗುವೆಂದು ಅದಕ್ಕೆ ಸೂಕ್ತ ಅವಕಾಶ, ಪೋಷಣೆ, ಕಾಳಜಿ ನೀಡದಿರುವುದು ಕೂಡ ದೌರ್ಜನ್ಯವೇ. ಮಕ್ಕಳ ನಡುವೆ ಭೇದ ಮಾಡುವದು ಬಹುತೇಕ ಮನೆಗಳಲ್ಲಿ ಸಾಮಾನ್ಯವಾಗಿ ಕಾಣುವ ದೌರ್ಜನ್ಯ. ಇವುಗಳಿಗೆ ಹೋಲಿಸಿದರೆ ಲೈಂಗಿಕ ದೌರ್ಜನ್ಯ ಮತ್ತು ಮಕ್ಕಳಿಂದ ಕಠಿಣ ಕೆಲಸ ಮಾಡಿಸುವಂಥ ದೌರ್ಜನ್ಯ ಪ್ರಸಂಗಗಳ ಸಂಖ್ಯೆ ಸಾಕಷ್ಟು ಕಡಿಮೆಯೇ.

ಗಾಬರಿಗೊಳಿಸುವ ವಾಸ್ತವ
೨೦೦೭ರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಕ್ಕಳ ಮೇಲಿನ ದೌರ್ಜನ್ಯ ಕುರಿತಂತೆ ಒಂದು ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿತು. ಅವತ್ತಿನ ಜನಸಂಖ್ಯೆಯನ್ನು ಆಧರಿಸಿ ಹೇಳುವುದಾದರೆ, ದೇಶಾದ್ಯಂತ ೧೮ ವರ್ಷದ ಕೆಳಗಿನ ೧೫೦೦ ಲಕ್ಷ ಹೆಣ್ಣುಮಕ್ಕಳು ಮತ್ತು ೭೩೦ ಲಕ್ಷ ಗಂಡುಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಈಡಾಗಿವೆ. ಒಂದಲ್ಲ ಒಂದು ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ದೇಶದ ಮಕ್ಕಳ ಪ್ರಮಾಣ ಶೇ.೫೩.೨೨.  ಈ ಮಕ್ಕಳ ಪೈಕಿ ಶೇ.೨೧.೯ ಮಕ್ಕಳು ಅತೀವ ಲೈಂಗಿಕ ಶೋಷಣೆಗೆ ಒಳಗಾಗಿದ್ದರೆ, ಶೇ.೫೦.೭೬ ಮಕ್ಕಳು ಇತರ ರೀತಿಯ ಲೈಂಗಿಕ ಶೋಷಣೆಗೆ ಈಡಾಗಿವೆ. 

ಇಷ್ಟೊಂದು ಪ್ರಮಾಣದಲ್ಲಿ ದೌರ್ಜನ್ಯ ನಡೆಯುತ್ತಿದ್ದರೂ, ಬೆಳಕಿಗೆ ಬರುವ ಪ್ರಕರಣಗಳ ಸಂಖ್ಯೆ ಏಕೆ ಇಷ್ಟು ಕಡಿಮೆಯಾಗಿದೆ? ಅದಕ್ಕೆ ಕಾರಣ, ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಪೈಕಿ ಶೇ.೭೯ರಷ್ಟು ಮಕ್ಕಳು ಭಯದಿಂದಾಗಿ ಬಾಯ್ಬಿಡುವುದೇ ಇಲ್ಲ. ಇದಕ್ಕೆ ದೊಡ್ಡವರ ಧೋರಣೆಯೂ ಕಾರಣ. ಕೇವಲ ಶೇ.೧೭.೨೪ರಷ್ಟು ಜನ ಮಾತ್ರ ಶೋಷಕರಿಗೆ ಕಠಿಣ ಶಿಕ್ಷೆಯಾಗಬೇಕೆನ್ನುತ್ತಾರೆ. ಆದರೆ, ಶೇ.೫೧.೩೧ರಷ್ಟು ಜನ ವಿಷಯವನ್ನು ಕುಟುಂಬದೊಳಗೇ ಬಗೆಹರಿಸಿಕೊಳ್ಳಲು ಬಯಸುತ್ತಾರೆ.

ಮುಗ್ಧತೆಯೇ ನಾಶ


ದೌರ್ಜನ್ಯಕ್ಕೆ ಒಳಗಾಗುವ ನೋವು ಒಂದೆಡೆಯಾದರೆ, ದೌರ್ಜನ್ಯಕ್ಕೀಡು ಮಾಡಿದವರು ರಾಜಾರೋಷವಾಗಿ ಓಡಾಡಿಕೊಂಡಿರುವ ನೋವು ಇನ್ನೊಂದೆಡೆ. ಬಹಳಷ್ಟು ಸಂದರ್ಭಗಳಲ್ಲಿ ದೌರ್ಜನ್ಯ ಎಸಗುವವರು ಮನೆಯವರೇ ಆಗಿರುತ್ತಾರೆ. ಅತಿ ಹತ್ತಿರದ ಸಂಬಂಧಿಗಳೇ ಆಗಿರುತ್ತಾರೆ. 
ಇಂಥ ಘಟನೆಗಳು ಮಕ್ಕಳ ಮುಗ್ಧತೆಯನ್ನು ಹೊಸಕಿಹಾಕುವುದರ ಜೊತೆಗೆ, ಸಂಬಂಧಗಳ ಬಗ್ಗೆ ಅವರಲ್ಲಿ ತಿರಸ್ಕಾರ, ಸಾಮಾಜಿಕ ನೀತಿನಿಯಮಗಳ ಬಗ್ಗೆ ಧಿಕ್ಕಾರದ ಧೋರಣೆ ಮೂಡಿಸುತ್ತವೆ. ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಹಿಂದೆ ಇಂಥ ಧೋರಣೆಗಳ ಕೊಡುಗೆ ದೊಡ್ಡ ಪ್ರಮಾಣದಲ್ಲಿದೆ.

ಮಕ್ಕಳೆಂದರೆ ಗಡಿಯಿಲ್ಲದ ಜೀವಗಳು. ವಯಸ್ಕ ವ್ಯಕ್ತಿಗೆ ಇರುವುದಕ್ಕಿಂತ ಹೆಚ್ಚಿನ ಹಕ್ಕುಗಳು ಮಕ್ಕಳಿಗಿವೆ. ಆದರೆ, ಆ ಹಕ್ಕುಗಳ ಜಾರಿ ಮಾಡುವವರು ವಯಸ್ಕರಾಗಿರುವುದರಿಂದ, ಮಕ್ಕಳು ಅತಿ ಹೆಚ್ಚಿನ ಶೋಷಣೆಗೆ ಒಳಗಾಗುಗುತ್ತಿವೆ. ತೀರಾ ಇತ್ತೀಚೆಗೆ ಬೆಳಕಿಗೆ ಬಂದ ಫ್ರಾನ್ಸ್ ರಾಯಭಾರಿ ಕಚೇರಿಯ ವ್ಯಕ್ತಿ ತನ್ನ ಮೂರೂವರೆ ವರ್ಷದ ಹೆಣ್ಣುಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಪ್ರಕರಣ ವಿಷಯದ ತೀವ್ರತೆಗೆ ಹಿಡಿದ ಚಿಕ್ಕ ಕನ್ನಡಿ ಮಾತ್ರ.
ವಾಸ್ತವ ಪರಿಸ್ಥಿತಿ ಮಾತ್ರ ಇದಕ್ಕಿಂತ ವಿಶಾಲವಾಗಿದೆ ಹಾಗೂ ವಿಕೃತವಾಗಿದೆ.

-ಶ್ರೀದೇವಿ ಕಳಸದ (25/6/2012, ವಿಜಯ ಕರ್ನಾಟಕದ)Monday, June 4, 2012

ಎಲ್ಲಿಂದಲೋ ಬಂದವರು...

ನೆಲೆಯೂರಿದಲ್ಲೇ ಒಲೆ. ಕೆಲಸದ ತಾಣದಲ್ಲೇ ಮನೆ. ಅರೆಬರೆ ಕಟ್ಟಡದೊಳಗೆ, ಮೂರು ಕಲ್ಲಿನ ಮಧ್ಯೆ ಉರಿಯ ಕೆನ್ನಾಲಿಗೆ. ಕಪ್ಪು ಹಂಚಿನಲ್ಲಿ ಬೇಯುತ್ತಿರುವ ಬಿಳಿ ರೊಟ್ಟಿ. ಒಲೆ ಮುಂದೆ ಕೂತ ಕನಸಿಲ್ಲದ ಕಂಗಳಲ್ಲಿ ಅದರ ಪ್ರತಿಫಲನ. 

ಮರಳು, ಜಲ್ಲಿಕಲ್ಲುಗಳಲ್ಲಿ ಅರೆನಗ್ನ ಮಕ್ಕಳ ಆಟ. ಆಚೆ, ರಸ್ತೆ ಬದಿ ಕುಕ್ಕರಗಾಲಲ್ಲಿ ಕೂತ ಹುರಿಕಟ್ಟಿದ ದೇಹದ ಗಂಡಸರ ಬಾಯಲ್ಲಿ ಬೀಡಿ. ಹೊಗೆಯುಗುಳುವ ಮೋಡಿ. ತುಸು ದೂರದಲ್ಲೇ ವೈಯಾರಿ ನಗರದ ವೈಭವೋಪೇತ ಕಟ್ಟಡಗಳು, ಬೀದಿದೀಪಗಳು, ರಂಗಿನ ವಾಹನಗಳು, ಉಳುಕದೇ ಬಳುಕುವ ಮೆದು ದೇಹಗಳು.

ನಗರದ ಯಾವುದೇ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕಾಣುವ ಸಾಮಾನ್ಯ ದೃಶ್ಯಗಳಿವು. ಇವರೆಲ್ಲ ಗುಳೆ ಬಂದವರು. ಅನ್ನ ಅರಸಿ, ಬದುಕ ಬಯಸಿ, ಅಪರಿಚಿತ ಜಾಗದಲ್ಲಿ ನೆಮ್ಮದಿ ಕಾಣಬಯಸಿದವರು. ನಾಡಿನ ಎಲ್ಲೆಡೆಯಿಂದ ಗುಂಪಾಗಿ ಹೊರಟವರು. 

ತಲೆ ಮೇಲೆ ಹೊತ್ತ ಮೂಟೆಯೊಳಗೆ ಹಾಸಲೊಂದಿಷ್ಟು, ಹೊದಿಯಲೊಂದಿಷ್ಟು, ಬೇಯಿಸಲೊಂದಿಷ್ಟು ವಸ್ತುಗಳು. ಟಿಕೆಟ್ಟಿಲ್ಲದೇ ರೈಲೇರಿ, ಚೌಕಾಸಿ ಮಾಡಿ ಲಾರಿ ಹತ್ತಿ ನಗರಕ್ಕೆ ಬಂದಿಳಿದವರು ಉಳ್ಳವರ ಕನಸುಗಳ ಸಾಕಾರಕ್ಕೆ ಬೆವರು ಹರಿಸುತ್ತಿದ್ದಾರೆ. ಅವತ್ತು ದುಡಿದಿದ್ದನ್ನು ಅವತ್ತೇ ಉಂಡು, ನಾಳೆಗೆಂದು ಕೇವಲ ಕನಸುಗಳನ್ನಿಟ್ಟುಕೊಂಡು, ಕಟ್ಟಡದಿಂದ ಕಟ್ಟಡಕ್ಕೆ ಖಾಲಿ ಕೈಗಳಲ್ಲಿ ಹೊರಡುತ್ತಾರೆ. 

ಬುನಾದಿ ಬೀಳುವುದಕ್ಕೆ ಮುನ್ನವೇ ರಸ್ತೆ ಬದಿ ಜೋಪಡಿಗಳೇಳುತ್ತವೆ. ಜಲ್ಲಿಕಲ್ಲುಗಳ ಜೊತೆ ಮಕ್ಕಳ ಆಟ ಶುರುವಾಗುತ್ತದೆ. ಕಟ್ಟಡ ಮೇಲೇಳುತ್ತಿದ್ದಂತೆ ಬಿಡುವಿಲ್ಲದ ಕೆಲಸ. ಜಲ್ಲಿ, ಮರಳು, ಸಿಮೆಂಟ್ ಹೊತ್ತು ಮರದ ಏಣಿ ಹತ್ತಿ ಇಳಿದು; ಬಿಡುವಿನಲ್ಲಿ ಹಸುಳೆಯ ಬಾಯಿಗೆ ಅಲ್ಲೇ ಮರೆಮಾಡಿಕೊಂಡು ಹಾಲೂಡಿಸಿ; ಊಟದ ಹೊತ್ತಿಗೆ ಮಡಿಚಿದ ತಟ್ಟೆಯಂತಾದ ರೊಟ್ಟಿ ಬಿಡಿಸಿ; ಸೂರ್ಯನಿಗೆ ಸುಸ್ತಾಗುವ ಹೊತ್ತಿಗೆ ಕಾಲೆಳೆದುಕೊಂಡು ಜೋಪಡಿ ತಲುಪಿ; ಒಲೆ ಹಚ್ಚಿ ಕೂತರೆ ಬೆಂಕಿ ನರ್ತಿಸುತ್ತದೆ- ಒಳಗೂ ಹೊರಗೂ.  

ವಾರಕ್ಕೊಂದಿನ ಒತ್ತಾಯದ ರಜೆ. ವಾರದ ಬಟ್ಟೆ ಒಗೆದು, ಹರವಿ, ಅಗ್ಗದ ಸೋಪಿನಲ್ಲಿ ತಲೆಗೆರೆದುಕೊಂಡು, ತಳ್ಳುಗಾಡಿಯಲ್ಲಿ ಚೌಕಾಸಿ ಮಾಡಿ ತರಕಾರಿ ಕೊಂಡು, ಮಧ್ಯಾಹ್ನದ ವಿಶೇಷ ಅಡುಗೆ ಉಂಡು ಕೂತಾಗ ಕಣ್ಣಿಗೆ ಜೋಂಪು. ಸಂಜೆ ಹೊತ್ತಿಗೆ ರಂಗವಲ್ಲಿಯಿಲ್ಲದ ತಲಬಾಗಿಲು ಮುಚ್ಚಿ, ನಗರದ ಬೆಡಗ ನೋಡುವ ಸಡಗರ. 
ಮಾತಿಗೊಮ್ಮೆ ಊರ ನೆನಪಿಸಿಕೊಳ್ಳುತ್ತ, ನಿತ್ಯ ಬೇಕಾದ ವಸ್ತುಗಳನ್ನು ಕೊಳ್ಳುವಾಗ ಚೌಕಾಸಿ ಮಾಡುತ್ತ, ಅಕ್ಕಿಗಿಂತ ದುಬಾರಿಯಾದ ಜೋಳ ಕೊಳ್ಳುವಾಗ ಚಳ್ಳೆಂದು ಚಿಮ್ಮುವ ನೆನಪು ಮತ್ತು ಕಣ್ಣೀರು ಒರೆಸಿಕೊಳ್ಳುವಾಗ, ನಗರ ಏಕೋ ಸುಮ್ಮನಿರುತ್ತೆ. 

ಇಲ್ಲಿ ಅಕ್ಕಿಗಿಂತ ಜೋಳ, ಸೀಮೆಎಣ್ಣೆಗಿಂತ ಕಟ್ಟಿಗೆ ದುಬಾರಿ. ದೊಡ್ಡವರಿಗೆ ಚಿಕ್ಕವರನ್ನು, ಚಿಕ್ಕವರಿಗೆ ಹಸುಳೆಗಳನ್ನು ಸಾಕುವ ಜವಾಬ್ದಾರಿ. ದುಡಿಮೆ ಎಂಬುದು ಬಿಡುವಿಲ್ಲದ ದಿನಚರಿ. ಹೊಲದಲ್ಲಿ ಉತ್ತು ಬಿತ್ತಿ ಅವರಿವರಿಗೆ ಕೊಟ್ಟು ಉಂಡುಟ್ಟು ಬದುಕಿದವರಿಗೆ ಗುಳೆ ಎಂಬುದು ಮಳೆ ಮುನಿದಾಗಿನ ಶಿಕ್ಷೆ. ಮತ್ತೊಂದು ಮಳೆಗಾಲ ಬರುವವರೆಗಿನ ರಕ್ಷೆ.


ನೆಲೆಯೂರಿದ ಊರಲ್ಲಿ ರೇಶನ್ ಕಾರ್ಡಿಲ್ಲ. ಮತದಾರರ ಪಟ್ಟಿಯಿಲ್ಲ. ಹೀಗಾಗಿ ಇವರು ಜನಪ್ರತಿನಿಧಿಗಳಿಗೆ ಲೆಕ್ಕಕ್ಕಿಲ್ಲ. ಇವರನ್ನು ಉದ್ದೇಶಿಸಿ ಯಾವ ಯೋಜನೆಗಳೂ ರೂಪುಗೊಳ್ಳುವುದಿಲ್ಲ. ಅವತ್ತು ದುಡಿದಿದ್ದನ್ನು ಅವತ್ತೇ ಉಂಡು ಬದುಕುವವರಿವರು. 

ಮನೆ ಏಳುತ್ತದೆ. ಬುನಾದಿಯಿಂದ ಎದೆಯೆತ್ತರಕ್ಕೆ, ಅಲ್ಲಿಂದ ಮಾಳಿಗೆ ಹಂತಕ್ಕೆ ಬೆಳೆಯುತ್ತದೆ. ಮೌಲ್ಡ್ ಹಾಕಿದಾಗ ಸಿಹಿ ಹಂಚುವ ಮಾಲೀಕ ಕೃತಜ್ಞತೆ ಹುಟ್ಟಿಸುತ್ತಾನೆ. ಅಲ್ಲಿಗೆ ಮುಕ್ಕಾಲು ಕೆಲಸ ಮುಗೀತು. ಅಷ್ಟೊತ್ತಿಗೆ ಹೊಸದಾಗಿ ಮನೆ ಕಟ್ಟಿಸುವವರು ವಿಳಾಸ ಕೊಡುತ್ತಾರೆ. ಟ್ರ್ಯಾಕ್ಟರೋ, ಗೂಡ್ಸ್ ಗಾಡಿಯೋ ಬರುತ್ತದೆ. ನೋಡನೋಡುತ್ತಲೇ ಜೋಪಡಿ ಬಿಚ್ಚಿ, ಮಡಚಿ ಗಾಡಿಯೊಳಗೆ ತೂರಿಸಿ ಹೊರಡುತ್ತಾರೆ. ಕಟ್ಟಿದ ಮನೆ ಹಿಂದಾಗುತ್ತದೆ. ಕಟ್ಟಬೇಕಾದ ಮನೆಯ ನಿವೇಶನ ಇವರ ದಾರಿ ನೋಡುತ್ತಿರುತ್ತದೆ. 

ಮನೆ ಹೊಸದಾದರೂ ಬದುಕು ಹಳೆಯದೇ. ಅವೇ ಮೂರು ಕಲ್ಲು, ಮಕ್ಕಳ ಆಟಕ್ಕೆ ಜಲ್ಲಿಕಲ್ಲು. ಮತ್ತದೇ ಇಟ್ಟಿಗೆ, ಮರಳು, ಸಿಮೆಂಟ್. ರಸ್ತೆ ಬದಿ ಬದುಕುತ್ತ, ಅಡುಗೆ ಮಾಡುತ್ತ, ಪ್ರೈಮ್ ಟೈಮ್ ಟಿವಿ ಧಾರಾವಾಹಿಗಳು ಮುಗಿವ ಮೊದಲೇ ಸೀಮೆಎಣ್ಣೆ ದೀಪವಾರಿಸಿದರೆ, ಅವಸರದ ಮೈಥುನ. ಮತ್ತೆ ಹೊತ್ತು ಮೂಡುವವರೆಗೆ ಮೈಮರೆಸುವ ನಿದ್ದೆ. ಮತ್ತದೇ ಬೆಳಕು, ಮತ್ತದೇ ಬದುಕು.

ಇಲ್ಲಿ ಬೀಳುವ ಮಳೆ ನಮ್ಮೂರಲ್ಲೂ ಬಿದ್ದಿದ್ದರೆ, ಇಲ್ಲಿ ಸಿಗುವ ಕೆಲಸ ನಮ್ಮೂರಲ್ಲೇ ಸಿಕ್ಕಿದ್ದರೆ, ಇಲ್ಲಿಯ ಕೂಲಿಯನ್ನು ಅಲ್ಲೇ ಪಡೆದಿದ್ದರೆ ಎಂಬ ಅಂತ್ಯವಿಲ್ಲದ ...ರೆ...ಗಳ ನಡುವೆ ಖರ್ಚಾಗಿ ಉಳಿಯುವುದು ಸ್ವಲ್ಪ ಚಿಲ್ಲರೆ. ಅವನ್ನೇ ಕೂಡಿಟ್ಟು, ತಿಂಗಳುಗಳ ನಂತರ ಹೊಸ ಬಟ್ಟೆ ತೊಟ್ಟು, ಮತ್ತೆ ಲಾರಿ ಏರಿ ಊರಿಗೆ ಹೊರಟರೆ ಏನೋ ಸಡಗರ. ಈ ಸಲವಾದರೂ ಒಳ್ಳೇ ಮಳೆ ಬರಲಿ, ಒಳ್ಳೇ ಬೆಳೆ ಬರಲಿ, ಕೈತುಂಬ ದುಡ್ಡು ಸಿಗುವಷ್ಟು ರೇಟು ದಕ್ಕಲಿ, ಮತ್ತೆ ಗುಳೆ ಹೋಗುವ ಪ್ರಸಂಗ ಬಾರದಿರಲಿ ಎಂದು ಬೇಡಿಕೊಳ್ಳುತ್ತ ದಾರಿ ಸವೆಸುತ್ತಾರೆ. 

ಕಟ್ಟಿದ ಕಟ್ಟಡಗಳಿಗೆ ಮನುಷ್ಯರ ಬೆರಳ ಗುರುತಿರುವುದಿಲ್ಲ. ಅದರೊಳಗೆ ವಾಸಿಸುವವರಿಗೆ ಕಟ್ಟಿದವರ ಮುಖಗಳ ನೆನಪಿರುವುದಿಲ್ಲ. ಇವರೇ ಇನ್ನೊಮ್ಮೆ ಆ ಕಡೆ ಹೋದರೆ, ಜಾಗದ ಗುರುತು ಸಿಗುವುದಿಲ್ಲ. ನಗರ ಬೆಳೆಯುತ್ತದೆ, ಎಳೆಯ ಮಕ್ಕಳ ಹಾಗೆ. ಎಲ್ಲರಿಗೂ ಬದುಕು ಬದಲಾಗುತ್ತಲೇ ಹೋಗುತ್ತದೆ. ಗುಳೆ ಹೋಗುವವರಿಗೂ ಸಹ. 
ವ್ಯತ್ಯಾಸ ಇಷ್ಟೇ: ಇವರ ಸಂಖ್ಯೆ ಮಾತ್ರ ಪ್ರತಿ ವರ್ಷ ಏರುತ್ತಲೇ ಹೋಗುತ್ತದೆ. 


-ಶ್ರೀದೇವಿ ಕಳಸದ
(ವಿಜಯ ಕರ್ನಾಟಕ, ೦೪/೬/೨೦೧೨)