Monday, June 4, 2012

ಎಲ್ಲಿಂದಲೋ ಬಂದವರು...

ನೆಲೆಯೂರಿದಲ್ಲೇ ಒಲೆ. ಕೆಲಸದ ತಾಣದಲ್ಲೇ ಮನೆ. ಅರೆಬರೆ ಕಟ್ಟಡದೊಳಗೆ, ಮೂರು ಕಲ್ಲಿನ ಮಧ್ಯೆ ಉರಿಯ ಕೆನ್ನಾಲಿಗೆ. ಕಪ್ಪು ಹಂಚಿನಲ್ಲಿ ಬೇಯುತ್ತಿರುವ ಬಿಳಿ ರೊಟ್ಟಿ. ಒಲೆ ಮುಂದೆ ಕೂತ ಕನಸಿಲ್ಲದ ಕಂಗಳಲ್ಲಿ ಅದರ ಪ್ರತಿಫಲನ. 

ಮರಳು, ಜಲ್ಲಿಕಲ್ಲುಗಳಲ್ಲಿ ಅರೆನಗ್ನ ಮಕ್ಕಳ ಆಟ. ಆಚೆ, ರಸ್ತೆ ಬದಿ ಕುಕ್ಕರಗಾಲಲ್ಲಿ ಕೂತ ಹುರಿಕಟ್ಟಿದ ದೇಹದ ಗಂಡಸರ ಬಾಯಲ್ಲಿ ಬೀಡಿ. ಹೊಗೆಯುಗುಳುವ ಮೋಡಿ. ತುಸು ದೂರದಲ್ಲೇ ವೈಯಾರಿ ನಗರದ ವೈಭವೋಪೇತ ಕಟ್ಟಡಗಳು, ಬೀದಿದೀಪಗಳು, ರಂಗಿನ ವಾಹನಗಳು, ಉಳುಕದೇ ಬಳುಕುವ ಮೆದು ದೇಹಗಳು.

ನಗರದ ಯಾವುದೇ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕಾಣುವ ಸಾಮಾನ್ಯ ದೃಶ್ಯಗಳಿವು. ಇವರೆಲ್ಲ ಗುಳೆ ಬಂದವರು. ಅನ್ನ ಅರಸಿ, ಬದುಕ ಬಯಸಿ, ಅಪರಿಚಿತ ಜಾಗದಲ್ಲಿ ನೆಮ್ಮದಿ ಕಾಣಬಯಸಿದವರು. ನಾಡಿನ ಎಲ್ಲೆಡೆಯಿಂದ ಗುಂಪಾಗಿ ಹೊರಟವರು. 

ತಲೆ ಮೇಲೆ ಹೊತ್ತ ಮೂಟೆಯೊಳಗೆ ಹಾಸಲೊಂದಿಷ್ಟು, ಹೊದಿಯಲೊಂದಿಷ್ಟು, ಬೇಯಿಸಲೊಂದಿಷ್ಟು ವಸ್ತುಗಳು. ಟಿಕೆಟ್ಟಿಲ್ಲದೇ ರೈಲೇರಿ, ಚೌಕಾಸಿ ಮಾಡಿ ಲಾರಿ ಹತ್ತಿ ನಗರಕ್ಕೆ ಬಂದಿಳಿದವರು ಉಳ್ಳವರ ಕನಸುಗಳ ಸಾಕಾರಕ್ಕೆ ಬೆವರು ಹರಿಸುತ್ತಿದ್ದಾರೆ. ಅವತ್ತು ದುಡಿದಿದ್ದನ್ನು ಅವತ್ತೇ ಉಂಡು, ನಾಳೆಗೆಂದು ಕೇವಲ ಕನಸುಗಳನ್ನಿಟ್ಟುಕೊಂಡು, ಕಟ್ಟಡದಿಂದ ಕಟ್ಟಡಕ್ಕೆ ಖಾಲಿ ಕೈಗಳಲ್ಲಿ ಹೊರಡುತ್ತಾರೆ. 

ಬುನಾದಿ ಬೀಳುವುದಕ್ಕೆ ಮುನ್ನವೇ ರಸ್ತೆ ಬದಿ ಜೋಪಡಿಗಳೇಳುತ್ತವೆ. ಜಲ್ಲಿಕಲ್ಲುಗಳ ಜೊತೆ ಮಕ್ಕಳ ಆಟ ಶುರುವಾಗುತ್ತದೆ. ಕಟ್ಟಡ ಮೇಲೇಳುತ್ತಿದ್ದಂತೆ ಬಿಡುವಿಲ್ಲದ ಕೆಲಸ. ಜಲ್ಲಿ, ಮರಳು, ಸಿಮೆಂಟ್ ಹೊತ್ತು ಮರದ ಏಣಿ ಹತ್ತಿ ಇಳಿದು; ಬಿಡುವಿನಲ್ಲಿ ಹಸುಳೆಯ ಬಾಯಿಗೆ ಅಲ್ಲೇ ಮರೆಮಾಡಿಕೊಂಡು ಹಾಲೂಡಿಸಿ; ಊಟದ ಹೊತ್ತಿಗೆ ಮಡಿಚಿದ ತಟ್ಟೆಯಂತಾದ ರೊಟ್ಟಿ ಬಿಡಿಸಿ; ಸೂರ್ಯನಿಗೆ ಸುಸ್ತಾಗುವ ಹೊತ್ತಿಗೆ ಕಾಲೆಳೆದುಕೊಂಡು ಜೋಪಡಿ ತಲುಪಿ; ಒಲೆ ಹಚ್ಚಿ ಕೂತರೆ ಬೆಂಕಿ ನರ್ತಿಸುತ್ತದೆ- ಒಳಗೂ ಹೊರಗೂ.  

ವಾರಕ್ಕೊಂದಿನ ಒತ್ತಾಯದ ರಜೆ. ವಾರದ ಬಟ್ಟೆ ಒಗೆದು, ಹರವಿ, ಅಗ್ಗದ ಸೋಪಿನಲ್ಲಿ ತಲೆಗೆರೆದುಕೊಂಡು, ತಳ್ಳುಗಾಡಿಯಲ್ಲಿ ಚೌಕಾಸಿ ಮಾಡಿ ತರಕಾರಿ ಕೊಂಡು, ಮಧ್ಯಾಹ್ನದ ವಿಶೇಷ ಅಡುಗೆ ಉಂಡು ಕೂತಾಗ ಕಣ್ಣಿಗೆ ಜೋಂಪು. ಸಂಜೆ ಹೊತ್ತಿಗೆ ರಂಗವಲ್ಲಿಯಿಲ್ಲದ ತಲಬಾಗಿಲು ಮುಚ್ಚಿ, ನಗರದ ಬೆಡಗ ನೋಡುವ ಸಡಗರ. 
ಮಾತಿಗೊಮ್ಮೆ ಊರ ನೆನಪಿಸಿಕೊಳ್ಳುತ್ತ, ನಿತ್ಯ ಬೇಕಾದ ವಸ್ತುಗಳನ್ನು ಕೊಳ್ಳುವಾಗ ಚೌಕಾಸಿ ಮಾಡುತ್ತ, ಅಕ್ಕಿಗಿಂತ ದುಬಾರಿಯಾದ ಜೋಳ ಕೊಳ್ಳುವಾಗ ಚಳ್ಳೆಂದು ಚಿಮ್ಮುವ ನೆನಪು ಮತ್ತು ಕಣ್ಣೀರು ಒರೆಸಿಕೊಳ್ಳುವಾಗ, ನಗರ ಏಕೋ ಸುಮ್ಮನಿರುತ್ತೆ. 

ಇಲ್ಲಿ ಅಕ್ಕಿಗಿಂತ ಜೋಳ, ಸೀಮೆಎಣ್ಣೆಗಿಂತ ಕಟ್ಟಿಗೆ ದುಬಾರಿ. ದೊಡ್ಡವರಿಗೆ ಚಿಕ್ಕವರನ್ನು, ಚಿಕ್ಕವರಿಗೆ ಹಸುಳೆಗಳನ್ನು ಸಾಕುವ ಜವಾಬ್ದಾರಿ. ದುಡಿಮೆ ಎಂಬುದು ಬಿಡುವಿಲ್ಲದ ದಿನಚರಿ. ಹೊಲದಲ್ಲಿ ಉತ್ತು ಬಿತ್ತಿ ಅವರಿವರಿಗೆ ಕೊಟ್ಟು ಉಂಡುಟ್ಟು ಬದುಕಿದವರಿಗೆ ಗುಳೆ ಎಂಬುದು ಮಳೆ ಮುನಿದಾಗಿನ ಶಿಕ್ಷೆ. ಮತ್ತೊಂದು ಮಳೆಗಾಲ ಬರುವವರೆಗಿನ ರಕ್ಷೆ.


ನೆಲೆಯೂರಿದ ಊರಲ್ಲಿ ರೇಶನ್ ಕಾರ್ಡಿಲ್ಲ. ಮತದಾರರ ಪಟ್ಟಿಯಿಲ್ಲ. ಹೀಗಾಗಿ ಇವರು ಜನಪ್ರತಿನಿಧಿಗಳಿಗೆ ಲೆಕ್ಕಕ್ಕಿಲ್ಲ. ಇವರನ್ನು ಉದ್ದೇಶಿಸಿ ಯಾವ ಯೋಜನೆಗಳೂ ರೂಪುಗೊಳ್ಳುವುದಿಲ್ಲ. ಅವತ್ತು ದುಡಿದಿದ್ದನ್ನು ಅವತ್ತೇ ಉಂಡು ಬದುಕುವವರಿವರು. 

ಮನೆ ಏಳುತ್ತದೆ. ಬುನಾದಿಯಿಂದ ಎದೆಯೆತ್ತರಕ್ಕೆ, ಅಲ್ಲಿಂದ ಮಾಳಿಗೆ ಹಂತಕ್ಕೆ ಬೆಳೆಯುತ್ತದೆ. ಮೌಲ್ಡ್ ಹಾಕಿದಾಗ ಸಿಹಿ ಹಂಚುವ ಮಾಲೀಕ ಕೃತಜ್ಞತೆ ಹುಟ್ಟಿಸುತ್ತಾನೆ. ಅಲ್ಲಿಗೆ ಮುಕ್ಕಾಲು ಕೆಲಸ ಮುಗೀತು. ಅಷ್ಟೊತ್ತಿಗೆ ಹೊಸದಾಗಿ ಮನೆ ಕಟ್ಟಿಸುವವರು ವಿಳಾಸ ಕೊಡುತ್ತಾರೆ. ಟ್ರ್ಯಾಕ್ಟರೋ, ಗೂಡ್ಸ್ ಗಾಡಿಯೋ ಬರುತ್ತದೆ. ನೋಡನೋಡುತ್ತಲೇ ಜೋಪಡಿ ಬಿಚ್ಚಿ, ಮಡಚಿ ಗಾಡಿಯೊಳಗೆ ತೂರಿಸಿ ಹೊರಡುತ್ತಾರೆ. ಕಟ್ಟಿದ ಮನೆ ಹಿಂದಾಗುತ್ತದೆ. ಕಟ್ಟಬೇಕಾದ ಮನೆಯ ನಿವೇಶನ ಇವರ ದಾರಿ ನೋಡುತ್ತಿರುತ್ತದೆ. 

ಮನೆ ಹೊಸದಾದರೂ ಬದುಕು ಹಳೆಯದೇ. ಅವೇ ಮೂರು ಕಲ್ಲು, ಮಕ್ಕಳ ಆಟಕ್ಕೆ ಜಲ್ಲಿಕಲ್ಲು. ಮತ್ತದೇ ಇಟ್ಟಿಗೆ, ಮರಳು, ಸಿಮೆಂಟ್. ರಸ್ತೆ ಬದಿ ಬದುಕುತ್ತ, ಅಡುಗೆ ಮಾಡುತ್ತ, ಪ್ರೈಮ್ ಟೈಮ್ ಟಿವಿ ಧಾರಾವಾಹಿಗಳು ಮುಗಿವ ಮೊದಲೇ ಸೀಮೆಎಣ್ಣೆ ದೀಪವಾರಿಸಿದರೆ, ಅವಸರದ ಮೈಥುನ. ಮತ್ತೆ ಹೊತ್ತು ಮೂಡುವವರೆಗೆ ಮೈಮರೆಸುವ ನಿದ್ದೆ. ಮತ್ತದೇ ಬೆಳಕು, ಮತ್ತದೇ ಬದುಕು.

ಇಲ್ಲಿ ಬೀಳುವ ಮಳೆ ನಮ್ಮೂರಲ್ಲೂ ಬಿದ್ದಿದ್ದರೆ, ಇಲ್ಲಿ ಸಿಗುವ ಕೆಲಸ ನಮ್ಮೂರಲ್ಲೇ ಸಿಕ್ಕಿದ್ದರೆ, ಇಲ್ಲಿಯ ಕೂಲಿಯನ್ನು ಅಲ್ಲೇ ಪಡೆದಿದ್ದರೆ ಎಂಬ ಅಂತ್ಯವಿಲ್ಲದ ...ರೆ...ಗಳ ನಡುವೆ ಖರ್ಚಾಗಿ ಉಳಿಯುವುದು ಸ್ವಲ್ಪ ಚಿಲ್ಲರೆ. ಅವನ್ನೇ ಕೂಡಿಟ್ಟು, ತಿಂಗಳುಗಳ ನಂತರ ಹೊಸ ಬಟ್ಟೆ ತೊಟ್ಟು, ಮತ್ತೆ ಲಾರಿ ಏರಿ ಊರಿಗೆ ಹೊರಟರೆ ಏನೋ ಸಡಗರ. ಈ ಸಲವಾದರೂ ಒಳ್ಳೇ ಮಳೆ ಬರಲಿ, ಒಳ್ಳೇ ಬೆಳೆ ಬರಲಿ, ಕೈತುಂಬ ದುಡ್ಡು ಸಿಗುವಷ್ಟು ರೇಟು ದಕ್ಕಲಿ, ಮತ್ತೆ ಗುಳೆ ಹೋಗುವ ಪ್ರಸಂಗ ಬಾರದಿರಲಿ ಎಂದು ಬೇಡಿಕೊಳ್ಳುತ್ತ ದಾರಿ ಸವೆಸುತ್ತಾರೆ. 

ಕಟ್ಟಿದ ಕಟ್ಟಡಗಳಿಗೆ ಮನುಷ್ಯರ ಬೆರಳ ಗುರುತಿರುವುದಿಲ್ಲ. ಅದರೊಳಗೆ ವಾಸಿಸುವವರಿಗೆ ಕಟ್ಟಿದವರ ಮುಖಗಳ ನೆನಪಿರುವುದಿಲ್ಲ. ಇವರೇ ಇನ್ನೊಮ್ಮೆ ಆ ಕಡೆ ಹೋದರೆ, ಜಾಗದ ಗುರುತು ಸಿಗುವುದಿಲ್ಲ. ನಗರ ಬೆಳೆಯುತ್ತದೆ, ಎಳೆಯ ಮಕ್ಕಳ ಹಾಗೆ. ಎಲ್ಲರಿಗೂ ಬದುಕು ಬದಲಾಗುತ್ತಲೇ ಹೋಗುತ್ತದೆ. ಗುಳೆ ಹೋಗುವವರಿಗೂ ಸಹ. 
ವ್ಯತ್ಯಾಸ ಇಷ್ಟೇ: ಇವರ ಸಂಖ್ಯೆ ಮಾತ್ರ ಪ್ರತಿ ವರ್ಷ ಏರುತ್ತಲೇ ಹೋಗುತ್ತದೆ. 


-ಶ್ರೀದೇವಿ ಕಳಸದ
(ವಿಜಯ ಕರ್ನಾಟಕ, ೦೪/೬/೨೦೧೨)

3 comments:

Badarinath Palavalli said...

ಗುಳೆ ಬಂದವರ ಸಮಸ್ಯೆಗಳ ಒಳ್ಳೆಯ ದರ್ಶನ.


ನೀವು ನೋಡಿದ್ದೀರ ಅನಿಸುತ್ತೆ. ಕಾಂಕ್ರಿಟ್ ಕೆಲಸ ಮಾಡುವ ಆಳುಗಳ ಮುಂದಿನ ಹಲ್ಲುಗಳು ಬಾಂಡ್ಲಿ ತಾಕಿ ಉದುರಿ ಹೋಗಿರುತ್ತೆ!

ಮನಸು said...

ನಮ್ಮ ದೇಶದಲ್ಲಿ ಬಡವರು ಬಡವರಾಗೇ ಇರುತ್ತಾರೆ ಶ್ರೀಮಂತರು ಶ್ರೀಮಂತರಾಗೇ ಬೆಳೆಯುತ್ತಾರೆ. ಇನ್ನು ಹಳ್ಳಿಗಳ ಕಡೆ ಇಂದ ಬರುವ ಜನ ಏನೋ ನಾಲ್ಕು ಕಾಸು ಸಿಕ್ಕಾತು ಜೀವನ ನೆಡೆದೀತು ಎಂದು ಕೆಲಸವನ್ನು ಹುಡುಕಿ ಬರ್ತಾರೆ. ಗುಳೆ ಹೋಗುವ ಜನರ ಚಿತ್ರಣ ಚೆನ್ನಾಗಿದೆ....

sunaath said...

ನಮ್ಮ ದೇಶದಲ್ಲಿ ಇಂತಹ ಅಲೆಮಾರಿ ಜನ ಸಾಕಷ್ಟಿದ್ದಾರೆ. ಇವರು ಯಾವ ಲೆಕ್ಕಕ್ಕೂ ಸಿಕ್ಕದವರು!