Sunday, June 24, 2012

ಹೂಗಳನ್ನು ಹೊಸಕುವ ವಿಕೃತಿ

ದೌರ್ಜನ್ಯಕ್ಕೆ ಒಳಗಾಗುವ ನೋವು ಒಂದೆಡೆಯಾದರೆ, ದೌರ್ಜನ್ಯಕ್ಕೀಡು ಮಾಡಿದವರು ರಾಜಾರೋಷವಾಗಿ ಓಡಾಡಿಕೊಂಡಿರುವ ನೋವು ಇನ್ನೊಂದೆಡೆ. ಬಹಳಷ್ಟು ಸಂದರ್ಭಗಳಲ್ಲಿ ದೌರ್ಜನ್ಯ ಎಸಗುವವರು ಮನೆಯವರೇ ಆಗಿರುತ್ತಾರೆ. ಅತಿ ಹತ್ತಿರದ ಸಂಬಂಧಿಗಳೇ ಆಗಿರುತ್ತಾರೆ. ಇಂಥ ಘಟನೆಗಳು ಮಕ್ಕಳ ಮುಗ್ಧತೆಯನ್ನು ಹೊಸಕಿಹಾಕುವುದರ ಜೊತೆಗೆ, ಸಂಬಂಧಗಳ ಬಗ್ಗೆ ಅವರಲ್ಲಿ ತಿರಸ್ಕಾರ, ಸಾಮಾಜಿಕ ನೀತಿನಿಯಮಗಳ ಬಗ್ಗೆ ಧಿಕ್ಕಾರದ ಧೋರಣೆ ಮೂಡಿಸುತ್ತವೆ. 
-------------------------------------

ಗಮನಿಸುವ ಕಣ್ಣುಗಳಿದ್ದರೆ, ಒಂಚೂರು ಕಾಳಜಿ ಇದ್ದರೆ, ಎಲ್ಲೆಲ್ಲಿ ಮಕ್ಕಳಿವೆಯೋ, ಅಲ್ಲೆಲ್ಲ ಅವರ ಮೇಲೆ ದೌರ್ಜನ್ಯ ನಡೆಯುತ್ತಿರುವುದನ್ನು ಗಮನಿಸಬಹುದು. ಮಕ್ಕಳು ನಮ್ಮವೇ ಆಗಿರಬಹುದು, ಬೇರೆಯವರಾಗಿರಬಹುದು, ದೌರ್ಜನ್ಯ ನಮ್ಮ ಮನೆಯಲ್ಲೇ ನಡೆಯುತ್ತಿರಬಹುದು, ಇತರರ ಮನೆಗಳಲ್ಲಿರಬಹುದು, ಕೆಲಸದ ಸ್ಥಳವಾಗಿರಬಹುದು, ಶಾಲೆಯಾಗಿರಬಹುದು- ಒಟ್ಟಿನಲ್ಲಿ ಮಕ್ಕಳಿರುವ ಸ್ಥಳಗಳಲ್ಲಿ ನಿರಂತರ ದೌರ್ಜನ್ಯ ನಡೆಯುತ್ತಲೇ ಇವೆ. ಆದರೆ, ಆಗೊಮ್ಮೆ, ಈಗೊಮ್ಮೆ ಮಾತ್ರ ಅವು ಬೆಳಕಿಗೆ ಬರುತ್ತವೆ. ಬಂದಷ್ಟೇ ವೇಗವಾಗಿ ಮತ್ತೆ ಕತ್ತಲೆಗೆ ಸರಿದುಹೋಗುತ್ತವೆ.


ಎಲ್ಲೆಡೆ ನಡೆದಿದೆ ದೌರ್ಜನ್ಯ


ಮಕ್ಕಳ ಮೇಲಿನ ದೌರ್ಜನ್ಯ ಎಲ್ಲೋ ಆಗಬೇಕೆಂದಿಲ್ಲ. ಅದು ನಮ್ಮ ಮನೆಯೇ ಆಗಿರಬಹುದು. ಪಕ್ಕದವರ ಮನೆಯಾಗಿರಬಹುದು. ನಿತ್ಯ ಚಹ ಕುಡಿಯುವ ಹೋಟೆಲ್, ದಿನಸಿ ಖರೀದಿಸುವ ಅಂಗಡಿ, ಶಾಲೆ, ಪಾರ್ಕ್, ರಸ್ತೆ, ಹಾಸ್ಟೆಲ್ ಆಗಿರಬಹುದು. ಒಂಚೂರು ಎಚ್ಚರಿಕೆಯಿಂದ ಗಮನಿಸಿದರೆ ಅಲ್ಲೆಲ್ಲ ಕಾಣಸಿಗುವ ಮಕ್ಕಳ ಒಡಲೊಳಗೆ ದೌರ್ಜನ್ಯದ ಕತೆಗಳು ಕಾಣಿಸುತ್ತವೆ.

ಕೂಡು (ಅವಿಭಕ್ತ) ಕುಟುಂಬಗಳಿರುವ ಮನೆಗಳಷ್ಟೇ ಅಲ್ಲ, ನಾಲ್ಕೈದು ಜನರಿರುವ ಮನೆಗಳಲ್ಲಿರುವ ಮಕ್ಕಳ ಮೇಲೂ ದೌರ್ಜನ್ಯ ನಡೆಯುತ್ತಿರುತ್ತದೆ. ಹೆಚ್ಚುತ್ತಿರುವ ಜೀವನ ಮಟ್ಟ, ದೌರ್ಜನ್ಯದ ಮಟ್ಟವನ್ನೂ ಹೆಚ್ಚಿಸಿದೆ. ಹಿಂಸೆ ಮತ್ತು ಲೈಂಗಿಕತೆಯ ವಿವರಗಳು ಈಗ ಕಂಪ್ಯೂಟರ್, ಟಿವಿ, ಪತ್ರಿಕೆಗಳಷ್ಟೇ ಅಲ್ಲ, ನಮ್ಮ ಅಂಗೈನಲ್ಲಿರುವ ಮೊಬೈಲ್‌ಗೂ ಬಂದು ತಲುಪಿವೆ. ಬದಲಾದ ಜೀವನ ಶೈಲಿ ಮೊದಲಿಗಿಂತ ಹೆಚ್ಚು ಏಕಾಂತವನ್ನು ಕೊಡಮಾಡಿದೆ. ಮನಸ್ಸಿನ ವಿಕೃತಿ ವಿಜೃಂಭಿಸಲು ಬೇಕಾದ ಎಲ್ಲಾ ಪರಿಸ್ಥಿತಿಯೂ ಕೈಗೆಟಕಿರುವಾಗ, ಅಮಾಯಕ ಮಕ್ಕಳು ದೌರ್ಜನ್ಯಕ್ಕೆ ಸುಲಭವಾಗಿ ಒಳಗಾಗತೊಡಗಿವೆ. ಬೇರೆಯವರ ಮಕ್ಕಳು ಸಿಗದಿದ್ದರೆ, ಸ್ವಂತ ಮಕ್ಕಳ ಮೇಲೆಯೇ ದೌರ್ಜನ್ಯ ನಡೆಸಲು ಮನುಷ್ಯ ಹೇಸುವುದಿಲ್ಲ.


ಇದೂ ದೌರ್ಜನ್ಯವೇ


ದೌರ್ಜನ್ಯ ಎಂದರೆ ಕೇವಲ ಲೈಂಗಿಕ ದೌರ್ಜನ್ಯವೇ ಆಗಬೇಕೆಂದೇನಿಲ್ಲ. ಮಕ್ಕಳನ್ನು ಕಟುವಾಗಿ ನಿಂದಿಸುವುದು, ಹೊಡೆಯುವುದು, ಅವರ ಮೂಲಭೂತ ಅವಶ್ಯಕತೆಗಳನ್ನು ತಡೆಹಿಡಿಯುವುದು, ಮಾನಸಿಕ ಮತ್ತು ದೈಹಿಕ ಒತ್ತಡ ಹೇರುವುದು, ಭಯಕ್ಕೆ ಈಡು ಮಾಡುವಂಥ ಕೃತ್ಯಗಳೂ ದೌರ್ಜನ್ಯವೇ. ಮಕ್ಕಳ ಸಹಜ ವಿಕಾಸಕ್ಕೆ ತಡೆಯೊಡ್ಡುವ, ಅವರಲ್ಲಿ ಭಯ, ನೋವು, ಹತಾಶೆ ಉಂಟು ಮಾಡುವ ಎಲ್ಲಾ ಕೆಲಸಗಳೂ ದೌರ್ಜನ್ಯದ ವ್ಯಾಪ್ತಿಗೇ ಬರುತ್ತವೆ. 

ಕಡಿಮೆ ಮಾರ್ಕ್ಸ್ ಪಡೆದ, ಸರಿಯಾಗಿ ಓದುತ್ತಿಲ್ಲ ಎಂದು ತಂದೆತಾಯಿ ಹೇರುವ ಅತಿಯಾದ ಒತ್ತಡ ಕೂಡ ದೌರ್ಜನ್ಯವೇ. ಇದು ಭಾವನಾತ್ಮಕ ದೌರ್ಜನ್ಯ. ಅಲ್ಲಿ ಹೋಗಬೇಡ, ಇಲ್ಲಿ ಹೋಗಬೇಡ, ನೀನು ಕಪ್ಪಗಿದ್ದೀ, ತೆಳ್ಳಗಿದ್ದೀ, ಚೆನ್ನಾಗಿಲ್ಲ, ಸರಿಯಾಗಿ ಮಾತನಾಡಲು ಬರಲ್ಲ, ನೀನು ಫೇಲಾದರೆ ನಾನು ತಲೆ ಎತ್ತಿ ಓಡಾಡುವುದು ಹೇಗೆ? ಎಂಬಂಥ ಮಾತುಗಳು ಮಕ್ಕಳ ಮೇಲೆ ವಿಪರೀತ ಭಾವನಾತ್ಮಕ ಒತ್ತಡ ಹೇರುತ್ತವೆ. ಅದು ಅಂತಿಮವಾಗಿ ಆತ್ಮಹತ್ಯೆಯಂಥ ಅಥವಾ ಮನೆ ಬಿಟ್ಟು ಓಡಿಹೋಗುವಂಥ ಕೃತ್ಯಗಳಲ್ಲಿ ಕೊನೆಯಾಗುತ್ತದೆ.

ಅದೇ ರೀತಿ ಹೆಣ್ಣುಮಗುವೆಂದು ಅದಕ್ಕೆ ಸೂಕ್ತ ಅವಕಾಶ, ಪೋಷಣೆ, ಕಾಳಜಿ ನೀಡದಿರುವುದು ಕೂಡ ದೌರ್ಜನ್ಯವೇ. ಮಕ್ಕಳ ನಡುವೆ ಭೇದ ಮಾಡುವದು ಬಹುತೇಕ ಮನೆಗಳಲ್ಲಿ ಸಾಮಾನ್ಯವಾಗಿ ಕಾಣುವ ದೌರ್ಜನ್ಯ. ಇವುಗಳಿಗೆ ಹೋಲಿಸಿದರೆ ಲೈಂಗಿಕ ದೌರ್ಜನ್ಯ ಮತ್ತು ಮಕ್ಕಳಿಂದ ಕಠಿಣ ಕೆಲಸ ಮಾಡಿಸುವಂಥ ದೌರ್ಜನ್ಯ ಪ್ರಸಂಗಗಳ ಸಂಖ್ಯೆ ಸಾಕಷ್ಟು ಕಡಿಮೆಯೇ.

ಗಾಬರಿಗೊಳಿಸುವ ವಾಸ್ತವ
೨೦೦೭ರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಕ್ಕಳ ಮೇಲಿನ ದೌರ್ಜನ್ಯ ಕುರಿತಂತೆ ಒಂದು ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿತು. ಅವತ್ತಿನ ಜನಸಂಖ್ಯೆಯನ್ನು ಆಧರಿಸಿ ಹೇಳುವುದಾದರೆ, ದೇಶಾದ್ಯಂತ ೧೮ ವರ್ಷದ ಕೆಳಗಿನ ೧೫೦೦ ಲಕ್ಷ ಹೆಣ್ಣುಮಕ್ಕಳು ಮತ್ತು ೭೩೦ ಲಕ್ಷ ಗಂಡುಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಈಡಾಗಿವೆ. ಒಂದಲ್ಲ ಒಂದು ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ದೇಶದ ಮಕ್ಕಳ ಪ್ರಮಾಣ ಶೇ.೫೩.೨೨.  ಈ ಮಕ್ಕಳ ಪೈಕಿ ಶೇ.೨೧.೯ ಮಕ್ಕಳು ಅತೀವ ಲೈಂಗಿಕ ಶೋಷಣೆಗೆ ಒಳಗಾಗಿದ್ದರೆ, ಶೇ.೫೦.೭೬ ಮಕ್ಕಳು ಇತರ ರೀತಿಯ ಲೈಂಗಿಕ ಶೋಷಣೆಗೆ ಈಡಾಗಿವೆ. 

ಇಷ್ಟೊಂದು ಪ್ರಮಾಣದಲ್ಲಿ ದೌರ್ಜನ್ಯ ನಡೆಯುತ್ತಿದ್ದರೂ, ಬೆಳಕಿಗೆ ಬರುವ ಪ್ರಕರಣಗಳ ಸಂಖ್ಯೆ ಏಕೆ ಇಷ್ಟು ಕಡಿಮೆಯಾಗಿದೆ? ಅದಕ್ಕೆ ಕಾರಣ, ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಪೈಕಿ ಶೇ.೭೯ರಷ್ಟು ಮಕ್ಕಳು ಭಯದಿಂದಾಗಿ ಬಾಯ್ಬಿಡುವುದೇ ಇಲ್ಲ. ಇದಕ್ಕೆ ದೊಡ್ಡವರ ಧೋರಣೆಯೂ ಕಾರಣ. ಕೇವಲ ಶೇ.೧೭.೨೪ರಷ್ಟು ಜನ ಮಾತ್ರ ಶೋಷಕರಿಗೆ ಕಠಿಣ ಶಿಕ್ಷೆಯಾಗಬೇಕೆನ್ನುತ್ತಾರೆ. ಆದರೆ, ಶೇ.೫೧.೩೧ರಷ್ಟು ಜನ ವಿಷಯವನ್ನು ಕುಟುಂಬದೊಳಗೇ ಬಗೆಹರಿಸಿಕೊಳ್ಳಲು ಬಯಸುತ್ತಾರೆ.

ಮುಗ್ಧತೆಯೇ ನಾಶ


ದೌರ್ಜನ್ಯಕ್ಕೆ ಒಳಗಾಗುವ ನೋವು ಒಂದೆಡೆಯಾದರೆ, ದೌರ್ಜನ್ಯಕ್ಕೀಡು ಮಾಡಿದವರು ರಾಜಾರೋಷವಾಗಿ ಓಡಾಡಿಕೊಂಡಿರುವ ನೋವು ಇನ್ನೊಂದೆಡೆ. ಬಹಳಷ್ಟು ಸಂದರ್ಭಗಳಲ್ಲಿ ದೌರ್ಜನ್ಯ ಎಸಗುವವರು ಮನೆಯವರೇ ಆಗಿರುತ್ತಾರೆ. ಅತಿ ಹತ್ತಿರದ ಸಂಬಂಧಿಗಳೇ ಆಗಿರುತ್ತಾರೆ. 
ಇಂಥ ಘಟನೆಗಳು ಮಕ್ಕಳ ಮುಗ್ಧತೆಯನ್ನು ಹೊಸಕಿಹಾಕುವುದರ ಜೊತೆಗೆ, ಸಂಬಂಧಗಳ ಬಗ್ಗೆ ಅವರಲ್ಲಿ ತಿರಸ್ಕಾರ, ಸಾಮಾಜಿಕ ನೀತಿನಿಯಮಗಳ ಬಗ್ಗೆ ಧಿಕ್ಕಾರದ ಧೋರಣೆ ಮೂಡಿಸುತ್ತವೆ. ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಹಿಂದೆ ಇಂಥ ಧೋರಣೆಗಳ ಕೊಡುಗೆ ದೊಡ್ಡ ಪ್ರಮಾಣದಲ್ಲಿದೆ.

ಮಕ್ಕಳೆಂದರೆ ಗಡಿಯಿಲ್ಲದ ಜೀವಗಳು. ವಯಸ್ಕ ವ್ಯಕ್ತಿಗೆ ಇರುವುದಕ್ಕಿಂತ ಹೆಚ್ಚಿನ ಹಕ್ಕುಗಳು ಮಕ್ಕಳಿಗಿವೆ. ಆದರೆ, ಆ ಹಕ್ಕುಗಳ ಜಾರಿ ಮಾಡುವವರು ವಯಸ್ಕರಾಗಿರುವುದರಿಂದ, ಮಕ್ಕಳು ಅತಿ ಹೆಚ್ಚಿನ ಶೋಷಣೆಗೆ ಒಳಗಾಗುಗುತ್ತಿವೆ. ತೀರಾ ಇತ್ತೀಚೆಗೆ ಬೆಳಕಿಗೆ ಬಂದ ಫ್ರಾನ್ಸ್ ರಾಯಭಾರಿ ಕಚೇರಿಯ ವ್ಯಕ್ತಿ ತನ್ನ ಮೂರೂವರೆ ವರ್ಷದ ಹೆಣ್ಣುಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಪ್ರಕರಣ ವಿಷಯದ ತೀವ್ರತೆಗೆ ಹಿಡಿದ ಚಿಕ್ಕ ಕನ್ನಡಿ ಮಾತ್ರ.
ವಾಸ್ತವ ಪರಿಸ್ಥಿತಿ ಮಾತ್ರ ಇದಕ್ಕಿಂತ ವಿಶಾಲವಾಗಿದೆ ಹಾಗೂ ವಿಕೃತವಾಗಿದೆ.

-ಶ್ರೀದೇವಿ ಕಳಸದ (25/6/2012, ವಿಜಯ ಕರ್ನಾಟಕದ)5 comments:

minchulli said...

ಬೆಳಗ್ಗೆ ಓದಿದಾಗಲೇ ಅನ್ನಿಸ್ತು.. ಈ ದೌರ್ಜನ್ಯ ಅನ್ನೋದು ಎಷ್ಟು ವ್ಯಾಪಕವಾಗಿ ಹರಡಿದೆ ಅಂತ. ಸಮಯೋಚಿತ ಬರಹ. ಇಷ್ಟವಾಯ್ತು ಸಿರಿ..

ಮನಸು said...

ದೌರ್ಜನ್ಯ ಇಷ್ಟೇಲ್ಲಾ ವಿಸ್ತಾರವಾಗಿದೆಯಲ್ಲಾ ಎಂದೆನಿಸುತ್ತೆ... ಸರಿ ಸಮಯಕ್ಕೆ ಬರೆದಿದ್ದೀರಿ ಅಂದ ಹಾಗೆ ನಮ್ಮಂತ ತಂದೆ ತಾಯಿಗಳಿಗೆ ಕಿವಿಮಾತು. ಧನ್ಯವಾದಗಳು

ಸವಿಗನಸು said...

oLLe kiwimaathu...

Badarinath Palavalli said...

ದೌರ್ಜನ್ಯದ ಈ ಲೇಖನ ಈ ಬೆಳಿಗ್ಗೆಯೇ ಓದಿದ್ದೆ. ಹಲ ಕೋನಗಳನ್ನು ವಿಶ್ಲೇಷಿದ ಈ ಬರಹದಲ್ಲಿ ದೌರ್ಜನ್ಯದ ವಿಕೃತಿಗಳಿವೆ.

ನನ್ನ ಬ್ಲಾಗಿಗೂ ಸ್ವಾಗತ.

Anuradha said...

ಲೈಂಗಿಕ ದೌರ್ಜನ್ಯ ನನ್ನ ಪರಿಚಿತರ ಮಕ್ಕಳ ಮೇಲೆ ಆಗಿರುವುದನ್ನು ನೋಡಿದ್ದೇನೆ ..ಸಂಕಟವಾಗುತ್ತದೆ .ಆ ಹುಡುಗಿ ತನ್ನ ಬದುಕು ಕಟ್ಟಿ ಕೊಳ್ಳಲೇ ಸಾಧ್ಯವಾಗಲಿಲ್ಲ ..ಹೊಡೆಯುವುದು ,ಮಾನಸಿಕ ಒತ್ತಡ ಹೇರುವುದನ್ನೂ ಕಂಡಿದ್ದೇನೆ ..ತುಂಬಾ ಗಹನವಾದ ,ಉತ್ತರ ಹುಡುಕಬೇಕಾದ ಸತ್ಯದ ಬಗ್ಗೆ ಬೆಳಕು ಚೆಲ್ಲಿದ್ದೀರಿ ..ಓದಿದ ಕೆಲವರ ಮೇಲಾದರೂ ಇದು ಪರಿಣಾಮ ಬೀರಿರಬಹುದು ,ಪರಿಣಾಮ ವಾಗಲಿ ಅಂತ ಹಾರೈಸುತ್ತಾ ...ನಿಮಗೆ ಅಭಿನಂದನೆಗಳು .