Saturday, September 22, 2012

ಗಲ್ಲಾಪೆಟ್ಟಿಗೆ ಮುಂದೆ ವಾಲ್‌ಮಾರ್ಟ್!

ಹೀಗಾಗಬಹುದೇನೋ ಎಂಬಂತಿದ್ದ ಅಳುಕು ಈಗ ನಿಜವಾಗತೊಡಗಿದೆ. ಚಿಲ್ಲರೆ ಮಾರಾಟ ಕ್ಷೇತ್ರಕ್ಕೂ ಇನ್ಮುಂದೆ ವಿದೇಶಿ ಬಂಡವಾಳ ಬರುತ್ತದೆ. ಬಹುರಾಷ್ಟ್ರೀಯ ಕಂಪನಿಗಳು ಇನ್ಮುಂದೆ ಸರಕುಗಳ ಚಿಲ್ಲರೆ ವ್ಯಾಪಾರಕ್ಕೂ ಇಳಿಯಬಹುದು. ಗಲ್ಲಾಪೆಟ್ಟಿಗೆ ಮುಂದೆ ಇನ್ನು ಹೊಸ ಶೆಟ್ಟಿ ಬರುತ್ತಾನೆ.
ಏನಾಗಲಿದೆ ಭಾರತದ ನಾಲ್ಕು ಕೋಟಿ ಕಿರು ವರ್ತಕರ ಹಣೆಬರಹ?

ವಿವಾದಾತ್ಮಕ ನಿರ್ಧಾರ
ಬಹುರಾಷ್ಟ್ರೀಯ ಕಂಪನಿ (ಎಂಎನ್‌ಸಿ)ಗಳೂ ಇನ್ಮುಂದೆ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಶೇ.೫೧ರಷ್ಟು ಬಂಡವಾಳ ಹೂಡಬಹುದು ಎಂದು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿಯಾಯ್ತು. ಹಾಗಂತ ಕೇಂದ್ರ ಸಚಿವ ಸಂಪುಟ ಕಳೆದ ಶುಕ್ರವಾರ ನಿರ್ಧರಿಸುವ ಮೂಲಕ ದೇಶಾದ್ಯಂತ ಕಳವಳ ಮೂಡಿಸಿದೆ. ಕಳೆದ ಕೆಲ ವರ್ಷಗಳಿಂದ ಇಂಥದೊಂದು ಒಪ್ಪಿಗೆಗಾಗಿ ಕಾಯ್ದುಕೂತಿದ್ದ ವಿದೇಶಿ ಬಂಡವಾಳಿಗರು ದೇಶದ ಚಿಲ್ಲರೆ ಮಾರುಕಟ್ಟೆ ಆಕ್ರಮಿಸಲು ತುದಿಗಾಲ ಮೇಲೆ ನಿಂತಿದ್ದಾರೆ. 

ಎಂಥ ವಿಚಿತ್ರ ನೋಡಿ. ಮೊದಲ ಬಾರಿ ಇಂಥದೊಂದು ಪ್ರಸ್ತಾಪ ಬಂದಿದ್ದು ೨೦೦೨ರಲ್ಲಿ. ಆಗ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇಂಥದೊಂದು ಪ್ರಕ್ರಿಯೆಗೆ ಮುಂದಾಗಿತ್ತು. ಪ್ರತಿಪಕ್ಷದಲ್ಲಿ ಕೂತಿದ್ದ ಕಾಂಗ್ರೆಸ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಕ್ರಮವನ್ನು ‘ದೇಶ ವಿರೋಧಿ ಕ್ರಮ’ ಎಂದು ಜರೆದಿತ್ತು. ಇದಕ್ಕೆ ಎಡ ಪಕ್ಷಗಳೂ ಧ್ವನಿಗೂಡಿಸಿದಾಗ ದೊಡ್ಡ ವಿರೋಧ ಉಂಟಾಗಿ ಎನ್‌ಡಿಎ ಸರ್ಕಾರ ಹಿಂದಕ್ಕೆ ಸರಿದಿತ್ತು. 

ಕೇವಲ ಹತ್ತು ವರ್ಷಗಳಲ್ಲಿ ಚಕ್ರ ಒಂದು ಸುತ್ತು ತಿರುಗಿದೆ. ಅವತ್ತು ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ಸೇ, ತನ್ನ ನೇತೃತ್ವದ ಯುಪಿಎ ಸರ್ಕಾರದ ಮೂಲಕ ಚಿಲ್ಲರೆ ಕ್ಷೇತ್ರಕ್ಕೆ ವಿದೇಶಿ ಬಂಡವಾಳ ಹರಿಸಲು ಅನುಮತಿ ನೀಡಿದೆ. ಈ ಪ್ರಸ್ತಾಪಕ್ಕೆ ತಂದೆಯಾಗಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಇವತ್ತು ವಿರೋಧ ವ್ಯಕ್ತಪಡಿಸುತ್ತಿದೆ. ಪಶ್ಚಿಮ ಬಂಗಾಳದ ಮಮತಾ ದೀದಿ, ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಹಾಗೂ ಎಡಪಕ್ಷಗಳು ವಿರೋಧ ವ್ಯಕ್ತಪಡಿಸಿ ದೇಶಾದ್ಯಂತ ಬಂದ್ ನಡೆಸಲೂ ಕರೆ ನೀಡಿದ್ದಾರೆ. ಅವತ್ತು ಅಪಥ್ಯವಾಗಿದ್ದ ಪ್ರಸ್ತಾಪ ಇವತ್ತು ಹೇಗೆ ಪಥ್ಯವಾಯ್ತು? ಅವತ್ತು ಬೆಂಬಲಿಸಿದವರಿಗೆ ಇವತ್ತೇಕೆ ಅದು ಅಪಥ್ಯವಾಯ್ತು? ಅದು ರಾಜಕೀಯ. ಅದಿರೋದೇ ಹಾಗೆ. ಆದರೆ, ಇಂಥದೊಂದು ಕ್ರಮ ದೇಶದ ಆರ್ಥಿಕ ನರನಾಡಿಗಳ ಮೇಲೆ ಎಂಥ ಪರಿಣಾಮ ಬೀರುತ್ತದೆ ಎಂಬುದನ್ನು ಇವರು ಪರಿಗಣಿಸಿದ್ದಾರಾ?

ಅಸಂಘಟಿತ ಕ್ಷೇತ್ರ
ಕೃಷಿಯ ನಂತರ ಅತಿ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿರುವ ಕ್ಷೇತ್ರ ಎಂದರೆ ಚಿಲ್ಲರೆ ಮಾರುಕಟ್ಟೆ. ‘ರಾಷ್ಟ್ರೀಯ ಮಾದರಿ ಸರ್ವೇ’ (ಎನ್‌ಎಸ್‌ಎಸ್ ೨೦೦೯-೧೦) ಪ್ರಕಾರ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸುಮಾರು ೪ ಕೋಟಿಗಿಂತಲೂ ಹೆಚ್ಚು ಮಂದಿ ಸಕ್ರಿಯರಾಗಿದ್ದಾರೆ. ಇವರ ಪೈಕಿ ಸಣ್ಣ, ಅಸಂಘಟಿತ ಅಥವಾ ಸ್ವಉದ್ಯೋಗಿ ಚಿಲ್ಲರೆ ಮಾರಾಟಗಾರರೇ ಹೆಚ್ಚು. ೨೦೦೮ರಲ್ಲಿ ಐಸಿಆರ್‌ಐಇಆರ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಭಾರತದ ಅಸಂಘಟಿತ ಚಿಲ್ಲರೆ ವ್ಯಾಪಾರ ವಲಯದ ಒಟ್ಟು ವಾರ್ಷಿಕ ವ್ಯವಹಾರ ೨೦೦೬-೦೭ರಲ್ಲಿ ಸುಮಾರು ರೂ.೨ ಲಕ್ಷ ಕೋಟಿಗೂ ಹೆಚ್ಚು. ದೇಶದಲ್ಲಿ ಇಂಥ ಚಿಲ್ಲರೆ ಮಾರಾಟ ಮಳಿಗೆಗಳ ಸಂಖ್ಯೆ ಸುಮಾರು ೧.೩ ಕೋಟಿ ಹಾಗೂ ಪ್ರತಿಯೊಂದು ಅಂಗಡಿಯ ಸರಾಸರಿ ವಾರ್ಷಿಕ ವ್ಯವಹಾರ ರೂ.೧೫ ಲಕ್ಷ.

ಈಗ ಬಹುರಾಷ್ಟ್ರೀಯ ಕಂಪನಿಗಳು ಈ ಕ್ಷೇತ್ರಕ್ಕೆ ಪ್ರವೇಶಿಸುವುದರಿಂದ, ಇವರೆಲ್ಲರ ಬದುಕು ಮೂರಾಬಟ್ಟೆಯಾಗುತ್ತದೆ. ಸರಬರಾಜು ಹಾಗೂ ಮಾರಾಟ ಜಾಲ ಏರುಪೇರಾಗುತ್ತದೆ. ಗ್ರಾಹಕನೇ ರಾಜನಾಗಿರೋದ್ರಿಂದ, ಆತನ ಮೇಲೆ ಈ ಬೆಳವಣಿಗೆ ವ್ಯತಿರಿಕ್ತ ಪರಿಣಾಮ ಬೀರಲಿಕ್ಕಿಲ್ಲ. ಆದರೆ, ಸಣ್ಣಪುಟ್ಟ ಕಿರಾಣಿ ಅಂಗಡಿಗಳು, ಚಿಲ್ಲರೆ ಅಂಗಡಿಗಳ ಗತಿ ಏನು? ಸರ್ಕಾರದ ಅನುಮತಿಯಿಂದಾಗಿ ವಾಲ್‌ಮಾರ್ಟ್, ಕ್ಯಾರೆಫೋರ್, ಮೆಟ್ರೊ, ಟೆಸ್ಕೋದಂಥ ಕಂಪನಿಗಳು ಬಲುಬೇಗ ತಮ್ಮ ಮಾರಾಟ ಜಾಲವನ್ನು ದೇಶಾದ್ಯಂತ ಹರಡುತ್ತವೆ. ಸರ್ಕಾರದ ವಾದದ ಪ್ರಕಾರ, ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ೩ ವರ್ಷಗಳಲ್ಲಿ ಸುಮಾರು ೧ ಕೋಟಿ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಪೈಕಿ ೪೦ ಲಕ್ಷ ನೇರ ಉದ್ಯೋಗಗಳಾದರೆ, ಉಳಿದವು ಓಡಾಟ, ಸಾಗಾಣಿಕೆ ಮುಂತಾದ ಕಡೆಗಳಲ್ಲಿ ಸೃಷ್ಟಿಯಾಗುವಂಥವು.

ಆದರೆ, ಈ ಲೆಕ್ಕವೇ ತಪ್ಪಾಗಿದೆ. ಏಕೆಂದರೆ, ೪೦ ಲಕ್ಷ ಉದ್ಯೋಗ ಸೃಷ್ಟಿಸಬೇಕಾದರೆ ವಾಲ್‌ಮಾರ್ಟ್ ಕಂಪನಿಯೊಂದೇ ಭಾರತದಲ್ಲಿ ೧೮,೬೦೦ ಸೂಪರ್ ಮಾರ್ಕೆಟ್‌ಗಳನ್ನು ತೆರೆಯಬೇಕಾಗುತ್ತದೆ. ಇನ್ನು ಇತರೆ ದೊಡ್ಡ ಕಂಪನಿಗಳು ೩೪,೧೮೦ ಸೂಪರ್ ಮಾರ್ಕೆಟ್‌ಗಳನ್ನು ತೆರೆಯಬೇಕಾಗುತ್ತದೆ. ಇದೆಲ್ಲ ಆದೀತೆ?

ಏಕೆಂದರೆ, ಅಮೆರಿಕಾದಲ್ಲಿ ಒಂದು ವಾಲ್‌ಮಾರ್ಟ್ ಸೂಪರ್ ಮಾರ್ಕೆಟ್‌ನ ಸರಾಸರಿ ವಿಸ್ತಾರ ೧,೦೮,೦೦೦ ಚದರ ಅಡಿ. ಅಲ್ಲಿ ಕೆಲಸ ಮಾಡುವವರ ಸಂಖ್ಯೆ ಸುಮಾರು ೨೨೫. ಜಗತ್ತಿನ ೨೮ ದೇಶಗಳಲ್ಲಿನ ಅದರ ೯೮೦೦ ಮಳಿಗೆಗಳಲ್ಲಿ ಕೆಲಸ ಮಾಡುತ್ತಿರುವವರ ಸಂಖ್ಯೆ ಸುಮಾರು ೨೧ ಲಕ್ಷ. ಒಂದು ವಾಲ್‌ಮಾರ್ಟ್ ಸೂಪರ್ ಮಾರ್ಕೇಟ್ ನಮ್ಮಲ್ಲಿ ಬಂದರೆ, ಅದು ಸುಮಾರು ೧೩೦೦ಕ್ಕೂ ಹೆಚ್ಚು ಚಿಲ್ಲರೆ ಅಂಗಡಿಗಳನ್ನು ಗುಡಿಸಿ ಹಾಕುತ್ತದೆ. ಆ ಮೂಲಕ ಸುಮಾರು ೩೯೦೦ ಮಂದಿ ನಿರುದ್ಯೋಗಿಗಳಾಗುತ್ತಾರೆ. ಇದಕ್ಕೆ ಪ್ರತಿಯಾಗಿ ಆ ಮಳಿಗೆಯಲ್ಲಿ ಸೃಷ್ಟಿಯಾಗುವ ಉದ್ಯೋಗದ ಸಂಖ್ಯೆ ಹೆಚ್ಚೆಂದರೆ ೨೧೪ರಿಂದ ೨೨೫ ಮಾತ್ರ. 

ಸರ್ಕಾರದ ಇನ್ನೊಂದು ವಾದವೆಂದರೆ, ವಿದೇಶಿ ಕಂಪನಿಗಳು ಬರುವುದರಿಂದ ಅವು ಹೊಸ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ನಿರ್ಮಿಸುತ್ತವೆ. ಆಹಾರೋತ್ಪನ್ನ ಹಾಳಾಗುವುದನ್ನು ತಡೆಯಲು ದೊಡ್ಡ ಸಂಖ್ಯೆಯ ಶೈತ್ಯ ಸಂಗ್ರಹಗಾರ ಘಟಕಗಳನ್ನು ತೆರೆಯುತ್ತವೆ. ಆದರೆ, ಈ ವಾದ ನಂಬುವುದು ಕಷ್ಟ. ಏಕೆಂದರೆ, ಈಗಾಗಲೇ ಚಿಲ್ಲರೆ ವ್ಯಾಪಾರದಲ್ಲಿ ತೊಡಗಿರುವ ರಿಲಯನ್ಸ್‌ನಂತಹ ದೇಶಿಯ ದೊಡ್ಡ ಕಂಪನಿಗಳು ಮಾರಾಟದ ಮಳಿಗೆಗಳನ್ನು ಮಾತ್ರ ಸ್ಥಾಪಿಸಿ ಲಾಭ ಗಳಿಸುತ್ತಿವೆಯೇ ಹೊರತು ಶೀತಲಘಟಕಗಳಂಥ ಮೂಲ ಸೌಲಭ್ಯ ಕಲ್ಪಿಸಿಲ್ಲ. ಹೀಗಿರುವಾಗ, ವಿದೇಶಿ ಕಂಪನಿಗಳು ಇಂಥ ಕೆಲಸಕ್ಕೆ ಮುಂದಾಗುತ್ತವಾ?
ವಿದೇಶಿ ಕಂಪನಿಗಳ ಪ್ರವೇಶದಿಂದ ನಮಗೆ ಚಾಕರಿ ಕೆಲಸಗಳು, ಅಂದರೆ ಕಸ ಗುಡಿಸುವ, ಮೂಟೆ ಹೊರುವ, ಸ್ವಚ್ಛಗೊಳಿಸುವ ಮತ್ತು ಮಾರಾಟ ಮಾಡುವಂತಹ ಕೆಲಸಗಳು ಸಿಗಬಹುದೇ ಹೊರತು ಉನ್ನತ ಹುದ್ದೆಗಳಲ್ಲ. ಈ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳ ಬೇಡಿಕೆಯೂ ಕಡಿಮೆ. 

ಸರ್ಕಾರದ ಹತ್ತಿರ ಇನ್ನೂ ಒಂದು ವಾದವಿದೆ. ಅದರ ಪ್ರಕಾರ, ೧೦ ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ದೇಶದ ೫೩ ನಗರಗಳಲ್ಲಿ ಮಳಿಗೆ ತೆರೆಯಲು ಮಾತ್ರ ಅನುಮತಿ ನೀಡಲಾಗಿದೆ. ಪ್ರತಿಯೊಂದು ಕಂಪನಿಯೂ ಮೊದಲು ಬರುವುದು ಇಂಥದೇ ಮಿತಿಯಲ್ಲಿ. ಕ್ರಮೇಣ ಮಳಿಗೆಗಳ ಸಂಖ್ಯೆ ಹೆಚ್ಚುತ್ತ ಹೋಗುತ್ತದೆ. ಸಣ್ಣಪುಟ್ಟ ನಗರಗಳಲ್ಲೂ ವಿದೇಶಿ ಮಳಿಗೆಗಳು ತಲೆ ಎತ್ತುತ್ತವೆ. ಚಿಲ್ಲರೆ ಮಾರಾಟ ಕೂಡ ಬಹುರಾಷ್ಟ್ರೀಯ ಕಂಪನಿಗಳ ಪಾಲಾಗಿ ೪ ಕೋಟಿಗೂ ಅಧಿಕ ಚಿಲ್ಲರೆ ಮಾರಾಟಗಾರರು ಪರ್ಯಾಯ ಉದ್ಯೋಗ ಹುಡುಕಿಕೊಳ್ಳಬೇಕಾಗುತ್ತದೆ.
ಅವರಿಗೆ ಯಾವ ಉದ್ಯೋಗ ಸಿಕ್ಕೀತು? ಆ ಭರವಸೆ ಎಲ್ಲಿದೆ?

-ಶ್ರೀದೇವಿ ಕಳಸದ

6 comments:

minchulli said...

4 ಕೋಟಿಗೂ ಅಧಿಕ ಚಿಲ್ಲರೆ ಮಾರಾಟಗಾರರು ಮತ್ತೆ ಸೊನ್ನೆಯಿಂದಾರಂಭಿಸಿ ಪರ್ಯಾಯ ಉದ್ಯೋಗ ಹುಡುಕಿಕೊಂಡು ಬದುಕು ಕಟ್ಟಿಕೊಳ್ಳುವುದು ಇಂದಿನ ಭ್ರಷ್ಟಪ್ರಭುತ್ವದ ದಿನಗಳಲ್ಲಿ ಸಾಧ್ಯವೇ ?

ನಾನಿದನ್ನು ಖಂಡಿಸುತ್ತೇನೆ..

Manjula said...

ನೀವು ಬರೆದಿರುವುದು ಅಕ್ಷರಶಃ ಸತ್ಯ.. ಇದೆಲ್ಲ ಆಗಬಾರದು!

sunaath said...

One more point:The politicians can extract funds from Big Corporations unlike from small shopkeepers. Imagine how much more money can be stocked in Swiss Banks by politicians by strangling the smaalies!

ಮನಸು said...

ಸತ್ಯದ ಕನ್ನಡಿ ನಿನ್ನ ಲೇಖನ.. ಸರ್ಕಾರಗಳು ಏನೇ ತೀರ್ಮಾನ ತೆಗೆದುಕೊಂಡರೂ ಅವರ ನೇರಕ್ಕೆ ಯೋಚಿಸುತ್ತಾರೆ, ಇನ್ನು ಸಾಮಾನ್ಯರ ಕಷ್ಟ-ನಷ್ಟಗಳನ್ನು ಕೇಳುವವರು ಯಾರು..

Badarinath Palavalli said...

ಹಾಳು ಬಿದ್ದು ಹೋಗಲಿ, ಗೆಬರೋ ಸರ್ಕಾರಗಳು. ನಮಗೆ ಶೆಟ್ಟಿ ಅಂಗಡಿಯ ೨ ರೂಪಾಯಿ ಕರಿಬೇವು ಸಿಗುವಂತಾಗಲಿ.

Nagaraj said...

ಬಹುಶ ನಿಮ್ಮ ಬರಹ ಒಂದು ಬದಿಯ ನೋಟವನ್ನು ಮಾತ್ರ ಪ್ರಸ್ತುತಪಡಿಸುತ್ತಿದೆ. ನಮ್ಮ ಚಿಲ್ಲರೆ ವ್ಯಾಪಾರಿಗಳಿಂದ ಈಗಿರುವ ದಲ್ಲಾಳಿಗಳಿಂದ ನಮ್ಮ ರೈತರಿಗೆ ಸೂಕ್ತ ಬೆಲೆ ಸಿಗುತ್ತಿದೆಯಾ? ಮೆಟ್ರೋ ಬಂದಾಗ ಇಂತಹದೆ ಕೂಗು ಎದ್ದಿರಲಿಲ್ಲವೆ? ಮೆಟ್ರೋದಿಂದಾಗಿ ಅಂತಹ ಯಾವ ಬದಲಾವಣೆಯೂ ಕಂಡು ಬರಲಿಲ್ಲ. ಚಿಲ್ಲರೆ ವ್ಯಾಪಾರಿಗಳ ಹಿತರಕ್ಷಣೆಗಾಗಿ ನಮ್ಮ ರೈತರಿಗಾಗಬಹುದಾದ ಅನುಕೂಲಗಳನ್ನೇಕೆ ಕಡೆಗಣಿಸಬೇಕು.