Monday, October 22, 2012

ಆರ್‌ಲಕ್ಷವೂ, ಚಾಕೊಲೇಟ್‌ ಚಾನೂ ನಡುವೆ ಶೇಂಗಾಕಾಯಿಯು


(ಓಟ -2)


ಹೊತ್ತು ಮುಳುಗ್ತಂದ್ರ ಸಾಕು... ನಮ್ಮ ಮನಿ ಹಿತ್ತಲಿಗೆ ಅಂಟಿಕೊಂಡಿದ್ದ ಬಳಗಾರ ಈರಮ್ಮ ಮತ್ತು ಬಸ್ಸಮ್ಮನ ಮನೆಗೆ ಓಡೋದೇ. ಸಣ್ಣ ಅಂಗಳ. ಆಕಡೆ ಈ ಕಡೆ ಕಟ್ಟಿ. ಬಲಕಿಂದು ಖುಲ್ಲಾ ಕಟ್ಟಿ. ಎಡಕಿಂದಕ್ಕ ಚಪ್ಪರ. ಆಮ್ಯಾಲ ಒಂದಿಬ್ರು ಕಾಲು ಚಾಚ್ಕೊಂಡು ಕೂತ್ಕೊಳ್ಳಾಕ್‌ ಆಗೋವಷ್ಟು ಸಣ್ಣಹುಸಿ. ಅದರ ಒಂದಡಿ ಎತ್ತರಕ್ಕ ಪಡಸಾಲಿ. ಭಾಳ ಅಂದ್ರ ಐದು ಮಂದಿ ಮಲ್ಕೋಬಹುದೇನೋ. ಅದರ ಎಡಭಾಗಕ್ಕ ಅಡುಗೆ ಮನಿ. ಬಲಭಾಗಕ್ಕ ಹಿತ್ತಲಿಗೆ ದಾರಿ. ಅದು ಅಡಗಿ ಮನಿ ಅನ್ನೂದಕ್ಕಿಂತ ಒಲಿ ಹೂಡಿದ್ದ ಜಾಗ ಅಂತ ಅನ್ಬಹುದು. ಯಾಕಂದ್ರೆ ನಡಕ್ಕ ಒಂದು ಗ್ವಾಡಿ. ಬೆನ್ನಿಗೆ ಬೆನ್ನು ಮಾಡಿ ಕೂತಂಥಾ ಎರಡು ಒಲಿಗೋಳು. ಒಂದು ಬಸಮ್ಮಂದು. ಇನ್ನೊಂದು ಈರಮ್ಮಂದು. ಇವರ ಪಡಸಾಲಿ ಗ್ವಾಡಿಗೆ ಅಂಟಕೊಂಡಂಗನ ಇನ್ನೊಬ್ಬವಾರಗಿತ್ತಿ ಮಲ್ಲಮ್ಮನ ಮನಿ. ಅಕಿ ಮೈಮ್ಯಾಲ ಮೈಲಾರಲಿಂಗ ಬರ್‍ತಿದ್ದ. ಅದನ್ನ ಮುಂದ್ಯವಾಗಾರ ಹೇಳ್ತೀನಿ. 

ಹೋಮ್‌ವರ್ಕ್‌ ಅಲ್ಲಲ್ಲಾ ಅಪ್ಪಾಜಿಯ ಆಜ್ಞಾವರ್ಕ್‌ ಮುಗಿಸಿ ಈರಮ್ಮನ ಮನೀಗೆ ಓಡಿಬಿಡ್ತಿದ್ದೆ. ಆಗಷ್ಟ ಗಂಗಪ್ಪಜ್ಜ, ಬಸಪ್ಪಜ್ಜ ದನೇ... ಅನ್ಕೊಂಡು ಹೊಲದಿಂದ ಬಂದಿರತಿದ್ರು. ಶೇಂಗಾ ಸುಗ್ಗಿ ಇದ್ದಾಗ ಶೇಂಗಾ, ಹೆಸರು ಸುಗ್ಗಿ ಇದ್ದಾಗ ಹೆಸರು, ಕಡ್ಲೀಕಾಳು ಸುಗ್ಗಿ ಇದ್ದಾಗ ಕಡ್ಲೀಕಾಯಿ, ಜ್ವಾಳದ ಸುಗ್ಗಿ ಇದ್ದಾಗ ಜ್ವಾಳದ ಸೀತ್ನಿ, ಗೋಧಿ ಸುಗ್ಗಿ ಇದ್ದಾಗ ಗೋಧಿ ಉಮಿಗಿ. (ಸೀತ್ನಿ ಅಂದ್ರೆ  ಅರೆಸುಟ್ಟ ಹಾಲುಗಾಳಿನ ಜೋಳದ ತೆನೆ, ಉಮಿಗಿ ಅಂದ್ರೆ ಸುಟ್ಟ ಎಳೆಗೋಧಿಯ ತೆನೆ ) ಅವರು ಹಿಂಗ ಬರೂದನ್ನ ಕಾಯ್ಕೊಂಡು ಮೇವಿನ ಹೊರಿಯೊಳಗ ತಿನ್ನೂವಂಥದ್ದೇನಾದ್ರೂ ತಗೊಂಬಂದಾರೇನೂ ಅಂತ ಹುಡುಕಾಡ್ತಿದ್ದೆ. (ತೊಗರಿ ಸುಗ್ಗಿ ಇದ್ದಾಗ ಅದನ್ನೂ ಬಿಡ್ತಿರಲಿಲ್ಲ. ಪುಟ್ಟಿ... ಅದು ಬರಲಕಟಗೀಗಂತ ತಂದಿದ್ದು. ಆ ಕಾಯಿ ತಿನಬಾರದೂ ಅಂದ್ರೂ ಕೇಳ್ತಿರಲಿಲ್ಲ. ಅಲ್ಲೊಂದು ಇಲ್ಲೊಂದು ಇದ್ದ ತೊಗರೆಕಾಯಿ ಹರ್‍ಕೊಂಡು ಸೀದಾ ಬಾಯಿಗೇನ, ವಗರುವಗರಾಗಿದ್ದರೂ) ಗಂಗಪ್ಪಜ್ಜ ಮೀಸಿ ಬಿಟ್ಕೋಂಡ್‌ ಇಷ್ಟೆತ್ತರ ಇದ್ದ. ಅವ ಏನ್‌ ಕೇಳಿದ್ರೂ ಏನರ ಒಂದ್‌ ಅನ್ನಾಂವಾ. ಅದಕ್ಕ ನಂಗ್‌ ಸಿಟ್‌ ಬಂದ್ಬಿಡ್ತಿತ್ತು. ಅವನ ಜೊತಿ ಮಾತ ಬ್ಯಾಡಾ ಅಂತ ಹೇಳಿ ಈರಮ್ಮನ ಕಡೀಂದ ಇನ್‌ಫ್ಯೂಯೆನ್ಸ್‌ ಮಾಡಸಿದ್ದೇ ಮಾಡ್ಸಿದ್ದು. ಆಕ್ಯೋ ಪತಿದೇವರಿಗೆ ಚಾ ಕಾಸಿ ಕೊಡೊದ್ರೊಳಗ ಪೂರಾ ಮಗ್ನೆ! ನನಗೋ ಹಸೀಶೇಂಗಾ ಚಡಪಡಿಕಿ. 

ಇರಾ ಪುಟ್ಟಿ ಇರಾ ಅವ್ವಿ... ಅನ್ಕೋತ ಒಲಿಮ್ಯಾಲ ಚಾಕ (ಚಹಾ) ನೀರಿಡತಿದ್ಲು. ಬೆಲ್ಲಾನೂ ಹಾಕ್ತಿದ್ಲು. ಅದು ಕುದ್ದಮ್ಯಾಲೆ ಚಾಪುಡೀನೂ ಹಾಕ್ತಿದ್ಲು. ನನಗ ಮಾತ್ರ ಶೇಂಗಾ ಸಿಗ್ತಿರಲಿಲ್ಲ. ನಡಕ್‌ನಡಕ್‌ ಊದಗೋಳಿಂದ (ಊದುಗೊಳವಿ) ಉಫ್‌ ಉಫ್‌ ಅಂತ ಊದಾಟ, ಕಣ್ಣೀರ ಒರಸಾಟ, ಗಲ್ಲ ಉಬ್ಬಿಸ್ಕೊಂಡ್‌ ಕೂತ ನನ್ನ ರಮಿಸಾಟ ಇದ್ದದ್ದ. ಅಲ್ಲಾ... ನಂಗ್ಯಾವಾಗಲು ಗುಂಗಾಗೂದು; ಗಂಗಪ್ಪಜ್ಜ ಹುಲ್ಲಿನ ಪೆಂಡಿಯೊಳಗ ಆ ಶೇಂಗಾಗಿಡ, ಬುತ್ತಿಗಂಟು, ಎಲ್ಲಾನ್ನೂ ಕಟ್ಕೊಂಡು ಬಂದು ಕಟ್ಟಿಮ್ಯಾಲ ಇಡತಿದ್ದ ಖರೆ. ಅವೇನೂ ಯಾರಿಗೂ ಸಿಗದ್ಹಂಗ ನ್ಯಾಗೊಂದಿ ಮ್ಯಾಲೇನ್‌ ಇಡ್ತಿರಲಿಲ್ಲಾ ಅಲ್ಲಾ? ಮತ್ಯಾಕ ಈರಮ್ಮ ಲಗೂನ ಆ ಗಂಟ ಬಿಚ್ಚತಿದ್ದಿಲ್ಲ? ಒಂದೆರಡು ಗಿಡ ಕೊಟ್ರ ಮಾತ ಮುಗೀತಲ್ಲ? ಯಾಕ ಹಂಗ ಮಾಡ್ತಿದ್ಲಕಿ? ಅಂತ. 

ಚೋಟುದ್ದ ಕಟ್ಟಿಗಿ ತುಂಡಿಂದ ಒಲ್ಯಾಗಿರೋ ತುಂಡುಕೆಂಡಗೋಳನ್ನ ಓಡ್ಯಾಡಿಸ್ಕೋತ ಕೂತ್‌ಬಿಡ್ತಿದ್ದೆ. ಈರಮ್ಮ, "ಅವ್ವೀ... ಸರೀ ಕಿಡಿ ಸಿಡೀತಾವು” ಅಂತ ಹೇಳ್ಕೋತ ಒಲಿ ಊದ್ತಿದ್ದಂಗ ಕಿಡಿ ಮ್ಯಾಲ ಹಾರಿಬಿಡೂವು. ಅದೊಂಥರಾ ದೀಪಾವಳಿ! ಹಾ ಅಂತ ಸಣ್ಣಗ ಚೀರಿದಾಕಿನ ಹಿಂದೆ ಸರಿದಂತೆ ಮಾಡಿ ಮತ್ತೆ ತುದಿಗುಂಡೀಲೇ ಒಲೀಮುಂದ. ಮಾಡಿನ್ಯಾಗಿಂದ ಇದ್ದ ಒಂದೆರಡು ಅಲ್ಯೂಮಿನಿಯಂ ಗ್ಲಾಸ್‌ ಒಲಿಮುಂದ ಇಡೂದ ತಡ ಅಷ್ಟರೊಳಗ ನೀರಿಗೆ ಬಿದ್ದ ಬೆಲ್ಲಾ, ಚಹಾಪುಡಿ ಕಮ್ಮಗ ಕುದ್ದು ಗ್ಲಾಸಿಗೆ ಇಳಸ್ರೇ ನನ್ನ ಅಂತ ಚಡಪಡಿಸೋದು. ಮಸೀಅರಬಿಂದ ಬಿಸೀ ಬೋಗುಣಿ ಕುತ್ತಿಗಿ ಹಿಡದಾಕಿನ ಸರಕ್‌ ಅಂತ ಗ್ಲಾಸಿಗೆ ಬಗ್ಗಸಾಣಾ ಬಗ್ಸೀದ್ಲಂದ್ರ ನಂಗೂ ಬೇಕು ’ಚಾಕಲೇಟ್‌ ಚಾ’ ಅನ್ಸೂದು. ಒಂದೀಟ ಕೊಡಲಾ ಈರಮ್ಮಾ ಅಂತ ಮನಸು ಮೆಲ್ಲಕ ಹೇಳೂದು; ದನಿ ಹೊರಗ ಬರ್‍ತಿರಲಿಲ್ಲಾ ಆ ಮಾತ ಬ್ಯಾರೆ. ಲೈಟ್‌ ಇಲ್ಲದ್‌ ಆ ಮನಿಯೊಳಗ ಒಲಿಬೆಂಕಿ ಮತ್ತ ಮಾಡಿನ್ಯಾಗಿನ ಬುಡ್ಡಿ ದೀಪಾನ ಬೆಳಕ. ಆ ಮಂದಬೆಳಕಿನ್ಯಾಗ ನೆಲಕ್ಕ ಕೈಯೂರಿ ಏಳೂ ಹೊತ್ತಿನ್ಯಾಗ ಈರಮ್ಮನ ಹೊಳಿಯೋ ಕಣ್ಣು ಕೇಳ್ತಿದ್ವು; ಕುಡೀತಿ? ಅಂತ. ನನ್ನ ಕಣ್ಣು ಹೂಂ... ಅಂತಿದ್ವು. ಈರಮ್ಮ ಸೆರಗ ತಗೊಂಡು ಹಣಿಮ್ಯಾಲ ಆಡಿಸ್ಕೊಳ್ತಿದ್ದಂಗ ಸೀರಿ ಹನಿಬೆವರು ಹೀರ್‍ಕೊಂಡುಬಿಡೋದು. ಅದ ಸೆರಗ ತಲೀಮ್ಯಾಲ ಹೊತ್ಕೋಂಡ ಈರಮ್ಮ ಗಂಗಪ್ಪಜ್ಜಗ ಚಾ ಕೊಡಾಕ ಹೋಗ್ತಿದ್ಲು. 

ನಾ ಅಕಿ ಹಿಂದೀಂದ ಹೋಗಿ ಬಾಗಲೊಳಗ ನಿಂತ್ಕೊಳ್ತಿದ್ದೆ. ಚಾ ಗ್ಲಾಸ್‌ ಇಸ್ಕೊಂಡ್‌ ಗಂಗಪ್ಪಜ್ಜ ಯಾವಾಗ ಗಟಗಟ ಕುಡೀತಾನೋ ನನಗ ಶೇಂಗಾ ಗಿಡ ಯಾವಾಗ ಕೊಡ್ತಾನೋ ಅಂತ ಹೊಚ್ಚಲ (ಹೊಸ್ತಿಲು) ಒಳಗ ನಿಂತು ನೋಡ್ತಿದ್ರ ಆ ಗಂಗಪ್ಪಜ್ಜಾ.... ಮಾರಾಯಾ ಗ್ಲಾಸ್‌ ಇಸ್ಕೋಂಡ್‌ ಅದನ್ನ ಬಾಜೂಕ್‌ ಇಟ್ಟು ಕಾಲ ಉದ್ದ ಬಿಟ್ಕೊಂಡ್‌ ಕುಂತ್‌ಬಿಡಾಂವಾ. ಮತ್ತ ಶುರು ಚಡಪಡಿಕಿ... ಛೆ ಏನ್‌ ಅಜ್ಜಾ ಅದಾನಿಂವಾ... ಲಗೂನ ಚಾ ಕುಡಿಯೂದ್‌ ಬಿಟ್ಟ ಅಂತ ಸಣ್ಣ ಕಡ್ಡಿತುಂಡಿನಿಂದ ಮಣ್ಣಿನ ಗೋಡೆಯನ್ನು ಗೀರುತ್ತ ನಿಂತುಬಿಡ್ತಿದ್ದೆ. ಆದರೂ ಅರ್ಧ ಜೀವ ಈರಮ್ಮನ ಒಲಿಮುಂದ, ಯಾಕಂದ್ರ ಅಕಿ ಕೊಡಮಿಗಿ (ಕಟ್ಟಿಗೆಯ ಪರಾತ)ಯೊಳಗ ರೊಟ್ಟಿಗೆ ಹಿಟ್ಟ ಕಲಸಾಕ ತಯಾರಿ ಮಾಡ್ಕೊಳ್ಳತಿದ್ಲು. ಅಲ್ಲಿ ಹೋಗೂದು ಭಾಳ ಅರ್ಜಂಟ್‌ ಇರ್‍ತಿತ್ತು. ಯಾಕಂದ್ರ ಸಣ್ಣ ಸಣ್ಣ ಹಿಟ್ಟಿನುಂಡಿ ಮಾಡಿ ಕೊಡ್ತಿದ್ಲು. ನಾ ಜರ್ಮನಿ ಪ್ಲೇಟ್‌ ಅನ್ನು ಡಬ್ಬಾಕಿಕೊಂಡು ಅದರ ಮೇಲೆ ರೊಟ್ಟಿ ತಟ್ಟುವ, ತಟ್ಟಿದ್ದನ್ನು ಕೆಡಿಸುವ, ಕೆಡಿಸಿದ್ದನ್ನು ತಟ್ಟುವ ದೀರ್ಘಾವಧಿ ಕಾರ್ಯಕ್ರಮ ಇರತಿತ್ತಲ್ಲಾ ಅದಕ್ಕ. 

ಅಲ್ಲೇ ಕಟ್ಟಿಮ್ಯಾಲೆ ಬಾಜೂ ಇದ್ದ ಬರಲ್‌ಹಿಡಿ (ಅಂಗಳ, ಹಟ್ಟಿ ಗುಡಿಸುವ ಒಣತೊಗರೆಗಿಡದ ಕಸಬರಿಗೆ) ಯ ಕಡ್ಡಿ ತುಂಡೊಂದನ್ನು ಮುರಿದುಕೊಂಡು ಇತ್ತ ಚಾ ಗ್ಲಾಸ್‌ ಕೈಯಲ್ಲಿ ಹಿಡ್ಕೊಂಡು ಕುಂತ್‌ಬಿಡ್ತಿದ್ದ ಆ ಗಂಗಪ್ಪಜ್ಜ. ಹಾ... ಇನ್ನೇನ್‌ ಗಟಗಟ ಕುಡದ ಮುಗಿಸೇ ಬಿಡ್ತಾನು, ನಂಗ್‌ ಶೇಂಗಾ ಕೊಡ್ತಾನು ಅಂತ ಕಾಯ್ತಿದ್ನಾ... ತುಗೋ... ಅವ ಒಂದೇ ಒಂದು ಗುಟುಕನ್ನೂ ಎಂಥಾ ಪರಿ ಸೊರ್‌... ಅಂತ ಹೀರಿಬಿಡ್ತಿದ್ದ ಅಂದ್ರ... ಓಹ್‌ ಸುಡುಸುಡೂದನ್ನ ಒಂದೇ ಪೆಟ್ಟಿಗೆ ಎಲ್ಲಾ ಮುಗಿಸೇಬಿಟ್ನಲ್ಲಪ್ಪಾ ಇಂವಾ! ಅಂತ ಅನ್ಕೊಬೇಕು. ಹಂಗ ಅನ್ಕೋಂಡು ಹಗೂರ‍್ಕ ಒಂದೆರಡು ಹೆಜ್ಜೆ ಮುಂದಿಡ್ತಿದ್ನಾ... ಊಂಹೂ... ಪುಣ್ಯಾತ್ಮ ಆ ಗ್ಲಾಸ್‌ ಕೆಳಗಿಟ್ಟು, ಆ ಬರಲು ಕಟ್ಟಿಗೆಯ ಬೆರಳುದ್ದದ ಆ ಕಡ್ಡಿಯ ಸಿಬರುಗಳ್ನೆಲ್ಲಾ ಸುಲಕೋಂತ ಆ ಕಡ್ಡೀನ್ನಾ ನುಣ್ಣಗ್‌ ಮಾಡಿಬಿಡ್ತಿದ್ದ. ಬಗ್ಗಿ ನೋಡಿದ್ರ ಆ ಉದ್ದ ಗ್ಲಾಸಿನೊಳಗ ಚಾ ಹಂಗ ಇರ್‍ತಿತ್ತು. ಪ್ಚ್‌.. ಅನ್ಕೊಂಡು ಹಗೂರ್‍ಕ್‌ ಬಂದು ಕಟ್ಟಿ ಮ್ಯಾಲ ಕಾಲ ಇಳಿಬಿಟ್ಕೊಂಡು, ಕಾಲ ಅಳಗ್ಯಾಡಿಸಿಕೊಂಡು ಕುಂತಬಿಡ್ತಿದ್ದೆ. ಏನ್‌ ಅವ್ವೀ? ಅಂತ ಹುಬ್ಬಿಲೇನ ಮಾತಾಡ್ಸಿ ಹುರಿಮೀಸಿಮ್ಯಾಲ ಕೈಯ್ಯಾಡಿಸ್ಕೊಂಡು ಮತ್ತ ಚಾ ಗ್ಲಾಸ್‌ ಕೈಗೆ ಎತ್ಕೊಳ್ಳಾಂವಾ. ಈ ಸಲಾನರ ಚಾ ಮುಗಸೋ ಯಪ್ಪಾ ಜಲ್ದೀ ಅಂತ ಮನಸ್ಸಿನ್ಯಾಗ ಅನ್ಕೊಂಡು ನಾನೂ ಅಲ್ಲೇ ಇದ್ದ ಒಂದು ಕಡ್ಡಿತುಂಡು ತಗೊಂಡು ಸೆಗಣಿನೆಲದೊಳಗ ಸೂರ್ಯಾ ಚಂದ್ರನ್ನ ಕೊರಕೋತ್‌ ಕುಂತ್ಬಿಡ್ತಿದ್ದೆ. ತಲಿಮ್ಯಾಲ ಎತ್ತಿ ನೋಡಿದ್ರೆ ಬರೇ ಚಂದಪ್ಪ ಒಬ್ಬ ಇರ್‍ತಿದ್ದ. ಆಜೂ ಬಾಜೂ ನಕ್ಷತ್ರಗೋಳಷ್ಟ ಇರೂವು. ಆದ್ರ ಅದ್ಯಾಕೋ ನಾ ಮಾತ್ರ ನೆಲದಾಗ ಇವ್ರಿಬ್ರನ್ನೂ ಬರೆದು ಕೂಡ್ರಿಸ್ತಿದ್ದೆ. 

ಮತ್ತ ಮೂರನೇ ಗುಟುಕು. ಈ ಸಲಾ ಪಕ್ಕಾ ಮುಗಿಸೇಬಿಡ್ತಾನಿಂವಾ ಅಂತ ಅನ್ಕೊಳ್ತಿದ್ಹಂಗ ಆ ನುಣ್ಣಗ ಮಾಡ್ಕೊಂಡ್‌ ಕಡ್ಡಿ ಇರ್‍ತಿತ್ತಲ್ಲಾ... ಅದನ್ನ ಹಗೂರ್‍ಕ ಕಿವ್ಯಾಗ ಆಡಿಸ್ಕೊಳ್ಳಾಕ ಚಾಲೂ. ಅಯ್ಯೋ ಏನ್‌ ಇಂವಾ... ಕಡ್ಡಿ ಕಿವಿಯೊಳಗ ಹಾಕ್ಕೊಂಡಾ... ಕಿವಿ ತಮಟೆ ಹರದ್ರೆ ಏನ್‌ ಗತಿ? ಸಣ್ಣವನಿದ್ದಾಗ ಇವರ ಅವ್ವ ಹಿಂಗೆಲ್ಲಾ ಕಿವಿನಲ್ಲಿ ಕಡ್ಡಿ ಹಾಕ್ಕೊಳ್ಬಾರದು ಅಂತ ಹೇಳಿಕೊಟ್ಟಿಲ್ಲಾ? ಅಂತ ಕೇಳಬಿಡಬೇಕು ಅನ್ಸೂದು. ಅಂವನೋ ಜೋರಾಗಿ ಒಮ್ಮೆ ಗಂಟಲು ಸರಿ ಮಾಡಿಕೊಂಡು ಕಡ್ಡಿ ಅತ್ತ ಒಗದು ಗ್ಲಾಸ್‌ ಕೈಗೆತ್ತಿಕೊಳ್ಳಾಂವಾ. ಹಾಂ. ಇದ ಕಡೀ ಗುಟುಕ್‌ ಅಂತ ಅನ್ಕೋತ... ಅಷ್ಟರೊಳಗ ಒಮ್ಮೆ ಈರಮ್ಮಾ ಏನ್‌ ಮಾಡಾತಾಳು ನೋಡಿಬರೂಣು ಅಂತ ಒಳಗ ಓಡ್ತಿದ್ದೆ. ಅಕಿ ಕೈಯೆಲ್ಲಾ ಹಿಟ್ ಮಾಡ್ಕೊಂಡು. ಬಳೆಗಳಿಗೆ ದಾರ ಕಟ್ಟಿಕೊಂಡು ರೊಟ್ಟಿ ಬಡಕೋತ, ಬೇಯಿಸ್ಕೋತ ಕುಂತಿರ್‍ತಿದ್ಲು. ಬುಟ್ಯಾಗ ನಾಲಕ್ಕೈದು ರೊಟ್ಟಿಗೋಳು ಬಿಸಿ ಆರಿಸ್ಕೋತ ಕುಂತಿರ್‍ತಿದ್ವು. ನನ್ನ ಆಳ-ಅಗಲ ಗೊತ್ತಿದ್ದ ಈರಮ್ಮ ಸಣ್ಣ ಹಿಟ್ಟಿನುಂಡೆಯನ್ನಾ ಕೇಳೋಮೊದ್ಲಾ ಕೈಗೆ ಕೊಟ್ಟು ಕಳಿಸಬಿಡ್ತಿದ್ಲು. 

ಹಿಟ್ಟನ್ನು ಮುಟ್ಟಿಗೆಯೊಳಗೆ ಹಿಡಿದು, ಅಂಗೈ ಮ್ಯಾಲೆ ಸಣ್ಣರೊಟ್ಟಿ ತಟ್ಕೋತ ಮತ್ತ ಗಂಗಪ್ಪಜ್ಜನ ಬಳಿ ಬರ್‍ತಿದ್ದೆ. ಚಾ ಕುಡೀತೀ ಏನಾ ಅವ್ವೀ? ಅಂತ ಕೇಳ್ತಿದ್ದಾ. ಹೂಂ... ಆದ್ರೆ ಈರಮ್ಮಾ ಕೊಡೂದಿಲ್ಲ ನೋಡು... ತುಟಿಯುಬ್ಬಿಸಿಕೊಂಡು ಹೇಳ್ತಿದ್ದೆ. ಅಯ್ಯೋ.... ತಂಗಿ, ನಮ್ದು ಇದು ಬಡವರ ಕರೀಚಾ. ಇದನ್ನೇನ್‌ ಕುಡೀತೀಬೇ ನೀ? ಹಾಲಿಲ್ಲಾ ಏನಿಲ್ಲಾ. ಬ್ಯಾಡಬೇ ಇದನ್ನೆಲ್ಲಾ ನೀವು ಕುಡೀಯೂಹಂಗಿಲ್ಲ. ಕುಡೀಬಾರ್‍ದು ಅಂತ ಅನ್ನೋವ್ನು. ಯಾಕ? ನಾ ಯಾಕ್‌ ಕುಡೀಬಾರ್‍ದು? ಅಂತ ಹಗೂರ್‍ಕ್‌ ಶೇಂಗಾ ಗಿಡದ ಹತ್ರ ಹೋಗಿ ಕುಂತು ಕೇಳ್ತಿದ್ದೆ. ಬೇ ತಂಗಿ... ನಾವು ಹಾಲಿಲ್ಲದ ಚಾ ಕುಡಿತೇವಿ. ನೀವು ಅದೇನೋ ಆರ್‌ಲಕ್ಷಾ ಅಂತಾರಲ್ಲಾ ಅದನ್ನ ಕುಡಿಯಾವ್ರು ನೀವು. ಇದೆಲ್ಲಾ ಯಾಕ್‌ಬೇ ನಿಮಗ? ಅಂತಿದ್ದ. ಆಂ ಆರ್‌ಲಕ್ಷಾ? ಏನಜ್ಜಾ ಅದು? ಅಂತ ಕೇಳಿದ್ದಕ್ಕ... ಅದಬೇ.. ಬಾಟಲ್ಯಾಗ ಇರ್‍ತೇತಲ್ಲಾ ಪುಡಿ. ಅದನ್ನ ಹಾಲಿಗೆ ಹಾಕ್ಕೊಂಡ್‌ ಕುಡೀತೀರಿ ಹೌದಿಲ್ಲೋ? ಅಂತಿದ್ದ. ಓಹ್‌ ಹಾರ್ಲಿಕ್ಸ್‌! ಹೂಂ... ಹೌದೌದ. (ಅಯ್ಯೋ ಈ ಅಜ್ಜನಿಗೇನ್‌ ಗೊತ್ತು? ನಂಗದು ಸೇರೂದಿಲ್ಲ ಅಂದ್ರೂ ಫೋರ್ಸ್‌ ಮಾಡಿ ಕುಡಸ್ತಾರು ಈ ಅಪ್ಪಾಜಿ ಅನ್ನೂದು). 

ಅಯ್ಯೋ ಅಜ್ಜಾ ಆರ್‍ಲಕ್ಷ್‌, ಆರ್‌ಲಕ್ಷಾ? ಯೋಳಲ್ಲಾ, ಯಂಟಲ್ಲಾ? ಅಂತ ನಕ್ಕೋತ ಹುಲ್ಲಿನ ಪೆಂಡಿಯೊಳಗ ಜೋತ ಬಿದ್ದ ಶೇಂಗಾಕಾಯಿಯನ್ನ ಹಗರ್‍ಕ ಕಿತ್ಕೊಂಡ್‌ಬಿಡ್ತಿದ್ದೆ!. ಆಹಾ ಏನ್‌ ಖುಷಿ ಆಗೂದವಾಗಾ... ಇನ್ನಾದ್ರೂ ಈ ಹುಲ್ಲಿನ ಪೆಂಡಿ ಬಿಚ್ಚಿ ಅದರೊಳಗಿನ ಶೇಂಗಾ ಗಿಡ ಕೊಡ್ತಾನಾ ಈ ಅಜ್ಜಾಮಹಾರಾಜಾ ಅಂತ ಅನ್ಕೊಂಡು ಪಟ್‌ ಅಂತ ಮಣ್ಣಮಣ್ಣ ಶೇಂಗಾ ನೆಲಕ್ಕ ಕುಟ್ಟೇಬಿಡ್ತಿದ್ದೆ. ಊಂಹೂ ಗಟ್ಯಾಗಿ ಸಿಪ್ಪಿಗಂಟಿಕೊಂಡ ಕುಂತ ಶೇಂಗಾ ಸಿಪ್ಪಿ ಬಿಚ್ಕೊಳ್ಳಾಕ ನಾ....ಯಾಕ? ಅನ್ನೂವು. ಅಂತೂ ಅರ್ಧಂಬರ್ಧ ಸುಲಿದ ಸಿಪ್ಪೆಯ ಚುಂಗನ್ನು ಹಲ್ಲಿನ ಸಂದೀಲಿಟ್ಟು ಬಿಡಿಸೋ ಹೊತ್ತಿಗೆ ಕಾಳು ಹೋಗಿ ಬ್ಯಾಳಿ ಆಗಿಬಿಡೂದು. ಎರಡೇ ಎರಡು ಶೇಂಗಾಬ್ಯಾಳಿ ಲಗೂನ ಗುಳುಂ. ಇನ್ನೊಂದು ಶೇಂಗಾ ತಗೊಳಾಗ ಕೈ ಹಾಕೂದಕ್ಕ.. ತಡೀಬೇ ಪುಟ್ಟಿ ಪೆಂಡಿ ಬಿಚ್ಚತೇನಿ ಅಂತ ಈ ಕಡೆ ತಗೊಳ್ಳಾವಾ ಅದನ್ನ.

ದೇವರೇ... ಈ ಅಜ್ಜಾಗ ಈಗರ ಬುದ್ಧಿ ಬಂತಲ್ಲಪ್ಪಾ... ಅಂತ ಒಳಗ ಓಡಿ ಹೋಗಿ... ಕೈಯ್ಯಾಗಿನ ರೊಟ್ಟಿಹಿಟ್ಟನ್ನ ಒಲಿಯೊಳಗ ಒಗದು ಓಡಿಬಂದು ಪೆಂಡಿ ಮುಂದ ಕುಕ್ಕರಗಾಲಿಲೆ ಕೂಡ್ತಿದ್ದೆ. ಅಷ್ಟೊತ್ತಿಗೆ ಬಸ್ಸಮ್ಮನ ಗಂಡ ಬಸ್ಸಪ್ಪಜ್ಜ ಬೀಡಿ ಸೇದ್ಕೋತ ಆ ಕಡೆ ಕಟ್ಟಿಮ್ಯಾಲೆ ಕೂತ್‌ಬಿಡಾಂವಾ. ಆಮ್ಯಾಲ ಅಣ್ಣಾ-ತಮ್ಮನ ಮಾತುಗೋಳು ಚಾಲೂ. ಛೇ ಈ ಬಸ್ಸಪ್ಪಜ್ಜಾ ಯಾಕಾರ ಬಂದ್ನಾ...ಗೊರಾಗೊರಾ ಕೆಮ್ಮೂದೂ ಬಿಡಂಗಿಲ್ಲ. ಸೇದೂದೂ ಬಿಡಂಗಿಲ್ಲ. ಈಗ ನೋಡಿದ್ರ ಗಂಗಪ್ಪಜ್ಜನ ಜೊತಿ ಸುಮ್‌ಸುಮ್‌ನ ಮಾತ್‌ ಹಚ್ಕೊಂಡ್‌ ಕೂಡ್ತಾನು. ಅದ್ಯಾರದೋ ಎಮ್ಮಿಯಂತ ಕಳೀತಂತ. ಅದ್ಯಾರದೋ ಹೊಲಾ ಹಿಸ್ಸೆ ಮಾಡೂದ್ರಾಗ ಹೆಚ್ಚೂ ಕಮ್ಮಿ ಆತಂತ. ಅದಕ್ಕ ಅಣ್ಣಾ ತಮ್ಮಾ ರಕ್ತಾ ಬರೂ ಹಂಗ ಬಡದಾಡಕೊಂಡ್ರಂತ. ಛೇ ಸಂಬಂಧ ಇಲ್ಲ ಸೂತ್ರ ಇಲ್ಲ... ಊರಪುರಾಣ ಹೇಳ್ತಾನಿಂವಾ ಬಸ್ಸಪ್ಪಜ್ಜಾ. ಸೇದೂದ್‌ ಸೇದ್ಕೋತ ಅತ್ತ ದೂರ ಕುಂಡರ್‌ಬಾರ್‍ದಾ. ಈ ಗಂಗಪ್ಪಜ್ಜಗ ಯಾಕ ಮಾತಾಡಿಸ್ಕೋತ ಬರ್‍ತಾನು. ಈ ಗಂಗಪ್ಪಜ್ಜಾನೂ ಅಷ್ಟ. ಪೆಂಡಿ ಬಿಚ್ಚೂದ್‌ ಬಿಟ್ಟು ಅವನ ಮಾತಿಗೆ ಹೂಂ.. ಹೂಂ.. ಅನ್ಕೋತ ಕೂಡ್ತಾನು. ಅಯ್ಯೋ ಇವ್ರು ಹಿಂಗ ಮಾತಾಡ್ತ ಕುಂತ್ರ ಮುಗೀತು... ಸಂಗವ್ವ (ಈರಮ್ಮನ ಮಗಳು) ಬಂದು.... "ಅವ್ವೀ... ಸರ್‌ ಕರ್‍ಯಾತಾರು ಬರಬೇಕಂತ’ ಅಂತ ಹೇಳ್‌ಬಿಡ್ತಾಳ. ಅಲ್ಲೀಗೆ ಶೇಂಗಾ ಸುಗ್ಗಿಗೆ ಢಣ್‌! ಅಂತ ಚಡಪಡಿಸ್ಕೋತ ಮತ್ತ ಈರಮ್ಮನ ಹತ್ರ ಓಡಿಹೋಗಿ ಸಿಟ್‌ ಬಂದು ಒಲ್ಯಾಗಿನ ಕಟಗಿ ಹಿರದಾಡಾಕ ಶುರು ಮಾಡ್ತಿದ್ದೆ.   

ಜಾಣಿ ಈರಮ್ಮಾ.... ಹಿಟ್ಟಗೈಲೇ ಹೊರಗ ಹೋದಾಕಿನ ಪೆಂಡಿ ಬಿಚ್ಚಿ ಒಂದಿಷ್ಟು ಶೇಂಗಾ ಗಿಡಾ ಕೈಗಿಟ್ಟು ಥಣ್ಣಗಾಗ ನಮ್ಮವ್ವ ಅಂತ ಮನಸ್‌ನ್ಯಾಗ ಅನ್ಕೊಂಡು ಮತ್ತ ಹೊಳ್ಳಿ ಅಡಗಿ ಮನೀಗೆ ಹೋಗಾಕಿ. ಮುಗೀತು... ಹಿಡದಾವ್ರ ಇಲ್ಲ ನನ್ನ... ಕತ್ತಲಸಂದ್ಯಾಗ ದುಡುದುಡು ಅಂತ ಓಡ್ಕೋತ ಮನೀಗೆ ಬಂದ್‌ಬಿಡಾಕಿ. ಬರೂ ಹೊತ್ತಿಗೆ ಯಾವುದೋ ಪುಸ್ತಕಾ ಮುಖಕ್ಕ ಹಿಡ್ಕೊಂಡು ಕಾಲಮೇಲೆ ಕಾಲು ಹಾಕ್ಕೊಂಡು ಕಾಟ್‌ ಮೇಲೆ ಮಲ್ಕೊಂಡಿರ್‍ತಿದ್ರು ಅಪ್ಪಾಜಿ. ನಾ ಶೆಂಗಾ ಗಿಡಾ ಹಿಡ್ಕೋಂಡ ಹಗರ್‍ಕ್‌ ಅಡಗಿ ಮನೀಕಡೆ ಹೆಜ್ಜಿ ಹಾಕ್ತಿದ್ನಾ... ಅವ್ರು ಹಂಗ ಮಕಕ್ಕ ಹಿಡದ ಬುಕ್‌ ಸರಿಸದೇ ಇರಲಪ್ಪಾ.. ಸರಿಸಿ ನನ್ನ ನೋಡದೇ ಇರಲಪ್ಪಾ. ನೋಡಿ ನನ್ನ ಮಾತನಾಡಿಸದೇ ಇರಲಪ್ಪಾ ಅಂತ ಅನ್ಕೋತ ಓಡಿಬಿಡ್ತಿದ್ದೆ. 

ಬಂದ್ಯಾ.. ಬಾ... ಹಗಲನ್ನೂ ಹಂಗಿಲ್ಲಾ... ಕತ್ಲ್‌ ಅನ್ನೂಹಂಗಿಲ್ಲಾ... ಬರ್‍ತಾರ್‌ ತಡೀ ನಿಂಗ್‌. ಮಾಡ್ತಾರ್‌ ತಡೀ ನಿಂಗ್‌ ಅಂತ ಅವ್ವಾ ಹೆದರ್ಸಿ‌ದ್ದ ಹೆದರ್ಸಿದ್ದು. ನಾ ಹೆದರ್‍ಕೋತ.... ಬಚ್ಚಲಮನೀಗೆ ಹೋಗಿ ಶೇಂಗಾ ಗಿಡ ತೊಳ್ಯಾಕ ಹೋಗಿ ಮೈಮ್ಯಾಲೆಲ್ಲಾ ನೀರು ಚೆಲ್ಲಿಕೊಂಡು, ಬಿಳಿ ಪೇಟಿಕೋಟ್‌ ಮ್ಯಾಲೆ ಮಣ್ಣ ಸೋರಿಸ್ಕೋತ ಬರೂ ಹೊತ್ತಿಗೆ ತಮ್ಮ-ತಂಗಿ.. ನಂಗೂ ಬೇಕು.. ನಾನೂ ಬಳಗಾರಮ್ಮನ ಮನೀಗೆ ಹೋಗ್ತೀವೀಗ ಅಂತ ಹಟ ಚಾಲೂ. ಆ ಹುಡುಗೋರಿಗೂ ಬ್ಯಾಟಾ ಹಚ್ಚೀದಿ... ಅಂತಿದ್ಲು ಅವ್ವ. ನಾನೋ... ಪ್ಲಾಸ್ಟಿಕ್‌ ಬುಟ್ಟಿಯೊಳಗ ನೀರಾಟ ಮಾಡ್ಕೋಂಡು, ಮಣ್ಣ ಬಿಡ್ಲಿ ಅಂತ ಶೇಂಗಾ ನೆನ್ಯಾಕ ಇಟ್ಟ ಬರೂ ಹೊತ್ತಿಗೆ ಆ ಕಡೀಂದ ಸಂಗಮ್ಮ ಉಡಿತುಂಬ ಶೇಂಗಾಕಾಯಿ ಕೊಡಾಕ್ ಬಂದ್‌ಬಿಡಾಕಿ! ಪಾಪ ಒಂದು ಮುಟ್ಟಿಗಿ ಇದ್ವೋ ಇಲ್ಲೋ.... ನಾ ತೊಳ್ಯಾಕ ಇಟ್ಟ ಬಂದ ಶೇಂಗಾ ಅಲ್ಲೇ...  ಅವನ್ನಲ್ಲೇ ಬಿಟ್ಟು ಓಟಾನ. ಪಾಪ ಪ್ಲಾಸ್ಟಿಕ್‌ ಬುಟ್ಯಾಗ ಜಳಕಾ ಮಾಡ್ಕೋತ ಕೂತ ಹಿಡಿ ಶೇಂಗಾಕಾಯಿ ಪಾಪ ಅವು ಥಂಡ್ಯಾಗ ಅಲ್ಲೇ... 

(ಮುಂದುವರೆಯುತ್ತದೆ)

Tuesday, October 16, 2012

ಪೀಲೂ

(ಇದು ಅಪ್ಪಾಜಿ ಬರೆದದ್ದು)

ಬಸ್‌ಸ್ಟ್ಯಾಂಡ್‌ ಹತ್ತಿರ ಸುನೀಲ ಮೆಡಿಕಲ್ ಸ್ಟೋರ್ ಎದುರಿಗೆ ಕೈನೆಟಿಕ್ ಹೊಂಡಾ ನಿಲ್ಲಿಸಿ ಕೆಳಗಿಳಿದೆ. ಬೆನ್ನೂ ಸೇರಿದಂತೆ ಹೊಟ್ಟೆಯ ಭಾಗವನ್ನೆಲ್ಲ ಬಿಳಿ ಬಟ್ಟೆಯಿಂದ ಸುತ್ತಿಸಿಕೊಂಡಿದ್ದ ಪೀಲೂ ನನ್ನ ಕಾಲಡಿಯ ಫುಟ್‌ರೆಸ್ಟಿನ ಮೇಲಿಂದಲೇ ನನ್ನನ್ನು ದೈನ್ಯದಿಂದ ನೋಡಿತು. ಮರುಕ್ಷಣ ಅದು ಈಚೆ ಬಂದು, ಸೀಟಿನ ಮೇಲೆ ಜಿಗಿದು ಹತ್ತಿ ಕೂಡ್ರಲು ಅದು ಹವಣಿಸುತ್ತಿದ್ದಂತೆ... ಕೆಳಗೆ ಬಿತ್ತು. ಇಷ್ಟು ನೋವಿನಲ್ಲೂ ಸೀಟಿನ ಮೇಲೆ ಕೂಡ್ರುವ ತನ್ನ ಅಭ್ಯಾಸ ಬಲಕ್ಕೆ ನಾನು ನಿಧಾನ ಅದರ ಮುಂಗಾಲು ಹಿಡಿದು ಮೇಲೆ ಹತ್ತಿಸಿ "ಪೀಲೂ, ಅಲ್ಲೇ ಕೆಳಗ ಕೂಡಬಾರದೆನೋ... ಛೆ ಆಯಿತು, ಇಲ್ಲೆ ಕೂಡ್ರಾ ಅಪ್ಪಿ ಬಂದೆ’ ಎಂದು ಮೆಡಿಕಲ್ ಸ್ಟೋರ್ ಮೆಟ್ಟಿಲು ಹತ್ತಿ ಪ್ರ್ರಿಸ್ಕ್ರಿಪ್ಷನ್ ಚೀಟಿಯೊಂದಿಗೆ ದುಡ್ಡನ್ನೂ ಕೌಂಟರ್ ಮೇಲಿಟ್ಟೆ. ಅಲ್ಲಿಂದ ಹೈಡ್ರೋಜನ್ ಅನೆಸ್ತೇಷಿಯಾದ ಎರಡು ವಾಯಿಲ್ ತೆಗೆದುಕೊಂಡು ಬಂದು "ಪೀಲೂ ಕೆಳಗಿಳಿ, ಇಲ್ಲಿ ಕೂಡಬಾ’ ಎನ್ನುವುದಷ್ಟೇ ತಡ ಇಳಿಯಲು ಹಾತೊರೆಯಿತು. ಅಯ್ಯೋ! ಮೊದಲೇ ಸಂಪೂರ್ಣ ನಿಶ್ಯಕ್ತವಾಗಿದ್ದ ಇದು ಕೆಳಗೆ ಬಿದ್ದು ಬಿಟ್ಟರೆ ನೋಡಿದ ಜನಾ ಏನಂದುಕೊಂಡಾರು ಎಂದು ಯೋಚಿಸಿ ತಕ್ಷಣ ನಾನೇ ಕೈಯಿಂದ ಹಿಡಿದು ಮತ್ತೆ ಫುಟ್‌ರೆಸ್ಟ್‌ನಲ್ಲಿ ಮಲಗಿಸಿದೆ. ಮೆಡಿಕಲ್ ಸ್ಟೋರಿನ ಮಾಲೀಕ ಸುನೀಲ್ ?ವಾ! ವಾ! ಭಾರೀ ಐತಲ್ಲಾ ಸಾರ್ ನಿಮ್ಮ ಪೀಲು... ? ಎಂದಾಗ ನನ್ನ ಕಂಠ ಬಿಗಿದು ಬಂತು. ಪ್ರತಿಯಾಗಿ ಸ್ಮೈಲ್ ಕೊಟ್ಟೆ. ಗಾಡಿ ಸ್ಟಾರ್ಟ್‌ ಮಾಡಿಕೊಂಡು ಧಾರವಾಡ-ಬೆಳಗಾವಿ ರಸ್ತೆಯಲ್ಲಿದ್ದ ಕೃಷಿ ವಿಶ್ವವಿದ್ಯಾಲಯದ ಪಶು ಚಿಕಿತ್ಸಾಲಯದ ಕಡೆ ಭಾರವಾದ ಮನಸ್ಸಿನಿಂದ ಎಕ್ಸಿಲೇಟರ್ ಕೊಡುತ್ತ ಮುನ್ನಡೆದೆ.

ಮಾರ್ಗ ಮಧ್ಯೆ ಪೆಪ್ಸಿ ಕಂಪನಿಯನ್ನು ದಾಟುತ್ತಿರಬೇಕಾದರೆ, ಯಾವುದೋ ಸತ್ತ ಪ್ರಾಣಿಯ "ಗೊಂ...’ ಎಂಬ ದುರ್ವಾಸನೆಯಿಂದ ಮೂಗು ಕಟ್ಟಿಹೋಯಿತು. "ಇಷ್ಟೊತ್ತಿಗಾಗಲೇ ಪೀಲೂ ಕೂಡ ನಮ್ಮ ಕೈ ಬಿಟ್ಟು ಇಂಥದೇ ಜಾಗದಲ್ಲಿ ಅನಾಥವಾಗಿ ಕೊನೆಯುಸಿರೆಳೆದಿದ್ದರೆ... ಇದೇ ರೀತಿಯ ದುರ್ವಾಸನೆಯ ಸೃಷ್ಟಿಗೆ ಕಾರಣವಾಗಿ, ಅದೆಷ್ಟು ಜನರ ಮೂಗು ಮುಚ್ಚಿಸಿ ಛೀ ಹಾಕಿಸಿಕೊಳ್ಳುತ್ತಿತ್ತೋ ಏನೋ...’ ಎಂದೆಲ್ಲ ಯೋಚಿಸುತ್ತಿದ್ದೆ. ಮತ್ತೆ ಕೊಂಚ ಮುನ್ನಡೆದಾಗ ಸಾಮಾನ್ಯ ಹವಾಗುಣವು ಮೂಗಿನೊಳಗೆ ಅಡರಿದ ದುರ್ವಾಸನೆಯನ್ನು ಡೈಲ್ಯೂಟ್‌ ಮಾಡಿದ್ದರಿಂದ ಮನಸ್ಸಿಗೆ ಹಿತವೆನಿಸಿತು. ಆಮೇಲೆ ಹೊಳೆಯಿತು ನನ್ನ ಟ್ಯೂಬ್‌ಲೈಟ್ ತಲೆಗೆ.. "ಅಯ್ಯೋ..’ ಇದು... ಯಾವುದೋ ಪ್ರಾಣಿ ಸತ್ತು ನಾರುತ್ತಿರುವುದಲ್ಲಾ ಫ್ಯಾಕ್ಟರಿಯಿಂದ ಬಿಡುಗಡೆಯಾಗಿ ಹರಿಯುತ್ತಿರುವ ಕೊಳಕು ನೀರಿನದು? ಎಂಬುದು!

ಮುಂದೆ ಸಾಗಿದೆ... ಸಾ.. ಗಿ.. ದೆ.. ಆದರೆ, ದೃಷ್ಟಿ ಮಾತ್ರ ಮನಸ್ಸಿನ ಒತ್ತಡಕ್ಕನುಸಾರವಾಗಿ ಒಮ್ಮೆ ರಸ್ತೆಯ ಎದುರುಗಡೆ... ಮತ್ತೊಮ್ಮೆ ಫುಟ್‌ರೆಸ್ಟಿನಲ್ಲಿದ್ದ ಪೀಲೂನ ಕಡೆ... ಹೀಗೆ ಸ್ಥಾನ ಪಲ್ಲಟಿಸುತ್ತಲೇ ಇತ್ತು. ಒಮ್ಮೆ ಏಕಾಏಕಿ ಎದುರಿಗೆ ಬಂದ ಟ್ರಕ್ಕೊಂದು ನನಗೆ ಇಂಚುಗಳ ಅಂತರದಲ್ಲಿಯೇ ತೀವ್ರಿಸಿ ಹೋದ ಮರುಗಳಿಗೆಯಲ್ಲಿ ಎದೆ ಧಸಕ್ ಎಂದು ಮೈ ಝಳುಪಿತು. ಅಬ್ಬಾ! ಪೀಲೂನ ಅಂತಿಮ ಯಾತ್ರೆಯ ಜೊತೆ ನನ್ನದೂ... ಮುಗಿದೇ ಹೋಗುತ್ತಿತ್ತಲ್ಲ? ಎಂದು ಅರೆಗಳಿಗೆ ತಬ್ಬಿಬ್ಬಾದೆ. ಮತ್ತೆ ಸಾವರಿಸಿಕೊಂಡು ಸಾಗಿದೆ.

ಚಿಕಿತ್ಸಾಲಯ ಬಂತು. ಕುರಿ, ಎತ್ತು, ಮೇಕೆ. ನಾಯಿ, ಎಮ್ಮೆ ಮುಂತಾದವುಗಳೊಂದಿಗೆ ಕೆಲವು ಜನರೂ ಇದ್ದರು. ಗಾಡಿಯಿಂದಿಳಿದು "ಬಾ ಪೀಲೂ’ ಅಂದೆ. ಅಂತಿಮ ಘಟ್ಟದಲ್ಲೂ ಪೀಲೂ ಲಗುಬಗೆಯಿಂದ ಇಳಿಯಹೋಗಿ ಕೆಳಗೆ ಬಿದ್ದು ಬೇಗ ಎದ್ದು ನಿಲ್ಲಲಾಗಲಿಲ್ಲ. ಅದನ್ನು ನೋಡಿ ಜನ ನನ್ನ ಬಗ್ಗೆ ಏನೆಂದುಕೊಂಡರೋ ಏನೋ... ಅದನ್ನೆತ್ತಿ ಮೈದಡವಿದೆ. ಇನ್ನು ಸ್ವಲ್ಪೇ ಸಮಯದಲ್ಲಿ ಹೆಣವಾಗಲು ಸಿದ್ಧವಾಗಿದ್ದ ಅದರ ಹಿರಿಮೆ ಗರಿಮೆಗಳನ್ನು ನಾಲ್ಕು ಜನರಿಗೆ ತೋರಿಸಿ ಕೊಡಬೇಕೆಂಬ ನನ್ನ ಧಿಮಾಕಿಗೇನೂ ಕಡಿಮೆ ಇರಲಿಲ್ಲ.

ಡಾಕ್ಟರ್ ಹತ್ತಿರ ಹೋಗಿ "ಸಾರ್ ನಮಸ್ಕಾರಾ’ ಎಂದೆ, "ನಮಸ್ಕಾರ, ಇಂಜಕ್ಷನ್ ಸಿರೀಂಜ ತಂದೀರಲ್ಲ? ನಾ ಸ್ವಲ್ಪ ಮೀಟಿಂಗ್ ಮುಗಿಸಿಕೊಂಡ ಬರ್‍ತೀನಿ, ಅಲ್ಲೀವರೆಗೂ ಕಾಯ್ಬೇಕ ನೋಡ್ರಿ’ ಎಂದು ಲಗುಬಗೆಯಿಂದ ಹೊರಟು ಹೋದರು ವೈದ್ಯಾಧಿಕಾರಿ ಡಾ. ಅನಿಲ ಪಾಟೀಲ. ನಾನು ಅಲ್ಲಿಯೇ ಗಿಡದ ಬುಡದಲ್ಲಿದ್ದ ಕಲ್ಲು ಹಾಸಿಗೆಯ ಮೇಲೆ ಪೀಲೂನನ್ನು ಕರೆದುಕೊಂಡು ಕುಳಿತೆ.
ನಮ್ಮ ಪೀಲೂಗೆ ಆಗ ಹನ್ನೊಂದು ವರ್ಷ. ಎಷ್ಟೋ ದಿನಗಳಿಂದ ಅದರ ಹೊಟ್ಟೆಯ ಭಾಗದಿಂದ ಯೋನಿದ್ವಾರದವರೆಗೆ ಹರಡಿದ ಟ್ಯೂಮರ್ ಗಡ್ಡೆಯ ರಕ್ತಸಿಕ್ತ ದಪ್ಪ ಹುಣ್ಣಿನ ಭಾಗ ಸ್ವಲ್ಪ ಕೆಳಮುಖವಾಗಿ ಜೋತು ಬಿದ್ದುದಾಗಿತ್ತು. ಈ ಹುಣ್ಣು ರೂಪಾಯಿ ಅಗಲದ್ದಿದ್ದಾಗಿನಿಂದಲೂ ನನ್ನವಳಿಗೆ ಗೊತ್ತಿತ್ತಂತೆ. ನನಗೂ ಎರಡು ಮೂರುಬಾರಿ ಹೇಳಿದ್ದಳಂತೆ. ಆದರೆ ಅದನ್ನು ನನ್ನ ಕಿವಿಗಳು ಗ್ರಹಿಸಿರಲೇ ಇಲ್ಲ. ಅದು ನನ್ನ ಸ್ವಭಾವ ದೋಷ. ಸಾಕಿದ ಪ್ರಾಣಿ... ಅದೂ ನಾಯಿ! ಕೂಡ್ರು ಅಂದ್ರೆ ಕೂಡ್ರಬೇಕು. ಏಳು ಅಂದ್ರೆ ಏಳಬೇಕು. ಅಂದ್ರೇನೇ ಎಲ್ಲರಿಗೂ ಖುಶಿ ತಾನೆ? ನನಗೂ ಅಷ್ಟೆ! ಆದರೆ, ಅದರ ಯೋಗಕ್ಷೇಮದ ಹೊಣೆ ಮಾತ್ರ ಸುತರಾಂ ಬೇಡ ಎನ್ನುವ ಮನೋಭಾವ ನನ್ನದಾಗಿತ್ತು.

ಅದೇ ಸಮಯಕ್ಕೆ ನನ್ನ ಮನಸ್ಸು ಬೆಂಗಳೂರಿನ ಕಡೆ ತಿರುಗಿತ್ತು. ನನ್ನವಳಿಗೂ ಬೇಸಿಗೆಯ ರಜೆ. ನನಗೂ ಬೇರೆ ಬೇರೆ ಕೆಲಸಗಳೂ ಇದ್ದವು. ಮೂರೂ ಮಕ್ಕಳು ಕೂಡಾ ಅಲ್ಲೇ ಇದ್ದ ಕಾರಣ ಒಂದು ತಿಂಗಳವರೆಗೆ ಅಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದೆವು.
ಇತ್ತ, ತುಂಬಿದ ಮನೆ. ಎಕ್ಸ್‌ಟೆನ್ಷನ್ ಏರಿಯಾ ಬೇರೆ! ಇದ್ದ ಅಲ್ಲೊಂದು ಇಲ್ಲೊಂದು ಮನೆಗಳಲ್ಲಿ ನಮ್ಮದೂ ಒಂದು. ಪಕ್ಕದಲ್ಲಿ ನಮ್ಮ ಆತ್ಮೀಯರದೊಂದು. ಎರಡೂ ಮನೆಗಳ ಸುತ್ತ ಖಾಲಿ ಸೈಟುಗಳಲ್ಲಿ ಎದೆಯೆತ್ತರ ಬೆಳೆದ ಹುಲ್ಲು-ಕಂಟಿಯ ಪೊದೆ. ಹೀಗಾಗಿ, ಮನೆಯಲ್ಲಿ ಯಾರೂ ಇಲ್ಲದಂತೆ ಅಷ್ಟು ದಿನಗಳವರೆಗೆ ಬಿಟ್ಟು ಹೋಗುವಂತಿರಲಿಲ್ಲ. ಮನೆಗೆ ಒಬ್ಬರು ಬೇಕೇಬೇಕಿತ್ತು. ಪೀಲೂಯೇನೋ ಇತ್ತು. ಆದರೂ ಮಾಮೂಲಿನಂತೆ ಪಕ್ಕದ ಮನೆ ಚಂದೂಗೆ ಮನೆಯನ್ನೊಪ್ಪಿಸಿ ಬೆಂಗಳೂರಿಗೆ ಹೋಗಿದ್ದೆವು.
ಚಂದು ಫೋನ್ ಮೂಲಕ ಆಗಾಗ ಮನೆ ಕಡೆ ಯೋಗಕ್ಷೇಮ ಮಾತಾಡ್ತಾ ಇದ್ದ. ಪೀಲೂನ ಟ್ಯೂಮರ್ ಹೆಚ್ಚು ಹೆಚ್ಚು ಬೆಳೆಯುತ್ತ ಹೋದದ್ದು ಅವನಿಗೆ ಹೇಗೆ ಲಕ್ಷಕ್ಕೆ ಬರಬೇಕು? ನನಗೂ ಅದರ ಬಗ್ಗೆ ಕೇಳಬೇಕೆಂಬ ಅರಿವಿರಲಿಲ್ಲ. ಆದರೆ ಇವಳೇ ಕೇಳಿದಾಗ "ಹ್ಞಾ, ಚೊಲೋ ಐತಿರೀ. ಆದರ ಏನ ಹಾಕಿದರೂ ಅದು ಸರಿಯಾಗಿ ತಿನ್ನಾಕ ತಯಾರಿಲ್ಲರಿ. ಬರೇ ಹಾಲೂ ಬಿಸ್ಕಿಟ್ ಹಾಕಾತೀನಿ. ಹೊಳ್ಳಾಮಳ್ಳಾ ನಿಮ್ ಬೆಡ್‌ರೂಂ ಬಾಗಲಕ ಹೋಗಿ ನಿಂತು ಕೊಯ್‌ಕೊಯ್ ಮಾಡತೈತಿರಿ. ಒಮ್ಮೊಮ್ಮೆ ಅಶ್ವಿನಿಯಕ್ಕಾನ ಅಂಡರ್‌ಗ್ರೌಂಡ್ ಬೆಡ್‌ರೂಮಿಗೂ ಹೋಗಿ ಹೋಗಿ ಹೊಳ್ಳಿಬಂದು, ಮುಖ ಸಪ್ಪಗ ಮಾಡಿಕೊಂಡು ನಿಂದರತೈತಿರಿ’ ಎಂದಿದ್ದ.

"ನಾಯಿ ಇದೆ, ಎಚ್ಚರಿಕೆ !’ ಎಂಬ ಬೋರ್ಡನ್ನು ಗೇಟಿಗೆ ತೂಗು ಹಾಕುವ ಬಯಕೆ ನನಗೂ ಬಹಳ ವರ್ಷಗಳಿಂದ ಇತ್ತು. ನಾನು ಹೇಳಿದಂತೆ ಕೇಳಿಕೊಂಡಿರುವ ನಾಯಿಯನ್ನು ಕೊಂಡು ತಂದಾದರೂ ಸಾಕಬೇಕು. ಅದು ಮನೆಯ ಯಜಮಾನನಿಗೊಂದು ಪ್ರತಿಷ್ಠೆಯ ಕುರುಹು ಎಂದು ಆಗಾಗ ಯೋಚಿಸಿ ಕನಸು ಕಂಡಿದ್ದೆ. ಅಂತೂ ಬಹು ದಿನದ ನನ್ನ ಕನಸು ಕೊನೆಗೊಮ್ಮೆ ಪುಕ್ಕಟೆಯಾಗಿ ನನಸಾಗಿ ಬಿಡಬೇಕೆ? ಅಂದರೆ, ದೀಡೆರಡು ತಿಂಗಳ ವಯಸ್ಸಿನ ನಾಯಿಮರಿಯೊಂದು ಒಮ್ಮೆ ಕುಯ್ಗುಡುತ್ತ ನಮ್ಮ ಮನೆಯ ಗೇಟಿಗೇ ಬಂದು ನಿಂತಿತ್ತಂತೆ. ಹೀಗೆ ಬಂದುದನ್ನು ಗಮನಿಸಿದ ನನ್ನವಳು ಅದನ್ನೆತ್ತಿ ಮುದ್ದು ಮಾಡಿ ಮನೆಯಲ್ಲಿ ಇಟ್ಟುಕೊಂಡಿದ್ದಳು. ಮಕ್ಕಳೂ ಕುಣಿದಾಡಿದ್ದವು.

ಮನೆಯಲ್ಲಿ ಸಂಗೀತ ವಾತಾವರಣ. ಹೀಗಾಗಿ ಹಿರಿಯ ಮಗಳು ಶ್ರೀದೇವಿ ಅದಕ್ಕೆ ತನ್ನ ಅಚ್ಚುಮೆಚ್ಚಿನ ರಾಗ "ಪೀಲೂ’ ಎಂತಲೇ ಕರೆಯಹತ್ತಿದಳು. ಮಗ ಪ್ರಮೋದನೂ ಅಷ್ಟೇ. ಮುದ್ದು ಮುದ್ದಾದ ಬೆಕ್ಕಿನ ಮರಿಯನ್ನು ತಂದು ಅದಕ್ಕೆ "ಪೂರ್ವಿ’ ಎಂದು ಕರೆದ. ಪೀಲೂ-ಪೂರ್ವಿ ಅನ್ಯೋನ್ಯವಾಗಿ ಹೊಂದಿಕೊಂಡಿದ್ದವು. ಸದಾ ಕಾಲಕ್ಕೂ ಪೀಲೂನ ಮೇಲೆಯೇ ಪೂರ್ವಿಯ ಸುಖನಿದ್ರೆ. ಅಕ್ವೇರಿಯಂ ಸ್ವಚ್ಛಗೊಳಿಸುತ್ತಿದ್ದಾಗ ಮೀನುಗಳನ್ನು ಬೇರೊಂದು ನೀರಿನ ಪಾತ್ರೆಯಲ್ಲಿ ತೆಗೆದಿಟ್ಟಾಗಲೂ ಪೀಲೂ-ಪೂರ್ವಿ ಬಾಯಿ ನೀರೂರಿಸಿಕೊಳ್ಳದೇ ಅವುಗಳ ಈಜಾಟ ನೋಡಿ ನಲಿಯುತ್ತಿದ್ದವು. ತಮ್ಮದೇ ಧ್ವನಿಯಲ್ಲಿ ಸಂತಸ  ವ್ಯಕ್ತಪಡಿಸುತ್ತಿದ್ದವು. ಪೂರ್ವಿಗೆ ಬೇರೆ ಬೆಕ್ಕುಗಳಿಂದ ಗಂಡಾಂತರ ಒದಗಿದಾಗ ಪೀಲೂ ಅದರ ಅಂಗರಕ್ಷಣೆಯಲ್ಲಿ ತನ್ನ ಕಣ್ಣಿನ ಹಂಗುದೊರೆದು ಹೋರಾಡುತ್ತಿತ್ತು.

ಕೆಲವು ತಿಂಗಳ ನಂತರ ಪೂರ್ವಿ ಅನಾರೋಗ್ಯದಿಂದ ಸತ್ತು ಹೋಯಿತು. ಈ ಸಂಗತಿ ನಮಗಿಂತಲೂ ಪೀಲೂನ ಮನಸ್ಸಿನ ಮೇಲೇ ಆಘಾತವಾಗಿ ಅದು ಎಷ್ಟೋ ದಿನಗಳವರೆಗೆ ಸರಿಯಾಗಿ ಊಟ ಮಾಡಲಿಲ್ಲ. ಹೊರಗೆ ಎಲ್ಲಿಯಾದರೂ ಮ್ಯಾವ್ ಮ್ಯಾವ್... ಧ್ವನಿ ಕೇಳಿಬಂದರೆ ಸಾಕು ಓಡಿ ಹೋಗಿ ನಿರಾಶೆಯಿಂದ ವಾಪಸ್ ಆಗುತ್ತಿತ್ತು. ಬೆಕ್ಕು ನಾಯಿಗಳ ನೇರ ವೈರತ್ವದ ಸ್ವಾಭಾವಿಕತೆಗೆ ಪ್ರತಿಯಾಗಿ ಇಲ್ಲಿ ಪರಸ್ಪರ ಅಂತಃಕರುಣದ ಮನೋಭಾವ ಪ್ರತಿಷ್ಠಾಪಿಸಿದ್ದನ್ನು ಕಂಡು.. ದಿಗ್ಭ್ರಾಂತನಾಗಿ... ಪೀಲೂನ ಭಾವ ಸ್ಪಂದನಕ್ಕೆ ಮನದಲ್ಲಿಯೇ ಪ್ರತಿ ವಂದಿಸಿದ್ದೆ!

ಕೆಲವು ದಿನಗಳ ನಂತರ ಮನೆಯಲ್ಲಿ ಇಲಿಗಳ ಉಪಟಳವೂ ಹೆಚ್ಚಾಯಿತು. ಪೀಲೂನ ಮನಸ್ಸೂ ಜಡವಾಗಿತ್ತು. ಕಾರಣ.. ಮತ್ತೊಂದು ಪೂರ್ವಿಯನ್ನು ತರಬೇಕಾಯಿತು. ಅದು ಪೀಲೂನೊಂದಿಗೆ ಮೊದಮೊದಲು ಸಾಕಷ್ಟು ಕಾಲುಕೆದರಿತು. ಆದರೆ ಪೀಲೂನ ನಯವಂತಿಕೆಯ ಪರಿಣಾಮದಿಂದ ಅದೂ ಕೂಡ ಅಷ್ಟೇ ಬೇಗ ಹೊಂದಿ ಕೊಂಡಿತು. ಬೆಳಗಿನ ಎಂಟು, ಸಂಜೆಯ ಆರು ಗಂಟೆಯಾದರೆ ಮುಗಿಯಿತು ಪೀಲೂ ಪೂರ್ವಿ ಎರಡೂ ಎಲ್ಲಿದ್ದರೂ ಓಡಿಬರುತ್ತಿದ್ದವು. ಆ ಸಮಯಕ್ಕೆ ಅವುಗಳಿಗೆ ಬಿಸ್ಕಿಟ್ ಹಾಗೂ ಪೆಡಿಗ್ರೀ ಹಾಕದಿದ್ದರೆ ಅವುಗಳ ಆರ್ಭಟ ನೋಡಬೇಕು! ಪೂರ್ವಿಯಂತೂ ಚೀರುಧ್ವನಿಯಿಂದ ತಲೆ ಚಿಟ್ಟು ಹಿಡಿಸಿಬಿಡುತ್ತಿತ್ತು. ಪೀಲೂನ ಜಿಗಿದಾಟ ತೇಕಾಟ ನೋಡಬೇಕು! ಆಗಿನ ಸಂದರ್ಭದಲ್ಲಿ ಮನೆಯಲ್ಲಿದ್ದವರ ಕಾಲಿನ ಹಿಂಬಡಗಳು ಗಟ್ಟಿಯಾಗಿರಬೇಕಿತ್ತಷ್ಟೆ. ಆದರೂ ಆ ಸಮಯಕ್ಕೆ ಮನೆಯಲ್ಲಿ ಇವಳಿದ್ದರೇ ಖುಶಿಯನ್ನುವಂತಿತ್ತು ಪೀಲೂ ಪೂರ್ವಿಗಳ ಮನೋಭಾವ. ನಂತರ ವಾಕಿಂಗಿಗಾಗಿ ನಾನೇ ಬೇಕಾಗುತ್ತಿತ್ತು. ಪೂರ್ವಿಯೂ ಬೆನ್ನುಹತ್ತಿ ಬಂದು ಅರ್ಧ ದಾರಿಗೇ ಕೈಕೊಟ್ಟು ಮನೆಗೆ ಬಂದು ಬಿಡುವದು ವಾಡಿಕೆಯಾಗಿತ್ತು.

ವಾರಕ್ಕೊಮ್ಮೆ ಪೀಲೂನ ಸ್ನಾನದ ಹೊಣೆ ಇವಳದೇ ಆಗಿತ್ತು. ಒಮ್ಮೆ ಬೆಂಗಳೂರಿಂದ ಬಂದ ನನ್ನ ಕಿರಿಯ ಮಗಳು ಅಶ್ವಿನಿಯಂತೂ, ಜೋಡಿಸಿಟ್ಟುಕೊಂಡ ತನ್ನೆರಡೂ ಕಾಲುಗಳ ಮೇಲೆ ಪೀಲೂನನ್ನು ಮಲಗಿಸಿ ಮಕ್ಕಳಿಗೆ ಎರೆಯುವಂತೆ ಸೋಪು ಹಚ್ಚಿ, ನೀರು ಹಾಕಿ, ಮೈತಿಕ್ಕಿ, ಎದುರು ಬದುರಿನ ಕಾಲುಗಳನ್ನು ಜಗ್ಗಿ?ಕೂಡಿಸಿ ಸ್ವಚ್ಛವಾದ ಅರಿವೆಯಿಂದ ಮೈ ಒರೆಸಿ ಬಿಸಿಲಿಗೆ ಕಳಿಸಿದ್ದಳು. ಪ್ರತಿಸಲದ ಸ್ನಾನದ ನಂತರ ಟೆರೆಸ್ ಮೇಲೆ ಹೋಗಿ ಮೈ ಒಣಗಿಸಿಕೊಂಡು ಬಂದ ನಂತರ ಬಣ್ಣದ ಕೊರಳಪಟ್ಟಿ ಕಟ್ಟಿಸಿಕೊಳ್ಳದಿದ್ದರೆ ಅದಕ್ಕೆ ಏನೋ ಒಂದು ರೀತಿಯ ಅಸಮಾಧಾನ. ಆ ಮಟ್ಟಿಗೆ ಅದು ತನ್ನ ಪ್ರತಿಷ್ಠೆಗೆ ಕುಂದು ಎಂದುಕೊಳ್ಳುತ್ತಿತ್ತೋ ಏನೋ ಕಟ್ಟಿದಾಗಲೆ ನೆಮ್ಮದಿಯಿಂದಿರುತ್ತಿತ್ತು. ರಾತ್ರಿ ಮಾತ್ರ ಕೊರಳಪಟ್ಟಿಯ ಜೊತೆ ಚೈನಿನ ಗೋಜೇ ಬೇಡವಾಗುತ್ತಿತ್ತು ಅದಕ್ಕೆ. ಬಹುಶಃ ಕಂಪೌಂಡಿನ ಸುತ್ತ ಗಸ್ತು ತಿರುಗಲು ಫ್ರೀ ಬೇಕಾಗುತ್ತಿತ್ತಲ್ಲ... ಅದಕ್ಕೆ ಇರಬೇಕು.

ಸುಮಾರು ಏಳು ವರ್ಷಗಳ ನಂತರ ಒಂದು ದಿನ, ರಾತ್ರಿ ಎರಡು ಗಂಟೆ ಸುಮಾರಿಗೆ ಇದ್ದಕ್ಕಿಂದ್ದಂತೆ ಪೀಲೂ ಜಬರ್ದಸ್ತಾಗಿ ಚಾಲೇಂಜಿಂಗ್ ಧ್ವನಿ ಹೊರಡಿಸಹತ್ತಿತು. ನಾನು ನಿದ್ದೆಯ ಭರಾಟೆಯಲ್ಲಿದ್ದೆ. ನನ್ನವಳು "ಏನ್ರಿ, ಪೀಲೂ ಯಾಕೋ ಒಂಥರಾ ಒದರಾಕಹತ್ತೇತಿ ನೋಡೇಳ್ರಿ’ ಅಂದಳು. "ಏ..., ಹೋಗ, ಅದು ಹಂಗ... ಒದರೂದಯೇಳ್ ಸುಮ್ಮಕ್ಕೋ’ ಎಂದೆ. ಸುಮ್ಮನಾದಳು. ಸ್ವಲ್ಪ ಹೊತ್ತಿನ ನಂತರ ಮತ್ತೆ ಇವಳು ಪುನಃ ನನಗೆ ಪೀಡಿಸಿದಾಗ "ಏ... ನೀನ ಎದ್ದ ನೋಡ ಹೋಗು’ ಎಂದು ಮೈಗಳ್ಳತನದ ಸಿಡುಕಿನಿಂದ ಮಗ್ಗಲು ಬದಲಾಯಿಸಿದೆ. ಇವಳು, ತನಗಂತೂ ಬಿಡದ ಕರ್ಮವೆಂದುಕೊಳ್ಳುತ್ತ ಹೋಗಿ ನೋಡಿ, ಮತ್ತೆ ಮರುಗಳಿಗೆಗೆ "ಏನ್ರೀ... ಹಿತ್ತಲಕಡೆ ಗ್ರಿಲ್ಲಿನ ಹತ್ರ ಹಾವ್ ಬಂದೈತಿ ಬರ್ರಿಲ್ಲೇ, ಲಗೂ ಎದ್ದ ಬರ್ರಿ!’ ಎಂದು  ಏರು ಧ್ವನಿಯ ಗತ್ತಿನಲ್ಲಿ ಮೆತ್ತಗೆ ಕೂಗಿದಳು. ನಾನು ಗೊಣಗುತ್ತ ಎದ್ದು ಹೋಗಿ ನೋಡಿದೆ... ಅರ್ಧ ಮಾರುದ್ದದ ನಾ..ಗ..ರ.. ಹೆಡೆಯೆತ್ತಿ ಭುಸಗುಡುತ್ತಿದೆ! ಸ್ವಲ್ಪ ದೂರದಲ್ಲಿ ಪೀಲೂ ತನ್ನ ಮುಂಗಾಲುಗಳನ್ನು ತೂರಿಸಿ ಜಪ್ಪಿಸಿ ಕುಳಿತು ಕೆಂಗಣ್ಣಿನಿಂದ ದ್ವೇಷ ಕಾರುತ್ತ ನನ್ನನ್ನೊಮ್ಮೆ ಅದನ್ನೊಮ್ಮೆ ನೋಡುತ್ತ-ಬೊಗಳುತ್ತ, ಹಾವು ಮುಂದೆ ಚಲಿಸದಂತೆ ತಡೆ ಹಿಡಿದಿತ್ತು. ನಂತರ ಹಾವೇ ನಿಧಾನ ಕಂಪೌಂಡಿನ ಮೋರೆಗೆ ಸರಿದು ಕಾಣದಾದಾಗ ನನ್ನ ಎದೆ ಬಡಿತ ಕ್ರಮೇಣ ಶಾಂತವಾಗಿತ್ತು.

ಕೊಂಚ ಸಮಯದ ನಂತರ ಮತ್ತೆ ನನ್ನವಳು "ನನಗ... ಒಮ್ಮಿದ್ದೊಮ್ಮಲೇ ಎದ್ದಿದ್ದಕೋ ಏನೋ ತಲಿ ಸುತ್ತಿದಂಗ ಆಗಾಕ ಹತ್ತೇತ್ರೀ...’ ಎಂದು ಐವತ್ತರ ನರಳಿಕೆ ಬಿಂಬಿಸುತ್ತ "ಏನ್ರಿ... ಪಾಪ... ಪೀಲೂಗ ಸ್ವಲ್ಪ ಹಾಲರ ಹಾಕಿ ಬಂದ ಮಲಕೋಳ್ರಿ’ ಎಂದಾಗ "ಏ..., ಹೊಗಾ, ಹ್ಯಾಂಗಿದ್ರೂ ಎದ್ದಿದ್ದಿ, ಹಾಕಿ ಬಾ’ ಎಂದಾಗ ಮತ್ತೆ ಅವಳೇ ಎದ್ದು "ಸಣ್ಣಂದಿರತಲೆ ಒಂದಿನಾನಾರ ಮಕ್ಕಳಿಗೆ ಒಂದ ಉಣಸೂದನಲಿಲ್ಲಾ, ತಿನಸೂದನಲಿಲ್ಲಾ... ಒಂದಿನಾನಾರಾ ಹೆಂಗದೀ ಪುಟ್ಟಿ, ಹೆಂಗದೀ ಪುಟ್ಟಾ ಅಂತ ಕೇಳ್ಳಿಲ್ಲಾ ಮಾಡಲಿಲ್ಲ. ಬರೇ ನಿಮ್ಮ ಸಾಹಿತ್ಯ, ಪೆನ್ನು, ಪೇಪರು, ಕುಂಭಕರ್ಣನ ನಿದ್ದಿ ಇದರಾಗ ಹೋತ ನಿಮ್ಮ ಜೀವ್ನ... ಇನ್ನ ಇದಕ್ಕ ಹಾಲ ಹಾಕ ಅಂದ್ರ ಹಾಕತೀರಾ ನೀವು, ನನ್ನ ಕರ್ಮ? ಎಂದು ಪೇಚಾಡುತ್ತ ಹೋಗಿ ಪ್ರತ್ಯುಪಕಾರದ ಮನೋಭಾವದಿಂದ ಪೀಲೂಗೆ ಸಮಾಧಾನಪಡಿಸಿ ಮತ್ತೆ ಬಂದು ಮಲಗಿದ್ದಳು.

ನಿಜವಾಗಿಯೂ ಪೀಲೂ ಮನೆಯ ಮಗಳಿಗಿಂತಲೂ ಹೆಚ್ಚಿನದಾಗಿತ್ತು. ಮನೆಯಲ್ಲಿ ಯಾರೇ ಅನಾರೋಗ್ಯದಿಂದ ಬಳಲುತ್ತ ಮಲಗಿರಲಿ... ಅದು ಅವರ ಹತ್ತಿರ ಹೋಗಿ ಓರೆಮುಖ ಮಾಡಿಕೊಂಡು ದೀನ ದೃಷ್ಟಿಯಿಂದ ನೋಡುತ್ತ ಕುಳಿತು ಬಿಡುತ್ತಿತ್ತು. ಆ ಸಮಯದಲ್ಲಿ ಅದಕ್ಕೆ ತಿನ್ನಲು ಏನು ಕೊಟ್ಟರೂ ತಿನ್ನುತ್ತಿದ್ದಿಲ್ಲ. ಹೊರಗೆ ಹೋಗೆಂದರೂ ಹೋಗುತ್ತಿದ್ದಿಲ್ಲ, ಗದರಿಸಿದಾಗ ಮಾತ್ರ ಅನಿವಾರ್ಯವೆಂಬಂತೆ ಎದ್ದು ನಿದಾನವಾಗಿ ಹೋಗುತ್ತಿತ್ತು. ಅದನ್ನು ಕಾಡಲು ನಿದ್ದೆಯ ಸೋಗು ಹಾಕಿದರೂ ಸಾಕು, ಅವರಲ್ಲಿಗೆ ಹೋಗಿ ಮುಂಗಾಲಿನಿಂದ ತಡಕಾಡಿ ಎಬ್ಬಿಸಲು ಪ್ರಯತ್ನಿಸುತ್ತಿತ್ತು.

ಮಾನವ ಸಂಬಂಧದ ಮಾನಸಿಕ ತುಡಿತ-ಮಿಡಿತಗಳನ್ನೂ ಮೀರಿದ ಸಂವೇದನಾಶೀಲತೆ ಪ್ರಾಣಿಗಳಲ್ಲೂ ಇರುತ್ತದೆಂದು ಕೇಳಿದ ಅಚ್ಚರಿಗೆ ನಮ್ಮ ಪೀಲೂನೇ ಜೀವಂತ ಸಾಕ್ಷಿಯಾದಾಗ... ಕಾಣದ ದೇವರನ್ನು ಪ್ರತ್ಯಕ್ಷ ಕಂಡಂತಾಗಿತ್ತು!
ಹೀಗೆ, ಒಂದೇ ಎರಡೇ... ಪೀಲೂನ ಬಗ್ಗೆ ಅದೆಷ್ಟು ಹೇಳಿದರೂ ಕಡಿಮೆಯೇ! ಹೇಳಿದ ಹಾಗೆ ಕೇಳುವ ಪ್ರಾಣಿಯ ಮೇಲೆ ಅಧಿಕಾರ ಚಲಾಯಿಸುವುದೆಂದರೆ ಸಾಮಾನ್ಯವಾಗಿ ಮನುಷ್ಯ ಜಾತಿಗೆ ಖುಷಿಕೊಡುವ ವಿಷಯವೇ. ಪ್ರತಿಯಾಗಿ ಅವೂ ಕೂಡ ಖುಷಿ ಪಡುತ್ತಿರುತ್ತವೆಯೋ ಅಥವಾ... ಶೋಷಣೆಗೆ ಒಳಗಾಗುತ್ತಿರುತ್ತವೆಯೋ ದೇವರಿಗೇ ಗೊತ್ತು. ಒಮ್ಮೊಮ್ಮೆ ಪ್ರಮೋದ, ಅಶ್ವಿನಿಯಂತೂ ಪೆನ್ನು, ನ್ಯೂಸ್‌ಪೇಪರ, ಚೆಂಡು ಮುಂತಾದ ವಸ್ತುಗಳನ್ನು ಎಸೆಯುವ ಮತ್ತೆ ತರಿಸುವಲ್ಲಿ ರಿಂಗ್ ಮಾಸ್ಟರ್ ಆಗಿಬಿಡುತ್ತಿದ್ದರು. ಅದನ್ನು ನೋಡಿ ನೋಡಿ ಬೇಸತ್ತ ಇವಳು "ಪಾಪ, ಏನ್ ಅದರ ಗೋಳು ಹೊಯ್ಕೋತೀರಿ ಬಿಡ್ರೋ...’ ಎಂದರೂ ಬಿಡುತ್ತಿರಲಿಲ್ಲ. ಪೀಲೂನೇ ಕೆಲಹೊತ್ತು ಅವರು ಹೇಳಿದಂತೆಯೇ ಕೇಳಿ ಕೇಳಿ ಕೊನೆಗೊಮ್ಮೆ ಮುಖ ತಿರುವಿಕೊಂಡು ಹೊರಟರೆ ಮುಗಿಯಿತು... ಯಾರಿಗೂ ಸೊಪ್ಪೇ ಹಾಕುತ್ತಿದ್ದಿಲ್ಲ. ಕೊನೆಯಲ್ಲಿ ತಮಗೇ ಮುಖಭಂಗವಾಗಿ ಸುಮ್ಮನಾಗಿ ಬಿಡುತ್ತಿದ್ದರು.

"ಅಂಡರ್‍ಗ್ರೌಂಡ್‌ ರೂಮಿನ್ಯಾಗ ಅಕ್ಕಾ ಸ್ಟಡಿ ಮಾಡಾಕ ಹತ್ಯಾಳ ಹೋಗಿ ಊಟಕ್ಕ ಕರಕೊಂಡ ಬಾ ಅಪ್ಪಿ’ ಎಂದು ಇವಳು ಆಗಾಗ ಹೇಳದಾಕ್ಷಣ ಕುಂಯ್‌ಗುಡುತ್ತ ಪುಟು ಪುಟು ಓಡಿ ಹೋಗಿ ಕರೆದು ಬರುತ್ತಿತ್ತು. ಒಮ್ಮೆಯಂತೂ ಇವಳು "ಟೆರೇಸ್ ಮೇಲೆ ಹೋಗು ಪೀಲೂ. ಅಲ್ಲೆ ಸಂಡಿಗಿ ಒಣಗಸಾಕ ಇಟ್ಟಬಂದೀನಿ. ಅಲ್ಲೇ ಇರು’ಎಂದಾಗ, ಸ್ಟೆಪ್ಸ್ ಹತ್ತಿ ಸರಸರ ಹೋಗಿ, ಮತ್ತೆ ಕರೆಯುವವರೆಗೂ  ಅಲ್ಲಿಯೇ ಇತ್ತು.

ಮನೆಯಲ್ಲಿ ಸಂಗೀತದ ಬೈಠಕ್ ನಡೆದಾಗ ಪೀಲೂಗಂತೂ ಎಲ್ಲಿಲ್ಲದ ಆಸಕ್ತಿ! ತಬಲಾ ಪೇಟಿಯ ಧ್ವನಿ ಕೇಳದಾಕ್ಷಣ ನಿದಾನಕ್ಕೆ ಬಂದು ಅದೂ ಬೈಠಕ ಮಾಡಿಯೇ ಬಿಡುತ್ತಿತ್ತು. ಶ್ರೀದೇವಿಯ ರಾಗಾಲಾಪಕ್ಕೆ ಅದರ ಸ್ಪಂದನೆಯಂತೂ ಬೆರಳು ಕಚ್ಚಿಸುವಂಥಾದ್ದಾಗಿತ್ತು. ಅವಳ ಸ್ವರ ತಾರಕಕ್ಕೆ ಮುಟ್ಟುತ್ತಿದ್ದಂತೆ ಅದರ ಮುಖವೂ ಸ್ವರದ ಗತ್ತಿಗನುಸಾರ ಎಡದಿಂದ ಮೇ..ಲೆ ಮೇ...ಲೆ... ಹೊರಳುತ್ತಿತ್ತು. ಮಂದಶೃತಿಗೆ ಮತ್ತೆ ಯಥಾ ಸ್ಥಿತಿಗೆ ಬರುತ್ತಿತ್ತು.

ಕಾಲೊನಿಯ ಮಕ್ಕಳೊಂದಿಗೆ ಪೀಲೂ ಅಕ್ಕರೆಯ ಸಲಿಗೆಯಿಂದಿರುತ್ತಿತ್ತು. ಅಷ್ಟೇ ಶಿಸ್ತಿನದೂ ಆಗಿತ್ತು. ಪೂರ್ವಿ ಆಟಕ್ಕೆ ಬಿದ್ದು ಗಲಾಟೆ ಮಾಡಹತ್ತಿದರೆ ಪೀಲೂ ಕೋಪೋದ್ರಿಕ್ತವಾಗಿ ಬೊಗಳುವಿಕೆಯಿಂದಲೇ ಅದನ್ನು ತಣ್ಣಗಾಗಿಸುತ್ತಿತ್ತು. ಗೇಟಿನ ಮುಂದೆ ಯಾರಾದರೂ ಪದೇ ಪದೇ ಓಡಾಡಿದರೆ ಸಾಕು ಕೋಪ ನೆತ್ತಿಗೇರುತ್ತಿತ್ತು. ಪರಿಚಿತರೇ ಆಗಲಿ ಗೇಟ್ ತೆರೆದು ಒಳಗೆ ಬಂದರೆ ಸರಿ, ಅದು ಬಿಟ್ಟು ವಿನಾ ಕಾರಣ ಗೇಟ್ ಸಪ್ಪಳ ಮಾಡಿದರೆ ಅಥವಾ ಅಲ್ಲಿಯೇ ನಿಂತು ಜೋರಾಗಿ ಮಾತಾಡಿದರೆ ಅವರಿಗೆ ಇದು ತನ್ನ ಕೈ ತೋರಿಸಿಯೇ ಬಿಡುತ್ತಿತ್ತು. ಹರಿದ ಇಲ್ಲವೆ ಮಲಿನ ಬಟ್ಟೆ ಹಾಕಿಕೊಂಡು ಗೇಟಿನ ಮುಂದೆ ಸುಳಿದಾಡಿದರೆ ಸಾಕು ಒಂದೇ ಸವನೇ ತನ್ನ ಆಕ್ರೋಶ ವ್ಯಕ್ತ ಪಡಿಸುತ್ತಿತ್ತು. ಅಪರಿಚಿತರನ್ನಂತೂ ಒಳಗೆ ಬಿಡುತ್ತಲೇ ಇರಲಿಲ್ಲ. ಮನೆಯಲ್ಲಿ ಯಾರದೋ ಪರವಾನಿಗೆ ಸಿಕ್ಕಮೇಲೆ ಕೈಯನ್ನು (ಕಾಲನ್ನು) ಎತ್ತಿ ಥ್ಯಾಂಕ್ಸ್ ಕೊಟ್ಟು ಸ್ವಾಗತಿಸಲು ಮುಂದಾಗುತ್ತಿತ್ತು. ಥ್ಯಾಂಕ್ಸ್ ಪಡೆದ ಎಷ್ಟೋ ಜನರಿಂದ ಪೀಲೂ ಪ್ರಶಂಸನೆಗೆ ಒಳಗಾಗುತ್ತಿತ್ತು. ಅದರ ಜೊತೆಗೆ ನಾವೂ ಕೂಡ. ಥ್ಯಾಂಕ್ಸ್ ಕೊಡುವ ಅದರ ಭಾವವನ್ನೂ ಅರಿಯದ ಮತ್ತೆ ಕೆಲ ಕೆಲವರಿಂದ ಒಮ್ಮೊಮ್ಮೆ ಅದು ತೇಜೋವಧೆಗೊಂಡಂತಾಗಿ ಮುಖ ಸೊಟ್ಟಗೆ ಮಾಡಿಕೊಂಡೂ ಕುಳಿತು ಬಿಡುತ್ತಿತ್ತು. ಅಂಥ ಸಂದರ್ಭಗಳಲ್ಲಿಯ ಪೀಲೂನ ಮಾನಸಿಕ ಪರಿಣಾಮ ಮನೆಯವರಿಗೂ ಆಗಿರುತ್ತಿದ್ದುದು ಸಹಜವಲ್ಲವೆ?

ನಾನು ಗಾಡಿ ಹೊರಗೆ ತೆಗೆದರೆ ಸಾಕು ಓಡಿ ಬಂದು ಫುಟ್‌ರೆಸ್ಟ್‌ನಲ್ಲಿ ನಿಲ್ಲುತ್ತಿತ್ತು. ಬೇಡ ಪೀಲೂ ಇಳಿ ಅಂದರೂ ಕೇಳುತ್ತಿದ್ದಿಲ್ಲ ಮಕ್ಕಳ ಹಾಗೆ ಹಟ ಮಾಡುತ್ತಿತ್ತು. ಅಲ್ಲಿಯೇ ಒಂದು ರೌಂಡ್ ಹೋಗಿ ಬಂದಾಗ ಮಾತ್ರ ಇಳಿದು ಸುಮ್ಮನೇ ಹೋಗುತ್ತಿತ್ತು. ಒಮ್ಮೊಮ್ಮೆ ನಾನೇ ಮುದ್ದಾಂ ಮಾರ್ಕೆಟ್ಟಿಗೆ ಕರೆದೊಯ್ಯುತ್ತಿದ್ದೆ. ಅಲ್ಲಿ ಯಾವುದೋ ಅಂಗಡಿಗೆ ಹೋಗಿ ಬರುವ ಪ್ರಸಂಗವಿದ್ದಾಗ "ಪೀಲೂ ಇಲ್ಲೇ ಸೀಟ್ ಮೇಲೆ ಕೂತಿರು, ಬರ್‍ತೀನಿ’ ಎಂದಾಕ್ಷಣ ಜಿಗಿದು ಸೀಟ್ ಮೇಲೆ ಹತ್ತಿ, ನಾನು ತಿರುಗಿ ಬರುವವರೆಗೂ ಅಲ್ಲೇ ಕೂಡ್ರುತ್ತಿತ್ತು.

ಮೂರು ಮರಿಗಳ ಒಂದು ಶೂಲದ ನಂತರ ಬಿಡಾಡಿ ನಾಯಿಗಳ ಕಾಟ ತಾಳಲಾರದೇ ಅದಕ್ಕೆ ಬರ್ಥ್‌ ಕಂಟ್ರೋಲ್ ಆಪರೇಶನ್ ಮಾಡಿಸಿಕೊಂಡು ಬಂದಿದ್ದೆ. "ಪೂರ್ತಿ ಗರ್ಭಕೋಶ ತೆಗೆದರೆ ತಲೆ ವಿಭ್ರಮವಾಗುತ್ತದೆ, ಹಾಗೆ ಮಾಡಬಾರದು ನಾಟ್ ಹಾಕಿ ಬರ್ಥ್‌ ಕಂಟ್ರೋಲ್ ಆಗುವ ಹಾಗೆ ಮಾಡ್ತೀವಿ’ ಎಂದು, ಹಾಗೇ ಮಾಡಿದ್ದರು ವೈದ್ಯರು. ಅದರಿಂದ ನಮ್ಮ ಉದ್ದೇಶ ಸಫಲವಾಗಲಿಲ್ಲ. ಒಮ್ಮೊಮ್ಮೊಮ್ಮೆಯಂತೂ ಪೀಲೂನನ್ನು ಹಿತ್ತಲು ಕಡೆ ಇರಿಸಿ ಗ್ರಿಲ್ ಹಾಕಿದ್ದರೂ ಅಲೆದಾಟದ ಗಂಡು ನಾಯಿಗಳು ಅದರ ಕಾಮವಾಸನೆ ಹಿಡಿದು, ಕಂಪೌಂಡ್ ಜಿಗಿಜಿಗಿದು ಗ್ರಿಲ್ಲಿನ ಚಿಕ್ಕ ಚಿಕ್ಕ ಕಿಂಡಿಗಳಲ್ಲಿ ಹೊಕ್ಕು-ಸಿಕ್ಕು, ನನ್ನಿಂದಲೇ ಚನ್ನಾಗಿ ಥಳಿಸಿಕೊಂಡು ಮತ್ತೆ ವಾಪಸ್ ಪಾರಾಗುವಲ್ಲಿ ಹರಸಾಹಸ ಪಟ್ಟಿದ್ದನ್ನು ನೆನೆಸಿಕೊಂಡರೆ ಈಗಲೂ ಮುಜುಗುರವೆನಿಸುತ್ತದೆ!

ಮೊದಲೇ ಕಂಗಾಲಾದ ಗಂಡು ನಾಯಿಗಳು! ಎಲ್ಲಿ ನನ್ನ ಮೇಲೇ ಎಗರಿ ಬಿಟ್ಟಾವಲ್ಲಾ ಎಂಬ ಭಯದಿಂದಲೂ ನಾನೇ ಹಿಂದೆ ಸರಿದು ಬಿಟ್ಟದ್ದೂ ಉಂಟು. ಒಂದೊಂದು ಸಲವಂತೂ ಪೀಲೂನನ್ನು ಎಷ್ಟು ಬಂಧನದಲ್ಲಿರಿಸಿದರೂ ತಾನೇ ನಮ್ಮ ಕಣ್ತಪ್ಪಿಸಿ ಓಡಿ ಹೋಗಿ, ಹೊರಗೆ ಜೊಲ್ಲು ಸುರಿಸುತ್ತ ನಿಂತ ತನ್ನ ಬಳಗದೊಂದಿಗೆ ಒಂದಾಗಿ ಬರುತ್ತಿತ್ತು. ಹೀಗೆ ವರ್ಷಕ್ಕೆರಡು ಬಾರಿ ಹತ್ತು ಹನ್ನರಡು ದಿನಗಳ ಅವಯವರೆಗೆ ಹಗಲು ರಾತ್ರಿ ತಲೆ ಚಿಟ್ಟೆಂದು ಬಿಡುತ್ತಿತ್ತು. ಮಾಡುವುದೇನು? ಪ್ರಕೃತಿ ಧರ್ಮ! ಲೆಕ್ಕ ಬಿಟ್ಟರೆ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳೂ ಮಹಾಮಾರಿ ರೋಗಕ್ಕೆ ತುತ್ತಾಗುವ ಭಯ ಇರುತ್ತದಲ್ಲ... ಎಂಬುದೂ ಒಳಗಿನ ಕೊರಗು!
***
ಅಂತೂ ಇಂತೂ ಏನಾಯಿತೋ ಏನೋ ಪೀಲೂನ ಹೊಟ್ಟೆಯ ಭಾಗಕ್ಕಾದ ದುಡ್ಡಿನಾಕಾರದ ಹುಣ್ಣು ಅಂಗೈಯಾಕಾರಕ್ಕೂ ತಿರುಗಿದ್ದು ನಂತರ ಚಂದೂನಿಂದ ತಿಳಿಯಿತು. ಇವಳೋ ಚಟಪಡಿಸಹತ್ತಿದಳು. "ಮೊದಲು ಊರಿಗೆ ಹೋಗೂನ ನಡೀರಿ. ಪೀಲೂಗ ದವಾಖಾನಿಗೆ  ಕರಕೊಂಡು ಹೋಗಿ ಬರ್ರಿ ಅಂತಾ ಮೊದ್ಲ’ ಎಷ್ಟು ಹೇಳಿದರೂ ಕೇಳಲಿಲ್ಲ ನೀವು. ಮಕ್ಕಳ ಅಜಾರಿ ಬಿದ್ದರ ಒಂದಿನಾನೂ ಜವಾಬ್ದಾರಿಯಿಂದ ಅವರ್‍ನ ಡಾಕ್ಟರಿಗೆ ತೋರಿಸೂದಾಗಲಿ, ಔಷಧಿ ಕೊಡಿಸೂದಾಗಲಿ ಮಾಡಿದವರಾ ನೀವು? ಆಯುರ್ವೇದಾ ಆಯುರ್ವೇದಾ ಅಂತ ವೇದಾಂತಾ ಹೇಳಿಕೋಂತಾ ಅದನ್ನ ತಿನಬೇಕು ಇದನ್ನ ತಿನಬೇಕು, ಕಷಾಯಾ ಕುಡೀಬೇಕು, ಬೇರ ತೇಯ್ದ ಹಚಗೋಬೇಕು, ಕಾವ ಕೊಟಗೋ ಬೇಕು, ಹಾಂಗ ಮಾಡಬೇಕು ಹೀಂಗ ಮಾಡಬೇಕು ಅಂತ ಬರೇ ಪುರಾಣಾನಾ ಓದಿಕೋಂತಾ ಬಂದರಿ, ನಾನೂ ನೋಡಾಕಹತ್ತೀನಿ ಹತ್ತೀನಿ... ನಮ್ಮ ಮದುವಿ ಆಗಿ ಮೂವತ್ತ ವರ್ಷ ಆತು, ಎದಿ ಉದ್ದ ಮಕ್ಕಳು ಬೆಳದ ನಿಂತರೂ ಒಂದಿನಾನಾದ್ರೂ ಅವರ ಬೇಕು ಬೇಡಾ ಕೇಳಲಿಲ್ಲ. ನಡಿ ನಡಿರಿ ಶ್ಯಾಣ್ಯಾರದೀರಿ. ನೀವು ಬರಲಿಕ್ಕರ ನಾ ಒಬ್ಬಾಕೆರ ಹೋಗತೀನಿ. ಹ್ಯಾಂಗಿದ್ದರೂ ನಮ್ಮ ಸಾಲಿನೂ ಚಾಲೂ ಆಗಾಕ ಬಂತು. ಪಾಪ, ಪೀಲೂ ಹ್ಯಾಂಗೈತೋ ಏನೋ’ ಎಂದು ಮುಖ ಕಿರಿದಾಗಿಸಿದಾಗ ನನಗೆ ಬೇರೆ ದಾರಿಯೇ ಇರಲಿಲ್ಲ. ಅವಳ ಬೆನ್ನಗೆ ಬಿದ್ದು ಬೆಳಿಗ್ಗೆ ಧಾರವಾಡಕ್ಕೆ ಬಂದೆ.

ಅಂದೇ ಪಿಲೂನನ್ನು ಕೃಷಿ ವಿಶ್ವವಿದ್ಯಾಲಯದ ಪಶುವೈದ್ಯ ಚಿಕಿತ್ಸಾಲಯಕ್ಕೆ ಕರೆದೊಯ್ಯಲು ಸಿದ್ಧತೆ ಮಾಡಿಕೊಂಡು "ಬಾ ಪೀಲೂ ಕೂಡಬಾ’ ಎಂದು ಕರೆದಾಗ ಎದ್ದು ಜೋತಾಡುತ್ತ ಕೈನೆಟೆಕ್ ಹೊಂಡಾದ ಫುಟ್ರೆಸ್ಟ ಹತ್ತಲು ಮುಂದಾಯಿತು. ಮತ್ತೆ, ಇವಳೇ ಬಂದು ಎತ್ತಿ ಕೂಡಿಸಿದಳು. ಅದಕ್ಕೆ ಸರಿಯಾಗಲಿಲ್ಲವೋ ಏನೋ ಎದ್ದು ನಿಂತಿತು. "ನಿಲ್ಲ ಬೇಡಾ, ಕೂಡು ಪೀಲು’ ಎಂದೆ. ಮತ್ತೆ ತಾನೇ ಕುಳಿತುಕೊಂಡಿತು. ಗಾಡಿ ಸ್ಟಾರ್ಟ್‌ ಮಾಡಿ ಕೃಷಿ ವಿ.ವಿ. ಕಡೆ ಸಾಗಿದೆ.

"ಹೌದು, ನನ್ನವಳು ಅಂದಹಾಗೆ ಮಕ್ಕಳನ್ನು ಹಸುಗೂಸುತನದಿಂದಲೇ ಜೋಪಾನ ಮಾಡುವದೂ ಒಬ್ಬ ತಂದೆಯಾದವನ ಗುರುತರ ಜವಾಬ್ದಾರಿ. ಆದರೆ, ನನ್ನ ಮೂರು ಮಕ್ಕಳಲ್ಲಿ ಒಂದಕ್ಕಾದರೂ ನಾನು ಪ್ರಾಮಾಣಿಕವಾಗಿ ಅವರ ಇಷ್ಟಗಳನ್ನು ಪೂರೈಸಿರುವೆನೇ? ಅವರ ಶಿಕ್ಷಣ, ಆರೋಗ್ಯ, ನಡುವಳಿಕೆ ಯಾವುದರಲ್ಲಾದರೂ ಆಸಕ್ತಿಯಿಂದ ಅವರ ಭವಿಷ್ಯವನ್ನು ರೂಪಿಸಲು ಮುಂದಾದೆನೇ? ಬರೀ ನನ್ನದು, ನಾನು ನನ್ನದು, ನಾನು, ಎಂತೆಲೆ ನನ್ನದೇ ಗುಂಗಿನಲ್ಲಿ ಆಯುಸ್ಸನ್ನು ವ್ಯಯಿಸಿದೆನಲ್ಲಾ!? ಎಂಬ ಪ್ರಶ್ನೆಗಳು ನನ್ನನ್ನು ಮತ್ತೆಮತ್ತೆ ಚುಚ್ಚುತ್ತಲೇ ಇದ್ದವು. ಸಾಕಿದ ನಾಯಿ... ತನ್ನ ಪ್ರಾಣಿತನವನ್ನು ಕಳೆದುಕೊಂಡು ಮನುಷ್ಯರ ತರಹ ನಡೆದುಕೊಳ್ಳುತ್ತ್ತಿರ ಬೇಕಾದರೆ... ನಾನು ಮನುಷ್ಯತನವನ್ನು ಅಳಿಸಿಕೊಂಡು ಪ್ರಾಣಿತನವನ್ನು ರೂಢಿಸಿಕೊಳ್ಳುತ್ತಿರುವೆನೇನೋ ಎನ್ನಿಸಿತು. ಹೀಗೆ, ಮನುಷ್ಯರಿಗಿಂತಲೂ ಚುರುಕಾಗಿ, ಆಜ್ಞಾಧಾರಕವಾಗಿ ಅಕ್ಕ ಪಕ್ಕದವರೆಲ್ಲರ ಮೆಚ್ಚಿನದಾಗಿ ಬಾಳಿ ಬದುಕುತ್ತಿದ್ದ ಸಭ್ಯ ಪ್ರಾಣಿ ಪೀಲೂಗೆ ಆ ಕಟುಕ ದೇವರು ಅದೆಷ್ಟು ಅನ್ಯಾಯಿಸಿದನಲ್ಲಾ...? ಎಂದು ಪ್ರತಿಯಾಗಿ ಶಪಿಸುತ್ತಲೇ ಮುನ್ನಡೆದಾಗ ಪಶು ಚಿಕಿತ್ಸಾಲಯ ಬಂದೇ ಬಿಟ್ಟಿತ್ತು.

 ಅಲ್ಲಿ, ಡಾ. ಅನಿಲ್ ಪಾಟೀಲರು ಪೀಲೂನನ್ನು ಪರೀಕ್ಷಿಸಿ ಹೌಸ್ ಸರ್ಜನ್ಸಗಳನ್ನೆಲ್ಲ ಕರೆದು ತೋರಿಸಿದರು. ಅದರ ಬಗ್ಗೆ ವಿವರಣೆ ನೀಡಿ ಫೋಟೋ ಕ್ಲಿಕ್ಕಿಸಿಕೊಂಡ ಡಾಕ್ಟರು, ನನ್ನತ್ತ ತಿರುಗಿ "ಏನ್ರಿ ಇಷ್ಟ ದಿವ್ಸ್ ಏನ್ಮಾಡ್ತಿದ್ದಿರಿ? ಟ್ಯೂಮರ್‌ ಇಷ್ಟೆಲ್ಲ ಬಲ್ತು ಹೊಟ್ಟಿತುಂಬ ಆವರಿಸಿ ಬಿಟೈತಿ. ಆಪರೇಶನ್ ಮಾಡಿ ಸ್ಟಿಚ್ ಹಾಕಿದರೂ ಅಷ್ಟ ಸರಳ ಕೂಡಿಕೊಳ್ಳೋ ಜಾಗಾನೂ ಅಲ್ಲ ಇದು...’ ಎನ್ನುತ್ತ, ತಮ್ಮ ವಿದ್ಯಾರ್ಥಿ ವೈದ್ಯರಿಗೆ ಮತ್ತೆ ಕೇಸ್‌ ಬಗ್ಗೆ ವಿವರಿಸೋದಕ್ಕೆ ಪ್ರಾರಂಭಿಸಿದರು. ಅವರೆಲ್ಲ ತಮ್ಮ ಹ್ಯಾಂಡ್‌ಬುಕ್ಕಿನಲ್ಲಿ ಏನೇನೋ ಟಿಪ್ಪಣೆ ಮಾಡಿಕೊಂಡರು.

ಡಾಕ್ಟರು ಮತ್ತೆ "ಹ್ಞಾ, ಮುಂದಿನ ಸೋಮವಾರ ಆಪರೇಶನ್ ಇಟ್ಕೊಳ್ಳೋಣ, ಆಗಬಹುದಾ? ಆಪರೇಶನ್ ಮಾತ್ರ ಪ್ರೀಆಫ್ ಚಾರ್ಜಲ್ಲೇ ಮಾಡ್ತೀವಿ. ಆದರ ಅದಕ್ಕ ಬೇಕಾದಂಥಾ ಇಂಜೆಕ್ಶನ್, ಬ್ಯಾಂಡೇಜ್‌, ಔಷಧಿ ಮಾತ್ರ ನೀವ ತರಬೇಕು. ಹ್ಯಾಂಗ?’ ಎಂದು ನನ್ನ ಒಪ್ಪಿಗೆಗೂ ಕಾಯದೆ ಇಂಜೆಕ್ಶನ್ ಲಾಕ್ಸಿಯಾನ್, ಝೈಲಾಕ್ಸಿನ್, ಕೆಟ್ರಾಮೈನ್, ಕ್ರೋಮಿಕ್ ಕ್ಯಾಟ್ಗೆಟ್, ಮೆರ್ಸಿಲಿಸ್ ಸುತಾರೆ, ರೋಲಿಕ್ಸ್‌ಗ್ಯಾಂಗ್, ಪಾವಿಡೊನ್ ಅಯೋಡಿನ್, ಬಿ. ಪಿ. ಬ್ಲೇಡ್ಸ್, ಸೇವಿಂಗ್ ಬ್ಲೇಡ್ಸ್ ಮುಂತಾದವುಗಳನ್ನು ಚಕ ಚಕನೆ ಬರೆದಾದ ಪ್ರ್ರಿಸ್ಕ್ರಿಪ್ಷನ್ ಚಿಟ್ ನನ್ನ ಕೈಗಿಟ್ಟರು.

ಅದೇ ಸಮಯಕ್ಕೆ ಒಬ್ಬ ಸಿಪಾಯಿ ಬಂದು "ತೊಗೊಳ್ರಿ ಈ ಸನಬ ತೊಗೊಂಡು ಅದರ ಬಾಯಿಗೆ ಕಟ್ಟರಿ. ಇಂಜೆಕ್ಶನ್ ಮಾಡಬೇಕು’ ಎಂದ. ಅವನು ಹೇಳಿದಂತೆ ಪೀಲೂನ ಬಾಯಿಗೆ ಸನಬು ಕಟ್ಟಿ ಹಿಡಿದುಕೊಂಡೆ. ಹಾಗೆ ನೋಡಿದರೆ ನಮ್ಮ ಪೀಲೂಗೆ ಇದೆಲ್ಲ ಅನವಶ್ಯಕವಾಗಿತ್ತು. ಆದರೆ ಅವರು ಕೇಳಬೇಕಲ್ಲ? ಕಚ್ಚಿಗಿಚ್ಚೀತೆಂಬ ಭಯ ಅವರಿಗೆ. ಆದರೆ, ಅದಕ್ಕೆ "ಕಚ್ಚು’ ಶಬ್ದದ ಅರ್ಥವೇ ಗೊತ್ತಿರಲಿಲ್ಲ. ಅಂತೂ, ಎಡಬಲ ಚಪ್ಪೆಯ ಭಾಗಕ್ಕೊಂದೊಂದು ಇಂಜೆಕ್ಶನ್ ಮಾಡಿದರೂ "ಕೊಯ್ಕ್’ ಅನ್ನಲಿಲ್ಲ ಪೀಲೂ. ಅಲ್ಲಿಯ ಸಿಬ್ಬಂದಿ ವರ್ಗಕ್ಕೂ ಇದರ ಸ್ವಭಾವ ಗೊತ್ತಾಯಿತು.

ಅಂದು- "ಏನ್ರೀ ಇವತ್ತು ಪೀಲೂನ ಆಪರೇಶನ್ ಐತಿ! ಇಲ್ಲೆ ಒಂಭತ್ತ ಗಂಟೆ ಆತು. ಎಂಟಕ್ಕ ಬಾ ಅಂತ ಹೇಳ್ಯಾರಂದಿದ್ದಿರಿ.. ಇನ್ನೂ ಹಾಸಗ್ಯಾಗ’ ಅದೀರಲ್ಲ. ಯಾವಾಗ ಹೋಗಾವರು... ಏನತಾನಾ.. ನೋಡರಿ. ಎಂದಿದ್ದರೂ ಇಷ್ಟ? ಆತ್ತೊಗೊರಿ ನಿಮ್ದೂ, ಮಕ್ಕಳ ಕಾಳಜೀನ ಅಪರೂಪ ನಿಮಗ. ಇನ್ನ ಈ ಪೀಲೂಂದಂದ್ರೇನು? ಏನರ ಮಾಡಿಕೊಳ್ರಿ ನನಗಂತೂ ಸಾಲಿಗೆ ಹೊತ್ತಾತು ಹೋಗ್ತೀನಿ ನೋಡ್ರಿ’ ಎಂದು ಬಿರಬಿರನೆ ಹೋಗೇ ಬಿಟ್ಟಿದ್ದಳು ನನ್ನವಳು.

ಆಮೇಲೆ, ನಾನು ಹಾಸಿಗೆಯಿಂದೆದ್ದು ಸ್ನಾನ ವಗೈರೆ ಮಾಡಿ ರೆಡಿಯಾದೆ. ಮೊದಲೇ ತಂದಿಟ್ಟಿದ್ದ ಔಷಧಿ ಪೊಟ್ನದೊಂದಿಗೆ ಪೀಲೂನನ್ನು ಕೈನೆಟಿಕ್ ಹೊಂಡಾದಲ್ಲಿ ಕೂಡ್ರಿಸಿಕೊಂಡು ಆಸ್ಪತ್ರೆಗೆ ಬಂದೆ. ಡಾಕ್ಟರ್ ನನ್ನನ್ನು ನೋಡಿ "ಏನ್ರಿ... ಎಂಟು ಗಂಟೆಕ ಬರ್ರಿ ಅಂದ್ರ ಹತ್ತ ಗಂಟೆಕ ಬಂದ್ರೆಲ್ಲಾ! ಹನ್ನೊಂದಕ್ಕ ನನಗ ಕ್ಲಾಸ್ ಐತಿ. ಮತ್ತೆಂದಾದರೂ ಇಟಗೊಳ್ಳೂನು ಈಗ ಬ್ಯಾಡಾ’ ಅಂದರು. ಈ ಯಕ್ಕಶ್ಚಿತ ನಾಯಿಯ ಸಲುವಾಗಿ ಮನೆಯಲ್ಲೂ ಬೈಸಿಕೊಂಡೆ ಇಲ್ಲಿಯೂ ಬೈಸಿಕೊಂಡೆ... ಏನಪ್ಪಾ ಇದು ನನ್ನ ಕರ್ಮ ಎಂದುಕೊಂಡು "ಇವತ್ತ ಮಾಡಿ ಬಿಡ್ರಿ ಸಾರ್ ಮತ್ತೆ ನನಗ ಕೆಲಸ ಭಾಳದಾವು’ ಎಂದು ಗೋಗರೆದೆ. ಅಂತೂ ತಮ್ಮ ಟೈಮಿಂಗಿನಲ್ಲಿ ಏನೇನೋ ಅಡ್ಜಸ್ಟ್‌ ಮಾಡಿಕೊಂಡು ಎಂಥದೋ ಪೇಪರಿಗೆ ಸೈ ಹಾಕಿಸಿಕೊಂಡರು. "ಮಾಡೂ ಪ್ರಯತ್ನ ಮಾಡ್ತೀವಿ. ಮಿಕ್ಕಿದ್ದು ಅವನಿಗೇ ಬಿಟ್ಟದ್ದು’ ಎಂದು ಪೀಲೂನನ್ನು ಒಳಗೆ ಒಯ್ದರು. ಆಪರೇಶನ್ ಮಾಡುವದನ್ನು ನಾನೂ ನೋಡಬೇಕೆಂದಿದ್ದೆ ಡಾಕ್ಟರ್ ಒಪ್ಪಲಿಲ್ಲ.

ಒಂದು ಗಂಟೆಯ ನಂತರ, ಅದೇ ಸಿಪಾಯಿ ಬಂದು "ನಿಮ್ಮ ನಾಯಿ ಅಲ್ಲೈತಿ ನೋಡ್ರಿ ಹೊಟ್ಯಾನ ಗಡ್ಡಿ ತೆಗದಿಟ್ಟಾರಲ್ಲೆ. ಅದು ಸುದ್ದಾಗಿ ಬರ್ಲಿ. ಇನ್ನೊಂದ ಅರ್ಧಾ ತಾಸ ಬಿಟ್ಟು ಒಯ್ಯುವಂತ್ರಿ ಅದಕ್ಕ ಬ್ಯಾಂಡೇಜ ಮಾಡಿ ಕೊಡತೀನಿ’ ಎಂದ. ನಾಲಿಗೆಯನ್ನು ಓರೆಯಾಗಿ ಹೊರಚಾಚಿಕೊಂಡು ಸತ್ತ ಹಾಗೆ ಬಿದ್ದುಕೊಂಡಿತ್ತು ಪೀಲೂ. ಅಲ್ಲಿಯೇ ಉಚ್ಚೆಯನ್ನೂ ಹೊಯ್ದುಕೊಂಡಿತ್ತು. ನನ್ನದೆಯಲ್ಲಿ ಸಣ್ಣಗೆ ನಡುಕ ಪ್ರಾರಂಭವಾಗಿತ್ತು. ಅರ್ಧ ಗಂಟೆಯ ನಂತರ ಸಿಪಾಯಿ ಬ್ಯಾಂಡೇಜ್‌ ಮಾಡಿ ಪೀಲೂನ್ನು ನನ್ನ ಗಾಡಿಯ ಫುಟ್‌ರೆಸ್ಟಿನಲ್ಲಿಟ್ಟು ಕೊಡಲು ಸಹಕರಿಸಿದ. ನಾನು, ಅವನಿಗೆ ಥ್ಯಾಂಕ್ಸ್ ಹೇಳಿ ಹೊರಟಿದ್ದೆ ಅಷ್ಟರಲ್ಲಿ "ಎಂಟು ದಿನಾ ಬಿಟ್ಟ್ ಕರ್‍ಕೊಂಡ ಬರಬೇಕು. ಅಲ್ಲೀತನಾ ನೀವ... ಎಲ್ಲಾ ಕ್ಲೀನ್ ಆಗಿ ಮೆಂಟೇನ್ ಮಾಡಿ ಔಷಧಿ ಹಚ್ಚರಿ, ಇಲ್ಲಾಂದ್ರ ದಿನ ಬಿಟ್ಟ ದಿನಾ ಕರ್‍ಕೊಂಡ ಬರ್ರಿ ನಾವ... ಎಲ್ಲಾ ಮಾಡ್ಸಿ ಕೊಡತೀವಿ’ ಎಂದ ಡಾಕ್ಟರ್ ಮತ್ತೆ ಒಳಗೆ ಹೋದರು. ನಾನು ಮನೆಗೆ ಬಂದೆ.

ಸಾಯಂಕಾಲ ಇವಳು ಮನೆಗೆ ಬಂದಾಗ ಪೀಲೂನ ಆಪರೇಶನ್ ಸಕ್ಸಸ್ ಬಗ್ಗೆ ಕೇಳಿ ಖುಶಿ ಪಟ್ಟಳು. ಡಾಕ್ಟರ್ ಹೇಳಿದ್ದನ್ನು ಚಾಚೂ ತಪ್ಪದೆ ಹೇಳಿದೆ... ಪ್ರಾರಂಭಿಸಿ ಬಿಟ್ಟಳು ಮಹಾರಾಯ್ತಿ "ಮಾಡ್ತೀರಿ ಮಾಡ್ತೀರಿ. ಕ್ಲೀನಾಗಿ ಮೆಂಟೇನ್ ಮಾಡ್ತೀರಿ. ಮೂರ ಮಕ್ಕಳ ಡೆಲಿವರಿಯಾದರೂ (ತವರು ಮನೆಯಲ್ಲಲ್ಲ) ಅವುಗಳ ನೆತ್ತಿಗೆ ಹನಿ ಎಣ್ಣಿ ಕಾಣಲಿಲ್ಲ... ತಲೀಗೆ ಚರಗಿ ನೀರ ಮುಟ್ಟಲಿಲ್ಲ, ಒಣಾ ನೆತ್ತೀಲೆ ದೊಡ್ಡುವಾದವು ಪಾ..ಪ.. ಅವು. ಅಂದಿಲ್ಲಿಂದಿಲ್ಲ... ಈಗ ಮೆಂಟೇನ್ ಮಾಡತೀರಾ’ ಮಾಡಿದಾಂಗಾತ ಬಿಡ ನೀವ್...’ ಎಂದು ಮಂಗಳಾರತಿ ಎತ್ತಿಯೇ ಬಿಟ್ಟಳು. "ಏ...! ಅದೆಲ್ಲ ನನಗ ಆಗೂದಿಲ್ಲ ನೋಡ, ದಿನಾ ಬಿಟ್ಟ ದಿನಾ ಯಾಕ, ಡೇಲಿ ಬೇಕಾರ ಹೋಗಿ ಡ್ರೆಸ್ಸಿಂಗ್ ಮಾಡಿಸಿಕೊಂಡ ಬರ್ತೀನಿ’ ಎಂದಾಗ "ಹ್ಞಾ ! ಹೋಕ್ಕೀರಿ ಹೋಕ್ಕೀರಿ. ರಿಟಾಯ್ಡ್‌ ಆಗಿದೀರಿ ನೋಡ ಮತ್ತ’ ಕೆಲಸರ ಏನೈತಿ ನಿಮಗ? ಅಡ್ಡಾಡಡ್ಡಾಡರಿ ಪೆಟ್ರೋಲ್ ಸುಟಗೋಂತಾ, ಪೆಟ್ರೋಲ್ಸೋವೀನೂ ಐತಿ’ ಎನ್ನುತ್ತಿದ್ದಾಗ "ಲೇ... ಒದೀತೀನ್ನೋಡಾ ಮತ್ತೆ ನಿನ್‌ನಿನ್ನ...’ ಎಂದಾಕ್ಷಣ "ಉಂಡಗಿಂಡ ಗಟ್ಯಾಗಿ ಆಮ್ಯಾಲ ಒದಿವಂತ್ರೇಳ, ಮೊದ್ಲು ಚಾ ಕುಡಿರಿ’ ಎಂದು ಚಹಾದ ಕಪ್ಪನ್ನು ಟೀಪಾಯ್ ಮೇಲಿಟ್ಟು ನಗುತ್ತ ಒಳಗೆ ಹೋದಳು.

ಟೀಪಾಯ್ ಮೇಲಿದ್ದ ರಿಮೋಟ್ ಬಟನ್ ಒತ್ತಿದೆ. ನ್ಯಾಶನಲ್ ಜಿಯೊಗ್ರಾಫಿಕ್ ಚಾನೆಲ್ ಹಾಕಿ ಚಹಾ ಹೀರಲು ಪ್ರಾರಂಭಿಸಿದೆ... ಹಸಿರುವನ, ಸ್ವಚ್ಛ ಜಲ, ಸ್ವೇಚ್ಛೆಯಿಂದ ಓಡಾಡಿಕೊಂಡಿದ್ದ ಹಲವಾರು ಸುಂದರವಾದ ಪೆಂಗ್ವಿನ್ ಪಕ್ಷಿಗಳ ಮನಮೋಹಕ ದೃಶ್ಯ! ನನ್ನವಳೂ ಬಂದು ಬಾಯಿ ತೆರೆದುಕೊಂಡೇ ನೋಡಹತ್ತಿದಳು. ಒಂದು ಪೆಂಗ್ವಿನ್ ತತ್ತಿಯ ಮೇಲೆ ಕುಳಿತು ಕಾವು ಕೊಡಲು ಹವಣಿಸುತ್ತಿರುವ ದೃಶ್ಯ "ಝೂಮ್’ ಆಯಿತು. ಅದನ್ನು ನೋಡಿ ನನ್ನವಳ ಕುತೂಹಲ ಕೆರಳಿತು. "ಅಯ್ಯೊ ನೋಡ್ರಲ್ಲೇ... ಎಂದು’ ಗಟ್ಟಿಯಾಗಿ ಹಲ್ಲು ಕಚ್ಚಿ ಉಸರು ಎಳೆದುಕೊಂಡಿದ್ದಳು. ಜೊತೆಗೆ ಸುಂದರ ಮಹಿಳೆಯೊಬ್ಬಳ ನಿರೂಪಣೆಯಲ್ಲಿ "ತತ್ತಿಗಳಿಗೆ ಕಾವು ಕೊಡುವ ಕೆಲಸ ಗಂಡು ಪೆಂಗ್ವಿನ್‌ಗಳದು ಹೆಣ್ಣು ಆಹಾರಕ್ಕಾಗಿ ಹೊರಗೆ ಹೋಗುವದು. ನಂತರ ಮರಿತೆಗೆಯುವ ಹಾಗೂ ಅವುಗಳ ಲಾಲನೆ ಪೋಷಣೆಯನ್ನು ಗಂಡು- ಹೆಣ್ಣು ಪೆಂಗ್ವಿಗಳು ಸಮಾನವಾಗಿ ವಹಿಸಿಕೊಂಡಿರುತ್ತವೆ’ ಎಂಬ ವಿಚಿತ್ರ ಸಂಗತಿಯ ಸಾರಾಂಶ ಭಿತ್ತರಗೊಂಡಿತು. ನಾನು... ಸತ್ತೇ ಹೋದೆ. ಮತ್ತೆಲ್ಲಿ ಇವಳು ನನ್ನ ಮೇಲೆ ಸವಾರಿ ಹಾಕುವಳೋ ಎನ್ನುತ್ತಿರುವಾಗಲೇ ವಿದ್ಯುತ್ ಕಟ್ಟಾಗಿ ಟಿ.ವಿ ಆಫ್ ಆಗಿಬಿಟ್ಟಿತು! ಮತ್ತೆ ಬದುಕಿಕೊಂಡೆ. ಇವಳು... ವಿದ್ಯುತ್ ಇಲಾಖೆಯನ್ನು ಹಾಡಿ ಹರಸುತ್ತ ಕ್ಯಾಂಡಲ್‌ಗಾಗಿ ಕತ್ತಲಲ್ಲಿಯೇ ಕೈಯಾಡಿಸಹತ್ತಿದ್ದಳು.

ನನ್ನವಳದು ನನ್ನ ಮೇಲೆ ಡಾಮಿನೇಟ್ ಮಾಡುವ ಸ್ವಭಾವವಂತೂ ಅಲ್ಲವೇ ಅಲ್ಲ. ಆದರೆ, ನನ್ನನ್ನು ಕಟ್ಟಿಕೊಂಡು ಕಹಿಯುಂಡಿದ್ದನ್ನು ಆಗಾಗ ಕಕ್ಕುತ್ತಾ ಇರುತ್ತಾಳೆ ಅಷ್ಟೆ! ಹಳ್ಳಿಯ ಹೈಸ್ಕೂಲೊಂದರಲ್ಲಿ ನಾನು ಶಿಕ್ಷಕನಾಗಿದ್ದಾಗಲೇ ಮೂರೂ ಮಕ್ಕಳು ಹುಟ್ಟಿದ್ದವು. ಯಾವುದೇ ಕೆಲಸಕ್ಕಾಗಲಿ... ನೀರು ತಂದು ಹಾಕಲೂ ಆಳು ಸಿಗುತ್ತಿರಲಿಲ್ಲ ಆ ಊರಲ್ಲಿ. ಏನೇ ಮಾಡಿಸಿದರೂ ಶಾಲಾ ಮಕ್ಕಳಿಂದಲೇ ಮಾಡಿಸುವುದನ್ನು ಬಹುತೇಕ ಶಿಕ್ಷಕರು ರೂಢಿಸಿಕೊಂಡಿದ್ದರು. ಅದರಲ್ಲಿ ನಾನೂ ಒಬ್ಬ. ಮದುವೆಗೆ ಮುನ್ನವಂತೂ ಒಮ್ಮೊಮ್ಮೆ ಅವೂ ಕೈಕೊಟ್ಟಿದ್ದ ಸಂದರ್ಭದಲ್ಲಿ ನನ್ನ ತಾಯಿಯೇ ನೀರು ತರುವದು, ಗಿರಣಿಗೆ ಹೋಗಿಬರುವದು ಮಂತಾದವುಗಳನ್ನು ಮಾಡುತ್ತಿದ್ದಳು. ಅದನ್ನು ನೋಡಿ ಜನ ನನಗೆ "ಛಿ’ ಹಾಕಿಯಾರಲ್ಲ ಎಂದುಕೊಂಡು ಆಗೊಮ್ಮೆ ಈಗೊಮ್ಮೆ ನಾನೂ ಗೃಹಕೃತ್ಯ ನಿರತನಾಗುತ್ತಿದ್ದೆ. ಇದನ್ನು ಕಂಡು ಶಾಲೆಯ ಹುಡುಗ ಹುಡುಗೆಯರು ಮತ್ತು ಊರಿನ ದಾರಿಹೋಕರು ಮುಸಿ ಮುಸಿ ನಕ್ಕುಗಿಕ್ಕಾರಲ್ಲ ಎಂಬ ಒಣ ಸ್ವಾಭಿಮಾನ ಮಿಶ್ರಿತ ಭಯದ ನಾಚಿಕೆಯೂ ಇದ್ದೇ ಇತ್ತು.
ನಂತರ ಎರಡು ದಿನಕ್ಕೊಮ್ಮೆ ಪೀಲೂನ ಡ್ರೆಸ್ಸಿಂಗ್‌ ಮಾಡಿಸಿಕೊಂಡು ಬರಹತ್ತಿದೆ. ಸ್ಟಿಚ್ ಹಾಕಿದ್ದನ್ನು ಕಡಿಯದಂತೆ ನೋಡಿಕೊಳ್ಳಬೇಕು ಎಂದು ಡಾಕ್ಟರು ತಾಕೀತು ಮಾಡಿಯೂ ಆಗಿತ್ತು. ಆದರೆ ಅದೆಲ್ಲಿ ಕೇಳಬೇಕು ಎಂಟು ದಿನಗಳ ತರುವಾಯ ಸ್ಟಿಚ್ಚನ್ನೆಲ್ಲಾ ಕಡಿದುಕೊಂಡು ಬಿಟ್ಟಿತ್ತು. ಹೊಟ್ಟೆ ಭಾಗವೆಲ್ಲ ಓಪನ್ ಆಗಿ ಜೋತಾಡಹತ್ತಿತ್ತು. ಆದರೆ ಒಳಗಿನ ಭಾಗವೆಲ್ಲ ಕ್ಯೂರ್‌ ಆಗ್ತಾ ಇದೆ ಎಂದೂ ಡಾಕ್ಟರ್ ಹೇಳಿದ್ದರು. ಆದರೆ ಪದೇ ಪದೇ ನೆಕ್ಕುವ ಸ್ವಭಾವವಲ್ಲವೆ ಪ್ರಾಣಿಯದು? ಹೀಗಾಗಿ ಮುಂದೆ ಅದು ಕ್ಯೂಅರ್ ಆಗಲೇ ಇಲ್ಲ. ತಿಂಗಳುಗಟ್ಟಲೇ ಓಡಾಡಿದರೂ ಡ್ರೆಸ್ಸಿಂಗ್‌ ಮಾಡುವ ಸಿಪಾಯಿ ಶ್ರೀಕಾಂತ ಸ್ವಲ್ಪೂ ಬೇಸರ ಪಟ್ಟುಕೊಳ್ಳದೆ ಪೀಲೂನ ಆರೈಕೆ ಮಾಡುತ್ತಲೇ ಬಂದ. ಅಲ್ಲಿಯವರೆಗೂ ಅಂದರೆ ಪೀಲೂನ ಆರೈಕೆಯ ವಿಷಯವಾಗಿ ನನಗೂ ಓಡಾಡಿ ಓಡಾಡಿ ಸಾಕಾಗಿ ಹೋಗಿತ್ತು. ಅದು ಗುಣವಾಗುವ ಭರವಸೆಯಾದರೂ ಇದ್ದಿದ್ದರೆ ಮನಸ್ಸಿಗೆ ಅಷ್ಟು ಬೇಜಾರು ಅನ್ನಿಸುತಿರಲಿಲ್ಲ. ಆದರೆ, ಅಲ್ಲಿಯೂ ಸಂಪೂರ್ಣ ನಿರಾಸೆ ಕಾದಿತ್ತು.

ಮತ್ತೆರಡು ದಿನಗಳ ನಂತರ ಆಸ್ಪತ್ರೆಗೆ ಒಯ್ದಾಗ ಡಾ. ಅನಿಲ ಪಾಟೀಲರು ಪೀಲೂನನ್ನು ಪರೀಕ್ಷಿಸಿ "ಇನ್ನೇನ ಇದರ ಕಥಿ ಮುಗೀತು. ಹ್ಯಾಂಗ ಮಾಡತೀರಿ?’ ಅಂದರು. "ಇಲ್ಲೆ... ಪ್ರಾಣಿ ದಯಾ ಸಂಘ ಸಂಸ್ಥೆಗಳು ಯಾವೂ ಇಲ್ಲೇನರಿ ಡಾಕ್ಟರ’ ಇಲ್ಲಕ್ಕರ... ಇದನ್ನ ಯಾರಾರ ನೋಡಿಕೊಳ್ಳವರಿದ್ದರರ ಹೇಳ್ರಿ ಅವರ ಕಡೆ ಬಿಟ್ಟು ಬಿಡೂನು. ಅವರು ಎಷ್ಟ ಹೇಳತಾರಷ್ಟ ದುಡ್ಡ ಕೊಟ್ಟರಾತು’ ಅಂದೆ. "ಆ ವ್ಯವಸ್ಥಾ ಅಂತೂ ಬೆಂಗಳೂರ ಬಿಟ್ಟರ ಇಲ್ಲೆಲ್ಲೂ ಇಲ್ಲ. ಮರ್ಸಿ ಕಿಲ್ಲಿಂಗ್‌ ಒಂದ ಇದಕ್ಕ ದಾರಿ’ ಎಂದಾಗ ನನ್ನ ಗಂಟಲು ತುಂಬಿ ಬಂದಿತ್ತು, ಆದರೂ, ಒಟ್ಟಾರೆ ಇದರ ಅಂತ್ಯವಾಗುವದಾದರೆ ಕಣ್ಣೆದುರೇ ಆಗಲಿ. ಇದನ್ನು ಬೇರೆಲ್ಲಾದರೂ ಬಿಟ್ಟು ಬಂದು ಹೀನಾಯವಾಗಿ ಸಾಯುವಂತಾಗಬಾರದು ಎಂದು ಯೋಚಿಸಿ ನನ್ನವಳಿಗೂ ಒಪ್ಪಿಸಿ ಡಾಕ್ಟರಿಗೆ "ಎಸ್’ ಎಂದದ್ದಾಗಿತ್ತು.

ಮೀಟಿಂಗ ಮುಗಿಸಿಕೊಂಡು ಬಂದ ಡಾ. ಅನಿಲ ಪಾಟೀಲರು "ಹ್ಞಾ. ತೊಗೊಂಡ ಬರ್ರಿ ಇಲ್ಲೆ’ ಎಂದು ಆಲದ ಮರವೊಂದನ್ನು ಹೊತ್ತಂತಿದ್ದ ಕಲ್ಲಿನ ಕಟ್ಟೆಯೊಂದನ್ನು ತೋರಿಸಿ ಅದರ ಮೇಲೆ ಪೀಲೂನನ್ನು ಮಲಗಿಸಲು ಹೇಳಿದರು. ಸಿಪಾಯಿ ಶ್ರೀಕಾಂತನೂ ಸಹಕರಿಸಿದ. ಆತನೇ ನನ್ನ ಕೈಯಲ್ಲಿದ್ದ ಹೈಡ್ರೋಜನ್ ಅನೆಸ್ಥೇಶಿಯಾದ ಇಂಜೆಕ್ಷನ್ ವಾಯಿಲ್ ತೆಗೆದುಕೊಂಡು ಓಪನ್ ಮಾಡಿ ಸಿರೀಂಜಿಗೇರಿಸಿ ಕೊಟ್ಟ. ಡಾಕ್ಟರು ತಮ್ಮ ಬಲಗೈಯಲ್ಲಿ ಸಿರೀಂಜ ಹಿಡಿದುಕೊಂಡೆ ಎಡಗೈಯಿಂದ ಪೀಲೂನ ಎಡಗಾಲಿನಲ್ಲಿ ನರ ಹುಡುಕಾಡಹತ್ತಿದರು. ನನ್ನ ಎದೆ ನಿ..ಧಾ..ನ.. ಡವಡವಿಸಹತ್ತಿತು. ಪೀಲೂನ ದೃಷ್ಟಿ ಮಾತ್ರ ನನ್ನ ದೃಷ್ಟಿಗೆ ಸಂಲಗ್ನಿಸಿತ್ತು. ಅದುವರೆಗೆ ನಮ್ಮಿಂದ ತನಗಾದ ಶೋಷಣೆಗೆ ಪ್ರತಿಯಾಗಿಯೋ... ಪೋಷಣೆಗೆ ಪ್ರತಿಯಾಗಿಯೋ... ನೊಂದ ಮನದಿಂದಲೋ... ಹೃದಯ ವೈಶಾಲ್ಯತೆಯಿಂದಲೋ... ನಿರ್ಲಿಪ್ತ-ದೀನ ಭಾವದ... ತೆರೆದ ಕಣ್ಣುಗಳಿಂದ ಪೀ.. ಲೂ.. ಒಂದೇ ಸವನೆ ನನ್ನನ್ನೇ ನೋಡುತ್ತಿರುವಾಗ ಅದರ ಕಾಲಿನ ಚಪ್ಪೆಯ ಒಂದು ಕಡೆ ಸಿಕ್ಕ ನರದಲ್ಲಿ ಡಾಕ್ಟ್ರು ಪ್ರಿಕ್ ಕೊ..ಡ..ಹ..ತ್ತಿ..ದ..ರು... ಕ್ರ..ಮೇ..ಣ.. ಅದರ ಕಣ್ಣಂಚಿನಲ್ಲಿದ್ದ ಅದ್ಭುತ ಮಿಂಚು ಮಾಯವಾಗಿ... ನನ್ನ ಕಣ್ಣು ನೀರೂರಿದವು. ನನ್ನೊಳಗಣ ಮೌನ ಹೆಪ್ಪುಗಟ್ಟಿತು. ಓ.. ನನ್ನ ಪೀಲೂ... ! ನಿನ್ನ ಕರುಳಿನ ಹೃದಯಕಿದೋ ನನ್ನ ನೂರೊಂದು ನಮನಗಳು...’ ಎಂದಿತ್ತು ಮನಸ್ಸು.

-ಡಾ. ದೇವದಾಸ ಕಳಸದ
(’ಮಯೂರ’ದಲ್ಲಿ ಪ್ರಕಟ)