Wednesday, January 30, 2013

ಯಾರದು ರಾತ್ರಿ ಬಂದು ಗಲ್ಲಾ ನೆಕ್ಕಿದ್ದು?


ಓಟ 5

ನಮ್ಮ ದೊಡ್ಡವಾಡಕ್ಕ, ಸೌದತ್ತಿ ಕಡೀಂದ ಒಂದ್ ಹಾದಿ. ಇನ್ನೊಂದು ಬೆಳಗಾವಿ ಕಡೀಂದ್‌. ಮತ್ತ... ಹುಬ್ಬಳ್ಳಿ ಧಾರವಾಡ ಕಡೀಂದ ಇನ್ನೊಂದು. ಒಟ್ಟು ಮೂರ್‌ಕಡೆಯಿಂದ ದಾರಿ ಇದ್ವು ನಮ್‌ ಊರಿಗೆ. ಬೆಳಗಾವಿಗೆ ಹೋಗಾಕ ಬಸ್‌ ಹತ್ತಬೇಕಂದ್ರ ದಿಡ್ಡಿ ಅಗಸಿಗೆ ಹೋಗಬೇಕು. ಸೌದತ್ತಿಗೆ ಹೋಗಾಕ ನಡಕಿನ ಅಗಸಿಗೆ, ಮತ್ತ ಹುಬ್ಬಳ್ಳಿ ಧಾರವಾಡದಿಂದ ಹೋಗಾಕ ಕೊಪ್ಪ ಅಗಸಿಗೆ. ಅಂದಹಂಗ ನಮ್ಮ ಊರ ಆಳಿದಾವ್ರು ರಟ್ಟ ರಾಜರು. ನಮ್ಮೂರಿಂದ ಎಂಟು ಕಿ.ಮೀ ದೂರದೊಳಗ ಇರೂ ಬೆಳವಡೀನ್ನ ಮಲ್ಲಮ್ಮ ಆಳ್ತಿದ್ಲಂತ. ಹಂಗ ಅಲ್ಲಿಂದ ಮುಂದ ರಾಯಣ್ಣನ ಸಂಗೊಳ್ಳಿ, ಚೆನ್ನಮ್ಮನ್ನ ಕಿತ್ತೂರು. ಹಂಗ ಚೂರು ಆ ಕಡೆ ಈ ಕಡೆ ಸುತ್ತಾಕ್ಕೊಂಡ್‌ ಹೋದ್ರ ಹಿರೇಬಾಗೇವಾಡಿ, ಹಾಲಗಾ, ಹಿಂಡಲಗಾ ಜೈಲ್‌ ಬೆಳಗಾವಿ!

ನಮ್ಮೂರ ದಿಬ್ಬದ ಮ್ಯಾಲ ಕಿಲ್ಲಾ ಇತ್ತು. ಆದ್ರ ಕಿಲ್ಲಾ ಹೋಗಿ ದಿಬ್ಬ ಹೆಂಗಾತು ಅಂತ ಯಾರರ ಅರೇದಾವ್ರ ಕೇಳಿದ್ರ, ಬಾಯ್‌ಮುಚ್ಕೋಂಡ್‌ ನಮ್‌ ಊರಾಗಿನ ಮನಿ ಕಡೆ ಕೈ ತೋರಿಸಬೇಕಾದಂಥ ಸಂದರ್ಭ ನಿರ್ಮಾಣಾಗಿತ್ತು. ಕಿಲ್ಲಾ ಹೋಗಿ ಸಪಾಟ ದಿಬ್ಬ ಆಗಾಕ ಕಾರಣ ನಮ್‌ ಊರಿನ ಮಂದೀನ. ಮನಿ ರಿಪೇರಿ ಮಾಡ್ಕೊಳ್ಳಾಕ ಮತ್ತ ಕಟ್ಟಾಕ ಅಂತ ಹೇಳಿ, ರಾತ್ರೋರಾತ್ರಿ ಚಕ್ಕಡಿ ಹೂಡ್ಕೊಂಡ, ಕಲ್ಲು, ಮಣ್ಣು ಎಲ್ಲಾ ಹೇರ್‍ಕೊಂಡು ಬಂದ್‌ಬಿಡ್ತಿದ್ರು. ಒಟ್ಟಿನ್ಯಾಗ ಕಿಲ್ಲಾದ ಮಹಾದ್ವಾರ ಅಂತ ಹೇಳ್ಕೊಳ್ಳಾಕ ಮಾತ ಕಳ್ಕೊಂಡ ನಿಂತ ಮುರುಕು ಕಮಾನಷ್ಟ ಸಾಕ್ಷಿ ಆಗಿಬಿಟ್ಟಿತ್ತು. ಬಹುಶಃ ಅದೂ ಈಗ ಇರಲಿಕ್ಕಿಲ್ಲ. ಸ್ವಲ್ಪ ದಿನ ತೋಪು ಹಾರ್‍ಸೋ ದಿಬ್ಬ ಒಂದು ಛುಲೋತ್ನಂಗ ಉಳ್ಕೊಂಡಿತ್ತು. ಯಾಕಂದ್ರ ಆ ದಿಬ್ಬದ ಬುಡಕ್ಕ ಕರೆಮ್ಮಂದು ಸಣ್ಣ ಗುಡಿ ಇತ್ತು. ಅಕಿ ಭಾಳ ಸ್ಟ್ರಾಂಗ್‌ ಇದ್ದದ್ದಕ್ಕ, ಮಂದಿ ಹೆದರಿ, ಮಣ್ಣ ಕದ್ದರ ಏಳಿಗಿ ಆಗೂದಿಲ್ಲಂತ ಹೇಳಿ ಸುಮ್ಮನ ಬಿಟ್‌ಬಿಟ್ಟಿದ್ರು. ಆದರ ಬರ್‍ತ ಬರ್‍ತ... ಅದು ನಮ್‌ ಅಜ್ಜಾನ ಕಾಲಕ್ಕಳ. ಈಗೇನ್‌ ಮಾಡ್ತಾಳ ಕರೆವ್ವಾ. ಕೊಡಾಕೀ ಅಕಿನ, ಇಸ್ಕೊಳಾಕಿ ಅಕಿನ. ನೋಡೂಣಳ ಏನರ ಆದಾಗ್‌... ಅಂತ ಊರಿನ, ಆಜೂಬಾಜೂ ಹಳ್ಳಿಯ ಹುರಿಮೀಸೆ ಹುಡುಗ್ರು ರಾತ್‌ರಾತ್ರಿ ಚಕ್ಕಡಿ ಹೂಡ್ಕೊಂಡ್‌ ಮಣ್ಣ ತುಂಬ್ಕೊಂಬರಾಕ್‌ ಹೋಗೂದಕ್ಕ ಚಾಲೂ ಮಾಡಿಬಿಟ್ರು. ಯಾರು ಹೇಳಾವ್ರಿಲ್ಲಾ ಕೇಳಾವ್ರಿಲ್ಲ. ದಿಬ್ಬಾನೂ ಅರ್ಧ ತಿಂದ ಕಪ್‌ ಕೇಕಿನ ಹಂಗ ಸುಮ್ಮನ ನಿಂತ್‌ಬಿಟ್ಟಿತ್ತು.

ಈ ಕಿಲ್ಲಾ ದಿಬ್ಬದ ಬಗ್ಗೆ ಗೊತ್ತಾಗಿದ್ದು ಹೆಂಗಂದ್ರ, ನಾ ಆಗಾಗ ಅಪ್ಪಾಜಿ ಕೆಲಸ ಮಾಡೋ ಹೈಸ್ಕೂಲಿಗೆ ಹೋಗ್ತಿದ್ದೆ. ಹೈಸ್ಕೂಲು ಕಿಲ್ಲಾಕ ಅಂಟ್ಕೋಂಡ್‌ ಇತ್ತು. ಸಂಜೀಮುಂದ ಸಾಲಿ ಬಿಟ್ಟಮ್ಯಾಲ ಅಪ್ಪಾಜಿ, ಸ್ವಲ್ಪ ಹೊತ್ತು ಹುಡುಗೋರ ಜೊತಿ ವ್ಹಾಲಿಬಾಲ್‌ ಆಡ್ತಿದ್ರು. ತಂಗಿ, ತಮ್ಮಾನ್‌ ಕರ್‍ಕೊಂಡು ನಾನೂ ಒಮ್ಮೊಮ್ಮೆ ಅಲ್ಲಿ ಹೋಗ್ತಿದ್ದೆ. ಅಪ್ಪಾಜಿದು ಆಡೂದು ಮುಗಿಯೂ ತನಕ ಅಲ್ಲಿ ಕ್ಲಾಸ್‌ರೂಮಿನ ಕಡೆ ಆಟಾ ಆಡ್ಕೊಂಡ್ ಇರ್‍ತಿದ್ವಿ. ಒಮ್ಮೆ ಏನಾತಂದ್ರ, ತಮ್ಮಾ, ತಂಗಿ ಬಂದಿರಲಿಲ್ಲ. ಬ್ಯಾಸರಾಗಾಕ್ಹತ್ತು. ಒಬ್ಬಕೆ ಏನ್‌ ಆಟಾ ಆಡೂದಪಾ ಅಂತ ಹೇಳಿ ಕ್ಲಾಸ್‌ರೂಮಿನ ಗ್ವಾಡಿ ಅಪ್ಕೊಂಡು, ಎರಡೂ ಕೈಯಿಂದ ಗ್ವಾಡಿ ಹಿಡ್ಕೊಂಡ್‌ ಯೋಚನೆ ಮಾಡ್ಕೋತ ನಿಂತಿದ್ದೆ. ಸಂಜಿ ಐದಾಗಿದ್ರೂ ಝಳ ಹಂಗ ಇತ್ತಲ್ಲಾ... ಆ ಗ್ವಾಡಿ ಹಿಡ್ಕೊಂಡು ಅದಕ್ಕ ಗಲ್ಲಾ ಹಚ್ಚಿದಕೂಡ್ಲೇ ತಂಪು... ಒಂಥರಾ ಹಿತಾ ಅನ್ನಿಸಿಬಿಟ್ತು. ಆಗ ಒನ್ನೇತ್ತಾ ಹೋಗ್ತಿದ್ದೆ. (ನಮ್ಮನಿ ಗ್ವಾಡಿಗೆ ಅಂಟ್‌ಕೊಂಡಿದ್ದ ಗಣಪತಿ ಗುಡಿಯೊಳಗ ಆಗಷ್ಟ ಸಂಗೀತ ಕ್ಲಾಸಿಗೂ ನಂಗ್‌ ಹಚ್ಚಿದ್ರು. ಹಿಂಗಾಗಿ ನಿಂತಲ್ಲಿ ಕುಂತಲ್ಲಿ ಹಾಡಿದ್ದ ಹಾಡಿದ್ದು.)

ಅಲ್ಲೂ ಸಾರೆಗಮ ಶುರುವಾಗೇ ಬಿಟ್ಟಿತು. ಅದ ಪೋಸಿಷನ್‌ನ್ಯಾಗ ಒಂದ ಕಿಡಕಿಂದ ಇನ್ನೊಂದು ಕಿಡಕಿ ಬರೂತನಕ ಸಾಆಆಆಆ... ಅಂತ ಗ್ವಾಡಿಗೆ ಗಲ್ಲ ಹಚ್ಚಿ ನಡ್ಕೋತ ಹೊಂಟೆ. ಇನ್ನೊಂದ್‌ ಕಿಡಿಕಿ ಬರೋ ಹೊತ್ತಿಗೆ ರೆ..... ಮತ್ತೊಂದ್‌ ಕಿಡಕಿ ಬರೋ ಹೊತ್ತಿಗೆ ಗ.... ಒಂದೊಂದ್‌ ಸ್ವರಕ್ಕ ಒಂದೊಂದ್‌ ಕಿಡಕಿ. ಕಿಡಿಕಿಗೋಳು ಮುಗದ ಕೂಡ್ಲೇ ಮತ್ತ ಹೊಳ್ಲಿ ಅವರೋಹ ಸಾ.... ನಿ... ದ... ಪ...ಮ... ಗ... ರೆ... ಸಾ... ಹಿಂಗ ಎರಡು-ಮೂರು ಆವರ್ತನ ಗ್ವಾಡಿಗೆ ಗಲ್ಲ ಹಚ್ಕೋಂಡನ ಮುಗಿಸಿದ್ದಾತು. ಅಷ್ಟೊತ್ತಿಗೆ ಅಪ್ಪಾಜಿ ಮನೀಗೆ ಹೋಗೂಣು ನಡಿ ಅಂದ್ರು. ಹೂಂ ಅಂತ ಮನೀಗೆ ಬಂದು, ಕೈಕಾಲು ಮುಖ ತೊಳ್ಕೊಂಡು, ಹಾರ್ಮೋನಿಯಂ‌ ಜೊತಿ ರಿಯಾಝ್‌ ಮಾಡಿ, ಊಟ ಮಾಡಿ ಮಲ್ಕೋಬೇಕು ಅನ್ನೋ ಹೊತ್ತಿಗೆ. ಸಣ್ಣಗ ಗಲ್ಲಾಪೂರ್ತಿ ಚುರುಚುರುಚುರುಚುರು. ಯಾಕೋ ಜಾಸ್ತಿ ಆಗ್ತಿದ್ದ ಹಂಗ ಅಳು ಬಂದ್‌ಬಿಡ್ತು.

ಕಣ್ಣೀರು ನೋಡಿ, ಏನಾತು ಅಂದ್ಲು ಅವ್ವ. ಯಾಕೋ ಗಲ್ಲಾ ಉರ್‍ಯಾಕತ್ತಾವ ಅಂದೆ. ಹತ್ರ ಬಂದು ನೋಡಿ, ಏನಾ ತಂಗಿ... ಹಿಂಗ್ಯಾಕ ಕೆಂಪ್‌ ಆಗ್ಯಾವು? ಹರಬುರಕ್‌ ಆಗ್ಯಾವಲ್ಲ. ಏನರ ಕಡೀತೇನ ಮತ್ತಾ? ಅಂದ್ಲು. ಹೌದ...? ಅಂತ ಬಡಕ್ನ್‌ ಚಾದರ್‌ ತಗದಾಕಿನ ಎದ್ದು ಕನ್ನಡಿ ಹತ್ರ ಓಡಿದೆ. ಎರಡೂ ಗಲ್ಲ ಪಿಂಕ್‌ ಆಗಿಬಿಟ್ಟಿದ್ವು. ಐ ಪಿಂಕ್‌! ಅಂತ ಒಮ್ಮೆ ನಕ್ಕೆ. ಆದ್ರ ಬಿಡಬೇಕಲ್ಲ ನಗಾಕ್‌ ಗಲ್ಲಾ ಬಗಾಬಗಾ. ಏನ್‌ಮಾಡ್ಕೊಂಡಿ, ಏನ್ಮಾಡ್ಕೊಂಡಿ? ಅಂತ ಒಂದ ಸಮನ ಅವ್ವ ಶುರು ಮಾಡೇಬಿಟ್ಲು. ಏನಿಲ್ಲ ಏನಿಲ್ಲ ಅಂತ ನಾ. ಮತ್ಯಾಕ್‌ ಹಿಂಗಾದ್ವು ಅಂತ ಅಕಿ. ಅಕಿ ಆವಾಝ್‌ ಹೆಚ್ಚಾಗಾಕ್‌ ಶುರು ಆತು ಅಂತ ಗೊತ್ತಾದ್‌ ಕೂಡ್ಲೇ,,, ಹೈಸ್ಕೂಲು, ಗ್ವಾಡಿ, ಕಿಡಕಿ, ಸಾರೆಗಮ ಕತಿ ಹೇಳಿದೆ. ಒಮ್ಗಿಲೆ ಸಿಟ್‌ ಕಡಿಮಿ ಆಗಿ ಪಕ್‌ ಅಂತ ನಕ್‌ಬಿಟ್ಲು. ಅಲ್ಲಾ... ನಿನಗೆನ್‌ ಆಗ ನೋವೂ ಆಗ್ಲಿಲ್ಲೇನ? ಅದ್ಹೆಂಗ್‌ ಗಲ್ಲದ್ಲೇ ಗ್ವಾಡಿ ಸವರೀದಿ ನೀ? ಖಬರ್‌ಗೇಡಿ ತಂದ್‌... ಅಂತ ನಕ್ಕೋತ, ಹಾಲಿನ ಕೆನಿ ತಂದು ಗಲ್ಲಕ್ಕ ಸವರಿಬಿಟ್ಲು. ಹೆಂಗೋ ಹೆಂಗೋ ಬಾಳೊತ್ತಿನಮ್ಯಾಲ ನಿದ್ದಿ ಬಂತು.

ನಡೂರಾತ್ರ್‍ಯಾಗ ಇದ್ದಕ್ಕಿದ್ದಂಗ ನನ್‌ ಗಲ್ಲಾ ಯಾರೋ ಸವರಾತಾರಲ್ಲಾ ಅಂತ ಅನ್ನಿಸ್ತು. ಪರಪರ ಅಂತ ನನಗಷ್ಟ ಕೇಳೂಹಂಗ ಸಣ್ಣ ಸೌಂಡ್‌ ಬ್ಯಾರೆ. ಎಲ್ಲೋ ಕನಸಿನ್ಯಾಗಿರಬೇಕು ಅನ್ಕೊಂಡು ಆ ಕಡೆ ತಿರಗಿ ಮಲಗಿದೆ. ಸ್ವಲ್ಪ ಹೊತ್ತಿನ ಮ್ಯಾಲ ಮತ್ತ ಪರಾಪರಾ ಗಲ್ಲಾ ಸವರೂಣಕಿ ಚಾಲೂ. ಆಗ ಹಗರ್‍ಕ್‌ ಕಣ್ಣಬಿಟ್ಟೆ. ನೊಡ್ತೀನಿ. ಬೆಳ್ಲಾನ್‌ಬೆಳ್ಳಗ ಇದ್ದ ತಿಂಗಳ ಬೆಕ್ಕಿನ ಮರಿ ನನ್ನ ಗಲ್ಲಾ ನೆಕ್ಕೋತ ನಿಂತ್‌ಬಿಟ್ಟಿತ್ತು! ಅಯ್ಯೋಓಓಓಓ ಛೀ.. ಹೋಗ್ಲೇ ಅತ್ತ ಮಂಗ್ಯಾ ಒಯ್ದೊಂದ್‌.. ಅಂತ ಝಾಡ್ತಾ ಝಾಡಿಸಿ ಒಗದ್‌ದ್ದ ತಡಾ.. ಕೊಂಯ್‌ ಅಂತ ಒದರಿದ್ದಾನ ಮತ್ತ ನನ್ನ ಹೊಟ್ಟಿ ಮ್ಯಾಲ ಬಂದು ಮಲ್ಕೊಂಬಿಡ್ತು. ಝೀರೋ ಬಲ್ಬಿನ ಬೆಳಕಿನ್ಯಾಗ ಆ ಮರೀನ್ನ ನೋಡಿದ್ದ ತಡ, ಪುಟುಪುಟು ಓಡ್ಕೋತ ಇನ್ನೊಂದ್‌ ಮರೀನೂ ಬಂದು ನನ್ನ ಕಾಲಸಂದ್ಯಾಗ ಕುರುಕುರು ಮಾಡ್ಕೋತ ಮುದ್ಯಾಗಿ ಮಲ್ಕೊಂಬಿಡ್ತು.

ಬೆಳಗಾತು. ಅವ್ವ ಅಡಗಿ ಮಾಡ್ಕೋತ, ತಂಗಿ, ಇವತ್ತ ಗುರುವಾರ ಅಂದ್ಲು. ಬಚ್ಚಲ ಕಟ್ಟಿಮ್ಯಾಲ ಕಣ್‌ಮುಚ್ಕೊಂಡ್‌, ಬಾಯಾಗ್‌ ಬ್ರಷ್‌ ಆಡಿಸ್ಕೋತ ಕೂತಿದ್ದೆ. ಹೂಂ...ಹೂಂ... ಅಂತ ತಲಿ ಆಡಿಸಿದೆ. ಸಂಜೀಕ ಸಾಲಿ ಬಿಟ್ಟ ಬಂದಮ್ಯಾಲೆ ಸಂತೀಗೆ ಹೋಗಬೇಕು ಅಂದ್ಲು. ಥೂ... ಅಂತ ಬಾಯಾಗಿಂದ್‌ ಉಗುಳಿದಾಕ್ಯನ. ಹೂಂ ಗೊತ್ತಳವಾ. ಸಂತಿ ಅನ್ನೂದು ನಂಗೇನ್‌ ಮರ್‍ಯಾಂಗಿಲ್‌ ತುಗೋ ಅಂತ ಬಾಯಿ ತಕ್ಕೊಂಡು ಬಂದೆ. ಹೂಂ... ಹಾರ್ಮೋನಿಯಂ ತುಗೋ ಶ್ರೀ... ಅಂತ ಅಪ್ಪಾಜಿ ಆರ್ಡರ್‌ ಮಾಡಿದ್ರು. ಆತಳ್ರಿ. ನಂಗೇನ್‌ ಅಷ್ಟೂ ಗೊತ್ತಾಗೂದಿಲ್ಲೇನ್‌ ಅಂತ ಮನಸ್ಸಿನೊಳಗ ಅನ್ಕೊಂಡು, ರಿಯಾಝ್‌ಗೆ ಕೂತೆ. ಸ್ನಾನಾ ಮುಗಿಸಿ ಬರೋಷ್ಟತ್ತಿಗೆ ಅವ್ವ ಚಪಾತಿ ಪಲ್ಯ ಮಾಡಿಟ್ಟು, ಸಾಲಿಗೆ ಹೋದ್ಲು.

ಅಪ್ಜಿ, ನನ್‌ ಸ್ನಾನಾ ಆತ್ರಿ ಅಂತಿದ್ಹಂಗ... ಎಡಗೈನ ಹೆಬ್ಬೆರಳಿಗೆ ಬೆಳೆಸಿದ್ದ ಎರಡು ಸೆಂಟಿಮೀಟರಿನಷ್ಟು ಉದ್ದದ ಉಗುರಿನ ಮೇಲೆ (ಕ್ಯಾನ್ವಾಸಿನ ಮೇಲಿದ್ದ ಕಣ್ಣು ಟಚಪ್‌ ಮಾಡಲು) ಕಲರ್‌ ಮಿಕ್ಸಿಂಗ್‌ ಮಾಡಿಕೊಳ್ಲುತ್ತ, ಹಾಂ.. ಬಂದ್ನ್ಯವಾ... ಅಂದ್ರು. ಜಲ್ದೀ ಬರ್‍ರಿ ಅಂತ ಹೇಳಿ, ಪೇಟಿಕೋಟ್‌ ಹಾಕ್ಕೊಂಡು ಗದಗದ ನಡಕ್ಕೋತ, ಅವರ ಬೆನ್ನಿಗೆ ಜೋತ್‌ ಬೀಳಾಕ್‌ ನೋಡ್ತಿದ್ದೆ. ಒಂದನಿಮಿಷ... ಹತ್ರ ಬರಬ್ಯಾಡಾ ಇರು. ಈ ಚೂರು ಟಚ್‌ಅಪ್‌ ಮುಗಿಸಿ ಬರ್‍ತೀನಿ ಅಂತ ಅನ್ಕೋತ, ಬೋರ್ಡ್‌ ಮೇಲಿದ್ದ ಕ್ಯಾನ್ವಾಸ್‌ ಮೇಲೆ, ಬ್ರಷ್‌ ಆಡಿಸ್ತಿದ್ರು. (ತೀರಿ ಹೋದ ನಮ್ಮ ಊರ ಹಿರಿಯರ ಫೋಟೋಗಳನ್ನು ಎನ್‌ಲಾರ್ಜ್ ಮಾಡಿ, ಪೇಂಟ್‌ ಮಾಡಿ, ಅದಕ್ಕೊಂದು ಫ್ರೇಮ್‌ ಹಾಕಿ ಕೊಡುವ ಹವ್ಯಾಸ ಅಪ್ಪಾಜಿಯದ್ದಾಗಿತ್ತು)

ಯೂನಿಫಾರ್ಮ್ ಹಾಕ್ಕೊಂಡ್‌ ಬಂದು, ಕಾಟ್‌ ಮೇಲೆ ಹತ್ತಿ ನಿಲ್ಲೂದ ತಡಾ, ಅಪ್ಪಾಜಿ ಪೇಂಟು ಬ್ರಷ್‌ ಬಿಟ್ಟು, ಕೈಗೆ ಬಾಚಣಿಕೆ ತಗೊಳಾವ್ರು. (ಯಾವಾಗಲೂ ಅವರೇ ಕಟ್‌ ಮಾಡುವ ನನ್ನ ಕೂದಲು, ಸಾಲಿ ಮುಗಿಯೂತನ ಎಂದೂ ಭುಜ ಬಿಟ್ಟು ಇಳೀಲೇ ಇಲ್ಲ.) ಆಮ್ಯಾಲ ಎಡಗಡೆ ಬೈತಲಿ ತಗದು, ಮುಖಕ್ಕ ಪೌಡರ್‌ ಹಚ್ಚಿ ಇನ್ನೇನ್‌ ಹುಬ್ಬಿನ ನಡಕ್‌ ಕುಂಕುಮದ ಚಿಕ್ಕಿ ಇಡಬೇಕು, ಅಷ್ಟೊತ್ತಿಗೆ ಜಗಳ ಶುರು. ನಟ್ಟನಡಕ್‌ ಹಚ್ರೀ ಅಪ್ಜಿ, ಸಣ್ಣದ ಹಚ್ರೀ ಅಪ್ಜಿ ಅಂತ. ಆತು. ಮಾತಾಡಬೇಡ. ಮಾತಾಡಿದ್ರ ಚಿಕ್ಕಿ ಆಕಡೆ ಈಕಡೆ ಆಗ್ತೇತಿ ನೋಡು... ಅಂತ ಹೇಳಿ, ಚುಕ್ಕಿ ಇಡ್ತಿದ್ರು. ಆಮ್ಯಾಲ ಸಣ್ಣ ಕನ್ನಡಿ ತುಗೊಂಡು, ಮೂರ್‌ನಾಲ್ಕ ಸಲ ಆ ಕಡೆ ಹೊಳ್ಳಿ, ಈ ಕಡೆ ಹೊಳ್ಳಿ,, ಅದು ಹುಬ್ಬಿನ ನಟ್ಟನಡಕ್ ಐತೋ ಇಲ್ಲೋ ಅಂತ ನೋಡ್ಕೊಂಡು ಅಡಗಿ ಮನೀಗೆ ಬರೂ ಹೊತ್ತಿಗೆ... ಬಟ್ಲಲ್ಲಿ ಚಪಾತಿ ಸಕ್ಕರೆ, ಹಾಲು ರೆಡಿ ಮಾಡಿ ಕೊಡ್ತಿದ್ರು ಅಪ್ಪಾಜಿ, ಆಮ್ಯಾಲೆ ತಂಗಿ ತಮ್ಮನ ಚಾಕರಿಗೆ ಶುರು ಮಾಡ್ಕೋತಿದ್ರು. ನಾ ಸಾಲಿಗೆ ಹೋಗ್ಬಿಡ್ತಿದ್ದೆ. ತಮ್ಮ ತಂಗಿ ಸಣ್ಣೂ ಇದ್ವು. ಅವು ಆಡ್ಕೋತ ಮನಿಯೊಳಗ ಇರ್‍ತಿದ್ವು. ಅಪ್ಪಾಜಿ ಸಾಲಿ ಹನ್ನೊಂದಕ್ಕೆ. ಅಷ್ಟೊತ್ತಿಗೆ ಅವ್ವ ಬೆಳಗಿನ ಸಾಲಿ ಮುಗಿಸ್ಕೊಂಡು ಮನೀಗೆ ಬಂದು ಮಧ್ಯಾಹ್ನದ ಅಡಗಿ ಶುರು ಮಾಡ್ತಿದ್ಲು.

ಹಾಂ ಮಧ್ಯಾಹ್ನ ಸಾಲಿ ಮುಗಿಸ್ಕೊಂಡು ಮನೀಗ್‌ ಬರ್‍ತಿದ್ದ ಹಂಗ ಅವ್ವ ಎದುರಿಗಿನ ಮನಿ ಬಸಂತಿಗೆ ಕರ್‍ಕೊಂಬಾ ಅಂತ ಹೇಳ್ತಿದ್ಲು. ಅಕಿ ನನಗಿಂತ ಎರಡು ವರ್ಷ ದೊಡ್ಡಾಕಿ. ಕೈಯೊಳಗ ಒಂದು ಸಣ್ಣದು, ಒಂದು ದೊಡ್ಡದು ಕೈಚೀಲ ಕೊಟ್ಟು, ಸಂತ್ಯಾಗಿಂದ ಏನೇನ್‌ ಕಾಯಿಪಲ್ಯೆ ತರಬೇಕು ಅನ್ನೋ ಲಿಸ್ಟ್‌ ಮತ್ತು ಹದಿನೈದರಿಂದ ಇಪ್ಪತ್ತು ರೂಪಾಯಿ ಚಿಲ್ರೆನ್ನಾ ಒಂದು ಕರ್ಚೀಫಿನೊಳಗ ಕಟ್ಟಿ ಕೊಡ್ತಿದ್ಲು. ನನಗೋ ಸಂತೀಗ್‌ ಹೋಗಾಕಂದ್ರ ಖುಷಿನೋ ಖುಷಿ. ಕೈಯ್ಯಾಗ ರೊಕ್ಕದ ಗಂಟ್‌ ಹಿಡ್ಕೊಂಡ್‌, ಸಣ್ಣ ಚೀಲಾ ಹಿಡ್ಕೊಂಡ್‌, ಬಸಂತಿ ಕೈ ಹಿಡ್ಕೊಂಡ್‌ ಕುಣಕೋತ ಪ್ಯಾಟಿ ದಾರಿ ಹಿಡಿದುಬಿಡ್ತಿದ್ದೆ. ಹಣಮಪ್ಪನ ಗುಡಿಯಿಂದಾನ ಸಂತಿ ಚಾಲೂ ಆಗೂದು.

ಎಡಕ್ಕ ಕಾಳಿನ ಸಂತಿ. ಬಲಕ್ಕ ಹೋದ್ರ ಕಾಯಿಪಲ್ಲೆ ಸಂತಿ. ಚೀಟಿ ತಗಿಯೂದು, ಕಾಯಿಪಲ್ಲೆ ತುಗೊಳೂದು. ಬೇ... ಎರಡು ರೂಪಾಯಿ ಮಾಡಬೇ ಅನ್ನೂದು. ತೊಟ್ಟು ನೋಡಿ ಬದನೆಕಾಯಿ ತಗೊಬೇಕು, ಬೆಂಡ್‌ ಇರೂ ಮೂಲಂಗಿ ತಗೊಬಾರದು, ನೆಟ್ಟನ್‌ ಹೀರಿಕಾಯ ತಗೊಬೇಕು. ಗಣಿ ಬಂದ ಉಳ್ಳಾಗಡ್ಡಿ ತಗೋಬಾರ್‍ದು ಹಿಂಗ ಅವ್ವ ಹೇಳಿದ್ದನ್ನೆಲ್ಲಾ ನೆನಪಿಸ್ಕೋತ, ಕಾಯಿಪಲ್ಯೆ ರಾಶಿ ಮುಂದ ಮಂಡಿ ಊರಿ ಆರಿಸ್ಕೋತ ಕೂತ್‌ಬಿಡ್ತಿದ್ದೆ. ಹೇಳಿ ಕೇಳಿ ಸಂತಿ. ಕಾಯಿಪಲ್ಯೆದಾಕಿ, ತಂಗಿ ನೀ ತುಗೋತೀಯೋ ಇಲ್ಲೋ, ಬಡಾನ ಆರಿಸ್ಕೋಂಡ್‌ ಏಳತ್ತ ಮ್ಯಾಲ ಅನ್ನಾಕಿ. ನಂಗ್‌ ಎಂಥಾದ್‌ ಬೇಕ ಅಂಥಾದ್‌ ಆರಿಸ್ಕೋತೇನಿ ನೀ ಸುಮ್ನಿರು. ಅಂತ ಹೇಳಿ, ಬೇಕಾದಂಥಾದ್ ಆರಿಸ್ಕೊಂಡ್‌ ಕರ್ಚೀಫು ಬಿಚ್ಚತಿದ್ದೆ. ಬಸಂತಿ ಕಿವಿ ಹತ್ರ ಮಕಾ ತಂದು, ಅವ್ವಿ ತುಟ್ಟಿ ಆತು. ಕಮ್ಮಿ ಮಾಡಂತ ಹೇಳೂಣು ಅಂತಿದ್ಲು. ಮದ್ಲ್‌ ಕಾಯಿಪಲ್ಯೆ ತಗೊಂಡು, ಆಮೇಲೆ ಚೌಕಾಶಿಗೆ ನಿಲ್ಲೂದು ನಾವು!. ಬೇ ಎಂಟಾಣೆ ಕಡಿಮಿ ಮಾಡ ಏನಾಗಾಂಗಿಲ್ಲ. ದೀಡ್‌ ರೂಪಾಯಿ ಕೊಡ್ತೀನ್‌ ನೋಡ ಅಂತಿದ್ದೆ. ಆಗೂದಿಲ್ಲಂದ್ರ ಆಗೂದಿಲ್ಲ ಅಂತ ಕಾಯಿಪಲ್ಯೆದಾಕಿ ಗೋಣ ಅಳಗ್ಯಾಡಿಸಿ ಬಿಡಾಕಿ. ಸರಿಬಿಡು ಹಂಗಾದ್ರ ನಂಗ್‌ ನಿನ್ನ ಕಾಯಿಪಲ್ಯೇನ ಬೇಡ ಗೀಯಪಲ್ಯೇನೂ ಬೇಡಾ ಅಂತ ಚೀಲಾ ಮುಂದ ಹಿಡೀತಿದ್ದೆ. ಅಯ್ಯ ನಮ್ಮವ್ವಾ... ಹಿಂಗಂದ್ರ ಹೆಂಗ. ಆತ್‌ ತುಗೊ, ನಂಗೂ ಬ್ಯಾಡಾ ನಿಂಗೂ ಬ್ಯಾಡಾ.. ನಾಲ್ಕಣಿ ಕಮ್ಮಿ ಮಾಡ್ತೀನಿ. ನಿನ್ನಿಂದನ ಬೋಣಗಿ ಆಗ್ಲಿ. ನಿನ್ನಿಂದ ನನ್ನ ಉಡ್ಯಾಗ ಲಕ್ಷ್ಮೀ ಓಡಾಡ್ಲಿ ಅಂತ ಹೇಳ್ತಿದ್ಲು.

ಒಂದ್‌ ಕಾಯಿಪಲ್ಯೆ ತುಗೊಂಡ್‌ ಕೂಡ್ಲೇ ಚೀಟಿ ಬಿಚ್ಚೂದು, ಮತ್ತೇನ್‌ ಬೇಕ ಅಂತ ನೋಡೂದು. ಹಿಂಗ ಸಂತಿ ಮಾಡ್ಕೋತ ಹುಣಶಿ ಕಟ್ಟಿ ಹತ್ರ ಬರ್‍ತಿದ್ವ್ಯಾ... ಅಲ್ಲಿ ಹುಣಶೀಕಟ್ಟಿಮ್ಯಾಲ ಮಲೀಕ್‌ ಕಾಣಾಂವಾ. ಹಾಂ ಮಲೀಕ್‌! ಯಾಕ ನಂಗಿಷ್ಟಾ ಆಗ್ತಿದ್ದ, ಅವ ಯಾರು, ಏನು? ಅಂತ ಮುಂದಿನ ಓಟದಾಗ ಹೇಳ್ತೀನಿ.

Sunday, January 27, 2013

ನೀವಿದನ್ನ ಅಲ್ಲಿ ಓದೂದಿಲ್ಲ ಅಲ್ರಿ ಟೀಚರ್‌?


(ಓಟ 4)

ನನಗವನ ಹೆಸರು ಮರ‍್ತಿದ್ರೂ, ಮಕಾ ಈಗಲೂ ಕಣ್ಮುಂದನ. ಬಹುಶಃ ಬಸಪ್ಪ ಅಂತಿರಬೇಕೇನೊ. ಯಾರ ಕರೀತಾರೊ, ಅವರ ಮನೀಗೆ ಹೋಗಿ ಕೂದಲ ಕಟ್ ಮಾಡಿ ಬರ‍್ತಿದ್ದ. ಅವತ್ತೂ ಹಿಂಗ ಒಂದಿನ ಮಧ್ಯಾಹ್ನ, ನಾವೊಂದಿಷ್ಟು ಜನ ಸ್ಟಾಪ್ ಆಟ ಆಡ್ಕೋತ ಕುಲಕರ್ಣ್ಯಾರ ಮನಿ (ಅವ್ರಿಗೆಲ್ಲಾರೂ ಗೌಡ್ರು ಅಂತ ಕರೀತಿದ್ರು. ಅವ್ರು ನಮ್ಮನಿ ಓನರ್‌ ಕೂಡ ಆಗಿದ್ರು.) ಹೊಕ್ಕಿದ್ವಿ. ರಣರಣ, ಕಣ್ಣ ಕುಕ್ಕೂವಂಥಾ ಬಿಸ್ಲು ಏದುಸಿರು ಬಿಡ್ಕೋತ ಜ್ವಾಳದ ಚೀಲಾ ಒಟ್ಟಿದ್ರಲ್ಲಾ... ಅಲ್ಲೇ ಸಂದ್ಯಾಗ ಅಡಿಕ್ಕೊಂಡ್‌ ನಿಂತೆ. ಹಂಗ ಹಿತ್ತಲೊಳಗಿನ ಬಣವಿ ಸಂದ್ಯಾಗ ಲಕ್ಷ ಹೋತು. ಈ ಹೊತ್ತಿನ್ಯಾಗ ಅಲ್ಯಾರದಾರು? ಏನ್‌ಮಾಡಾತಾರು ಅಂತ ನೋಡಿದ್ರ, ತುದಿಗಾಲ ಮ್ಯಾಲೆ ಅವ ಕುಂತಿದ್ದ. ಬೆನ್ನು ಕಾಣ್ತಿತ್ತು. ಕೈಯ್ಯಾಗ ಕತ್ತಿ ಹಿಡ್ಕೊಂಡು ತುದಿಗುಂಡೀಲೆ ಕುಂತಾನಂದ್ರ ಊರಿಗೊಬ್ಬ ಇರೂ ಬಸಪ್ಪನ ಇರಬೇಕು ಅಂತ ಅನ್ಕೊಂಡೆ. ಹೌದು ಅವನ ಇದ್ದ. ಯಾರದು ತಲಿ ಬೋಳಿಸ್ಕೊಳ್ಳೋವ್ರು? ಫುಲ್ಲಕ್ಕಜ್ಜಿ ಮನಿಯೊಳಗ ಯಾರೂ ಗಂಡ್ಸೂರು ಇಲ್ಲ ಅಲ್ಲಾ....ಅಂತ ಗುಂಗ ಬಿತ್ತು. ಇದ್ದಕ್ಕಿದ್ದಂಗ ಆ ಜಾಗಕ್ಕ ಹೋದ್ರ ಅವ್ರೇನ್‌ ಅನ್ಕೊಳ್ತಾರು? ಅಂತ ಅನ್ಕೊಂಡು, ಕಾಲೆತ್ತರ‍್ಸಿ, ಬಗ್ಗಿ ನೋಡೇ ನೋಡಿದೆ. ಊಂಹೂ ಯಾರಂತ ಗೊತ್ತ ಆಗಲೇ ಇಲ್ಲ.

ಹೋಗ್ಲಿಬಿಡತ್ತ ಅಂತ ಮನೀಗ್‌ ಬಂದು, ಊಟ ಮಾಡಿ ಮಲ್ಕೊಂಡು ಸಂಜಿ ಐದಕ್ಕ ಎದ್ದು ಫುಲ್ಲಕ್ಕಜ್ಜಿ ಮನೀಗೆ ಹೋದೆ. ನನ್ನ ವಾರಿಗಿ ಒಂದಿಬ್ರು ಅಲ್ಲೇ ಪಡಸಾಲ್ಯಾಗ ಕೂತಿದ್ರು. ಫುಲ್ಲಕ್ಕಜ್ಜೀ... ಫುಲ್ಲಕ್ಕಜ್ಜೀ ಏನ್ ಮಾಡಾತೀರಿ? ಅಂತ ಕರ‍್ದೆ. ಓ ಅನ್ಲಿಲ್ಲ. ಹಗೂರ‍್ಕ್‌ ಅವರ ಅಡುಗೆ ಮನಿ ಇಣಕಿದೆ. ಫುಲ್ಲಕ್ಕಜ್ಜಿ ರವೆ ಉಂಡಿ ಕಟ್ಕೋತ ಕೂತಿದ್ಲು. ನಾ ಬಂದಿದ್ದು ನೋಡಿ ಭರಕ್‌ನ ತಲಿ ಮ್ಯಾಲೆ ಕೆಂಪ್ ಸೀರಿ ಎಳ್ಕೊಂಬಿಟ್ಲು. ಅದುವರೆಗೂ ಅಕಿ ತಲ್ಯಾಗ ಕೂದಲದಾವು. ವಯಸ್ಸಾತಲ್ಲಾ, ಚಳಿಗೆ ಹಂಗ ಮುಚ್ಕೊಂಡಿರ‍್ತಾಳು ಅಂತ ಅನ್ಕೊಂಬಿಟ್ಟಿದ್ದೆ. ಗಂಧ ಬ್ಯಾರೆ ಬಳ್ಕೊಂಡಿದ್ಲು ತಲೀಗೆ. ಆಮೇಲೆ ನೆನಪಾತು... ಓಹ್‌ ಬಸಪ್ಪ ಫುಲ್ಲಕ್ಕಜ್ಜಿ ತಲಿ ಬೋಳಿಸಕ್ಕಂತನ ಮಧ್ಯಾಹ್ನ ಬಂದಿದ್ದ ಅಂತ.

ಏಯ್‌ ಹುಡುಗಿ, ಇಲ್ಯಾಕ್‌ ಬಂದ್ಯಾ? ಹೊರಗ್‌ ನಡಿ. ಒಳಗ್‌ ಬರಬ್ಯಾಡಾ. ಅಲ್ಲೇ ಪಡಸಾಲ್ಯಾಗ ಕೂಡ್‌ನಡಿ. ದೂರ ದೂರ... ಅಂತ ಫುಲ್ಲಕ್ಕಜ್ಜಿ ಒದರಿದ್ಲು, ಥೇಟ್‌ ಅಬಡಜಬಡ ಚಟ್ನಿ ಕುಟ್ಟಿದಂಗ ಇತ್ತು ಅಕಿ ಮಾತು. ಹೂಂ ಅಂತ ಹೊರಗ ಬರೂಹೊತ್ತಿಗೆ ಅಷ್ಟೊತ್ತಿಗೆ ಒಂದೆರಡು ಹುಡುಗ್ರು, ಮೂರು ಹುಡುಗೀರು ಸೇರ‍್ಕೊಂಡು ನಾಲ್ಕೈದು ಜನ ಆದ್ವಿ. ಹಿತ್ತಾಳಿ ಡಬ್ಬಿಯೊಳಗ ರವೆ ಉಂಡಿ ಹಾಕ್ಕೊಂಡು ನಡಾ ಬಗ್ಗಿದ ಫುಲ್ಲಕ್ಕಜ್ಜಿ ಬಂದ್ಲು. ಒಣಗಿದ ದಾಸವಾಳದ ಪಕಳಿಯಂಥಾ ಕೈ ಡಬ್ಯಾಗ ಹಾಕಿ ಒಬ್ಬೊಬ್ಬರಿಗೆ ಒಂದೋಂದ್ ಉಂಡಿ ಕೊಟ್ಲು. ನಮ್ಮೆದುರಿಗ್‌ ಬಂದು ಕೂತು, ರಾಮಾಯಣದ ಕಥಿ ಶುರು ಮಾಡಿದ್ಲು. ಖರೆ ಹೇಳ್ತೀನಿ ಅಕಿ ಏನ್‌ ಹೇಳ್ತಾಳ ಅಂತ ಗೊತ್ತSSS ಆಗ್ತಿರಲಿಲ್ಲ. ಪಾಪ ಹಲ್ಲೆಲ್ಲಾ ಉದುರಿ ಹೋಗಿ, ತುಟಿನೂ ಒಳಗ ಹೊಗ್ಬಿಟ್ಟಿದ್ವು. ಗೋಣೂ ನಡಗ್ತಿತ್ತು. ಪಾಪ ಅಕಿ ಚಸ್ಮಾ ನೋಡ್ಬಕಿತ್ತು, ಒಂದಕಡೆ ಮುರ‍್ದು, ದಾರಾ ಸುತ್ತಿಸ್ಕೊಂಡು, ಆ ದಾರ ಬಣ್ಣಾ ಕಳ್ಕೊಂಡು, ಚಸ್ಮಾ ಅಲ್ಲಾ, ಎರಡು ಸೋಡಾ ಬಾಟ್ಲಿ ತಳಾ ಕಟ್ಕೊಂಡು ಮೂಗಿನ ಮ್ಯಾಲೆ ಇಟ್ಕೊಂಡಹಂಗ್‌ ಆಗಿತ್ತು. ಖರೇಗೂ ಅಕಿ ಕಣ್ಣ ಅದರೊಳಗಿಂದ ಕಾಣ್ತಾನ ಇರ‍್ತಿರಲಿಲ್ಲ. ಮದ್ಲಾ ಸಣ್ಣ ಮೂಗು ಸವ್ದು ಹೋಗಿದ್ರಿಂದಾನೋ ಏನೋ ಚಸ್ಮಾ ಮೂಗಿಂದ ಜಾರಿದ್ದ ಜಾರಿದ್ದು. ಛೆ ಇಕೀಗೆ ಯಾಕ ಯಾರೂ ಹೊಸಾ ಚಸ್ಮಾ ತಂದು ಕೊಡೂದಿಲ್ಲ? ಅಂತ ಅನ್ಸೂದು.

ಹತ್ತಿಬಟ್ಲಾ, ವಿಭೂತಿ ಮುಂದಿಟ್ಕೊಂಡು ಬತ್ತಿ ಹೊಸಿಯಾಕ್ ಶುರು ಮಾಡಿಬಿಡ್ತಿದ್ಲು. ಮೊದಲ ಎಳಿಬತ್ತಿ, ಆಮ್ಯಾಲ ಗೆಜ್ಜಿವಸ್ತ್ರ, ಕಡೀಕ ಹೂಬತ್ತಿ. ಹಿಂಗ ಬತ್ತಿ ಹೊಸಕೋತನ ಕಥಿ ಶುರು ಮಾಡ್ಕೊಂಬಿಡಾಕಿ. ಕಥಿ ಮುಗದ್ರೂ ಕಿವ್ಯಾಗ ಉಳಿಯೂವು... ಅರ್ಜುನ, ಧುರ್ಯೋದ್ನಾ, ದ್ರೌಪ್ದಿ, ಸೀತಿ, ರಾಮಾ, ಲಕ್ಷ್ಮಣಾ, ಹನುಮಂತಾ ಅನ್ನೋ ಹೆಸರಗೋಳಷ್ಟ, ಹಿಟ್ಟು ಸಾಣಿಸಿದ ಮ್ಯಾಲೆ ರವೆ ಹ್ಯಾಂಗ್‌ ಉಳ್ಕೊಳ್ಳತ್ತಲ್ಲಾ ಹಂಗ. ಆಗ ಅನ್ಕೊಬೇಕು, ಓಹ್‌ ಇವತ್ತು ರಾಮಾಯಣದ ಕಥಿ ಕೇಳಿದ್ವಿ. ಮಹಾಭಾರತದ ಪ್ರಸಂಗಾ ಹೇಳಿದ್ರು ಅಂತ. ಹಂಗಂತ ಮನಸ್ಸಿಗೂ ಹೂಂ ಅನ್ನಿಸ್ಕೋಂಡ್‌ ಮಬ್ಬಗತ್ತಲನ್ಯಾಗ ದುಡುದುಡು ಮನೀಗೆ ಓಡಿಬಿಡೂದು.

ಆದ್ರ ನಂಗ್ಯಾವಾಗ್ಲೂ ಕಾಡೂದು ಒಂದ ಚಿಂತಿ. ಅಲ್ಲಾ... ಒಂದ ಅಂಗಳಾ. ಅಣ್ಣನ ಮಕ್ಕಳೂ ಮತ್ತವರ ಸಂಸಾರನೂ ಅಲ್ಲೇ ಇರೂದು. ಆದ್ರ, ಇಕೀನ್ಯಾಕ ಎರಡು ಖೋಲೆದ ಮನ್ಯಾಗ ಇಟ್ಟಾರು? ವಯಸ್ಸಾದ ಆಕಿ, ತನ್ನ ಅಡಗಿ ತಾನ ಮಾಡ್ಕೊಬೇಕು. ತನ್ನ ಬಟ್ಟೆ ತಾನ ಒಕ್ಕೊಬೇಕು, ಒಮ್ಮೊಮ್ಮೆ ಒಲಿಗೆ ಕಟ್ಟಗಿನೂ ತಾನ ಒಡ್ಕೋತ ಕೂತಿರ‍್ತಾಳು. ಸಣ್ಣಾಕಿದ್ದಾಗನ ಗಂಡ ತೀರ‍್ಕೊಂಡನಂತ, ಮಕ್ಕಳೂ ಇಲ್ಲಂತ. ಪಾಪ ಅವ್ವಾ ಅಪ್ಪಾನೂ ಯಾವ ಕಾಲಕ್ಕೋ ತೀರ‍್ಕೊಂಡ್ರೋ ಏನೊ. ಹಂಗಂತ ಅಕಿ ಹಿಂಗ್ಯಾಕ ಇರ‍್ಬೇಕು? ಅದೇನ್‌ ಹೇಳಿದ್ದನ್ನ ಹೇಳ್ತಿ.... ಆ ರಾಮಾಯಣ, ಮಹಾಭಾರತ. ನಿನ್ನ ಜೀವನದಾಗ ಏನೇನಾತು ಹೇಳು ಅಂತ ಅಕಿಗೆ ಕೇಳಿಬಿಡಬೇಕು ಅನ್ಸೂದು. ಆದ್ರ ಅಕಿ ಸಂಬಂಧಿಕರ ಮೊಮ್ಮಕ್ಕಳನ್ನಷ್ಟ ಹಚ್ಕೊಂಡು ಮಾತಾಡಿಸ್ತಿದ್ಲು. ನನ್ನ ಬಗ್ಗೆ ಅಂಥಾ ಏನೂ ಅಕ್ಕರತಿ ಬೆಳಿಸ್ಕೊಂಡಿರಲಿಲ್ಲ. ಒಂದ್ರೀತಿ, ತನ್ನ ಒಂಟಿತನ ನೀಗಿಸ್ಕೊಳ್ಳಾಕ ನಮ್ಮ ನಮ್‌ ಮುಂದ ಕಥಿ ಹೇಳೂ ಶಾಸ್ತ್ರ ಮಾಡ್ತಿದ್ಲೋ ಏನೋ ಅಂತ ಅನ್ನಿಸಿಬಿಡೂದು. ಯಾಕೋ ಅಕಿ ಜೊತಿ ಅಷ್ಟು ಅಟ್ಯಾಚ್‌ಮೆಂಟ್ ಬೆಳೀಲೇ ಇಲ್ಲ.

ಹಂಗ ಗೌಡ್ರ ಮನಿ ದಾಟ್ಕೊಂಡು, ಬಲಕ್ಕ ಹೊರಳೀದ್ರ ದೀಕ್ಷಿತರ ಮಾಮಿ ಮನಿ ಸಿಗೂದು. ದಿನಾ ಹನ್ನೊಂದಕ್ಕ ಸಾಲಿ ಬಿಟ್ಟಮ್ಯಾಲೆ ಒಮ್ಮೊಮ್ಮೆ ಗೆಳತ್ಯಾರ ಜೊತಿ ದೀಕ್ಷಿತರ ಮಾಮಿ ಮನೀಗೆ ಓಡಿ ಹೋಗ್ತಿದ್ದೆ. ಯಾಕಂದ್ರ ಮಾಮಿ ಅಂಗನವಾಡಿ ಟೀಚರ‍್ ಆಗಿದ್ಲು. ಹಂಗತ ಅಕಿ ಮನಿಯೊಳಗ ಮಕ್ಕಳೇನ್ ಇರ‍್ತಿರಲಿಲ್ಲ. ಟೇಲರಿಂಗ್ನೂ ಮಾಡ್ತಿದ್ಲು. ಹನ್ನೊಂದ್‌ ಅನ್ನೂದ್ರಾಗ ಗೌರ‍್ನ್‌ಮೆಂಟ್‌ನೋರ್‌ ಕೊಟ್ಟ ಹಿಟ್ಟನ್ನ, ಅಳ್ಳಿಟ್ಟು ಮಾಡಿ ಪರಾತ ತುಂಬ ಮಾಡಿ ಇಟ್ಟಬಿಡಾಕಿ. ಅಕಿ ಗಂಡ, ಹೊಚ್ಚಲೊಳಗ ಒಂದು ಸಣ್ಣ ಸ್ಟೂಲ್‌ ಇಟ್ಕೊಂಡು, ಹಿಂಗ ಕೈ ಎತ್ತರಿಸಿ, ಹತ್ತು ನಿಮಿಷದೊಳಗ, ಬಾಗಿಲಹೊರಗ ನಿಂತ ಹುಡಗೋರ ಕೈಗೆ ಉಂಡಿ ಕೊಟ್ಬಿಡ್ತಿದ್ದ. ಭರ‍್ ಭರ್‌ ಅಂತ ಉಂಡಿ ಹಂಚೂ ಕಾರ್ಯಕ್ರಮ ಮುಗ್ಸೂ ಭರಕ್ಕ... ಪಾಪ ಸಣ್ಣ ಸಣ್ಣ ಕೈಗೋಳಿಗೆ ಉಂಡಿ ಹಿಡ್ಯಾಕ್ ಆಗ್ತಿರಲಿಲ್ಲ. ಅವು ತಪ್ಪಿ ಕೆಳಗ ಬಿದ್ದಬಿಡೂದವು. ಅದಕ್ಕ ಆ ಹುಡುಗೂರು ಏನ್‌ ಐಡಿಯಾ ಮಾಡ್ತಿದ್ರು ಅಂದ್ರ, ಉಡಿ ಒಡ್ಡಿ , ಉಂಡಿ ಕೆಳಗ ಉಳ್ಳದಂಗ ಹಿಡ್ಕೊಂಬಿಡ್ತಿದ್ರು. ನನಗೂ ಉಂಡಿ ತಿನ್ಬೇಕಂತ ಆಸೆ ಆಗೂದು. ಆದ್ರ ನಾ ಟೀಚರ್‌ ಮಗಳು. ನನಗವ್ರು ಕೊಡೂದಿಲ್ಲ. ಬಡಮಕ್ಕಳಿಗಷ್ಟ ಕೊಡ್ತಾರಂತ. ಹಿಂಗ ಏನೇನೋ... ಆದ್ರೂ ಒಂದಿನ ನಾ ಏನ್‌ ಮಾಡಿದೆ ಅಂದ್ರ, ಮೂರು ನಾಲ್ಕು ಹುಡುಗ್ರು ನಂಗ್‌, ನಿಂಗ್‌ ಅಂತ ಮುಗಿಬಿದ್ದು ಉಂಡಿ ಇಸ್ಕೊಳ್ಳಾತಿದ್ರು. ನನ್‌ ಮಕಾ ನೋಡಿದ್ರ ಅವ್ರು ಕೊಡೂದಿಲ್ಲ. ಮತ್ತ ನಮ್ಮ ಅಪ್ಪಾಜಿ, ಅವ್ವಗ ಹೇಳಿಬಿಡ್ತಾರು. ಏನ್ ಮಾಡೂದು ಅಂತ ಹೇಳಿ ಹಗೂರ‍್ಕ ಆ ಹುಡುಗೂರ್‌ ಬೆನ್ನೀಗ ಮಕಾ ಅಡ್ಡ ಹಿಡ್ಕೊಂಡು, ಬರೇ ಕೈಯಷ್ಟ ಒಡ್ಡಿದೆ. ಹಾ! ನನಗೂ ಒಂದು ಉಂಡಿ ಸಿಕ್ಕ ಬಿಡ್ತು. ಅದುವರ‍್ಗೂ ಅವ್ರಿವ್ರಿಗೆ ಕೊಡ್ತಿದ್ದ ಉಂಡಿ ನೋಡ್ಕೋತ ಅವರ ಬಾಗಿಲ ಹೊರಗ ನಿಲ್ತಿದ್ದ ನನಗೆ ಅವತ್ತು ಉಂಡಿ ಸಿಕ್ಕಿದ್ದು ಭಾಳ ಖುಷಿ ಆತು. ದಾರ‍್ಯಾಗ ತಿನಕೋತ ಮನೀಗೆ ಬಂದೆ. ಹಿಂಗಿಂಗ ಅಳ್ಳಿಟ್ಟು ತಿಂದೆ ಇವತ್ತು ನಾ ಅಂತ ಅವ್ವನಿಗೆ ಹೇಳಿದೆ. ಅಕಿ ಹೂಂ ಹೌದಾ, ಲಗೂನ ಕೈಕಾಲ್ ಮಕಾ ತಕ್ಕೋ ಅಂತ ಹೇಳಿ, ಮಧ್ಯಾಹ್ನದ ಊಟಕ್ಕ ತಯಾರಿಗೆ ಅಡಗಿ ಮನೀಗೆ ಹೋದ್ಲು.

ಅದ್ಹೆಂಗೋ ಏನೋ, ಮರದಿನಾ ನಮ್ ಕ್ಲಾಸ್‌ ಟೀಚರ್‌ ಸಾವಿತ್ರಿ (ಅವ್ರು ಹೆಡ್‌ಮಿಸ್ಸೂ ಆಗಿದ್ರು) ಅವ್ರಿಗೆ ಗೊತ್ತಾಗ್‌ಬಿಟ್ಟಿತು. ಪ್ರಾರ್ಥನಾ ಮುಗಿಸಿದ ಮೇಲೆ ಕ್ಲಾಸಿಗೆ ಬಂದು ಕೂತೆ. ಆಮ್ಯಾಲ ಕಕಾಕಿಕಿ ಬಳ್ಳಿ ಬರೀರಿ ಎಲ್ಲಾರು ಅಂತ ಹೇಳಿ, ಅದೇನೋ ಬರ‍್ಕೋತ ಕೂತ್ರು. ಅಯ್ಯೋ ಎಲ್ಲಾರೂ ಬಳ್ಳಿ ಬರ‍್ಯಾತಾರು. ಆದ್ರ ನನಗ ಬರ‍್ವಾಲ್ತು. ಬರವಾಲ್ತು ಅನ್ನೂಕಿಂತ ಹಂಗಂದ್ರ ಏನಂತ ಗೊತ್ತಿಲ್ಲ. ಯಾಕಂದ್ರ ನನಗೆ ಸಾಲಿಗಿಂತ ಮನಿಯೊಳಗ ಪಾಠ ನಡೀತಿತ್ತು. ನಮ್ಮನೀಯೊಳಗ ಈ ಬಳ್ಳಿ, ಬೇರು, ಚಿಗುರು ಕಲಿಸ್ದ್ ಒಮ್ಮೆಲೆ ಶಬ್ದ, ವಾಕ್ಯ ಕಲಿಸಿಬಿಟ್ಟಿದ್ರು! ಅದಕ್ಕಿಂತ ಹೆಚ್ಚಾಗಿ, ದೊಡ್ಡವ್ವನ ಅಕ್ಕರತಿಗೆ ಹದಿನೈದು ದಿನ ಹಿರೇಬಾಗೇವಾಡಿ, ಹದಿನೈದು ದೊಡ್ಡವಾಡ. ಹಿಂಗಾಗಿ ಆಟಾ, ಪಾಠಾ, ಸಾಲಿ ಗೂಟ. ನಡಕ್‌ ನಡಕಿಂದ್‌ ಓಟ.

ಹೂಂ... ಅಂತೂ ಬಳ್ಳೀನ್ನಾ ಎಲ್ಲಾರೂ ಬರ‍್ದು ತೋರ‍್ಸಿದ್ರು. ನನಗೋ ಬರಿಯಾಕ ಬರ‍್ಲಿಲ್ಲ. ಆಜೂ ಬಾಜೂ ಹುಡುಗ್ಯಾರು ಬರದು ಮುಗಸಿದ್ರೂ. ಬರದೇ ಇದ್ದಾವ್ರು, ಅವರಿವರ ಬರ‍್ಯೂದನ್ನ ಇಸ್ಕೊಂಡು ಕಾಪಿ ಮಾಡ್ಕೊಂಡ್ರು. ನನಗೋ ಇನ್ನೊಬ್ಬರದ ನೋಡಿ ಬರಿಯೂದಂದ್ರ ಯಾಕೊ ಒಂಥರಾ. ಟೀಚರ್‌ ಅದೇನೋ ಬರೀಯೂದು ಮುಗಿಸಿದ್ರು. ಎಲ್ಲಾರೂ ಒಬ್ಬರಾದ ಮೇಲೆ ಒಬ್ರು ಬಳ್ಳಿ ತೋರ‍್ಸಾಕ್‌ ಹೊಂಟ್ರು. ನಂಗ ಹೆದರಿಕಿ, ಸುಮ್ಮನ ಕಿಡಕಿ ಹಾಯ್ಸಿ ಒಳಗ ಬಂದ ಕುಂಬಳ ಬಳ್ಳಿ ಕುಡಿ ನೋಡ್ಕೋತ ಕೂತ್‌ಬಿಟ್ಟೆ. ಆಮ್ಯಾಲ ಸಾವಿತ್ರಿ ಚೀಟರ್‌, "ಯಾರೋ ಒಬ್ಬರಿಗೇ ಮನ್ಯಾಗಿನ ಸಪ್ಪನ್ನ ಬ್ಯಾಳಿ, ಬಿಸಿ ಅನ್ನ, ತುಪ್ಪಾ ಉಣ್ಣೂದ್ ಬಿಟ್ಟ ಅಳ್ಳಿಟ್ಟ ತಿನ್ನಬೇಕನ್ನಸ್ತೇತಂತ. ಹುಳಾಬಿದ್ದ ಅಳ್ಳಿಟ್ಟ ಬೇಕಂತ" ಅಂದ್ರು. ಮುಗೀತ್‌ ನನ್‌ ಕಥಿ. ಬಳ್ಳಿನೂ ಬೆಳಸ್ಲಿಲ್ಲ. ಹೊಟ್ಯಾಗ್ ಹೋಗಿದ್ದ ಅಳ್ಳಿಟ್ಟ ಸುದ್ದಿನೂ ಜಾಹೀರ‍್ ಆತು. ಯಾರ‍್ ಹೇಳಿದ್ರೋ ಇವ್ರಿಗೆ... ಏನ್‌ ಮಾಡೂದು ಇನ್ನ.... ಅಂತ ಅನ್ಕೊಳ್ಳೋ ಹೊತ್ತಿಗೆ ಢಣಢಣಢಣಢಣ! ಓಹ್‌ ಅಂತೂ ಇವತ್ತಿನ ’ಸಾಲಿ’ ಮುಗೀತ್ರೇ... ಬಚಾವ್‌ ಮಾಡಿದ್ದಕ್ಕ ಥ್ಯಾಂಕ್ಸೇ ಸರಸೋತಿ ಅಂತ ಅಕಿ ಫೋಟೋ ನೋಡಿ ಬಡಾನ... ಮನೀಗೆ ಓಡಿಬಂದ್‌ಬಿಟ್ಟೆ.

ಮನೀಗೆ ಬಂದು, ಬಳ್ಳಿ ಅಂದ್ರೇನು? ನೀವ್ಯಾಕ ನನಗ ಕಲಿಸಿಲ್ಲ? ಎಲ್ಲಾರಿಗೂ ಬರ‍್ತಾವು. ನಂಗ್ಯಾಕ್‌ ಬರೂದಿಲ್ಲ. ಇವತ್ತು ಎಲ್ರೂ ಬರ‍್ದು ತೋರ‍್ಸಿದ್ರು. ನಂಗ್‌ ಬರಲಿಲ್ಲ... ಅಂತ ಅತ್ತೆ. ಅಯ್ಯೋ ಹುಚ್ಚಿ, ನೀ ಆಗ್ಲೇ ಶಬ್ದ ಬರಿಯಾಕ ಮತ್ತ ವಾಕ್ಯ ಮಾಡಾಕೆಲ್ಲಾ ಕಲ್ತೀಯಲ್ಲ, ಅದ್ಯಾಕೀಗ ಅಂದ್ರು ಅಪ್ಪಾಜಿ. ಆಮೇಲೆ ಅಂಕಲಿಪಿ ತೋರಿಸಿದ ಅವ್ವ, ನೋಡು ಬಳ್ಳಿ ಅಂದ್ರ ಹಿಂಗ ಅಂತೆಲ್ಲಾ ಹೇಳಿದ್ಲು. ಓಹ್ ಅಂತ ಸುಮ್ಮನಾದೆ. ನಾಲ್ಕನೇ ಕ್ಲಾಸ್‌ ತನಕ ದೊಡ್ಡವಾಡದೊಳ ಓದ್ತಿದ್ದೆ. ಹೆಸರಿಗಷ್ಟ ಓದು. ಒಂದನೇತ್ತಾ ಇದ್ದಾಗ ಮೂರನೇತ್ತಾ, ಎರಡನೇತ್ತಾ ಇದ್ದಾಗ ನಾಲ್ಕನೇತ್ತಾ... ಹಿಂಗ ನಮ್‌ ಹೆಡ್‌ಮಿಸ್‌ ಹೊಸಾ ಪಾಠ ಎಲ್ಲೆಲ್ಲಿ ಶುರು ಆಕ್ಕೇತಿ ಅಲ್ಲಿ ಕಳಿಸಿ ಕೂಡಸ್ತಿದ್ರು. ಹಿಂಗಾಗಿ, ಯಾರರ ಕೇಳಿದ್ರ, ಯಾವ ಕ್ಲಾಸ್‌ ಅಂತ ಹೇಳಾಕ ಗೊಂದಲ ಆಗಿಬಿಡೂದು, ದೊಡ್ಡವಾಡ ಬಿಟ್ಟು ಐದನೇತ್ತಾಕ ಧಾರವಾಡ ಸಾಲಿಗೆ ಸೇರೂತನಕ.

ಒಮ್ಮೆ ಸಾವಿತ್ರಿ ಟೀಚರ್‌, ತಮ್ಮ ಚೀಲದೊಳಗಿಂದ ಒಂದು ಸಣ್ಣ ಜಾಡಿ (ನೆಲಹಾಸು) ತೆಗೆದು, ಇನ್‌ಮೇಲಿಂದ ನೀ ಎಲ್ಲಾರ್‌ ಜೊತಿ ಕೂಡುಹಂಗಿಲ್ಲ. ಬಾ ಇಲ್ಲೆ. ನನ್ನ ಕುರ್ಚಿ ಬಾಜೂಕ ಕೂಡಬೇಕು ಅಂದ್ರು. ಜೊತೀಗೆ ತಮ್ಮ ಮೊಮ್ಮಗಳನ್ನೂ ಕೂಡ್ಸಿದ್ರು. ನನಗರ ಹಂಗ್‌ ಎಲ್ಲಾರ‍್ನೂ ಬಿಟ್ಟು ಕೂತ್ಕೊಳ್ಲಾಕ ಮನಸ್ಸ ಇರ‍್ತಿರಲಿಲ್ಲ. ಅವ್ರೆದ್ದು ಕ್ಲಾಸ್‌ ಬಿಟ್ಟು ಹೋದಾಗ ಹುಡುಗ್ಯಾರ ಜೊತಿ ಕುಂತ್ಬಿಡ್ತಿದ್ದೆ. ಆಗ ಒಳಗ ಬಂದಾವ್ರನ ಎಷ್ಟ ಅಡಮಟ್ಟ ಅದೀಯಾ ನೀ... ಅಂತ ಕಣ್ಣು ದೊಡ್ಡೂ ಮಾಡಾವ್ರು. ಆಗ ಪಟಕ್ನ್ ಜಾಡಿ ಮೇಲೆ ಕೂತ್‌ಬಿಡ್ತಿದ್ದೆ. ಖರೆ ಹೇಳ್ತೀನಿ... ಹಂಗ ಬ್ಯಾರೆ ಕುಂತ್ರ, ಗೋರಿಮಾನ ಕೈಯ್ಯಾಗಿನ ಚಿಕ್ಕಿ ಬಳಿ ನೋಡಾಕ್‌ ಸಿಗ್ತಿರಲಿಲ್ಲ. ಅನುಸೂಯಾಳ ಬಾರೀಹಣ್ಣು ಸಿಗ್ತಿರಲಿಲ್ಲ. ಪಾಠ ನಡದಾಗ, ಅವ್ರೆಲ್ಲಾ ಒಬ್ಬರಿಗೊಬ್ಬರು ಕಿವ್ಯಾಗ ಏನ್‌ ಮಾತಾಡ್ಕೊತಾರು ಅಂತ ಗೊತ್ತಾಗ್ತಿರಲಿಲ್ಲ. ಇವತ್ತ ಯಾವ ಆಟ ಆಡೂದು ಅಂತ ನಿರ್ಧಾರ ಮಾಡ್ಯಾರಂತ ಗೊತ್ತಾಗ್ತಿರಲಿಲ್ಲ.

ಅಂದಹಂಗ ಗೋರಿಮಾನ ಬಗ್ಗೆ ಹೇಳಬೇಕು. ಪ್ರತೀ ಗುರುವಾರದ ಸಂತ್ಯಾಗ ಅವರ ಅವ್ವ ಅಕಿಗೆ ಎರಡ ಡಝನ್‌ ಚಿಕ್ಕಿ ಗಾಜಿನ ಬಳಿ ತೊಡಿಸ್ಕೊಂಡು ಬರ‍್ತಿದ್ಲು. ಛೆ ನಮ್ಮನ್ಯಾಗ ಒಮ್ಯಾರ? ಎರಡ ಬ್ಯಾಡಾ ಅರ್ಧಾ ಡಝನ್‌? ಊಂಹೂ. ಒಂದಿಷ್ಟು ಪ್ಲಾಸ್ಟಿಕ್‌ ಬಳಿ ಕಲ್ಲರ್‌ಕಲ್ಲರದು ಕೊಡಸ್ತಿದ್ರು ಅದೂ ಅವಾಗವಾಗ ಅಷ್ಟ. ಸಂತ್ಯಾಗ ಹೋಗಿ ಗಾಜಿನ ಬಳಿ ಇಟ್ಕೊಬೇಕಂತ ಎಷ್ಟ ಅನ್ಸೂದು. ಊಂಹೂ ಬಿಡ್ತಿರಲಿಲ್ಲ. "ನನಗ ಬಳಿ ಬ್ಯಾಡಂದ್ರೂ ಅಂದ್ರೂ ನಮ್‌ ಅವ್ವಾ ಕೇಳೂದಿಲ್ಲ. ಪ್ರತೀ ವಾರ ಹೊಸಾ ಬಳಿ ಹಾಕಿಸ್ಕೊಂಬರ‍್ತಾಳು" ಅಂತ ಗೋರಿಮಾ ಮತ್ತ ಮತ್ತ ತೋರಿಸಿ, ಹೇಳ್ದಾಗ, ಖರೇನ ಹೊಟ್ಟಿ ಉರೀತಿತ್ತು..

ಆಮ್ಯಾಲ ಇನ್ನೊಂದ್‌ ವಿಷ್ಯ, ನನ್ನ ಅಕ್ಷರ ಅಷ್ಟೇನೂ ದುಂಡಗಾಗ್ತಿರಿಲಿಲ್ಲ. ಗೋರಿಮಾನ ಉದ್ದೂದ್ಕ ತ್ರಿಕೋನಾಕಾರದ ಅಕ್ಷರಗೋಳು ಸಾವಿತ್ರಿ ಟೀಚರ್‌ಗೆ ಭಾಳ ಸೇರೂವು. ಅಕಿ ನೋಟ್ಬುಕ್‌ ತೋರಿಸಿ, ನೋಡು ನೀ ಹೆಂಗ ಬರೀತಿ? ಅನ್ನೋವ್ರು. ನಂಗ್ ಸಿಟ್‌ ಬಂದ್ರೂ, ಗೋರಿಮಾನ ಹಂಗ ಬರ‍್ಯಾಕ ಕಲೀಬೇಕು ಅಂತ ಅನ್ಕೊಳ್ತಿದ್ದೆ. ಅದಕ್ಕ ಅಕಿ ಅಂದ್ರ, ನನಗ ಭಾಳ ಸೇರ‍್ತಿದ್ಲು. ಮತ್ತಕಿ ನಮಗಿಂತ ನಾಲ್ಕು ವರ್ಷ ದೊಡ್ಡವಳಾಗಿದ್ಲು. ಮುಲ್ಲಾ ಸರ್‌ ಕಲಸೂದ್‌ ಮುಗೀತು ಮಸೀದ್ಯಾಗ, ಅದಕ್ಕ ಈ ಸಾಲಿಗೆ ಹಾಕಿದ್ರು ನಮ್ಮವ್ವಾ ಅಪ್ಪಾ ಅಂತ ಹೇಳ್ತಿದ್ಲು. ಅಲ್ಲೇನ್‌ ಕಲಸ್ತಿದ್ರು? ಉರ್ದೂ ಅಂದ್ರ ಏನ್‌ ಭಾಷಾ ಅದು? ಹೆಂಗ ಬರಿಯೂದು? ನಂಗೂ ಕಲಿಸಿಕೊಡು. ಒಮ್ಮೆ ಟೆಕ್ಸ್ಟ್ ಬುಕ್‌ ತಗೊಂಬಾ ಅಂತ ಗಂಟು ಬೀಳ್ತಿದ್ದೆ. ಅಯ್ಯೋ ಹೊಗಾ. ಬುಕ್‌ ಗಿಕ್‌ ಎಲ್ಲಾ ಇಲ್ಲ. ಮತ್ತ ನಂಗ್‌ ಆಗ್ಲೇ ಮರ‍್ತ್‌ ಹೋಗ್ಬಿಟ್ಟೇತವಾ... ನಡಕ್‌ ಸಾಲಿ ಬಿಟ್ನಲ್ಲಾ ಅದಕ್ಕ.... ಅಂತ ಮಾತು ಮರಿಸಿಬಿಡಾಕಿ.

ಸಾವಿತ್ರಿ ಟೀಚರ್‌ ತಮ್ಮ ಮೊಮ್ಮಗಳ ಜೊತಿ ನನ್ನ ತಮ್‌ ಬಾಜೂಕ ಕೂಡಿಸ್ಕೊಳ್ತಿದ್ರು ಅಂತ ಹೇಳಿದ್ನಲ್ಲಾ... ಬೆಳಗ್ಗೆ ಹತ್ತ ಗಂಟೆ ಸುಮಾರ ಅವರ ಮನೀಂದ ಬಿಸಿಬ್ಯಾಳಿ ಅನ್ನ, ತುಪ್ಪ ಕೊಟ್ಟಕಳಸ್ತಿದ್ರು. ನನಗೂ ಮತ್ತ ಅವರ ಮೊಮ್ಮಗಳಿಗೂ ಅಲ್ಲೇ ಒಂದ ದೊಡ್ಡ ಕಿಡಕಿಯೊಳಗ ಕೂಡ್ರಿಸಿ ಊಟ ಮಾಡ್ರಿ ಅಂತ ಹೇಳ್ತಿದ್ರು. ನನಗ ಮನಸ್ಸ ಆಗ್ತಿರಲಿಲ್ಲ. ಎಲ್ಲಾರ‍್ನೂ ಬಿಟ್ಟು ಹೆಂಗ್‌ ನಾವಷ್ಟ ಉಣ್ಣೂರು ಅಂಥ ಅನ್ನಿಸಿ ಒಂದೆರಡು ತುತ್ತು ತಿಂದು ಸಾಕು ಅಂತ ಸುಮ್ಮನಾಗ್ಬಿಡ್ತಿದ್ದೆ. ಹೊರಗ ಲಮಾಣ್ಯಾರಾಕಿ ಬುಟ್ಯಾಗ ಮಾರ‍್ಕೋತ ಬಂದ, ನೀರಲಹಣ್ಣು, ಸುಣ್ಣದಹಣ್ಣು, ಕಾಕಿ ಹಣ್ಣು ಬಾ ಬಾ ಅಂತಿದ್ವು. ಏನ್ಮಾಡೂದು ಸಾವಿತ್ರಿ ಟೀಚರ್‌ ಬಿಡ್ತಿರಲಿಲ್ಲ. ಒಂದಕ್‌ ಬಿಟ್ಟಾಗ (ಬ್ರೇಕ್‌ ಬಿಟ್ಟಾಗ) ನಾ ಯಾರ ಜೊತೆ ಆಟ ಆಡ್ತೀನಿ ಅಂತೆಲ್ಲಾ ನೋಡ್ತಿದ್ರೋ ಏನೋ ಸಾವಿತ್ರಿ ಟೀಚರ್‌, ಆಗಾಗ ಕರ‍್ದು, ನೀ ಅಕಿ ಜೋಡಿ ಆಡಬೇಡ, ಇಕಿ ಜೋಡಿ ಓಡಾಡಬೇಡ ಅಂತ ಹೇಳಾವ್ರು. ಯಾಕ್ರಿ? ಅಂತ ಕೇಳಿದ್ದಕ್ಕ, ಅವರು ಆ ಜಾತಿ, ಇವರು ಈ ಜಾತಿ. ಇಂಥವರ ಜೊತಿ ಅಷ್ಟ ಆಡು ಅಂತ ಹೇಳಾವ್ರು. ನಾ ಹೂಂ... ಇಲ್ಲ ಊಂಹೂ ಇಲ್ಲ... ನಂಗ್ಯಾರ ಬೇಕೋ ಅವರ ಜೊತಿ ಆಟಾ ಆಡ್ಕೋಂಡ್‌ ಹೋಗ್ಬಿಡ್ತಿದ್ದೆ.

ಮತ್ತ ತಿಂಗಳಿಗೊಮ್ಮೆ ನಮ್‌ ಸಾಲೀಗೆ ಸಾಹೇಬ್ರು ಬರ‍್ತಿದ್ರು. ಅವ್ರು ಬರ‍್ತಾರ್‌ ಅನ್ನೂದು ನಂಗ್‌ ಜಲ್ದೀ ಗೊತ್ತಾಗ್‌ಬಿಡ್ತಿತ್ತು. ಹೆಂಗ ಅಂತ ಹುಡುಗ್ಯಾರೆಲ್ಲಾ ಕೇಳ್ತಿದ್ರು. ನೋಡ್ರೇ... ಟೀಚರು, ದಿನ್ನಾ ಕರಿಮಣಿ ಸರಾ ಹಾಕ್ಕೊಂಬರ‍್ತಾರಿಲ್ಲೋ. ಆದ್ರ, ಇವತ್ತ ಟೀಚರು ಬಂಗಾರದ ತಾಳಿ ಸರಾ ಮತ್ತ ಪಾಟ್ಲಿ, ಬಿಲ್ವಾರ್‌, ಹಾಕ್ಕೊಂಡು, ಹೊಸಾ ಸೀರಿ ಉಟ್ಕೊಂಬಂದಾರಂದ್ರ, ಫ್ಲಾಸ್ಕ್‌ನೊಳಗ ಚಾ ತಗೊಂಡು ಬಂದಾರಂದ್ರ, ಸಾಹೇಬ್ರು ಬರ‍್ತಾರಂತ ಅರ್ಥ ಅಂತ ಕಿವ್ಯಾಗ ಹೇಳ್ತಿದ್ದೆ. ಆಮ್ಯಾಲ ಅದು ಒಬ್ಬರಿಂದ ಒಬ್ಬರ ಕಿವಿಗೆ ದಾಟಿ. ಒಟ್ಟಿನ್ಯಾಗ ಸಾಹೇಬ್ರು ಬರ‍್ತಾರು ಅನ್ನೋ ಸುದ್ದಿ ಕ್ಲಾಸ್‌ ತುಂಬ ಹರಡ್ಕೊಂಬಿಡ್ತಿತ್ತು.

ಸಾವಿತ್ರಿ ಟೀಚರ್‌ ಭಾಳ ಉದಾರಿ ಖರೆ. ಬಡಮಕ್ಕಳ ಬಗ್ಗೆ ಕನಿಕರ ತೋರಸ್ತಿದ್ರು, ಸಹಾಯನೂ ಮಾಡ್ತಿದ್ರು. ನನ್ನನ್ನೂ ಭಾಳ ಪ್ರೀತಿಸ್ತಿದ್ರು. ಆದ್ರ ಆ ನಾಲ್ಕು ವರ್ಷಗಳ ತನಕಾನೂ ಅವರ ಎಷ್ಟೋ ವಿಚಾರಗಳು ನನಗಿಷ್ಟ ಆಗಲೇ ಇಲ್ಲ. ನಂಗೊತ್ತಿಲ್ಲದೇ ಒಂದಿಷ್ಟು ಸುಪೀರಿಯಾರಿಟಿ ಕಾಂಪ್ಲೆಕ್ಸ್‌ ನನ್ನೊಳಗೂ ಏನಾದ್ರೂ ಐತಿ ಅಂತಾದ್ರ, ನೆನಪಾಗೂದ ಸಾವಿತ್ರಿ ಟೀಚರ್‌...

 ಯಾಕ್‌ ಹಂಗ ಮಾಡಿದ್ರಿ? ಸಣ್ಣಮಕ್ಕಳೆಲ್ಲಾ ಒಂದೇ ಅಲ್ಲೇನು? ಯಾಕ್‌ ಹಿಂಗ ವ್ಯತ್ಯಾಸ ಮಾಡ್ತಿದ್ರಿ ಅಂತ ಜೋರಾಗಿ ಕೇಳಬೇಕು ಅಂತ ಎಷ್ಟ ಸಲ ಅನ್ಕೊಳ್ತಿದ್ದೆ. ಆದ್ರ ಸಾಲಿ, ಕಾಲೇಜು, ಕೆಲಸ ಅಂತ ಹೇಳಿ... ನಾ ದೊಡ್ಡವಾಡ ಬಿಟ್ಟು, ಧಾರವಾಡ, ಧಾರವಾಡ ಬಿಟ್ಟು ಬೆಂಗಳೂರಿಗೆ ಬಂದ್ಬಿಟ್ಟೆ. ಕೊನಿಗಾಲಕ್ಕ ಅವರಿದ್ದ ಬೈಲಹೊಂಗಲಕ್ಕ, ಕೊನೀಗೂ ಹೋಗಾಕ ಆಗಲೇ ಇಲ್ಲ.
ದಯವಿಟ್ಟು ಕ್ಷಮಿಸ್ರಿ ಟೀಚರ್‌.......

(ಮುಂದುವರಿಯುವುದು)

Thursday, January 24, 2013

ನಿನ್ನ ಬೆರಳ ಕತ್ತರಸ್ತೀನಿ ಬಾ

ಓಟ 3


ಅಂದಹಂಗ ನಮ್ಮನಿಯೊಳಗ ಆವಾಗಾವಾಗ ನಾಮಕರಣ ಸಂಭ್ರಮ ನಡೀತಿತ್ತು. ಸಾಲಿ ಬಿಟ್ಟಕೂಡ್ಲೇ ಅಪ್ಪಾಜಿ ಲುಂಗಿ ತುಗೊಂಡು ಎರಡು ತುದೀನ್ನಾ ನಾ ಹಿಡ್ಕೋತಿದ್ದೆ. ಇನ್ನೆರಡು ತುದೀನ್ನಾ ಈಟಿದ್ದ ತಂಗಿ ಹಿಡ್ಕೊಂಡು ಕುರ್ಚಿ ಮ್ಯಾಲೆ ಹತ್ತಿ ನಿಲ್ತಿದ್ಲು. ಜುರ್‌ಜುರ್‌ ಅಂತ ಹಾಲು ಹೀರ್‍ಕೋತ, ನಾ...ನೀ... ಅಂತ ಒಂದರ ಮ್ಯಾಲೆ ಒಂದು ಏರಿ ಹಾಲು ಕುಡೀತಿದ್ದ ಬೆಕ್ಕಿನ ಮರಿಗೋಳನ್ನು ತಂದು ಲುಂಗಿತೊಟ್ಟಲಿನ್ಯಾಗ ಹಾಕಿಬಿಡ್ತಿದ್ದ ತಮ್ಮಾ. ಮೂರುನಾಲ್ಕು ದಿನದ ಮರಿಗೋಳು. ಅರ್ಧಂಬರ್ಧಾ ಕಣ್ಣು ತಕ್ಕೋಂಡು ಮಿಹಿಹಿಹಿಯಾಂವ್‌, ಮಿಹಿಯಾಂವ್‌, ಅನ್ಕೊಂಡು ಅಂಜ್ಕೋಂಡ್‌ಬಿಡೋವು. ಒಂದೊಂದನ್ನ ಕೈಯೊಳಗ ಎತ್ತಿ ಏನೇನೋ ಹೆಸರಿಟ್ಟು, ಅವುಗಳ ಕಿವಿ ಹತ್ರ ಕುಟ್‌ಕುಡರ್‌ರ್‌ರ್‌ ಅಂತ ಕೂಗ್ತಿದ್ದೆ. ಆಗ ತಂಗಿ, ತಮ್ಮ ನನ್ನ ಬೆನ್ನು ದಬದಬ ಬಡೀತಿದ್ರು. ಹಿಂಗ ಆ ನಾಲ್ಕೂ ಬೆಕ್ಕಿನ ಮರಿಗೋಳಿಗೆ ಹೆಸರಿಟ್ಟಮ್ಯಾಲೆ, ಅಯ್ಯೋ, ಲಿಲ್ಲಿ.... ಈ ಮರಿಗೆ ಹೆಸರೇನ್‌ ಇಟ್ಟಿದ್ವಿ? ಆ ಮರಿಗೆ ಹೆಸರೇನ್‌ ಇಟ್ಟಿದ್ವ್ಯಾ ಅಂತ ತಂಗಿಗೆ ಕೇಳ್ಕೋತ ಕನ್‌ಫ್ಯೂಸ್‌ ಮಾಡ್ಕೊಂಬಿಡ್ತಿದ್ದೆ. 

ಆಮೇಲೆ ಏನೇನೋ ಉಲ್ಟಾಪುಲ್ಟಾ ಸಮಜಾಯಿಷಿ ಮಾಡ್ಕೊಂಡು, ಜೋಜೋ ಅಂತ ಜೋಗುಳ ಹಾಡಿಬಿಡ್ತಿದ್ವಿ. ಮರಿಗೋಳು ಹಗೂರ್‍ಕ ಮ್ಯಾಲ ಏರಾಕ್‌ ನೋಡ್ತಿದ್ವು. ಏಯ್‌ ಸುಮ್ನಿರ್‌ರಿ ಎಲ್ಲಾರೂ... ಅಂತ ಮತ್ತೆ ಮತ್ತೆ ಮಲಗಿಸ್ತಿದ್ವಿ. ಹಂಗೆಲ್ಲಾ ಮಾಡಬಾರದು... ಸುಮ್ನಿರ್‍ರಿ ಅಂತ ಹೇಳಿದಷ್ಟೂ ಕಂಗಾಲಾಗಿ ಮಿಹಿಹಿಹಿಯಾಂವ್‌ ಮಿಹಿಹಿಹಿಯಾಂವ್‌ ಒದರಿದ್ದ ಒದರಿದ್ದು. ಅಷ್ಟ ಅಲ್ಲಾ... ಹೆದರಿಕಿಗೆ ಚೂಪುಗುರಿನಿಂದ ಹರ್‍ಕೊಂಬಿಡೋವು. ಮುಂಗೈ ಮ್ಯಾಲೆ ತೆಳ್ಳಗ ಒಂದಿಷ್ಟು ಬಿಳಿಗೆರೆಗೋಳು ಮತ್ತದರ ನಡುವ ಸಣ್ಣೂಸಣ್ಣೂ ಕಂಡೂಕಾಣದಂತಾ ರಕ್ತದಚುಕ್ಕಿಗೋಳು. ಚುರುಚುರು ಅಂತಿದ್ರೂ ಕೈಯ್ಯಾಡಿಸ್ಕೊಂಡ್ಹಂಗ ಮಾಡ್ಕೋತ ತೊಟ್ಟಲಲುಂಗಿ ತೂಗಿದ್ದಾ ತೂಗಿದ್ದ.

ಅಪ್ಪಾಜಿ, ಅವ್ವ ಸಾಲಿಂದ ಬರೋತನಕ ಈ ಸಂಭ್ರಮ ಕಂಟಿನ್ಯೂ. ಅಪ್ಪಾಜಿ ಅಂಗಳದೊಳಗ ಕಾಲಿಟ್ರು ಅಂತ ಗೊತ್ತಾದದ್ದ ತಡ. ಅವರ ಇಪ್ಪತ್ತೂ ಹೆಜ್ಜಿಗೋಳು ಮನಿಬಾಗಿಲಿಗೆ ಬರೂದ್ರಾಗ ದುಡುದುಡು ಅಂತ ಅಡುಗಿ ಮನಿಯೊಳಗ ಇದ್ದ ಪಾರ್ಲೆಜಿ ರಟ್ಟಿನ ಡಬ್ಬಿ ಕಡೆ ಓಡಿಬಿಡ್ರಿದ್ವಿ. ಅದರೊಳಗ ನಮ್‌ ಬೆಕ್ಕವ್ವಾ ಮ್ಯಾವ್‌ ಮ್ಯಾವ್‌ ಅನ್ಲಾರ್‍ದ ಇಷ್ಟಿಷ್ಟ್‌ ದೊಡ್ಡೂ ದೊಡ್ಡೂ ಕಣ್‌ ಮಾಡ್ಕೋತ ಕೂತಿರ್‍ತಿದ್ಲು. ಹಾಲ ಕುಡ್ಯೂ ನನ್ನ ಮರಿಗೋಳ್ನ್‌ ಬಿಡಿಸಿ, ಎತ್ಕೋಂಡ್‌ ಹೋಗ್ಯಾರಲ್ಲಾ... ಅಂತ ಅದಕ್ಕ ಸಿಟ್‌ ಬರ್‍ತಿತ್ತೋ ಏನೋ..., ಆದ್ರೂ ತುಟಿ ಪಿಟಕ್‌ ಅನ್ನದ ಕಿವಿ ನಿಗರಿಸಿಕೊಂಡು ಗೋಣ ಎತ್ತರಿಸಿಕೊಂಡು ಮರಿಗಾಗಿ ಕಾಯ್ತಿತ್ತು. ಪ್ರತೀ ಸಲ ಮರಿ ಹಾಕಿದಾಗ ನಾವು ಹಿಂಗ ಆಟಾ ಆಡಿ ಮತ್ತ ವಾಪಸ್‌ ಅಕಿಕಡೆ ಬಿಡ್ತೀವಿ ಅನ್ನೂದು ಖಾತ್ರಿ ಇತ್ತು. ಹಿಂಗಾಗಿ ನಮ್ಮ ಬೆಕ್ಕವ್ವ ಮತ್ತ ನಮ್ಮ ನಡುವ ಏನೋ ಒಂಥರಾ ಅಂಡರ್‌ಸ್ಟ್ಯಾಂಡಿಂಗ್‌ ಬೆಳದಬಿಟ್ಟಿತ್ತು. 

ಅಪ್ಪಾಜಿ ಒಳಗ ಬರ್‍ತಿದ್ದ ಹಂಗ.... ನಾ.. ನೀ ಅಂತ, ಒಬ್ರು ಬಚ್ಚಲ ಮನೀಗೆ ಓಡೀದ್ರ ಇನ್ನೊಬ್ಬರು ಹಿತ್ಲಕ್ಕ... ಕೈಕಾಲು ಮುಖ ತೊಳ್ಕೋಳ್ಳಾಕ ಅವಸ್ರಾ.  ಆ ಅವಸರಕ್ಕ ಅಂಗಿ ಮ್ಯಾಲೆಲ್ಲ ನೀರು ಚಲ್ಕೊಂಡು, ಬಚ್ಚಲಮನಿ ಮುಂದ ಹಾಕಿದ ಮ್ಯಾಟ್‌ಮೇಲೆಲ್ಲಾ ನೀರು ಬೀಳ್ಸಿ, ಮೂಗೊಳಗ, ಕಣ್ಣೋಳಗ ನೀರು ಹೋಗಿ, ಅಕ್ಷಿ ಅನ್ಕೋತ... ಚುರುಮುರಿ ವಗ್ಗರಣಿ ಹಾಕ್ಕೋತ ನಿಲ್ತಿದ್ದ ಅವ್ವನ ಸೆರಗ ಜಕ್ಕೊಂಡು ಮುಖ ಒರೆಸಿಕೊಳ್ತಿದ್ವಿ. ಆಮ್ಯಾಲ ದೇವರ ಗೂಡಿನೊಳಗ ಉದ್ದೂದ್ಕ ನಿಂತ, ಕುಂತ ದೇವರಗೋಳ್ನ, ಮೂಲೇಲಿ ಕುಂಕುಮ ಹಚ್ಕೊಂಡು ಕೂತಿದ್ದ ತೆಂಗಿನಕಾಯಿನ್ನಾ, ಪಟಕ್ನ್‌ ಸೈಡ್‌ಗಣ್ಣೀಲೆ ನೋಡಿದ್ಹಂಗ ಮಾಡ್ತಿದ್ದೆ. ಕೈಮುಕ್ಕೋಂಡ್‌ ಹಂಗ ನಿಂತಿರಬೇಕಾದ್ರ ಶಾಂತೀಲೇ ಉರೀತಿದ್ದ ದೀಪದ ದೃಷ್ಟಿಕಡೆ ಹೊರಳತಿತ್ತು. ಅದೇನೋ ಗೊತ್ತಿಲ್ಲ... ದೀಪ ನೋಡ್ತಿದ್ಹಂಗ ಏನೋ ಒಂಥರಾ ಖುಷಿ, ಅದುವರೆಗೂ ಅಪ್ಪಾಜಿ ಬಂದ್ರು ಅನ್ನೂ ಹೆದರಿಕಿಗೆ ದಡಬಡ ಅಂತಿದ್ದ ಮನಸ್ಸಿಗೆ ಸಮಾಧಾನ. ಆಮೇಲೆ ಪುಸ್ತಕ, ನೋಟ್‌ಬುಕ್ಕಾ ಅನ್ಕೋತ, ಚುರುಮುರಿ ಬುಟ್ಟಿಗೆ ಕೈ ಹಾಕ್ಕೋತ ಓಡಾಡ್ಕೊಂಡಿದ್ದುಬಿಡ್ತಿದ್ದೆ. 

ಮರಿಗೋಳು ಚುಲೋತ್ನಂಗ್‌ ಹರ್‍ಕೊಳ್ಳೋದಕ್‌ ಶುರು ಮಾಡೋತನಕಾನೂ ಈ ತೊಟ್ಟಿಲಲುಂಗಿಯಾಟ ಇರೂದನ. ಒಂದಿನಾ ಏನಾತಂದ್ರ, ಹಿಂಗ ಆಟಾ ಆಡ್ಕೋತ ಇವತ್ತು ಬರೀ ತೊಟ್ಟಲಾಗ್‌ ಹಾಕೂದ್‌ ಬೇಡ. ಮರಿಗೋಳಿಗೆ ಶೃಂಗಾರ ಮಾಡೂಣು, ಆಮೇಲೆ ತೊಟ್ಲಾಗ್ ಹಾಕೂಣು ಅಂತ ತಂಗಿಗೆ ಹೇಳಿದೆ. ಅದಕ್‌ ಆಕಿ ಭಾರೀ ಖುಷೀಲೆ, ಕನ್ನಡಿ ಹತ್ರ ಓಡಿದ್ಲು. ಸ್ಟೂಲ್‌ ಇಟ್ಕೊಂಡು, ಕಾಡಿಗೆ, ಪೌಡರ್‌, ಬಾಚಣಿಕೆ, ಕೊಬ್ಬರಿ ಎಣ್ಣೆ, ಟಿಕಳಿ ಪ್ಯಾಕೇಟ್‌ ಎಲ್ಲಾ ಫ್ರಾಕಿನ ಉಡಿಯೊಳಗ ತುಂಬ್ಕೋಂಡ್‌ ಬಂದ್ಲು. ನಾ ಕೆಳಗ ಕೂತು ತೊಡಿಯೊಳಗ ಒಂದು ಮರೀನ್ನಾ ಅಂಗಾತ ಮಲಗಿಸ್ಕೊಂಡು ಅದರ ಮುಂಗಾಲು ಹಿಂಗಾಲುಗಳ್ನಾ ಗಟ್ಟಿ ಹಿಡ್ಕೊಂಡೆ. ತಂಗಿ ಅದರ ಕುತ್ತಿಗಿ ಹಿಡ್ಕೊಂಡ್ಲು. ಒಂದ್‌ ಬಟ್‌ ಎಣ್ಣಿಯಿಂದ ಅದರ ತಲಿ ಸವರ್‍ದೆ. ಪಚ್ ಅಂತ ಕೂತ ಇಟೀಟ ಬಿಳಿಬಿಳಿ ಕೂದಲಾ ಬಾಚಿ ನಡಕ್‌ ಬೈತಲಿ ತೆಗ್ದೆ. ಆಮ್ಯಾಲ ಗಲ್ಲಕ್ಕ ಇನ್ನೇನ್‌ ಪೌಡರ್‌ ಹಚ್ಚಬೇಕು ಅನ್ನೋ ಹೊತ್ತಿಗೆ ಮ್ಯಾಹ್‌ಹ್‌... ಅಂದಿದ್ದನ್ನ ಕಾಲು ಬಿಡಿಸ್ಕೊಂಡು ಜಿಗಿಯಾಕ್‌ ನೋಡ್ತು. ಗಟ್ಟಿ ಹಿಡ್ಕೊಂಡಿದ್ದಕ್ಕ ಛುಲೋತ್ನಂಗ್‌ ಚೂರ್‍ಕೊಂಬಿಡ್ತು. ಒಂದೆರಡು ದಟ್ಟ ಬಿಳಿಗಿರಿ ಮತ್ತು ಸ್ವಲ್ಪ ದೊಡ್ಡ ರಕ್ತ ಚುಕ್ಕಿ ಕಾಣಿಸ್ಕೊಂಡ್ವು. ಉರೀತಿದ್ರೂ ಅರ್ಧಕ್ಕ ಬಿಡೂಹಂಗಿಲ್ಲಾ. ಕಾಡಿಗಿ ಡಬ್ಬಿ ತಗೊಂಡೆ. ಮುಚ್ಚಳಾ ತೆಗೀಯಾ ಲಿಲ್ಲಿ ಅಂದೆ. ತುದಿಗಾಲ್‌ಲೇ ಕುಂತು ಇದನ್ನೆಲ್ಲಾ ನೋಡ್ತಿದ್ದ ಆಕಿ, ಅಕ್ಕಾ, ಈಗsss ಹಚ್ಚಬ್ಯಾಡಾ, ದೀಪದ ಕಡ್ಡಿ ತಗೊಂಬರ್‍ತೀನಿ ಅಂತ ಹೋದ್ಲು. ಕಡ್ಡಿ ತರ್‍ತೀನಿ ಅಂದಾಕಿ, ಕಡ್ಡಿಪೆಟ್ಟಿಗಿ ಹಿಡ್ಕೊಂಡ್‌ ಬಂದ್ಲು. ಕಡ್ಡಿಗೆ ಕಾಡಿಗಿ ಹಚ್ಚಿ, "ಅಕ್ಕಾ ತುಗೋ ಈಗ ಕಣ್ಣಿಗೆ ಹಚ್ಚು’ ಅಂದ್ಲು. ಕಣ್ಣ ಹತ್ರ ಕಡ್ಡಿ ತಗೊಂಡ್‌ ಹೋಗ್ತಿದ್ದಂಗ ಗಟ್ಯಾಗಿ ಕಣ್ಣು ಮುಚ್ಕೊಂಬಿಡೂದು ಮರಿ. ಹಿಂಗ ನಾಲ್ಕೈದು ಸಲ ಆತು. ಕೈಯ್ಯಾಗ ಬ್ಯಾರೆ ಉಗುರಿಂದ ಕುರುಕುರು ಮಾಡಾಕ್‌ ಹತ್ತಿತ್ತು. ಆಗ ಲಿಲ್ಲಿ, "ಅಕ್ಕಾ ನಾ ಕಣ್ಣು ಅಗಲಿಸ್ತೀನಿ ಅದರ್‍ದು ನೀ ಹಚ್ಚು" ಅಂದ್ಲು. ಆಯ್ತು ಅಂತ ಪಟಕ್ನ್‌ ಎರಡೂ ಕಣ್ಣೀಗೆ ಕಾಡಿಗಿ ಹಚ್ಚಿಬಿಟ್ವಿ. ಯಪ್ಪಾ! ಏನ್‌ ವಿಜಯೋತ್ಸವಾಆಆಆಆ ನೋಡಬೇಕು ಅದನ್ನಾ. 

ಪಾಪ ಮರಿ ಕಣ್ಣಾಗ ನೀರಬಂದ್ಬಿಟ್ವು. ಆದರೂ ಬಿಡಲಿಲ್ಲ, ಸಣ್ಣದೊಂದು ಟಿಕಳಿ ಹಚ್ಚಿದ್ಲು ತಂಗಿ ಅದಕ್ಕ. ಐ ಅಕ್ಕಾ ಸಣ್ಣ ಹುಡುಗಿ ಪಾಪುಗತೆ ಕಾಣಾತೇತಲ್ಲಾ? ಅಂತ ಚಪ್ಪಾಳಿ ಬಡಬಡದು ಜಿಗಜಿಗದು ನಕ್ಳು. ಇನ್ನೇನ್‌ ಮಾಡೋದುಳೀತು.... "ಹಾಂ! ಅಕ್ಕಾ, ಹಿರೇಬಾಗೇವಾಡಿ ದರಗಾ ಜಾತ್ರಿಯೊಳಗ ದೊಡ್ಡವ್ವ ಕೊಡ್ಸಿದ್ದ ಬಳಿ ಇದಕ್ಕ ಹಾಕೂಣು?” ಅಂದ್ಲು. ಹೂಂ... ಅಂತ ಹೇಳಿ ಹಗೂರ್‍ಕ ಬಳಿ ಹಾಕಬೇಕು ಅನ್ನೂದ್ರಾಗ್‌, ಮುಂಗಾಲಿಂದ ಆ ಬಳಿ ಹಾಕೂದನ್ನ ತಪ್ಪಿಸ್ಕೊಳ್ಳೂದು. ಹಂಗೂ ಹಿಂಗೂ ಮಾಡಿ ಕುತ್ತಿಗಿಗೆ ಬಳಿ ಹಾಕಿಬಿಟ್ವಿ. ಬಿಳಿಬಿಳಿ ಬೆಕ್ಕು, ಕರಿಕರಿ ಕಾಡಿಗೆ, ಕೆಂಪುಕೆಂಪು ಟಿಕಳಿ, ಹಸರ್‍ಹಸರ್‌ ಬಳಿ ಹಾಕ್ಕೊಂಡು ಪುಟುಪುಟು ಅಂತ ಓಡಾಡಿದ್ದ ಓಡಾಡಿದ್ದು. ಅಯ್ಯೋ ಲೀ.. ನೇಲ್‌ಪಾಲಿಷ್‌ ಹಚ್ಚೋದನ್ನಾ ಮರತ್ವಲ್ಲ.... ಅಂತ ಹೇಳ್ತಿದ್ದಂಗ, ತಡಿಯಕ್ಕಾ ದೊಡ್ಡವ್ವ ಕೊಡ್ಸಿದ್ದು ಗುಲಾಬಿ ನೇಲ್‌ಪಾಲಿಷ್‌ ತೋಂಬರ್‍ತೀನಿ ಅಂತ ಓಡಿದ್ಲು. ಅಲ್ಯಲ್ಲೇ ಸಂದ್ಯಾಗ ಅಡಿಕ್ಕೊಳ್ಳತಿದ್ದ ಮರೀನ್ನಾ ಹಿಡ್ಕೊಂಬಂದು ಕುರ್ಚೀ ಮ್ಯಾಲೆ ಕೂತು, ಅದರ ಕಾಲು ಹಿಡ್ಕೊಂಡು ಹಗೂರ್‍ಕ್‌ ಪ್ರೆಸ್‌ ಮಾಡ್ತಿದ್ದಂಗ ಸಣ್ಣೂ ಸಣ್ಣೂ ಬಿಳಿಎಳ್ಳಿನ ಸೈಝಿನ ಉಗುರು ಹೊರಗ ಬಂದ್ವು. ತಂಗಿ ಬ್ರಷ್‌ನಿಂದ ಪಟಕ್‌ ಅಂತ ನೇಲ್‌ಪಾಲಿಷ್‌ ಹಚ್ಚಲಿಕ್ಕೆ ನೋಡ್ತಿದ್ಲು. ಆದ್ರ ಪಾಪ ಅದು ತಡ್ಕೋಂಡು ತಡ್ಕೋಂಡು ಒಮ್ಮೆ ಜೋರಾಗಿ ಚೂರ್‍ಕೊಂಡ್‌ಬಿಡ್ತು. ಅದನ್ನ ಎತ್ತಿ ಒಗದಾಕಿನ ಹಿತ್ತಲಕ್ಕ ಓಡಿ, ನೀರ ಹಚ್ಚಿ ತೊಳ್ಕೊಂಬಂದೆ. ಯಾಕಂದ್ರ ಈ ಸಲ ಅಲ್ಲಿ ಮೂಡಿದ್ದು ಬಿಳಿಗೆರಿಯಲ್ಲ. ಎರಡು ಸೆಂಟಿಮೀಟರಿನಷ್ಟು ಕೆಂಪಗೆರಿ! ಉರಿ ಅಂದ್ರ ಉರಿ. 

ಲೀ ಹೋಗು, ನೇಲ್‌ಕಟರ್‌ ತುಗೊಂಬಾ ಅಂದೆ. ಯಾಕಕ್ಕಾ ಅಂದ್ಲು. ಉಗುರು ಕಟ್‌ ಮಾಡೋಣ ಅಂದೆ. ಹಾಂ! ಹೌದು. ಆಗ ನಮಗವು ಚೂರಾಂಗಿಲ್ಲ. ಎಲ್ಲಾ ಮರಿಗೋಳಿಗೂ ಉಗುರು ಕಟ್‌ ಮಾಡಿಬಿಡೂಣು ಅಂದ್ಲು.  ಸರಿ ಅಂತ ಉಗುರು ಕಟಿಂಗ್‌ ಕಾರ್ಯಕ್ರಮ ಶುರು. ಕೈಮ್ಯಾಲಿನ ಕೆಂಪಗೆರಿ ಬಗಬಗಾ ಅಂತಿತ್ತು. ಆದರೂ ಹಗೂರ್‍ಕ ಮರಿ ಕಾಲು ಹಿಚುಕೂದು. ಪಟ್‌ ಅಂತ ಉಗುರು ಕಟ್‌ ಮಾಡೋದು. ಆಗೆಲ್ಲಾ ಮರಿ ಕಣ್ಣಿಷ್ಟು ದೊಡ್ಡದೊಡ್ಡ ಮಾಡ್ಕೊಂಡು, ಕಿವಿ ನಿಗರಿಸಿಕೊಂಡು ಬಿಡಿಸ್ಕೊಳ್ಳಾಕ್‌ ನೋಡ್ತಿತ್ತು. ಹಿಂಗ ಎರಡು ಬೆಕ್ಕಿಗೆ ಉಗುರು ಕಟ್‌ ಮಾಡಿದ್ದಾಯ್ತು. ಅಷ್ಟೊತ್ತಿಗೆ ಅಂಗಳದಿಂದ ಅಪ್ಪಾಜಿ ಹೆಜ್ಜಿ ಸಪ್ಪಳ ಕೇಳಿಸ್ತು. ತಂಗಿ ನಾನು ಹಿತ್ತಲಕ್ಕ ಓಡಿಹೋಗ್‌ಬಿಟ್ವಿ. ವಾಪಸ್‌ ಬಂದಾಗ ಬೆಳ್ಳಾನ ಬಿಳಿ ಬೆಕ್ಕಿನ ಮರಿ ಕರಿ ಮಕಾ ಮಾಡ್ಕೊಂಡು ಮಿಹಿಯಾಂವ್‌, ಮಿಹಿಯಾಂವ್‌ ಅಂತ ಅಪ್ಪಾಜಿ ಮುಂದ ಒಂದಸಮಾ ಗಂಟಲಾ ಹರ್‍ಕೋತ್, ಕಂಪ್ಲೇಂಟ್‌ ಹೇಳ್ಕೋತ ನಿಂತಿತ್ತು. ಅದರ ಬೆಕ್ಕವ್ವ ಬಂದು ಅದರ ಕಣ್ಣು, ತಲಿ ನೆಕ್ಕಿದ್ದಕ್ಕ ಅದು ಹಂಗ್ ಕಾಣಾತಿತ್ತು. ಹೆಂಗಂದ್ರ ಸಣ್ಣ ರಾಕ್ಷಸನ ಹಂಗ! ಪಿಳಿಪಿಳಿ ಕಣ್ಣು, ಕರಿಕರಿ ಮಕಾ...

ಅಪ್ಪಾಜಿ ಅದನ್ನ ನೋಡಿದಾವ್ರ, ಏನ್‌ ಶ್ರೀ ಇದೆಲ್ಲಾ ಅಂತ ಜೋರ್‌ ಮಾಡಿದ್ರು. ನಾನು ತಂಗಿ ಗದಗದಗದಗದಾ...  ಏನಿಲ್ರಿ ಅಪ್ಜಿ, ಅವು ಚೂರ್‍ಕೊಂಡ್ತಾವಲ್ಲಾ, ಅದಕ್ಕ ಉಗುರು ಕಟ್‌ಮಾಡಿದೆ ಅಷ್ಟ. ಬೇರೆ ಏನೂ ಮಾಡಿಲ್ರಿ ಅಂದೆ. ಮತ್ತಷ್ಟು ಸಿಟ್‌ ಬಂತು ಅಪ್ಪಾಜಿಗೆ. ಬಾ ಇಲ್ಲೇ ಬಾ... ಬಾ ಅಂತ ಕೈ ಹಿಡಿದು ಜಗ್ಗಿದ್ರು. ಬಿಡ್ರಿ ಅಪ್ಜಿ, ನಾ ಇನ್ನೊಮ್ಮೆ ಮಾಡೂದಿಲ್ಲ ಅಂತ ಅಳೋದಕ್ಕೆ ಶುರು ಮಾಡಿದೆ. ತಂಗಿ ಪಿಳಿಪಿಳಿ ಕಣ್‌ಮಾಡ್ಕೊಂಡು ನನ್ನಾ ನೋಡ್ತಿದ್ಲು. ಅಪ್ಪಾಜಿ ದರದರ ಎಳ್ಕೊಂಡಾವ್ರ, ಇನ್ನೊಮ್ಮೆ ಆ ಮರಿಗೋಳ್ನ ಮುಟ್ಟಿದಿ ಅಂದ್ರ, ನಿನ್ನ ಬೆರಳ್‌ ಕತ್ತರಿಸ್ತೀನಿ ಅಂದ್ರು. "ಯಾಕ್ರಿ"? ಅಂದೆ. "ಯಾಕಾ, ಯಾಕಂತ ಬ್ಯಾರೆ ಕೇಳ್ತಿ? ನೀ ಹೆಂಗ್‌ ಊಟಾ ಮಾಡ್ತೀ ನೋಡಬೇಕು ಅದಕ್ಕ" ಅಂದ್ರು. ಸ್ಪೂನ್‌ನಿಂದ! ಅಂತ ಮನಸಲ್ಲಿ ಅನ್ಕೊಂಡೆ, ಆದ್ರೆ ಬಾಯಿಬಿಡಲಿಲ್ಲ ಅಷ್ಟ. ಕಣ್ಣುತುಂಬಾ ನೀರು ತುಂಬ್ಕೊಂಡು, ನನ್ನ ಬಿಡ್ರಿ ಅಪ್ಜಿ ಅಂತ ಕಿರುಚಿದೆ. ಕೈಬಿಟ್ಟು, ಇನ್ನೊಂದ್ಸಲ ಇಂಥಾದನ್ನೆಲ್ಲಾ ಮಾಡು ಗ್ಯಾರಂಟಿ ಕೈಬೆರಳನ್ನೆಲ್ಲಾ ಕಟ್ ಮಾಡಿಬಿಡ್ತೀನಿ ಅಂತ ಜೋರ್‍ ಮಾಡಿದ್ರು. 

ಕೈಕಾಲು ಮುಖ ತೊಳ್ಕೊಂಡು, ಸಿಟ್‌ನಿಂದ ದೇವರಗೂಡ್‌ ಹತ್ರ ಹೋದೆ. ದೀಪಾ ಈಸಲ ಜೋರಾಗಿ ಉರೀತಿದ್ದಹಂಗ ಕಾಣ್ತು. ಯಾಕೋ ಸಮಾಧಾನ ಆಗ್ಲಿಲ್ಲ. ಗಂಟಲು ಉಬ್ಬಿಬಂದಿತ್ತು. ಅಪ್ಪಾಜಿ ನನ್ನ ಕೈ ಹಿಡಿದು ಎಳೆದದ್ದು ಸಿಟ್ಟುಬಂದುಬಿಟ್ಟಿತ್ತು! ಬಿಕ್ಕೋತ ಬಿಕ್ಕೋತ ಪುಸ್ತಕ ಹಿಡ್ಕೊಂಡು ಕುರ್ಚಿ ಹತ್ರ ಹೋದೆ. ಚಕ್ಕಳ್‌ಮಕ್ಕಳ್‌ ಹಾಕ್ಕೋಂಡು, ತೊಡೆಮೇಲೆ ದಿಂಬು ಇಟ್ಕೊಂಡು ಕೂತೆ. ಕಣ್ಣು ತಿಕ್ಕೋತ ಕೂತಿದ್ದೆ. ಪುಸ್ತಕದಾಗಿನ ಅಕ್ಷರಗಳು ಕಾಣದಷ್ಟು ಕಣ್ಣು ತುಂಬ್ಕೊಂಡಿದ್ವು. ಆಗ ಇನ್ನೊಂದು ಮರಿ ಬಂದು ಮಿಹಿಹಿಹಿಹಿಯಾಂವ್‌ ಅಂತ ಮಕಾ ಎತ್ತಿತು. ಐ... ಅಂತ ಎತ್ಕೋಳ್ಳಾಕ್ ನೋಡಿದೆ. ಅಪ್ಪಾಜಿ ಅಲ್ಲೇ ಆಕಡಿಂದ್‌ ಈಕಡೆ ಈಕಡಿಂದ್‌ ಆಕಡೆ ಅಡ್ಡಾಡ್ಕೋತ ಇದ್ರು. ಸುಮ್ಮನ ಮೂಗು, ಮಕಾ ವರಿಸ್ಕೋತ ಕೂತೆ. ಅಪ್ಪಾಜಿ ಆ ಕಡೆ ಹೋಗ್ತಿದ್ದಂಗೆ ಪಟ್ನ್‌ ಬೆಕ್ಕಿನ ಮರಿ ಎತ್ಕೊಂಡು ತೊಡಿಯೊಳಗ ಇಟ್ಕೊಂಡು ಅದರ ಮೇಲೆ ದಿಂಬು, ದಿಂಬಿನ ಮ್ಯಾಲೆ ಪುಸ್ತಕ, ಪುಸ್ತಕದ ಸಾಲಿನ್‌ ಮ್ಯಾಲೆ ಬೆರಳಿಟ್ಕೊಂಡು ಓದೂ ಶಾಸ್ತ್ರ ಮಾಡಕ್‌ ಶುರು ಮಾಡಿದೆ. ಮರಿ ಗುಳುಗುಳು ಮಾಡ್ಕೋತ ಬೆಚ್ಚಗ ಮಲ್ಕೊಂಬಿಡ್ತು.

ಅಪ್ಪಾಜಿ ಹತ್ರ ಬಂದು, "ತಂಗಿ, ನೋಡು ನೀ ಊಟಾ ಮಾಡಬೇಕಂದ್ರ ಬೆರಳು ಬೇಕೋ ಹೌದಿಲ್ಲೋ?” ಅಂದ್ರು. ಹೂಂ ಅಂತ ಗಲ್ಲ ಉಬ್ಸಿದೆ. "ಹಂಗನ... ಬೆಕ್ಕು ಮತ್ತು ಕೆಲವು ಪ್ರಾಣಿಗೋಳು ಬ್ಯಾಟಿ ಆಡಾಕ್‌ ಉಗುರು ಅಂದ್ರ ಪಂಜರಾ ಬೇಕು" ಅಂದ್ರು. ಓಹ್‌ ಹೌದಲ್ಲಾ ಅಂತ ಮನಸ್ಸಿನೊಳಗ ಅನ್ಕೊಂಡೆ. "ಆದ್ರ ಮರಿ ಇನ್ನೂ ಸಣ್ನೂ ಅದಾವು. ಅವಿನ್ನೂ ಬರೇ ಹಾಲು ಕುಡೀತಾವು. ಅವಿನ್ನೂ ಜೊಂಡಿಗ್ಯಾ, ಇಲಿ ತಿನ್ನೂದು ಭಾಳ ದೂರ ಅಲ್ಲೇನ್ರಿ ಅಪ್ಜಿ?" ಅಂದೆ. "ಇರಬಹುದು. ಆದ್ರ ಈಗಾಗಲೇ ಅವು ಸಣ್ಣ ಸಣ್ಣ ಹುಳುಹುಪ್ಪಡಿ ತಿನ್ನೋದಕ್ಕ ಟ್ರೈ ಮಾಡ್ತಿರ್‍ತಾವು. ತನ್ನಿಂದ್‌ ತಾನ ಊಟ ಮಾಡಾಕ್‌ ಕಲೀತಿರ್‍ತಾವು. ಇನ್ನೊಮ್ಮೆ ಹಿಂಗೆಲ್ಲಾ ಮಾಡಬಾಡದಾ" ಅಂತ ಹೇಳಿ, ಯಾವುದೋ ಬುಕ್‌ ಹಿಡ್ಕೊಂಡು ಆ ಕಡೆ ಹೋದ್ರು. 

ನಾ ತಲೆದಿಂಬು ಎತ್ತಿದೆ. ಅದು ಮುದ್ದಿಯಾಗಿ ಬೆಚ್ಚಗ ಮಲ್ಕೊಂಬಿಟ್ಟಿತ್ತು. ತಂಗಿ ಹೊರಗಿಂದ ಓಡಿಬಂದು, ಅಕ್ಕಾ, ಮೂರ ಬೆಕ್ಕು ಕಾಣಾತಾವು. ಆಗ್ಲೇ ಬಾವ್ಗಾ ಬಂದು, ಮರಿ ಬಾಯಾಗ್‌ ಹಿಡ್ಕೋಂಡ್‌ ಹೋತು ಅಂತ ಅಳುಮುಖ ಮಾಡಿದ್ಲು. ಅಷ್ತೊತ್ತಿಗೆ ಅಲ್ಲಿಗೆ ಬಂದ ಅವ್ವ, "ನಿನ್ನೆ ಹೇಳಿದ ಸ್ಪೆಲ್ಲಿಂಗ್‌ ಬಾಯಿಪಾಠ ಮಾಡೀದೇನ? " ಅಂದ್ಲು. ನಾ ಹೂಂ... ಅಂತ ಹೇಳಿ ತೋರಸಕ್ಕೆ ಶುರು ಮಾಡಿದೆ. ಅಭ್ಯಾಸ ಮಾಡದ ಹಂಗ ಆಡಾಕ್‌ ಹೋಗಿದ್ದ ತಮ್ಮನಿಗೆ ಅಂಗಳದೊಳಗ ಅಪ್ಪಾಜಿ ಬಿಸಿಬಿಸಿ ಕಡಬು ಕೊಡ್ತಿದ್ರು. ಹಿತ್ತಲ್‌ ಕಡೀಂದ ಬಾವ್ಗಾ ಆವಾಝ್‌ ಕೇಳಾತಿತ್ತು. ಗುರ್‌ಗುರ್‌ ಬುರ್‌ಬುರ್‌... ಕರುಳು ಚುಳ್ ಅಂತಿತ್ತು. ಕಿಡಕಿಯೊಳಗ ನೋಡಬೇಕು ಅಂದ್ರ ಕರ್‍ನ್‌ ಕತ್ಲು. ಬ್ಯಾಟರಿ ತಗೊಂಡು ನೋಡಬೇಕು, ಅಂದ್ರ ಕುಂತ್‌ ಜಾಗಾ ಬಿಟ್ಟು ಏಳೂಹಂಗಿಲ್ಲ. ಅಪ್ಪಾಜೀಈಈಈಈಈ! 

(ಮುಂದುವರಿಯುವುದು...)