Tuesday, February 26, 2013

ಈ ರೇಖಾ ನೆಟ್ಟಗಿಲ್ಲಾ...


(ಓಟ 8)

ಶುಕ್‌ಶುಕ್ರಾರ, ಸೋಮ್‌ಸೋಮ್ವಾರ ಕಂಪಲ್ಸರಿ ಶೆಗಣಿಯಿಂದ ಬಾಗಿಲ ಮುಂದಿನ ಜಾಗಾನ್ನಾ ಸಾರ್‍ಸಬೇಕು ಅಂತ ಫರ್ಮಾನು ಹೊರಡಿಸಿಬಿಟ್ಟಿದ್ಲು ನಮ್ಮವ್ವ ಕೌಸಲ್ಯ. ಏನ್‌ ಕಾಡ್ತಾಳವಾ ಇಕಿ... ಅಂತ ನಿದ್ದಿಗಣ್ಣಾಗ   ಕುಸುಕುಸು ಮಾಡ್ಕೋತ ಹಿತ್ಲಕ್‌ ಹೋಗಿ, ಬುಟ್ಯಾಗಿನ ಶೆಗಣಿ ತಂದು ಅಂಗಳಕ್ಕ ಒಗ್ತಾ ಒಗದ್ರ ಪಚ್‌ ಅಂತ ನೆಲಾ ಹಿಡ್ಕೊಂಡ್‌ ಕೂತ್ಬಿಡ್ತಿತ್ತದು. ಆಮ್ಯಾಲ ಸ್ವಲ್ಪೊತ್ತು ಶೆಗಣಿ ಮುಂದ ಮಕಾ ಕಿವುಚ್ಕೊಂಡ ಕೂತ್‌ಬಿಡ್ತಿದ್ದೆ. ಆ ಕಡೆ ಈ ಕಡೆ ದುಡುದುಡು ಓಡ್ಕೋತ, ತಂಗಿ ಪ್ರದೇಶ ಸಮಾಚಾರ ಚಾಲೂ ಆತು... ಮುಗ್ಯಾಕ್‌ ಬಂತು... ವಾರ್ತಾ ಹತ್ತಿತು... ಚಿತ್ರಗೀತೆನೂ ಚಾಲೂ ಆದ್ವು... ಸಣ್ಣಗ ಅವ್ವನ ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಚಾಲೂನ ಇರ್‍ತಿತ್ತು. 

ಏಯ್‌ ಅವ್ವಾ, ನೀ ಎರಡೂ ಅಂಗಳಾ ಸಾರ್‍ಸ್ತೀ? ನಾ ರಂಗೋಲಿ ಹಾಕ್ತೀನಿ ಅಂತಂತಿದ್ದೆ. ಮೊದ್ಲಾರ ಹೇಳಬೇಕಿಲ್ಲೊ,ನಂಗ್‌ ಟೈಮ್‌ ಆತೀಗ... ಅಂತಿದ್ಲು. ಸರಿ ನಾ ಒಳಗಿಂದು ಸಾರಸ್ತೀನಿ. ನೀ ಹೊರಗಿಂದು ಸಾರ್‍ಸು ಅಂತಿದ್ಲು. ಯಾಕಂದ್ರ ಹೊರಗಿನ ಬಾಗಿಲಿನ ಮುಂದ ಸಿಂಗಲ್‌ ಚಾಪಿಯಷ್ಟು ಜಾಗದೊಳಗ ಸಾರಸ್‌ಬೇಕಿತ್ತು. ಒಳಗಿನ ಬಾಗಿಲ ಮುಂದ ಸಾರ್‍ಸೂ ಜಾಗ ಡಬಲ್‌ ಚಾಪಿಯಷ್ಟ್‌ ದೊಡ್ಡದಿತ್ತು. ಅದಕ್ಕೂ ಗೊಣಗೊಣ... ಅನ್ಕೋತ ಊಂಹೂ... ನಾ ಒಳಗಿನ ಅಂಗಳಾ ಸಾರಸ್ತೀನಿ. ನೀ ಹೊರಗಿಂದು ಅಂತಿದ್ದೆ. ಯಾಕಂತ ಪಾಪ ಅಕಿಗೆ ಹೇಳ್ತಿರ್‍ಲಿಲ್ಲ. ಹೊರಗಿನ ಬಾಗಿಲದ ಹತ್ರ ಅಷ್ಟು ಸಪಾಟಾಗಿರಲಿಲ್ಲ. ಸಣ್ಣಸಣ್ಣ ಕಲ್ಲು ಕೈಗೆ ಚುಚ್ಚತಿದ್ವು. ಹೆಂಗಂದ್ರ, ಸಾರಿಸಿ ಮುಗಿಯೂ ತನಾ ಅಂಗೈ ಕೆಂಪಾಗಿ ಉರ್‍ದುರ್‍ದು, ಮರಗಟ್ಟಿದ ಹಂಗ್‌ ಆಗ್ಬಿಡ್ತಿದ್ವು. ಒಳಗಿನ ಬಾಗ್ಲಾ ಸಾರ್‍ಸೂಮುಂದ ಅಷ್ಟೇನ್‌ ನೋವಾಗ್ತಿರಲಿಲ್ಲ, ಆದ್ರ ದೊಡ್ಡದಿತ್ತಲ್ಲ. ಭುಜ ನೋವ್‌ ಬರ್‍ತಿದ್ವು. 

ನಮ್‌ ಮನೀಗೆ ಶೆಟ್ಟರ ಬಸಲಿಂಗಮ್ಮನ ಮನೀಂದ ಹಿಂದಿನ ದಿನಾನ ಶೆಗಣಿ ಬಂದಿರ್‍ತಿತ್ತು. ಚಳಿಗಾಲದೊಳಗಂತೂ ಸಾರಸೂದಂದ್ರ ಸಿಟ್‌ ಬಂದ್ಬಿಡ್ತಿತ್ತು. ಆಗ ನಾ ಹಗೂರ್‍ಕ ಹಿತ್ಲಾಗಿನ ಬಾಯ್ಲರ್‌ನೊಳಗಿಂದ ಬಿಸಿ ನೀರು ತುಗೊಂಡು, ಯಾರಿಗೂ ಗೊತ್ತಾಗಲಾರದಹಂಗ ವಾಪಸ್‌ ತಣ್ಣೀರು ಸುರುವಿ, ಇತ್ತ ನೀರಿಂದ ಶೆಗಣಿ ಅಳ್ಳಕ ಮಾಡ್ಕೋಂಡ್ ನೆಲ ಸಾರ್‍ಸಾಕ್ ಶುರು ಮಾಡ್ತಿದ್ದೆ. ಅಪರೂಪಕ್ಕೊಮ್ಮೆ ಅವ್ವಾ, ಬೆಳಗ್‌ ಬೆಳಗ್ಗೆನ ಶೆಗಣಿ ತಂದಿದ್ಲಂದ್ರ, ಬಿಸಿನೀರು ಬೇಕಾಗ್ತಿರಲಿಲ್ಲ. ಯಾಕಂದ್ರ ಶೆಗಣಿ ಬಿಸ್‌ಬಿಸಿ ಇರೂದು! ಲಗೂ ಲಗೂ ಸಾರಿಸಿ ಏಳ್ತೀಯೋ ಇಲ್ಲೋ? ಅಂತ ಅವ್ವ ಗದರಾಕಿ. ನಾನೋ, ಅಯ್ಯೋ ಈ ಆಕಳಿಗೆ ಅಜೀರ್ಣ ಆಗೇತ್‌ ನೋಡ್ವಾ ಇಲ್ಲೇ. ನಿನ್ನೆ ಜೋಳಾ ತಿಂದಿತ್ತೋ ಏನೊ. ಎಲ್ಲಾ ಹಂಗ ಅದಾವು ಅಂತ ಕೈಯ್ಯಾಡಿಸ್ಕೊಂಡ್‌ ಕೂತ್‌ಬಿಡ್ತಿದ್ದೆ. ಓಹ್‌ ಇವತ್ತು ಭಾಳ ಹಸರ್‌ಹಸರ್‌ ಐತಿ ನೋಡು. ಬಸಲಿಂಗಮ್ಮ ಭಾಳ ಹುಲ್‌ ತಿನ್ಸಿರ್‍ಬೇಕಿದಕ್ಕ ಅಂತಿದ್ದೆ. ಅಯ್ಯೋ ಇವತ್ತು ಗಟ್ಟಿ. ನೀರ ಸ್ವಲ್ಪ ಕುಡಸ್ಯಾಳು ಅಂತ ಒಂದಸಮನ ಕಾಮೆಂಟ್ರಿ ಶುರು ಮಾಡ್ಕೊಂಬಿಡ್ತಿದ್ದೆ. ಒಮ್ಮೊಮ್ಮೆ ಹುಳಾ ಕಂಡ್ರಂತೂ ಮುಗೀತು. ಅಯ್ಯೋ ನಾ ಮುಟ್ಟೂದಿಲ್ಲಾ ಈ ಶೆಗಣಿ. ಬಸ್ಲಿಂಗಮ್ಮ ಜಂತಿನ ಗುಳಗಿ ಕೊಟ್ಟಿಲ್ಲಾ ಆಕಳಿಗೆ, ಅದಕ್ಕ ಅದರ ಹೊಟ್ಯಾಗ ಹುಳಾ ಆಗ್ಯಾವು ಅಂತ ದನಿ ತಗೀತಿದ್ದೆ. ’ಶ್ರೀಯಕ್ಕಾ... ಲಗೂ ಮುಗ್ಸು. ಇಬ್ರಿಗೂ ಬುದ್ಧಿ ಇಲ್ಲ. ಅದೇನ್‌ ಸಾರಸ್ಕೋತ್‌ ಕೂಡ್ತಿರೋ. ಉದ್ಯೋಗಿಲ್ಲದ ಉದ್ಯೋಗ. ಯಾವ್ದಕ್ಕ ಎಷ್ಟ್‌ ಮಹತ್ವ ಕೊಡ್ಬೇಕು ಅನ್ನೂದ ಗೊತ್ತಿಲ್ಲ’ ಅಂತ ಬೈಯ್ತಿದ್ರು ಅಪ್ಪಾಜಿ. 

ಬೆಳಗ್‌ ಬೆಳಗ್ಗೆ ಯಾರ್‌ ಮಾಡ್ತಾರ್‌ ರಿಯಾಝ್‌. ಇದ ಚುಲೋ ಅಲ್ಲಾ... ಅಂತ ಮನಸ್‌ನೊಳಗ ಅನ್ಕೋತ ನೆಲಾ ಸಾರ್‍ಸಿದ್ದ ಸಾರ್‍ಸಿದ್ದು. ಬೆರಳಿಂದ ಗೀರುಗೀರು ಡಿಸೈನ್‌ ಮಾಡ್ಕೋತ ಆಟಾ ಆಡ್ಕೋತ್‌ ಕೂತ್‌ಬಿಡೂದು. ಅಂತೂ ಇಂತೂ ಬಾಗಲಾ ಸಾರಸೂಣಕಿ ಮುಗಿಯೂ ಹೊತ್ತಿಗೆ, ಮೊಣಕಾಲು ಬಿಗೀತಿದ್ವು. ತುದಿಬೆರಳು ಚುರುಚುರು ಅಂತಿದ್ವು. ನಡಕ್‌ ನಡಕ್‌ ಏಳೂದು, ಕೂಡುದು. ಅವ್ವಾ ಕಾಲ್‌ ನೂಸಾತಾವಲ್ಲ... ಅಂದ್ರ, ’ಅಯ್ಯ ತಂಗಿ, ಏನ್‌ ಮಾಡೂದು... ಪಾಪ ಬಡತನ... ತಿನ್ನಾಕ ಉಣ್ಣಾಕ ಇದ್ರಲ್ಲ ಮನ್ಯಾಗ’ ಅಂತ ಚಾಷ್ಟಿ ಮಾಡ್ತಿದ್ಲು. ’ಛಂದಂಗ್‌ ಉಂಡ್‌ತಿಂದ್‌ ಗಟ್ಟಿ ಇರೂದ್‌ ಬಿಟ್ಟ... ಅದೊಲ್ಯಾ ಇದೊಲ್ಯಾ ಅಂತೀ’ ಅಂತ ಬೈಯ್ಯಾಕಿ. ಅಷ್ಟ್‌ ಅಲ್ಲದ.... ’ಎರಡೂ ಕೈ ಕಟ್ಟಿಬಿಟ್ಟೇನಿ ಹೌದಿಲ್ಲೋ? ಮತ್ತ ಸಾಲಿಗೆ ಹೋಗುಮುಂದ ಅಡಗಿ ಮನಿ ಕೀಲಿ ಹಾಕ್ಕೋಂಡ್‌ ಹೋಗ್ತೀನಲ್ಲಾ... ಪಾಪ ಉಪವಾಸನ ಹುಡುಗಿ’ ಅಂತಿದ್ಲು. ಬರೇಬರೇ ನೀವ್‌  ಹಿಂಗ ಮಾಡ್ತೀರಿ ನನಗ ಅಂತ ಗೊಣಗೊಣ ಅನ್ಕೋತ ರಂಗೋಲಿ ಡಬ್ಬಿ ತರಾಕ್‌ ಓಡ್ತಿದ್ದೆ.

ನಂಗೋ ಚುಕ್ಕಿ ಇಟ್‌ ರಂಗೋಲಿ ಅಷ್ಟು ಸೇರ್‍ತಿರ್‍ಲಿಲ್ಲ. ನನ್ನ ರಂಗೋಲಿಗೋಳು ಅಂದ್ರ... ಸ್ವಲ್ಪ ಅವ್ವನ ರಂಗೋಲಿಗಳಿಂದ ಇನ್‌ಫ್ಲೂಯೆನ್ಸ್‌ ಆಗಿದ್ರೂ, ಅವುಗೋಳ್ನ ಬೆಳಸೂಣಕಿಯೊಳಗ ಮತ್‌ ಕಲ್ಪನಾ ಬ್ತಾರೇನ. ನಾ ಹಾಕೂ ರಂಗೋಲಿಗೋಳು ಅಂಗಳದ ಅರ್ಧಕ್ಕರ್ಧ ತುಂಬ್ತಿದ್ವು. ನಟ್ಟ ನಡಕ್‌ ನದಿ ಹರಿಯೂದು. ಅದರ ಹಿಂದ ಹೊಚ್ಚಲ ತನಕ ಗುಡ್ಡ ಬೆಟ್ಟ. ಗುಡ್ಡದ ನಡಕ್‌ ಒಬ್ಬ ಸೂರ್ಯಾ ಮತ್ತವಗ ಕಿರಣ, ಅವನ ಬಾಜೂ ನಾಲ್ಕೈದು ಪಕ್ಷಿಗೋಳು. ಎಡಕ್‌ ತೆಂಗಿನ ಮರ, ಅದರೊಳಗ ನಾಲ್ಕೈದು ಕಾಯಿ, ನದಿಯೊಳಗ ಸಣ್ಣ ದೋಣಿ. ದೋಣಿ ಸುತ್ತ ನೀರಿನಲಿ. ದೋಣಿಯೊಳಗ ಒಬ್ಬ ಮನಷ್ಯಾ, ಅವನ ಕೈಯ್ಯಾಗೊಂದು ಹುಟ್ಟು, ಬಲಕ್ಕ ಒಂದು ಸಣ್ಣ ಗುಡಿಸ್ಲಾ. ಅದರ ಬಾಗಲಿಗೊಂದು ತೋರಣ, ಅರ್ಧ ಮುಚ್ಚಿದ ಬಾಗ್ಲು, ಗ್ವಾಡಿಮ್ಯಾಲೊಂದು ಕಿಡಕಿ, ಆ ಕಿಡಕಿಗೆ ಸಳಿ. ಆ ಗುಡಿಸಲಿನ ಬಾಗಿಲಿಗ ಅಂಟ್ಕೊಂಡ ಸಣ್ಣ ಕಾಲ್ದಾರಿ.  

ಮತ್ತೊಂದ್‌ ದಿನ ಸೀನ್‌ ಚೇಂಜ್‌. ಅದು ಕುಣಿಯೋ ನವಿಲು. ನಟ್ಟನಡಕ್ ರಂಗೋಲಿ ಹಾಕಾಕ್‌ ಶುರು ಮಾಡಿ ಅದರ ಗರಿ ಬೆಳಸಿದ್ದ ಬೆಳಸಿದ್ದ, ಒಂದರ ಹಿಂದ ಒಂದರ ಹಿಂದ ಒಂದ್‌.  ತಂಗಿ ಸಾಕ್‌ ಏಳಿನ್ನ ಅಂತ ಅಂದ್ರೂ... ಗರಿ ಹೊಚ್ಚಲ ಗುರಿ ಮುಟ್ಟೂತನಾ ಬೆಳಸಿದ್ದಾ ಬೆಳಸಿದ್ದ. ದೀಪಾವಳಿಗೆ ದೀಪಗಳು ಇರೂ ರಂಗೋಲಿ, ನಾಗರಪಂಚಮಿಗಂತೂ ಫುಲ್ ಹಾವ್‌ ಬಿಟ್‌ಬಿಡೂದು. ಸಂಕ್ರಾಂತಿಗೆ ಬಾಗಿಲ ಆಜೂ ಬಾಜೂ ಕಬ್ಬು ನಿಲ್ಲಸಿದಹಂಗ ರಂಗೋಲಿ. ಯಾವಾಗ್ ರಂಗೋಲಿ ಹಾಕಿದ್ರೂ ಅಷ್ಟ, ಒಳಗಿನ ಬಾಗಿಲಮುಂದ ಭಾಳ ಖುಷಿಯಿಂದ ನಂದ ಲೋಕದೊಳಗ ರಂಗೋಲಿ ಹಾಕಿ, ಮುಗದಮ್ಯಾಲ ಮತ್‌ ಮತ್‌ ನೋಡಿ, ಸರಿ ಅನ್ನಸ್ಲಿಲ್ಲಂದ್ರ ಅಳಿಸಿ ಮತ್ತ ಹಾಕ್ತಿದ್ದೆ. ಆದ್ರ ಹೊರಗಿನ ಅಂಗಳಕ್ಕ ರಂಗೋಲಿ ಹಾಕೂದಂದ್ರ, ಕುತ್ತಿಗಿಗೆ ಬರ್‍ತಿತ್ತು. ಕುಡ್‌ ನಿಂಗಪ್ಪ ಬೆನ್‌ ಹತ್ತಿ ಬಿಡಾಂವಾ. ಅಂವಾ ಲೈನ್‌ಮನ್‌ ಕೆಲ್ಸಾ ಮಾಡ್ತಿದ್ದ. ಆದ್ರ ಅವನ ಒಂದು ಕಣ್ಣು ಕುಡ್‌ ಇತ್ತಲ್ಲಾ ಅದಕ್ಕ ಕುಡ್‌ ನಿಂಗಪ್ಪಾ ಅಂತಿದ್ಲು. ನಮ್‌ ಮನೀ ಬಾಜೂಕಿನ ಸಣ್ಣ ಮನಿಯೊಳಗ ಹೆಂಡತಿ ಮಗಳ ಜೋಡಿ ಇರ್‍ತಿದ್ದ. 

ಬೆಳಗ್‌ ಬೆಳಗ್ಗೆ ಚುಟ್ಟಾ ಹಿಡ್ಕೊಂಡ್, ರಂಗೋಲಿ ಹಾಕೂವಾಗ ಹಿಂದ್‌ ಬಂದ್ ನಿಂತ್ಬಿಡ್ತಿದ್ದ. ಕಪ್ಪಗ, ಹಲ್‌ ಮುಂದ್‌ ಮಾಡ್ಕೊಂಡಿರ್‍ತಿದ್ದ ಅಂವಾ, ನೆಟ್ಟಗ ಹತ್ತ ಗೇಣೂ ಇರ್‍ಲಿಲ್ಲ. ಆದ್ರ ಯಾ ಪರಿ ತಲಿ ತಿಂತಿದ್ದಾ ಅಂದ್ರ... ಛೆಛೆಛೆಛೇ...  ’ಅಲ್ಲೆ ನೋಡಲ್ಲೆ, ಆ ರೇಖಾ ಹೆಂಗ್‌ ಆತು, ಈ ರೇಖಾ ಸೊಟ್‌ ಆತು. ಬರದೇ ಇದ್ರ ಯಾಕ್‌ ರಂಗೋಲಿ ಹಾಕಬೇಕು...’ ಅಂತ ಕೈ ಹಿಂದ್ ಕಟ್ಕೋತ ಕಾಡ್ಕೋತ ನಿಂತ್‌ಬಿಡಾಂವಾ. ಏಯ್‌ ಹೋಗತ್ತ. ಯಾಕ್‌ ಕಾಡ್ತೀ ಹಿಂಗ್‌ ದಿನ್ನಾ. ನಿಮ್‌ ಮನೀಮುಂದಿನ ರಂಗೋಲಿ ನೋಡ್ಕೊ. ನಮ್‌ ರಂಗೋಲಿ ನೋಡಿ ಏನ್‌ ಮಾಡಾಂವದಿ ಅಂತ ಸಿಟ್ಲೇ ಬೈದ್ರೂ ನಕ್ಕೋತ ಮತ್ತೂ ಕಾಡ್ಸಾಂವಾ. ಒಂದಿನ ಬಟ್ಟಲ ಹೂ ಗೊಂಚಲು, ಇನ್ನೊಂದ್‌ ದಿನ ಮಲ್ಲಿಗಿ ಹೂ ಗೊಂಚಲು, ಅವ್ವನ ಸೀರಿ ಸೆರಗಿನೊಳಗಿದ್ದ ಡಿಸೈನ್‌... ಹಿಂಗ ಅನ್ಸಿದ್ದನ್ನೆಲ್ಲಾ ಹಾಕ್ಕೋತ ಕೂತ್‌ಬಿಡ್ತಿದ್ದೆ. ಆದ್ರೂ ಅಂವಾ ಹಂಗ್‌ ಕಾಡ್ಸೂದು ಒಮ್ಮೊಮ್ಮೆ ಅಳು ಬಂದ್ಬಿಡ್ತಿತ್ತು. 

ಒಳಗ ಹೋಗಿ, ಅವ್ವನ ಮುಂದ ನೋಡಂವಾ... ಆ ನಿಂಗಪ್ಪ ಹೆಂಗಂತಾನು ಅಂತಿದ್ದೆ. ’ನೀ ಅದಕ್ಯಾಕ್‌ ತಲಿ ಕೆಡಿಸ್ಕೋತಿ. ನಿನ್‌ ಕಣ್ಣ ನೆಟ್ಟಗಿಲ್ಲ. ಅದಕ್ ರಂಗೋಲಿ ಸೊಟ್ಟ ಕಾಣ್ತಾವು ಅಂತ ಹೇಳಿಬರೂದ್‌ ಬಿಟ್ಟ. ಅಳ್ತಾರು?’ ಅಂತ ಅಂತಿದ್ಲು ಅವ್ವ. ಐ ಹೌದಲ್ಲಾ? ನಾಳೆ ಹಂಗ ಅಂತೀನ್‌ ಅವ್ನಿಗೆ ಅಂತ ಹೇಳಿದೆ. ಮರದಿನಾ ಮತ್‌ ಚಾಲೂ ಮಾಡಿದ. ಏಯ್‌ ನಿಂಗಪ್ಪಾ ನಿನ್‌ ಕಣ್ಣ ಕುಡ್ಡ ಅದಾವ್ಲಾ ಅದಕ್ ಸೊಟ್ಟ ಕಾಣ್ತಾವ್‌ ಹೋಗ್‌ಹೋಗತ್ತ ಅಂತ ಹೇಳ್ಬಿಟ್ಟೆ. ’ಐ ಬೆರಕಿ... ಮಾಡ್ತೀನ್‌ ತಡಿ ನಿಂಗ. ನಂಗ ಹಿಂಗಂತಿ? ಸರ್‌ (ಅಪ್ಪಾಜಿ) ಮುಂದ್ ಹೇಳಿ ಬೈಸ್ತೇನಿ ತಡಿ’ ಅಂತ ಪುಸುಪುಸು ಚುಟ್ಟಾ ಸೇದ್ಕೋತ ಹೊಂಟ್‌ಬಿಡ್ತಿದ್ದ. ಅಯ್ಯ ಹೋಗ್‌ ಹೋಗ್ ಹೇಳ್ಕೊಳ್ಳೋಗ್ ಹೋಗತ್ತ ಅಂತ ಎದ್ದು ಒಳಗ ಹೋಗ್ತಿದ್ದೆ. ಹಿಂಗ ಒಂದೆರಡ ಸಲಾ ಮಾತಾಡಿದ ಮ್ಯಾಲೆ ನನ್‌ ಸುದ್ದೀಗೆ ಬರೂದ್‌ ಕಮ್ಮಿ ಮಾಡಿದ. 

ಇನ್ನ ಬರೀ ಅಂಗಳಾ ಸಾರ್‍ಸೂದಷ್ಟ ಅಲ್ಲಾ. ಹತ್ತು ದಿನಕ್ಕೊಮ್ಮೆ ಇಡೀ ಮನೀನ್ನಾ ಶೆಗಣಿಂದ ಸಾರಸ್‌ಬೇಕಿತ್ತು. ಯಾಕಂದ್ರ ನಮ್ ಊರೊಳಗ ಹೆಚ್ಚೂಕಮ್ಮಿ ಎಲ್ಲಾರ್‌ ಮನ್ಯಾಗನೂ ಶೆಗಣಿ ನೆಲಾನ ಇದ್ವು. ಅವ್ವಾ ಅಡಗಿ ಮನಿ, ರೂಮು ಸಾರಿಸ್ತಿದ್ಲು. ನಾ ಹುಸಿ ಮತ್ತ ಪಡಸಾಲಿ ಸಾರಸ್ತಿದ್ದೆ. ಯಾಕಂದ್ರ ಅವು ಸಣ್ಣೂ ಇದ್ವು. ಆಮ್ಯಾಲ ಮತ್‌ ರಂಗೋಲಿ ಆಟ ಚಾಲೂ. ಪಡಸಾಲ್ಯಾಗ ನಟ್‌ ನಡಕ್‌ ಚುಕ್ಕಿ ಇಟ್ಟ ದೊಡ್ಡ ರಂಗೋಲಿ ಹಾಕ್ತಿದ್ಲು ಅವ್ವ. ಒಮ್ಮೊಮ್ಮೆ ಎಳಿರಂಗೋಲಿ ಒಮ್ಮೊಮ್ಮೆ ಚುಕ್ಕಿರಂಗೋಲಿ. ಹಬ್ಬ ಇದ್ದಾಗ, ತನ್ನ ಕಾಲೇಜ್‌ ಟೈಮ್‌ನೊಳಗ ನೋಟ್‌ಬುಕ್ಕಿನೊಳಗ ಬರ್‍ದಿಟ್ಕೊಂಡ್‌ ರಂಗೋಲಿಗೋಳ್ನ ನೋಡಿ ಹಾಕ್ತಿದ್ಲು. ನಾ ಮಾತ್ರ ಇದಕ್‌ ಕೈ ಹಚ್ಚಾಕ್‌ ಹೋಗ್ತಿರಲಿಲ್ಲ. ನನ್ನ ಎಳಿಗೋಳು ಸ್ವಲ್ಪ ದಪ್‌ ಬರ್‍ತಿದ್ವಲ್ಲಾ ಹಿಂಗಾಗಿ ಅವ್ವಾ ಹಾಕಿದ್ದ ಛಂದ ಅಂತ ನೋಡ್ಕೋತ ಖುಷಿ ಪಡ್ತಿದ್ದೆ. ಎಲ್ಲಾ ಮುಗದಮ್ಯಾಲ ನಟ್‌ನಡಕ್‌ ಅರಿಷಿಣಾ ಕುಂಕುಮ ಹಾಕಿ ಹೋಗ್ತಾ ಬರ್‍ತಾ ನೋಡ್ಕೋತ ಇರ್‍ತಿದ್ದೆ. ಎಲ್ಲಾಕಿಂತ ಮುಖ್ಯ, ಆ ರಂಗೋಲಿನ್ನಾ ನಮ್‌ ಬೆಕ್ಕಿನ ಮರಿಗೋಳಿಂದ ಮತ್ತ ನಮ್‌ ಮನೀಗೆ ಫೋಟೋ ತೆಗಿಸ್ಕೊಳ್ಳಾಕ್‌ ಬಂದಾವ್ರಿಂದ ಕಾಯೂದನ ದೊಡ್ಡ ಕೆಲಸ. 
ಇದೆಲ್ಲಾ ನಡೀತಿದ್ದದ್ದು ನಾ ಎರಡನೇತ್ತಾ ಇದ್ದಾಗ. ಆಗನ ಅಪ್ಪಾಜಿ ರೀಲ್‌ ಕ್ಯಾಮೆರಾ ತಗೊಂಡಿದ್ದು. ಶನಿವಾರ ಬೆಳಗ್ಗೆ ಸ್ಕೂಲಿಗೆ ಅಂತ ರೆಡಿ ಆದಾಗ ಒಂದು ಸರ್‌ಪ್ರೈಝ್‌ ಅಂತ ಹೇಳಿ, ಅಂಗಳದೊಳಗ ಚಾಪಿ ಹಾಸಿ ರೆಡಿ ಮಾಡಿಟ್ಟಿದ್ರು. ಅದರೆದುರಿಗೆ ಒಂದು ಕುರ್ಚಿ ಇಟ್ಟಿದ್ರು. ನಾನು ತಂಗಿ, ತಮ್ಮ, ಅವ್ವ ಎಲ್ಲಾರೂ ರೆಡಿ ಆಗಿಬಂದು ಆ ಚಾಪಿ ಮೇಲೆ ಕೂಡೂದ್ಕ, ಅಪ್ಪಾಜಿ ಕ್ಯಾಮೆರಾ ಆನ್‌ ಮಾಡಿ ಲಗೂನ ಬಂದು ನಮ್‌ ಬಾಜೂ ಕುಂತ್ರು. ನಮ್‌ ಫ್ಯಾಮಿಲಿ ಫೋಟೋ ಅಂದ್ರ ಅದ ಮದಲನೇದ್ದು. 

ಅಂತೂ ಅಪ್ಪಾಜಿ ಸಾಲಿಗೆ ಹೋಕ್ಕೋತನ ಫೋಟೋಗ್ರಫಿನೂ ಶುರು ಮಾಡ್ಕೊಂಡ್ರು. ನಮ್ ದೊಡ್ಡವಾಡದೊಳಗ ಫಸ್ಟ್‌ ಸ್ಟುಡಿಯೋ ಚಾಲೂ ಆತು. ಅಲ್ಲೀತನಕಾ ಫೋಟೋ ತೆಗಿಯಾವ್ರು ಆ ಊರಿಗೆ ಇರಲಿಲ್ಲಂತ.  ಎಲ್ಲಾರೂ ಉಪ್ಪಿನ ಬೆಟಗೇರಿಗೆ ಮತ್ತ ಬೈಲಹೊಂಗಲಕ್ಕ ಹೋಗಿ ತೆಗಿಸ್ಕೊಂಡ್‌ ಬರ್‍ತಿದ್ರು. ನಮ್ ಸ್ಟೂಡಿಯೋ ಅಂದ್ರ ಅಂಥಾ ಏನ್ ಭಾರೀ ಅಲ್ಲಾ. ಆದ್ರೂ ಅಪ್ಪಾಜೀನ ಅದನ್ನ ತಯಾರು ಮಾಡಿದ್ದು ಅನ್ನೂ ಹೆಮ್ಮಿ ಇತ್ತು. ಪಡಸಾಲಿಯೊಳಗ ಮಣ್ಣಿನ ಗ್ವಾಡೀ ಹೊಂದಿಗೆ... ಆರೇಳು ಪಳಿಗಳನ್ನ ಮಣ್ಣಿನೊಳಗ ಹೂಳಿ ನಿಲ್ಸಿದ್ರು. ಎರಡು ಮೂರು ದಿನಾ ಆದಮ್ಯಾಲ ಅವು ಗಟ್ಟಿಯಾಗಿ ಮತ್ತ ಸಮಾಕ್‌ ನಿಂತೂ ಅನ್ನೂದು ಖಾತ್ರಿ ಆದಕೂಡ್ಲೇ ಒಂದಿನಾ ಬೆಳಗ್ಗೆ ಅಡಗಿ ಮನೀಗೆ ಬಂದ್ರು. ಯಾಕಂದ್ರ ಅಪ್ಪಾಜಿಗೂ ಅಡಗಿ ಮನೀಗೂ ಸ್ವಲ್ಪ ಅಷ್ಟಕ್ಕಷ್ಟ. ಹೂಂ... ಅಲ್ಲಿ ಬಂದಾವ್ರನ ಒಂದ್‌ ಬೋಗಣಿಯೊಳಗ ನೀರ್‌ ಹಾಕಿ ಸ್ಟೋ ಹಚ್ಚಿ ಇಟ್ರು. ಅದು ಕುದೀತಿದ್ದಂಗ ತೆಳ್ಳಗ ಮೈದಾಹಿಟ್ಟು ಕಲಿಸಿ ಅದರೊಳಗ ಸುರುವಿದ್ರು. ಏನ್‌ ಮಾಡಾತೀರಿ ಅಪ್ಜಿ? ಅಂತ ಎಷ್ಟ್‌ ಸಲ ಕೇಳಿದ್ರು. ಸರಿ ಸರಿ ಸರಿ ಅಂದ್ರು. ಸ್ಟೋವ್‌ನಿಂದ ದೂರ ಸರದ ನಿಲ್ಲು ಅಂತಾರೇನು ಅಂತ ದೂರ ಸರದ ನಿಂತ ನಿಲ್ತಿದ್ದೆ. ಅಪ್ಪಾಜಿ ಹಿಂಗೇನಾದರೂ ಕೆಲಸ ಮಾಡೂವಾಗ ಜಾಸ್ತಿ ಮಾತಾಡ್ತಿರಲಿಲ್ಲ. ಒಂದ್ ಶಬ್ದದ ಉತ್ರಾ ಕೊಟ್ಟು ಸುಮ್ಮನಾಗಿಬಿಡೋವ್ರು. ಈಗ್ಯಾಕ್‌ ಶಿರಾ ಮಾಡಾತೀರಿ ಅಪ್ಜಿ? ಸಕ್ರಿ ಹಾಕೂದಿಲ್ಲಾ? ಅಂದೆ. ಅವ್ರು ಗೋಣ ಹಾಕ್ಕೋತ ಸ್ಟೋವ್‌ ಆಫ್‌ ಮಾಡಿಟ್ಟು ಹೊರಗ ಹೋದ್ರು. 

ಪಡಸಾಲಿಯೊಳಗ ಬಂದು, ರದ್ದಿ ಪೇಪರ್‌ ಗಂಟು ಬಿಚ್ಚಿ ಅವನ್ನೆಲ್ಲಾ ನೆಲಕ್ಕ ಹರಡಿದ್ರು. ಮೊಣಕಾಲು ಊರಿ... ಅವ್ರೇನ್‌ ಮಾಡ್ತಾರು ಅಂತ ನೋಡ್ಕೋತ ಕೂತೆ. ’ಅಡಗಿ ಮನ್ಯಾಗ ಆ ಬೋಗಣಿ ತೋಂಬಾ ಅಂದ್ರು’  ಖಾಲಿ ಬೋಗಣಿ ತಂದೆ. ಇದಲ್ಲ ಸರಿ ಮಾಡಿದ್ದು ಅಂದ್ರು. ಏನ್‌ ಸರಿ ಮಾಡಿದ್ದು, ಯಾವಾಗ ಯಾವ ಬೋಗಣಿ ಡೊಂಕ್‌ ಆಗಿತ್ತು? ಸರಿ ಮಾಡಿದ್‌ ಬೋಗಣಿ ಯಾವ್ದು ಅಂತ ನಿಂತೆ. ಏಯ್‌ ಹುಚ್ಚಿ, ಅಲ್ಲಿ ಆಗ್ಲೇ ಮೈದಾಹಿಟ್ಟಿನ ಸರಿ ಮಾಡ್ಲಿಲ್ಲಾ... ಅದನ್‌ ತೋಂಬಾ’ ಅಂದ್ರು. ಓಹ್‌ ಸರಿ ಅಂದ್ರ ಅದನಾ... ಅಂತ ಹೋಗಿ ತೋಂಬಂದೆ. ಆಮ್ಯಾಲ ಅಪ್ಪಾಜಿ ನ್ಯೂಸ್‌ಪೇಪರ್‌ ತುಂಬ ಸರಿ ಬಳದು ಒಂದಾದಮ್ಯಾಲ ಒಂದು ಆ ಪಳಿಗೋಳಿಗೆ ಅಂಟ್ಸಾಕ್‌ ಚಾಲೂ ಮಾಡಿದ್ರು. ಈ ಅಂಟಸೂ ಪ್ರೋಗ್ರ್‍ಯಾಂ‌ ನಾಲ್ಕೈದು ದಿನಾ ನಡೀತು. ಕೊನೀಗೆ ಒಂದ್‌ ಶನಿವಾರ ಹುಬ್ಳಿಂದ್‌ ವೈಟ್‌ ಕಾರ್ಡ್‌ಬೋರ್ಡ್ ತಂದ್ರು. ಮರದಿನಾ ಮತ್ತ ಮೈದಾ ಸರಿ ಮಾಡಿ ಅದನ್ನ ಆ ನ್ಯೂಸ್‌ಪೇಪರಿನ ಪಳಿಗೋಳಮ್ಯಾಲ ಪೂರ್ತಿ ಅಂಟಿಸಿದ್ರು. ಆಗ ಒಂಥರಾ ಬಿಳಿ ಗ್ವಾಡಿಹಂಗ ಅದು ಕಾಣಾಕ್‌ಹತ್ತಿತು.  ಎರಡ ದಿನಾ ಆದಮ್ಯಾಲ ಅವತ್‌ ಮುಂಜಾನೆ, ನೀಲಿ ಮತ್ತ ಬಿಳಿ ಬಣ್ಣದ ಡಬ್ಬಿ ಮುಚ್ಚಳ ತಗ್ದು, ದಪ್ಪ ಬ್ರಷ್‌ನ ನೀರಿನ ಬುಟ್ಟಿಯೊಳಗ ಹಾಕಿಟ್ರು. ಅಯ್ಯೋ ಇಲ್ಯಾಕ್‌ ಪೇಂಟ್‌ ಮಾಡ್ತೀರಿ ಅಪ್ಜಿ? ಇಲ್ಲಿ ಮಾಡಿ ಏನ್ ಮಾಡ್ತೀರಿ? ಇದ ಕಲ್ಲರ್‌ ಯಾಕ್‌ ಹಚ್ತೀರಿ? ಬ್ಯಾರೇ ಬಣ್ಣಾ ಯಾಕ್‌ ಹಚ್ಚಾಂಗಿಲ್ಲ? ಸಣ್ಣ ಬ್ರಷ್‌ ನನಗ ಕೊಡ್ರಿ. ನಾನೂ ಹಚ್ತೀನಿ. ಮತ್ತ ಇಲ್ಲೆ ಏನ್‌ ಡಿಸೈನ್‌ ಮಾಡ್ತೀರಿ? ಹಿಂಗ ಪ್ರಶ್ನಾ ಮ್ಯಾಲ ಪ್ರಶ್ನಾ ಕೇಳಿದ್ರೂ ಅಪ್ಪಾಜಿ... ಎಲ್ಲಾದರೂ ಹೂಂ ಹೂಂ ಅಂತ ತಲಿ ಅಲ್ಲಾಡಿಸ್ಕೋತ ತಮ್ ಕೆಲಸ ಮಾಡ್ತಾನ ಇದ್ರು.

ನಂಗ್‌ ಸಾಲೀಗ್‌ ಹೋಗೂ ಟೈಮ್ ಆತಂತ ಹೋದೆ. ವಾಪಸ್‌ ಹನ್ನೊಂದಕ್ಕ ಮನೀಗೆ ಬಂದಾಗ ಅಪ್ಪಾಜಿ ಸಾಲೀಗ್‌ ಹೋಗಾಕ್‌ ತಯ್ಯಾರಾಗಿದ್ರು. ಬಂದ್‌ ನೋಡ್ತೀನಿ ಬಿಳಿ ಗ್ವಾಡಿ ಹೋಗಿ ಆಕಾಶ ನೀಲಿ ಗ್ವಾಡಿ ಆಗಿತ್ತು! ಒಂದೆರಡು ದಿನ ಆದಮ್ಯಾಲ ತಿಳಿಹಸ್ರು ಮತ್ತ ಕಪ್ಪು ಕಲರ್‌ದು ಅವ್ವನ ಸೀರಿ ತಗೊಂಬಂದು ಕಟ್ ಮಾಡಿ, ಮಶೀನ್‌ಮ್ಯಾಲ ಹೊಲಿಯಕ್‌ ಶುರು ಮಾಡಿದ್ರು. ಇದನ್‌ ಹೊಲ್ದು ಏನ್‌ ಮಾಡ್ತೀರಿ ಅಪ್ಜಿ? ಅಂದೆ. ನೋಡು ಸುಮ್ಮನೆ ಅಂದ್ರು. ನೋಡ್ಕೋತನ ಇದ್ದೆ. ಕೊನೆಗೆ ಒಂದು ಸಳಿಯೊಳಗ ಸೀರಿ ತುದಿ ಸೇರಿಸಿಟ್ರು. ಆ ನೀಲಿ ಗ್ವಾಡಿ ಇತ್ತಲ್ಲಾ... ಅದಕ್ಕ ಒಂದು ಗೇಣು ಅಂತರದೊಳಗ ಅದರ ಮುಂದ ಕಪ್ಪು ಕರ್ಟನ್‌ ಸಳೀನ್ನಾ ಕಟ್ಟಿದ್ರು. ಮತ್ತ ಹಂಗ ತಿಳಿ ಹಸರ್‌ ಕಲರ್‍ದು ಕರ್ಟನ್‌ ಹೊಲ್ದು ಮತ್ತೊಂದ್‌ ಗೇಣ ಮುಂದ ಅದನ್ನ ಸಿಗ್ಸಿದ್ರು. ಯಾಕ್‌ ಹಿಂಗೆಲ್ಲಾ ಮಾಡ್ತಾರಿವ್ರು ಅಂತ ಮನಸ್ಸಿನೊಳಗ ಕೇಳ್ಕೊಬೇಕಿತ್ತು. ಯಾಕಂದ್ರ ಅಪ್ಪಾಜಿ ಉತ್ರಾನ ಕೊಡ್ತಿರಲಿಲ್ಲ ಬರೇ ಗೋಣ್‌ ಹಾಕ್ತಿದ್ರು. ಆಮ್ಯಾಲಾಮ್ಯಾಲ ಗೊತ್ತಾತು. ಊರಾನ್‌ ಮಂದಿ ಫೋಟೋ ತೆಗಿಸ್ಕೊಳ್ಳಾಕ್‌ ಅಂತ ಸಂಜೀಮುಂದ ಬರ್‍ತಿದ್ರಲ್ಲಾ ಆಗ ಈ ನೀಲಿ ಗ್ವಾಡಿ, ಕರಿ, ತಿಳಿಹಸರ್‍ ಕರ್ಟನ್‌ ಯಾಕ ಅಂತ ಗೊತ್ತಾಗಾಕ್‌ ಹತ್ತು. 

(ಮುಂದುವರಿಯುವುದು)


Tuesday, February 19, 2013

ರಾಮಾಯಣದಲ್ಲಿ ಚೋಳರು ಮತ್ತು ರಸಗಲ್ಲಾ


(ಓಟ 7)

ಪಟ್‌ ಅಂತ ಕುತ್ತಿಗಿ ಮ್ಯಾಲ ತಂಪಂದು ಏನೋ ಬಿದ್ಹಂಗಾತು. ಥೋ ಏನಿದು ಅಂತ ಆ ಕಡೆ ಜಾಡ್ಸಿದೆ. ಕಂಬದ ಹತ್ರ ಬಿದ್ದು, ಕೊಂಡಿ ಎಬ್ಬಿಸಿಕೊಂಡು ನಿಂತಬಿಡ್ತು ಚೋಳು! ಅಯ್ಯೋ ಚೋಳು! ಇದನ್ನ ನಾ... ನನ್ನ ಕೈಯಿಂದಾ... ನನ್ನ ಬೆರಳಿಂದಾ... ಜಾಡ್ಸಿದ್ನಿ? ಚೋಳಂತ ಗೊತ್ತಿರಲಿಲ್ಲ ಜಾಡ್ಸಿದ್ನಿ, ಗೊತ್ತಿದ್ದಿದ್ರ? ಹೋಗ್ಲಿ ಅದು ನನ್ನ ಕುತ್ತಿಗಿ ಕಡದಿದ್ರ? ಚಾದರ್‌ ತೆಗದು ಏಳೋ ಹೊತ್ತಿಗೆ ಇಷ್ಟೆಲ್ಲಾ ಪ್ರಶ್ನೆಗಳು ಒಂದರ ಬೆನ್ನ ಮ್ಯಾಲ ಹತ್ತಿ ಕೂತು, ಚೋಳಿನಗತೆ ಕೊಂಡಿ ಎಬ್ಬಿಸಿಕೊಂಡು ನಿಂತ್‌ಬಿಟ್ವು.

ಇನ್ನೇನ್‌ ಅವ್ವ ಹಾಸಿಕೊಟ್ಟ ಹಾಸಿಗಿಯೊಳಗ ಕುತ್ತಗಿತನಕ ಚಾದರ್‌ ಹೊದ್ಕೊಂಡ್‌ ಮಲಕೊಂಡು ಟಿವಿಯೊಳಗ ರಾಮಾಯಣ ನೋಡಬೇಕು ಅನ್ನೂ ಹೊತ್ತಿಗಿ ಈ ಚೋಳಿನ ಬೀಳೂಣಕಿ ಉಸರ ಹಿಂದ ಮುಂದ ಮಾಡ್ಸಿಬಿಟ್ಟಿತ್ತು. ಶುಕ್‌ಶುಕ್ರವಾರಾನೂ ಸಂಜೀಕ ಲಗೂ ಲಗೂ ಅಭ್ಯಾಸ, ರಿಯಾಝ್‌, ಊಟ ಮುಗಿಸಿ ರಾಮಾಯಣದ ಟೈಟಲ್‌ ಸಾಂಗ್‌ ಮುಗಿಯೂ ಹೊತ್ತಿಗೆ ಹಾಸಿಗ್ಯಾಗ ಇರಬೇಕು ಅನ್ನೂದು, ನನ್ನಷ್ಟಕ್‌ ನಾನ ತಗೊಂಡ್‌ ನಿರ್ಧಾರ ಆಗಿತ್ತು.

ಶ್‌ಶ್‌ ಸುಮ್ನಿರ್‍ರಿ.. ಅನ್ಕೋತ ಬಂದ ಅಪ್ಪಾಜಿ, ಹಗೂರ್‍ಕ ಬಂದಾವ್ರನ ಅದರ ಮೇಲೆ ಚಿಮಣಿ ಎಣ್ಣಿ ಸುರಿವಿಬಿಟ್ರು. ಮತ್ತಷ್ಟ್‌ ಮತ್ತಷ್ಟ ಕೊಂಡಿ ಮ್ಯಾಲ ಎತ್ತಿದ್ದನ ಅದು ಹೊಳ್ಳಾಡಿ, ಸುಸ್ತ್‌ ಆಗಿಬಿಟ್ತು. ಆಮ್ಯಾಲ ಹಿತ್ತಲದೊಳಗ ತಗೊಂಡ್‌ ಹೋಗಿ ಅದನ್ನ ಬಡದು ಅಲ್ಲೇ ಮಣ್ಣು ಮಾಡಿದ್ದೂ ಆತು. ನನಗೋ ರಾತ್ರೆಲ್ಲಾ ಕಣ್‌ಮುಂದ ಅದ. ಕುತ್ತಿಗಿ ಮ್ಯಾಲ ಆ ತಂಪನ್‌ ಚೋಳು ಪಟ್‌ ಅಂತ ಬಿದ್ದಿದ್ದು, ರಾಮಾಯಣದಾಗ ಯುದ್ಧ ನಡೀಬೇಕಾದ್ರ ಸ್ಪೆಷಲ್‌ ಬಾಣ ಬಿಟ್ಟಾಗೆಲ್ಲಾ ಎಫೆಕ್ಟ್‌ ಕೊಟ್ಟು ಮತ್ತ ಮತ್ತ ತೋರಸ್ತಿರ್‍ತಾರಲ್ಲಾ ಥೇಟ್‌ ಹಂಗ ಅನ್ಸೂದು. ಕಣ್‌ ಮ್ಯಾಲ ಬಿದ್ದಿದ್ರ, ಬಾಯಿ ಮ್ಯಾಲ ಬಿದ್ದಿದ್ರ ಏನ್‌ ಆಗ್ತಿತ್ತು? ಮಲ್ಕೊಂಡಾಗ ಬಿದ್ದು, ಕಡದಿತ್ತಂದ್ರ... ಹಿಂಗ ಏನೇನೆಲ್ಲಾ ಕಲ್ಪಿಸ್ಕೋತ ಕಣ್‌ಕಣ್‌ ಬಿಟ್ಕೋತ ಮಲ್ಕೊಂಡೆ. ಏನ್‌ ಮಾಡಿದ್ರೂ ಆ ಜಾಂಬಳಿ, ಕಂದು, ಹಸಿರು ಮಿಶ್ರಿತ ಬಣ್ಣದ ಚೋಳು, ಸಣ್ಣೂ ಸಣ್ಣೂ ಅದರ ಕಣ್ಣು, ನಾಲ್ಕು ಸಣ್ಣಸಣ್ಣ ಎಂಟುಗೋಳನ್ನ ನೋಟ್‌ಬುಕ್‌ನೊಳಗ ಒಂದರಹಿಂದ ಒಂದು ಚಂದ್ರಾಕಾರದೊಳಗ ಬರದ್ರ ಹೆಂಗ್‌ ಕಾಣತೇತಲ್ಲಾ... ಥೇಟ್‌ ಹಂಗ ಇದ್ದ ಅದರ ಬಾಲ ಮತ್ತದರ ತುದೀಗೆ ಚೂಪು ಕೊಂಡಿ. ಆ ಕೊಂಡಿಯೊಳಗ ಕಾಣಲಾರದ ವಿಷಾ... ಯಪ್ಪಾ! ಕಣ್ಣಿಗೆ ಕಣ್‌ ಯಾವಾಗ್‌ ಹತ್ತಿದ್ವೋ ಏನೋ ಗೊತ್ತ ಆಗ್ಲಿಲ್ಲ.

ಅಂದಹಂಗ ನಮ್‌ ಊರೊಳಗ ಮಣ್ಣಿನ ಮನಿಗೋಳ ಇದ್ದಿದ್ರಿಂದಾನೋ ಏನೋ ವಾರಕ್ಕ ಎರಡು ಮೂರು ಚೋಳುಗೋಳು ನಮ್‌ ಮನಿಯೊಳಗೂ ಕಾಣಿಸ್ಕೊಳ್ತಿದ್ವು. ಮತ್ತ... ನಮ್‌ ಮನಿಯೊಳಗ ಒಂದು ಬೇರು ಇತ್ತು. ಅದೆಲ್ಲಿಂದಾನೋ ಏನೋ ಅಪ್ಪಾಜಿ ತಂದಿಟ್ಟಿದ್ರು. ಅದರ ಹೆಸರೂ ಅವರಿಗೆ ಗೊತ್ತಿಲ್ಲ. ಅದು ಚೋಳಿನ ಔಷಧಿ ಅಂತಾನೂ ಗೊತ್ತಿರಲಿಲ್ಲ. ಹಿಂಗ ಒಮ್ಮೆ ಯಾರಿಗೋ ಚೋಳು ಕಡಿದಾಗ ಅದನ್ನ ತೇಯ್ದ್‌ ಹಚ್ಚಿದ್ರಂತ. ಆಮ್ಯಾಲ ಚೋಳು ಕಡಿಸ್ಕೊಂಡಾವ್ರೆಲ್ಲಾ ನಮ್‌ ಮನೀಗೆ ಬರಾಕ್‌ ಚಾಲೂ ಮಾಡಿದ್ರಂತ.

ಸಾಣಿಕಲ್ಲ ಮ್ಯಾಲ, ನಿಂಬಿಹಣ್ಣಿನ ರಸದ ಜೊತಿ ಆ ಬೇರು ತೇಯ್ತಿದ್ರ, ಥೇಟ್‌ ಗಂಧಾ ತೇಯ್ದಂಗ ಆಗೂದು. ಆಮ್ಯಾಲ ಅದನ್ನ ಕಡಿದ ಜಾಗಕ್ಕ ಹಚ್ಚಿದ್ರ, ಚೋಳಿನ ವಿಷಾ ಎಲ್ಲಾ ಇಳದು ಕಡಿಸ್ಕೊಂಡಾವ್ರಿಗೆ ಆರಾಮಾಗ್ತಿತ್ತು. ಹಿಂಗಾಗಿ ವಾರಕ್ಕ ಮೂರ್‍ನಾಲ್ಕು ಮಂದಿಯರ ಔಷಧ ಸಲುವಾಗಿ ನಮ್‌ ಮನೀಗೆ ಬರಾವ್ರು. ಅಪರಾತ್ರ್‍ಯಾಗ ಸರ್‌, ಅಕ್ಕೋರ... ಅಂತ ಬಾಗಲಾ ಬಡ್ಯಾತಾರು ಅಂದ್ರ, ಯಾರ್‍ಗೋ ಚೋಳ್‌ ಕಡದೇತಿ ಅಂತಾನ ಅರ್ಥ. ರಾತ್ರಿ ಎರಡೇನ ಮೂರೇನ ಟೈಮ್‌ ಅನ್ನೂದ ಇರ್‍ತಿರಲಿಲ್ಲ ಆ ಪೀಡಾ ಚೋಳುಗೋಳಿಗೆ ಮತ್ತ ಅವುಕೂರ ಕಡ್ಯೂಣಕೀಗೆ. ಗಂಡ್‌ಮಕ್ಕಳು, ಹೆಣ್‌ಮಕ್ಕಳು, ಮುದುಕ್ರು, ಕೂಸಗೋಳು ಹಿಂಗ ಒಬ್ಬರನ್ನೂ ಬಿಡದ ಕಡೀತಿದ್ವು. ಕಡಿಸ್ಕೊಂಡಾವ್ರನ್ನ ಸೈಕಲ್‌ ಮ್ಯಾಲೆ ಕೂಡಿಸ್ಕೊಂಡ, ಕೈ ಹಿಡ್ಕೊಂಡ್, ಹೆಗಲಮ್ಯಾಲ್‌ ಕುಂಡರ್‍ಸ್‌ಕೊಂಡ, ಬೆನ್ನಮ್ಯಾಲ ಹತ್ತಿಸ್ಕೊಂಡ, ಬಗಲಾಗ ಎತ್ಕೊಂಡ ಬಂದ್‌ಬಿಡ್ತಿದ್ರು. ಪಾಪ ಅವರ ಸಂಕಟಾ ನೋಡಾಕ್‌ ಆಗ್ತಿರಲಿಲ್ಲ. ಹೊರಳಾಡಿದ್ದ ಹೊರಳಾಡಿದ್ದು. ಕಣ್ಣಾಗ ಹಂಗ ದಳದಳಾ ನೀರ. ಅಂತೂ ಬೇರ ತೇಯ್ದು, ಕಡದ ಜಾಗಕ್ಕ ಹಚ್ಚಿದ್ರೂ, ತಾಸ-ಅರ್ಧಾತಾಸಗಟ್ಲೆ ಅವರ ಒದ್ದಾಟ ನೋಡಕ್ಕಾಗ್ತಿರಲಿಲ್ಲ. ಇನ್ನೇನ್‌ ಏರಿದ್ದು ಇಳೀತು ಅನ್ನೂ ಹೊತ್ತಿಗೆ, ಮಕಾ, ಕಣ್ಣು ವರಿಸ್ಕೊಂಡು... ಕೈಮುಗದು ಯವ್ವಾ ಜೀವ ಉಳಸಿದ್ರಿ, ಯಪ್ಪಾ ಬರ್‍ತೀವಿನ್ನ ಅಂತ ಹೊಂಟ್‌ಬಿಡ್ತಿದ್ರು.

ನಡೂರಾತ್ರ್‍ಯಾಗ ಬ್ಯಾಡಾ ಅಂದ್ರೂ ಎದ್ದು, ನಾನೂ ಬೇರು ತೇಯ್ತೀನಿ ಅಂತ ಓಡಿ ಬರ್‍ತಿದ್ದೆ. ಆದ್ರ ಅವ್ವ, ಅಪ್ಪಾಜಿ ನನಗ ತೇಯಾಕ ಕೊಡ್ತಿರಲಿಲ್ಲ. ಅವರು ತೇಯೂದನ್ನ, ನಿದ್ದಿಗಣ್ಣೋಳಗ ನೋಡ್ಕೋತ ಕೂಡ್ತಿದ್ದೆ. ಹೋಗ್ಲಿ ಹಚ್ಯರ ಹಚ್ಚತೇನಿ ಅಂತ ತೇಯ್ದಿದ್ದ ಔಷಧಿ ಹಚ್ಚಾಕ್‌ ನೋಡ್ತಿದ್ದೆ. ಅದಕ್ಕೂ ಬಿಡ್ತಿರಲಿಲ್ಲ. ಅದು ಭಾಳ ವಿಷಾ ಸುಮ್ನ್‌ ಕೂಡು ಅಂತ ಗದರ್‍ತಿದ್ರು. ಛೆ ಬರೇ ಇದ ಆತ್‌ ಇವರ್‍ದ್‌. ಎಲ್ಲಾ ತಾವ ಮಾಡ್ತಾರು... ಅಂತ ಸಿಟ್‌ ಮಾಡ್ಕೊಂಡು ಹಾಸಿಗ್ಗೆ ಬಂದ್‌ಬಿಡ್ತಿದ್ದೆ.

ಗ್ವಾಡಿ, ಕಂಬ, ಜಂತಿ, ತೊಲಿ, ನಾಗೊಂದಿಗಿ, ಬಾಗಲಾ, ಕಸಬರಿಗಿ ಮೂಲಿ, ಹಿತ್ಲಲಾ, ಹಾಸಗಿ ಹಿಂಗ ಎಲ್ಯಂದ್ರ ಅಲ್ಲಿ ಓಡಾಡ್ಕೋತ ಇರೂ ಈ ಚೋಳುಗೋಳು ನಮಗ ಜೊಂಡಿಗ್ಯಾನಷ್ಟ (ಜಿರಳೆ) ಕಾಮನ್‌ ಆಗಿಬಿಟ್ಟಿದ್ವು. ಹಂಗಂತ ಹೆದರಿಕಿ ಇರ್‍ಲಿಲ್ಲ ಅಂತೇನಿಲ್ಲ ಮತ್ತ. ಚೋಳ ಕಂಡ್‌ಕೂಡ್ಲೇ ಅಪ್ಪಾಜಿನೋ ಅವ್ವಾನೋ ಅದಕ್ಕ ಚಿಮಣಿ ಎಣ್ಣಿ ಸುರವಿ ಬಿಡ್ತಿದ್ರು. ನಮ್ಮನಿಯೊಳಗಿದ್ದ ಬೆಕ್ಕು ಕೆಲವೊಮ್ಮೆ ಅದನ್ನ ಹೊಡದು ಹೊಡದು ಆಟಾ ಆಡಿ ಸಾಯಿಸ್ತಿತ್ತು. ಆದ್ರ ಒಮ್ಮೆ ಏನಾತೋ ಏನೊ... ಒಂದು ಚೋಳು ಪಾಪ ನಮ್‌ ಬೆಕ್ಕಿನ ಬಾಯಿಗೆ ಕಡದಬಿಡ್ತು. ಅವಾಗಿಂದ ಸತ್ತ ಚೋಳ ಮುಂದ ಒಗದ್ರೂ ಹೊಳ್ಳಿ ನೋಡತಿರ್‍ಲಿಲ್ಲ ನಮ್‌ ಬೆಕ್ಕು. ಹೆಂಗರ ಮಾಡಿ ಅದಕ್ಕ ಚೋಳಿನ ಅಂಜಿಕಿ ಹೋಗಸಬೇಕಲ್ಲಾ ಅಂತ ಅಪ್ಪಾಜಿ ಭಾಳ ಪ್ರಯತ್ನ ಪಟ್ರು.

ಚೋಳ ಸಿಕ್ಕಾಗೆಲ್ಲಾ ಅದನ್ನ ಅರೆಜೀವಾ ಮಾಡಿ, ಅದರ ಕೊಂಡಿಗೆ ದಾರ ಕಟ್ಟಿ ಗೂಟಕ್ಕ ತೂಗ ಹಾಕಿ ನೋಡ್ತಿದ್ರು. ಊಂಹೂ ನಮ್‌ ಬೆಕ್ಕು ಯಾಕೋ ಏನೋ ಅದರ ಸಮೀಪ ಹೋಗಾಕ ಧೈರ್ಯಾನ ಮಾಡ್ಲಿಲ್ಲ. ಆದ್ರ ಅದರ ಮರಿಗೋಳು, ನಾ ಮುಂದ ನೀ ಮುಂದ ಅಂತ ಜಿಗಜಿಗದ್‌ ಆ ಚೋಳನ್ನ ಹೊಡಿಯಾಕ ಹೋಗುದನ್ನ ನೋಡಬೇಕಿತ್ತು. ಪಾಪ ಲೈಟ್‌ವೇಟ್‌ ಚೋಳು. ನೆಲಕ್ಕೂ ಇಲ್ಲ ಗ್ವಾಡಿಗೂ ಹತ್ತಿಲ್ಲ, ಅಂತರ್‌ ಪಿಶಾಚಿ ಹಂಗ ಮಕಾ ಕೆಳಗ ಮಾಡ್ಕೊಂಡ್‌ ಜೋತ ಬಿದ್ದ ಅವುಗೋಳ್ನ ಹಿಡ್ಯಾಕ್‌, ಬೆಕ್ಕಿನ ಮರಿಗೋಳಿಗೆ ಗ್ರಿಪ್‌ ಸಿಗ್ತಿರಲಿಲ್ಲ. ನಮ್ ಮರಿಗೋಳು ಸುಸ್ತ್‌ ಆಗಿ, ರೆಸ್ಟ್‌ ತಗೊಂಡು ಮತ್ ಮತ್‌ ಟ್ರೈ ಮಾಡೂವು. ಒಂಥರಾ ಥ್ರೋ ಬಾಲ್‌ ಆಡಿದ್ಹಂಗ ಆಗ್ತಿತ್ತೋ ಏನೋ ಅವಕ್ಕ. ಬೆಕ್ಕಿಗೆ ಆಟ, ಚೋಳಿಗೆ ಸಂಕಟ ಅನ್ನೂಹಂಗ್‌ ಇರ್‍ತಿತ್ತು ಆ ದೃಶ್ಯ.

ಇನ್ನೊಂದ್‌ಸಲ ಸಂಜೀಮುಂದ ಹಾಲು ತರಾಕಂತ ಡೈರಿಗೆ ಹೋಗಬೇಕಿತ್ತು. ರೊಕ್ಕಾ ಕೊಡು ಅಂತ ಅವ್ವಗ ಹೇಳ್ಕೋತ, ಅಡಗಿ ಮನಿ ಬಾಗಿಲ್‌ ಚೌಕಟ್ಟಿಗೆ ಕೈ ಹಚ್ಚಿ ನಿಂತೆ. ಅವ್ವ ನೋಡಿದಾಕಿನ, ತಂಗಿ ಈಗ ಹೆಂಗ್‌ ನಿಂತೀಯೋ ಹಂಗ ಸುಮ್ಮನ ನಿಂದ್ರು. ಹೊಳ್ಯಾಡಬೇಡ ಅಂದ್ಲು. ಯಾಕ ಅಂದೆ. ಅಲ್ಲೇ ಮೂಲ್ಯಾಗಿದ್ದ ಕಸಬರಿಗಿ ತಗೊಂಡು, ಚೋಳ ಐತಿ ನಿನ್ನ ಎಡಗೈ ಕಡೆ. ಹಗರ್‍ಕ್‌ ಈ ಕಡೆ ಬಾ ಅಂದ್ಲು. ಅಯ್ಯೋ! ನನ್ನ ಹೆಬ್ಬರಳಿಗೂ ಮತ್ತ ಚೋಳಿಗೂ ಅರ್ಧ ಇಂಚಿನಷ್ಟ ದೂರ ಇತ್ತು.

ಅವ್ವಾ ಉಳ್ಕೊಂಡಿ ಬಾ ನೀ ಅಂತ ಹೇಳಿ, ನಾ ಕೂಸಿದ್ದಾಗಿನ ಘಟನಾ ನೆನಪಿಸಿದ್ಲು. ’’ವರ್ಷದಾಕಿ ಇದ್ದಿ ನೀನು. ಮಚ್ಚರದಾನಿ ಕಟ್ಟಿ, ಗಾದಿ ಬುಡಕ್‌ ಅದನ್ನ ಸಿಗಸಾಕ ಅಂತ ಬಂದೆ. ನಿನ್ನ ಅಂಗಾಲ ತುಂಬ ಚೋಳು ಅಂಟಿಕೊಂಡು, ಕೊಂಡಿ ಮ್ಯಾಲ ಎಬ್ಬಿಸಿಕೊಂಡು ಕೂತಿತ್ತು. ಏನ್‌ ಮಾಡೂದು, ನೀ ನಿದ್ದಿಗಣ್ಣಾಗ ಕಾಲ್‌ ಅಲ್ಲಾಡ್ಸಿದ್ರ ಹೆಂಗ ಅನ್ಕೋತ ಕೂತೆ. ಯಾಕಂದ್ರ ಚೋಳನ್ನ ಯಾವತ್ತೂ ತಡವಬಾರ್‍ದು. ತಡವೀದ್ರ ಅದು ಕಡಿಯೂದು ಗ್ಯಾರಂಟಿ. ಹೆದರ್‍ಕೋತ ಹಗೂರ್‍ಕ್‌ ನಿನ್ನ ಕಾಲ್‌ ಹಿಡಿದು ಜಾಡಿಸಿಬಿಟ್ಟೆ. ಆ ಕಡೆ ಹೋಗಿ ಬಿತ್ತು ಚೋಳು. ತಾಯಿ... ಜೀವ ಹೋಗಿ ಬಂದಹಂಗ ಆತು. ನೆನಸ್ಕೊಂಡ್ರ ಕಣ್ಣಾಗ ನೀರ ಬರ್‍ತಾವ್‌ ನೋಡು. ನೀನೋ ಅರಾಮ್‌ ನಿದ್ದಿ ಮಾಡಾಕ್‌ಹತ್ತಿದ್ದಿ. ನಿನಗೇನೂ ಗೊತ್ತಾಗ್ಲೇ ಇಲ್ಲ ಅದು’. ನಮ್‌ ಮನಿಯೊಳಗ ಚೋಳು ಕಂಡಾಗೊಮ್ಮೆ ಇದನ್ನ ರಿವೈಂಡ್ ಮಾಡ್ತಿದ್ಲು ಅವ್ವ.

ನಮ್‌ ಊರಾಗ ಈ ಚೋಳು ಕಡಿಸ್ಕೊಳ್ಳೂದಕ್ಕೂ ಭರಪೂರ ಸೀಝನ್‌ ಅಂದ್ರ ಪಂಚಮಿ, ಮಾನವಮಿ, ದೀಪಾವಳಿ ಮತ್ತ ಯುಗಾದಿ. ಹಬ್ಬಕ್ಕಂತ ಮನಿ ಸ್ವಚ್ಛ ಮಾಡೂ ಹೊತ್ತಿನ್ಯಾಗ ಇವು ಕೈ ಕಡದ ಬಿಡೋವು. ಅಂಗೈಯಗಲದಷ್ಟು ಚೋಳು ಬಂದೂ ಅಂದ್ರ, ಅವ್ವಾ... "ರೀ... ಬರ್‍ರಿಲ್ಲೇ ದೊಡ್ಡದ ಐತಿದು" ಅಂತ ಅಪ್ಪಾಜೀನ್ನ ಕರೀತಿದ್ಲು. ಬೆರಳಿನಷ್ಟುದ್ದ ಇದ್ರ ತಾನ ಹೊಡೀತಿದ್ಲು. ಇನ್ನ ಬೆರಳ ತುದಿಯಷ್ಟು, ಅಂದ್ರ ಆಗ ಹುಟ್ಟಿದ ಎಳೇಎಳೇ ಪಾಪುಮರಿಗೋಳಿದ್ರ ನಾ ಹೊಡೀಲಿ? ಅಂತ ಕೇಳಬೇಕು ಅನ್ನಿಸ್ತಿತ್ತು. ಪ್ಚ್‌... ಏನ್‌ ಮಾಡೂದು, ಇವ್ರು ಬಿಡೂದಿಲ್ಲ ಅಂತ ಸುಮ್ಮನಾಗ್ತಿದ್ದೆ. ಹೂಂ... ದೊಡ್ಡವಾಡದಾಗ ಇರೂ ತನಕ ಚೋಳನೂ ಕಡೀಲಿಲ್ಲ. ನಾನೂ ಅವುಗೋಳ್ನ ಹೊಡೀಲಿಲ್ಲ.

ಹಾಂ... ಆದರ ಒಮ್ಮೆ ಇರಬಿ (ಇರುವೆ) ಮಾತ್ರ ಮಸ್ತ್‌ ನನ್ನ ಗಲ್ಲಾ ಕಡದಿದ್ದು ಛುಲೋ ನೆನಪೈತಿ. ಅವತ್ತು ರವಿವಾರ. ನಮ್‌ ಮನಿಯೊಳಗ ಒಂದು ರೂಲ್ಸ್‌ ಇತ್ತು. ಮನೆಯಲ್ಲಿ ಸ್ವೀಟ್‌ ಮಾಡಿದ ದಿನ ಮಾತ್ರ ಎಲಿ, ಅಡಕಿ ತಿನ್ಬೋದು ಅಂತ. ಎರಡು ಮೂರು ದಿನಕ್ಕೊಮ್ಮೆ ಎಲೆ-ಅಡಿಕೆ ತಿನ್ನೋ ಅಪ್ಪಾಜಿನ್ನ ನೋಡಿದಾಗೆಲ್ಲಾ, ಮಕ್ಕಳಿಗೊಂದ್‌ ರೂಲ್ಸು ದೊಡ್ಡವರಿಗೊಂದ್‌ ರೂಲ್ಸು ಅಂತ ಸಿಟ್‌ ಬರ್‍ತಿದ್ರೂ... ಅಮಾಸಿ, ಹುಣ್ವೀಗೆ ಕಾಯ್ಕೋಂಡ್‌ ಕೂಡ್ತಿದ್ವಿ ನಾವು ಮೂರೂ ಜನ. ಅವತ್ತ ರವಿವಾರನ ಹುಣ್ವಿ ಬಂದಿತ್ತು. ಹಿಂಗಾಗಿ ಅವತ್ತೇನೋ ಪಾಯಸ ಮಾಡಿದ್ಲು. ಸಂಡಗಿ ಕರದಿದ್ಲು ಅವ್ವ. ಎಲಿ ತಿನ್ನೂ ಸಡಗರಕ್ ಬಡಾಬಡಾ ಊಟಾನೂ ಮಾಡಿದ್ದಾತು. ಎಲಿಯೊಳಗ ಅಡಕಿ ಸುಣ್ಣಾ ಏಲಕ್ಕಿ, ಲವಂಗ, ಕಸಕಸಿ, ಚಮನ್‌, ಕೊಬ್ರಿ, ಸಕ್ರಿ ಎಲ್ಲಾ ಸೇರಿಸಿ ಅಪ್ಪಾಜಿ ಪಾನ್‌ ಮಾಡಿ ಕೊಟ್ರು. ಆಮ್ಯಾಲ ಅಪ್ಪಾಜಿ ಅವ್ವ ಒಳಗ ಮಲಗಿದ್ರು. ತಮ್ಮ ಇದ ಟೈಮ್‌ ಅಂತ ಹೇಳಿ ಎಲ್ಲೋ ಓಟ ಕಿತ್ತಿದ್ದ. ತಂಗಿ ನಾನೂ ಪಡಸಾಲ್ಯಾಗ ಮಲಗಿದ್ವಿ.

ಡಂಕ್‌ಣಕ್ಕಾ ಡಂಕಣಕ್ಕಾ... ಎಲ್ಲೋ ಕನಸಿನ್ಯಾಗ ಏನೋ ಸೌಂಡ್‌ ಕೇಳಿದಂಗಾತು. ಭರಪೂರ್‌ ನಿದ್ದಿ. ಡಂಕಣಕ್ಕಾ ಡಂಕಣಕ್ಕಾ. ತೇಲಗಣ್ಣ ಮಾಲಗಣ್ಣ... ಬೆಳ್ಳನ್‌ ತಲೆದಿಂಬು. ಮತ್‌ ಕಣ್ಣು ಮುಚ್ಚಿದ್ವು. ಸ್ವಲ್ಪ್‌ ಹೊತ್ತಿಗೆ ಅರ್ಧಾಗಣ್ಣು... ಆ ಬಿಳಿ ದಿಂಬಿನ ಮ್ಯಾಲ ಒಂದೆರಡು ಕೆಂಪ್‌ ಕಲರ್‌ದು ಏನೋ ಎಳಿ ಹರಿದು ಹೋದಂಗ ಆಗಿತ್ತು. ಅಯ್ಯೋ ಏನಿದು ರಕ್ತ ಅಂತ ಗಲ್ಲ ಮುಟ್ಕೊಂಡೆ. ಆದ್ರ ಎಲ್ಲೂ ಏನೂ ಹಸಿಹಸಿ ಅನ್ನಸ್ಲಿಲ್ಲ. ಅಷ್ಟೊತ್ತಿಗೆ, ಎದರ್‌ಮನಿ ಹುಡುಗಿ, ಸಿನಿಮಾ ತೋರ್‍ಸಾವ್ರ ಬಂದಾರ, ಪ್ಯಾಟ್ಯಾಗ ರಾಮಾಯಣ ತೋರ್‍ಸಾತಾರಂತ. ಹನುಮಂತಾ, ರಾಮಾ, ಸೀತಾ ಎಲ್ಲಾರ್‍ನೂ ತೋರಸ್ತಾರಂತ... ಬರ್‍ತೀ ಅವ್ವೀ? ಅಂತ ಬಾಗಲ ಹೊರಗ್‌ ನಿಂತು ಕರದ್ಲು. ಅಕಿ ದನಿ ಕೇಳಿ, ಅವ್ವನೂ ಎದ್ದ ಬಂದ್ಲು.

ನನಗೋ ಪ್ಯಾಟಿಗೆ ಅರ್ಜಂಟ್‌ ಹೋಗ್ಬೇಕಿತ್ತು. ಆದ್ರ ಈ ತಲಿದಿಂಬಿನ ಮ್ಯಾಲ ಏನಿದು? ಕೆಂಪಂದು ಅಂತ ನೋಡೇ ನೋಡಿದ್ನಿ. ಕಣ್‌ ದೊಡ್ಡೂ ಮಾಡಿ ನೋಡಿದ್ನಿ. ಮುಟ್ಟಿ ನೋಡಿದ್ನಿ. ಅಲ್ಲೇ ಒಂದೆರಡು ನೆಲದಿಂದ ತಲಿದಿಂಬಿನ ತನಕಾನೂ ಸಣ್ಣೂಸಣ್ಣೂ ಕೆಂಪಿರಿಬಿ ರೇಷನ್‌ಕ ಕ್ಯೂ ಹಚ್ಚಿದಂಗ ಹಚ್ಚಿದ್ವು. ಕೆಲವೊಂದು ಇರಬಿಗೋಳು ನಮ್‌ದಾತು, ನೀವ್‌ ಮುಗಿಸ್ಕೊಂಡ್‌ ಬರ್‍ರಿ ಅಂತ ಒಬ್ಬರಿಗೊಬ್ಬರು ಹೇಳ್ಕೋತ ಹೊಂಟಿದ್ವು. ಇದೆಲ್ಲಾ ಏನಂತ ನಂಗ ತಿಳೀಲೇ ಇಲ್ಲ. ಇದನ್ನೆಲ್ಲಾ ನೋಡ್ಕೋತ ನಿಂತ ಅವ್ವ ಹಗೂರ್‍ಕ್‌ ಹತ್ರ ಬಂದ ಅವ್ವಾ ಜೋರಾಗ್‌ ನಗಾಕ್ ಶುರು ಮಾಡಿದ್ಲು.

ತಂಗಿ ಹನುಮಂತನ್‌ ನೋಡಾಕ್ ಹೋಗ್ತಿ? ಅಂದ್ಲು. ಹೂಂ ಅಂದೆ. ನಿನ್‌ ಗಲ್ಲಾ ನೋಡ್ಕೊ ಮದಲ... ನೀನ ಹನುಮಂತಿ ಆಗಿ ಅಂದ್ಲು. ಆಂ? ಅಂದೆ. ಓಡಿ ಹೋಗಿ ಕನ್ನಡಿ ಮುಂದ ನಿಂತ್ನಿ, ತುಟಿ ಮತ್ತ ಗಲ್ಲ ಪುರಿ ಉಬ್ಬಿದ್ಹಂಗ ಕೆಂಪಗ ಉಬ್ಬಿಬಿಟ್ಟಿದ್ವು! ಕಣ್ಣಾಗ ನೀರು ತುಂಬ್ಕೊಂಡ್ವು. ಅವ್ವನ್‌ ಮುಖಾ ನೋಡಿದೆ. ಅಕಿಗೋ ಜೋರ್‌ ನಗು. ಯಾಕ್‌ ಹಿಂಗಾತವ್ವಾ ನಂಗ? ನನ್ನ ಗಲ್ಲ, ತುಟಿಗೆ ಏನಾತು ಅಂದೆ. ಇನ್ನಷ್ಟು ಸಕ್ಕರಿ ಬೇಕ್‌ಬೇಕಂತ ಎಲಿ ಅಡಕಿಯೊಳಗ ಹಾಕಿಸ್ಕೊಂಡು ತಿಂದಿದ್ಯಲ್ಲಾ, ಮತ್ತ ತಿನ್ಕೋತ ಹಂಗ ಮಲ್ಕೊಂಬಿಟ್ಟಿದ್ದಿ ನೋಡು. ಆಗ ತಲಿದಿಂಬಿನ ಮ್ಯಾಲ ಜೊಲ್ಲು ಸೋರಿಬಿಟ್ಟೇತಿ. ಸಿಹಿ ವಾಸನಿಗೆ ಇರಬಿ ಸಾಲು ಹಚ್ಕೋಂಡು ನಿನ್ನ ಗಲ್ಲಾ, ತುಟಿ ಮ್ಯಾಲೆಲ್ಲಾ ಓಡ್ಯಾಡಿ, ಕಡದಾವು ಅಂದ್ಲು. ಅಯ್ಯೋ ಏನ್‌ ಮಾಡೂದು ಈಗ? ಅಂದೆ. ಗಾಳ್ಯಾಗ ಹೋಗಬೇಡ. ಲಗೂನ ಮಕಾ ತಕ್ಕೊಂಡು ಬಾ. ತುಪ್ಪಾ ಹಚ್ಚತೀನಿ ಅಂತ ಒಳಗ ಹೋದ್ಲು. ಒಳಗೊಳಗ ಹೆದರ್‍ಕಿ, ಈ ಪುರಿಗಲ್ಲಾ, ಮತ್ತ ಸೊಟ್ಟ ತುಟಿ ಹಿಂಗ ಉಳದ್ರ ಹೆಂಗ ಅಂತ. ಆದ್ರ ಪ್ಯಾಟ್ಯಾಗಿನ ರಾಮಾಯಣನೂ ಕರ್‍ಯಾತಿತ್ತ. ಆಗಿದ್ ಆಗ್ಲಿ ರಾಮಾಯಣ ನೋಡೂದನ್ನ ಬಿಡೂದು ಬ್ಯಾಡಾ ಅಂತ ಹೇಳಿ ಮುಖ ತಕ್ಕೊಂಡು, ತುಪ್ಪ ಹಚ್ಚಿಸ್ಕೊಂಡು ಅಂಗಳಕ್ಕ ಬಂದು, ಗೆಳತಿ ಕೈ ಹಿಡ್ಕೊಂಡು, ಈಗ ಬಂದೆ ಅವ್ವಾ... ಅಂತ ಹೇಳಿ ಪ್ಯಾಟಿಗೆ ಓಡಿಬಿಟ್ಟೆ.

ಅಲ್ಲಿ ಒಂದು ಸೈಕಲ್ಲು, ಆ ಸೈಕಲ್ಲಿಗೆ ಒಂದು ಚೌಕ ಡಬ್ಬಿ. ಆ ಡಬ್ಬಿಗೆ ಒಂದು ಪರ್ದಾ. ಅದಕ್ಕೊಂದು ಕಿಂಡಿ, ಆ ಕಿಂಡಿಯೊಳಗ ಒಬ್ಬೊಬ್ರ ಸಾಲಾಗಿ ಇಣುಕಿ ನೋಡಿದ್ರ, ರಾಮಾಯಣ ಕಾಣೂದು. ನಾನೀ ಅಂತ ಮುಂದ ಬಿದ್ದ ನೋಡಾಕ್‌ ಹೋಗಿ ಮಂದಿ ಮೈಮ್ಯಾಲ ಬೀಳಾಕ್ ಶುರು ಮಾಡಿದ್ರು. ನಾ ದೂರ ಸರದ್‌ ನಿಂತೆ. ಸಿನಿಮಾ ತೋರ್‍ಸಾಂವಾ ಎಲ್ಲಾರ ಕಡೀಂದ ಹತ್ತು ಪೈಸೆ ಇಸ್ಕೊಂಡು, ಒಬ್ಬೊಬ್ಬರನ್ನ ನೋಡಾಕ್‌ ಬಿಡ್ತಿದ್ದ. ನನ್ನ ಗೆಳತಿ ಮುಟ್ಟಿಗಿಯೊಳಗೂ ಹತ್ತು ಪೈಸಾ ಇತ್ತು. ಆದ್ರ ನನ್ನ ಕಡೆ ಇರಲಿಲ್ಲ. ನಾ ಏನ್‌ ಮಾಡ್ಲಿ? ಮನಿಯೊಳಗ ಕೇಳಿದ್ರ ಕೊಡೂದಿಲ್ಲ ಅಂತ ಗೊತ್ತಿತ್ತು. ಅಕಿ ನನ್‌ ಕೈ ಜಕ್ಕೊಂಡು, ಬಾ ಅಂದ್ಲು. ನಾ ಇಲ್ಲ. ನನ್‌ ಕಡೆ ರೊಕ್ಕಾ ಇಲ್ಲ. ನಾ ಬರೂದಿಲ್ಲ ಅಂದೆ. ಆತು ಹೋಗ್‌. ನಾ ಒಬ್ಬಕೆ ನೋಡ್‌ಬರ್‍ತೀನಿ ಅಂದ್ಲು. ಅಕಿ ಹೋಗಿ ಅ ಡಬ್ಬಿಯೊಳಗ ಇಣುಕಿ ಹಾಕಿ ಐದಾರು ಸೆಕೆಂಡೂ ಆಗಿಲ್ಲ. ಸಾಕ್‌ ಬಾ ಸಾಕ್‌ ಬಾ ಅಂತ ಸಿನಿಮಾ ತೋರ್‍ಸಾಂವಾ ಅಂಗಿ ಜಗ್ಗಿ ಜಗ್ಗಿ ಇಡ್ತಿದ್ದ. ಎಲ್ಲಾರಿಗೂ ಹಿಂಗ ಮಾಡ್ತಿದ್ದ. ಅಂತೂ ಇಂತೂ ಗದ್ದಲ ಜಾಸ್ತೀನ ಆಗಾಕ್‌ಹತ್ತು. ಅಲ್ಲೇನಿತ್ತಾ ಅಂದೆ ಗೆಳತಿಗೆ. ರಾಮಾಯಣ ನೋಡ್ತೀವಲ್ಲಾ... ರಾಮಾ, ಲಕ್ಷ್ಮಣಾ, ಹನುಮಂತ ಎಲ್ಲಾರೂ ಅಲ್ಲಿ ಬಂದಾರು ಅಂದ್ಲು. ಅಷ್ಟ ಸಣ್ಣ ಡಬ್ಯಾಗ ಅವ್ರು ಹೆಂಗ್‌ ಬರ್‍ತಾರು ಅಂತ ಯೋಚನಾ ಮಾಡ್ಕೋತ ನಿಂತೆ. ಮನೀಗೆ ಹೋಗಿ ಕೇಳಿದ್ರಾತು ಅಂತ ಅನ್ನೂದ್ರಾಗ, ಬೆಳಗ್ಗೆ ಅಪ್ಪಾಜಿ ಹೇಳಿದ್‌ ಮಾತು ನೆನಪಾತು; ರಾತ್ರಿ ಅನ್ನೂದ್ರೊಳಗ ಐದು ಪೇಜ್‌ ಇಂಗ್ಲೀಷ್‌ ಶುದ್ಧಬರಹ ಬರ್‍ದು ತೋರಿಸ್‌ಬೇಕು ಅನ್ನೂದು. ಯಾಕೋ ಎದಿಬಡಿತ ಜಾಸ್ತಿ ಆತು. ಸಿನಿಮಾ ನೋಡ್ಲಿಲ್ಲ ಅಂತ ಬೇಜಾರೂ ಆತು. ದುಡುದುಡು ಓಡ್ಕೋತ ಮನೀಗ್‌ ಬಂದ್‌ಬಿಟ್ಟೆ.

ಬಡಾಬಡಾ ಐದು ಪೇಜು ಶುದ್ಧಬರಹ ಬರ್‍ದು ಮುಗದ್‌ಮ್ಯಾಲ ಅಪ್ಪಾಜಿಗೆ ಕೇಳಿದೆ, ಸಿನಿಮಾ ಹೆಂಗ್‌ ತೋರಸ್ತಾರು ಆ ಡಬ್ಯಾಗ ಅಂತ. ಅಪ್ಪಾಜಿ ಸಣ್ಣ ಡಾರ್ಕ್‌ರೂಮಿಗೆ ಕರ್‍ಕೊಂಡು ಬ್ಲ್ಯಾಕ್‌ ಅಂಡ್‌ ವೈಟ್‌ ಪ್ರಿಂಟಿಂಗ್‌ ಮಶೀನ್‌ ಹತ್ರ ಕೂತು, ನನ್ನನ್ನ ತೊಡಿ ಮ್ಯಾಲೆ ಕೂಡಿಸ್ಕೊಂಡ್ರು. ಲೈಟ್‌ ಆಫ್‌ ಮಾಡಿ, ಒಂದಿಷ್ಟು ಹಳೇ ನೆಗೆಟಿವ್‌ನ್ನಾ, ಮಶೀನ್‌ಗೆ ಹಾಕಿ, ವೈಟ್‌ ಪೇಪರ್‌ ಮ್ಯಾಲ ಅದರ ಛಾಯಾ ತೋರಿಸಿದ್ರು. ಆಗ ಓಹ್‌ ಅನ್ಕೊಂಡೆ. ಆದ್ರ ಸಂಜೀಮುಂದ ಅಪ್ಪಾಜಿ ಕಡೆ ಹತ್ತು ಪೈಸಾ ಕೇಳೂ ಧೈರ್ಯ ಮಾಡಿದ್ರ, ಎಲ್ಲಾರ್‌ಹಂಗ ನಾನೂ ಆ ಚೌಕ ಡಬ್ಯಾಗ ರಾಮಾಯಣ ಸಿನಿಮಾ ನೋಡಬೋದಿತ್ತಾ? ಅಂತ ಅನ್ನಿಸಿ ಬೇಜಾರಾಗಿದ್ದು, ಚೋಳು, ಇರಬಿ, ಉಬ್ಬಿದ ಗಲ್ಲಾ, ತುಟಿ ಆಣೆಗೂ ಖರೆ. ರಾತ್ರಿ ಮಲ್ಕೊಂಡ್ರ ಬರೇಬರೇ ಕಣ್‌ಮುಂದ ಬಂದಿದ್ದು, ಪ್ಯಾಟಿ, ಚೌಕ್‌ಡಬ್ಬಿ, ಮಂದಿ, ಸಿನಿಮಾ ತೋರ್‍ಸಾಂವಾ. ನನ್ನ ಖಾಲಿ ಮುಟ್ಟಿಗಿ.

(ಮುಂದುವರಿಯುವುದು)

Tuesday, February 5, 2013

ಮಲ್ಲೀಕಾ... ಸಂತ್ಯಾಗ ನಿಂತ ಬುದ್ಧನ


ಡಂಕಣಕ್ಕಾ ಡಂಕಣಕ್ಕಾ... ಅರ್ಧ ಕೆಜಿ ದಪ್ಪ ರವಾ, ಡಂಕಣಕ್ಕಾ, ಧೀಂಧೀಂಧೀಂ ಡಂಕಣಕ್ಕಾ, ಒಂದು ಕೆಜಿ ಬೆಲ್ಲಾ, ಚಿಪ್ಪಾಂಗ್‌ ಚಿಲ್ಲಾಂಗ್‌, ಪಾವಕಿಲೋ ಮೈದಾ... ಒಟ್ಟು ಐದು ಸಾಮಾನಲ್ಲಾ ಅವ್ವ ಹೇಳಿದ್ದು. ಮತ್ತೇನ್‌ ಮರ್‍ತೆ? ಹನುಮಂತ್‌ ದೇವರ ಗುಡಿ ಹತ್ರ ಬರೂ ಹೊತ್ತಿಗೆ, ಹಾಂ... ಯಾಲಕ್ಕಿ, ಲವಂಗ, ಕಸಕಸಿ, ಧಾಗೆನತಿ ನಕಧಿನಾ, ಧಾಗೆನತಿ ನಕಧಿನಾ... ಸಾಮಾನಿಗೆ ಒಂದೊಂದರಂಗ ಬೆರಳು ಮಡಿಚ್ಕೊಂಡು. ಹಾಂ! ಲಗೂನ ಹೋಗಿ, ಎಲಿಗಾರ್‌ ಕಾಶಪ್ಪನಿಗೆ ಈ ಐದೂ ಸಾಮಾನ್‌ ಪಟಪಟ ಹೇಳಿಬಿಡಬೇಕಪ್ಪಾ... ಅಂತ ಅನ್ಕೊಂಡು, ಬಲಗೈಯ್ಯಾಗ ರೊಕ್ಕಾ ಗಟ್ಟಿ ಹಿಡ್ಕೋಂಡ್‌, ಎಣಸಿದ ಸಾಮಾನುಗೋಳ ನೆನಪನ್ನ ಎಡಗೈ ಮುಟ್ಟಿಗ್ಯಾಗ ಮುಚ್ಚಿಟ್ಕೊಂಡು ಹೊಂಟಿದ್ನಾ... ಪ್ಯಾಟಿ ಹತ್ರ ಬರ್‍ತಿದ್ದಹಂಗ... ಹತ್‌ ಹದಿನೈದ್ ಮಂದಿ ಮೈಮ್ಯಾಲೆಲ್ಲಾ ಗುಲಾಲ್ ಚಲ್ಕೋಂಡ್‌ ಡ್ಯಾನ್ಸ್‌ ಮಾಡ್ಕೊಂಡ್ ಹೊಂಟಿದ್ರು. ನೋಡಬೇಕು ಅನ್ನೂ ಹೊತ್ತಿಗೆ ಅವ್ರೆಲ್ಲಾ ಮುಂದ ಹೋಗಿಬಿಟ್ರು. ಒಂದಿಬ್ರು ಹೆಗಲಮೇಲೆ ಕುರ್ಚಿಯೊಳಗ ಅದೇನೋ ಹೊತ್ಕೊಂಡು ಹೋಗೂದು ಕಾಣಿಸ್ತು. ಓಡಿ ಹೋಗಿ, ಏನದು ಅಂತ ನೋಡಿದ್ರ, ಸತ್ತ ಮಂಗ್ಯಾನ್ನ (ಕೋತಿ) ಕುರ್ಚಿ ಕೈಕಾಲಿಗೆ ಕಟ್ಟಿ ಕೂಡಿಸಿದ್ರು. ಆ ಮಂಗ್ಯಾಗ ಗುಲಾಲ್‌ ನಾಮಾ ಹಚ್ಚಿ, ಕುತ್ತಿಗೀಗೆ ಚಂಡ್‌ಹೂ, ಶಾವಂತಿಗಿ ಮಾಲಿ ಹಾಕಿ ಮೆರವಣಿಗೆ ಮಾಡ್ಕೋತ ಹೊಂಟಿದ್ರು.

ಅಯ್ಯ ಪಾಪ... ಅದ್ಯಾಕ್‌ ಸತ್ತಿತ್ತು? ಅಂತ ಅಲ್ಯಾರಿಗೊ ಕೇಳಿದ್ದಕ್ಕ. ಕರೆಂಟ್‌ ಹೊಡದ... ಅಂದ್ರು. ಈಗೇನ್‌ ಮಾಡ್ತಾರ್‌ ಮತ್ತದಕ್ಕ ಅಂದೆ. ಹುಣಶೀಕಟ್ಟಿಗೆ ಕುಂಡರಸ್ತಾರು ಅಂದ್ರು. ಆಮ್ಯಾಲ ಅಲ್ಲೇನ್‌ ಮಾಡ್ತಾರು ಅಂತ ಅವ್ರಿಗೆ ಕೇಳಬೇಕು ಅನ್ನಿಸ್ತು. ಆದ್ರ, ಕಟ್ಟಿಗಿ ಬಾಯಿ ಆಗಿದ್ರ ಇಷ್ಟೊತ್ತಿಗೆ ಒಡದು ಹೋಗ್ತಿತ್ತು ಅಂತ ಮನ್ಯಾಗಷ್ಟ ಬೈಸ್ಕೊಳ್ಳೂದಲ್ಲದ ಊರಮಂದೀ ಕಡೆನೂ ಬೈಸ್ಕೊಳ್ಳೂದು ಬ್ಯಾಡಾ ಅಂತ ಅನ್ಕೊಂಡು, ಬಾಯಿ ಮುಚ್ಕೋಂಡು ಎಲಿಗಾರ ಅಂಗಡಿ ಕಡೆ ಹೋದೆ.

ಅಂಗಡಿ ಬಂತು. ಅಯ್ಯೋ! ಮುಟ್ಟಿಗಿ ಬಿಚ್ಚಿಬಿಟ್ಟಿತ್ತು. ಅದ್ರೂ ನೆನಪ ಮಾಡ್ಕೊಂಡು, ಕಾಶಪ್ಪಾ, ಅರ್ಧಕಿಲೋ ರವಾ ಮತ್ತ ಬೆಲ್ಲಾ ಅಂದೆ. ಇನ್‌ಮೂರು ಸಾಮಾನು ಯಾವು? ಅಂತ ಅನ್ಕೋತ, ಅವ ಬೆಲ್ಲದ ಪೆಂಟಿ ಮಕಕ್ಕ ಧನ್‌ ಅಂತ ಕುಟ್ಟೂದನ್ ನೋಡ್ಕೋತ ನಿಂತ್‌ಬಿಟ್ಟೆ. ಅವ್ವಿ, ರವಾ ಎಂಥಾದ್ದು ಅಂದ. ರವಾ ಅಂದ್ರ ರವಾ ಅಂದೆ. ಅದಕ್ಕ ಅವಾ, ದಪ್ಪಂದೋ, ಸಣ್ಣಂದೋ ಅಂದ. ನಂಗದೆಲ್ಲಾ ಗೊತ್ತಿಲ್ಲ. ಸಜ್ಜಕದ ಹೋಳಿಗಿ ಮಾಡಾಕಂತ ಅಂದೆ. ದಪ್ಪ ರವಾ ಕಟ್ಟಿಕೊಟ್ಟ. ಮತ್ತೇನು ಅಂದಾ. ಲವಕ್ಕಾ, ಯಾಲಂಗಿ ಅಂದೆ. ಆಂ? ಅಂದ. ಅಲ್ಲಾ... ಅಲ್ಲಾ... ಲವಂಗ, ಯಾಲಕ್ಕಿ ಅಂದೆ. ಕಟ್ಟಿಕೊಟ್ಟ. ರೊಕ್ಕಾ ಕೊಟ್ಟು, ಅಯ್ಯೋ ಕಸಕಸಿ (ಗಸಗಸೆ) ಹಾಕೇ ಇಲ್ಲಲ್ಲ ನೀವು? ಅಂತ ಚೀಲ ನೋಡ್ಕೋತ ಕೇಳಿದೆ. ಪಾಪ ಅವ ಹಣಿ ಹಣಿ ಬಡ್ಕೊಳ್ಳಾರದ ಕಸಕಸಿನೂ ಕಟ್ಟಿ ಕೊಟ್ಟ.

ಮನೀಗೆ ಬಂದು, ಲಗೂನ ಸಾಮಾನ ಅವ್ವನ ಕೈಗಿಟ್ಟು, ಈಗ ಬಂದೆ ಇರವ್ವಾ... ಅಂತ ಪ್ಯಾಟ್ಯಾಗಿನ ಹುಣಶೀಕಟ್ಟಿಗಿ ಓಡಿಹೋದೆ. ಒಂದೆರಡು ಫಾರ್ಟಿ ಸಿಕ್ಸ್‌ಟಿ ಸೈಟ್‌ನಷ್ಟು ಪಾಟಿಗಲ್ಲಿನ ದೊಡ್ಡ ಕಟ್ಟಿ ಅದು. ನಟ್ಟನಡಕ್ಕ ಹುಣಶೀಮರ. ಹುಣಶೀಮರದ ಬಡ್ಯಾಗ ಸಣ್ಣದೊಂದು ಗುಡಿ. ಪಾಪ ಸತ್ತೋದ ಮಂಗ್ಯಾನ ಆ ಗುಡಿ ಹತ್ರ ಕೂಡಸ್ತಿದ್ರು. ಕರೆಂಟ್‌ ಹೊಡದಿತ್ತು ಅಂತಾರು. ಎಲ್ಲಿ ಹೊಡದಿತ್ತು? ಎಲ್ಲೂ ನೋವಾಗಿಲ್ಲ, ರಕ್ತಾ ಬಂದಿಲ್ಲ. ಮತ್ತ ಹೆಂಗ್‌ ಸತ್ತಿತು? ಮಲ್ಕೊಂಡ್‌ ಮಂಗ್ಯಾನ ಕಟ್ಟಿ ಕುಂಡರ್‍ಸಿದ್ಹಂಗ ಕಾಣಾತೇತಲ್ಲಾ... ಅಂತ ಅನ್ಕೋತ ನಿಂತೆ.

ಅಷ್ಟೊತ್ತಿಗೆ ಅಲ್ಲೊಬ್ಬಾಂವ ಬಂದ. ಪೂಜಾರಿ ಇರಬೇಕು ಅಂವಾ... ಮಂಗ್ಯಾನ ಹಣೀಗೆ ಅರಿಷಿಣ, ಕುಂಕುಮ ಹಚ್ಚಿ, ಅದರ ಕೊಳ್ಳಾಗ ನೋಟಿನ ಮಾಲಿ ಹಾಕಿದ. ಆಮ್ಯಾಲ ಅದರ ಮುಂದ, ಐದು ಮುಟಿಗಿ (ಮುಷ್ಠಿ) ಚುರುಮುರಿ ಮತ್ತೈದ ಬಾಳೆಹಣ್ಣು ಇಟ್ಟು, ಕಾಯಿ ಒಡದು ನೈವೈದ್ಯ ಮಾಡಿಬಿಟ್ಟ. ಊದಿನಕಡ್ಡಿ ಬೆಳಗಿ ಗಂಟಿ ಬಾರಿಸಿದ. ಪೂಜಿ ಮುಗೀತಿದ್ಹಂಗ... ಭಜನಿ ಏರುದನಿ ಮುಟ್ಟಿತು. ಹನುಮಂತ ದೇವರ ಮ್ಯಾಲಿನ ಹಾಡೋ ಏನೋ ಸರೀ ನೆನಪಿಲ್ಲ. ಆ ಹಾಡುಗೋಳಿಗಿ ತಕ್ಕಂಗ, ಜೊತೀಗೆ ದಾದ್ರಾ, ಕೆಹರವಾ ತಾಳಗಳನ್ನಾ ಹಲಿಗಿಯೊಳಗ ಬಾರಿಸ್ಕೋತ, ಹಾಡಿನ ಲಯಕ್ಕ ತಕ್ಕಂಗ ಲಗ್ಗಿ ಬಾರಿಸ್ಕೋತ ಒಂಥರಾ ರಂಗೇರಿಸಿಬಿಟ್ರು ಮ್ಯಾಳದಾಗಿನ ಮಂದಿ. ಒಂದ್ರೀತಿ ಅದು ಪಕ್ಕಾ ಮಂಗ್ಯಾನ ಉತ್ಸವಾನ ಆಗಿತ್ತು.

ನಾ ನೋಡಿದ್ದು ಇದೊಂದ ಮಂಗ್ಯಾನ ಉತ್ಸವ. ಆದ್ರ ದೊಡ್ಡವಾಡದಾಗ, ತಿಂಗಳಿಗೊಂದರ ಮಂಗ್ಯಾ ಹಿಂಗ ಸಾಯೂವು. ಊರೆಲ್ಲಾ ಅಡ್ಡಾಡ್ಕೊಂಡ್‌ ಬಂದ ಮಂಗ್ಯಾಗೋಳು... ಹುಣಶೀಮರಕ್ಕ ಜೀಕಾ ಹೊಡ್ಕೋತ, ಟೊಂಗಿಯಿಂದ ಟೊಂಗಿಗೆ ಜಿಗ್ಯಾಕ್‌ ಹೋಗಿ ತಂತಿ ಬಡಿಸ್ಕೊಂಡು, ಧಪ್‌ ಅಂತ ಬಿದ್ದುಬಿಡೋವು. ಆಗ ಹನುಮಂತ ದೇವ್ರು ಅಂತ ಹೇಳಿ, ನಮ್‌ ಊರಾನ್‌ ಮಂದಿ ಅದಕ್‌ ಹಿಂಗ ಸಂಸ್ಕಾರ ಮಾಡಿ ಊರ ಹೊರಗ ಮಣ್ಣ ಮಾಡಿ ಬರೋವ್ರು.

ಹೂಂ... ಇನ್ನೇನ್‌ ಪೂಜಾ, ಭಜನಿ ಎಲ್ಲಾ ಮುಗೀತು, ಮಂಗ್ಯಾನ್‌ ಹೆಣಾ ಎತ್ತಬೇಕು ಅನ್ನೂ ಹೊತ್ತಿಗೆ, ಗುಲಾಲ್‌ ತೂರುಣಕಿ ಹೆಚ್ಚಾತು. ನಂಗೂ ಸಿಡಿದೀತಲ್ಲಾ ಅಂತ ಭರಕ್‌ನ ಹಿಂಬರಕೀಲೆ ಸರೀತಿದ್ದಹಂಗ ಹಿಂದ ಯಾರೋ ನಿಂತಿದ್ದು ಗೊತ್ತಾತು. ನೋಡ್ತೀನಿ... ಹುಚ್‌ಮಲೀಕ್‌! ಅಯ್ಯೋ ಯಪ್ಪಾ! ಅಂತ ದೂರ ಸರದೆ. ಹುಚ್ಚನ್ನ ಮುಟ್ಟಿಸ್ಕೊಂಡೆ ಅಂತ ಒಳಗೊಳಗ ಒಂಥರಾ ಮಾಡ್ಕೊಂಡೆ. ಸ್ವಲ್ಪ್‌ ಹೊತ್ತಿಗೆ ಎದಿಬಡಿತ ನಾರ್ಮಲ್‌ಗೆ ಬಂತು. ಮಂಗ್ಯಾನ್ನ ಹೊತ್ಕೊಂಡ್‌ ಹೋಗೂ ಕಾರ್ಯ ಅದರ ಪಾಡೀಗೆ ಅದು ನಡೀತಿತ್ತು. ಎದಿಮ್ಯಾಲ ಕೈಕಟ್ಕೋಂಡು, ಅದನ್ನೆಲ್ಲಾ ನೋಡ್ಕೋತ ನಿಂತಿದ್ದ ಹುಚ್‌ಮಲೀಕ್‌.

ಹೌದು. ಮಲೀಕ್‌ ಊರವ್ರ ಬಾಯಾಗ ಹುಚ್‌ಮಲಿಕ್ಯಾ, ಮಲಿಕ್ಯಾ, ಯಾವಾಗ್ಲೂ ಪ್ಯಾಟಿಯೊಳಗ ಇರಾಂವಾ. ಅಲ್ಲೆಲ್ಲೋ ಕಟ್ಟಿ ಮ್ಯಾಲ, ಮೂಲ್ಯಾಗ ನಿಂತ್ಕೋಂಡ್ ಹೋಗೂ ಬರೂ ಮಂದೀನ್ನಾ, ನಡಿಯೋ ಘಟನಾಗಳನ್ನಾ ನೋಡ್ಕೋತ ನಿಂತ್‌ಬಿಡಾಂವಾ. ಅವನ ಕರಿ ಮೈಮ್ಯಾಲಿರೋ ಬಿಳಿ ಬಣ್ಣದ ಕುರ್ತಾ ಪಾಯಿಜಾಮಾ ತುಂಬಾನೂ ನಮ್‌ ಊರಾನ್ ಕೆಂಪ ಧೂಳಾ ಅಡರಿರ್‍ತಿತ್ತು. ಎಣ್ಣಿ, ಹಣಗಿ ಕಾಣದ ಕರಿಬಿಳಿ ಕೂದ್ಲಾ, ಗೇಣುದ್ದ ಗಡ್ಡಾ. ಆದ್ರ, ಅವನ ತುಟಿಮ್ಯಾಲ ಯಾವಾಗ್ಲೂ ಸಣ್ಣದೊಂದು ನಗಿ ಇರ್‍ತಿತ್ತು. ಆ ನಗಿಯೊಳಗ ಏನೋ ಕಳಕೊಂಡ ನೋವು, ಹಂಗಂತ ಹತಾಶಾ ಭಾವನೂ ಅಲ್ಲ ಮತ್ತ. ಕಣ್ಣೊಳಗ ಏನೋ ಒಂದು ಶಾಂತತಾ. ಅವನ ದನಿ ಕೇಳೂದ್‌ ಹೋಗ್ಲಿ, ತುಟಿ ಬಿಚ್ಚಿದ್ದು ನೋಡಲೇ ಇಲ್ಲ. ಹಂಗಂತ ಅವ ಮೂಕ ಆಗಿರಲಿಲ್ಲಾ ಮತ್ತ.

ಅಂವಾ ಹಾಕ್ಕೊಂಡಿರೋ ಅರವಿ ಬೆಳ್ಳಗ ಕಾಣಾತಾವಂದ್ರ ಅವತ್ತ ರಂಜಾನೊ, ಈದ್‌ಮಿಲಾದೋ ಇರಬೇಕು ಅಂತಾನ ತಿಳ್ಕೊಬೇಕು. ಯಾವಾಗ್ಲೂ ಅವನ ಕೈಯ್ಯಾಗ ಒಂದು ಸಣ್ಣ ಪ್ಲಾಸ್ಟಿಕ್‌ ಚೀಲ ಇರೋದು. ಅದರಾಗ ಸಣ್ಣಸಣ್ಣ ಬೆಣಚುಕಲ್ಲಿನ ಚೂರುಗಳಿರ್‍ತಿದ್ವು. ಆಗಾಗ ಹುಣಶೀಕಟ್ಟಿಮ್ಯಾಲ ಹರವಿಕೊಂಡು ಕೂಡ್ತಿದ್ದ. ಅದೇನ್‌ ಎಣಸ್ತಿದ್ನೊ, ಆರಸ್ತಿದ್ನೋ ಗೊತ್ತಿಲ್ಲ. ನಾ ಅನ್ಕೋತಿದ್ದೆ. ಹುಚ್ಚು ಹಿಡಿಯೂಕಿಂತ ಮೊದ್ಲು ಅವ ರತ್ನ, ಮುತ್ತಿನ ವ್ಯಾಪಾರಿಯಾಗಿದ್ನೋ ಏನೋ. ಪಾಪ ಏನೋ ಆಗಿ, ಅವನಿಗೆ ಹುಚ್ಚ ಹಿಡದಮ್ಯಾಲ ಬೆಣಚುಕಲ್ಲಿನ ಚೂರನ್ನ ರತ್ನಾಮುತ್ತು ಅನ್ಕೋತ ಆರಸ್ತಾನೋ ಏನೊ ಅಂತ.

ಆದ್ರ ಕಥಿ ಬ್ಯಾರೇನ ಇತ್ತು. ಶಿರಸಂಗಿ ಮಹಾರಾಜರಿಗೆ ಒಕ್ಕಲುತನಕ್ಕ ಬೇಕಾದಂಥ ಹಗ್ಗಾನ ಇಂವನ (ಪಿಂಜಾರ= ಹಗ್ಗ ತಯಾರಕರು) ವಂಶಸ್ಥರು ತಯಾರಿಸ್ತಿದ್ರಂತ. ಇಂವನೂ ಹಗ್ಗಾ ತಯಾರಿಸೂದನ್ನ ಮುಂದುವರಿಸ್ಕೋಂಡ್ ಬಂದಿದ್ನಂತ. ಮಜಬೂತಾದ ಹಗ್ಗ ತಯಾರಿಸೂದ್ರಾಗ ಇವರೆಲ್ಲಾ ಭಾಳ ಫೇಮಸ್‌ ಆಗಿದ್ರಂತ. ಮಲೀಕನಿಗೆ ಹಗ್ಗಾ ತಯಾರಿಕಿ ಜೊತಿ ವ್ಯಾಪಾರಕೀನೂ ಒಲಿದಿತ್ತಂತ. ಹಿಂಗಾಗಿ ಮನಿ ಮಂದಿ ತಯಾರ್‍ಸಿ ಕೊಟ್ಟಂತ ಹಗ್ಗಾನ, ಆಜೂ ಬಾಜೂ ಊರಿಗೆ ಹೋಗಿ ಮಾರ್‍ಕೊಂಡು ಬರ್‍ತಿದ್ನಂತ.

ಹಿಂಗ ಒಮ್ಮೆ ಯಾವುದೋ ಊರಿಗೆ ಹೋದಾಗ ಒಂದ್‌ ಹುಡುಗಿ ಮ್ಯಾಲ ಮನಸಾಗಿಬಿಟ್ಟಿತಂತ. ಅಕಿ ಗುಂಗ್‌ ಹಿಡಿಸ್ಕೊಂಡು, ಅಕೀನ್ನ ಭಾಳ ಹಚ್ಕೊಂಡು ಪ್ರೀತಿ ಮಾಡಾಕ್‌ ಶುರು ಮಾಡಿದ್ನಂತ. ಇನ್ನೇನ್‌ ಇಬ್ಬರೂ ಮದ್ವಿ ಮಾಡ್ಕೊಬೇಕು ಅನ್ನೂ ಹಂತಕ್‌ ಬಂದಾಗ, ಹುಡುಗಿ ಮನ್ಯಾವ್ರು, ಮುಸ್ಲಿಮನ ಜೊತಿ ಮದಿವ್ಯಾ? ಮರ್‍ತ್‌ ಬಿಡ ತಂಗಿ ಅಂತ ಹೇಳಿ, ತರಾನ್‌ತುರೀಲೇ ಹಿಂದೂ ಹುಡುಗನ ಜೊತಿ ಮದವಿ ಮಾಡಿಬಿಟ್ರಂತ. ಸ್ವಲ್ಪ ದಿನ ಆದಮ್ಯಾಲ, ಹಗ್ಗಾ ಮಾರಾಕಂತ ಅಕಿ ಊರಿಗೆ ಹೋದಾಗನ, ಮಲೀಕನಿಗೆ ಸುದ್ದಿ ಗೊತ್ತಾಗಿದ್ದಂತ.

ಪಾಪ ಮಲೀಕ ಮನಸಿಗೆ ತ್ರಾಸ್‌ ಮಾಡ್ಕೋಂಡು ದೊಡ್ಡವಾಡಕ್ಕ ವಾಪಸ್‌ ಬಂದನಂತ. ಹಗ್ಗಾ ಮಾಡೂದು, ಮಾರೂದನ್ನ ಬಿಡೂದಷ್ಟ ಅಲ್ಲ, ಜಳಕಾ, ಊಟಾ, ಮಾತು ಕತಿ, ಎಲ್ಲಾ ನಿಲ್ಲಿಸಿಬಿಟ್ನಂತ. ಅಕೀನ್‌ ನೆನಪಿಸ್ಕೋತ ಊರ ತುಂಬ ಓಡಾಡ್ಕೋತ ಇದ್ದ ಅಂವನ್ನ, ಊರ ಮಂದಿ ಎಲ್ಲಾ ಅವನ ಹೆಸರಿನ ಹಿಂದ ಹುಚ್ಚಾ ಅಂತ ಸೇರಿಬಿಟ್ರಂತ. ಅಪ್ಪಾ, ಅವ್ವನೂ ಸತ್ತೋದ್ರಂತ.

ಕೊನೀಗೆ... ರಡ್ಡೇರ ಓಣ್ಯಾಗ ಇದ್ದ ಅವರ ಮನೀನ್ನಾ ಹೈಸ್ಕೂಲಿನ ಹೆಡ್‌ಮಾಸ್ಟರ್‌ಗೆ ಮಾರಿದ್ರಂತ. ಆ ಹೆಡ್‌ಮಾಸ್ಟರರು ರಂಜಾನ್‌, ಬಕ್ರೀದ್‌ ಹಬ್ಬ ಬರೂ ಮೊದ್ಲ ಇವನಿಗೆ ಜುಬ್ಬಾ ಪಾಯಿಜಾಮಾ ಹೊಲಿಸಿ ಕೊಡ್ತಿದ್ರಂತ. ವರ್ಷಪೂರ್ತಿ ಅವ ಅರವಿ. ಇನ್ನ ಊಟ, ನಾಷ್ಟಾ ಅಂದ್ರ, ಪ್ಯಾಟ್ಯಾಗಿನ ಚಾದಂಗಡಿಯಾವ್ರು ತಾಂವ ಕರದು ಇವನಿಗೆ ತಿನ್ನಾಕ್‌ ಕೊಟ್ರಷ್ಟ. ಇಲ್ಲಂದ್ರ ಉಪಾಸನ. ಹಿಂಗ ಅವ್ರೆಲ್ಲಾ ಇವನಿಗೆ ಕರದು ತಿನ್ನಾಕ್‌ ಕೊಡ್ತಿದ್ದನ್ನ ನಾನೂ ರಗಡ ಸಲ ನೋಡ್ತಿದ್ನಿ,

ಈಗ ಅವನನ್ನ ನೋಡಿ, ಹೆಚ್ಚೂ ಕಮ್ಮಿ ಇಪ್ಪತ್ತು ವರ್ಷ ಆದ್ವು. ಅವನೀಗ ಅದಾನೋ ಇಲ್ಲೋ ಗೊತ್ತಿಲ್ಲ. ಸಂತಿಯೊಳಗ ಚೌಕಾಶಿ ಮಾಡಾವರನ್ನ, ಜಗಳಕ್ಕ ನಿಲ್ಲಾವ್ರನ್ನ, ಅಪರೂಪಕ್ಕ ಸಿಕ್ಕು ಸಂತೋಷ ಪಡಾವ್ರನ್ನ, ಮಕ್ಕಳ ಸುಂಬಳಾ ವರಿಸ್ಕೋತ, ಅವಕ್ಕ ಪುಗ್ಗೆ ಕೊಡಸೂದನ್ನ, ತಕ್ಕಡಿ ಹೆಚ್ಚೂ ಕಮ್ಮಿ ತೂಗಾವ್ರನ್ನ, ಕಣ್‌ ತಪ್ಪಿಸಿ ಗಬಕ್‌ನ ಒಂದೆರಡು ಕಾಯಿಪಲ್ಯೆ ಚೀಲಕ್ಕ ಹಾಕ್ಕೊಳ್ಳಾವ್ರನ್ನ, ಹಿಂಗ ಹಂಗ ಓಡ್ಯಾಡಾವ್ರನ್ನ ನೋಡ್ಕೋತ ನಿಲ್ತಿದ್ದ ಅಂವಾ ಒಂದ್ರೀತಿ ಸಂತ್ಯಾಗ ನಿಂತ ಬುದ್ಧನ ಖರೆ. ಅವನ ಕಣ್ಣಕೊಳದಾಗಿನ ಥಣ್ಣನ ಪ್ರೀತಿ, ತುಟಿಮ್ಯಾಲಿನ ಸಣ್ಣ ನಗಿ ಈಗಲೂ ಕಣ್ಮುಂದನ. ಎಲ್ಹೋದ್ಯೋ ಮಲ್ಲೀಕಾ?