Thursday, March 7, 2013

ಶೋಷಣೆ ವಾಸ್ತವ; ದಿನಾಚರಣೆ ನೆವ


ಈ ಮಾತು ಹೇಳಲು ಇಷ್ಟು ದಿನ ಕಾಯಬೇಕಾಯ್ತಾ? 

ಹಾಗಂತ ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುತ್ತೇನೆ. ಮಾರ್ಚ್ ೮ ಪ್ರತಿ ವರ್ಷ ಬರುತ್ತದೆ. ಬಂದಷ್ಟೇ ವೇಗವಾಗಿ ಮರೆಯಾಗಿ ಹೋಗುತ್ತದೆ. ಕ್ಯಾಲೆಂಡರ್ ನೋಡುವವರಿಗೆ, ಪತ್ರಿಕೆ ಓದುವವರಿಗೆ, ಎನ್‌ಜಿಒಗಳಿಗೆ, ಸರ್ಕಾರಿ ಕಚೇರಿಗಳಿಗೆ ಮತ್ತು ಚಾನೆಲ್‌ನವರನ್ನು ಬಿಟ್ಟರೆ ಇತರ‍್ಯಾರಿಗೂ ಅದು ವಿಶೇಷ ದಿನವಲ್ಲ. 
ಹೌದು, ಖಂಡಿತ ಅದು ವಿಶೇಷ ದಿನವಾಗಬೇಕಿಲ್ಲ. 

ಏಕೆಂದರೆ, ಅದೊಂದು ದಿನ ಬಿಟ್ಟು ಉಳಿದ ದಿನ, ಈ ದಿನದ ಆಶಯಕ್ಕೆ ವಿರುದ್ಧವಾಗಿರುವ ಕೆಲಸಗಳು ನಡೆಯುತ್ತಿರುವಾಗ, ಇದೊಂದು ದಿನ ಹೇಗೆ ವಿಶೇಷವಾದೀತು? ವರ್ಷಪೂರ್ತಿ ಹೆಣ್ಣಿನ ವಿರುದ್ಧ ಅನ್ಯಾಯಗಳು ನಡೆಯುತ್ತಿರುವಾಗ, ಇವತ್ತೊಂದಿನ ಅದನ್ನು ಸಾಂಕೇತಿಕವಾಗಿ ಪ್ರತಿಭಟಿಸಿದರೆ, ಹೆಣ್ಣಿನ ಮಹತ್ವ ಬಿಂಬಿಸಿದರೆ ಆಯ್ತಾ?

ಖಂಡಿತ ಇದು ಬೇಕಿಲ್ಲ. ಅಥವಾ ಇದೊಂದು ದಿನ ಮಾತ್ರ ವಿಶೇಷ ಅನ್ನೋದು ಬೇಡವೇ ಬೇಡ.
ಏಕೆಂದರೆ, ಹೆಣ್ಣಿನ ವಿರುದ್ಧ ಗಂಡು ಮಾತ್ರ ಅನ್ಯಾಯ ಎಸಗುತ್ತಾನೆ ಎಂಬುದನ್ನು ಒಪ್ಪಿಕೊಳ್ಳೋದು ಕಷ್ಟ. ಪ್ರತಿಯೊಬ್ಬ ಸೊಸೆಗೂ ಹೆಚ್ಚಿನ ಕಿರುಕುಳ ಆಗುವುದು ಅತ್ತೆಯಿಂದ ಹಾಗೂ ನಾದಿನಿಯಿಂದ. ಎಷ್ಟೋ ಕಡೆ, ಒಂದೇ ಮನೆಯ ಅಕ್ಕತಂಗಿಯರಲ್ಲಿ ಮತ್ಸರ ಇರುತ್ತದೆ. ತರಗತಿಯಲ್ಲಿ ಪಕ್ಕದಲ್ಲೇ ಕೂಡುವ ಸಹಪಾಠಿ ಕತ್ತಿ ಮಸೆಯುತ್ತಿರುವುದು ಏಟು ಬೀಳುವವರೆಗೂ ಗೊತ್ತೇ ಆಗುವುದಿಲ್ಲ. ಕಚೇರಿಯಲ್ಲಿ ಸಹೋದ್ಯೋಗಿ ಹೆಣ್ಣು ಬೆನ್ನಿಗೆ ಚೂರಿಯಿಡುವ ಪರಿಯನ್ನು ಯಾವ ಅನ್ಯಾಯಕ್ಕೆ ಹೋಲಿಸೋಣ? ಅತ್ಯಾಚಾರ ಎಸಗಿದ ಮಗನನ್ನು ರಕ್ಷಿಸುವ ತಾಯಿ, ಮೌನವಾಗಿ ಬೆಂಬಲಿಸುವ ಸೋದರಿ, ಆತನ ಪರ ಬಡಿದಾಡುವ ಆತನ ಹೆಂಡತಿ- ಇವರನ್ನು ಯಾವ ಪುರುಷ ಅನ್ಯಾಯವಾದಿಗೆ ಹೋಲಿಸಬೇಕು?

ಅನ್ಯಾಯಕ್ಕೆ, ನೀಚತನಕ್ಕೆ, ತಾರತಮ್ಯಕ್ಕೆ ಲಿಂಗಭೇದವಿರುತ್ತದೆಯೆ? ಬೇಡಿಕೆ ಗಳಿಸಲು ಹಾಗೂ ವೃತ್ತಿಯಲ್ಲಿ ಮೇಲೆ ಬರಲು, ಯಾವ ಹಂತಕ್ಕಾದರೂ ಇಳಿಯಬಲ್ಲ ನಟಿಯರು, ರೂಪದರ್ಶಿಗಳು ಹಾಗೂ ಎಲ್ಲಾ ವೃತ್ತಿಗಳಲ್ಲಿರುವ ಮಹತ್ವಕಾಂಕ್ಷಿಗಳು ಎಲ್ಲೋ ಒಂದು ಕಡೆ ಗಂಡಿನಲ್ಲಿ ವಾಂಛೆ ಹೆಚ್ಚಿಸುತ್ತಾರೆ. ಹುಚ್ಚು ಹಿಡಿಸಿರುತ್ತಾರೆ. ಆತನೊಳಗೊಂದು ಮೃಗೀಯ ಪ್ರವಾಹ ಸೃಷ್ಟಿಸಿರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಅದು ಇನ್ಯಾರೋ ಅಮಾಯಕ ಹೆಣ್ಣಿನ ಮೇಲೆ ಹರಿಯುತ್ತದೆ. ಬದುಕು ಮುರಿಯುತ್ತದೆ. ಇಂಥ ಸಂದರ್ಭದಲ್ಲಿ ಗಂಡಷ್ಟೇ ಅತ್ಯಾಚಾರಿಯಾಗುತ್ತಾನೆ. ಆದರೆ, ಅದನ್ನು ಕೆರಳಿಸಿದ ಹೆಣ್ಣು ಏಕೆ ನಮ್ಮ ಖಂಡನೆಗೆ ಈಡಾಗುವುದಿಲ್ಲ? ಮಹಿಳೆಯ ಮೇಲಾಗುವ ಎಲ್ಲ ಅನ್ಯಾಯಗಳಿಗೆ ಪುರುಷನನ್ನಷ್ಟೇ ಗುರಿ ಮಾಡೋದ್ಯಾಕೆ? ಆತನನ್ನೇ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉದ್ದೇಶವಾಗಿಟ್ಟುಕೊಂಡು ದಿನಾಚರಣೆ ಮಾಡೋದ್ಯಾಕೆ? 
ಹಾಗಂತ, ಪುರುಷ ಅಮಾಯಕ ಎಂದೇನಲ್ಲ. ತನ್ನ ಸಹಜ ದೈಹಿಕ ಶಕ್ತಿ, ಸಮಾಜದಲ್ಲಿ ದೊರಕುವ ಮನ್ನಣೆ ಹಾಗೂ ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಯೋಚನಾ ಧಾಟಿ ಬಹುತೇಕ ಕಡೆ ಹೆಣ್ಣಿಗೆ ಅನ್ಯಾಯ ಎಸಗುತ್ತಲೇ ಬಂದಿದೆ. ಅದನ್ನು ನಿಜಕ್ಕೂ ಖಂಡಿಸಬೇಕು. ಆದರೆ, ಅಂಥದೇ ಅನ್ಯಾಯವನ್ನು, ತನ್ನದೇ ರೀತಿಯಲ್ಲಿ ಪ್ರತಿಯೊಬ್ಬ ಹೆಣ್ಣೂ ಇನ್ನೊಬ್ಬ ಹೆಣ್ಣಿನ ಮೇಲೆ ಮಾಡುತ್ತಲೇ ಬಂದಿದ್ದಾಳೆ. ಅದನ್ನೂ ಖಂಡಿಸೋಣ. ಹೆಣ್ಣಿನ ಮೇಲಾಗುವ ಪ್ರತಿಯೊಂದು ಅನ್ಯಾಯವನ್ನೂ, ಲಿಂಗಭೇದ ಮಾಡದೇ, ಖಂಡಿಸುವುದು ಮಾತ್ರ ನಿಜವಾದ ಮಹಿಳಾ ದಿನಾಚರಣೆ ಆಗಬಲ್ಲುದು. 

ಹಾಗೆ ನೋಡಿದರೆ ಬಹುತೇಕ ದಿನಾಚರಣೆಗಳಿರೋದೇ ದುರ್ಬಲ ವಸ್ತು ಹಾಗೂ ವಿಷಯಗಳ ಮೇಲೆ. ಅದಕ್ಕೆ ಮಹಿಳಾ ದಿನಾಚರಣೆಯೂ ಹೊರತಲ್ಲ. ನಮ್ಮ ನಡುವೆ ನಿತ್ಯ ಸದ್ದಿಲ್ಲದೇ ಶೋಷಣೆಗೆ, ಅತ್ಯಾಚಾರಕ್ಕೆ, ಅನ್ಯಾಯಕ್ಕೆ ಒಳಗಾಗುತ್ತಲೇ ಇರುವ ಅಮಾಯಕ ಹೆಂಗಳೆಯರ ಪರವಾಗಿ ಧ್ವನಿ ಎತ್ತದ ಬಹುತೇಕರು ಅಂದು ಬೀದಿಗೆ ಬಂದು ಹೆಣ್ಣಿನ ಮೇಲಾಗುವ ಶೋಷಣೆಯ ವಿರುದ್ಧ ಕೂಗಾಡುತ್ತಾರೆ. ಮಾಧ್ಯಮಗಳ ಕ್ಯಾಮೆರಾಗಳು ಮರೆಯಾದ ಕೂಡಲೇ ಜಾಗ ಖಾಲಿ ಮಾಡುತ್ತಾರೆ. ಅದರಾಚೆಗೆ ನಿಜವಾದ ಹೋರಾಟ ಶುರುವಾಗುತ್ತದೆಂಬುದು ಅವರಿಗೆ ಗೊತ್ತಿಲ್ಲ. ಗೊತ್ತಿರೋರಿಗೆ ಅದು ಬೇಕಿಲ್ಲ.

ಇನ್ನಾದರೂ ಪುರುಷ ದ್ವೇಷವೊಂದೇ ಮಹಿಳಾ ಪರ ಹೋರಾಟದ ಮೂಲ ಆಶಯವಾಗದಿರಲಿ. ಏಕೆಂದರೆ, ಪ್ರತಿಯೊಂದು ಹೆಣ್ಣೂ ತಂದೆಯ ಪ್ರೀತಿ, ಸೋದರರ ವಾತ್ಸಲ್ಯ, ಸಹಪಾಠಿಗಳ ಮೆಚ್ಚುಗೆ, ಸಹೋದ್ಯೋಗಿಗಳ ನೆರವಿನಿಂದ ಬೆಳೆದಿರುತ್ತಾಳೆ. ದಿನಾಚರಣೆಯ ನೆಪದಲ್ಲಿ ಈ ಬಂಧವನ್ನು ಸಾರಾಸಗಟಾಗಿ ತಿರಸ್ಕರಿಸೋದು ಬೇಡ. ಹೆಣ್ಣಿನ ಹಕ್ಕುಗಳ ಜೊತೆಗೆ, ಕರ್ತವ್ಯಗಳು ಹಾಗೂ ಬಾಧ್ಯತೆಯ ಬಗ್ಗೆಯೂ ಅರಿವು ಹೆಚ್ಚಲಿ. ಇದು ನಿತ್ಯದ ಹೋರಾಟವಾಗಲಿ. ಸತ್ಯದ ಹೋರಾಟವಾಗಲಿ. 
ಆಗ ಮಾತ್ರ ಮಹಿಳೆಗೆ ದಿನಾಚರಣೆಯ ನೆಪ, ಅವಶ್ಯಕತೆ ಬೇಕಾಗದು. 

2 comments:

sunaath said...

ಸತ್ಯಕ್ಕೆ ಒಂದೇ ಮುಖವಿರುವುದಿಲ್ಲ ಎನ್ನುವುದನ್ನು ಚೆನ್ನಾಗಿ ವಿವರಿಸಿದ್ದೀರಿ. ಆದರೂ ಒಂದು ಮಾತು: ಹೆಣ್ಣುಮಗಳಲ್ಲಿ ಏನಾದರೂ ಕೆಡುಕಿನ ಬುದ್ಧಿಯಿದ್ದರೆ, ಅದಕ್ಕೆ ಕಾರಣವಾಗಿರೋದು ಗಂಡಸಿನಿಂದಾಗುವ ಶೋಷಣೆಯೇ!
ನನಗೆ ಮಗಳಂತಿರುವ ನಿಮಗೆ Happy Woman's Day!

ಆಲಾಪಿನಿ said...

ಹೌದು... ನಿಜ ಅಂಕಲ್‌. ಇದೊಂಥರಾ ಒಂದಕ್ಕೊಂದು ಅಂಟಿದ ಪದರದಂತೆ... :( ನಿಮ್ಮ ಹಾರೈಕೆ ಎಂದೆಂದಿಗೂ ಇರುತ್ತದೆ, ಧನ್ಯವಾದ ವನಮಾಲಾ ಆಂಟಿ ಮತ್ತು ನಿಮಗೆ :)