Saturday, March 23, 2013

ಕಟ್ಟಬೇಕೆನ್ನುವವರೇ ಎಲ್ಲಾ...


ಕಟ್ಟಬೇಕೆನ್ನುವವರೇ ಎಲ್ಲಾ
ಹೊಸ ನಾಡನ್ನು, ರಸದ ಬೀಡನ್ನು
ನೆಮ್ಮದಿಯ ಗೂಡನ್ನು ಹೋರಾಟದ ಹಾಡನ್ನು
ಕಟ್ಟಬೇಕೆನ್ನುವವರೇ ಎಲ್ಲಾ

ಕಡ ತಂದ ವಿಚಾರ, ಚಂದಾ ಎತ್ತಿದ ಹಣ
ಗೋಡೆ ಮೇಲೆ ಗೀಚಿದ ಘೋಷಣೆ
ಚಲೋ, ರ‍್ಯಾಲಿ, ವೇದಿಕೆ, ಶಾಮಿಯಾನ
ಹೊಟ್ಟೆ ಹಸಿವವರೆಗೆ ಭೀಕರ ಭಾಷಣ

ಈಗಲ್ಲ, ಕಳೆದರವತ್ತು, ಅದರಾಚೆಗಿಂದಲೂ,
ಕಟ್ಟಬೇಕೆನ್ನುವವರೇ ಎಲ್ಲಾ

ಆಳುವವರಿಗೇ ಹೊಣೆಯೆಲ್ಲಾ ಹೊರಿಸಿ
ಉದ್ದುದ್ದ ಬೇಡಿಕೆ ಪಟ್ಟಿ ಮಂಡಿಸಿ
ದುಡಿವವರ ಪರ ಬೀದಿಯಲಿ ಕೂಗಿ ಬೀಗಿ
ಬೆವರ ಸುರಿಸದೇ ನಾಯಕರಾಗಿ
ಸಾಹಿತ್ಯ-ಸಿದ್ಧಾಂತ ಗೊಬ್ಬರದಿ ಸೂಸಿದ
ಹೊಸ ಸಮಾಜದ ಕನಸಿಗರೇ ಎಲ್ಲಾ

ಈಗಲ್ಲ, ಕಳೆದರವತ್ತು, ಅದರಾಚೆಗಿಂದಲೂ
ಕಟ್ಟಬೇಕೆನ್ನುವವರೇ ಎಲ್ಲಾ

 ದ್ವೇಷಿಸಲು ವಿಷಯ, ಕಾರಲೊಂದು ಕಾರಣ
ಬೇಕು ಉರಿವ ನಾಲಗೆಗೊಂದು ವಸ್ತು
ಆರದಂತೆ ಕಿಚ್ಚು ನೋಡಿಕೊಳ್ಳುವ ಹುಚ್ಚು
ದೂರವೇ ಆಗಿರುವ ದುಡಿವವರ ಪರ ತುಡಿವ
ಕಾಣದ ದೇಶದ ಕನಸಿಗೆ ಹಂಬಲಿಸುವ

ಈಗಲ್ಲ, ಕಳೆದರವತ್ತು, ಅದರಾಚೆಗಿಂದಲೂ
ಕಟ್ಟಬೇಕೆನ್ನುವವರೇ ಎಲ್ಲಾ

ನಿಂತಿಲ್ಲ ಭಾಷಣ, ಚಂದಾವೀರರ ಶೋಷಣೆ
ಹಳತಾಗಿಲ್ಲ ಗೋಡೆಬರಹ, ಕ್ರಾಂತಿಯ ಪ್ರಣಾಳಿಕೆ
ದೊಂಬಿಯಾದಾಗೆಲ್ಲ ಉರಿದೆದ್ದ ಹೇಳಿಕೆ
ತಂಗಳಾದ ಕನಸುಗಳ ಕನವರಿಕೆ
ನಡೆದೇ ಇವೆ ಸಮ್ಮೇಳನ, ಗೋಷ್ಠಿ, ಚರ್ಚೆ
ಆದರ್ಶ ಬಿತ್ತಿ ಭ್ರಮೆ ಬೆಳೆವ ಕಾಯಕ
ನಾಳೆಯೇ ಕ್ರಾಂತಿ, ಆದೀತೆಂಬ ಭ್ರಾಂತಿ

ಈಗಲ್ಲ, ಕಳೆದರವತ್ತು, ಅದರಾಚೆಗಿಂದಲೂ
ಕಟ್ಟಬೇಕೆನ್ನುವವರೇ ಎಲ್ಲಾ

ಸಿದ್ಧಾಂತ ಬಲ್ಲ ತಜ್ಞರೇ 
ಅಕ್ಷರದಲಿ ಬದುಕು ಕಟ್ಟುವ ಪ್ರಾಜ್ಞರೇ
ಗೋಡೆ ಬರಹ, ಚಂದಾ, ಘೋಷಣೆ
ಸಾಹಿತ್ಯದಿ ಭ್ರಾಂತಿಯ ಪೋಷಣೆ
ಕಟ್ಟದೆಂದೂ ಕನಸ, ತಟ್ಟದೆಂದೂ ಮನಸ 

ಹೊತ್ತು ಕಲ್ಲು, ಉತ್ತಿ ಮಣ್ಣು, ಎತ್ತಿ ಹೊರೆಯ 
ಬೆವೆತು, ಸವೆದು, ಮರುಗಿ, ಮಾಗಿ
ಒಡಲೊಳಗಿನ ಬೆಂಕಿ ಕರಗಿಸಿದರೆ ಭ್ರಮೆಯ 
ಮೂಡಬಹುದೇನೋ ಹೊಸ ಕನಸು, ಕಸುವು
 .....................................
ಕ್ಷಮಿಸಿ ಮಾನ್ಯರೇ, ಅನಿಸಿದ್ದಿಷ್ಟು:
ಕಾಯಕವಿಲ್ಲದೆ ಕ್ರಾಂತಿಯಿಲ್ಲ

 - ಶ್ರೀದೇವಿ ಕಳಸದ

(ಧಾರವಾಡದಲ್ಲಿ 23-3-2013 ರಂದು ನಡೆದ ಕರ್ನಾಟಕ ಜನಸಾಹಿತ್ಯ ಸಮಾವೇಶದಲ್ಲಿ ಪ್ರಸ್ತುತಪಡಿಸಿದ ಕವನ)

7 comments:

hanamantha said...

ಕ್ಷಮಿಸಿ ಮಾನ್ಯರೇ, ಅನಿಸಿದ್ದಿಷ್ಟು:
ಕಾಯಕವಿಲ್ಲದೆ ಕ್ರಾಂತಿಯಿಲ್ಲ.
ಶ್ರಮ ಸಂಸ್ಕೃತಿ ಆಶಯದ ಚಂದದ ಕವಿತೆ. ನಿಮ್ಮ ಪ್ರಜೆಂಟೇಶನ್ನು ಚನ್ನಾಗಿತ್ತು ಮೇಡಂ.

sunaath said...

ಕಟ್ಟಿಕೊಳ್ಳುತ್ತಲೇ ಇದ್ದಾರೆ
ತಮಗಾಗಿ ಅರಮನೆಗಳನ್ನು.
ಕಳೆದ ಅರುವತ್ತು ವರುಷಗಳಿಂದ!

ಚಿನ್ಮಯ ಭಟ್ said...

ನಮಸ್ತೆ ಮೇಡಮ್,
ಮೊದಲ ಬಾರಿಗೆ ನಿಮ್ಮ ಬ್ಲಾಗಿಗೆ ಬಂದೆ....
ಇಷ್ಟವಾಯ್ತು ಕವನ :)..
ನಮ್ಮಲ್ಲಿಯೇ ಜೋರಾಗಿ ಹೇಳಿಸಿಕೊಳ್ಳುತ್ತವೆ ಈ ಸಾಲುಗಳು...
ಚೆನಾಗಿದೆ ...

Badarinath Palavalli said...

'ಮೂಡಬಹುದೇನೋ ಹೊಸ ಕನಸು, ಕಸುವು' ಎನ್ನುವ ಕವಿಯತ್ರೀ ಆಧುನಿಕ ವೈಪರೀತ್ಯಗಳನ್ನು ತುಂಬಾ ಸಮರ್ಥವಾಗಿ ಬಿಡಿಸಿಟ್ಟಿದ್ದಾರೆ.

Swarna said...

ಧಾರವಾಡದ ಸಮ್ಮೇಳನದಲ್ಲಿ ನಿಮ್ಮ ಹೆಸರು ನೋಡಿ ಅಲ್ಲಿ ಓದಿದ ಕವನವನ್ನ ಆಲಾಪಿಸಿ ಅನ್ನೋವಷ್ಟರಲ್ಲಿ ನೀವೇ ಹಾಕಿದೀರಿ.ಸಾಧ್ಯವಾದರೆ ನೀವು ಓದಿದ ವೀಡಿಯೋವನ್ನೂ ಹಂಚಿಕೊಳ್ಳಿ.
ಕಾಯಕವಿಲ್ಲದೆ ಕ್ರಾಂತಿಇಲ್ಲ ಅನ್ನೋದು 'ಇಂದಿನ' ಬಹುಪಾಲು ಕ್ರಾಂತಿಕಾರರಿಗೆ ಅರ್ಥವಾಗಬೇಕಿದೆ.
ಚೆನ್ನಾಗಿ ಮೂಡಿಬಂದಿದೆ

ಆಲಾಪಿನಿ said...

ಎಲ್ಲರಿಗೂ ಧನ್ಯವಾದ

narayan babanagar said...

tumbaa channaagide