Wednesday, April 3, 2013

ನೆನಪಿಗೆ ಮುಸುರೆಯ ಹಂಗಿಲ್ಲ
ಅಂಗಡಿಯವ ಸ್ಟೀಲ್‌ ತಟ್ಟೆ ಮುಂದೆ ಹಿಡಿದ. ಊಂಹೂ ಬೇಡ ಅಂತ ಸರಿಸಿದೆ. 
"ತಟ್ಟೆ ನೋಡಿ ಮೇಡಮ್‌ ಕನ್ನಡಿನೇ ಬೇಡ ನಿಮ್ಮನೆಗೆ. ಅಷ್ಟು ಒಳ್ಳೇ ಸ್ಟೀಲ್‌" ಅಂದ. ಬೇಡಪ್ಪಾ.. ಮುಖ ಕಾಣೊ ತಟ್ಟೆ ಬೇಡ ಅಂತಾನೇ ಈಗ ನಿನ್ನ ಅಂಗಡಿಗೆ ಬಂದಿರೋದು ಅಂದೆ. 
ಅವ ನಕ್ಕು "ಹಾಗಿದ್ರೆ ಇವು?" ಅಂತ ಬಣ್ಣಬಣ್ಣದ ಪಿಂಗಾಣಿ ತಟ್ಟೆಗಳನ್ನು ಹರವಿಟ್ಟ. 

***

"ಗಂಡ್ರಾಮಿ ಆಗೀಯಲ್ಲ? ಗಂಡಸರಕಿಂತಾ ಬಲಾ ಆಡ್ತೀ ನೋಡು..."
ಗಬಗಬ ಚಪಾತಿ ನುಂಗಿ ಸಿಂಕ್‌ನಲ್ಲಿ ಪ್ಲೇಟ್‌ ಇಟ್ಟು ಹೊರಡಬೇಕು ಅನ್ನೋ ಹೊತ್ತಿಗೆ ಆಕೆ ಹೀಗೆ ಗದರಿದ್ದರು. 
"ಲೇಟ್ ಆಗ್ತಿದೆ ಸಂಜೆ ತೊಳಿತೀನಿ ಪ್ಲೇಟ್‌” ಅಡುಗೆ ಮನೆಯಿಂದ ಆಚೆ ಹೋದೆ. 
"ಬಾ ಇಲ್ಲಿ..." ಜೋರು ಕೂಗು. 
"ಏನು" ಅಂತ ಅಡುಗೆ ಮನೆಯೊಳಗ ಬಂದೆ. ಸಿಂಕ್‌ ಕಡೆ ಬೆರಳು ತೋರಿದರು. 
"ಅದೇ ಹೇಳಿದ್ನಲ್ಲ ಸಂಜೆ ಬಂದು ಪ್ರತೀದಿನ ತೊಳಿಯೋ ಹಾಗೆ ಎಲ್ಲಾ ಪಾತ್ರೆನೂ ತೊಳೀತೀನಿ, ಈಗ ಲೇಟ್ ಆಗ್ತಿದೆ... ಹೊರಡಬೇಕು". 
"ನಾ ನಿನಗೆ ಈಗಲೇ ಪಾತ್ರೆ ತೊಳಿ ಅಂತೇನೂ ಹೇಳ್ತಿಲ್ಲ. ಅದ್ಹೆಂಗ್‌ ತಿಳಿಯೂದಿಲ್ಲಾ ನಿನಗ? ತಿಂದ್‌ ಎದ್ದ ಹೊಂಟ್ರ ಮುಗೀತು? ಪ್ಲೇಟ್‌ನೊಳಗಿನ ಮುಸರಿ ಯಾರ ತಗೀತಾರು?" ಅವರ ಕಣ್ಣು ದೊಡ್ಡವಾದವು. ಮುಖವೂ ಕೆಂಪಗಾಗಿತ್ತು.
ತುಂಬಿಕೊಂಡ ಕಣ್ಣಾಲಿ. ಸಿಂಕ್‌ನಲ್ಲಿದ್ದ ಎಲ್ಲಾ ಪಾತ್ರೆಗಳೂ ಸಿಟ್ಟಿನಿಂದಲೇ ತಿಕ್ಕಿ ತೊಳೆಸಿಕೊಂಡವು. ಗೋಡೆಗೆ ನಿಂತ ತಟ್ಟೆಗಳು, ಡಬ್ಬು ಕುಳಿತ ಬೋಗುಣಿಗಳು ಎತ್ತ ಸರಿದಾಡಿದರೂ ನನ್ನ ಪ್ರತಿಬಿಂಬವನ್ನು ಜಗ್ಗಾಡುತ್ತಲೇ ಇದ್ದವು.  
ಕೈ ಒರೆಸಿಕೊಳ್ಳೋ ಹೊತ್ತಿಗೆ, ಚಪಾತಿ ಮಣಿ, ಲಟ್ಟಣಿಗೆ ಮತ್ತೊಂದೆರಡು ತಟ್ಟೆಗಳನ್ನು ಆಕೆ ಸಿಂಕಿಗಿಳಿಸಿದರು. 
ಇವನ್ನೂ ಈಗ್ಲೇ ತೊಳೀಬೇಕಾ ಅಂದೆ. "ನಾ ನಿನಗ ತೊಳಿ ಅಂತ ಹೇಳೇ ಇಲ್ಲಲ್ಲಾ? ನೀನ ತೊಳೀತಿರೋದು’ ಸೈಡುಗಣ್ಣಿನಿಂದ ಆಕೆ ಹೇಳಿದರು.
ಬಸ್‌ ಹತ್ತಿ ಇಳಿಯಬೇಕಾದ ಸ್ಥಳ ಬಂದು, ರಸ್ತೆ ದಾಟಲು ನಿಂತಾಗ ಹಾಯ್ದು ಹೋದ ಕಾರು, ಗಾಡಿಗಳ ಗಾಜು ನನ್ನ ಪ್ರತಿಬಿಂಬವನ್ನು ಎಳೆದೊಯ್ಯುತ್ತಿತ್ತು.  

***

ಬೆಳಗಿನ ಏಳು. ಕಾಫಿ ಕಪ್‌ನಿಂದ ಹಿಡಿದು ಕುಕ್ಕರ್‌ವರೆಗೆ ತುಂಬಿದ್ದ ಬಚ್ಚಲು. ನೆಪ ಹೇಳೋ ಹಾಗಿಲ್ಲ. ತೊಳೀಲೇಬೇಕು. ಪಾತ್ರೆ ತಿಕ್ಕತಾ ತಿಕ್ಕತಾ ಬೆಳಗಿನ ಅಹೀರ್‌ ಭೈರವದ ಲಹರಿ ಉಕ್ಕಿಬಿಟ್ಟಿತು. ಆಲಾಪ್‌, ಸರಗಮ್‌, ಲಯಕಾರಿ ಶುರುವಾಗಿ ಇತ್ತ ಕೈಗಳು ಕೆಲಸ ಮರೆತು ಗತಿಗೆ ತಕ್ಕಂತೆ ಮೇಲೇರುತ್ತಿದ್ದವು. ಒಂದಾವರ್ತ ಮುಗಿಸಿದ ಮೇಲೆ, ಕೈಗಳಿಗೆ ಕೆಲಸ ನೆನಪಾಗಿ ಪಾತ್ರೆ ತಿಕ್ಕತೊಡಗುತ್ತಿದ್ದವು. ಮತ್ತೆಲ್ಲೋ ಅಂತರಾದ ಎಳೆ ಸಿಕ್ಕು ತಾನ್‌ ಹೊಡೆಯುವಾಗ ಮತ್ತೆ ಕೈಗಳು ತಮ್ಮ ಕೆಲಸ ಮರೆತು ದನಿಯ ಏರಿಳಿತಕ್ಕೆ ಜೊತೆಯಾಗುತ್ತಿದ್ದವು. "ತಿಕ್ಕಿದ್ದೆಲ್ಲ ಒಣಗಿ ಹೊಂಟ್ವು ಅಲ್ಲಿ" ಆಕೆಯ ಗದರು ದನಿ.
ಹಾಂ... ಎಂದು ದಡಬಡಿಸಿ ತಿಕ್ಕಿ, ತೊಳೆಯೊ ಹೊತ್ತಿಗೆ, ಯಾವ ರಾಗ ಅದು ಹಾಡುತ್ತಿದ್ದದ್ದು? ಮರೆತೇ ಹೋಗಿರುತ್ತದೆ. 
"ಎಷ್ಟೊತ್ತಾಯ್ತು ತೊಳೀತಾ? ಹಿಂಗ್‌ ಹಾಡಕೋತ ಕೂತ್ರ ಕೆಲಸ ಹೆಂಗ ಸಾಗಬೇಕು?" ಮತ್ತೆ ಕಣ್ಣಾಲಿ... ಬುಟ್ಟಿಯಲ್ಲಿ ಡಬ್ಬು ಹಾಕಿದ ತಟ್ಟೆ ನನ್ನ ಮುಖವನ್ನು ಮತ್ತೆ ಎಳೆದಾಡತೊಡಗಿದವು. 
***

"ಹೆಂಗ್‌ ತೊಳದೀ ನೋಡಿಲ್ಲೆ. ಸೋಪ್‌ ಎಲ್ಲಾ ಹಂಗ..." ಸದ್ಯ ಮುಖಕ್ಕೆ ಡಬ್ಬು ಹಾಕುವುದಿಲ್ಲ ಆಕೆ.
"ಓಹ್‌ ಮತ್ತೆ ತೊಳೆದರಾಯ್ತು" ಎಂದು ತೊಳೆಯೋ ಹೊತ್ತಿಗೆ. 
"ಒಂದಾದ್ರೂ ಕೆಲಸ ನೀಟ್ ಆಗಿ ಮಾಡ್ತೀ? ಮಾಡಿದ್ದನ್ನ ಮಾಡ್ಕೋತಿದ್ತರ ಕೆಲಸ ಹೆಂಗ್‌ ಸಾಗಬೇಕ?" ಮುಖಕ್ಕೆ ಬೋಗುಣಿ ತಂದು ಹಿಡಿದಾಗ ಮತ್ತೆ ಮತ್ತೆ ಕಣ್ಣಾಲಿ... 
ಮತ್ತೆ ಬುಟ್ಟಿಯೊಳಗಿನ ತಟ್ಟೆ, ಬೋಗುಣಿ, ಲೋಟ, ಚಮಚ ಎಲ್ಲವನ್ನೂ ಕೆಳಗು ಮೇಲು ಮಾಡಿ... ಎಲ್ಲಾದರೂ ಸೋಪು ಉಳಿದುಕೊಂಡಿದೆಯಾ ಅಂತ ನೋಡುವ ಹೊತ್ತಿಗೆ...
"ಎಷ್ಟದು ಸಪ್ಪಳ? ಒಂದ್‌ ಹೇಳಿದ್ರ ಒಂದ್‌ ಮಾಡ್ತಿ" ಮತ್ತೆ ಆಕೆಯ ತಿವಿತ ದನಿಯಲ್ಲೇ.  
ಕಣ್ಣ ಕಟ್ಟೆ ಒಡೆಯುತ್ತದೆ. ಬಿಕ್ಕಳಿಕೆ ಆ ಸದ್ದನ್ನು ಎಳೆದುಕೊಳ್ಳುತ್ತದೆ. 

****

ಹೊರಳಿ ನೋಡಿದಾಗೊಮ್ಮೆ, ಕಳೆದ ರಸ್ತೆಯುದ್ದಕ್ಕೂ ಒಡೆದ ಬಿಂಬಗಳ ಮಿಂಚು. ಕೆಲವೊಂದಕ್ಕೆ ಕಣ್ಣು ಮಿಂಚುತ್ತವೆ. ಇನ್ನು ಕೆಲವಕ್ಕೆ ಕಣ್ಣು ಒದ್ದೆ. ತೊಳೆಸಿಕೊಂಡ ಪಾತ್ರೆಗಳಂತೆ, ನೆನಪಿಗೆ ಮುಸುರೆಯ ಹಂಗಿಲ್ಲ.

ಹೀಗಾಗಿ ಬಿಂಬ ಈಗ ನೆನಪು. ಕಾಡುವ, ಕದಡುವ ರೂಪು.
 

5 comments:

Badarinath Palavalli said...

ಯಾಕೋ ನನಗೆ ಕೆಲಸಕ್ಕೆ ಹೋಗುವ ಹೆಣ್ಣು ಮಕ್ಕಳ ನೂರು ನೂವುಗಳ ಪ್ರತಿಬಿಂಬಗಳು ಈ ಬರಹದ ತುಂಬೆಲ್ಲ ಕಾಣುತ್ತಿವೆ. ಮನಸು ಮ್ಲಾನವಾಯಿತು.

sunaath said...

"ಇರುಳು ತಾರೆಗಳಂತೆ ಬೆಳಕೊಂದು ಹೊಳೆಯುವುದು
ಕಳೆದ ದುಃಖಗಳಲ್ಲಿ ನೆನೆದಂತೆಯೆ"!
---ಬೇಂದ್ರೆ

ravivarma said...

ಹೊರಳಿ ನೋಡಿದಾಗೊಮ್ಮೆ, ಕಳೆದ ರಸ್ತೆಯುದ್ದಕ್ಕೂ ಒಡೆದ ಬಿಂಬಗಳ ಮಿಂಚು. ಕೆಲವೊಂದಕ್ಕೆ ಕಣ್ಣು ಮಿಂಚುತ್ತವೆ. ಇನ್ನು ಕೆಲವಕ್ಕೆ ಕಣ್ಣು ಒದ್ದೆ. ತೊಳೆಸಿಕೊಂಡ ಪಾತ್ರೆಗಳಂತೆ, ನೆನಪಿಗೆ ಮುಸುರೆಯ ಹಂಗಿಲ್ಲ.

ಹೀಗಾಗಿ ಬಿಂಬ ಈಗ ನೆನಪು. ಕಾಡುವ, ಕದಡುವ ರೂಪು.

nimma barada monavhu.antaraalada bhaavanegalu nanage ista.

D.Ravivarma...

nenapina sanchy inda said...

ನಿಜಕ್ಕೂ ನೆನಪಿಗೆ ಮುಸುರೆಯ ಹಂಗಿಲ್ಲ...
ವಾಹ್ ಚಂದದ ಬರಹ ಶ್ರೀದೇವಿ...ತುಂಬಾ ತುಂಬಾsss ಇಷ್ಟವಾಯ್ತು ಬರವಣಿಗೆಯ ಶೈಲಿ...
(got ur blog link from Kannada blog list)
:-)
ಮಾಲತಿ ಎಸ್.

nenapina sanchy inda said...

ಹಾಂ ಮರೆತೆ ರೇಖಾ ಚಿತ್ರ ಕೂಡ sooooper
:-)
ಎಮ್ ಎಸ್