Monday, July 8, 2013

ನೀವಾರೂ ವಸಿ ಏನಾರೂ ಮಾಡಿ


ಭಾಗ 2

ಹಂಡೆಯೊಳಗಿನ ನೀರಿನ ಕೊತಕೊತದಂತೆ ಮಂಗಳಮುಖಿಯರಿಬ್ಬರ ಮನಸ್ಸೂ. ಬಲಭಾಗದಲ್ಲಿ ಒಟ್ಟಿದ್ದ ಕಟ್ಟಿಗೆ ಮತ್ತದರ ಪಕ್ಕ ಇದ್ದ ಮೆಟ್ಟಿಲುಗಳು ಮಾಡಿನಂಥ ಗೂಡಿನೊಳಗಿಂದ ಇಣುಕುತ್ತಿದ್ದವು. ಅಂತೂ ಮೇಲೊಂದು ಅಟ್ಟದ ಮನೆಯಿದೆ ಎನ್ನುವುದನ್ನು ಅವರಿಬ್ಬರೂ ಒಪ್ಪಿಕೊಂಡರಾದರೂ ಮೇಲೆ ಏರದಂತೆ ನಮ್ಮನ್ನು ತಡೆದರು ಕೂಡ. ಮತ್ತೆ ತಳ್ಳಾಟ ಕೂಗಾಟ... ಸಂಯಮ ತಂದುಕೊಂಡು, ನೋಡಿ ನನ್ನ ಮೇಲೆ ನಂಬಿಕೆ ಇದೆಯೋ ಇಲ್ಲವೋ ನಿಮಗೆ? ಹಾಗೆಯೇ ನಾನು ಕೂಡ ನೀವು ಹೇಳುವುದೆಲ್ಲವನ್ನೂ ಸತ್ಯ ಎಂದೇ ಇದುವರೆಗೆ ನಂಬುತ್ತಿದ್ದೇನೆ ತಾನೆ? ಇದ್ದಕ್ಕಿದ್ದ ಹಾಗೆ ಈಗೇಕೆ ಇಷ್ಟೊಂದು ಗಲಾಟೆ ಮಾಡುತ್ತಿದ್ದೀರಿ? ನಿಮಗೆ ಒಳ್ಳೆಯದನ್ನು ಮಾಡಬೇಕೆಂದೇ ನಾ ಕೂಡ ಇಲ್ಲಿ ಬಂದದ್ದು ಅಂತ ಹೇಳಿದೆ ತಾನೆ? ಅಂದೆ.

ಅವರಿಬ್ಬರಲ್ಲಿ ಒಬ್ಬರು ದುಸುದುಸು ಮಾಡುತ್ತಲೇ, ಕುದಿನೀರು ಬಕೆಟ್ಟಿಗೆ ತೋಡಿ, ಹಂಡೆಗೆ ಕಂಠಪೂರ್ತಿ ತಣ್ಣೀರು ಸುರಿದದ್ದರಿಂದ ಕೊತಕೊತ ನಿಂತಿತು. ನಿಧಾನಕ್ಕೆ ಒಬ್ಬರೇ ಹೋಗುವಷ್ಟು ಜಾಗವಿದ್ದ ಮಾಡಿನೊಳಗೆ ತೂರಲು ನೋಡುತ್ತಿದ್ದಂತೆ ಅವರಿಬ್ಬರೂ ತಡೆಯಲು ಬಂದರು. ಅವರೆಡೆ ತಿರುಗಿ, ಏನ್‌ ಅನ್ಕೊಂಡಿದ್ದೀರಾ ನಿಮ್ಮನ್ನು ನೀವು? ಇಷ್ಟೊಂದು ಸಮಾಧಾನದಿಂದ ವರ್ತಿಸಿದರೂ ನಿಮಗೆ ನಂಬಿಕೆ ಇಲ್ಲವೆ? ಅಟ್ಟ ನೋಡುವ ಕುತೂಹಲವಷ್ಟೇ ಇದ್ದದ್ದು. ನೀವು ಹೀಗೆ ಆಡುತ್ತಿದ್ದುದನ್ನು ನೋಡಿದರೆ, ನನಗ್ಯಾಕೋ ಅನುಮಾನ ಬರುತ್ತಿದೆ ಎಂದೆ. ಆ ಹೊತ್ತಿಗೆ ಇನ್ನೊಬ್ಬ ಮಂಗಳಮುಖಿ ಅವರ ಜೊತೆಯಾಗಿ ಜಗಳಕ್ಕೇ ಬಂದರು. ಎಷ್ಟು ಕೂಗಾಡ್ತೀರೋ ಕೂಗಿ. ಈಗ ಪೊಲೀಸ್‌ಗೆ ಫೋನ್‌ ಮಾಡುತ್ತೇನೆ ಎಂದು ಡಯಲ್‌ ಮಾಡತೊಡಗಿದೆ. ಒಲೆಯ ಬಾಯಿತನಕ ಉರಿದು ಕಟ್ಟಿಗೆಯೊಂದು ತುಂಡರಿಸಿಬಿದ್ದು, ಸಣ್ಣ ಸಣ್ಣ ಕಿಡಿ ಹಾರಿಸಿತು.

ಆ ಮಾಡಿನೊಳಗೆ ತೂರಿ ಕೆಳಗಿಳಿಯಲು ನೋಡಿದೆ. ಅಲ್ಲಿಯೂ ಕಟ್ಟಿಗೆ, ಅವುಗಳ ಮೇಲೆ ಒಂದೆರಡು ಜಿರಳೆ ಹಾಯ್‌ ಹೇಳಿ ಮಾಯವಾದವು. ಅಯ್ಯೋ! ಇಲ್ಲೂ ಇವೆಯಲ್ಲ ಇವು ಎಂದು ಮೂಗು ಮುಚ್ಚಿಕೊಂಡು, ಮುಖ ಕಿವುಚಿಕೊಂಡು ಮೆಟ್ಟಿಲುಗಳ ಮೇಲೆ ಕಾಲಿಟ್ಟೆ. ಆಸರೆಗೂ ಅಲ್ಲಿ ಏನೂ ಇರಲಿಲ್ಲ. ತಲೆ ಎತ್ತಿದರೆ ಮೂಲೆಯಲ್ಲೊಂದೆರಡು ಜೇಡುಹುಳು. ಒಂದಿಷ್ಟು ಹಾರುವಹುಳುಗಳು. ಅವುಗಳಿಗೆ ಒಂದು ದೊಡ್ಡ ಮತ್ತು ಮೂರು ಸಣ್ಣ ಹಲ್ಲಿಗಳ ಹೊಂಚು. ಅಲ್ಲಲ್ಲಿ ಮಸಿ ಮೆತ್ತಿದ ಗೋಡೆ. ಅಂತೂ ಎಳೆಂಟು ಮೆಟ್ಟಿಲು ಏರೋ ಹೊತ್ತಿಗೆ ಒಳಗಿನ ಉಸಿರು ಒಳಗೆ. ಕತ್ತಲ ಗುಹೆಯಿಂದ ಹೊರಗೆ ಬಂದಂತೆ. ಕ್ಯಾಮೆರಾಮನ್‌ ಫಾಲೋ ಮಾಡಿದ.

ಆ ಮೂವರು ಮಂಗಳಮುಖಿಯರು ಭಯದಿಂದ ಮೇಲೆ ಬರದೆ ಕೆಳಗೇ ನಿಂತಿದ್ದರು. ಅಲ್ಲೊಂದು ಮುಚ್ಚಿದ ಬಾಗಿಲು. ಕೊಳೆಯಾದ ಬಾಗಿಲು ಮತ್ತು ಚಿಲಕ. ಮುಖ ನೋಡಿದ ಕ್ಯಾಮೆರಾಮನ್‌, ತಾನೇ ಜೋರಾಗಿ ಬಾಗಿಲು ತಟ್ಟಿದ. ಒಮ್ಮೆ, ಎರಡು ಮೂರು ಹೀಗೆ ಎಷ್ಟು ತಟ್ಟಿದರೂ ಒಳಗಿನಿಂದ ಉಸಿರೇ ಇಲ್ಲ. ಯಾರಿದ್ದೀರಿ ಬಾಗಿಲು ತೆಗೆಯಿರಿ ಎಂದೆ. ಆಗಲೂ ಉತ್ತರವಿಲ್ಲ. ಎರಡು ನಿಮಿಷ ಹಾಗೇ ನಿಂತೆವು. ನೀವೀಗ ಬಾಗಿಲು ತೆರೀದಿದ್ರೆ ಬಾಗಿಲು ಒಡೆಯಬೇಕಾಗುತ್ತೆ ನೋಡಿ ಎಂದು ಜೋರು ಮಾಡಿದೆ. ಬಾಗಿಲಿಗೆ ಸರಿಯಾಗಿ ನಮ್ಮ ಕ್ಯಾಮೆರಾಮನ್‌ ಕ್ಯಾಮೆರಾ ಸೆಟ್‌ ಮಾಡಿಕೊಂಡು ನಿಂತಿದ್ದರು. ಆಗ ಧಡಕ್ ಎಂದು ಬಾಗಿಲು ತೆರೆದದ್ದೇ ಸೆರಗಿನಿಂದ ಮುಖ ಮುಚ್ಚಿಕೊಂಡ ಪ್ರಾಯದ ಮಂಗಳಮುಖಿ ಓಡಿ ಹೋಗಿಬಿಟ್ಟರು. ಅಬ್ಬಾ... ಎದೆ ಧಸಕ್‌ ಎಂದಿತು ಆ ಕೋಣೆ ನೋಡಿ. ಧುಮ್‌ ಎಂದು ಧೂಳು ತುಂಬಿದ ಆ ಕೋಣೆ, ಒಂದಿಷ್ಟು ಹರಕು-ಮುರುಕು ಸಾಮಾನುಗಳು, ನೆಲ ಬಿಟ್ಟು ಕದಲದ ಹರಿದ ಚಾಪೆ, ಎಣ್ಣೆ ಮೆತ್ತಿದ ದಿಂಬು, ನೆಲ-ಗೋಡೆ ಮೇಲೆ ಕಲೆಗಳು... ಮೂಗು ಮುಚ್ಚಿಕೊಂಡೇ ಬಲಗಡೆ ಇಣುಕಿದೆ. ಅಲ್ಲೊಂದು ಖುಲ್ಲಾ ಕಿಟಕಿ. ಮೇಡಮ್‌, ಆ ಗಿರಾಕಿ ಈ ಕಿಟಿಕಿಯಿಂದ ಹಾರಿ ಹೋಗಿದ್ದಾನೆ ನೋಡಿ’ ಎಂದರು. ಆ ಕೋಣೆಯನ್ನು ಹೊರಗಿನಿಂದಲೇ ಶೂಟ್‌ ಮಾಡಿಕೊಂಡು, ಮತ್ತೆ ಆ ಕತ್ತಲ ಗವಿಯ ಮೆಟ್ಟಿಲ ಇಳಿದು ಕೆಳಗೆ ಬರೋ ಹೊತ್ತಿಗೆ ಮೈಯೆಲ್ಲ ಬೆವರಿ ಹೊಟ್ಟೆ ಮಳಮಳಿಸತೊಡಗಿತು.

ಅಷ್ಟೊತ್ತಿಗೆ ಮತ್ತೆ ಜನ ಜಮಾಯಿಸಿದ್ದರು. "ದಿನಾ ಇದೇ ಕಸ್ಬು ಇವರ್‍ದು. ಆಗಾಗ ಪೊಲೀಸ್ರು ಬತ್ತಾ ಇತ್ತಾರೆ. ಮ್ಯಾಲಿನ್‌ ಕಿಟಿಕಿಂದ ಜಿಗ್ದು ಓಡೋಗ್‌ಬಿಡ್ತವ್ರೆ ಗಿರಾಕಿಗಳು. ನಮ್ಗೂ ಸಾಕಾಗ್ಯದೆ ಇವರ್‍ ಆಟಗಳ್ನಾ ನೋಡಿ ನೋಡಿ. ಮಕ್ಳು ಮರಿ ಹೆದರ್‍ಕೊಂತವೆ ಇದ್ನೆಲ್ಲಾ ನೋಡಿ. ನೀವಾರೂ ಏನಾರು ಮಾಡಿ ವಸಿ’ ಎಂದು ಕಂಕುಳಲ್ಲಿ ಮಗುವನ್ನೆತ್ತಿಕೊಂಡ ಅಜ್ಜಿಯೊಬ್ಬಳು ದೀನನೋಟ ಬೀರಿದಳು. ಹೂಂ... ಎಂದು ಒಮ್ಮೆ ದುರುದುರು ನೋಡಿದೆ ಆ ಮಂಗಳಮುಖಿಯರನ್ನು. ಎಲ್ಲಿ ಹೋದರು ಆಗ್ಲೇ ಸೀರೆ ಮುಸುಕು ಹಾಕಿಕೊಂಡು ಓಡಿದ್ರಲ್ಲ ಅವರು ಎಂದೆ. ಯಾರು, ಎಲ್ಲಿ, ಯಾವಾಗ, ಯಾರೂ ಇಲ್ವಲ್ಲ ಇಲ್ಲಿ, ನಾವ್ ಮೂರ್‌ ಮಂದಿ ಅಟ್ಟೇಯಾ ಎಂದು ನನಗೇ ನೀರು ಕುಡಿಸಿಬಿಟ್ಟರು.

ಇನ್ನು ಮಾತನಾಡಲು ಉಳಿದದ್ದಾದರು ಏನು ಇವರೊಂದಿಗೆ ಎಂದು ಕ್ಯಾಮೆರಾಮನ್‌ ಜೊತೆ ಕ್ಯಾಬ್‌ನೆಡೆ ಹೊರಟೆ. ಸಿಟ್ಟು, ಪಿತ್ತು ಎಲ್ಲವೂ ನೆತ್ತಿಗೇರಿತ್ತು. ಡೋರ್‌ ಎಳೆದುಕೊಳ್ಳುವಾಗ, ಇಲ್ಲ ಇಲ್ಲ ಇನ್ನೂ ಮಾತನಾಡುವುದು ಇದೆ ಎಂದೆನಿಸಿ, ಒಂದೆರಡು ಫೋನಾಯಿಸಿದೆ. ಹೊರಡೋಣ್ವಾ ಎಂದ ಡ್ರೈವರ್‌. ಹಾಂ... ಒನ್ನಿಮಿಷ ಇನ್ನೊಂದ್‌ಕಡೆ ಹೋಗಬೇಕು ಅಂದೆ. "ಮಾನವೀಯತೆ" ಹುಹ್‌... ಎಂದು ನೀರಿನ ಬಾಟಲ್‌ನ ಕ್ಯಾಪ್‌ ತೆಗೆಯೋ ಹೊತ್ತಿಗೆ, ಆಚೆ ನಿಂತ ಹುಚ್ಚನೊಬ್ಬ ಹಲ್ಲು ಕಿರಿದು ಆಕಾಶ ನೋಡಿ ನಕ್ಕ. ಅಪ್ಪಾ ಶಿವಾ... ಸ್ವಲ್ಪ ದಿನ ತಡಿ ನಾನೂ ಬಂದ್‌ಬಿಡ್ತೀನಿ ನಿನ್‌ ಜೊತೆ ಎಂದು ನನ್ನಷ್ಟಕ್ಕೇ ನಾನು ಹೇಳಿಕೊಳ್ಳುತ್ತ, ಡೋರ್‌ ಲಾಕ್‌ ಮಾಡಿಕೊಂಡೆ.

"ಸಿಕ್ತಾ ಮೇಡಮ್‌ ಸ್ಟೋರಿ?" ಎಂದು ಡ್ರೈವರ್‌ ಕೇಳಿದ. ಹೂಂ... ಅಂದೆ. "ಆರ್‌ಟಿ ನಗರಕ್ಕೆ ಇನ್ನೊಂದ್ ಸ್ಟೋರಿನಾ" ಅಂದ. ಆಗಲೂ ಹೂಂ... ಅಂದೆ. ಸ್ಟೋರಿ ಏನು ಅಂತ ಕ್ಯಾಮೆರಾಮನ್‌ ಕೇಳಿದ. ಸಂಗಮಕ್ಕೆ ಹೋಗಬೇಕು ಅಂದೆ. ಯಾವ ಸಂಗಮ ಎಂದ. ನನಗೂ ಗೊತ್ತಿಲ್ಲಪ್ಪಾ, ನಾನೂ ಹೋಗಿಲ್ಲ. ಅಲ್ಲಿ ಹೋದಮೇಲೆ ಗೊತ್ತಾಗುತ್ತೆ ಅಂತ ಅಡ್ರೆಸ್‌ ಹೇಳಿದೆ. ಡ್ರೈವರ್‍ ಸಂಗಮಾ... ಸಂಗಮಾ... ಎಂದು ಗುನಗುಡುತ್ತಾ ಗಾಡಿ ಓಡಿಸತೊಡಗಿದ.

ಅರೆ ಹೌದು ಏನಿದು ಸಂಗಮ? ಅಲ್ಲಿ ಹೋದ್ರೆ, "ಮಾನವೀಯತೆ"ಗೆ ಪೂರಕವಾಗಿ ಬೈಟ್‌ ಸಿಗುತ್ತಂತೆ. ಎನ್‌ಜಿಒ ಅಧ್ಯಕ್ಷರಿಗೆ ಕಾಲ್‌ ಮಾಡಿದೆ. ಈಗ ಆ ವ್ಯಕ್ತಿಯ ಹೆಸರು ನೆನಪಿಲ್ಲ. ಅಲ್ಲಿ ತಲುಪಿದಾಗ ಸಂಜೆಗತ್ತಲು. ಎರಡು ಅಂತಸ್ತಿನ ಮನೆ ಇರಬಹುದೇನೋ. ಮೊದಲನೇ ಮಹಡಿಗೆ ಏರಿದೆವು. ಪೋನಿ ಹಾಕಿಕೊಂಡಿದ್ದ ಆ ವ್ಯಕ್ತಿ ನಮ್ಮನ್ನು ಒಳಗೆ ಬರಮಾಡಿಕೊಳ್ಳುತ್ತ, ಇಂಗ್ಲೀಷ್‌ನಲ್ಲಿಯೇ ಸಂಭಾಷಣೆ ಮುಂದುವರಿಸಿದರು. ತಾನೊಬ್ಬ ಗೇ ಎಂದು ಪರಿಚಯಿಸಿಕೊಂಡ ಆ ವ್ಯಕ್ತಿ ತನ್ನ ಕಥೆಯನ್ನೆಲ್ಲ ಹೇಳಿದ. ಕಥೆ ಮುಗಿಸಿ ಯಾವಾಗ ಬೈಟ್‌ ಕೊಡುತ್ತಾನೋ ಈ ಮಹಾಶಯ ಎಂದುಕೊಳ್ಳುತ್ತಲೇ ಕಾಲು ತಿನ್ನುತ್ತಿದ್ದ ಸೊಳ್ಳೆಯನ್ನು ಪಚ್‌ ಎನ್ನಿಸಲು ನೋಡುತ್ತ, ನೆನಪಿಸಿಕೊಂಡು ನಗೆ ತಂದುಕೊಳ್ಳುತ್ತ ಹೂಂಗುಟ್ಟುತ್ತಿದ್ದೆ.

ಸರಿ ಈಗ ಬೈಟ್‌ ಕೊಡುತ್ತೀರಾ ಎಂದೆ. ಓಹ್ ಈಗ ಆಗುವುದಿಲ್ಲ ಎಂದುಬಿಟ್ಟರು. ಯಾಕೆ ಎಂದು ಕೇಳಿದ್ದಕ್ಕೆ, "ನಾಳೆ ಬನ್ನಿ ಹೇಗಿದ್ದರೂ ನಮ್ಮ ಮೀಟಿಂಗ್‌ ಇರುತ್ತದೆ. ಪದಾಧಿಕಾರಿಗಳೆಲ್ಲರೂ ಇರುತ್ತಾರೆ ಎಂದರು” ಸಿಕ್ಕಾಪಟ್ಟೆ ತಲೆ ನೋಯುತ್ತಿತ್ತು. ಆಯಿತು ಎಂದುಕೊಂಡು ಹೊರಡಲು ಬಾಗಿಲ ಕಡೆ ಬಂದೆ. ಆ ಗೋಡೆಗೆ ಅಂಟಿಕೊಂಡ ಇಬ್ಬರು ಹುಡುಗಿಯರು ಮುಸಿಮುಸಿ ನಗುತ್ತಿದ್ದರು. ಅರೆ ಇವರ್‍ಯಾಕೆ ಹೀಗೆ ನಗುತ್ತಿದ್ದಾರೆ? ಅವರನ್ನೇ ನೋಡಿದೆ. ಆಗ ಸಂಸ್ಥೆಯ ಅಧ್ಯಕ್ಷರು, ಇಬ್ಬರನ್ನು ಪರಿಚಯಿಸುತ್ತ, "ಇವಳು ಕೇರಳ, ಇನ್ನೊಬ್ಬಳು ತಮಿಳಿನವಳು. ಬೆಂಗಳೂರಿಗೆ ಬಂದು ಎರಡು ವರ್ಷವಾಯಿತು. ನಮ್ಮ ಸಂಸ್ಥೆಯ ಕಾರ್ಯಕರ್ತರಾದ ಇವರು ಆರು ತಿಂಗಳ ಹಿಂದೆ ಒಂದು ಕೋಣೆಯನ್ನು ಬಾಡಿಗೆ ಪಡೆದು ಒಟ್ಟಿಗೇ ವಾಸಿಸುತ್ತಿದ್ದಾರೆ" ಎಂದರು. ಆ ಹುಡುಗಿಯರಿಬ್ಬರೂ ಕೆನ್ನೆ ಕೆಂಪೇರಿಸಿಕೊಂಡು ಹಿಂದೆ ಹಿಂದೆ ಸರಿಯುತ್ತಿದ್ದರು. ನಿಜಕ್ಕೂ ಅವರು ಹಾಗೇಕೆ ವರ್ತಿಸುತ್ತಿದ್ದಾರೆ ಎನ್ನುವುದೇ ನನಗೆ ತಿಳಿಯಲಿಲ್ಲ.

ಸೊಳ್ಳೆಗಳು ಬೇರೆ ತಲೆಮೇಲೆ ಚಕ್ರ ಕಟ್ಟಿಕೊಂಡಿದ್ದವು. ಕಾಲು, ಕೈ ಕೆರೆಯುತ್ತ ಮೆಟ್ಟಿಲಿಳಿಯತೊಡಗಿದೆ. ಬೈಟೂ ಸಿಗಲಿಲ್ಲ. ಆ ಹುಡುಗಿಯರು ನಾಚಿಕೊಂಡಿದ್ದೂ ತಿಳಿಯಲಿಲ್ಲ. ಅರೆ ಇದೆಂಥಾ ಸಂಸ್ಥೆ ಅನ್ನೋದೇ ತಿಳೀಲಿಲ್ವಲ್ಲ. ಒಟ್ಟಿನಲ್ಲಿ ಮೊಟ್ಟೆ ಹೊಡೆಸಿಕೊಂಡಂತಾಗಿತ್ತು ತಲೆ. ಹೋಗಲಿ... ಹೇಗಿದ್ದರೂ ನಾಳೆ ಬರಬೇಕಲ್ಲ. ಆಗ ವಿವರವಾಗಿ ತಿಳಿದುಕೊಳ್ಳೋಣ ಎಂದು ಮೆಟ್ಟಿಲಿಳಿದೆ. ಕ್ಯಾಮೆರಾಮನ್‌ ಹಿಂಬಾಲಿಸಿದ. ಡ್ರೈವರ್‌ ಕ್ಯಾಬ್‌ ಬಾಗಿಲು ತೆಗೆದು, "ಬೈಟ್‌ ಸಿಕ್ತಾ ಮೇಡಮ್‌? ಟೀ ಏನಾದ್ರೂ ಕುಡೀತೀರಾ? ಅಲ್ಲೊಂದು ಹೋಟೆಲ್‌ ಇದೆ. ನಾ ಆಗ್ಲೇ ಕುಡ್ಕೊಂಬಂದೆ. ಚೆನ್ನಾಗಿದೆ" ಅಂದ. ಬೇಡಪ್ಪಾ... ಆಗ್ಲೇ ಆಫೀಸ್‌ನಿಂದ ಫೋನ್‌ ಬಂದಿತ್ತು ಎಂದೆ. ಒಂಬತ್ತಾಯ್ತಲ್ಲಾ ಮೇಡಮ್‌ ಟೈಮು ಅಂದ ಕ್ಯಾಮರಾಮನ್‌. ಓಹ್‌ ಹೌದಾ? ಎಂದು ಮೊಬೈಲ್‌ ನೋಡಿಕೊಂಡೆ.

(ಇನ್ನೂ ಇದೆ)

Saturday, July 6, 2013

ಒಂದೇ ಕೋಣೆಯಲ್ಲಿ ಅಷ್ಟೊಂದು ಬಾತ್‌ರೂಮುಗಳ್ಯಾಕೆ?
119... 118... 117... ಹುಹ್‌ ಎಂದು ಗಾಡಿನಿಲ್ಲಿಸಿದೆ. ಚಿಲ್ಲರೆ, ನೋಟು ಹಿಡಿದ ಜೀವವೊಂದು ಬೊಗಸೆ ಚಾಚಿತು. ಅಯ್ಯೋ... ಎನ್ನುತ್ತಲೇ ಮುಖ ತಿರುಗಿಸಿದೆ. ಇನ್ನೂ ಹತ್ತಿರ ಬಂದು, ಜರ್ಕಿನ್‌ ಹಿಡಿದು ಅಲುಗಾಡಿಸಿತು. ಓಯ್‌... ಎನ್ನುತ್ತಾ ಮುಖ ಕಿವುಚಿದೆ. ಅಯ್ಯೋ ಇಗಿನ್ನು 100... 99... 98... ಹಸಿರು ಹೋಗಿ ಕೆಂಪಾಗೋದು ಯಾವಾಗ್ಲೋ ಅಂತ ಎದೆಗೆ ಕೈಕಟ್ಟಿ ನಿಂತೆ. "ಅತ್‌ ರೂಪಾಯಿ ಕೊಡಾಕಿಲ್ವಾ..." ಗಾಡಿ ಹಿಡಿದು ಅಲುಗಾಡಿಸಿತು ನನ್ನ ಎಡಕ್ಕಿದ್ದ ದೇಹ. ಮೆಲ್ಲದನಿಯಲ್ಲಿ ಆಗಲ್ಲ ಅಂದ್ರೆ ಆಗಲ್ಲ ಅಷ್ಟೆ ಅಂದೆ. "ಓಹೊಹೊಹೊ... ಮಾಲಾಶ್ರೀ ಇದ್ದಂಗಿದ್ದೀಯಾ. ಅತ್‌ ರೂಪಾಯಿ ಕೊಟ್ರೆ, ಗಂಟೇನ್‌ ಓಯ್ತದೆ ನಿಂದು?” ಅಂದುಬಿಡಬೇಕೆ?! ಅಳುವುದೋ, ನಗುವುದೋ?

ಇನ್ನೂ ಏನೇನೋ ಬೈಯ್ಕೊಂಡು, ಕೈಯಿಂದ ಗಾಡಿ ಗುದ್ದಿ, ಪಕ್ಕದ ಗಾಡಿಯವರಿಗೆ ಗಂಟುಬಿದ್ದಿತು ಆ ಜೀವ. ಮಾಲಾಶ್ರೀ... ಅಯ್ಯಪ್ಪಾ! ಎಂದುಕೊಂಡು, ಹೆಲ್ಮೇಟ್‌ ಗ್ಲಾಸ್‌ನ್ನೊಮ್ಮೆ ಏರಿಸಿ, ಕನ್ನಡಿ ಅಡ್ಜಸ್ಟ್‌ ಮಾಡಿಕೊಂಡು ಮುಖ ನೋಡಿಕೊಂಡಿದ್ದೇ ನೋಡಿಕೊಂಡಿದ್ದು.

ಅರೆ ಎಲ್ಲೋ ನೋಡಿದಂಗಿದೆಯಲ್ಲಾ ಈ ಮುಖವನ್ನಾ ಅನ್ನಿಸತೊಡಗೋ ಹೊತ್ತಿಗೆ 6... 5... 4... 3... ಆಹ್‌ ಮನಸ್ಸೂ ಹಸುರಾಯ್ತು. ಗಾಡಿ ಮುಂದ್‌ ಮುಂದೆ. ಮನಸ್ಸು ಐದುವರ್ಷಗಳ ಹಿಂದ್‌ಹಿಂದೆ...

ಅವತ್ತು ಚೇಂಬರ್‌ಗೆ ಕರೆಸಿದ ಚಾನೆಲ್‌ ಚೀಫ್‌, "ರೀ, ಒಂದು ಸ್ಪೆಷಲ್‌ ಸ್ಟೋರಿ ಮಾಡ್ಕೊಂಬನ್ರಿ ಅಂದ್ರು. ಈ ಹಿಜಡಾಗಳ ಬಗ್ಗೆ ಮಾಡಬಹುದೇನ್ರಿ, ನಿಮಗೆ ಮಾಡಕ್ಕಾಗತ್ತಾ?" ಅಂತಾನೂ ಅಂದ್ರು. ಆಯ್ತು ಸರ್‌ ಅಂದೆ. "ಅವರನ್ನು ಮಾನವೀಯತೆ ದೃಷ್ಟಿಕೋನದಲ್ಲಿ ಫೋಕಸ್‌ ಮಾಡಿ" ಅಂದ್ರು. ಹೂಂ. ಅಂತೇನೋ ಹೇಳಿದೆ. ಆದ್ರೆ ಮುಂದೇನು? ಎಲ್ಲಿಯಂತ ಹುಡುಕೋದು ಅವ್ರನ್ನಾ... ಅಂತೂ ಕ್ಯಾಮೆರಾಮನ್‌ ಜೊತೆ ಕ್ಯಾಬ್‌ನಲ್ಲಿ ಕೂತೆ.

"ಯಾವ ಏರಿಯಾ ಮೇಡಮ್‌" ಅಂದ ಕ್ಯಾಬ್‌ ಡ್ರೈವರ್‌. ಒನ್ನಿಮಿಷ ಇರಪ್ಪಾ... ಅಂತ ಸುಮ್ಮನೆ ಕೂತೆ. ಬೆಂಗಳೂರಿಗೆ ಬಂದಮೇಲೆ ಸಿಗ್ನಲ್‌ಗಳಲ್ಲಿ, ಫುಟ್‌ಪಾತ್‌ಗಳಲ್ಲಿ ಕಣ್ಣಿಗೆ ಬಿದ್ದಿದ್ದು ಬಿಟ್ರೆ, ಮಂಗಳಮುಖಿಯರ ಬಗ್ಗೆ ಏನೊಂದೂ ಗೊತ್ತಿರಲಿಲ್ಲ. ಅವರು ಎಲ್ಲಿರುತ್ತಾರೆ? ಹೇಗಿರುತ್ತಾರೆ? ಊಂಹೂ.

ಮೇಡಮ್‌ ಎಲ್ಲಿಗೆ? ಮತ್ತೆ ಡ್ರೈವರ್‌ ಕೇಳಿದ. ಅದ್ನೇ ಯೋಚಿಸ್ತಿದೀನಿ. ನಿಮಗೇನಾದ್ರೂ ಗೊತ್ತಾ? ಈ ಹೊತ್ತಲ್ಲಿ ಮಂಗಳಮುಖಿಯರು ಎಲ್‌ ಸಿಗ್ತಾರೆ ಅಂತ ಅಂದೆ. "ಓಹ್‌ ಅವ್ರಾ ಬನ್ನಿ ನಂಗೊತ್ತು" ಅಂತ ಗಾಡಿ ಸ್ಟಾರ್ಟ್‌ ಮಾಡಿದ. ಅರೆ ಎಲ್ಲಿಗೆ ಯಾವ ಏರಿಯಾ ಅಂದೆ. "ನೀವ್‌ ಬನ್ನಿ ಅಂದೆನಲ್ಲ" ಅಂತ ಯಾವುದೋ ಹಾಡು ಗುನುಗುತ್ತ, ಯಾವುದೋ ಲೈವ್‌ ಕ್ಯಾಪ್ಚರ್‌ಗೆ ಹೋಗ್ತಿದ್ದೀವೇನೋ ಅನ್ನೋ ಹಾಗೆ ಎರ್‍ರಾಬಿರ್‍ರಿ ಗಾಡಿ ಓಡಿಸತೊಡಗಿದ. ಈ ಡ್ರೈವರ್‌ಗೆ ಹೇಗೆ ಗೊತ್ತು? ಸಿಗ್ನಲ್‌ಗಳಲ್ಲಿ, ಫುಟ್‌ಪಾತ್‌ಗಳಲ್ಲಿ ಅಲೆದಾಡಿಕೊಂಡು ಇರುವ ಅವರನ್ನೆಲ್ಲ ಇವನು ಹೇಗೆ ಭೇಟಿ ಮಾಡಿಸ್ತಾನೆ? ದಾರಿಯುದ್ದಕ್ಕೂ ಇದೇ ಗಿರಕಿ. ಅರೆ, ಇವನು ಯಾರಿಗೂ ಕಾಲ್‌ ಮಾಡ್ತಿಲ್ಲ. ವಿಚಾರಿಸ್ತಿಲ್ಲ. ಸದಾ ತಿರುಗಾಡ್ಕೊಂಡಿರೋ ಅವರನ್ನಾ ಇವನು ಹೇಗೆ ಅದೆಲ್ಲಿ ಹಿಡಿದು ನಿಲ್ಲಿಸ್ತಾನೆ? ಬಾಯಿತನಕ ಬಂದ ಪ್ರಶ್ನೆಗಳನ್ನು ಒಳಗೊಳಗೇ ತಳ್ಳಿದೆ, ಮತ್ತೆ ಮತ್ತೆ ಪ್ರಶ್ನಿಸೋದು ನಂಬಿಕೆಗೆ ಸಂಬಂಧಿಸಿದ್ದು ಅಲ್ವಾ ಅಂತ. ತಳ್ಳಿತಳ್ಳಿಕೊಂಡು ಬರುತ್ತಿದ್ದ ಅವನ್ನೆಲ್ಲ ತಿರುವು, ತಿರುವುಗಳಲ್ಲಿ ಒಳಗೊಳಗೆ ಹಾಕುತ್ತಿರುವಾಗಲೇ, ಹೋಗ್ತಾ ಇರೋದು ಮಾಗಡಿ ರಸ್ತೆ ಅಂತ ಗೊತ್ತಾಯ್ತು.

ಗಾಡಿ ನಿಲ್ಲಿಸಿದ ಡ್ರೈವರ್‌, ಇಲ್ಲೇ ಕೂತಿರ್‍ರಿ ಅಂತ ಹೋದ. ಅಷ್ಟೊತ್ತಿಗೆ ಯಾವುದೋ ಕಾಲ್‌ ಬಂತು. ಹೀಗಾಗಿ ನನ್ನ ಕಣ್ಣುಗಳಿಗೂ ಮತ್ತು ಅವನ ನೀಲಿ ಶರ್ಟ್‌ಗೂ ಲಿಂಕ್‌ ಮಿಸ್ ಆಗಿಬಿಟ್ಟ್ಟಿತು. ದರೋಬರೋ ಅಂತ ಓಡಾಡ್ತಿದ್ದ ಮಂದಿಯೊಳಗೆ ನಮ್‌ ಡ್ರೈವರ್‌ ಮಾಯ. ಎಡಕ್ಕೆ ಹೋದ್ನಾ, ಬಲಕ್ಕೆ ಹೋದ್ನಾ, ಮುಂದಕ್ಕೆ ಹೋದ್ನಾ... ಛೆ, ಸುಮ್ನೆ ಕೂತೆ. ಹೊಸಬ ಬೇರೆ. ನಂಬರ್‌ ತೆಗೆದುಕೊಂಡಿರಲಿಲ್ಲ. ಮೂರ್‍ನಾಲ್ಕು ನಿಮಿಷದ ನಂತರ ಎದುರಿಗಿದ್ದ ಬಾರ್‌ ಮತ್ತದರ ಸಂದಿಯಿಂದ ಅವ ಬರೋದು ಕಂಡಿತು. ಬಂದವನೇ ಬನ್ನಿ ಮೇಡಮ್‌ ಅವ್ರೆಲ್ಲಾ ಅಲ್ಲಿದಾರೆ ಅಂದ. ಓಹ್‌ ಎಂದು ಖುಷಿಯಿಂದ ಕ್ಯಾಮೆರಾಮನ್‌ ಜೊತೆ ಆ ಸಂದಿಯಲ್ಲಿ ಹೊರಟೆ.

ಕ್ಯಾಮೆರಾ, ಲೋಗೋ ನೋಡಿದ ತಕ್ಷಣ ಸುತ್ತಮುತ್ತಲಿನ ಜನ ನಮ್ಮನ್ನು ಮುಕುರಿದರು. "ಅಯ್ಯೋ ಸಾಕಾಗೋಗದೆ, ಹಗಲೊತ್ನಾಗೆ ಕುಡ್ದು ಗಲಾಟೆ ಮಾಡ್ತಾರೆ... ಎತ್ತಂಗಡಿ ಮಾಡ್ಸಿ ಮೇಡಮ್‌ ಇವರ್‍ನೆಲ್ಲಾ" ಅಂತ ಬೈಟ್‌ ಕೊಡೋ ರೀತೀಲಿ ಕಾಲರ್‌ ಸರಿ ಮಾಡ್ಕೊಂಡು ಮಾತಾಡೋಕ್ಕೇ ಶುರು ಮಾಡ್ಬಿಟ್ಟ ಅಲ್ಲಿದ್ದೋನೊಬ್ಬ. ಒನ್ನಿಮಿಷ ದಾರಿ ಬಿಡಿ ಪ್ಲೀಸ್‌. ನಾ ಇನ್ನೂ ಅವರನ್ನು ನೋಡಿಲ್ಲ, ಮಾತನಾಡಿಸಿಲ್ಲ. ನೀವು ಹೀಗೆ ಮುಗಿಬಿದ್ರೆ ಏನಂತ ಮಾಡೋದು ಅಂದೆ. ಸೀರೆ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತ ಮುಂದೆ ಬಂದ ಹಣ್ಣುಮಾರೋ ಹೆಂಗಸೊಬ್ಬಳು, "ಎಂಗಸ್ರು, ಮಕ್ಳು-ಮರಿ ಓಡಾಡಕ್‌ ಆಯ್ತಾ ಇಲ್ಲಾ ಈ ಬೀದಿನಾಗೆ, ನಮ್ ಸಂಕಟ ನಮ್ಗೇಯಾ. ಎಂಗ್‌ ಜೀವ್ನಾ ಮಾಡಕ್ಕಾಯ್ತದೆ ಯೋಳಿ” ಅಂತ ತೋಡ್ಕೊಂಡ್ಲು.

ನೋಡಿಮ್ಮಾ ನಿಮ್ಮ ಸಂಕಟ ನಂಗರ್ಥ ಆಗುತ್ತೆ. ಆದ್ರೆ ನೀವೀಗ ದಾರಿ ಬಿಟ್ರೆ ತಾನೆ? ಅಂದೆ. ಗುಂಪು ಚದುರಿತು. ಹತ್ತು ಹೆಜ್ಜೆ ಮುಂದೆ ಹೋಗೋ ಹೊತ್ತಿಗೆ ಆ ಹಳೆಯ ಕಟ್ಟಡದ ಗೋಡೆಗೆ ಅಂಟಿಕೊಂಡ ಸಣ್ಣ ಚೌಕಟ್ಟು ಮತ್ತು ಅದರ ಹೊಸ್ತಿಲಿಗೆ ಅಡ್ಡಗಾಲಿಟ್ಟು ಕುಳಿತ ಐವತ್ತರ ಆಸುಪಾಸಿನ ಸೀರೆಯುಟ್ಟ ಜೀವ ಕಂಡಿತು. ತಲೆ ತಗ್ಗಿಸಿದರಷ್ಟೇ ಒಳ ಹೋಗಲು ಸಾಧ್ಯವಾಗುವಂಥ ಚೌಕಟ್ಟಿನ ಮನೆಯದು. ನಮ್ಮನ್ನು ನೋಡಿದ್ದೇ ತಡ, ಧಡಕ್ಕೆಂದು ಎದ್ದು, ತಲೆ ಬಗ್ಗಿಸಿ ಒಳಚಿಲಕ ಹಾಕಿಕೊಂಡಿತು.

ಅರೆ, ಯಾಕೆ ಇವರು ಹೀಗೆ ಮಾಡಿದ್ದು? ಇವರನ್ನು ಮಾನವೀಯತೆಯ ದೃಷ್ಟಿಕೋನದಿಂದ ತೋರಿಸೋಣ ಅಂತ ತಾನೆ ನಾನು ಬಂದಿದ್ದು? ಮತ್ಯಾಕೆ ಇವರು ಹೀಗೆ ಮಾಡಿದ್ದು ಅಂತ ಪ್ರಶ್ನೆಗಳು ಬಾಯಿಯ ತನಕ ಬಂದು, ಒಳತುಟಿಯನ್ನು ಗುದ್ದತೊಡಗಿದವು. ಪ್ರಶ್ನೆಗಳಿಗೆ, ಸ್ವಲ್ಪ ಸುಮ್ಮನಿರ್‍ತೀರಾ? ಅಂತ ಹೇಳಿ, ಆ ಬಾಗಿಲಿನ ಹೊರಚಿಲಿಕ ಬಾರಿಸಿದೆ. ಇದೆಲ್ಲವನ್ನೂ ನೋಡುತ್ತ ನಿಂತೇ ಇದ್ದರು ಆ ಹಾದಿ-ಬೀದಿ ಜನ. "ಅವರ್‍ದು ಇಂಗೆಯಾ ನಾಟಗಾ. ಒದ್ದು ಬಾಗಿಲ್‌ ತೆಗೆಸ್ಬೇಕು ಆ ನನ್‌ ಮಕ್ಳಿಗೆ" ಮಧ್ಯವಯಸ್ಕನೊಬ್ಬ ತೋಳೇರಿಸಿ ಕೂಗಿದ. ನೀವು ಸ್ವಲ್ಪ ಸುಮ್ಮನಿದ್ರೆ ಅವರಾಗೇ ಬಾಗಿಲು ತೆಗೀತಾರೆ ಸುಮ್ಮನಿರ್‍ತೀರಾ ಅಂತ ಮೆತ್ತಗೆ ಗದರಿದೆ.

"ನೋಡಿ, ಹೀಗೆ ಬಾಗಿಲು ಹಾಕ್ಕೊಂಡ್ರೆ ಹೇಗೆ? ಬಾಗಿಲು ತೆಗೀರಿ. ನಾ ನಿಮ್‌ ಜೊತೆ ಸ್ವಲ್ಪ ಮಾತಾಡೋದಿದೆ ಅಂದೆ” ಸೀರೆಯುಟ್ಟ ಗಂಡಸು ದನಿ ಒಳಗಿನಿಂದಲೇ, "ನೀವ್‌ ಮಾತಾಡಿ ಏನ್‌ ಮಾಡ್ತೀರಾ? ನಮಗೇನ್‌ ಉಪ್ಯೋಗ ಆಯ್ತದೆ? ಪೊಲೀಸ್‌ ಕೈಗೆ ಕೊಡ್ತೀರಾ ನಮ್ಮನ್ನಾ" ಅಂದಿತು.

ನೋಡಿ, ಖಂಡಿತ ನನಗೆ ಆ ಉದ್ದೇಶ ಇಲ್ಲ. ನಿಮಗೆ ಒಳ್ಳೆಯದು ಮಾಡಬೇಕು ಅಂತಾನೇ ಬಂದಿರೋದು. ಮೊದಲು ಬಾಗಿಲು ತೆಗೀರಿ" ಅಂದೆ. "ತೆಗ್ಯಾಕಿಲ್ಲ. ಹಿಂದೆ ನಿಮ್ಮಂಗೆ ಬಂದೋರೆಲ್ಲಾ ಟಿವಿಲಿ ತೋರ್‍ಸಿ. ಪೊಲೀಸ್ರಿಗೆ ಹಿಡ್ಕೊಟ್ಟವ್ರೆ. ನಮ್‌ ಪಾಡಿಗೆ ನಾವ್‌ ಇದ್ದೀವಿ. ಯಾಕ್‌ ನಮ್‌ ಪ್ರಾಣಾ ತಿಂತೀರಾ, ಒಂಟೋಗಿ ಇಲ್ಲಿಂದಾ" ಜೋರು ಉತ್ತರ ಬಂತು. ನೀವು ತಪ್ಪು ತಿಳ್ಕೊಳ್ತಿದ್ದೀರಿ. ಒಮ್ಮೆ ಬಾಗಿಲು ತೆಗೀರಿ. ನಾ ಅವರೆಲ್ಲರ ಹಾಗಲ್ದ ಅಂದೆ. ಅಷ್ಟೊತ್ತಿಗೆ ಸುತ್ತಮುತ್ತಲಿದ್ದ ಜನಕ್ಕೂ ಪಿತ್ತ ನೆತ್ತಿಗೇರಿತ್ತು. ಆ ಮೇಡಮ್‌ ಯೋಳೋದ್‌ ಕೇಳಾಕಿಲ್ವಾ? ಎಂದು ವಯಸ್ಸಾದವರೊಬ್ಬರು ಜೋರು ಮಾಡಿದರು.

ಒಳಗಿನಿಂದ ಪಿಸುಗುಟ್ಟು; "ಬಾಗ್ಲು ತೆಗದ್‌ಬಿಡೋಣ. ಆ ಯಮ್ಮಾ ಏನೊ ಯೋಳ್ತದಂತೆ... ಕೇಳ್‌ಬಿಡೋಣ. ಸುಮ್ಮನ್‌ ಗಲಾಟೆ ಯಾಕ್ ಮಾಡ್ಕೊಳೋದು?”.

ಅಂತೂ ಬಾಗಿಲು ತೆರೆಯಿತು. ದಯವಿಟ್ಟು ನೀವಿನ್ನು ಹೋಗಬಹುದಲ್ಲವೆ? ಅನ್ನೋ ರೀತಿಯಲ್ಲಿ ಒಮ್ಮೆ ಜನರೆಡೆ ನೋಡಿದೆ. ಅವರು ಸೂಕ್ಷ್ಮ ಅರ್ಥ ಮಾಡಿಕೊಂಡರು. ಕ್ಯಾಮೆರಾಮನ್‌ ಜೊತೆ ಒಳಹೋದೆ. ಅದೊಂಥರಾ ಇಕ್ಕಟ್ಟಾದ ಹೊಗೆಕೋಣೆ. ಸೌದೆಒಲೆಯ ಮೇಲೆ ದೊಡ್ಡ ಹಂಡೆಯಲ್ಲಿ ಕೊತಕೊತ ನೀರು. ಎದುರುಬದುರಾಗಿದ್ದ ಸುಮಾರು ಆರು ಪುಟ್ಟಪುಟ್ಟ ಕೋಣೆಗಳು. ಏನಿವು? ಸೆರಗು ಸರಿ ಮಾಡಿಕೊಂಡು ಕಟ್ಟೆಯ ಮೇಲೆ ಕುಳಿತಿದ್ದ ಆ ಹಿರಿಯ ಮಂಗಳಮುಖಿಗೆ ಕೇಳಿದೆ. "ಬಾತ್ರೂಮು" ಎಂಬ ಉತ್ತರ ಬಂತು. ಅರೆ ಒಂದೇ ಕೋಣೆಯಲ್ಲಿ ಇಷ್ಟೊಂದು ಬಾತ್ರೂಮುಗಳು ಯಾಕೆ? ಅಂದೆ. "ಏನೋ... ನಾವು ನಮ್‌ ಕೈಲಾದಷ್ಟು ಜನಸೇವೆ ಮಾಡಿ, ಎಂಗೋ ಒಟ್ಟೆ ತುಂಬ್ಕೋತೀದಿವ್ರಾ" ಎಂದರು. "ಈ ಬಾತ್‌ರೂಮಿಗೂ, ನಿಮ್ಮ ಸೇವೆಗೂ, ಹೊಟ್ಟೆ ಹೊರೆಯೋದಕ್ಕೂ ಏನು ಸಂಬಂಧ" ನಿಜಕ್ಕೂ ಅರ್ಥವಾಗದೆ ಕೇಳಿದೆ. "ಅದೇಯಾ, ಲಾರಿ ಡೈವರ್‍ರು, ಕೂಲಿ ಕೆಲ್ಸಾ ಮಾಡೋವ್ರು, ಪೇಂಟ್‌ ಬಳಿಯೋರು ಇಲ್ಲಿ ಸ್ನಾನಕ್‌ ಬತ್ತವ್ರೆ. ಅವ್ರಿಗೆ ನೀರು ಕಾಸಿ ಕೊಡ್ತೀವಿ" ಎಂದು ಸಂಚಿಯಿಂದ ಎಲೆ ಅಡಿಕೆ ತೆಗೆದರು ಅವರು.

ಮತ್ತೆ ನನ್ನೊಳಗೆ ಪ್ರಶ್ನೆಗಳ ಗುದಮುರಿಗೆ ಶುರು. ಅಯ್ಯೋ ಅವ್ರಿಗೆಲ್ಲಾ ಮನೆಗಳಿರಲ್ವಾ? ಸ್ನಾನ ಮಾಡಕ್ಕೆ ಇಲ್ಲೇ ಯಾಕೆ ಬರ್‍ತಾರೆ, ಅದು ಹೇಗೆ ಸೇವೆ ಅನ್ನಿಸ್ಕೊಳ್ಳುತ್ತೆ? ಅಂತೆಲ್ಲಾ. ಈ ಸಲ ಪ್ರಶ್ನೆಗಳನ್ನು ಒಳತುಟಿಗಳು ಹೊರದಬ್ಬಿಬಿಟ್ಟವು. "ಕೆಲ್ಸಾ ಮಾಡಿ ಸುಸ್ತಾಗ್‌ ಬತ್ತವ್ರೆ, ನಮ್‌ ಹಮಾಮ್‌ ಗರ್‌ಗೆ ಬಂದು, ಸ್ನಾನಾ ಮಾಡ್ಕೊಂಡ್‌ ಓಗ್ವಾಗ ಐದೋ, ಅತ್ತೋ, ಒಮ್ಮೊಮ್ಮೆ ಇಪ್ಪತ್ತು ಕೊಡ್ತವ್ರೆ ಅಟ್ಟೇಯಾ. ಆಗ್ಲಿ... ಇದೂ ನಮ್‌ ಕಡೆಯಿಂದ ಸಮಾಜಕ್ಕೆ ಸಣ್‌ ಸೇವೆ ಅಲ್ವರಾ?” ಹೀಗೆ ಹೇಳುತ್ತ, ಮಾಸಲು ಬಟ್ಟೆ ಹಾಕಿಕೊಂಡು ಬಂದವರೊಬ್ಬರಿಗೆ ನೀರು ತೋಡಲು ಹೋದರು ಅವರು.

ಓಹ್‌, ದೂರದೂರುಗಳಿಂದ ಬಂದಿರುತ್ತಾರಲ್ವಾ ಕೂಲಿ ಕೆಲಸಕ್ಕೆ ಅಂತ, ಕಡಿಮೆ ಖರ್ಚಿನಲ್ಲಿ ಅವರಿಗೆ ಸ್ನಾನ ಮಾಡಲು ಅನುಕೂಲವೂ ಆಯಿತು. ಎಲ್ಲಿಯೂ ಮನ್ನಣೆ ಸಿಗದೆ ಬೇರೆ ದಾರಿ ಇಲ್ಲದೆ, ಹೊಟ್ಟೆ ಹೊರೆಯೋದಕ್ಕೆ ಅಂತ ಒಂದು ಕೆಲಸವನ್ನು ಹುಡುಕಿಕೊಂಡಿದ್ದಾರೆ ಇವರೆಲ್ಲಾ ಎಂದು ಪ್ರಾಮಾಣಿಕವಾಗಿ ಯೋಚಿಸಿದೆ. ಮನಸ್ಸು ಅದನ್ನು ನೋಟ್ ಮಾಡಿಕೊಂಡು, ’ಹಮಾಮ್‌ ಘರ್‌’ (ಮೊದಲ ಬಾರಿ ಕೇಳಿದ ಪದ)ಗೆ ಕೋಟ್‌ ಕೂಡ ಕೊಟ್ಟುಕೊಂಡಿತು.

ಅಷ್ಟರಲ್ಲಿ ಮಧ್ಯವಯಸ್ಸಿನ ಇನ್ನೊಬ್ಬ ಮಂಗಳಮುಖಿ, ನಾ ಮಾತಾಡ್ತೀನಿ ಅಂತ ವೈಯ್ಯಾರದಿಂದ ಮುಂದೆ ಬಂದರು. "ನಾ ಎಂಟು ಫಿಲಂನಲ್ಲಿ ಡ್ಯಾನ್ಸ್‌ ಮಾಡಿದೀನಿ” ಅಂತ ಫಿಲಂಗಳ ಪಟ್ಟಿಯನ್ನೇ ಬಿಚ್ಚತೊಡಗಿದರು. ಅಯ್ಯೋ ನಂಗಿದೆಲ್ಲಾ ಬೇಡವಲ್ಲಾ ಅಂತ ಒಲ್ಲದ ಮನಸ್ಸಿನಿಂದ ನಗೆ ತಂದುಕೊಂಡು, ಓಹ್, ಆಹ್‌, ಹೌದಾ... ಅಂತೆಲ್ಲಾ ನಟಿಸಿದೆ. ಸುಮ್ಮನೆ ಲೋಗೋ ಹಿಡಿದುಕೊಂಡು, ಕ್ಯಾಮೆರಾಮೆನ್‌ಗೆ ರೋಲ್‌ ಮಾಡದಂತೆ ಸನ್ನೆ ಮಾಡಿದೆ. "ಏನ್‌ಮಾಡೋದು ನಾವು ಮಾಡೋ ಸೇವೆ ಸರ್ಕಾರದ ಕಣ್ಣಿಗ್‌ ಕಾಣಾಕೇ ಇಲ್ಲ. ರೇಷನ್‌ ಕಾಲ್ಡ್‌ ಕೊಡಲ್ಲ. ವೋಟ್‌ ಆಕಕ್ಕೆ ಬಿಡಲ್ಲ..." ಹೀಗೆ ಪಟ್ಟಿ ಸಾಗ್ತಾನೇ ಇತ್ತು.

ಮಾತು ತುಂಡರಿಸಿ, ಪಕ್ಕದಲ್ಲಿದ್ದ ಮಂಗಳಮುಖಿಗೆ ಕೇಳಿದೆ, ಇದೊಂದೇ ಕೋಣೆಯಾ? ನೀವಿಲ್ಲೇ ಇರುತ್ತೀರಾ ಅಂತ. ಹೌದು. ಇಲ್ಲೇ ಇಷ್ಟರಲ್ಲೇ ನಾವು ಮಲಗೋದು ಅಂತ ಚಪ್ಪಲಿ ಬಿಟ್ಟ ಜಾಗವನ್ನು ತೋರಿಸಿದರು. ತೋರಿಸಿದರು.

ಇದೊಂದೇ ಕೋಣೆಯಾ ಎಂದು ನಾನು ಅವರಿಗೆ ಕೇಳಲು ಕಾರಣವಿತ್ತು. ಬಲಭಾಗದ ಗೋಡೆಯಲ್ಲಿ ಒಬ್ಬರು ಬಾಗಿ ಹೋಗುವಷ್ಟು ಸಣ್ಣ ಜಾಗವಿತ್ತು. ಅದನ್ನು ತೋರಿಸಿ, ಇಲ್ಲೇನಿದೆ? ಎಂದೆ. ಏನಿಲ್ಲ. "ನೀರ್‌ ಕಾಯ್ಸಾಕೆ ಕಟ್ಗೆ ಒಟ್ಟಿದ್ದಟ್ಟೇಯಾ" ಎಂದು ಗಡಬಡಿಸತೊಡಗಿದರು. ಅದುವರೆಗೂ ಮುಗ್ಧತೆಯಿಂದ, ಮಾನವೀಯತೆಯಿಂದಲೇ ಅವರು ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದ ನನಗೆ, ಯಾಕೋ ಏನೋ ಸರಿಯಿಲ್ಲ ಇಲ್ಲಿ ಎನ್ನಿಸತೊಡಗಿತು. ಸರಿ, ನಾ ನೋಡಬೇಕಲ್ಲ ಈ ಕಟ್ಟಿಗೆ ಒಟ್ಟಿರೋ ಜಾಗವನ್ನಾ ಅಂದೆ. ಅದುವರೆಗೂ ಸಮಾಧಾನದಿಂದ ಉತ್ತರಿಸಿದ ಅವರು ಕೂತಲ್ಲಿಂದ ಎದ್ದು, ಕಿಟಕಿಯಗಲದ ಜಾಗಕ್ಕೆ ಹೋಗದಂತೆ ಕೈ ಅಡ್ಡ ಹಿಡಿದು ನಿಂತುಬಿಟ್ಟರು. ಮುಂದೆ ಕೇಳುವ ಪ್ರಶ್ನೆಗಳಿಗೆಲ್ಲ ಅವರ ಉತ್ತರಗಳು ಯಾಕೋ ಏರುಗತಿಯಲ್ಲಿ ಬರತೊಡಗಿದವು. ನಾ ಅಲ್ಲಿಗೆ ಹೋಗಲೇಬೇಕು ಎಂದು ಹಟ ಹಿಡಿದಾಗ, ಕ್ಯಾಮೆರಾ ಮತ್ತು ಕ್ಯಾಮೆರಾಮನ್‌ನನ್ನು ಅವರಿಬ್ಬರೂ ತಳ್ಳಬಿಟ್ಟರು. ಅದುವರೆಗೂ ಆಪ್ತಧಾಟಿಯಲ್ಲಿದ್ದ ನನ್ನ ಮಾತುಗಳು ಬಿರುಸುತನ ಪಡೆದವು. ಒಮ್ಮೆ ಏಯ್‌ ಎಂದು ಕೂಗಿಬಿಟ್ಟೆ...

(...ಇನ್ನೂ ಇದೆ)