Thursday, October 31, 2013

ಹಿಂಗ ಅದಾರು ಮಹಾಲೆಯಜ್ಜ...


ಹೆಚ್ಚೂ ಕಮ್ಮೀ ಹನ್ನೆರಡ-ಹದಿಮೂರ ವರ್ಷದ ಹಿಂದಿನ ಮಾತು. ಆಗಷ್ಟ... ಮಹಾಲೆಯಜ್ಜ ಪರಿಚಯ ಆಗಿದ್ರು. ಹಾರ್ಮೋನಿಯಂ ಸಾಥಿ ಕೊಡ್ಲಿಕ್ಕೆ ನಮ್ಮ ಮನೀಗ್ ಬರ್‍ತಿದ್ರು. ಲಹರಿ ಹಿಡೀತಂದ್ರ ಮುಗೀತು; ರಾತ್ರಿ ಹನ್ನೊಂದೇನ್ ಹನ್ನೆರಡೇನ್... "ಟೈಮ್‌ ಆಗೇದ ಇಲ್ಲೇ ಊಟಾ ಮಾಡ್ಕೊಂಡ್ ಹೋಗ್ರಿ’ಅಂದ್ರ, ಮಗಳ ವಯಸ್ಸಿನ ನನ್ನ ತಾಯಿಗೂ, "ಬ್ಯಾಡ್ರಿ ಅಕ್ಕಾವ್ರ, ಹಾಡ ಕೇಳಿ ನನ್ನ ಹೊಟ್ಟಿ ತುಂಬೇದ...’ ಅಂತ ಸಂಕೋಚ ಮಾಡ್ಕೊಳ್ಳೋವ್ರು. "ಇಷ್ಹೊತ್ನ್ಯಾಗ ಸೈಕಲ್ ಮ್ಯಾಲ ಹೋಗೂದೇನು ಬ್ಯಾಡಾ, ನಡೀರಿ ನಾ ಗಾಡೀ ಮ್ಯಾಲ ಬಿಡ್ತೀನಿ’ ಅಂತ ಅಪ್ಪಾಜಿ ಅಂದ್ರ, "ನಿಮಗ್ಯಾಕ ತೊಂದ್ರಿ ಸರ್? ಅಷ್ಟಕ್ಕೂ ನನಗ ಬೆಳಗ್ಗೆ ಐದ್ ಗಂಟೇಕ ಸೈಕಲ್ ಬೇಕು. ನಡೀತದ ಬಿಡ್ರಿ.. ಏನಾಗೂದ್ಲಿಲ ನಾ ಸೈಕಲ್ ಮ್ಯಾಲೇ ಹೋಗ್ತೇನಿ" ಅಂತ ಅಗದೀ ನಾಜೂಕಿನಿಂದಾನ ಅಪ್ಪಾಜಿ ಕೈ ಸರಸಾವ್ರು. ಇದು ಸ್ವಾಭಿಮಾನಾನೋ... ಮತ್ತೊಬ್ರೀಗ್ ತೊಂದ್ರೀ ಕೊಡಬಾರ್‍ದು ಅಂತಾನೋ, ಸಂಕೋಚಾನೋ... ಏನೊಂದೂ ಗೊತ್ತಾಗದ ವಯಸ್ಸಿನ ಹುಡುಗಿ ನಾ ಆಗ. ಸಣ್ಣ ಹುಡುಗೋರಿಂದ ಹಿಡಿದು ದೊಡ್ಡಾವ್ರ ತನಕಾನೂ ಅಷ್ಟ ಸಸುವಿನಿಂದ, ಕಕ್ಕುಲಾತಿಯಿಂದ, ರೀ.. ಹಚ್ಯನ ಮಾತಾಡ್ಕೋತ ಬಂದ್ರು ಮಹಾಲೆಯಜ್ಜ. ರೊಕ್ಕದಿಂದ ಬದುಕ ಮಾಡದ ಮನಸಿನಿಂದ, ಮನುಷ್ಯತ್ವದಿಂದ ಬಾಳೆ ಮಾಡೂವವ್ರಿಗಿ ಮಾತ್ರ ಈ ಗುಣಾ ಬರೂದಲ್ಲಾ?
***
ಒಮ್ಮೆ ಏನಾತಂದ್ರ, ಅಪ್ಪಾಜಿಗೆ, ತಮ್ಮನಿಗೆ ಕಟಿಂಗ್ ಮಾಡಿದಾವ್ರನ ಅಲ್ಲೇ ಇದ್ದ ನನ್ನ ತಂಗೀಗೂ, "ಅವ್ವೀ ನಿಂಗೂ ಕಟಿಂಗ್ ಮಾಡ್ಲಿ?" ಅಂದ್ರು. ಐದ ನಿಮಿಶಾ...ಚಕಚಕ ಕಟ್‌ ಮಾಡಿದಾವ್ರನ, "ಇದಕ್ಕ ಯಾವ್ ಕಟ್ ಅಂತಾರು ಗೊತ್ತೇನು? ರಾಜಕುಮಾರಿ ಡಯಾನಾ ಹೆಸರ್ ಕೇಳೀಯಲ್ಲಾ? ಇದ ನೋಡು ಡಯಾನಾ ಸ್ಟೈಲ್" ಅಂದ್ರು. ತಂಗಿ ಫುಲ್‌ ಖುಷ್‌. ಮಾರನೇ ದಿನ ಓಣ್ಯಾಗ ಹೋಗಬೇಕಾದ್ರ ಬ್ಯೂಟಿಪಾರ್ಲರ್ ಆಂಟಿ ತಂಗೀನ್ನ ಕರ್‍ದು, "ಮಸ್ತ್ ಆಗೇದ ಅಲ್ಲಾ... ಎಲ್ಲಿ ಮಾಡ್ಸಿ ಕಟಿಂಗ್’ಅನ್ಬೇಕಾ?
ವಾರದಾಗ ಎರಡ ಸಲಾನಾದ್ರೂ ಬರೋವ್ರು ಮನೀಗೆ. "ನಾಷ್ಟಾ ಮಾಡ್ಕೊಂಡ್ ಹೋಗ್ರಿ" ಅಂದ್ರ, "ಅದೆಲ್ಲಾ ಏನೂ ಬ್ಯಾಡ್ರಿ, ಹೊಟ್ಟಿ ವಜ್ಜಾ ಆದ್ರ ಸೈಕಲ್ ತುಳೀಲಿಕ್ಕೆ ಬರೂದಿಲ್ಲ" ಅಂತ ಅನ್ಕೋತ, ಭಾಳ ಒತ್ತಾಯ ಮಾಡಿದಮ್ಯಾಲ ಒಂದ್ ಕಪ್ ಹಾಲಷ್ಟ ಕುಡದ ಹೋಗಾವ್ರು.
ಮದಲಿಂದನ ಇವ್ರು ಹಂಗ.... ಸಾಲಿ, ಕಾಲೇಜು ಹುಡುಗೋರಿಗೆ, ಹವ್ಯಾಸಿ, ಕಂಪೆನಿ ನಾಟಕ ಮಂದೀಗೆಲ್ಲಾ ಮೇಕಪ್ ಮಾಡಿ ಮನೀಗ್‌ ಬಂದ್‌ಬಿಡೂದು. ಅವರಾಗೇ ರೊಕ್ಕಾ ಕೊಟ್ರ ಸೈ. ಇಲ್ಲಂದ್ರ ಇಲ್ಲ. ಹಂಗ ಹಾರ್ಮೋನಿಯಂ ಸಾಥಿಗಂತ ಹೋದಾಗೂ ಅಷ್ಟ. ಅವರೆಷ್ಟ ಕೊಡ್ತಾರು ಅಷ್ಟ. ಅವರೆದುರಿಗೇನ ಬೆಳದ ಹುಡುಗೋರಿಗೆ ಹಾರ್ಮೋನಿಯಂ, ತಬಲಾ ಸಾಥಿಗೆ ಅಂತ ಹಾಡೋವ್ರ ಮನೀಗೆ ಹಚ್ಚಿಕೊಟ್ಟ ಬರ್‍ತಾರ ಹೊರತು, ತಾವು ಮಾತ್ರ ಬಾಯ್ಬಿಟ್ಟು ಎಂದೂ ರೊಕ್ಕಾ ಕೇಳೂ ಪದ್ಧತೀನ ಇಟ್ಕೊಂಡ್ಲಿಲ.
ಸಂವೇದನಾ, ಪ್ರಾಯೋಗಿಕ, ಸಂಶೋಧನಾ, ಮತ್ತ ಕಲಿಯೂ ಮನಸ್ಸು ಅಂತಾರಲ್ಲ ಅದು ಮಹಾಲೆಯಜ್ಜ ಅವರೊಳಗ ದಿನದಿನಕ್ಕೂ ಚಿಗೀತಾನ ಹೊಂಟದ. ಸಾಥಿ ಕೊಡ್ಲಿಕ್ಕೆ ಬಂದಾಗ ತಿಳ್ಕೊಂಡಂಥ, ಕೇಳಿದಂಥ ಸಾಧನಾ ಸಂಗತಿಗಳನ್ನ ಸಣ್ಣಾವ್ರಿಗೆ ಇಂದಿಗೂ ಹೇಳಿಕೊಡೋ ಪದ್ಧತಿ ಇಟ್ಕೊಂಡಾರು. "ಗುರುಗೋಳು ಹೇಳ್ತಾರು ಖರೇ. ಹಿಂದೂಸ್ತಾನಿನ್ನಾ ಖ್ಲುಲಾ ಆವಾಝ್‌ನ್ಯಾಗ ಹಾಡ್ಬೇಕು ಅಂತ. ಆದ್ರ ಆ.. ಅಂತ ಬಾಯಿ ಅಗಲ ಮಾಡಿ ಆಲಾಪ ಮಾಡೂದಕ್ಕೂ ಮತ್ತ ಬಾಯಿಯನ್ನ ರೌಂಡ್ ಶೇಪ್‌ಗೆ ತಂದು ಆಲಾಪ್ ಮಾಡೂದಕ್ಕೂ ಏನ್ ವ್ಯತ್ಯಾಸ ಆಗ್ತದ?" ಹಿಂಗಂತ ಹೇಳ್ತ.... ಯಾವುದು ಛಂದ ಕೇಳಸ್ತದ ಅಂತ ಪ್ರಯೋಗ ಮಾಡ್ಕೋತನ ಹಾರ್ಮೋನಿಯಂ ನುಡಿಸಾವ್ರು. ಹಿಂಗ ಇಂದಿನ ತನಕಾನೂ ಅಷ್ಟ ವಿನಯದಿಂದ ಸಲಹಾ-ಸೂಚನಾ ಕೊಡ್ಕೋತನ ಸಣ್ಣಾವ್ರಿಗೆ ಬೆನ್ನ ತಟ್ಕೋತ ಬಂದಾರು ಮಹಾಲೆಯಜ್ಜ. ಧಾರವಾಡದಾಗಿನ ಹೆಚ್ಚೂ ಕಮ್ಮಿ ಎಲಾ ಕಲಾವಿದರ ಮನೀಗೆ ಇವ್ರು ಹೇರ್‌ ಕಟಿಂಗ್, ಹಾರ್ಮೋನಿಯಂ ಸಾಥಿ ಅಂತ ಹೋಗೂದನ್ನ ಈ ವಯಸ್ಸಿನ್ಯಾಗೂ ಬಿಟ್ಟಿಲ್ಲ. ನನಗೆ ಗೊತ್ತಿದ್ದ ಮಟ್ಟಿಗೆ ರೊಕ್ಕಾ ಇಸ್ಕೊಳ್ಳಲಿಕ್ಕೆ ಹಿಂದಮುಂದ ಮಾಡ್ಕೋತನ ಬಂದಾರು.
***
ಶ್ರಾವಣ ಬಂತಂದ್ರ ಇವರ ಸಣ್ಣ, ಸೋರೂ ಬಾಡಗಿ ಮನ್ಯಾಗ ಗಣಪತಿಗೋಳಿಗೆ ಜಾಗಾ ಇರೂದಿಲ್ಲ. ಅಂದ್ರ ಇವ್ರು ಸಣ್ಣೂ ಹಿಡ್ಕೊಂಡ್ ದೊಡ್ಡ ದೊಡ್ಡ ಗಣಪತೀ ತನಕಾನೂ ಭಾರೀ ಮಸ್ತಾಗಿ ಮಾಡ್ತಾರು. ಹೆಂಡತಿ ಜಯಾ, ಮಗಾ ಸಂತೋಷ್ ಎಲ್ಲಾ ಸೇರಿ ಮೇಕಪ್ಪಿಗೆ ಆಸರೆ ಕೊಟ್ಟಹಂಗ ಗಣಪತಿ ಮಾಡ್ಲಿಕ್ಕೂ ಸಹಾಯಾ ಮಾಡ್ಕೋತ ಬಂದಾರು. ದೊಡ್ಡ ಮಗಳಿಗೆ ಛುಲೋ ಮನೀಗೆ ಕೊಟ್ಟಾರು. ಮತ್ತ... ಹಿಂದೊಮ್ಮೆ ಅಭಿನಂದನಾ ಸಮಾರಂಭ ಅಂತ ಮಾಡಿದಾಗ ಕೂಡಿದ ರೊಕ್ಕದ್ಲೇ ಸಮಿತಿಯವ್ರು ಸಣ್ಣ ಜಾಗಾ ಕೊಟ್ಟಿದ್ರು. ಅದರಾಗ ಸಣ್ಣ ಮನೀನೂ ಕಟ್ಸಿದ್ರು ಅಜ್ಜಾ. "ಅಲ್ಲೀಗ ದೊಡ್ಡ ಮಗಾ ಇರ್‍ತಾನು. ಮನೀ ಕಟ್ಟಿದ ಸಾಲಾನ ಇನ್ನೂ ಎಲ್ಲಾರೂ ಸೇರಿಸಿ ತೀರಸ್ತಿದೀವಿ ಅಂತ ಸ್ವಲ್ಪ ಸಣ್ಣ ದನೀಲೇ ಹೇಳ್ಕೋತ, ಮೊದಮೊದಲ, ನಮ್ಮ ಮನೀಯವ್ರು (ಪತ್ನಿ ಜಯಾ) ಬೇಜಾರ್ ಮಾಡ್ಕೋತಿದ್ರು. ನಾವೂ ಎಲ್ಲಾರಹಂಗ ಯಾವಾಗ ಆಗೂದು? ಈ ಮೇಕಪ್‌ಲೇ ಏನ್ ಸಿಗ್ತದ? ಅಂತ. ಆದ್ರ ಪ್ರಶಸ್ತಿಗೋಳು ಬರ್‍ಲಿಕ್ಕೆ ಸುರು ಆದಮ್ಯಾಲ ಖುಷಿ ಆದ್ರು” ಅಂತಾರು ಅಜ್ಜ. "ಭಾಳ ಮಂದಿ ಮೇಕಪ್ ಮಾಡೂದನ್ನ ಕಲೀಬೇಕಂತ ಬರ್‍ತಾರ. ಆದ್ರ ಸ್ವಲ್ಪ ದಿನಕ್ಕ ಬಿಟ್ಟಹೋಗ್ತಾರ. ಹಿಂಗೆಲ್ಲಾ ಆಗಬಾರ್‍ದು. ಪಟ್ಟಬಿದ್ದ ಕಲೀಬೇಕು. ನಾಳೆ (೨೦೦೯ರ ಸಾಲಿನ ಮೇಕಪ್ ನಾಣಿ ಪ್ರಶಸ್ತಿ ಪ್ರದಾನ ಸಮಾರಂಭ ) ಪ್ರಶಸ್ತಿ ಇಸ್ಕೊಳ್ಳೂಮುಂದ (ನವೆಂಬರ್ ೩ರಂದು) ಇದ್ನ ಹೇಳಾಂವ್ ಇದೀನಿ. ಹೇಳ್ಲಿ ಹೌದಿಲ್ರಿ ಮತ್ತ?" ಅಂತ ಸಣ್ಣ ಹುಡುಗನ್ಹಂಗ ಕೇಳಿದ್ರು ೮೦ಕ್ಕೆ ಹತ್ತಿರವಾಗುತ್ತಿರುವ ಮಹಾಲೆಯಜ್ಜ!

-------------------

ತಲಿ ಬೋಳಿಸ್ಕೊಂಡೇನ..?

ಆ ನಾಟಕದಲ್ಲಿ ಮಡಿಹೆಂಗಸಿನ ಪಾತ್ರವಿತ್ತು. ಕಲಾವಿದೆ ಮೇಕಪ್‌ಗೆ ಕುಳಿತರು. "ಕೂದ್ಲಾ ಕಾಣದ್ಹಂಗ ತಲಿತುಂಬ ಸೆರಗ ಹೊದ್ಕೊಂಡ್ರ ಆತಲ್ರೀ?" ಎಂದರು ಕಲಾವಿದೆ. "ನೀವು ಹೂಂ ಅಂತೀರಿ ಅಂದ್ರ ನಾ ಮಡಿಹೆಂಗಸಿನ ತಲಿಹಾಂಗ ಮಾಡ್ತೀನಿ. ಏನಂತೀರಿ?” ಸ್ವಲ್ಪ ಹಿಂದಮುಂದ ಮಾಡ್ಕೋತನ ಮಹಾಲೆ ಕೇಳಿದ್ರು. ಕೆಲವೇ ನಿಮಿಷ. ಕಲಾವಿದೆಯ ತಲೆತುಂಬ ಇದ ಕೂದಲು ಮರೆಯಾಗಿ ಬೋಳುತಲೆ ಮಿಂಚತೊಡಗಿತು! ನಾಟಕವೂ ಮುಗಿಯಿತು. ಗ್ರೀನ್ ರೂಮಿಗೆ ಬಂದ ಕಲಾವಿದೆಯ ಪತಿ, "ಎಲ್ರಿ ನನ್ನ ಹೆಂಡ್ತಿ? ಕತ್ಲಾತು..." ಗಡಬಡಿಸಿ ಹುಡುಕತೊಡಗಿದರು. ಅಲ್ಲೇ ಇದ್ದ "ಬೋಳುತಲೆಯ ಪಾತ್ರಧಾರಿ" ಮುಸಿಮುಸಿಯನ್ನತೊಡಗ್ದಿದರು. ಸ್ವಲ್ಪ ಸಮಯದ ಬಳಿಕ "ಇಲ್ಲೇ ಇದ್ದೀನಲ್ರಿ" ಎಂದು ತಲೆ ಮೇಲಿನ ಸೆರಗನ್ನು ಸಂಪೂರ್ಣ ತೆಗೆದು ಪತಿಯನ್ನು ನೋಡಿ ಜೋರಾಗಿ ನಕ್ಕರು. ಆಗ ಪತಿಯ ಪಿತ್ತ ನೆತ್ತಿಗೇರಿ "ಏಯ್ ರಂಡಿ... ನಾ ಇನ್ನೂ ಜೀವಂತ ಇದೀನಿ ತಲಿ ಬೋಳಿಸ್ಕೊಂಡೀ..." ಎಂದು ಕೂಗಿದರು. ಸುತ್ತಮುತ್ತಲಿನವರಿಗೆಲ್ಲ ಈ ಸನ್ನಿವೇಶ ನೋಡಿ ನಗು. ನಂತರ ಅದು ಮೇಕಪ್‌ನ ಕೈಚಳಕ ಎಂದು ಗೊತ್ತಾದ ತಕ್ಷಣ ಪತಿಯೂ ಕರಗಿದರು. ಆದರೆ ಖರೇ ಪಿತ್ತು ನೆತ್ತಿಗೇರತೊಡಗಿದ್ದು ಮಡಿಹೆಂಗಸಿನ ಪಾತ್ರಧಾರಿಗೆ. "ಹ್ಯಾಂಗ್ ಅಂದ್ರಿ ನೀವ್ ರಂಡಿ ಅಂತ? ನಡೀರ್ ಮನೀಗೆ, ನೋಡ್ಕೋತೀನ್ ನಿಮ್ಮನ್ನ..." ಎಂದು ಕಣ್ಣು ದೊಡ್ಡದು ಮಾಡಿಕೊಂಡು ಹಿಂಬಾಲಿಸಿದರು ಮಡಿಹೆಂಗಸಿನ ಪಾತ್ರಧಾರಿ.
-----------------------------------

ಏನ್ ಮಾಡಿದ್ಯೋ ಮಗನ ಕಣ್ಣಿಗೇ...

ಅವತ್ತೊಂದು ಸಂಜೆ ಅಪರೂಪಕ್ಕೆ ಮಹಾಲೆ ಮನೆಯೊಳಗ್ದಿದರು. ಓಣಿಯ್ಲಲಿ ಆಡುತ್ತಿದ್ದ ಏಳೆಂಟು ವರ್ಷದ ಹುಡುಗನೊಬ್ಬನನ್ನು ಕರೆದು ಅಂಗಳದ್ಲಲಿ ಕೂರಿಸಿದರು. ಉಳಿದ ಮಕ್ಕಳು ಕುತೂಹಲದಿಂದ ಅವರಿಬ್ಬರನ್ನು ಸುತ್ತುಗಟ್ಟಿದರು. ಹುಡುಗನಿಗೆ ಕಣ್ಣು ಮುಚ್ಚಲು ಹೇಳಿದ ಮಹಾಲೆ ಪ್ರಸಾಧನಕ್ಕೆ ಶುರುವಿಟ್ಟುಕೊಂಡರು. ಸ್ವಲ್ಪ ಹೊತ್ತಿನ ಬಳಿಕ ಮೇಕಪ್ ಮುಗಿಯಿತು. ಓಣಿಯಲ್ಲಿ ಹಾದುಹೋಗುವವರೆಲ್ಲಾ ಹುಡುಗನನ್ನು ನೋಡಿ ನೋಡಿ ಹೋಗುತ್ತಿದ್ದರು.
ಚಂದಪ್ಪ ಕತ್ತಲಂಗಡಿ ಸಜ್ಜು ಮಾಡುವ ವೇಳೆ. ಹುಡುಗನ ತಾಯಿ ತಲೆಯ ಮೇಲೊಂದು ಸೊಂಟದ ಮೇಲೊಂದು ಬಿಂದಿಗೆ ಇಟ್ಟುಕೊಂಡು ತಗ್ಗು-ದಿನ್ನೆಗಳನ್ನು ಅಂದಾಜಿಸುತ್ತ ಬರುತ್ತಿದ್ದಳು. ದೂರದಿಂದಲೇ ಹುಡುಗರ ಗುಂಪು ನೋಡಿದ ಆಕೆ, ಹತ್ತಿರಕ್ಕೆ ಬಂದು ಗುಂಪು ಸರಿಸಿದಳು. ಬಿಂದಿಗೆ ಕೈ ಬಿಟ್ಟವಳೇ ಅಳು ಜೋರು ಮಾಡಿದಳು. ಒಮ್ಮೆ ಮಹಾಲೆಯವರ ಕೈಯಲ್ಲಿರುವ ಪ್ರಸಾಧನ ಪರಿಕರಗಳನ್ನು ಗಾಬರಿಯಿಂದ ನೋಡುತ್ತಾಳೆ. ಇನ್ನೊಮ್ಮೆ ಮಗನನ್ನು ನೋಡುತ್ತಾಳೆ...
ಹಾಗೆ ನೋಡುತ್ತಲೇ ಜೋರುದನಿಯಲ್ಲಿ "ಅಯ್ಯೋ ನನ್ನ ಮಗನ ಕಣ್ಣು.. ಏನ್ ಮಾಡಿದ್ಯೋ ನನ್ನ ಮಗ್ಗ..? ನಾ ಇನ್ನೇನ್ ಮಾಡ್ಲೋ? ನಿನಗೇನ್ ಬಂದಿತ್ತೋ ಯಾಕ್ ಹಿಂಗ್ ಮಾಡಿದಿ? ನನಗಿರಾಂವಾ ಒಬ್ಬ ಮಗಾ..’ ಎಂದು ತಾರಾಮಾರಾ ಬಯ್ದು, ಬೋರಾಡಿ ಅಳತೊಡಗುತ್ತಾಳೆ. ಆಗ್ದಿದಿಷ್ಟೇ ; ಆಕೆಯ ಮಗನ ಒಂದು ಕಣ್ಣು ಸ್ವಸ್ಥಾನ ಬಿಟ್ಟು ಕೆಳಗಿಳಿದಿತ್ತು. ನೋಡಲು ವಿಕಾರವಾಗಿತ್ತು.
ಈ ಸನ್ನಿವೇಶ ಕಂಡು ನಗೂ ಬಂದರೂ ಮಹಾಲೆ ಗಂಭೀರವಾಗಿಯೇ ಇದರು. ಅಲ್ಲಿದ್ದವರು ಅವಳಿಗೆ ವಾಸ್ತವ ಸಂಗತಿ ತಿಳಿಸುವಲ್ಲಿ ವಿಫಲರಾಗಿದ್ದರು. ಆಶ್ಚರ್ಯವೆಂದರೆ ತಾಯಿಯ ಗೋಳಾಟ ನೋಡಿಯೂ ಕೂಡ ಕಿಮಕ್ಕೆನ್ನದೆ ಹುಡುಗ ಸುಮ್ಮನೇ ಕುಳಿತಿದ್ದ! ಸದ್ಯ ಆಕ್ರಂದನ ಮುಗಿಲು ಮುಟ್ಟುವ ಮೊದಲೇ ಅವಳಿಗೆ ನಿಜಾಂಶ ಅರಿವಾಯಿತು. ಮೇಕಪ್ಪಿನ ಪೊರೆಯಿಂದ ನಿಧಾನ ಮಗ ಕಣ್ಣುಬಿಟ್ಟಂತೆಯೇ ದುಃಖ ಕರಗತೊಡಗಿತು. ತಕ್ಷಣವೇ ಮಗನನ್ನು ಅಪ್ಪಿಕೊಂಡು ಮಹಾಲೆಯವರಲ್ಲಿ ಆ ತಾಯಿ ಕ್ಷಮೆ ಕೇಳಿದಳು.

-ಶ್ರೀದೇವಿ ಕಳಸದ ('ಮಯೂರ'ದಲ್ಲಿ ಪ್ರಕಟ)

1 comment:

sunaath said...

Wonderful make-up man, Mahale!