Friday, November 8, 2013

ಹೂತ ಹುಣಸೆ ಮತ್ತು ಕೆಂಪುಗೀರು

ತಾಸಿಗೊಮ್ಮೊಮ್ಮೆ ಎದ್ದು ನಮ್ಮ ಆಫೀಸ್‌ ಕಾಂಪೌಂಡ್‌ನಲ್ಲಿರೋ ಅರಳಿ ಕಟ್ಟೆಗೆ ಆತುಕೊಂಡು ಕುಳಿತ ಅನಾಥ ದೇವರುಗಳನ್ನಾ, ಹುಳಾ-ಹುಪ್ಪಟೆಗಳನ್ನಾ, ಮರಿ ಕೋಗಿಲೆಗಳನ್ನಾ ಮಾತಾಡಿಸ್ಕೊಂಡ್‌ ಬರೋದು ಸ್ವಲ್ಪ ತಿಂಗಳಿಂದ ಶುರುವಾದ ಖಯಾಲಿಗಳಲ್ಲಿ ಒಂದು. ಹಾಗೇ ಕಾಂಪೌಂಡ್‌ ಆಚೆಗಿರೋ ಹುಣಸೆ ಮರ ಅದರಿಂದ ಉದರೋ ಮಿಡಿಗಾಯಿಗಳ ಮೇಲೆ ಕಣ್ಣಾಡಿಸ್ತಾ... ನೋಡಿದವರಿಗೆ ಅದು ಗೊತ್ತಾಗದಿರಲಪ್ಪಾ ಅಂತ ಮೊಬೈಲ್‌ನಲ್ಲಿ ಮೆಸೇಜ್‌  ಮಾಡ್ತಿರೋ ಹಾಗೆ ನಟಿಸ್ತಾ... ಶತಪತ ಅಂತ ಒಂದಿಪ್ಪತ್ತೊಂಬತ್ತು ಮೂವತ್ತು ಹೆಜ್ಜೆ ಹಾಕಿ... ಆ ಕಡೆ ಈ ಕಡೆ ಕಳ್ಳ ಬೆಕ್ಕಿನ ಹಾಗೆ ನೋಡಿ... ಕಟ್ಟೆ ಮೇಲೆ ಬಿದ್ದಿರೋ ಫ್ರೆಷ್‌ ಹುಣಸೆಮಿಡಿಯನ್ನ ಪಟಕ್ ಅಂತ ಎತ್ಕೊಂಡು ಜರ್‌ ಅಂತ ಟಾಪ್‌ಗೆ ಉಜ್ಕೊಂಡು ಗಬಕ್‌ ಅಂತ ಬಾಯ್ಗೆ ಹಾಕ್ಕೊಳ್ಳೋದೂ ಇತ್ತೀಚೆಗೆ ಅಮರಿಕೊಂಡ ಖಯಾಲೋಮೆ ಖಯಾಲ್‌. 

ಇಂದು 3.41ರ ಮಧ್ಯಾಹ್ನ. ಕಾಂಪೌಂಡ್‌ಗೆ ಅಂಟಿಕೊಂಡ ಕಸದ ರಾಶೀಲಿ ಒಂದ್‌ ಬೆಕ್ಕು ನಿಧಾನಕ್ಕೆ ಎರಡು ಹೆಜ್ಜೆ ಮುಂದೆ, ಎರಡು ಹೆಜ್ಜೆ ಹಿಂದೆ ಮಾಡ್ತಾ ಇತ್ತು. ಬಿಸ್‌ಬಿಸ್‌ ಅಂದೆ. ನನ್‌ ಹುಟುಕಾಟ ನನಗೆ, ನಿಂದೇನ್‌ ಹೋಗತ್ತ ಅನ್ನೋ ಹಾಗೆ ಒಮ್ಮೆ ನೋಡಿ ತಿರುಗ್ತು. ಅದರ ಜೋತು ಹೊಟ್ಟೆ ನೋಡಿ... ಕರುಳು ಚುರ್‌ ಅಂತು. ಅದು ಮರಿಗಳನ್ನ ಶಿಫ್ಟ್‌ ಮಾಡೊದಕ್ಕೆ ಜಾಗ ಹುಡುಕ್ತಿದೆ ಅಂತಾನೂ ತಿಳೀತು.

ಪಾಪ ಅನ್ನಿಸಿ ಕ್ಯಾಂಟೀನ್‌ಗೆ ಓಡಿದೆ. ಕ್ಯಾಂಟೀನ್‌ ಹುಡುಗ ಮನೋಜ್‌, ಫ್ರಿಡ್ಜ್‌ನಿಂದ ಪ್ಯಾಕೆಟ್‌ ಕಟ್‌ ಮಾಡಿ ಬಟ್ಟಲಿಗೆ ಹಾಲು ಹಾಕಿ ಕೊಟ್ಟ. ಇಷ್ಟು ಥಣ್ಣಗಿದೆ... ಅಂದೆ. ಗರಮ್‌ ಹೋತಾ ತೋ ನಹೀಂ ಪೀತಾ ಮ್ಯಾಡಮ್‌ಜೀ ಅಂದ. ಓಹ್‌ ಎಂದುಕೊಂಡು ಬಟ್ಟಲೆತ್ತಿಕೊಂಡು ಹೊರಬಂದೆ. ಮುಂದೆ ಇಡಲು ಹೋದರೆ ಅಮ್ಮ ಬೆಕ್ಕಿನ ಹೆಜ್ಜೆ ಹಿಂದಿಂದೆ.  ನಾ ಮುಂದ್‌ಮುಂದೆ. ಅದು ಹಿಂದಿಂದೆ. ಅಂತೂ ಅಲ್ಲೊಂದ್ಕಡೆ ಇಟ್ಟು ದೂರ ಬಂದೆ. ಆಗ ಕಣ್‌ ತೆಕ್ಕೊಂಡೇ ಕುಡಿದು ಮುಗಿಸ್ತು. (ಇತ್ತೀಚೆಗೆ ಬೆಕ್ಕು ಕಣ್‌ ಮುಚ್ಕೊಂಡ್ ಹಾಲು ಕುಡಿಯೋದನ್ನ ನಿಲ್ಸಿವೆ) ಅವನಿಗೆ ಮೆಸೇಜ್‌ ಮಾಡಿದೆ ; "ಇಲ್ಲೊಂದ್ ಅಮ್ಮ ಬೆಕ್ಕು, ಮರಿ ಎಲ್ಲಿ ಗೊತ್ತಿಲ್ಲ. ಕ್ಯಾಂಟೀನ್‌ನಿಂದ ಹಾಲು ತಂದಿಟ್ಟೆ ಕುಡೀತಿದೆ." ಅವನಿಂದ ಉತ್ತರ ಇಲ್ಲ. 

ಸರಿ... ಮರಿಮಾರಾಯ್ರೆಲ್ಲಾ ಎಲ್ಲಿ ಅಂತ ಹುಡ್ಕೊಂಡು ಬಂದೆ. ಆಫೀಸ್‌ ಬಾಯ್‌ ಸ್ಟೋರ್‌ರೂಂ ಕಡೆ ಕೈ ತೋರಿಸಿದ. ಕಿತ್ತೋದ ವಯರ್‍ರು, ಸಿಪಿಯು, ಮೌಸು, ಪೀಸಿನ ಮಧ್ಯೆ ಅಮ್ಮ ಬೆಕ್ಕು ಮರಿಗಳ ಮಧ್ಯೆ ಕೂತಿತ್ತು. ಕಣ್‌ ತುಂಬ ಗೀಜು ತುಂಬ್ಕೊಂಡ ಮರಿ ಬೆಕ್ಕು ಅಮ್ಮನನ್ನ ಹಾಯ್ತಿತ್ತು. ಅಮ್ಮ ಮಾತ್ರ ಆದಷ್ಟು ಬೆನ್ನು ನೆಟ್ಟಗೆ ಮಾಡ್ಕೊಂಡು ಇಷ್ಟಗಲ ಕಣ್‌ ಮಾಡ್ಕೊಂಡು ಕೂತಿತ್ತು. ಹತ್ತ ಹೋದೆ, ಪುಸ್‌ ಅಂದಿತು. ಏಯ್‌ ಸುಂದ್ರಿ ನಾನೇ... ಮರೆತುಬಿಟ್ಯಾ? ಅಂತ ಹೇಳ್ತಾ ಮತ್ತೆ ಹತ್ರ ಹೋದೆ. ಮತ್ತೆ ಪುಸ್‌... ಆಗ್ಲೇ ನಾನೇ ನಿಂಗೆ ಹಾಲಿಟ್ಟಿದ್ದು... ಹಂಗೆಲ್ಲಾ ಮಾಡಬಾರದು ಪುಟ್ಟಾ.... ಅಂತ ಮರೀನಾ ಎತ್ಕೊಳೋಕ್‌ ಹೋದೆ. ಊಂಹೂ ಪುಸ್‌ ಅಂತ ಉಗುರಿನಿಂದ ಸವರೇಬಿಟ್ಟಿತು ಅಮ್ಮ ಬೆಕ್ಕು. ಮುಂಗೈ ಮೇಲೆ ಪಕ್‌ ಅಂತ ನಕ್ಕೇಬಿಟ್ತು ಕೆಂಪುಗೀರು! 

ಮತ್ತೆ ಅವನಿಗೆ ಮೆಸೇಜ್‌ ಮಾಡಿದೆ; "ಮರಿ ಮುಟ್ಟಲು ಹೋದರೆ, ಅಮ್ಮ ಬೆಕ್ಕು ಪರಚಿಬಿಟ್ಟಿತು. ಅರೆ, ನಾ ಮರೆತು ನಿನಗೆ ಮೆಸೇಜ್‌ ಮಾಡಿಬಿಟ್ಟೆ. ಬೈ..." ಅಂತ. ಅವನಿಂದ ಉತ್ತರವಿಲ್ಲ. 

ನಿನ್ನೆಯಿಂದ ಅವ ಹದಿನಾಲ್ಕು-ಹದಿನೈದು ಸಲ ಕಾಲ್‌ ಮಾಡಿದರೂ ಪಿಕ್‌ ಮಾಡಲು ಮೊಂಡಾಟ ಹಿಡಿದ ಮನಸ್ಸು ಈಗ್ಯಾಕೆ ಒಮ್ಮೆಲೆ ಅವನಿಗೆ ಮೆಸೇಜ್‌ ಮಾಡಿತು? ಹಾಲು ಕುಡಿದ ಬೆಕ್ಕು ಕೈ ಪರಚಿಕೊಂಡರೂ, ಕೆಲ ಕ್ಷಣಗಳಲ್ಲೇ ಅರಳಿಯಂತೆ ಮನಸ್ಸು ಹಗುರಾದದ್ದಾದರೂ ಹೇಗೆ, ಯಾಕೆ?

3 comments:

ಅರವಿಂದ said...

ಹ ಹ ಚನ್ನಾಗಿದೆ. ರಿಲ್ಕೆಯ(Black cat), ತಿರುಮಲೇಶರ(ಮುಖಾಮುಖಿ ಕವನ) ಬೆಕ್ಕುಗಳ ಬಗ್ಗೆ ಮಾತ್ರ ಓದಿದ್ದವರಿಗೆ ಇದು ಒಂತರ ಖುಶಿ ಕೊಡ್ತು.
ಧನ್ಯವಾದಗಳು

ಆಲಾಪಿನಿ said...

:)

Badarinath Palavalli said...

facebookನ 3K ಗುಂಪಿನಲ್ಲಿ 'ಕಥನ' ಶೀರ್ಷಿಕೆ ಅಡಿಯಲ್ಲಿ ಈ ಬರಹವನ್ನು share ಮಾಡಿದ್ದೇನೆ ಮೇಡಂ :)

https://www.facebook.com/groups/kannada3K/permalink/483794418371780/