Sunday, December 21, 2014

ಎಲ್ಲಾ ನಿನ್ನಿಂದಲೇ
ಹೇಳಿದೆ, ಕೇಳಲಿಲ್ಲ
ನೋಡೀಗ ಅಂಗಳ ತುಂಬ ಮೈ ಮುರಿಗೆ ಹೊಡೆದ
ನನ್ನ ಪಲಾಶ ಹೂಗಳು

ಮುದುಡಿಸುವುದಷ್ಟೇ ಗೊತ್ತಲ್ಲ ನಿನಗೆ?

ಅಂವನೊಬ್ಬನಿದ್ದಾನಲ್ಲ ರೆಕ್ಕೆ ಕಟ್ಟಿ ಪುಕ್ಕ ಕುಣಿಸುವವ
ಅವನೇ ನನ್ನ ಪಲಾಶದ ಒಡಲ ಹೀರಿಗ
ಹರಿದಾರಿಗುಂಟ ಹೋದರೂ ಕೈಗೆ ಸಿಗದ ಅವನು
ಕಿರಿದಾರಿ ಹೊಕ್ಕರೂ ಜುಣುಗುಡುವ ನೀನು
ಸರೀಜೋಡಿ ನಿಮ್ಮಿಬ್ಬರದು

ನಿಮ್ಮ ನೆಚ್ಚಿ ಶ್ರುತಿ ಮಾಡಿಟ್ಟುಕೊಂಡೆ
ನನ್ನ ತಂಬೂರಿ ಗತಿ ಏನೀಗ?

ನೋಡಿಲ್ಲಿ ಬಿಮ್ಮೆಂದ ತಬಲಾ
ಇಳಿಸಿದರೆ ಪಾತಾಳ
ಏರಿಸಿದರೆ ಬಿಕ್ಕುವ ಕರಣಿ
ಮಧ್ಯೆ ಮಟ್ಟಸ ಮೈದಾನ

ಅಷ್ಟೇ ಇನ್ನು ಇಂದಿನ ರಿಯಾಝ್
ಹುಹ್...
ಇಷ್ಟೊಂದು ರಚ್ಚೆ ಯಾಕೋ ಹೇಮಂತ?
ಬಿಡು ಬಿಡು
ದಾಟಿಯಾಗಿದೆ ಪ್ರಶ್ನೋತ್ತರದ ಪರಿಧಿ

ಹೊತ್ತಾಯಿತು
ಆ ರೆಕ್ಕೆ ಕಟ್ಟಿಕೊಂಡವನೊಂದಿಗೆ ಹೊರಡು ನೀನೂ
ಹಾಂ! ಕಟ್ಟೆಯ ಮೇಲಿನದು ಅವನ ಪಾಲು
ಹರಡಿಬಿಟ್ಟರದು ಕರ್ತವ್ಯ;
ಅದಕ್ಕೇ ಹಾಕಿಟ್ಟಿದ್ದೇನೆ ಅಕ್ಕಿ ರಂಗೋಲಿ
ಹೌದು... ಮುದ್ದಿಗೂ ಲೆಕ್ಕವಿಡುವವಳು ನಾನು

***

ಬೆರಳ ಚಡಪಡಿಕೆ
ಸಣ್ಣಗೆ ನಡುಕ
ಕಟ್ಟಿದ ಕೈ ಬಿಚ್ಚಲಾಗದು
ಬಿಚ್ಚಿದರೆ ಮತ್ತೆ ಕೈ ಕಟ್ಟಲಾಗದು
ಒಡಲೊಳಗೆ ನಿಸ್ತೇಜ ಪಲಾಶ
'ಮುರುಟಿದ್ದು ಅರಳಲಾರದು
-ಮಣ್ಣೊಳಗೆ ಮಣ್ಣಾಗುವ ತನಕ
ಮೌನಕ್ಕೆ ನೀನೇ ತಾಯಿಯಾಗಿಬಿಡು
ತಾನೇ ಚಿಗುರೊಡೆಯುತ್ತದೆ'
;ನಿನ್ನದೇ ಪಾಠ ನಿನಗೆ ಒಪ್ಪಿಸುತ್ತಿದ್ದೇನೆ
ಖಾಲೀ ಹಾಳೆಗಳ ಮಧ್ಯೆ ನೀನಿರಬಾರದು ಪಲಾಶ
ನೀನು ಹೀಗೆಲ್ಲ ಉತ್ತರ ಕಂಡುಕೊಳ್ಳುತ್ತೀ
ಎಂದು ಗೊತ್ತಿರಲಿಲ್ಲ ನೋಡು
ಪುಟ್ಟ ಬೆಂಚುಗಳ ಮೇಲೆ ಇವರೆಲ್ಲ ಕುಳಿತುಕೊಳ್ಳುವ ಮೊದಲು
ಇನ್ಯಾರನ್ನೋ ಪ್ರಾರ್ಥಿಸಿರಲಿಲ್ಲವಲ್ಲ?

ಬಾಕಿ ಉತ್ತರಗಳಿಗಾಗಿ ಮಡಿಚಿಟ್ಟುಕೊಂಡ ಆ ಪುಟಾಣಿ ಬೆರಳುಗಳು
ಅರ್ಥವಾಗದ ಪ್ರಶ್ನೆಗಳಿಗೆ ಹಣೆ ಎಳೆದು ಗಂಟು ಹಾಕಿದ ಜೋಡಿ ಹುಬ್ಬುಗಳು
ಪ್ರಶ್ನೆಗಳಿನ್ನು ಬಾಕಿಯಿಲ್ಲವೆಂಬ ಖುಷಿಯಲ್ಲಿ ಪೆನ್ನೇ ಚಾಕೋಲೇಟಾಗಿದ್ದು
ಮರೆವಿಗೆ ಅಳುಕಿದ ಮಗುವಿಗೆ ಬೆಂಚೇ ಅಮ್ಮನಾಗಿದ್ದು
ಇದ್ಯಾವುದು ಇದ್ಯಾವುದೂ...
ಕಾಣಲೇ ಇಲ್ಲವಲ್ಲ ನಿನಗೆ?

ಅಂಕಿ ಮರೆತ ಇಂಚುಪಟ್ಟಿ
ಅಳಿಸದ ಕಲೆಗಲ್ಲ ನಾನು ಎನ್ನುವ ರಬ್ಬರ್
ಮೊನೆ ಕಳೆದುಕೊಂಡ ತ್ರಿಜ್ಯ
ಯಾವ ಮಾಪಕದಿಂದ
ಯಾವ ಕೋನದಿಂದ ಇದು ನ್ಯಾಯ ಎನ್ನುತ್ತಿರುವ
ಕೋನಮಾಪಕ, ತ್ರಿಕೋನ
ಇವೆಲ್ಲದರ ವದ್ದಾಟಕ್ಕೆ ಕಂಪಾಸು ಬಾಕ್ಸಿಗೆ ಹೃದಯಾಘಾತ.

ಹೌಹಾರಿದ ಬುತ್ತಿಗಂಟಿಗೆ
ಗೋಣುಮುರಿದ ಚಮಚಕ್ಕೆ
ಉಸಿರುಗಟ್ಟಿದ ಬಾಟಲಿಗೆ
ಎಳೆಹರಿದುಕೊಂಡ ಕರವಸ್ತ್ರಕ್ಕೆ
ಇಸ್ತ್ರೀ ಕಳೆದುಕೊಂಡ ಸಮವಸ್ತ್ರಕ್ಕೆ
ಕಾಲಪ್ಪಿಕೊಂಡೇ ಇರುವ ಪುಟ್ಟ ಬೂಟುಗಳಿಗೆ
-ನೋಡು, ಏನು ಹೇಳುತ್ತಿ...

ನಾಳೆ ಅಲೆಯಾಗಿ ಆವಿಯಾಗಿ ಹೂಪಕಳೆಯಾಗಿ ತೇಲುವ
ಇವರೆಲ್ಲರ ಆತ್ಮ ಕೇಳುವ ಪ್ರಶ್ನೆಗಳಿಗೆ
ನಿನ್ನಲ್ಲಿ ಉತ್ತರವಿದೆಯೇ?

ಮೂರ್ಖತನ;
ಆತ್ಮಸಾಕ್ಷಿ ಇಲ್ಲದ ಉತ್ತರಗಳನ್ನು ಬಿಳಿ ಹಾಳೆಯಲ್ಲಿ ಹುಡುಕುವುದು.


-ಶ್ರೀದೇವಿ ಕಳಸದ

(ಡಿ. ೧೬, ಪೇಶಾವರ ಘಟನೆ ನಡೆದ ದಿನ ಬರೆದ ಕವನ)