Saturday, January 24, 2015

ನೀಲ ಹರಳಿನುಂಗುರ ಮತ್ತು ಆತ್ಮಕ್ಕಂಟಿದ ಕೂಸು

ಧಾರವಾಡದಿಂದ ದೊಡ್ಡವಾಡ, ದೊಡ್ಡವಾಡದಿಂದ ಧಾರವಾಡ... ನಾಲ್ಕೈದು ವರ್ಷಗಳ ಎಡತಾಕು ಪಟ್ಟಿಗೆ ಪೂರ್ಣವಿರಾಮ ಬಿದ್ದಿದ್ದು ನಾನು ಎಂಟನೇ ಕ್ಲಾಸು-ತಮ್ಮ ಆರನೇ ಕ್ಲಾಸು ಮುಗಿಸಿದ ರಜೆಯಲ್ಲಿ. ಧಾರವಾಡದ ರಾಜನ್ ದೇಶಪಾಂಡೆ ದವಾಖಾನೆಯಿಂದ ಇನ್ನೂರು ಮೀಟರ್ ಅಂತರದಲ್ಲಿ ಎಂಟನೂರು ರೂಪಾಯಿಗೆ ಅಂತೂ ಒಂದು ಬಾಡಿಗೆ ಮನೆ ಮಾಡಿದೆವು.

ಅವತ್ತು ಸಂಗೀತ ಕ್ಲಾಸು ಮುಗಿಸಿ ತಮ್ಮನೊಂದಿಗೆ ಗಾಂಧೀಚೌಕದಿಂದ ಆ ಹೊಸ ಮನೆಗೆ ಬಂದೆ. ಒಂದಿಷ್ಟು ಚೌಕಟ್ಟುಗಳು ಗೋಡೆಗಳು ಕಿಟಕಿ ಮಾಡುಗಳು ನಾಲ್ಕು ಜೇಡಬಲೆಗಳು ಎರಡು ಹಲ್ಲಿಗಳು ಒಂದು ಇರುವೆ ಸಾಲಿನೊಂದಿಗೆ ಮಾತನಾಡಿಕೊಂಡು ಕಪ್ಪು ಪಾಟಿಕಲ್ಲಿನ ದೂಳು ನೆಲದ ಮೇಲೆ ಹೆಜ್ಜೆ ಮೂಡಿಸುತ್ತ ಅಪ್ಪಾಜಿಯನ್ನು ಕಾಯುತ್ತ ಕುಳಿತೆ. ಅಭ್ಯಾಸ ಬಲದಂತೆ ತಮ್ಮನ ತೂಕಡಿಕೆ ಏಳೂವರೆಯಿಂದಲೇ ಶುರುವಾಗಿತ್ತು. ಎಂಟೂವರೆಗೆ ಅಪ್ಪಾಜಿ ಸೂಟ್ಕೇಸ್/ಚಾಪೆ ಹಿಡಿದು ಊರಿಂದ ಬಂದರು. ಎರಡು ಸ್ಟೀಲ್ ತಟ್ಟೆ, ಹಾಲಿಗೆ-ಪಲ್ಯಕ್ಕೆ-ಅನ್ನಕ್ಕೆ ಮೂರು ಬೋಗುಣಿಗಳು, ನಾಲ್ಕು ಚಮಚಗಳನ್ನು ಹೊಟ್ಟೆಯಲ್ಲಿಟ್ಟುಕೊಂಡ ಒಂದು ಬೆಡ್ಶೀಟ್, ಚಾದರ್, ಶಾಲ್ ಜೊತೆಗೆ ಅಮ್ಮ ಕಟ್ಟಿದ ಬುತ್ತಿಗಂಟು ಅದರಿಂದ ಹೊರಬಂತು. ಅಪ್ಪಾಜಿ ಮನೆ ಕಸ ಗುಡಿಸಿದರು ನಾನು ನೆಲ ಒರೆಸಿದೆ. ಊಟ ಮಾಡಿ ಮಲಗಿಕೊಂಡೆವು. ಮರುದಿನ ಅಮ್ಮ ತಂಗಿ ಬಂದರು. ಅವರೊಂದಿಗೊಂದಿಷ್ಟು ಸಾಮಾನುಗಳು ಬಂದವು. ರಜೆ ಮುಗಿಯುತ್ತಿದ್ದಂತೆ ನನ್ನೊಂದಿಗೆ ತಮ್ಮನನ್ನು ಬಿಟ್ಟು ಮೂವರು ಊರಿಗೆ ಹೊಂಟುನಿಂತರು. ನಾ ತಬ್ಬಿಕೊಳ್ಳದೇ ಅತ್ತಿದ್ದಾಯ್ತು.

ಮಾರನೇ ದಿನದ ಬೆಳಗುಗಳೆಲ್ಲ ಆರಂಭವಾಗುತ್ತಿದ್ದದ್ದೇ ಹೊಸ್ತಿಲಿಗೆ ಮೂರು ಎಳೆ ಒಂದು ಚಕ್ರ, ಮೂರು ಎಳೆ ಒಂದು ಚಕ್ರ, ಮೂರು ಮೆಟ್ಟಿಲಿನ ನಂತರದ ಪುಟ್ಟ ಜಾಗದಲ್ಲಿ ರಂಗೋಲಿಯಿಂದ. ಮನೆ ಹಿಂದಿನ ದಿಬ್ಬಕ್ಕಂಟಿಕೊಂಡಿದ್ದ ಆರೆನ್ ಶೆಟ್ಟಿ ಕ್ರೀಡಾಂಗಣದಿಂದ ಅಥ್ಲೀಟ್ಗಳು ಎಬ್ಬಿಸುವ ದೂಳು ಹಗ್ಗದ ಮೇಲಿನ ಬಟ್ಟೆಗೆ ಅಡರಿದಾಗ. ದೊಡ್ಡ ಮುಳ್ಳು ಹತ್ತರ ಮೇಲೆ ಬಂದಾಗ. ಜಿರಳೆಯೊಂದು ಮನೆತುಂಬ ಓಡಾಡಿದಾಗ. ಹೊತ್ತಾಯಿತೆಂದೋ, ಹೋಂವರ್ಕ್ ಮಾಡೆಂದೊ, ಊಟಮಾಡೆಂದೋ ತಮ್ಮನನ್ನು (ಪಾಪ ಚಿಕ್ಕವನು ಅವ ಆಗ) ಎಬ್ಬಿಸಲು ಹೋಗಿ ದುರುಗುಟ್ಟಿ ನೋಡಿಸಿಕೊಂಡು ಕೆಲ ಸಲ ತಳ್ಳಿಸಿಕೊಂಡಾಗ. ಅವನಿಗೆಂದು ಕಾಯಿಸಿ, ತಣ್ಣಗಾದ ನೀರಿನಲ್ಲಿ ಸ್ನಾನ ಮಾಡಿದಾಗ. ಅಷ್ಟೊತ್ತಿಗೆ ಕಾಯ್ದು ಕಾಯ್ದು ಕುದ್ದು ಉಕ್ಕಿ ಮನೆಯೆಲ್ಲ ವಾಸನೆ ಹಿಡಿಸುವ ಆ ಸೀಮೆ ಎಣ್ಣೆ ಸ್ಟೋ ಮತ್ತು ನನ್ನ ತಲೆನೋವು ಹಾಗೂ ಅಮ್ಮನ ಕೈಗಳು ನೆನಪಾದಾಗ. 'ಈ ಬಿಳಿಹಿಟ್ಟು ಹಾಕಿ ಗಂದಾ ಮಾಡ್ತಿ ' ಮಾಲಕಿನ್ ಪೈಪಿಂದ ಜೋರು ನೀರು ಬಿಟ್ಟು ಅಂಗಳ ಬೋಳು ಮಾಡುತ್ತಿದ್ದಾಗೆಲ್ಲ ಧೋ... ಎಂದು ಧಾರವಾಡದ ಕೆಂಪು ನೆಲದಲ್ಲಿ ಸುರಿದ ಅಡ್ಡಮಳೆಗೆ ಲೆಕ್ಕವಿಲ್ಲ. ಅದೆಷ್ಟು ವಡ್ಡು ಕಟ್ಟಿಕೊಂಡರೂ ವಾರಾಂತ್ಯಕ್ಕೆ ಬರುವ ಅಪ್ಪಾಜಿ ಅಮ್ಮ ತಂಗಿಯೆದುರು ಯಾವುದೋ ಮಾಯೆಯಲ್ಲಿ ಅದು ಒಡೆದೇ ಹೋಗುತ್ತಿತ್ತು. ಮತ್ತವರು ವಡ್ಡು ಸರಿಗೊಳಿಸಿ ಅತ್ತ ಊರಿಗೆ ಹೊರಟರೆ ಮತ್ತೆ ಮಳೆ-ಕೆಂಪುನೆಲ-ವಡ್ಡು-ಒಡೆಯೋ ಕಟ್ಟೋವಾಟ ಖಾಯಂ.

ಹೀಗಿರುವಾಗ ಒಂದು ಸಂಜೆ ಬಾಗಿಲು ತಟ್ಟಿದ ಶಬ್ದ. ನೋಡಿದರೆ ಯಾರೂ ಇಲ್ಲ. ಬಾಗಿಲು ಹಾಕಿದೆ. ಮತ್ತೆ ತಟ್ಟುವಿಕೆ. ಪಕ್ಕದ ಗೋಡೆಗೆ ಆತುಕೊಂಡ ಏಳರ ಪೋರ ನಕ್ಕ. ಹಾಯ್ ಅಕ್ಕಾ ನಾ ಮನು ಅಂತ. ಬೆಂಗಳೂರಿಂದ ನನ್ನ ಅಮ್ಮನ ಜೊತೆ ಬಂದಿದ್ದೀನಿ ಅದೇ ನಮ್ಮನೆ ಎಂದು ಮಹಡಿ ತೋರಿಸಿದ.

ಬೆಳಗ್ಗೆ ಇಸ್ತ್ರೀ ಗೆರೆಗಳು ಅಲ್ಲಾಡದಂತೆ ಕಪ್ಪು ಬೂಟುಗಳು ಮೆಟ್ಟಿಲು ಟಕಟಕಿಸುತ್ತ ಇಳಿಯುವುದನ್ನು ಮತ್ತು ಹಿಂಬಾಲಿಸುವ ಸಿಗರೇಟು ಮೋಡವನ್ನು ಹಾಗೂ ಸಂಜೆಯಾಗುತ್ತಿದ್ದಂತೆ ಕೆಲಸದವನೊಂದಿಗೆ ಮೆಟ್ಟಲು ಏರುತ್ತಿದ್ದ ಕಪ್ಪು ಮತ್ತು ಬಿಳಿ ಕವರುಗಳನ್ನು ಗಮನಿಸುತ್ತಿದ್ದದ್ದು ಹಾಯ್ದು ಹೋಯಿತು. ಅವರಿಗೊಬ್ಬ ಮಗ, ಅವನೇ ಈ ಹುಡುಗ. ಅಪ್ಪ ಧಾರವಾಡದಲ್ಲಿ ಸರಕಾರಿ ಅಧಿಕಾರಿ. ಅಮ್ಮನಿಗೆ ಬೆಂಗಳೂರಿನಲ್ಲಿ ಸರಕಾರಿ ಕೆಲಸ ಎಂದು ತಿಳಿದದ್ದು ಆಗಲೇ.

ಅಂತೂ ಮನು ಅದು ಇದು ಮಾತನಾಡುತ್ತ ಇನ್ನೊಬ್ಬ ಪುಟ್ಟ ತಮ್ಮನಾಗೇಬಿಟ್ಟ ಒಂದು ತಾಸಿನೊಳಗೆ. ಊಟ ಮಾಡುತ್ತೀಯಾ ಎಂದೆ. ಹೂಂ ಎಂದ. ಚಪಾತಿ ಪಲ್ಯ ಇಷ್ಟಪಟ್ಟು ತಿಂದ. ಹೀಗೇ ದಿನವೂ ಬರತೊಡಗಿದ. ಒಮ್ಮೊಮ್ಮೆ ಸಂಜೆ ಅಡುಗೆ ಮಾಡಲು ಬೇಜಾರಾದಾಗೆಲ್ಲ ತಮ್ಮಾ, ಅಲ್ಲೊಂದು ಸಣ್ಣ ಹೋಟೆಲಿನಿಂದ ಎರಡು ರೂಪಾಯಿ ಕೊಟ್ಟು ಮೂರು ಕಪ್ ಸಾಂಬಾರ್ ತರುತ್ತಿದ್ದ. ನಾ ಅನ್ನವಷ್ಟೇ ಮಾಡುತ್ತಿದ್ದೆ. ಒಮ್ಮೊಮ್ಮೆ ರಾತ್ರಿ ಹತ್ತುಗಂಟೆಗೆಲ್ಲ ಬಂದು ಅಕ್ಕ ನಂಗೆ ಊಟ ಹಾಕಿಕೊಡು ಎನ್ನುತ್ತಿದ್ದ ಮನು. ಯಾಕೊ ಇನ್ನೂ ಊಟ ಮಾಡಿಲ್ವಾ ಎಂದರೆ, ಉಪ್ಪಿಟ್ ಮಾಡ್ತಾರೆ ಅಮ್ಮ ಯಾವಾಗ್ಲೂ... ನಂಗಿಷ್ಟ ಆಗಲ್ಲ ಅಂದ. ಸರಿ ಎಂದು ಅವತ್ತು ಅನ್ನ ಸಾರು ಹಾಕಿಕೊಟ್ಟೆ ತಮ್ಮನಿಗೂ ಅವನಿಗೂ. ಊಟ ಮುಗಿಯಿತು ಅವರಿಬ್ಬರದು. ನನ್ನದೂ ಅರ್ಧ ಊಟವಾಗಿತ್ತು. ನಂಗಿನ್ನಷ್ಟು ಅನ್ನ ಸಾರು ಎಂದ. ಒಂದು ಕ್ಷಣ ಕುಸಿದೆ. ಬಾಳೆಹಣ್ಣು ತಿಂತೀಯಾ? ಅಂದೆ. ಬೇಡ ಅಂದ. ನಿನ್ ತಟ್ಟೆಲಿರೋದೇ ಹಾಕು ಅಂದ. ಅಯ್ಯೋ ಕಂದಾ... ಎಂದು ಒಮ್ಮೆ ತಲೆ ನೇವರಿಸಿದೆ. ಖುಷಿಯಿಂದ ಕಲಿಸಿದ ಅನ್ನ ಸಾರು ಉಂಡ. ಆ ಹೊತ್ತಿಗೆ ಅವನ ಅಮ್ಮನ ಕೂಗು. 'ಅಕ್ಕಾ ಪ್ಲೀಸ್ ಅಮ್ಮನಿಗೆ ಹೇಳ್ಬೇಡಿ ಉಪ್ಪಿಟ್ ಇಷ್ಟ ಇಲ್ಲ ಅಂದಿದ್ದು ಮತ್ತೆ ನಾ ಊಟ ಮಾಡಿದ್ದು...' ಪ್ರಾಮೀಸ್? ಎಂದು ಕೈಮೇಲೆ ಕೈಯಿಡಲು ಬಂದ. ಮತ್ತೊಮ್ಮೆ ಅವನಮ್ಮನ ಕೂಗು. ಗುಡ್ ನೈಟ್ ಹೇಳಿ ಓಡಬೇಕು, ಅವನದೊಂದು ಉಂಗುರ ಅಡುಗೆ ಮನೆಯಲ್ಲಿ ಉರುಳಿದ್ದು ಕಂಡಿತು. ಇರು ಇರು ನಿನ್ನ ಉಂಗುರ ತಗೋ ಎಂದು ಕೂಗಿದರೂ ಕೇಳದೆ, ಅದು ನನಗೆ ಬೇಡ ನೀವೇ ಇಟ್ಕೊಳ್ಳಿ ಎಂದು ಓಡಿದ ಕತ್ತಲೆಯಲ್ಲೇ.

ಬೆಳ್ಳಿಯ ನೀಲ ಹರಳಿನ ಪುಟಾಣಿ ಉಂಗುರವದು. ನಾಳೆ ಮರೀದೇ ಕೊಡಬೇಕು ಎಂದು ಎತ್ತಿಟ್ಟೆ. ಮಾರನೇ ರಾತ್ರಿ ಮತ್ತೆ ಬಂದ. ಮೊದಲು ಈ ಉಂಗುರ ಹಾಕಿಕೋ ಎಂದು ಅವನ ಹಿಂದೆ ಓಡಾಡುತ್ತಿದ್ದರೆ, ನಂಗ್ ಬೇಡ ನಮ್ಮನೇಲಿ ಬಹಳ ಇವೆ. ನಂಗಿಷ್ಟ ಇಲ್ಲ ಅವೆಲ್ಲಾ. ನೀವೇ ಇಟ್ಕೊಳ್ಳಿ ಎಂದು ಮನೆ ತುಂಬ ಗಾಡಿಯಾಟ ಆಡತೊಡಗಿದ. ಅಯ್ಯೋ ಈ ಹುಡುಗನಿಗೆ ಹೇಗೆ ಈ ಉಂಗುರ ವಾಪಸ್ ಕೊಡುವುದೆಂದು ಪ್ರತೀದಿನ ಸರ್ಕಸ್ ಮಾಡಿ ವಿಫಲಳಾಗುತ್ತಿದ್ದೆ. ಅವ ಮಾತ್ರ ಆಟವಾಡಿ ಊಟ ಮಾಡಿ ಗುಡ್ನೈಟ್ ಹೇಳಿ ಹೋಗುತ್ತಿದ್ದ. ಕೊನೆಗೊಂದು ದಿನ ಬೆಂಗಳೂರಿಗೆ ವಾಪಸ್ ಹೊರಟು ನಿಂತಾ ಅವನಮ್ಮನಿಗೆ ಉಂಗುರ ಕೊಟ್ಟು ನಿಟ್ಟುಸಿರು ಬಿಟ್ಟೆ.

***
ಮಗಳು ತನ್ನ ಬಟ್ಟಲು ಬಿಟ್ಟು ನನ್ನ ತಟ್ಟೆಯಲ್ಲಿರೊ ಅವಲಕ್ಕಿಯೇ ಬೇಕೆಂದು ಹಟ ಹಿಡಿದಾಗ ಮನು ನೆನಪಾದ. ಈಗವನು ಎಲ್ಲಿದ್ದಾನೊ? ಆ ಪುಟ್ಟ ಮುಖ, ಉದುರಿದ ಅವನ ಮೊದಲ ಹಾಲು ಹಲ್ಲು, ನಿಷ್ಕಳಂಕ ಮನಸ್ಸು ಬಹಳೇ ಕಾಡುತ್ತಿದೆ.

ಈವತ್ತು ಬೇಗನೇ ಊಟಕ್ಕೆ ಬಂದ ನನ್ನವ ಅಡುಗೆ ಮನೆ ಹೊಕ್ಕಿದ್ದಾನೆ.

ಮತ್ತೆ ಮತ್ತೆ ಲಟ್ಟಿಸಿಕೊಂಡು, ವಗ್ಗರಣೆ ಹಾಕಿಸಿಕೊಂಡು, ಬೇಯಿಸಿಕೊಂಡು ಬೆವರಿಳಿಸಿಕೊಳ್ಳುವ ನೆನಪುಗಳನ್ನು ಯಾವ ಚಿಮಣಿಯೂ ಹೀರಿಕೊಳ್ಳುವುದಿಲ್ಲವಲ್ಲ? ಆವಿಯಾಗುತ್ತ ಘನೀಕರಣಗೊಳ್ಳುತ್ತ ನಮ್ಮೊಳಗೆ ಉಳಿದುಬಿಡುವ ಅವಷ್ಟೇ ನಮ್ಮ ಆತ್ಮಕ್ಕಂಟಿದ ಕೂಸುಗಳು.