Saturday, June 20, 2015

ಶಿಕ್ಕಾ ಒತ್ತಿಸಿಕೊಂಡ ಪೊಟ್ಟಣ

ಆ ಅಂಬಾಸಿಡರ‍್ ಕಾರಿನೊಳಗೆ ಅಪ್ಪಾಜಿ, ಅವರ ತೊಡೆಯ ಮೇಲೆ ಹನ್ನೆರಡರ ನಾನು. ನನ್ನ ಒಂದು ಕೈ ಅವರ ಕೊರಳು, ಇನ್ನೊಂದು ಸೋರುವ ಕಣ್ಣುಮೂಗಿನ ಮೇಲೆ. ಜಗತ್ತಿನಲ್ಲಿ ತನಗೊಬ್ಬಳಿಗೇ ಇಂಥ ದೊಡ್ಡ ನೋವಾಗಿರುವುದು, ಇನ್ನೇನು ಎಲ್ಲವೂ ಮುಗಿದೇ ಹೋಯಿತೇನೋ ಎಂಬಂತೆ, ಮನೆಯಲ್ಲಿದ್ದ ಅಮ್ಮನನ್ನು ನೆನಪಿಸಿಕೊಳ್ಳುತ್ತ, "ಅಪ್ಪಾಜಿ, ನಾ ಈವತ್ ಪ್ರೋಗ್ರಾಂನೊಳಗ ಹಾಡೂದಿಲ್ಲ. ನಾ ಬಾತೆ ಹೆಂಗ್ ಹಾಕ್ಲಿ ಹೇಳ್ರಿ? ನಾವೀಗ ವಾಪಸ್ ಊರಿಗೆ ಹೋಗೂಣು" ಎಂದು ಗೋಳಾಡಿ, ಎದೆಗವಚಿಕೊಂಡು ಅಳತೊಡಗಿದ್ದೆ.

ಆಗಿದ್ದಿಷ್ಟೆ; ಹಂಪಿಯಲ್ಲಿ ಸಂಗೀತ ಕಾರ‍್ಯಕ್ರಮವಿತ್ತು. ದೊಡ್ಡವಾಡದಿಂದ ಹೊಸಪೇಟೆಯ ತನಕ ಬಸ್ಸಿನಲ್ಲಿ ಬಂದ ನಾವು, ಅಲ್ಲಿಂದ ಆಯೋಜಕರು ಕಳಿಸಿದ ಕಾರಿನಲ್ಲಿ ಹಂಪಿ ತಲುಪಬೇಕಿತ್ತು. ಗಾಡಿಬಿಡುವ ಮುನ್ನ ಡ್ರೈವರ‍್ ಧಡ್ ಎಂದು ಜೋರಾಗಿ ಕಾರಿನ ಬಾಗಿಲು ಹಾಕಿದ. ನಾನಿಲ್ಲಿ ಸತ್ತೇ ಹೋದೆ ಎಂಬಂತೆ ಕಿರುಚಿಕೊಂಡೆ. ಹೌಹಾರಿದ ಅವ ಬಾಗಿಲು ಹಿಂತೆಗೆದುಕೊಂಡ, ಬೆರಳುಗಳು ನೀಲಿಗುಲಾಬಿಗಟ್ಟಿದ್ದವು.

"ಅಲ್ಲಾ ತಂಗಿ, ಯುದ್ಧದೊಳಗ ಸೈನಿಕರು ಹೆಂಗೆಲ್ಲಾ ಹೋರಾಡ್ತಿರ‍್ತಾರ? ಇತ್ತ ಗುಂಡು ಬೀಳ್ತಾನ ಇರ‍್ತಾವ, ಅತ್ತ ಬಂದೂಕ್ ಹಿಡ್ಕೊಂಡ್ ಓಡ್ತಾನ ಇರ‍್ತಾರ. ರಕ್ತ ಸೋರಿಸ್ಕೊಂಡ್, ಎಂಥೆಂಥಾ ನೋವಿನೊಳಗೂ ಸಹಿತ ಅವರು ಹೆಂಗ್ ಹೋರಾಡ್ತಿರ‍್ತಾರ. ಯಾವತ್ತೂ ಧೈರ‍್ಯ ಕಳಕೋಬಾರದು. ನಿನ್ ಕೈಗೇನಾತು ಅಂತ ಇಷ್ಟ್ ಅಳ್ತಿ?" ಎಂದು ದಾರಿಯುದ್ದಕ್ಕೂ ಅಪ್ಪಾಜಿ.

"ಇಲ್ರಿ ಅಪ್ಜಿ ಕಳಕ್ ಅಂತ ಸೌಂಡ್ ಬಂತು. ಎಲಬು ಮುರ‍್ದಿದ್ರ?" ಗಟ್ಟಿ ಅಪ್ಪಿಕೊಂಡು ಮತ್ತಷ್ಟು ಅಳು. ಅಷ್ಟೊತ್ತಿಗೆ ಹಂಪಿ ಹತ್ತಿರವಾಗಿ, ವೇದಿಕೆಯೇರಿಯಾಯಿತು. ಅಪ್ಪಾಜಿ ಬಾತೆ ಹಾಕಿದರು, ಬೆರಳುಗಳು ಕಪ್ಪುಬಿಳಿಯ ಮೇಲಾಡಿದವು. ಜನರನ್ನು ನೋಡಿ ಉತ್ಸಾಹ ಬಂದು ದನಿ ಹೊಮ್ಮಿತು. ಏನಾಗಿತ್ತು ನನಗೆ ಎಂಬಂತೆ ನನ್ನನ್ನೇ ನಾ ಪ್ರಶ್ನಿಸಿಕೊಂಡು ಹಾರಾಡಿಕೊಂಡು ಊರಿಗೆ ಬಂದೆ.
***

ಗುರ‍್ಲಹೊಸೂರಿನಲ್ಲಿರುತ್ತಿದ್ದ (ಸವದತ್ತಿ) ಎಲ್ ಐಸಿ ಆಫೀಸರ‍್ ಡಿ ಪಿ ಜೋಶಿ (ರಾಜಗುರು ಅವರ ಶಿಷ್ಯರು) ನನಗೆ ಮರಾಠಿ ಅಭಂಗದ ಗುರುಗಳು. ಪಾಠಕ್ಕೆಂದು ಅವರಲ್ಲಿಗೆ ಹೊರಟಿದ್ದೆವು. ಸಾಮಾನ್ಯವಾಗಿ ಬಸ್ಸಿನಲ್ಲಿದ್ದಾಗೆಲ್ಲ ಅಪ್ಪಾಜಿಯ ಒಂದು ತೊಡೆ ಮೇಲೆ ತಮ್ಮ, ಇನ್ನೊಂದರ ಮೇಲೆ ನಾನು, ಪ್ರಯಾಣದಲ್ಲಿ ಮಲಗುವ ನಮ್ಮ ಖಾಯಂ ಜಾಗವದು. ಅಂದೂ ಹಾಗೇ ಮಲಗಲು ನೋಡಿದೆ. ಆದರೆ ನಡುಬೆರಳಿನ ತೊಗಲ ಕುಂಚು ಮಲಗಲು ಬಿಡಲಿಲ್ಲ. ಕಣ್ಣುಮುಚ್ಚಿಕೊಂಡು ಅದನ್ನು ಎಳೆದೆ, ಚುರುಗುಡತೊಡಗಿತು. ಎದ್ದು ಕುಳಿತೆ. ಏನನ್ನೋ ಓದುತ್ತ ನಮ್ಮನ್ನು ತಟ್ಟುತ್ತಿದ್ದ ಅಪ್ಪಾಜಿ, ಯಾಕ್ವಾ ಎಂದರು. ನನ್ಬೆರ‍್ಳು ಅಂದೆ. ಏನಾತು? ಎಂದರು. ಈ ಕುಂಚು ನೋಡ್ರಿಲ್ಲಿ,. ಹಿಂಗSS ಯಾವಾಗ್ಲೂ. ಅದನ್ನ ಕೀಳಕ್ ಹೋಗ್ತಿನಲ್ಲ. ಆಗೆಷ್ಟು ನೋವು?, ರಕ್ತ ಬರತ್ತೊಮ್ಮೊಮ್ಮೆ ಅಂದೆ. ಭಯಂಕರ ಈ ಸಮಸ್ಯೆಗೆ, ಎಂಥವರಿಂದಲೂ ಪರಿಹಾರ ಸಿಗಲು ಸಾಧ್ಯವೇ ಇಲ್ಲ ಎಂಬ ತೀರ‍್ಮಾನದಲ್ಲಿ ಅಪ್ಪಾಜಿಗೆ ನೋವಿನವರದಿ ಒಪ್ಪಿಸಿದ್ದೆ.

ನನ್ನ ವರದಿಗೆ ಅವರು ಹೂಂಗುಟ್ಟಿ ಮತ್ತೆ ಪುಸ್ತಕದಲ್ಲಿ ಮುಳುಗುತ್ತಾರೆ ಎಂದೂ ನಿರೀಕ್ಷಿಸಿದ್ದೆ. ಆದರೆ ಅವರು, "ಈಗ ಆ ಕುಂಚು ತಗದೀಯಲ್ಲಾ ಆಯ್ತು. ಸ್ವಲ್ಪ ಹೊತ್ತು ಚುರುಗುಡೋದು ಅದರ ಕೆಲಸ. ಆಗ್ಲಿ. ಹಿಂಗ ಕುಂಚು ಎದ್ದಾಗ ನಂಗ್ ತೋರ‍್ಸು. ಅದನ್ನ ಯಾವ ಡೈರೆಕ್ಷನ್ನೊಳಗ ಹೆಂಗ್ ಎಳೀಬೇಕು? ಅಂತ ತೋರಿಸ್ತೀನಿ. ಆಗ ರಕ್ತ ಬರೂದಿಲ್ಲ ಮತ್ ನೋವೂ ಆಗೂದಿಲ್ಲ" ಎಂದರು. ಡೈರೆಕ್ಷನ್ ಅಂದ್ರ? ಅಂದೆ. "ನೀ ಈಗ ನಿರ‍್ಜೀವ ಕುಂಚನ್ನಾ ಹಿಮ್ಮುಖ ಮಾಡಿ ಎಳದೀ ನೋಡು, ಆಗ ಸಜೀವ ಚರ‍್ಮಕ್ಕೂ ಅದು ಧಕ್ಕಿ ಆಗಿ ನಿಂಗ್ ನೋವು ಮತ್ತ ಉರಿ ಜಾಸ್ತಿ ಆಯ್ತು. ಆದ್ರ ನಿರ‍್ಜೀವ ಕುಂಚನ್ನಾ ಅದರ ಅಭಿಮುಖವಾಗಿ ಎಳದಿದ್ರ ಅಷ್ಟು ನೋವು ಆಗ್ತಿರಲಿಲ್ಲ" ಎಂದರು. ಮುಂದಿನ ಸಲ ಹಿಂಗಾದಾಗ ಹೇಳು ಅಂತ ಸಣ್ಣ ಮಗುವಿಗೆ ಹೇಳಿದ ಹಾಗೆ ಅವರು ಹೇಳಿದ್ದು ಕೇಳಿ, ಅಭಿಮುಖ ಎನ್ನುವ ಶಬ್ದವನ್ನ ಉಚ್ಚರಿಸುತ್ತಾ, ಆ ಶಬ್ದಕ್ಕೆ ಸೋದಾಹರಣ ರೂಪಕಗಳನ್ನು ಹುಡುಕುತ್ತಾ, ಗಟ್ಟಿ ಕಣ್ಮುಚ್ಚಿಕೊಂಡು ಭದ್ರಭಾವದಿಂದ ಕಣ್ಮುಚ್ಚಿದ್ದೆ. ಕಿತ್ತಿಟ್ಟುಕೊಂಡ ಎರಡು ಮಿಲಿಮೀಟರಿನ ಚರ‍್ಮಕುಂಚು ಬಲಗೈಯ್ಯೊಳಗೇ ಇತ್ತು ನಿದ್ದೆ ಆವರಿಸುವ ತನಕ.

***

ಆಗಷ್ಟೇ ಹರೆಯ ಆವರಿಸಿದ ದಿನಗಳು. ಒಂದೊಮ್ಮೆ ಬೆಳಗಿನ ನಾಲ್ಕರ ಹೊತ್ತಿಗೆ ಮೊದಲ ಬಾರಿ ಜೋರು ಕಿಬ್ಬೊಟ್ಟೆ ನೋವು. ಈ ಹೊತ್ತಿನಲ್ಲಿ ಯಾವ ಡಾಕ್ಟರನ್ನು  ಹುಡುಕುವುದು, ಮನೆಯಲ್ಲಿರುವ ಯಾವ ಮಾತ್ರೆ ಕೊಡಬಹುದು? ಎಂದೆಲ್ಲ ಯೋಚಿಸುತ್ತಿದ್ದರು ಅಪ್ಪಾಜಿ. ಬಹುಶಃ ಅವರಿಗೆ ಗಾಬರಿಯಾಗಿರಬೇಕು ನನ್ನ ಒದ್ದಾಟ ನೋಡಿ. ಏಕೆಂದರೆ, ಅವರು ಅಮ್ಮನಿಗೆ ಆಗ ಕೇಳಿದ್ದು ನೆನಪಿದೆ, "ಎಲ್ಲಾರ‍್ಗೂ ಇಷ್ಟ ನೋವಾಗತ್ತೇನು? ನಿನಗೂ ಹಿಂಗ ಆಗಿತ್ತೇನು ಈ ವಯಸ್ಸಿನ್ಯಾಗ?".  ಅದಕ್ಕೆ ಪ್ರತಿಯಾಗಿ ಅಮ್ಮ, "ಇರೋದನ ಮತ್ ನೋವು. ಕೆಲವರಿಗೆ ಕಮ್ಮಿ ಕೆಲವರಿಗೆ ಜಾಸ್ತಿ. ತಡ್ಕೊಬೇಕಷ್ಟ" ಎಂದಿದ್ದಳು.

ಫೋನ್ ಡೈರೆಕ್ಟರಿ ತೆಗೆದು ಏರಿಯಾನಲ್ಲಿ ಯಾರಾದ್ರೂ ಡಾಕ್ಟರ‍್? ಎಂದು ಹುಡುಕಾಡಿದರು.. ಅಂತೂ ಒಬ್ಬರ ನಂಬರ‍್ ಸಿಕ್ಕಿತು. ಆದರೆ ಅವರು ದನದ ಡಾಕ್ಟರು. ಅಯ್ಯೋ ದನದ ಡಾಕ್ಟರು ಬ್ಯಾಡಾ ಎಂದು ಅತ್ತೆ. ಹುಚ್ಚಿ, ಇರು ಕೇಳೂಣಂತ. ದನದ್ ಡಾಕ್ಟರ‍್ ಅಂದ್ರ ದನಕ್ ಕೊಡೂ ಗುಳಗೀನ ಕೊಡ್ತಾರೇನ? ಏನರ ಉಪಾಯ ಹೇಳ್ತಾರು. ಬೇಸಿಕ್ ನಾಲೇಡ್ಜ್ ಇರತ್ತಲ್ಲೇನು?" ಅಂದ್ರು. ದನಕ್ಕೆ ಚುಚ್ಚೋ ಸೂಜಿ ನೆನಪಾಗಿ, ಗ್ಲೌಸ್ ಮತ್ತು ಸೆಗಣಿ ಕಣ್ಣೆದುರಿಗೆ ಬಂದು, ಬ್ಯಾಡಾ ಅಂದ್ರ ಬ್ಯಾಡಾ ಅಂತ ಹೋ ಎಂದೆ. ಮತ್ ನೋವ್ ಹೆಂಗ್ ಕಡಿಮಿ ಆಗ್ಬೇಕ್ ತಂಗಿ ಎಂದರು ಅಪ್ಪಾಜಿ. ಒಮ್ಮೆ ಅಮ್ಮನ ತೊಡೆ ಮೇಲೆ ತಲೆ ಇಡುವುದು, ನೋವು ಜೋರಾಗುತ್ತಿದ್ದಂತೆ ಮತ್ತೆ ಹೊರಳಾಡಿ ಅಪ್ಪಾಜಿ ತೊಡೆ ಮೇಲೆ ಮಲಗುವುದು. ಮೂರು ತಾಸುಗಳ ಬಳಿಕ ನೋವು  ಕರಗಿ ನಿದ್ದೆ ಆವರಿಸಿತ್ತಾದರೂ, ನಿಜಕ್ಕೂ ಅವತ್ತು ಅಪ್ಪಾಜಿ ಮೊದಲ ಬಾರಿ ಗಾಬರಿಗೊಂಡಿದ್ದರು.

***

ಇಷ್ಟುದ್ದ ಬೆಳೆದರೂ ಮೂಗುತಿ ಚುಚ್ಚಿಕೊಂಡಿಲ್ಲವೆಂದು ಸಂಬಂಧಿಕರೆಲ್ಲರೂ ಸಿಕ್ಕಾಗೆಲ್ಲಾ ಚುಚ್ಚತೊಡಗಿದ್ದರು. ಅಮ್ಮ ಚುಚ್ಚಿದ್ದನ್ನು ನೆನಪಿಸುತ್ತಿದ್ದಳಷ್ಟೆ. ಅಯ್ಯೋ ನಂಗದೆಲ್ಲ ಬ್ಯಾಡಾ, ಅದ್ಯಾರು ನೋವು ಮಾಡ್ಕೊತಾರು... ಎಂದು ಜಾರಿಕೊಳ್ಳುತ್ತಿದ್ದೆ. ಪಿಯು ಮುಗಿದ ರಜೆಯಲ್ಲಿ, ಒಮ್ಮೆ ತರಕಾರಿ ತರಲು ಮಾರುಕಟ್ಟೆಗೆಂದು ತಂಗಿ ನಾನು ಹೋಗಿದ್ದೆವು. ಮೂಗು ಚುಚ್ಚಿಸಿಕೊಂಡು ಎಲ್ಲರಿಗೂ ಸರ‍್ಪ್ರೈಝ್ ಕೊಟ್ಟರೆ ಹೇಗೆ ಅಕ್ಕಾ? ಎಂದು ತಂಗಿ ಭಯಂಕರ ಉಪಾಯ ಉಸುರಿ ಪುಳಕಿತಗೊಂಡಿದ್ದಳು. ಹೌದಲ್ಲ ಎಂದು ಜವಾರಿ ಸಾಸಿವೆ ಕಾಳಿನಷ್ಟು ಬಂಗಾರದ ಮೂಗುತಿಯನ್ನು ಐವತ್ತೈದು ರೂಪಾಯಿಗೆ ಚುಚ್ಚಿಸಿಕೊಂಡು, ದೊಡ್ಡ ಉಮೇದಿನಲ್ಲಿ ವಾಪಸ್ ಹೊರಟೆ. ಆಗಾಗ ನನ್ನ ಮೂಗು ಮತ್ತು ಮೂಗುತಿಯನ್ನು ಹೊಗಳುತ್ತ ತಂಗಿ ನಡೆಯುತ್ತಿದ್ದಿಲ್ಲ ಜಿಗಿಯುತ್ತಿದ್ದಳು.

ಎದುರಿಗೆ ಅಪ್ಪಾಜಿ ಪ್ರತ್ಯಕ್ಷ! ಅಪ್ಜಿ ಎಂದು ಮೂಗಿನಕಡೆ ಕೈ ತೋರಿಸಿದೆ. "ಬುದ್ಧಿಗಿದ್ದಿ ಏನರ ಸ್ವಲ್ಪರ? ಕಿತ್ತೊಗಿತೀಯೋ ನಾನೇ ತೆಗೀಲೋ?" ಅಯ್ಯಯ್ಯ ಇದೇನಿದು ಉಲ್ಟಾ ಕಾರ‍್ಯಕ್ರಮ ಅದೂ ನಡೂ ರಸ್ತೆಯೊಳಗ... ಎಂದು ಕಂಗಾಲಾದೆ. ಮನೆಗೆ ಬಂದರೆ ಶುರು... ಯಾರು ಹಿರೇತನ ಮಾಡು ಅಂದ್ರ ನಿಮಗ? ತಂಗಿ ಮುಖ ನೋಡಿದೆ. ಹೇಳೋವ್ರು ಕೇಳೋವ್ರು ಇಲ್ಲ ನಿಮಗ? ತಂಗಿ ಕಡೆ ಕಣ್ ತಿರುಗಿಸಿದೆ. ಕನ್ನಡ್ಯಾಗ ನೋಡ್ಕೊ, ಆ ಮಂಗ್ಯಾನಂಥವ ಎಷ್ಟ್ ಮ್ಯಾಲ ಚುಚ್ಯಾನಂತ? ತಂಗಿ ಕಡೆ ಗೋಣು ತಿರುಗಿಸಿದೆ. ತಗದ ಒಗೀತಿಯಿಲ್ಲೋ ಅದನ್ನ, ಮೂಗ್ ನೋಡು ಎಷ್ಟ್ ಅಸಹ್ಯ ಆತೀಗ" ತಂಗಿ ಕಡೆ ತಿರುಗಿ ದುರುಗುಟ್ಟುತ್ತ ನಿಂತುಬಿಟ್ಟೆ. ನನ್ನನ್ನೊಮ್ಮೆ ಅಮ್ಮನನ್ನೊಮ್ಮೆ ನೋಡುತ್ತಿದ್ದ ಆಕೆ ಮುಖದಲ್ಲಿ ಒಂದು ಕಪಾಳದ ತುಂಬ ಭಯ. ಇನ್ನೊಂದು ಕಪಾಳದ ಗುಳಿಯೊಳಗೆ ನಗು ಲಗಾಟಿ ಹೊಡೆದು ಹೊರಳಾಡುತ್ತಿತ್ತು.

ಅಂದಹಾಗೆ ಚುಚ್ಚಿದ್ದು ನರದ ಮೇಲಾಗಿತ್ತಲ್ಲ, ಅದು ನೋವಾಗಿ, ಜೋಳದ ಗಾತ್ರದಷ್ಟು ಹಳದಿ ಗಂಟಾಗಿ ಎರಡು ತಿಂಗಳ ತನಕ ಕೆನ್ನೆ ಮೂಗು ಊದಿ, ಜ್ವರ ಬಂದು, ಜಪೋ ನಾರಾಯಣ ತಪೋ ಪರ‍್ಯಾಣಾ ಅಂತಾಗಿ, ಕೊನೆಗೊಂದು ದಿನ ತೂತು ದೊಡ್ಡದಾಗಿ ಸುತ್ತಿದ ಮೂಗುತಿ ಮೂಗಿಳಿದು ನೇರ ಕೈಗೆ! ಬಿಡು ಮುಚ್ಚಿದ್ರ ಮುಚ್ಲಿ ತೂತು. ಧಿಮಾಕ್ ಮಾಡಿ ಚುಚ್ಚಿಸ್ಕೊಂಡಿ ಎಂದು ಕಣ್ಣು ದೊಡ್ಡದು ಮಾಡುತ್ತಿದ್ದರು ಮನೆಯಲ್ಲಿ. "ಇನ್ನೇನ್ ಮಾಡೂದು? ಬೇರೆ ಮೂಗಬೊಟ್ಟು ಹಾಕ್ಸಿಬಿಡ್ರಿ ಆಗಿದ್ದು ಆಗ್ಹೋಯ್ತು" ಅಂತ ತಾಯಿ ಕೌಸಲ್ಯಳ ಮಂಗಳಪದದ ಇರಾದೆ ಇಷ್ಟೆ; ಏನಾದರೂ ಆಗಲಿ ಮಗಳ ಮೂಗಿಗೊಂದು ಮೂಗುತಿಯಿರಲಿ. ಆದರೆ ಮೂಗುತಿಬರಹ ಎಂದರೆ ಸಾಮಾನ್ಯವಾ? ಆಗಾಗ ಮಾತು ಮಾತು ತಾಕಿ ಬೆಂಕಿಯಿಲ್ಲದೆ ನಡುಮನೆ ಹೊತ್ತಿ ಉರಿದು, ಬೂದಿಹಾರದೆಯೂ ಕರಕಲು ವಾಸನೆ ಮನೆಯನ್ನಾವರಿಸಿ, ಆಗೆಲ್ಲಾ ತಂಗಿಯನ್ನು ಕಣ್ಣಲ್ಲೇ ಸುಡುತ್ತಿದ್ದೆ. ತಮ್ಮ ಅಗ್ನಿಶಾಮಕ ವಾಹನದ ಘಂಟೆಯಲ್ಲಿ ಸದ್ದು  ಮಾಡುತ್ತ ಓಡಾಡುತ್ತಿದ್ದ. ನಾನೊಳ್ಳೆ ಸುಟ್ಟು ಹೋದ ಹಳೇ ಬಿಲ್ಡಿಂಗಿನ ಗೋಡೆ ಮೇಲೆ ನೇತಾಕಿದ ಫೋಟೋ ಫ್ರೇಮಿನೊಳಗಿನ ೧೯೬೫ರ ಮಾಡೆಲ್ಲು ಮುದುಕಿಯಂತೆ ನಿಲ್ಲುತ್ತಿದ್ದೆ.

ಕೊನೆಗೊಂದು ದಿನ ಬೆಳಗಾವಿ ಪೋತ್ದಾರ‍್ ಅಂಗಡಿಯಲ್ಲಿ ನನ್ನ ತಿಂಗಳ ಹಳೇ ತೂತಿಗೆ ಹೊಸ ಹರಳಿನ ಮೂಗುತಿಯ ಮುಹೂರ‍್ತವಾಯಿತು. ಆದರೆ ಪುಣ್ಯಾತ್ಮ ಅದ್ಯಾರ ಮೇಲಿನ ಸಿಟ್ಟನ್ನು ಪಿರಕಿ ತಿರುಗಿಸುವಾಗ ಆವಾಹಿಸಿಕೊಂಡಿದ್ದನೋ, ಅದು ಬಿಗಿಗೊಂಡು ಮತ್ತಷ್ಟು ನೋವಾಗಿ ಚಿಟಿಚಿಟಿಚಿಟಗುಟ್ಟಿ, ಪಕ್ಕದಲ್ಲೇ ಜೋಳದ ಕಾಳಿನ ಕೀವುಗುಳ್ಳೆಯನ್ನು ಮೊಳಕೆಯೊಡೆಸಿಬಿಟ್ಟಿತ್ತು. ದಿನೇ ದಿನೇ ಅದು ಗಾತ್ರ ಹಿಗ್ಗಿಸಿಕೊಂಡು ಹೊಂಬಣ್ಣಕ್ಕೆ ತಿರುಗಿ ಮಿರುಗಿ, ಹರಳಿನ ಮೂಗುತಿಗೇ ಸವಾಲು ಹಾಕತೊಡಗಿದಾಗ, ಒಂದು ದಿನ ರಾತ್ರಿ, "ತಂಗಿ ಬಾ ಇಲ್ಲೆ" ಎಂದರು ಅಪ್ಪಾಜಿ. ಏನ್ರಿ ಅಪ್ಜಿ ಅಂದೆ. ಕೈಯಲ್ಲಿ ಲೋಹ ಕತ್ತರಿಸುವ ಪಕ್ಕಡ್ ಇತ್ತು. ಅಯ್ಯೋ  ಇದ್ಯಾಕ್ರಿ ಅಂದೆ. ಹತ್ತಿ ತಗೊಂಬಾ ಎಂದರು. ಎದಕ್ರಿ ಅನ್ಕೊಂಡು ತಂದೆ. "ಈಗ ಮೂಗ್ಬಟ್ ಕಟ್ ಮಾಡ್ತೀನಿ. ಆದ್ರ ಅದರ ಬಾಜೂ ಇರೂ ಕೀವಗುಳ್ಳಿನ್ನಾ ನೀನ ಹತ್ತಿಯಿಂದ ಚೂಟ್ಕೊಂಡು, ಸ್ವಲ್ಪನೂ ಚರ‍್ಮ ಉಳಸಲಾರದ ಕಿತ್ಕೊಬೇಕು" ಎಂದರು. ಆಂ? ನಾ ವಲ್ಯಾ ಎಂದು ಮನೆತುಂಬಾ ಓಡಾಡತೊಡಗಿದೆ. "ಇಷ್ಟು ಮಾಡದೇ ಇದ್ರೆ, ಪರ‍್ಮನೆಂಟ್ ಆಗಿ ಆ ಗುಳ್ಳಿ ಗಂಟಾಗಿ ಅಸಹ್ಯ ಕಾಣತ್ ನೋಡು. ಆಮೇಲೆ ಡಾಕ್ಟರ‍್ ಆಪರೇಷನ್ ಮಾಡ್ತಾರ" ಎಂದರು. ಆಂ? ಆಪರೇಷನ್? ಅನೆಸ್ತೇಷಿಯಾ ಕೊಟ್ಟಾ? ಹಂಗಂದ್ರ ನಾ ಒಲ್ಯಾ. ಒಂದ ಮಾತ... ಮೂಗುತಿ ಕಟ್. ರಕ್ತ ಬಳಬಳ, ತೂತಿಂದ ಉಸರ‍್ ಸರ‍್ಸರ‍್, ಕಿಟ್ಕಿಟಾರ‍್ ಕಿರ‍್.. "ನಿಂತ್ಯಲ್ಲ ಹತ್ತಿ ತುಗೋ ಲಗೂ. ಆ ಗುಳ್ಳಿ ಒಡೀತ್ ನೋಡು, ಜೊಳ್ಳು ಚರ‍್ಮಕ್ಕೆ ಉಗುರು ತಾಗಲಾರದಂಗ, ಹತ್ತಿಯಿಂದ ಅದನ್ನ ಕಿತ್ಕೊಂಬಿಡು" ಎಂದರು. ಆಪರೇಷನ್ ಸೆಲ್ಫೀ ಸಕ್ಸೆಸ್!

***

ಈಗ ಊರಲ್ಲಿ ಅಪ್ಪಾಜಿಗೆ ಅಮ್ಮ. ಅಮ್ಮನಿಗೆ ಅಪ್ಪಾಜಿ. ಹಂಗಾಯ್ತು ಹಿಂಗಾಯ್ತು ಎಂದು ಆಗಾಗ ನಾನು ಅಮ್ಮ ಪರಸ್ಪರ ನೋವುಗಳನ್ನು ನೀವಿಕೊಳ್ಳುತ್ತಿರುತ್ತೇವೆ. ಮಾತ್ಮಾತಲ್ಲೇ ಹಾಯೆನಿಸಿಕೊಂಡು, ಅಂದಿನ ’ದವಾಖಾನೆ’ ಬಂದ್ ಮಾಡಿ, ನಾವು ಮತ್ತೆ ನಮ್ಮನಮ್ಮ ಊರುಗಳಲ್ಲಿ, ನಾವು ಕಟ್ಟಿಕೊಂಡ ಕೋಟೆಗಳಲ್ಲಿ. ಅದಕ್ಕೆ ಜಡಿದುಕೊಂಡ ಬೀಗ ಮತ್ತು ಆಗಾಗ ಕಳೆದುಕೊಳ್ಳುವ ಅದರ ಕೀಲಿ ಕೈನ ಹುಡುಕಾಟದೊಳಗೆ. ಹಿಂದೊಮ್ಮೆ ಮಧ್ಯರಾತ್ರಿ ಅಮ್ಮನಿಗೆ ಕಾಲುನೋವು ಬಂದು, ಮೈಯೆಲ್ಲ ಬೆವರಿ, ಮೇಲಿನ ಉಸಿರು ಮೇಲಾದಾಗ, ಇಬ್ಬರೂ ಕುಳಿತು ಅತ್ತುಬಿಟ್ಟಿದ್ದರಂತೆ. ಇದೆಲ್ಲವನ್ನೂ ಅವರು ನಮಗೆ ಹೇಳಿದ್ದು ತಿಂಗಳಿನ ನಂತರ! ಅಮ್ಮ ಸ್ವಲ್ಪಾದರೂ ನೋವಿನಂಗಡಿ ತೆರೆದಾಳು. ಆದರೆ ಅಪ್ಪಾಜಿ? "ಇರೂವನ ತಂಗೀ" ಇಳಿವ ಧ್ವನಿಯನ್ನು ಏರಿಸುವ ಪ್ರಯತ್ನ ಮಾಡುತ್ತಲೇ "ನನಗೇನಾಗಿಲ್ಲವಲ್ಲ" ಎಂಬಂತೆ ಮೌನದಂಗಡಿಯ ವ್ಯಾಪಾರಕ್ಕಿಳಿದುಬಿಡುವ ಖಯಾಲಿ ಶುರುವಾಗಿ ನಾಲ್ಕು ವರ‍್ಷಗಳಾದವು.

ಯಾಕೆಲ್ಲ ಹೀಗೆ? ಎಂದು ಯೋಚಿಸುತ್ತಿರುವಾಗೆಲ್ಲ ಮೇಲಿನ ಘಟನೆಗಳಂತೆ ಮತ್ತಷ್ಟು ನೆನಪುಗಳು ಬಗಲಿಗೆ ಜೋತುಬೀಳತೊಡಗುತ್ತವೆ. ಕ್ರಮೇಣ ನನ್ನ ಮತ್ತು ಅಪ್ಪಾಜಿ ಮಧ್ಯೆ ಇರುತ್ತಿದ್ದ ಮಾತಿನ ಪುಸ್ತಕ, ಪುಸ್ತಕದಿಂದ ಪುಟ, ಪುಟದಿಂದ ಪ್ಯಾರಾ, ಪ್ಯಾರಾದಿಂದ ಸಾಲು, ಸಾಲಿನಿಂದ ಪದಕ್ಕೆ ಬಂದು ನಿಂತಿದ್ದು ಹೇಗೆ? ಎಂದು ಯೋಚಿಸುತ್ತಿರುವಾಗ, ಶಿಕ್ಕಾ ಒತ್ತಿ ಪೊಟ್ಟಣ ಕಟ್ಟಿಟ್ಟ ಅಮ್ಮ ಮತ್ತು ಮಗಳ ಕಡೆ ಗಮನ ಹೊರಳುತ್ತದೆ. ಬಿಡಿಸಿ ನೋಡಿದರೆ ಉತ್ತರ ಸಿಗಬಹುದಲ್ಲಾ ಎಂಬ ಆಲೋಚನೆ ಬರುತ್ತದೆಯಾದರೂ... ಅರೆ, ಶಿಕ್ಕಾ ಒತ್ತಿದ ಪೊಟ್ಟಣಗಳೊಳಗಿರುವುದು ಎಂದಿಗೂ ಪ್ರಶ್ನೆಗಳ ಪದರಗಳೇ? ಹಿಂಡುಗಟ್ಟಲೆ ಪುಟಾಣಿಪ್ರಶ್ನಾರ‍್ಥಕ ಚಿಹ್ನೆಗಳು ಮೈಮೇಲೆಲ್ಲ ಓಡಾಡಿದಂತಾಗುತ್ತದೆ.

ಇದೆಲ್ಲವನ್ನೂ ನೋಡಿಯೂ ನೋಡದಂತೆ, ಗೋಡೆಮೇಲೆ ಬೆನ್ನಂಟಿಸಿಕೊಂಡ ಗಡಿಯಾರದ ಮುಳ್ಳಿಗೆ ಬೆಳಗಿನ  ೭ "ಬಾ ಹತ್ತರ" ಎನ್ನಲು ಣಕಣಕಿಸುತ್ತ ಹವಣಿಸುತ್ತಿದೆ. ಬೆಳತನಕ ನಾನಿಲ್ಲಿ ಹೀಗೆ ನನ್ನ ನಾ ತಂತಿಯೊಳಗೆ ತಂತುಗಳೊಳಗೆ ಬಂಧಿಸಿಕೊಂಡು ಕುಳಿತಿದ್ದು, ಹೊದಿಕೆಗೂ ಅರ‍್ಥವಾಗಿದೆ. ಹಾಗೇ ಮಡಿಕೆಯೊಳಗೇ ಮೌನವಾಗಿದೆ ಅದೂ.

ಅರೆ ಮಗಳು ಎದ್ದೇ ಬಿಟ್ಟಳು. ಬಚ್ಚಲುಮನೆಯಲ್ಲಿ ಅಪ್ಪ ಮಗಳ ನೀರಾಟದ ಸದ್ದು. "ಅಮ್ಮಾ ಹಾ ಆತ್. ಅಮ್ಮಾ ಹಾ ಆತ್. ಅಮ್ಮಾ... (ಅಮ್ಮಾ ನೋವಾಯಿತು)" ತನ್ನ ಮೈಮೇಲೋ ನನ್ನ ಮೈಮೇಲೋ, ಎಂದೋ ಆದ ಗೀರಿನ ಕಲೆಯನ್ನೋ, ಗುಳ್ಳೆಯ ಕಲೆಯನ್ನೋ ತೋರಿಸುತ್ತ, ಕೊರಳು ಬಳಸಲು, ಬಳಸಿ ಮುದ್ದು ಮಾಡಿಸಿಕೊಳ್ಳಲು/ಮಾಡಲು ಮಗಳು ಇನ್ನೇನು ತೊಡೆಯೇರತೊಡಗುತ್ತಾಳೆ. 
ತಂತಾನೇ ನನ್ನ ತಂತಿಗಳು ಶ್ರುತಿಗೊಳ್ಳತೊಡಗುತ್ತವೆ. ತಂತುಗಳು ತಾನ ಹೆಣೆಯತೊಡಗುತ್ತವೆ;
ಶಿಕ್ಕಾ ಒತ್ತಿಸಿಕೊಂಡ ಪೊಟ್ಟಣ ಹಾಗೇ ಇರಲಿ.

5 comments:

sunaath said...

Happy Father's dayಗೆ ಮನಮಿಡಿಯುವ ನೆನಪಿನ ಕಾಣಿಕೆ!

ಆಲಾಪಿನಿ said...

thanks uncle

ನಾಗೇಶ ಹೆಗಡೆ said...

ಮುದ್ದಾದ ಬರಹ. ಅಮ್ಮನ ಗುಳಿ ಕೆನ್ನೆಯೊಳಗೆ ನಗು ಲಗಾಟಿ ಹೊಡದು ಹೊರಳಾಡಿದ ಹಾಗೆ ನಿಮ್ಮ ಈ ಪ್ರಬಂಧದಲ್ಲಿ ಕಾವ್ಯಮಣಿಗಳೂ ಸಾಲುಗಳೂ ಲಗಾಟಿ ಹೊಡೀತಾ ಇವೆ.

ಆಲಾಪಿನಿ said...

Thank u sir :)

ಆಲಾಪಿನಿ said...
This comment has been removed by the author.