Tuesday, June 23, 2015

ನನ್ನ ಬಲಗೈ ಮಣಿಕಟ್ಟಿನಲ್ಲಿ ಅವಳು...

ಡೈಪರ‍್ ಬೇಕಿತ್ತು ಎಂದೆ. ಕುರ‍್ಚಿಯನ್ನಾವರಿಸಿದ್ದ ಆಕೆ ತಲೆಯೆತ್ತಿಯೂ ನೋಡಲಿಲ್ಲ. ಆಗ ಮಗಳು, ಆಂಟೀ ಬೈಪರ‍್ ಬೈಪರ‍್ ಎಂದು ಒಂದೇ ಸಮ ಶುರು ಮಾಡಿದಳು. ಆಗಲೂ ಆಕೆ ಪ್ರತಿಕ್ರಿಯಿಸಲಿಲ್ಲ. ಛೆ ಯಾಕೆ ಕೇಳಿಯೂ ಕೇಳದವರ ಹಾಗೆ ವರ‍್ತಿಸುತ್ತಿದ್ದಾಳೆ ಈಕೆ ಎಂದುಕೊಳ್ಳುತ್ತಾ, ಆ ಕಡೆ ಕೌಂಟರ‍್ನಲ್ಲಿದ್ದ ಸುಮಾರು ನಲ್ವತ್ತೈದರ ಹೆಣ್ಣುಮಗಳನ್ನುದ್ದೇಶಿಸಿ ಎಕ್ಸ್ ಕ್ಯೂಸ್ಮಿ ಎಂದು ಕೈ ಮಾಡಿದೆ. ಆಗ ಒಮ್ಮೆಲೆ ನನ್ನ ಮುಂಗೈಯನ್ನು ಗಟ್ಟಿಯಾಗಿ ಹಿಡಿದುಬಿಟ್ಟಳು ಕುರ‍್ಚಿಯನ್ನಾವರಿಸಿದ್ದ ಆಕೆ. ಅರೆ, ಸುಮ್ಮನೆ ಈ ಹುಡುಗಿ ಮೇಲೆ ಸಿಟ್ಟು ಮಾಡಿಕೊಂಡೆನಲ್ಲ ಕೆಲ ಕ್ಷಣ... ನನ್ನ ಕೈ ಹಿಡಿದುಕೊಳ್ಳಲು ಅವಳಿಗೆ ಅನುಕೂಲವಾಗುವಂತೆ ಮತ್ತಷ್ಟು ಬಾಗಿದೆ. ನಾನವಳಿಗೆ ಕೈಕುಲುಕುತ್ತಿದ್ದೇನೆ ಎಂದುಕೊಂಡ ಮಗಳು, ಆಂಟೀ ಆಂಟೀ ಎಂದು ತಾನೂ ಬಾಗಿದಳು. ಅಂಗಡಿಯಾಕೆ ನಮ್ಮ ಬಳಿ ಬರುತ್ತಿದ್ದಂತೆ, "ಅಮ್ಮಾ ಇಲ್ನೋಡು ಆಂಟೀ ಆಂಟೀ" ಎಂದು ಮೂರ‍್ನಾಲ್ಕು ಸೆಕೆಂಡಿಗೊಮ್ಮೆ ಕಣ್ಣು ಕಿವುಚುತ್ತ ಖುಷಿಪಡತೊಡಗಿದಳು ಕುರ‍್ಚಿಯನ್ನಾವರಿಸಿಕೊಂಡಾಕೆ. 

ಓಹ್ ಇವರು ಅಮ್ಮ ಮಗಳು ಹಾಗಿದ್ದರೆ... ಎಂದುಕೊಳ್ಳುತ್ತ, ನನ್ನ ಮಗಳನ್ನು ಕೌಂಟರಿನ ಮೇಲೆ ಕೂಡಿಸಿದೆ. ಕ್ಷಮಿಸಿ ಅವಳು ಹಾಗೇ ಎಂದು ಸಂಕೋಚಪಟ್ಟುಕೊಂಡು ನನ್ನ ಕೈ ಬಿಡಿಸಲು ನೋಡಿದರು ಆಕೆಯ ಅಮ್ಮ. ಗಿರಾಕಿಗಳೂ ಜಾಸ್ತಿಯೇ ಇದ್ದಿದ್ದರಿಂದ ಮತ್ತು ನನಗೂ ಅಂಥಾ ಅವಸರವೇನೂ ಇರದ ಕಾರಣ, ಪರ‍್ವಾಗಿಲ್ಲ ನೀವು ಆ ಕಡೆ ಗಿರಾಕಿಗಳನ್ನು ನೋಡಿಕೊಳ್ಳಿ. ನಾ ಸ್ವಲ್ಪ ಹೊತ್ತು ಕಾಯುತ್ತೇನೆ ಎಂದೆ. ಕಣ್ಣಲ್ಲೇ ಕೃತಜ್ಞತೆ ಹೇಳಿ ಅವರು ಆ ಕಡೆ ಕೌಂಟರಿಗೆ ತೆರಳಿದರು. ತಕ್ಕಮಟ್ಟಿಗೆ ದೊಡ್ಡದಾದ ಆ ಔಷಧ ಅಂಗಡಿಗೆ ಆ ಹೊತ್ತಿಗೆ ಐದಾರು ಗಿರಾಕಿಗಳಿದ್ದರು. ನನ್ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡ ಆ ಹುಡುಗಿಯ ಮುಖವನ್ನು ದಿಟ್ಟಿಸಿದೆ, ಅರೆ ಇದಿನ್ನೂ ಸಣ್ಣ ಕೂಸು. ಕುರ‍್ಚಿಯನ್ನಾವರಿಸಿದ್ದರಿಂದ ದೊಡ್ಡ ಹೆಣ್ಣಮಗಳ ಹಾಗೆ ಕಾಣ್ತಿದೆಯಷ್ಟೆ ಎಂದುಕೊಂಡು, ನಿನ್ನ ಹೆಸರೇನು ಪುಟ್ಟ ಎಂದೆ. ನಾ ಆಗ್ಲೇ ನೂಡಲ್ಸ್ ತಿಂದೆ ಗೊತ್ತಾ ಆಂಟಿ ಎಂದಳು. ಓಹ್ ಹೌದಾ? ಗುಡ್‌. ಜಾಣ ಪುಟ್ಟಿ ನೀನು ಅಂದೆ. ಶಾಲೆಗೆ ಹೋಗ್ತೀಯಾ ಅಂದೆ. ಇಲ್ಲ ಅಮ್ಮ ಬೈಯ್ತಾರೆ. ಹೊಡೀತಾರೆ ಎಂದು ಸೊಂಡಿ ಕೆಳಗಿಳಿಸಿ ಕೆಳಮುಖವಾದಳು. ಇಲ್ಲಇಲ್ಲ ಅದು ಆವತ್ಯಾವತ್ತೋ ಸುಮ್ಮನೆ ತಮಾಷೆಗೆ ಹೊಡೆದಿದ್ರು ಅಷ್ಟೆ. ಅದಾದಮೇಲೆ ಅದೆಷ್ಟು ಸಲ ನಿಂಗೆ ಮುದ್ದು ಮಾಡಿದ್ರು, ಹೊಸಾ ಡ್ರೆಸ್ ತಂದು ಕೊಟ್ರು. ಐಸ್ಕ್ರೀಮ್ ಕೊಡ್ಸಿದ್ರು. ಮತ್ತೆ ಆಗ್ಲೇ ನೂಡಲ್ಸ್ ಕೊಡ್ಸಿದ್ರು ಅಂದ್ಯಲ್ಲ... ಹೌದು ತಾನೆ? ಅಂದೆ. ನೂನೂನೂನೂಡಲ್ಸ್ ತಂದಿದ್ದು ಅಪ್ಪ ಎಂದು ಮುಖದ ಮೇಲೆ ಬೆಳದಿಂಗಳು ತಂದುಕೊಂಡಳು. 

ಈಗ ಹೇಳು ನಿನ್ನ ಶಾಲೆ ಎಲ್ಲಿದೆ ಅಂದೆ. ನಾಳೆ ಹೋಗ್ತೀನಿ. ನನ್ ಹತ್ರ ದೊಡ್ಡ ಬ್ಯಾಗ್ ಇದೆ ಅಂದ್ಲು. ಅರೆ ಹೌದಾ? ಛೆ ನನ್ ಹತ್ರ ಚಿಕ್ಕದಿದೆ ಕಣೆ. ನಿಮ್ ಅಮ್ಮಂಗೆ ಹೇಳಿ ನನಗೂ ದೊಡ್ಡ ಬ್ಯಾಗ್ ಕೊಡ್ಸು ಅಂದೆ. ಆಗಲೂ ನನ್ನ ಕೈ ಹಿಡಿದುಕೊಂಡೇ ಇದ್ದಳು. ಅಲ್ಲಿಗೆ ತಿಂಡಿಪೊಟ್ಟಣ ಹಿಡಿದು ಬಂದ ಸುಮಾರು ಐವತ್ತರ ಆಸುಪಾಸಿನವರು, "ಸಾರಿ ಮೇಡಮ್, ಸ್ವಲ್ಪ ಅವಳು ಹಾಗೇನೇ ಆಟಿಸ್ಟಿಕ್ ಚೈಲ್ಡ್" ಎಂದು ಕೈ ಬಿಡಿಸಲು ನೋಡಿದರು. ಆಕೆ ಬಿಡಲೇ ಇಲ್ಲ. ಪರ‍್ವಾಗಿಲ್ಲ ಸರ‍್, ಎಷ್ಟು ವಯಸ್ಸು ಎಂದೆ. ಹದಿನಾಲ್ಕು ಎಂದರು. ನಾಲ್ಕು ವರ‍್ಷದ ಬುದ್ಧಿ ಹತ್ತು ಪಟ್ಟು ಮೀರಿ ಬೆಳೆದ ದೇಹ... " ವರ‍್ಷವೂ ಆಕೆಗೆ ತುಂಬಿರಲಿಲ್ಲ. ಗಡ್ಡೆಯಂತಾಗಿ, ಅದನ್ನು ಆಪರೇಷನ್ ಮಾಡೋವಾಗ ಅನೆಸ್ತೇಷಿಯಾ ಹೆಚ್ಚೂಕಡಿಮೆಯಾಗಿ ಹೀಗಾಗಿದೆ. ಆಟಿಸ್ಟಿಕ್ ಅಂತಾರೆ ಡಾಕ್ಟರ‍್" ಎಂದರು ಆಕೆಯ ಅಪ್ಪ. ಇಲ್ಲ ಅವಳು ಜಾಣೆ ಮತ್ತೆ ಸ್ಪೆಷಲ್ ಚೈಲ್ಡ್ ಎಂದು ಆಕೆಯ ಗಲ್ಲ ಹಿಂಡಲು ನೋಡಿದೆ. ಆಕೆ ನನ್ನ ಕೈ ಬಿಡಲೇ ಇಲ್ಲ. ಏನ್ಮಾಡೋದು, ನಮ್ ಹಣೆಬರಹ. ಎಲ್ಲಾ ಮೇಡಮ್ಮೇ (ಗಿರಾಕಿಗಳೊಡನೆ ಬಿಝಿಯಾಗಿದ್ದ ಹೆಂಡತಿಯೆಡೆ ನೋಡುತ್ತ) ನೋಡ್ಕೊಳೋದು. ನಿಜಕ್ಕೂ ಅವರು ಗ್ರೇಟ್. ಅವರಿಲ್ಲದಿದ್ದರೆ ನಾ ಇಂದು ಏನಾಗಿರುತ್ತಿದ್ದೆನೋ ಎಂದು ಮುಖ ಸಣ್ಣ ಮಾಡಿಕೊಂಡರು. 

"ಸ್ವಲ್ಪ ವರ‍್ಷ ಸ್ಪೆಷಲ್ ಸ್ಕೂಲಿಗೆ ಸೇರಿಸಿದ್ವಿ ಆದ್ರೆ ಏನೂ ಪ್ರಯೋಜನವಾಗಲಿಲ್ಲ. ಖರ‍್ಚೂ ಜಾಸ್ತಿಯಾಗುತ್ತಿತ್ತು. ಸದ್ಯಕ್ಕೆ ಸುಮ್ಮನಾಗಿದ್ದೇವೆ. ಮಗ ಎಂಜಿನಿಯರ‍್. ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ. ಇನ್ನೊಂದೆರಡು ವರ‍್ಷಕ್ಕೆ ಬೆಂಗಳೂರಿಗೆ ನಾವೂ ಶಿಫ್ಟ್ ಆಗಿಬಿಡುತ್ತೇವೆ. ಆದರೆ ಮಗ ಬೇರೆ ಮನೆ ಮಾಡಿಕೊಂಡು ಆರಾಮಾಗಿರಲಿ, ನಾಳೆ ಬರುವ ಸೊಸೆಗೆ ನಮ್ಮ ಮಗಳು ಕಿರಿಕಿರಿ ಎನ್ನಿಸಬಾರದಲ್ಲ? ಏನು ಮಾಡೋದು, ಮಗಳಿಂದಾಗಿ ನಮ್ಮ ಆರ‍್ಥಿಕ ಪರಿಸ್ಥಿತಿಯೆಲ್ಲ ಏರುಪೇರಾಗಿಬಿಟ್ಟುತು. ಬೆಂಗಳೂರಿನಲ್ಲಿ ಒಳ್ಳೆಯ ಸ್ಪೆಷಲ್ ಸ್ಕೂಲಿಗೆ ಸೇರಿಸಿ, ಅದಕ್ಕೆ ಹತ್ತಿರವೇ ಸಣ್ಣದೊಂದು ಬಾಡಿಗೆ ಮನೆ ಮಾಡಿ ನಾನು ನನ್ನ ಹೆಂಡತಿ ಮಗಳನ್ನು ನೋಡಿಕೊಳ್ಳುತ್ತೇವೆ. ಜೀವನ ಸಾಗಲು ಹತ್ತರಿಂದ ಐದರವರೆಗಿನ ಸಣ್ಣ ಕೆಲಸವೊಂದನ್ನೂ ಹುಡುಕಿಕೊಳ್ಳುತ್ತೇನೆ ಎಂದರು. ಎಷ್ಟು ಮಾಡಿದರೂ ಏನೂ ಬೆಳವಣಿಗೆಯೇ ಇಲ್ಲ ಎಂದು ನೊಂದುಕೊಂಡರು. ಛೆ ಹಾಗೆಂದರೆ ಹೇಗೆ? ಎಂಥ ಮಕ್ಕಳೇ ಆಗಲಿ, ಅವು ನಮ್ಮ ಮಕ್ಕಳು. ಬೇರೆ ಮಕ್ಕಳಿಗೆ ಎಂದೂ ಹೋಲಿಸಬಾರದಲ್ಲ? ಅವರಲ್ಲಿ ಹಂತಹಂತವಾಗಿ ಕಾಣುವ ಬೆಳವಣಿಗೆಯನ್ನಷ್ಟೇ ಗಮನಿಸಬೇಕು ಮತ್ತು ಅದಕ್ಕೆ ಪೂರಕ/ಪ್ರಾಮಾಣಿಕ ಪ್ರಯತ್ನ ನಮ್ಮದಾಗಿರಬೇಕು. ಇದಕ್ಕಿಂತ ಹೆಚ್ಚಿಗೆ ನಿರೀಕ್ಷಿಸಲೇಬಾರದು, ಕ್ಷಮಿಸಿ ವಯಸ್ಸಿನಲ್ಲಿ ಅನುಭವದಲ್ಲಿ ನಿಮಗಿಂತ ಚಿಕ್ಕವಳು ಎಂದೆ. ಅರೆ ಮೇಡಮ್ ಹಾಗೇನಿಲ್ಲ. ನೀವು ಹೇಳಿದ್ದು ನಿಜ ಎಂದರು. ಸ್ವಲ್ಪ ಸಮಾಧಾನವೆನ್ನಿಸಿತೇನೋ. ನನ್ನ ಮಗಳನ್ನು ಮಾತನಾಡಿಸುತ್ತಿದ್ದಂತೆ, ಅವರ ಹೆಂಡತಿ ನಮ್ಮ ಬಳಿ ಬಂದು, ಯಾವ ಡೈಪರ‍್ ಏನು ಅಂತೆಲ್ಲ ನಗುಮುಖದಿಂದಲೇ ವಿಚಾರಿಸಿ ವ್ಯವಹಾರ ಮುಗಿಸಿ, ಇನ್ನೂ ನನ್ನ ಕೈ ಹಿಡಿದುಕೊಂಡೇ ಇದ್ದ ತಮ್ಮ ಮಗಳ ಕೈಬಿಡಿಸಲು ನೋಡಿದರು. ಆದರೆ ಆಕೆ ಅವರ ಕೈ ತಳ್ಳಿ ಮತ್ತೆ ತನ್ನ ಹಿಡಿತ ಬಿಗಿಗೊಳಿಸಿದಳು. ಅಪ್ಪ ತಂದ ತಿಂಡಿಯ ಆಸೆ ತೋರಿಸಿದರೂ ಪುಟ್ಟಿ ಜಪ್ಪಯ್ಯ ಎನ್ನಲಿಲ್ಲ.

ನನಗೆ ಸ್ಕೂಲಿಗೆ ಕರ‍್ಕೊಂಡು ಹೋಗ್ತೀರಾ ನಾಳೆಯಿಂದ ಎಂದು ಸೊಂಡಿ ಮುಂದೆ ಮಾಡಿ ಮುದ್ದಾಗಿ ಕೇಳಿದಳು ಆಕೆ. ಖಂಡಿತ ಪುಟ್ಟಾ. ನಾಳೆ ಆಟೊನಲ್ಲಿ ಬರ‍್ತೀನಿ. ನಾವಿಬ್ಬರೂ ಸ್ಕೂಲಿಗೆ ಹೋಗೋಣ. ನೀ ನಿನ್ನ ದೊಡ್ಡ ಬ್ಯಾಗ್ನೊಂದಿಗೆ ರೆಡಿಯಾಗಿರು ಅಂದೆ. ಅಮ್ಮ ಹೊಡೀತಾರೆ ಎಂದಳು. ಹೀಗೆ ಹೇಳುವಾಗ ಸದ್ಯ ಅಪ್ಪ ಅಮ್ಮ ಇಬ್ಬರೂ ಆ ಕೌಂಟರ‍್ ಕಡೆ ಹೋಗಿದ್ದರು. ಅವರು ಮಗಳ ಈ ಮಾತನ್ನು ಕೇಳಿಸಿಕೊಂಡಾರು ಎಂಬ ಆತಂಕದಿಂದಲೇ, ಮತ್ತೆ ಈ ಮಗು ಈ ವಾಕ್ಯವನ್ನು ಅವರೆದುರು ಪುನರಾವರ‍್ತಿಸದಿದ್ದರೆ ಸಾಕಪ್ಪಾ. ಹೆತ್ತ ಮನಸುಗಳಿಗೆ ಸಂಕಟವಾಗುತ್ತದೆ ಎಂದು ಮನಸ್ಸಿನೊಳಗೆ ಅಂದುಕೊಂಡೆ. ಇತ್ತ ನನ್ನ ಮಗಳು ಆ ಪುಟ್ಟಿಯನ್ನು ಆಂಟಿ ಆಂಟಿ ಎಂದೇ ಕೈಕುಲುಕಲು ಪ್ರಯತ್ನಿಸುತ್ತಿದ್ದಳು. ಆದರೆ ಆ ಪುಟ್ಟಿಯ ಲಕ್ಷ್ಯವೆಲ್ಲ ನನ್ನ ಕಣ್ಣೊಳಗೆ ಮತ್ತು ಕೈಬಿಗಿಹಿಡಿತದೊಳಗೆ. 

ಬೇಸರಿಸಿಕೊಳ್ಳಬೇಡಿ. ಇಂಥ ಮಕ್ಕಳ ಮತ್ತು ಅವರ ತಂದೆತಾಯಿಯ ಮನಸ್ಥಿತಿ, ಪರಿಸ್ಥಿತಿ ಎಲ್ಲವನ್ನೂ ನಾ ಹತ್ತಿರದಿಂದ ನೋಡಿದ್ದೇನೆ. ನನ್ನ ಸ್ನೇಹಿತೆಯ ಮಗಳು ಕೂಡ ನಿಮ್ಮ ಪುಟ್ಟಿಯಂತೆಯೇ. ಆದರೆ ಅವಳ ಮುಂದೆ ನಿಮ್ಮ ಪುಟ್ಟಿ ಎಷ್ಟೋ ಪಾಲು ವಾಸಿ. ಧೈರ‍್ಯ ಕಳೆದುಕೊಳ್ಳಬೇಡಿ. ಬೆಂಗಳೂರಿಗೆ ಬರುವ ಮೊದಲು ಒಂದು ಮಾತು ತಿಳಿಸಿ. ಕೆಲ ವಿಶೇಷ ಶಾಲೆ ಮತ್ತು ನನ್ನ ಸ್ನೇಹಿತರ ಕುಟುಂಬವನ್ನು ನಿಮಗೆ ಪರಿಚಯಿಸಿಕೊಡುತ್ತೇನೆ. ಸಮಾನ ಮನಸ್ಕರಿದ್ದಲ್ಲಿ ಸಮಸ್ಯೆಗಳು ಸಮಸ್ಯೆಗಳಾಗಿ ಕಾಣುವುದಿಲ್ಲ ಬದಲಿಗೆ, ಒಟ್ಟಾಗಿ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ನಡೆಯತೊಡಗುತ್ತವೆ. ಆಗ ಬದುಕಿನ ಬಗ್ಗೆ ನಿಮ್ಮ ದೃಷ್ಟಿಕೋನವೂ ಬದಲಾಗುತ್ತದೆ ಎಂದೆ. ಅಷ್ಟಕ್ಕೇ ಅವರು ಕೈ ಮುಗಿದುಬಿಡಬೇಕೆ? ಮನಸ್ಸು ಪಿಚ್ ಎನ್ನಿಸಿಬಿಟ್ಟಿತು ಆಕ್ಷಣ. ಪರಸ್ಪರ ಫೋನ್ ನಂಬರ‍್ ಬದಲಾಯಿಸಿಕೊಂಡೆವು. ನಿಮ್ಮ ಮನೆಯವರು ಏನು ಮಾಡಿಕೊಂಡಿದ್ದಾರೆ? ಅವರಿಗೊಂದು ನನ್ನ ನಮಸ್ಕಾರ ತಿಳಿಸಿಬಿಡಿ ದಯವಿಟ್ಟು ಎಂದರು. ಮಾತೇ ಹೊರಡಲಿಲ್ಲ. ಗುರ‍್ತು, ಪರಿಚಯ, ಹೋಗಲಿ ಕಾಣದ ನನ್ನವನಿಗೆ ಅವರು ನಮಸ್ಕಾರ ತಿಳಿಸು ಅಂದಿದ್ದು ಹೇಗೆ? ಎಲ್ಲವೂ ಅವರ ಪುಟ್ಟಿಯ ಬದುಕಿನ ಪಾಠಶಾಲೆ ಮತ್ತು ಫಲಿತಾಂಶ ಎಂದುಕೊಂಡೆ. ಡೈಪರಿನ ಹಣ ಕೊಡಲು ಮತ್ತು ಮಗಳನ್ನು ಎತ್ತಿಕೊಳ್ಳಲು, ಅವರ ಮಗಳಿಂದ ಕೈ ಬಿಡಿಸಿಕೊಳ್ಳಲು ನೋಡಿದೆ. ಈಗಲೂ ಬಿಡದೆ ಕಣ್ಣು ಕಿವುಚಿ ನಗತೊಡಗಿದ್ದಳು. ಆ ಹೊತ್ತಿಗೆ ಅವಳಮ್ಮ ಬಂದು, ಕ್ಷಮಿಸಿ ಎಂದು ಬಲವಂತದಿಂದ ಕೈ ಬಿಡಿಸಿದರು. ಅವಳು ಕಣ್ಣುಜ್ಜಿಕೊಳ್ಳುತ್ತ, ಅಳುವಂತೆ ಮುಖ ಮಾಡಿ ಅಮ್ಮನ ಹಿಂದಿಂದೆ ಹೋಗುತ್ತ, ತಿರುತಿರುಗಿ ನೋಡುತ್ತಾ ಹೊರಟುಬಿಟ್ಟಳು. ಹಾಗೆ ಹೋಗುವಾಗ ಒಂದೆರಡು ಬಾರಿ ನಕ್ಕಳು ಕೂಡ. ಅವರಿಗೆ ವಿದಾಯ ಹೇಳಿ, ಮಗಳನ್ನು ಎತ್ತಿಕೊಂಡು ಮೆಟ್ಟಿಲಿಳಿದೆ. ನನ್ನ ಮಗಳಿಗೆ ಆ ಪುಟ್ಟಿ ಆಂಟಿಯ ಹಾಗೆ ಕಂಡಿದ್ದಳೇನೋ, "ಅಮ್ಮಾ ಆಂಟಿ ಹತ್ತಾ ಹತ್ತಾ...?" ಎಂದು ಕೆಂಪಾದ ನನ್ನ ಮಣಿಕಟ್ಟನ್ನು ಸವರತೊಡದಳು. ಅಂದರೆ, ಆಂಟಿ ನಿನಗೆ ಹೊಡೆದರಾ? ಎಂದು... ಕೇಳಲು ಪ್ರಯತ್ನಿಸಿದಳು. ಇಲ್ಲ ಬಂಗಾರಾ... ಆಕೆ ಅಕ್ಕ. ಮುದ್ದು ಮುದ್ದು ಮಾಡಿದಳು ಅಮ್ಮನಿಗೆ ಎಂದೆ. ಹಾಂ... ಎಂದು ಕೈಗೆ ತುಟಿಯೊತ್ತಿ ನಕ್ಕಳು ಮಗಳು.

ಈಗ ಇದನ್ನು ಬರೆಯುತ್ತ, ಎರಡು ದಿನದ ಹಿಂದೆ ಮಗಳು, ಸ್ವಲ್ಪ ಜಾಸ್ತಿಯೇ ಎನ್ನುವಂತೆ ಹಟ ಮಾಡಿದ್ದು, ಮೆಲ್ಲಗೆ ಒಂದೇಟು ಕೊಟ್ಟಿದ್ದು ಬಹಳವಾಗೇ ಕಾಡುತ್ತಿದೆ. ದಿನದ ಇಪ್ಪತ್ನಾಲ್ಕು ಗಂಟೆಯೂ ಮಗಳನ್ನೇ ಗಮನಿಸಿಕೊಂಡಿದ್ದಕ್ಕೆ ಇಷ್ಟು ಬೇಗ ತಾಳ್ಮೆ ಕಳೆದುಕೊಂಡುಬಿಟ್ಟೆ. ಸ್ವಲ್ಪ ವರ‍್ಷಕ್ಕೆ ಮಗಳು ತನ್ನಿಂತಾನೇ ಎಲ್ಲವನ್ನೂ ತನ್ನ ಕೆಲಸಗಳನ್ನು ಮಾಡಿಕೊಂಡು ತಿಳಿವಳಿಕೆಯಿಂದ ವರ‍್ತಿಸುವ ಹಾಗಾದಾಗ ನಾನು ಸ್ವಲ್ಪ ಹೊತ್ತಾದರೂ ನನ್ನ ಜಗತ್ತಿನಲ್ಲಿ ಕಳೆಯಬಹುದು. ಆದರೆ ಇಂಥ ವಿಶೇಷ ಮಕ್ಕಳ ತಂದೆ ತಾಯಿಯರು, ಅವರಿಗೆ ಯಾವ ಭರವಸೆ ಇದೆ? ಪರಸ್ಪರ ವಯಸ್ಸಾಗುತ್ತಾ ಹೋದಾಗ ಮಕ್ಕಳನ್ನು ನಿಭಾಯಿಸುವುದು ಎಷ್ಟು ಕಷ್ಟ? ಎಲ್ಲಕ್ಕಿಂತ ಮುಖ್ಯವಾಗಿ ಅವರಿವರ ಮಧ್ಯೆ ಧೃತಿಗೆಡದೆ ಇಂಥ ಮಕ್ಕಳನ್ನು ಬೆಳಸುವುದೆಂದರೆ ಸಣ್ಣ ಮಾತೇ? ಒಟ್ಟಾರೆ ಒಂದಿಡೀ ಕುಟುಂಬ ಸಮತೋಲವನ್ನೇ ಕಳೆದುಕೊಳ್ಳುವ ಹಾಗಾಗಿ, ಆ ಕುಟುಂಬದ ಒಟ್ಟಾರೆ ಚಿತ್ರಣವೇ ಬದಲಾಗುತ್ತದಲ್ಲ? ಅಷ್ಟಕ್ಕೂ ತಂದೆತಾಯಿ ಎನ್ನಿಸಿಕೊಂಡ ಮಾತ್ರಕ್ಕೆ ವೈಯಕ್ತಿಕ ಆಕಾಂಕ್ಷೆ, ಕನಸು-ದಾರಿ-ಗುರಿಗಳಿರುವುದಿಲ್ಲವೆಂದೇನಿಲ್ಲವಲ್ಲ. ಆದ್ಯತೆ, ಪರಿಸ್ಥಿತಿಗನುಸಾರವಾಗಿ ಅವರವರೇ ತಮ್ಮ ಮನಸ್ಸಿಗೆ ವಾಸ್ತವ ಅರ‍್ಥ ಮಾಡಿಸಲೇಬೇಕು. ಇದರಿಂದುಂಟಾಗುವ ಏರುಪೇರುಗಳನ್ನು ಮತ್ತದರ ಪರಿಣಾಮಗಳನ್ನು ಸಮಾಧಾನದಿಂದ, ಧೈರ‍್ಯದಿಂದ ಎದುರಿಸುವ ಪ್ರಯತ್ನದಲ್ಲಿ ತಾಯಿಯದ್ದೇ ತುಸು ಹೆಚ್ಚಿನ ಪಾಲಲ್ಲವೆ? 

ಹೀಗೆ... ಯೋಚನೆಗಳೀಗ ಸಾಲು ಹಚ್ಚಿ ಹೊರಟ ಇರುವೆಗಳಂತೆ ಕಾಣುತ್ತಿವೆ. ಕೆಲ ಇರುವೆಗಳು ಮುಖಕ್ಕೆ ಮುಖವಿಟ್ಟು ಉಭಯಕುಶಲೋಪರಿ ವಿಚಾರಿಸಿಕೊಂಡಂತೆ, ಅವುಗಳಲ್ಲೊಂದಿಷ್ಟು ಗುಟ್ಟಾಟವಾಡಿ ಗುಂಪು ಮಾಡಿ, ಪ್ರತ್ಯೇಕ ಸಾಲಿನಲ್ಲಿ ಹೊರಟಂತೆ. ಮತ್ತೊಂದಿಷ್ಟು ಇರುವೆಗಳು ಎಗ್ಗುಸಿಗ್ಗಿಲ್ಲದೆ, ಯಾರೇನಾದರೆ ನಮಗೇನಂತೆ, ನಮಗೆ ತಲುಪುವ ಜಾಗ ಮುಖ್ಯ ಎಂಬಂತೆ ತರಾತುರಿಯಲ್ಲಿ ದಾಪುಗಾಲಿಕ್ಕಿದಂತೆ.ಇತ್ತಕಡೆ ನಾಲ್ಕೈದು ಇರುವೆಗಳು ಯಾರದೋ ತಪ್ಪಿಗೆ ಕೈಕಾಲು ಮುರಿದುಕೊಂಡು ಒದ್ದಾಡುತ್ತಿದ್ದರೆ, ಅದ್ಯಾವುದೋ ಹುಳ ಅದಾಗಲೇ ಅವುಗಳ ಮೆರವಣಿಗೆಯ ಸಿದ್ಧತೆ ನಡೆಸುತ್ತಿರುವಂತೆ. ಮತ್ತು... ಒಂದೇ ಒಂದು ಇರುವೆ ಮಾತ್ರ ಯಾವ ಸಾಲೂ ಸೇರದೆ, ಎರ‍್ರಿಕ್ ಫ್ರಾಂನ ಸಾಲುಗಳನ್ನು ಧ್ಯೇನಿಸುತ್ತ ನಿಂತಂತಿದೆ; "ಯಾರನ್ನಾದರೂ ಪ್ರೀತಿಸುವುದೆಂದರೆ ನಮ್ಮಲ್ಲಿರುವ ಪ್ರೀತಿಸುವ ಸಾಮರ‍್ಥ್ಯವನ್ನು ವಾಸ್ತವಗೊಳಿಸಿಕೊಳ್ಳುವುದು ಮತ್ತು ಏಕಾಗ್ರತೆಯನ್ನು ಪಡೆಯುವುದು, ಆಗ ನಾವು ಪ್ರೀತಿಸುವ ವ್ಯಕ್ತಿ ಸಾರ‍್ವತ್ರಿಕವಾದ ಮಾನವೀಯ ಗುಣಗಳ ಸಾಕಾರ ಸ್ವರೂಪವಾಗುತ್ತಾನೆ. ಅಂದರೆ, ಒಬ್ಬ ಮನುಷ್ಯನ ಬಗೆಗಿರುವ ಪ್ರೀತಿ ಎಲ್ಲ ಮನುಷ್ಯರ ಬಗೆಗೂ ಇರುವ ಪ್ರೀತಿಯಾಗಿರುತ್ತದೆ’. 
ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ೧೩ ದಿನಗಳಾಗುತ್ತ ಬಂದರೂ ಆ ಪುಟ್ಟಿ ಮನಪರದೆಯಿಂದ ಕದಲುತ್ತಲೇ ಇಲ್ಲ. ಹೀಗೆಲ್ಲ ಈ ಹೊತ್ತಿನಲ್ಲಿ ಬರೆಸಿ ನನ್ನ ಬಲಗೈ ಮಣಿಕಟ್ಟಿನಲ್ಲಿ ಅಚ್ಚಿನಂತಾಗಿ ಕಾಡುತ್ತಿದ್ದಾಳೆ. 

5 comments:

Swarna said...

ಆ ಮಗು ಕಣ್ಣ ಮುಂದೆ ಬಂತು. ನಮ್ಮ ಸಂಬಂಧಿಗಳ ಮಗುವಿಗೂ ಇದೇ ಪಾಡು. ಯಾವುದೋ ಇಂಜೆಕ್ಷನ್ ಏರುಪೇರಾಗಿ ಸರಿಯಾಗಿದ್ದವ ಹೇಗೋ ಆದ. ನನಗಿಂತ ಮುಂಚೆ ಅವನು ಹೋಗಬೇಕು ಇಲ್ಲಾಂದ್ರೆ ಅವನನ್ನ ಯಾರು ನೋಡ್ತಾರೆ ಅನ್ನೋರು ಅವನ ತಾಯಿ . ಕಡೆಗೆ ಹಾಗೆ ಆಯಿತು ಕೂಡ. ಮತ್ತೆ ಆ ತಾಯಿ ಮಗ ನೆನಪಾದರು .

ಆಲಾಪಿನಿ said...

ಛೆ ಅಸಹಾಯಕ ಪರಿಸ್ಥಿತಿ. ಏನು ಮಾಡುವುದು?

ಆಲಾಪಿನಿ said...
This comment has been removed by the author.
sunaath said...

Oliver Sacks ಬರೆದ An anthropologist on Mars ಎನ್ನುವ ಕೃತಿಯಲ್ಲಿ ಅಮೇರಿಕಾದಲ್ಲಿರುವ ಒಬ್ಬಳು autist ಬಗೆಗೆ ಇದೆ. ಈ autist ವಿಶ್ವವಿದ್ಯಾಲಯದ ಪದವಿ ಪಡೆದಳು. ಪಶುವಧಾಲಯಗಳ ಸುಧಾರಣೆಗಾಗಿ ವಿನ್ಯಾಸಗಳನ್ನು ರಚಿಸಿದಳು. ಆದುದರಿಂದ autist ಬಾಲರಿಗೆ ಸರಿಯಾದ ಶಿಕ್ಷಣ ನೀಡಿದರೆ, ಅವರೂ ಸಹ ಸಹಜ ವ್ಯಕ್ತಿಗಳಂತೆ ಬದುಕು ಸಾಗಿಸಬಲ್ಲರು.

ಆಲಾಪಿನಿ said...

ಅಂಕಲ್, ಅಮೆರಿಕದಲ್ಲಿ ಇಂಥ ಮಕ್ಕಳಿಗೆ ವಸತಿ-ಸೌಲಭ್ಯ-ಕೌಶಲ ತರಬೇತಿ ಎಲ್ಲವೂ ಬಹಳ ಅಚ್ಚುಕಟ್ಟಾಗಿದೆ. ಅಲ್ಲಿಯ ಸರ್ಕಾರ ಇಂಥ ಮಕ್ಕಳನ್ನು ತಾನೇ ನೋಡಿಕೊಳ್ಳುತ್ತದೆ. 16-17 ವರ್ಷಕ್ಕೆ ಕಾಲಿಡುತ್ತಿದ್ದಂತೆ ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಸಣ್ಣ ಪುಟ್ಟ ಕೆಲಸಗಳನ್ನು ನಿರ್ವಹಿಸುವುದನ್ನು ಕಲಿಸಿಕೊಡಲಾಗುತ್ತದೆ. ಕ್ರಮೇಣ ಸ್ವಾವಲಂಬಿಗಳಾಗಲು ಪ್ರೋತ್ಸಾಹಿತ್ತದೆ. ಆದರೆ ನಮ್ಮ ದೇಶದಲ್ಲಿ? ತಂದೆ ತಾಯಿಗಳಿಗೆ ದಿಗಿಲಾಗುವುದು ತರಬೇತಿ ಕೌಶಲಕ್ಕೆ ಭರಿಸಬೇಕಾದ ಖರ್ಚು ಕಂಡು! ಇದರಿಂದ ಮಾನಸಿಕವಾಗಿ ಇಡೀ ಕುಟುಂಬ ಜರ್ಜರಿತಗೊಳ್ಳುತ್ತದೆ.