Friday, October 2, 2015

ತಲೆಪೂರ್ತಿ ಹಲಗೆ, ಮೊಲಪೂರ್ತಿ ನಿಸ್ತೇಜ

ಡಂಕಣಕ್ಕಾ ಡಂಕಣಕ್ಕಾ ಡಂಕಣಕ್ಕಾ ಡಂಕಣಕ್ಕಾ... ಹಲಗೆ ಶಬ್ದ ಕಿವಿಗಿಳಿಯುತ್ತಿದ್ದಂತೆ ಅಂಗಳಕ್ಕೆ ಜಿಗಿದು ಹೊರಬಾಗಿಲ ಚೌಕಟ್ಟಿಗೆ ಆತುನಿಲ್ಲುತ್ತಿದ್ದೆ. ಚಿಲ್ಟಾರಿ ಪುಲ್ಟಾರಿಗಳೊಂದಿಗೆ ಹತ್ತು ಹನ್ನೆರಡು ದೊಡ್ಡತಲೆಗಳು ನಮ್ಮ ಅಂಗಳಕ್ಕೂ ಇಳಿಯುವುದನ್ನೇ ಕಾಯುತ್ತಿದ್ದೆ. ಉದ್ದನೆಯ ಗಳ ಮತ್ತದರ ತುದಿಗಳನ್ನು ಹೆಗಲಮೇಲಿಟ್ಟುಕೊಂಡ ಒಂದಿಬ್ಬರನ್ನು ಮುಂದಿಟ್ಟುಕೊಂಡು ಅವರೆಲ್ಲ ಕುಣಿಯುತ್ತ ಕೇಕೇ ಹಾಕುತ್ತ ಹಲಗೆ ಬಾರಿಸುತ್ತ ಇನ್ನೇನು ನಮ್ಮ ಮನೆಯ ಕಡೆ ಬರಬೇಕು, ಓಡ್ಹೋಗಿ ಮನೆಯೊಳಗಿದ್ದ ಎಲ್ಲರನ್ನೂ ಕೂಗಿ ಸಂಭ್ರಮಿಸುತ್ತಿದ್ದೆ. ಹೊರಬಾಗಿಲಲ್ಲಿ ನಿಂತು 'ಸರಾ ಸರ ಹಬ್ಬರೀ ಯಪ್ಪಾ' ಅವರೆಲ್ಲಾ ಒಮ್ಮೆ ಜೋರಾಗಿ ಕೂಗುತ್ತಿದ್ದರು. ಬ್ರಷ್ಷೋ, ನೆಗೆಟಿವ್ವೋ, ಬುಕ್ಕೋ ಎಂದು ತಮ್ಮ ಲೋಕದಲ್ಲಿರುತ್ತಿದ್ದ ಅಪ್ಪಾಜಿ ಶರ್ಟ್ ಹಾಕಿಕೊಂಡು ಹೊರಬರುವ ತನಕ ನಾಲ್ಕೈದು ಬಾರಿ ಹೊರಬಾಗಿಲಿಂದ ಒಳಮನೆಗೆ ಒಳಮನೆಯಿಂದ ಹೊರಬಾಗಿಲಿಗೆ ಓಡಾಡಿಬಿಡುತ್ತಿದ್ದೆ. ಅಲ್ಲೀತನಕ ಹೊರಗೆ ಡಂಕಣಕ್ಕ ಡಂಕಣಕ್ಕ...

ತನ್ನಾಲ್ಕೂ ಮುಂಗಾಲು ಹಿಂಗಾಲುಗಳನ್ನು ಸುತಳಿಯಿಂದ ಕಟ್ಟಿಸಿಕೊಂಡು ಕೆಂಪುಕಂಗಳ ಚೂಪುಕಿವಿಗಳ ಕಂದುಬಿಳಿಯ ಮೊಲವೊಂದು ದೈನ್ಯದಿಂದ ಗಳದ ಮಧ್ಯೆ ನೇತು ಬಿದ್ದಿರುವ ದೃಶ್ಯವೇ ನನ್ನಲ್ಲಿ ಅಷ್ಟೆಲ್ಲ ಸಂಚಲನ ಮೂಡಿಸಲು ಕಾರಣವಾಗಿರುತ್ತಿತ್ತು. ಆಕಳು ಎಮ್ಮೆ ಎತ್ತು ನಾಯಿ ಬೆಕ್ಕು ಕುರಿ ಕೋಣ ಮತ್ತು ಹಾವು ಹಲ್ಲಿ ಚೇಳು ಓತಿಕ್ಯಾತ ಇರುವೆಗಳ ಓಡಾಟ ಒದ್ದಾಟ ಹಿರಿಯುವಾಟ ಮುದ್ದಾಟ ಕಚ್ಚಾಟಗಳ ಜಾತ್ರೆಯನ್ನಷ್ಟೇ ನೋಡಿದ ನಾವು ಈ ಮೊಲ ನೋಡುವುದು ವರ್ಷಕ್ಕೊಮ್ಮೇ. ಅದೂ ಅರೆಜೀವದ್ದು. 

ಶರ್ಟಿನ ಕೊನೆಯ ಗುಂಡಿ ಹಾಕಿಕೊಳ್ಳುತ್ತ ಅಪ್ಪಾಜಿ, 'ಬರ್ರಿಪಾ ಬರ್ರಿ ಒಳಗ ಬರ್ರಿ' ಎಂದು ಅಂಗಳಕ್ಕೆ ಕೈತೋರುತ್ತಿದ್ದರು. 'ಇಲ್ಲಳ್ರೀ ಸರ ನೀವ ಬರ್ರಿ ಲಗೂನ. ಹೊತ್ ಮುಣಗಾಕ್ ಬಂತ್ರಿ ಹಬ್ಬಾ ಮಾಡಬೇಕ್ರಿ' ಎಂದು ಅವರಲ್ಲೊಬ್ಬ ಸಂಕೋಚದಿಂದ ಹೇಳುತ್ತಿದ್ದ. 'ಅದರಾಗೇನೋ ಬರ್ರಿ ಬರ್ರಿ' ಹೀಗೆ ಒಂದೆರಡು ಸಲ ಒತ್ತಾಯಿಸಿದಾಗ ಅವರೆಲ್ಲ ಅಂಗಳಕ್ಕಿಳಿಯುತ್ತಿದ್ದರು. ಅಲ್ಲೀತನ ಆ ಮೊಲದ ನುಣುಪಾದ ರೋಮ ಹವಳಗಣ್ಣು ಚೂಪುಮೂತಿ ಮತ್ತು ಮೀಸೆ ನೋಡುತ್ತ ಬೆರಗಾಗುತ್ತಿದ್ದೆ. ಅತ್ತ ಅಪ್ಪಾಜಿ ಒಳಹೋಗುತ್ತಿದ್ದಂತೆ, 'ನೀವು ಇದನ್ನ ಎಲ್ಲಿಂದ ತಂದ್ರಿ? ಹೆಂಗ್ ತಂದ್ರಿ? ಯಾಕ್ ಹಿಂಗ್ ಹಿಡ್ಕೊಂಬಂದ್ರಿ? ಅದಕ್ ನೋವಾಗೂದಿಲ್ಲಾ? ಹಿಂಗೆಲ್ಲಾ ಎಲ್ಲಾರ ಮನೀಗೆ ಹೋಗಿ ರೊಕ್ಕಾ ಇಸ್ಕೊಂಡ್ ಏನ್ ಮಾಡ್ತೀರಿ?' ಅಂತ ಕಟ್ಟೀಮ್ಯಾಲೆ ಹತ್ತಿ ನಿಂತು ಕೇಳ್ತಿದ್ದೆ. ಮೊಲ-ಗಳ-ನನ್ನ ಕಣ್ಣು; ಎತ್ತರ ಹೊಂದಿಸಿಕೊಳ್ಳಲು ಕಟ್ಟಿ ಏರುತ್ತಿದ್ದೆ. 'ಸಣ್ಣ ಅವ್ವಾರ ಸಬ್ಬ್ಯಾಟಿರೀ ಯವ್ವಾ.ನೀವ್ ಉಗಾದಿಗೆ ನಿನ್ನೆ ಹೋಳಿಗಿ ಉಂಡ್ರಿಲ್ಲೋ ನಾವ್ ಈವತ್ ರಾತ್ರೀಗೆ ಹಬ್ಬಾ ಮಾಡಾವ್ರದೇವಿ. ಇನ್ನಾ ಈ ಮೊಲಾ ನೋಡ್ರ್ಯಾ ಬ್ಯಾಟಿ ಅಡ್ಕೋಂಡ್ ಬಂದಿದ್ರಿ. ಚಂಜಿ ಮುಣುಗೂತ್ಲೇ ಹಬ್ಬಾ ಮಾಡ್ತೇವ್ರಿ' ಅಲ್ಲೊಬ್ಬ ಹೇಳುತ್ತಿದ್ದ.

ಅಪ್ಪಾಜಿ ಕೈಯೊಳಗಿದ್ದದ್ದು ಐದರ ನೋಟು ಎಂದು ದೂರದಿಂದಲೇ ಗಮನಿಸಿದ ಒಂದಿಬ್ಬರು, 'ತಗೀರಿ ತಗೀರಿ ಸರ್ ಇನ್ನಟ ಕೊಡ್ರಿ. ಇಷ್ಟ್ ಸಾಲೂದಿಲ್ರಿ ಸಾಮಾನೆಲ್ಲಾ ತುಟ್ಯಾಗ್ಯಾವು' ಅಂತ ಒಬ್ಬಾಂವಾ ಹಟ ಮಾಡ್ತಿದ್ದ. 'ಆತ್ ಹೇಳಪಾ ಎಷ್ಟ್ ಕೊಡ್ಲಿ ಹಂಗಾದ್ರ' ಅಪ್ಪಾಜಿ ಕೇಳುತ್ತಿದ್ದಂತೆ, 'ಸರಾ ಇದ ಕುಶಾಲಿರೀ. ನಾವ್ ಕೇಳಬಾರದು ನೀವು ಹೇಳಬಾರದು' ಎಂದೊಬ್ಬವ ತಲೆ ಸವರಿಕೊಳ್ಳುತ್ತಿದ್ದ. ಮತ್ತೆ ಅಪ್ಪಾಜಿ ರೊಕ್ಕಕ್ಕಾಗಿ ಒಳಗೆ ಹೋಗುತ್ತಿದ್ದರು. 'ಬ್ಯಾಟಿ ಹೆಂಗ್ ಆಡ್ತೀರಿ ನೀವು? ನಮ್ಮೂರಾಗ ಕಾಡೇ ಇಲ್ಲ. ಈ ಮೊಲಕ್ ರಕ್ತಾನೂ ಬಂದಿಲ್ಲ' ಎಂದು ಕೇಳುತ್ತಿದ್ದೆ. ಯಾಕೆಂದರೆ ನನ್ನ ಪ್ರಪಂಚದಲ್ಲಿ ಆಗ ಬೇಟೆ ಎಂದರೆ ದಟ್ಟ ಕಾಡು, ಬಂದೂಕು. ಇನ್ನು ಯುದ್ಧವೆಂದರೆ ಕತ್ತಿ ಗುರಾಣಿ ಕುದುರೆ ಆನೆ. ಹಬ್ಬವೆಂದರೆ ತೋರಣ ಹೋಳಿಗೆ ಎಲೆ ಅಡಿಕೆ ತಾಂಬೂಲ. 

'ಅವ್ವಾರ ಮೊಲಾ ನೋಡ್ರಿ ಹೋಲಗೋಳಾಗ ಸಿಗ್ತಾವ್ರಿ. ನಸೀಕನ್ಯಾಗ ಹೋಗಿ ಹಿಡದ ಹಾಕ್ಕೊಂಡ್ ಬರ್ತೇವ್ರಿ' ಅನ್ನೊವ್ನು ಇನ್ನೊಬ್ಬ. ಬೋಳುಬೋಳಾದ ಮಸಾರಿ ಭೂಮಿ, ಅಲ್ಲೊಂದು ಇಲ್ಲೊಂದು ಮರ, ಮಬ್ಬಗತ್ತಲು ಇದೊಂದು ಪುಟಾಣಿ ಜೀವ. ಹೇಗೆ ಇದನ್ನು ಹಿಡಿದು ಹಾಕುತ್ತಾರೆ, ಆಮೆ ಮೊಲದ ಕತೆಯಲ್ಲಿ ಮೊಲವೇ ಜೋರಾಗಿ ಓಡುವುದಲ್ಲವೆ? ರಕ್ತ ಚಿಮ್ಮದೆ ಅದ್ಹೇಗೆ ಬೇಟೆ ಬೀಳುತ್ತದೆ? ಚುರುಕಾದ ಪ್ರಾಣಿಯಾದರೂ ಇವರ ಕೈಗೆ ಅದ್ಹೇಗೆ ಸಿಕ್ಕಿಬೀಳುತ್ತದೆ. ತಪ್ಪಿಸಿಕೊಳ್ಳಲು ದಟ್ಟ ಪೊದೆಗಳಾಗಲಿ ಗಿಡಗಂಟೆಗಳಾಗಲಿ ನಮ್ಮೂರ ಹೊಲಗಳಲ್ಲಿ ಅಷ್ಟಾಗಿ ಕಾಣವು. ಬಟಾಬಯಲೊಳಗೆ ಜಿಗಿದೋಡುವ ಮೊಲವನ್ನು ಹೇಗೆ ಇವರು ಹಿಡಿಯುತ್ತಾರೆ? ಅಷ್ಟಕ್ಕೂ ಯಾಕೆ ಹಿಡಿದು ತಂದು ಮೆರವಣಿಗೆ ಮಾಡುತ್ತಾರೆ? ಮೊಲದಿಂದ ಹಬ್ಬ ಹೇಗೆ ಮಾಡುತ್ತಾರೆ? ತಲೆಪೂರ್ತಿ ಹಲಗೆ. ಮೊಲಪೂರ್ತಿ ನಿಸ್ತೇಜ.

ಹತ್ತರ ನೋಟು ನೋಡುತ್ತಿದ್ದಂತೆ ಹಲಗೆ ಹರಿಯುವ ಹಾಗೆ ಅವ ಹೊಡೆಯುತ್ತಿದ್ದ. ಹೋ ಎಂದು ಎಲ್ಲ ಅರಚುತ್ತಿದ್ದರು. ಖುಷಿ-ವಿಷಾದ-ಕುತೂಹಲ ತುಂಬಿಕೊಂಡು ಒಳಬರುತ್ತಿದ್ದೆ. ತೊಡೆಮೇಲೆ ಶಾಲಾಮಕ್ಕಳ ಪೇಪರ್ ಇಟ್ಟುಕೊಂಡು ಕೆಂಪುಮಸಿಯಿಂದ ಗುಂಡ್ಲೆ, ಪಾಸ್ ಗುರುತು ಹಾಕುತ್ತ ಕುಳಿತ ಅವ್ವನ ಹೆಗಲಿಗೆ ಬಂದು ಜೋತುಬೀಳುತ್ತಿದ್ದೆ. 
***

'ಅಮ್ಮಾsss ಅಕಲ್ ಟ್ರೀ ಕಟ್ ಕಟ್' ಮಗಳು ಓಡಿ ಬಂದು ಹೇಳಿದಳು ಆಗಬಾರದ್ದೇನೋ ಆಗುತ್ತಿದೆ ಎಂಬಂತೆ. ಅವಳನ್ನೆತ್ತಿಕೊಂಡು ಹೊರಬಂದೆ. ಬೀದಿಗೆ ಸಾಲಾಗಿ ನೆಟ್ಟ ಮರಗಳ ಬುಡಗಳಲ್ಲೆಲ್ಲ ಟೊಂಗೆಗಳು ಮುಗುಚಿ ಮಲಗಿದ್ದವು. ಬಗಲನೇರಿ ಕುಳಿತ ಮಗಳು ಕೈಮಾಡಿ, 'ಕಟ್ ನೋ ನೋ ಅಕಲ್' ಎಂದು ಕೂಗುತ್ತಿದ್ದಳು. ಐವತ್ತು ಮೀಟರ್ ಅಂತರದಲ್ಲಿದ್ದ ಶಾಲೆ ಮತ್ತದರೊಳಗಿನ ಮಕ್ಕಳು ಗಾಂಧೀಜಿಯನ್ನು ಪ್ರಾರ್ಥಿಸುತ್ತಿದ್ದದ್ದು ತೇಲಿ ಬರುತ್ತಿತ್ತು. ಚಿರ್ ಬರ್ ಚಿರ್ ಬರ್ ಎಂಬ ಸಣ್ಣ ಶಬ್ದ ಲಯದಲ್ಲಿ ಚಾಲ್ತಿಯಲ್ಲಿತ್ತು. ಇಲ್ಲ್ಯಾವ ಪಕ್ಷಿ ಮರಿಗಳಿವೆ ಎಂದು ನೋಡೇ ನೋಡಿದೆ. ಗೂಡೇ ಇರಲಿಲ್ಲ. ಒತ್ತಾಗಿ ಬೆಳೆದ ದಪ್ಪ ಮರಗಳ ನಡುವಿನ ಒಂದಿಷ್ಟು ತೆಳು ಟೊಂಗೆಯ ಮರಗಳು ಎದೆಗೆ ಎದೆ ಉಜ್ಜಿಕೊಳ್ಳುತ್ತಿದ್ದವು. ಫೌಂಟೇನ್ ಮರದಿಂದ ಕಡುಗೇಸರಿ ಹೂ ಭುಜ ತಾಗಿ ಪುಳಕ್ಕೆಂದು ಪಾದ ಸ್ಪರ್ಷಿಸಿತು.