Tuesday, November 17, 2015

ಅವಳು ಮೆಲ್ಲನೆ ಎಳೆದಳು ಕಿಟಕಿ ಪರದೆ'ಅನ್ನೆರಡಕ್ಕೇ ಮದ್ವೆ ಮಾಡಿದ್ ನನ್ನಮ್ಮ. ನನ್ನಪ್ಪ ಕುಡುಕ ಆಗ್ದಿದ್ರೆ ನಾ ಎಸ್ಸೆಸ್ಸೆಲ್ಸಿಗಂಟ ಓದ್ಬೋದಿತ್ತಾ? ಅದ್ನೈದ್ ಸಾವ್ರಾ ಗಳಸ್ಬೋದಿತ್ತಾ? ಏಳ್ನೇ ಕ್ಲಾಸ್ಗೇ ಬುಡಿಸ್ಬುಟ್ರು. ಈಗ ನನ್ನೆರ್ಡೂ ಮಕ್ಕಳ ಜತೆನಾಗ್ ಒಂಟ್ರೆ ನಮ್ಮೂರಲ್ಲಿ... ನಿಮ್ ತಮ್ಮ ತಂಗೀನಾ ಅಂತ ಕೇಳ್ತಾರೆ ಜನ' ಹೀಗಂತ ಆಕೆ ತುಸುಕೋಪದಲ್ಲೇ ಹೇಳಿದ್ರೂ ಪಾತ್ರೆಗಳು ಶಬ್ದ ಮಾಡಲಿಲ್ಲ, ದನಿ ಏರಲಿಲ್ಲ.

ತಿಂಗಳ ಹಿಂದೆಯಷ್ಟೇ ತಾನಾಗೇ ಮನೆಗೆಲಸ ಕೇಳಿಕೊಂಡು ಬಂದ ಈ ಸಂಗೀತಾ ತಮಿಳು ಮೂಲದವಳು. ಯಾರೋ ಹೇಳಿದ್ರು ನಿಮಗೆ ಕೆಲಸದವ್ರು ಬೇಕಂತ ಅದ್ಕೆ ಬಂದೆ ಅಂದ್ಲು. ಅವಳ ಮಾತು, ಕಣ್ಣಲ್ಲಿ ಕಪಟತನ ಕಾಣಲೇ ಇಲ್ಲ. ಆದ್ರೂ ಅಳುಕಿನಿಂದಲೇ ಆಯ್ತು ಎಂದೆ. ಕೊನೆಗೆ, ಅಷ್ಟಕ್ಕೂ ಏನಪ್ಪಾ ಆಗುತ್ತೆ ಜೀವನದಲ್ಲಿ? ಬಹಳ ಅಂದ್ರೆ ವಸ್ತುಗಳನ್ನೋ ಹಣವನ್ನೋ ಕದ್ದಾರು ಅಷ್ಟೇ ತಾನೆ? ಈ ಹಿಂದಿದ್ದ ಕೆಲಸದವಳಿಗೆ ಕದಿಯೋ ಚಟವಿತ್ತಲ್ಲ ಅದಕ್ಕೆ ಈ ಸಲ ಹೀಗೆ ನನ್ನ ಅಳುಕಿಗೆ ತಲೆ ನೇವರಿಸಿದೆ.

ಬಹಳ ಕಾಳಜಿಯಿಂದ ಸಮಾಧಾನದಿಂದ ಅಚ್ಚುಕಟ್ಟಾಗಿ ಕೆಲಸ ಮಾಡುವ ಸಂಗೀತಾಗೆ ಈಗಿನ್ನೂ ಇಪ್ಪತ್ತೇಳು. ಎರಡನೇ ಮಗುವಾದಾಗ ಅಮ್ಮ ಮನೆಯಲ್ಲಿರದ ಸಮಯ ನೋಡಿ, ಮಗುವನ್ನು ಪಕ್ಕದಮನೆಯವರಿಗೆ ಒಪ್ಪಿಸಿ ಅವರಿಗಷ್ಟೇ ಅಸಲಿ ವಿಷಯ ತಿಳಿಸಿ ಆಸ್ಪತ್ರೆಗೆ ಹೋಗಿದ್ದಳಂತೆ. 'ಡಾಕಟ್ರು ಕೇಳಿದ್ರು ಒಬ್ಳೇ ಬಂದಿದೀಯಾ, ಗಂಡನ ಒಪ್ಗೆ ಇಲ್ದೆ ಆಪ್ರೇಸನ್ ಮಾಡಾಕಿಲ್ಲ ಅಂತ. ಬೇರೆ ದೇಸಕ್ ಓಗವ್ರೆ, ಎಲ್ಡ್ ಮಕ್ಳು ಸಾಕು ಅಂತ ಕೇಳ್ಕಂಡೆ. ಕರೆಂಟ್ ಆಪ್ರೇಸನ್ ಮಾಡಿದ್ರು. ಮಲಗಿದ್ನಾ ಆಸ್ಪತ್ರೇಲಿ? ನಮ್ ಅಮ್ಮ ಸಂಬಂಧಿಕರ್ನಾ ಕರ್ಕಂಬಂದು ಸತ್ತೇ ಹೋದ್ನೇನೋ ಅನ್ನೋರ್ ಹಾಗೆ ಆಡಾಡ್ಕೊಂಡ್ ಅತ್ಲು. ಇನ್ನೊಂದೆರಡು ಮಕ್ಕಳಾಗ್ಬೇಕಿತ್ತಲ್ಲೇ ಅಂತ. ಗಂಡ ಮೂರ್ತಿಂಗಳು ಮಗಿನ್ನೂ ನೋಡಕ್ ಬಂದಿರ್ಲಿಲ್ಲ!' ಏನೋ ಸಾಧಿಸಿದೆ ಎಂಬ ಅಹಂ ಕಿಂಚಿತ್ತೂ ಅವಳ ಮುಖದಲ್ಲಿರಲಿಲ್ಲ. ಕೇವಲ ಮುಗುಳ್ನಗು.

ಪ್ರತೀದಿನ ಮಗಳು ಸ್ಕೂಲಿಗೆ ಅಂತ ಅಪ್ಪನ ಗಾಡಿ ಏರಿದ ಕೂಡಲೇ ನನ್ನನ್ನೊಮ್ಮೆ ಅಪ್ಪಿ ತಕ್ಷಣವೇ ಗ್ಯಾಲರಿಯೆಡೆ ಕಣ್ಣಾಡಿಸುತ್ತಾಳೆ. ಆಗ ಸಂಗೀತಾ, ಮಾಡುವ ಕೆಲಸ ಬಿಟ್ಟು ಟಾಟಾ ಹೇಳಲು ಬಂದು ನಿಂತಿರುತ್ತಾಳೆ. ಸ್ಕೂಲಿನಿಂದ ಬಂದಮೇಲೆ ಮಗಳು ಕೇಳುವುದೇ ಆಂಟಿ ಎಲ್ಲಿ? ಆದರೀಗ ಸಂಗೀತಾ ಹೊಸ ರಾಗ ಶುರು ಮಾಡಿದ್ದಾಳೆ ನಾಲ್ಕು ದಿನಗಳಿಂದ, 'ಉಳ್ಳಾಲದಲ್ಲೊಂದ್ ಶೀಟ್ ಮನೆ ತಗಂಡಿದ್ದೀವಿ. ಅಲ್ಗೇ ಓಗೋಣ ಅಂತಿದಾರೆ ಮನೇಲಿ. ನಂಗ್ ಈಗ ಮಾಡ್ತಿರೋ ಕೆಲ್ಸದ್ ಮನೆಗೋಳ್ ಬಿಟ್ ಹೋಗಕ್ ಇಷ್ಟ ಇಲ್ಲ. ದಿನಾ ನೀ ಗಾಡಿ ಮೇಲೆ ಬುಡು ನಾ ವಾಪಸ್ ಬತ್ತೀನಿ ಅಂದೆ ಗಂಡನಿಗೆ,  ಆಗಲ್ಲ ಅಲ್ಲೇ ಕೆಲ್ಸಾ ಉಡ್ಕೋವಂತೆ ಅಂದ್ರು. ನಾ ಬರಾಕಿಲ್ಲ ಅಂತಿದೀನಿ' ಅಂತ.

'ನಾನೇನೂ ಮನೆಕೆಲ್ಸಾ ಮಾಡ್ದವ್ಳಲ್ಲ. ಮಕ್ಕಳ್ನಾ ಅಮ್ಮನ ಅತ್ರ ಬುಟ್ಟಿವ್ನಿ ತಮಿಳಲ್ಲೇ ಓದ್ಲಿ ಅಂತ. ಮತ್ತೆ ಅಲ್ ಅಮ್ಮ ಒಬ್ರೇ, ಅವ್ರಿಗೊಬ್ಳೇ ಮಗ್ಳು ನಾ. ನಮ್ಮಪ್ಪ ಕುಡುಕ ಇದ್ದಿದ್ಕೆ ಇನ್ನೊಂದ್ ಮಗು ಮಾಡ್ಕಲಿಲ್ಲ ಅಮ್ಮ. ಮತ್ತೀಗ ಮಗಳು ಮೈನೆರೆದ್ಲಲ್ಲ ಹೋದವರ್ಸಾ ಆಗ ನೂರೈವತ್ ಗ್ರಾಮ್ ಒಡ್ವೆ ಮಾಡ್ಸಿಟ್ವಿ ಮುಂದೆ ಮದ್ವೆಗೆ ಅಂತ. ಆಮ್ಯಾಲೆ ಶೀಟ್ ಮನೆ ಬೇರೆ ತಗಂಡ್ವಾ? ಸಾಲ ತೀರಸ್ಬೇಕಲ್ಲ. ನನ್ ಗಂಡ ಯಾವಾಗ್ಲೂ ಯೋಳೋದು, ವಿಶ್ವಾಸದಿಂದ ಕೆಲ್ಸಾ ಮಾಡ್ಬಾ ಅಂತ. ನಾನೇನ್ ಚಿಕ್ಮಗೂನಾ? ಅಂತ ಕೇಳ್ತೀನಿ' ಅವಳು ನಕ್ಕಾಗ ಕಣ್ಣು ಪುಟ್ಟ ಮೀನುಗಳಾಗಿದ್ದವು.

ನಿಮ್ಮೂರ್ಕಡೆ ಸೈಕಲ್ ಓಡಿಸ್ತಾರಲ್ವಾ ಹೆಣ್ಮಕ್ಳು ಅಂದೆ ಈವತ್ತು. ಸೈಕಲ್ ಕಲಿಯೋದು ಅಂದೆ ತಮಾಷೆಗೆ. 'ಅಯ್ಯ ನಮ್ಮನೆಕಡೆ ಗಾಡಿನೇ ಓಡಿಸ್ತವ್ರೆ ಅಕ್ಕಾ. 'ನಮ್ ಮನೆ ಕಡೆ ಸ್ಕೂಟಿ ಮೇಲೇನೇ ಕೆಲ್ಸಕ್ ಓಯ್ತಾವ್ರೇ ನಾಲ್ಕೈದ್ ಜನ, ಇವ್ರೆಲ್ಲಪ್ಪ ಇಷ್ಟ್ ನೀಟ್ ರೆಡಿ ಆಗಿ ಯಾವ್ ಆಪೀಸಿಗ್ ಓಗ್ತವ್ರೆ ಅನ್ಕತಿದ್ದೆ. ಒಮ್ಮೆ ಕೇಳೇಬುಟ್ಟೆ. ಎಲ್ಲಾ ಅದದೇ ಕೆಲ್ಸಕ್ ಓಗ್ತವ್ರಂತೆ; ಮನೆಕೆಲ್ಸಾ, ಅಡುಗೆ ಕೆಲ್ಸಾ, ಅಂಗಡಿ ಕ್ಲೀನು, ಕಾರ್ ಕ್ಲೀನು. ಕೆಲ್ಸಾ ಮುಗ್ಸಿ ಬಟ್ಟೆ ಬದ್ಲಾಯಿಸ್ಕಂಡ್ ಮಕಾ ತಳ್ಕೊಂಡ್ ಗಾಡಿ ಮ್ಯಾಲೆ ನೀಟ್ ಆಗಿ ಬತ್ತವ್ರೆ. ಮನೆಕೆಲ್ಸಕ್ ಓಗ್ತಿದಾರೆ ಅಂತ ವಸೀನೂ ಅನ್ಸಕಿಲ್ಲ...!
ಒಂದು ತಿಂಗಳಲ್ ಒಂದೂವರೆ ಸಾವ್ರಕ್ಕೆ ಎಣ್ಮಕ್ಳೇ ಕಲಿಸ್ಕೊಡ್ತಾರೆ ಗಾಡೀನಾ. ನಾನೇ ಹಣ ಕೊಟ್ಟು ಕಲೀತೀನಿ ಅಂತ ಯೋಳ್ಬೇಕ್ ಅನ್ಕಂಡೀವ್ನಿ ಗಂಡನಿಗೆ. ನನ್ ಗಂಡ ಸೆಕೆಂಡ್ ಹ್ಯಾಂಡ್ ಕೊಡಿಸ್ತಾರೆ ಗಾಡಿ, ಯಾಕೇಂದ್ರೆ ಎಂಟ್ಲೇ ಕ್ಲಾಸ್ ಓದ್ತಿರೋ ಮಗಳು ಈಗ್ಲೇ ಯೋಳಿದಾಳೆ ಕಾಲೇಜ್ಗೆ ಗಾಡಿ ಬೇಕೇಬೇಕು ಅಂತ… ಆಮ್ಯಾಲೆ ನನ್ ಗಂಡಾನೇ ಅಂದಿದಾರೆ, ನೋಡು ಅವ್ರೆಲ್ಲಾ ನೀಟ್ ಆಗಿ ಗಾಡಿ ಮೇಲೆ ಕೆಲ್ಸಕ್ ಓಗ್ತವ್ರೆ ನೀ ಎಂಗ್ ಓಗ್ತಿ ನೋಡು ಅಂತ. ಕಲಿಯೋದ್ ಒಂದ್ ಬಾಕಿ. ಈವತ್ತೇ ಕೇಳ್ತೀನಿ, ಆದ್ರೂ ಒಪ್ತಾರೋ ಇಲ್ವೋ' ತಿಂಡಿಪ್ಲೇಟ್ ಕೈಗೆತ್ತಿಕೊಂಡವಳೇ, ಬೆಳಕ್ ಸಾಲ್ದು ಅಂತ ಕಿಟಕಿ ಪರದೆ ಸರಿಸಿದಳು.

ನೀ ನಮ್ಮನೆ ಕೆಲ್ಸಾ ಬಿಟ್ರೆ ಮಗಳು ನಿನ್ನ ಕೇಳ್ತಾಳಲ್ಲ ಏನ್ ಮಾಡ್ಲಿ ಅಂದೆ ನಗ್ತಾ, ಖಾಲಿ ಬಾಕ್ಸ್ ಇಲ್ಲೇ ಇಟ್ಟಿರ್ತೀನಿ ಅಂತ ತನ್ನ ಚೀಲದಿಂದ ಡಬ್ಬಿ ತೆಗೆದು ಮೆಟ್ಟಿಲ ಮೇಲಿಡುತ್ತ ಹೌದಲ್ಲ ಎಂದು ಬೇಸರದಲ್ಲೇ ನಗುತ್ತ ಮೆಟ್ಟಿಲಿಳಿದಳು. ಈವತ್ತೂ ಚಪ್ಪಲಿ ಶಬ್ದ ಮಾಡಲಿಲ್ಲ.
====================

(ಫೋಟೋ ಹಿನ್ನೆಲೆ: ಮೊದಲ ದಿನ ಸ್ವರಳೊಂದಿಗೆ ಕುಳಿತು ತಿಂಡಿ ತಿನ್ನುವೆ ಎಂದು ಬಾಗಿಲಾಚೆ ಕುಳಿತಿದ್ದಳು. ತನ್ನ ಬಟ್ಟಲಿನಲ್ಲಿರುವ ಹಣ್ಣು ಸಂಗೀತಾಳ ತಟ್ಟೆಯಲ್ಲಿಲ್ಲ ಎಂದು ತಿಳಿದ ಸ್ವರ, 'ಅಮ್ಮ ಆಂಟಿ ಹಣ್ಣು ಹಾಕು' ಎಂದಿದ್ದಳು!
ನಾಳೆಯಿಂದ ನೀ ಒಳಗೇ ತಿಂಡಿ ತಿನ್ನಬೇಕು ನೋಡು ಎಂದಿದ್ದೆ. ಸಂಗೀತಾಳ ಸಂಕೋಚ ನಲ್ಲಿ ಕೆಳಗೆ ಜರ್ರನೇ ಇಳಿದು ಹೋಗಿತ್ತು :) )

No comments: