Monday, December 21, 2015

ಬಾಂದಳಿರ ಮೋಹಕತೆಗೆ ರೂಪಕ ಹುಡುಕುತ್ತನೋಡೇ ನೋಡಿದೆ ನಾನೂ... ಕುಸುಕುಸು ಮಾಡಿದಾಗ ಕೂಗಿದಾಗ ಓಡಿದಾಗ ದಡಬಡಿಸಿದಾಗ ಅಲ್ಲಲ್ಲಿ ಸುಮ್ಮನಾದಾಗ ರೈಲು, ಹಾಗಾಗೇ ಮುಖ ತಿರುಗಿಸಿಬಿಡುತ್ತಿದ್ದಳು ಆಕೆ. ನಾಲ್ಕು ವರ್ಷದ ಮಗನಿಗೆ ಬಿಸ್ಕಿಟ್ ಮತ್ತವಳಿಗೆ ಮೊಬೈಲು. ನನ್ನ ಮಗಳೋ ಮುಂದಿದ್ದವರ, ಹಿಂದೆ ಮಲಗಿದ್ದವರ, ಹಾದು ಹೋಗುವವರ ಹೀಗೆ ಎಲ್ಲರನ್ನೂ ತಿವಿದು ತಡವಿ ಎಡವಿ, ತಿಂಡಿಗಳನ್ನೆಲ್ಲ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಳು. ಕೊನೆಗೆ ನನ್ನ ತಮ್ಮ. 'ಏಯ್ ಗುಂಡಕ್ಕ ನಿನ್ ಸೋಶಿಯಲ್ ವರ್ಕ್ ಸಾಕು. ಆಗ್ಲಿಂದ ನೋಡ್ತಿದೀನಿ' ಎಂದು ಗುಡುಗಿದ. ಅವನಿಗೊಮ್ಮೆ ಟೂsss ಎಂದು ತೋರ್ಬೆರಳು ತೋರಿ ಗಲ್ಲ ಉಬ್ಬಿಸಿದಳು. ಚಾಕೊಲೇಟ್ ಮತ್ತು ಬಿಸ್ಕೆಟ್ ಗಾಗಿ ರಂಪ ಮಾಡಿ ರೈಲಿಗೇ ಧಿಕ್ಕಾರ ಹಾಕಿ ಸುಸ್ತಾಗಿ ಅವುಚಿಕೊಂಡು ಕೂತಳು. ಹೇಳಿಕೇಳಿ ರೈಲು, ಪಾಪ ತನ್ನ ಪಾಡಿಗೆ ತಾ...

ಸುಮಾರು ಮೂರು ತಾಸುಗಳ ನಂತರ ಪಕ್ಕದ ಸೀಟಿನಲ್ಲಿದ್ದ ಆಕೆಯ ಮಗ ಆಗೊಮ್ಮೆ ಈಗೊಮ್ಮೆ ನಕ್ಕ, ಜಾಗವನ್ನೂ ಕದಲಿಸಿದ. ಅವನ ಅಮ್ಮ ಮಾತ್ರ ಊಂಹೂ. ಒಂದೆಳೆಯೂ ನಗುವಿಲ್ಲವಲ್ಲ ಬೆಂಗಳೂರಿನಲ್ಲಿ ಎಲ್ಲಿ ಯಾಕೆ ಕಳೆದಿರಬಹುದು ಎಂದು ಯೋಚಿಸುತ್ತಲೇ ಬ್ಯಾಗ್ ನಲ್ಲಿದ್ದ ಹಣ್ಣು ತೆಗೆಯಲು ನೋಡಿದೆ. ಇದ್ದಕ್ಕಿದ್ದ ಹಾಗೆ ಜೋರಾಗಿ ನನ್ನಷ್ಟಕ್ಕೆ ನಗತೊಡಗಿದೆ, ಹೊಟ್ಟೆಯ ನರಗಳೆಲ್ಲಾ ಸಡಿಲಗೊಂಡವು. ಆಕೆ ವಿಚಿತ್ರವಾಗಿ ನೋಡತೊಡಗಿದಳು. ನಿಧಾನ ಬ್ಯಾಗ್ನಿಂದ ಲಟ್ಟಣಿಗೆ ಎತ್ತಿ ತೋರಿಸಿದೆ ನಗುವೇ ಅವಳಾದಳು. 'ಇಲ್ನೋಡಿ, ಮಾವ ಮತ್ತು ಸೊಸೆಯ ಪ್ಯಾಕಿಂಗ್ ಪ್ರತಾಪ' ಎಂದೆ. ಆಕೆಯೂ ನನ್ನ ಹಾಗೆ ಕಣ್ಣಲ್ಲಿ ಸಣ್ಣಸಣ್ಣ ನೀರ್ಪುಗ್ಗೆ ಬರುವಂತೆ ನಗತೊಡಗಿದಳು. ಆಗಿದ್ದಿಷ್ಟೆ; ಬೆಳಗ್ಗೆ ಮನೆಯಲ್ಲಿ ಆಗಷ್ಟೇ ಹುಟ್ಟಿದ ಆನೆಮರಿಗಳಂಥ ಎರಡು ಮತ್ತವುಗಳ ಮರಿಗಳಂತಿದ್ದ ಎರಡು ಬ್ಯಾಗ್ ಗಳ ಪಕ್ಕದಲ್ಲಿ ಕರೀ ಲಟ್ಟಣಿಗೆ ಕುಳಿತಿತ್ತು. ಇದ್ಯಾಕೆ ಇಲ್ಲಿ ಎಂದು ಹುಬ್ಬು ಗಂಟು ಹಾಕಿ, ಅದರ ಪಕ್ಕದಲ್ಲಿ ಎರಡು ಸಣ್ಣಸಣ್ಣ ಕಣಕದುಂಡೆಗಳನ್ನು ನೋಡಿ, ಓಹ್ ಇದು ಮಗಳ ಆಟ ಎಂದು ಮತ್ತೇನೋ ಕೆಲಸದಲ್ಲಿ ತೊಡಗಿಕೊಂಡಿದ್ದೆ. ನಮ್ಮನ್ನು ಕರೆದೊಯ್ಯಲು ಬಂದ ತಮ್ಮ, ಬ್ಯಾಗ್ ಗಳನ್ನು ಎತ್ತಿಕೊಳ್ಳುವಾಗ, ಅದನ್ನೂ ಪ್ಯಾಕ್ ಮಾಡಿಬಿಟ್ಟಿದ್ದ.

ಸ್ವಲ್ಪ ಹೊತ್ತಿನ ಬಳಿಕ ಮಗಳನ್ನೆತ್ತಿಕೊಂಡು ಬಂದ ತಮ್ಮ, ಹುಚ್ಗಿಚ್ ಹಿಡೀತಾ ಎಂಬಂತೆಯೇ ನನ್ನ ನೋಡಿದ್ದ. ಅವನಿಗೂ ಮತ್ತೆ ಬ್ಯಾಗ್ ನಿಂದ ಲಟ್ಟಣಿಗೆ ತೋರಿಸಿದೆ, ಅವ ನಗಲಿಲ್ಲ. ಗಂಭೀರವದನನಾಗಿ, 'ಅಲ್ಲಿತ್ತು ಬ್ಯಾಗ್ ನಲ್ಲಿ ಹಾಕಿದೆ. ಊರಲ್ಲಿ ತರಲು ಹೇಳಿರಬಹುದೇನೋ' ಅಂದ. ಇಲ್ಲಪ್ಪ ಇಲ್ಲ ಎಂದು ಕಿಟಕಿಗೆ ಮುಖ ಮಾಡಿ ಕುಳಿತು ನೀರ್ಪುಗ್ಗೆಕಣ್ಣಲ್ಲಿ ನಗುತ್ತಲೇ ಇದ್ದೆ. ಧಾರವಾಡದ ನಗರೇಶ್ವರ ಗುಡಿಯ ಓಣಿ, ಲಕ್ಷ್ಮೀ ನಾರಾಯಣ ಜಾತ್ರೆಯ ಅಂಗಡಿಗಳು, ಆಟದಿಂದ ಅಡುಗೆ ಸಾಮಾನು ಗೀಮಾನುಗಳ ತನಕ ಸಾಲುಹಚ್ಚಿ ನಿಂತವು. ಐವತ್ತು ರೂಪಾಯಿ ಬೆಲೆಯ ಸೀಸಂ ಕಟ್ಟಿಗೆಯ ಲಟ್ಟಣಿಗೆಯನ್ನು ಮೂವತ್ತು ರೂಪಾಯಿಗೆ ಚೌಕಾಸಿ ಮಾಡಿ ಅಮ್ಮನೊಂದಿಗೆ ಖರೀದಿಸಿದ್ದು. ಮುಂದಿನ ವರುಷ ಅಂಥದೇ ಇನ್ನೊಂದು ಲಟ್ಟಣಿಗೆ ತರಲಾದರೂ ಆ ಜಾತ್ರೆಗೆ ಹೋಗಿ ಬಾ ಎಂದು ಅಮ್ಮನಿಗೆ ಹೇಳಿದ್ದು. ಎಲ್ಲವೂ ಚಪಾತಿ ಪದರಗಳಂತೆ ಬಿಡಿಸಿಕೊಳ್ಳತೊಡಗಿದವು. 

ಹುಬ್ಬುಗಳ ಮಧ್ಯೆ ಬೆರಳಿನಿಂದ ಕುಂಕುಮ ತೀಡಿ, ಅಡ್ಡಸೆರಗು ಹಾಕಿಕೊಂಡು ಎಂಟಕ್ಕೈದು ನಿಮಿಷ ಇರುವಾಗಲೇ ಅಮ್ಮ, ತನ್ನ ಕಾಲುಗಳನ್ನು ಚಾವಡಿ ಓಣಿಗೆ ತಲುಪಿಸಿಬಿಟ್ಟಿರುತ್ತಿದ್ದಳು. ಅದ್ಯಾಕಷ್ಟೊಂದು ಬಡಬಡಕೊಂಡು ಓಡಬೇಕು, ಐದು ನಿಮಿಷ ಹೆಚ್ಚೂಕಡಿಮೆಯಾದರೆ ಜಗತ್ತೇನು ಮುಳುಗಿ ಹೋಗುತ್ತದೋ? ಪ್ಯಾಲೆಟ್ ಬ್ರಷ್ನೊಳಗೆ ಮುಳುಗಿದ್ದರೂ ಹೀಗೆ ಅಪ್ಪಾಜಿ ಹೇಳುತ್ತಿದ್ದ ಮಾತಿಗೆ ಭಾನುವಾರ ಮಾತ್ರ ರಜಾ. 'ತಂಗಿ ಆ ನಾಲ್ಕು ಚಪಾತಿ ಲಟ್ಟಿಸಿಬಿಡು, ಗೌಡರ ಕಟ್ಟೆ ಮೇಲೆ ಕುಳಿತ ಮಂದಿ ಮುಂದೆ ಹಾಯ್ದು ಹೋಗುವಾಗ, ಅವರ ಪ್ರಶ್ನೆಗಳಿಗೆ ಉತ್ತರಿಸೋ ಸಂಕಟ ನನಗೇ ಗೊತ್ತು' ಯಾವಾಗಲೂ ಹೇಳುವ ಅಮ್ಮನ ಮಾತುಗಳನ್ನು ನೆನಪಿಸಿಕೊಳ್ಳುತ್ತ, ಕಾಲ ಕೆಳಗಡೆ ಮಣೆ ಇಟ್ಟುಕೊಂಡು ಗ್ಯಾಸ್ ಕಟ್ಟೆ ನಿಲುಕಿಸಿಕೊಂಡು ಅಂತೂ ಇಂತೂ ಚಪಾತಿಗೊಂದು ಗತಿಕಾಣಿಸಿ, ಡಬ್ಬಿಗೆರಡು ಮಡಿಚಿಕೊಂಡು ಧಾರವಾಡದ ಬಸ್ಸು ಹಿಡಿಯಲು ಓಡಿಬಿಡುತ್ತಿದ್ದೆ. ಐದನೇ ಕ್ಲಾಸಿಗೆ ಐದು ಕೆಜಿಯನ್ನೂ ಮೀರಿದ ಪಾಟಿಚೀಲದ ಭಾರ ಈ ದಿನಗಳವರೆಗೂ ಯಾಕೊ ಹಾಗೇ ಇದ್ದಂತಿದೆ. 

ಮುಂದೊಂದು ದಿನ ನನ್ನವ ತನ್ನ ಪ್ರೀತಿ ಪೀಠಿಕೆ ಹಾಕುವ ಮೊದಲು, 'ನೋಡು ನನ್ನಮ್ಮ ಎಷ್ಟು ಚೆನ್ನಾಗಿ ಚಪಾತಿ ಮಾಡುತ್ತಾಳೆ, ಯಾವಾಗಲೂ ಅದೇ ಮೃದುತ್ವ ಅದೇ ರುಚಿ' ಅಂತೆಲ್ಲ ಹೇಳಿದ್ದ. ಅರೆನಾರಿನ ನನ್ನ ಚಪಾತಿ ಶೈಲಿಯನ್ನು ಅತ್ತೆ ಕ್ರಮೇಣ ಮೆತ್ತಗಾಗಿಸುತ್ತ ಬಂದರು. ಪ್ರತೀ ಸಲ ತವರಿಗೆ ಬಂದಾಗ ನನ್ನಮ್ಮ, 'ತಂಗಿ, ನಿನ್ನಂಗೆ ಮೆತ್ತಗಿನ ಚಪಾತಿ ಮಾಡಲು ನನಗೆ ಬರುವುದೇ ಇಲ್ಲ' ಎಂದು ಚಿಕ್ಕ ಹುಡುಗಿಯಂತೆ ಕತ್ತು ಅಲ್ಲಾಡಿಬಿಡುತ್ತಿದ್ದಳು. ಕಲಿಸಿದವರು ನೀವೇ ಅಲ್ಲಾ? ನಕ್ಕು ಚಪಾತಿ ಲಟ್ಟಿಸುತ್ತಿದ್ದೆ. 

ಮೊನ್ಮೊನ್ನೆ ಒಂದು ಮಧ್ಯಾನ್ಹ ಅಪ್ಪ ಮಗಳು ಉಂಡು ಮಲಗಿದ್ದರು. ಪಕ್ಕಕ್ಕೆ ಮಲಗಿದೆ. ಕಳ್ಳನಿದ್ದೆಯಲ್ಲಿದ್ದ ಮಗಳು ದೂಡಿ, 'ಅಮ್ಮಾ ಗೋ ಕಿಚನ್' ಎಂದಳು. ಏನ್ಮಾಡ್ಲಿ ಈಗಲ್ಲಿ ಅಂದೆ. ಪಾತಿತಿ (ಚಪಾತಿ) ಎಂದಳು. ಹೌದಲ್ಲ ಈ ಲಟ್ಟಿಸುವುದು, ಲಟ್ಟಿಸಿದ ಮೇಲೆ ಬೇಯಿಸುವುದು, ಬೆಂದಮೇಲೆ ಅರೆಕಿಂಡಿಯೊಳಗಿನ ಡಬ್ಬಿಯೊಳಗೆ ನಸುಬೆಚ್ಚಗಿರುವಂತೆ ನೋಡಿಕೊಳ್ಳುವುದು ಥೇಟ್ ರೈಲು ಓಟದಂತೆಯೇ ಅಲ್ವಾ ಎಂದೆನಿಸಿ ಹಾಲಿಗೆ ಬಂದು ಕುಳಿತೆ.

'ಅಮ್ಮಾ ಪಾತಿತಿ' ಮಗಳು ಭುಜ ಅಲ್ಲಾಡಿಸಿದಳು. ಈದಿನ ತಾನಾಗೇ ಹಸಿವಾಗಿದೆ ಎಂದು ಆಕೆ ಹೇಳಿದ್ದು ಕೇಳಿ ಮನಸ್ಸು ತುಂಬಿಬಂತು. ಸುರುಳಿಸುತ್ತಿ ಕೊಟ್ಟೆ, ಸರಸರಳವಾಗಿ ಹೊಟ್ಟೆಗಿಳಿಸಿದಳು. ಇನ್ನು ದಿನವೂ ರೈಲು ಹತ್ತೋಣ, ರಗಳೆಯಿಲ್ಲದೆ ಊಟ ಮಾಡುತ್ತಿ ಎಂದೆ. ರೈಲಿನ ಕೂಗಿಗೆ ತನ್ನ ದನಿಯನ್ನೂ ಸೇರಿಸಿ ಕೂ ಎಂದಳು ನಕ್ಕಳು ಕುಣಿದಳು ದಣಿದಳು ಮಣಿದಳು ಮಣಿಸಿದಳೂ.

ನಿಮ್ಮ ಲಟ್ಟಣಿಗೆ ಸರಿಯಿಲ್ಲ ಇದು ಸೀಸಂ ಕಟ್ಟಿಗೆಯದ್ದಲ್ಲ ಭಾರವೂ ಇಲ್ಲ. ಅದ್ಹೇಗೆ ಲಟ್ಟಿಸುತ್ತಿಯೋ ಎಂದು ಪ್ರತೀಸಲ ಅಮ್ಮನಿಗೆ ಗುರುಗುರು ಮಾಡುತ್ತಿದ್ದೆನಲ್ಲ. ಆದರೆ ಈ ಸಲ ಊರಿಂದ ಬಂದ ನನ್ನ ಸೀಸಂ ಕಟ್ಟಿಗೆಯ ಲಟ್ಟಣಿಗೆ ಒಂದು ಸತ್ಯ ಬಯಲು ಮಾಡಿತು; ಲಟ್ಟಿಸಿಕೊಳ್ಳುವ ಕಲ್ಲು ಹುರುಬರುಕಾಗಿದೆ ಹೊರತು ಲಟ್ಟಣಿಗೆಯದ್ದೇನೂ ತಪ್ಪಿಲ್ಲ. ಆದ್ದರಿಂದ ಅಲ್ಲಲ್ಲೇ ಸಮತಟ್ಟಾದ ಜಾಗ ಹುಡುಕಿ ಪದಪದರ ಚಪಾತಿ ಲಟ್ಟಿಸುವ ಪ್ರಯತ್ನ ಜಾರಿಯಲ್ಲಿದೆ. ಚಿಕ್ಕವಳಿದ್ದಾಗ ನನ್ನ ದೊಡ್ಡಮ್ಮ ನನಗೆಂದು ಕೊಟ್ಟ ಹಪ್ಪಳ ಲಟ್ಟಿಸುವ ಗೀರುಗೀರಿನ ಲಟ್ಟಣಿಗೆ ಈಗ ಮೂರ್ಹೊತ್ತೂ ಮಗಳ ಸಂಗಾತಿ. 

ಈ ಹೊತ್ತಿನಲ್ಲಿ ನನ್ನ ದೊಡ್ಡವಾಡದ ಓಣಿ ಮತ್ತು ಬೇಸಿಗೆ ರಜೆಯಲ್ಲಿ ಅವರಿವರ ಮನೆಗಳಲ್ಲಿ ಶಾವಿಗೆ ಮಾಡುತ್ತಿದ್ದದ್ದು ಎಳೆಎಳೆಯಾಗಿ ನಿಲ್ಲುತ್ತಿದೆ. ನಮ್ಮ ಸೋದರತ್ತೆ ಕೈಶಾವಿಗೆ ಮಾಡಿ ಕೊಟ್ಟುಕಳಿಸುತ್ತಿದ್ದರಾದ್ದರಿಂದ ನಮ್ಮ ಮನೆಯಲ್ಲಿ ಶಾವಿಗೆ ಸಂಭ್ರಮ ಇರಲೇ ಇಲ್ಲ. ಆದರೆ ಮಧ್ಯಾಹ್ನ ಅಪ್ಪ ಅಮ್ಮ ಮಲಗಿದಾಗ, ಕಳ್ಳಬೆಕ್ಕಿನಂತೆ ಹೋಗಿ, ಅಕ್ಕಪಕ್ಕದ ಮನೆಗಳಲ್ಲಿ ಬುಟ್ಟಿ ಮೇಲೆ ಶಾವಿಗೆ ಹೆಣಿಗೆ ಹಾಕಲು ಓಡಿಬಿಡುತ್ತಿದ್ದೆ. ಕಟ್ಟೆಯ ಮೇಲೆ ಗಾದಿ ದಿಂಬುಗಳನ್ನಿಟ್ಟು ಅದರ ಮೇಲೆ ಕಪ್ಪನೆಯ ಮಾರುದ್ದದ ಗೀರು ಮಣೆಯನ್ನಿಟ್ಟು, ಶಾವಿಗೆ ಹೊಸೆಯುವವರು ಸೀರೆ ಕಚ್ಚೆ ಕಟ್ಟಿಕೊಂಡು ಅಡ್ಡಗಾಲು ಹಾಕಿ ಥೇಟ್ ಬೆಳವಡಿ ಮಲ್ಲಮ್ಮ ಕಿತ್ತೂರು ಚೆನ್ನಮ್ಮನಂತೆ ಮಣೆ ಸವಾರಿ ಮಾಡಿ ಶಾವಿಗೆ ಹೊಸೆಯಲು ಕುಳಿತುಬಿಡುತ್ತಿದ್ದರು. ಕೆಳಗೊಂದೂ ಮೇಣದಬುಟ್ಟಿ ಇಟ್ಟುಕೊಂಡು ಕುಳಿತವರು U ಆಕಾರದಲ್ಲಿ ಮೇಲಿನಿಂದ ಹೊಸೆಯುತ್ತಿದ್ದ ಶಾವಿಗೆ ಎಳೆಯನ್ನು ತುಂಡರಿಸದೇ ಒಂದೊಂದು ಗೇಣಿನಗಲ ಹೆಣಿಗೆಗಳನ್ನು ಹಾಕುತ್ತಿದ್ದರು. ಶೆಟ್ಟರ ಬಸಮ್ಮನೋ ' ಅವ್ವಿ ನೀ ಹೋಗು ನಿಮ್ ಅಪ್ಪ ಅವ್ವನ ಕಡೀಂದ ನಮ್ಮನ್ನ ಬೈಸ್ತೀ' ಎಂದು ರಟ್ಟೆ ಹಿಡಿದು ಎಬ್ಬಿಸಲು ನೋಡುತ್ತಿದ್ದಳು. 'ಏಯ್ ಸುಮ್ನಿರ್ಬೇ ಅವ್ರ ಮಲ್ಕೊಂಡಾರು, ನಾ ಶಾವಿಗಿ ಹಿಡ್ಯಾಕಿನ' ಅಂತ ಬಿಡಿಸಿಕೊಂಡು ಎಳೆ ಸಂಬಾಳಿಸುತ್ತಿದ್ದೆ. 

ಮಾರನೇ ದಿನ ಎದುರು ಮನೆ ರಾಜಿ ಅಳುತ್ತ ಮಲಗಿದ್ದಳು. ಅವರವ್ವ ಶಾಂತವ್ವ ಸೊಂಟ ಉಜ್ಜುತ್ತ, 'ಎಬರೇಶಿ ಹಳೇ ಎಬರೇಶಿ. ಮನ್ನೆ ದರೂಡ್ಯಾರ ಮನ್ಯಾಗ ಹೊಸದಿ ಈವತ್ತ ಶೆಟ್ರ ಮನ್ಯಾಗ. ನಡಾ ಏನಾಗಬೇಕದ. ಮಾಡಾವ್ರಿದ್ರ ಮಾಡಿಸ್ಕೋತ ಇರ್ತಾರ. ಒಂದೀಟ ಸಣ್ಣಾ ದಪ್ಪಾ ಎಳಿ ಬಿಟ್ಟಂಗ ಮಾಡಬೇಕು, ತಾನ ಎಳಿ ಕತ್ತರಸ್ತಾವು. ಆಗ ತಾಂವ ಇಳಸ್ತಾರ ಮಣಿ ಮ್ಯಾಲಿಂದ. ಈಗ ನೋಡ ಈ ನೋವಾ ಬ್ಯಾನಿ ಯಾರ ತಿನಬೇಕ' ಗದರುತ್ತಿದ್ದಳು. ನನಗಿಂತ ಎರಡು ವರ್ಷ ದೊಡ್ಡವಳಿದ್ದ ರಾಜಿ ಆಗ ಏಳನೇ ಕ್ಲಾಸಿನಲ್ಲಿದ್ದಳು. ತೀರಾ ಮುಗ್ಧೆ. ಆದರೆ ಅವರಮ್ಮ ಅವಳಿಗೆ ಹಾಗೆಲ್ಲ 'ಬುದ್ಧಿ' ಹೇಳಿದ್ದು ನೋಡಿ, ಯಾಕೋ ಏನೋ ಕಸಿವಿಸಿಯಾಗಿತ್ತು. ಮಾರನೇ ದಿನ ಶೆಟ್ಟರ ಮನೆಗೆ ರಾಜಿ ಶಾವಿಗೆ ಮಣೆ ಮೇಲೆ ಕುಳಿತಾಗ ನಾನೂ ನೋಡೇ ನೋಡಿದೆ. ಒಂದೇ ಸಮ ಗಾಜಿನ ಬಳೆಗಿಂತ ತೆಳು ಎಳೆಯನ್ನು ಎಲ್ಲೂ ತುಂಡರಿಸದೆ ಮೂರು ತಾಸು ಕೂತಲ್ಲೇ ಕೂತು ತನ್ನತನದಲ್ಲೇ ಹೊಸೆದಳು. ಅಕ್ಕಪಕ್ಕದ ಮಣೆಯವರು ಅತ್ತೆ ಮಾವ ನಾದಿನಿ ಮೈದುನ ಸೊಸೆ ಹೀಗೆ ಎಲ್ಲರ ಮೇಲಿನ ಸಿಟ್ಟನ್ನೂ ಹೊಸೆದು ಕೊನೆಯಲ್ಲಿ ಚಹಾ ಚುರುಮುರಿ ತಿಂದು ಹಗುರಾಗಿ ನಗುತ್ತ ತಂತಮ್ಮ ಮನೆಗೆ ಹೋಗಿಬಿಟ್ಟರು. ರಾಜಿ ಮಾತ್ರ ಅವರವ್ವ ಬರುವ ಮೊದಲು ಮನೆ ಸೇರಿಕೊಂಡು ಹತ್ತಿಕಟ್ಟಿಗೆ ಒಟ್ಟು ಮಾಡಿ ಒಲೆಯೊಳಗೆ ನೂಕಿ, ಊದುಗೊಳವೆ ಬಾಯಿಗೆ ಹಿಡಿಯುತ್ತಿದ್ದಳು. ಮಾತನಾಡಿಸಿದರೆ ಮಾತ್ರ ಚುಟುಕು ಉತ್ತರ ಉಳಿದಂತೆ ಗಾಣದೆತ್ತಿನ ಕೆಲಸ. ಈಗೆಲ್ಲಿದ್ದಾಳೊ ಏನೋ, ಒಂದೂ ಗೊತ್ತಿಲ್ಲ. ಅವಳೇನೂ ನನಗೆ ಆಪ್ತಳಲ್ಲ ಆದರೆ ಅಷ್ಟೊಂದ್ಯಾಕೆ ಸುಮ್ಮನಿರುತ್ತಿದ್ದಳೋ, ಅಥವಾ ಎಲ್ಲರ ಹಾಗಿರಲಿಲ್ಲ ಎಂಬ ಕಾರಣಕ್ಕೇ ಈ ನಡುರಾತ್ರಿಯಲ್ಲೂ ನೆನಪಾದಳೋ.

ಅವರವ್ವ ಶಾಂತವ್ವ ಆಕೆಗೆ ಹೇಳಿದ ಮಾತು ನನ್ನವ್ವ ನನಗೆಂದೂ ಯಾಕೆ ಹೇಳಲಿಲ್ಲ ಎಂದು ನಾ ಈಗಲೂ ಯೋಚಿಸುತ್ತ ಕುಳಿತಿದ್ದೇನೆ. ಎಷ್ಟು ಎಣಿಸಿ ಮಾಡಿದರೂ ಮತ್ತೆ ಬುಟ್ಟಿಯೊಳಗೆ ಚಪಾತಿ ಉಳಿದೇ ಉಳಿಯುತ್ತದೆ. ಅಂದಿನಿಂದ ಇಂದಿನವರೆಗೂ ಬದಲಾಗದ ಅಮ್ಮನ ಮಂತ್ರ ಇದು. ಇಂದೂ ಎಂದಿನಂತೆ ಒಂದೂವರೆ ಚಪಾತಿ ಬುಟ್ಟಿಯೊಳಗೆ ಮಲಗಿದೆ. ಮಗಳು ಗೀರುಲಟ್ಟಣಿಗೆ ಹಿಡಿದುಕೊಂಡೇ ನಿದ್ದೆ ಹೋಗಿದ್ದಾಳೆ. ಚಂದಿರ ಅರ್ಧ ಸವಾರಿ ಮಾಡಿಯಾಗಿದೆ, ಸೂರ್ಯ ಮುಂದಿನ ಪಾಳಿಗೆ ತಯಾರಾಗುತ್ತಿರಬಹುದು. ಯಾವುದೂ ನಿಲ್ಲುವುದಿಲ್ಲವಲ್ಲ? ಅಲ್ಲೆಲ್ಲೋ ದೂರದಲ್ಲಿ ರೈಲು ಬರುತ್ತಿದೆ ಹಾಂ ಅದೆಅದೇ ಕೂಗು, ಅದೇ ಏದುಸಿರು. ಈಗ ಹೋಗಿ ಹತ್ತಿಬಿಡಲೇ? ಊಂಹೂ ಬೇಕೆಂದಾಗ ಏರಲಾಗುವುದಿಲ್ಲ ಬೇಡವೆಂದಾಗ ಇಳಿಯಲಾಗುವುದಿಲ್ಲ. ಕೆಂಪು ಹಸಿರು ನಿಶಾನೆಗಳ ಮಧ್ಯೆ ಓಟ ಊಟ ನೋಟ ಮಾಟ ಇದೆಂಥ ಆಟ? 

ಈ ಹದರಾತ್ರಿಯಲ್ಲಿ ಬಟ್ಟಬಯಲ ಒಂಟಿ ಮರದ ಎದೆಗೆ ಬೆನ್ನು ಆನಿಸಿ ನನ್ನುಸಿರ ನಾನೇ ಕೇಳಿಸಿಕೊಳ್ಳುತ್ತ ಅರೆಗಣ್ಣಾಗಬೇಕೆನ್ನಿಸುತ್ತಿದೆ. ಸುಳಿಸುಳಿದು ಸಣ್ಣಗೆ ಮೈಮುದ್ದೆ ಮಾಡುವ ಗಾಳಿಗೆ ಕಿವಿಹಿಂಡಿ ಅಚ್ಛೆಯ ಬಿಸಿಯಿಸಿರಿನಿಂದ ನಶೆಯೇರಿಸಬೇಕೆನ್ನಿಸುತ್ತಿದೆ. ನಡುರಾತ್ರಿ ಉದುರುವ ಒಂದೊಂದೂ ಹಣ್ಣೆಲೆಗಳ ಉಡಿಯೊಳಗೆ ತುಂಬಿಕೊಳ್ಳುವ ಬಯಕೆ ತುದಿಯೇರಿದೆ. ಏನು ಮಾಡುವುದು, ಕಪ್ಪು ಕರಗಿ ನೀಲಿಗೆ ತಿರುಗುವತನಕ ಮತ್ತದರ ಮಧ್ಯದ ರಂಗು ಕೆಂಪೇರಿ ಓಕುಳಿಗಿಳಿಯುವ ತನಕ ಕಾಯಲೇಬೇಕಲ್ಲ. ಖೋಡಿಮನಸ್ಸು, ಬಾಂದಳಿರ ಮೋಹಕತೆಗೆ ರೂಪಕ ಹುಡುಕುತ್ತ ಕತ್ತಲೆಗೆ ಕಣ್ಣಂಟಿಸಿ ಕುಳಿತಿದೆ.