Thursday, January 14, 2016

ಸದ್ದಿಗೆ ಸೂತಕವಿಲ್ಲ



ನಾನಿಲ್ಲಿ ಬಾಗಿಲ ಬಳಿ ಬಂದಾಗ
ದೀಪವೂ ಮಿಸುಕಾಡದು
ನೀ ಬಾಗಿಲೆಡೆ ಹೋದದ್ದೇ
ಕಂಪಿಸುತ್ತವಲ್ಲ ಕಿಟಕಿಗಳು?

ನಾ ತೆರೆಯುವಾಗಲೂ ನೀ ಮುಚ್ಚುವಾಗಲೂ
ನೀ ತೆರೆಯುವಾಗಲೂ ನಾ ಮುಚ್ಚುವಾಗಲೂ
ಉಸಿರೆಲ್ಲ ಬಿಗಿ ಹಿಡಿದುಕೊಂಡಿರುತ್ತೇನೆ

ಹಿಡಿದಿಟ್ಟುಕೊಳ್ಳುವುದೆಂದರೆ?
ಹೊರಗಿನದು ಒಳಸೇರದಂತೆ ಒಳಗಿನದು ಹೊರಹೋಗದಂತೆ
ನಡುವಿನದು ನಡುಗದಂತೆ ಕಲಕಿ ಕದಡದಂತೆ... 
ಅಂತೆಅಂತೆಗಳ ಸಂತೆಯಲ್ಲಿ ಕಟ್ಟಿ ಕಂತೆಕಂತೆ 
ಅಂಜುವುದೆ ಶಬ್ದಕ್ಕೆ, ಅಳುಕುವುದೆ ಅದರಲೆಗಳಿಗೆ?
ಕಟ್ಟಿದ ಮನೆಚೌಕಟ್ಟಿಗಾತುನಿಂತು ಸ್ವಗತಕ್ಕಿಳಿದೆ
ಹೂಂಗುಡುತ್ತಿತ್ತು ಅಗಳಿ 
ಠಸ್ಸೆಗೆ ಶಾಯಿ ಹುಡುಕುತ್ತಿತ್ತು 
ಅಂಚೆಗಾರ ಗಾಳಿ 

 -ಶ್ರೀದೇವಿ ಕಳಸದ