Sunday, February 28, 2016

ಅಜ್ಞಾನದ ಬಲದಿಂದ...ಆಕೆ ಇಂದು ಮತ್ತೆ ಸಿಕ್ಕಿದ್ದಳು. ಆದರೆ ಈ ಸಲ ಕೈಯಲ್ಲಿ ಎಳನೀರಿತ್ತು. ಮಬ್ಬುಗತ್ತಲಲ್ಲಿ ರಸ್ತೆ ದಾಟಲು ಹವಣಿಸುತ್ತಿದ್ದಳು. ಏನಜ್ಜಿ ಹೇಗಿದ್ದೀಯಾ, ಮೊಮ್ಮಗ ಹೇಗಿದ್ದಾನೆ ಅಂದಿದ್ದಕ್ಕೆ ನೀ ಯಾರು ಎಂದಳು. ನಾ ಹೇಳಿದ್ದನ್ನೆಲ್ಲ ಬಸ್ಸಿನ ಬ್ರೇಕ್ ನುಂಗಿಬಿಟ್ಟಿತು. ಹಿಂದೆಯಿಂದ ಲಾರಿಯವ ಎಚ್ಚರಿಸಿದ್ದಕ್ಕೆ ನಾ ನನ್ನ ಗಾಡಿಕಿವಿ ಇನ್ನೇನು ಹಿಂಡಬೇಕು, ಮೊಮ್ಮಗ ಕಾಲ್ ಮುರ್ಕಂಡವ್ನೆ ಕಣಕ್ಕೋ ಎಂದು ಕೈ ಮಾಡಿ ಹೇಳಲು ಹೋದಳು. ಆಕೆ ಸೆರಗು ತಲೆಯಿಂದ ಜಾರಿದ್ದೇ ಲಾರಿಯವನ ಲೈಟಿಗೆ ಅವಳ ಕತ್ತಿನಲ್ಲಿದ್ದ ಮಧ್ಯಮ ಗಾತ್ರದ ಚರ್ಮದ ತೆಂಗಿನಕಾಯಿ ಮಿಂಚಿತು. ಅವಳಿಗೆ ನಾ ಯಾರೆಂದು ತಿಳಿಯಿತೋ ಬಿಟ್ಟಿತೋ ಗೊತ್ತಿಲ್ಲ. ಆದರೆ ಆಕೆಯ ಕುತ್ತಿಗೆ ಮತ್ತು ಎದೆಯ ಮಧ್ಯೆ ಇದ್ದ ಮುಖಗಾತ್ರದಷ್ಟೇ ಇದ್ದ ಗಂಟೇ ಅವಳನ್ನು ಇಂದಿನವರೆಗೂ ನೆನಪಿಟ್ಟುಕೊಳ್ಳಲು ಮತ್ತು ಕಳವಳಕ್ಕೊಳಗಾಗಲು ಕಾರಣ.

ನಾಲ್ಕು ವರ್ಷಗಳ ಹಿಂದೆ ಈಗವಳು ಕಂಡ ಸರ್ಕಲ್ಲಿನಲ್ಲೇ ಡಿವೈಡರ್ ಗುಂಟ ಕಸ ಗುಡಿಸುತ್ತಿದ್ದಳು. ಫೂಟು ಅಂತರದಲ್ಲೇ ಸರಬರ ಬಸ್ ಕಾರು ಲಾರಿಗಳು ಓಡಾಡುತ್ತಿದ್ದರೂ ಸುಮಾರು ಅರವತ್ತರ ಆಕೆ ತನ್ನ ಮನೆಯನ್ನು ಗುಡಿಸುವಷ್ಟೇ ತಾಳ್ಮೆಯಿಂದ ಸ್ವಚ್ಛಗೊಳಿಸುತ್ತಿದ್ದಳು. ಇವಳನ್ನು ಹೀಗೆ ಗಮನಿಸಿವಂತೆ ಮಾಡಿದ್ದು ಆಕೆಯ ಕತ್ತಿಗೆ ಅಡರಿ ಜೋತಾಡುತ್ತಿದ್ದ ಚರ್ಮದ ಗಂಟು. ಅಸೈನ್ಮೆಂಟಿಗೆ ತಡವಾಗಿದ್ದರೂ ಅಜ್ಜಿ ಅಜ್ಜಿ ಎಂದು ಕೂಗಿದೆ. ಆಕೆಯೋ ತನಗಲ್ಲವೆಂಬಂತೆ ಕಸ ಗುಡಿಸುತ್ತಲೇ ಇದ್ದಳು. ಕೊನೆಗೆ ಗಾಡಿ ಪಕ್ಕದಲ್ಲಿ ನಿಲ್ಲಿಸಿ, ಏನಾಗಿದೆ ನಿಮಗೆ ಅಂದೆ. ಎಲ್ಲಿ ಏನು ಎಂದಳು. ಕತ್ತಿಗೆ ಅಂದೆ. ಅದಾsss ಎಂದು ಸೆರಗು ಮುಚ್ಚಿದಳು. ಗೊತ್ತಿಲ್ಲ ಸಾನೆ ವರ್ಸ ಆಯ್ತು ಇದಾಗಿ ಅಂಗೇ ಐತೆ ಅಂದ್ಲು. ಡಾಕ್ಟರ್ ಹತ್ರ ಹೋಗಿದ್ರಾ? ಅಂದೆ. ಓಗಿಲ್ಲ ಅಂದಳು. ಕಿವಿ ಬೇರೆ ಮಂದ ಅನ್ಸತ್ತೆ. ಎಲ್ಲದಕ್ಕೂ ಆಆ ಎನ್ನುತ್ತಿದ್ದಳು. ಸರಿ ಈಗ ನಿಮ್ ಮನೆ ಎಲ್ಲಿ ಏನು ಕತೆ? ಡಾಕ್ಟರ್ ಹತ್ರ ಹೋಗೋಣ ನಾ ಕರ್ಕೊಂಡ್ ಹೋಗ್ತೀನಿ ಅಂದೆ. ಅವಳು ಹೇಳಿದ ವಿಳಾಸ ನನಗರ್ಥವಾಗಲಿಲ್ಲ. ಆಯ್ತು ನಾಳೆ ಇದೇ ಹೊತ್ತಿಗೆ ಇಲ್ಲೇ ಕಾಯ್ತಿರ್ತೀನಿ ಬರ್ತೀರಾ ತಾನೆ? ಎಂದೆ. ಹೂಂ ಎಂದಳು. ಅಬ್ಬಾ ಎಂದು ಸಮಾಧಾನಿಸಿ ಗಾಡಿ ತಿರುಗಿಸಿಕೊಂಡೆ. ನಾಳೆ ಯಾವ ಡಾಕ್ಟರ್ ಬಳಿ ಕರೆದುಕೊಂಡು ಹೋಗುವುದು? ಆಪರೇಷನ್ ಗೆ ಎಷ್ಟು ಹಣ ಖರ್ಚಾಗಬಹುದು? ಹೇಗೆ ಹೊಂದಿಸುವುದು ಅಂತೆಲ್ಲ ಯೋಚಿಸುತ್ತ ಇನ್ನೊಮ್ಮೆ ಖಚಿತಗೊಳಿಸಿಕೊಳ್ಳೋದು ಒಳ್ಳೇದು ಯಾವುದಕ್ಕೂ ಎಂದು U ಟರ್ನ್ ತೆಗೆದುಕೊಂಡೆ.

ಆ ಅಜ್ಜಿ ಗುಡಿಸಿದ ಕಸವನ್ನೆಲ್ಲ ಗಾಡಿಯೊಳಗೆ ಸುರಿದುಕೊಳ್ಳಲು ಇನ್ನೊಬ್ಬ ಪೌರಕಾರ್ಮಿಕೆ ಅಲ್ಲೇ ನಿಂತಿದ್ದಳು. ವಯಸ್ಸು ಮೂವತ್ತೂ ದಾಟಿರಲಿಲ್ಲ. ನೀವೊಮ್ಮೆ ಅಜ್ಜಿಗೆ ಕೇಳಿ. ಈಗಷ್ಟೇ ನಾ ಮಾತಾಡಿಕೊಂಡು ಹೋದೆ ಗಂಟಲಿನ ಗೆಡ್ಡೆ ವಿಷಯ ಅಂದೆ. ಅದನ್ನು ಕೇಳಿಸಿಕೊಂಡ ಅಜ್ಜಿ, ಒಮ್ಮೆಲೆ ಮೈಮೇಲೆ ದೇವರು ಬಂದಂತಾಡತೊಡಗಿದಳು, 'ಅದು ದ್ಯಾವ್ರು ಕೊಟ್ಟಿದ್ದು. ದಾಕಟ್ರತ್ತ ಓಗ್ಬೇಕಂದಾಗ್ಲೆಲ್ಲಾ ಜರ ಬರೋದು. ಡಾಕುಟ್ರತ್ರ ಓಗೋದು ಆ ದ್ಯಾವ್ರಿಗೆ ಗೊತ್ತಾಗ್ಬುಟ್ಟೇ ಜರಾ ಬರಾದೇನೋ ಅನ್ಕಂಡ್ ಸುಮ್ಕಾಗ್ಬಿಟ್ಟೆ. ಅನಿ ನೀರೂ ಇಳಿಯಾಕಿಲ್ಲ ಆಗಾ ಕತ್ತೆಲ್ಲಾ ನೋವ್ ಬರಾದು, ಇಂಗೇ ಆಗ್ಬುಟ್ಟು ಸತ್ಗಿತ್ ಓಗ್ಬುಟ್ರೆ ನನ್ ಮೊಮ್ಮಗನ್ ಮದ್ವೆ? ನಾಳೆ ಅಮಾಸೆಗೆ ಅತ್ತ ವರ್ಸಾ, ಅರಕೆ ತಪ್ಪಸ್ದೆ! ಮಗಿಗೆ ಅಪ್ಪ ಅವ್ವ ಇಲ್ಲಾ' ನಾನೇ ಎಲ್ಲಾ ಎಂದು ಮುಖ ಒರೆಸಿಕೊಂಡಳು. ಸರಿ ಅಜ್ಜಿ, ಇದೆಲ್ಲಾ ಹರಕೆಯಿಂದ ಕಮ್ಮಿ ಆಗಲ್ಲ, ಡಾಕ್ಟರ್ ಹತ್ರಾನೇ ಹೋಗ್ಬೇಕು ಅಂದೆ. ನಾ ಬದಕ್ಬೇಕ್ ಕಣವ್ವ, ನಾ ಬರಾಕಿಲ್ಲ' ಎಂದು ಮುಖ ತಿರುಗಿಸಿ ಗಡ್ಡೆಯನ್ನೊಮ್ಮೆ ಸೆರಗಿನಿಂದ ಒರೆಸಿಕೊಂಡು ಒತ್ತಿ ಹಿಡಿದಳು. ಇತ್ತ ತುಂಬಿದ ಬುಟ್ಟಿ ಬಗ್ಗಿಸಿದ್ದೇ ಸಾಕು ಗುಡಿಸಿದ್ದ ಕಸವೆಲ್ಲ ಜರ್ರನೇ ಗಾಡಿಗಿಳಿದುಬಿಟ್ಟಿತು. ಅರೆ ಏನಿದು ಅಜ್ಜಿ ಈಗಷ್ಟೇ ಬರ್ತೀನಿ ಅಂದಿದ್ಯಲ್ಲ ಅಂದೆ. ಈಗ ಬರಾಕಿಲ್ಲ ಓಗೆ ತಾಯಿ ಎಂದಳು. ಪಕ್ಕದಲ್ಲಿದ್ದವಳ ಮುಖ ನೋಡಿದೆ ಏನು ಮಾಡುವುದೆಂಬಂತೆ. ಆಕೆ ನಗುತ್ತ ಸೊಂಟದ ಮೇಲೆ ಕೈ ಇಟ್ಟು ನಿಂತಿದ್ದಳು. ಛೆ ಇವಳೇನಿವಳು ನಾನಿಲ್ಲಿ ಒದ್ದಾಡುತ್ತಿದ್ದರೆ ನಗುತ್ತಿದ್ದಾಳಲ್ಲ! ತಮಿಳುನಾರಿ, 'ಗನ್ನಡ ತೆರಿಯದು' ಎಂದಳು. ಮತ್ತೆ ಇಷ್ಟೊತ್ತನಕ ಇಲ್ಲಿ ನಿಂತ್ಕೊಂಡ್ ಹೂಂ ಹೂಂ ಅಂತಿದ್ದೆಯಲ್ಲ ಎಂದು ಕೇಳಬೇಕೆನ್ನಿಸಿತು, ಕೇಳಲಿಲ್ಲ.

ಗಾಡಿ ತಿರುಗಿಸುವಷ್ಟರಲ್ಲಿ ಬಾಳೆಹಣ್ಣಿನ ಗಾಡಿಯಂವ ಓಡಿಬಂದ. 'ಸಂಜೆ ಎಂಟ್ ಗಂಟೆಗೆ ಇಲ್ಲೇ ಈ ಕಲ್ ಮ್ಯಾಕೇ ಬಿದ್ಕಂಡಿರ್ತಾನೆ ಆ ಮುದ್ಕಿ ಮಮ್ಮಗ. ಅದೋ ದಿನಾ ಕುಡೀತದೆ. ಆ ಯಪ್ಪಂಗೆ ಈ ಯಮ್ಮ ಅದ್ಯಾವ ಎಣ್ ಗಂಟಾಕ್ತಾಳೊ ಏನೋ. ಆಸೆ ಮಡೀಕ್ಕಂಡ್ ಕೂತದೆ ಈ ಅಜ್ಜಿ. ಆಗಾಗ ಉಸಾರ್ ತಪ್ತಾಳೆ ಜರ ಬಂದು. ಕತ್ತಲ್ಲಿರೋ ಗೆಡ್ಡೆ ದೊಡ್ಡಕಾಗಿ ಆಗಿ ಕತ್ತು ಬೆನ್ನು ಬಗ್ಗೋಗದೆ. ಆದ್ರೂ ಕ್ಯಾಮೆ ಬಿಡಾಕಿಲ್ಲಾ ಅಂತದೆ ಮುದ್ಕಿ'  ಕೇಳದೆ, ಕರಿಯದೇ ಬೈಟ್ ಕೊಟ್ಟಂತೆ ಮಾಡಿ ಅವ ಓಡಿದ.

ಯಾವ ದೇವರಂವ ಏನಂತೆ ಕತೆ ಅವನದ್ದು? ಒಂದು ದಿನವೂ ಡಾಕ್ಟರ್ ಬಳಿ ಹೋಗದೆ ಮುಖದ ಗಾತ್ರಕ್ಕೆ ಸ್ಪರ್ಧೆ ಒಡ್ಡುವ ರೀತಿಯಲ್ಲಿ ಬೆಳೆದು, ತೆಂಗಿನಕಾಯಿ ಆಕಾರದಲ್ಲಿ ಜೋತುಬಿದ್ದ ಈ ಗೆಡ್ಡೆಯಿಂದ ಇವಳ ಗತಿ ಏನಾಗಬೇಡ? ಮೊಮ್ಮಗನಂತೆ ಅವನ ಮದುವೆಯಂತೆ ಇವಳೊಂದು ಹರಕೆಯ ಕುರಿ! ನನ್ನ ಗಾಡಿ ಸ್ವಗತವನೇರಿ ತುಸು ಜೋರಾಗೇ ಓಡತೊಡಗಿತು.

ಹೀಗೆ ನಾಲ್ಕು ವರ್ಷದ ಹಿಂದಿನ ಘಟನೆಯೆಲ್ಲ ಕಣ್ಮುಂದೆ ಬಂದು ಮನೆ ತಲುಪುವಷ್ಟರಲ್ಲಿ ಮನೆಗೆಲಸದವಳ ಮಿಸ್ ಕಾಲ್ ಇತ್ತು. ವಾಪಾಸು ಕರೆ ಮಾಡಿದಾಗ 'ದ್ಯಾವ್ರಿಗ್ ಓಗ್ಬೇಕಕ್ಕ ರಜೆ ಬೇಕು. ಅರಕೆ ಐತೆ ಮಗೀಂದು' ಎಂದಳು. ಏನು ಹೇಳುವುದು ತಿಳಿಯದೆ ಮೆಟ್ಟಿಲು ಏರತೊಡಗಿದೆ. ಕಳೆದ ತಿಂಗಳು ಆಕೆ ಕಣ್ಣು ತುಂಬಿಕೊಂಡು ಹೇಳಿದ್ದು ನೆನಪಾಯಿತು. ಮಗೀಗೆ  ಅದ್ಮೂರ್ ವರ್ಸಾ. ಸಾಲಾ ಮಾಡಿ ಈಗ್ಲೇ ಒಡವೆ ಎಲ್ಲಾ ಮಾಡ್ಸಿಟ್ಟಿವ್ನಿ. ಮೈನೆರದ್ಲಲ್ಲ ಅಂತ ಮನೇಲಿ ಮದ್ವೆ ಮಾಡ್ಬೇಕಂತವ್ರೆ ಮುಂದಿನ ವರ್ಸಾ. ಈಗ ನಾಕ್ ವರ್ಸದಿಂದ ಅರಕೆ ತೀರಸ್ತಿದೀನಿ. ಮಗಿ ಗಂಟ್ಲಲ್ ಇರೋ ಗೆಡ್ಡೆ ಕರಗದ್ರೆ ಸಾಕು. ಎಲ್ಲಾ ಆಸ್ಪತ್ರೆ ಓಡಾಡಿದ್ವಿ. ಒಂದ್ ಆಸ್ಪತ್ರೇಲಿ ಏನೂ ಮಾಡಕ್ ಅಗಾಕಿಲ್ಲ ಅಂತ ವಾಪಸ್ ಕಳಿಸ್ಬುಟ್ರು ಇನ್ನೊಂದ್ ಆಸ್ಪತ್ರೇಲಿ ಒಂದೂವರ ಲಕ್ಸಾ ದುಡ್ ಕಟ್ಟಿಸ್ಕಂಡ್ರು. ಅವತ್ ಆಪಲೇಸನ್ ಮಾಡಬೇಕು. ಅದ್ಯಾಕೋ ಡಾಕಟ್ರು ಬಂದು, ಇಲ್ಲ ನಿಮ್ ಕಾಸ್ ನೀವ್ ತಕ್ಕಳ್ಳಿ. ದೇವ್ರಿಗೆ ಅರ್ಕೆ ಒತ್ಕಳ್ಳಿ ಆಪ್ಲೇಸನ್ ಮಾಡಕ್ಕಾಗಲ್ಲ ಅಂದಬುಟ್ರು. ಡಾಕಟ್ರೇ ಯೋಳಿದ್ನಮ್ಯಾಕೆ ಕೇಳದೇ ಇರಕ್ಕಾಗತ್ತಾ? ಅದ್ಕೆ ಇದೊಂದ್ ವರ್ಸಾ ಅರ್ಕೆ ತೀರ್ಸಿ ಮದ್ವೆ ಮಾಡದು ಅಂತಾ ನಮ್ ನಾದ್ನೀರು ಮತ್ ನನ್ ಗಂಡ ಮಾತಾಡ್ಕಂಡವ್ರೆ' ಅಂದ್ಲು. ಈ ವಯಸಲ್ ಮದ್ವೆ? ಅವಳಿಗಿರೋ ಆರೋಗ್ಯ ಸಮಸ್ಯೆ ಮತ್ತೆ ಅದರಿಂದ ಆಗೋ ಪರಿಣಾಮ ಏನಾಗುತ್ತೆ ಅನ್ನೋ ಅರಿವಿದೆಯಾ ನಿಂಗೆ ಅಂದೆ. ಏನ್ಮಾಡ್ಲಿ ಕೇಳ್ತಿಲ್ಲ ಮನೇಲಿ ಅಂದ್ಲು. ನೋಡು ಉಪಾಯದಿಂದ ಮಗಳ ಮದುವೆ ತಪ್ಪಿಸು. ಆ ಒಡವೆ ಮದುವೆ ಹರಕೆ ಕತೆ ಬಿಟ್ಟು ಒಳ್ಳೇ ಡಾಕ್ಟರ್ನಾ ಕಂಡು ಒಂದು ನಿರ್ಧಾರಕ್ ಬಾ ಅಂದೆ. ಅಂಗೇ ಮಾಡ್ತೀನಿ ನಮ್ ಬೀದಿ ಕೊನೆ ಮನೇನಾಗೆ ಪೊಲೀಸಪ್ಪ ಅವ್ನೆ ಅಂದ್ಲು. ಡಾಕ್ಟರ್ ಅಂದ್ರೆ ಪೊಲೀಸ್ ಅಂತಾಳಲ್ಲ! ಒಂದುಕ್ಷಣ ದಂಗಾದೆ. ಆಮೇಲೆ ಮರ್ಮ ತಿಳಿಯಿತು. ಇದೆಲ್ಲ ನೀ ಎಷ್ಟು ಜಾಣತನದಿಂದ ನಿಭಾಯಿಸ್ತೀಯೋ ನಿನಗೆ ಬಿಟ್ಟಿದ್ದು ಅಂದೆ.

ಆದರೆ, ಅವತ್ತು ಹಾಗೆ ಹೇಳಿದವಳು ಮತ್ತೀಗ ಹರಕೆ ತೀರಿಸಬೇಕು ಎನ್ನುತ್ತಿದ್ದಾಳಲ್ಲ. ಆ ಅಜ್ಜಿಯೋ ಕುಡುಕ ಮೊಮ್ಮಗನಿಗೋಸ್ಕರ ಕುತ್ತಿಗೆಯಲ್ಲಿ ಸಾವಿನ ಗಂಟಿಟ್ಟುಕೊಂಡೇ ಹರಕೆ ಹೊರುತ್ತಿದ್ದರೆ ಇತ್ತ ಈಗಷ್ಟೇ ಹರೆಯಕ್ಕೆ ಕಾಲಿಟ್ಟ ಮಗಳಿಗೋಸ್ಕರ ಫಲವಿಲ್ಲದಿದ್ದರೂ ಈಕೆ ಹರಕೆ ಹೊರಲು ಹೊರಟಿದ್ದಾಳಲ್ಲ? ಇವರಿಗೆಲ್ಲ ಯಾವ ದೇವರು ಬಂದು ಬುದ್ಧಿ ಹೇಳಿಯಾನು?

ಕಾಲಬಳಿ ಏನೋ ಕರಪರವೆಂದಂತಾಯಿತು
ನೋಡಿದರೆ ಮೂಷಿಕದೇವ! ಅಂದಹಾಗೆ ನಾಲ್ಕು ದಿನದಿಂದ ನಮ್ಮ ಕಸದವಳು ನನ್ನ ಮೇಲಿನ ಮುನಿಸನ್ನು ನಮ್ಮ ಕೆಲಸದಾಕೆ ಮೇಲೆ ತೀರಿಸಿಕೊಳ್ಳುತ್ತಿದ್ದಾಳಂತೆ. ಇವಳು ಬಕೆಟ್ ಹಿಡಿದುಕೊಂಡು ಓಡುತ್ತಿದ್ದಂತೆ ಅವಳು ಗಾಡಿಯೊಂದಿಗೆ ಓಡಿಬಿಡುತ್ತಾಳಂತೆ. ಮೊನ್ನೆ ಎಲ್ಲವೂ ಎಲ್ಲೆ ಮೀರಿ ಅಚ್ಚಗನ್ನಡದ ಪದಗಳನ್ನು ತಮಿಳು ಮತ್ತು ತೆಲುಗಿನ ಲೇಪದೊಂದಿಗೆ ಇಡೀ ಓಣಿಗೆ ಕೇಳೋ ಹಾಗೇ ಪರಸ್ಪರ 'ಹಾರೈಸಿಕೊಂಡುಬಿಟ್ಟರು!' ಆಮೇಲನ್ನಿಸಿತು; ಪ್ರತೀ ತಿಂಗಳಿನಂತೆ ಈ ತಿಂಗಳೂ ಇಪ್ಪತ್ತು ರೂಪಾಯಿಯನ್ನು ನೆನಪಿಸಿಕೊಂಡು ಕಸ ಎತ್ತುವವಳಿಗೆ ಕೊಟ್ಟಿದ್ದರೆ ಈ ಹಾರೈಕೆ ಕಾರ್ಯಕ್ರಮವೇ ಇರುತ್ತಿರಲಿಲ್ಲವೇನೋ.  ಆದರೂ ಒಮ್ಮೊಮ್ಮೆ, 'ನಿಮಗೆ ಸಂಬಳ ಕೊಡುತ್ತಾರೆ ಮತ್ತೆ ಆಗಾಗ ತಪ್ಪಿಸುತ್ತೀಯಾ ಮತ್ತ್ಯಾಕೆ ಇಪ್ಪತ್ತು?' ಎಂದು ಕೇಳಬೇಕೆನ್ನಿಸುತ್ತದೆ, ಆದರೆ ಆಕೆ ಎಲ್ಲದಕ್ಕೂ ಕಾಲು ನೋವು ಎನ್ನುತ್ತ, ಅಷ್ಟಕ್ಕೇ ಸುಮ್ಮನಾಗದೇ ತೆಲುಗಿನಲ್ಲಿ ಇದ್ದಬಿದ್ದ ದೇವರುಗಳನ್ನೆಲ್ಲ ಕರೆಯಲು ಶುರು ಮಾಡಿಬಿಡುತ್ತಾಳಲ್ಲ, ನನ್ನ ಕನ್ನಡಾಂಬೆ ಆಗ ಖಂಡಿತ ನನ್ನ ಕೈ ಹಿಡಿಯಳು, ನನ್ನದೋ ಪದಕುಸಿದರೆ ನೆಲಕುಸಿದಂತೆಯೇ ಜಾತಿ!

ಹೀಗೆ ಇನ್ನೊಂದು ದಿನ, ರಸ್ತೆ ಸ್ವಚ್ಛಗೊಳಿಸುವ ಇನ್ಜೊಬ್ಬಳಿಗೆ, ಕಸದ ಚೀಲ ಕೊಡಲು ಹೋದಾಗ, ಮಾತನಾಡಿಸಿದ್ದೇ ಮಹಾಪರಾಧ! ಸರೀ ತಿರುಗಿಬಿದ್ದಳು. ವರ್ಷವಾದರೂ ಗಾಡಿ ಕೊಟ್ಟಿಲ್ಲ ಕೈ ನೋಯುತ್ತೆ ಕಸಹೊತ್ತು ಎನ್ನುವುದು ಅವಳ ಅಳಲು. ಹರಕೆ ಹೊತ್ತು ಹೊತ್ತು ಸಾಕಾಯ್ತು ಗಾಡಿಗಾಗಿ ಎಂದವಳೇ ತಗಂಡ್ಹೋಗಿ ನಿಮ್ ಕಸಾ ಎಂದು ಕೂಗಿಬಿಟ್ಟಳು, ಸದ್ಯ ಬಾಯೊಳಗೇ ಇತ್ತು ಎಲೆಯಡಿಕೆ.

ಪಾಪ ಎನ್ನಿಸುತ್ತದೆ ಅವರ ತಿಳಿವಳಿಕೆ, ಅಸಹಾಯಕತೆ, ವಯಸ್ಸು, ಅನಿವಾರ್ಯತೆ, ಅಸಹನೆ, ವರ್ತನೆ, ಹೆಣಗಾಟ ಎಲ್ಲ ನೋಡಿದಾಗ.
ನಮ್ಮಂಗಳದಿಂದಲೇ ಕಾಣುವ ಸರಕಾರಿ ಆಸ್ಪತ್ರೆಯ ಅಂಗಳದಲ್ಲಿ ತಿಂಗಳಿಗೊಮ್ಮೆಯಾದರೂ ಪೌರಕಾರ್ಮಿಕರ ಮತ್ತು ಕೆಳಮಧ್ಯಮ ವರ್ಗದ ನೌಕರರ ಆರೋಗ್ಯ ತಪಾಸಣೆ, ಚಿಕಿತ್ಸೆ, ಆಪ್ತಸಲಹಾ ಕಾರ್ಯಕ್ರಮ ಹಮ್ಮಿಕೊಂಡು ಅವರ ಅನುವು ತನುವು ಕೇಳಬೇಕಲ್ಲವೆ ಅಂತ. ಇದೆಲ್ಲ ಈಡೇರಬೇಕೆಂದರೆ, ಅದ್ಯಾವ ದೇವರಿಗೆ ನಾನೂ ಹರಕೆ ಹೊರಬೇಕೋ... ಅಷ್ಟಕ್ಕೂ ದೇವರೆಂದರೆ? ಆಕಾಶ ನೋಡಿದೆ. 'ದೇವರು ಎನ್ನುವುದು ಅವರವರ ಪದಕೋಶದಲ್ಲಿ ತೀರಾ ಖಾಸಗಿ ಅರ್ಥ ಪಡೆದುಕೊಂಡಿರುವಂಥದ್ದು, ನಿನಗ್ಯಾಕೆ ಇಲ್ಲದ ಉಸಾಬರಿ' ಅಶರೀರವಾಣಿ! ಜೋರು ಗಾಳಿ, ಗಿಡದ ಸಣ್ಣ ಟೊಂಗೆಯೊಂದು ರಪ್ಪನೆ ತಲೆಮೇಲೆ.

- ಶ್ರೀದೇವಿ ಕಳಸದ

Tuesday, February 23, 2016

ಸ್ಥಾವರವೆಂಬ ಗೋಡೆಗಂಟಿ

ಇದ್ದರೆ ಇರಲಿ ಅದೊಂದು ಮಧ್ಯಕ್ಕೆ
ದುಬುಟಿ ಒಣಗಿಸಲೊ ಲಂಗೋಟಿ ಸಿಕ್ಕಿಸಲೊ
ಕುಂಬಳ ಕುಡಿ ಚಾಚಲೊ ಕುಳ್ಳು ಅಂಟಿಸಲೊ
ಸಂಡಿಗೆ ತಟ್ಟೆಗೊ ಉಪ್ಪಿನಕಾಯಿ ಜಾಡಿಗೊ
ಬಿರಿದ ಮೊಲ್ಲೆ ಮಳ್ಳಮಳ್ಳನೆ ನಗಲೊ
-ಹುಸಿಮುನಿಸಿನಿಂದ ಅದ ಮುದುಡಲೊ
ನೋವ ದಾಟಿಸಿ ನೌಕೆ ಸಾಗಲೋ
ಸ್ಥಾವರದ ಸತ್ಯ ಹೊತ್ತು ನಿಂತ
ಆ ಗೋಡೆ ಇರಲಿ ಹಾಗೇ
ಕಣ್ತುಂಬಿಕೊಳ್ಳುತ್ತ ಮಲಗುತ್ತಿದ್ದೆ
ಇಂಥದೇ ಬೇಸಿಗೆಗೆ ಆ ಅಂಗಳದಲ್ಲಿ

ಅಂದೂ ಇಂಥದೇ ನಡುಗತ್ತಲು ಮತ್ತು ಪೌರ್ಣಿಮೆಯ ನೊರೆಹಾಲು
ಕಾಲಬುಡದ ಬೆಕ್ಕಿಗೋ ತೋಳಕಾವಿನ ಬಯಕೆ
ಬೆರಳು ಮೀಸೆ ನೇವರಿಸಿದರೆ ಕಣ್ಣು ಕುಂಬಿಯತ್ತ
ಗೋಡೆಸಾಲಿನ ತುಂಬ ಪುಟ್ಟ ಚಂದಿರರು!
-ಕನಸೂ ಅಲ್ಲ ಖರೆಯೂ
ಕಾಯ್ದೆ
ಕತ್ತಲು ಸರಿಯಿತು
ಗೋಡೆನೆತ್ತಿಗುಂಟ ಎದೆಸೀಳಿ
ಮುಖಹುಗಿದ ಗಾಜಬಾಟಲಸಾಲು!

ಗೋಡೆಗೆ ಕಿವಿಯಾನಿಸಿ ನಿಂತೆ
ಓಣಿಯೇ ಆಕಾಶವಾಣಿ;
ಕುಂಬಳ ಮಿಡಿ ಕಚ್ಚಿದ ಮಂಗಗಳು
ಮಾಯವಾದ ಒಡಕು ಬಿಂದಿಗೆ-ಹೊರಸಿನ ಹಗ್ಗ
ಕೆರೆಯಂಗಳದಿ ಸಿಕ್ಕ ಕೀಲುಬಂಡೆ
ಗುಡ್ಡದ ಹಾದಿಯಲ್ಲಿ ಉದುರಿದ ಗೆಜ್ಜೆ
ಸಾಕಿಷ್ಟೇ ಮುಖ್ಯಾಂಶ ಹಿಂದಿಟ್ಟೆ ಹೆಜ್ಜೆ

ಅದ್ಯಾರ ಎಡವಿಗೆ ಇದ್ಯಾವ ತಡೆ?
ದಂಗಾಗುವಂತಿಲ್ಲ, ಸ್ವೀಕರಿಸು ಮರುಳೆ
ಗೋಡೆಯ ಇನ್ನೊಂದು ಬದಿ ನಿನ್ನದಲ್ಲ

- ಶ್ರೀದೇವಿ ಕಳಸದ

Wednesday, February 17, 2016

ಉತ್ತರಿಸೋ

ಹಾಗೆ ದೂಡಿದರೆ ಬಾಗಿಲಿಗೇ ಬಿರುಕು
ಚೌಕಟ್ಟಿಗಲ್ಲ
ಎಳೆದ ರೀತಿಗೆ ಪರದೆಯೇ ಕೈಗೆ
ಕಿಟಕಿಯಲ್ಲ
ಇತ್ತಿಂದ ಗೋಡೆ ಅತ್ತಿಂದ ನೆಲ ಅದುರಿಸಿದೆಯೋ
ನೋವು ನಿನಗೇ
ಅದೇನದು ಒಂಟಿಗಾಲಲ್ಲಿ ನಿಂತು
ಮುಗಿಲಿಗೆ ಮುಖಮಾಡಿ
ಬಯಲೇ ಆಲಯವೆನ್ನುವುದು ಆಗಾಗ?

ಬಾನಸೂರಿನ ಮೇಗಳ ಸಾಲು ಮಿಂಚಿ ಮಾಯ;
ಹರಿಯಲಾರದು ಹಂಬಲ ಬಯಲಾಗದೆ

ಆ... ಬಯಲು ಬಯಲನೇ ಬಿತ್ತಿ ಬೆಳೆದು
ಬಯಲು ಬಯಲಾಗಿ ಬಯಲಾಯಿತೆಂದವನೆಲ್ಲೀಗ?
ಕರೆತನ್ನಿ ಸಿಕ್ಕರೆ, ಕೇಳಬೇಕಿದೆ;
'ಶರಧಿ ಎದೆಯೊಳ ಹೂತ ಪುಟ್ಟಪಾದ
-ಮರಳಗೋಪುರಕ್ಕೆ ಯಾಕೆ ಕಿಟಕಿ ಧ್ಯಾನ?'

-ಶ್ರೀದೇವಿ ಕಳಸದ

Thursday, February 11, 2016

ಮಗು ಮತ್ತು ಶಾಂತಿ


ಬಿಡಿಸಿನೋಡಿದೆ ಅದು ಕೆಂಬಣ್ಣ ಕಾಗದ
ಮಲಗಿದ್ದನಂವ ಮೊಣಕಾಲಿಗೆ ಮುಖವಿಟ್ಟು

ಮಿಸುಕಾಡನಂವ ಹಾಲು ಕೇಳನಂವ
ಚುಕ್ಕು ಬೇಡನಂವ ರಚ್ಚೆ ಹಿಡಿಯನಂವ
ಹೋಗಲಿ ಮುದ್ದೂ ಮಾಡನಂವ;
ಗೊತ್ತಿದ್ದೇ ಗಾಜಬಾಗಿಲೆಳೆದೆ
-ಗಾಜಹಲಗೆಯ ಮೇಲೆ ಮಲಗಿಸಿ

ಆ ಶಾಂತಮುಖಮುದ್ರೆಯೊಳಾವರಿಸಿದ
ನಗುಪದರ ಹಿಡಿದಿಡಬೇಕೆನ್ನುವಾಗೆಲ್ಲ
ಆ ಕೊಂಬು ಇಂಬಿನೊಳ ಪುಟಿದು
ಈ ಹೃಸ್ವ ದೀರ್ಘವಾಗುತ್ತಲೆ ಪ್ರಾಣ ಮಹಾಪ್ರಾಣದೊಳಗಡಗಿ ದೊಡ್ಡದೊಂದು ಸೊನ್ನೆಯುದ್ಭವಿಸಿಬಿಡುತ್ತದಲ್ಲ;
ತಲೆ ಕೈಯಾಡಿಸಿಕೊಂಡೆ ಸದ್ಯ ಮೊಳೆತಿರಲಿಲ್ಲ
-ಚಿವುಟಲು ಕೊಂಬು

ಏಣಿ ಎಷ್ಟಿರಲಿ ಕುಂಬಿ ಯಾವುದಿರಲಿ
ಮಾಡಿರಲಿ ಗೂಡಿರಲಿ ಕಾಡಿರಲಿ
ಯಾವುದಕ್ಕೂ ಮಧ್ಯ ಹಗ್ಗ ನೇತಾಡುತಲಿರಲಿ;
ಏರುವ ಗೆಲುವಿಗೆ ಸದಾ ಗೀಟಿನದೇ ಲೆಕ್ಕ

ಪಕ್ಕ ಕತ್ತರಿಸಿ ಸೊನ್ನೆ ಉರುಳಾಡಿಸಿ
ಪುಡಿಗಟ್ಟಿದ ಅದರೊಳಗೆ ಚುಕ್ಕೆಯೊಂದಾಗಿ
ಚಕ್ಕಳಬಕ್ಕಳ ಕೂತು ಸೋಲನ್ನೇ ಹೊದ್ದುಕೊಳ್ಳುವುದಿದೆಯಲ್ಲ ಅದಕ್ಕೆಂದೂ
ಗೀಟಿನ ಹಂಗಿಲ್ಲ ಗಿಲೀಟಿನ ಗೊಡವೆಯಿಲ್ಲ

ಭುಜವಲ್ಲಾಡಿಸಿ
ಅದು ಅದು ಬೇಕು, ಬೇಕು ಅದು;
ಕಿವಿಯೊಳಗೆ ಕೂಸನಾದ
ಚುಕ್ಕೆಹಂದರದಿಂದೆದ್ದು ಕಣ್ಣಿಗೆ ಕಣ್ಣಜೋಡಿಸಿ
ಬುದ್ಧ? ಎಂದೆ
ಎಳೆಮಡಿಲಿನೊಳಗೀಗ ಕಲ್ಲಕಣ್ಣ ಬಿಡಿಸುವಾಟ
ಬಾಲಭಾಷೆಯೊಳಗೆ ಮಿಂದೆದ್ದ ಬುದ್ಧನಾದ;
ಎದ್ದೇಲು ಬುಧಾ ಎದ್ದೇಲು

ಅರ್ಥವಾಯಿತಾ
ಗಾಜಮಂಟಪದೊಳಗೆ ನೀನ್ಯಾಕೆ ಎಂದು

-ಶ್ರೀದೇವಿ ಕಳಸದ