Thursday, March 31, 2016

ಹಣೇಬಾರ ಗಣೇಚೌತಿ ಮತ್ತು ದುಂಡನೆಯ ಮಿಸ್ಕಂದುಬಣ್ಣದ ಮೈಗೆ ಕಂದು ಮತ್ತು ಬಿಳೀಬಣ್ಣದ ಗೀರುಗೀರಿನ ಜೇಬು, ಅದರ ಬಾಯಿಗೊಂದು ಕರೀಬಣ್ಣದ ಗುಂಡಿ. ಆ ಬಟ್ಟೆಯ ಚೀಲ ದೊಗಳೆ ಬೀಳದಂತೆ, ಯಾವುದೋ ಒಂದು ಸಂಬಂಧಿಲ್ಲದ ಪುಸ್ತಕ ಇಟ್ಟುಕೊಂಡು, ಆ ಗೀರುಗೀರಿನ ಜೇಬಿನಲ್ಲಿ ಒಂದಿಷ್ಟು ತಿಂಡಿ ಹಾಕಿಕೊಂಡು ಹೆಗಲಿಗೆ ಅಡ್ಡಡ್ಡ ಇಳಿಬಿಟ್ಟು ಹೊರಟರೆ ಅದೇ ಹಿರೇಬಾಗೇವಾಡಿಯ ಬಾಲವಾಡಿ ಹಾದಿ. ನನ್ನ ಕೈಹಿಡಿದುಕೊಂಡಿರುತ್ತಿದ್ದವಳೇ ಶಾರೂ. ಒಂದು ವಾರ ಅಪ್ಪ ಅಮ್ಮನೊಂದಿಗೆ ದೊಡ್ಡವಾಡದಲ್ಲಿರುತ್ತಿದ್ದರೆ, ಇನ್ನೊಂದು ವಾರ ದೊಡ್ಡಪ್ಪನಿರುತ್ತಿದ್ದ ಊರಿನಲ್ಲಿರುತ್ತಿದ್ದೆ. ದೊಡ್ಡಪ್ಪ ಹೊಲಿದುಕೊಟ್ಟ ಮೊದಲ ಪಾಟೀಚೀಲ ಅದಾಗಿತ್ತು.

ಹೀಗೇ ಒಂದು ಬೆಳ್ಳಂಬೆಳಗ್ಗೆದ್ದು, ಹಲ್ಲುಜ್ಜುವ ಮೊದಲೇ ಆ ಪಾಟೀಚೀಲದ ಜೇಬಿಗೆ ಚುರುಮುರಿ ತುಂಬಿಸಿಕೊಳ್ಳುತ್ತಿದ್ದೆ. ಬಚ್ಚಲುಮನೆಯಲ್ಲಿ ನೀರು ಕೊತಕೊತ ಕುದ್ದು, ದೊಡ್ಡವ್ವ ಒಲೆಯ ಬಾಯನ್ನು ತಣ್ಣಗೆ ಮಾಡಿ ಒಂದೇ ಸಮ ಸ್ನಾನಕ್ಕೆ ಕರೆಯುತ್ತಿದ್ದರೂ ನಾ ಮಾತ್ರ ಬುಟ್ಟಿಯಿಂದ ಒಂದೊಂದೇ ಮುಟ್ಟಿಗೆ ಚುರುಮುರಿಯನ್ನು ಜೇಬಿಗೆ ತುಂಬುವ ಕಾಯಕದಲ್ಲಿ ಮುಳುಗಿದ್ದೆ. ಆ ಜೇಬು ತುಂಬುವವರೆಗೂ ದೊಡ್ಡಮ್ಮ ಅಡುಗೆ ಮನೆ ಸ್ವಚ್ಛಗೊಳಿಸಿ, ಗ್ಯಾಸೊಲೆ ಒರೆಸಿ, ದೊಡ್ಡಪ್ಪನಿಗೆ ಚಹಾ ಕೂಡ ಮಾಡಿಕೊಟ್ಟಿದ್ದಳು. 'ಶ್ರೀದೀ ಏಳ್ತಿ ಇಲ್ಲಿನ್, ಬಾಲವಾಡಿಗೆ ಹೋಗ್ತಿಯಿಲ್ಲೋ ಇನ್ನ, ಜಳಕಾ ಮಾಡ್ನಡಿ ಲಗೂ' ಜೋರು ಮಾಡಲು ಬಾರದ ದೊಡ್ಡವ್ವ ಧ್ವನಿ ಏರಿಸಲು ಪ್ರಯತ್ನಿಸುತ್ತ ಮರೆಯಲ್ಲಿ ನಗುತ್ತಿದ್ದಳು, ಕೈ ಎತ್ತುವುದಂತೂ ದೂರವೇ.

ಚುರುಮುರಿ ನಗುತ್ತ ಜೇಬಿನ ಬಾಯಿತನಕ ಬಂದು ಕುಳಿತಾಗಲೇ ನಾ ಬುಟ್ಟಿಯೊಳಗಿನ ಕೈ ತೆಗೆದಿದ್ದು. ಪಾಟಿಚೀಲದ ಎದೆಮೇಲಿದ್ದ ಅ ಜೇಬಿನ ಗುಂಡಿ ಹಾಕಿ ಸ್ನಾನಕ್ಕೆಂದು ಬಚ್ಚಲಿಗೆ ಓಡಿದ್ದು. ಪಕ್ಕದ ಮನೆಯ ಶಾರೂ ಬಾಗಿಲಲ್ಲಿ ನಿಂತು ಕೂಗಿದಾಗ, ' ಹೇ ಪ್ರಭೋ ಪ್ರಸೀದ ಓಂ' ಐದನೇ ಸಲ ಹೇಳುತ್ತಿದ್ದೆ. ದೇವರಿಗೆ ಕಣ್ಹೊಡೆದು, ಇವತ್ತಿಷ್ಟೇ ಸಾಕು ಓಕೆ? ಎನ್ನುತ್ತ ಪಾಟಿಚೀಲ ಹೆಗಲಿಗೆ ಹಾಕಿಕೊಂಡು ಅವಳೊಡನೆ ದುಡುದುಡು ಹೆಜ್ಜೆ ಹಾಕಿದ್ದೆ. ನಾಗಪ್ಪನಂಗಡಿ, ನಾವಲಗಿಯವರ ಮನಿ, ಪಂಚಾಯ್ತಿ ಕಚೇರಿ, ಪಾಟೀಲರ ಓಣಿ, ದ್ಯಾಮವ್ವನ ಗುಡಿ ದಾಟಿ ಸಂತಿಯೋಣಿಗೆ ಬಂದು ಶಾಲೆಯ ಗೇಟ್ ಹೊಕ್ಕು, ಆರೇಳು ಮೆಟ್ಟಿಲು ಏರಿ, ಅಕ್ಕೋರು ಎಂಬ ದೇವರಿಗೆ ನಮಿಸಿ ಕರೀಕಲ್ಲಿನ ಮೇಲೆ ಚಕ್ಕಳಬಕ್ಕಳ ಹಾಕಿ ಕುಳಿತುಬಿಟ್ಟಿದ್ದೆ.

ಎಲ್ಲರೂ ಪಾಟಿಯ ಮೇಲೆ ಬಳಪದಿಂದ ದುಂಡದುಂಡಗೆ, ಗೀರುಗೀರಿನಂತೆ ಏನೋ ತೀಡುತ್ತಿದ್ದರೆ, ನನ್ನ ಬಾಯಿ ಒಂದೊಂದೇ ಚುರುಮುರಿ ಮೇಯುತ್ತಿತ್ತು.
ನೋಡೇನೋಡಿದ ಟೀಚರ್ ಕೈಯಲ್ಲಿ ಬೆತ್ತಹಿಡಿದು;

'ಏನದು?'
ಚುರುಮುರಿ
'ಎಷ್ಟೊತ್ತಾತು?'
ಗೊತ್ತಿಲ್ಲ
'ನೋಡೂನ್ ತುಗೊಂಬಾ ಇಲ್ಲೆ?'
ಇಲ್ಲ ನಂದಿದು ನಾ ಕೊಡಂಗಿಲ್ಲ
'ಏಯ್ ಶಾರೀ ಇಸ್ಕೊಂಬಾ ಅಕಿ ಪಾಟಿಚೀಲ'

ಕೊಸರಾಡಿ ಕೊನೆಗೆ ಗೆದ್ದ ಹುಮ್ಮಸ್ಸಿನಲ್ಲಿ ಶಾರೀ, ಟೀಚರಿಗೆ ನನ್ನ ಪಾಟಿಚೀಲವನ್ನೊಪ್ಪಿಸಿದ್ದಳು. ದುರುಗುಟ್ಟಿನೋಡಿ ಕೆಳಗೆ ಮುಖಹಾಕಿ ಕುಳಿತೆ. ಟೀಚರ್ ಚೀಲ ಹಿಡಿದು;

'ಬಾ ಇಲ್ಲೆ'
ಇಲ್ಲ ಬರೂದಿಲ್ಲ
'ಬರ್ತೀಯೋ ಇಲ್ಲೋ?'
ಏಯ್ ನನ್ ಪಾಟಿಚೀಲಾ, ಕೊಡ್ರಿ ನಂದದು
'ಕೊಡ್ತೀನ್ ಬಾರಾ ಇಲ್ಲೇ...'

ಕೈ ಎಳೆದುಕೊಂಡು ಹೋದರು. ಪಾಟಿಚೀಲದ ಮುಖ್ಯಬಾಯಿಗಿದ್ದ ಝಿಪ್ ತೆಗೆದು ಜೋರಾಗಿ ನಗತೊಡಗಿದರು. ಹೊಡೆದಾರೋ ಎಂಬ ಭಯದಲ್ಲೇ ನಾ ಮುದ್ದೆಯಾಗಿ ನಿಂತಿದ್ದೆ. ಒಂದು ನಿಮಿಷದ ನಂತರ ನಗು ನಿಲ್ಲಿಸಿ, ತಂಗಿ ಯಾರ ಕೊಟ್ರು ಚುರುಮುರಿ ಎಂದರು. ಯಾರೂ ಕೊಟ್ಟಿಲ್ಲ, ನಮ್ ದೊಡ್ಡಪ್ಪ ಸಂತ್ಯಾಗ ತಂದಿದ್ದು ಅಂದೆ. ಈ ಚೀಲದಾಗ ಯಾರ ಹಾಕಿಕೊಟ್ರು ಅಂದೆ ಅಂದ್ರು. ನಗುತ್ತ ಆ ಚೀಲವನ್ನು ಎಲ್ಲಾ ಮಕ್ಕಳಿಗೂ ತೋರಿಸಿದರು. ನನಗಿಂತ ಎರಡುಮೂರು ವರ್ಷ ದೊಡ್ಡವರಿದ್ದ ಅವರೆಲ್ಲರೂ ನಗುತ್ತಿದ್ದರು. (ಮನಸಿಗೆ ಬಂದಾಗ ಬಾಗೇವಾಡಿಯ ಬಾಲವಾಡಿಗೆ ಹೋಗುತ್ತಿದ್ದ ನಾ ಉಳಿದ ಸಮಯ ದೊಡ್ಡವಾಡದ ಅಮ್ಮನ ಏಳನೇ ತರಗತಿಯಲ್ಲಿರುತ್ತಿದ್ದೆ) ಎಲ್ಲರೂ ನಗುವುದ ನೋಡಿ ನಾನೂ ಚೀಲದ ಕಡೆಗೊಮ್ಮೆ ನೋಡಿದೆ, ಸೇರಿನಷ್ಟು ಚುರುಮುರಿ! 'ಅವ್ವೀ ಬಾ ಇಲ್ಲೆ, ತುಗೋ ಈ ಚೀಲಾ ಹಿಡ್ಕೊ, ಎಲ್ಲಾರಿಗೂ ಒಂದೊಂದ್ ಮುಟಗೀ ಕೊಡು ಎಂದರು' ಟೀಚರು. ಏನೊಂದೂ ಪ್ರಶ್ನಿಸದೇ, ಸಾಲಾಗಿ ಅವರವರ ಉಡಿಯಲ್ಲಿ ಸುರುವುತ್ತ ಹೋದೆ. ಮುಸಿಮುಸಿ ನಗುತ್ತ ಎಲ್ಲರೂ ತಿಂದರು. ಶಾರೀ, ತುಟಿಗಳಂಚಿಗೆ ಚುರುಮುರಿ ಹಿಡಿದು ರಾಕ್ಷಸಿಯಂತೆ ಗೋಣು ಅಲ್ಲಾಡಿಸಿದಳು.

ಗಲ್ಲ ಉಬ್ಬಿಸಿ ಮನೆಗೇ ಬಂದವಳೇ ಹಿಂಗಿಂಗಾಯ್ತು ಎಂದೆ ದೊಡ್ಡವ್ವನಿಗೆ. ಪಾಟಿಚೀಲ ತೆಗೆದುಕೊಂಡು ಬಾ ಎಂದಿದ್ದಕ್ಕೆ ಕೊಟ್ಟೆ. ದೊಡ್ಡವ್ವನೂ ಜೋರಾಗಿ ನಗುತ್ತ, 'ಶ್ರೀದೀ ಹಣೇಬಾರ್ ಗಣೇಚೌತಿಲೇ' ಎಂದಳು. ಪಾಟಿಚೀಲದ 8×4 ಇಂಚಿನ ಅಳತೆಯ ಜೇಬಿಗಿದ್ದ ಒಂದುರೂಪಾಯಿ ಅಗಲದ ತೂತು ತೋರಿಸಿ ನೋಡಿಲ್ಲೇ ಎಂದು ಬಾಯಿಮೇಲೆ ಕೈಇಟ್ಟು ನಗತೊಡಗಿದಳು. ಬೆಳಗ್ಗೆಯಿಂದ ಎಲ್ಲರೂ ನಕ್ಕಿದ್ದು ನೋಡಿ, ದೊಡ್ಡವ್ವನ ಸೊಂಟ ಹಿಡಿದು ಗಟ್ಟಿ ಅತ್ತುಬಿಟ್ಟೆ. ಹುಚ್ಚೀ ಅಳತಾರೇನ್? ನಾ ಹೊಲ್ದ್ ಕೊಡ್ತೇನ್ ಬಾ ಇಲ್ಲೆ ಎಂದು ಸೂಜಿ ದಾರ ತೆಗೆದುಕೊಂಡಳು. ಮರುದಿನ ಆ ಹೊಲಿದ ಜೇಬಿನತುಂಬಷ್ಟೇ ಪುಟಾಣಿ ತುಂಬಿಸಿಕೊಂಡು ಬಾಲವಾಡಿಗೆ ಹೋದೆ. ಟೀಚರ್ ಹೇಳದಿದ್ದರೂ ಎಲ್ಲರಿಗೂ ಎಣೆಸಿ ಎರಡೆರಡೇ ಪುಟಾಣಿ ಕಾಳು ಹಂಚಿದೆ. ಶುಕ್ರವಾರವಾದ್ದರಿಂದ ಪ್ರಸಾದವೇನೋ ಎಂಬಂತೆ ಕೈಮೇಲೆ ಕೈ ಇಟ್ಟು ಪುಟಾಣಿ ಸ್ವೀಕರಿಸಿದರು. ಟೀಚರಿಗೆ ನಾಲ್ಕು ಕೊಟ್ಟೆ, ಅವರೆಲ್ಲ ಭಕ್ತಿಯಿಂದ ತಿನ್ನುತ್ತಿದ್ದರೆ ನಾ ನಗುತ್ತಿದ್ದೆ.

ಈವತ್ತು ಇದೆಲ್ಲ ನೆನಪಿಸಿದ್ದು ನಮ್ಮ ವಚು ಮಿಶ್; ವಸು, ವಸುಂಧರಾ ಮಿಸ್. ನಮ್ಮ ಮಗಳ ಮೊದಲ, ಪ್ರೀತಿಯ ಮತ್ತು ಹೆಮ್ಮೆಯ ಟೀಚರ್. ಇಂದು ಮಗಳನ್ನು ಶಾಲೆಯಿಂದ ಕರೆತರಲು ಹೋದಾಗ, ಕುಲುಕುಲು ನಗುತ್ತಲೇ ಇದ್ದವರು ಇದ್ದಕ್ಕಿದ್ದ ಹಾಗೆ, such a wonderful baby! Thank u' ಭಾವೋದ್ವೇಗಕ್ಕೆ ಒಳಗಾಗಿ ಅಳತೊಡಗಿದರು. ಮಗಳೊಂದಿಗೆ ಅವರನ್ನು ಅಪ್ಪಿಕೊಂಡಾಗ ಅರಿವಿಲ್ಲದೇ ಕಣ್ಣೀರಿಳಿಯತೊಡಗಿತು. ಶಾಲಾವಾರ್ಷಿಕದ ಕೊನೆಯ ದಿನವೊಂದು ಹೀಗೆ ನನ್ನನ್ನು ಮೆತ್ತನೆಗೊಳಿಸುತ್ತದೆ ಎಂಬ ಅಂದಾಜೇ ಇರಲಿಲ್ಲ. ಮಗಳೆಡೆ ನೋಡಿದ ಅವರು, ಅದಕ್ಕೂ ಗೊತ್ತಿತ್ತೇನೋ, ಬೆಳಗ್ಗೆಯಿಂದ ಸಪ್ಪಗೇ ಇದೆ ಎಂದರು. ಮುಂದಿನ ವರ್ಷದ ತರಗತಿಗೆ ಯಾರು? ಎಂದೆ. ಗೊತ್ತಿಲ್ಲ ಎಂದು ದುಃಖ ನುಂಗಿಕೊಂಡರು. ಇನ್ನೊಂದು ಮಗುವಿನ ತಾಯಿಗೆ, ನಿಮ್ಮ ಮಗುವಿಗೆ ಬಹಳ ಗೋಳು ಹುಯ್ದುಕೊಂಡೆ ಸಾರಿ ಎಂದರು ಕಣ್ಣೊರೆಸಿಕೊಳ್ಳುತ್ತ ಮೂಡ್ ಬದಲಾಯಿಸಿಕೊಳ್ಳಲು ನೋಡಿದರು. ಪ್ರಿನ್ಸಿಪಾಲ್
ಒಳಗೊಂಡಂತೆ ಎಲ್ಲರನ್ನೂ ಭೇಟಿಯಾಗಿ ಹೊರಬರುತ್ತಿದ್ದಾಗ, ಬೈ ಸ್ವರಾ ಬೈ ಮೇಡಮ್' ಎಂದ ಸೆಕ್ಯೂರಿಟಿ. ಗಾಡಿಯೇರಿದವಳೇ ಒಮ್ಮೆ ತಿರುಗಿ ನೋಡಿದೆ, ಅಕಸ್ಮಾತ್ ಲಾಲಿಪಾಪ್ ಕೈಜಾರಿ ಬಿದ್ದಾಗ ಅತ್ತು ಅತ್ತು ಸುಮ್ಮನಾದ ಮಗುವಿನಂತೆ ಕಂಡರ ವಸು ಮಿಸ್. ಸೆಕ್ಯೂರಿಟಿ ಬೇರೆ ಮಕ್ಕಳಿಗೆಲ್ಲ ಬೈ ಹೇಳುತ್ತಿದ್ದ.

ಮಗಳನ್ನು ಮೊದಲ ದಿನ ಶಾಲೆಗೆ ಕಳುಹಿಸಿದ ದಿನ ಕಣ್ಮುಂದೆ ಬಂದು ಮತ್ತಷ್ಟು ದುಃಖ ಉಕ್ಕಿತು...

ಸಿಕ್ಕಾಪಟ್ಟೆ ಹಟ, ಊಟ ಮಾಡಲ್ಲ, ರಚ್ಚೆ ಹಿಡೀತಾಳೆ, ಎಷ್ಟಂತ ಹೊರಗೆ ಓಡಾಡಿಸಿಕೊಂಡಿರಲಿ? ಡಾಕ್ಟರಿಗೆ ಸಹಜವಾಗಿ ಹೇಳಿಕೊಂಡಿದ್ದೆ. ಪಾರ್ಕ್, ದೇವಸ್ಥಾನಕ್ಕೆ ಕರ್ಕೊಂಡ್ ಹೋಗಿ, ನಾಲ್ಕ್ ಮಕ್ಕಳ ಜೊತೆ ಆಟಕ್ಕೆ ಬಿಡಿ ಎಂದರು. ಅದೆಲ್ಲಾ ಯಾವಾಗಲೂ ನಡೀತಿರುತ್ತೆ ಅಂದೆ. ಶಾಲೆಗೆ ಸೇರಿಸಿ ಎಂದರು. ಎರಡು ತುಂಬುವ ಮೊದಲೇ? ಎನ್ನುತ್ತ ಎಂಟ್ಹತ್ತು ಶಾಲೆಗಳ ತಿರುಗಿ ಕೊನೆಗೆ ಈ ಶಾಲೆಗೆ ಪ್ರವೇಶ ಪಡೆದಾಯಿತು. ಎರಡು ವರ್ಷದ ಹುಟ್ಟುಹಬ್ಬ ಮುಗಿದ ಮಾರನೇ ದಿನವೇ, ಶಾಲೆಗೆ ಹೊರಡುವುದೆಂದಾಯಿತು. ಅಯ್ಯೋ ಇಷ್ಟು ಬೇಗ ಇದಕ್ಕೆ ಶಾಲೆ ಎಂದು ಇಬ್ಬರೂ ಒಳಗೊಳಗೇ ಮರುಗುತ್ತ ಶಾಲೆಯ ಬಳಿ ಬಂದೆವು. ಗಾಡಿಯಿಂದ ಇಳಿದು ಗೇಟ್ ಮುಂದೆ ನಿಂತೆವು. ಸೆಕ್ಯೂರಿಟಿ ವೆಲ್ಕಮ್ ಪುಟ್ಟಿ ಎಂದು ಕೈಚಾಚುತ್ತಿದ್ದಂತೆ, ಸೊಂಡಿ ಇಳಿಸಿ ಅಳಲಾರಂಭಿಸಿದಳು. ತಕ್ಷಣವೇ ಗೇಟ್ ಹಾಕಿಕೊಂಡವನೇ, ಮೆಟ್ಟಿಲೇರಿದ. ಚೀರಿಚೀರಿ ಅಳುತ್ತಿದ್ದ ಅವಳನ್ನು ಆಕಡೆಯಿಂದ ಬಂದ ದುಂಡನೆಯ ಮಿಸ್ಸೊಬ್ಬರ ಕೈಗೆ ಪಾರ್ಸೆಲ್ ಡಬ್ಬಿಯಂತೆ ವರ್ಗಾಯಿಸಿಬಿಟ್ಟ. ಇವಳೋ ಇನ್ನಷ್ಟು ಗಾಬರಿಯಾಗಿ ಅಳತೊಡಗಿದಳು. ನಾಲ್ಕೇ ಸೆಕೆಂಡಿನಲ್ಲಿ ಗ್ರಿಲ್ ಮತ್ತು ಬಾಗಿಲನ್ನು ಮುಚ್ಚಿಕೊಂಡುಬಿಟ್ಟರು ದುಂಡನೆಯ ಮಿಸ್. ನಮ್ಮಿಬ್ಬರಿಗೋ ಸೀದಾ ಎದೆಗೇ ಒದ್ದಂತಾಯಿತು. ಮನೆಗೆ ಬಂದವನೇ, 'ಹೀಗೆಲ್ಲ ಅವರು ಟ್ರೀಟ್ ಮಾಡೋದಾದ್ರೆ, ಶಾಲೆಯೇ ಬೇಡ. ಮನೆಯಲ್ಲೇ ಇರಲಿ ಅವಳು. ಮನೆಯಲ್ಲೇ ಓದಿಸೋಣ' ಎಂದು ಭಾವುಕನಾದ ನನ್ನವ.

ಮಗುವನ್ನು ಮಾತನಾಡಿಸುತ್ತ, ಅದರ ಗಮನ ಸೆಳೆಯುತ್ತ ನಮ್ಮ ಕೈಯಿಂದ ತಮ್ಮ ಕೈಗೆ ಎತ್ತಿಕೊಳ್ಳುತ್ತ ನಿಧಾನ ಕ್ಲಾಸಿಗೆ ಕರೆದುಕೊಂಡು ಹೋಗುತ್ತಾರೆ, ಸಮಾಧಾನಿಸುತ್ತ ಉಳಿದ ಮಕ್ಕಳೊಂದಿಗೆ ಕೂರಿಸುತ್ತಾರೆ. ಅವಳು ಸುಮ್ಮನಾಗುತ್ತಿದ್ದಂತೆ ಸನ್ನೆ ಮಾಡಿ ನಮಗೆ ಹೋಗಲು ಹೇಳುತ್ತಾರೆ ಎನ್ನುವ ಅನಾದಿಕಾಲದ ಕಲ್ಪನೆಯಲ್ಲಿ ನಾವಿಬ್ಬರೂ ಇದ್ದೆವು. ಆದರೆ ಅಲ್ಲಿ ಆಗಿದ್ದೇ ಬೇರೆ. ಎರಡು ತಿಂಗಳತನಕವೂ ಈ ಶಾಲೆಯೇ ಬೇಡ, ಕಟ್ಟಿದ ಸಾವಿರುಗಟ್ಟಲೆ ಹಣವೂ ಬೇಡ, ಮಕ್ಕಳೆಂದರೆ ವಸ್ತುಗಳಾ? ಎನ್ನುವ ಸಿಟ್ಟು, ನೋವಿನಲ್ಲೇ ಇದ್ದೆವು. ನಾನಂತೂ ಶಾಲೆಕಡೆಗೂ ತಲೆಹಾಕಿರಲಿಲ್ಲ. ಅವಳನ್ನು ಸ್ಕೂಲಿಗೆ ಕರೆದೊಯ್ಯುವ ಕಳಿಸುವ ಜವಾಬ್ದಾರಿಯೆಲ್ಲ ಇವನದೇ ಆಗಿತ್ತು. ಯಾಕಾದರೂ ಶಾಲೆಗೆ ಸೇರಿಸಿದೆವೋ, ಕೊನೇಪಕ್ಷ ಕ್ಲಾಸ್ರೂಂ ನೋಡಲೂ ಇವರು ನಮಗೆ ಬಿಡುತ್ತಿಲ್ಲವಲ್ಲ? ಎಂಥ ಶಾಲೆ ಎಂಥ ಶಿಕ್ಷಕರಿವರು ಎಂದು ಆಗಾಗ ಅಳುತ್ತಿದ್ದೆ. ಬೇರೆ ಮಕ್ಕಳ ನೆಪ ಹೇಳಿ ನಮ್ಮ ಸಣ್ಣ ಆಸೆ ಕುತೂಹಲವನ್ನು ಆ ಮಿಸ್ ನಗುತ್ತಲೇ ತಳ್ಳಿಹಾಕುತ್ತಿದ್ದರು. ಈ ಬೆಂಗಳೂರು ಈ ಶಾಲೆಗಳು ಛೆ ಪಕ್ಕಾ ಬಿಝಿನೆಸ್! ಒಳಗೊಳಗೇ ಕುದಿಯುತ್ತಿದ್ದೆ.

ಆಮೇಲೆ ಎರಡು ವಾರಗಳಮಟ್ಟಿಗೆ ಊರಿಗೆ ಹೋಗುವ ಸಂದರ್ಭ ಬಂದಾಗ ದುಂಡನೆಯ ಮಿಸ್, ' I'm going to miss her' ಎಂದರು. ಊರಿಗೆ ಹೋಗುವ ಉಮೇದಿನಲ್ಲಿ ಸುಮ್ಮನೆ ನಕ್ಕೆ. ಊರಲ್ಲಿದ್ದಾಗ ಶಾಲೆಯಿಂದ ಫೋನ್, ' ಸ್ವರ ಯಾಕೆ ಶಾಲೆಗೆ ಬರುತ್ತಿಲ್ಲ, ಮಿಸ್ ಕೇಳ್ತಿದಾರೆ!

ಊರಿಂದ ವಾಪಸ್ ಬಂದಮೇಲೆ ನಾನೇ ಕರೆದುಕೊಂಡು ಬರುತ್ತೇನೆ ಇನ್ನು, ನೀನೇ ಎಷ್ಟಂತ ಓಡಾಡುತ್ತೀ ಎಂದು ನನ್ನವನಿಗೆ ಹೇಳಿದೆ. ಬೇಬಿ ಕ್ಯಾರಿಯರ್ ನಲ್ಲಿ ಕೂರದ, ಗಾಡಿಯಲ್ಲಿ ಗಟ್ಟಿಯಾಗಿ ನಿಲ್ಲದ ವಯಸ್ಸಿನ ಕೂಸಿದು. ಕೊನೆಗೆ ಗಟ್ಟಿಮನಸ್ಸು ಮಾಡಿ, ನನ್ನೆಡೆ ಮುಖಮಾಡಿ ನಿಲ್ಲಿಸಿ, ಒಂದಾವರ್ತ ದುಪಟ್ಟಾವನ್ನು ನನ್ನ ಸೊಂಟಕ್ಕೆ ಮತ್ತು ಅವಳ ಬೆನ್ನಿಗೆ ಸುತ್ತಿ ನಿಲ್ಲಿಸಿಕೊಂಡೆ. ಹೀಗೇ ಶಾಲೆಯಿಂದ ಕರೆದೊಯ್ಯುವ ದಿನಚರಿ ಆರಂಭವಾಯಿತು. ನಾ ಬರುವತನಕ ಶಾಲೆಯ ಕಾಂಪೌಂಡಿನ ಗೋಡೆ ಮೇಲೆ ಒಂದು ದೊಡ್ಡ ಮತ್ತು ಸಣ್ಣ ಜೀವಗಳರಡೂ ಗಲ್ಲಕ್ಕೆ ಗಲ್ಲ ಹಚ್ಚಿ ಮುದ್ದು ಮಾಡುತ್ತ ತಮ್ಮದೇ ಜಗತ್ತಿನಲ್ಲಿ ಮುಳುಗಿರುತ್ತಿದ್ದವು. ಎಷ್ಟೋ ಸಲ ನಾ ದೂರದಿಂದಲೇ ನೋಡುತ್ತ ನಿಂತಿರುತ್ತಿದ್ದೆ. ನನ್ನ ಗಾಡಿ ಏರುತ್ತಿದ್ದಂತೆ ಸಣ್ಣ ಜೀವ ಬೈ ಮಿಸ್ ಎಂದು ದುಂಡನೆಯ ಜೀವಕ್ಕೆ ಹೇಳುತ್ತಿತ್ತು. ಆಕಡೆಯಿಂದ ಅದು ಬಾಯ್ 'ಸ್ವಲೀ' ಅಮ್ಮ ಬಂದ್ರೆ ನಾ ನಿಂಗ್ಯಾರೋ ಅಲ್ವಾ ಎಂದು ಹುಸಿಕೋಪ ತೋರಿಸಿ ಗಲ್ಲ ಉಬ್ಬಿಸಿಕೊಳ್ಳುತ್ತಿತ್ತು. ಹೀಗೇ ಸಾಗಿ ಈ ವರ್ಷಾಂತ್ಯವೂ ಬಂದೇಬಿಟ್ಟಿತು.

'ಅವಳು ಮನೇಲಿ ಏನು ತಿನ್ನಲ್ವೋ, ಕೊಟ್ಟುಕಳಿಸಿ ನಾ ತಿನ್ನಸ್ತೀನಿ. ಹಾಲು ಕುಡಿಯಲ್ವಾ? ಫ್ಲಾಸ್ಕಿನಲ್ಲಿ ಕಳಿಸಿ ನಾ ಕುಡಿಸ್ತೀನಿ. ನಾಲ್ಕು ಡ್ರೆಸ್ ಇಟ್ಟು ಕಳಿಸಿ, ಬಾತ್ರೂಮಿಗೆ ಅವಳೇ ಹೋಗಿ ಕಕ್ಕ ಮಾಡುವ ಹಾಗೆ ನಾ ಕಲಿಸುತ್ತೀನಿ ಎಂದೆಲ್ಲ ಅವರು ಈ ಹಿಂದೆ ಹೇಳುವಾಗೆಲ್ಲ ಅದೆಂಥ ಕಕ್ಕುಲಾತಿ ಅದೆಂಥ ಆತ್ಮಶಕ್ತಿ!

ಈ ದುಂಡನೆಯ ಮಿಸ್ ಅವತ್ತು ಕ್ರೀಡಾಂಗಣದ ತುಂಬ ಧ್ವಜ ಹಿಡಿದು ಮಾರ್ಚ್ ಫಾಸ್ಟ್ ಮಾಡುತ್ತಿದ್ದರೆ, ಈ ಸಣ್ಣಜೀವ ಸ್ವಲೀ ಅದರ ದುಪಟ್ಟಾ ಹಿಡಿದು ಹೆಜ್ಜೆ ಹಾಕುತ್ತ ನಮ್ಮಿಬ್ಬರನ್ನು ಹುಡುಕುತ್ತ ಅಳುತ್ತಿತ್ತು. ಅವಳ ಅಳು ನೋಡಿ ನಾನಿಲ್ಲಿ ಅಡಗಿಕೊಂಡು ಅಳುತ್ತಿದ್ದರೆ, ಅಕ್ಕಪಕ್ಕದ ಅಪ್ಪ ಅಮ್ಮಂದಿರು, 'hey why u crying yaar? So funny' ಅನ್ನುತ್ತಿದ್ದರು. ಹೀಗೇ ಇನ್ನೊಂದು ಮಗುವೂ ಅಳುತ್ತಿತ್ತು, ನಾ ಹೋಗಿ ನನ್ನ ಮಗಳನ್ನು ಎತ್ತಿಕೊಳ್ಳಲೇ? ಎಂದು ಅದರ ಅಮ್ಮ ಚಡಪಡಿಸುತ್ತಿದ್ದರು. ಕಾಣಿಸಿಕೊಳ್ಳಬೇಡಿ ಆದಷ್ಟು ಅಡಗಿಕೊಳ್ಳಿ, ನಿಮ್ಮನ್ನು ಕಂಡರೆ ಮತ್ತಷ್ಟು ದುಃಖಿಸುತ್ತಾಳೆ. ಈಗ ಡ್ಯಾನ್ಸ್ ಶುರುವಾಗುತ್ತಿದ್ದಂತೆ ಮಕ್ಕಳೆಲ್ಲ ಮರೆಯುತ್ತಾರೆ ಅಂದೆ. ಕೊನೆಗೆ ಹಾಗೇ ಆಯಿತು. ಮೊದಲ ಬಾರಿ ಮಗಳು ಎಲ್ಲರೆದುರು ಕುಣಿಯುವಂತೆ ಮಾಡಿದ್ದು ಇದೇ ನಮ್ಮ ದುಂಡನೆಯ ಅಂದರೆ ಸ್ವರೂಳ ವಚು ಮಿಶ್! ಪ್ರತೀವರ್ಷದಂತೆ  ಮಿಸ್ ಗೆ ಬೇರೆ ಮಕ್ಕಳು ಸಿಗುತ್ತಾರೆ ಹಾಗೇ ಸ್ವರಳಿಗೂ ಬೇರೆ ಮಿಸ್.

ಹೀಗೇ ಇದೊಂದು ತೂಕಕ್ಕೆ ಸಿಗದ ಕಪ್ಪೆ ಜೀಗಿತದ ಪ್ರೀತಿಯ ಓಟದ ಆರಂಭ. ಅಪೂರ್ವ ಘಳಿಗೆಗಳನ್ನು ಅನುಭವಗಳನ್ನಷ್ಟೇ ನಮ್ಮ ದುಂಡನೆಯ ಕೊಳದೊಳಗೆ ತುಂಬಿಸಿಕೊಳ್ಳುತ್ತ ಹೋಗಬೇಕು. ಕತ್ತಲಾದಾಗ ಕೊಳದಲ್ಲಿ ಕಾಣದ ಬಿಂಬ ಹಗಲಲ್ಲಿ ನಿಚ್ಚಳವಾಗಿರುತ್ತದೆ, ಕೊಳ ಶುದ್ಧವಾಗಿಟ್ಟುಕೊಂಡು ಕಾಯುವ ಮನಸ್ಸಿರಬೇಕು ಸಹನೆಯಿರಬೇಕು ಎಲ್ಲಕ್ಕಿಂತ ಮುಖ್ಯ ಕುತೂಹಲವಿರಬೇಕು.

Saturday, March 26, 2016

ತೀವ್ರ ಮಧ್ಯಮ


ಬಟ್ಟೆಯಿಂದ ಮೈಯೊರೆಸುವುದೇನು
ಚಿತ್ತಾರವರಳಿಸಿ ಸೆಳೆಯುವುದೇನು
ನೊಣ ಹಾರಿಸುವುದೇನು
ಬಣ್ಣದ ಹಾಳೆ ಅಂಟಿಸಿಡುವುದೇನು
ಆಹಾ... ಮೈದುಂಬಿ ಮಿರುಗುವ ಇವರೆಲ್ಲ
-ಮುಂದಿನ ಸಾಲಿನ ನಾಯಕರು

ನನಗೆ ನಿನಗೆ ನಿನಗೆ ನನಗೆ
ಕಾಲು ಅರ್ಧ ಒಂದು ಹೋಳು ರುಚಿಗೆ
ಎರಡು ಮೂರು ಕೇಜಿಗೆ
ಮೇಲೊಬ್ಬರ ಮೇಲೆ ಬಿದ್ದೂಬೀಳದೆ
ಹಸಿಬಿಸಿನೋಟುಗಳ ಕೈಯೂಬಿಡದೆ
ಗುಣಗಾನಿಸುತ್ತಲೇ ಅವರೆಲ್ಲ ನುಗ್ಗುವುದಿದೆಯಲ್ಲ
-ಇದೆಲ್ಲವೂ ಹಣ್ಣುಕೊಳ್ಳುವತನಕವಷ್ಟೆ

ಗಿಣಿಕಚ್ಚಿದ ಮುಕ್ಕಾದ ಮಣ್ಣಾದ
ಪುಟಿದು ಪುಳುಪುಳಿಸಿ ಮೆದುವಾದ
ಕಳಿತು ಕೆಳಬಿದ್ದು ಕಾಲುಮುರಿದುಕೊಂಡವರೇ
ಕೊಳ್ಳುಗರ ಮೂಗರಳಿಸಿ ಕಾಲಸೆಳೆದವರೇ
ಅಸಲಿನ ರುಚಿಸಾರಿಗರು ಅವರೇ
ಹಿಂದಿನ ಸಾಲಿನವರು

ಜಾತ್ರೆ ಇರುವ ತನಕ ಜನ, ಜನರಿರುವ ತನಕ ಜಾತ್ರೆ
ಜಂಗುಳಿಯ ತೊರೆದು ತೋಟ ಕಾಯಲು ಹೋದ
-ದೇವರು ಮಧ್ಯದಾರಿಯೊಳಗೆ ಸಾಗಿ
ಮರದಡಿ ನಿದ್ದೆ ಹೋಗಿದ್ದಾನೆ
ಎಬ್ಬಿಸದಿರಿ ನೈವೇದ್ಯದ ನೆಪದಲ್ಲಿ

- ಶ್ರೀದೇವಿ ಕಳಸದ

Thursday, March 17, 2016

ಸೇರಲೆನ್ನಯ ಜೀವ ಜೀವವಿಶ್ವದಲಿಅಮ್ಮಾ ಹೋನಾ? ಆಕೆ ಒಂದೊಂದೇ ಮೆಟ್ಟಿಲಿಳಿಯುತ್ತಿದ್ದರೆ ನಾ ಆ ಪಾದಗಳನ್ನೂ ತುಂಬಿದ ಚೀಲವನ್ನೂ ನೋಡುತ್ತ ಸುಮ್ಮನೇ ಹಿಂಬಾಲಿಸುತ್ತಿದ್ದೆ. ನೋಡಲದು ಅಂಗೈಯಗಲ ಚೀಲವೇ ಆಗಿದ್ದರೂ ತುಂಬಿಸಿಕೊಂಡಿದ್ದು ಕಾಲುಕೇಜಿ ಬಟಾಣಿ. ಪುಟ್ಟಭುಜಕ್ಕೆ ತುಸು ಜಂಭ ಸವರಿ, ಕಾಲಿಗೊಂದಿಷ್ಟು ಗತ್ತು ಅಂಟಿಸಿ ಪಕ್ಕದ ಉದ್ಯಾನಕ್ಕೆ ಕಾಲು ಬೆಳೆಸಿತ್ತು ತುಂಬಿಯೂ ತುಳುಕದ ಆ ಚೀಲ.

ಗೇಟಿನ ಬಲಬದಿಯಲ್ಲೇ ಮಾಲಿಯಜ್ಜ ಪಂಪ್ಸೆಟ್ ರಿಪೇರಿ ಮಾಡಿಸುತ್ತ ಕುಳಿತಿದ್ದ. ಅದೂ ಅವನಷ್ಟೇ ನುಜ್ಜುಗುಜ್ಜಾಗಿ ಸೋತಂತಿತ್ತು, ಬಣ್ಣವನ್ನೂ ಕಳೆದುಕೊಂಡಿತ್ತು. ಮೊದಲಿನ ಚೈತನ್ಯ ತಂದು ಕೊಡದಿದ್ದರೆ ನಾ, ನಾನೇ ಅಲ್ಲ ನೋಡುತ್ತಿರು ಎಂಬ ಉಮೇದಿಯಲ್ಲಿ ರಿಪೇರಿಯಪ್ಪನೊಬ್ಬ ಆ 'ಪಂಪಮಹಾಶಯ'ನ ಕೈಕಾಲು ಉಜ್ಜುವುದೇನು, ತುಟಿಬಿಗಿಹಿಡಿದು ಅದರ ಕತ್ತು ತಿರುವುವುದೇನು ಅದಕ್ಕೊಂದಿಷ್ಟು ತಂತಿ ಬಿಗಿಯುವುದೇನು, ರಬ್ಬರ್ ತೊಡಿಸುವುದೇನು... 'ಆಹಾ ನೆನೆವುದೆನ್ನ ಮನಂ ತನಂ ಅದಿಂದು ರಿಪೇರಿಯಾದೋಲ್' ಎಂದು ನಾ ಕಾರಂಜಿ ತಂಪಿನ ಗುಂಗಿನೊಳಗೇ ಉದ್ಯಾನದ ಹೃದಯ ಭಾಗಕ್ಕೆ ಬಂದೆ. ಇವಳೋ ಅದಾಗಲೇ ನನ್ನ ಬೆರಳಗೊಂಚಲ ಬಿಟ್ಟು ಮಂಟಪದ ಕಟ್ಟೆಯನೇರಲು ಹವಣಿಸುತ್ತಿದ್ದಳು. ಆಗಲೂ ನನ್ನ ಕಣ್ಣು ಅವಳ ಪುಟ್ಟಪಾದ ಮತ್ತು ತುಂಬಿಯೂ ತುಳುಕದ ಚೀಲದ ಮೇಲೆಯೇ.

'ಮೊನ್ನೆಯೊಂದ್ ಮದ್ವೇಗ್ ಹೋಗಿದ್ನಾ, ಕಾರ್ ಹತ್ತೋಕ್ ಹೋಗಿ ಕಾಲು ಕಳಕ್ ಅಂತಾ, ನೋವು ತಡಿಯಕ್ ಆಗ್ತಿಲ್ಲ. ರಾಮಾsss ಸಾಕಪ್ಪಾ ಸಾಕು ಈ ಅರವತ್ತಕ್ಕೇ' ತೂತುಗಳೊಳಗೆ ಮಾತು ಕಳೆದುಕೊಂಡ ಬಿಳಿಪಟ್ಟಿಯೊಂದು, ಅಲ್ಲಿಗೆ ಬಂದ ಆ ಅಜ್ಜಿಯ ಮೀನಗಂಡ ಅಪ್ಪಿ ಕುಳಿತಿತ್ತು. ಈ ನನ್ನ ಮಗಳೋ ಮಹಾ ಸುದ್ದಿ ಸೂರವ್ವ, 'ಗಾಯಾ ಅಜ್ಜಿಗೆ ಗಾಯಾ ಪಾಪಾ ಹಾ' ಎಂದು ಬಂದವರಿಗೆಲ್ಲ ಓಡೋಡಿ ಹೋಗಿ ಹೇಳುವುದೇನು, ಮಧ್ಯೆಮಧ್ಯೆ ತನ್ನ ಅಂಗಿಯನೆತ್ತಿ ಮೂರು ತಿಂಗಳ ಹಿಂದಿನ ಚೂರೇಚೂರು ಕಲೆಯನ್ನು ತೋರಿಸುತ್ತ ನಂಗೂ ಗಾಯಾ ಹಾ ನೋದು ನೋದಿಲ್ಲಿ ಎಂದು ಪ್ರದರ್ಶಿಸುವುದೇನು, ಇವರಿಬ್ಬರೂ ಅತ್ಯುತ್ಸಾಹದಿಂದ ತಮ್ಮ ತಮ್ಮ ಗಾಯಗಳನ್ನು ಬಣ್ಣಿಸುವುದೇನು ಅದಕ್ಸರಿಯಾಗಿ ಪ್ರೇಕ್ಷಕವೃಂದದ ಉದ್ಗಾರಗಳು ಮರುಕಗಳು ಸಲಹೆಗಳು ಪ್ರತಿಕ್ರಿಯೆಗಳು ವಾದಗಳು ಮತ್ತು ಕೆಲ ಮುಖತಿರುವುಗಳು... ಮತ್ತು ಬಟಾಣಿಸಿಪ್ಪೆಗಳು ತೆಪ್ಪಗೆ ಕುಳಿತ ಚೀಲವೂ. ಪಕ್ಕದಲ್ಲಿದ್ದ ಚಿಗುರು 'ಇಲ್ಲಿ ನಾನೂ ಇದ್ದೇನಲ್ಲ ಮತ್ತೆ...' ಕತ್ತೆತ್ತಿ ನೋಡಲೆತ್ನಿಸುತ್ತಿತ್ತು, ವಯಸ್ಸಾದ ಮರವೊಂದು ಹಾದುಹೋಗುವವರೆಲ್ಲರ ತಲೆಯ ಮೇಲೆ ತರಗೆಲೆಯುದುರಿಸುತ್ತ ತಲೆ ಎತ್ತಿ ನೋಡುವ ಹಾಗೆ ಮಾಡುತ್ತಿತ್ತು. 'Attention is vitality. It connects you with others. It makes you eager. Stay eager' - Susan Sontag ಪಕ್ಕದ ಕಂಬದ ಮರೆಯಲ್ಲಿ ನಿಂತು ಉಸುರಿದಂತಾಯ್ತು.

ಪಾಕ್ ಸಾಕು ಈಗ ಬೇರೆ ವಾಕ್ ಎನ್ನುತ್ತ ಮಗಳು ಹೊಕ್ಕಿದ್ದು ಎದುರಿನ ಬಿಬಿಎಂಪಿ ಹೆರಿಗೆ ಆಸ್ಪತ್ರೆ. ಈ ಗಿಡ ಆ ಗಿಡ, ಹಳದೀ ಚಿಟ್ಟೆ, ಕರೀಕೀಟ, ಮರಿಕೀಟ, ಕೈಜಾರಿದ ಚಾಕೋಲೇಟ್, ಸಪ್ಪಗಾದ ಮುಖ. ಕೊನಗೆಲ್ಲ ಮರೆತು, ಅಲ್ಲಿ ಅಣ್ಣ ಎಂದಳು. ನಾಲ್ಕರ ಪೋರ ಮೆಟ್ಟಿಲ ಮೇಲೆ ಕುಳಿತಿದ್ದ. ಮೆಟ್ಟಿಲು ಏರುತ್ತ, 'ಅಣ್ಣ ಚೇಮ್ ಚೇಮ್' ಎಂದು ಮುಖ ಮುಚ್ಚಿಕೊಂಡು ನಕ್ಕಳು. 'ಕಂದಾ ನಿನ್ನ ಕಾಲ ಬಳಿ ಇರುವೆ ಇದೆ ಎದ್ದು ನಿಂತುಕೋ' ಎಂದು ಮೆತ್ತಗೆ ಉಸುರಿದೆ. ಪಾಪ ಆ ಅಣ್ಣ ಸಡಿಲಾದ ಚಡ್ಡಿ ಏರಿಸುತ್ತ ಎದ್ದುನಿಂತಿತು. ಏಯ್ ಹೋಯ್ತು ಹೋಯ್ತದು ಎಂದು ಜೋರಾಗಿ ಕೂಗಿ ನಕ್ಕು ಇವಳ ಮುಸುಮುಸಿಯನ್ನೂ ಅವನ ಗಾಬರಿಯನ್ನೂ ಓಡಿಸಿಬಿಟ್ಟೆ.

ಮೆಟ್ಟಿಲಮೇಲೆ ಕುಳಿತು ಆ ಅಣ್ಣನೊಂದಿಗೆ ಹರಟುತ್ತಿದ್ದಂತೆ, 'ಒಲಗೆ ಹೋನಾ?' ಎಂದಳು. ಕುಂತ ಕುರ್ಚಿ ಬಿಟ್ಟೆದ್ದು ಬಂದ ಆ ಅಣ್ಣನ ಅಜ್ಜಿ, 'ಸೂಜಿ ಚುಚ್ತಾರೆ!' ಎಂದಳು. ಸ್ವಲ್ಪ ಹೊತ್ತು ಇವಳ ಪಲ್ಲವಿಗೆ ಅವಳ ಚರಣ ಕೇಳಿ ಕೇಳಿ ಸಾಕಾಗಿ, ಏಯ್ ಪುಟ್ಟ ನೀನಿಲ್ಯಾಕ್ ಬಂದಿದ್ದು? ಅಂದೆ. ನಮ್ ಪಾಪು ಒಳಗಿದೆ ಗೊತ್ತಾ? ಅಂದ ಆ ಹುಡುಗ. 'ಪಾಪುನಾ? ವಾವ್ ಪಾಪು ಎತ್ತೋಬೇಕು, ಅಮ್ಮಾ ಹೋನಾ...' ಇವಳೀಗ ನಿವೇದನಾವದನೆ! ಓಹ್ ಯಾವಾಗ ಹುಟ್ಟಿದೆ ಏನ್ ಮಗು ಎಂದೆ. ' ಅಯ್ಯೋ ಗಂಡಮಗು. ನಿನ್ನೆ ಸಂಜೆ ನಾಲ್ಕಕ್ಕೆ ಹುಟ್ಟಿದೆ. ನಮ್ ಮಗಳು ಅಳ್ತಾ ಮಲಗವ್ಳೆ ನಿನ್ನೆಯಿಂದ. ಏನ್ ಮಾಡೋದು ಹೆಣ್ಣೇ ಬೇಕು ಅಂತ ಎಷ್ಟೋಂದ್ ಆಸೆ ಇಟ್ಕಂಡಿದ್ಲು. ಹೆಣ್ ಬೇಕಲ್ವರಾ ಒಂದು? ನಿನ್ನೆಯಿಂದ ಮೂರು ನಾರ್ಮಲ್ ನಾಲ್ಕು ಸಿಝೇರಿಯನ್ ಒಟ್ಟು ಒಂಭತ್ತು ಗಂಡು ಹುಟ್ಯವೆ ಇಲ್ಲಿ!' ಎಂದವಳ ಮುಖ ಸಪ್ಪನ್ನ ಬೇಳೆ.

'ಪಾಪು ಎತ್ತೋಬೇಕು ನೋಬೇಕು' ಇವಳ ಹಕ್ಕೊತ್ತಾಯಕ್ಕೆ ಮಣಿದ ಅಜ್ಜಿ, ಬಾ ಎಂದು ವಾರ್ಡಿಗೆ ಕರೆದೊಯ್ದಳು. ಮತ್ತೆ ನನ್ನ ಬೆರಳಗೊಂಚಲ ಬಿಡಿಸಿಕೊಂಡವಳೇ ಓಡಿಬಿಟ್ಟಳು. ಅದರಮ್ಮ ಅದಕ್ಕೆ ಬೆನ್ನು ಮಾಡಿ ಮಲಗಿದ್ದರೂ, ಕೂಸು ನಿದ್ದೆಯಲ್ಲೇ ನಗುತ್ತಿತ್ತು. 'ವಾವ್ ಪಿಂಕ್ಪಿಂಕ್ ಪಾಪು ತುಪರ್' ಎನ್ನುತ್ತ ಮತ್ತೆ ಮಗಳು ಪಲ್ಲವಿಗೇ; ಪಾಪು ಎತ್ತೊಬೇಕು! ಈಗದು ಮಲಗಿದೆ ಆಮೇಲೆ ಬರೋಣ್ವಾ ಎಂದೆ. ಓಕೆ ಎಂದವಳೇ ಪಕ್ಕದ ಹಾಸಿಗೆಯಲ್ಲಿ ಮಲಗಿದ್ದ ಎಳೆತಾಯಿಯನ್ನೊಮ್ಮೆ ನೋಡಿ, ಪಾಪು ಎಲ್ಲಿ ಎಂದಳು. ಅವಳು ತನ್ನ ಮಗುವನ್ನು ಅವುಚಿಕೊಂಡಂತೆ ಮಾಡಿ ರಗ್ಗೆಳೆದುಕೊಂಡು ಆಕಡೆ ತಿರುಗಿದಳು. ಅಲ್ಲೊಂದು ಮೂಲೆಯ ಹಾಸಿಗೆಯಲ್ಲೊಬ್ಬಳು ತಾಯಿ, ಗೋಡೆಗೆ ಮುಖಮಾಡಿ ಹಾಲೂಡಿಸಲು ಪ್ರಯತ್ನಿಸುತ್ತಿದ್ದಳು. ಪಾಪು ನೋಬೇಕು ಎಂದಳು ಇವಳು ಮತ್ತೆ. ಇಲ್ಲ ಅದು ಹಾಲು ಕುಡೀತಿದೆ ಮತ್ತೆ ಬರೋಣ ಎಂದು ಹೊರಡಿಸಿದರೆ ಮತ್ತದೇ ಪಲ್ಲವಿ. ಗುಬ್ಬಚ್ಚಿ, ಪಾಪುಗೆ ಹೊಸಾ ಡ್ರೆಸ್ ತಗೊಂಬರೋಣ ಅಂದೆ. ಯೆಶ್ ಎಂದು ಕುಣಿದಾಡತೊಡಗಿದಳು. ನಡೀ ಮತ್ತೆ ಮನೆಗೆ ಹೋಗಿ ತಗೊಂಬರೋಣಾ ಎಂದೆ. ಇಬ್ಬರೂ ಎರಡೇ ನಿಮಿಷದಲ್ಲಿ ಹಕ್ಕಿಯಂತೆ ಹಾರಿ ಗೂಡು ಸೇರಿಬಿಟ್ಟೆವು.

ಕೈಕಾಲು ತೊಳೆದುಕೊಂಡು ಬಟ್ಟೆ ಬದಲಾಯಿಸಿದರೆ ಮಾತ್ರ ಪಾಪು ಎತ್ತಿಕೊಳ್ಳುವುದು ಎಂದೆ. ನಮ್ಮನೆ ದೇವ್ರು ಇಣುಕಿ ನೋಡುತ್ತಿತ್ತು, ಇವಳ ಸಡಗರಕ್ಕೆ ಮತ್ತು ಅವಸರಕ್ಕೆ. ಹೀಗೆ ಹುಟ್ಟಿದ ಮಕ್ಕಳಿಗೆ ಕೊಡಲೆಂದೇ ಇಂವ ಅಂದೆಂದೋ ತಂದಿಟ್ಟ ಬಣ್ಣಬಣ್ಣದ ಸ್ವೆಟರ್ ಗಳ ಪ್ಯಾಕ್ ಬಿಚ್ಚಿದೆ ಹಾಲಬಣ್ಣದ ಸ್ವೆಟರ್ ಕಾಲುಚೀಲ ಕುಂಚಿಗೆ ನಕ್ಕಿತು. ಇನ್ನೇನಾದರೂ... ಎಂದು ಯೋಚಿಸುತ್ತಿರುವಾಗ, ಬೇಗಬೇಗ ಹೋನಾ ಬಾಮ್ಮಾ ಎಂದು ಕೈ ಜಗ್ಗಿದಳು.

ವಾರ್ಡಿಗೆ ಬಂದಾಗ, ಅಳುಮೋರೆಯಿಂದಲೇ ಆ ಎಳೆಗೂಸಿನಮ್ಮ ಯಾರಿಗೋ ಡಯಲ್ ಮಾಡುತ್ತಲೇ ಇದ್ದಳು, ಆಕಡೆಯವರು ಉತ್ತರಿಸುತ್ತಿರಲಿಲ್ಲವೇನೋ. ಓಡಿಹೋದವಳೇ, ಪಾಪುಗೆ ತ್ವೆತರ್ ಎಂದು ಕೈಗಿಟ್ಟಳು ಇವಳು. ಆಕೆ ಕಣ್ಣೊರೆಸಿಕೊಳ್ಳುತ್ತ ಇದೆಲ್ಲ ಯಾಕೆ, ಇವರ್ಯಾರಮ್ಮ ಎಂದು ತನ್ನ ತಾಯಿಯೆಡೆ ನೋಡುತ್ತ ನಗು ತಂದುಕೊಂಡಳು. ಇತ್ತ ಇವಳು ಮುಟ್ಟಿಗೆಬಿಚ್ಚಿ ಆ ಅಣ್ಣನಿಗೆಂದೇ ತಂದ ಚಾಕೋಲೇಟ್ ಕೊಟ್ಟು 'ಉದಾರಿವೀರಿ' ಎನ್ನಿಸಿಕೊಂಡಳು ಆ ಕ್ಷಣದ ಮಟ್ಟಿಗೆ!

ಅಲ್ಲೇ ಪಕ್ಕದ ಹಾಸಿಗೆಯಲ್ಲಿದ್ದ ಎಳೆಯ ಅಮ್ಮನಿಗೆ ಅದು ಮೊದಲ ಮಗು. ಮತ್ತೆ ಮತ್ತೆ ನೋಡಬೇಕೆನ್ನುವ ಹಾಗಿದ್ದರು ಆ ಗಂಡಹೆಂಡತಿ. ಆ ಪಾಪು ಎತ್ತೋಲೋಣ ಎಂದು ಇವಳು ಆ ಕಡೆ ಕೈಮಾಡಿದಳು. ಆದರೆ ಅವರಿಬ್ಬರು ಕಣ್ಣಿಗೆ ಕಣ್ಣೂ ಕೊಡಲಿಲ್ಲ. ಉಳಿದ ಪುಟ್ಟಕೂಸುಗಳನ್ನು ಅವರವರ ಅಜ್ಜ ಅಜ್ಜಿ ಸಂಬಂಧಿಕರು ಸುತ್ತಿವರಿದಿದ್ದಕ್ಕೋ ಏನೋ... ಈ ದಂಪತಿ ಮುಖದಲ್ಲಿ ಎಂಥದೋ ವಿಷಾದ ಛಾಯೆ.

ಒತ್ತಾಯದಿಂದ ಮಗಳನ್ನೆಳೆದುಕೊಂಡು ಹೊರಬರುವಾಗ ಸೆಕ್ಯುರಿಟಿಯಜ್ಜ, 'ನಾಳೆ ಇನ್ನೊಂದು ಪಾಪು ವಾರ್ಡಿಗೆ ಶಿಫ್ಟಾಗುತ್ತದೆ. ನಾಳೆ ಬರುವಿಯಂತೆ ಈಗ ಕತ್ತಲಾಯಿತು ಮನೆಗೋಗು ಪುಟ್ಟಿ' ಎಂದ. ಅಳುವ ಇವಳನ್ನು ಎತ್ತಿಕೊಂಡು ಮನೆಗೆ ಬರಬೇಕಾದರೆ, ಪರಿಚಯದ ಅಜ್ಜಿಯೊಬ್ಬರು, 'hey swara where had u been?' ಎಂದರು. ಹಿಂಗಾಯ್ತು ಅಂದಿದ್ದಕ್ಕೆ, 'oh they must be servant class people. its good yaa... giving smthng to someone. Punya goes to your account!' ಎಂದರು. ಅವರ ಒಕ್ಕಣೆಗೆ ಏನು ಪ್ರತಿಕ್ರಿಯಿಸಬೇಕೋ ಅರ್ಥವಾಗದೆ ಸುಮ್ಮನೆ ನಕ್ಕಿದ್ದೆ. ಅದನ್ನೊಪ್ಪಿಕೊಳ್ಳದ ಮನಸ್ಸಿಗೆ ಹೇಗೆ ಸಮಾಧಾನ ಹೇಳುವುದೆಂದು ತಿಳಿಯದಂತಾಗಿ ಇಂದು ಕಗ್ಗದ ಮೇಲೆ ಕಣ್ಣಾಡಿಸುತ್ತಿದ್ದೆ. ಸಕಾರಣವೆಂದರೆ ಇದೆ ಏನೋ, ಇಂದೇ ಡಿವಿಜಿಯವರ ಹುಟ್ಟುಹಬ್ಬ.

ಆರಲೆನ್ನಯ ಹೃದಯ ಕರಣಗಳ ಕಾವುಗಳು
ಸೇರಲೆನ್ನಯ ಜೀವ ವಿಶ್ವಜೀವದಲಿ
ಧಾರುಣಿಯ ಮಡಿಲೆನ್ನ ಕೊಳಲಿ; ಜಗ ಮರೆತಿರಲಿ
ಹಾರಯಿಸು ನೀನಿಂತು – ಮಂಕುತಿಮ್ಮ

Thursday, March 3, 2016

ಬಂಗಾಳಿ ಬಾಬುವಿನ ಆಕಾಶಕೋಲು'ಇದರ್ ದೇಖೋಜಿ ಮ್ಯಾಡಮ್' ಎಂದು ಅವ ಆಕಾಶ ನೋಡುತ್ತ ದೂಳುಕೋಲು ಮೇಲೇರಿಸಿದ. ಔರ್ ಏ ದೇಖೊ ಸ್ಟಿಫ್ವಾಲಾ ಎಂದು ನೆಲಕ್ಕೆ ಕುಕ್ಕಿದ. ಬೇಗ ಮುರಿಯುತ್ತೆ ಎಂದು ಗೊತ್ತಿದ್ದರೂ ಆಕಾಶಕ್ಕೇರಿದ ದೂಳುಕೋಲನ್ನೇ ಆಯ್ಕೆ ಮಾಡಿಕೊಂಡೆ. ಮುನ್ನೂರೈವತ್ತು ಅಂದ. ಚೌಕಾಶಿ ಬೇಡ, ನೀವೇ ಒಂದು ರೇಟ್ ಹೇಳಿ ಎಂದೆ.  ಇನ್ನೂರು ಎಂದ, ಕೊಟ್ಟೆ. ನೀವು ಹಿಂದೀ ಚೆನ್ನಾಗಿ ಮಾತನಾಡುತ್ತೀರಿ ಬಹಳ ಖುಷಿಯಾಯ್ತು ನೀವು ನಮ್ಮ ಊರು ಕಡೆಯವರಾ ಎಂದು ಕಣ್ಣರಳಿಸಿದ.  ಇಲ್ಲ ನಾ ಇಲ್ಲಿಯವಳೇ ಅಂದೆ. ಏಳನೇ ಕ್ಲಾಸಿಗೇ ಹಿಂದೀಯನ್ನು ಇಳಿಸಿ ಸಂಸ್ಕ್ೃತ ಎತ್ತಿಕೊಂಡಿದ್ದೆನಾದ್ದರಿಂದ, ಹಿಂದೀ ಈಗಲೂ ನನ್ನ ಮೇಲೆ ಮುನಿಸಿಕೊಂಡೇ ಇದೆ ಎಂದುಕೊಂಡಿದ್ದೆ. ಆದರೆ ಆಡ್ತಾ ಆಡ್ತಾ ಸರಾಗವಾಗಿ ಕೈಕಿರುಬೆರಳು ಹಿಡಿದು ನಡೆಯತೊಡಗಿತು.

'ಹಣ ಇದ್ದರೆ ಎಲ್ಲಾ ನೋಡಿ. ಅದಿರದಿದ್ದರೆ, ಕಟ್ಟಿಕೊಂಡ ಹೆಂಡತಿಯೂ ದೂರ ಸರಿಯುತ್ತಾಳೆ ' ಆಜಾ ಬೇಟಾ ಎಂದು ಮಗಳನ್ನು ನೋಡಿ, ಎತ್ತಿಕೊಳ್ಳಬಹುದಾ ಎಂದು ಕೇಳಿದ. ಮಾತನಾಡುತ್ತಾ, ಕೇರಳದ ಮಂದಿಯೂ ಬಹಳ ಒಳ್ಳೆಯವರು, ಹಿಂದೊಮ್ಮೆ ಇಷ್ಟೇ ಚಿಕ್ಕ ಮಗುವೊಂದನ್ನು ಹೀಗೆಯೇ ಎತ್ತಿಕೊಂಡಿದ್ದೆ. ಅರ್ಧ ಗಂಟೆಯ ನಂತರ ಒತ್ತಾಯದಿಂದ ಮಗುವನ್ನು ಕರೆದುಕೊಂಡು ಹೋದರು. ನನ್ನ ಮಗನೂ ಈಗ ಹತ್ತನೇ ಕ್ಲಾಸಿನಲ್ಲಿದ್ದಾನೆ. ಕೊಲ್ಕತ್ತದಲ್ಲೇ ತನ್ನ ತಾಯಿಯೊಂದಿಗೆ' ಎಂದು ನನ್ನ ಮಗಳನ್ನು ಕೆಳಗಿಳಿಸಿದ.

ಪುಟ್ಟ ದೂಳುಕೋಲಿಗಾಗಿ ಮಗಳು ರಂಪ ಹಿಡಿದಾಗ ಕೊಟ್ಟು ಸಮಾಧಾನಿಸಿದ. ಹೀಗೇ ನೋಡಿ ಎಲ್ಲರೂ, ಬೇಕು ಅಂದ್ರೆ ಬೇಕು. ಈಗ ಮಗು ಹೇಳುತ್ತಿರುವುದೂ ಅದೇ, ಬೇಕು ಬೇಕು ಬೇಕು. ಈ ಶಬ್ದದ ವಿನಾ ಅದು ಬೇರೇನೂ ಮಾತನಾಡುತ್ತಿಲ್ಲವಲ್ಲ? ಎಂದು ತಾತ್ವಿಕವಾಗಿ ಹೇಳಿದ. ನೀವು ಶಾಲೆಗೆ ಹೋಗಿದ್ದೀರೋ ಎಂದಿದ್ದಕ್ಕೆ, 'ಬಿಕಾಂ ಅರ್ಧಕ್ಕೆ ನಿಲ್ಲಿಸಬೇಕಾಯಿತು ಅಮ್ಮ ತೀರಿಹೋದದ್ದರಿಂದ. ನಾ ಒಬ್ಬನೇ ಮಗ. ಐದು ವರ್ಷದವನಿದ್ದಾಗಲೇ ಅಪ್ಪನನ್ನು ಕಳೆದುಕೊಂಡೆ. ಸಂಬಂಧಿಕರೂ ಚದುರಿದರು. ಈಗ ನಾನಿಲ್ಲಿ ಹನ್ನೊಂದು ವರ್ಷದಿಂದ' ಎಂದ.

ಎಲ್ಲಿದ್ದೀರಿ ಎಂದಿದ್ದಕ್ಕೆ ಮೆಜೆಸ್ಟಿಕ್ ನ ಲಾಡ್ಜ್ ಒಂದರಲ್ಲಿ ನಾಲ್ಕೈದು ಜನ ರೂಮು ಮಾಡಿಕೊಂಡಿದ್ದೇವೆ. ಕೊಲ್ಕತ್ತೆಯಿಂದ ಸೀರೆ ತರಿಸಿಯೂ ಮಾರುತ್ತೇವೆ. ವರ್ಷಕ್ಕೆ ಮೂರು ಸಲ ಊರಿಗೆ ಹೋಗುತ್ತೇವೆ. ಎಷ್ಟೋ ಸಲ ಖಾಲೀ ಕೈಯಲ್ಲಿ ರೂಮಿಗೆ ಹೋಗಿದ್ದೂ ಇದೆ. ಆದರೆ ಊರಿಗೆ ಹೊರಡುವ ವೇಳೆ ಹೇಗೋ ಸ್ವಲ್ಪ ಹಣ ಜೇಬಲ್ಲಿರುತ್ತದೆ ಎಂದ.

ದಾರಿಹೋಕ ಹೆಣ್ಣುಮಗಳೊಬ್ಬಳು ನೂರು ರೂಪಾಯಿಗೆ ಕೊಡುತ್ತೀರಾ ಎಂದು ಆಕಾಶಕ್ಕೇರುವ ದೂಳುಕೋಲು ಕೇಳಿದಳು. ಅವ ಇಲ್ಲ ಎಂದ, ಅವಳು ತಿರುಗಿ ನೋಡದೆ ಹೋದಳು. 'ಈಗ ಯಾರಿಗೂ ಸಮಯವಿಲ್ಲ, ಕೇಳಿದ ರೇಟಿಗೆ ಕೊಡದಿದ್ದರೆ ಹೊರಟುಬಿಡುತ್ತಾರೆ. ಜನರ ನಡುವೆ ಈಗ ಮಾತೂ ಅಪರೂಪವಾಗಿದೆಯಲ್ಲ?' ಎಂದನಂವ. ನನ್ನ ಕಣ್ಣು ಪ್ಲಾಸ್ಟಿಕ್ ಎಳೆಗಳನ್ನು  ಸಿಕ್ಕಿಸಿಕೊಂಡ ಒಂಟಿಗಳದ ಮೇಲೆ ಹೊರಳಿತ್ತು.

Tuesday, March 1, 2016

ಮರುಳ ಸಿದ್ಧನ ಮಾಯೆದಾರಿ ನೋಡಿದಷ್ಟೂ ಸುಸ್ತು ಮಾಡುವ ಈ ಓಟಕ್ಕೆ ಆಗಾಗ ಮುಖವೆತ್ತಿ ರಮಿಸುತ್ತಿರಬೇಕು, ಮೀನಖಂಡ ಎಳೆಯುತ್ತಿದ್ದರೂ, ಮಾರುಮಾರಷ್ಟೇ ಗುರಿ ಇಟ್ಟುಕೊಂಡು ಮರಗಳ ರೆಂಬೆಗಳಿಗೆ ಕಣ್ಣನೆಟ್ಟು ಓಡುತ್ತಿರಬೇಕು. ನೀಲಾಕಾಶದೊಳಗಿನಿಂದ ಹಸಿರ ರೆಂಬೆಗಳು ತೇಲಿಬಂದು ಹತ್ತಿರವಾಗುವ ರೀತಿ ಥೇಟ್ ಲೆನ್ಸ್ ಝೂಮ್ ಮಾಡಿದಂತೆ. ಹೀಗೇ ಓಡುತ್ತಿದ್ದರೆ ನರನಾಡಿಗಳಲ್ಲೆಲ್ಲ ರಕ್ತಸಂಚಾರ ಹೆಚ್ಚಿ ಬೆರಳತುದಿಗಳೆಲ್ಲ ಮರಗಟ್ಟಿ ಮನಸನ್ನೋದು ಹದಗೊಂಡು ನಮ್ಮದೇ ಫ್ರೇಮಿನೊಳಗೆ ಚಕ್ಕಳ ಬಕ್ಕಳ ಹಾಕಿ ಕುಳಿತುಬಿಡುತ್ತದೆ. ಸ್ವಲ್ಪ ಆ ಹಸರ್ಹುಲ್ಲು ಮತ್ತದರ ತಂಪು ಬೇಕೆನ್ನಿಸುತ್ತದೆ. ಹೀಗೆ ಲಹರಿಯೋಟದಲ್ಲಿರುವಾಗಲೇ ಅಜ್ಜ ಎದುರಾದ.

ಇಷ್ಟು ವಯಸ್ಸಾದ್ರೂ ಹೆಂಗ್ ಆಡ್ತಾನಿಂವ? ಇವ್ನಿಗೇನ್ ಕರುಣೆ ಅನ್ನೋದೇ ಇಲ್ವಾ? ಎದುರಿಗಿರೋ ಕಾಲೇಜಿನಲ್ಲಿ ಆಗಾಗ ನಡೆಯೋ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಮಾತ್ರ ಈ ಉದ್ಯಾನದ ಹುಲ್ಲುಹಾಸಿನ ಮೇಲೆ ಕುಳಿತು ಓದೋದಷ್ಟೇ ಅಲ್ಲ, ಪವಡಿಸೋದಷ್ಟೇ ಅಲ್ಲ, ಕಣ್ಮುಚ್ಚಿ ಕನಸೂ ಕಾಣಬಹುದು. ಆದ್ರೆ ನಾವು ಹೋಗ್ಲಿ, ಹದಿನೈದು ಕೇಜೀನೂ ದಾಟದ ಇಷ್ಟೇ ಇಷ್ಟು ಪುಟ್ಟ ಮೆತ್ತ ಪಾದಗಳು ಹುಲ್ಲು ಹಾಸಿನ ಮೇಲೆ ಕಾಲಿಟ್ರೂ ಯಾಕ್ ಸಿಡದೇಳ್ತಾನೆ? ಕೇಳೇ ಬಿಟ್ಟೆ ಅವತ್ತು, ಇದ್ಯಾಕ್ ಅವ್ರಿಗೊಂದ್ ನಮಗೊಂದ್ ನೀತಿ ಅಜ್ಜಾ? ಏನೇನೋ ಗೊಣಗಿ ಮುಖ ತಿರುಗಿಸಿದ.

ಬಟ್ಟೆಚೀಲದಲ್ಲಿ ಬುತ್ತಿಗಂಟಿನೊಂದಿಗೆ 9 ಕ್ಕೆಲ್ಲಾ ಹಾಜರಾಗಿಬಿಡುವ ಈ ಅಜ್ಜ, ಸಂಜೆ ಪೇಪರ್ ಓದಿಕೊಂಡೇ ಮನೆಗೆ ಹೋಗುವುದು. ವಯಸ್ಸು ಎಪ್ಪತ್ತು ದಾಟಿದ್ದರೂ ಉದ್ಯಾನ ಸುತ್ತುವರಿದ ಈ ಮರಗಳೆಂಬ ಮಕ್ಕಳಿಗೆ ಈ ಅಜ್ಜನೊಬ್ಬ ಅಮ್ಮನೇ! ಅತ್ತಿಂದ ಗುಡಿಸುವ ಹೊತ್ತಿಗೆ ಇತ್ತಿಂದ ಎಲೆಹರವು. ಅಲ್ಲೆಲ್ಲೋ ನಲ್ಲಿಪೈಪ್ ಸರಿಮಾಡುವಷ್ಟರಲ್ಲಿ ಇಲ್ಲೆಲ್ಲೋ ಪುಟಿವ ಕಾರಂಜಿ. ಪಾನಾ ಪಕ್ಕಡ್ ತಂತಿ ಮೊಳೆಗಳ ಚೀಲ ಹೊತ್ತು ಓಡುವ ಈ ಅಜ್ಜ ಚಾರ್ಲಿಯೇ.

ಈ ವಯಸ್ಸಿನಲ್ಲಿ ಇಷ್ಟೊಂದು ಶ್ರದ್ಧೆಯಿಂದ ಕೆಲಸ ಮಾಡುವ ಅಜ್ಜನ ಮೇಲೆ ಈ ಏರಿಯಾದ ಕೆಲ ಅಜ್ಜಂದಿರೇ ಆಗಾಗ ದೂರು ನೀಡುತ್ತಾರೆ, ಮೀಟಿಂಗ್ ಮಾಡಿ ಠರಾವು ಹೊರಡಿಸುತ್ತಾರೆ. ಅಂದಹಾಗೆ ಪಗ್ ನಾಯಿಮರಿಯನ್ನೆತ್ತಿಕೊಂಡು ಅದರ ಸುಂಬಳವನ್ನು ಲುಂಗಿಯಿಂದ ವರೆಸುತ್ತ, ತೊಡೆಮೇಲೆಯೇ ಸದಾ ಇಟ್ಟುಕೊಂಡು ಕುಳಿತುಕೊಳ್ಳುವ ಇನ್ನೊಬ್ಬ ಅಜ್ಜನೊಬ್ಬನೇ ಇವನ ಖಾಸಾದೋಸ್ತ್. ಅವತ್ತೊಂದಿನ ಸಂಜೆ, 'ಯಾಕೋ ಇನ್ನೂ ಮನೇಗ್ ಹೋಗಿಲ್ವಾ' ಅಂತ ಪಗ್ಗಜ್ಜ ಕೇಳಿದ್ದಕ್ಕೆ ಈ ಮಾಲಿಯಜ್ಜ ಬೇಸರಿಸಿಕೊಂಡು, 'ಕ್ಲೀನ್ ಮಾಡ್ತಿಲ್ಲ ಅಂತ ಕಂಪ್ಲೆಂಟ್ ಮಾಡವ್ರಣ್ಣಾ' ಅಂತ ಸಣ್ಣಗಿರೋ ಮುಖವನ್ನ ಮತ್ತಷ್ಟು ಸಣ್ಣ ಮಾಡಿಕೊಂಡ.

ಆಡುತಾಡುತ ಬಂದು ಸಿಂಗಾರ ಸೊಳ್ಳಿ ಹಾಂಗ... ಗುಂಗಿನಲ್ಲಿ ನಾ ಮೊನ್ನೆದಿನ ಈ ಉದ್ಯಾನದಲ್ಲಿ ಓಡುತ್ತೋಡುತ್ತಿರುವಾಗ, ಮೂಲೆಯ ಬೆಂಚಿನಲ್ಲಿ ಕುಳಿತ ಇಬ್ಬರು ಅಜ್ಜಂದಿರು, ಎದುರಿನ ಬೆಂಚಿನಲ್ಲಿ ಕುಳಿತು ಫೋನಿನಲ್ಲಿ ಮಾತನಾಡುತ್ತಿದ್ದ ಚೂಡಿಧಾರಿಣಿ ಅಜ್ಜಿಯನ್ನು ನೋಡುತ್ತ, 'ಈ ಯಮ್ಮಂಗೆ ಕೆಲ್ಸಾ ಇಲ್ಲಾ, ಮನೇಲ್ ಕೆಲಸದವರಿಗೆ ಅಡುಗೆ ಮಾಡಕ್ ಹೇಳಿ ಇಲ್ಬಂದು ಮಾತಾಡ್ತಾ ಕೂತ್ಕತದೆ' ಎಂದು ಗುಣಗುಣಗುಟ್ಟಿದ್ದು ಕೇಳಿತು.

ನಿನ್ನೆದಿನ ಎಂದಿನಂತೆ ಉದ್ಯಾನಕ್ಕೆ ಹೋದರೆ, ಮಾಲಿಯಜ್ಜ ಅಡ್ಡಗಟ್ಟಿ ಅಲ್ಲಿ ಬೋರ್ಡ್ ನೋಡಿ, ಈಗ ಟೈಮೆಷ್ಟು ಅಂದ. ಓಹ್ ಈಗ ಹತ್ತೂವರೆಯಲ್ವಾ... ಹತ್ತರಿಂದ ನಾಲ್ಕರ ತನಕ ಪ್ರವೇಶ ನಿಷಿದ್ಧ! ಓದಿಕೊಂಡು ಸರಿಬಿಡಿ ಎಂದು ಹೊರಡುತ್ತಿದ್ದವಳಿಗೆ, ಪರ್ವಾಗಿಲ್ಲ ಬನ್ನಿ ಎಂದ.  ನೋಡುತೋಡುತ ನಾ ಹಸರ್ಹುಲ್ಲ ಆಶೇಲೆ... ಬೇಂದ್ರೆಯಜ್ಜನ ನೆನೆದೇನ.

ಎಂದಿನಂತೆ ಇಂದು ಲೇಸ್ ಬಿಗಿಗೊಳಿಸಿಕೊಂಡು ಒಮ್ಮೆ ಮುಖವೆತ್ತಿದೆ, ಬೆಳ್ಳಿ ಮೂಗುತಿ ಚುಚ್ಚಿಕೊಂಡಂತೆ ಉದ್ಯಾನದ ಗೇಟ್ಸುಂದರಿ. ಸಮಯ ಹತ್ತೂವರೆ, ಮಾಲಿಯಜ್ಜ ಮೂಲೆಯಲ್ಲೆಲ್ಲೋ ಕಸ ಗುಡಿಸುತ್ತಿದ್ದ. ಪಗ್ಗಜ್ಜ ಎಂದಿನಂತೆ ಮರಿಯ ಕಣ್ಣಗೀಜನ್ನು ಲುಂಗಿಯಿಂದ ಒರೆಸುತ್ತ ಕಾಂಪೌಂಡಿಗಂಟಿ ಕುಳಿತಿದ್ದ. ನಿಟ್ಟುಸಿರು ಬಿಟ್ಟೆ; 'ಚೂಡಿಯಜ್ಜಿಯ ವಾಕ್ ಸ್ವಾತಂತ್ರ್ಯ ಮತ್ತು ರಕ್ಷಕಜ್ಜಂದಿರ ಠರಾವು' ಮನಸ್ಸಿನಲ್ಲೇ ಈ ಸನ್ನಿವೇಶಕ್ಕೊಂದು ತಲೆಬರಹ ಕೊಟ್ಟುಕೊಂಡು ಗೇಟ್ಸುಂದರಿಗೆ ಬೆನ್ನು ಕೊಟ್ಟೆ.

ಬಿಗಿಯಾದ ಲೇಸನ್ನು ಸಡಿಲಗೊಳಿಸದೆ, ಓಣಿಓಣಿ ತಿರುಗಿದೆ. ಏರಿಗೆ ಏದುಸಿರಾದಾಗ ಮನೆಮನೆಗಳ ಗೋಡೆ ಮೀರಿ ಅರಳಿದ್ದ ಹೂಗಳ ತೋರಿಸಿ ಮೈಮನಸನ್ನು ಹುರಿದುಂಬಿಸಿದೆ. ಮನೆಗೆ ಬಂದಾಗ
'ಜೀವದ ರಸ ತುಂಬಿ ತುಂತುರು ಹನಿಯಾಗಿ ತಂತಿಯ ತುಂಬೆಲ್ಲ ಸಿಡಿದ್ಹಾಂಗ...'

ಈಗ ರಾತ್ರಿಯನ್ನೋದು ಮಧ್ಯಕ್ಕೆ ಸರಿದ ಕಂಬಳಿ.
'ಮುಂಜಾವದಲಿ ಹಸಿರ ಹುಲ್ಲ ಮಕಮಲ್ಲಿನಲಿ'  ಬೆಳಗಿನ ಆಸೆ ಹಚ್ಚುವ ಕಣವಿಯಜ್ಜ; ಮಾಲಿಯಜ್ಜನೋ ಬಿಡ!
ಈಗಿಲ್ಲಿ ಮುನಿಸಿಕೊಂಡ ನನ್ನಂವ. 'ನಾವಾಡುವ ಮಾತು ಹೀಗಿರಲಿ ಗೆಳೆಯ, ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ' ಕಾಲನೊಂದಿಗೆ ಓಡಿಓಡಿ ಸುಸ್ತಾಗುವ ಇವನಿಗೂ ಮುಖವೆತ್ತಿ ರಮಿಸಬೇಕು.