Tuesday, March 1, 2016

ಮರುಳ ಸಿದ್ಧನ ಮಾಯೆದಾರಿ ನೋಡಿದಷ್ಟೂ ಸುಸ್ತು ಮಾಡುವ ಈ ಓಟಕ್ಕೆ ಆಗಾಗ ಮುಖವೆತ್ತಿ ರಮಿಸುತ್ತಿರಬೇಕು, ಮೀನಖಂಡ ಎಳೆಯುತ್ತಿದ್ದರೂ, ಮಾರುಮಾರಷ್ಟೇ ಗುರಿ ಇಟ್ಟುಕೊಂಡು ಮರಗಳ ರೆಂಬೆಗಳಿಗೆ ಕಣ್ಣನೆಟ್ಟು ಓಡುತ್ತಿರಬೇಕು. ನೀಲಾಕಾಶದೊಳಗಿನಿಂದ ಹಸಿರ ರೆಂಬೆಗಳು ತೇಲಿಬಂದು ಹತ್ತಿರವಾಗುವ ರೀತಿ ಥೇಟ್ ಲೆನ್ಸ್ ಝೂಮ್ ಮಾಡಿದಂತೆ. ಹೀಗೇ ಓಡುತ್ತಿದ್ದರೆ ನರನಾಡಿಗಳಲ್ಲೆಲ್ಲ ರಕ್ತಸಂಚಾರ ಹೆಚ್ಚಿ ಬೆರಳತುದಿಗಳೆಲ್ಲ ಮರಗಟ್ಟಿ ಮನಸನ್ನೋದು ಹದಗೊಂಡು ನಮ್ಮದೇ ಫ್ರೇಮಿನೊಳಗೆ ಚಕ್ಕಳ ಬಕ್ಕಳ ಹಾಕಿ ಕುಳಿತುಬಿಡುತ್ತದೆ. ಸ್ವಲ್ಪ ಆ ಹಸರ್ಹುಲ್ಲು ಮತ್ತದರ ತಂಪು ಬೇಕೆನ್ನಿಸುತ್ತದೆ. ಹೀಗೆ ಲಹರಿಯೋಟದಲ್ಲಿರುವಾಗಲೇ ಅಜ್ಜ ಎದುರಾದ.

ಇಷ್ಟು ವಯಸ್ಸಾದ್ರೂ ಹೆಂಗ್ ಆಡ್ತಾನಿಂವ? ಇವ್ನಿಗೇನ್ ಕರುಣೆ ಅನ್ನೋದೇ ಇಲ್ವಾ? ಎದುರಿಗಿರೋ ಕಾಲೇಜಿನಲ್ಲಿ ಆಗಾಗ ನಡೆಯೋ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಮಾತ್ರ ಈ ಉದ್ಯಾನದ ಹುಲ್ಲುಹಾಸಿನ ಮೇಲೆ ಕುಳಿತು ಓದೋದಷ್ಟೇ ಅಲ್ಲ, ಪವಡಿಸೋದಷ್ಟೇ ಅಲ್ಲ, ಕಣ್ಮುಚ್ಚಿ ಕನಸೂ ಕಾಣಬಹುದು. ಆದ್ರೆ ನಾವು ಹೋಗ್ಲಿ, ಹದಿನೈದು ಕೇಜೀನೂ ದಾಟದ ಇಷ್ಟೇ ಇಷ್ಟು ಪುಟ್ಟ ಮೆತ್ತ ಪಾದಗಳು ಹುಲ್ಲು ಹಾಸಿನ ಮೇಲೆ ಕಾಲಿಟ್ರೂ ಯಾಕ್ ಸಿಡದೇಳ್ತಾನೆ? ಕೇಳೇ ಬಿಟ್ಟೆ ಅವತ್ತು, ಇದ್ಯಾಕ್ ಅವ್ರಿಗೊಂದ್ ನಮಗೊಂದ್ ನೀತಿ ಅಜ್ಜಾ? ಏನೇನೋ ಗೊಣಗಿ ಮುಖ ತಿರುಗಿಸಿದ.

ಬಟ್ಟೆಚೀಲದಲ್ಲಿ ಬುತ್ತಿಗಂಟಿನೊಂದಿಗೆ 9 ಕ್ಕೆಲ್ಲಾ ಹಾಜರಾಗಿಬಿಡುವ ಈ ಅಜ್ಜ, ಸಂಜೆ ಪೇಪರ್ ಓದಿಕೊಂಡೇ ಮನೆಗೆ ಹೋಗುವುದು. ವಯಸ್ಸು ಎಪ್ಪತ್ತು ದಾಟಿದ್ದರೂ ಉದ್ಯಾನ ಸುತ್ತುವರಿದ ಈ ಮರಗಳೆಂಬ ಮಕ್ಕಳಿಗೆ ಈ ಅಜ್ಜನೊಬ್ಬ ಅಮ್ಮನೇ! ಅತ್ತಿಂದ ಗುಡಿಸುವ ಹೊತ್ತಿಗೆ ಇತ್ತಿಂದ ಎಲೆಹರವು. ಅಲ್ಲೆಲ್ಲೋ ನಲ್ಲಿಪೈಪ್ ಸರಿಮಾಡುವಷ್ಟರಲ್ಲಿ ಇಲ್ಲೆಲ್ಲೋ ಪುಟಿವ ಕಾರಂಜಿ. ಪಾನಾ ಪಕ್ಕಡ್ ತಂತಿ ಮೊಳೆಗಳ ಚೀಲ ಹೊತ್ತು ಓಡುವ ಈ ಅಜ್ಜ ಚಾರ್ಲಿಯೇ.

ಈ ವಯಸ್ಸಿನಲ್ಲಿ ಇಷ್ಟೊಂದು ಶ್ರದ್ಧೆಯಿಂದ ಕೆಲಸ ಮಾಡುವ ಅಜ್ಜನ ಮೇಲೆ ಈ ಏರಿಯಾದ ಕೆಲ ಅಜ್ಜಂದಿರೇ ಆಗಾಗ ದೂರು ನೀಡುತ್ತಾರೆ, ಮೀಟಿಂಗ್ ಮಾಡಿ ಠರಾವು ಹೊರಡಿಸುತ್ತಾರೆ. ಅಂದಹಾಗೆ ಪಗ್ ನಾಯಿಮರಿಯನ್ನೆತ್ತಿಕೊಂಡು ಅದರ ಸುಂಬಳವನ್ನು ಲುಂಗಿಯಿಂದ ವರೆಸುತ್ತ, ತೊಡೆಮೇಲೆಯೇ ಸದಾ ಇಟ್ಟುಕೊಂಡು ಕುಳಿತುಕೊಳ್ಳುವ ಇನ್ನೊಬ್ಬ ಅಜ್ಜನೊಬ್ಬನೇ ಇವನ ಖಾಸಾದೋಸ್ತ್. ಅವತ್ತೊಂದಿನ ಸಂಜೆ, 'ಯಾಕೋ ಇನ್ನೂ ಮನೇಗ್ ಹೋಗಿಲ್ವಾ' ಅಂತ ಪಗ್ಗಜ್ಜ ಕೇಳಿದ್ದಕ್ಕೆ ಈ ಮಾಲಿಯಜ್ಜ ಬೇಸರಿಸಿಕೊಂಡು, 'ಕ್ಲೀನ್ ಮಾಡ್ತಿಲ್ಲ ಅಂತ ಕಂಪ್ಲೆಂಟ್ ಮಾಡವ್ರಣ್ಣಾ' ಅಂತ ಸಣ್ಣಗಿರೋ ಮುಖವನ್ನ ಮತ್ತಷ್ಟು ಸಣ್ಣ ಮಾಡಿಕೊಂಡ.

ಆಡುತಾಡುತ ಬಂದು ಸಿಂಗಾರ ಸೊಳ್ಳಿ ಹಾಂಗ... ಗುಂಗಿನಲ್ಲಿ ನಾ ಮೊನ್ನೆದಿನ ಈ ಉದ್ಯಾನದಲ್ಲಿ ಓಡುತ್ತೋಡುತ್ತಿರುವಾಗ, ಮೂಲೆಯ ಬೆಂಚಿನಲ್ಲಿ ಕುಳಿತ ಇಬ್ಬರು ಅಜ್ಜಂದಿರು, ಎದುರಿನ ಬೆಂಚಿನಲ್ಲಿ ಕುಳಿತು ಫೋನಿನಲ್ಲಿ ಮಾತನಾಡುತ್ತಿದ್ದ ಚೂಡಿಧಾರಿಣಿ ಅಜ್ಜಿಯನ್ನು ನೋಡುತ್ತ, 'ಈ ಯಮ್ಮಂಗೆ ಕೆಲ್ಸಾ ಇಲ್ಲಾ, ಮನೇಲ್ ಕೆಲಸದವರಿಗೆ ಅಡುಗೆ ಮಾಡಕ್ ಹೇಳಿ ಇಲ್ಬಂದು ಮಾತಾಡ್ತಾ ಕೂತ್ಕತದೆ' ಎಂದು ಗುಣಗುಣಗುಟ್ಟಿದ್ದು ಕೇಳಿತು.

ನಿನ್ನೆದಿನ ಎಂದಿನಂತೆ ಉದ್ಯಾನಕ್ಕೆ ಹೋದರೆ, ಮಾಲಿಯಜ್ಜ ಅಡ್ಡಗಟ್ಟಿ ಅಲ್ಲಿ ಬೋರ್ಡ್ ನೋಡಿ, ಈಗ ಟೈಮೆಷ್ಟು ಅಂದ. ಓಹ್ ಈಗ ಹತ್ತೂವರೆಯಲ್ವಾ... ಹತ್ತರಿಂದ ನಾಲ್ಕರ ತನಕ ಪ್ರವೇಶ ನಿಷಿದ್ಧ! ಓದಿಕೊಂಡು ಸರಿಬಿಡಿ ಎಂದು ಹೊರಡುತ್ತಿದ್ದವಳಿಗೆ, ಪರ್ವಾಗಿಲ್ಲ ಬನ್ನಿ ಎಂದ.  ನೋಡುತೋಡುತ ನಾ ಹಸರ್ಹುಲ್ಲ ಆಶೇಲೆ... ಬೇಂದ್ರೆಯಜ್ಜನ ನೆನೆದೇನ.

ಎಂದಿನಂತೆ ಇಂದು ಲೇಸ್ ಬಿಗಿಗೊಳಿಸಿಕೊಂಡು ಒಮ್ಮೆ ಮುಖವೆತ್ತಿದೆ, ಬೆಳ್ಳಿ ಮೂಗುತಿ ಚುಚ್ಚಿಕೊಂಡಂತೆ ಉದ್ಯಾನದ ಗೇಟ್ಸುಂದರಿ. ಸಮಯ ಹತ್ತೂವರೆ, ಮಾಲಿಯಜ್ಜ ಮೂಲೆಯಲ್ಲೆಲ್ಲೋ ಕಸ ಗುಡಿಸುತ್ತಿದ್ದ. ಪಗ್ಗಜ್ಜ ಎಂದಿನಂತೆ ಮರಿಯ ಕಣ್ಣಗೀಜನ್ನು ಲುಂಗಿಯಿಂದ ಒರೆಸುತ್ತ ಕಾಂಪೌಂಡಿಗಂಟಿ ಕುಳಿತಿದ್ದ. ನಿಟ್ಟುಸಿರು ಬಿಟ್ಟೆ; 'ಚೂಡಿಯಜ್ಜಿಯ ವಾಕ್ ಸ್ವಾತಂತ್ರ್ಯ ಮತ್ತು ರಕ್ಷಕಜ್ಜಂದಿರ ಠರಾವು' ಮನಸ್ಸಿನಲ್ಲೇ ಈ ಸನ್ನಿವೇಶಕ್ಕೊಂದು ತಲೆಬರಹ ಕೊಟ್ಟುಕೊಂಡು ಗೇಟ್ಸುಂದರಿಗೆ ಬೆನ್ನು ಕೊಟ್ಟೆ.

ಬಿಗಿಯಾದ ಲೇಸನ್ನು ಸಡಿಲಗೊಳಿಸದೆ, ಓಣಿಓಣಿ ತಿರುಗಿದೆ. ಏರಿಗೆ ಏದುಸಿರಾದಾಗ ಮನೆಮನೆಗಳ ಗೋಡೆ ಮೀರಿ ಅರಳಿದ್ದ ಹೂಗಳ ತೋರಿಸಿ ಮೈಮನಸನ್ನು ಹುರಿದುಂಬಿಸಿದೆ. ಮನೆಗೆ ಬಂದಾಗ
'ಜೀವದ ರಸ ತುಂಬಿ ತುಂತುರು ಹನಿಯಾಗಿ ತಂತಿಯ ತುಂಬೆಲ್ಲ ಸಿಡಿದ್ಹಾಂಗ...'

ಈಗ ರಾತ್ರಿಯನ್ನೋದು ಮಧ್ಯಕ್ಕೆ ಸರಿದ ಕಂಬಳಿ.
'ಮುಂಜಾವದಲಿ ಹಸಿರ ಹುಲ್ಲ ಮಕಮಲ್ಲಿನಲಿ'  ಬೆಳಗಿನ ಆಸೆ ಹಚ್ಚುವ ಕಣವಿಯಜ್ಜ; ಮಾಲಿಯಜ್ಜನೋ ಬಿಡ!
ಈಗಿಲ್ಲಿ ಮುನಿಸಿಕೊಂಡ ನನ್ನಂವ. 'ನಾವಾಡುವ ಮಾತು ಹೀಗಿರಲಿ ಗೆಳೆಯ, ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ' ಕಾಲನೊಂದಿಗೆ ಓಡಿಓಡಿ ಸುಸ್ತಾಗುವ ಇವನಿಗೂ ಮುಖವೆತ್ತಿ ರಮಿಸಬೇಕು.

4 comments:

sunaath said...

ಮಾಯಾಕಿನ್ನರಿಯ ಆಲಾಪದಷ್ಟೇ ಸೊಗಸಾಗಿದೆ ನಿಮ್ಮ ಭಾವಲಹರಿ!

ಆಲಾಪಿನಿ said...

Thank u uncle

ನರೇಂದ್ರ ಪೈ said...

ವಯಸ್ಸಾದ ಈ ಅಜ್ಜ ಅರ್ಥವಾಗುತ್ತಿಲ್ಲ ಅನಿಸುವಾಗಲೇ ಅರ್ಥವಾಗುತ್ತಾನೆ. ನಿಮ್ಮ ನಿರೂಪಣೆ ಮತ್ತು ಇಲ್ಲಿನ ನಿರೂಪಕಿ ಇಬ್ಬರೂ ಬೇರೆ ಬೇರೆ ಆಗಿರುವುದು ಗಮನ ಸೆಳೆಯಿತು. ಆಕೆಗೆ ಅವಳ absence ನಲ್ಲಿ ನಡೆದಿದ್ದು ಗೊತ್ತಿರಲು ಸಾಧ್ಯವಿಲ್ಲ. ಬಟ್ ನಿಮಗೆ ಅದೂ ಗೊತ್ತಿದೆ. ಈ ಗೊತ್ತಿರುವುದು ಮತ್ತು ಗೊತ್ತಿಲ್ಲದ್ದು ಸೇರಿ ಈ ಅಜ್ಜ ನಮಗೆ ಗೊತ್ತಾಗುತ್ತಿದ್ದಾನೆ. ನನಗೆ ಇಷ್ಟವಾದ ಒಂದು ಹೊಸ ಕಲಿಕೆ ಇದು.

ಆಲಾಪಿನಿ said...

ಒಹ್! ಹೂಂ..