Thursday, March 31, 2016

ಹಣೇಬಾರ ಗಣೇಚೌತಿ ಮತ್ತು ದುಂಡನೆಯ ಮಿಸ್ಕಂದುಬಣ್ಣದ ಮೈಗೆ ಕಂದು ಮತ್ತು ಬಿಳೀಬಣ್ಣದ ಗೀರುಗೀರಿನ ಜೇಬು, ಅದರ ಬಾಯಿಗೊಂದು ಕರೀಬಣ್ಣದ ಗುಂಡಿ. ಆ ಬಟ್ಟೆಯ ಚೀಲ ದೊಗಳೆ ಬೀಳದಂತೆ, ಯಾವುದೋ ಒಂದು ಸಂಬಂಧಿಲ್ಲದ ಪುಸ್ತಕ ಇಟ್ಟುಕೊಂಡು, ಆ ಗೀರುಗೀರಿನ ಜೇಬಿನಲ್ಲಿ ಒಂದಿಷ್ಟು ತಿಂಡಿ ಹಾಕಿಕೊಂಡು ಹೆಗಲಿಗೆ ಅಡ್ಡಡ್ಡ ಇಳಿಬಿಟ್ಟು ಹೊರಟರೆ ಅದೇ ಹಿರೇಬಾಗೇವಾಡಿಯ ಬಾಲವಾಡಿ ಹಾದಿ. ನನ್ನ ಕೈಹಿಡಿದುಕೊಂಡಿರುತ್ತಿದ್ದವಳೇ ಶಾರೂ. ಒಂದು ವಾರ ಅಪ್ಪ ಅಮ್ಮನೊಂದಿಗೆ ದೊಡ್ಡವಾಡದಲ್ಲಿರುತ್ತಿದ್ದರೆ, ಇನ್ನೊಂದು ವಾರ ದೊಡ್ಡಪ್ಪನಿರುತ್ತಿದ್ದ ಊರಿನಲ್ಲಿರುತ್ತಿದ್ದೆ. ದೊಡ್ಡಪ್ಪ ಹೊಲಿದುಕೊಟ್ಟ ಮೊದಲ ಪಾಟೀಚೀಲ ಅದಾಗಿತ್ತು.

ಹೀಗೇ ಒಂದು ಬೆಳ್ಳಂಬೆಳಗ್ಗೆದ್ದು, ಹಲ್ಲುಜ್ಜುವ ಮೊದಲೇ ಆ ಪಾಟೀಚೀಲದ ಜೇಬಿಗೆ ಚುರುಮುರಿ ತುಂಬಿಸಿಕೊಳ್ಳುತ್ತಿದ್ದೆ. ಬಚ್ಚಲುಮನೆಯಲ್ಲಿ ನೀರು ಕೊತಕೊತ ಕುದ್ದು, ದೊಡ್ಡವ್ವ ಒಲೆಯ ಬಾಯನ್ನು ತಣ್ಣಗೆ ಮಾಡಿ ಒಂದೇ ಸಮ ಸ್ನಾನಕ್ಕೆ ಕರೆಯುತ್ತಿದ್ದರೂ ನಾ ಮಾತ್ರ ಬುಟ್ಟಿಯಿಂದ ಒಂದೊಂದೇ ಮುಟ್ಟಿಗೆ ಚುರುಮುರಿಯನ್ನು ಜೇಬಿಗೆ ತುಂಬುವ ಕಾಯಕದಲ್ಲಿ ಮುಳುಗಿದ್ದೆ. ಆ ಜೇಬು ತುಂಬುವವರೆಗೂ ದೊಡ್ಡಮ್ಮ ಅಡುಗೆ ಮನೆ ಸ್ವಚ್ಛಗೊಳಿಸಿ, ಗ್ಯಾಸೊಲೆ ಒರೆಸಿ, ದೊಡ್ಡಪ್ಪನಿಗೆ ಚಹಾ ಕೂಡ ಮಾಡಿಕೊಟ್ಟಿದ್ದಳು. 'ಶ್ರೀದೀ ಏಳ್ತಿ ಇಲ್ಲಿನ್, ಬಾಲವಾಡಿಗೆ ಹೋಗ್ತಿಯಿಲ್ಲೋ ಇನ್ನ, ಜಳಕಾ ಮಾಡ್ನಡಿ ಲಗೂ' ಜೋರು ಮಾಡಲು ಬಾರದ ದೊಡ್ಡವ್ವ ಧ್ವನಿ ಏರಿಸಲು ಪ್ರಯತ್ನಿಸುತ್ತ ಮರೆಯಲ್ಲಿ ನಗುತ್ತಿದ್ದಳು, ಕೈ ಎತ್ತುವುದಂತೂ ದೂರವೇ.

ಚುರುಮುರಿ ನಗುತ್ತ ಜೇಬಿನ ಬಾಯಿತನಕ ಬಂದು ಕುಳಿತಾಗಲೇ ನಾ ಬುಟ್ಟಿಯೊಳಗಿನ ಕೈ ತೆಗೆದಿದ್ದು. ಪಾಟಿಚೀಲದ ಎದೆಮೇಲಿದ್ದ ಅ ಜೇಬಿನ ಗುಂಡಿ ಹಾಕಿ ಸ್ನಾನಕ್ಕೆಂದು ಬಚ್ಚಲಿಗೆ ಓಡಿದ್ದು. ಪಕ್ಕದ ಮನೆಯ ಶಾರೂ ಬಾಗಿಲಲ್ಲಿ ನಿಂತು ಕೂಗಿದಾಗ, ' ಹೇ ಪ್ರಭೋ ಪ್ರಸೀದ ಓಂ' ಐದನೇ ಸಲ ಹೇಳುತ್ತಿದ್ದೆ. ದೇವರಿಗೆ ಕಣ್ಹೊಡೆದು, ಇವತ್ತಿಷ್ಟೇ ಸಾಕು ಓಕೆ? ಎನ್ನುತ್ತ ಪಾಟಿಚೀಲ ಹೆಗಲಿಗೆ ಹಾಕಿಕೊಂಡು ಅವಳೊಡನೆ ದುಡುದುಡು ಹೆಜ್ಜೆ ಹಾಕಿದ್ದೆ. ನಾಗಪ್ಪನಂಗಡಿ, ನಾವಲಗಿಯವರ ಮನಿ, ಪಂಚಾಯ್ತಿ ಕಚೇರಿ, ಪಾಟೀಲರ ಓಣಿ, ದ್ಯಾಮವ್ವನ ಗುಡಿ ದಾಟಿ ಸಂತಿಯೋಣಿಗೆ ಬಂದು ಶಾಲೆಯ ಗೇಟ್ ಹೊಕ್ಕು, ಆರೇಳು ಮೆಟ್ಟಿಲು ಏರಿ, ಅಕ್ಕೋರು ಎಂಬ ದೇವರಿಗೆ ನಮಿಸಿ ಕರೀಕಲ್ಲಿನ ಮೇಲೆ ಚಕ್ಕಳಬಕ್ಕಳ ಹಾಕಿ ಕುಳಿತುಬಿಟ್ಟಿದ್ದೆ.

ಎಲ್ಲರೂ ಪಾಟಿಯ ಮೇಲೆ ಬಳಪದಿಂದ ದುಂಡದುಂಡಗೆ, ಗೀರುಗೀರಿನಂತೆ ಏನೋ ತೀಡುತ್ತಿದ್ದರೆ, ನನ್ನ ಬಾಯಿ ಒಂದೊಂದೇ ಚುರುಮುರಿ ಮೇಯುತ್ತಿತ್ತು.
ನೋಡೇನೋಡಿದ ಟೀಚರ್ ಕೈಯಲ್ಲಿ ಬೆತ್ತಹಿಡಿದು;

'ಏನದು?'
ಚುರುಮುರಿ
'ಎಷ್ಟೊತ್ತಾತು?'
ಗೊತ್ತಿಲ್ಲ
'ನೋಡೂನ್ ತುಗೊಂಬಾ ಇಲ್ಲೆ?'
ಇಲ್ಲ ನಂದಿದು ನಾ ಕೊಡಂಗಿಲ್ಲ
'ಏಯ್ ಶಾರೀ ಇಸ್ಕೊಂಬಾ ಅಕಿ ಪಾಟಿಚೀಲ'

ಕೊಸರಾಡಿ ಕೊನೆಗೆ ಗೆದ್ದ ಹುಮ್ಮಸ್ಸಿನಲ್ಲಿ ಶಾರೀ, ಟೀಚರಿಗೆ ನನ್ನ ಪಾಟಿಚೀಲವನ್ನೊಪ್ಪಿಸಿದ್ದಳು. ದುರುಗುಟ್ಟಿನೋಡಿ ಕೆಳಗೆ ಮುಖಹಾಕಿ ಕುಳಿತೆ. ಟೀಚರ್ ಚೀಲ ಹಿಡಿದು;

'ಬಾ ಇಲ್ಲೆ'
ಇಲ್ಲ ಬರೂದಿಲ್ಲ
'ಬರ್ತೀಯೋ ಇಲ್ಲೋ?'
ಏಯ್ ನನ್ ಪಾಟಿಚೀಲಾ, ಕೊಡ್ರಿ ನಂದದು
'ಕೊಡ್ತೀನ್ ಬಾರಾ ಇಲ್ಲೇ...'

ಕೈ ಎಳೆದುಕೊಂಡು ಹೋದರು. ಪಾಟಿಚೀಲದ ಮುಖ್ಯಬಾಯಿಗಿದ್ದ ಝಿಪ್ ತೆಗೆದು ಜೋರಾಗಿ ನಗತೊಡಗಿದರು. ಹೊಡೆದಾರೋ ಎಂಬ ಭಯದಲ್ಲೇ ನಾ ಮುದ್ದೆಯಾಗಿ ನಿಂತಿದ್ದೆ. ಒಂದು ನಿಮಿಷದ ನಂತರ ನಗು ನಿಲ್ಲಿಸಿ, ತಂಗಿ ಯಾರ ಕೊಟ್ರು ಚುರುಮುರಿ ಎಂದರು. ಯಾರೂ ಕೊಟ್ಟಿಲ್ಲ, ನಮ್ ದೊಡ್ಡಪ್ಪ ಸಂತ್ಯಾಗ ತಂದಿದ್ದು ಅಂದೆ. ಈ ಚೀಲದಾಗ ಯಾರ ಹಾಕಿಕೊಟ್ರು ಅಂದೆ ಅಂದ್ರು. ನಗುತ್ತ ಆ ಚೀಲವನ್ನು ಎಲ್ಲಾ ಮಕ್ಕಳಿಗೂ ತೋರಿಸಿದರು. ನನಗಿಂತ ಎರಡುಮೂರು ವರ್ಷ ದೊಡ್ಡವರಿದ್ದ ಅವರೆಲ್ಲರೂ ನಗುತ್ತಿದ್ದರು. (ಮನಸಿಗೆ ಬಂದಾಗ ಬಾಗೇವಾಡಿಯ ಬಾಲವಾಡಿಗೆ ಹೋಗುತ್ತಿದ್ದ ನಾ ಉಳಿದ ಸಮಯ ದೊಡ್ಡವಾಡದ ಅಮ್ಮನ ಏಳನೇ ತರಗತಿಯಲ್ಲಿರುತ್ತಿದ್ದೆ) ಎಲ್ಲರೂ ನಗುವುದ ನೋಡಿ ನಾನೂ ಚೀಲದ ಕಡೆಗೊಮ್ಮೆ ನೋಡಿದೆ, ಸೇರಿನಷ್ಟು ಚುರುಮುರಿ! 'ಅವ್ವೀ ಬಾ ಇಲ್ಲೆ, ತುಗೋ ಈ ಚೀಲಾ ಹಿಡ್ಕೊ, ಎಲ್ಲಾರಿಗೂ ಒಂದೊಂದ್ ಮುಟಗೀ ಕೊಡು ಎಂದರು' ಟೀಚರು. ಏನೊಂದೂ ಪ್ರಶ್ನಿಸದೇ, ಸಾಲಾಗಿ ಅವರವರ ಉಡಿಯಲ್ಲಿ ಸುರುವುತ್ತ ಹೋದೆ. ಮುಸಿಮುಸಿ ನಗುತ್ತ ಎಲ್ಲರೂ ತಿಂದರು. ಶಾರೀ, ತುಟಿಗಳಂಚಿಗೆ ಚುರುಮುರಿ ಹಿಡಿದು ರಾಕ್ಷಸಿಯಂತೆ ಗೋಣು ಅಲ್ಲಾಡಿಸಿದಳು.

ಗಲ್ಲ ಉಬ್ಬಿಸಿ ಮನೆಗೇ ಬಂದವಳೇ ಹಿಂಗಿಂಗಾಯ್ತು ಎಂದೆ ದೊಡ್ಡವ್ವನಿಗೆ. ಪಾಟಿಚೀಲ ತೆಗೆದುಕೊಂಡು ಬಾ ಎಂದಿದ್ದಕ್ಕೆ ಕೊಟ್ಟೆ. ದೊಡ್ಡವ್ವನೂ ಜೋರಾಗಿ ನಗುತ್ತ, 'ಶ್ರೀದೀ ಹಣೇಬಾರ್ ಗಣೇಚೌತಿಲೇ' ಎಂದಳು. ಪಾಟಿಚೀಲದ 8×4 ಇಂಚಿನ ಅಳತೆಯ ಜೇಬಿಗಿದ್ದ ಒಂದುರೂಪಾಯಿ ಅಗಲದ ತೂತು ತೋರಿಸಿ ನೋಡಿಲ್ಲೇ ಎಂದು ಬಾಯಿಮೇಲೆ ಕೈಇಟ್ಟು ನಗತೊಡಗಿದಳು. ಬೆಳಗ್ಗೆಯಿಂದ ಎಲ್ಲರೂ ನಕ್ಕಿದ್ದು ನೋಡಿ, ದೊಡ್ಡವ್ವನ ಸೊಂಟ ಹಿಡಿದು ಗಟ್ಟಿ ಅತ್ತುಬಿಟ್ಟೆ. ಹುಚ್ಚೀ ಅಳತಾರೇನ್? ನಾ ಹೊಲ್ದ್ ಕೊಡ್ತೇನ್ ಬಾ ಇಲ್ಲೆ ಎಂದು ಸೂಜಿ ದಾರ ತೆಗೆದುಕೊಂಡಳು. ಮರುದಿನ ಆ ಹೊಲಿದ ಜೇಬಿನತುಂಬಷ್ಟೇ ಪುಟಾಣಿ ತುಂಬಿಸಿಕೊಂಡು ಬಾಲವಾಡಿಗೆ ಹೋದೆ. ಟೀಚರ್ ಹೇಳದಿದ್ದರೂ ಎಲ್ಲರಿಗೂ ಎಣೆಸಿ ಎರಡೆರಡೇ ಪುಟಾಣಿ ಕಾಳು ಹಂಚಿದೆ. ಶುಕ್ರವಾರವಾದ್ದರಿಂದ ಪ್ರಸಾದವೇನೋ ಎಂಬಂತೆ ಕೈಮೇಲೆ ಕೈ ಇಟ್ಟು ಪುಟಾಣಿ ಸ್ವೀಕರಿಸಿದರು. ಟೀಚರಿಗೆ ನಾಲ್ಕು ಕೊಟ್ಟೆ, ಅವರೆಲ್ಲ ಭಕ್ತಿಯಿಂದ ತಿನ್ನುತ್ತಿದ್ದರೆ ನಾ ನಗುತ್ತಿದ್ದೆ.

ಈವತ್ತು ಇದೆಲ್ಲ ನೆನಪಿಸಿದ್ದು ನಮ್ಮ ವಚು ಮಿಶ್; ವಸು, ವಸುಂಧರಾ ಮಿಸ್. ನಮ್ಮ ಮಗಳ ಮೊದಲ, ಪ್ರೀತಿಯ ಮತ್ತು ಹೆಮ್ಮೆಯ ಟೀಚರ್. ಇಂದು ಮಗಳನ್ನು ಶಾಲೆಯಿಂದ ಕರೆತರಲು ಹೋದಾಗ, ಕುಲುಕುಲು ನಗುತ್ತಲೇ ಇದ್ದವರು ಇದ್ದಕ್ಕಿದ್ದ ಹಾಗೆ, such a wonderful baby! Thank u' ಭಾವೋದ್ವೇಗಕ್ಕೆ ಒಳಗಾಗಿ ಅಳತೊಡಗಿದರು. ಮಗಳೊಂದಿಗೆ ಅವರನ್ನು ಅಪ್ಪಿಕೊಂಡಾಗ ಅರಿವಿಲ್ಲದೇ ಕಣ್ಣೀರಿಳಿಯತೊಡಗಿತು. ಶಾಲಾವಾರ್ಷಿಕದ ಕೊನೆಯ ದಿನವೊಂದು ಹೀಗೆ ನನ್ನನ್ನು ಮೆತ್ತನೆಗೊಳಿಸುತ್ತದೆ ಎಂಬ ಅಂದಾಜೇ ಇರಲಿಲ್ಲ. ಮಗಳೆಡೆ ನೋಡಿದ ಅವರು, ಅದಕ್ಕೂ ಗೊತ್ತಿತ್ತೇನೋ, ಬೆಳಗ್ಗೆಯಿಂದ ಸಪ್ಪಗೇ ಇದೆ ಎಂದರು. ಮುಂದಿನ ವರ್ಷದ ತರಗತಿಗೆ ಯಾರು? ಎಂದೆ. ಗೊತ್ತಿಲ್ಲ ಎಂದು ದುಃಖ ನುಂಗಿಕೊಂಡರು. ಇನ್ನೊಂದು ಮಗುವಿನ ತಾಯಿಗೆ, ನಿಮ್ಮ ಮಗುವಿಗೆ ಬಹಳ ಗೋಳು ಹುಯ್ದುಕೊಂಡೆ ಸಾರಿ ಎಂದರು ಕಣ್ಣೊರೆಸಿಕೊಳ್ಳುತ್ತ ಮೂಡ್ ಬದಲಾಯಿಸಿಕೊಳ್ಳಲು ನೋಡಿದರು. ಪ್ರಿನ್ಸಿಪಾಲ್
ಒಳಗೊಂಡಂತೆ ಎಲ್ಲರನ್ನೂ ಭೇಟಿಯಾಗಿ ಹೊರಬರುತ್ತಿದ್ದಾಗ, ಬೈ ಸ್ವರಾ ಬೈ ಮೇಡಮ್' ಎಂದ ಸೆಕ್ಯೂರಿಟಿ. ಗಾಡಿಯೇರಿದವಳೇ ಒಮ್ಮೆ ತಿರುಗಿ ನೋಡಿದೆ, ಅಕಸ್ಮಾತ್ ಲಾಲಿಪಾಪ್ ಕೈಜಾರಿ ಬಿದ್ದಾಗ ಅತ್ತು ಅತ್ತು ಸುಮ್ಮನಾದ ಮಗುವಿನಂತೆ ಕಂಡರ ವಸು ಮಿಸ್. ಸೆಕ್ಯೂರಿಟಿ ಬೇರೆ ಮಕ್ಕಳಿಗೆಲ್ಲ ಬೈ ಹೇಳುತ್ತಿದ್ದ.

ಮಗಳನ್ನು ಮೊದಲ ದಿನ ಶಾಲೆಗೆ ಕಳುಹಿಸಿದ ದಿನ ಕಣ್ಮುಂದೆ ಬಂದು ಮತ್ತಷ್ಟು ದುಃಖ ಉಕ್ಕಿತು...

ಸಿಕ್ಕಾಪಟ್ಟೆ ಹಟ, ಊಟ ಮಾಡಲ್ಲ, ರಚ್ಚೆ ಹಿಡೀತಾಳೆ, ಎಷ್ಟಂತ ಹೊರಗೆ ಓಡಾಡಿಸಿಕೊಂಡಿರಲಿ? ಡಾಕ್ಟರಿಗೆ ಸಹಜವಾಗಿ ಹೇಳಿಕೊಂಡಿದ್ದೆ. ಪಾರ್ಕ್, ದೇವಸ್ಥಾನಕ್ಕೆ ಕರ್ಕೊಂಡ್ ಹೋಗಿ, ನಾಲ್ಕ್ ಮಕ್ಕಳ ಜೊತೆ ಆಟಕ್ಕೆ ಬಿಡಿ ಎಂದರು. ಅದೆಲ್ಲಾ ಯಾವಾಗಲೂ ನಡೀತಿರುತ್ತೆ ಅಂದೆ. ಶಾಲೆಗೆ ಸೇರಿಸಿ ಎಂದರು. ಎರಡು ತುಂಬುವ ಮೊದಲೇ? ಎನ್ನುತ್ತ ಎಂಟ್ಹತ್ತು ಶಾಲೆಗಳ ತಿರುಗಿ ಕೊನೆಗೆ ಈ ಶಾಲೆಗೆ ಪ್ರವೇಶ ಪಡೆದಾಯಿತು. ಎರಡು ವರ್ಷದ ಹುಟ್ಟುಹಬ್ಬ ಮುಗಿದ ಮಾರನೇ ದಿನವೇ, ಶಾಲೆಗೆ ಹೊರಡುವುದೆಂದಾಯಿತು. ಅಯ್ಯೋ ಇಷ್ಟು ಬೇಗ ಇದಕ್ಕೆ ಶಾಲೆ ಎಂದು ಇಬ್ಬರೂ ಒಳಗೊಳಗೇ ಮರುಗುತ್ತ ಶಾಲೆಯ ಬಳಿ ಬಂದೆವು. ಗಾಡಿಯಿಂದ ಇಳಿದು ಗೇಟ್ ಮುಂದೆ ನಿಂತೆವು. ಸೆಕ್ಯೂರಿಟಿ ವೆಲ್ಕಮ್ ಪುಟ್ಟಿ ಎಂದು ಕೈಚಾಚುತ್ತಿದ್ದಂತೆ, ಸೊಂಡಿ ಇಳಿಸಿ ಅಳಲಾರಂಭಿಸಿದಳು. ತಕ್ಷಣವೇ ಗೇಟ್ ಹಾಕಿಕೊಂಡವನೇ, ಮೆಟ್ಟಿಲೇರಿದ. ಚೀರಿಚೀರಿ ಅಳುತ್ತಿದ್ದ ಅವಳನ್ನು ಆಕಡೆಯಿಂದ ಬಂದ ದುಂಡನೆಯ ಮಿಸ್ಸೊಬ್ಬರ ಕೈಗೆ ಪಾರ್ಸೆಲ್ ಡಬ್ಬಿಯಂತೆ ವರ್ಗಾಯಿಸಿಬಿಟ್ಟ. ಇವಳೋ ಇನ್ನಷ್ಟು ಗಾಬರಿಯಾಗಿ ಅಳತೊಡಗಿದಳು. ನಾಲ್ಕೇ ಸೆಕೆಂಡಿನಲ್ಲಿ ಗ್ರಿಲ್ ಮತ್ತು ಬಾಗಿಲನ್ನು ಮುಚ್ಚಿಕೊಂಡುಬಿಟ್ಟರು ದುಂಡನೆಯ ಮಿಸ್. ನಮ್ಮಿಬ್ಬರಿಗೋ ಸೀದಾ ಎದೆಗೇ ಒದ್ದಂತಾಯಿತು. ಮನೆಗೆ ಬಂದವನೇ, 'ಹೀಗೆಲ್ಲ ಅವರು ಟ್ರೀಟ್ ಮಾಡೋದಾದ್ರೆ, ಶಾಲೆಯೇ ಬೇಡ. ಮನೆಯಲ್ಲೇ ಇರಲಿ ಅವಳು. ಮನೆಯಲ್ಲೇ ಓದಿಸೋಣ' ಎಂದು ಭಾವುಕನಾದ ನನ್ನವ.

ಮಗುವನ್ನು ಮಾತನಾಡಿಸುತ್ತ, ಅದರ ಗಮನ ಸೆಳೆಯುತ್ತ ನಮ್ಮ ಕೈಯಿಂದ ತಮ್ಮ ಕೈಗೆ ಎತ್ತಿಕೊಳ್ಳುತ್ತ ನಿಧಾನ ಕ್ಲಾಸಿಗೆ ಕರೆದುಕೊಂಡು ಹೋಗುತ್ತಾರೆ, ಸಮಾಧಾನಿಸುತ್ತ ಉಳಿದ ಮಕ್ಕಳೊಂದಿಗೆ ಕೂರಿಸುತ್ತಾರೆ. ಅವಳು ಸುಮ್ಮನಾಗುತ್ತಿದ್ದಂತೆ ಸನ್ನೆ ಮಾಡಿ ನಮಗೆ ಹೋಗಲು ಹೇಳುತ್ತಾರೆ ಎನ್ನುವ ಅನಾದಿಕಾಲದ ಕಲ್ಪನೆಯಲ್ಲಿ ನಾವಿಬ್ಬರೂ ಇದ್ದೆವು. ಆದರೆ ಅಲ್ಲಿ ಆಗಿದ್ದೇ ಬೇರೆ. ಎರಡು ತಿಂಗಳತನಕವೂ ಈ ಶಾಲೆಯೇ ಬೇಡ, ಕಟ್ಟಿದ ಸಾವಿರುಗಟ್ಟಲೆ ಹಣವೂ ಬೇಡ, ಮಕ್ಕಳೆಂದರೆ ವಸ್ತುಗಳಾ? ಎನ್ನುವ ಸಿಟ್ಟು, ನೋವಿನಲ್ಲೇ ಇದ್ದೆವು. ನಾನಂತೂ ಶಾಲೆಕಡೆಗೂ ತಲೆಹಾಕಿರಲಿಲ್ಲ. ಅವಳನ್ನು ಸ್ಕೂಲಿಗೆ ಕರೆದೊಯ್ಯುವ ಕಳಿಸುವ ಜವಾಬ್ದಾರಿಯೆಲ್ಲ ಇವನದೇ ಆಗಿತ್ತು. ಯಾಕಾದರೂ ಶಾಲೆಗೆ ಸೇರಿಸಿದೆವೋ, ಕೊನೇಪಕ್ಷ ಕ್ಲಾಸ್ರೂಂ ನೋಡಲೂ ಇವರು ನಮಗೆ ಬಿಡುತ್ತಿಲ್ಲವಲ್ಲ? ಎಂಥ ಶಾಲೆ ಎಂಥ ಶಿಕ್ಷಕರಿವರು ಎಂದು ಆಗಾಗ ಅಳುತ್ತಿದ್ದೆ. ಬೇರೆ ಮಕ್ಕಳ ನೆಪ ಹೇಳಿ ನಮ್ಮ ಸಣ್ಣ ಆಸೆ ಕುತೂಹಲವನ್ನು ಆ ಮಿಸ್ ನಗುತ್ತಲೇ ತಳ್ಳಿಹಾಕುತ್ತಿದ್ದರು. ಈ ಬೆಂಗಳೂರು ಈ ಶಾಲೆಗಳು ಛೆ ಪಕ್ಕಾ ಬಿಝಿನೆಸ್! ಒಳಗೊಳಗೇ ಕುದಿಯುತ್ತಿದ್ದೆ.

ಆಮೇಲೆ ಎರಡು ವಾರಗಳಮಟ್ಟಿಗೆ ಊರಿಗೆ ಹೋಗುವ ಸಂದರ್ಭ ಬಂದಾಗ ದುಂಡನೆಯ ಮಿಸ್, ' I'm going to miss her' ಎಂದರು. ಊರಿಗೆ ಹೋಗುವ ಉಮೇದಿನಲ್ಲಿ ಸುಮ್ಮನೆ ನಕ್ಕೆ. ಊರಲ್ಲಿದ್ದಾಗ ಶಾಲೆಯಿಂದ ಫೋನ್, ' ಸ್ವರ ಯಾಕೆ ಶಾಲೆಗೆ ಬರುತ್ತಿಲ್ಲ, ಮಿಸ್ ಕೇಳ್ತಿದಾರೆ!

ಊರಿಂದ ವಾಪಸ್ ಬಂದಮೇಲೆ ನಾನೇ ಕರೆದುಕೊಂಡು ಬರುತ್ತೇನೆ ಇನ್ನು, ನೀನೇ ಎಷ್ಟಂತ ಓಡಾಡುತ್ತೀ ಎಂದು ನನ್ನವನಿಗೆ ಹೇಳಿದೆ. ಬೇಬಿ ಕ್ಯಾರಿಯರ್ ನಲ್ಲಿ ಕೂರದ, ಗಾಡಿಯಲ್ಲಿ ಗಟ್ಟಿಯಾಗಿ ನಿಲ್ಲದ ವಯಸ್ಸಿನ ಕೂಸಿದು. ಕೊನೆಗೆ ಗಟ್ಟಿಮನಸ್ಸು ಮಾಡಿ, ನನ್ನೆಡೆ ಮುಖಮಾಡಿ ನಿಲ್ಲಿಸಿ, ಒಂದಾವರ್ತ ದುಪಟ್ಟಾವನ್ನು ನನ್ನ ಸೊಂಟಕ್ಕೆ ಮತ್ತು ಅವಳ ಬೆನ್ನಿಗೆ ಸುತ್ತಿ ನಿಲ್ಲಿಸಿಕೊಂಡೆ. ಹೀಗೇ ಶಾಲೆಯಿಂದ ಕರೆದೊಯ್ಯುವ ದಿನಚರಿ ಆರಂಭವಾಯಿತು. ನಾ ಬರುವತನಕ ಶಾಲೆಯ ಕಾಂಪೌಂಡಿನ ಗೋಡೆ ಮೇಲೆ ಒಂದು ದೊಡ್ಡ ಮತ್ತು ಸಣ್ಣ ಜೀವಗಳರಡೂ ಗಲ್ಲಕ್ಕೆ ಗಲ್ಲ ಹಚ್ಚಿ ಮುದ್ದು ಮಾಡುತ್ತ ತಮ್ಮದೇ ಜಗತ್ತಿನಲ್ಲಿ ಮುಳುಗಿರುತ್ತಿದ್ದವು. ಎಷ್ಟೋ ಸಲ ನಾ ದೂರದಿಂದಲೇ ನೋಡುತ್ತ ನಿಂತಿರುತ್ತಿದ್ದೆ. ನನ್ನ ಗಾಡಿ ಏರುತ್ತಿದ್ದಂತೆ ಸಣ್ಣ ಜೀವ ಬೈ ಮಿಸ್ ಎಂದು ದುಂಡನೆಯ ಜೀವಕ್ಕೆ ಹೇಳುತ್ತಿತ್ತು. ಆಕಡೆಯಿಂದ ಅದು ಬಾಯ್ 'ಸ್ವಲೀ' ಅಮ್ಮ ಬಂದ್ರೆ ನಾ ನಿಂಗ್ಯಾರೋ ಅಲ್ವಾ ಎಂದು ಹುಸಿಕೋಪ ತೋರಿಸಿ ಗಲ್ಲ ಉಬ್ಬಿಸಿಕೊಳ್ಳುತ್ತಿತ್ತು. ಹೀಗೇ ಸಾಗಿ ಈ ವರ್ಷಾಂತ್ಯವೂ ಬಂದೇಬಿಟ್ಟಿತು.

'ಅವಳು ಮನೇಲಿ ಏನು ತಿನ್ನಲ್ವೋ, ಕೊಟ್ಟುಕಳಿಸಿ ನಾ ತಿನ್ನಸ್ತೀನಿ. ಹಾಲು ಕುಡಿಯಲ್ವಾ? ಫ್ಲಾಸ್ಕಿನಲ್ಲಿ ಕಳಿಸಿ ನಾ ಕುಡಿಸ್ತೀನಿ. ನಾಲ್ಕು ಡ್ರೆಸ್ ಇಟ್ಟು ಕಳಿಸಿ, ಬಾತ್ರೂಮಿಗೆ ಅವಳೇ ಹೋಗಿ ಕಕ್ಕ ಮಾಡುವ ಹಾಗೆ ನಾ ಕಲಿಸುತ್ತೀನಿ ಎಂದೆಲ್ಲ ಅವರು ಈ ಹಿಂದೆ ಹೇಳುವಾಗೆಲ್ಲ ಅದೆಂಥ ಕಕ್ಕುಲಾತಿ ಅದೆಂಥ ಆತ್ಮಶಕ್ತಿ!

ಈ ದುಂಡನೆಯ ಮಿಸ್ ಅವತ್ತು ಕ್ರೀಡಾಂಗಣದ ತುಂಬ ಧ್ವಜ ಹಿಡಿದು ಮಾರ್ಚ್ ಫಾಸ್ಟ್ ಮಾಡುತ್ತಿದ್ದರೆ, ಈ ಸಣ್ಣಜೀವ ಸ್ವಲೀ ಅದರ ದುಪಟ್ಟಾ ಹಿಡಿದು ಹೆಜ್ಜೆ ಹಾಕುತ್ತ ನಮ್ಮಿಬ್ಬರನ್ನು ಹುಡುಕುತ್ತ ಅಳುತ್ತಿತ್ತು. ಅವಳ ಅಳು ನೋಡಿ ನಾನಿಲ್ಲಿ ಅಡಗಿಕೊಂಡು ಅಳುತ್ತಿದ್ದರೆ, ಅಕ್ಕಪಕ್ಕದ ಅಪ್ಪ ಅಮ್ಮಂದಿರು, 'hey why u crying yaar? So funny' ಅನ್ನುತ್ತಿದ್ದರು. ಹೀಗೇ ಇನ್ನೊಂದು ಮಗುವೂ ಅಳುತ್ತಿತ್ತು, ನಾ ಹೋಗಿ ನನ್ನ ಮಗಳನ್ನು ಎತ್ತಿಕೊಳ್ಳಲೇ? ಎಂದು ಅದರ ಅಮ್ಮ ಚಡಪಡಿಸುತ್ತಿದ್ದರು. ಕಾಣಿಸಿಕೊಳ್ಳಬೇಡಿ ಆದಷ್ಟು ಅಡಗಿಕೊಳ್ಳಿ, ನಿಮ್ಮನ್ನು ಕಂಡರೆ ಮತ್ತಷ್ಟು ದುಃಖಿಸುತ್ತಾಳೆ. ಈಗ ಡ್ಯಾನ್ಸ್ ಶುರುವಾಗುತ್ತಿದ್ದಂತೆ ಮಕ್ಕಳೆಲ್ಲ ಮರೆಯುತ್ತಾರೆ ಅಂದೆ. ಕೊನೆಗೆ ಹಾಗೇ ಆಯಿತು. ಮೊದಲ ಬಾರಿ ಮಗಳು ಎಲ್ಲರೆದುರು ಕುಣಿಯುವಂತೆ ಮಾಡಿದ್ದು ಇದೇ ನಮ್ಮ ದುಂಡನೆಯ ಅಂದರೆ ಸ್ವರೂಳ ವಚು ಮಿಶ್! ಪ್ರತೀವರ್ಷದಂತೆ  ಮಿಸ್ ಗೆ ಬೇರೆ ಮಕ್ಕಳು ಸಿಗುತ್ತಾರೆ ಹಾಗೇ ಸ್ವರಳಿಗೂ ಬೇರೆ ಮಿಸ್.

ಹೀಗೇ ಇದೊಂದು ತೂಕಕ್ಕೆ ಸಿಗದ ಕಪ್ಪೆ ಜೀಗಿತದ ಪ್ರೀತಿಯ ಓಟದ ಆರಂಭ. ಅಪೂರ್ವ ಘಳಿಗೆಗಳನ್ನು ಅನುಭವಗಳನ್ನಷ್ಟೇ ನಮ್ಮ ದುಂಡನೆಯ ಕೊಳದೊಳಗೆ ತುಂಬಿಸಿಕೊಳ್ಳುತ್ತ ಹೋಗಬೇಕು. ಕತ್ತಲಾದಾಗ ಕೊಳದಲ್ಲಿ ಕಾಣದ ಬಿಂಬ ಹಗಲಲ್ಲಿ ನಿಚ್ಚಳವಾಗಿರುತ್ತದೆ, ಕೊಳ ಶುದ್ಧವಾಗಿಟ್ಟುಕೊಂಡು ಕಾಯುವ ಮನಸ್ಸಿರಬೇಕು ಸಹನೆಯಿರಬೇಕು ಎಲ್ಲಕ್ಕಿಂತ ಮುಖ್ಯ ಕುತೂಹಲವಿರಬೇಕು.

4 comments:

sunaath said...

ಮಕ್ಕಳನ್ನು ಮೊದಲ ಸಲ ಸಾಲೆಗೆ ಕಳಿಸುವಾಗಿನ ಆತಂಕವನ್ನು ನಿಮ್ಮ ಲೇಖನದ ಮೂಲಕ ನಾನು ಮತ್ತೊಮ್ಮೆ ಅನುಭವಿಸಿದೆ!

ಆಲಾಪಿನಿ said...

ಹೂಂ ಅಂಕಲ್

Jyothi Nooji said...

ಶ್ರೀದೇವಿ.. ತುಂಬಾ ಚಂದ ನಂದೇ ಮಾತೇನೋ ಅನ್ನೋ ಥರ ಬರ್ದಿದ್ದೀರಿ.. ನಮ್ಮ ಅನುಭವಗಳೇ ಇವು.. ನಮ್ ಪುಟ್ಟಕ್ಕನ್ನ ನೋಡ್ಬೇಕು...

ಆಲಾಪಿನಿ said...

ಧನ್ಯವಾದ ಜ್ಯೋತಿ.ಬನ್ನಿ ಪ್ಲೀಸ್ :)