Thursday, March 17, 2016

ಸೇರಲೆನ್ನಯ ಜೀವ ಜೀವವಿಶ್ವದಲಿಅಮ್ಮಾ ಹೋನಾ? ಆಕೆ ಒಂದೊಂದೇ ಮೆಟ್ಟಿಲಿಳಿಯುತ್ತಿದ್ದರೆ ನಾ ಆ ಪಾದಗಳನ್ನೂ ತುಂಬಿದ ಚೀಲವನ್ನೂ ನೋಡುತ್ತ ಸುಮ್ಮನೇ ಹಿಂಬಾಲಿಸುತ್ತಿದ್ದೆ. ನೋಡಲದು ಅಂಗೈಯಗಲ ಚೀಲವೇ ಆಗಿದ್ದರೂ ತುಂಬಿಸಿಕೊಂಡಿದ್ದು ಕಾಲುಕೇಜಿ ಬಟಾಣಿ. ಪುಟ್ಟಭುಜಕ್ಕೆ ತುಸು ಜಂಭ ಸವರಿ, ಕಾಲಿಗೊಂದಿಷ್ಟು ಗತ್ತು ಅಂಟಿಸಿ ಪಕ್ಕದ ಉದ್ಯಾನಕ್ಕೆ ಕಾಲು ಬೆಳೆಸಿತ್ತು ತುಂಬಿಯೂ ತುಳುಕದ ಆ ಚೀಲ.

ಗೇಟಿನ ಬಲಬದಿಯಲ್ಲೇ ಮಾಲಿಯಜ್ಜ ಪಂಪ್ಸೆಟ್ ರಿಪೇರಿ ಮಾಡಿಸುತ್ತ ಕುಳಿತಿದ್ದ. ಅದೂ ಅವನಷ್ಟೇ ನುಜ್ಜುಗುಜ್ಜಾಗಿ ಸೋತಂತಿತ್ತು, ಬಣ್ಣವನ್ನೂ ಕಳೆದುಕೊಂಡಿತ್ತು. ಮೊದಲಿನ ಚೈತನ್ಯ ತಂದು ಕೊಡದಿದ್ದರೆ ನಾ, ನಾನೇ ಅಲ್ಲ ನೋಡುತ್ತಿರು ಎಂಬ ಉಮೇದಿಯಲ್ಲಿ ರಿಪೇರಿಯಪ್ಪನೊಬ್ಬ ಆ 'ಪಂಪಮಹಾಶಯ'ನ ಕೈಕಾಲು ಉಜ್ಜುವುದೇನು, ತುಟಿಬಿಗಿಹಿಡಿದು ಅದರ ಕತ್ತು ತಿರುವುವುದೇನು ಅದಕ್ಕೊಂದಿಷ್ಟು ತಂತಿ ಬಿಗಿಯುವುದೇನು, ರಬ್ಬರ್ ತೊಡಿಸುವುದೇನು... 'ಆಹಾ ನೆನೆವುದೆನ್ನ ಮನಂ ತನಂ ಅದಿಂದು ರಿಪೇರಿಯಾದೋಲ್' ಎಂದು ನಾ ಕಾರಂಜಿ ತಂಪಿನ ಗುಂಗಿನೊಳಗೇ ಉದ್ಯಾನದ ಹೃದಯ ಭಾಗಕ್ಕೆ ಬಂದೆ. ಇವಳೋ ಅದಾಗಲೇ ನನ್ನ ಬೆರಳಗೊಂಚಲ ಬಿಟ್ಟು ಮಂಟಪದ ಕಟ್ಟೆಯನೇರಲು ಹವಣಿಸುತ್ತಿದ್ದಳು. ಆಗಲೂ ನನ್ನ ಕಣ್ಣು ಅವಳ ಪುಟ್ಟಪಾದ ಮತ್ತು ತುಂಬಿಯೂ ತುಳುಕದ ಚೀಲದ ಮೇಲೆಯೇ.

'ಮೊನ್ನೆಯೊಂದ್ ಮದ್ವೇಗ್ ಹೋಗಿದ್ನಾ, ಕಾರ್ ಹತ್ತೋಕ್ ಹೋಗಿ ಕಾಲು ಕಳಕ್ ಅಂತಾ, ನೋವು ತಡಿಯಕ್ ಆಗ್ತಿಲ್ಲ. ರಾಮಾsss ಸಾಕಪ್ಪಾ ಸಾಕು ಈ ಅರವತ್ತಕ್ಕೇ' ತೂತುಗಳೊಳಗೆ ಮಾತು ಕಳೆದುಕೊಂಡ ಬಿಳಿಪಟ್ಟಿಯೊಂದು, ಅಲ್ಲಿಗೆ ಬಂದ ಆ ಅಜ್ಜಿಯ ಮೀನಗಂಡ ಅಪ್ಪಿ ಕುಳಿತಿತ್ತು. ಈ ನನ್ನ ಮಗಳೋ ಮಹಾ ಸುದ್ದಿ ಸೂರವ್ವ, 'ಗಾಯಾ ಅಜ್ಜಿಗೆ ಗಾಯಾ ಪಾಪಾ ಹಾ' ಎಂದು ಬಂದವರಿಗೆಲ್ಲ ಓಡೋಡಿ ಹೋಗಿ ಹೇಳುವುದೇನು, ಮಧ್ಯೆಮಧ್ಯೆ ತನ್ನ ಅಂಗಿಯನೆತ್ತಿ ಮೂರು ತಿಂಗಳ ಹಿಂದಿನ ಚೂರೇಚೂರು ಕಲೆಯನ್ನು ತೋರಿಸುತ್ತ ನಂಗೂ ಗಾಯಾ ಹಾ ನೋದು ನೋದಿಲ್ಲಿ ಎಂದು ಪ್ರದರ್ಶಿಸುವುದೇನು, ಇವರಿಬ್ಬರೂ ಅತ್ಯುತ್ಸಾಹದಿಂದ ತಮ್ಮ ತಮ್ಮ ಗಾಯಗಳನ್ನು ಬಣ್ಣಿಸುವುದೇನು ಅದಕ್ಸರಿಯಾಗಿ ಪ್ರೇಕ್ಷಕವೃಂದದ ಉದ್ಗಾರಗಳು ಮರುಕಗಳು ಸಲಹೆಗಳು ಪ್ರತಿಕ್ರಿಯೆಗಳು ವಾದಗಳು ಮತ್ತು ಕೆಲ ಮುಖತಿರುವುಗಳು... ಮತ್ತು ಬಟಾಣಿಸಿಪ್ಪೆಗಳು ತೆಪ್ಪಗೆ ಕುಳಿತ ಚೀಲವೂ. ಪಕ್ಕದಲ್ಲಿದ್ದ ಚಿಗುರು 'ಇಲ್ಲಿ ನಾನೂ ಇದ್ದೇನಲ್ಲ ಮತ್ತೆ...' ಕತ್ತೆತ್ತಿ ನೋಡಲೆತ್ನಿಸುತ್ತಿತ್ತು, ವಯಸ್ಸಾದ ಮರವೊಂದು ಹಾದುಹೋಗುವವರೆಲ್ಲರ ತಲೆಯ ಮೇಲೆ ತರಗೆಲೆಯುದುರಿಸುತ್ತ ತಲೆ ಎತ್ತಿ ನೋಡುವ ಹಾಗೆ ಮಾಡುತ್ತಿತ್ತು. 'Attention is vitality. It connects you with others. It makes you eager. Stay eager' - Susan Sontag ಪಕ್ಕದ ಕಂಬದ ಮರೆಯಲ್ಲಿ ನಿಂತು ಉಸುರಿದಂತಾಯ್ತು.

ಪಾಕ್ ಸಾಕು ಈಗ ಬೇರೆ ವಾಕ್ ಎನ್ನುತ್ತ ಮಗಳು ಹೊಕ್ಕಿದ್ದು ಎದುರಿನ ಬಿಬಿಎಂಪಿ ಹೆರಿಗೆ ಆಸ್ಪತ್ರೆ. ಈ ಗಿಡ ಆ ಗಿಡ, ಹಳದೀ ಚಿಟ್ಟೆ, ಕರೀಕೀಟ, ಮರಿಕೀಟ, ಕೈಜಾರಿದ ಚಾಕೋಲೇಟ್, ಸಪ್ಪಗಾದ ಮುಖ. ಕೊನಗೆಲ್ಲ ಮರೆತು, ಅಲ್ಲಿ ಅಣ್ಣ ಎಂದಳು. ನಾಲ್ಕರ ಪೋರ ಮೆಟ್ಟಿಲ ಮೇಲೆ ಕುಳಿತಿದ್ದ. ಮೆಟ್ಟಿಲು ಏರುತ್ತ, 'ಅಣ್ಣ ಚೇಮ್ ಚೇಮ್' ಎಂದು ಮುಖ ಮುಚ್ಚಿಕೊಂಡು ನಕ್ಕಳು. 'ಕಂದಾ ನಿನ್ನ ಕಾಲ ಬಳಿ ಇರುವೆ ಇದೆ ಎದ್ದು ನಿಂತುಕೋ' ಎಂದು ಮೆತ್ತಗೆ ಉಸುರಿದೆ. ಪಾಪ ಆ ಅಣ್ಣ ಸಡಿಲಾದ ಚಡ್ಡಿ ಏರಿಸುತ್ತ ಎದ್ದುನಿಂತಿತು. ಏಯ್ ಹೋಯ್ತು ಹೋಯ್ತದು ಎಂದು ಜೋರಾಗಿ ಕೂಗಿ ನಕ್ಕು ಇವಳ ಮುಸುಮುಸಿಯನ್ನೂ ಅವನ ಗಾಬರಿಯನ್ನೂ ಓಡಿಸಿಬಿಟ್ಟೆ.

ಮೆಟ್ಟಿಲಮೇಲೆ ಕುಳಿತು ಆ ಅಣ್ಣನೊಂದಿಗೆ ಹರಟುತ್ತಿದ್ದಂತೆ, 'ಒಲಗೆ ಹೋನಾ?' ಎಂದಳು. ಕುಂತ ಕುರ್ಚಿ ಬಿಟ್ಟೆದ್ದು ಬಂದ ಆ ಅಣ್ಣನ ಅಜ್ಜಿ, 'ಸೂಜಿ ಚುಚ್ತಾರೆ!' ಎಂದಳು. ಸ್ವಲ್ಪ ಹೊತ್ತು ಇವಳ ಪಲ್ಲವಿಗೆ ಅವಳ ಚರಣ ಕೇಳಿ ಕೇಳಿ ಸಾಕಾಗಿ, ಏಯ್ ಪುಟ್ಟ ನೀನಿಲ್ಯಾಕ್ ಬಂದಿದ್ದು? ಅಂದೆ. ನಮ್ ಪಾಪು ಒಳಗಿದೆ ಗೊತ್ತಾ? ಅಂದ ಆ ಹುಡುಗ. 'ಪಾಪುನಾ? ವಾವ್ ಪಾಪು ಎತ್ತೋಬೇಕು, ಅಮ್ಮಾ ಹೋನಾ...' ಇವಳೀಗ ನಿವೇದನಾವದನೆ! ಓಹ್ ಯಾವಾಗ ಹುಟ್ಟಿದೆ ಏನ್ ಮಗು ಎಂದೆ. ' ಅಯ್ಯೋ ಗಂಡಮಗು. ನಿನ್ನೆ ಸಂಜೆ ನಾಲ್ಕಕ್ಕೆ ಹುಟ್ಟಿದೆ. ನಮ್ ಮಗಳು ಅಳ್ತಾ ಮಲಗವ್ಳೆ ನಿನ್ನೆಯಿಂದ. ಏನ್ ಮಾಡೋದು ಹೆಣ್ಣೇ ಬೇಕು ಅಂತ ಎಷ್ಟೋಂದ್ ಆಸೆ ಇಟ್ಕಂಡಿದ್ಲು. ಹೆಣ್ ಬೇಕಲ್ವರಾ ಒಂದು? ನಿನ್ನೆಯಿಂದ ಮೂರು ನಾರ್ಮಲ್ ನಾಲ್ಕು ಸಿಝೇರಿಯನ್ ಒಟ್ಟು ಒಂಭತ್ತು ಗಂಡು ಹುಟ್ಯವೆ ಇಲ್ಲಿ!' ಎಂದವಳ ಮುಖ ಸಪ್ಪನ್ನ ಬೇಳೆ.

'ಪಾಪು ಎತ್ತೋಬೇಕು ನೋಬೇಕು' ಇವಳ ಹಕ್ಕೊತ್ತಾಯಕ್ಕೆ ಮಣಿದ ಅಜ್ಜಿ, ಬಾ ಎಂದು ವಾರ್ಡಿಗೆ ಕರೆದೊಯ್ದಳು. ಮತ್ತೆ ನನ್ನ ಬೆರಳಗೊಂಚಲ ಬಿಡಿಸಿಕೊಂಡವಳೇ ಓಡಿಬಿಟ್ಟಳು. ಅದರಮ್ಮ ಅದಕ್ಕೆ ಬೆನ್ನು ಮಾಡಿ ಮಲಗಿದ್ದರೂ, ಕೂಸು ನಿದ್ದೆಯಲ್ಲೇ ನಗುತ್ತಿತ್ತು. 'ವಾವ್ ಪಿಂಕ್ಪಿಂಕ್ ಪಾಪು ತುಪರ್' ಎನ್ನುತ್ತ ಮತ್ತೆ ಮಗಳು ಪಲ್ಲವಿಗೇ; ಪಾಪು ಎತ್ತೊಬೇಕು! ಈಗದು ಮಲಗಿದೆ ಆಮೇಲೆ ಬರೋಣ್ವಾ ಎಂದೆ. ಓಕೆ ಎಂದವಳೇ ಪಕ್ಕದ ಹಾಸಿಗೆಯಲ್ಲಿ ಮಲಗಿದ್ದ ಎಳೆತಾಯಿಯನ್ನೊಮ್ಮೆ ನೋಡಿ, ಪಾಪು ಎಲ್ಲಿ ಎಂದಳು. ಅವಳು ತನ್ನ ಮಗುವನ್ನು ಅವುಚಿಕೊಂಡಂತೆ ಮಾಡಿ ರಗ್ಗೆಳೆದುಕೊಂಡು ಆಕಡೆ ತಿರುಗಿದಳು. ಅಲ್ಲೊಂದು ಮೂಲೆಯ ಹಾಸಿಗೆಯಲ್ಲೊಬ್ಬಳು ತಾಯಿ, ಗೋಡೆಗೆ ಮುಖಮಾಡಿ ಹಾಲೂಡಿಸಲು ಪ್ರಯತ್ನಿಸುತ್ತಿದ್ದಳು. ಪಾಪು ನೋಬೇಕು ಎಂದಳು ಇವಳು ಮತ್ತೆ. ಇಲ್ಲ ಅದು ಹಾಲು ಕುಡೀತಿದೆ ಮತ್ತೆ ಬರೋಣ ಎಂದು ಹೊರಡಿಸಿದರೆ ಮತ್ತದೇ ಪಲ್ಲವಿ. ಗುಬ್ಬಚ್ಚಿ, ಪಾಪುಗೆ ಹೊಸಾ ಡ್ರೆಸ್ ತಗೊಂಬರೋಣ ಅಂದೆ. ಯೆಶ್ ಎಂದು ಕುಣಿದಾಡತೊಡಗಿದಳು. ನಡೀ ಮತ್ತೆ ಮನೆಗೆ ಹೋಗಿ ತಗೊಂಬರೋಣಾ ಎಂದೆ. ಇಬ್ಬರೂ ಎರಡೇ ನಿಮಿಷದಲ್ಲಿ ಹಕ್ಕಿಯಂತೆ ಹಾರಿ ಗೂಡು ಸೇರಿಬಿಟ್ಟೆವು.

ಕೈಕಾಲು ತೊಳೆದುಕೊಂಡು ಬಟ್ಟೆ ಬದಲಾಯಿಸಿದರೆ ಮಾತ್ರ ಪಾಪು ಎತ್ತಿಕೊಳ್ಳುವುದು ಎಂದೆ. ನಮ್ಮನೆ ದೇವ್ರು ಇಣುಕಿ ನೋಡುತ್ತಿತ್ತು, ಇವಳ ಸಡಗರಕ್ಕೆ ಮತ್ತು ಅವಸರಕ್ಕೆ. ಹೀಗೆ ಹುಟ್ಟಿದ ಮಕ್ಕಳಿಗೆ ಕೊಡಲೆಂದೇ ಇಂವ ಅಂದೆಂದೋ ತಂದಿಟ್ಟ ಬಣ್ಣಬಣ್ಣದ ಸ್ವೆಟರ್ ಗಳ ಪ್ಯಾಕ್ ಬಿಚ್ಚಿದೆ ಹಾಲಬಣ್ಣದ ಸ್ವೆಟರ್ ಕಾಲುಚೀಲ ಕುಂಚಿಗೆ ನಕ್ಕಿತು. ಇನ್ನೇನಾದರೂ... ಎಂದು ಯೋಚಿಸುತ್ತಿರುವಾಗ, ಬೇಗಬೇಗ ಹೋನಾ ಬಾಮ್ಮಾ ಎಂದು ಕೈ ಜಗ್ಗಿದಳು.

ವಾರ್ಡಿಗೆ ಬಂದಾಗ, ಅಳುಮೋರೆಯಿಂದಲೇ ಆ ಎಳೆಗೂಸಿನಮ್ಮ ಯಾರಿಗೋ ಡಯಲ್ ಮಾಡುತ್ತಲೇ ಇದ್ದಳು, ಆಕಡೆಯವರು ಉತ್ತರಿಸುತ್ತಿರಲಿಲ್ಲವೇನೋ. ಓಡಿಹೋದವಳೇ, ಪಾಪುಗೆ ತ್ವೆತರ್ ಎಂದು ಕೈಗಿಟ್ಟಳು ಇವಳು. ಆಕೆ ಕಣ್ಣೊರೆಸಿಕೊಳ್ಳುತ್ತ ಇದೆಲ್ಲ ಯಾಕೆ, ಇವರ್ಯಾರಮ್ಮ ಎಂದು ತನ್ನ ತಾಯಿಯೆಡೆ ನೋಡುತ್ತ ನಗು ತಂದುಕೊಂಡಳು. ಇತ್ತ ಇವಳು ಮುಟ್ಟಿಗೆಬಿಚ್ಚಿ ಆ ಅಣ್ಣನಿಗೆಂದೇ ತಂದ ಚಾಕೋಲೇಟ್ ಕೊಟ್ಟು 'ಉದಾರಿವೀರಿ' ಎನ್ನಿಸಿಕೊಂಡಳು ಆ ಕ್ಷಣದ ಮಟ್ಟಿಗೆ!

ಅಲ್ಲೇ ಪಕ್ಕದ ಹಾಸಿಗೆಯಲ್ಲಿದ್ದ ಎಳೆಯ ಅಮ್ಮನಿಗೆ ಅದು ಮೊದಲ ಮಗು. ಮತ್ತೆ ಮತ್ತೆ ನೋಡಬೇಕೆನ್ನುವ ಹಾಗಿದ್ದರು ಆ ಗಂಡಹೆಂಡತಿ. ಆ ಪಾಪು ಎತ್ತೋಲೋಣ ಎಂದು ಇವಳು ಆ ಕಡೆ ಕೈಮಾಡಿದಳು. ಆದರೆ ಅವರಿಬ್ಬರು ಕಣ್ಣಿಗೆ ಕಣ್ಣೂ ಕೊಡಲಿಲ್ಲ. ಉಳಿದ ಪುಟ್ಟಕೂಸುಗಳನ್ನು ಅವರವರ ಅಜ್ಜ ಅಜ್ಜಿ ಸಂಬಂಧಿಕರು ಸುತ್ತಿವರಿದಿದ್ದಕ್ಕೋ ಏನೋ... ಈ ದಂಪತಿ ಮುಖದಲ್ಲಿ ಎಂಥದೋ ವಿಷಾದ ಛಾಯೆ.

ಒತ್ತಾಯದಿಂದ ಮಗಳನ್ನೆಳೆದುಕೊಂಡು ಹೊರಬರುವಾಗ ಸೆಕ್ಯುರಿಟಿಯಜ್ಜ, 'ನಾಳೆ ಇನ್ನೊಂದು ಪಾಪು ವಾರ್ಡಿಗೆ ಶಿಫ್ಟಾಗುತ್ತದೆ. ನಾಳೆ ಬರುವಿಯಂತೆ ಈಗ ಕತ್ತಲಾಯಿತು ಮನೆಗೋಗು ಪುಟ್ಟಿ' ಎಂದ. ಅಳುವ ಇವಳನ್ನು ಎತ್ತಿಕೊಂಡು ಮನೆಗೆ ಬರಬೇಕಾದರೆ, ಪರಿಚಯದ ಅಜ್ಜಿಯೊಬ್ಬರು, 'hey swara where had u been?' ಎಂದರು. ಹಿಂಗಾಯ್ತು ಅಂದಿದ್ದಕ್ಕೆ, 'oh they must be servant class people. its good yaa... giving smthng to someone. Punya goes to your account!' ಎಂದರು. ಅವರ ಒಕ್ಕಣೆಗೆ ಏನು ಪ್ರತಿಕ್ರಿಯಿಸಬೇಕೋ ಅರ್ಥವಾಗದೆ ಸುಮ್ಮನೆ ನಕ್ಕಿದ್ದೆ. ಅದನ್ನೊಪ್ಪಿಕೊಳ್ಳದ ಮನಸ್ಸಿಗೆ ಹೇಗೆ ಸಮಾಧಾನ ಹೇಳುವುದೆಂದು ತಿಳಿಯದಂತಾಗಿ ಇಂದು ಕಗ್ಗದ ಮೇಲೆ ಕಣ್ಣಾಡಿಸುತ್ತಿದ್ದೆ. ಸಕಾರಣವೆಂದರೆ ಇದೆ ಏನೋ, ಇಂದೇ ಡಿವಿಜಿಯವರ ಹುಟ್ಟುಹಬ್ಬ.

ಆರಲೆನ್ನಯ ಹೃದಯ ಕರಣಗಳ ಕಾವುಗಳು
ಸೇರಲೆನ್ನಯ ಜೀವ ವಿಶ್ವಜೀವದಲಿ
ಧಾರುಣಿಯ ಮಡಿಲೆನ್ನ ಕೊಳಲಿ; ಜಗ ಮರೆತಿರಲಿ
ಹಾರಯಿಸು ನೀನಿಂತು – ಮಂಕುತಿಮ್ಮ

2 comments:

sunaath said...

ಅಹಾ, ಡೀವಿಜಿಯವರದು ಎಂಥಾ ಹಾರೈಕೆ: ಸೇರಲೆನ್ನಯ ಜೀವ ವಿಶ್ವಜೀವದಲಿ!
ದೇವರ ಕರುಣೆ ಮುದ್ದು ಪುಟ್ಟಿಯ ಮೇಲಿರಲಿ.

ಆಲಾಪಿನಿ said...

Thank u uncle :)