Tuesday, April 26, 2016

ಕುಟುಂಬ ರಾಜಕಾರಣ : ಅಸ್ಮಿತೆಯ ರಕ್ಷಣೆ

1963ರಲ್ಲಿ ಅಮೆರಿಕದ ಮನ:ಶಾಸ್ತ್ರಜ್ಞೆ ಬ್ರೆಟ್ಟಿ ಫ್ರೈಡನ್ ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳನ್ನು ಒಳಗೊಂಡ ಚಿಕ್ಕ ಸಮೀಕ್ಷೆಯೊಂದನ್ನು ಮಾಡುತ್ತಾರೆ. ಸುಮ್ಮನೆ ತಮ್ಮನ್ನು ಆವರಿಸುವ ಖಿನ್ನತೆ, ಕೆಲಸದಲ್ಲಿ ಶ್ರದ್ಧೆ ಇಲ್ಲದಿರುವುದು, ವಿನಾಕಾರಣ ಸಿಟ್ಟು-ತಳಮಳ-ಅಳು ಹೀಗೆ ಮದುವೆಯಾದ ಅನೇಕರು ತಮ್ಮ ಒಳಗನ್ನು ಹಂಚಿಕೊಳ್ಳುತ್ತಾರೆ. ಸಮೀಕ್ಷೆ ನಡೆಸಿದ ಬ್ರೆಟ್ಟಿ ತಲೆಮೇಲೆ ಕೈಹೊತ್ತು ಕುಳಿತುಬಿಡುತ್ತಾರೆ. ಏಕೆಂದರೆ ಇಲ್ಲಿ ಹೀಗೆ ತಮ್ಮ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿರುವ ಯಾವ ಹೆಣ್ಣುಮಕ್ಕಳಿಗೂ ಹೇಳಿಕೊಳ್ಳುವಂಥ ಸಮಸ್ಯೆಗಳಿಲ್ಲ. ಬಹುತೇಕ ಎಲ್ಲರಿಗೂ ಸ್ವಂತ ಮನೆಯಿದೆ. ಗಂಡ-ಮಕ್ಕಳಿವೆ. ಆರ್ಥಿಕ ಭದ್ರತೆ ಇದೆ ಆರೋಗ್ಯ ಸದೃಢವಾಗಿದೆ. ಹೀಗಿದ್ದರೂ ಕೂಡ ಈ ಹೆಣ್ಣುಮಕ್ಕಳು ಸಮೀಕ್ಷೆಯಲ್ಲಿ ತಾವು ಖುಷಿಯಾಗಿಲ್ಲ ಎಂತಲೇ ಹೇಳುತ್ತಿದ್ದಾರೆ. ಎಲ್ಲ ಇದೆಯಲ್ಲ? ಇನ್ನೇನು ಬೇಕಿದೆ ನಿಮಗೆ?ಅಂತ ಬ್ರೆಟ್ಟಿ ಕೇಳಿದಾಗ, ಉತ್ತರ ಸ್ವತಃ ಈ ಹೆಣ್ಣುಮಕ್ಕಳಿಗೂ ಗೊತ್ತಿರುವುದಿಲ್ಲ. ಕೊನೆಗೆ ಎಲ್ಲ ಕೋನಗಳಿಂದ ಕೂಲಂಕಶವಾಗಿ ಪರೀಕ್ಷೆ ಮಾಡಿದಾಗ, ಆಕೆಗೆ ಈ ಸಮಸ್ಯೆಯ ಉತ್ತರ ಹೊಳೆಯುತ್ತದೆ. ಅದೇ Identity crisis!

ಇಷ್ಟು ವರ್ಷ ಗಂಡ, ಮಕ್ಕಳು, ಮನೆ, ಮನೆತನ ಅಂತೆಲ್ಲ ಹೆಣಗಿದ ಇವರೆಲ್ಲರಿಗೂ ಇತ್ತೀಚೆಗೆ "ನಾನ್ಯಾರು" ಎನ್ನುವ ಪ್ರಶ್ನೆ ಹುತ್ತಕಟ್ಟಲಾರಂಭಿಸಿರುತ್ತದೆ. ಆದರೆ ಬಹುತೇಕರಿಗೆ ಅದೊಂದು ಅಸ್ಮಿತೆ ಬಗೆಗಿನ ಸಮಸ್ಯೆ ಎಂದು ತಿಳಿಯದೆ, ಏನೇನೋ ತಕರಾರುಗಳನ್ನು ಅವರು ಹೇಳಿಕೊಂಡಿರುತ್ತಾರೆ. ಹಾಗೆ ನೋಡಿದರೆ, ಇದೊಂದು ವಿಚಿತ್ರವಲ್ಲದ ಸಹಜ ಸಮಸ್ಯೆ. ಬದಲಾದ ಕಾಲಘಟ್ಟದಲ್ಲಿ ಮಹಿಳೆಯೊಬ್ಬಳು ತನ್ನ ಜೀವಿತಾವಧಿಯಲ್ಲಿ ಎದುರಿಸಲೇಬೇಕಾಗಿರುವಂಥದ್ದು. ಒಂದು ಹಂತದಲ್ಲಿ "ನಾನ್ಯಾರು, ಈ ಮನೆಯಲ್ಲಿ ನನ್ನ ಸ್ವಂತಿಕೆ ಏನು?" ಅನ್ನುವಂಥ ಪ್ರಶ್ನೆಯನ್ನು ಹೆಣ್ಣುಮಗಳೊಬ್ಬಳು ತನ್ನಷ್ಟಕ್ಕೆ ತಾನೇ ಕೇಳಿಕೊಳ್ಳುವ ಸಂದರ್ಭ ಬರುತ್ತಿದೆ ಎಂದರೆ, ಅಲ್ಲಿಗೆ ಆ ಹೆಣ್ಣುಮಗಳು ಹೊಸ ಸಾಹಸಕ್ಕೆ ಅಥವಾ ತನ್ನಲ್ಲಿರುವ ಹೊಸ ನೋಟವೊಂದಕ್ಕೆ ರೂಪ ಕೊಡುತ್ತಿದ್ದಾಳೆ ಅಂತಲೇ ಅರ್ಥ. ಆದರೆ ಅದು ಅಷ್ಟು ಸುಲಭವೇ?

ಅದರಲ್ಲೂ ನಮ್ಮ ಭಾರತೀಯ ಕೌಟುಂಬಿಕ ಸಂಸ್ಕೃತಿ ಒಂದು ಸೀಮಿತ ಚೌಕಟ್ಟನ್ನು ಧರಿಸಿ ನಿಂತಿರುವಂಥದ್ದು. ಪುರುಷ ಇಲ್ಲಿ ಇಡೀ ಮನೆಯನ್ನೇ ನಡೆಸುವಾತನಾದರೆ ಹೆಣ್ಣು ಮನೆಯೊಳಗಷ್ಟೇ ನಡೆಯಬೇಕು ಎನ್ನುವ ಸಿದ್ಧ ಸೂತ್ರವಿದು. ಇದನ್ನು ೩೬೫ ದಿನಗಳ ಕಾಲವೂ ಚಾಚೂ ತಪ್ಪದೇ ಪಾಲಿಸಲೇಬೇಕೆಂದು ಆಯಾ ಮನೆಯ ಎಲ್ಲ ಸದಸ್ಯರು ನಿರಂತರ ಪ್ರಯತ್ನಿಸುತ್ತಿರುತ್ತಾರೆ.

ಹೊರಜಗತ್ತಿನಲ್ಲಿ ಏನೇ ಪ್ರಳಯವಾದರೂ ನಮ್ಮ ಮನೆ ಶಾಂತವಾಗಿರಲೇಬೇಕು. ಶಾಂತವಾಗಿರಬೇಕೆಂದರೆ, ನಸುಕಿನ ಅಂಗಳಕ್ಕೆ ಥಳಿ ರಂಗೋಲಿ ಬೀಳಬೇಕು. ಒಳಗೆ ಒಲೆ ಉರಿಯುತ್ತಿರಬೇಕು. ಕಪಾಟಿನೊಳಗೆ ಸುಕ್ಕಿಲ್ಲದಂತೆ ಬಟ್ಟೆಗಳು ಮಡಚಿಕೊಂಡಿರಬೇಕು. ಸುತ್ತುವರಿದ ಪುಟ್ಟ ಮತ್ತು ದೊಡ್ಡ ಜೀವಗಳ ಅವಶ್ಯಕತೆಗಳನ್ನು ಪೂರೈಸುತ್ತಿರಲೇಬೇಕು. ಹೀಗಿರುವಾಗ, ಇಂಥದ್ದೂ ಕೂಡ ಒಮ್ಮೊಮ್ಮೆ ನಡೆಯುತ್ತಿರುತ್ತದೆ; ಹೊರಗಡೆ ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲೋ ಯಾರಿಂದಲೋ 'ಝಾಡಿಸಿಕೊಂಡು'ಬಂದಿರುವ ಗಂಡನ ಸಿಟ್ಟಿಗೆ Outletಆಗುವವಳೂ ಇವಳೇ!

ಪರಿಸ್ಥಿತಿ ಹೀಗಿರುವಾಗ, ತನ್ನದೊಂದು ಸ್ವಂತ ಖುಷಿಗೆ ತೆರೆದುಕೊಳ್ಳುವ ಹಾದಿಯನ್ನೋ, ಹುಚ್ಚನ್ನೋ ಆಕೆ ಕಂಡುಕೊಂಡು, ಅದರಲ್ಲೇ ತನ್ನದೊಂದು ಅಸ್ಮಿತೆ ಕಂಡುಕೊಳ್ಳುವುದು ಸುಲಭದ ಮಾತೆ?

ಜಗತ್ತೇನೋ ಹೆಣ್ಣನ್ನು ಪ್ರಕೃತಿಗೆ ಹೋಲಿಸುತ್ತದೆ. ಯಾಕೆಂದರೆ, ಬತ್ತಿದರೂ ಹರಿದ ಹಾದಿಹೆಜ್ಜೆಯೊಂದಿಗೆ ಇರುವು ಗುರುತಿಸಿಕೊಳ್ಳುವ ನದಿ, ಉರಿದರೂ ಬೂದಿಯೊಳಗೇ ಉಸಿರಾಡುವ ಕೆಂಡ, ಶಿಶಿರದಲ್ಲಿ ಮುರುಟಿದರೂ ವಸಂತನಿಗಾಗಿ ಧ್ಯೇನಿಸುವ ಮರಗಿಡ, ಧೂಳಕಣವಾಗಿಯಾದರೂ ನುಗ್ಗುವ ಗಾಳಿ, ಮುಗಿಲು ಹರಿದಂತೆ ಮಳೆಬಿದ್ದರೂ ಎದೆಯುಬ್ಬಿಸಿಕೊಂಡೇ ಇರುವ ಆಕಾಶ... ಇವೆಲ್ಲಕ್ಕೂ ತನ್ನದೇ ಗತ್ತಿದೆ, ಗೌರತ್ತಿದೆ ಸಹಜ ಸೌಂದರ್ಯವಿದೆ ಎಂದಮೇಲೆ ಮನುಷ್ಯಜೀವಿಯೊಳಗೆ ಅದೆಷ್ಟು ದೌಲತ್ತಿರಬೇಡ? ಆಸೆಕನಸುಗಳೆಂಬ ಕೂಸಿನ ಪೋಷಣೆಗೆ ಈ ಜೀವಿ ಹೆಣೆಯುವ ತಂತ್ರಗಳೆಷ್ಟಿರಬೇಡ? ತಂತ್ರ ಬೇಧಗೊಂಡಷ್ಟೂ ಹೊಸಹೊಸ ಮಂತ್ರ ಹೊಸೆಯುವ ಈ ಜೀವಿಗೆ ಬುದ್ಧಿಭಾವವೇ ಬಂಡವಾಳ. ಸಾಂಘಿಕ ಜೀವನದ ನೆಪದಲ್ಲಿ, ಕುಟುಂಬ ವ್ಯವಸ್ಥೆ ಹುಟ್ಟುಹಾಕುವಾಗಲೇ ಈ ರಾಜಕೀಯ ಎಂಬ ಬೀಜ ಮೊಳೆತದ್ದು. ತಾನು ತನ್ನದು ತನ್ನಿಂದ ತನಗಾಗಿಯೇ ಎಂಬ ಸಮುದ್ರದ ಭೋರ್ಗರೆತಕ್ಕೆ ಉತ್ತರವಾಗಿ ತತ್ತರಿಸುವವಳೂ ಅವಳೇ, ಅದರ ಆರ್ಭಟದ ತಹಬಂದಿಗೆ ಸೇತುವೆಯಾಗುವವಳೂ ಅವಳೇ. ಈ ಪ್ರಕೃತಿ ಮತ್ತು ಪುರುಷನ ತಾಕಲಾಟಗಳ ನಡುವೆ ಪುರುಷನೇ ಇಲ್ಲಿ ಒಳಿತಿನ ಒಡೆಯನಾಗುತ್ತಾ ಹೋಗುತ್ತಾನೆ ಎನ್ನುವುದು ನಿರೂಪಿತ ಸತ್ಯ.

ಹೀಗೆ ಆಳುವ ಮನೋಭಾವವೊಂದು ಸಂತೃಪ್ತಗೊಳ್ಳುವುದು ಸ್ವಕೇಂದ್ರಿತ ಗೆಲುವಿನ ಮೆಟ್ಟಿಲುಗಳ ಏರುವಿಕೆಯಲ್ಲಿ. ಈ ಏರುವಿಕೆಗೆ ಪೂರಕವಾಗಿಯೇ ಸಾಧನ ಮತ್ತು ತಂತ್ರಗಳನ್ನು ರೂಪಿಸುತ್ತಿರುವುದರಲ್ಲೇ ಜೀವದ್ರವ್ಯ ಅಡಗಿದೆ ಎಂಬ ಭ್ರಮೆ ಈ ಮನಸ್ಥಿತಿಯದ್ದು. ಈ ಪ್ರಕ್ರಿಯೆಯಲ್ಲಿ ತುಳಿಸಿಕೊಳ್ಳುವ ಮೆಟ್ಟಿಲು, ಏರಿಸಿಕೊಳ್ಳುವ ಏಣಿಯ ಎದೆಗೆ ನೋವಾದೀತೆಂದು, ಏರುವವರು ಯೋಚಿಸುತ್ತಾರೆಯೇ?

ಸೂಫಿ ಸಂತೆ ಹಬಾ ಖಾತೂನಳ ಬಗ್ಗೆ ಇಲ್ಲಿ ಹೇಳಬೇಕೆನ್ನಿಸುತ್ತಿದೆ. ಹಬಾಳ ಬಾಲ್ಯ ಹಕ್ಕಿಯಂತೆ ಸ್ವಚ್ಛಂದವಾಗಿತ್ತು. ಓದುಬರಹದೊಂದಿಗೆ ರೈತರೊಂದಿಗೂ ದುಡಿಯುತ್ತಿದ್ದಳು. ಗೆಳತಿಯರೊಂದಿಗೆ ಕಾಡುಹೊಕ್ಕು ಸಾಂಬಾರ ಪದಾರ್ಥ ಆಯುತ್ತಿದ್ದಳು, ಸುಗಂಧ ದ್ರವ್ಯಕ್ಕೆ ಕಾಯಿ ಹೆಕ್ಕುತ್ತಿದ್ದಳು. ಗುಡ್ಡದಿಂದ ಸಿಹಿನೀರಿನ ಕೊಡಗಳನ್ನು ಒಂದರ ಮೇಲೊಂದು ಹೊತ್ತು ತರುವ ತೂಗುಕಲೆ ಸಿದ್ಧಿಸಿತ್ತು. ಪ್ರಕೃತಿಸಹಜ ಕಲೆಯನ್ನೆಲ್ಲ ರೂಢಿಸಿಕೊಂಡ ಆಕೆ ತನ್ನ ಅಪ್ಪ ಅಮ್ಮನ ಮನೆಗೆ ಆರ್ಥಿಕವಾಗಿಯೂ ಆಸರೆಯಾಗಿದ್ದಳು. ಮುಂದೆ ಆಕೆ ಪ್ರೌಢಾವಸ್ಥೆಗೆ ಕಾಲಿಡುತ್ತಿದ್ದಂತೆ, ಆಕೆಯ ಅಪ್ಪ ಅಮ್ಮ ಮದುವೆ ಮಾಡಿಬಿಡುತ್ತಾರೆ. ಆದರೆ ಅಪೂರ್ವ ಸುಂದರಿಯ ಗಂಡನೆನಿಸಿಕೊಂಡ ಅಝೀಝ್ ಲೋನೆ ಅವಿದ್ಯಾವಂತ. ಅವಳ ಸೌಂದರ್ಯ, ಧ್ವನಿಯ ಇಂಪು, ಹಿತಸ್ಪರ್ಶವನ್ನು ಸವಿಯದೆ, ಸ್ಪಂದಿಸದೆ ಕಲ್ಲಿನಂತಾಗಿಬಿಡುತ್ತಾನೆ. ಅವನನ್ನು ಪರಿವರ್ತನಗೊಳಿಸಲು ಅವಳದೆಷ್ಟು ಶ್ರಮಿಸಿದರೂ, ಉತ್ಕಟತೆಯಿಂದ ಪ್ರೇಮಿಸಿದರೂ ಸೋಲು ಅವಳ ಉಡಿಯೊಳಗೇ.

ಕ್ರಮೇಣ ಮನೆಗೆಲಸ ಅಡುಗೆಕೆಲಸದ ಜೊತೆ ಗುಡ್ಡುಗಾಡು ಅಲೆದು ಕಟ್ಟಿಗೆ ನೀರು ತರಲು ಅತ್ತೆ ಫರಮಾನು ಹೊರಡಿಸುತ್ತಾಳೆ. ಸಣ್ಣಪುಟ್ಟ ತಪ್ಪುಗಳಿಗೆ ಕುಟುಂಬದ ಸದಸ್ಯರಿಂದ ಹಿಡಿದು ಆಳುಮಕ್ಕಳೆದುರು ಮೂದಲಿಸುವುದು,ಹೊಡೆಯುವುದೆಲ್ಲ ಶುರುವಾಗಿಬಿಡುತ್ತದೆ. ಅಕಸ್ಮಾತ್ ಒಡೆದ ಮಡಕೆಗೆ ಬೆಲೆ ತೆರಬೇಕೆಂದರೆ, ರಾತ್ರಿಇಡೀ ಚರಕದಿಂದ ನೂಲು ನೇಯ್ದು ಅದನ್ನು ಮಾರಿಬಂದ ಹಣದಲ್ಲಿ ಹೊಸ ಮಡಿಕೆ ಕೊಳ್ಳಬೇಕಾಗುತ್ತಿತ್ತು. ಇಲ್ಲವಾದಲ್ಲಿ ಎಲ್ಲರೆದುರೇ ತಲೆಗೂದಲು ಜಗ್ಗಿ ಬೆನ್ನಿಗೆ ಗುದ್ದಿಬಿಡುತ್ತಿದ್ದಳು ಅತ್ತೆ. ಈ ತನ್ನೆಲ್ಲ ಅಸಹಾಯಕತೆಗೆ ಬೆಳಕಿಂಡಿಯಾಗಿದ್ದೇ ಕವನ ರಚನೆ. ತನ್ನ ಒಂಟಿತನದ ಗಳಿಗೆಗಳಲ್ಲಿ ಜೊತೆಯಾಗಿರುತ್ತಿದ್ದವ ಆಕೆಯ ಅದೃಶ್ಯ ಪ್ರೇಮಿ. ತನ್ನೆಲ್ಲ ನೋವುಗಳನ್ನು ಕವನದ ಮೂಸೆಯಲ್ಲಿ ಅರಳಿಸುತ್ತ ಆಧ್ಯಾತ್ಮದ ಹೊಳಹಿನಲ್ಲಿ ಕಂಗೊಳಿಸಿಬಿಡುತ್ತಿದ್ದಳು. ಅವಳ ಕೆಲ ಸಾಲುಗಳು ಹೀಗಿವೆ...

ಯಾಕಾಗಿ ಕೊರೆದೆ ನನ್ನ ಹೃದಯವ ಕುಡುಗೋಲಿನಿಂದ?

ಪ್ರಾರ್ಥಿಸಿ ಹೇಳಿದೆ, ನಾ ಸತ್ತೆನೆಂದು,

ಅವನು ಕಳೆಯುವನು ಬದುಕ ದೋಣಿಯ ಲಂಗರನು

ಪುಷ್ಪಗುಚ್ಛವ ಮಾಡಿಹೆ ನಿನಗಾಗಿ

ಪ್ರಕೃತಿಯನ್ನು ಪೂಜಿಸುತ್ತಲೇ ಸ್ವಾಮ್ಯ ಹೊಂದುವ ಮನೋಭಾವಕ್ಕೆ ಶತಶತಮಾನಗಳ ಬಳವಳಿ ಇದೆ, ಅದಕ್ಕೆ ತಕ್ಕಂತೆ ಚಳವಳಿಯ ಹಿನ್ನೆಲೆಯೂ ಇದೆ. ಅಕ್ಷರಸಮಾನತೆ, ಜ್ಞಾನ-ವಿಜ್ಞಾನ-ಮಾಹಿತಿ ತಂತ್ರಜ್ಞಾನದ ಬೆಳಕಿನಿಂದ ಆರ್ಥಿಕವಾಗಿ, ಸಾಮಾಜಿಕವಾಗಿ,ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಹೆಣ್ಣಿನ ಒಳಗಣ್ಣು ತೆರೆಯಿತಾದರೂ, ಕುಟುಂಬ ರಾಜಕೀಯದ ಸೆಳವು ಅವಳ ಭಾವಕೋಶಕ್ಕೆ ರಂಧ್ರ ಕೊರೆಯುತ್ತಲೇ ಇದೆ. ಒಂದೊಂದು ರಂಧ್ರವನ್ನು ತನ್ನ ಸಾಮರ್ಥ್ಯ ಪ್ರತಿಭೆಯಿಂದ ಮುಚ್ಚಿಕೊಳ್ಳಲು ಆಕೆ ಪ್ರಯತ್ನಿಸಿದಷ್ಟೂ,ಮತ್ತೊಂದು ಮಗದೊಂದು ರಂಧ್ರವನ್ನು ಬಹಳವ್ಯವಸ್ಥಿತವಾಗಿ ಕೊರೆಯುವ ಹುನ್ನಾರವೊಂದರ ನಿರ್ಮಾಣ ನಿರಂತರ ಪ್ರಕ್ರಿಯೆ. ಆದ್ದರಿಂದಲೇ ಅವಳೆಂದಿಗೂ ಖಾಲೀ ಪಾತ್ರೆಯೇ.

ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಹೋರಾಟಗಾರ್ತಿ ಛಾಯಾ ದಾತಾರ್ ನೆನಪಾಗುತ್ತಿದ್ದಾರೆ.  ಮದುವೆಯಾಗಿ ಎರಡು ಮಕ್ಕಳ ತಾಯಿಯಾದ ನಂತರ, ತಮ್ಮ ವ್ಯಕ್ತಿತ್ವ ಅಪೂರ್ಣವೆಂಬಂತಾಗಿಲ್ಲವೆ ಎಂಬ ಯೋಚನೆ ಅವರನ್ನು ಕಾಡತೊಡಗುತ್ತದೆ. ದೊಡ್ಡದೊಂದು ಕೆಂಪು ಪ್ರಶ್ನಾರ್ಥಕ ಚಿಹ್ನೆಯಲ್ಲಿ ಗಂಡ ಎದುರು ಬಂದು ನಿಂತಂತಾಗುತ್ತದೆ. ಕುಟುಂಬ ಪೋಷಣೆ, ಸಾಮಾಜಿಕ ಮನ್ನಣೆ ನೆಪದಲ್ಲಿ ಹಣಗಳಿಕೆ ಮತ್ತು ಅದಕ್ಕೊಡ್ಡುವ ಸ್ಪರ್ಧೆಗಳೇ ಸರ್ವಸ್ವವೆಂದೂ, ಅದಕ್ಕೆ ಪೂರಕವಾಗಿ ರೂಪುಗೊಳ್ಳುವ ಅವನ ಅಹಂಭಾವ ಪೋಷಣೆಯಲ್ಲೇ ತಾನು ಸಮಯ ವ್ಯಯಿಸಬೇಕಾ? ಸ್ವವಿಕಾಸದ ಮೂಲಕ ಬದುಕಿನ ಸಾರ್ಥಕ್ಯ ಪಡೆದುಕೊಳ್ಳಬಹುದಲ್ಲವೆ? ಎಂದು ಯೋಚಿಸುತ್ತಾರೆ. ಸಂಸಾರ ಸುಖ ಸೌಲಭ್ಯ ಮತ್ತು ಇಂಥವರ ಗಂಡ ಇಂಥ ಕುಟುಂಬದ ಸೊಸೆ ಎನ್ನುವ ಪರದೆಯನ್ನು ಸರಿಸಿ,ಮನೆಯೊಳಗಿನ  ನಿತ್ಯಚಟುವಟಿಕೆಗಳಲ್ಲೇ ಸಮಯ ವ್ಯರ್ಥ ಮಾಡುವ ಬದಲು ರಚನಾತ್ಮಕವಾಗಿ ತೊಡಗಿಳ್ಳುವ ಸಂಕಲ್ಪ ಮಾಡುತ್ತಾರೆ. ’ಸ್ತ್ರೀ ವಿಮುಕ್ತಿ’ ಎಂಬ ಸಂಘವನ್ನು ಹುಟ್ಟುಹಾಕುತ್ತಾರೆ. ’ಸ್ತ್ರೀಯರು ಮತ್ತು ವಿಕಾಸ’ ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ವಿದೇಶದಲ್ಲಿದ್ದುಕೊಂಡು ಪೂರೈಸುತ್ತಾರೆ. ಈ ಸಮಯದಲ್ಲಿ ಸಹಪಾಠಿಗಳ ಅನುಭವ ಹೆಣ್ಣಿನ ಇನ್ನೊಂದು ಮಗ್ಗುಲನ್ನು ತೋರಿಸುತ್ತದೆ. ಅಲ್ಲಿಯ ಮುಕ್ತಪ್ರಣಯ ವ್ಯವಸ್ಥೆಯೂ ಕೂಡ ಆತ್ಮಘಾತುಕತನವಲ್ಲವೆ? ಹಲವು ಗಂಡಸರೊಂದಿಗಿನ ಹಾಸಿಗೆ ಸಾಂಗತ್ಯದಲ್ಲಿ,ತನ್ನ ಸಂತೃಪ್ತಿ ಬದಲಿಗೆ ಅವರನ್ನು ಸಂತೃಪ್ತಗೊಳಿಸುವ ವರ್ತನೆಯೇ ಹೆಣ್ಣಿನದಾಗಿರಲಿಲ್ಲವೆ? ಹಾಗಿದ್ದರೆ ಮತ್ತವಳು ಒಂಟಿಯೇ. ಮುಕ್ತಲೈಂಗಿಕವಿಲಾಸಗಳಿಂದ ಹೆಣ್ಣು ಎರಡನೇ ದರ್ಜೆಯಿಂದ ಮೇಲೇರುತ್ತಾಳೆ ಎನ್ನುವ ವಿದೇಶಿ ಪ್ರೇರಿತ ಭ್ರಮೆ ಕೂಡ ಕಳಚುತ್ತದೆ. ನಂತರ ಈ ಎಲ್ಲ ಅನುಭವಗಳನ್ನು ಮೈಗೂಡಿಸಿಕೊಂಡು ಭಾರತೀಯ ಮನೋಭೂಮಿಕೆಗೆ ಅನುಗುಣವಾಗಿ ತಮ್ಮ ಹೋರಾಟದ ಹಾದಿಯನ್ನು ರೂಪಿಸಿಕೊಂಡು ಸಾಫಲ್ಯ ಪಡೆಯುತ್ತಾರೆ ಛಾಯಾ.

ಹಾಗೆ ನೋಡಿದರೆ, ಗಂಡು ಹೆಣ್ಣಿನ ದೇಹರಚನೆಯಲ್ಲಿ ಭಿನ್ನತೆಯಿದ್ದರೂ ಅಭಿವ್ಯಕ್ತಿ ವಿಷಯದಲ್ಲಿ ಏಕರೂಪ. ಪ್ರಕೃತಿ ಇಬ್ಬರನ್ನೂ ಸಮಾನವಾಗಿ ಪೋಷಿಸಿದೆ. ಆದರೆ ಪುರುಷನ ಆಳುವ ಮನೋಭಾವ ಮತ್ತು ಸ್ವಾರ್ಥತನದ ಪರಂಪರೆ ಅವಳನ್ನು ಅನಿವಾರ್ಯವಾಗಿ ಹೋರಾಟಕ್ಕಿಳಿಸಿದೆ. ಅವಳ ಹೋರಾಟಗಳಿಗೆ ಪ್ರತಿ ತಂತ್ರಗಳನ್ನು ರೂಪಿಸುತ್ತ ಅವಳ ಆತ್ಮಸ್ಥೈರ್ಯವನ್ನು ಎದೆಗುಂದಿಸುವ ಕೌಟುಂಬಿಕ ರಾಜಕೀಯ ತನಗೇ ತಾನೇ ತನ್ನ ನೆಮ್ಮದಿಯನ್ನೂ ಹಾಳು ಮಾಡಿಕೊಳ್ಳುತ್ತಿದೆ.

ಬಂಡಿ ಬಿಟ್ಟು ಬಸ್ಸು ಏರುವುದು ನಮಗರ್ಥವಾಯಿತು. ಲಾರಿ ಕಾರು ವಿಮಾನದಲ್ಲಿ ಪ್ರಯಾಣಿಸುವುದು ತಿಳಿಯಿತು. ನಮ್ಮಿಷ್ಟದಂತೆ ಊಟ ನೋಟ ಮಾಟ ಆಟಗಳನ್ನು ಬದಲಾಯಿಸಿಕೊಳ್ಳಲು ಮನಸ್ಸು ಮಾಡಿದೆವು. ತುದಿಬೆರಳಲ್ಲಿ ಜಗತ್ ಸಂಪರ್ಕ ಪಡೆದುಕೊಳ್ಳುವುದ ಕಲಿತೆವು. ಆದರೆ ಮಣ್ಣಲ್ಲಿ ಮಣ್ಣಾಗುವ ಸಮಯ ಬಂದರೂ, ಚಿರಾಸ್ತಿ ಸ್ಥಿರಾಸ್ತಿಗಳನ್ನು ಹೊತ್ತುಕೊಂಡೇ ಹೋಗುತ್ತೇವೇನೋ ಎಂಬಂತೆ ಹಟಕ್ಕೆ ಬಿದ್ದಿದ್ದೇವಲ್ಲ? ಮನೆಯ ವಾಸ್ತು-ವಿನ್ಯಾಸವನ್ನು ಬದಲಾಯಿಸಿಕೊಂಡೆವೋ ಅಥವಾ ಹೊಸದನ್ನೇ ಕಟ್ಟಿಸಿಕೊಂಡೆವೋ. ಆದರೆ ಪೀಳಿಗೆಯೊಂದಿಗೆ ಬೆರೆಯಲು, ಹುಟ್ಟಿಬೆಳೆದ ಮನೆಬಿಟ್ಟು ಬಂದ ಹುಡುಗಿಯನ್ನು ಅರ್ಥ ಮಾಡಿಕೊಳ್ಳಲು, ಅಪ್ಪಿಕೊಳ್ಳಲು ಮಾತ್ರ ನಾವು ಮನಸ್ಸು ಮಾಡುತ್ತಿಲ್ಲವಲ್ಲ, ಯಾಕೆ? ಹೊರಿಸಿದ ಮತ್ತು ಹೊತ್ತುಕೊಂಡ ಪರಂಪರೆಯ ವಜ್ಜೆ ಅದಕ್ಕೆ ಅನುವು ಮಾಡಿಕೊಡುತ್ತಿಲ್ಲ. ಕೊಂಡಿಕೊಂಡಿಗಳ ಬೆಸುಗೆಯಲ್ಲಿ ಅಹಂನ ತೃಪ್ತಿ ಅಡಗಿದೆ. ಕಳಚಿದರೆ ಅದು ಅಸ್ತಿತ್ವಭಂಗ! ಇದನ್ನು ಅಸ್ತಿತ್ವ ಎಂದು ಕುಳಿತಿರುವ ಆಳುವ ಮನಸ್ಥಿತಿಗಳಿಗೆ ಬಹುಶಃ ಗೊತ್ತೇ ಇಲ್ಲ,ತಾವೊಂದು ಹಳೆಯ ದ್ವೀಪದಂತೆ ಅದಾಗಲೇ ಕಳೆದುಹೋಗಿದ್ದೇವೆ ಎನ್ನುವುದು.

ಮಗುವಿನಂತೆ ಹೆಜ್ಜೆ ಹಾಕಿದರೆ ಎಲ್ಲವೂ ಮುಕ್ತ ಮತ್ತು ಸಾಧ್ಯ. ಇದಕ್ಕೆ ಬೇಕಿರುವುದು ಬದುಕಿಗೊಂದು ಗುಂಗು ಅಥವಾ ಧ್ಯಾನ ಅಥವಾ ಚೆಂದನೆಯ ಹುಚ್ಚು. ಈ ಮೂಲಕ ಹೊತ್ತ ವಜ್ಜೆಯನ್ನು ಕಳೆದುಕೊಳ್ಳಬೇಕಿದೆ. ಅಭಿವೃದ್ಧಿ ಎನ್ನುವುದು ತನಗೆ ತನ್ನ ಮನೆಗಷ್ಟೇ ಸೀಮಿತ, ಸಾಮಾಜಿಕ ಮನ್ನಣೆಗೆ ಹಣಗಳಿಕೆಯೊಂದೇ ಮಾನದಂಡ ಎಂದು ಕುಳಿತಾಗಲೇ ಒಣಪ್ರತಿಷ್ಠೆ ಮತ್ತು ಅಹಂಭಾವ ಮೊಳೆಯುವುದು. ಮಮತೆ ಆಪ್ತತೆ ಮಾಯವಾಗಿ ತಿರಸ್ಕಾರ, ಅಸಹನೆಗಳು ಇಣುಕಿ ಹಾಕುವುವು. ಆದ್ದರಿಂದ ಹೊತ್ತ ಪರಂಪರೆಯ ಅನವಶ್ಯಕ ವಜ್ಜೆಗಳನ್ನು ಕೆಳಗಿಳಿಸಿಕೊಳ್ಳಲು ಮತ್ತು ಜಂಜಡದ ಬದುಕಿನಿಂದ ಮನಸ್ಸು ತಿಳಿಗೊಳಿಸಿಕೊಳ್ಳಲು ನಳಿಕೆಯೊಂದನ್ನು ನಾವೇ ಹೃದಯದಲ್ಲಿ ಜೋಡಿಸಿಕೊಳ್ಳಬೇಕಿದೆ. ಅದ್ಯಾವ ನಳಿಕೆ ಎನ್ನುವುದು ಅವರವರವ ವೈಯಕ್ತಿಕ ಆಯ್ಕೆ. ಚಲನಶೀಲ ಮನಸ್ಸನ್ನು ಒರೆಗೆ ಹಚ್ಚಿ ಮೆರುಗು ನೀಡುವ ಕಲೆ ನಮಗೆ ಗೊತ್ತಿರಬೇಕಷ್ಟೆ. ಆಗ ವ್ಯಕ್ತಿಗತವಾಗಿ ಬದಲಾವಣೆಯಾಗುತ್ತಿದ್ದಂತೆ ಸಾಮಾಜಿಕವಾಗಿಯೂ ಅದರ ಫಲ ಹೊಮ್ಮುತ್ತದೆ. ಹೀಗಾದಾಗ ಮಾತ್ರ ನಾವೂ ಉಸಿರಾಡುತ್ತೇವೆ ಉಳಿದವರೂ.

ಅದರಲ್ಲೂ ಹೆಣ್ಣಿನ ಮನಸ್ಸು ಹರಿವ ನದಿಯಂತೆ. ವಡ್ಡುಕಟ್ಟಿದಷ್ಟೂ, ಬಿರುಸಿನಿಂದ ಚಿಗಿಯುವುದು ಅವಳಿಗೆ ಪ್ರಕೃತಿದತ್ತ ಕೊಡುಗೆ. ಈ ಕೊಡುಗೆಯೇ ಅವಳ ಪ್ರತಿಭೆ ಮತ್ತು ಸೃಜನಶೀಲ ಸಾಮರ್ಥ್ಯ. ಕೌಟುಂಬಿಕ ಜವಾಬ್ದಾರಿಗಳೊಂದಿಗೆ ಇದು ಕನಿಷ್ಟ ಮಟ್ಟದ ಸ್ವಾತಂತ್ರ್ಯ, ವೈಯಕ್ತಿಕ ಸಮಯ ಬಯಸುತ್ತದೆ. ಜೊತೆಗಿರುವವರಿಂದ ಪ್ರೋತ್ಸಾಹ ಮತ್ತು ಸಹಕಾರ ನಿರೀಕ್ಷಿಸುತ್ತದೆ. ಇದು ಗಂಡಿಗೂ ಅನ್ವಯಿಸುತ್ತದೆ. ಅಂತೆಯೇ ಹೆಣ್ಣು ಗಂಡು ಜೊತೆಯಾಗಿಯೇ ನಿಲ್ಲಬೇಕಾಗುತ್ತದೆ. ಹೊಂದಾಣಿಕೆಯಿಂದ ಪರಸ್ಪರರ ಅನನ್ಯತೆ ಗುರುತಿಸಿ, ಗೌರವಿಸಬೇಕಾಗುತ್ತದೆ.

ನಮ್ಮ ನಡುವಿದ್ದ ಪ್ರಖರ ಚಿಂತಕ ಸಾಹಿತಿ ಪ್ರೊ ಡಿ ಆರ್ ನಾಗರಾಜ್, ಸ್ತ್ರೀವಾದಿ ಸಾಹಿತ್ಯ ಮೀಮಾಂಸೆ ಕುರಿತು ಅಭಿಪ್ರಾಯಿಸಿರುವಂತೆ,  “ಸ್ತ್ರೀವಾದಿ ಸಾಹಿತ್ಯದ ವಿಶಿಷ್ಟತೆ ಇರುವುದೇ,ಗಂಡು ಯಾವುದನ್ನು ಹೆಣ್ಣಿನ ನೇತ್ಯಾತ್ಮಕ ಲಕ್ಷಣಗಳು ಎಂದು ಭಾವಿಸಿದ್ದನೋ ಅವಕ್ಕೆ ತಾತ್ವಿಕ ಸವಲತ್ತು ನೀಡಿದ್ದರಲ್ಲಿ. ಹೆಣ್ಣು ಚಂಚಲೆ ಎಂದಿರಾ? ಚಾಪಲ್ಯವೇ ಪ್ರತಿರೋಧದ ಅಂತಿಮ ರೂಪ. ನಿಶ್ಚಿತವಾದ್ದು ಪ್ರಬುದ್ಧತೆ ರೂಪ. ಹೆಂಗಸು ಹಾಗಲ್ಲ ಎಂದಿರಾ? ಅನಿಶ್ಚಿತತೆ ಹಾಗೂ ಅಸಂದಿಗ್ಧತೆಗಳ ಸಾಹಿತ್ಯ ರೂಪದ ಪರಮಶಕ್ತಿ. ಹೆಣ್ಣಿಗೆ ಸುಪ್ತತೆಯೇ ಐಸಿರಿ ಎಂದಿರಾ? ಸುಪ್ತೆತೆಯೇ ಕ್ರಾಂತಿಕಾರಿ ವಿದ್ರೋಹದ ಸಾಧನೆ. ಹೆಣ್ಣು ಕೇಂದ್ರವಲ್ಲ. ಆಕೆ ಅಂಚಿನವಳು ಎಂದಿರಾ? ಅಂಚೇ ಕೇಂದ್ರವನ್ನು ಹಿಡಿದು ಅಲ್ಲಾಡಿಸುತ್ತದೆ. ಹೆಣ್ಣಿನ ಬುದ್ಧಿ ಮೊಣಕಾಲ ಕೆಳಗೆ ಎಂದಿರಾ? ಆಕೆಯ ಬುದ್ಧಿ ಹೀನತೆ ನಿಮ್ಮ ಬುದ್ಧಿಯನ್ನು ಕಂಗೆಡಿಸುತ್ತದೆ. ಹೆಣ್ಣು ತೀವ್ರವಾಗಿರುತ್ತಾಳೆ. ನೈತಿಕವಲ್ಲ ಎಂದಿರಾ? ತೀವ್ರತೆಯನ್ನು ನೈತಿಕ ಎಂದು ಭಾವಿಸಿ, ನಿಮ್ಮ ನೀತಿಗಳನ್ನು ನುಗ್ಗುನುರಿ ಮಾಡುತ್ತಾಳೆ”

ಯೋಚಿಸಿ, ರಾಜಕೀಯ ಎಂಬ ಪದದ ಅಸ್ತಿತ್ವ ಸಕಾರಾತ್ಮಕ ರೂಪು ಪಡೆದುಕೊಳ್ಳಲು ನಾವೇನು ಮಾಡಬೇಕಾದ ತುರ್ತಿದೆ?

ಕಳೆದ ಶತಮಾನದ ಅರವತ್ತರ ದಶಕದಲ್ಲಿ ನಡೆಸಲಾದ ಮೇಲೆ ಹೇಳಿದ ಅಮೆರಿಕಾದ ಸಮೀಕ್ಷೆಯ ಫಲಿತಾಂಶ ಇವತ್ತು ಅದಾಗಲೇ ನಮ್ಮ ದೇಶಕ್ಕೂ ಕಾಲಿಟ್ಟು ಬಹಳೇ ವರ್ಷಗಳಾದವು. ಸಮಸ್ಯೆ ದೊಡ್ಡದಲ್ಲ. ಆದರೆ ಅದನ್ನು ಬಗೆಹರಿಸಿಕೊಳ್ಳುವ ಜಾಣತನ ಅಥವಾ ತಂತ್ರದ ವಿಧಾನ ಮಾತ್ರ ದೊಡ್ಡದು. ಮಹಿಳೆಯರಲ್ಲಿ ಅಸ್ಮಿತೆ ಅಥವಾ ಸ್ವಂತಿಕೆಯನ್ನು ಬೆಳೆಸಿಕೊಳ್ಳುವುದೆಂದರೆ, ಅದು ಕೇವಲ ಮನೆಯಾಚೆ ಹೋಗಿ ಕೆಲಸ ಮಾಡುವುದೊಂದೇ ಪರಿಹಾರ ಅಲ್ಲ. ಅದು ಇತರೇ ವಿಧಾನಗಳ ಪೈಕಿ ಒಂದು ವಿಧಾನವಷ್ಟೇ. ಈ ವಿಧಾನಗಳು ಒಬ್ಬ ಮಹಿಳೆಯಿಂದ ಇನ್ನೊಬ್ಬ ಮಹಿಳೆಗೆ ಬದಲಾಗುತ್ತ ಹೋಗಬಹುದು. ತಪ್ಪೇನಿಲ್ಲ. ಪುರುಷ ಮನಸ್ಥಿತಿ ಮತ್ತು ಸ್ತ್ರೀ ಮನಸ್ಥಿತಿ ಅನ್ನುವದೆಲ್ಲ ನಾವುಗಳೇ ಹೆಸರಿಟ್ಟುಕೊಂಡಿರುವಂಥದ್ದು. ಹಾಗಾಗಿ ಇಂಥವರು ಹೇಗೇ ಇರಬೇಕು, ಇದನ್ನೇ ಮಾಡಬೇಕು-ಅನ್ನುವಂಥ ತಪ್ಪುಪರಿಕಲ್ಪನೆಗಳೂ ಸಹ ನಮ್ಮವೇ. ಅದರಿಂದ ಮೊದಲು ನಾವು ಹೊರಬರುವ ಪ್ರಯತ್ನ ಮಾಡಬೇಕು.

ಹೊರಗಡೆ ಕೆಲಸ ಮಾಡುವದು ಒಬ್ಬರಿಗೆ ಅಸ್ಮಿತೆ ತಂದುಕೊಟ್ಟರೆ,ಮನೆಯೊಳಗಿದ್ದುಕೊಂಡೇ ಅಭಿರುಚಿಗೆ ಕೆಲಸ ಮಾಡಲು ಹಲವಾರು ಅವಕಾಶಗಳುಂಟು. ಮನೆಯ ನೆತ್ತಿ ಕಾಯುವ ಟೆರೇಸಿನಲ್ಲಿ ತರಕಾರಿ ಬೆಳೆಸಿ ಹೊಟ್ಟೆ ತಣ್ಣಗಿಡುವ ಕೆಲಸವೂ ಕೂಡ ಸ್ವಂತಿಕೆ ಮತ್ತು ಅಸ್ತಿತ್ವ ತಂದುಕೊಡಬಲ್ಲದು. ಕಾಲಿಗೆ ಚಕ್ರ ಕಟ್ಟಿಕೊಂಡಿರುವುದೇ ಖುಷಿ ಕೊಡುವಂತಿದ್ದರೆ, ನಿಮ್ಮ ದಿನಚರಿಯನ್ನು ಒಮ್ಮೆ ನಿಮ್ಮ ಮನೆಯವರಿಗೆ ಸಮಕ್ಷಮ ತಿಳಿಸಿಬಿಟ್ಟರೆ, ಅವರೂ ಅದನ್ನು ಅರ್ಥಮಾಡಿಕೊಂಡರೆ ಸಮಸ್ಯೆ ಓಡಿಹೋಗಿರುತ್ತದೆ ಸ್ವಂತಿಕೆ ನಳನಳಿಸುತ್ತಿರುತ್ತದೆ. ಯಾವುದೂ ಕನಿಷ್ಟವಲ್ಲ. ಯಾವುದೂ ನಿಕೃಷ್ಟವಲ್ಲ. ಒಟ್ಟಿನಲ್ಲಿ ಎಲ್ಲದರ ಮಾರ್ಗ ಮತ್ತು ಉದ್ದೇಶ ಒಂದೇ: ಅದು ಖುಷಿಯತ್ತ ಸಾಗುವದು. ಆದ್ದರಿಂದ ನಿಮ್ಮ ಖುಷಿ ನಿಮಗೆ ಒಂದು ಅಸ್ಮಿತೆಯನ್ನು ಸೃಷ್ಟಿಸುವಂತಾಗಲಿ. ಆಗ ನಿತ್ಯಮಲ್ಲಿಗೆ ನೀವಾಗುತ್ತೀರಿ.

(26-04-2016 ರಂದು ಬೆಂಗಳೂರು ಆಕಾಶವಾಣಿಯಿಂದ ಪ್ರಸಾರವಾದ ಭಾಷಣ)