Wednesday, May 11, 2016

ಹರಾಜೆಂಬ ಕಲೆ


ಜಗ್ಗಿದ ಎಳೆ
ಉದುರಿದ ಹಳದಿಯೆಲೆ
ಬಿಚ್ಚಿದ ಹುರಿ
ತೊಟ್ಟಿಕ್ಕಿದ ಹನಿ
ಜಂಗುತಿಂದ ತಂತಿ
ಎದ್ದ ಹರಳು
ಒಡೆದ ಹಾಲು
ಬಿಟ್ಟ ಬಿರುಕು
ಬಿದ್ದ ತೂತು
ಗೋಣುಚೆಲ್ಲಿದ ಚಿಗುರು
ಬೆನ್ನುಮುರಿದ ಸೂರು;
ಹೃದಯವೊಂದು ಈ ಎಲ್ಲಹೊತ್ತು ಹೊರಟಿದೆ
ಕೊಳ್ಳುವವರುಂಟೆ?

ಅಲ್ಲೊಂದು ಗೌಜಿಲ್ಲದ ಗುಂಪು
ಭದ್ರಕಾವಲಿನ ಬದಿ ನೀಟಾದ ಫಲಕ
ಹಾವಕ್ಕೂ ಭಾವಕ್ಕೂ ಬಣ್ಣಕ್ಕೂ ಬೆರಗಿಗೂ
ಮೇಳಿಲ್ಲದ ತಾಳಿಲ್ಲದ ಸಂತೆ
ಅದರ ಹೆಸರು 'ಪರಿಪೂರ್ಣ!'

ಹೊತ್ತ ವಜ್ಜೆ ಹಿಮ್ಮೆಟ್ಟದ ಹೆಜ್ಜೆ
ಹೌಹಾರದ ಹೃದಯ
ಜೋರ ಉಸಿರೆಳೆತ ಒಂದೇ ಗಾಳಿಜಿಗಿತ
ನೇರ ಬಿಳಿ ಕ್ಯಾನ್ವಾಸಿನೆದೆಗೆ

ಎಳೆಗೆ ಎಲೆಗೆ ಹನಿಗೆ ಹಾಲಿಗೆ ಹರಳಿಗೆ
ತಂತಿಗೆ ತೂತಿಗೆ ಬಿರುಕಿಗೆ ಗೋಣಿಗೆ ಸೂರಿಗೆ ಬೆನ್ನಿಗೆಲ್ಲ ಚಿಗುರುತ್ತಿರುವ ಕೈಗಳು, ಆ ಕೈಯ್ಯ ಸರಪಳಿಯೊಳಗೆ ಮಂದಸ್ಮಿತ ಹೃದಯ, ಅದಮೈತುಂಬ ಇಂಚಿಂಚೆ ಬೆಳೆವ ಕಿವಿಗಳು... ಸಾಲವವು ಕೇಳಲೆರಡು;

ಸಾವಿರ... ಲಕ್ಷ... ಕೋಟಿ...
ಒಂದು ಸಲ ಎರಡು ಸಲ ಮೂರು...

ಅಪವಾದಕ್ಕೊಂದೊಂದರಂತೆ ಉಪಾಯ
ಹೊಸೆದಷ್ಟೂ ಆಯ ತಪ್ಪದ ಜೀವತೇಯ್ವಕಾಯ ಹಿಡಿದಿಟ್ಟಷ್ಟೂ ಚೌಕದೊಳಗೆ ಅದು ಕಲೆ ಕಳೆವ ಕಲೆ
ಒಡೆದ ಹೃದಯದ ಸಹಜಧ್ಯಾನಕ್ಕೆ ಇಲ್ಲಿಲ್ಲ ಸೆಲೆ

ಈ ಸಂತೆಗೆ ಪ್ರವೇಶ ಕಾದಿರಿಸಬೇಕೆ?



-ಶ್ರೀದೇವಿ ಕಳಸದ


No comments: