Monday, July 18, 2016

ಈ ಸಲ ಆವರ‍್ತನ ಮುಗಿಯಲಿಲ್ಲ...

ಸಿಂಕುತುಂಬ ಪಾತ್ರೆ, ಬುಟ್ಟಿತುಂಬ ಬಟ್ಟೆ, ಕುರ್ಚಿತುಂಬ ಆಟಿಕೆ, ಮಡಿಲಿಗಂಟಿದ ಮಗಳು...

ಬಾಲ್ಕನಿಯ ಕಂಬದಮೂಲೆಗೆ ಸದಾ ಕೂರುವ ಜೋಡಿಪಾರಿವಾಳ ತೋರಿಸಿ, ಗಾಳಿಸೀಳುತ್ತಿದ್ದ ಹದ್ದನ್ನೂ ತೋರಿಸಿ, ಎಳೆಕಾಲಿಗೆ ಕಚ್ಚಿದ ಚಿಕ್ಕಇರುವೆಗೆ ದೊಡ್ಡದಾಗಿ ಬೈದು, ಕಾಲಿಗೆ ಕ್ರೀಮನ್ನೂ ಹಚ್ಚಿ, ಇನ್ನಾದರೂ ಆ ಮಾಡು ತಾಯಿ ಎಂದು ವಿನಂತಿಸಿಕೊಂಡರೆ, ಕಾಗೆ ಬೇಕು... ಎಂದು ನಿಷಾಧಕ್ಕೆ ದನಿ ಸೇರಿಸುವುದೆ? ಅರೆ! ಎಷ್ಟೋ ತಿಂಗಳ ಮೇಲೆ ಪ್ರತ್ಯಕ್ಷನಾದ ಕಿವುಚುಮೂತಿಯ ಗಿಡ್ಡುಕಾಲಿನ ತೋಲುಮೈಯ ಪಗ್ಗೇಶ್ವರ, ಹೊಸಲುಂಗಿಯುಟ್ಟು ಬಂದಿದ್ದ ಅವನ ಸಾಕಪ್ಪ. ಅಂತೂ ಮಗಳು ತುತ್ತಿಗೆ ಬಾಯಿತೆರೆದಳು. ದಾರಿಹೋಕರ ಅಂಗಿಬಣ್ಣವೂ, ಅವರ ಕೈಚೀಲದೊಳಗಿನ ತರಕಾರಿ ಹಣ್ಣುಗಳು ಮತ್ತವುಗಳ ಸುತ್ತ ಕಥೆಗಳು ಹೀಗೆಲ್ಲ ಸಾಗಿದರೂ ಬಂದು ನಿಲ್ಲುವುದು ಮತ್ತದೇ ಸಮ್ಮಿಗೆ, ಪಪ್ಪ ಬೇಕೂಊಊಊ.

ಮೈಟಿ ರಾಜು ನಾನಲ್ಲ, ಛೋಟಾ ಭೀಮು ನಾನಲ್ಲ ಮಗಳೇ... ಅಲ್ಲೆಲ್ಲೋ ಮೀಟಿಂಗ್ ನಲ್ಲಿ ಕುಳಿತ ಪಪ್ಪನ ಕಾಲರ್ ಬೆರಳಲ್ಲಿ ಹಿಡಿದು, ಫ್ಲೈಓವರ್ರು, ಬಿಲ್ಡಿಂಗು ಹಾರಿ ಸುಂಯ್ಕ್ ಅಂತ ತಂದು ಕೊಡಲು... ನೀನೂ ಲಡ್ಡು ತಿನ್ನು, ಸ್ಟ್ರಾಂಗ್ ಆಗ್ತೀಯಾ ಎಂದು ಮಗಳು ತೋಳು ತೋರಿಸಿದಾಗ, ಈ ಭೀಮ ಮತ್ತವನ ಹಿಂಡು, ಲಡ್ಡುಬಿಟ್ಟು ತರಕಾರಿ ಸೊಪ್ಪು ತಿನ್ನುವುದು ಯಾವಾಗ, ಹಾಲು ಕುಡಿಯಲು ಕಲಿಯುವುದು ಯಾವಾಗ? ಎಂದುಕೊಂಡವಳೇ ಒಳಬಂದರೆ, ಸಮ್ ಬಾರದೇ ಇದ್ದೀತೇ ಒಂದು ಆವರ್ತ ಮುಗಿದಾದ ಮೇಲೆ? ಪಪ್ಪಾ...

ನಿನ್ನೆ ಹಟಮಾಡಿ ಕೊಂಡುತಂದ ಭೀಮನನ್ನು ಕೆಳಗಿನಮನೆ ಕರ್ಣನಿಗೆ ಬಿಟ್ಟುಕೊಟ್ಟು ಹತ್ತುನಿಮಿಷ ಕಣ್ಣುಮೂಗು ತುಂಬಿಕೊಂಡು ಆಲಾಪ ಮಾಡಿದ್ದಾಯಿತು. ಇದಿಲ್ಲದೆ ಅದು ಬೇಕು, ಅದಿಲ್ಲದೆ ಇದು ಬೇಕು, ಒಟ್ಟಿನಲ್ಲಿ ಬೇಕೇಬೇಕು... ಈಗೇನು ಬೇಕು? ಅಜ್ಜಿ! ಫೋನಿನಲ್ಲಿ ಅಜ್ಜಿಯ ಫೋಟೋ ಮುಟ್ಟಿದರೆ ಬಂದಿದ್ದು ಅಜ್ಜನ ದನಿ. ಅಜ್ಜಿ ಆ ಮೊಮ್ಮಗನೊಂದಿಗೆ ಫೋನಿನಲ್ಲಿ ಮಾತು ಮುಗಿಸುವ ತನಕ ನೀನು ನನಗೆ ಜನಗಣಮನ ಹೇಳಿಕೊಡು ಎಂದ ಅಜ್ಜ. ಅಲ್ಲಿಗೆ ಮತ್ತೊಂದು ತುತ್ತು ಹೊಟ್ಟೆಸೇರಿ, 'ಜನಗನಮನ ದಾಯಕ ಜಯಯೇ, ಬಾರಕ್ಕಾ ಬಾರೆ ಕಾಕಾ... ಪಂಜಾಬ್ ಚಿಂದ್ ಮತಾತಾ ಭಾರವೀ ಕಾಕಾ... ಉಚ್ಚಲ ಗಂಗಾ... ಜಯಯೇ ಜಯಯೇ ಜೈ ಹಿಂದ್. ಗುನ್ಮಾನಿಂಗ್ ಚಿಲ್ರನ್ಸ್!' ಅತ್ತ ಅಜ್ಜನ ಚಪ್ಪಾಳೆಯೊಂದಿಗೆ ಜೈಹಿಂದ್ ಎಂದು ದನಿಸೇರಿಸಿದ ಅಜ್ಜಿಯ ದನಿ ಕೇಳಿ ನಗುವ ಮೊಮ್ಮಗಳು. ಫೋಟೋ ತೋರಿಸಿ, 'ಇವಳು ನಮ್ಮಮ್ಮ ಅಂದೆ'. ಒಮ್ಮೆಲೆ ಮುಖ ಕೆಳಹಾಕಿಬಿಟ್ಟಳು ಮಗಳು. ಇನ್ನೇನು ಕಣ್ಣೀರಿಳಿಯಬೇಕು... ಇಲ್ಲ ಎಂದಿನಂತೆ ಇಂದೂ ನೀ ನನ್ನಮ್ಮ, ನಾ ನಿನ್ನಮ್ಮ ಕಂದಾ ಎಂದು ಅಪ್ಪಿಕೊಂಡರೂ ಮುಖ ಎತ್ತಲಿಲ್ಲ. 'ಸ್ವರೂನೇ ನಿನ್ನಮ್ಮ ನಾ ನಿನ್ನಮ್ಮ ಅಲ್ಲ ಆಯ್ತಾ?' ಅಜ್ಜಿಯೇ ಸ್ಪೀಕರಿನಲ್ಲಿ ಕೂಗಿ ಹೇಳಿದಾಗ ಮತ್ತೊಂದು ಆವರ್ತ ಮುಗಿದು ಸಮ್ ಬಂದೇ ಬಿಟ್ಟಿತ್ತು. ಪಪ್ಪಾ...

ಕಂದಾ, ಸಂಜೆ ನಾವು ನವಿಲು ನೋಡಲು ಕಾಡಿಗೆ ಹೋಗ್ತೀವಲ್ಲ, ಆಗ ಪಪ್ಪ ಬರುತ್ತೆ. ಅಲ್ಲೀತನಕ ನೀ ಊಟ ಮಾಡಿ, ಆಟ ಆಡಿ, ತಾಚಿ ಮಾಡಬೇಕು ಬಂಗಾರಿ... ಎಂದೆ. ಈ ಸಲ ಆವರ್ತ ಮುಗಿಯಲಿಲ್ಲ. ಹುಸಿಗೆ ಕೂಸು ಎತ್ತಿಕೊಂಡಿದ್ದು 'ಐಪ್ಯಾಂಟ್' (ಐಪ್ಯಾಡ್).


-ಶ್ರೀದೇವಿ ಕಳಸದ

ದುರಗವ್ ನುಂಗ್ಲಿ

”Hello... dnt be selfish by taking care of your children only !" ದೂರದಲ್ಲೆಲ್ಲೋ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಆಕೆ ಎದ್ದುಬಂದು ಕೂಗಿದಾಗ, ಒಂದು ನಿಮಿಷವೂ ಈ ಬೆಂಗಳೂರಿನಲ್ಲಿರಲಾರೆ ಎನ್ನುವಷ್ಟು ಕುಸಿದುಹೋದೆ. ಹೆಚ್ಚುತ್ತಿದ್ದ ಉಸಿರಿನ ವೇಗವನ್ನು ತಗ್ಗಿಸಿಕೊಳ್ಳುತ್ತಲೇ ಮೆಟ್ಟಿಲಿಳಿದು ಓಡುತ್ತಿದ್ದ ಮಗುವನ್ನು ಎತ್ತಿಕೊಂಡು ಬಂದೆ. ಸಿನೆಮಾ ಶುರುವಾದಾಗಿನಿಂದಲೂ ಓಡಾಡಿಕೊಂಡಿದ್ದ ಮಕ್ಕಳೊಂದಿಗೆ ನನ್ನ ಮಗಳನ್ನೂ ಸೇರಿಸಿ ಅವರಿನ್ನೇನು ಮೆಟ್ಟಿಲಿಳಿಯುತ್ತಾರೆ ಎನ್ನುವ ಹೊತ್ತಿಗೆ, ಹಿಡಿದುಕೊಂಡು ಬರುವ ಕೆಲಸವನ್ನು ನಾನೇ ವಹಿಸಿಕೊಂಡಿದ್ದೆ.

ಐದು ವರ್ಷದೊಳಗಿನ ಮಕ್ಕಳಲ್ಲಿ ಅವನಿ ಎಂಬ ಪುಟ್ಟಿಯ ಅಜ್ಜ ಅಜ್ಜಿ ಮತ್ತು ಅಮ್ಮ ನಮ್ಮ ಹಿಂಬದಿಯೇ ಕುಳಿತಿದ್ದರು. ಅವನಿ ಇಷ್ಟೊಂದು ಓಡಾಡುತ್ತಿದ್ದರೂ ಸುಮ್ಮನೇ ಕುಳಿತಿದ್ದಾರಲ್ಲ ಎನ್ನಿಸಿತು. ಮಗಳಿಗೆ ಚಕ್ಕುಲಿ ಕೊಡುವಾಗ, ಅವಳಿಗೂ ಕೊಡಹೋದರೆ, 'no my mom wl scold' ಎಂದಳು. ಎಷ್ಟು ಒತ್ತಾಯಿಸಿದರೂ ಅದೇ ಉತ್ತರ. ಮಗು ಅಲ್ಲವೆ? ಮತ್ತೆ ಮತ್ತೆ ಬಂದು ಬಳಿ ನಿಲ್ಲುತ್ತಿತ್ತು. 'Want to sleep' ಎನ್ನುತ್ತಿದ್ದಳು. ಹೋಗು ಅಮ್ಮನ ಬಳಿ ಮಲಗು ಎಂದರೆ ಸುಮ್ಮನಾಗುತ್ತಿದ್ದಳು. ಕೊನೆಗೆ, ಅವರಮ್ಮನೆಡೆ ತಿರುಗಿದ ಹಾಗೆ ಮಾಡಿದೆ. ಹೇಯ್ ತಗೋ ಚಕ್ಕುಲಿ, ಅಮ್ಮ ಪರ್ಮಿಷನ್ ಕೊಟ್ಟಿದಾರೆ ಅಂದೆ. Really? ಎಂದು ಕತ್ತಲಲ್ಲೇ ಕಣ್ಣರಳಿಸಿದ್ದು ನಿಚ್ಚಳವಾಗಿ ಕಂಡಿತು.

ಅರೆ ಈ ಅವನಿಯ ಮನೆಯವರೆಲ್ಲ ಯಾಕೆ ಹೀಗೆ ಸಂಬಂಧವಿಲ್ಲದವರಂತೆ ಕುಳಿತಿದ್ದಾರೆ? ಎಂದುಕೊಳ್ಳುತ್ತಲೆ, ಸಂಭಾಳಿಸುತ್ತಿದ್ದೆ. ಉಳಿದೆರಡು ಹುಡುಗರ ಅಪ್ಪ ಅಮ್ಮ ಎಲ್ಲಿ ಕುಳಿತಿದ್ದರೋ ಗೊತ್ತಿಲ್ಲ. ಇಷ್ಟೆಲ್ಲ ಆಗುತ್ತಿರುವಾಗಲೇ ಅದ್ಯಾರೋ ಹೆಣ್ಣುಮಗಳೊಬ್ಬಳು ನನ್ನ ಮೇಲೆ ಕೂಗಿ ಹೋಗಿದ್ದಳು; "Hello... dnt be selfish by taking care of your children only! ಹೀಗಾದಾಗಲೂ ಆ ಎರಡು ಮಕ್ಕಳ ಅಪ್ಪ ಅಮ್ಮಂದಿರು ಮುಂದೆ ಬರಲಿಲ್ಲ. 'ಬಾಯ್ಮುಚ್ಕೊಂಡ್ ಕೂತಿದ್ರೆ ಸರಿ ಈಗ' ಹಿಂದಿನಿಂದೊಂದು ಧ್ವನಿ ಬಂದಿತು. ಆಗಷ್ಟೇ ಅವನಿಯ ಅಮ್ಮನ ಧ್ವನಿಯ ಪರಿಚಯವಾಯಿತು. ಸಿನೆಮಾ ಮುಗಿಯಿತು, ನನ್ನೊಳಗೆ ನಾ ಒದ್ದಾಡಿಕೊಂಡು ಎದ್ದು ಬರುವಾಗ ಇಂಗ್ಲಿಷಿನಲ್ಲಿ ಒದರಿ ಹೋಗಿದ್ದವಳು ಕಂಡಳು. ಜೊತೆಗಿದ್ದವನ ತೋಳಿಗೆ ಕೈಹಾಕಿ ಕೊಕ್ಕಾಡಿಸಿ ನಗುತ್ತಿದ್ದಳು. ಬಹಳೇ ಒಪ್ಪವಾಗಿ ಅಲಂಕರಿಸಿಕೊಂಡಿದ್ದ ಅವಳು ಮತ್ತೊಮ್ಮೆ ತಿರುಗಿ ನೋಡಬಹುದಾದಷ್ಟು ಚೆಂದ ಕಾಣುತ್ತಿದ್ದಳು. ಕನ್ನಡದವಳಂತೂ ಅಲ್ಲ, ಬಹುಶಃ ಸಿನೆಮಾ ನೋಡುವಾಗ ಭಾಷೆ ಅರ್ಥವಾಗದೇ, ಹೀಗೆ ಕಿರಿಕಿರಿ ಮಾಡಿಕೊಂಡಳೋ ಏನೋ ಎಂದು ಮನಸನ್ನು ಸಮಾಧಾನಗೊಳಿಸಲು ನೋಡಿದೆ. ಆದರೆ, ಇಂಥ ಹುಸಿಕಾರಣಕ್ಕೆಲ್ಲ ನಾ ಸುಮ್ಮನಾಗಲಾರೆ ಎಂದಿತು ಒಳಮನಸ್ಸು.

ಈವತ್ತು ಮಧ್ಯಾಹ್ನ ಮಗಳನ್ನು ಶಾಲೆಯಿಂದ ಕರೆದುಕೊಂಡು ಬರುವಾಗಲೂ ಆಕೆ ಕಾಡುತ್ತಿದ್ದಳು, ಏಯ್ ನಿನ್ ದುರಗವ್ ನುಂಗ್ಲಿ ಎಂದು ಗಾಡಿ ಓಡಿಸುತ್ತಿದ್ದೆ. ಇನ್ನೇನು ತಲೆಮೇಲೊಂದ್ ಸಣ್ಣ ಟೊಂಗೆ ಮುರಿದುಕೊಂಡು ಬಿದ್ದು ಅದು ದೊಡ್ಡ ಸುದ್ದಿಯಾಗಿ... ಯಾಕ್ ಉಸಾಬರಿ ಅಂತ ಗಾಡಿ ಸೈಡಿಗೆ ಹಾಕೇಬಿಟ್ಟೆ. ಆ ಪರಿ ಗಾಳಿ ರೊಚ್ಚಿಗೆದ್ದಿತ್ತು, ಮರದ ಕೈ-ಬೆರಳುಗಳು ಉದುರಿ ಬೀಳುತ್ತಿದ್ದವು. ಅಲ್ಲೊಂದು ಅಂಗಡಿ ಹೊಕ್ಕೆ. ಸೊಪ್ಪಿನಜ್ಜನೂ ಸೈಕಲ್ ನಿಲ್ಲಿಸಿದ. ಎಲ್ಲಾ ಸೊಪ್ಪುಗಳ ಮಧ್ಯೆ ತಾಜಾ ಅನ್ಸಿದ್ದು ಈರುಳ್ಳಿಸೊಪ್ಪು. ಸೇಟಮ್ಮಂಗಾದ್ರೆ ಇಪ್ಪತ್ತು ನಿಮಗಾದ್ರೆ ಹತ್ತು ಅಂದ. ಅಷ್ಟೊತ್ತಿಗೆ ಗಾಳಿ ಶಾಂತಗೊಂಡು ಮಳೆ ಹನಿಯತೊಡಗಿತು. ಅಲ್ಲಿಗೆ ದುರಗವ್ವ ಪ್ರತ್ಯಕ್ಷಳಾಗೇಬಿಟ್ಟಳು. ಎದೆಗೆ ಕೂಸುಕಟ್ಟಿಕೊಂಡು, ತಲೆಮೇಲೆ ದುರುಗವ್ವನನ್ನು ಹೊತ್ತುಕೊಂಡು ದ್ಯಾಮವ್ವ ಬಂದಳು. ಶಿರಸಿಯ ದೇವಿಕೆರೆ ಅವಳ ಊರು. ಅವಳ ಜೊತೆಗಿದ್ದ ಹುಡುಗಿ ಗಿರಿಜಾ.

'ನಮ್ಮೂರ್ಕಡೆ ಈಗ ಜೋರ್ಮಳಿ, ದುಡಕಂಡ್ ತಿನ್ನಕ್ಕಾಗಲ್ರಿ. ವರ್ಸದಾಗ ಆರ್ತಿಂಗ್ಳು ಬೆಂಗ್ಳೂರಿಗ್ ಬರ್ತೀವ್ರಿ. ಇಲ್ಲೇ ಗೊಲ್ರಹಟ್ಟ್ಯಾಗ್ ಗುಡಸ್ಲ ಹಾಕ್ಕೊಂಡೇವಿ, ಒಂದೈವತ್ ಮಂದಿ ಬಂದೇವಿ' ಕುಸುಕುಸು ಮಾಡಿ ಎದೆಗೆ ಮುಖ ತಿಕ್ಕುತ್ತಿದ್ದ ನಾಲ್ಕು ತಿಂಗಳ ಸಂದೀಪನಿಗೆ ನಿಂತುಕೊಂಡೇ ಹಾಲು ಕುಡಿಸತೊಡಗಿದಳು ದ್ಯಾಮವ್ವ. ಅವಳ ಜತೆಗಿದ್ದ ಸಂಬಂಧಿಕರ ಹುಡುಗಿಯ ಶಾಲೆ ಬಗ್ಗೆ ಕೇಳಿದಾಗ, ಆಕೆ ಹೋಗುವುದಿಲ್ಲ ಎಂದಳು. ಮತ್ತೆ ನಿಮ್ಮ ಮಕ್ಕಳ ಶಾಲೆ ಗತಿಯೇನು? ಹೀಗಾದ್ರೆ ಎಂದಿದ್ದಕ್ಕೆ, ಎಲ್ಲಿರುತ್ತೀವೋ ಅಲ್ಲಿಗೆ ಕಳಿಸುತ್ತೇವೆ ಎಂದಳು. ಈ ಹುಡುಗಿಗೆ ವಯಸ್ಸೆಷ್ಟು ಅಂದಿದ್ದಕ್ಕೆ ಇಬ್ಬರೂ ಗೊತ್ತಿಲ್ಲ ಎಂದು ನಕ್ಕರು. ಪಿಚ್ಚರ್ ನೋಡ್ತೀಯಾ ಅಂದಿದ್ದಕ್ಕೆ ಆ ಹುಡುಗಿ, 'ಹಾಂ ದರ್ಶನ್ ಸೇರ್ತಾನ' ಅಂದ್ಲು. ನೀವ್ ಯಾವ ಪಿಚ್ಚರ್ ನೋಡಿದ್ರಿ ಎಂದು ದ್ಯಾಮವ್ವನಿಗೆ ಕೇಳಿದ್ದಕ್ಕೆ, 'ನಾವೆಲ್ ನೋಡಾಕ್ ಹೋಗುಣ್ರಿ. ಒಂದೂ ಪಿಚ್ಚರ್ ನೋಡೇ ಇಲ್ಲ. ನಮ್ ಗಂಡಸ್ರು ಕರ್ಕೊಂಡ್ ಹೋಗೂದಿಲ್ಲ, ನೀವ್ ಹೋಗಬಾಡದು ಅಂಥಲ್ಲೆಲ್ಲ, ಮನ್ಯಾಗ ಇರಬೇಕು ಮಕ್ಕಳ್ನ್ ನೋಡ್ಕೊಂಡ್ ಅಂತ ಹೇಳಿ ಹೋಗ್ಬಿಡ್ತಾರರಿ. ಮಕ್ಕಳ್ ಕೇಳೂದಿಲ್ ನೋಡ್ರಿ, ಬೆನ್ ಹತ್ತಿ ಹೊಕ್ಕಾವ್ರಿ' ಆಕೆ ಹೀಗೆ ಹೇಳುವಾಗ ಸಿಟ್ಟು, ಬೇಸರ, ನೋವು, ಹತಾಶೆ, ನಿರೀಕ್ಷೆ ಏನೊಂದೂ ಕಾಣಲಿಲ್ಲ. ಮಳೆ ಸೆಳಕು ಜೋರಾಯ್ತು. ದುರುಗವ್ವನ ಅಲಂಕಾರ ನೋಡಬೇಕೆಂದರೆ ಆಕೆಯೋ ಗೋಡೆಕಡೆ ಮುಖ ತಿರುವಿದ್ದಳು.

ಈಗೇನೋ ಮಳೆ. ಊರಿಗೆ ಹೋದಮೇಲೆಯೂ ದುರಗವ್ವನೇ ಹೊಟ್ಟೆ ತುಂಬಿಸುತ್ತಾಳೇನು ಅಂದಿದ್ದಕ್ಕೆ,'ಬೆಂಗ್ಳೂರ್ನ್ಯಾಗಷ್ಟ ದುರಗವ್ರಿ. ನಮ್ಮೂರಾಗ ಇಕಿಂದೇನೂ ನಡ್ಯಾಂಗಿಲ್ರಿ. ತಿರಕ್ಕೊಂಡ್ ದುಡಕೊಂಡ ತಿನಬೇಕು ನಾವು. ಹಾವೇರಿಂದ ಹೋಲ್ಸೇಲ್ ಪಿನ್ನಾ, ಬಾಚಣಕಿ, ಟಿಕಳಿ, ಏರ್ಪಿನ್ನಾ ತಂದು ಮಾರ್ತೇವ್ರಿ. ಈ ಸಂದೀಪಗ ಮೂರು ಅಕ್ಕಗೋಳು ಅದಾರ್ರಿ' ಬಗಲೊಳಗಿನ ಕೂಸಿನ ಕೊಂಚಿಗಿ ಸರಿ ಮಾಡಿ ನಕ್ಕಳು. ಮಳೆ ನಿಲ್ಲುತ್ತಿದ್ದಂತೆ, ತಲೆ ಮೇಲೆ ದುರಗವ್ವನನ್ನು ಹೊತ್ತುಕೊಂಡು ಹೊರಟೇಬಿಟ್ಟಳು.
ಈಗಲೂ ದುರಗವ್ವ ನನಗೆ ಬೆನ್ನು ಮಾಡೇ ಹೊರಟಳು.

-ಶ್ರೀದೇವಿ ಕಳಸದ


ಗಂಗಾಚಲನ ತಂದ ಸಂಚನಲ


ಲಯವಿಲ್ಲದ ಓಟ, ನಾದವಿಲ್ಲದ ಹರಿವು ಎಲ್ಲಿಲ್ಲ? ಎಲ್ಲಾ ನಮ್ಮೊಳಗೇ ಇವೆ. ಸಮಾಧಾನ ಮತ್ತು ಶ್ರದ್ಧೆಯಿಂದ ಕಂಡುಕೊಳ್ಳುತ್ತಾ ಹೋದರೆ ಛಲ ನಮ್ಮನ್ನು ಕೈಹಿಡಿದು ನಡೆಸುತ್ತದೆ. ಸೃಷ್ಟಿಯ ದಾರಿ ತಾನೇತಾನಾಗಿ ವಿಸ್ತರಿಸುತ್ತಾ ಹೋಗುತ್ತದೆ.   
     

ನಿಲ್ಲಲು ಕಾಲುಗಳೇ ಬೇಕಂತೇನಿಲ್ಲ. ದೃಢಸಂಕಲ್ಪ, ಬದ್ಧತೆ, ಪರಿಶ್ರಮವಿದ್ದರೆ ಆ ’ಕಾಲ’ವನ್ನೂ ನಿಲ್ಲಿಸಬಹುದು. ಕಾಲವನ್ನು ನಿಲ್ಲಿಸುವುದು ಎಂದರೆ, ಕ್ರಿಯಾಶೀಲತೆಯಿಂದ ಜಗತ್ತನ್ನು ಜೀವಂತವಾಗಿಡುವುದು, ಜೀವಂತಿಕೆ ಎಂದರೆ,  ಅರಳುತ್ತಾ ಅರಳಿಸುವುದು. ಅರಳಿಸುವುದು ಎಂದರೆ, ತನ್ನಂಥ ಹೂಹೃದಯಗಳನ್ನು ಸೃಷ್ಟಿಸುವುದು. ಸೃಷ್ಟಿಯೆಂದರೆ  ನುಡಿಯುವುದು, ನುಡಿಸುವುದು, ಮಿಡಿಯುವುದು. ಸಂಗೀತ ಜಗತ್ತಿಗೆ ಹೀಗೊಂದು ನುಡಿತಮಿಡಿತದ ವಿಶಿಷ್ಟ ಲಯಕಟ್ಟಿಕೊಟ್ಟವರು ಹಿರಿಯ ತಬಲಾವಾದಕ ಪಂ. ಶೇಷಗಿರಿ ಹಾನಗಲ್. ಮೂರು ತಿಂಗಳ ಹಿಂದೆಯಷ್ಟೇ ಅಗಲಿದ ಈ ಲಯಮಾಂತ್ರಿಕನಿಗೆ ಭಾರತೀಯ ವಿದ್ಯಾಭವನದಲ್ಲಿ ’ನಾದ ನುಡಿ ನಮನ’ ಅರ‍್ಪಿಸಲಾಯಿತು.

ಗಂಗಾ ಚಲನ್
ತನ್ನ ಕಾಲುಗಳನ್ನು ಪೋಲಿಯೋ ನುಂಗಿರಬಹುದು ಆದರೆ ರಟ್ಟೆಗಳ ಶಕ್ತಿಯನ್ನಲ್ಲ, ಮನೋಸ್ಥೈರ‍್ಯವನ್ನಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡೇ ಅವರು ಸಂಗೀತದ ಬಂಡಿ ಏರಿದರು. ಆ ಛಲವೇ, ಪರಂಪರೆಯ ಹೊರತಾಗಿ ಸ್ವಂತಿಕೆಗೆ ಒತ್ತು ಕೊಡುವಂತೆ ಮಾಡಿತು. ಅದೆಲ್ಲದರ ಫಲವೇ, ಅವರ ಶಿಷ್ಯಬಳಗ ಮತ್ತು ಅವರು ಪ್ರಸ್ತುತಪಡಿಸಿದ ’ಗಂಗಾಚಲನ್’. ಗಂಗಾ ಎಂದರೆ ನದಿ, ಗಂಗಾ ಎಂದರೆ ಅಕ್ಕ ಗಂಗೂಬಾಯಿ ಹಾನಗಲ್. ಗಂಗಾನದಿಯ ಹರಿವು ಮತ್ತು ಗಂಗೂಬಾಯಿಯವರ ಗಾನಲಹರಿಯನ್ನು ಸಾಂಕೇತಿಸುವ ವಿಶಿಷ್ಟ ಲಯವಿದು. ಇದನ್ನು ತೀನ್ ತಾಲದೊಳಗೆ ಬಂಧಿಸಿ,  ಪೇಶ್ಕಾರ‍್, ಚಕ್ರಧಾರ‍್, ಕಾಯ್ದಾಗಳ ಮೂಲಕ ’ಗಂಗಾ ಚಲನ್’ ಅನ್ನು ಜಬರ‍್ದಸ್ತಾಗಿಸಿದ್ದು ಹಿರಿಯ ತಬಲಾವಾದಕ ಉದಯರಾಜ್ ಕರ‍್ಪೂರ‍್ ನಿರ‍್ದೇಶನದ ವಾದನವೃಂದ. ಇವರಿಗೆ ಜೊತೆಯಾದವರು ಗುರುಮೂರ‍್ತಿ ವೈದ್ಯ, ಕಿರಣ್ ಯಾವಗಲ್, ಪ್ರಕಾಶ್ ದೇಶಪಾಂಡೆ, ಅಜಯ್ ಹಾನಗಲ್, ವಿಕಾಸ್ ನರೇಗಲ್.

ಕಾಯ್ದಾ ಎಂದರೆ ಒಂದೊಂದು ಪೆಟ್ಟಿಗೆ ನಾಲ್ಕು ಮಾತ್ರೆಗಳನ್ನು ನುಡಿಸುವುದು. ಇದನ್ನು ದುಪ್ಪಟ್ಟು ಲಯದಲ್ಲಿ ನುಡಿಸಿದಾಗ ಎಂಟು ಮಾತ್ರೆಗಳಾಗುತ್ತವೆ. ಹೀಗೆ ಲಯವನ್ನು ದುಪ್ಪಟ್ಟು, ಚೌಪಟ್ಟು, ಎಂಟುಪಟ್ಟು ಮಾಡಿಕೊಂಡು ನುಡಿಸುವುದು ಚಾಲ್ತಿಸಂಗತಿ. ಆದರೆ ಒಂದು, ಎರಡು, ಮೂರು, ನಾಲ್ಕು, ಐದು, ಆರು, ಏಳು ಮತ್ತು ಎಂಟರ ತನಕ ಕ್ರಮವಾಗಿ ಲಯವನ್ನು ವಿಸ್ತರಿಸುವ ವೈಶಿಷ್ಟ್ಯ ಕಾಣುವುದು ’ಗಂಗಾ ಚಲನ್’ದಲ್ಲಿ ಮಾತ್ರ. ಇಂಥ ಚಲನೆಗಳ  ಜೀವಾಳವೇ ’ಬರ‍್ಜ್ಯಾ’. ಬರ‍್ಜ್ಯಾ ಎಂದರೆ, ಒಂದು ಲಯದಿಂದ ಇನ್ನೊಂದು ಲಯಕ್ಕೆ ಪ್ರವೇಶಿಸುವಾಗ ಸಿಗುವ ಲಯವನ್ನು ಹಿಡಿತಕ್ಕೆ ನುಡಿತಕ್ಕೆ ತೆಗೆದುಕೊಳ್ಳುವುದು. ಇಂಥ ಚಲನ ಸೃಷ್ಟಿಯ ಹರಿಕಾರನನ್ನು ಶಿಷ್ಯರು ಈ ’ಗಂಗಾ ಚಲನ’ದ ಮೂಲಕ ಸ್ಮರಿಸಿದಾಗ ಚಪ್ಪಾಳೆಯ ಸುರಿಮಳೆ.     

ಇಂದಿರಾ ತಾಳ
೧೯೬೯ರ ಸಮಯ. ನಿಲಯ ಕಲಾವಿದರೆಲ್ಲ ತಮ್ಮ ಕೆಲಸದ ಖಾಯಮಾತಿಯ ಬಗ್ಗೆ ಆತಂಕವಿಟ್ಟುಕೊಂಡೇ ಆಕಾಶವಾಣಿಯಲ್ಲಿ ಕಾರ‍್ಯ ನಿರ‍್ವಹಿಸಬೇಕಾದಂಥ ಸಂದರ‍್ಭ. ಮೂರು ತಿಂಗಳಾದ ನಂತರ ಕಾಂಟ್ರ‍್ಯಾಕ್ಟ್ ಮುಗಿದುಬಿಡುತ್ತಿತ್ತು. ಹೀಗಾದಾಗ ಕಲಾವಿದರೊಂದಿಗೆ ಅವರ ಕುಟುಂಬವೂ ವಿಚಲಿತಗೊಳ್ಳುತ್ತಿತ್ತು. ಆಗ ಶೇಷಗಿರಿಯವರ ಮುಂದಾಳತ್ವದಲ್ಲಿ ಅಂದಿನ ಪ್ರಧಾನಮಂತ್ರಿಗಳಾಗಿದ್ದ ಇಂದಿರಾಗಾಂಧಿಯವರಿಗೆ ಮನವಿ ಪತ್ರವೊಂದು ತಲುಪುತ್ತದೆ. ಇದನ್ನು ಪರಿಗಣಿಸಿದ ಇಂದಿರಾ, “ಕಲಾವಿದರು ದೇಶದ ಸಾಂಸ್ಕೃತಿಕ ರಾಯಭಾರಿಗಳು, ಕ್ರಿಯಾಶೀಲ ಮನಸ್ಸುಗಳಿಗೆ ಶಾಂತಚಿತ್ತಬೇಕು. ಪೂರಕ ವಾತಾವರಣ ಬೇಕು” ಎಂಬ ಆಶಯದೊಂದಿಗೆ, ನಿಲಯದ ಕಲಾವಿದರ ಕೆಲಸವನ್ನು ಖಾಯಂಗೊಳಿಸುತ್ತಾರೆ. ಈ ಉಪಕಾರಾರ‍್ಥವಾಗಿ ಒಂಬತ್ತೂವರೆ ಮಾತ್ರೆಯ ’ಇಂದಿರಾ ತಾಳ’ವನ್ನು ಶೇಷಗಿರಿಯವರು ರಚಿಸುತ್ತಾರೆ. ಇವರ ಶಿಷ್ಯ ಮಧುಮಲೈ ಈ ತಾಳವನ್ನು ಶ್ರೋತೃಗಳಿಗೆ ಪರಿಚಯಿಸಿ, “ಹೀಗೊಂದು ತಾಳವಿದೆ ಗೊತ್ತೆ?” ಎಂದು ಆಡಾಡುತ್ತಲೇ ಕೇಳಿದ ಹಾಗಿತ್ತು. ಯಾವ ವಿದ್ವತ್ ಪ್ರದರ‍್ಶನದ ಭಾರ ಅಲ್ಲಿರಲಿಲ್ಲ.  

ಮಿಯಾಮಲ್ಹಾರ‍್ ವೈಭವ
ಆಯಾ ರಾಗದ ಸ್ವರಗಳನ್ನು ಅಚ್ಛೆಯಿಂದ ಪೋಷಿಸಿದರೆ ಮಾತ್ರ ರಾಗವೊಂದು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ;  ಮೋಡಕಟ್ಟಿದ ಆಕಾಶದೊಳಗೆ ಸುಳ್ಳೇಸುಳ್ಳೇ ನಕ್ಷತ್ರ-ಚಂದ್ರ ತೋರಿಸುತ್ತ ತಾಯೊಬ್ಬಳು ಮಗುವಿಗೆ ಮಮ್ಮು ಉಣ್ಣಿಸುತ್ತಿದ್ದಂತೆ ರಾಗವಿಸ್ತಾರ. ಮಳೆ ಹನಿಯುವ ಮೊದಲು, ಮೋಡಗಳ ಘರ‍್ಜನೆಯಂತೆ ತಾನುಗಳ ಹರಿವು, ಆ ಹರಿವಿಗೆ ಕಿಟಕಿ ಹಿಂದೆ ಅವಾಕ್ಕಾಗಿ ಕುಳಿತಂತೆ ಅಮ್ಮ ಮಗುವಿನ ದೃಶ್ಯ. ಹೀಗೊಂದು ರಾಗರೂಪ ಕಟ್ಟಿಕೊಡುತ್ತ  ಮಿಂಚಿನಂಥ ಮುಖಡಾಗಳನ್ನು ಸೃಷ್ಟಿಸುತ್ತ ಸಾಗಿದವರು ಡಾ. ನಾಗರಾಜರಾವ್ ಹವಾಲ್ದಾರ‍್. ಇವರು ಪ್ರಸ್ತುತಪಡಿಸಿದ್ದು ವರ‍್ಷಾರಾಗ ಮಿಯಾಮಲ್ಹಾರ‍್. ಶುದ್ಧ ನಿಷಾಧದ ಆರ‍್ದ್ರ ಸೊಬಗು ಮತ್ತು ಮಂದ್ರಸಪ್ತಕದ ಮೇಲಿನ ಗಂಭೀರ ಸೌಂದರ‍್ಯವನ್ನು ಅನುಭವಕ್ಕೆ ಕಲ್ಪಿಸಿಕೊಡುತ್ತ ಕೇಳುಗರನ್ನು ಗಾಯನದ ತೆಕ್ಕೆಯೊಳಗೆ ಎಳೆದುಕೊಂಡರು. ತಬಲಾದಲ್ಲಿ ಎನ್ ನಾಗೇಶ್ ಹಿತಮಿತವಾಗಿ ಸಾಥಿಯಾದರೆ, ಹಾರ‍್ಮೋನಿಯಂ ಬದಲಾಗಿ ಸಾರಂಗಿಯಲ್ಲಿ ಉಸ್ತಾದ್ ಫಯಾಝ್ ಖಾನ್ ಜೊತೆಯಾಗಿದ್ದು ವಿಶೇಷವಾಗಿತ್ತು.

ಅಮೃತವರ‍್ಷಿಣಿಯ ಆಮೋದ
“ಶರಣ ತಿಹಾರಿ ಆಯೋ ನಿತ ತೋರಿ ಹೀ ಆಸ ಧರೂ ರಖ ಲೀಜೆ ಮೋರಿ ಶರನ” ಅಂದರೆ, “ಹೇ ಈಶ್ವರ, ಸುಖದ ನೋಟವುಳ್ಳ ರಸಿಕ ನೀನು. ಆದಾಗ್ಯೂ ಶರಣಾಗಿ ನಿನ್ನ ಬಳಿ ಬಂದಿದ್ದೇನೆ, ನನಗೀಗ ಭರವಸೆಯ ಬೆಟ್ಟದಂತೆ ನೀ ಕಾಣುತ್ತಿದ್ದಿ...” ಹೀಗೆ ತನ್ನ ತಾ ಅರ‍್ಪಿಸಿಕೊಳ್ಳುವ ಭಾವಲಹರಿಯನ್ನು ಹೊಂದಿರುವ, ವಿಲಂಬಿತ್ ಏಕತಾಲದಲ್ಲಿ ಬಂಧಿಯಾದ ಬಂದಿಶ್ ಅಮೃತವರ‍್ಷಿಷಿಯದ್ದು. ಹಿಂದೂಸ್ತಾನಿ ಕಲಾವಿದರು ಈ ರಾಗವನ್ನು ಹಾಡುವುದು ವಿರಳ. ಆದರೆ ವರ‍್ಷಾಋತು ಹಿನ್ನೆಲೆಯಲ್ಲಿ ಇಡೀ ಕಾರ‍್ಯಕ್ರಮಕ್ಕೆ ಮುಕುಟುವಿಟ್ಟಂತೆ ಹಾಡಿದರು ಪಂ ಪರಮೇಶ್ವರ‍್ ಹೆಗಡೆ. ಹಂತಹಂತವಾಗಿ ಶಿವನನ್ನು ಒಲಿಸಿಕೊಳ್ಳುವ ಸಂಭಾಷಣಾರೀತಿಯ ಆಲಾಪ್, ಸರಗಮ್, ಲಯಕಾರಿ... ಅವರ ಮಾಧುರ‍್ಯಪ್ರಧಾನ ಬನಿಯ ಮೂಲಕ ಕೇಳುಗರ ತನ್ಮಯತೆ ಸಾಧಿಸಿತ್ತು. “ನನ್ನೀ ಶರಣಾಗತಿಯನ್ನು ಉಪೇಕ್ಷಿಸಿದರೆ ನೋಡು!” ಎಂದು ನಾಜೂಕಾಗಿ ಗುಡುಗಿದಂತೆ ತಾನುಗಳ ವೈಭವ. “ಕರುಣೆಯೇ ಇಲ್ಲವೆ ನಿನಗೆ?” ಎಂದು ತಾರಕ ಸ್ಥಾಯಿಯಲ್ಲಿ ಪಂಚಮದ ತನಕ ಕ್ರಮಿಸಿ ತೀವ್ರಭಾವದಲ್ಲಿ ಭಿನ್ನವಿಸಿಕೊಂಡಿದ್ದು... ಮುಂದೆ ಧೃತ್ ನಲ್ಲಿ ತೆರೆದುಕೊಂಡ ಬಂದಿಶ್, “ಸಬತ  ಸುರ ಗಾತ ಹೇ ಗುನಿಜನ, ಗಾತ ಗಾತ ಹೇ ಮನ ಹರನಕೀ, ಸುಖದ ಕಾರನ, ದುಃಖ ಹರನ, ಸುಧಾರಂಗ ಸರನ ಹೇ ಸುರತಾನ’. ನಂತರ ಭೈರವಿಯಲ್ಲಿ ಕಬೀರರ ಭಜನ್ ಶುರುವಾದಾಗ, ಶ್ರೋತೃವೃಂದ ನಾದಸಾರ‍್ಥಕತೆಯಲ್ಲಿ ಮಿಂದಿದ್ದಿತ್ತೆಂದರೆ, ಅದಕ್ಕೆ ಕಾರಣ ಕಾರ‍್ಯಕ್ರಮದ ರೂವಾರಿ ಪಂ. ರವೀಂದ್ರ ಯಾವಗಲ್ ಅವರ ರಂಗೇರಿದ ತಬಲಾ ಮತ್ತು ಮಧು ಭಟ್ ಅವರ ಹಾರ‍್ಮೋನಿಯಂನ ಮಿತ ಸಾಥ್.

ನಲಿವಿಗೆ, ನೋವಿಗೆ, ಪ್ರೀತಿಗೆ, ವಿರಹಕ್ಕೆ, ಅಂಕುರಕ್ಕೆ, ಆಸರೆಗೆ, ಸ್ಮರಣೆಗೆ, ಕೃತಜ್ಞತೆಗೆ, ಸೂತಕಕ್ಕೆ, ಸಂಭ್ರಮಕ್ಕೆ ಅಷ್ಟೇ ಏಕೆ ನಮ್ಮನ್ನು ನಾವು ಕಂಡುಕೊಳ್ಳಲೂ ನಾದವೇ ಬೇಕು. ನದಿಯೇ ನಾವಾಗಿ ಹರಿಯಬೇಕು, ಆಗಷ್ಟೇ ಸಮಾಧಾನ, ಸಾಕ್ಷಾತ್ಕಾರ.


-ಶ್ರೀದೇವಿ ಕಳಸದ

(ಮೆಟ್ರೊ, ಪ್ರಜಾವಾಣಿಯಲ್ಲಿ ಪ್ರಕಟ)

ಕಾಣದೆ ಹೋದೆಯಾ ಚಂದಿರ?


'
ನೀ ಹೊರಗ್ ಬಾ'
ಪರ್ವಾಗಿಲ್ಲ ಹೇಳೋ
'
ಇಲ್ಲ ನೀ ಬಾ ಹೊರಗೆ'
ಏನಂತ ಇಲ್ಲೇ ಹೇಳು
'
ನಂಗ್ ನೂರು ರೂಪಾಯಿ ಕೊಡು ಬೇಗ, ಅಲ್ ಕಾಯ್ತವ್ರೆ'
ಹಬ್ಬಾ ಎಂಗಾಯ್ತೊ
'
ಏಯ್ ನೀ ಕಾಸ್ಕೊಡು'
ಯಾರೆಲ್ಲಾ ಬಂದಿದ್ರು?
'
ಎಲ್ಲಾ ಬಂದಿದ್ರು ಬೇಗ ಕೊಡ್ನೀ ಕಾಸು, ಅಲ್ ಕಾಯ್ತವ್ರೆ'
ನನ್ನ ಕೇಳಿದ್ರಾ?
ಮೋವ್ ಆಚೆ ಬಾ ನೀ, ಕಾಸ್ ಕೊಡ್ಬಾ
'
ಬಿರಿಯಾನಿ ಮಾಡಿದ್ರಾ, ನನ್ನ ಕೇಳಿದ್ರಾ?
'
ಹೂಂ ಮಾಡಿದ್ರು, ಕೊಡು ಮೊದ್ಲು ನೀ'
ಯಾರಾದ್ರೂ ನನ್ನಾ ಕೇಳಿದ್ರೇನೋ... ತಗೋ ನೂರೇ ರೂಪಾಯಿ ಇರೋದು
'
ಅಲ್ಕಾಯ್ತವ್ರೆ ಬೇಗ್ನೆ ಕೊಡು'
ಇಲ್ಲೇಳೋ, ನನ್ನಾ....
'
ಬತ್ತೀನಮ್ಮೋಯ್'
ಕೇ... ಳಿ.... ದ್ರೇ ..ನೋ...

ಕೈಯಲ್ಲಿರೋ ನೂರರ ನೋಟು ಅವನ ಓಟದ ವೇಗ ಹೆಚ್ಚಿಸಿತೇನೋ... ಸರದಿಗಾಗಿ ಕಾಯುತ್ತ ಕುಳಿತ ರೋಗಿಗಳ ಮಧ್ಯೆಯೇ ರೊಂಯ್ ಎಂದು ಓಡಿಬಿಟ್ಟ ನಿನ್ನೆ ಆ ಪೋರ. ಹೀಗೊಂದು ಸಂಭಾಷಣೆ ಕಿವಿಗೆ ಬೀಳುತ್ತಿದ್ದಂತೆ, ಯಾರದು ನೂರರ ನೋಟು ಕೊಟ್ಟವರು ಎಂದು ಒಳಕೋಣೆಯಲ್ಲಿ ಇಣುಕಿದೆ. ಇಷ್ಟೇಇಷ್ಟು ಜಾಗ, ಅದರ ಮೂಲೆಯಲ್ಲಿ ಮಬ್ಬುಬೆಳಕಿನಲ್ಲಿ ಮಲ್ಲಿಗೆ ಕಟ್ಟುತ್ತ ಆಕೆ ಕುಳಿತಿದ್ದರು. ಸುಮ್ಮನೆ ನೋಡಿ ವಾಪಸ್ ಹೊರಬಂದು, ನನ್ನ ಸರದಿಗಾಗಿ ಕಾಯುತ್ತ ಕುಳಿತೆ. ಯಾಕೋ... ಯಾರೋ ಎದೆಗೆ ತಣ್ಣೀರು ಉಗ್ಗುತ್ತಿದ್ದಾರೆನ್ನಿಸತೊಡಗಿತು. ಮತ್ತೆ ಎದ್ದು ಹೋದೆ, ಆಕೆ ಚಕ್ಕನೆ ಮುಖವೆತ್ತಿದಳು. ಎರಡು ಮೊಳ ಹೂ ಬೇಕಿತ್ತು ಎಂದೆ. ಅವಳ ನಗುವನ್ನು ಮಬ್ಬುಗತ್ತಲೂ ಬಿಟ್ಟುಕೊಟ್ಟಿತು. ಮೊಳಕೈ ಅಳತೆ ಮಾಡಿ, ನೋಡಿ ಕಡಿಮೆ ಕೊಟ್ಟಿಲ್ಲ ಎಂದಳು. ಅಯ್ಯೋ ತಾಯಿ ನೀ ಎಷ್ಟು ಕೊಟ್ಟರೂ ಸರಿ... ಎಂದು ಮನದಲ್ಲೇ ಅಂದುಕೊಂಡು ಕೈಚಾಚಿದೆ. ಕವರ್ ಇಲ್ಲ ಎಂದಳು, ಪರವಾಗಿಲ್ಲ ಎಂದೆ. ಚಿಲ್ಲರೆ ವಾಪಸ್ ಕೊಡಬಂದಾಗ, ಬೇಡ ನೀನೇ ಇಟ್ಟುಕೋ ಎಂದರೂ ಕೇಳಲೇಇಲ್ಲ.

ರಿಸೆಪ್ಷನಿಸ್ಟ್ ಗೆ ಈಕೆಯ ಬಗ್ಗೆ ಕೇಳಿದಾಗ, 'ಏನೋ ಆಗಾ ವಯ್ಸಲ್ಲಿ ಪ್ರೀತಿ ಮಾಡ್ಬಿಟ್ರು. ಈಕೆ ಹಿಂದೂ ಆತ ಮುಸ್ಲಿಮ್. ಗಂಡ್ಮಕ್ಳೂ ಆದ್ವು, ಮೊಮ್ಮಕ್ಕಳೂ ಬಂದ್ವು. ಈಕೆ ಇಪ್ಪತ್ತೈದ್ ವರ್ಷದಿಂದ ಬೇರೆ ಇದ್ದಾಳೆ. ಒಂದ್ ಹೆಣ್ಮಗು ಸಾಕ್ಕೊಂಡವ್ಳೆ, ಅದೀಗ ಡಿಗ್ರಿ ಓದ್ತದೆ. ಡಾಕ್ಟರ್ರೇ ಎಲ್ಲಾ ಖರ್ಚು ನೋಡ್ಕಂಡ್ ಬಂದವ್ರೇ ಆಗ್ಲಿಂದಾನೂವೇ. ಆಗ್ಲೇ ಮೊಮ್ಮಗ ಬಂದು ಕಾಸ್ ಈಸ್ಕೊಂಡ್ ಹೋದ' ಹೀಗೆ ಒಂದೇ ಉಸಿರಲ್ಲಿ ಹೇಳಿಮುಗಿಸುತ್ತಿದ್ದಂತೆ, ನನ್ನ ಸರದಿ ಬಂದಿತು. ನೂರು ರೂಪಾಯಿ ಮತ್ತವಳ ಹುಸಿಬಿದ್ದ ನಿರೀಕ್ಷೆ ಕುರಿತು ಡಾಕ್ಟರಿಗೆ ಹೇಳಿದೆ. ಮುಗುಳ್ನಗುತ್ತ, ಗೋಣು ಹಾಕುತ್ತ ಔಷಧಿ ಚೀಟಿ ಬರೆದರೆ ವಿನಾ ಏನೊಂದೂ ಮಾತನಾಡಲಿಲ್ಲ...; ಸರಳತೆ ಮತ್ತು ನಿಸ್ವಾರ್ಥದ ಸ್ಥಾಯೀಭಾವ ನಗು ಮತ್ತು ಮೌನ.

ಮನೆಗೆ ಬಂದು, ಮಗಳೊಂದಿಗೆ ನಾನೂ ಮಲ್ಲಿಗೆಯೇನೋ ಮುಡಿದೆನಾದರೂ ಎದೆ ಮಾತ್ರ ಥಣ್ಣಗೆ. ರಾತ್ರಿಯಾದರೂ ಪೂರ್ತಿ ಅರಳದ ಮಾಲೆಯನ್ನು ಫ್ರಿಡ್ಜಿನಲ್ಲಿಟ್ಟು ಹಾಗೇ ಮಲಗಿದೆ, ಹಾಗೇ ಬೆಳಗೂ ಆಯಿತು, ಈಗ ಮಧ್ಯರಾತ್ರಿ. ಫ್ರಿಡ್ಜಿನ ತಂಪಿಗಿಂತ ತಂಪು ಎದೆ; 'ನನ್ನನ್ನ್ಯಾರಾದ್ರೂ ಕೇಳಿದ್ರೇನೋ...'

-ಶ್ರೀದೇವಿ ಕಳಸದ


ನಾದಬೇಕು ವಿಠಲ ’ನಾದ ವಿಠಲ’


’ಸುಮ್ಮನೇ ಇರೋದಕ್ಕಿಂತ ಸುತ್ತುವುದೇ ಸುಲಭ’; ಅರೆ! ಆಷಾಢದಲ್ಲಿ ಇದು ಹೇಗೆ ಸಾಧ್ಯ ಮಾರಾಯಾ ಎಂದು ಐನ್ ಸ್ಟಿನ್ ಗೆ ಈಗ ಕೇಳಲಾದೀತೆ? ಇವನ ಹುರ‍್ರನೆಯ ಬೂದುಗೂದಲಿನಂತೆ ಈಗ ಆಕಾಶರಾಯ. ಬಪ್ಪನೋ ಬಾರನೋ ಎಂದು ಆಕಾಶ ನೋಡುತ್ತ ಕುಳಿತಾಗ ಎಪ್ಪತ್ನಾಲ್ಕರ ಹರೆಯಕ್ಕೆ ಕಾಲಿಟ್ಟ ಕಾವ್ಯಗುಚ್ಛವೊಂದು ಮಿಂಚಿ, “ಕಣ್ಣ ಕಣ ತೊಳಿಸಿ/ಉಸಿರ ಎಳೆ ಎಳಿಸಿ/ನುಡಿಯ ಸಸಿ ಮೊಳಸಿ ಹಿಗ್ಗಿ ಬಾ; ಎದೆಯ ನೆಲೆಯಲ್ಲಿ ನೆಲೆಸಿ ಬಾ/ಜೀವ ಜಲದಲ್ಲಿ ಚಲಿಸಿ ಬಾ/ಮೂಲ ಹೊಲದಲ್ಲಿ ನೆಲೆಸಿ ಬಾ’ ಎಂದು ಸಂಚಲನ ಮೂಡಿಸುತ್ತದೆ. ಬೇಂದ್ರೆಯವರ ಈ ’ಗಂಗಾವತರಣ’ ಅವತರಿಸಿದ್ದು ಇದೇ ಆಷಾಢ ಏಕಾದಶಿಯ ದಿನವೇ. ಏಕಾದಶಿ ಎಂದಾಗ ಮಹಾರಾಷ್ಟ್ರದ ಚಂದ್ರಭಾಗಾ ನದಿದಂಡೆಯಲ್ಲಿ ಇಟ್ಟಿಗೆಯ ಮೇಲೆ ನಿಂತ ವಿಠಲ, ಉಡುಪಿಯ ಶ್ರೀಕೃಷ್ಣ, ತಿರುಪತಿಯ ವೆಂಕಟೇಶ ಕಣ್ಮುಂದೆ ಬರುತ್ತಾರೆ. ಇವರ ಹಿಂದಿಂದೆ ಬೇಂದ್ರೆಯವರದೇ ಈ ಸಾಲೂ...“ಟೊಂಕದ ಮ್ಯಾಲೆ ಕೈ ಇಟ್ಟಾನ/ಭಕ್ತಿ ಸುಂಕ ಬೇಡತಾನ/ಅಂಕ ಇಲ್ಲ ಡೊಂಕ ಇಲ್ಲ/ಅಭಂಗ ಪದದವಗ’.

ಭಜನೆ ಎಂದರೆ ಭಜಿಸುವುದು, ಸ್ಮರಿಸುವುದು. ಈ ಅಭಂಗ್ ಅಥವಾ ಭಜನೆಗಳ ಧಾಟಿ ಕೂಡ ಈ ವಿಠಲನಂತೆಯೇ ಅಂಕುಡೊಂಕಿಲ್ಲದಂತೆ ಸಾಗುವಂಥದ್ದು. ಶಾಸ್ತ್ರ-ಪಾಂಡಿತ್ಯದ ಭಾರವಿಲ್ಲದೆ, ಕೇವಲ ನಾದ ಮತ್ತು ಲಯದ ಮೂಲಕ ಸಾಮಾನ್ಯರೂ ಅನುಕರಿಸುವಂಥ ಧಾಟಿಗಳಲ್ಲಿ ದಾಟಿ ಆ ದೇವನನ್ನು ತಲುಪುವಂಥದ್ದು. ಇಂಥ ನಾದಸಂಕೀರ‍್ತನೆಯನ್ನು ಬಿಜಾಪುರೆ ಹಾರ‍್ಮೋನಿಯಂ ಫೌಂಡೇಶನ್, M/S ಕಾಮತ್ ಅಂಡ್ ಕಾಮತ್ ಅಕಾಡೆಮಿ ಆಫ್ ಮ್ಯೂಸಿಕ್ ಸಹಯೋಗದಲ್ಲಿ ಚೌಡಯ್ಯ ಸ್ಮಾರಕ ಭವನದಲ್ಲಿ ’ನಾದ ವಿಠಲ-ಶೃತಿ ಸ್ಮೃತಿ’ ಶೀರ‍್ಷಿಕೆಯಡಿ ಹಮ್ಮಿಕೊಳ್ಳಲಾಗಿತ್ತು.

ನೀ ಪೇಳಮ್ಮಯ್ಯ...
ತುಂಗಾ ತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮಯ್ಯ...” ವಿಠಲದಾಸರ ಈ ಭಜನೆ ಭೂಪಾಲಿಯಲ್ಲಿ ಘನಗಂಭೀರವಾಗಿ ಪವಡಿಸುತ್ತಿದ್ದರೆ, ಜೋಡುತಂಬೂರಿಯ ಮಧ್ಯೆ ಕುಳಿತ ಭೀಮಸೇನ್ ಜೋಶಿಯವರ ನಾದಚಿತ್ರವೇ ತೇಲಿಬರುತ್ತಿತ್ತು. ಅದೇ ನಾದಕ್ಕಿರುವ ಶಕ್ತಿ, ಶಬ್ದವನ್ನೂ ಮೀರಿಸುವಂಥದ್ದು. ಇಂಥ ಶಕ್ತಿಯ ಜಾಡು ಹಿಡಿದೇ ಹಾರ‍್ಮೋನಿಯಂ ನಲ್ಲಿ ಸತತ ಒಂದೂವರೆಗಂಟೆಗಳ ಭಜನವೈಭವ ಕಟ್ಟಿಕೊಟ್ಟರು ಡಾ ರವೀಂದ್ರ ಕಾಟೋಟಿ. ಶಾಸ್ತ್ರೀಯ ಕಲಾವಿದರು ಗಾಯನ ಅಥವಾ ವಾದನದ ಮೂಲಕ ನಾದಭಾವವನ್ನು ಸುಲಭಕ್ಕೆ ಕಟ್ಟಿಕೊಟ್ಟುಬಿಡಬಹುದು. ಆದರೆ ವಾದನದಲ್ಲಿ ಲಘು ಸಂಗೀತ ಪ್ರಕಾರಗಳನ್ನು ನುಡಿಸಲು ವಿಶೇಷ ಜಾಣ್ಮೆ ಬೇಕಾಗುತ್ತದೆ. ಸಾಹಿತ್ಯಲೋಪವಾಗದಂತೆ, ಸ್ಪಷ್ಟವಾಗಿ ನುಡಿಸುವುದರ ಜೊತೆಗೆ ಸೂಕ್ತ ಭಾವ ಹೊಮ್ಮಿಸುವ ಕಸುಬುಗಾರಿಕೆ ಕಲಾವಿದರಿಗೆ ಬೇಕಾಗುತ್ತದೆ. ಇಂಥ ಕಸುಬುಗಾರಿಕೆ ಕಾಟೊಟಿಯವರಿಗೆ ಸಿದ್ಧಿಸಿದೆ ಎಂಬುದಕ್ಕೆ ಸಾಕ್ಷಿ, ಅವರ ನುಡಿಸಾಣಿಕೆಯ ಜೊತೆಜೊತೆಗೆ ಶ್ರೋತೃಗಳು ಆಯಾ ಭಜನಾ ಸಾಹಿತ್ಯವನ್ನು ಗುನುಗಿಕೊಂಡಿದ್ದು. ಆದರೆ, ಎಷ್ಟೇ ಸರಳಧಾಟಿ ಅನುಕರಿಸುತ್ತೇನೆಂದರೂ, ಸೃಜನಶೀಲ ಮನಸ್ಸು ಒಂದೇ ಮಾದರಿಯೊಳಗೆ ಸುತ್ತಲಾರದು. ಆಗಾಗ ಲಹರಿ ಹಿಡಿದೇ ಹಿಡಿಯುತ್ತದೆ. ಆದರೂ ನೆನಪಿಸಿಕೊಂಡು, ಮತ್ತದೇ ಮೂಲಜಾಡಿಗೆ ಬರಲೇಬೇಕು. ಅಂಥ ಸೃಜನಶೀಲ ’ಒದ್ದಾಟ’ ಅವರ ವಾದನಪೂರ‍್ತಿ ಇಣುಕುತ್ತಿತ್ತು.

ತೊರೆದು ಜೀವಿಸಬಹುದೇ...
ಹಿಂದೂಸ್ತಾನಿ ಶೈಲಿಯಲ್ಲಿ ಲಘುಸಂಗೀತ ಪ್ರಕಾರಗಳಿಗೆಂದೇ ಕೆಲ ರಾಗಗಳು ಮೀಸಲಿವೆ. ಆಯಾ ಸಾಹಿತ್ಯಕ್ಕನುಗುಣವಾಗಿ ಭಾವ ಮತ್ತು ಸೌಂದರ‍್ಯಪ್ರಜ್ಞೆ ವೃದ್ಧಿಸುವುದು ಇದರ ಹಿನ್ನೆಲೆ. ಆ ಪೈಕಿ ಕಾಫಿ ಕೂಡ ಒಂದು. ಇಲ್ಲಿ ಪಂಚಮ ವಾದಿಯಾದರೆ ಷಡ್ಜ ಸಂವಾದಿ. ಮುಂದೆ ಕಾಟೋಟಿಯವರ ಬೆರಳುಗಳಲ್ಲಿ ಆಕಾರಪಡೆದುಕೊಂಡಿದ್ದು, ’ಮೂರುತಿಯನು ನಿಲ್ಲಸೋ’. ನಂತರ ಕ್ರಮಿಸಿದ್ದು, ಮಿಶ್ರಮಾಂಡ್ ರಾಗಕ್ಕೆ. ವಿಶೇಷವಾಗಿ ಭಜನ್ ಮತ್ತು ಗಝಲ್ ಪ್ರಕಾರಕ್ಕೆ ಹೇಳಿಮಾಡಿಸಿದ ರಾಗವಿದು. ಷಡ್ಜ ಮತ್ತು ಪಂಚಮದಲ್ಲೇ ಇದರ ಜೀವವಡಗಿರುವುದು. ಈ ಸ್ವರಗಳ ಮೂಲಕ ಶಾಂತ ಮತ್ತು ಭಕ್ತಿ ರಸವನ್ನಾಳುವಂಥ ಸ್ವರಸಂಯೋಜನೆ ’ಮಾಝೆ ಮಾಹೇರ‍್ ಪಂಡರಿ’ ಭಜನೆಯದ್ದು. ಇದನ್ನು ಅವರು ಪ್ರಸ್ತುತಪಡಿಸಿದಾಗ ಮತ್ತದೇ ಭೀಮಸೇನರು ಅಲೆಅಲೆಯಾಗಿ ತೇಲಿಬಂದರು. ನಂತರದ್ದು ಭಕ್ತಿಕರುಣಾರಸಲಹರಿ... ಪಂ ಎಂ ವೆಂಕಟೇಶಕುಮಾರ‍್ ಎಂದರೆ ಆ ದಾಸಪದ. ಆ ದಾಸಪದವೆಂದರೆ ವೆಂಕಟೇಶಕುಮಾರ‍್, ಅದೇ “ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ’; ಎಷ್ಟೂ ಕೇಳಿದರೂ ಆರ‍್ದ್ರವಾಗಿಸುವಂಥ ಕೀರ‍್ವಾಣಿ ರಾಗ ಮತ್ತು ಕನಕದಾಸರ ಸಾಹಿತ್ಯ. ’ಬಾರೇ ಭಾಗ್ಯದ ನಿಧಿಯೇ’, ’ಕ್ಷೇತ್ರ ವಿಠಲ ತೀರ‍್ಥ ವಿಠಲ’ ನುಡಿಸಿದ ನಂತರ ಭೈರವಿಯೊಂದಿಗೆ ಕಾರ‍್ಯಕ್ರಮ ಸಂಪನ್ಮವಾಯಿತಾದರೂ ಮಳೆಹನಿಗಳಿಗೆ ಭಜನೆಯ ಗುಂಗು ಹಿಡಿದಿತ್ತು. ಸಹ ಹಾರ‍್ಮೋನಿಯಂ ನಲ್ಲಿ ಮಧುಸೂದನ್ ಭಟ್, ತಬಲಾದಲ್ಲಿ ಉದಯರಾಜ್ ಕರ‍್ಪೂರ‍್, ಪಖಾವಾಜ್ ದಲ್ಲಿ ಗುರುಮೂರ‍್ತಿ ವೈದ್ಯ, ಮ್ಯಾಂಡೊಲಿನ್ ನಲ್ಲಿ ಎನ್ ಎಸ್ ಪ್ರಸಾದ್, ಕೀಬೋರ‍್ಡ್ ನಲ್ಲಿ ಸಾತ್ವಿಕ್ ಚಕ್ರವರ‍್ತಿ, ತಾಳದಲ್ಲಿ ವೆಂಕಟೇಶ ಪುರೋಹಿತ ಜೊತೆಗಾರರಾಗಿದ್ದರು. ಧ್ವನಿವರ‍್ವ್ಯಧಕ ವ್ವವಸ್ಥೆ ಅಬ್ಬರ ಕಡಿಮೆ ಮಾಡಿದ್ದಲ್ಲಿ, ತಬಲಾ ಮತ್ತು ಮ್ಯಾಂಡೊಲಿನ್ ಸುಶ್ರಾವ್ಯವಾಗಿ ಮೂಡಿಬರುತ್ತಿದ್ದವು. ಪಖಾವಾಜ್ ನ ನಾದ ಹೆಚ್ಚಿ, ಕಾರ‍್ಯಕ್ರಮ ಇನ್ನಷ್ಟು ಸಾತ್ವಿಕ ಕಳೆ ಪಡೆದುಕೊಳ್ಳುತ್ತಿತ್ತು.  

ಕಾಲುಭಾಗದಷ್ಟೂ ಜನವಿರಲಿಲ್ಲವಲ್ಲ, ಏಕಾದಶಿ ವಾರಾಂತ್ಯಕ್ಕೆ ಬರುವಂತಿದ್ದರೆ... ಎಂದಿದ್ದಕ್ಕೆ, "ಇದು ಕೇಳುಗರಿಗೇ ನಷ್ಟ. ನಮ್ಮದೇನಿದ್ದುದರೂ ನಿರಂತರ ನಾದಕಾಯಕ. ಧಾರವಾಡ ಮತ್ತು ಬೆಳಗಾವಿಯಲ್ಲಿ ಇದೇ ಕಾರ‍್ಯಕ್ರಮಕ್ಕೆ ಭರಪೂರ ಜನ ಸೇರಿದ್ದರು’ ವಾಸ್ತವ ಹಂಚಿಕೊಂಡರು ಆಯೋಜಕ ಕಾಟೋಟಿ. 

ಮೃದಂಗ ಮಾಧುರ‍್ಯ 
ಇದಕ್ಕಿಂತ ಮೊದಲು ಕೊಳಲು ವಿದ್ವಾನ್ ಎಂ ಕೆ ಪ್ರಾಣೇಶ್ ಅವರು ನಾದಸಮರ‍್ಪಣೆ ಮಾಡಿದರು. ಪುರಂದರದಾಸರ ’ಜಯ ಜಯ ಜಯ ಜಾನಕೀಕಾಂತ’ ನಾಟರಾಗ, ಖಂಡಚಾಪು ತಾಳದಲ್ಲಿದ್ದರೆ, ಕನಕದಾಸರ ’ಬಾರೋ ಕೃಷ್ಣಯ್ಯ’ ರಾಗಮಾಲಿಕೆ, ಆದಿತಾಳ. ಕಮಲೇಶ ವಿಠಲರ ’ ತುಂಗಾತೀರ ವಿಹಾರಂ; ಆದಿತಾಳದಲ್ಲಿದ್ದರೆ, ಪುರಂದರ ದಾಸರ ’ನಾರಾಯಣ ನಿನ್ನ ನಾಮನದ ಸ್ಮರಣೆ’ ಶುದ್ಧ ಧನ್ಯಾಸಿ ರಾಗ ಮತ್ತು ಖಂಡಛಾಪುತಾಳ. ಜನಸಮ್ಮೋದಿನಿ ರಾಗದಲ್ಲಿ ಸಂಯೋಜಿಸಿದ “ಗೋವಿಂದ ನಿನ್ನ ನಾಮವೇ ಚೆಂದ’ ಆದಿ ತಾಳ. ಪಿಳ್ಳಂಗೋವಿಯ ಚೆಲುವ ಕೃಷ್ಣನ’ ಮೋಹನ ರಾಗದಲ್ಲಿದ್ದು, ತಿಶ್ರ ನಡೆಯಲ್ಲಿ ನಡೆಯಿತು. ಕೊನೆಗೆ ಎಂ ಎಸ್ ಸುಬ್ಬುಲಕ್ಷ್ಮೀಯವರನ್ನು ನೆನಪಿಸಿದ್ದು ’ಜಗದೋದ್ಧಾರನ’. ಒಟ್ಟಾರೆ ಇಲ್ಲಿ ಪ್ರಾಣೇಶ್ ಅವರ ನುಡಿಸುವಿಕೆ ಭಜನಾಕ್ರಮದ ಸರಳನಡೆ ಮಾದರಿಗಷ್ಟೇ ಸೀಮಿತವಾಯಿತು. ಆದರೆ ಇಲ್ಲಿ ಗಮನಸೆಳೆದದ್ದು ವಿದ್ವಾನ್ ತುಮಕೂರು ಚಂದ್ರಶೇಖರ‍್ ಅವರ ಮೃದಂಗವಾದನ. ಒಂದು ಖಾದ್ಯ ತಯಾರಿಸಿದಾಗ, ಯಾವುದೋ ಒಂದು ಪದಾರ‍್ಥ ತನ್ನದೇ ಆದ ರುಚಿಯನ್ನು ಪ್ರತ್ಯೇಕವಾಗಿ ಕಾಯ್ದುಕೊಂಡು ಹೋದಂತೆ ಇವರ ವಾದನವಿತ್ತು. ಸಾಮಾನ್ಯವಾಗಿ ತಬಲಾದಲ್ಲಿ ’ಆಸ್’ ಹುಟ್ಟಿಸಿದಂತೆ ಮೃದಂಗದಲ್ಲಿ ಆಸ್ ಹುಟ್ಟಿಸುವುದು ಅಷ್ಟಾಗಿ ಚಾಲ್ತಿಯಲ್ಲಿಲ್ಲ. ಆದರೆ ಚಂದ್ರಶೇಖರ‍್ ಮೃದಂಗದಲ್ಲಿ ಆಸ್ ಹುಟ್ಟಿಸುತ್ತ ಮಾಧುರ‍್ಯ ಕಾಪಿಟ್ಟುಕೊಂಡಿದ್ದು ವಿಶೇಷ. ವಾಯೊಲಿನ್ ನಲ್ಲಿ ವಿದ್ವಾನ್ ಶ್ರೀನಿಧಿ ಮಾಥೂರ‍್ ಸಾಥ್ ನೀಡಿದರು.

ವರ‍್ತಮಾನವೆಂದರೆ ಸಂಗೀತ
ಕಾರ‍್ಯಕ್ರಮದ ಆರಂಭದಲ್ಲಿ ವಾಗ್ಮಿ ರವಿಕುಮಾರ‍್ ಆಡಿದ ಮಾತುಗಳು ಮಾತ್ರ ಇನ್ನೂ ಅನುರಣಿಸುತ್ತಿವೆ. “ಮನುಷ್ಯನ ಮನಸ್ಸನ್ನ ವರ‍್ತಮಾನದ ಗಳಿಗೆಯಲ್ಲಿ ಹಿಡಿದಿಟ್ಟು, ಧ್ಯಾನದ ಉತ್ತುಂಗ ಶಿಖರ ತಲುಪಿಸುವುದೇ ಸಂಗೀತ. ವರ‍್ತಮಾನವೆಂದರೆ ದೇವರು. ದೇವರೆಂದರೆ ಮಕ್ಕಳು. ಮಕ್ಕಳು ಯಾವಾಗಲೂ ವರ‍್ತಮಾನದಲ್ಲೇ ಇರುತ್ತವೆ. ಇಲ್ಲಿ ಭೂತದ ಪಶ್ಚಾತ್ತಾಪ, ಭವಿಷ್ಯದ ಆತಂಕ ಎರಡೂ ಇರುವುದಿಲ್ಲ. ಇಂಥ ಧ್ಯಾನಸ್ಥಿತಿಯಲ್ಲೇ ನಮ್ಮ ಮನಸ್ಸು ವರ‍್ತಮಾನಕ್ಕೆ ತಲುಪುತ್ತದೆ. ಮನುಷ್ಯನ ಮನಸ್ಸೇ ಎಲ್ಲದಕ್ಕೂ ಕಾರಣ. ಅದಕ್ಕೇ ಮನಸ್ಸನ್ನು ಹದವಾಗಿರಿಸಿಕೊಳ್ಳಬೇಕು. ಸಂಗೀತವೇ ವರ‍್ತಮಾನದಲ್ಲಿಡುವಂಥ ಉತ್ತಮ ಪ್ರಯತ್ನ. ಭಾರತೀಯ ಸಂಗೀತ ಶಾಸ್ತ್ರ ಪದ್ಧತಿ ಇದಕ್ಕೊಂದು ಅದ್ಭುತ ಮಾದರಿ. ಅದಕ್ಕೇ ಇದು ದೇಹಪ್ರಚೋದನೆಗಿಂತ ಮನಸ್ಸು ಮತ್ತು ಆತ್ಮಕೇಂದ್ರಿತ.

ಇಷ್ಟೆಲ್ಲ ನಾದದ ಹರಿವಿನಲ್ಲಿ ತೇಲಿಮುಳುಗಿದ ಮೇಲೆ ಐನ್ ಸ್ಟಿನ್ ಸೋದರಿ ಮಝಾ ತನ್ನ ಸೋದರನ ಬಗ್ಗೆ ಹೇಳಿರುವುದು ನೆನಪಾಗುತ್ತಿದೆ. “After playing piano, he would get up saying 'There, now I've got it', Something in the music would guide his thoughts in new and creative directions."

-ಶ್ರೀದೇವಿ ಕಳಸದ 

ಮಲ್ಹಾರ ನೀ ಮೇಘ ನಾ...


ತಾನೂ ಕುದೀತಾ ನಮ್ಮನ್ನೂ ಕುದಿಸ್ತಾ ಸದಾ ಅಟ್ಟಾಡಿಸಿಕೊಂಡೇ ಇರುತ್ತಿದ್ದ ಬೆಂಗಳೂರೆಂಬ ಈ ಹುಡುಗನ ಕಾಲೀಗ ಸರೀ ಮುರಿದು ಬಿದ್ದಿದೆ. ಇಷ್ಟು ದಿನ ಎದೆ ಮರಭೂಮಿ ಮಾಡಿಕೊಂಡಿದ್ದ ಇಂವನೀಗ ದಾರಿಕಾಣದೆ, ಮಡಿಕೆಯೊಳಗೆ ಕೂತಿದ್ದಾನೆ. ಥ್ಯಾಂಕ್ಸ್ ಕಣೆ ’ವರ‍್ಷಾ’ ಇವನನ್ನು ಜುಣುಗುಟ್ಟುವ ಜಪಕ್ಕೆ ತಳ್ಳಿದ್ದಕ್ಕೆ...


=======================

ಇಲ್ಲಿ ಆದಿಯೂ ಹನಿಯೇ ಅಂತ್ಯವೂ ಹನಿಯೇ. ಈ ಹನಿಹನಿಗಳ ಮಧ್ಯೆ ನಲಿದು ನರಳಾಡಿ, ಹರಿದು ಹೊರಳಾಡಿ, ಭೋರ‍್ಗರೆದದ್ದೆಲ್ಲ ಆ ಕ್ಷಣಗಳ ಮಾಂತ್ರಿಕತೆ. ದಕ್ಕಿದ್ದು ದಕ್ಕಿ, ಮಿಕ್ಕಿದ್ದು ಮಿಕ್ಕಿ, ಬಿಕ್ಕಿ ಉಕ್ಕಿದ್ದೆಲ್ಲ ಹರಿದಾರಿ ಹಿಡಿದು ಅದಿನ್ನೆಲ್ಲೋ ಅವಿರ‍್ಭವಿಸುವುದಿದೆಯಲ್ಲ? ಅದೇ ಮಾಯೆ. ಮಳೆಯ ಮಾಯೆ. ಬೆಂಗಳೂರೆಂಬ ಮಾಂತ್ರಿಕ ಹುಡುಗನಂಥ ಮಾಯೆ. ಈ ಮಾಯೆಯ ತೆಕ್ಕೆಯೊಳಗಿರುವ ನಮ್ಮ ಯುವಕಲಾವಿದರು ಮತ್ತವರ ಹರಿವಿಗೆ ಈ ಮಳೆ ಹೇಗೆ ಆಕರವಾಗುತ್ತ ಆಕಾರ ಕೊಡುತ್ತದೆ... ಎಂದು ಯೋಚಿಸುತ್ತಿದ್ದಾಗ ಮೊದಲಿಗೆ ತೆರೆದುಕೊಂಡಿದ್ದು ಪೋರ್ಚುಗಲ್ನಿಂದ ತೂರಿಬಂದ ಧ್ವನಿಸಂದೇಶ. ಗಾಯಕ ವಿಜಯ್ ಪ್ರಕಾಶ್ ಊರು ಮೈಸೂರು, ನೆಲೆಯೂರು ಮೂಂಬೈ. ಒಂದು ಕಾಲಿರುವುದು ಮಾತ್ರ ಸದಾ ಬೆಂಗಳೂರು. ಈಗವರು ಜೈ ಹೋ ಎನ್ನುತ್ತಿರುವುದು ಸ್ಪೇನ್ ಮತ್ತು ಪೋರ‍್ಚುಗಲ್ ನೆಲದಲ್ಲಿ. “ಇಲ್ಲೂ ಕೂಡ ಮಳೆ ಬರ್ತಿದೆ. ಎರಡು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಳೆ ಕುರಿತಾದ ಜಾನಪದ ಹಾಡುಗಳನ್ನ ಕೇಳಿದ್ದೇ ಸಾಕು, ನಮ್ಮ ಶರೀಫಜ್ಜ ಆವರಿಸಿಕೊಂಡುಬಿಟ್ರು. ’ಮಾಯದಂಥ ಮಳೆ’ಯ ಗುಂಗಿನಲ್ಲೇ ಇದ್ದೀನಿ. ಆಯಾ ನೆಲಕ್ಕೂ, ಬೀಳುವ ಹನಿಗೂ ಮತ್ತು ಹೊಮ್ಮುವ ಸ್ವರಗಳಿಗೂ ಸಂಬಂಧವಿರುತ್ತದೆ. ನಾವೆಲ್ಲೇ ಇದ್ದರೂ ಬೀಳುವ ಮಳೆ ಬೀಸುವ ಗಾಳಿ ಮತ್ತೆ ನಮ್ಮ ನೆಲವನ್ನೇ ನೆನಪಿಸುತ್ತದೆ. ಬೆಂಗಳೂರಿನ ಮಳೆಯೂ ಹಾಗೇ. ಇಲ್ಲಿ ಕಟ್ಟಡಗಳ ಮಧ್ಯೆ ಹಸಿರನ್ನು ಹುಡುಕಬೇಕು ನಿಜ. ಆದರೂ ಈ ಮಣ್ಣಿಗೂ ಗುಟ್ಟಿದೆ. ಈ ಗುಟ್ಟನ್ನು ಒಡೆಯುವಂಥದ್ದೇ ಮಳೆಹನಿ. ಈ ಹನಿಗಳಿಂದ ಇಲ್ಲಿರುವ ಅದೆಷ್ಟೋ ಸೃಜನಶೀಲ ಮನಸ್ಸುಗಳು ಆಹ್ಲಾದಗೊಳ್ಳುತ್ತವೆ, ರಾಗ ಸಂಯೋಜನೆಗೆ ಮತ್ತು ಪ್ರಸ್ತುತಿಗೆ ಸ್ಫೂರ್ತಿ ನೀಡುತ್ತವೆ’.

ಗಂಗೆಯಾತಕೋ...
ಚಳಿಗಾಲವೋ ಬೇಸಿಗೆಯೋ ಯಾರೋ ಎಂದೋ ಗೀರಿದ ಎದೆಗಾಯ ಮಾಯಲು ಮಳೆಯ ಮುಲಾಮೇ ಬೇಕು. ’ಸಿಂಪಲ್ಲಾಗೊಂದ್ ಲವ್ ಸ್ಟೋರಿ’ ಖ್ಯಾತಿಯ ಸಂಗೀತ ನಿರ‍್ದೇಶಕ ಬಿ ಜೆ ಭರತ್ ಗೆ ಬಾಲ್ಯ ಮತ್ತು ಬೆಂಗಳೂರುಮಳೆಯೆಂದರೆ ಗೆಳತಿಪ್ರೀತಿ ಮತ್ತು ತಾಯಮಮತೆ. “ಆಗಷ್ಟೇ ಶಾಸ್ತ್ರೀಯ ಸಂಗೀತ ಕಲಿಯಲು ಶುರು ಮಾಡಿದ್ದೆ. ಯಾವುದೋ ಸ್ಪರ‍್ಧೆಗಾಗಿ, ಜೇಸುದಾಸ್ ಹಾಡಿದ ’ಕಂಹಾ ಸೆ ಆಯೆ ಬದರಾ’ ಹಾಡನ್ನು ತಯಾರಿ ಮಾಡಿಕೊಳ್ಳುತ್ತಿದ್ದೆ. ರಾಗ ಮತ್ತು ಹಾಡಿನ ಅರ್ಥ ಕೂಡ ಗೊತ್ತಿರಲಿಲ್ಲ. ಆದರೆ ರಿಯಾಝ್ ಮಾಡುವಾಗೆಲ್ಲಾ ಏನೋ ಒಂಥರಾ ಮಳೆಯ ಅನುಭವವಾಗುತ್ತಿತ್ತು. ಅರೆ ಹೀಗೇಕೆ? ಎಂದು ಅಪ್ಪನಿಗೆ ಕೇಳಿದಾಗ, ಅವರು ಹಾಡಿನ ಅರ‍್ಥವನ್ನು ಬಿಡಿಸಿಟ್ಟರು. ಮುಂದೆ ರಾಗ ಕಲಿತ ಮೇಲೆ ಅದು ಮೇಘಮಲ್ಹಾರವೆಂದು ಗೊತ್ತಾಯಿತು. ಆದರೆ ಆಗ...? ಅಂದಹಾಗೆ ಮಳೆಬಂದಾಗೆಲ್ಲ ನಾ ಆಗಲೂ ನೆನಯುತ್ತಿದ್ದೆ, ಈಗಲೂ. ಅಪ್ಪ ಅಮ್ಮ ಯಾವತ್ತೂ ತಡೆಯಲಿಲ್ಲ. ನನಗನ್ನಿಸೋದು, ನಮ್ಮ ಕೋಪತಾಪಪಾಪ ತೊಳೆದುಕೊಳ್ಳಲು ಗಂಗಾ ನದಿಗೇ ಹೋಗಬೇಕಂತೇನಿಲ್ಲ. ಮಳೆಯಲ್ಲಿ ಸ್ವಲ್ಪ ಹೊತ್ತು ನೆಂದರೆ ಸಾಕು, ನಮಗೆ ನಾವು ದಕ್ಕತೊಡಗುತ್ತೇವೆ, ಮನಸ್ಸು ಹಗುರಾಗಿ ಸೃಜನಶೀಲ ಹಾದಿಯಲ್ಲಿ ಯೋಚಿಸಲಾರಂಭಿಸುತ್ತದೆ”. ನಿಜ,  ಹಾಡೊಂದು ಸಾಹಿತ್ಯ ಮತ್ತು ರಾಗದ ಅರಿವಿನಾಚೆಗೂ ಮೀರಿದ ಅನುಭವವೊಂದನ್ನು ಕಟ್ಟಿಕೊಡುತ್ತದೆ ಎಂದರೆ ಅದು ಆ ಸಂಯೋಜನೆಯ ತಾಕತ್ತು.

ಈಗಂತೂ ದಿನಾ ಮಳೆ. ಬಂದಾಗೆಲ್ಲ ಸುಮ್ಮನೇ ಗಮನಿಸಿ, ಇಲ್ಲಿ ದಿನಗಟ್ಟಲೆ ವಾರಗಟ್ಟಲೆ ಮಳೆ ಶ್ರುತಿಹಿಡಿಯುವುದಿಲ್ಲ. ಏನಿದ್ದರೂ ಪಾಳೀ ಲೆಕ್ಕ, ಒಮ್ಮೊಮ್ಮೆ ಡಬಲ್ ಶಿಫ್ಟ್. ಥೇಟ್ ಸಂಗೀತ ಕಛೇರಿಗಳಂತೆ. ಒಮ್ಮೊಮ್ಮೆ ಅಹೋರಾತ್ರಿ ಕಛೇರಿಗಳಂತೆ. ಕಛೇರಿ ಮುಗಿದ ಮರುದಿನ ಮತ್ತದೇ ದಿನಚರಿ, ಮತ್ತೊಂದು ವಾರಾಂತ್ಯಕ್ಕೆ ಹಪಾಹಪಿ. ಜಡಿದ ಮಳೆಗೆ ಅಲ್ಲೆಲ್ಲೋ ರಾತ್ರಿ ಎದೆಮಟ್ಟ ನೀರುನಿಂತಿದೆ ಎನ್ನುವ ಹೊತ್ತಿಗೆ, ಗುಬ್ಬಚ್ಚಿ ಪಾದ ತೋಯಲೂ ನೀರಿಲ್ಲದಂತೆ ಮಾಡಿರುತ್ತದೆ ಬೆಳ್ಳಂಬೆಳಗು. ಯಂತ್ರನಗರಿಗೇನಿದ್ದರೂ ಬರೀ ಚಲನೆ- ಗತಿ ಗತಿ-ಚಲನೆ. ಹಾಗಾದರೆ ಎದೆಗೂಡು ಬೆಚ್ಚಗಿಟ್ಟುಕೊಳ್ಳುವ ಲಯವೆಲ್ಲಿದೆ, ನಾದವೆಲ್ಲಿದೆ, ಅದೂ ಅಂದಿಗಂದಿಗೆ ದಕ್ಕುವ ಮಳೆಯಂತೆಯೆ? ಎಂದು ಯೋಚಿಸುತ್ತಿರುವಾಗ, ಸಮ್ಮಿಗೆ ಬಂದವರು ಲಯವಾದ್ಯ ಕಲಾವಿದ ಪ್ರಮಥ್ ಕಿರಣ್. ಅಮೆರಿಕದ ಕಛೇರಿಗಳಲ್ಲಿ ಮುಳುಗಿರುವ ಅವರು, “ಹೇಗೆ ತಾಳವೊಂದು ಸಮ್ಮಿನಿಂದ ಶುರುವಾಗಿ ಒಂದು ಆವರ‍್ತನ ಮುಗಿಸಿ ಸಮ್ಮಿಗೆ ಬಂದು ನಿಲ್ಲುತ್ತದೆಯೋ ಆದೇ ಮಾದರಿಯಲ್ಲಿ ಮಳೆಯೂ. ಹನಿಯಿಂದ ಶುರುವಾಗಿ ಭೋರ‍್ಗರೆಯುವ ತನಕ ಮಳೆ ಸುರಿಯುತ್ತದೆಯೋ ಹಾಗೇ ವಾದನದಲ್ಲಿಯೂ ನಾವು ಎಲ್ಲಾ ಸ್ಥಿತಿಗಳನ್ನು ತಲುಪಿ ಕೊನೆಗೆ ಸಮ್ಮಿಗೆ ಬಂದು ನಿಲ್ಲುತ್ತೇವೆ. ಬೆಂಗಳೂರಿನ ಗಂಟೆಗಳ ಲೆಕ್ಕದ ಮಳೆಯೂ ಮತ್ತು ರಿಯಾಝಿನ ಅವಧಿಯದೂ ಒಂದೇ ಲೆಕ್ಕಾಚಾರ, ಒಂದೇ ಓಟ, ಓಂದೇ ಓಘ. ಹೊರಗೆಲ್ಲೋ ಮಳೆ ಬೀಳುತ್ತಿದ್ದರೆ ಒಳಗೆ ಕುಳಿತು, ಹೊಸಹೊಸ ಪಟ್ಟುಗಳನ್ನು ಸೃಷ್ಟಿಸಿ, ಸರದಿಯಂತೆ ಬರುವ ಕಾರ್ಯಕ್ರಮಗಳಲ್ಲಿ ಆಗಿಂದಾಗ್ಗೇ ಪ್ರಸ್ತುತಪಡಿಸುವುದರಲ್ಲಿ ಒಂಥರಾ ಮಜಾ ಇದೆ’ ಎನ್ನುತ್ತಾರೆ.

ಜೈವಿಕ ಲಯಸಿದ್ಧಾಂತ
ಮಳೆ ಮಗುವಿನಂತೆ. ಚಿತ್ತಕೊಟ್ಟರೆ ಸಾಕು ಒಳಗೆಳೆದುಕೊಂಡುಬಿಡುತ್ತದೆ. ಓಡುವ ನಿಮ್ಮನ್ನು ನಡಿಗೆಯ ಪುಳಕಕ್ಕೆ ತೆರೆದಿಡುತ್ತದೆ. ಕ್ರಮೇಣ ನೆಲಕ್ಕೆ ಕೂರಿಸಿ ತನ್ನೊಡನೆ ಆಟವಾಡು ಎಂದು ದುಂಬಾಲು ಬಿಳುತ್ತದೆ, ನೀವೂ ಹಿಂಬಾಲಿಸುತ್ತೀರಿ. ಹಿಂದೂಸ್ತಾನಿ ಗಾಯಕ ಓಂಕಾರ್ನಾಥ್ ಹವಾಲ್ದಾರ್ ಅವರಿಗೆ, ಸಂಗೀತದ ಗುಂಗು ಹಿಡಿಸಿದ್ದೇ ಮಳೆ. “ಶಾಲೆಬಿಟ್ಟು ಮನೆಗೆ ಬಂದರೆ ಮಕ್ಕಳು ಮತ್ತೆ ಓಡುವುದೇ ಅಂಗಳಕ್ಕೆ, ಓಣಿಗೆ. ಆದರೆ ಮಳೆಗಾಲ ನಮ್ಮನ್ನು ಮನೆಯೊಳಗೇ ಹಿಡಿದು ಕೂಡಿಸುತ್ತಿತ್ತು. ನಮ್ಮ ತಂದೆಯವರು ಅವರ ಶಿಷ್ಯಂದಿರಿಗೆ ಪಾಠ ಮಾಡುವ ಮಳೆರಾಗಗಳೂ ನಮ್ಮೊಳಗಿಳಿಯುತ್ತಿದ್ದವು. ಇಂದಿಗೂ ನಾವು ಕಛೇರಿ ಪ್ರಸ್ತುತಿಗೆ ರಾಗಸಮಯ ಪಾಲಿಸುತ್ತಿರುವುದರಿಂದ ಮಿಯಾಮಲ್ಹಾರ‍್, ಮೇಘಮಲ್ಹಾರ‍್, ಗೌಡಮಲ್ಹಾರ‍್, ಜೈಜೈಮಲ್ಹಾರ‍್, ನಟಮಲ್ಹಾರ‍್ ಮುಂತಾದ ಮಳೆರಾಗಗಳನ್ನು ಹಾಡಲು ಹಾತೊರೆಯುತ್ತಿರುತ್ತೇವೆ. ಅಲ್ಲದೆ, ಮೀಂಡ್ ಪ್ರಧಾನ ಮಿಯಾಮಲ್ಹಾರ್ ನನ್ನ ಪ್ರೀತಿಯ ರಾಗ. ಯಾವುದೋ ಒಂದು ದಿಕ್ಕಿನಿಂದ ಸುಳಿದು ಬರುವ ಗಾಳಿಯ ಚಲನೆ ಮೀಂಡ್ ಅನ್ನು ಸಾಂಕೇತಿಸಿದರೆ, ಮೋಡಗಳ ಚಲನೆ ಗಮಕ ಶೈಲಿಯ ತಾನ್ ಗಳಿಗೆ ಸಮೀಕರಣಗೊಳ್ಳುತ್ತದೆ. ಹೀಗೆ ಆಯಾ ರಾಗದ ಬಂದಿಷ್ ಮತ್ತು ಪ್ರಸ್ತುತಿಗೆ ಮಳೆಯ ಅಂಶಗಳೇ ಮೂಲ ಮತ್ತು ಪ್ರೇರಣೆ’ ಇದು ಅವರ ಪಾರಂಪರಿಕ ನಿಲುವು.

ಬೆಂಗಳೂರಿನಲ್ಲಿ ಯಾವ ಕಾಲಕ್ಕೂ ಕಛೇರಿಗಳ ಸುರಿಮಳೆ. ಆದರೆ ಆಯಾ ಋತುಮಾನಗಳ ಪರಿಕಲ್ಪನೆಯಡಿ ಹೆಚ್ಚು ಕಾರ್ಯಕ್ರಮಗಳು ಸಂಯೋಜನೆಗೊಂಡಾಗ, ಕಲಾವಿದರ ಭಾಂಡಾರ ಹಿಗ್ಗುತ್ತದೆ. ಆಸ್ವಾದಕರಲ್ಲಿ ಆಸಕ್ತಿ ಮೈದಳೆಯುತ್ತದೆ. ಹೀಗೆ ಪ್ರಕೃತಿಯ ಕರೆಗೆ ಪ್ರತಿಯಾಗಿ ಸ್ಪಂದಿಸಿದಾಗಲಲ್ಲವೆ ಒಲವೊಂದು ಮೂಡುವುದು? ’ಕರೆಯೋಲೆ’ ಖ್ಯಾತಿಯ ಗಾಯಕಿ ಇಂಚರ ರಾವ್ ಬೆಂಗಳೂರಿನಲ್ಲಿ ನೆಲೆನಿಂತು ದಶಕ ಕಳೆದರೂ, ಮಳೆ ಬಂದಾಗೆಲ್ಲ ಹೊಸನಗರದ ಅಜ್ಜನ ಮನೆ, ಮಳೆ, ಖಾಸ್ ಬೈಠಕ್, ಅಜ್ಜಿಯ ತಿಂಡಿತಿನಿಸಿನ ಸಮಾರಾಧನೆ ರಚ್ಚೆಹಿಡಿದು ಕಾಡತೊಡಗುತ್ತವೆಯಂತೆ. “ಪಕ್ಕಾ ಮಲೆನಾಡ ಹುಡುಗಿ ನಾನು. ಮಳೆ ಬಂದರೆ ನಮ್ಮ ಅಜ್ಜನ ಹಾರ್ಮೋನಿಯಂ ಹೊರಗೆ ಬರುತ್ತಿತ್ತು, ನಾವೆಲ್ಲಾ ಹಾಡುತ್ತಿದ್ದೆವು. ಅಕ್ಕಪಕ್ಕದ ಮನೆಯವರೆಲ್ಲ ತಾವಾಗೇ ನಮ್ಮ ಮನೆಗೆ ಜಮಾಯಿಸುತ್ತಿದ್ದರು. ಅಜ್ಜಿ ಅವರಿಗೆಲ್ಲ ಮಳೆಗಾಲದ ತಿನಿಸುಗಳನ್ನು ಮಾಡಿಕೊಡುತ್ತಿದ್ದರು. ಅಂದು ಅದೊಂದೇ ನಮಗೆ ಅಪ್ಪಟ ಮನರಂಜನೆಯ ಮಾರ್ಗ, ಈಗದೇ ನನಗೆ ಬದುಕಿನ ಶ್ರುತಿ. ಹೀಗೆ ಅಜ್ಜನೂರಿನ ಮಳೆಗೂ ಬೆಂಗಳೂರಿನ ಮಳೆಗೂ ತಾಳೆಹಾಕಿದಾಗ, ಕೆಲವೊಮ್ಮೆ ಇಲ್ಲಿಯ ಮಳೆಯೂ ಇಲ್ಲಿನ ಮನಸ್ಸುಗಳಂತೆಯೇ ಇದೆ ಎನ್ನಿಸುತ್ತದೆ” ಇದು ಇಂಚರ ಪಲ್ಲವಿ.

ಎದೆಯ ಹರಿವಿಗೊಂದು ಹುಟ್ಟು
ಅಂದಿನಂದಿನ ಬದುಕು ಅಂದಿಗಂದಿಗೆ, ನಂತರ ಅವರ್ಯಾರೋ ನಾವ್ಯಾರೋ. ಇಲ್ಲಿ ನಮ್ಮ ಭವಿಷ್ಯ ಶ್ರುತಿಗೊಳ್ಳಬಹುದು ಆದರೆ ಮನದ ತಂತುಗಳಲ್ಲ ಎಂಬ ಸಣ್ಣ ಬೇಸರದೆಳೆ, ಊರುಬಿಟ್ಟು ಬೆಂಗಳೂರು ಸೇರಿದ ಕೆಲ ಸೂಕ್ಷ್ಮ ಮನಸ್ಸುಗಳಲ್ಲಿ ಇಣುಕುವುದು ಸಹಜ. ಇಲ್ಲಿಯ ಮಳೆಯೂ ಇದಕ್ಕೆ ಸಾಕ್ಷಿ. ಎಷ್ಟೋ ಸಲ ನಿನ್ನೆಯ ಹನಿದ ಮಳೆಗೆ ಇಂದಿನ ನೆನಪೇ ಇರುವುದಿಲ್ಲವೆಂದಮೇಲೆ ನಾಳಿಯ ಮಾತೆಲ್ಲಿ? ಆದರೂ ನಾವೂ ಭರವಸೆಯ ದೋಣಿಯಿಂದ ಇಳಿಯುವವರೇ ಅಲ್ಲ. ಎದೆಯ ಹರಿವಿಗೊಂದು ಹುಟ್ಟು ಕಟ್ಟಿಕೊಳ್ಳುತ್ತಲೇ ಸಾಗುತ್ತಿರುತ್ತೇವೆ. ಕರ್ನಾಟಕ ಸಂಗೀತ ಕಲಾವಿದೆ ಶ್ರೀಮಾತಾ ರಮಾನಂದ್ ಮಳೆದಿನಗಳ ಸಂಗೀತ ತರಗತಿಗಳ ಝಲಕ್ ಅನ್ನು ಕಟ್ಟಿಕೊಡುವುದು ಹೀಗೆ, “ಅವತ್ತೊಂದಿನ ಜೋರು ಮಳೆ, ಕೆಲವು ಮಕ್ಕಳು ಮನೆಗೆ ಹೋದರು. ಮೂರು ಪುಟಾಣಿಗಳು ಇಲ್ಲೇ ಉಳಿದವು. ಸುಮ್ಮನೆ ಕೂರದೆ, ಅಮೃತ ಅಮೃತವರ‍್ಷಿಣಿ ಹಾಡೋಣ್ವಾ ಎಂದವು. ಅವತ್ತು “ಆನಂದಾಮೃತಾಕರ‍್ಷಿಣಿ” ಹಾಡಿದ್ದು ಮರೆಯದ ಅನುಭವ. ಅಷ್ಟೊಂದು ತನ್ಮಯತೆ ಸಾಧಿಸಿದ್ದೇ ಮಳೆ ಮತ್ತು ಆ ಪುಟಾಣಿಗಳಿಂದ. ಇನ್ನೊಂದಿನ ಪಾಠ ಹೇಳೋವಾಗ, ಅಮೃತವರ್ಷಿಣಿ ರಾಗದ ಸಾಹಿತ್ಯ ಬರೆದುಕೊಳ್ಳಿ ಅಂತ ಹೇಳಿದ್ದಕ್ಕೆ, ವರ‍್ಷಿಣಿ ಅನ್ನೋಪುಟ್ಟಿಯ ಹೆಸರಿನಿಂದ ಚರ್ಚೆ ಆರಂಭವಾಗಿ, ಮುತ್ತುಸ್ವಾಮಿ ದೀಕ್ಷಿತರು ಈ ರಾಗ ಹಾಡಿ ಮಳೆ ಬರಿಸಿದ್ರು ಎನ್ನುವ ಕಥೆಗೆ ಬಂದು ನಿಂತಿತು. ಚೆನ್ನಾಗಿ ಹಾಡಿದ್ರೆ ಮಳೆಬರುತ್ತೆ ಗೊತ್ತಾ? ಎಂದು ಹೇಳುತ್ತಾ ಪಲ್ಲವಿ ಮುಗಿಸಿದೆ. ಚರಣ ಶುರು ಮಾಡೋ ಹೊತ್ತಿಗೆ ಕ್ಷೇತ್ರಾ, ತನ್ವಿ, ತನುಶ್ರೀ, ಕಿಟಕಿಗೆ ಮುಖವಿಟ್ಟು, ಮಳೆ ಬರ್ತಿದೆಯಾ ಅಂತ ನೋಡ್ತಿದ್ರು’.

ಮುಗ್ಧತೆ, ಬೆರಗು, ಸೃಷ್ಟಿಯ ಮೂಲವೇ ಕಲೆಯಲ್ಲವೆ? ಅಂದಹಾಗೆ ಇಂದೂ ಕೂಡ ಹೊರಗೆ ಆ ಮಳೆಹುಡುಗ ಬಂದೇ ಬರುತ್ತಾನೆ... ಆಗ ಒಳಗೆ ಗಿರಗಿರಗಿರ ಗಿರಕ್ ಗಿರಕ್ ಗಿರಗಿರರರರಾ... ಕಾಲಬಳಿಯೊಂದು ಖಾಲೀಪಾತ್ರೆ ಬಂದು ಬೀಳುತ್ತದೆ. ಇನ್ನೇನು ಬಾಗಬೇಕು ನೀವು, ಮನೆಯ ಪುಟ್ಟದೇವತೆ ಅದನ್ನೆತ್ತಿಕೊಂಡು ಅಂಗಳಕ್ಕೆ ಹಾರಿಬಿಡುತ್ತದೆ. ಆಗ ಗದರಮ್ಮನೋ, ಗದರಪ್ಪನೋ ನೀವಾಗದೆ, ಬಾಗಿಲಬಳಿ ನಿಂತು ಗಮನಿಸುವಂಥವರಾದಲ್ಲಿ...; ಎಡಕ್ಕೆ ಬಲಕ್ಕೆ, ಹಿಂದಕ್ಕೆ ಮುಂದಕ್ಕೆಲ್ಲ ಸರಿದಾಡಿದ ಪಾತ್ರೆ ಕೊನೆಗೊಮ್ಮೆ ಎದೆಬಟ್ಟಲೊಡ್ಡಿ ಹನಿಧ್ಯಾನಕ್ಕೆ ಕುಳಿತುಬಿಡುತ್ತದೆ. ಆಗ ಹಾಗೇ ಮಗುವಿನ ಮುಖ ನೋಡಿ, ಅಲ್ಲಿ ನಕ್ಷತ್ರಗಳೆರಡು ಮತ್ತು ಗುಲಾಬಿ ದಳವೊಂದು ಕಾಣದಿದ್ದಲ್ಲಿ ಹೇಳಿ. 
    
-ಶ್ರೀದೇವಿ ಕಳಸದ

(ಮೆಟ್ರೊ, ಪ್ರಜಾವಾಣಿಯಲ್ಲಿ ಪ್ರಕಟ)

ಸಂಜೆಗೆ ’ಮಧುವಂತಿ’ ರಾತ್ರಿಗೆ ’ಭೂಪಾಲಿ’

  

ಹೇಗೆ ಕ್ರಮಿಸುತ್ತೇನೆ, ಯಾವ ಜಾಗ ಜೀವಪ್ರಧಾನ, ಯಾವ ಮಾರ್ಗ ವರ್ಜ್ಯ, ಎಲ್ಲಿ ತೇಲುತ್ತೇನೆ-ಮುಳುಗುತ್ತೇನೆ-ಚಿಮ್ಮುತ್ತೇನೆಮತ್ತು ವಿರಮಿಸುತ್ತೇನೆ... ಹೀಗೆ ರಾಗವೊಂದು ತನ್ನನ್ನು ತಾ ಸ್ಪಷ್ಟವಾಗಿ ಪರಿಚಯಿಸಿಕೊಳ್ಳುವ ಕೆಲ ನಿಮಿಷಗಳ ಅವಧಿಯೇ ಆರಂಭಿಕ ಆಲಾಪ್. ಎದುರಿನವರಿಗೆ ತನ್ನ ನಡೆಯನ್ನು ಆವರಣಾವರಣವಾಗಿ ತೆರೆದಿಡುತ್ತ, ರಸಾವೃತ್ತದೊಳಗೆ ಎಳೆದುಕೊಳ್ಳುತ್ತ, “ಇದು ಅನುಭೂತಿಯ ತುಣುಕಷ್ಟೇ, ನಾವೂ ನೀವೂ ಸೇರಿ ಒಂದಿಷ್ಟು ಹೊತ್ತು ಅದ್ಭುತ ಲೋಕವನ್ನೇ ಸೃಷ್ಟಿಸಲಿದ್ದೇವೆ, ಜೊತೆಗಿರುತ್ತೀರಲ್ಲ?” ಹೀಗೆ ರಾಗವೊಂದು ಶ್ರೋತೃಗಳೊಂದಿಗೆ ಆತ್ಮಸಂವಾದ ನಡೆಸಿ, ಮೌಖಿಕ ಒಪ್ಪಂದವನ್ನು ಮಾಡಿಕೊಂಡು ಯಶಸ್ವಿಯಾಗುತ್ತದೆ ಎಂದರೆ ಅದು ಕಲಾವಿದರ ಪ್ರಸ್ತುತಿ ಸಾಮರ್ಥ್ಯ.

ಭಾನುವಾರ ಚೌಡಯ್ಯ ಸಭಾಂಗಣದಲ್ಲಿ ನಡೆದ ’ಸಪ್ತಕ ದಶಮಾನೋತ್ಸವ’ ಕಾರ್ಯಕ್ರಮದಲ್ಲಿ ಇಂಥದೊಂದು ನಾದಸಂವಾದಲೋಕ ನಿರ್ಮಾಣವಾಗಿತ್ತು. ಸಂಜೆಯ ಅಳಿದುಳಿದ ಚಿಲಿಪಿಲಿ, ಮಿಶ್ರಗಾಳಿಯ ಹೊಯ್ದಾಟ, ಧಾವಂತವೆಲ್ಲ ಕರಗಿ ಗೂಡಿನೊಳಗೆ ಕಾಲಿಡುವ ಹೊತ್ತೇ ರಾತ್ರಿಯ ಆರಂಭವೆಂದಾದಲ್ಲಿ, ದೀಪವೊಂದನ್ನು ದಿಟ್ಟಿಸಿದಾಗ ಹುಟ್ಟುವ ಭಾವವೇ ಗಂಭೀರ ಮತ್ತು ಶಾಂತ, ತನ್ಮೂಲಕ ಸಿದ್ಧಿಸುವುದೇ ಭಕ್ತಿರಸ. ಹೀಗೊಂದು ರಸದ ಸೆಳವಿಗೆ ಅಡ್ಡನಿಂತು, ಒಡ್ಡಿನೊಳಗೆ ಮೈದಳೆಯುತ್ತ, ಸಮರ‍್ಪಣಭಾವ ಸೃಷ್ಟಿಸುವುದೇ ರಾಗ ಭೂಪಾಲಿ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಇಂದಿನವರೆಗೂ ತನ್ನ ಪ್ರಭಾವಳಿ ಕಾಯ್ದುಕೊಂಡು ಬಂದಿದೆ ಎಂದರೆ, ಈ ಜೈವಿಕಲಯಸಿದ್ಧಾಂತವೂ ಕಾರಣ.  

ಮಹಾರಾಷ್ಟ್ರ ಮೂಲದ ಮತ್ತು ಸದ್ಯ ಕೊಲ್ಕತ್ತೆಯಲ್ಲಿ ನೆಲೆಸಿರುವ ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಉಲ್ಲಾಸ್ ಕಶಾಲ್ಕರ್ ಮೊದಲಿಗೆ ಪ್ರಸ್ತುತಪಡಿಸಿದ್ದು ರಾಗ ಭೂಪಾಲಿ. “ಜಬ ಮೈ ಜಾನೇ’ ಬಂದಿಶ್ ವಿಲಂಬಿತ ತಿಲವಾಡಾದಲ್ಲಿ, ಧೃತ್ ತೀನ್ ತಾಲದಲ್ಲಿ “ಜಬಸೆ ತುಮ ಸಂಗ್ ಲಗಲಿ”. ಆಗ್ರಾ, ಅತ್ರೌಲಿ, ಜೈಪುರ್ ಘರಾಣೆಯ ಸಂಗಮ ಇವರ ಗಾನವೈಶಿಷ್ಟ್ಯ. ಯಾವ ಘರಾಣೆಯ ಶೈಲಿ ಆಲಾಪದ ಸೌಂದರ್ಯವನ್ನು ಹೆಚ್ಚಿಸುತ್ತದೆ, ಯಾವ ಮಾದರಿ ಲಯಕಾರಿಯನ್ನು ಪರಿಣಾಮಕಾರಿಯಾಗಿಸುತ್ತದೆ ಮತ್ತು ಯಾವ ಪಟ್ವು ತಾನುಗಳ ಪಲಕುಗಳನ್ನು ವೃದ್ಧಿಸುತ್ತಾ ಹೋಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಹೇಗೆ ತನ್ನ ಶಾರೀರಗುಣಕ್ಕೆ ತಕ್ಕಂತೆ ಅಳವಡಿಸಿಕೊಂಡು ಪ್ರದರ್ಶನ ನೀಡಬೇಕು ಎಂಬ ಪ್ರಜ್ಞೆ ಮತ್ತು ರಚನಾತ್ಮಕ ದೃಷ್ಟಿಕೋನ ಉಲ್ಲಾಸ್ ಅವರ ಗಾಯನದಲ್ಲಿ ಬಹಳ ನಿಚ್ಚಳವಾಗಿತ್ತು. ರಸೋತ್ಕರ್ಷ ಸಿದ್ಧಿಸಿದಾಗೆಲ್ಲ ಶ್ರೋತೃಗಳ ಕರತಾಡನ ಉಮೇದು ನೀಡುವಂತಿದ್ದರೂ ರಾಗರಸಕ್ಕೆ ಚ್ಯುತಿಯಾಗದಂಥ ಗಾಂಭೀರ್ಯ ಇವರ ಪ್ರಸ್ತುತಿಗಿತ್ತು.

ಈ ಗಾಯನಕ್ಕೆ ಸಾಥ್ ಸಂಗತ್ ಬೇಡುವುದು ’ಸಂಯಮ’ವನ್ನು. ಏಕವ್ಯಕ್ತಿಪ್ರದರ್ಶನದಲ್ಲಿ ಕಲಾವಿದ ಎಷ್ಟೇ ಔನ್ನತ್ಯ ಸಾಧಿಸಿದ್ದರೂ ಸಂಗತ್ ನಲ್ಲಿ ಅವನು ಕೇವಲ ಜತೆಗಾರ. ಪರಂಪರೆಗೆ ಬದ್ಧರಾಗಿರುವ ಗಾಯಕರು ವಾದಕರೊಂದಿಗೆ ಸಾಥ್ ನೀಡುವಾಗ ಸಾಥಿದಾರರ ಕಲ್ಪನಾಶಕ್ತಿಗೆ ಅವಕಾಶ ತುಸು ಕಡಿಮೆಯೇ. ಅದೊಂದು ರೀತಿ ಅಲಿಖಿತ ನಿಯಮ. ಮೇಲಾಗಿ ಮುಖ್ಯಕಲಾವಿದರ ಮನ:ಸ್ಥಿತಿಯ ಮೇಲೆ ಇದು ಅವಲಂಬಿತ. ಈ ದಿಸೆಯಲ್ಲಿ ಕಾಣಸಿಗುವ ಕೆಲವೇ ಕೆಲ ಕಲಾವಿದರಲ್ಲಿ ಪ್ರಮುಖರು ಪಂ. ಸುರೇಶ್ ತಲವಾಲ್ಕರ್. ಉಲ್ಲಾಸ್ ಅವರ ಗಾಯನಕ್ಕೆ, ವಿಲಂಬಿತ ತಿಲವಾಡದಲ್ಲಿ ಬೆರಳಾಡುವಾಗ ಅದೆಷ್ಟು ಸಂಯಮವಿತ್ತೋ, ಧೃತ್ ತೀನ್ ತಾಲಕ್ಕೆ ಬಂದಾಗ ಕಾವೇರಿದ್ದರೂ ಹದ ಕಾಯ್ದುಕೊಂಡಿತ್ತು. ಹಾಗೆಯೇ ಹಾರ್ಮೋನಿಯಂ ಕಲಾವಿದರ ಹಾದಿ ಕೂಡ ಇದಕ್ಕಿಂಥ ಭಿನ್ನವಾಗಿಲ್ಲ. ಗಾಯಕರು ಒಂದು ಸ್ವರಗುಚ್ಛದ ಮೇಲೆ ಆಲಾಪಿಸಿ ಆವರ್ತನ ಮುಗಿಸುತ್ತಿದ್ದಂತೆ, ಹಾರ್ಮೋನಿಯಂ ಸಾಥಿದಾರರ ಬೆರಳು ಮುಂದಿನ ಸ್ವರವನ್ನು ಸ್ಪರ್ಷಿಸಿಬಿಡಲೇ ಎಂಬ ತವಕದಲ್ಲಿ ಪುಟಿಯುತ್ತಿರುತ್ತವೆ. ಆದರೆ ಇಲ್ಲಿ ಜಾಡುಬಿಟ್ಟುಕೊಡುವವರು ಗಾಯಕರು ಮಾತ್ರ. ಸಿಕ್ಕ ಒಂದಿಷ್ಟು ಅವಕಾಶಗಳಲ್ಲಿ ಕೈಚಳಕ ತೋರಿ ಸೈ ಎನ್ನಿಸಿಕೊಂಡರು ಖ್ಯಾತ ಹಾರ್ಮೋನಿಯಂ ಕಲಾವಿದ ವ್ಯಾಸಮೂರ್ತಿ ಕಟ್ಟಿ.

ರಾತ್ರಿಯ ನೀರವತೆಗೆ ಹೇಳಿಮಾಡಿಸಿದ ಮತ್ತೊಂದು ರಾಗ ಕಾಮೋದ್. ಕೇದಾರ್ ಮತ್ತು ಛಾಯನಟ್ ನ ಮಿಂಚುನೋಟದೊಳಗೆ ಮಲ್ಹಾರ್, ಹಮೀರ್, ಕಲ್ಯಾಣ್ ಅಂಗಗಳ ಛಾಯೆ ಕೂಡ ಈ ರಾಗದಲ್ಲಿ ನುಸುಳಿ ಹೋಗುತ್ತದೆ. ಆದ್ದರಿಂದ ಇದರ ವಿಸ್ತಾರದ ಹಾದಿ ಅಷ್ಟು ಸರಳವಲ್ಲ. ಆದರೆ ಉಲ್ಲಾಸ್ ಅವರ ಗಂಭೀರ ಶಾರೀರ ಮತ್ತೆ ಅವರು ಅಳವಡಿಸಿಕೊಂಡ ಗಾಯನ ಶೈಲಿಯಿಂದ ಈ ರಾಗ ನೆರೆದವರ ಹೃದಯಕ್ಕಿಳಿಯುವಲ್ಲಿ ಯಶಸ್ವಿಯಾಯಿತು. ಕೊನೆಯದಾಗಿ ಶೃಂಗಾರಪೋಷಿತ ರಾಗ ದೇಶ್ ರಾತ್ರಿಯನ್ನು ಸಂಪೂರ್ಣ ತನ್ನ ತೆಕ್ಕೆಗೆಳೆದುಕೊಂಡಿತು. ಮಧ್ಯಲಯ ತೀನ್ ತಾಲದಲ್ಲಿ “ಕರೆನಾ ಮೋರಿ ಲಗಿ ಕನ್ಹಯ್ಯಾ’ ಹಾಡಿ, ಧೃತ್ ತೀನ್ ತಾಲದಲ್ಲಿ ತರಾನಾದ ರಂಗೇರಿಸಿ ಗುಂಗು ಹಿಡಿಸಿಬಿಟ್ಟರು ಉಲ್ಲಾಸ್.

ಅಂದಹಾಗೆ ಆ ರಾತ್ರಿಯೊಂದಕ್ಕೆ ರಾಗಗಳು ಹೀಗೆ ತನ್ನತಾ ಭಕ್ತಿಯಿಂದ ಅರ್ಪಿಸಿಕೊಳ್ಳುವುದರ ಹಿಂದೆ ಚಂಚಲತೆಯಿಂದ ಚಿಣ್ಣಾಟವಾಡಿ, ಮೋಹಕತೆಯಿಂದ ಮೈಮರೆಸಿದ ನವಿರುಸಂಜೆಯೊಂದಿರುತ್ತದೆ. ಅಂದಿನ ಸಂಜೆಯನ್ನು ಸ್ವಾಗತಿಸಿದ್ದು, ಖ್ಯಾತ ಸಂತೂರ್ ವಾದಕ ಪಂ. ಸತೀಶ್ ವ್ಯಾಸ್ ಮತ್ತು  ತಬಲಾವಾದಕ ಓಜಸ್ ಆದಿಯಾ. ಸಂತೂರ್ ನಲ್ಲಿ ಅಂದು ಮೈದಳೆದ ’ಮಧುವಂತಿ’ಯ ಗುಣವೇ ಅಂಥದ್ದು. ಮಧ್ಯಾಹ್ನದ ’ಮುಲ್ತಾನಿ’ಯ ಖಾಸಾ ಗೆಳತಿಯೂ ಆದ ಈಕೆಗೆ, ಎಂಥ ಜನಸಮೂಹವನ್ನೂ ತನ್ನ ಒಯ್ಯಾರದಿಂದ ಒಳಗುಮಾಡಿಕೊಳ್ಳುವ ಛಾತಿಯಿದೆ. ಅವಳ ನಡೆಗೆ ಪ್ರತಿನಡೆಯಾಗಿ ಸವಾಲು ಒಡ್ಡುತ್ತ, ಸಾವರಿಸಿಕೊಂಡು ಹೋಗುವ ಸಾಥೀಗುಣ ಓಜಸ್ ಅವರ ಬೆರಳುಗಳಲ್ಲಿ ಬಹಳೇ ಚುರುಕಾಗಿ ಚಿಗುರಿಕೊಂಡಿತ್ತು. ನಂತರ ತಂತಿ ಮತ್ತು ತಬಲಾದ ಸಂಸಾರದೊಳಗೆ ಸಾಕ್ಷಾತ್ಕಾರಗೊಂಡವಳು ’ಚಾರುಕೇಶಿ’. ವಿರಹದ ಮುನ್ಸೂಚನೆಯಲ್ಲೇ ಶೃಂಗಾರಬುತ್ತಿ ಕಟ್ಟಿಕೊಡುತ್ತಾ ಹೋದಳು.

ಹೇಗಿದ್ದಿರಬಹುದು ಆ ಸಂಜೆ? ಎಂಬ ಕುತೂಹಲ ಈಗ ನಿಮ್ಮದಾಗಿದ್ದರೆ, ಖಂಡಿತ ನೀವದನ್ನು ದಕ್ಕಿಸಿಕೊಳ್ಳಬಲ್ಲಿರಿ; ಸ್ವಲ್ಪ ಹೊತ್ತು ಕಣ್ಣು ಮುಚ್ಚಿ. ನಿಮ್ಮ ತಲೆಯ ಮೇಲೀಗ ಮೋಡಗಳ ಸಾಲು, ಬೆನ್ನ ಹಿಂದೊಂದು ಝರಿ, ಕಾಲಮುಂದೊಂದು ಪುಟ್ಟ ಕೊಳ, ಅದರೊಳಗೊಂದಿಷ್ಟು ಹಂಸಗಳತೇಲು, ಪುಟ್ಟಮೀನುಗಳು ಪುಟಿದಾಟ, ಆಗಾಗ ಉದುರಿಬೀಳುವ ಒಣಗಿದೆಲೆಗಳು, ಮಳೆಯ ಸೆಳಕು ಮತ್ತವು ಸೃಷ್ಟಿಸುವ ಅಲೆಯುಂಗುರುಗಳು... ಸಮಾಧಿ ಸ್ಥಿತಿಯಲ್ಲಿ ನಿಮ್ಮೊಳಗೆ ದಕ್ಕಿದ ನೀವು. 

-ಶ್ರೀದೇವಿ ಕಳಸದ

(ಮೆಟ್ರೊ, ಪ್ರಜಾವಾಣಿಯಲ್ಲಿ ಪ್ರಕಟ)

ಮನತುಂಬಿತು ಹದವರಿತ ನಾದ

ನೀವೀಗ ಬೆಟ್ಟದ ತಪ್ಪಲಿನಲ್ಲಿ ಸಾಗುತ್ತಿದ್ದೀರಿ. ಯಾವುದೇ ರೀತಿಯ ಸಂಪರ‍್ಕ ಸಾಧನಗಳು ನಿಮ್ಮ ಬಳಿ ಇಲ್ಲ. ನಿಮ್ಮ ಮನಸ್ಸನ್ನು ನೀವೇ ತಣಿಸಿಕೊಂಡು, ದೇಹವನ್ನು ಉತ್ತೇಜಿಸುತ್ತ ನಿಮ್ಮ ಪಾದಗಳನ್ನು ರಮಿಸುತ್ತ ಗುರಿಯನ್ನು ತಲುಪಬೇಕಿದೆ. ಹೀಗಿದ್ದಾಗ ನೀವೇನು ಮಾಡುತ್ತೀರಿ? ಜೊತೆಗಾರರೊಂದಿಗೆ ಮಾತನಾಡುತ್ತೀರಿ, ಚೆಂದಕಂಡಿದ್ದನ್ನೆಲ್ಲ ಸವಿಯುತ್ತೀರಿ, ತುಸು ವಿಶ್ರಮಿಸುತ್ತೀರಿ. ತದನಂತರ? ಸಣ್ಣಗೆ ಗುನುಗತೊಡಗುತ್ತೀರಿ.

ಅಂದೂ ಕೂಡ ಇದೇ ರೀತಿ ಹಿಮಾಲಯದ ತಪ್ಪಲಿನಲ್ಲಿ ಓಡಾಡುವ ಜನರು ನಿತ್ಯದ ದಾರಿಸವೆತಕ್ಕಾಗಿ ಹಾಡಿಕೊಳ್ಳುತ್ತ ಸಾಗುತ್ತಿದ್ದರು. ಕ್ರಮೇಣ ಆ ಗುನುಗುವಿಕೆ ಜಾನಪದ ಸಂಗೀತದ ರೂಪು ಪಡೆದು ನಂತರ ಅದೊಂದು ರಾಗದ ಹುಟ್ಟಿಗೂ ನಾಂದಿಯಾಯಿತು. ಅದೇ ಹಿಂದೂಸ್ತಾನಿಯ ಪಹಾಡಿ ಕರ‍್ನಾಟಕಿಯ ಪಹಡಿ. ಪಹಾಡ್ ಎಂದರೆ ಪರ‍್ವತ. ಪರ‍್ವತವನ್ನು ಏರುವಾಗ ಮೆಲುದನಿಯಲ್ಲಿಯೇ ಧ್ವನಿ ಹೊಮ್ಮಲು ಸಾಧ್ಯವಲ್ಲವೆ? ಅದಕ್ಕಾಗಿಯೇ ಸಾಮಾನ್ಯವಾಗಿ ಈ ರಾಗವನ್ನು ಮಂದ್ರ ಮತ್ತು ಮಧ್ಯ ಸಪ್ತಕದಲ್ಲಿಯೇ ವಿಸ್ತರಿಸುವ ಕ್ರಮ ಚಾಲ್ತಿಯಲ್ಲಿದೆ. ಇದೆಲ್ಲವನ್ನೂ ಹೀಗಿಲ್ಲಿ ನೆನಪಿಸಿದ್ದು ಚೌಡಯ್ಯ ಸ್ಮಾರಕ ಭವನ. ತೆರೆಯ ಮೇಲೆ  ’ಮಿಲನ್’ ಚಿತ್ರದ ಪಹಾಡಿ ರಾಗದ ’ಸಾವನ್ ಕಾ ಮಹೀನಾ ಪವನ ಕರೆ ಸೋರ‍್’ ಗೀತೆಯೊಳಗೆ ಸುನಿಲ್ ದತ್ ಮತ್ತು ನೂತನ್ ಇಷಾರಾ ನಡೆಸುತ್ತಿದ್ದರು. ಗಾಯಕಿ ರೋಹಿಣಿ ಪ್ರಭುನಂದನ್ ಇವರಿಬ್ಬರಿಗೆ ದನಿಯಾಗಿದ್ದರು.     

ತುಂತುರು ಮಳೆಯಲ್ಲಿ ನೆನೆದು, ಸಭಾಂಗಣದಲ್ಲಿ ಕಾಲಿಟ್ಟಾಗ, ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಈ ಹಾಡಿನಲ್ಲಿ ತೊಯ್ದುಹೋಗಿದ್ದರು.  ಸುಮಾರು ಮೂರು ತಾಸಿನ ಈ ಮೆಹಫಿಲ್ ನಲ್ಲಿ ಅರವತ್ತರಿಂದ ತೊಂಬತ್ತರ ದಶಕಗಳಲ್ಲಿ ಮನಸೂರೆಗೊಂಡ ಕೆಲ ಹಿಂದೀ ಚಿತ್ರಗೀತೆಗಳನ್ನು ಪ್ರಸ್ತುತಪಡಿಸಲಾಯಿತು. ’ಶ್ರೀ ರಾಮಚಂದ್ರ ಗ್ರಾಮೀಣ ವಿದ್ಯಾವಿಕಾಸ ಟ್ರಸ್ಟ್’ ನ ಮಕ್ಕಳ ಶಿಕ್ಷಣ ಸಹಾಯಾರ‍್ಥ ಆಯೋಜಿಸಿದ್ದ ಕಾರ‍್ಯಕ್ರಮದ ಸೂತ್ರಧಾರಿ ಕನ್ನಡತಿ, ಗಾಯಕಿ, ನಿರೂಪಕಿ, ನೃತ್ಯಗಾತಿ ಸಮನ್ವಿತಾ ಶರ‍್ಮಾ.

ತನ್ನ ತೆಕ್ಕೆಗೆ ಯಾವ ವರ‍್ಣಗಳನ್ನು ಎಳೆದುಕೊಂಡರೂ ತನ್ನೊಳಗನ್ನು ಬಿಟ್ಟುಕೊಡದೆ, ಅಸ್ಮಿತೆಯನ್ನುಳಿಸಿಕೊಳ್ಳುವುದು ಕಪ್ಪು ಬಣ್ಣ. ಇಂಥ ಕಡುಗಪ್ಪು ವರ‍್ಣದ ಸೀರೆ, ಅದರೊಡಲೊಳಗೆ ನಕ್ಷತ್ರಗಳನ್ನು ತುಂಬಿಕೊಂಡ ಜೀವವೊಂದು ಕತ್ತಲಲ್ಲೆಲ್ಲೋ ಸುಶ್ರಾವ್ಯವಾಗಿ ಆಲಾಪಿಸತೊಡಗಿದರೆ, ಅದು ಸಂಚಲನವೇ ತಾನೆ? ಕ್ಷಣಕಾಲ ಶ್ರೋತೃವೃಂದದಲ್ಲಿ ಪುಳಕ. ಹೀಗೆ ’ಬಹಾರೋಂಕೆ ಸಪನೆ’ ಚಿತ್ರದ “ಕ್ಯಾ ಜಾನು ಸಜನ್’ ಗೀತೆಯನ್ನು ಹಾಡುತ್ತಲೇ ವೇದಿಕೆ ಪ್ರವೇಶಿಸಿದರು ಸಮನ್ವಿತಾ.

ನಂತರ ಇವರು ಹಾಡಿದ ’ಸರಸ್ವತೀ ಚಂದನ್’ ಚಿತ್ರದ ’ಚಂದನ್ ಸಾ ಬದನ್’ ಪ್ರೇಕ್ಷಕರೂ ದನಿಗೂಡಿಸುವಂತೆ ಮಾಡಿದರೆ, ಗಾಯಕರಾದ ಶ್ರುತಿ ಭಿಡೆ ಮತ್ತು ಹರೀಶ್ ಕಾರೋತ್ ಹಾಡಿದ ’ರಾಂಪುರ‍್ ಕಾ ಲಕ್ಷ್ಮನ್ ಚಿತ್ರದ ಗೀತೆ ಪ್ರೇಕ್ಷಕರಲ್ಲಿ ಹುರುಪು ತುಂಬಿತು. ’ದಿಲ್ ಹೀ ತೋ ಹೈ’ ಚಿತ್ರದ ’ಲಾಗಾ ಚುನರಿ ಮೈ ದಾಗ್ ಛುಪಾಂವೋ ಕೈಸೆ’ಯ ಸಾಹಿತ್ಯ, ಹೆಣ್ಣಿನ ಸಂವೇದನೆಯನ್ನು ನಾಜೂಕಾಗಿ ಬಿಂಬಿಸುಂಥದ್ದು. ಆದರೆ ಅಂದು ಹಾಡಿದ್ದು ಮನ್ನಾಡೆ. ಇಂದು ಹಾಡಿದ್ದು ಸಮನ್ವಿತಾ. ಇದುವರೆಗೂ ಹಲವಾರು ವೇದಿಕೆಗಳಲ್ಲಿ ಪುರುಷಧ್ವನಿಯಲ್ಲೇ ಇದು ಹೆಚ್ಚು ಹಾಡಿಸಿಕೊಳ್ಳುತ್ತಾ ಬಂದಿದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ, ತಾನು ಮುದ್ದಾಮ್ ಈ ಗೀತೆಯನ್ನೇ ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದರು ಸಮನ್ವಿತಾ. ಭೈರವಿಯಲ್ಲಿ ಸಂಯೋಜನೆಗೊಂಡ ಈ ಗೀತೆ ತರಾನಾದೊಂದಿಗೆ ಅಂತ್ಯಗೊಂಡಾಗ ಗಂಧರ‍್ವಲೋಕವೇ ಅಲ್ಲಿ ಸೃಷ್ಟಿಯಾಗಿತ್ತು. ಈ ಮೂಲಕ ತಮ್ಮ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಾವೀಣ್ಯದ ಪಲುಕನ್ನು ಅವರು ತೋರಿಸಿದರು.

’ಬಾಂಬೆ’ ಚಿತ್ರದ ’ತೂ ಹೀ ರೇ’ ಮಾಧುರ‍್ಯಭರಿತ ಹಾಡಿಗೆ ಜೊತೆಯಾಗಿ ಮೋಡಿ ಮಾಡಿದ್ದು, ಅಶ್ವಿನಿ ಕೌಶಿಕ್ ಅವರ ಕೊಳಲಿನ ಸಾಥ್. ನಂತರ ಮಂತ್ರಮುಗ್ಧಗೊಳಿಸಿದ್ದು, ’ಶಿಕಾರಿ’ ಚಿತ್ರದಲ್ಲಿ ಲತಾಜಿ ಮತ್ತು ಉಷಾಜಿ ಹಾಡಿದ ’ತುಮ್ಕೋ ಪಿಯಾ ದಿಲ್ ದಿಯಾ ಕಿತ್ನೆ ನಾಝ್ ಸೆ’ ಯುಗಳಗೀತೆ. ತಾಯಿ ರೋಹಿಣಿಯೊಂದಿಗೆ ಸಮನ್ವಿತಾ ಹಾಡುತ್ತಿದ್ದಾಗ ಪರಸ್ಪರರ ಧ್ವನಿಮಿಳಿತ ತೆರೆದಿಟ್ಟ ಶ್ರಾವ್ಯಲೋಕ ಆಹ್ಲಾದಪೂರ‍್ಣ. ಮುಂದೆ ಹಾಡಿದ ’ಕಾರವಾನ್’ನ ಗೀತೆ ಸಮನ್ವಿತಾರ ಧ್ವನಿಸಾಧ್ಯತೆಯನ್ನು ಅನಾವರಣಗೊಳಿಸಿತು. ’ಅನ್ ಪ್ಲಗ್ಡ್ ಮ್ಯೂಸಿಕ್‌’ ನಲ್ಲಿ ತಮ್ಮ ಮೆಚ್ಚಿನ ಗಾಯಕ-ಗಾಯಕಿಯರ ಪ್ರಸಿದ್ಧ ಗೀತೆಗಳ ತುಣುಕು ಹಾಡುವುದರ ಮೂಲಕ ಅವರನ್ನು ಸ್ಮರಿಸಿಕೊಂಡರು. ಇಡೀ ಕಾರ‍್ಯಕ್ರಮದುದ್ದಕ್ಕೂ ಇವರಿಗೆ ಜೊತೆಯಾದ ಗಾಯಕರು ಗೋವಿಂದ್ ಕರ‍್ನೂಲ್, ಸುಬ್ರತೋ ಸಾಹೋ, ಅನಿಕೇತ್ ಪ್ರಭು, ಹ್ಯಾರೀಸ್ ಕಾರೋತ್ ಮತ್ತು ಶ್ರುತಿ ಭಿಡೆ. ಇವರೆಲ್ಲರೂ ಹಾಡುವುದರೊಂದಿಗೆ ಹದಭರಿತ ಹಾವಭಾವವನ್ನೂ ಪ್ರದರ‍್ಶಿಸಿದ ರೀತಿ, ಮತ್ತದರಿಂದ ಶ್ರೋತೃಗಳನ್ನು ಆವರಿಸಿಕೊಂಡ ಬಗೆ ಒಂಥರಾ ’ಚೈತನ್ಯದ ಪೂಜೆ’ಯನ್ನೇ ಸೃಷ್ಟಿಸಿತ್ತು.

“ನನ್ನ ಹೆಚ್ಚಿನ ಕಾರ‍್ಯಕ್ರಮಗಳು ಸ್ತ್ರೀ ಪ್ರಧಾನಕೇಂದ್ರಿತ. ಹೀಗಾಗಿ ಇವುಗಳ ಪರಿಕಲ್ಪನೆ, ವಿನ್ಯಾಸ, ಪ್ರಸ್ತುತಿಗೆ ನಾನು ವಿಶೇಷ ಆಸ್ಥೆ ವಹಿಸುತ್ತೇನೆ. ಹಾಗೆಯೇ ಹಾಡಿನೊಂದಿಗೆ ರಂಗಸಜ್ಜಿಕೆ ಬಗ್ಗೆಯೂ ಗಮನ ವಹಿಸುತ್ತೇನೆ. ಕೊನೆಯಲ್ಲಿ ನಾವು ಪ್ರಸ್ತುತಪಡಿಸಿದ  ’ಹಮ್ ಕಿಸೀ ಸೆ ಕಮ್ ನಹೀ” ಚಿತ್ರದ ’ಹೇ ಅಗರ‍್ ದುಷಮನ್’ ಕವ್ವಾಲಿಯಲ್ಲಿ ಮೊಘಲ್ ಆಸ್ಥಾನದ ಕಲಾಮಾಹೌಲ್ ಅನ್ನೇ ಸೃಷ್ಟಿಸಿದ್ದೆವು. ವಸ್ತ್ರವಿನ್ಯಾಸ, ನರ‍್ತಕಿಯರನ್ನು ಒಳಗೊಂಡಿದ್ದು ಸಭೆಗೆ ರಂಜನೆ ನೀಡಿತ್ತು. ಇದೆಲ್ಲ ಕಾರಣಗಳಿಂದಾಗಿ ಮುಂದಿನ ವರ‍್ಷ ಇನ್ನೊಂದು ’ಚಿತ್ರಹಾರ‍್’ ಪ್ರಸ್ತುತಪಡಿಸುವುದು ಈಗಲೇ ಖಾತ್ರಿಯಾಗಿದೆ’  ಹೀಗೆ ಅಭಿಪ್ರಾಯಿಸಿದರು ಸಮನ್ವಿತಾ.

ಕಲಾವಿದರು ಹೀಗೆ ಪ್ರಯೋಗಾತ್ಮಕವಾಗಿ ಹೆಜ್ಜೆ ಇಟ್ಟಾಗ ಮಾತ್ರ ಆ ಕ್ಷೇತ್ರದಲ್ಲಿ ಹೆಚ್ಚಿನ ಸಾಧ್ಯತೆಗಳು ಸೃಷ್ಟಿಯಾಗುತ್ತಾ ಹೋಗುತ್ತವೆ. ಹೀಗೆ ಎಲ್ಲ ಪ್ರಕಾರಗಳೂ ಜನರಿಗೆ ಹತ್ತಿರವಾಗುತ್ತ, ಕಲೆ ಸಮಾಜಮುಖಿಯಾಗಿ ಸಮೃದ್ಧಿ ಕಾಣುತ್ತಾ ಹೋಗುತ್ತದೆ.  

-ಶ್ರೀದೇವಿ ಕಳಸದ  

(ಮೆಟ್ರೊ, ಪ್ರಜಾವಾಣಿಯಲ್ಲಿ ಪ್ರಕಟ)