Monday, July 18, 2016

ಮಲ್ಹಾರ ನೀ ಮೇಘ ನಾ...


ತಾನೂ ಕುದೀತಾ ನಮ್ಮನ್ನೂ ಕುದಿಸ್ತಾ ಸದಾ ಅಟ್ಟಾಡಿಸಿಕೊಂಡೇ ಇರುತ್ತಿದ್ದ ಬೆಂಗಳೂರೆಂಬ ಈ ಹುಡುಗನ ಕಾಲೀಗ ಸರೀ ಮುರಿದು ಬಿದ್ದಿದೆ. ಇಷ್ಟು ದಿನ ಎದೆ ಮರಭೂಮಿ ಮಾಡಿಕೊಂಡಿದ್ದ ಇಂವನೀಗ ದಾರಿಕಾಣದೆ, ಮಡಿಕೆಯೊಳಗೆ ಕೂತಿದ್ದಾನೆ. ಥ್ಯಾಂಕ್ಸ್ ಕಣೆ ’ವರ‍್ಷಾ’ ಇವನನ್ನು ಜುಣುಗುಟ್ಟುವ ಜಪಕ್ಕೆ ತಳ್ಳಿದ್ದಕ್ಕೆ...


=======================

ಇಲ್ಲಿ ಆದಿಯೂ ಹನಿಯೇ ಅಂತ್ಯವೂ ಹನಿಯೇ. ಈ ಹನಿಹನಿಗಳ ಮಧ್ಯೆ ನಲಿದು ನರಳಾಡಿ, ಹರಿದು ಹೊರಳಾಡಿ, ಭೋರ‍್ಗರೆದದ್ದೆಲ್ಲ ಆ ಕ್ಷಣಗಳ ಮಾಂತ್ರಿಕತೆ. ದಕ್ಕಿದ್ದು ದಕ್ಕಿ, ಮಿಕ್ಕಿದ್ದು ಮಿಕ್ಕಿ, ಬಿಕ್ಕಿ ಉಕ್ಕಿದ್ದೆಲ್ಲ ಹರಿದಾರಿ ಹಿಡಿದು ಅದಿನ್ನೆಲ್ಲೋ ಅವಿರ‍್ಭವಿಸುವುದಿದೆಯಲ್ಲ? ಅದೇ ಮಾಯೆ. ಮಳೆಯ ಮಾಯೆ. ಬೆಂಗಳೂರೆಂಬ ಮಾಂತ್ರಿಕ ಹುಡುಗನಂಥ ಮಾಯೆ. ಈ ಮಾಯೆಯ ತೆಕ್ಕೆಯೊಳಗಿರುವ ನಮ್ಮ ಯುವಕಲಾವಿದರು ಮತ್ತವರ ಹರಿವಿಗೆ ಈ ಮಳೆ ಹೇಗೆ ಆಕರವಾಗುತ್ತ ಆಕಾರ ಕೊಡುತ್ತದೆ... ಎಂದು ಯೋಚಿಸುತ್ತಿದ್ದಾಗ ಮೊದಲಿಗೆ ತೆರೆದುಕೊಂಡಿದ್ದು ಪೋರ್ಚುಗಲ್ನಿಂದ ತೂರಿಬಂದ ಧ್ವನಿಸಂದೇಶ. ಗಾಯಕ ವಿಜಯ್ ಪ್ರಕಾಶ್ ಊರು ಮೈಸೂರು, ನೆಲೆಯೂರು ಮೂಂಬೈ. ಒಂದು ಕಾಲಿರುವುದು ಮಾತ್ರ ಸದಾ ಬೆಂಗಳೂರು. ಈಗವರು ಜೈ ಹೋ ಎನ್ನುತ್ತಿರುವುದು ಸ್ಪೇನ್ ಮತ್ತು ಪೋರ‍್ಚುಗಲ್ ನೆಲದಲ್ಲಿ. “ಇಲ್ಲೂ ಕೂಡ ಮಳೆ ಬರ್ತಿದೆ. ಎರಡು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಳೆ ಕುರಿತಾದ ಜಾನಪದ ಹಾಡುಗಳನ್ನ ಕೇಳಿದ್ದೇ ಸಾಕು, ನಮ್ಮ ಶರೀಫಜ್ಜ ಆವರಿಸಿಕೊಂಡುಬಿಟ್ರು. ’ಮಾಯದಂಥ ಮಳೆ’ಯ ಗುಂಗಿನಲ್ಲೇ ಇದ್ದೀನಿ. ಆಯಾ ನೆಲಕ್ಕೂ, ಬೀಳುವ ಹನಿಗೂ ಮತ್ತು ಹೊಮ್ಮುವ ಸ್ವರಗಳಿಗೂ ಸಂಬಂಧವಿರುತ್ತದೆ. ನಾವೆಲ್ಲೇ ಇದ್ದರೂ ಬೀಳುವ ಮಳೆ ಬೀಸುವ ಗಾಳಿ ಮತ್ತೆ ನಮ್ಮ ನೆಲವನ್ನೇ ನೆನಪಿಸುತ್ತದೆ. ಬೆಂಗಳೂರಿನ ಮಳೆಯೂ ಹಾಗೇ. ಇಲ್ಲಿ ಕಟ್ಟಡಗಳ ಮಧ್ಯೆ ಹಸಿರನ್ನು ಹುಡುಕಬೇಕು ನಿಜ. ಆದರೂ ಈ ಮಣ್ಣಿಗೂ ಗುಟ್ಟಿದೆ. ಈ ಗುಟ್ಟನ್ನು ಒಡೆಯುವಂಥದ್ದೇ ಮಳೆಹನಿ. ಈ ಹನಿಗಳಿಂದ ಇಲ್ಲಿರುವ ಅದೆಷ್ಟೋ ಸೃಜನಶೀಲ ಮನಸ್ಸುಗಳು ಆಹ್ಲಾದಗೊಳ್ಳುತ್ತವೆ, ರಾಗ ಸಂಯೋಜನೆಗೆ ಮತ್ತು ಪ್ರಸ್ತುತಿಗೆ ಸ್ಫೂರ್ತಿ ನೀಡುತ್ತವೆ’.

ಗಂಗೆಯಾತಕೋ...
ಚಳಿಗಾಲವೋ ಬೇಸಿಗೆಯೋ ಯಾರೋ ಎಂದೋ ಗೀರಿದ ಎದೆಗಾಯ ಮಾಯಲು ಮಳೆಯ ಮುಲಾಮೇ ಬೇಕು. ’ಸಿಂಪಲ್ಲಾಗೊಂದ್ ಲವ್ ಸ್ಟೋರಿ’ ಖ್ಯಾತಿಯ ಸಂಗೀತ ನಿರ‍್ದೇಶಕ ಬಿ ಜೆ ಭರತ್ ಗೆ ಬಾಲ್ಯ ಮತ್ತು ಬೆಂಗಳೂರುಮಳೆಯೆಂದರೆ ಗೆಳತಿಪ್ರೀತಿ ಮತ್ತು ತಾಯಮಮತೆ. “ಆಗಷ್ಟೇ ಶಾಸ್ತ್ರೀಯ ಸಂಗೀತ ಕಲಿಯಲು ಶುರು ಮಾಡಿದ್ದೆ. ಯಾವುದೋ ಸ್ಪರ‍್ಧೆಗಾಗಿ, ಜೇಸುದಾಸ್ ಹಾಡಿದ ’ಕಂಹಾ ಸೆ ಆಯೆ ಬದರಾ’ ಹಾಡನ್ನು ತಯಾರಿ ಮಾಡಿಕೊಳ್ಳುತ್ತಿದ್ದೆ. ರಾಗ ಮತ್ತು ಹಾಡಿನ ಅರ್ಥ ಕೂಡ ಗೊತ್ತಿರಲಿಲ್ಲ. ಆದರೆ ರಿಯಾಝ್ ಮಾಡುವಾಗೆಲ್ಲಾ ಏನೋ ಒಂಥರಾ ಮಳೆಯ ಅನುಭವವಾಗುತ್ತಿತ್ತು. ಅರೆ ಹೀಗೇಕೆ? ಎಂದು ಅಪ್ಪನಿಗೆ ಕೇಳಿದಾಗ, ಅವರು ಹಾಡಿನ ಅರ‍್ಥವನ್ನು ಬಿಡಿಸಿಟ್ಟರು. ಮುಂದೆ ರಾಗ ಕಲಿತ ಮೇಲೆ ಅದು ಮೇಘಮಲ್ಹಾರವೆಂದು ಗೊತ್ತಾಯಿತು. ಆದರೆ ಆಗ...? ಅಂದಹಾಗೆ ಮಳೆಬಂದಾಗೆಲ್ಲ ನಾ ಆಗಲೂ ನೆನಯುತ್ತಿದ್ದೆ, ಈಗಲೂ. ಅಪ್ಪ ಅಮ್ಮ ಯಾವತ್ತೂ ತಡೆಯಲಿಲ್ಲ. ನನಗನ್ನಿಸೋದು, ನಮ್ಮ ಕೋಪತಾಪಪಾಪ ತೊಳೆದುಕೊಳ್ಳಲು ಗಂಗಾ ನದಿಗೇ ಹೋಗಬೇಕಂತೇನಿಲ್ಲ. ಮಳೆಯಲ್ಲಿ ಸ್ವಲ್ಪ ಹೊತ್ತು ನೆಂದರೆ ಸಾಕು, ನಮಗೆ ನಾವು ದಕ್ಕತೊಡಗುತ್ತೇವೆ, ಮನಸ್ಸು ಹಗುರಾಗಿ ಸೃಜನಶೀಲ ಹಾದಿಯಲ್ಲಿ ಯೋಚಿಸಲಾರಂಭಿಸುತ್ತದೆ”. ನಿಜ,  ಹಾಡೊಂದು ಸಾಹಿತ್ಯ ಮತ್ತು ರಾಗದ ಅರಿವಿನಾಚೆಗೂ ಮೀರಿದ ಅನುಭವವೊಂದನ್ನು ಕಟ್ಟಿಕೊಡುತ್ತದೆ ಎಂದರೆ ಅದು ಆ ಸಂಯೋಜನೆಯ ತಾಕತ್ತು.

ಈಗಂತೂ ದಿನಾ ಮಳೆ. ಬಂದಾಗೆಲ್ಲ ಸುಮ್ಮನೇ ಗಮನಿಸಿ, ಇಲ್ಲಿ ದಿನಗಟ್ಟಲೆ ವಾರಗಟ್ಟಲೆ ಮಳೆ ಶ್ರುತಿಹಿಡಿಯುವುದಿಲ್ಲ. ಏನಿದ್ದರೂ ಪಾಳೀ ಲೆಕ್ಕ, ಒಮ್ಮೊಮ್ಮೆ ಡಬಲ್ ಶಿಫ್ಟ್. ಥೇಟ್ ಸಂಗೀತ ಕಛೇರಿಗಳಂತೆ. ಒಮ್ಮೊಮ್ಮೆ ಅಹೋರಾತ್ರಿ ಕಛೇರಿಗಳಂತೆ. ಕಛೇರಿ ಮುಗಿದ ಮರುದಿನ ಮತ್ತದೇ ದಿನಚರಿ, ಮತ್ತೊಂದು ವಾರಾಂತ್ಯಕ್ಕೆ ಹಪಾಹಪಿ. ಜಡಿದ ಮಳೆಗೆ ಅಲ್ಲೆಲ್ಲೋ ರಾತ್ರಿ ಎದೆಮಟ್ಟ ನೀರುನಿಂತಿದೆ ಎನ್ನುವ ಹೊತ್ತಿಗೆ, ಗುಬ್ಬಚ್ಚಿ ಪಾದ ತೋಯಲೂ ನೀರಿಲ್ಲದಂತೆ ಮಾಡಿರುತ್ತದೆ ಬೆಳ್ಳಂಬೆಳಗು. ಯಂತ್ರನಗರಿಗೇನಿದ್ದರೂ ಬರೀ ಚಲನೆ- ಗತಿ ಗತಿ-ಚಲನೆ. ಹಾಗಾದರೆ ಎದೆಗೂಡು ಬೆಚ್ಚಗಿಟ್ಟುಕೊಳ್ಳುವ ಲಯವೆಲ್ಲಿದೆ, ನಾದವೆಲ್ಲಿದೆ, ಅದೂ ಅಂದಿಗಂದಿಗೆ ದಕ್ಕುವ ಮಳೆಯಂತೆಯೆ? ಎಂದು ಯೋಚಿಸುತ್ತಿರುವಾಗ, ಸಮ್ಮಿಗೆ ಬಂದವರು ಲಯವಾದ್ಯ ಕಲಾವಿದ ಪ್ರಮಥ್ ಕಿರಣ್. ಅಮೆರಿಕದ ಕಛೇರಿಗಳಲ್ಲಿ ಮುಳುಗಿರುವ ಅವರು, “ಹೇಗೆ ತಾಳವೊಂದು ಸಮ್ಮಿನಿಂದ ಶುರುವಾಗಿ ಒಂದು ಆವರ‍್ತನ ಮುಗಿಸಿ ಸಮ್ಮಿಗೆ ಬಂದು ನಿಲ್ಲುತ್ತದೆಯೋ ಆದೇ ಮಾದರಿಯಲ್ಲಿ ಮಳೆಯೂ. ಹನಿಯಿಂದ ಶುರುವಾಗಿ ಭೋರ‍್ಗರೆಯುವ ತನಕ ಮಳೆ ಸುರಿಯುತ್ತದೆಯೋ ಹಾಗೇ ವಾದನದಲ್ಲಿಯೂ ನಾವು ಎಲ್ಲಾ ಸ್ಥಿತಿಗಳನ್ನು ತಲುಪಿ ಕೊನೆಗೆ ಸಮ್ಮಿಗೆ ಬಂದು ನಿಲ್ಲುತ್ತೇವೆ. ಬೆಂಗಳೂರಿನ ಗಂಟೆಗಳ ಲೆಕ್ಕದ ಮಳೆಯೂ ಮತ್ತು ರಿಯಾಝಿನ ಅವಧಿಯದೂ ಒಂದೇ ಲೆಕ್ಕಾಚಾರ, ಒಂದೇ ಓಟ, ಓಂದೇ ಓಘ. ಹೊರಗೆಲ್ಲೋ ಮಳೆ ಬೀಳುತ್ತಿದ್ದರೆ ಒಳಗೆ ಕುಳಿತು, ಹೊಸಹೊಸ ಪಟ್ಟುಗಳನ್ನು ಸೃಷ್ಟಿಸಿ, ಸರದಿಯಂತೆ ಬರುವ ಕಾರ್ಯಕ್ರಮಗಳಲ್ಲಿ ಆಗಿಂದಾಗ್ಗೇ ಪ್ರಸ್ತುತಪಡಿಸುವುದರಲ್ಲಿ ಒಂಥರಾ ಮಜಾ ಇದೆ’ ಎನ್ನುತ್ತಾರೆ.

ಜೈವಿಕ ಲಯಸಿದ್ಧಾಂತ
ಮಳೆ ಮಗುವಿನಂತೆ. ಚಿತ್ತಕೊಟ್ಟರೆ ಸಾಕು ಒಳಗೆಳೆದುಕೊಂಡುಬಿಡುತ್ತದೆ. ಓಡುವ ನಿಮ್ಮನ್ನು ನಡಿಗೆಯ ಪುಳಕಕ್ಕೆ ತೆರೆದಿಡುತ್ತದೆ. ಕ್ರಮೇಣ ನೆಲಕ್ಕೆ ಕೂರಿಸಿ ತನ್ನೊಡನೆ ಆಟವಾಡು ಎಂದು ದುಂಬಾಲು ಬಿಳುತ್ತದೆ, ನೀವೂ ಹಿಂಬಾಲಿಸುತ್ತೀರಿ. ಹಿಂದೂಸ್ತಾನಿ ಗಾಯಕ ಓಂಕಾರ್ನಾಥ್ ಹವಾಲ್ದಾರ್ ಅವರಿಗೆ, ಸಂಗೀತದ ಗುಂಗು ಹಿಡಿಸಿದ್ದೇ ಮಳೆ. “ಶಾಲೆಬಿಟ್ಟು ಮನೆಗೆ ಬಂದರೆ ಮಕ್ಕಳು ಮತ್ತೆ ಓಡುವುದೇ ಅಂಗಳಕ್ಕೆ, ಓಣಿಗೆ. ಆದರೆ ಮಳೆಗಾಲ ನಮ್ಮನ್ನು ಮನೆಯೊಳಗೇ ಹಿಡಿದು ಕೂಡಿಸುತ್ತಿತ್ತು. ನಮ್ಮ ತಂದೆಯವರು ಅವರ ಶಿಷ್ಯಂದಿರಿಗೆ ಪಾಠ ಮಾಡುವ ಮಳೆರಾಗಗಳೂ ನಮ್ಮೊಳಗಿಳಿಯುತ್ತಿದ್ದವು. ಇಂದಿಗೂ ನಾವು ಕಛೇರಿ ಪ್ರಸ್ತುತಿಗೆ ರಾಗಸಮಯ ಪಾಲಿಸುತ್ತಿರುವುದರಿಂದ ಮಿಯಾಮಲ್ಹಾರ‍್, ಮೇಘಮಲ್ಹಾರ‍್, ಗೌಡಮಲ್ಹಾರ‍್, ಜೈಜೈಮಲ್ಹಾರ‍್, ನಟಮಲ್ಹಾರ‍್ ಮುಂತಾದ ಮಳೆರಾಗಗಳನ್ನು ಹಾಡಲು ಹಾತೊರೆಯುತ್ತಿರುತ್ತೇವೆ. ಅಲ್ಲದೆ, ಮೀಂಡ್ ಪ್ರಧಾನ ಮಿಯಾಮಲ್ಹಾರ್ ನನ್ನ ಪ್ರೀತಿಯ ರಾಗ. ಯಾವುದೋ ಒಂದು ದಿಕ್ಕಿನಿಂದ ಸುಳಿದು ಬರುವ ಗಾಳಿಯ ಚಲನೆ ಮೀಂಡ್ ಅನ್ನು ಸಾಂಕೇತಿಸಿದರೆ, ಮೋಡಗಳ ಚಲನೆ ಗಮಕ ಶೈಲಿಯ ತಾನ್ ಗಳಿಗೆ ಸಮೀಕರಣಗೊಳ್ಳುತ್ತದೆ. ಹೀಗೆ ಆಯಾ ರಾಗದ ಬಂದಿಷ್ ಮತ್ತು ಪ್ರಸ್ತುತಿಗೆ ಮಳೆಯ ಅಂಶಗಳೇ ಮೂಲ ಮತ್ತು ಪ್ರೇರಣೆ’ ಇದು ಅವರ ಪಾರಂಪರಿಕ ನಿಲುವು.

ಬೆಂಗಳೂರಿನಲ್ಲಿ ಯಾವ ಕಾಲಕ್ಕೂ ಕಛೇರಿಗಳ ಸುರಿಮಳೆ. ಆದರೆ ಆಯಾ ಋತುಮಾನಗಳ ಪರಿಕಲ್ಪನೆಯಡಿ ಹೆಚ್ಚು ಕಾರ್ಯಕ್ರಮಗಳು ಸಂಯೋಜನೆಗೊಂಡಾಗ, ಕಲಾವಿದರ ಭಾಂಡಾರ ಹಿಗ್ಗುತ್ತದೆ. ಆಸ್ವಾದಕರಲ್ಲಿ ಆಸಕ್ತಿ ಮೈದಳೆಯುತ್ತದೆ. ಹೀಗೆ ಪ್ರಕೃತಿಯ ಕರೆಗೆ ಪ್ರತಿಯಾಗಿ ಸ್ಪಂದಿಸಿದಾಗಲಲ್ಲವೆ ಒಲವೊಂದು ಮೂಡುವುದು? ’ಕರೆಯೋಲೆ’ ಖ್ಯಾತಿಯ ಗಾಯಕಿ ಇಂಚರ ರಾವ್ ಬೆಂಗಳೂರಿನಲ್ಲಿ ನೆಲೆನಿಂತು ದಶಕ ಕಳೆದರೂ, ಮಳೆ ಬಂದಾಗೆಲ್ಲ ಹೊಸನಗರದ ಅಜ್ಜನ ಮನೆ, ಮಳೆ, ಖಾಸ್ ಬೈಠಕ್, ಅಜ್ಜಿಯ ತಿಂಡಿತಿನಿಸಿನ ಸಮಾರಾಧನೆ ರಚ್ಚೆಹಿಡಿದು ಕಾಡತೊಡಗುತ್ತವೆಯಂತೆ. “ಪಕ್ಕಾ ಮಲೆನಾಡ ಹುಡುಗಿ ನಾನು. ಮಳೆ ಬಂದರೆ ನಮ್ಮ ಅಜ್ಜನ ಹಾರ್ಮೋನಿಯಂ ಹೊರಗೆ ಬರುತ್ತಿತ್ತು, ನಾವೆಲ್ಲಾ ಹಾಡುತ್ತಿದ್ದೆವು. ಅಕ್ಕಪಕ್ಕದ ಮನೆಯವರೆಲ್ಲ ತಾವಾಗೇ ನಮ್ಮ ಮನೆಗೆ ಜಮಾಯಿಸುತ್ತಿದ್ದರು. ಅಜ್ಜಿ ಅವರಿಗೆಲ್ಲ ಮಳೆಗಾಲದ ತಿನಿಸುಗಳನ್ನು ಮಾಡಿಕೊಡುತ್ತಿದ್ದರು. ಅಂದು ಅದೊಂದೇ ನಮಗೆ ಅಪ್ಪಟ ಮನರಂಜನೆಯ ಮಾರ್ಗ, ಈಗದೇ ನನಗೆ ಬದುಕಿನ ಶ್ರುತಿ. ಹೀಗೆ ಅಜ್ಜನೂರಿನ ಮಳೆಗೂ ಬೆಂಗಳೂರಿನ ಮಳೆಗೂ ತಾಳೆಹಾಕಿದಾಗ, ಕೆಲವೊಮ್ಮೆ ಇಲ್ಲಿಯ ಮಳೆಯೂ ಇಲ್ಲಿನ ಮನಸ್ಸುಗಳಂತೆಯೇ ಇದೆ ಎನ್ನಿಸುತ್ತದೆ” ಇದು ಇಂಚರ ಪಲ್ಲವಿ.

ಎದೆಯ ಹರಿವಿಗೊಂದು ಹುಟ್ಟು
ಅಂದಿನಂದಿನ ಬದುಕು ಅಂದಿಗಂದಿಗೆ, ನಂತರ ಅವರ್ಯಾರೋ ನಾವ್ಯಾರೋ. ಇಲ್ಲಿ ನಮ್ಮ ಭವಿಷ್ಯ ಶ್ರುತಿಗೊಳ್ಳಬಹುದು ಆದರೆ ಮನದ ತಂತುಗಳಲ್ಲ ಎಂಬ ಸಣ್ಣ ಬೇಸರದೆಳೆ, ಊರುಬಿಟ್ಟು ಬೆಂಗಳೂರು ಸೇರಿದ ಕೆಲ ಸೂಕ್ಷ್ಮ ಮನಸ್ಸುಗಳಲ್ಲಿ ಇಣುಕುವುದು ಸಹಜ. ಇಲ್ಲಿಯ ಮಳೆಯೂ ಇದಕ್ಕೆ ಸಾಕ್ಷಿ. ಎಷ್ಟೋ ಸಲ ನಿನ್ನೆಯ ಹನಿದ ಮಳೆಗೆ ಇಂದಿನ ನೆನಪೇ ಇರುವುದಿಲ್ಲವೆಂದಮೇಲೆ ನಾಳಿಯ ಮಾತೆಲ್ಲಿ? ಆದರೂ ನಾವೂ ಭರವಸೆಯ ದೋಣಿಯಿಂದ ಇಳಿಯುವವರೇ ಅಲ್ಲ. ಎದೆಯ ಹರಿವಿಗೊಂದು ಹುಟ್ಟು ಕಟ್ಟಿಕೊಳ್ಳುತ್ತಲೇ ಸಾಗುತ್ತಿರುತ್ತೇವೆ. ಕರ್ನಾಟಕ ಸಂಗೀತ ಕಲಾವಿದೆ ಶ್ರೀಮಾತಾ ರಮಾನಂದ್ ಮಳೆದಿನಗಳ ಸಂಗೀತ ತರಗತಿಗಳ ಝಲಕ್ ಅನ್ನು ಕಟ್ಟಿಕೊಡುವುದು ಹೀಗೆ, “ಅವತ್ತೊಂದಿನ ಜೋರು ಮಳೆ, ಕೆಲವು ಮಕ್ಕಳು ಮನೆಗೆ ಹೋದರು. ಮೂರು ಪುಟಾಣಿಗಳು ಇಲ್ಲೇ ಉಳಿದವು. ಸುಮ್ಮನೆ ಕೂರದೆ, ಅಮೃತ ಅಮೃತವರ‍್ಷಿಣಿ ಹಾಡೋಣ್ವಾ ಎಂದವು. ಅವತ್ತು “ಆನಂದಾಮೃತಾಕರ‍್ಷಿಣಿ” ಹಾಡಿದ್ದು ಮರೆಯದ ಅನುಭವ. ಅಷ್ಟೊಂದು ತನ್ಮಯತೆ ಸಾಧಿಸಿದ್ದೇ ಮಳೆ ಮತ್ತು ಆ ಪುಟಾಣಿಗಳಿಂದ. ಇನ್ನೊಂದಿನ ಪಾಠ ಹೇಳೋವಾಗ, ಅಮೃತವರ್ಷಿಣಿ ರಾಗದ ಸಾಹಿತ್ಯ ಬರೆದುಕೊಳ್ಳಿ ಅಂತ ಹೇಳಿದ್ದಕ್ಕೆ, ವರ‍್ಷಿಣಿ ಅನ್ನೋಪುಟ್ಟಿಯ ಹೆಸರಿನಿಂದ ಚರ್ಚೆ ಆರಂಭವಾಗಿ, ಮುತ್ತುಸ್ವಾಮಿ ದೀಕ್ಷಿತರು ಈ ರಾಗ ಹಾಡಿ ಮಳೆ ಬರಿಸಿದ್ರು ಎನ್ನುವ ಕಥೆಗೆ ಬಂದು ನಿಂತಿತು. ಚೆನ್ನಾಗಿ ಹಾಡಿದ್ರೆ ಮಳೆಬರುತ್ತೆ ಗೊತ್ತಾ? ಎಂದು ಹೇಳುತ್ತಾ ಪಲ್ಲವಿ ಮುಗಿಸಿದೆ. ಚರಣ ಶುರು ಮಾಡೋ ಹೊತ್ತಿಗೆ ಕ್ಷೇತ್ರಾ, ತನ್ವಿ, ತನುಶ್ರೀ, ಕಿಟಕಿಗೆ ಮುಖವಿಟ್ಟು, ಮಳೆ ಬರ್ತಿದೆಯಾ ಅಂತ ನೋಡ್ತಿದ್ರು’.

ಮುಗ್ಧತೆ, ಬೆರಗು, ಸೃಷ್ಟಿಯ ಮೂಲವೇ ಕಲೆಯಲ್ಲವೆ? ಅಂದಹಾಗೆ ಇಂದೂ ಕೂಡ ಹೊರಗೆ ಆ ಮಳೆಹುಡುಗ ಬಂದೇ ಬರುತ್ತಾನೆ... ಆಗ ಒಳಗೆ ಗಿರಗಿರಗಿರ ಗಿರಕ್ ಗಿರಕ್ ಗಿರಗಿರರರರಾ... ಕಾಲಬಳಿಯೊಂದು ಖಾಲೀಪಾತ್ರೆ ಬಂದು ಬೀಳುತ್ತದೆ. ಇನ್ನೇನು ಬಾಗಬೇಕು ನೀವು, ಮನೆಯ ಪುಟ್ಟದೇವತೆ ಅದನ್ನೆತ್ತಿಕೊಂಡು ಅಂಗಳಕ್ಕೆ ಹಾರಿಬಿಡುತ್ತದೆ. ಆಗ ಗದರಮ್ಮನೋ, ಗದರಪ್ಪನೋ ನೀವಾಗದೆ, ಬಾಗಿಲಬಳಿ ನಿಂತು ಗಮನಿಸುವಂಥವರಾದಲ್ಲಿ...; ಎಡಕ್ಕೆ ಬಲಕ್ಕೆ, ಹಿಂದಕ್ಕೆ ಮುಂದಕ್ಕೆಲ್ಲ ಸರಿದಾಡಿದ ಪಾತ್ರೆ ಕೊನೆಗೊಮ್ಮೆ ಎದೆಬಟ್ಟಲೊಡ್ಡಿ ಹನಿಧ್ಯಾನಕ್ಕೆ ಕುಳಿತುಬಿಡುತ್ತದೆ. ಆಗ ಹಾಗೇ ಮಗುವಿನ ಮುಖ ನೋಡಿ, ಅಲ್ಲಿ ನಕ್ಷತ್ರಗಳೆರಡು ಮತ್ತು ಗುಲಾಬಿ ದಳವೊಂದು ಕಾಣದಿದ್ದಲ್ಲಿ ಹೇಳಿ. 
    
-ಶ್ರೀದೇವಿ ಕಳಸದ

(ಮೆಟ್ರೊ, ಪ್ರಜಾವಾಣಿಯಲ್ಲಿ ಪ್ರಕಟ)

2 comments:

sunaath said...

ನೀವು ಮೇಘಮಲ್ಹಾರ ಹಾಡಿದಿರಾ? ಇಲ್ಲಿ ಮಳೆ ಬರುತ್ತಾ ಇದೆ!

ಆಲಾಪಿನಿ said...

Haha 😄