Monday, July 18, 2016

ಮನತುಂಬಿತು ಹದವರಿತ ನಾದ

ನೀವೀಗ ಬೆಟ್ಟದ ತಪ್ಪಲಿನಲ್ಲಿ ಸಾಗುತ್ತಿದ್ದೀರಿ. ಯಾವುದೇ ರೀತಿಯ ಸಂಪರ‍್ಕ ಸಾಧನಗಳು ನಿಮ್ಮ ಬಳಿ ಇಲ್ಲ. ನಿಮ್ಮ ಮನಸ್ಸನ್ನು ನೀವೇ ತಣಿಸಿಕೊಂಡು, ದೇಹವನ್ನು ಉತ್ತೇಜಿಸುತ್ತ ನಿಮ್ಮ ಪಾದಗಳನ್ನು ರಮಿಸುತ್ತ ಗುರಿಯನ್ನು ತಲುಪಬೇಕಿದೆ. ಹೀಗಿದ್ದಾಗ ನೀವೇನು ಮಾಡುತ್ತೀರಿ? ಜೊತೆಗಾರರೊಂದಿಗೆ ಮಾತನಾಡುತ್ತೀರಿ, ಚೆಂದಕಂಡಿದ್ದನ್ನೆಲ್ಲ ಸವಿಯುತ್ತೀರಿ, ತುಸು ವಿಶ್ರಮಿಸುತ್ತೀರಿ. ತದನಂತರ? ಸಣ್ಣಗೆ ಗುನುಗತೊಡಗುತ್ತೀರಿ.

ಅಂದೂ ಕೂಡ ಇದೇ ರೀತಿ ಹಿಮಾಲಯದ ತಪ್ಪಲಿನಲ್ಲಿ ಓಡಾಡುವ ಜನರು ನಿತ್ಯದ ದಾರಿಸವೆತಕ್ಕಾಗಿ ಹಾಡಿಕೊಳ್ಳುತ್ತ ಸಾಗುತ್ತಿದ್ದರು. ಕ್ರಮೇಣ ಆ ಗುನುಗುವಿಕೆ ಜಾನಪದ ಸಂಗೀತದ ರೂಪು ಪಡೆದು ನಂತರ ಅದೊಂದು ರಾಗದ ಹುಟ್ಟಿಗೂ ನಾಂದಿಯಾಯಿತು. ಅದೇ ಹಿಂದೂಸ್ತಾನಿಯ ಪಹಾಡಿ ಕರ‍್ನಾಟಕಿಯ ಪಹಡಿ. ಪಹಾಡ್ ಎಂದರೆ ಪರ‍್ವತ. ಪರ‍್ವತವನ್ನು ಏರುವಾಗ ಮೆಲುದನಿಯಲ್ಲಿಯೇ ಧ್ವನಿ ಹೊಮ್ಮಲು ಸಾಧ್ಯವಲ್ಲವೆ? ಅದಕ್ಕಾಗಿಯೇ ಸಾಮಾನ್ಯವಾಗಿ ಈ ರಾಗವನ್ನು ಮಂದ್ರ ಮತ್ತು ಮಧ್ಯ ಸಪ್ತಕದಲ್ಲಿಯೇ ವಿಸ್ತರಿಸುವ ಕ್ರಮ ಚಾಲ್ತಿಯಲ್ಲಿದೆ. ಇದೆಲ್ಲವನ್ನೂ ಹೀಗಿಲ್ಲಿ ನೆನಪಿಸಿದ್ದು ಚೌಡಯ್ಯ ಸ್ಮಾರಕ ಭವನ. ತೆರೆಯ ಮೇಲೆ  ’ಮಿಲನ್’ ಚಿತ್ರದ ಪಹಾಡಿ ರಾಗದ ’ಸಾವನ್ ಕಾ ಮಹೀನಾ ಪವನ ಕರೆ ಸೋರ‍್’ ಗೀತೆಯೊಳಗೆ ಸುನಿಲ್ ದತ್ ಮತ್ತು ನೂತನ್ ಇಷಾರಾ ನಡೆಸುತ್ತಿದ್ದರು. ಗಾಯಕಿ ರೋಹಿಣಿ ಪ್ರಭುನಂದನ್ ಇವರಿಬ್ಬರಿಗೆ ದನಿಯಾಗಿದ್ದರು.     

ತುಂತುರು ಮಳೆಯಲ್ಲಿ ನೆನೆದು, ಸಭಾಂಗಣದಲ್ಲಿ ಕಾಲಿಟ್ಟಾಗ, ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಈ ಹಾಡಿನಲ್ಲಿ ತೊಯ್ದುಹೋಗಿದ್ದರು.  ಸುಮಾರು ಮೂರು ತಾಸಿನ ಈ ಮೆಹಫಿಲ್ ನಲ್ಲಿ ಅರವತ್ತರಿಂದ ತೊಂಬತ್ತರ ದಶಕಗಳಲ್ಲಿ ಮನಸೂರೆಗೊಂಡ ಕೆಲ ಹಿಂದೀ ಚಿತ್ರಗೀತೆಗಳನ್ನು ಪ್ರಸ್ತುತಪಡಿಸಲಾಯಿತು. ’ಶ್ರೀ ರಾಮಚಂದ್ರ ಗ್ರಾಮೀಣ ವಿದ್ಯಾವಿಕಾಸ ಟ್ರಸ್ಟ್’ ನ ಮಕ್ಕಳ ಶಿಕ್ಷಣ ಸಹಾಯಾರ‍್ಥ ಆಯೋಜಿಸಿದ್ದ ಕಾರ‍್ಯಕ್ರಮದ ಸೂತ್ರಧಾರಿ ಕನ್ನಡತಿ, ಗಾಯಕಿ, ನಿರೂಪಕಿ, ನೃತ್ಯಗಾತಿ ಸಮನ್ವಿತಾ ಶರ‍್ಮಾ.

ತನ್ನ ತೆಕ್ಕೆಗೆ ಯಾವ ವರ‍್ಣಗಳನ್ನು ಎಳೆದುಕೊಂಡರೂ ತನ್ನೊಳಗನ್ನು ಬಿಟ್ಟುಕೊಡದೆ, ಅಸ್ಮಿತೆಯನ್ನುಳಿಸಿಕೊಳ್ಳುವುದು ಕಪ್ಪು ಬಣ್ಣ. ಇಂಥ ಕಡುಗಪ್ಪು ವರ‍್ಣದ ಸೀರೆ, ಅದರೊಡಲೊಳಗೆ ನಕ್ಷತ್ರಗಳನ್ನು ತುಂಬಿಕೊಂಡ ಜೀವವೊಂದು ಕತ್ತಲಲ್ಲೆಲ್ಲೋ ಸುಶ್ರಾವ್ಯವಾಗಿ ಆಲಾಪಿಸತೊಡಗಿದರೆ, ಅದು ಸಂಚಲನವೇ ತಾನೆ? ಕ್ಷಣಕಾಲ ಶ್ರೋತೃವೃಂದದಲ್ಲಿ ಪುಳಕ. ಹೀಗೆ ’ಬಹಾರೋಂಕೆ ಸಪನೆ’ ಚಿತ್ರದ “ಕ್ಯಾ ಜಾನು ಸಜನ್’ ಗೀತೆಯನ್ನು ಹಾಡುತ್ತಲೇ ವೇದಿಕೆ ಪ್ರವೇಶಿಸಿದರು ಸಮನ್ವಿತಾ.

ನಂತರ ಇವರು ಹಾಡಿದ ’ಸರಸ್ವತೀ ಚಂದನ್’ ಚಿತ್ರದ ’ಚಂದನ್ ಸಾ ಬದನ್’ ಪ್ರೇಕ್ಷಕರೂ ದನಿಗೂಡಿಸುವಂತೆ ಮಾಡಿದರೆ, ಗಾಯಕರಾದ ಶ್ರುತಿ ಭಿಡೆ ಮತ್ತು ಹರೀಶ್ ಕಾರೋತ್ ಹಾಡಿದ ’ರಾಂಪುರ‍್ ಕಾ ಲಕ್ಷ್ಮನ್ ಚಿತ್ರದ ಗೀತೆ ಪ್ರೇಕ್ಷಕರಲ್ಲಿ ಹುರುಪು ತುಂಬಿತು. ’ದಿಲ್ ಹೀ ತೋ ಹೈ’ ಚಿತ್ರದ ’ಲಾಗಾ ಚುನರಿ ಮೈ ದಾಗ್ ಛುಪಾಂವೋ ಕೈಸೆ’ಯ ಸಾಹಿತ್ಯ, ಹೆಣ್ಣಿನ ಸಂವೇದನೆಯನ್ನು ನಾಜೂಕಾಗಿ ಬಿಂಬಿಸುಂಥದ್ದು. ಆದರೆ ಅಂದು ಹಾಡಿದ್ದು ಮನ್ನಾಡೆ. ಇಂದು ಹಾಡಿದ್ದು ಸಮನ್ವಿತಾ. ಇದುವರೆಗೂ ಹಲವಾರು ವೇದಿಕೆಗಳಲ್ಲಿ ಪುರುಷಧ್ವನಿಯಲ್ಲೇ ಇದು ಹೆಚ್ಚು ಹಾಡಿಸಿಕೊಳ್ಳುತ್ತಾ ಬಂದಿದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ, ತಾನು ಮುದ್ದಾಮ್ ಈ ಗೀತೆಯನ್ನೇ ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದರು ಸಮನ್ವಿತಾ. ಭೈರವಿಯಲ್ಲಿ ಸಂಯೋಜನೆಗೊಂಡ ಈ ಗೀತೆ ತರಾನಾದೊಂದಿಗೆ ಅಂತ್ಯಗೊಂಡಾಗ ಗಂಧರ‍್ವಲೋಕವೇ ಅಲ್ಲಿ ಸೃಷ್ಟಿಯಾಗಿತ್ತು. ಈ ಮೂಲಕ ತಮ್ಮ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಾವೀಣ್ಯದ ಪಲುಕನ್ನು ಅವರು ತೋರಿಸಿದರು.

’ಬಾಂಬೆ’ ಚಿತ್ರದ ’ತೂ ಹೀ ರೇ’ ಮಾಧುರ‍್ಯಭರಿತ ಹಾಡಿಗೆ ಜೊತೆಯಾಗಿ ಮೋಡಿ ಮಾಡಿದ್ದು, ಅಶ್ವಿನಿ ಕೌಶಿಕ್ ಅವರ ಕೊಳಲಿನ ಸಾಥ್. ನಂತರ ಮಂತ್ರಮುಗ್ಧಗೊಳಿಸಿದ್ದು, ’ಶಿಕಾರಿ’ ಚಿತ್ರದಲ್ಲಿ ಲತಾಜಿ ಮತ್ತು ಉಷಾಜಿ ಹಾಡಿದ ’ತುಮ್ಕೋ ಪಿಯಾ ದಿಲ್ ದಿಯಾ ಕಿತ್ನೆ ನಾಝ್ ಸೆ’ ಯುಗಳಗೀತೆ. ತಾಯಿ ರೋಹಿಣಿಯೊಂದಿಗೆ ಸಮನ್ವಿತಾ ಹಾಡುತ್ತಿದ್ದಾಗ ಪರಸ್ಪರರ ಧ್ವನಿಮಿಳಿತ ತೆರೆದಿಟ್ಟ ಶ್ರಾವ್ಯಲೋಕ ಆಹ್ಲಾದಪೂರ‍್ಣ. ಮುಂದೆ ಹಾಡಿದ ’ಕಾರವಾನ್’ನ ಗೀತೆ ಸಮನ್ವಿತಾರ ಧ್ವನಿಸಾಧ್ಯತೆಯನ್ನು ಅನಾವರಣಗೊಳಿಸಿತು. ’ಅನ್ ಪ್ಲಗ್ಡ್ ಮ್ಯೂಸಿಕ್‌’ ನಲ್ಲಿ ತಮ್ಮ ಮೆಚ್ಚಿನ ಗಾಯಕ-ಗಾಯಕಿಯರ ಪ್ರಸಿದ್ಧ ಗೀತೆಗಳ ತುಣುಕು ಹಾಡುವುದರ ಮೂಲಕ ಅವರನ್ನು ಸ್ಮರಿಸಿಕೊಂಡರು. ಇಡೀ ಕಾರ‍್ಯಕ್ರಮದುದ್ದಕ್ಕೂ ಇವರಿಗೆ ಜೊತೆಯಾದ ಗಾಯಕರು ಗೋವಿಂದ್ ಕರ‍್ನೂಲ್, ಸುಬ್ರತೋ ಸಾಹೋ, ಅನಿಕೇತ್ ಪ್ರಭು, ಹ್ಯಾರೀಸ್ ಕಾರೋತ್ ಮತ್ತು ಶ್ರುತಿ ಭಿಡೆ. ಇವರೆಲ್ಲರೂ ಹಾಡುವುದರೊಂದಿಗೆ ಹದಭರಿತ ಹಾವಭಾವವನ್ನೂ ಪ್ರದರ‍್ಶಿಸಿದ ರೀತಿ, ಮತ್ತದರಿಂದ ಶ್ರೋತೃಗಳನ್ನು ಆವರಿಸಿಕೊಂಡ ಬಗೆ ಒಂಥರಾ ’ಚೈತನ್ಯದ ಪೂಜೆ’ಯನ್ನೇ ಸೃಷ್ಟಿಸಿತ್ತು.

“ನನ್ನ ಹೆಚ್ಚಿನ ಕಾರ‍್ಯಕ್ರಮಗಳು ಸ್ತ್ರೀ ಪ್ರಧಾನಕೇಂದ್ರಿತ. ಹೀಗಾಗಿ ಇವುಗಳ ಪರಿಕಲ್ಪನೆ, ವಿನ್ಯಾಸ, ಪ್ರಸ್ತುತಿಗೆ ನಾನು ವಿಶೇಷ ಆಸ್ಥೆ ವಹಿಸುತ್ತೇನೆ. ಹಾಗೆಯೇ ಹಾಡಿನೊಂದಿಗೆ ರಂಗಸಜ್ಜಿಕೆ ಬಗ್ಗೆಯೂ ಗಮನ ವಹಿಸುತ್ತೇನೆ. ಕೊನೆಯಲ್ಲಿ ನಾವು ಪ್ರಸ್ತುತಪಡಿಸಿದ  ’ಹಮ್ ಕಿಸೀ ಸೆ ಕಮ್ ನಹೀ” ಚಿತ್ರದ ’ಹೇ ಅಗರ‍್ ದುಷಮನ್’ ಕವ್ವಾಲಿಯಲ್ಲಿ ಮೊಘಲ್ ಆಸ್ಥಾನದ ಕಲಾಮಾಹೌಲ್ ಅನ್ನೇ ಸೃಷ್ಟಿಸಿದ್ದೆವು. ವಸ್ತ್ರವಿನ್ಯಾಸ, ನರ‍್ತಕಿಯರನ್ನು ಒಳಗೊಂಡಿದ್ದು ಸಭೆಗೆ ರಂಜನೆ ನೀಡಿತ್ತು. ಇದೆಲ್ಲ ಕಾರಣಗಳಿಂದಾಗಿ ಮುಂದಿನ ವರ‍್ಷ ಇನ್ನೊಂದು ’ಚಿತ್ರಹಾರ‍್’ ಪ್ರಸ್ತುತಪಡಿಸುವುದು ಈಗಲೇ ಖಾತ್ರಿಯಾಗಿದೆ’  ಹೀಗೆ ಅಭಿಪ್ರಾಯಿಸಿದರು ಸಮನ್ವಿತಾ.

ಕಲಾವಿದರು ಹೀಗೆ ಪ್ರಯೋಗಾತ್ಮಕವಾಗಿ ಹೆಜ್ಜೆ ಇಟ್ಟಾಗ ಮಾತ್ರ ಆ ಕ್ಷೇತ್ರದಲ್ಲಿ ಹೆಚ್ಚಿನ ಸಾಧ್ಯತೆಗಳು ಸೃಷ್ಟಿಯಾಗುತ್ತಾ ಹೋಗುತ್ತವೆ. ಹೀಗೆ ಎಲ್ಲ ಪ್ರಕಾರಗಳೂ ಜನರಿಗೆ ಹತ್ತಿರವಾಗುತ್ತ, ಕಲೆ ಸಮಾಜಮುಖಿಯಾಗಿ ಸಮೃದ್ಧಿ ಕಾಣುತ್ತಾ ಹೋಗುತ್ತದೆ.  

-ಶ್ರೀದೇವಿ ಕಳಸದ  

(ಮೆಟ್ರೊ, ಪ್ರಜಾವಾಣಿಯಲ್ಲಿ ಪ್ರಕಟ)

2 comments:

sunaath said...

ಶ್ರೀದೇವಿ, ಚಿತ್ರಹಾರ ಕಾರ್ಯಕ್ರಮದ ವರ್ಣನೆಯನ್ನು ಓದಿಯೇ ಖುಶಿಯಾಯಿತು. ಶಾಸ್ತ್ರೀಯ ಸಂಗೀತದ ಮೇಲೆ ಆಧರಿಸಿದ ಚಿತ್ರಗೀತೆಗಳು ಮನಸ್ಸನ್ನು ಸೂರೆಗೊಳ್ಳುತ್ತವೆ. ಪಹಾಡಿ ರಾಗದ ಹುಟ್ಟನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು. ವಿವಿಧಭಾರತಿಯ ಕಾರ್ಯಕ್ರಮವೊಂದನ್ನು ಕೇಳುತ್ತಿದ್ದಾಗ, ‘ಚೌಧವೀಂ ಕಾ ಚಾಂದ’ ಪಹಾಡಿ ರಾಗದಲ್ಲಿ ಇದೆ ಎಂದು ಕೇಳಿದ ನೆನಪು ನನಗಿದೆ.

ಆಲಾಪಿನಿ said...

ಓಹ್ ಧನ್ಯವಾದ ಅಂಕಲ್ 😊