Monday, July 18, 2016

ಗಂಗಾಚಲನ ತಂದ ಸಂಚನಲ


ಲಯವಿಲ್ಲದ ಓಟ, ನಾದವಿಲ್ಲದ ಹರಿವು ಎಲ್ಲಿಲ್ಲ? ಎಲ್ಲಾ ನಮ್ಮೊಳಗೇ ಇವೆ. ಸಮಾಧಾನ ಮತ್ತು ಶ್ರದ್ಧೆಯಿಂದ ಕಂಡುಕೊಳ್ಳುತ್ತಾ ಹೋದರೆ ಛಲ ನಮ್ಮನ್ನು ಕೈಹಿಡಿದು ನಡೆಸುತ್ತದೆ. ಸೃಷ್ಟಿಯ ದಾರಿ ತಾನೇತಾನಾಗಿ ವಿಸ್ತರಿಸುತ್ತಾ ಹೋಗುತ್ತದೆ.   
     

ನಿಲ್ಲಲು ಕಾಲುಗಳೇ ಬೇಕಂತೇನಿಲ್ಲ. ದೃಢಸಂಕಲ್ಪ, ಬದ್ಧತೆ, ಪರಿಶ್ರಮವಿದ್ದರೆ ಆ ’ಕಾಲ’ವನ್ನೂ ನಿಲ್ಲಿಸಬಹುದು. ಕಾಲವನ್ನು ನಿಲ್ಲಿಸುವುದು ಎಂದರೆ, ಕ್ರಿಯಾಶೀಲತೆಯಿಂದ ಜಗತ್ತನ್ನು ಜೀವಂತವಾಗಿಡುವುದು, ಜೀವಂತಿಕೆ ಎಂದರೆ,  ಅರಳುತ್ತಾ ಅರಳಿಸುವುದು. ಅರಳಿಸುವುದು ಎಂದರೆ, ತನ್ನಂಥ ಹೂಹೃದಯಗಳನ್ನು ಸೃಷ್ಟಿಸುವುದು. ಸೃಷ್ಟಿಯೆಂದರೆ  ನುಡಿಯುವುದು, ನುಡಿಸುವುದು, ಮಿಡಿಯುವುದು. ಸಂಗೀತ ಜಗತ್ತಿಗೆ ಹೀಗೊಂದು ನುಡಿತಮಿಡಿತದ ವಿಶಿಷ್ಟ ಲಯಕಟ್ಟಿಕೊಟ್ಟವರು ಹಿರಿಯ ತಬಲಾವಾದಕ ಪಂ. ಶೇಷಗಿರಿ ಹಾನಗಲ್. ಮೂರು ತಿಂಗಳ ಹಿಂದೆಯಷ್ಟೇ ಅಗಲಿದ ಈ ಲಯಮಾಂತ್ರಿಕನಿಗೆ ಭಾರತೀಯ ವಿದ್ಯಾಭವನದಲ್ಲಿ ’ನಾದ ನುಡಿ ನಮನ’ ಅರ‍್ಪಿಸಲಾಯಿತು.

ಗಂಗಾ ಚಲನ್
ತನ್ನ ಕಾಲುಗಳನ್ನು ಪೋಲಿಯೋ ನುಂಗಿರಬಹುದು ಆದರೆ ರಟ್ಟೆಗಳ ಶಕ್ತಿಯನ್ನಲ್ಲ, ಮನೋಸ್ಥೈರ‍್ಯವನ್ನಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡೇ ಅವರು ಸಂಗೀತದ ಬಂಡಿ ಏರಿದರು. ಆ ಛಲವೇ, ಪರಂಪರೆಯ ಹೊರತಾಗಿ ಸ್ವಂತಿಕೆಗೆ ಒತ್ತು ಕೊಡುವಂತೆ ಮಾಡಿತು. ಅದೆಲ್ಲದರ ಫಲವೇ, ಅವರ ಶಿಷ್ಯಬಳಗ ಮತ್ತು ಅವರು ಪ್ರಸ್ತುತಪಡಿಸಿದ ’ಗಂಗಾಚಲನ್’. ಗಂಗಾ ಎಂದರೆ ನದಿ, ಗಂಗಾ ಎಂದರೆ ಅಕ್ಕ ಗಂಗೂಬಾಯಿ ಹಾನಗಲ್. ಗಂಗಾನದಿಯ ಹರಿವು ಮತ್ತು ಗಂಗೂಬಾಯಿಯವರ ಗಾನಲಹರಿಯನ್ನು ಸಾಂಕೇತಿಸುವ ವಿಶಿಷ್ಟ ಲಯವಿದು. ಇದನ್ನು ತೀನ್ ತಾಲದೊಳಗೆ ಬಂಧಿಸಿ,  ಪೇಶ್ಕಾರ‍್, ಚಕ್ರಧಾರ‍್, ಕಾಯ್ದಾಗಳ ಮೂಲಕ ’ಗಂಗಾ ಚಲನ್’ ಅನ್ನು ಜಬರ‍್ದಸ್ತಾಗಿಸಿದ್ದು ಹಿರಿಯ ತಬಲಾವಾದಕ ಉದಯರಾಜ್ ಕರ‍್ಪೂರ‍್ ನಿರ‍್ದೇಶನದ ವಾದನವೃಂದ. ಇವರಿಗೆ ಜೊತೆಯಾದವರು ಗುರುಮೂರ‍್ತಿ ವೈದ್ಯ, ಕಿರಣ್ ಯಾವಗಲ್, ಪ್ರಕಾಶ್ ದೇಶಪಾಂಡೆ, ಅಜಯ್ ಹಾನಗಲ್, ವಿಕಾಸ್ ನರೇಗಲ್.

ಕಾಯ್ದಾ ಎಂದರೆ ಒಂದೊಂದು ಪೆಟ್ಟಿಗೆ ನಾಲ್ಕು ಮಾತ್ರೆಗಳನ್ನು ನುಡಿಸುವುದು. ಇದನ್ನು ದುಪ್ಪಟ್ಟು ಲಯದಲ್ಲಿ ನುಡಿಸಿದಾಗ ಎಂಟು ಮಾತ್ರೆಗಳಾಗುತ್ತವೆ. ಹೀಗೆ ಲಯವನ್ನು ದುಪ್ಪಟ್ಟು, ಚೌಪಟ್ಟು, ಎಂಟುಪಟ್ಟು ಮಾಡಿಕೊಂಡು ನುಡಿಸುವುದು ಚಾಲ್ತಿಸಂಗತಿ. ಆದರೆ ಒಂದು, ಎರಡು, ಮೂರು, ನಾಲ್ಕು, ಐದು, ಆರು, ಏಳು ಮತ್ತು ಎಂಟರ ತನಕ ಕ್ರಮವಾಗಿ ಲಯವನ್ನು ವಿಸ್ತರಿಸುವ ವೈಶಿಷ್ಟ್ಯ ಕಾಣುವುದು ’ಗಂಗಾ ಚಲನ್’ದಲ್ಲಿ ಮಾತ್ರ. ಇಂಥ ಚಲನೆಗಳ  ಜೀವಾಳವೇ ’ಬರ‍್ಜ್ಯಾ’. ಬರ‍್ಜ್ಯಾ ಎಂದರೆ, ಒಂದು ಲಯದಿಂದ ಇನ್ನೊಂದು ಲಯಕ್ಕೆ ಪ್ರವೇಶಿಸುವಾಗ ಸಿಗುವ ಲಯವನ್ನು ಹಿಡಿತಕ್ಕೆ ನುಡಿತಕ್ಕೆ ತೆಗೆದುಕೊಳ್ಳುವುದು. ಇಂಥ ಚಲನ ಸೃಷ್ಟಿಯ ಹರಿಕಾರನನ್ನು ಶಿಷ್ಯರು ಈ ’ಗಂಗಾ ಚಲನ’ದ ಮೂಲಕ ಸ್ಮರಿಸಿದಾಗ ಚಪ್ಪಾಳೆಯ ಸುರಿಮಳೆ.     

ಇಂದಿರಾ ತಾಳ
೧೯೬೯ರ ಸಮಯ. ನಿಲಯ ಕಲಾವಿದರೆಲ್ಲ ತಮ್ಮ ಕೆಲಸದ ಖಾಯಮಾತಿಯ ಬಗ್ಗೆ ಆತಂಕವಿಟ್ಟುಕೊಂಡೇ ಆಕಾಶವಾಣಿಯಲ್ಲಿ ಕಾರ‍್ಯ ನಿರ‍್ವಹಿಸಬೇಕಾದಂಥ ಸಂದರ‍್ಭ. ಮೂರು ತಿಂಗಳಾದ ನಂತರ ಕಾಂಟ್ರ‍್ಯಾಕ್ಟ್ ಮುಗಿದುಬಿಡುತ್ತಿತ್ತು. ಹೀಗಾದಾಗ ಕಲಾವಿದರೊಂದಿಗೆ ಅವರ ಕುಟುಂಬವೂ ವಿಚಲಿತಗೊಳ್ಳುತ್ತಿತ್ತು. ಆಗ ಶೇಷಗಿರಿಯವರ ಮುಂದಾಳತ್ವದಲ್ಲಿ ಅಂದಿನ ಪ್ರಧಾನಮಂತ್ರಿಗಳಾಗಿದ್ದ ಇಂದಿರಾಗಾಂಧಿಯವರಿಗೆ ಮನವಿ ಪತ್ರವೊಂದು ತಲುಪುತ್ತದೆ. ಇದನ್ನು ಪರಿಗಣಿಸಿದ ಇಂದಿರಾ, “ಕಲಾವಿದರು ದೇಶದ ಸಾಂಸ್ಕೃತಿಕ ರಾಯಭಾರಿಗಳು, ಕ್ರಿಯಾಶೀಲ ಮನಸ್ಸುಗಳಿಗೆ ಶಾಂತಚಿತ್ತಬೇಕು. ಪೂರಕ ವಾತಾವರಣ ಬೇಕು” ಎಂಬ ಆಶಯದೊಂದಿಗೆ, ನಿಲಯದ ಕಲಾವಿದರ ಕೆಲಸವನ್ನು ಖಾಯಂಗೊಳಿಸುತ್ತಾರೆ. ಈ ಉಪಕಾರಾರ‍್ಥವಾಗಿ ಒಂಬತ್ತೂವರೆ ಮಾತ್ರೆಯ ’ಇಂದಿರಾ ತಾಳ’ವನ್ನು ಶೇಷಗಿರಿಯವರು ರಚಿಸುತ್ತಾರೆ. ಇವರ ಶಿಷ್ಯ ಮಧುಮಲೈ ಈ ತಾಳವನ್ನು ಶ್ರೋತೃಗಳಿಗೆ ಪರಿಚಯಿಸಿ, “ಹೀಗೊಂದು ತಾಳವಿದೆ ಗೊತ್ತೆ?” ಎಂದು ಆಡಾಡುತ್ತಲೇ ಕೇಳಿದ ಹಾಗಿತ್ತು. ಯಾವ ವಿದ್ವತ್ ಪ್ರದರ‍್ಶನದ ಭಾರ ಅಲ್ಲಿರಲಿಲ್ಲ.  

ಮಿಯಾಮಲ್ಹಾರ‍್ ವೈಭವ
ಆಯಾ ರಾಗದ ಸ್ವರಗಳನ್ನು ಅಚ್ಛೆಯಿಂದ ಪೋಷಿಸಿದರೆ ಮಾತ್ರ ರಾಗವೊಂದು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ;  ಮೋಡಕಟ್ಟಿದ ಆಕಾಶದೊಳಗೆ ಸುಳ್ಳೇಸುಳ್ಳೇ ನಕ್ಷತ್ರ-ಚಂದ್ರ ತೋರಿಸುತ್ತ ತಾಯೊಬ್ಬಳು ಮಗುವಿಗೆ ಮಮ್ಮು ಉಣ್ಣಿಸುತ್ತಿದ್ದಂತೆ ರಾಗವಿಸ್ತಾರ. ಮಳೆ ಹನಿಯುವ ಮೊದಲು, ಮೋಡಗಳ ಘರ‍್ಜನೆಯಂತೆ ತಾನುಗಳ ಹರಿವು, ಆ ಹರಿವಿಗೆ ಕಿಟಕಿ ಹಿಂದೆ ಅವಾಕ್ಕಾಗಿ ಕುಳಿತಂತೆ ಅಮ್ಮ ಮಗುವಿನ ದೃಶ್ಯ. ಹೀಗೊಂದು ರಾಗರೂಪ ಕಟ್ಟಿಕೊಡುತ್ತ  ಮಿಂಚಿನಂಥ ಮುಖಡಾಗಳನ್ನು ಸೃಷ್ಟಿಸುತ್ತ ಸಾಗಿದವರು ಡಾ. ನಾಗರಾಜರಾವ್ ಹವಾಲ್ದಾರ‍್. ಇವರು ಪ್ರಸ್ತುತಪಡಿಸಿದ್ದು ವರ‍್ಷಾರಾಗ ಮಿಯಾಮಲ್ಹಾರ‍್. ಶುದ್ಧ ನಿಷಾಧದ ಆರ‍್ದ್ರ ಸೊಬಗು ಮತ್ತು ಮಂದ್ರಸಪ್ತಕದ ಮೇಲಿನ ಗಂಭೀರ ಸೌಂದರ‍್ಯವನ್ನು ಅನುಭವಕ್ಕೆ ಕಲ್ಪಿಸಿಕೊಡುತ್ತ ಕೇಳುಗರನ್ನು ಗಾಯನದ ತೆಕ್ಕೆಯೊಳಗೆ ಎಳೆದುಕೊಂಡರು. ತಬಲಾದಲ್ಲಿ ಎನ್ ನಾಗೇಶ್ ಹಿತಮಿತವಾಗಿ ಸಾಥಿಯಾದರೆ, ಹಾರ‍್ಮೋನಿಯಂ ಬದಲಾಗಿ ಸಾರಂಗಿಯಲ್ಲಿ ಉಸ್ತಾದ್ ಫಯಾಝ್ ಖಾನ್ ಜೊತೆಯಾಗಿದ್ದು ವಿಶೇಷವಾಗಿತ್ತು.

ಅಮೃತವರ‍್ಷಿಣಿಯ ಆಮೋದ
“ಶರಣ ತಿಹಾರಿ ಆಯೋ ನಿತ ತೋರಿ ಹೀ ಆಸ ಧರೂ ರಖ ಲೀಜೆ ಮೋರಿ ಶರನ” ಅಂದರೆ, “ಹೇ ಈಶ್ವರ, ಸುಖದ ನೋಟವುಳ್ಳ ರಸಿಕ ನೀನು. ಆದಾಗ್ಯೂ ಶರಣಾಗಿ ನಿನ್ನ ಬಳಿ ಬಂದಿದ್ದೇನೆ, ನನಗೀಗ ಭರವಸೆಯ ಬೆಟ್ಟದಂತೆ ನೀ ಕಾಣುತ್ತಿದ್ದಿ...” ಹೀಗೆ ತನ್ನ ತಾ ಅರ‍್ಪಿಸಿಕೊಳ್ಳುವ ಭಾವಲಹರಿಯನ್ನು ಹೊಂದಿರುವ, ವಿಲಂಬಿತ್ ಏಕತಾಲದಲ್ಲಿ ಬಂಧಿಯಾದ ಬಂದಿಶ್ ಅಮೃತವರ‍್ಷಿಷಿಯದ್ದು. ಹಿಂದೂಸ್ತಾನಿ ಕಲಾವಿದರು ಈ ರಾಗವನ್ನು ಹಾಡುವುದು ವಿರಳ. ಆದರೆ ವರ‍್ಷಾಋತು ಹಿನ್ನೆಲೆಯಲ್ಲಿ ಇಡೀ ಕಾರ‍್ಯಕ್ರಮಕ್ಕೆ ಮುಕುಟುವಿಟ್ಟಂತೆ ಹಾಡಿದರು ಪಂ ಪರಮೇಶ್ವರ‍್ ಹೆಗಡೆ. ಹಂತಹಂತವಾಗಿ ಶಿವನನ್ನು ಒಲಿಸಿಕೊಳ್ಳುವ ಸಂಭಾಷಣಾರೀತಿಯ ಆಲಾಪ್, ಸರಗಮ್, ಲಯಕಾರಿ... ಅವರ ಮಾಧುರ‍್ಯಪ್ರಧಾನ ಬನಿಯ ಮೂಲಕ ಕೇಳುಗರ ತನ್ಮಯತೆ ಸಾಧಿಸಿತ್ತು. “ನನ್ನೀ ಶರಣಾಗತಿಯನ್ನು ಉಪೇಕ್ಷಿಸಿದರೆ ನೋಡು!” ಎಂದು ನಾಜೂಕಾಗಿ ಗುಡುಗಿದಂತೆ ತಾನುಗಳ ವೈಭವ. “ಕರುಣೆಯೇ ಇಲ್ಲವೆ ನಿನಗೆ?” ಎಂದು ತಾರಕ ಸ್ಥಾಯಿಯಲ್ಲಿ ಪಂಚಮದ ತನಕ ಕ್ರಮಿಸಿ ತೀವ್ರಭಾವದಲ್ಲಿ ಭಿನ್ನವಿಸಿಕೊಂಡಿದ್ದು... ಮುಂದೆ ಧೃತ್ ನಲ್ಲಿ ತೆರೆದುಕೊಂಡ ಬಂದಿಶ್, “ಸಬತ  ಸುರ ಗಾತ ಹೇ ಗುನಿಜನ, ಗಾತ ಗಾತ ಹೇ ಮನ ಹರನಕೀ, ಸುಖದ ಕಾರನ, ದುಃಖ ಹರನ, ಸುಧಾರಂಗ ಸರನ ಹೇ ಸುರತಾನ’. ನಂತರ ಭೈರವಿಯಲ್ಲಿ ಕಬೀರರ ಭಜನ್ ಶುರುವಾದಾಗ, ಶ್ರೋತೃವೃಂದ ನಾದಸಾರ‍್ಥಕತೆಯಲ್ಲಿ ಮಿಂದಿದ್ದಿತ್ತೆಂದರೆ, ಅದಕ್ಕೆ ಕಾರಣ ಕಾರ‍್ಯಕ್ರಮದ ರೂವಾರಿ ಪಂ. ರವೀಂದ್ರ ಯಾವಗಲ್ ಅವರ ರಂಗೇರಿದ ತಬಲಾ ಮತ್ತು ಮಧು ಭಟ್ ಅವರ ಹಾರ‍್ಮೋನಿಯಂನ ಮಿತ ಸಾಥ್.

ನಲಿವಿಗೆ, ನೋವಿಗೆ, ಪ್ರೀತಿಗೆ, ವಿರಹಕ್ಕೆ, ಅಂಕುರಕ್ಕೆ, ಆಸರೆಗೆ, ಸ್ಮರಣೆಗೆ, ಕೃತಜ್ಞತೆಗೆ, ಸೂತಕಕ್ಕೆ, ಸಂಭ್ರಮಕ್ಕೆ ಅಷ್ಟೇ ಏಕೆ ನಮ್ಮನ್ನು ನಾವು ಕಂಡುಕೊಳ್ಳಲೂ ನಾದವೇ ಬೇಕು. ನದಿಯೇ ನಾವಾಗಿ ಹರಿಯಬೇಕು, ಆಗಷ್ಟೇ ಸಮಾಧಾನ, ಸಾಕ್ಷಾತ್ಕಾರ.


-ಶ್ರೀದೇವಿ ಕಳಸದ

(ಮೆಟ್ರೊ, ಪ್ರಜಾವಾಣಿಯಲ್ಲಿ ಪ್ರಕಟ)

2 comments:

sunaath said...

ಈ ಸಂಗತಿಗಳನ್ನು ಓದುವಾಗ ಸುಖವಾಗುತ್ತಿದೆ.

ಆಲಾಪಿನಿ said...

😊 ಧನ್ಯಳಾದೆ