Monday, July 18, 2016

ಕಾಣದೆ ಹೋದೆಯಾ ಚಂದಿರ?


'
ನೀ ಹೊರಗ್ ಬಾ'
ಪರ್ವಾಗಿಲ್ಲ ಹೇಳೋ
'
ಇಲ್ಲ ನೀ ಬಾ ಹೊರಗೆ'
ಏನಂತ ಇಲ್ಲೇ ಹೇಳು
'
ನಂಗ್ ನೂರು ರೂಪಾಯಿ ಕೊಡು ಬೇಗ, ಅಲ್ ಕಾಯ್ತವ್ರೆ'
ಹಬ್ಬಾ ಎಂಗಾಯ್ತೊ
'
ಏಯ್ ನೀ ಕಾಸ್ಕೊಡು'
ಯಾರೆಲ್ಲಾ ಬಂದಿದ್ರು?
'
ಎಲ್ಲಾ ಬಂದಿದ್ರು ಬೇಗ ಕೊಡ್ನೀ ಕಾಸು, ಅಲ್ ಕಾಯ್ತವ್ರೆ'
ನನ್ನ ಕೇಳಿದ್ರಾ?
ಮೋವ್ ಆಚೆ ಬಾ ನೀ, ಕಾಸ್ ಕೊಡ್ಬಾ
'
ಬಿರಿಯಾನಿ ಮಾಡಿದ್ರಾ, ನನ್ನ ಕೇಳಿದ್ರಾ?
'
ಹೂಂ ಮಾಡಿದ್ರು, ಕೊಡು ಮೊದ್ಲು ನೀ'
ಯಾರಾದ್ರೂ ನನ್ನಾ ಕೇಳಿದ್ರೇನೋ... ತಗೋ ನೂರೇ ರೂಪಾಯಿ ಇರೋದು
'
ಅಲ್ಕಾಯ್ತವ್ರೆ ಬೇಗ್ನೆ ಕೊಡು'
ಇಲ್ಲೇಳೋ, ನನ್ನಾ....
'
ಬತ್ತೀನಮ್ಮೋಯ್'
ಕೇ... ಳಿ.... ದ್ರೇ ..ನೋ...

ಕೈಯಲ್ಲಿರೋ ನೂರರ ನೋಟು ಅವನ ಓಟದ ವೇಗ ಹೆಚ್ಚಿಸಿತೇನೋ... ಸರದಿಗಾಗಿ ಕಾಯುತ್ತ ಕುಳಿತ ರೋಗಿಗಳ ಮಧ್ಯೆಯೇ ರೊಂಯ್ ಎಂದು ಓಡಿಬಿಟ್ಟ ನಿನ್ನೆ ಆ ಪೋರ. ಹೀಗೊಂದು ಸಂಭಾಷಣೆ ಕಿವಿಗೆ ಬೀಳುತ್ತಿದ್ದಂತೆ, ಯಾರದು ನೂರರ ನೋಟು ಕೊಟ್ಟವರು ಎಂದು ಒಳಕೋಣೆಯಲ್ಲಿ ಇಣುಕಿದೆ. ಇಷ್ಟೇಇಷ್ಟು ಜಾಗ, ಅದರ ಮೂಲೆಯಲ್ಲಿ ಮಬ್ಬುಬೆಳಕಿನಲ್ಲಿ ಮಲ್ಲಿಗೆ ಕಟ್ಟುತ್ತ ಆಕೆ ಕುಳಿತಿದ್ದರು. ಸುಮ್ಮನೆ ನೋಡಿ ವಾಪಸ್ ಹೊರಬಂದು, ನನ್ನ ಸರದಿಗಾಗಿ ಕಾಯುತ್ತ ಕುಳಿತೆ. ಯಾಕೋ... ಯಾರೋ ಎದೆಗೆ ತಣ್ಣೀರು ಉಗ್ಗುತ್ತಿದ್ದಾರೆನ್ನಿಸತೊಡಗಿತು. ಮತ್ತೆ ಎದ್ದು ಹೋದೆ, ಆಕೆ ಚಕ್ಕನೆ ಮುಖವೆತ್ತಿದಳು. ಎರಡು ಮೊಳ ಹೂ ಬೇಕಿತ್ತು ಎಂದೆ. ಅವಳ ನಗುವನ್ನು ಮಬ್ಬುಗತ್ತಲೂ ಬಿಟ್ಟುಕೊಟ್ಟಿತು. ಮೊಳಕೈ ಅಳತೆ ಮಾಡಿ, ನೋಡಿ ಕಡಿಮೆ ಕೊಟ್ಟಿಲ್ಲ ಎಂದಳು. ಅಯ್ಯೋ ತಾಯಿ ನೀ ಎಷ್ಟು ಕೊಟ್ಟರೂ ಸರಿ... ಎಂದು ಮನದಲ್ಲೇ ಅಂದುಕೊಂಡು ಕೈಚಾಚಿದೆ. ಕವರ್ ಇಲ್ಲ ಎಂದಳು, ಪರವಾಗಿಲ್ಲ ಎಂದೆ. ಚಿಲ್ಲರೆ ವಾಪಸ್ ಕೊಡಬಂದಾಗ, ಬೇಡ ನೀನೇ ಇಟ್ಟುಕೋ ಎಂದರೂ ಕೇಳಲೇಇಲ್ಲ.

ರಿಸೆಪ್ಷನಿಸ್ಟ್ ಗೆ ಈಕೆಯ ಬಗ್ಗೆ ಕೇಳಿದಾಗ, 'ಏನೋ ಆಗಾ ವಯ್ಸಲ್ಲಿ ಪ್ರೀತಿ ಮಾಡ್ಬಿಟ್ರು. ಈಕೆ ಹಿಂದೂ ಆತ ಮುಸ್ಲಿಮ್. ಗಂಡ್ಮಕ್ಳೂ ಆದ್ವು, ಮೊಮ್ಮಕ್ಕಳೂ ಬಂದ್ವು. ಈಕೆ ಇಪ್ಪತ್ತೈದ್ ವರ್ಷದಿಂದ ಬೇರೆ ಇದ್ದಾಳೆ. ಒಂದ್ ಹೆಣ್ಮಗು ಸಾಕ್ಕೊಂಡವ್ಳೆ, ಅದೀಗ ಡಿಗ್ರಿ ಓದ್ತದೆ. ಡಾಕ್ಟರ್ರೇ ಎಲ್ಲಾ ಖರ್ಚು ನೋಡ್ಕಂಡ್ ಬಂದವ್ರೇ ಆಗ್ಲಿಂದಾನೂವೇ. ಆಗ್ಲೇ ಮೊಮ್ಮಗ ಬಂದು ಕಾಸ್ ಈಸ್ಕೊಂಡ್ ಹೋದ' ಹೀಗೆ ಒಂದೇ ಉಸಿರಲ್ಲಿ ಹೇಳಿಮುಗಿಸುತ್ತಿದ್ದಂತೆ, ನನ್ನ ಸರದಿ ಬಂದಿತು. ನೂರು ರೂಪಾಯಿ ಮತ್ತವಳ ಹುಸಿಬಿದ್ದ ನಿರೀಕ್ಷೆ ಕುರಿತು ಡಾಕ್ಟರಿಗೆ ಹೇಳಿದೆ. ಮುಗುಳ್ನಗುತ್ತ, ಗೋಣು ಹಾಕುತ್ತ ಔಷಧಿ ಚೀಟಿ ಬರೆದರೆ ವಿನಾ ಏನೊಂದೂ ಮಾತನಾಡಲಿಲ್ಲ...; ಸರಳತೆ ಮತ್ತು ನಿಸ್ವಾರ್ಥದ ಸ್ಥಾಯೀಭಾವ ನಗು ಮತ್ತು ಮೌನ.

ಮನೆಗೆ ಬಂದು, ಮಗಳೊಂದಿಗೆ ನಾನೂ ಮಲ್ಲಿಗೆಯೇನೋ ಮುಡಿದೆನಾದರೂ ಎದೆ ಮಾತ್ರ ಥಣ್ಣಗೆ. ರಾತ್ರಿಯಾದರೂ ಪೂರ್ತಿ ಅರಳದ ಮಾಲೆಯನ್ನು ಫ್ರಿಡ್ಜಿನಲ್ಲಿಟ್ಟು ಹಾಗೇ ಮಲಗಿದೆ, ಹಾಗೇ ಬೆಳಗೂ ಆಯಿತು, ಈಗ ಮಧ್ಯರಾತ್ರಿ. ಫ್ರಿಡ್ಜಿನ ತಂಪಿಗಿಂತ ತಂಪು ಎದೆ; 'ನನ್ನನ್ನ್ಯಾರಾದ್ರೂ ಕೇಳಿದ್ರೇನೋ...'

-ಶ್ರೀದೇವಿ ಕಳಸದ